ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ಮನಸು ಮನಸಿಗೆ ಮಾತಿನ ಸೇತುವೆ

ಸೇತುರಾಮ್: ಮನಸು ಮನಸಿಗೆ ಮಾತಿನ ಸೇತುವೆ

ಅವರು ಅಲ್ಲಲ್ಲಿ ಸಿಗುತ್ತಾರೆ. ಯಾವುದೋ ಬ್ಯಾಂಕಲ್ಲಿ, ಮತ್ಯಾವುದೋ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ, ಹೆಸರಿಲ್ಲದ ಪಾರ್ಕಿನಲ್ಲಿ, ಹಳೆಯ ಕ್ಲಬ್ಬುಗಳಲ್ಲಿ. ಅವರು ಬರುತ್ತಿದ್ದಂತೆ ಎಲ್ಲರೂ ಅವರನ್ನು ಮೆಚ್ಚುಗೆಯಿಂದ ಮತ್ತು ಅಚ್ಚರಿಯಿಂದ ನೋಡುತ್ತಾರೆ. ಅವರಾದರೋ ಅದ್ಯಾವುದರ ಪರಿವೆಯೂ ಇಲ್ಲದಂತೆ ತಮ್ಮ ಪಾಡಿಗೆ ನಿಧಾನ ನಡೆದುಕೊಂಡು ಹೋಗಿ ಮಾತಾಡಿಸಬೇಕಾದವರನ್ನು ಮಾತಾಡಿಸಿ, ಸದ್ದಿಲ್ಲದೆ ತಮ್ಮ ಏಕಾಂತದಲ್ಲಿ ಕರಗಿ ಹೋಗುತ್ತಾರೆ.

ಅವರು ಸೇತುರಾಮ್. ಅನಾವರಣ ಧಾರಾವಾಹಿಯ ಕತೆ ಚಿತ್ರಕತೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಮಂಥನ ಎಂಬ ಸೀರಿಯಲ್ಲು ನಿರ್ದೇಶಿಸಿದ್ದರು. ಎಲ್ಲಾ ಪಾತ್ರಗಳೂ ಒಂದೇ ಥರ ಮಾತಾಡುತ್ತವೆ ಎಂದು ಹೊಟ್ಟೆಕಿಚ್ಚು ಮತ್ತು ಆಕ್ಷೇಪಣೆಯೊಂದಿಗೆ ಅವರ ಬಗ್ಗೆ ಮಾತಾಡಲು ಆರಂಭಿಸುವ ಮಂದಿ ಕೂಡ, ಅವರ ಸೀರಿಯಲ್ಲು ಪ್ರಸಾರವಾಗುತ್ತಿದ್ದಂತೆ ಮೌನವಾಗಿ ಕೂತು ಸೀರಿಯಲ್ಲು ನೋಡುತ್ತಾರೆ. ಅದು ಮುಗಿದಾದ ನಂತರ ಮತ್ತೆ ಮಾತಾಡುತ್ತಾರೆ.

ಸೇತುರಾಮ್ ಮಾತಲ್ಲೇ ಅದೆಂಥ ಮೋಡಿ ಮಾಡುತ್ತಾರೆ ಎಂದು ಬೆರಗಾಗುವ ಮಂದಿಯೇನೂ ಕಡಿಮೆಯಿಲ್ಲ. ಹಾಗೆ ಮಾತಾಡಲು ಹೋಗಿ, ಬರೆಯಲು ಹೋಗಿ ಲಯ ಕಳಕೊಂಡವರೂ ಇದ್ದಾರೆ. ಇವತ್ತು ಪ್ರಸಾರ ಆಗುತ್ತಿರುವ ಧಾರಾವಾಹಿಗಳ ಪೈಕಿ ಕೇವಲ ಧ್ವನಿ ಕೇಳಿಯೇ ಇದು ಸೇತುರಾಮ್ ಸೀರಿಯಲ್ಲು ಎಂದು ಹೇಳಬಲ್ಲಂಥ ಎಪಿಸೋಡುಗಳನ್ನು ಅವರು ಕೊಡುತ್ತಲೇ ಬಂದಿದ್ದಾರೆ.

ಅಷ್ಟಕ್ಕೂ ಸೇತುರಾಮ್ ಶಕ್ತಿಯೇನು. ಅವರ ಸಂಭಾಷಣೆಯೇ. ಅವರ ನಿರ್ದೇಶನದ ಶೈಲಿಯೇ ಎಂದು ಕೇಳಿದರೆ ಅದ್ಯಾವುದೂ ಅಲ್ಲ ಎಂದು ಹೇಳಬೇಕಾಗುತ್ತದೆ. ಸೇತುರಾಮ್ ಸೃಷ್ಟಿಸುವ ಪಾತ್ರಗಳೇ ಹಾಗಿರುತ್ತವೆ. ತಂದೆ ಮಗಳ ಸಂಬಂಧ ಸರಳ ಅಂದುಕೊಳ್ಳುವ ಹೊತ್ತಿಗೇ ಅದು ವಿಚಿತ್ರವಾದ ತಿರುವೊಂದನ್ನು ಪಡಕೊಳ್ಳುತ್ತದೆ. ಮಗಳನ್ನು ಮೈತುಂಬ ದ್ವೇಷಿಸುವ ತಂದೆ ಅವಳು ಬಂದಾಗ ಕೊಂಚ ಕರಗಿದಂತೆ ಕಾಣಿಸುತ್ತಾನೆ. ಕೊನೆಗೆ ತಾನು ಕರಗುವವನಲ್ಲ ಎಂದು ತೋರಿಸಿಕೊಳ್ಳುತ್ತಾನೆ. ಅವನು ಕರಗಿದ್ದು ನಿಜವೋ, ಅವಳು ಕರಗಿಸಿದ್ದು ನಿಜವೋ, ಆ ಪ್ರೀತಿ ನಿಜವೋ, ದ್ವೇಷ ನಿಜವೋ ಅನ್ನುವುದೂ ಕೊನೆಗೂ ಅವರವರ ಅನುಭವದಲ್ಲಿ ನಿಜವಾಗುತ್ತಾ ಹೋಗಬೇಕಾದ್ದು ಅನ್ನುವುದನ್ನು ಅವರು ನಿರೂಪಿಸುವ ರೀತಿಯೇ ವಿಶಿಷ್ಟ.

ಚಿಕ್ಕಂದಿನಲ್ಲೇ ಓಡಿ ಹೋಗಿ ಎಷ್ಟೋ ವರ್ಷಗಳ ನಂತರ ಬಂದ ಮಗಳು ತಂದೆಯನ್ನು ಕೇಳುತ್ತಾಳೆ: ಹಳೇ ಚಪ್ಪಲಿಗೆ ಹರಿದ ಕೊಡೆಗೆ ಜಾಗ ಕೊಟ್ಟಿದ್ದೀಯಾ ಹೆತ್ತ ಮಗಳಿಗೂ ಒಂದು ಜಾಗ ಕೊಡು. ಅಪ್ಪ ಮರುಮಾತಾಡದೇ ಹೊರಟು ಹೋಗುತ್ತಾನೆ. ಅವಳಿಗೊಂದು ಮಗುವಾಗಿದೆ. ಆ ಮಗುವಿನ ಅಪ್ಪನ ಮೇಲೆ ಅವಳಿಗೆ ಅಪಾರ ಸಿಟ್ಟಿದೆ. ಬಂದ ತಿಂದ ಹೋದ ಎಂದು ಅವನ ಮೇಲೆ ಕಿಡಿ ಕಾರುವ ಮಗಳು, ತನ್ನ ಮಗುವಿಗೊಂದು ಅಸ್ತಿತ್ವ ಕೊಡು. ನಿನ್ನ ಹೆಸರು ಕೊಡು, ನಿನ್ನೂರಿನ ಹೆಸರು ಕೊಡು ಎಂದು ಗೋಗರೆಯುತ್ತಿದ್ದರೆ ಅಪ್ಪ, ಹೆಗಲ ಮೇಲಿನ ಶಲ್ಯ ಕೊಡವಿ ಎದ್ದು ಹೋಗುತ್ತಾನೆ.

ಮತ್ತೊಬ್ಬ ತಂದೆ ಬೆಳೆದು ನಿಂತ ಮಗಳ ಮೇಲೆ  ಕೂಗಾಡುತ್ತಾನೆ. ತಾನು ಎಷ್ಟು ಕಷ್ಟದಲ್ಲಿ ಬೆಳೆದೆ ಎನ್ನುವುದನ್ನು ವಿವರಿಸುತ್ತಾನೆ. ಮಗಳು ಬೆಳೆಯುವ ಹೊತ್ತಿಗೆ ಒಂದೊಂದು ತರಗತಿ ಪಾಸು ಮಾಡುವುದಕ್ಕೂ ಲಕ್ಷಾಂತರ ದುಡ್ಡು ಸುರಿದೆ. ದುಡ್ಡು ಸುರಿದೇ ಬೆಳೆಸಿದೆ. ಅಂಥ ಮಗಳು ತಾನು ಹಾಕಿದ ಗೆರೆ ದಾಟಿದರೆ ತಾನು ಅವಳನ್ನು ಕ್ಷಮಿಸುವುದಿಲ್ಲ ಎಂದು ಅಬ್ಬರಿಸುತ್ತಾನೆ. ಅಪ್ಪನ ದ್ವೇಷವನ್ನು ತಾಳಿಕೊಳ್ಳುವ ಶಕ್ತಿ ನಿಂಗಿದೆಯಾ ಅಂತ ಕೇಳುತ್ತಾನೆ. ಅದಕ್ಕೆ ಮಗಳು ಹೇಳುತ್ತಾಳೆ. ಮಗಳ ದ್ವೇಷವನ್ನು ಭರಿಸುವ ಶಕ್ತಿ ನಿಂಗಿದೆಯಾ… ಅಪ್ಪ ಕೊಡುವ ಉತ್ತರ ಮಾರ್ಮಿಕವಾಗಿದೆ- ಎದುರುನಿಂತರೆ ಪಳಗಿಸ್ತೀನಿ, ಆಗದೇ ಹೋದರೆ ಮುರೀತೀನಿ.

ಮತ್ತೊಂದು ಸನ್ನಿವೇಶ ನೋಡಿ. ಯಾರನ್ನೋ ಪ್ರೀತಿಸುತ್ತಿದ್ದ ಹುಡುಗಿಯನ್ನು ಅವನು ಆಸ್ತಿಗೋಸ್ಕರ ಮದುವೆ ಆಗಿದ್ದಾನೆ. ಅವಳ ಪ್ರೀತಿ ಗೊತ್ತಿದ್ದೂ ಅವನು ಅವಳನ್ನು ಉದಾರವಾಗಿ ಕ್ಷಮಿಸಿ ಕೈ ಹಿಡಿದಿದ್ದಾನೆ.  ಅವಳಾಡುವ ಮಾತು ಕೇಳಿ. `ದುರಂತ ಏನು ಗೊತ್ತಾ.. ಅಪ್ಪ ನಿಮ್ಮನ್ನು ನೋಡೋಕೆ ಬರ್ತಿದ್ದೀರಿ ಅಂದ್ರು. ಬೇರೆ ದಾರಿಯಿಲ್ಲದೆ ಒಪ್ಪಿಕೊಂಡೆ. ನಿಮಗೆ ನನ್ನ ಚರಿತ್ರೆ ಗೊತ್ತಾಗಲ್ಲ ಅಂದ್ಕೊಂಡೆ. ಅವನು ನಿನ್ನ ಚರಿತ್ರೆ ಗೊತ್ತಿದ್ದೂ ಒಪ್ಕೊಂಡ ಅಂತ ಅಪ್ಪ ಹೇಳಿದ್ರು. ಗೊತ್ತಿದ್ದೂ ಒಪ್ಪಿದ್ರೆ ದೊಡ್ಡತನ ಅಂದ್ಕೊಂಡ್ರಾ..ಔದಾರ್ಯ ಅಂದ್ಕೊಂಡ್ರಾ.. ಖಂಡಿತ ಇಲ್ಲ. ನೀವು ಗೊತ್ತಿದ್ದೂ ಒಪ್ಕೊಂಡಿದ್ದೀರಿ ಅಂತ ಗೊತ್ತಾದ ಮೇಲೆ ನಿಮ್ಮ ಮೇಲಿನ ಗೌರವ ಮತ್ತೂ ಕಡಿಮೆಯಾಯ್ತು.

ಒಂದು ಸಂಕೀರ್ಣ ನಾಟಕದ ಅನುಭವ ಕೊಡುವ ಈ ಧಾರಾವಾಹಿಯಲ್ಲಿ ತಾಯಿಯನ್ನು ನೋಡಲು ಬರುವ ಮಗಳಿದ್ದಾಳೆ. ಎಷ್ಟೋ ವರ್ಷಗಳ ನಂತರ ಬಂದ ಮಗಳನ್ನು ತಾಯಿ ಸ್ವಾಗತಿಸುವ ದೃಶ್ಯವನ್ನು ಸೇತುರಾಮ್ ಚಿತ್ರೀಕರಿಸಿರುವ ರೀತಿಯೇ ಮನಸ್ಸನ್ನು ಮಂಜಾಗಿಸುತ್ತದೆ. ತಾಯಿ ಮಗಳು ಮುನಿಸಿಕೊಂಡೇ ಇದ್ದು, ಕೊನೆಯಲ್ಲಿ ತಾಯಿ ಮಗಳ ತಲೆಗೆ ಎಣ್ಣೆ ಎರೆಯುವಲ್ಲಿಗೆ ಮುನಿಸು ಕರಗುತ್ತದೆ. ನಂದಿನಿ ಗೌಡ ಮತ್ತು ಸುಂದರಶ್ರೀ ಈ ಪಾತ್ರವನ್ನು ತನ್ಮಯರಾಗಿ ನಿಭಾಯಿಸಿದ್ದಾರೆ.

ಪ್ರತಿಯೊಂದು ಎಪಿಸೋಡು ಕೂಡ ಒಂದು ಸಣ್ಣಕತೆ ಆಗಬೇಕು ಎಂದು ಬಯಸುವ ಕಾಲವೊಂದಿತ್ತು. ಈಗ ಪ್ರತಿ ದೃಶ್ಯವೂ ಒಂದು ಸಣ್ಣಕತೆಯಾಗಬೇಕು ಎಂದು ಆಶಿಸುವ ಹಂತದಲ್ಲಿದ್ದೇವೆ ನಾವು. ಅಧರಲ್ಲೂ ಪ್ರತಿ ದೃಶ್ಯವೂ ಯಾವುದೋ ನೆನಪನ್ನು ಕೆರಳಿಸುತ್ತಾ, ನಮ್ಮೂರನ್ನು ನಮ್ಮ ಬಾಲ್ಯವನ್ನೂ ಜ್ಞಾಪಿಸುತ್ತಾ, ಅರೆಕ್ಷಣ ಎಲ್ಲಾ ಜಂಜಡಗಳಿಂದ ನಮ್ಮನ್ನು ಬಿಡುಗಡೆ ಮಾಡಿದರೆ ಅಷ್ಟು ಸಾಲದೆ.

ಅಂಥದ್ದೊಂದು ಅನನ್ಯ ಅನುಭವವನ್ನು ಕೊಡುವಲ್ಲಿ ಸೇತುರಾಮ್ ಗೆದ್ದಿದ್ದಾರೆ. ಮಾತಲ್ಲೇ ಸಂಬಂಧವನ್ನು ಸಂಕೀರ್ಣವಾಗಿಸುತ್ತಾ, ಮೆದುವಾಗಿಸುತ್ತಾ, ಆಪ್ತವಾಗಿಸುತ್ತಾ ಸಾಗುತ್ತಾರೆ. ಎಲ್ಲೋ ಒಂದು ಕಡೆ ನಾವೂ ಅದರ ಒಳಗಿದ್ದೇವೆ ಎನ್ನುಸುವಂಥ ವರ್ತುಲವೊಂದನ್ನು ಅವರು ಸೃಷ್ಟಿಸಿದ್ದಾರೆ.

ಥ್ಯಾಂಕ್ಸ್ ಸೇತುರಾಮ್.

 

 

‍ಲೇಖಕರು avadhi

22 August, 2011

11 Comments

  1. ಶ್ವೇತಾ ಹೊಸಬಾಳೆ

    ನನಗೂ ಇಷ್ಟ ಸೇತುರಾಂ ಸೀರಿಯಲ್ಲು,ಸಂಭಾಷಣೆ, ಪಾತ್ರಗಳ ಅಂತರಾಳವನ್ನು ಬಗೆದು ಅವರು ತೆರೆದಿಡುವ ರೀತಿ,ಮುಖವಾಡಗಳಲ್ಲೇ ಬದುಕುವ ಮನುಷ್ಯನ ಸಣ್ಣತನಗಳನ್ನು ಬಯಲುಮಾಡಿ ಬೆತ್ತಲೆ ನಿಲ್ಲಿಸುವ ಪರಿ. ನನ್ನದೂ ಒಂದ್ರಾಶಿ ಥ್ಯಾಂಕ್ಸ್ ಸೇತು ರಾಂ ರವರಿಗೆ.

  2. srtri

    ಊಟ ಆಯ್ತಾ? ಬದಲಿಗೆ “ಊಟವಾಯ್ತಾ?” ಅಂದ್ರೆ ಅದು ಸೇತುರಾಮ್ ಅವರದ್ದು ಅಂತ ಗೊತ್ತಾಗತ್ತೆ ನನಗೆ 🙂

  3. Jayalaxmi

    ಸೇತುರಾಂ ಸರ್ ಸೃಷ್ಟಿಸುವ ಎಲ್ಲ ಪಾತ್ರಗಳೂ ತಮ್ಮ ಒಳಗನ್ನು ಹಸಿ ಹಸಿಯಾಗಿ ಮಾತಾಡಿ ತೋರಿಸುವ ಕಾರಣಕ್ಕಾಗಿಯೇ ಆಪ್ತವೆನಿಸಿಬಿಡುತ್ತವೆ.!! ಪ್ರತಿ ಎಪಿಸೋಡು ಮುಗಿದಾಗೊಮ್ಮೆ ಎಲ್ಲೋ ನಮ್ಮೊಳಗೇ ಮುಳುಗಿ ಎದ್ದ ಅನುಭವ!! ಗ್ರೇಟ್ ಮ್ಯಾನ್!!

  4. D.RAVIVARMA

    AVARA SERIEL ADU SERIEL ALLARI RE ADU NAMMA NIMMA BADUKINA KATHE,ANTHARALADA NOVU, AKRANDANA,ONTITANADA ASAYAYA BHARA ELLO ONDU NIRUMMALA AGUVA DARI HEGE HEEGE IAM HATS OFF TO SETURAM HE IS THE NOT THE DIRECTOR BUT VISION OF MANY MANY MINDS,THOUGHTS, DREAMS AND PAINS. D,RAVIVARMA HOSPET

  5. Pavithra Madesh

    Adbhutavaadu dharaavahi..prathi sambhashaneyu nammannu aalochisuvanthe maaduthave…maneyolage nadeyuva sambhashanegalu maneya horagina haagu manassina holasannu thorisuva drushyagalu…yella vargada haagu vayassina janara bhavanegalige avaarde aada spashikaranada maathugalu…evellavoo noduvavana yochanaa buddige guddu koduthave…ondu debate ge concept odagisuthade…

  6. Nagarathna T.A.

    Kshana Kshana kutuhala mudisuva dharavahi. NOdugare Patradharigalagi biduttare kshanadalli. Commerical breaks jaasti anusuttade. Kathe innu munduvariaya barade ennuvastralli dharavahi mugidiruttade. KANNADA DA ONDU OLLE DHARAVAHI.

  7. M.S.Rudreswaraswamy

    jOgiyavara lEKana hiDisitu. OduttiddaMte, dhaaravaahiyannu nODida anubhavavaagutte. I dhaarahavaahi manushyana aaLadalliruva nIchatana, swaartha, saNNtana anaavaraNagoLisutta, kaavyamaya bhaasheyalli, koMcha naaTakIyavenisidarU, manassannu muTTutte, muTTinODikoLLuvaMte maDutte. sEthyraaM manushya saMbaMdhagaLnnu mattu avugaLa saMkIrNa nelegaLannu arasuttaa hOguvudara jotege, allalli `aMgaMtiyaa’ annuttalE satyakkiruva halavu muKagaLannu tOrisuttare. Avara kaNNina nOTa mattu nOvaadaaga muKada abhinaya hRudaya muTTutte manassannu kalakutte.

  8. malathi S

    After ‘mooDalamane’ i have not watched any kannada serials. last week a friend of mine sent me a link of ‘anaavaraNa’ on you-tube. really LOVE the dialogues. have finished episodes 1 to 9.
    thank you aviratha Sateesh!!(He sent me the link)
    🙂
    ms

  9. ಆಸು ಹೆಗ್ಡೆ

    ತಾವು ಇಲ್ಲಿ ವಿಶ್ಲೇಷಿಸಿರುವ ಸಂಭಾಷಣೆಗಳೆಲ್ಲವನ್ನು ನಾನೂ ಮೆಲುಕು ಹಾಕುತ್ತಿದ್ದೆ. ಮೊನ್ನೆಯ ಆ ಒಂದೇ ಒಂದು ಸಂಚಿಕೆ ನನ್ನೊಳಗೆ ವಿಚಾರಮಂಥನಕ್ಕೆ ಅನುವುಮಾಡಿಕೊಟ್ಟಿತ್ತು.
    ತಾವು ಆರಂಭದಲ್ಲೇ ಸೂಚಿಸಿರುವಂತೆ, ನಾವು ಬೇಡ ಬೇಡ ಅನ್ನುತ್ತಲೇ ಪೂರ್ತಿ ನೋಡುತ್ತಿರುತ್ತೇವೆ. ನಮ್ಮನ್ನು ಹಿಡಿದು ಕೂರಿಸುವ ಶಕ್ತಿ ಇದೆ ಅಂದರೆ ತಪ್ಪಾಗಲಾರದು.
    ನಾವು ಧಾರಾವಾಹಿಗಳ ಬಗ್ಗೆಯೂ ಬರೆಯಬಹುದಾ ಎಂದು ಯೋಚಿಸುತ್ತಿರುವಾಗಲೇ ತಾವು ಬರೆದುಬಿಟ್ಟಿದ್ದೀರಿ. ಸಂತೋಷ ಆಯ್ತು.

  10. mirza

    I fear after seeing this serial if spouses, children, elders siblings starts defying the opposite then what would be fate of the institution called family?

  11. ಜ ಬ ಪರೇಶ

    ರಕ್ತವನ್ನು ಹ೦ಚಿಕೊ೦ಡವರ ಸ೦ಬ೦ಧದಲ್ಲಿ ಹುಟ್ಟಿಕೊಳ್ಳುವ ಪ್ರೀತ್ಯಾದರಗಳಿಗಿ೦ತ ಹೆಚ್ಚಾಗಿ ಒಡಕು, ಹೃದಯವಿದ್ರಾವಕ ನೋವು, ಸ೦ಕಟಗಳು ಮಸ್ತಕದಲ್ಲಿದ್ದರೂ ಪದಗಳ ರೂಪ ಪಡೆಯುವುದು ಸಾಮಾನ್ಯರಲ್ಲಿ ಅಸಾಧ್ಯ. ಇ೦ತಹ ಜಟಿಲ ಸ೦ದರ್ಭಗಳನ್ನು ದೃಶ್ಯಮಾಧ್ಯಮದಲ್ಲಿ ಪಾತ್ರಗಳ ಮನಸ್ಸುಗಳ ಮುಖೇನ ಹೊರಹೊಮ್ಮಿಸಿರುವ ಬಗೆ ನನ್ನ ವಿಮರ್ಶಾತ್ಮಕ ದೃಷ್ಟಿಗೆ ಮೀರಿದ್ದು. ನಿರ್ಲಿಪ್ತ ವೀಕ್ಷಕನ ಮನಸ್ಸನ್ನು ಸಹ ತೇವಗೊಳಿಸುವ ಆ ಮಾತುಗಳನ್ನು, ದೃಶ್ಯವನ್ನು ಮತ್ತೊಮ್ಮೆ ಗಟ್ಟಿಯಾಗಿ ಆಲೋಚಿಸುವುದೂ ಅಸಾಧ್ಯವೆನಿಸುತ್ತದೆ. ಇವುಗಳನ್ನು ಅನಾವರಣಗೊಳಿಸಲು ಸಾಧ್ಯವಾಗಿರುವುದು ನಿನಗೆ ಮಾತ್ರ ಸೇತು … Hats Off.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading