ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ಬರೆಯುವ ಮುನ್ನ…

ಕಂಪ್ಯೂಟರ್ ಬಂದ ನಂತರ ಕೈಯಲ್ಲಿ ಬರೆಯುವುದು ಮರೆತೇ ಹೋಗಿದೆ. ಸಹಿ ಮಾಡುವುದು ಬಿಟ್ಟರೆ ನಾನು ಪೆನ್ನು ಬಳಸುವುದಿಲ್ಲ. ಹೀಗಾಗಿ ಜೇಬಲ್ಲಿ ಪೆನ್ನಿಟ್ಟುಕೊಂಡು ತಿರುಗಾಡುವುದೂ ಬಿಟ್ಟುಹೋಗಿದೆ. ಅವಸರಕ್ಕೆ ಏನನ್ನಾದರೂ ನೋಟ್ ಮಾಡಿಕೊಳ್ಳಬೇಕಿದ್ದರೆ ಗೆಲಾಕ್ಸಿ ಪ್ಯಾಡ್ ಕೈಯಲ್ಲೇ ಇರುತ್ತದೆ. ಅದರಲ್ಲಿ ಪುಟಗಟ್ಟಲೆ ನೋಟ್ಸ್ ಮಾಡಿಕೊಳ್ಳಬಹುದು. ದಿನಾಂಕ ಗುರುತು ಹಾಕಿಕೊಳ್ಳುವುದಕ್ಕೂ ಅದೇ ಬರೋಬ್ಬರಿ ನೆರವಾಗುತ್ತದೆ.

ಕೈಯಲ್ಲಿ ಬರೆಯುವ ಸುಖವೇ ಬೇರೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ಆದರೆ ಇಪ್ಪತ್ತೆರಡು ವರ್ಷಗಳ ಹಿಂದೆ ಸೀರಿಯಲ್ಲುಗಳಿಗೆ ಸಂಭಾಷಣೆ ಬರೆಯಲು ಆರಂಭಿಸಿದಾಗ ಪಟ್ಟ ಪಾಡು ನೆನಪಾಗುತ್ತದೆ. ಯಶವಂತ ಚಿತ್ತಾಲರ ಶಿಕಾರಿ ಕಾದಂಬರಿಗೆ ಸಂಭಾಷಣೆ ಬರೆದುಕೊಡಿ ಎಂದು ಗೆಳೆಯ ಬಿ ಎಸ್ ಲಿಂಗದೇವರು ಎಂದಿದ್ದರು. ದಿನಕ್ಕೆ ಏಳೆಂಟು ಪುಟ ಬರೆಯಬೇಕಾಗುತ್ತಿತ್ತು. ಅದರ ರುಚಿ ಹತ್ತಿದ ನಂತರ ಸಿಕ್ಕವರು ರವಿ ಕಿರಣ್. ಅವರು ನಿರ್ದೇಶಿಸುತ್ತಿದ್ದ ಶಕ್ತಿ ಧಾರಾವಾಹಿಗೆ ನಾನು ಮತ್ತು ಉದಯ ಮರಕಿಣಿ ಸಂಭಾಷಣೆ ಬರೆಯಲು ಒಪ್ಪಿಕೊಂಡಿದ್ದೆವು. ದಿನಕ್ಕೆ ಏನಿಲ್ಲವೆಂದರೂ ಮೂವತ್ತು ಪುಟ ಬರೆಯಬೇಕಾಗುತ್ತಿತ್ತು. ಬೆಳಗ್ಗೆ ಐದಕ್ಕೆ ಬರೆಯಲು ಕುಳಿತರೆ, ಒಂಬತ್ತರ ಹೊತ್ತಿಗೆ ಮೂವತ್ತು ಪುಟ ರೆಡಿ. ನಾನಂತೂ ಆಗ ಪರೀಕ್ಷೆ ಬರೆಯುವವನ ಥರ ನಾಲ್ಕೈದು ಪೆನ್ನು, ಪೇಪರ್ ಇಟ್ಟುಕೊಂಡು ಕೋಣೆ ಸೇರಿಕೊಳ್ಳುತ್ತಿದ್ದೆ.

ಸುಮಾರು ಐದಾರು ವರ್ಷ ಹಾಗೆ ಬರೆದಿರಬಹುದು. ಅಷ್ಟು ಹೊತ್ತಿಗೆ ವಿಚಿತ್ರ ಸಮಸ್ಯೆಗಳು ಎದುರಾದವು. ಮೂಲತಃ ಊರೂರು ಸುತ್ತುವವನಾದ ನನಗೆ, ಪರವೂರುಗಳಿಗೆ ಹೋದಾಗ ಬರೆದ ಸಂಭಾಷಣೆಯ ಪುಟಗಳನ್ನು ಕಳುಹಿಸಿಕೊಡುವುದು ಹೇಗೆ ಎಂಬ ಸಮಸ್ಯೆ ಎದುರಾಗುತ್ತಿತ್ತು. ಎಷ್ಟೋ ಸಾರಿ, ಬಸ್ಸಿನಲ್ಲಿ ಕಳಿಸಿಕೊಟ್ಟು, ಬೆಳ್ಳಂಬೆಳಗ್ಗೆ ಶೂಟಿಂಗ್ ತಂಡದ ಹುಡುಗರು ಬಸ್-ಸ್ಟಾಂಡಿನಲ್ಲಿ ಕಾಯಬೇಕಾಗಿ ಬಂದ ಪ್ರಸಂಗಗಳೂ ಎದುರಾಗಿದ್ದವು.

ಇದ್ಯಾವ ರಗಳೆಯೂ ಬೇಡ ಎಂದು ಫ್ಯಾಕ್ಸ್ ನೆಚ್ಚಿಕೊಳ್ಳೋಣ ಎಂದರೆ ನಲವತ್ತು ಪುಟಗಳನ್ನು ಫ್ಯಾಕ್ಸ್ ಮಾಡುವುದಕ್ಕೆ ಎರಡು ಗಂಟೆ ಹಿಡಿಯುತ್ತಿತ್ತು. ಅಷ್ಟು ಹೊತ್ತು ಫ್ಯಾಕ್ಸ್ ಅಂಗಡಿಯ ಮುಂದೆ ಕಾದಿದ್ದು, ಪುಟಕ್ಕೆ ಹದಿನೈದು ರುಪಾಯಿ ಖರ್ಚು ಮಾಡಿದರೆ ನಮಗೆ ಉಳಿಯುತ್ತಿದ್ದದ್ದು ಶ್ರಮ ಮಾತ್ರ. ಇದ್ಯಾವುದೂ ಬೇಡ ಎಂದು ಕಂಪ್ಯೂಟರ್ ಕೊಂಡಿದ್ಜಾಯಿತು. ಕೈಲೊಂದು ಸಾಫ್ಟ್-ವೇರ್ ಇಟ್ಟುಕೊಂಡು ಎಲ್ಲೂ ಊರುಗಳಲ್ಲೂ ಸಾಮಾನ್ಯವಾಗಿ ಸಿಗುವ ನೆಟ್ ಸೆಂಟರುಗಳಲ್ಲಿ ಕೂತುಕೊಂಡು ದೃಶ್ಯ ಬರೆದು ಕಳಿಸುವುದಕ್ಕೆ ಆರಂಭಿಸಿದೆವು. ಅದೂ ಬಹಳ ದಿನ ಬಾಳಲಿಲ್ಲ. ಯಾಕೆಂದರೆ ಕೆಲವೊಂದು ಕಂಪ್ಯೂಟರುಗಳಲ್ಲಿ ನಮ್ಮಲ್ಲಿರುವ ಸಾಫ್ಟ್-ವೇರು ಇನ್‌ಸ್ಟಾಲ್ ಆಗುತ್ತಿರಲೇ ಇಲ್ಲ.

ನನ್ನ ಅನೇಕ ಗೆಳೆಯರು ಈಗಲೂ ಕೈಬರಹವೇ ಇಷ್ಟ ಅನ್ನುತ್ತಾರೆ. ರವಿ ಬೆಳಗೆರೆ ಯೋಗರಾಜ ಭಟ್, ನಾಗತಿಹಳ್ಳಿ ಚಂದ್ರಶೇಖರ್, ಜಯಂತ ಕಾಯ್ಕಿಣಿ ಎಲ್ಲರೂ ಬೆರಳನ್ನೇ ನೆಚ್ಚಿಕೊಂಡವರು. ಬೆರಳುಗಳ ಮಧ್ಯೆ ಪೆನ್ನು ಸಿಕ್ಕಿಸಿಕೊಂಡು ಬರೆಯದೇ ಹೋದರೆ ಮನಸ್ಸಿನಲ್ಲಿರುವುದು ಹೊರಗೆ ಬರುವುದಿಲ್ಲ ಎಂಬುದು ಅನೇಕ ಮಿತ್ರರ ತಕರಾರು. ನಾನೂ ಪತ್ರಿಕಾ ಬರಹಗಳಿಗೆ ಕಂಪ್ಯೂಟರ್, ಕತೆ ಬರೆಯುವುದಕ್ಕೆ ಪೆನ್ನು ಕಾಗದ ಬಳಸುತ್ತಿದ್ದೆ. ನನ್ನ ಭ್ರಮೆ ಕಳಚಿದವರು ತೇಜಸ್ವಿಯವರು. ಒಮ್ಮೆ ಅವರ ಮನೆಗೆ ಹೋದಾಗ ಕಂಪ್ಯೂಟರಿನಲ್ಲಿ ಏನೋ ಬರೆಯುತ್ತಾ ಕೂತಿದ್ದರು. ಅದು ಕತೆ ಅನ್ನುವುದು ಗೊತ್ತಾಗುತ್ತಿದ್ದಂತೆ ನಾನು ಕಂಪ್ಯೂಟರಿನಲ್ಲಿ ಕತೇನಾ ಅಂದೆ. ಎಲ್ಲಾ ಒಂದೇ, ಅಲ್ಲೂ ಬೆರಳು, ಇಲ್ಲೂ ಬೆರಳು. ನಾವು ಅಭ್ಯಾಸ ಮಾಡಿಕೊಂಡ ಹಾಗೆ ಅಂದಿದ್ದರು. ಅಲ್ಲಿಂದಾಚೆಗೆ ಪೆನ್ನು ಪೇಪರು ಮುಟ್ಟಿದ್ದು ನೆನಪಿಲ್ಲ. ಈಗ ಬರೆಯಲು ಕುಳಿತರೆ ಎಷ್ಟೋ ಅಕ್ಷರಗಳು ತಕ್ಷಣ ನೆನಪೂ ಆಗುವುದಿಲ್ಲ. ಅಕ್ಷರ ಸುಂದರವಾಗಿರಬೇಕು ಎಂದು ಪುಟಗಟ್ಟಲೆ ಕಾಪಿ ಬರೆದದ್ದು, ಇಂಕು ಪೆನ್ನಿನಲ್ಲೇ ಬರೆಯಬೇಕು ಎಂಬ ಮೇಷ್ಟರ ಒತ್ತಾಯಕ್ಕೆ ಕಟ್ಟುಬಿದ್ದು, ಮೈ ಕೈಯೆಲ್ಲ ಇಂಕು ಮಾಡಿಕೊಂಡು ನೀಲಿ ಬೆರಳುಗಳ ಮನುಷ್ಯರಂತೆ ಓಡಾಡುತ್ತಿದ್ದದ್ದೆಲ್ಲ ಈಗ ನೆನಪಾಗುತ್ತದೆ. ನನ್ನ ಅಕ್ಷರ ಕೆಟ್ಟದಾಗಿದೆ ಎಂದಿದ್ದಕ್ಕೆ ಒಮ್ಮೆ ವೈಎನ್ಕೆ ರೇಗಿದ್ದರು- ರೈಟಿಂಗ್ ಚೆನ್ನಾಗಿರಬೇಕು, ಹ್ಯಾಂಡ್ ರೈಟಿಂಗ್ ಅಲ್ಲ. ಎರಡೂ ಚೆನ್ನಾಗಿಲ್ಲ ಅಂತ ಆಗಾಗ ಅನ್ನಿಸುತ್ತಿರುವುದಂತೂ ಸುಳ್ಳಲ್ಲ.

ಕಂಪ್ಯೂಟರಿನಲ್ಲಿ ಅಚ್ಚುಕಟ್ಟಾಗಿ ಟೈಪ್ ಮಾಡಬಲ್ಲವರೆಂದರೆ ಸುರೇಂದ್ರನಾಥ್. ಅವರು ಒಂದು ಸುಂದರವಾದ ಪುಟವಿನ್ಯಾಸ ಮಾಡಿಕೊಂಡು ಅದರಲ್ಲಿ ಕತೆಗಳನ್ನು ಬರೆಯುತ್ತಾ ಕೂರುವುದನ್ನು ನೋಡುವುದೇ ಒಂದು ಚಂದ. ನಾಟಕಗಳನ್ನು ಬರೆಯುವಾಗಲೂ ಅಷ್ಟೇ. ಪಾತ್ರಗಳ ಹೆಸರು, ಸೂಚನೆ, ಮಾತು ಎಲ್ಲೆಲ್ಲಿರಬೇಕೋ ಅಲ್ಲಲ್ಲೇ ಬಂದು ರಂಗವಿನ್ಯಾಸದಂತೆಯೇ ಅವರ ಸ್ಕ್ರಿಪ್ಟು ಕೂಡ ಇರುತ್ತದೆ. ಅದು ಯಾವ ಮಹಾ ಕೆಲಸ ಎಂದುಕೊಳ್ಳುವುದು ಸುಲಭ. ಆದರೆ ಪೇಜ್-ಮೇಕರಿನಂಥ ವೃತ್ತಿಪರ ಸಾಫ್ಟ್-ವೇರ್ ಬಳಸದೇ ಇರುವವರಿಗೆ ಯಾವತ್ತೂ ಕಷ್ಟವೇ. ಕನ್ನಡದಲ್ಲಿ ವರ್ಡ್‌ನಂಥ ಡೆಸ್ಕ್ ಟಾಪ್ ಸಾಫ್ಟ್‌ವೇರುಗಳು ಸಿಗುವುದಿಲ್ಲ. ಬರಹ, ನುಡಿ ತಂತ್ರಾಂಶಗಳಲ್ಲಿ ಸೊಗಸಾದ ಅಕ್ಷರ ವಿನ್ಯಾಸಗಳಿಲ್ಲ.

ಈಗಲೂ ನನ್ನ ಕೆಲವು ಗೆಳೆಯರು ಕನ್ನಡ ಟೈಪ್‌ರೈಟರ್ ಬಳಸುತ್ತಾರೆ. ಕಂಪ್ಯೂಟರಿನಷ್ಟೇ ವೇಗವಾಗಿ ಅದರಲ್ಲೂ ಟೈಪು ಮಾಡಬಲ್ಲ ಪರಿಣತಿ ಹೊಂದಿದ್ದಾರೆ. ಅಲ್ಲಿ ತಪ್ಪಾಗಿ ಮೂಡಿದ ಅಕ್ಷರಗಳನ್ನು ಅಳಿಸುವುದು ಸುಲಭವಲ್ಲ. ಹಾಗಿದ್ದರೂ ಚಿತ್ತಾಗದಂತೆ ಬರೆಯುವುದನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಕಂಪ್ಯೂಟರಿಗಿಂತ ಟೈಪ್‌ರೈಟರ್ ಕಷ್ಟ. ಅಲ್ಲಿ ಯೋಚನಾ ಲಹರಿ ಏಕಮುಖವಾಗಿ, ವೇಗವಾಗಿ ಸಾಗುತ್ತಿರಬೇಕಾಗುತ್ತದೆ. ಎಷ್ಟೋ ಸಾರಿ, ಬೆರಳಿಗಿಂತ ಮನಸ್ಸು ವೇಗವಾಗಿ ಯೋಚಿಸುವುದರಿಂದ ಎಷ್ಟೋ ವಿಚಾರಗಳು ಲೇಖನ ಮುಗಿಯುವ ಹೊತ್ತಿಗೆ ಮರೆತೇಹೋಗಿರುತ್ತವೆ.

ಕುವೆಂಪು ಹಸ್ತಾಕ್ಷರದ ವಿವಾದದ ಕುರಿತು ರಾಜೇಶ್ವರಿಯವರು ಬರೆದುಕೊಂಡದ್ದನ್ನು ಓದುತ್ತಿರುವ ಹೊತ್ತಿಗೆ ಇವೆಲ್ಲ ನೆನಪಾಯಿತು. ನಾನೀಗ ಅನುವಾದಿಸುತ್ತಾ ಕೂತಿರುವ ಪ್ರಾನ್ಜ್ ಕಾಫ್ಕನ ಅಕ್ಷರಗಳನ್ನು ಓದುವುದಕ್ಕಂತೂ ಸಾಧ್ಯವೇ ಇಲ್ಲ. ಅವನ ಗೆಳೆಯ ಅದನ್ನೆಲ್ಲ ಆಯ್ದು ಮುದ್ರಿಸದೇ ಹೋದರೆ ಅವು ಅರ್ಥವೇ ಆಗುತ್ತಿರಲಿಲ್ಲವೇನೋ. ಭಾಷೆಗೆ ಬರಹಕ್ಕೆ ಒಂದು ವಿಶೇಷ ಗುಣವಿದೆ. ಯಾವ ಭಾಷೆಯೇ ಆಗಲಿ ಮತ್ತೆ ಮತ್ತೆ ಕಿವಿಯ ಮೇಲೆ ಬೀಳುತ್ತಾ ಹೋದರೆ ಅದರ ಸೂಕ್ಷ್ಮಗಳು ಅರ್ಥವಾಗುತ್ತಾ ಹೋಗುತ್ತವೆ. ಹಸ್ತಾಕ್ಷರವೂ ಅಷ್ಚೇ, ಓದುತ್ತಾ ಓದುತ್ತಾ ಅಭ್ಯಾಸವಾಗುತ್ತಾ ಹೋಗುತ್ತದೆ. ನಮ್ಮ ಮನಸ್ಸು ಮೋಡಿ ಅಕ್ಷರಗಳನ್ನೂ ಗುರುತಿಸುತ್ತದೆ.

ಕುವೆಂಪು ಕಾಲದಲ್ಲಿ ಕಂಪ್ಯೂಟರ್ ಇದ್ದಿದ್ದರೆ ಅವರ ಹಸ್ತಾಕ್ಷರವನ್ನು ಮುದ್ರಿಸುವ ಪ್ರಸಂಗ ಬರುತ್ತಲೇ ಇರಲಿಲ್ಲ. ತೇಜಸ್ವಿಯವರು ಅದನ್ನು ಒಳ್ಳೆಯ ಉದ್ದೇಶದಿಂದಲೇ ಮಾಡಿದ್ದಾರೆ ಅನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಅದನ್ನು ಮುದ್ರಿಸುವ ಅಗತ್ಯವಿರಲಿಲ್ಲ ಎಂದೂ ವೆಬ್ ಎಡಿಷನ್ ಬಿಡುಗಡೆ ಮಾಡಿದ್ದರೆ ಸಾಕಿತ್ತೂ ಎಂದೂ ಈಗ ಅನ್ನಿಸುತ್ತಿದೆ. ಆದರೆ ಆ ಕಾರಣಕ್ಕೆ ಅವರ ಮೇಲೆ ಕೆಂಡ ಕಾರಿದ್ದನ್ನು, ಅದರ ಹಿಂದಿನ ಉದ್ದೇಶಗಳನ್ನೂ ರಾಜೇಶ್ವರಿ ಸಾಕಷ್ಟು ವಿವರವಾಗಿಯೇ ಬರೆದುಕೊಂಡಿದ್ದಾರೆ.

ಲೇಖಕರ ಹಸ್ತಪ್ರತಿ ಸಂಗ್ರಹಿಸುವ, ಹಸ್ತಾಕ್ಷರ ಸಂಗ್ರಹಿಸುವ ಖಲಾಯಿ ಇವತ್ತಿಗೂ ಅನೇಕರಿಗಿದೆ. ಅದು ಸಿನಿಮಾ ನಟರ ಹಸ್ತಾಕ್ಷರ ಪಡೆಯುವ ಹಂತಕ್ಕೂ ಬಂದಿದೆ. ಒಂದು ಕಾಲದಲ್ಲಿ ತುಂಬ ಜನಪ್ರಿಯವಾಗಿದ್ದ ವಿಜಯಚಿತ್ರ ಎಂಬ ಸಿನಿಮಾ ಮಾಸಿಕ, ಅಪರೂಪಕ್ಕೆ ಸಿನಿಮಾ ನಟರ ಹಸ್ತಾಕ್ಷರವನ್ನು ಪ್ರಕಟಿಸುತ್ತಿತ್ತು. ರಾಜ್‌ಕುಮಾರ್, ವಿಷ್ಣುವರ್ಧನ್, ಶ್ರೀನಾಥ್ ಮುಂತಾದವರ ಕೈ ಬರಹ ಹೇಗಿದೆ ಎಂಬ ಕುತೂಹಲದಲ್ಲಿ ನಾವದನ್ನು ಓದುತ್ತಿದ್ದೆವು.

ಈಗಲೂ ಮಕ್ಕಳು ಕೈ ಬರಹದ ಬಗ್ಗೆ ಅತೀವ ಕಾಳಜಿ ವಹಿಸುತ್ತವೆ. ಶಿಕ್ಷಣದಲ್ಲಿ ಅಂಥ ಬದಲಾವಣೆಯೇನೂ ಆಗಿಲ್ಲ ಎಂಬುದಕ್ಕೆ ಸಾಕ್ಷಿಯೆಂಬಂತೆ ಈಗಲೂ ಪುಟಗಟ್ಟಲೆ ಕಾಪಿ ಬರೆಸುತ್ತಾರೆ. ಹಳೇ ಕಾಲದಲ್ಲಿ ಆಸ್ತಿಪತ್ರ ಬರೆಯುವವರ ಕೈಬರಹ ಚೆನ್ನಾಗಿರಬೇಕು ಎನ್ನುತ್ತಿದ್ದರು. ಕೆಲವು ದಸ್ತಾವೇಜುಗಳನ್ನು ಬರೆಯುವಾಗ ಅಕ್ಷರ ಓದುವುದು ಕಷ್ಟವಾಗಿ ಯಾರದೋ ಆಸ್ತಿ ಮತ್ಯಾರದೋ ಪಾಲಾದ ಕತೆಗಳನ್ನು ನಮ್ಮಜ್ಜ ಹೇಳುತ್ತಿದ್ದರು. ಮೊನ್ನೆ ಯಾವುದೋ ಶೀರ್ಷಿಕೆ ಕೇಳಿದಾಗ ‘ತಾಯಿಯ ಯಾತನೆ’ ಅಂತ ಬರೆದುಕೊಟ್ಟೆ. ಅದನ್ನು ತಾಯಿಯ ಯಾಚನೆ ಅಂತ ಓದಿಕೊಂಡರು.ಆಮೇಲೆ ಓದಿದರೆ ಯಾತನೆ, ಯಾಚನೆ ಎರಡೂ ಪದಗಳು ಆಲ್ಲಿಗೆ ಹೊಂದುತ್ತವೆ ಅನ್ನಿಸಿತು. ಹಾಗೆನೋಡಿದರೆ ಯಾಚನೆಯೇ ಸಮರ್ಪಕವಾಗಿತ್ತು.

ಕಥೆಗಾರ ಜಿ ಎಸ್ ಸದಾಶಿವ ಹಿರಿಯ ಕಾದಂಬರಿಕಾರರ ಹಸ್ತಪ್ರತಿ ಓದಲಾಗದೆ ಇಡೀ ಕಾದಂಬರಿಯನ್ನು ತಾವೇ ಬರೆದುಬಿಟ್ಟಿದ್ದರಂತೆ. ಅದಕ್ಕೆ ಮೂಲ ಲೇಖಕರ ಆಕ್ಷೇಪವೂ ಬರಲಿಲ್ಲವಂತೆ. ಯಾಕೆಂದರೆ ಅವರಿಗೆ ತಾನೇನು ಬರೆದಿದ್ದೇನೆ ಎಂದು ಓದುವುದು ಸಾಧ್ಯವಾಗಲೇ ಇಲ್ಲವಂತೆ.

ಬ್ರಹ್ಮ ಎಲ್ಲರ ಹಣೆಯಲ್ಲೂ ಬರೀತಾನೆ ಅಂತಾರೆ. ಕೆಲವರ ಹಣೆಬರಹ ಓದಲಾಗದೆ ಕೆಟ್ಟ ಅಕ್ಷರಗಳಲ್ಲಿರುತ್ತವೆ ಎಂಬುದನ್ನು ಮಾತ್ರ ಅಲ್ಲಗೆಳೆಯುವಂತಿಲ್ಲ.

 

 

 

‍ಲೇಖಕರು G

29 May, 2011

25 Comments

  1. ಕುಮಾರ ರೈತ

    ಬರೆಯುವವರ ಕಷ್ಟಗಳನ್ನು ತುಂಬ ಚೆನ್ನಾಗಿ ಮನಗಾಣಿಸಿದ್ದೀರಿ. ನಿಜ; ಕೈಯಲ್ಲಿ ಬರೆಯುವ ಖುಷಿಯೇ ಬೇರೆ. ಹೀರೋ-ಪಾರ್ಕರ್ ಇಂಕ್ ಪೆನ್ನಿನಲ್ಲಿ ನುಣುಪಾದ ನವನೀತ್ ಹಾಳೆಗಳ ಮೇಲೆ ಬರೆಯುವುದು ಸುಖದ ಕ್ರಿಯೆಯಾಗಿತ್ತು. ಕೈಯಲ್ಲಿ ಬರೆದರೆ ವಿಚಾರಗಳು ಸ್ಪುಟವಾಗಿ ದಾಖಲಾಗುತ್ತವೆ ಎಂದು ನಂಬಿಕೊಂಡ ಕಾಲವೂ ಒಂದಿತ್ತು. ಕಂಪ್ಯೂಟರ್ನಲ್ಲಿ ಟೈಪಿಸಲು ಶುರು ಮಾಡಿದ ನಂತರ ಅದೂ ನಮ್ಮ ಅನೇಕ ನಂಬಿಕೆಗಳಲ್ಲಿ ಒಂದು ಎನ್ನುವುದು ಅರ್ಥವಾಯಿತು. ಅಫ್ ಡೇಟ್ ಆಗುತ್ತಲೇ ಇರುವ ಕಂಪ್ಯೂಟರ್-ಇಂಟರ್ ನೆಟ್-ಡಾಟಾ ಕಾರ್ಡ್ ತಾಂತ್ರಿಕತೆ ಊರು ಸುತ್ತುವ ಮತ್ತು ಸುತ್ತುತ್ತಲೇ ಇರಬೇಕಾದ ಅನಿರ್ವಾಯತೆ ಇರುವ ನನ್ನಂಥವರ ಕಷ್ಟಗಳನ್ನು ಪರಿಹರಿಸಿದೆ. ಸಕಾಲದಲ್ಲಿ ಕಚೇರಿಗೆ ಲೇಖನಗಳನ್ನು ತಲುಪಿಸಲು ನೆರವಾಗಿವೆ. ಕೈ ಬರಹ ಶೈಲಿ ಅಧ್ಯಯನದ ಮೂಲಕ ವ್ಯಕ್ತಿಯ ವ್ಯಕ್ತಿತ್ವವನ್ನು ಅರಿಯಬಹುದು;ಅಳೆಯಬಹುದು ಎನ್ನುತ್ತಾರೆ. ಇದೆಷ್ಟು ನಿಜವೋ…?

  2. raghavendra

    ‘naanu computernalli `baraha’ tantramsha alavadisikondu atyanta vegavaagi, english typing gottirodrinda bareyaballe. nanna alochanehondige kaigalu saraagavagi oduttave. computernalli bareyuva anukoolavendare tappugalallnnu allalle tiddabahudu. ho.ve sheshadri, na, krishnappanavaranta hiriya saamajika karyakartara sundara kai baravanigeyinda navella prabhavitaragiddavaru. computernalli bareyalu shuru maadida mele kaibaraha marare hogide.

  3. ಪವನಜ

    ಈ ಮಾತನ್ನು ಯಾವ ಅರ್ಥದಲ್ಲಿ ಹೇಳಿದ್ದು? ಕನ್ನಡದಲ್ಲಿ “ಮೆನು”, “ಬಟನ್”, ಇತ್ಯಾದಿಗಳು ಅಂದರೆ ಕನ್ನಡ user interface ಇಲ್ಲವೆಂದೇ? ವರ್ಡ್‌‌ಗೆ ಕನ್ನಡದ ಹೊದಿಕೆ (LIP = Language Interface Pack) ಲಭ್ಯವಿದೆ. bit.ly/lXiBbX ಜಾಲತಾಣದಿಂದ ಅದನ್ನು ನಿಮ್ಮ ಗಣಕಕ್ಕೆ ಇಳಿಸಿಕೊಂಡು ಬಳಸಬಹುದು. ನನೆಪಿಡಿ. ಇದು ನಿಮ್ಮಲ್ಲಿ ಅಧಿಕೃತ ವರ್ಡ್‌ ಇದ್ದಲ್ಲಿ ಮಾತ್ರ ಕೆಲಸ ಮಾಡುತ್ತದೆ.

    • ಪವನಜ

      ನಾನು ನನ್ನ ಪ್ರತಿಕ್ರಿಯೆಯಲ್ಲಿ ಈ ವಾಕ್ಯವನ್ನು “ಕನ್ನಡದಲ್ಲಿ ವರ್ಡ್‌ನಂಥ ಡೆಸ್ಕ್ ಟಾಪ್ ಸಾಫ್ಟ್‌ವೇರುಗಳು ಸಿಗುವುದಿಲ್ಲ” quote ಮಾಡಿದ್ದೆ. ಅದರೆ ಅದು ಚಿಹ್ನೆಗಳ ಒಳಗೆ ಇದ್ದುದರಿಂದ WP ಅದನ್ನು ನುಂಗಿ ಹಾಕಿದೆ. ಆದುದರಿಂದ ನಾನು ಯಾವುದರ ಬಗ್ಗೆ ಕಮೆಂಟಿಸಿದ್ದು ಎಂದು ಸ್ಪಷ್ಟವಾಗಿಲ್ಲ.

  4. raju hegade

    nimma “bareta” swvalpa jaastiyaayitu.astella hettare ellarigu uuta haakuvudu kasta!–raju hegde

  5. malathi S

    ನಿಹಾರಿಕಾ ಇತ್ತೀಚಿಗೆ IIT ಪರೀಕ್ಷೆ attend ಮಾಡಿದ್ಲು.ಪರೀಕ್ಷೆ ಆನ್-ಲೈನ್ ಇದ್ದರೂ english essay ಮಾತ್ರ ಕೈ ಬರಹದಲ್ಲಿ ಬರೆದು submit ಮಾಡ್ಲಿಕ್ಕಿತ್ತಂತೆ.
    nice write up. last line rings true in many cases..
    🙂

  6. ಆಜಯ

    ——–“ಕನ್ನಡದಲ್ಲಿ ವರ್ಡ್‌ನಂಥ ಡೆಸ್ಕ್ ಟಾಪ್ ಸಾಫ್ಟ್‌ವೇರುಗಳು ಸಿಗುವುದಿಲ್ಲ “—-

    ಮೈಕ್ರೋಸಾಫ್ಟ್ ವರ್ಡ್ ಬಗ್ಗೆ ಹೇಳುತ್ತಿದ್ದೀರ ಅಂತಾದರೆ ಈ ಮಾತು ತಪ್ಪು. ಇದು ಕನ್ನಡದಲ್ಲಿ ಇದೆ , ಚೆನ್ನಾಗಿ ಇದೆ. ಇಂತಹ ಮಾಹಿತಿಗಳನ್ನು ಬರೆಯುವಾಗ ಎಚ್ಚರ ಸ್ಪಷ್ಟತೆ ಅಗತ್ಯ . ನಿಮ್ಮ ಬರಹಗಳನ್ನು ಸಾವಿರಾರು ಜನ ಓದುತ್ತಾರೆ. ಅವರಿಗೆಲ್ಲಾ ತಪ್ಪು ಸಂದೇಶ ಹೋಗಬಾರದಲ್ಲ.

    ———ಬರಹ, ನುಡಿ ತಂತ್ರಾಂಶಗಳಲ್ಲಿ ಸೊಗಸಾದ ಅಕ್ಷರ ವಿನ್ಯಾಸಗಳಿಲ್ಲ.——

    ಬರಹ ನುಡಿಗಳಲ್ಲಿ , ಯುನಿಕೋಡಿನಲ್ಲಿ ಇಲ್ಲ. ಆದರೆ ಲೇಖನ ಬರೆಯಲು ಹೆಚ್ಚು ಅಕ್ಷ್ರರ ವಿನ್ಯಾಸಗಳ ಅಗತ್ಯವೂ ಇಲ್ಲ.
    ಟಿ.ವಿ, ಪತ್ರಿಕೆಗಳಲ್ಲಿ ಬಹಳಷ್ಟು ವಿನ್ಯಾಸಗಳನ್ನು ಬಳಸುತ್ತಾರಲ್ಲ! ಅವು ಉಚಿತವಾಗಿ ಸಿಗುವುದಿಲ್ಲ ಅಷ್ಟೆ.

    • jogimane

      ನಿಮ್ಮ ಮಾತು ಸರಿ. ಆದರೆ android ಫ್ಲಾಟ್ ಫಾರ್ಮಿನಲ್ಲಿ ಯಾವ ಕನ್ನಡ ಸಾಫ್ಟುವೇರುಗಳೂ ಕೆಲಸ ಮಾಡುವುದಿಲ್ಲ. ಕನ್ನಡ ಫಾಂಟುಗಳನ್ನು ಬಳಸಲೂ ಆಗುವುದಿಲ್ಲ ಎಂದು ನನ್ನ ಅನುಭವ. ಹಾಗೇ, ಆಪಲ್ ಬಳಸುವವರೂ ಒದ್ದಾಡುವುದನ್ನು ನೋಡಿದ್ದೇನೆ.
      ಜೋಗಿ

    • jogimane

      ಹಾಗೇ ಇನ್ನೊಂದು ಮಾತು. ನಿಮ್ಮ ಅಗತ್ಯಗಳಿಗೆ ಚೆನ್ನಾಗಿಯೇ ಇರಬಹುದು. ಆದರೆ ನನ್ನ ಅವಶ್ಯಕತೆಗೆ ಅದು ಹೊಂದಿಕೆ ಆಗುವುದಿಲ್ಲ. ಅಲ್ಲದೇ, ಕನ್ನಡದಲ್ಲಿ ಬರೆಯುವುದು ಅಂದರೆ ನಾಲ್ಕಕ್ಷರದ ನೋಟ್ ಮಾಡುವುದಲ್ಲ. ವೃತ್ತಿಪರ ಅಗತ್ಯಗಳಿಗೆ ಬಳಕೆಯಾಗುವಂಥ ವರ್ಡಿನಂಥ ಸಾಫ್ಟ್ ವೇರ್ ಬೇಕಾಗಿದೆ ನಮಗೆ. ಮೈಕ್ರೋಸಾಪ್ಟ್ ವರ್ಡಿನಲ್ಲೂ ಕನ್ನಡ ಬಳಸಬಹುದು, ಆದರೆ ಅದು ಕನ್ನಡದ ಅಗತ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಡೆವಲಪ್ ಆದ ಸಾಫ್ಟ್ ವೇರ್ ಅಲ್ಲ. ಇವತ್ತಿಗೂ ಕನ್ನಡದಲ್ಲಿ ಯಾವ ಕಂಪ್ಯೂಟರಿನಲ್ಲಿ ಬೇಕಿದ್ದರೂ ಬಳಸಬಲ್ಲ ಕನ್ನಡ ಸಾಫ್ಟ್ ವೇರ್ ಲಭ್ಯ ಇಲ್ಲ. ಅಂಥದ್ದೊಂದು ಸಾಫ್ಟ್ ವೇರ್ ತಂದವರು ಪುಣೆಯ CDAC ಮಂದಿ. ಅದೂ ಕೂಡ 64 ಬಿಟ್, ವಿಂಡೋಸ್ 7ನಲ್ಲಿ ಕೆಲಸ ಮಾಡುವುದಿಲ್ಲ. ಸ್ಪೆಲ್ ಚೆಕ್, ಹದಿನಾಲ್ಕು ಭಾಷೆಗಳ ಕೀ ಬೋರ್ಡ್ ಲೇ ಔಟ್, ಟ್ರಾನ್ಸಿಟರೇಷನ್ ಇತ್ಯಾದಿಗಳಿದ್ದ ಆ ಸಾಪ್ಟವೇರನ್ನು ಇನ್ನೂ ಇಂದಿನ ಅಗತ್ಯಗಳಿಗೆ ಅಭಿವೃದ್ಧಿಪಡಿಸಿಯೇ ಇಲ್ಲ. ಆ ಸುಡುಗಾಡು ಮೈಕ್ರೋಸಾಫ್ಟು ವರ್ಡ್ ಇಟ್ಟುಕೊಂಡು ಈಮೇಲು, ನೋಟ್ಸು ಮಾಡಿಕೊಳ್ಳಬಹುದು.ಆದರೆ ಮನಸ್ಸಿಗೆ ಹಿತವಾಗುವಂತೆ ಒಂದು ಲೇಖನವನ್ನು ವಿನ್ಯಾಸಗೊಳಿಸಿಕೊಳ್ಳುವುದಂತೂ ಸಾಧ್ಯವೇ ಇಲ್ಲ. ಚೆನ್ನಾಗಿದೆ ಎಂದು ಸರ್ಟಿಫೀಕೇಟು ಕೊಡುವ ಮೊದಲು ಚೆನ್ನಾಗಿಲ್ಲ ಎಂದು ಹೇಳುವವರ ಅವಶ್ಯಕತೆಗಳೇನು ಎನ್ನುವುದುನ್ನು ತಿಳಿದುಕೊಳ್ಳಿ. ಆಮೇಲೆ ಎಚ್ಚರ ಸ್ಪಷ್ಟತೆಗಳ ಬಗ್ಗೆ ಭಾಷಣ ಮಾಡಿ.

      • ಪವನಜ

        ಕನ್ನಡದ ಅವಶ್ಯಕತೆಗೆ ಅನುಗುಣವಾಗಿ ತಯಾರಾದ ತಂತ್ರಾಂಶ ಎಂದರೆ ಏನು? ಅರ್ಥಾತ್ ಯಾವ ಯಾವ ಸವಲತ್ತುಗಳು ಕನ್ನಡಕ್ಕೆಂದೇ ವಿಶಿಷ್ಟವಾಗಿವೆ? ಏನೇನು ಬೇಕಾಗಿವೆ? ನಾನು ಕರ್ನಾಟಕ ಸರಕಾರದ ತಂತ್ರಾಂಶ ಸಲಹಾಸಮಿತಿ ಸದಸ್ಯ. ಈ ಸಮಿತಿಗೆ ಎರಡು ಕೋಟಿ ರೂ. ಖರ್ಚು ಮಾಡಿ ಅತೀ ಅಗತ್ಯದ ತಂತ್ರಾಂಶ ತಯಾರಿಸುವ ಹೊಣೆಗಾರಿಕೆ ಇದೆ. ನೀವು ಕೊಡುವ feedback ನಮ್ಮದೇ ತಂತ್ರಾಂಶ ತಯಾರಿಯಲ್ಲಿ ಅತಿ ಮುಖ್ಯವಾಗುತ್ತದೆ. ನಮ್ಮ ಜಾಯಮಾನಕ್ಕೆ ಪರಿಪೂರ್ಣವಾಗಿ ಸರಿಹೊಂದುವ ತಂತ್ರಾಂಶ ಬೇಕೆನ್ನುವವರಲ್ಲಿ ನಾನೂ ಒಬ್ಬ. ಆದುದರಿಂದ ಸ್ವಲ್ಪ ವಿವರವಾಗಿ ತಿಳಿಸಿ.

  7. jogimane

    ಡಿಯರ್ ಪವನಜ
    ನೀವು ಹೇಳಿದ ಇಂಟರ್ ಫೇಸ್ ಇನ್ನೂ ವರ್ಡ್ 2010ಗೆ ಬಂದಿಲ್ಲ.
    ಜೋಗಿ

    • ಪವನಜ

      ಹೌದು. ಆಫಿಸ್ ೨೦೧೦ ಕ್ಕೆ ಇನ್ನೂ ಕನ್ನಡದ ಹೊದಿಕೆ ಬಂದಿಲ್ಲ. ಆಫೀಸ್ ೨೦೦೩ (ವರ್ಡ್‌ ೨೦೦೩) ರ ಕನ್ನಡದ ಹೊದಿಕೆ ಏನೇನೂ ಚೆನ್ನಾಗಿರಲಿಲ್ಲ. ೨೦೦೭ರಲ್ಲಿ ತುಂಬ ಸುಧಾರಿಸಿದ್ದಾರೆ. ನೀವು LIP ಪಟ್ಟಿಯಲ್ಲಿ ಹಿಂದಿಯನ್ನು ಕಾಣಲಾರಿರಿ ಏಕೆಂದರೆ ಹಿಂದಿಗೆ ಪರಿಪೂರ್ಣವಾದ ಆಫೀಸ್ ೨೦೧೦ ಆವೃತ್ತಿ ಲಭ್ಯವಿದೆ (ಕೇವಲ ಹೊದಿಕೆ ಅಲ್ಲ). ಇನ್ನೊಂದು ವಿಚಿತ್ರ ಮಾಹಿತಿ: ನಿಮಗೆ ವರ್ಡ್ (ಆಫೀಸ್) ನಲ್ಲಿ ಕನ್ನಡದ ಸ್ಪೆಲ್ಲಿಂಗ್ ಚೆಕ್ ಬೇಕಿದ್ದರೆ ನೀವು ಹಿಂದಿ ಆಫೀಸನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಇನ್ನೂ ವಿಚಿತ್ರ ಅಂದರೆ ಮೊದಲು ಹಿಂದಿ ಇನ್‌ಸ್ಟಾಲ್ ಮಾಡಿ ನಂತರ ಇಂಗ್ಲಿಶ್ ಇನ್‌ಸ್ಟಾಲ್ ಮಾಡಿ ಕೊನೆಗೆ ಕನ್ನಡದ LIP ಹಾಕಿಕೊಳ್ಳಬೇಕು.

      ಒಂದಿಷ್ಟು ತಲೆಹರಟೆ: ವರ್ಡ್‌ ೨೦೧೦ರಲ್ಲಿರುವ ಕನ್ನಡದ ಸ್ಪೆಲ್‌ಚೆಕ್ “ಹತ್ವಾರ‍್” ಎಂಬುದನ್ನು ತಪ್ಪು ಎಂದು ನಮೂದಿಸಿ ಅದಕ್ಕೆ ಪರ್ಯಾಯವಾಗಿ ತೋರಿಸುವ ಪದಗಳು – ಹತ್ಯಾರ, ತತ್ವಾರ, ಹತ್ತಾರು, ತಲವಾರ‍್ 🙂

  8. ಆಜಯ

    ಪ್ರಿಯ ಜೋಗಿ,

    ನೀವು ಲೇಖನ ಬರೆಯುವ ಬಗ್ಗೆ ಹೇಳಿದ್ದರಿಂದ ಆ ಅಗತ್ಯಕ್ಕೆ ಸಾಕಾಗುವಷ್ಟು ಇದೆ ಎಂದು ಹೇಳಿದ್ದು ಅಷ್ಟೆ. ಪ್ರತಿಯೊಬ್ಬರ ಅಗತ್ಯ ಬೇರೆ ಬೇರೆ ಇರುತ್ತದೆ ನಿಜ.

    ಬಳಕೆ ಜಾಸ್ತಿಯಾದಾಗ ಎಲ್ಲ ಅನುಕೂಲಗಳಿರುವ ಸಾಫ್ಟ್ ವೇರುಗಳೂ ಬರುತ್ತವೆ. ಸದ್ಯಕ್ಕೆ ಕಂಪ್ಯೂಟರ್ ನಲ್ಲಿ ಕನ್ನಡ ಬಳಸುತ್ತಿರುವವರ ಸಂಖ್ಯೆ ತೀರಾ ಕಡಿಮೆ ಇದೆ. ಆದ್ದರಿಂದ ಯಾವುದೆ ಕಂಪನಿಗಳು ದುಡ್ಡು ಸುರಿದು ನೀವು ಕೇಳುತ್ತಿರುವಂತೆ ಎಲ್ಲಾ ಅನುಕೂಲಗಳಿರುವ ಕನ್ನಡಕ್ಕೆಂದೇ ನಿರ್ದಿಷ್ಟವಾಗಿ ಸಾಫ್ಟ್ ವೇರ್ ಟೂಲ್ ಗಳನ್ನು ತಯಾರು ಮಾಡಲು ಹೋಗುತ್ತಿಲ್ಲ. ಅದು ಕರ್ನಾಟಕ ಸರ್ಕಾರದಿಂದ ಆಗಬೇಕು. ಇಲ್ಲಾ ಖಾಸಗಿ ಕಂಪನಿಗಳು ಮಾಡಬೇಕು ಅಂತಾದರೆ ಬಳಕೆ ಜಾಸ್ತಿ ಆಗಬೇಕು, ಅದಕ್ಕೆ ಮಾಧ್ಯಮ ಕ್ಷೇತ್ರದಲ್ಲಿರುವವರು ಅದರ ಬಗ್ಗೆ , ಕಂಪ್ಯೂಟರ್ / ಫೋನ್ ನಲ್ಲಿ ಪ್ರತಿಯೊಂದರಲ್ಲೂ ಕನ್ನಡ ಬಳಕೆ ಬಗ್ಗೆ, ಕನ್ನಡವನ್ನು ಕೇಳಿ ಪಡೆಯುವ ಬಗ್ಗೆ ಜನರಿಗೆ ಪ್ರಚಾರ/ತಿಳುವಳಿಕೆ ಕೊಡಬೇಕು ಹಾಗೂ ಇಂತದ್ದು ಬೇಕು ಎಂದು ಒತ್ತಾಯ ಮಾಡಬೇಕು ಮತ್ತು ಅಗತ್ಯಗಳನ್ನು ತಿಳಿಸಿಕೊಡಬೇಕು. ಆಗ ನೀವು ಕೇಳುತ್ತಿರುವುದು ಕ್ರಮೇಣ ಬರುತ್ತದೆ. ಎಲ್ಲರೂ ಇಲ್ಲ ಇಲ್ಲ ಎಂದರೆ ಮಾಡೋರ್ಯಾರು !

  9. ಆಜಯ

    ಅಷ್ಟೆಲ್ಲಾ ಅಸಮಾಧಾನವಿದ್ದರೆ ಸುಲಭದ ಪರಿಹಾರವೆಂದರೆ ಇಂಗ್ಲೀಷಿನಲ್ಲೇ ಲೇಖನ ಬರೆದು ಮನಸ್ಸಿಗೆ ಹಿತವಾಗುವಂತೆ ವಿನ್ಯಾಸ ಮಾಡಿಕೊಳ್ಳಬಹುದು :).

  10. jogi

    @ Ajay
    🙂

  11. ಪವನಜ

    ಜೋಗಿಯವರೇ,

    ನನ್ನ ಪ್ರಶ್ನೆಗಳಿಗೆ ನೀವು ಉತ್ತರಿಸಿಲ್ಲ. ವರ್ಷಗಳ ನಂತರ ತಂತ್ರಾಂಶ ತಯಾರಾದಾಗ ಇದರಲ್ಲಿ ಅದಿಲ್ಲ, ಇದಿಲ್ಲ ಎಂದರೆ ಚೆನ್ನಾಗಿರುವುದಿಲ್ಲ.

  12. jogi

    ನಿಮಗೊಂದು ವಿವರವಾದ ಪತ್ರ ಬರೆಯುತ್ತಿದ್ದೇನೆ. ಸದ್ಯದಲ್ಲಿ ಅದು ನಿಮ್ಮ ಇನ್ ಬಾಕ್ಸ್ ಸೇರಲಿದೆ.

  13. ಅಜಯ

    @Pavanaja,

    ನಮಸ್ತೆ, ನೀವು ಕರ್ನಾಟಕ ಸರಕಾರದ ತಂತ್ರಾಂಶ ಸಲಹಾಸಮಿತಿ ಸದಸ್ಯರೆಂದು ತಿಳಿದು ಸಂತೋಷವಾಯಿತು.
    ನೀವು ತಂತ್ರಾಂಶದಲ್ಲಿ ಬೇಕಾದ ಸೌಲಭ್ಯ/ಅಗತ್ಯತೆಗಳ ಬಗ್ಗೆ ಬಳಕೆದಾರರ ಅಭಿಪ್ರಾಯವನ್ನು ಆಹ್ವಾನಿಸಬಹುದಲ್ಲ. ಇದು ತಂತ್ರಾಂಶ ತಯಾರಿಕೆಗೆ ಸಹಾಯವಾಗಬಹುದು . ಹೆಚ್ಚು userfriendly ಆಗಬಹುದು.

  14. Abhaya Simha

    @ Pavanaja,

    MACನಲ್ಲಿ ಕನ್ನಡ ಪ್ರಯೋಗಕ್ಕೆ ಅಗತ್ಯವಾದ ಅನುಕೂಲಗಳು ಆಗಬೇಕು. ಜೋಗಿಯವರು ಆಗಲೇ ಅದನ್ನೂ ಉಲ್ಲೇಖಿಸಿದ್ದಾರೆ. ಸಿನೆಮಾ / ಸಾಕ್ಷ್ಯ ಚಿತ್ರಗಳನ್ನು ಸಂಕಲಿಸಲು ಇಂದು ಮ್ಯಾಕ್ ಬಹಳ ಉಪಯೋಗಕ್ಕೆ ಬರುತ್ತಿದೆ. ಮತ್ತೆ ನನಗೆ ಗೊತ್ತಿರುವಂತೆ ಅನೇಕರು ಮ್ಯಾಕಿನಲ್ಲಿ ಕನ್ನಡ ಬರೆಯಲು ತಿಣುಕುವ ನನ್ನಂಥವರೂ ಇದ್ದೇವೆ. ಹೀಗಾಗಿ ಸರಕಾರದ ಕಡೆಯಿಂದ ಬರುವ ಕನ್ನಡ ಸಾಫ್ಟ್ವೇರಿಗೆ ಸೇಬು ಗಣಕದ ಬಗ್ಗೆ ಕೊಂಚ ಗಮನ ಇರಲಿ ಸರ್…

    • ಪವನಜ

      @ಅಜಯ – ಹೌದು. ಸರಕಾರ ಎಲ್ಲರಿಂದ ಸಲಹೆ ಕೇಳಬೇಕು. ಅದಕ್ಕಾಗಿ ಒಂದು ಜಾಲತಾಣ ಮಾಡಬೇಕು. ಆದರೆ ಯಾರು ಮಾಡುವವರು? ನಾವು ವರದಿ ನೀಡಿ ತಿಂಗಳುಗಳೇ ಕಳೆದಿವೆ. ಅದನ್ನು ಕಾರ್ಯರೂಪಕ್ಕೆ ತರುವುದು ಬಿಟ್ಟು ಅದನ್ನು ಅಧ್ಯಯನ ಮಾಡಲು ಇನ್ನೊಂದು ಸಮಿತಿಗೆ ಕಳುಹಿಸಲಾಗಿದೆ. ಆ ಸಮಿತಿಯಲ್ಲಿ ತಂತ್ರಾಂಶ ಪರಿಣತರು ಯಾರಿದ್ದಾರೆ ಎಂದು ಗೊತ್ತಿಲ್ಲ. ಸದ್ಯದಲ್ಲೇ ನಮ್ಮ ವರದಿಯನ್ನು ನನ್ನದೇ ಜಾಲತಾಣದಲ್ಲಿ ಪ್ರಕಟಿಸುತ್ತೇನೆ. ಅದರ ಕೆಳಗೆ ನಿಮ್ಮ ಅಭಿಪ್ರಾಯ ಸಲಹೆ ದಾಖಲಿಸಬಹುದು.

      @Abhaya Simha – ಹೌದು. ಕೇವಲ ಮ್ಯಾಕ್ ಮಾತ್ರವಲ್ಲ, ಮೊಬೈಲ್ ಫೋನ್, ಐಪ್ಯಾಟ್, ಟ್ಯಾಬ್ಲೆಟ್, ಆಂಡ್ರೋಯಿಡ್ -ಇತ್ಯಾದಿಗಳಿಗೂ ಕನ್ನಡವನ್ನು ಸರಿಯಾಗಿ ತೋರಿಸಲು ಮತ್ತು ಬೆರಳಚ್ಚು ಮಾಡಲು (ಅಷ್ಟು ಮಾತ್ರವಲ್ಲ full Kannada support including sorting) ಸವಲತ್ತುಗಳು ಬೇಕಾಗಿವೆ. ಇವೆಲ್ಲ ನಮ್ಮ ವರದಿಯಲ್ಲಿವೆ.

  15. Veerendra

    @ Pavanaja,

    Sir, which is the best available and cost effective (preferably free) software for beginners to write some thing in Kannada? What are basic system requirements?

  16. shama, nandibetta

    ಬ್ರಹ್ಮ ಎಲ್ಲರ ಹಣೆಯಲ್ಲೂ ಬರೀತಾನೆ ಅಂತಾರೆ. ಕೆಲವರ ಹಣೆಬರಹ ಓದಲಾಗದೆ ಕೆಟ್ಟ ಅಕ್ಷರಗಳಲ್ಲಿರುತ್ತವೆ ಎಂಬುದನ್ನು ಮಾತ್ರ ಅಲ್ಲಗೆಳೆಯುವಂತಿಲ್ಲ. – true…

  17. nempedevaraj

    computer tegedukonde.internet hakiside. eenadaruu bareyuva,bareddannu bere yarigadaruu kalisabeekendukondare ondu sariyadare mattondu sariyaguvudilla.nanu kannadadalli bredadu englishge tarjumeyagabeku. tipe madidannu8 kannadada patrikegaliguu kaluhisalu sadyavilladntaha paristiti. yakappa computer ii gramantara pradeshadalli tegedukondu loss madikondenlla emba bhavane.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading