ಪ್ರಕೃತಿ ಚಿಕಿತ್ಸೆಗೆ ಬಂದಿದ್ದೇನೆ. ಏಳು ದಿನದಲ್ಲಿ ಐದು ಕೇಜಿ ಇಳಿಸಿಕೊಂಡಿದ್ದೇನೆ. ಸಣ್ಣಗೆ ಮಳೆ ಬೇರೆ ಬರುತ್ತಿದೆ. ಒಳ್ಳೇ ವಾತಾವರಣ. ಇವತ್ತೇ ಹೊರಟುಬಿಡು ಅಂತ ಉಪ್ಪಿನಂಗಡಿಯ ಗೆಳೆಯ ಮಹೇಂದ್ರವರ್ಮ ಫೋನ್ ಮಾಡುವ ಹೊತ್ತಿಗೆ ನಾನು ಬಾಳೆಕಾಯಿ ಚಿಪ್ಸು ತಿನ್ನುತ್ತಾ ಕೂತಿದ್ದೆ. ಇಂಗು, ಕರಿಮೆಣಸು ಹಾಕಿ ಬಂಗಾರದ ಬಣ್ಣ ಬರುವಂತೆ ಕರಿದ ರುಚಿಯಾದ ಚಿಪ್ಸು. ಮಹೇಂದ್ರ ಫೋನು ಮಾಡಿ ಅದರ ರುಚಿಕೆಡಿಸಿದ.
ತೂಕ ಇಳಿಸುವುದೂ ಒಂದು ಕಲೆ ಅನ್ನುತ್ತಿದ್ದರು ವೈಯನ್ಕೆ. ಕಳೆದ ಮೂವತ್ತು ವರ್ಷಗಳಿಂದ ನನ್ನ ಕೂತ ಕಿಂಚಿತ್ತೂ ಬದಲಾಗಿಲ್ಲ ಅನ್ನುತ್ತಿದ್ದ ಅವರ ಆಹಾರ ಪದ್ಧತಿಯೂ ಹಾಗೇ ಇತ್ತು. ಬೆಳಗ್ಗೆ ಒಂದು ಇಡ್ಲಿ, ಮಧ್ಯಾಹ್ನ ಮೂರು ಗೋಡಂಬಿ, ನಾಲ್ಕು ಬಾದಾಮಿ, ಹತ್ತಾರು ಒಣದ್ರಾಕ್ಷಿ, ಜೊತೆಗೊಂದು ಲೋಟ ಕಾಂಪ್ಲಾನು, ಏಳು ಗಂಟೆಗೆ ಸರಿಯಾಗಿ ಮೂರು ಪೆಗ್ಗು ವಿಸ್ಕಿ, ವಿಸ್ಕಿಯ ಜೊತೆಗೆ ಎರಡು ಸಿಗರೇಟು, ಅದಾದ ಮೇಲೆ ಪುಷ್ಕಳ ಊಟ. ಹತ್ತು ಗಂಟೆಯಿಂದ ಏಳು ಗಂಟೆಯ ತನಕ ಗಾಢನಿದ್ರೆ. ಸಂಜೆ ಎರಡು ಮೈಲಿ ಗುಡುಗುಡು ನಡಿಗೆ.
ತೂಕ ಇಳಿಸಿಕೊಳ್ಳುವುದು ಸುಲಭ, ತೂಕ ಇಳಿಸಿಕೊಳ್ಳಿ ಅಂತ ಹೇಳಿಸಿಕೊಳ್ಳುವುದು ಕಷ್ಚ. ಕಳೆದ ಐದಾರು ತಿಂಗಳಿನಿಂದ ನನ್ನ ಜೊತೆಗೆ ಮಾತಾಡುವವರ ಸಂಭಾಷಣೆ ಆರಂಭವಾಗುವುದು ಅಥವಾ ಅಂತ್ಯವಾಗುವುದು – ಒಂಚೂರು ಸಣ್ಣಗಾಗಿ ಎಂಬ ಸಲಹೆಯಿಂದಲೇ. ಅದನ್ನು ಸಲಹೆ ಅಂತ ತಳ್ಳಿಹಾಕುವಂತಿಲ್ಲ, ಅದು ಹಿತಚಿಂತನೆಯೂ ಹೌದು.
ಇಲ್ಲಾರಿ ಸಣ್ಣಗಾಗೋದು ಸಾಧ್ಯವೇ ಇಲ್ಲ ಎನ್ನುವ ಹಾಗೂ ಇಲ್ಲ. ನಮ್ಮಂಥವರ ಗ್ರಹಚಾರ ಎಷ್ಟು ಕೆಟ್ಟಿದೆ ಎಂದರೆ ಅದ್ನಾನ್ ಸ್ವಾಮಿ ನೂರು ಕೇಜಿ ಇಳಿಸಿಕೊಂಡದ್ದು, ವಿನಾಯಕ ಜೋಷಿ ನಲವತ್ತು ಕೇಜಿ ಕಡಿಮೆಯಾದದ್ದು, ರವಿ ಬೆಳಗೆರೆ ಹತ್ತು ವರ್ಷ ಸಣ್ಣವರಾದದ್ದನ್ನೆಲ್ಲ ಉದಾಹರಿಸಿ, ಮನಸ್ಸು ಮಾಡಿದರೆ ನಿಮಗದು ಯಾವ ಕಷ್ಟ ಅಂದು, ನಮ್ಮ ಮನಸ್ಸಿಗೇ ಲಗ್ಗೆ ಹಾಕುತ್ತಾರೆ. ಮನಸ್ಸು ಮಾಡಿದರೆ ಅನ್ನುವ ಮಾತಿನ ಅರ್ಥ ಇಷ್ಟೇ; ನಿಮಗೆ ನಾಲಗೆ ಮೇಲೆ ಹತೋಟಿ ಇಲ್ಲ, ಚಪಲ ಜಾಸ್ತಿ, ನೀವು ಉದ್ಧಾರ ಆಗೋಲ್ಲ.
ಇತ್ತೀಚೆಗೆ ಏನೇ ತೊಂದರೆಯಾದರೂ ಡಾಕ್ಟರಿಗೆ ಫೋನು ಮಾಡುವ ಹಾಗೇ ಇಲ್ಲ. ಅವರು ಮೊದಲು ಕೇಳುವ ಪ್ರಶ್ನೆ ತೂಕ ಇಳಿಸಿಕೊಂಡಿದ್ದೀರಾ.. ನಂತರ ಕೊಡುವ ಸಲಹೆ ನೀವು ಏನಿಲ್ಲ ಅಂದ್ರೂ ಮೂವತ್ತು ಕೇಜಿ ಇಳಿಸಬೇಕು. ಅವರ ಪ್ರಕಾರ ಅದು ತುಂಬ ಸರಳ. ದಿನಕ್ಕೆ ಒಂದೂವರೆ ಗಂಟೆ ನಡಿಗೆ. ಒಂದು ಹೊತ್ತು ಉಪವಾಸ, ಎಣ್ಣೆ ತಿಂಡಿಗಳಿಂದ ದೂರ ಇರುವುದು ಮತ್ತು ದುರಭ್ಯಾಸಗಳಿಂದ ದೂರ ಇರುವುದು.
ದಪ್ಪ ಇದ್ದರೆ ಫ್ಯಾಟೆಂಬರು, ತೆಳ್ಳಗಿದ್ದರೆ ಥಿನ್ನೆಂಬರು- ನಡುವೆ ಸುಳಿವಾತ್ಮ ಫ್ಯಾಟೂ ಅಲ್ಲ ಥಿನ್ನೂ ಅಲ್ಲ ಎಂದು ನಂಬಿಕೊಂಡಿರುವ ನಮ್ಮಂಥವರಿಗೆ ಚಿಪ್ಸು ರುಚಿಸುವಷ್ಟು ಸಣ್ಣಗಾಗುವ ಟಿಪ್ಸು ರುಚಿಸುವುದಿಲ್ಲ. ದೇಹವೊಂದು ದೇವಾಲಯ ಅಂತ ಒಮ್ಮೆ ಯೋಗಿಯೊಬ್ಬರು ಹೇಳಿದ್ದರು. ನಾವು ನಾಸ್ತಿಕರು ಅಂತ ಹೇಳಿ ಸುಮ್ಮನಾಗಿದ್ದೆ.
ಡುಮ್ಮಣ್ಣಗಳ ಬಗ್ಗೆ ಎಷ್ಟೆಲ್ಲ ಅಪಪ್ರಚಾರ ನಡೆದಿದೆ, ಎಷ್ಟೆಲ್ಲ ತಮಾಷೆ ಪ್ರಸಂಗಗಳಿವೆ ಎಂದು ನೋಡಿದರೆ ಅದೊಂದು ವ್ಯವಸ್ಥಿತ ಪಿತೂರಿ ಅನ್ನಿಸುತ್ತದೆ. ದಪ್ಪಗಿದ್ದವರು ಬೇಗ ಸಾಯುತ್ತಾರೆ ಅನ್ನುವುದರಿಂದ ಹಿಡಿದು, ಅವರಿಗೆ ಅನೇಕಾನೇಕ ಕಾಯಿಲೆಗಳು ಬರುತ್ತವೆ ಎನ್ನುವ ತನಕ, ಡುಮ್ಮಣ್ಣಗಳಿಗೆ ಬುದ್ಧಿವಂತಿಕೆ ಕಡಿಮೆ ಎನ್ನುವುದರಿಂದ ಅವರು ಅತ್ಯಂತ ಕುರೂಪಿಗಳು ಅನ್ನುವ ತನಕ ಅನೇಕ ಮೂಢನಂಬಿಕೆಗಳು ಹಬ್ಬಿಕೊಂಡಿವೆ. ನಾನು ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಹೋಗಿದ್ದಾಗ ಅಲ್ಲಿಗೊಬ್ಬ ನರಪೇತಲ ಬಂದಿದ್ದ. ಅವನು ಯಾಕೆ ಬಂದಿದ್ದಾನೆ ಎಂದು ವಿಚಾರಿಸಿದಾಗ ಅವನು ಹೇಳಿದ್ದಿಷ್ಟು- ನಾನು ತುಂಬ ತೆಳ್ಳಗಿದ್ದೇನೆ, ದಪ್ಪ ಆಗುವುದು ನನ್ನ ಉದ್ದೇಶ. ದಪ್ಪ ಆಗದೇ ಹೋದರೆ ನನಗೆ ಹೆಣ್ಣು ಸಿಗುವುದಿಲ್ಲ. ನಾವೆಲ್ಲ ದಿನಗಟ್ಟಲೆ ಉಪವಾಸ ಬಿದ್ದು ಅರ್ಧ ಕೇಜಿಯೋ ಮುಕ್ಕಾಲು ಕೇಜಿಯೋ ಕಮ್ಮಿ ಆಗಿರಬೇಕು ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದರೆ, ಅವನು ಇವತ್ತು ಇನ್ನೂರುಗ್ರಾಮು ಜಾಸ್ತಿ ಆಗಿದ್ದೀನಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ.
ನೈನಂ ಛಿದಂತಿ ಶಸ್ತ್ರಾಣಿ, ನೈನಂ ದಹತಿ ಪಾವಕ- ಶಸ್ತ್ರಗಳು ಬೇದಿಸಲಾರವು, ಬೆಂಕಿ ಸುಡಲಾರದು ಅಂತ ಭಗವದ್ಗೀತೆಯಲ್ಲಿ ಆತ್ಮದ ಬಗ್ಗೆ ಹೇಳಿದ್ದಾರೋ ದೇಹದ ಬಗ್ಗೆಯೋ ಎಂದು ಅನುಮಾನ. ಫ್ಯಾಟ್ ಬರ್ನ್ ಮಾಡಿ ಎಂದು ಡಾಕ್ಚರುಗಳು ಸಲಹೆ ಕೊಟ್ಟು ಮನೆಗೆ ಹೋಗಿ ರುಚಿಯಾದ ಊಟ ಮಾಡುತ್ತಾರೆ. ನಾವು ಒಣಚಪಾತಿ ಮತ್ತು ಲಿಂಬೆರಸ ಕುಡಿಯುತ್ತಾ ಕಾನ್ಸಂಟ್ರೇಷನ್ ಕ್ಯಾಂಪಿನ ಕೈದಿಗಳಂತೆ ಕಾಲ ಕಳೆಯುತ್ತೇವೆ.
ದಪ್ಪದವರ ಅತಿದೊಡ್ಡ ಸಮಸ್ಯೆಯೊಂದಿದೆ. ಒಂದು ವರ್ಷ ಎಲ್ಲಾ ಬಿಟ್ಟು ಬಿಡೋಣ, ಆಮೇಲೆ ತಿನ್ನಬಹುದು ಎಂದು ಸುಮ್ಮನಿರುವ ಹಾಗಿಲ್ಲ. ಇದೊಂದು ರೀತಿಯ ಜೀವಾವಧಿ ಶಿಕ್ಷೆ. ತಿಂದ ತಕ್ಷಣ ಮತ್ತೆ ಊದಿಕೊಳ್ಳಲು ಶುರುವಾಗುತ್ತೇವೆ. ಮತ್ತದೇ ಮಾತು ಶುರುವಾಗುತ್ತದೆ. ನಾವು ಉಬ್ಬಿದಂತೆ ನೋಡಿದವರ ಹುಬ್ಬೇರುತ್ತದೆ. ಮತ್ತೆ ದಪ್ಪ ಆಗಿದ್ದೀರಿ ಎಂದು ಮಾತು ಶುರು ಮಾಡುತ್ತಾರೆ.
ಇತ್ತೀಚೆಗಂತೂ ಹೇಗಿದ್ದೀರಿ, ನಿಮ್ಮೂರ ಕಡೆ ಮಳೆ ಹೇಗಿದೆ ಎಂದು ಕೇಳಿದಷ್ಟೇ ಸಲೀಸಾಗಿ ದೇಹದ ಗಾತ್ರದ ಬಗ್ಗೆ ಮಾತು ಶುರುವಾಗುತ್ತದೆ. ಏನ್ಸಾರ್ ದಪ್ಪ ಆಗಿಬಿಟ್ಟಿದ್ದೀರಿ ಅಂತಲೂ ಏನ್ಸಾರ್ ತೆಳ್ಳಗಾಗಿದ್ದೀರಿ ಅಂತಲೂ ಮಾತು ಆರಂಭಿಸುವ ಗಜಪತಿಗಳಿದ್ದಾರೆ. ಸಣ್ಣಗಾದ ಮೇಲಾದರೂ ಈ ಕಾಟ ತಪ್ಪೀತೆಂದು ಭಾವಿಸಬೇಡಿ. ನೀವು ಹೇಗೆ ಸಣ್ಣಗಾದಿರಿ ಅನ್ನುವುದನ್ನು ಅವರಿಗೆ ವಿವರಿಸಬೇಕಾಗುತ್ತದೆ. ಅದನ್ನು ಅವರು ಮತ್ಯಾರ ಮೇಲೋ ಪ್ರಯೋಗಿಸುತ್ತಾರೆ. ದಪ್ಪಗಿದ್ದು ಸಣ್ಣಗಾದವರು ಸುಂದರರಾಗುವುದಿಲ್ಲ, ಒಂದೊಳ್ಳೇ ಉದಾಹರಣೆ ಆಗುತ್ತೀರಿ ಅಷ್ಟೇ. ನಿಮಗೆ ಗೊತ್ತಲ್ಲ, ಅವರು ಮೊದಲು ತುಂಬ ದಪ್ಪಗಿದ್ದರು. ಈಗ ಸಣ್ಣಗಾಗಿದ್ದಾರೆ ಎಂದು ನಿಮ್ಮತ್ತ ಕೈ ತೋರಿಸಿ ಮಾತಾಡುತ್ತಾರೆ. ಮೊದಲು ಫಟಿಂಗ ಆಗಿದ್ದ, ಈಗ ಒಳ್ಳೆಯವನಾಗಿದ್ದಾನೆ ಎಂದಷ್ಟೇ ಸಹಜವಾಗಿ.
ನಿಜಕ್ಕೂ ನಿಮ್ಮ ತೂಕದ ಬಗ್ಗೆ ಗಾಬರಿ ಆಗಬೇಕಾದವರು ನಿಮ್ಮ ಹೆಂಡತಿ ಮಕ್ಕಳು; ಬದುಕಿರುವಾಗ ಮತ್ತು ಸತ್ತ ನಂತರ ನಿಮ್ಮ ಭಾರ ಹೊರಬೇಕಾದವರು ಅವರೇ. ಬೇರೆಯವರದು ಬರೀ ಉಭಯ ಕುಶಲೋಪರಿ ಅಷ್ಟೇ. ಅವರಿಗೆ ನಿಮ್ಮ ತೂಕದಿಂದ ಯಾವುದೇ ಲಾಭವಾಗಲೀ, ನಷ್ಟವಾಗಲೀ ಇಲ್ಲ.
ತೂಕದ ವ್ಯಕ್ತಿಗಳ ಬಗ್ಗೆ ಒಂದು ರಾಶಿ ತಮಾಷೆ ಕತೆಗಳಿವೆ. ಚರ್ಚಿಲ್ ಒಮ್ಮೆ ಸಿಕ್ಕಾಪಟ್ಟೆ ಕುಡಿದ ಸ್ಥಿತಿಯಲ್ಲಿದ್ದಾಗ ಅವರನ್ನು ರೇಗಿಸಿದಾಕೆಗೆ ಚರ್ಚಿಲ್ ಕೊಟ್ಟ ಉತ್ತರ ಕೇಳಿ- ‘You are drunk Sir Winston, you are disgustingly drunk. ‘Yes, Mrs. Braddock, I am drunk. But you, Mrs. Braddock are ugly, and disgustingly fat. But, tomorrow morning, I, Winston Churchill will be sober.
ಡುಮ್ಮಣ್ಣ ಕುಡುಕನಿಗಿಂತ ಕಡೆ ಅನ್ನುವ ಈ ಆರೋಪವನ್ನು ಹೇಗಾದರೂ ಸಹಿಸಿಕೊಳ್ಳಬಹುದು. ಒಬ್ಬ ವೈದ್ಯ ದಪ್ಪಗಿರುವವರಿಗೆ ಕೊಡುವ ಸಲಹೆ ಇದು- ನೀವು ಏನಾದರೂ ತಿನ್ನಿ, ಎಷ್ಟಾದರೂ ತಿನ್ನಿ. ಆದರೆ ಬೆತ್ತಲೆ ಇರುವ ಡುಮ್ಮಣ್ಣಗಳ ನಡುವೆ ಕುಳಿತುಕೊಂಡು ತಿನ್ನಬೇಕು ಅಷ್ಟೇ. ಇದಕ್ಕಿಂತ ಒಳ್ಳೆಯ ಡಯಟ್ ಮತ್ತೊಂದು ಸಿಗಲಾರದು.
ನಾನು ಮೊದಲ ಸಲ ಧರ್ಮಸ್ಥಳದಲ್ಲಿರುವ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಹೋದಾಗ ಒಬ್ಬ ಬಂದು ವಿಶಾಲವಾದ ಬಾತ್ ಟಬ್ಬಿನಲ್ಲಿ ನನ್ನನ್ನು ಮಲಗಲು ಹೇಳಿದ. ನಾನು ಮಲಗುತ್ತಿದ್ದಂತೆ ಆ ಟಬ್ಬಿಗೆ ಅಳವಡಿಸಲಾಗಿದ್ದ ಯಂತ್ರದ ಸ್ವಿಚ್ ಆನ್ ಮಾಡಿದ. ಕ್ರಮೇಣ ನೀರು ಬಿಸಿಯಾಗತೊಡಗಿತು. ಬಾಯ್ಲರಿನಲ್ಲಿ ಕುಳಿತುಕೊಂಡ ಅನುಭವವಾಗಿ, ಅವನು ಬಂದು ಸ್ವಿಚ್ ಆರಿಸುವುದನ್ನು ಮರೆತರೆ, ನೀರು ಬಿಸಿಯಾಗಿ ಕುದಿಯತೊಡಗಿದರೆ ಎಂದೆಲ್ಲ ಗಾಬರಿಯಾಗಿ ಎರಡು ಕೇಜಿ ಇಳಿದುಹೋಗಿದ್ದೆ.
ಎರಡನೆಯ ಸಲ ಹೋದಾಗ ನನ್ನನ್ನು ನೋಡುವುದಕ್ಕೆ ಬಂದ ವೈದ್ಯರು ನಾನೂ ಕತೆಗಾರ ಎಂಬುದನ್ನು ಹೇಗೋ ಪತ್ತೆ ಮಾಡಿ, ಇದೇ ರೂಮಲ್ಲಿ ಕುವೆಂಪು ಅವರ ಮಗ ಪೂರ್ಣಚಂದ್ರ ತೇಜಸ್ವಿಯವರು ಇದ್ದರು. ಏಳು ಕಿಲೋ ಇಳಿಸಿಕೊಂಡು ಹೋದರು ಎಂದು ಅಲ್ಲಿಗೆ ಬಂದಿದ್ದ ಸಾಹಿತಿಗಳ ಪಟ್ಟಿ ಕೊಟ್ಟರು. ಆ ಪಟ್ಟಿಯಲ್ಲಿ ನನ್ನ ಅನೇಕ ಗೆಳೆಯರೂ ಇದ್ದರು. ಅಲ್ಲಿ ಉಪವಾಸವಿದ್ದ ಒಂದು ರಾತ್ರಿ ಇಡೀ ಜಗತ್ತಿನ ಬಗ್ಗೆ ನಿರಾಸಕ್ತಿ ಹುಟ್ಟಿ, ದೇಹವಿಲ್ಲದ ಮನ್ಮಥ ಅತ್ಯಂತ ಸುಂದರ ಎಂದು ಕವಿಗಳು ಕರೆದದ್ದು ನೆನಪಾಗಿ, ಕಷ್ಟಪಟ್ಟು ಸಣ್ಣಗಾಗುವುದು ಅತ್ಯಂತ ಅಸಹಜ ಮತ್ತು ಅನೈಸರ್ಗಿಕ ವಿಧಾನ ಎಂಬ ತೀರ್ಮಾನಕ್ಕೆ ಬಂದು ರೂಮಿಂದ ಹೊರಗೆ ಬಂದೆ. ನನ್ನ ಜೊತೆಗೇ ಬಂದಿದ್ದ ಗೆಳೆಯರನ್ನೂ ಕರೆದುಕೊಂಡು ಅಲ್ಲೇ ಕಾಡಿನಲ್ಲಿದ್ದ ಮಾವಿನ ಮರದಿಂದ ಹುಳಿ ಮಾವಿನಕಾಯಿಯನ್ನು ಹೊಡೆದು ಬೀಳಿಸಿ, ಉಪ್ಪು ಬೆರೆಸಿ ತಿಂದು ನಾವಿನ್ನೂ ಬದುಕಿದ್ದೇವೆ, ಬಾಯಿ ರುಚಿ ಕಳಕೊಂಡಿಲ್ಲ ಎಂದು ಸಮಾಧಾನಪಟ್ಟುಕೊಂಡಿದ್ದೆವು.
ಚಂದ್ರ ನೋಡಿ, ಹದಿನೈದು ದಿನಕ್ಕೊಮ್ಮೆ ಥಿನ್ನೂ ರೌಂಡೂ ಆಗುತ್ತಾ ಆಕಾಶದಲ್ಲಿ ಲಗಾಟಿ ಹೊಡೆಯುತ್ತಿದ್ದಾನೆ. ಬರೀ ಸಸ್ಯಹಾರ ಮೆದ್ದರೂ, ನಾಲ್ಕು ಕಾಲಲ್ಲಿ ವಾಕಿಂಗ್ ಮಾಡಿದರೂ ಸಣ್ಣಗಾಗದ ಆನೆಯನ್ನು ನೆನೆದು ಸುಮ್ಮನಾಗುತ್ತೇನೆ.
ನಾನಂತೂ ಸದ್ಯಕ್ಕೆ ಸಣ್ಣಗಾಗುವ ಮಾತೇ ಇಲ್ಲ. ರವಿ ಬೆಳಗೆರೆ ತೀರ ತೆಳ್ಳಗಾಗಿ ವಾರ್ಡ್-ರೋಬ್ ಬದಲಾಯಿಸಿ, ದಪ್ಪಗಿದ್ದಾಗ ಹಾಕಲೆಂದು ತಂದಿಟ್ಟುಕೊಂಡಿದ್ದ ಅಸಂಖ್ಯ ಶರ್ಟುಗಳನ್ನು ಮುಂದಿಟ್ಟು, ಇದು ನಿನ್ನ ಸೈಜಿಗೆ ಸರಿಯಾಗಿದೆ ಅಂದರು. ಗೆಳೆಯರು ಕೊಟ್ಟ ಕಾಣಿಕೆಯನ್ನು ಬಳಸದೇ ಇರುವಂತಿಲ್ಲ. ಆ ಶರ್ಟುಗಳನ್ನು ಕನಿಷ್ಠ ಎರಡು ವರ್ಷ ಹಾಕಿ ಮೆರೆಯಬಹುದು.






like this article
Even I am little bit fat
nice to read such short write ups. its a unique experience to read on screen as i am new to this platform. “bitti salahe galu bekaadashtu barutthave. sanna aagodu esthu kashta antha namagee gottu”. its lightly humorous which enjoyed very much. telangana dalli kannada sigode kashta. this is a nice platform to read kannada articles
ದಪ್ಪಗಿರುವವರ ಸುತ್ತಲಿನ ಚಿಂತೆ-ಚಿಂತನೆಗಳ ಬಗ್ಗೆ ಹಾಸ್ಯಮಯ ಧಾಟಿಯಲ್ಲಿ ಚೆನ್ನಾಗಿಯೇ ವಿವರಿಸಿದ್ದೀರಿ. ದಪ್ಪಗಿರುವವರಿಗೆ ಉಚಿತ ಸಲಹೆ ನೀಡುವ ಸ್ನೇಹಿತರು;ಪರಿಚಿತರಿಗೇನೂ ಕಡಿಮೆಯಿಲ್ಲ. ನಾನೂ ಒಂದು ಸಲಹೆ ನೀಡಿಬಿಡುತ್ತೇನೆ. ಪ್ರತಿದಿನ ಬೆಳಿಗ್ಗೆ ಕಾಫಿ/ಟೀ ಕುಡಿಯುವ ಮತ್ತು ತಿಂಡಿ ತಿನ್ನುವ ಮುನ್ನ ಕರಿಬೇವಿನ ಐದು ಎಲೆಗಳನ್ನು ಜಗಿದು ತಿಂದು ರಸ ನುಂಗಿ, ಒಂದು ಲೋಟ ನೀರು ಕುಡಿಯಿರಿ. ನಿಮಗೆ ಇಷ್ಟವೆನ್ನಿಸಿದರೆ ಕರಿಬೇವಿನ ಎಲೆಗಳ ಸಂಖ್ಯೆ ಹೆಚ್ಚಿಸಬಹುದು. ನಿಮಗೆ ಕಂಫರ್ಟಬಲ್ ತೂಕಕ್ಕೆ ಇಳಿಯುವವರೆಗೂ ಈ ಅಭ್ಯಾಸ ಮುಂದುವರಿಸಿ.
ಕಾಫಿ/ಟೀ ಕುಡಿಯುವ ಅಭ್ಯಾಸವಿದ್ದರೆ ಹಾಲು-ಸಕ್ಕರೆ ಬೆರೆಸದೇ ಕುಡಿಯಿರಿ. ನಮ್ಮ ಎನರ್ಜಿಯ ಬಹುಭಾಗ ಹಾಲು-ಸಕ್ಕರೆ ಅರಗಿಸಿಕೊಳ್ಳುವುದಕ್ಕೆ ವ್ಯರ್ಥವಾಗುತ್ತದೆ. ನೀರನ್ನು ತುಸು ತುಸು ವಿರಾಮ ಕೊಡುತ್ತಾ ಸಿಪ್ ಮಾಡಿ. ಇದರಿಂದ ಹೊಟ್ಟೆಯಲ್ಲಿರುವ ಗ್ಯಾಸ್ ರಿಲೀಸ್ ಆಗುತ್ತೆ. ನೀರನ್ನು ಗುಟಕು-ಗುಟುಕಾಗಿ ಚಪ್ಪರಿಸಿ ಕುಡಿಯುವುದರಿಂದ ಆಗುವ ದೈಹಿಕ ಫಿಲಿಂಗ್ಸ್ ನಿಮ್ಮ ಅನುಭವಕ್ಕೆ ಬರುತ್ತದೆ. ಇದು ನನ್ನ ಸ್ವಂತ ಅನುಭವದ ಮಾತು
ಕಹಿ ಬೇವಾದ್ರೆ ಇನ್ನೂ ಒಳ್ಳೇದು 🙂
ಒಳ್ಳೆಯ ಲೇಖನ, ಅಷ್ಟೇ ವಿಚಾರಪೂರ್ಣ ಚಡಪಡಿಕೆ ಮತ್ತು ನಗೆಯನ್ನೂ ತರಿಸಿತ್ತು
ನಾನಂತೂ ದಪ್ಪ ಇಲ್ಲ ಬಿಡಿ ಆದ್ರೆ ಹಾಳಾದ್ದು ನನ್ ಹೊಟ್ಟೆ ಮಾತ್ರ ದಪ್ಪಗಾಗಿ ಒಂದಷ್ಟು ಒಳ್ಳೆ ಪ್ಯಾಂಟ್-ಗಳನ್ನ ಮೂಲೆಗುಂಪು ಮಾಡಿಬಿಟ್ಟಿದೆ
ಇತ್ತೀಚೆಗಷ್ಟೇ ಅದನ್ನ ಕರಗಿಸೋಕೆ ಅಂತ ಸ್ವಿಮ್ಮಿಂಗ್’ಗೆ ಹೋಗೋದಕ್ಕೆ ಶುರು ಮಾಡಿದ್ದೆ, ಗ್ರಹಚಾರ ಸರಿಯಿರ್ಲಿಲ್ಲ ಒಂದಿನ ಪೂಲ್’ಗೆ ಹೋಗೋ ದಾರೀಲಿ ಆಕ್ಸಿಡೆಂಟ್ ಆಗಿ ಕೈ ಮುರ್ಕೊಂಡ್ ಕೂತೆ
Hahahaha “ದಪ್ಪ ಇದ್ದರೆ ಫ್ಯಾಟೆಂಬರು, ತೆಳ್ಳಗಿದ್ದರೆ ಥಿನ್ನೆಂಬರು- ನಡುವೆ ಸುಳಿವಾತ್ಮ ಫ್ಯಾಟೂ ಅಲ್ಲ ಥಿನ್ನೂ ಅಲ್ಲ ಎಂದು ನಂಬಿಕೊಂಡಿರುವ ನಮ್ಮಂಥವರಿಗೆ ಚಿಪ್ಸು ರುಚಿಸುವಷ್ಟು ಸಣ್ಣಗಾಗುವ ಟಿಪ್ಸು ರುಚಿಸುವುದಿಲ್ಲ” Soggasada lekhana Jogiyavre.
🙂 🙂 🙂
ms
hou’dappa’ hou’dappa’ annuva haagide lekhana!!
LOL…. super article…
good one……..
Dear Jogi , Tumba tookada maathannu aadiddiri.Tookada bagge chinthisuvude tooka hechhuvanthe maadutthadanthe.Yochane maadabedi-deshpande
ಭಾರೀ ಲೇಖನ… ಮಲ್ಯ ಮಾತ್ರ ನಾಪತ್ತೆ…!!!
jogi .. sooper aagide baraha ..
oho! eega dharmasthala dinda vapas banda mele taavu bhti aadaga, enu saar! sanna aagideeri! anta maatadabaradu,,adaa ee lekhanada uddesha…. aaytu bidi…
ಲೇಖನ ಚೆನ್ನಾಗಿದೆ:)ನನ್ನೂ ಕೆಲವರು ಕೇಳ್ತಾರೆ ನೀವು ಸಣ್ಣ ಆಗ್ಬೇಕು ಅಂದ್ರೆ ಏನೇನು ಮಾಡ್ಬೇಕು ಗೊತಿದ್ಯ?ಅಂತ.ಅದಕ್ಕೆ ನಾನ್ ಹೇಳ್ತೀನಿ ಇಲ್ಲಾ!ಆದ್ರೆ ಮಾಡ್ತಿರೋದ್ರಲ್ಲಿ ಕೆಲವನ್ನು ಬಿಡ್ಬೇಕು ಅಂತ ಮಾತ್ರ ಗೊತ್ತಿದೆ ಅಂತ ಹೇಳ್ತೀನಿ 🙂
Dappa , sanna is big complex… naanu solpa istapattu, solpa kastapattu 6 Kg ilisiddene.
Jogi,,, guri muttuvavaregu bidabedi…
ನಾನೂ ದಪ್ಪಗಾಗಿರೋದರಿಂದ ಲೇಖನ ಇನ್ನಷ್ಟು ರುಚಿಸಿತು. ಸ್ವಲ್ಪ ಸಣ್ಣಗಾಗಿ ಎನ್ನುವುದನ್ನು ಕೇಳುತ್ತಲೇ ೬೫ ವಷ೯ ಕಳೆದು ಹೋಗಿದೆ. ಏನು ಮಾಡಿದರೂ ಏನೂ ವ್ಯತ್ಯಾಸವಾಗಿಲ್ಲ. ದಪ್ಪಗಿರುವವರಿಗೆ ಸಣ್ಣಗಾಗ ಬೇಕೆನ್ನುವ ಚಿಂತೆ, ಸಣ್ಣಗಿದ್ದವರಿಗೆ ದಪ್ಪವಾಗಬೇಕೆನ್ನುವ ಚಿಂತೆ. ಎರಡೂ ಕಷ್ಟ. ನಾನೂ ಪ್ರಕೃತಿ ಚಿಕಿತ್ಸೆಗೆ ಹೊರಟಿದ್ದೇನೆ. ಸಣ್ಣಗಾಗಲಲ್ಲ. ಕೈಕಾಲು ನೋವಿಗೆ. ಅದಕ್ಕೂ ಡಾಕ್ಟರುಗಳ ಸಲಹೆ ಸಣ್ಣಗಾಗಿ ಎಂದು. ನನಗೆ ಸಣ್ಣಗಾಗಬೇಕೆಂದಿಲ್ಲ. ಆದರೆ ನಾಳೆ ಹೊರುವವರಿಗೆ ಭಾರವಾಗ ಬಾರದು ಅಷ್ಟೇ!?
ಬೀಪಿ ಚೆಕ್ ಮಾಡಿಸಿಕೊಂಡು ತಿಂಗಳುಗಟ್ಟಲೆ ಆಯಿತು ಎಂದು ಬೆಳಗ್ಗೆಯಷ್ಟೇ ನನ್ನ ವೈದ್ಯ-ಮಿತ್ರ ಡಾ||ಸತೀಶ್ ಚಂದ್ರ ಅವರ ಬಳಿ ಹೋಗಿದ್ದೆ, ಒಂದು ನಾಲ್ಕೈದು ಕಿಲೋಗ್ರಾಂ ತೂಕ ಮಾಡಿಕೊಂಡರೆ ಸಾಕು ಯೂ ವುಡ್ ಬೀ ಫಿಟ್ ಅಂದ್ರು. ಜಯನಗರದ ದಾರಿಯಲ್ಲಿ ಬರುವಾಗ ಮೆಚ್ಚಿನ ಅಡಿಗಾಸ್‍ನಲ್ಲಿ ಮಸಾಲೆದೋಸೆ ಅಂದವನು, ಬೇಡ, ಸಿಂಗಲ್ ಇಡ್ಲಿ ಸಾಕು ಎಂದೆ. ತಿಂದು ಒಂದೂ ಕಾಲು ಗಂಟೆಯಾಗಿದೆ ಆಗಲೇ ಹಸಿವೆಯಿಂದ ಒದ್ದಾಡ್ತಿದೀನಿ, ನಿಮ್ಮ ಲೇಖನ ಓದಿದ ಮೇಲೊಂದು ಖುಷಿ, ಹೇಗೂ ನೀವು ಕೊಂಡ ಹೊಸ ಷರಟುಗಳು ಹಾಗೆಯೇ ಉಳಿದಿರತ್ತೆ, ಕೊಂಡು ಕೊಳ್ಳುವ ಪ್ರಮೇಯ ನನಗಿರುವುದಿಲ್ಲ. ಇನ್ನೈದು ನಿಮಿಷದಲ್ಲಿ ಎಸ್.ಎಲ್.ವಿ.ಗೆ ಹೋಗ್ತಿದೀನಿ, ಬಿಸ್ಸಿ ಮಸಾಲೆ ದೋಸೆಯ ಮೇಲೆ ಡಬಲ್ ಬೆಣ್ಣೆ ಹಾಕಿಸಿಕೊಳ್ಳಲು 😉
nice article sir.
ನಿಜಕ್ಕೂ ನಿಮ್ಮ ತೂಕದ ಬಗ್ಗೆ ಗಾಬರಿ ಆಗಬೇಕಾದವರು ನಿಮ್ಮ ಹೆಂಡತಿ ಮಕ್ಕಳು; ಬದುಕಿರುವಾಗ ಮತ್ತು ಸತ್ತ ನಂತರ ನಿಮ್ಮ ಭಾರ ಹೊರಬೇಕಾದವರು ಅವರೇ. ಬೇರೆಯವರದು ಬರೀ ಉಭಯ ಕುಶಲೋಪರಿ ಅಷ್ಟೇ. ಅವರಿಗೆ ನಿಮ್ಮ ತೂಕದಿಂದ ಯಾವುದೇ ಲಾಭವಾಗಲೀ, ನಷ್ಟವಾಗಲೀ ಇಲ್ಲ. aha… en bareetheeri…
ಹೆಲೋ ಸಾರ್, ನಾನು ಮೊದಲನೆಯ ಬಾರಿಗೆ ನಿಮ್ಮ ಲೇಖನವನ್ನು ಓದಿದೆ. ಓದುವುದು ನನಗೆ ಇಷ್ಟವಾದರೂ ನನಗೆ ಅದರಲ್ಲಿ ಆಸಕ್ತಿ ಬರುವುದಿಲ್ಲ. ನಿಮ್ಮ ಆರ್ಟಿಕಲ್ ತುಂಬಾ ಚೆನ್ನಾಗಿದೆ. ನಾನು ತುಂಬಾ ತೆಳ್ಳಗಿದ್ದೇನೆ. ತುಂಬಾ ಯೋಜನೆ ಮಾಡುತ್ತಾ ಇನ್ನು ಸಣ್ಣಗಾಗುತ್ತಿದ್ದೇನೆ. ನಾನು ದಪ್ಪ ಆಗಬೇಕು.
ಆದರೆ ದಪ್ಪಗಿರುವವರು ಸಣ್ಣಗಾಗಲು ಕಿತ್ತಲೆ ಹಣ್ಣು ತುಂಬಾ ಸೂಕ್ತ. ಬೇವಿನ ಜ್ಯೂಸನ್ನು ಕುಡಿಯುವುದರಿಂದಲೂ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಊಟ ಬಿಟ್ಟರೆ ಗ್ಯಾಸ್ ಆಗುತ್ತದೆಯೇ ಹೊರತು ಸಣ್ಣಗಾಗುವುದಿಲ್ಲ. ಬಾಳೆಹಣ್ನನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಹೊಟ್ಟೆ ತುಂಬುವುದರ ಜೊತೆಗೆ ಸಣ್ಣ ಕೂಡ ಆಗಬಹುದು. ದಪ್ಪಗಿರುವವರಿಗೆ ತಿನ್ನುವ ಚಪಲ ಜಾಸ್ತಿ. ಆದರೆ ತಿನ್ನುವ ಪ್ರಮಾಣವನ್ನಾದರೂ ಕಡಿಮೆ ಮಾಡಿಕೊಳ್ಳುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಮತ್ತೆ ವ್ಯಾಯಾಮ ಮಾಡಿದರೆ ನಿಮ್ಮ ದೇಹದ ಕೊಬ್ಬನ್ನು ಕರಗಿಸಲು ಅದು ತುಂಬಾ ಪ್ರಯೋಜನಕಾಯಿಯಾಗಿದೆ. ವಾಖಿಂಗ್ ಅಭ್ಯಾಸವನ್ನಾದರೂ ಮಾಡಿಕೊಳ್ಳುವುದು ಒಳ್ಳೆಯದು.
ಜೇನುತುಪ್ಪವನ್ನು ಬಿಸಿ ನೀರಿನಲ್ಲಿ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೇಲಿ ಕುಡಿಯುವುದರಿಂದ ಸಣ್ಣಗಾಗಬಹುದು. ಕುರುಕಲು ತಿಂಡಿಯಿಂದ ದೂರವಿರಿ. ಒಂದು ಪಡೆಯಬೇಕೆಂದರೆ ಒಂದು ಕಳೆದುಕೊಳ್ಳಬೇಕು. ತಿಂಡಿ ತಿನ್ನಬೇಕು ಎಂದರೆ ಆರೋಗ್ಯ ಹಾಳಾಗುತ್ತದೆ. ಆರೋಗ್ಯ ಬೇಕು ಎಂದರೆ ತಿಂಡಿಯನ್ನು ಬಿಡಲೇಬೇಕಾಗುತ್ತದೆ. ನಿಂಬೆಹಣ್ಣಿನ ಜ್ಯೂಸನ್ನು ಕುಡಿಯುವುದು ಒಳ್ಳೆಯದು.