ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ಥಟ್ಟಂತ ಹೇಳಲಾಗದ ಅರ್ಥ, ಖುಷಿಕೊಡುವ ಹುಡುಕಾಟ

ಪ್ರತಿಭಾ ನಂದಕುಮಾರ್ ಕವಿತೆ ಓದಲು ಕುಳಿತಾಗೆಲ್ಲ ಗಾಬರಿಯಾಗುತ್ತದೆ. ತುಂಬ ಸರಳವಾಗಿ ಬರೆಯುವ ಪ್ರತಿಭಾ, ಅಷ್ಟೇ ಗಾಢವಾದ ಅನುಭವವೊಂದನ್ನು ಕಟ್ಟಿಕೊಡುತ್ತಿರುತ್ತಾರೆ. ವಿನಾಕಾರಣ ಸಜ್ಜನಿಕೆ ತೋರದೆ, ಹುಸಿವಿನಯಕ್ಕೆ ತೆಕ್ಕೆಬೀಳದೇ, ತನ್ನದೇ ಮರ್ಜಿಗಳಿಗೆ ಒಳಗಾಗದೇ, ವಿಮರ್ಶೆಯ ಕೃಪೆಗಾಗಿ ಎಂದು ಬರೆಯದೇ ಇರುವಾಕೆ ಪ್ರತಿಭಾ. ಕಳೆದ ಒಂದು ವಾರದಿಂದ ಅವರ ಹೊಸ ಪದ್ಯಗಳನ್ನು ಓದುತ್ತಿದ್ದೇನೆ. ಅವುಗಳನ್ನು ಒಟ್ಟಾಗಿ ಗ್ರಹಿಸುವುದು ಹೇಗೆ ಎಂದು ಗೊತ್ತಾದರೂ ಗೊತ್ತಾಗದೇ ಉಭಯಸಂಕಟ.

ಈ ಮಧ್ಯೆ ಹೊಸ ಹುಡುಗರು ಬರೆದ ಕೆಲವೊಂದಷ್ಟು ಕವಿತೆಗಳನ್ನು ಪಟ್ಟಾಗಿ ಕೂತು ಓದಿದೆ. ಚಿತ್ರದುರ್ಗದ ಹುಡುಗ ಕುಮಾರ್ ಕವನ ಸಂಕಲನವೊಂದನ್ನು ತಂದಿದ್ದಾನೆ. ಆಕರ್ಷಕವಾಗಿ ಬರೆಯುವುದನ್ನು ಬೇಕಂತಲೇ ನಿರಾಕರಿಸುವ ಕುಮಾರ್ ತನಗನ್ನಿಸಿದ್ದನ್ನು ಹೇಳಲು ತಡಕಾಡುವ ಹುಡುಗ. ಎಲ್ಲಿ ಎಲ್ಲವನ್ನೂ ಹೇಳಿ ಖಾಲಿಯಾಗುತ್ತೇನೋ ಎಂಬ ಹೊಸಗಾಲದ ಹುಡುಗರ ಭಯ ಅವನನ್ನೂ ಕಾಡುತ್ತಿರುವಂತಿದೆ.

ತೇಲಿ ಬಿಟ್ಟ ದೋಣಿ

ಹರಿದು ಹೋಯಿತೇನೇ?

ಕಣ್ಣ ತುಂಬಾ ಚಿತ್ರ

ಕರಗಿ ಹೋಯಿತೇನೇ?

ಎಂದು ಬರೆದ ಕುಮಾರನ ಚಳಿಗಾಲದ ಎಲೆ ಸಾಲುಗಳನ್ನು ನೋಡುತ್ತಿದ್ದಂತೆ ಇದನ್ನೇ ಅವನ ಹಿಂದಿನ ತಲೆಮಾರಿನ ಕವಿಗಳು ಹೇಗೆ ಬರೆಯುತ್ತಿದ್ದರು ಎಂದು ಯೋಚಿಸುತ್ತೇನೆ. ಅದು ಶುದ್ಧ ತರಲೆ ಆಲೋಚನೆ ಅಂತ ಗೊತ್ತಿದ್ದರೂ. ದೋಣಿ ಹರಿದು ಹೋಯಿತು ಅನ್ನುವ ಬದಲು ಮುಳುಗಿ ಹೋಯಿತು ಎಂದು ಬರೆದರೆ ಭಾವಗೀತೆಯಾಗುತ್ತಿತ್ತಾ? ತೇಲುವುದು ಮತ್ತು ಮುಳುಗುವುದು- ಈ ವೈರುದ್ಧ್ಯವನ್ನು ಹೇಳಲು ಕವಿ ಕಷ್ಟಪಡಬೇಕಾಗಿಲ್ಲ. ಕುಮಾರ್ ಬರೆದಂತೆ `ಹರಿದು ಹೋಯಿತು’ ಎಂದರೆ ಏನರ್ಥ ಮಾಡಿಕೊಳ್ಳಬೇಕು? ಅದು ಕಾಗದದ ದೋಣಿಯಾದ್ದರಿಂದ ಒದ್ದೆಯಾಗಿ ಹರಿದು ಹೋಯಿತು ಅಂತಲೇ ಅಥವಾ ನೀರಿನೊಂದಿಗೆ ಹರಿದು ಕಣ್ಮರೆಯಾಯಿತು ಅಂತಲೇ?

ಇಂಥ ಸಣ್ಣ ದ್ವಂದ್ವಗಳು ಖುಷಿಕೊಡುತ್ತವೆ. ಕವಿತೆ ಕ್ಲಿಷ್ಟ ಅನ್ನುವವರು ಗಮನಿಸಬೇಕು. ಕವಿತೆ ಅತ್ಯಂತ ಸರಳವಾಗಿದ್ದಾಗ ಒಂದೇ ಓದಿಗೆ ಅಷ್ಟೂ ಅರ್ಥವನ್ನು ಬಿಟ್ಟು ಕೊಟ್ಟಾಗ ಇಷ್ಟೇನಾ ಅನ್ನಿಸಿಬಿಡುತ್ತದೆ. ಬೋರು ಹೊಡೆಸುತ್ತದೆ. ತುಂಬ ಹಿಂದೆ ರಾಜು ಅನಂತಸ್ವಾಮಿ ಹಾಡಿದ ಒಂದು ಗೀತೆಯನ್ನು ಕೇಳಿದ್ದೆ. ಅದು ಯಾರದು ಅನ್ನುವುದು ತಕ್ಷಣ ನೆನಪಾಗುತ್ತಿಲ್ಲ. ಪುತಿನ ಬರೆದಿರಬೇಕು ಎಂಬುದು ಸಣ್ಣ ಗುಮಾನಿ. ಆ ಕವಿತೆ ಹೀಗೆ ಶುರುವಾಗುತ್ತದೆ : ಹರಿಯ ಹೃದಯದಿ ಹರನ ಕಂಡೆನು, ಹರನ ಹೃದಯದಿ ಹರಿಯನು, ಶಿವೆಯ ಹೃದಯದಿ ಸಿರಿಯ ಕಂಡೆನು, ಸಿರಿಯ ಹೃದಯದಿ ಶಿವೆಯನು. ಇಡೀ ಕವಿತೆ ಇಂಥದ್ದೆ ವೈರುದ್ಧ್ಯಗಳನ್ನು ಅದಲು ಬದಲಾಗಿಸುತ್ತಾ ಸಾಗುತ್ತದೆ. ಕೊನೆಯಲ್ಲಾದರೂ ಒಂದು ಚಕಿತಗೊಳಿಸುವ ಸಾಲು ಸಿಕ್ಕೀತೆಂದು ಕಾದರೆ ಎದುರಾದದ್ದು ನಿರಾಶೆ.

ಮತ್ತೊಂದು ಕವಿತೆ ನೋಡಿ. `ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು’ ಎಂದು ಶುರುವಾಗುವ ಸರಳ ರಚನೆ ಇದು. ಸರಳವಾಗಿಯೇ ಆರಂಭವಾದರೂ ಮೊದಲ ಸಾಲಲ್ಲೇ ಬರುವ `ಅಲ್ಲಿ ಹೋಗಿ ‘ ಎಂಬ ಪದ ನಿಗೂಢವೆನ್ನಿಸುತ್ತದೆ. ಅಲ್ಲಿ ಅಂದರೆ ಎಲ್ಲಿಗೆ, ಯಾವ ನಿಗೂಢ ಜಾಗಕ್ಕೆ, ಯಾವ ಹೆಸರಿಲ್ಲದ ಬನಕ್ಕೆ, ಯಾವ ಬೆಟ್ಟಕ್ಕೆ ಎಂಬ ಕುತೂಹಲ ಹುಟ್ಟಿಸುತ್ತದೆ. ಮುಂದೆ ಸಾಗುತ್ತಾ ಇದು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿ ಕೌತುಕಕ್ಕೆ ಕಾರಣವಾಗುತ್ತದೆ. ಹೋದ ಮೇಲೆ ಸುತ್ತಬೇಕು ಏಳು ಕೋಟೆ ದ್ವಾರವು, ಹಾದಿಯಲ್ಲಿ ತೀರದಂಥ ದುಃಖವಿಹುದು ಅಪಾರವು ಎಂಬ ಸಾಲಂತೂ ಕವಿತೆಯನ್ನು ಮತ್ತೊಂದು ಎತ್ತರಕ್ಕೇ ಒಯ್ಯುತ್ತದೆ.

ಮೊನ್ನೆ ಸಂಜು ವೆಡ್ಸ್ ಗೀತಾ ಚಿತ್ರದ ಹಾಡು ಕೇಳುತ್ತಿದ್ದಾಗ ಅಂಥದ್ದೇ ಅನುಭವವಾಯ್ತು. ಬಹುಶಃ ಚಿತ್ರಗೀತೆಗಳಲ್ಲೇ ಇದು ಅತ್ಯಂತ ಕ್ಲಿಷ್ಟವಾದ ಗೀತೆಯಿರಬೇಕು. ಸುಮ್ಮನೆ ಕೇಳಿಸಿಕೊಳ್ಳುವಾಗ ನಾವಿದರ ಸಾಹಿತ್ಯವನ್ನು ಅಷ್ಟಾಗಿ ಗಮನಿಸುವುದಕ್ಕೆ ಹೋಗುವುದಿಲ್ಲ. ಈ ಹಾಡು ನೋಡಿ:

ಗಗನವೇ ಬಾಗಿ ಬುವಿಯನು

ಕೇಳಿದ ಹಾಗಿದೆ.

ಕಡಲು ಕರೆದಂತೆ ನದಿಯನು

ಭೇಟಿಗೆ.

ಯಾರೂ ಬಂದಿರದ ಮನಸಲಿ

ನಿನ್ನ ಆಗಮನ ಈ ದಿನ

ನೀಡುವ ಮುನ್ನ

ನಾನೇ ಆಮಂತ್ರಣ.

 

ಹೀಗೊಂದು ಚಿತ್ರಗೀತೆಯನ್ನು ಬರೆಯಲು ಸಾಧ್ಯ ಎಂದು ಊಹಿಸುವುದೂ ಕಷ್ಟ. ಇದನ್ನು ಹಾಡಾಗಿ ಒಮ್ಮೆ ಕೇಳಿ ನೋಡಿ. ನೀವು ನಾನೇ ಆಮಂತ್ರಣಕ್ಕೆ ತಲುಪುವ ಹೊತ್ತಿಗೆ ಹಿಂದಿನದೆಲ್ಲ ಮರೆತು ಹೋಗಿರುತ್ತದೆ. ಮತ್ತೆ ಮೊದಲಿನಿಂದ ಕೇಳಿ ಇಡೀ ಪಲ್ಲವಿಯ ಅರ್ಥ ಏನು ಅನ್ನುವುದನ್ನು ಗ್ರಹಿಸಬೇಕಾಗುತ್ತದೆ. ಒಂದೊಳ್ಳೆಯ ಕವನದಂತೆ ಭಾಸವಾಗುವ ಇದಕ್ಕೆ ಲಿರಿಕಲ್ ಗುಣವೇ ಇಲ್ಲ. ಹಾಗಿದ್ದರೂ ಇದು ಇಷ್ಟವಾಗುವುದು ಇದರಲ್ಲಿರುವ ಸಣ್ಣದೊಂದು ಅನೂಹ್ಯ ಗುಣದಿಂದ.

ಮಕ್ಕಳಿಗೆಲ್ಲ ಇಷ್ಟವಾಗುವ ಮತ್ತೊಂದು ಹಾಡು `ಹುಡುಗ್ರು’ ಚಿತ್ರದ್ದು. `ನಾ ಬೋರ್ಡು ಇರದ ಬಸ್ಸನು ಹತ್ತಿಬಂದ ಚೋಕರಿ’. ಇದರ ಎರಡನೇ ಸಾಲು `ದಾರೀಲಿ ಕಮಲಹಾಸನು ಸಿಗಲಿಲ್ಲ ಯಾಕೇರೀ’. ಈ ಹಾಡಿನ ಮೊದಲ ಸಾಲಿಗೂ ಎರಡನೇ ಸಾಲಿಗೂ ಸಂಬಂಧವೇನು ಎಂದು ಅನೇಕರನ್ನು ಕೇಳಿದೆ. ಅವರು ಅದು ಸುಮ್ಮನೆ ಪ್ರಾಸಕ್ಕೆಂದು ಬರೆದ ಸಾಲು ಎಂದುಬಿಟ್ಟರು. ಆಮೇಲೆ ನಾವೆಲ್ಲ ಕೂತು ಬೋರ್ಡು ಇರದ ಬಸ್ಸಿಗೂ ಕಮಲಹಾಸನ್ನು ಸಿಗುವುದಕ್ಕೂ ಸಂಬಂಧವೇನು ಎಂದು ಲೆಕ್ಕ ಹಾಕುತ್ತಾ, ಸಂಭವನೀಯತೆಯನ್ನು ಹುಡುಕುತ್ತಾ ಹೋದೆವು. ಕೊನೆಗೆ ಬೆಂಕಿಯಲ್ಲಿ ಅರಳಿದ ಹೂವು ಚಿತ್ರದಲ್ಲಿ ಕಮಲಹಾಸನ್ ಕಂಡಕ್ಟರ್ ಪಾತ್ರ ಮಾಡಿದ್ದಕ್ಕೂ ಬೋರ್ಡು ಇರದ ಬಸ್ಸಲ್ಲಿ ಅವನು ಸಿಕ್ಕಿಲ್ಲ ಎಂದಿದ್ದಕ್ಕೂ ಸಂಬಂಧ ಇರಬಹುದು ಎಂಬ ತೀರ್ಮಾನಕ್ಕೆ ಬರಬೇಕಾಯಿತು. ಅದರ ಅರ್ಥವೇನು ಅನ್ನುವುದನ್ನು ಯೋಗರಾಜ ಭಟ್ಟರನ್ನೇ ಕೇಳಬೇಕು.

ಅನೂಹ್ಯವನ್ನು ಸೂಚಿಸುವ ಎಲ್ಲಾ ಹಾಡುಗಳೂ ನಮಗೆ ಇಷ್ಟವಾಗುತ್ತವೆ. ಅದರಲ್ಲೂ ಆಧ್ಯಾತ್ಮದತ್ತ ಹೊರಳುವ ಗೀತೆಗಳೆಲ್ಲ ತುಂಬ ಕಾಲ ಬಾಳುತ್ತವೆ. ಉದಾಹರಣೆಗೆ `ಅವನ ನಿಯಮ ಮೀರಿ ಇಲ್ಲಿ ಏನು ಸಾಗದು, ನಾವು ಎಣಿಸಿದಂತೆ ಬಾಳಲೇನು ನಡೆಯದು’. ಈ ಸಾಲಿನ ವಿಚಿತ್ರ ಗಮನಿಸಿ. ನಾವು ಎಣಿಸಿದಂತೆ ನಡೆಯಬೇಕು ಅನ್ನುವುದು ನಮ್ಮೆಲ್ಲರ ಆಸೆ. ಆದರೆ ನಾವು ಎಣಿಸಿದಂತೆ ಏನೂ ನಡೆಯುವುದಿಲ್ಲ ಎಂಬುದು ಗೆದ್ದವರೂ ಸೋತವರೂ ಮೆಚ್ಚುವಂಥ ಮಾತು. ಅದು ನಮ್ಮನ್ನು ವಿನಯವಂತರನ್ನಾಗಿ ಮಾಡುತ್ತದೆ.

ಹಾಗೇ, ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ ಎನ್ನುವುದು ಕೂಡ ಅದೇ ಕಾರಣಕ್ಕೆ ಇಷ್ಟವಾಗುತ್ತವೆ. ಇದು ಕೂಡ ನಮ್ಮ ಕೈಯಲ್ಲೇನೂ ಇಲ್ಲ. ನಾವು ಮಾಡುವುದೆಲ್ಲ ವ್ಯರ್ಥ ಎಂದು ಹೇಳುವ ಗೀತೆ. ಇಂಥ ಪಾರಮಾರ್ಥಿಕತೆ, ಕಾಣದ ಶಕ್ತಿಯ ಮಹಿಮೆಯನ್ನು ಹಾಡುವ ಗೀತೆಗಳೆಲ್ಲ ಬೇರೆ ಬೇರೆ ಕಾರಣಕ್ಕೆ ಮೆಚ್ಚುಗೆಯಾಗುತ್ತದೆ.

ಕಾವ್ಯದಲ್ಲಿ ಕೂಡ ನಮಗಿಷ್ಟವಾಗುವುದು ಅಂಥ ಸಾಲುಗಳೇ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದು ಕೂಡ ಅಂಥದ್ದೇ ಒಂದು ಆಶಯವಲ್ಲವೇ.

ಮತ್ತೆ ಹೊಸ ಹುಡುಗರ ಕವಿತೆಗೆ ಬಂದರೆ ಅಲ್ಲಿ ಅಂಥದ್ದೊಂದು ಅನೂಹ್ಯದ ಹುಡುಕಾಟವೇ ಇಲ್ಲವೇನೋ ಎಂದು ಗಾಬರಿಯಾಗುತ್ತದೆ. ಎಲ್ಲವನ್ನೂ ವಾಸ್ತವದ ನೆಲೆಗಟ್ಟಿನಲ್ಲಿ ನೋಡಲು ಯತ್ನಿಸಿದ ತಕ್ಷಣ ಅದರಾಚೆಗೆ ಏನೂ ಇಲ್ಲವೇನೋ ಎಂಬ ನಿರಾಶೆ. ಇವಳು ಯಾರು ಬಲ್ಲೆಯೇನು, ಇವಳ ಹೆಸರು ಹೇಳಲೇನು, ಇವಳು ಏತಕೋ ಬಂದು ನನ್ನ ಸೆಳೆದಳು ಎಂಬ ಸಾಲಿನಲ್ಲಿ ಇವಳು ಯಾರು ಎನ್ನುವುದು ತಿಳಿಯದೇ ಇದ್ದಾಗಲೇ ರೋಮಾಂಚನ. ಅವಳು ಗೆಳತಿಯೋ ಮಡದಿಯೋ ಆಗಿದ್ದಾಳೆ ಅಂತಿಟ್ಟುಕೊಳ್ಳಿ.

ಅನೂಹ್ಯವಾದದ್ದು ಆಕೃತಿಯಾದಾಗ ಆಕರ್ಷಣೆ ಕಳೆದುಕೊಳ್ಳುತ್ತದೆ.

 

 

‍ಲೇಖಕರು avadhi

2 August, 2011

13 Comments

  1. Vivek

    Nice

  2. charitha

    ಸರ್, ಮನುಷ್ಯನ ಮನಸ್ಸಿಗೆ ಅನೂಹ್ಯವಾದ್ದು ಬಹುಷಃ ಏನೂ ಇಲ್ಲ! ಇದ್ದರೂ ಅವುಗಳು ನಮ್ಮ ಬರಹಕ್ಕೆ, ಚಿತ್ರಣಕ್ಕೆ ಇಳಿಯುವುದು ಊಹೆಯ ಮೂಲಕವೇ! ಅಷ್ಟರ ಮಟ್ಟಿಗೆ ಮನುಷ್ಯನ ಕಲ್ಪನೆಗಳು ‘ನಂಬಿಕೆ’ ಉಳಿಸಿಕೊಂಡಿವೆ, ಉಳಿಸಿಕೊಳ್ಳಬೇಕಿದೆ!

    ನೀವು ಹೇಳುವ ‘ಅನೂಹ್ಯತೆ’ ಅಧ್ಯಾತ್ಮಿಕ ನೆಲೆಯಲ್ಲಿ ಸಾಧ್ಯವಿರಬಹುದು. ಅದನ್ನು ಮತ್ತೆ ಅಮೂರ್ತತೆಯ ಮೂಲಕವೇ ಹೇಳಬೇಕಷ್ಟೆ. ಸಾಹಿತ್ಯ ಕೃತಿಯನ್ನು Illustrate ಮಾಡುವ ಕಲಾವಿದರಿಗಿರುವ ದೊಡ್ಡ ಸವಾಲು ಇದು. ಹಾಗೆಯೆ ಜನಪ್ರಿಯ ಕಾದಂಬರಿಯನ್ನು ಸಿನಿಮಾ ಮಾಡುವಾಗಲೂ ಕೂಡ. ಒಟ್ಟಾರೆ ದೃಶ್ಯ ಮಾಧ್ಯಮ ಎದುರಿಸಬೇಕಾದ ದೊಡ್ಡ ಸವಾಲು.

    ಬಹುಷಃ ಒಂದು ‘ಸಿದ್ಧ ಕಲ್ಪನೆ’ ಆಕೃತಿ0ಾದಾಗ ಆಕರ್ಷಣೆ ಉಳಿಸಿಕೊಳ್ಳುವುದು ಸವಾಲಿನ ಕೆಲಸ.
    – ಚರಿತಾ

  3. borgalgudde manjunath

    ಓದಿ ತುಂಬಾ ಖುಷಿ ಆಯಿತು

  4. suvarna

    that antha heelalaagada artha kushikoduva hudukata anuhyavaadaddu akruthiyadaga akarshane kaledukoluthhade wow entha sundara vakya galu nammannu omme kavithe hagu hadugala bagge arthagala bagge yochisuvanthe maduthhave suvarna

  5. Sukhesh M.G.

    ಅರ್ಥ ಆಗ್ಲಿಲ್ಲ. ಇಷ್ಟ ಆಯ್ತು 🙂

  6. Sampangi Ramu M H

    ಜೋಗಿಯವ್ರೆ ನಿಮ್ಮ ಬ್ಲಾಗ್ ಅನ್ನು ಅತ್ಯಂತ ಕುತೂಹಲದಿಂದ ಓದುವವನು ನಾನು, ನಿಮ್ಮ ಲೇಖನಗಳು ಏನೋ ಆನಂದ, ಯಾವುದೋ ಒಂದು ವಿಷಯಲಹರಿಯನ್ನು ಹೊರತರುತ್ತಿರುತ್ತದೆ. ನಿಮ್ಮ ಲೇಖನದ ಕೊನೆಯ ವಾಕ್ಯದಂತಹುದೇ ಒಂದು ಪ್ರಖ್ಯಾತ ತೆಲುಗಿನ ನುಡಿ, “ವಿನಪಿಂಚನಿ ರಾಗಾಲೇ ಅಂದಂ” (ಕೇಳದಿರುವ ರಾಗಗಳೇ ಇಂಪು), ಅನ್ನು ನೆನಪಿಸಿದ್ದು ತುಂಬಾ ಖುಷಿಯಾಯಿತು!
    – ರಾಮು

  7. Pradeep

    ಕವಿತೆ ಓದೋದನ್ನ ಕಲಿಸಿ ಕೊಡ್ತಾ ಇದ್ದೀರಿ.. ತುಂಬಾ ಥ್ಯಾಂಕ್ಸ್..

  8. Manjunayak

    Superb

  9. minchu

    ಎಲ್ಲಿ ಎಲ್ಲವನ್ನೂ ಹೇಳಿ ಖಾಲಿಯಾಗುತ್ತೇನೋ ಎಂಬ ಹೊಸಗಾಲದ ಹುಡುಗರ ಭಯ ಅವನನ್ನೂ ಕಾಡುತ್ತಿರುವಂತಿದೆ.

    these words are wonderful under standing of a poem and poet….

    superb article

  10. Aravind M.S

    ಹರನ ಹೃದಯದಿ ಹರಿಯ ಕಂಡೆನು . . ಇದು ಮಾಸ್ತಿಯವರು ಬರೆದದ್ದು. ಎಲ್ಲಾ ದೇವರಲ್ಲೂ ಒಂದನ್ನೇ ಕಾಣು ಎಂಬ ಆಶಯ ಕಾಣುತ್ತದೆ ನನಗೆ. ಒಂಥರಾ ತರಲೆ ಹಾಡು !

  11. Sanketh

    ಕಮಲಹಾಸನ್ ಸಿಕ್ಕಿದ್ದು ’ಸದ್ಮಾ’ದಲ್ಲಿ ಅಂದ್ಕೊಂಡಿದ್ದೆ.

  12. Neeta Rao

    “ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತೂ ಹೋಗ್ಬಾರ್ದುರಿ” ಇದರ ಅರ್ಥವನ್ನು ನೀವು ಹೇಳಬಹುದೇ ಜೋಗಿ ಸರ್, ಅಥವಾ ಅದನ್ನೂ ಯೋಗರಾಜ ಭಟ್ಟರಿಗೇ ಕೇಳ್ಬೇಕೋ?
    ತಮ್ಮ ಲೇಖನ ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading