ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ಒಂಟೆಯ ಹಿಂದೆ ಅರಬನ ಓಟ

ರಜನೀಶ್ ಈ ಕತೆ ಹೇಳಿದರೆಂದು ನೆನಪು.

ಮರಳುಗಾಡಿನಲ್ಲೊಬ್ಬ ಅರಬ ತನ್ನ ಒಂಟೆಯೊಂದಿಗೆ ಸಾಗುತ್ತಿದ್ದಾನೆ. ಸ್ವಲ್ಪ ಹೊತ್ತಿಗೆಲ್ಲ ಒಂಟೆ ಸುಸ್ತಾಗಿ ಮಲಗಿಬಿಡುತ್ತದೆ. ಏನೇನು ಮಾಡಿದರೂ ಅದು ಏಳುವ ಸೂಚನೆ ಕಾಣಿಸುವುದಿಲ್ಲ. ಆ ಮರಳುಗಾಡಲ್ಲೇ ತನ್ನ ಕೊನೆ ಎಂದುಕೊಂಡು ಅರಬ ಅತೀವ ದುಃಖದಲ್ಲಿರುವಾಗ ಅಲ್ಲಿಗೊಬ್ಬ ಬರುತ್ತಾನೆ. ನಿನ್ನ ಒಂಟೆಯನ್ನು ಎಬ್ಬಿಸುವುದು ನನಗೆ ಗೊತ್ತಿದೆ. ಆದರೆ ನೀನು ನನಗೆ ಐದು ಚಿನ್ನದ ನಾಣ್ಯ ಕೊಡಬೇಕು ಅನ್ನುತ್ತಾನೆ. ಪ್ರಾಣದ ಮುಂದೆ ಐದು ಚಿನ್ನದ ವರಹ ಯಾವ ಲೆಕ್ಕ ಎಂದುಕೊಂಡು ಅರಬ ಕೂಡಲೇ ಐದು ವರಹವನ್ನು ಅವನ ಕೈಗಿಡುತ್ತಾನೆ. ಬಂದವನು ಐದು ವರಹವನ್ನು ಜೋಬಿಗಿಳಿಸಿ, ನೆಲದಲ್ಲಿ ಬಾಗಿ ಒಂಟೆಯ ಕಿವಿಯಲ್ಲಿ ಏನೋ ಹೇಳುತ್ತಾನೆ. ಅವನು ಹಾಗಂದದ್ದೇ ತಡ ಒಂಟೆ ಛಂಗನೆ ಜಿಗಿದು ನಾಗಾಲೋಟದಲ್ಲಿ ಓಡಲು ಆರಂಭಿಸುತ್ತದೆ.

ಅರಬ ಖುಷಿಯಾಗುತ್ತಾನೆ. ತುಂಬ ಸಹಾಯ ಮಾಡಿದೆ ಎಂದು ಆತನಿಗೆ ಕೃತಜ್ಞತೆ ಸಲ್ಲಿಸುತ್ತಿರಬೇಕಾದರೆ ಆತ ಹೇಳುತ್ತಾನೆ: ನನಗೆ ಸಾವಿರ ಚಿನ್ನದ ನಾಣ್ಯ ಕೊಡು. ಇಲ್ಲದೇ ಹೋದರೆ ಅಲ್ಲಿ ಓಡಿ ಹೋಗುತ್ತಿರುವ ಒಂಟೆಯನ್ನು ನೀನು ಹಿಡಿಯಲಾರೆ. ಅದನ್ನು ಹಿಡಿಯಬೇಕಿದ್ದರೆ ನಾನು ನಿನ್ನ ಕಿವಿಯಲ್ಲೂ ಮಂತ್ರ ಹೇಳಬೇಕು.

ನಮ್ಮ ಆಶೆಗಳು ಹೀಗೆಯೇ. ಮೊದಲು ಐದು ರುಪಾಯಿಯಲ್ಲಿ ಮುಗಿದುಹೋಗುತ್ತದೆ. ಐದೇ ರುಪಾಯಿ ಎಷ್ಟೆಲ್ಲ ಅನುಕೂಲ ಎಂದುಕೊಂಡು ಖುಷಿಯಾಗುತ್ತೇವೆ. ಅದೇ ಐದು ರುಪಾಯಿಯ ವಸ್ತು, ಐನೂರು ರುಪಾಯಿ ಕಕ್ಕಿಸಿರುತ್ತದೆ. ಕ್ರಮೇಣ ನಾವು ಐನೂರ ಐದು ರುಪಾಯಿಗೆ ಹೊಂದಿಕೊಳ್ಳುತ್ತಾ ಹೋಗುತ್ತೇವೆ. ಅದಕ್ಕೆ ತಕ್ಕಷ್ಟು ದುಡಿಯುತ್ತೇವೆ. ದುಡಿಮೆಗೆ ತಕ್ಕ ಖರ್ಚು ಎಂಬ ವ್ಯಾಖ್ಯಾನ ಬದಲಾಗಿ, ಖರ್ಚಿಗೆ ತಕ್ಕಷ್ಟು ದುಡಿಮೆ ಎಂಬ ಹಳೆ ಮಂತ್ರ ಮತ್ತೆ ಕೇಳಿಬರುತ್ತಿದೆ.

ಚಿತ್ರ: ಇಂಟರ್ನೆಟ್

ನಾವು ಚಿಕ್ಕವರಾಗಿದ್ದಾಗ ಇದ್ದದ್ದು ಹಾಗೆಯೇ. ಪುತ್ತೂರಿನ ಸ್ವಾಗತ್ ಹೊಟೆಲಿನಲ್ಲಿ ರುಚಿರುಚಿಯಾದ ಸಿಹಿತಿಂಡಿಗಳನ್ನು ಮಾಡುತ್ತಿದ್ದ ನಮ್ಮಪ್ಪ, ಐದೋ ಆರೋ ತಿಂಗಳು ರಾತ್ರಿ ಹಗಲೆನ್ನದೆ ದುಡಿಯುತ್ತಿದ್ದರು. ಕೈಯಲ್ಲಿ ಒಂದೋ ಎರಡೋ ಸಾವಿರ ಸಂಗ್ರಹವಾಗುತ್ತಿತ್ತು. ಅಷ್ಟಾದದ್ದೇ ತಡ, ಹೇಳದೇ ಕೇಳದೇ ಮನೆಗೆ ಬಂದು ತಿಂಗಳಾನುಗಟ್ಟಲೆ ಕೆಲಸಕ್ಕೇ ಹೋಗುತ್ತಿರಲಿಲ್ಲ. ಹೊಟೆಲಿನ ಮಾಲಿಕ ಶಿವರಾಮಣ್ಣ ಆಗೊಮ್ಮೆ ಈಗೊಮ್ಮೆ ಮನೆಗೆ ಬಂದು ಕೆಲಸಕ್ಕೇ ಬನ್ನಿ ಅಂತ ಕರೆದುಹೋಗುತ್ತಿದ್ದರು. ನಾಳೆ ಬರುತ್ತೇನೆ, ನಾಡಿದ್ದು ಬಂದೇ ಬಿಡುತ್ತೇನೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಅಪ್ಪ, ಮತ್ತೆ ಹೋಗುತ್ತಿದ್ದದ್ದು ಕೈಲಿದ್ದ ಅಷ್ಟೂ ಹಣ ಖರ್ಚಾದ ನಂತರವೇ.

ನಮ್ಮೂರಲ್ಲಿ ಟೈಲರ್ ಆಗಿದ್ದ ನನ್ನ ಗೆಳೆಯ ಸಾಂಬನ ಕತೆಯೂ ಅದೇ. ಅವನೂ ಕೂಡ ಒಂದಷ್ಟು ದಿನ ಟೈಲರಿಂಗ್ ಮಾಡುತ್ತಿದ್ದ. ಆಮೇಲೆ ದಿನಗಟ್ಟಲೆ ಅಂಗಡಿ ಬಾಗಿಲು ಹಾಕಿ ನಾಪತ್ತೆಯಾಗುತ್ತಿದ್ದ. ಮದುವೆಗೆಂದು ಹೊಲಿಯಲು ಕೊಟ್ಟ ಬ್ಲೌಸು, ಲಂಗಗಳಿಗಾಗಿ ಅವನ ಅಂಗಡಿಗೆ ಹೆಣ್ಮಕ್ಕಳು ದಿನಾ ಬಂದು ಅವನಿಗೊಂದಷ್ಟು ಶಾಪ ಹಾಕಿ ಹೋಗುತ್ತಿದ್ದರು. ನಾಪತ್ತೆಯಾದ ದಿನಗಳಲ್ಲಿ ಅವನು ಎಲ್ಲಿಗೆ ಹೋಗುತ್ತಾನೆ ಎಂದು ಪತ್ತೆ ಮಾಡಿದಾಗ ಗೊತ್ತಾದದ್ದು, ಅವನ ಯಕ್ಷಗಾನದ ಖಯಾಲಿ. ನಮ್ಮೂರಲ್ಲಿ ಬೇಸಗೆ ಶುರುವಾತ್ತಿದ್ದಂತೆ ಯಕ್ಷಗಾನದ ಮೇಳಗಳು ಸಂಚಾರ ಹೊರಡುತ್ತಿದ್ದವು. ಅವುಗಳನ್ನು ಬೆನ್ನಟ್ಟಿಕೊಂಡು ಈತ ಹೋಗುತ್ತಿದ್ದ. ಕುಂದಾಪುರ, ಸುಳ್ಯ, ಮೂಡಬಿದರೆ, ಪಡುಬಿದ್ರೆ, ಕಾರ್ಕಳ, ಧರ್ಮಸ್ಥಳ, ಕೊಪ್ಪ, ಮೂಡಿಗೆರೆ-ಹೀಗೆ ಯಾವ ಊರಾದರೂ ಸರಿ ಯಕ್ಷಗಾನದ ತಂಡದ ಜೊತೆ ಹೊರಟುಬಿಡುತ್ತಿದ್ದ. ಅವನು ವಾಪಸ್ಸು ಬರುತ್ತಿದ್ದದ್ದು ಅವನಿಗೆ ಮನಸ್ಸು ಬಂದಾಗಲೇ. ಹೀಗಾಗಿ ಕೊನೆಕೊನೆಗೆ ಅವನಿಗೆ ಬಟ್ಟೆ ಕೊಡುವುದಕ್ಕೂ ಜನ ಹಿಂಜರಿಯುತ್ತಿದ್ದರು. ಅದರಿಂದ ಅವನೇನೂ ಬೇಸರಗೊಂಡದ್ದು ನಾನು ಕಂಡಿಲ್ಲ.

ಮೊನ್ನೆ ನಾನು ಮತ್ತು ಗೆಳೆಯ ಉದಯಮರಕಿಣಿ ಮಾತಾಡುತ್ತಾ ಇದ್ದಾಗ ಇಂಥದ್ದೇ ಮಾತುಗಳು ಬಂದುಹೋದವು. ನಾವಿಬ್ಬರೂ ಪುತ್ತೂರಿನ ಸಮೀಪದ ಊರಿನಿಂದ ಬಂದವರು. ಬೆಂಗಳೂರಿಗೆ ಬಂದಾಗ ನನಗೆ ಸಿಕ್ಕ ಮೊದಲ ಸಂಬಳ ನಾನ್ನೂರು ರುಪಾಯಿ. ಮರಕಿಣಿಗೂ ಹೆಚ್ಚು ಕಡಿಮೆ ಅಷ್ಟೇ ಇರಬೇಕು. ಆಗ ನಮಗಿದ್ದ ಏಕೈಕ ಆಸೆಯೆಂದರೆ ಹೇಗಾದರೂ ಮಾಡಿ ಒಂದು ಲಕ್ಷ ರುಪಾಯಿ ಕೂಡಿಡುವುದು. ಆಮೇಲೆ ನೆಮ್ಮದಿಯಾಗಿ ಇದ್ದುಬಿಡುವುದು.

ಒಂದು ಲಕ್ಷ ರುಪಾಯಿ ಲಾಟರಿ ಯಾರಿಗಾದರೂ ಹೊಡೆಯಿತು ಅಂದರೆ ನಮಗೆಲ್ಲ ಗಾಬರಿ. ಅಷ್ಟೊಂದು ದುಡ್ಡನ್ನು ಅವನು ಏನು ಮಾಡುತ್ತಾನೆ ಎಂದು ಕುತೂಹಲ. ಮಾರನೇ ದಿನದಿಂದಲೇ ಅವನ ಜೀವನ ಶೈಲಿ ಬದಲಾಗುತ್ತೆ ಎಂದುಕೊಂಡಿದ್ದೆವು. ಬೆಂಗಳೂರಿಗೆ ಬರುವ ಹೊತ್ತಿಗೂ ಒಂದು ಲಕ್ಷ ರುಪಾಯಿ ಬ್ಯಾಂಕಿನಲ್ಲಿಟ್ಟು, ಅದರಿಂದ ಬರುವ ಬಡ್ಡಿಯಲ್ಲಿ ಆರಾಮವಾಗಿ ಬದುಕಬಹುದು ಅಂತೆಲ್ಲ ಯೋಚಿಸಿದ್ದೆ’ ಅಂದರು ಉದಯ್.

ಇವತ್ತು ಲಕ್ಷ ರುಪಾಯಿ ಎಷ್ಟು ಬಡ್ಡಿ ಬರುತ್ತದೆ ಎಂದು ಲೆಕ್ಕ ಹಾಕಿದೆವು. ವರುಷಕ್ಕೆ ಆರು ಸಾವಿರ. ತಿಂಗಳಿಗೆ ಐನೂರು. ಅದು ಸಿಗರೇಟು ಖರ್ಚಿಗೂ ಸಾಕಾಗುವುದಿಲ್ಲ. ಮತ್ತದೇ ಒಂಟೆಯೇರಿದ ಅರಬರು ನಾವು. ಹಾಗಿದ್ದರೆ ಮತ್ತೆಷ್ಟು ಬೇಕು. ಹತ್ತು ಲಕ್ಷ? ಐವತ್ತು ಲಕ್ಷ? ಒಂದು ಕೋಟಿ?

ದುಡಿಯುವುದು ಒಂದು ಗೀಳೂ ಇರಬಹುದು. ವರ್ಷಕ್ಕೆ ಕೋಟ್ಯಂತರ ರುಪಾಯಿ ದುಡಿಯುವ ಮನುಷ್ಯ ಲಕ್ಷಾಂತರ ದುಡಿಯುವವನಿಗಿಂತ ಸಂತೋಷವಾಗಿಲ್ಲ ಎಂದು ಹೇಳಿಕೆ ನೀಡುವುದು ಸುಲಭ. ಅದು ನಮ್ಮ ಹಳೆಯ ನಂಬಿಕೆಗಳಲ್ಲಿ ಒಂದು. ದುಡ್ಡಿನಿಂದ ಸಂತೋಷವನ್ನು ಕೊಳ್ಳಲಾಗುವುದಿಲ್ಲ ಅನ್ನುತ್ತಿರುತ್ತೇವೆ. ಮತ್ತೆ ಯಾವುದರಿಂದ ಕೊಳ್ಳಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಇತ್ತೀಚೆಗೆ ಬೆಂಗಳೂರಿನ ಪ್ರತಿಷ್ಠಿತ ಕ್ಲಬ್ ಸದಸ್ಯರಾಗಲು ಯತ್ನಿಸಿದವರೊಬ್ಬರು ಅವರ ಅನುಭವ ಹೇಳಿಕೊಂಡರು.

ಅದು ತುಂಬ ಶ್ರೀಮಂತರಿಗೆ ಮಾತ್ರ ಸದಸ್ಯತ್ವ ಕೊಡುತ್ತದೆ ಅಂತ ಕೇಳಿದ್ದೆ. ಅದಕ್ಕೇ ನನ್ನ ಸಂದರ್ಶನ ಇದ್ದ ದಿನ ಮರ್ಸಿಡಿಸ್ ಬೆಂಜ್ ಕಾರು ತೆಗೆದುಕೊಂಡು ಹೋಗಲು ನಿರ್ಧರಿಸಿದೆ. ಐವತ್ತೆಂಟು ಲಕ್ಷದ ಬೆಂಜ್ ಕಾರಲ್ಲಿ ಕ್ಲಬ್ ಒಳಗೆ ಹೋಗುತ್ತಿದ್ದಂತೆಯೇ ನನಗೆ ಸದಸ್ಯತ್ವ ಸಿಗುವುದಿಲ್ಲ ಎಂದು ಖಾತ್ರಿಯಾಯಿತು. ಅಲ್ಲಿಯ ಪಾರ್ಕಿಂಗ್ ಜಾಗದಲ್ಲಿ ಕೋಟಿ ಬೆಲೆಯ ಹತ್ತಿಪ್ಪತ್ತು ಕಾರುಗಳು ನಿಂತಿದ್ದವು. ಬಿಎಂಡಬ್ಲ್ಯು, ಆಡಿ ಕಾರುಗಳೆಲ್ಲ ನನ್ನ ಕಾರನ್ನು ಅಣಕಿಸುತ್ತಿದ್ದವು’

ಶ್ರೀಮಂತಿಕೆಯ ಮಾನದಂಡವೇ ಬದಲಾಗಿದೆಯೇನೋ ಅನ್ನಿಸುವ ಕಾಲ ಇದು. ಅವನು ಲಕ್ಷಾಧೀಶ ಅನ್ನುತ್ತಿದ್ದರು. ಆಮೇಲೆ ಅವನು ಕೋಟ್ಯಧೀಶ ಅನ್ನತೊಡಗಿದರು. ಈಗ ಅವನು ಮಲ್ಟಿಮಿಲಿಯನೇರ್ ಅನ್ನುತ್ತಿದ್ದಾರೆ. ಮುಂದೆ?

ಇದನ್ನೆ ತಿರುವು ಮುರುವು ಮಾಡಿ ನೋಡಿದರೆ ವಿಚಿತ್ರ ಲೆಕ್ಕಚಾರ ಸಿಗುತ್ತದೆ. ನಮ್ಮ ಖರ್ಚೆಷ್ಟು ಎಂದು ಒಂದಷ್ಟು ಗೆಳೆಯರು ಕೂತು ಲೆಕ್ಕ ಹಾಕಿದೆವು. ಬೆಳಗ್ಗೆ ಎರಡು ಇಡ್ಲಿ-ವಡೆ, ಕಾಫಿ, ಮಧ್ಯಾಹ್ನ ಅನ್ನ ಸಾರು, ರಾತ್ರಿ ಚಪಾತಿ ಅಥವಾ ರಾಗಿ ಮುದ್ದೆ. ಇದಕ್ಕ ತಗಲುವ ಖರ್ಚು ಹೆಚ್ಚೆಂದರೆ ನೂರು ರುಪಾಯಿ. ಅಂದರೆ ತಿಂಗಳಿಗೆ ಮೂರು ಸಾವಿರ. ಹಾಗಿದ್ದರೆ ಮೂರು ಲಕ್ಷ ದುಡಿಯುವ ವ್ಯಕ್ತಿ ಉಳಿದ ದುಡ್ಡನ್ನು ಏನು ಮಾಡುತ್ತಾನೆ.

ಮಕ್ಕಳಿಗೋಸ್ಕರ ಆಸ್ತಿ ಮಾಡಿಡುತ್ತಾನೆ. ಮಗಳಿಗೆ ಮದುವೆ ಮಾಡಲು ಕೂಡಿಡುತ್ತಾನೆ. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆಂದು ಉಳಿತಾಯ ಮಾಡುತ್ತಾನೆ. ನಾಳೆ ಏನಾದ್ರೂ ಆಗಿಬಿಟ್ಟರೆ ಕುಟುಂಬಕ್ಕಿರಲಿ ಎಂದು ಮಿಗಿಸುತ್ತಾನೆ ಎಂದೆಲ್ಲ ಅಂದುಕೊಳ್ಳುವುದು ಸುಲಭ. ಆದ್ರೂ ಒಮ್ಮೊಮ್ಮೆ ಅದು ತೀರಾ ಅತಿಯೆನ್ನಿಸತೊಡಗುತ್ತದೆ. ಗಾಬರಿ ಶುರುವಾಗುತ್ತದೆ.

ನಮ್ಮ ಕಾಲದಲ್ಲಿ, ಈಗ್ಗೆ ಮೂವತ್ತು ವರ್ಷಗಳ ಹಿಂದೆ, ಅಪ್ಪಂದಿರು ಇಷ್ಟೊಂದು ಒಳ್ಳೆಯವರೂ ಜವಾಬ್ದಾರಿಯುಳ್ಳವರೂ ಆಗಿರಲೇ ಇಲ್ಲ. ನಮ್ಮಪ್ಪ ನಮಗೆಂದು ಏನನ್ನೂ ಕೂಡಿಡುವುದಕ್ಕೇ ಹೋಗಲಿಲ್ಲ. ನಮ್ಮ ಗೆಳೆಯರ ಮನೆಗಳಲ್ಲಿ ಅವರವರ ಅಪ್ಪಂದಿರದೂ ಇದೇ ಕತೆ. ಹತ್ತು ರುಪಾಯಿ ಸಂಪಾದಿಸಿದರೆ ಐದು ರುಪಾಯಿ ಮನೆಗೆ ಕೊಟ್ಟು ಉಳಿದಿದ್ದನ್ನು ಕುಡಿದು ಹಾಡುತ್ತಾ ಎಂಡ್ಕುಡುಕ ರತ್ನನ ಅಪರಾವತಾರದಂತೆ ಓಡಾಡುತ್ತಿದ್ದವರನ್ನು ನೆನೆದಾಗೆಲ್ಲ ಅಸೂಯೆಯಾಗುತ್ತದೆ.

ಮೊನ್ನೆ ಹಿರಿಯ ಮಿತ್ರರೊಬ್ಬರು ಮಗಳಿಗೆ ಲ್ಯಾಪ್‌ಟಾಪು ಬೇಕಂತೆ, ಸೆಕೆಂಡ್ ಹ್ಯಾಂಡ್ ಸಿಗುತ್ತಾ ನೋಡಿ ಅಂದರು. ಅವರ ಮಗಳು ಪಿಯೂಸಿ ಓದುತ್ತಿದ್ದಾಳೆ. ಅವಳ ಓದಿಗೆಂದು ಆಗಲೇ ಅವರು ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದರು. ಪದವಿ ಮುಗಿಸುವ ಹೊತ್ತಿಗೆ ಮತ್ತೊಂದಷ್ಟು ಲಕ್ಷ ಕೈ ಬಿಟ್ಟಿರುತ್ತದೆ. ಅಂಥ ಉನ್ನತ ಶಿಕ್ಷಣ ಯಾಕೆ ಎಂಬ ಪ್ರಶ್ನೆಗೂ ಯಾರಲ್ಲೂ ಉತ್ತರವಿಲ್ಲ.

ಮೊನ್ನೆ ಕತೆಗಾರ ಸುರೇಂದ್ರನಾಥ್ ಜೊತೆಗೆ ಅನಂತಮೂರ್ತಿಯವರ ಮನೆಗೆ ಹೋದಾಗ ಅವರಂದ ಒಂದು ಮಾತು ಕಲಕಿತು:‘ಇವತ್ತು ಓದಿದವನು ಒಂದು ಪೆನ್ನು ಇಲ್ಲಿಂದ ಎತ್ತಿ ಅಲ್ಲಿಟ್ಟು ದಿನಕ್ಕೆ ಸಾವಿರ ರುಪಾಯಿ ಸಂಪಾದಿಸುತ್ತಾನೆ. ಒಬ್ಬ ಹಳ್ಳಿಗ ಇಡೀ ದಿನ ಮೈ ಮುರಿಯುವಂತೆ ದುಡಿದು ತಿಂಗಳಿಗೆ ಸಾವಿರ ರುಪಾಯಿ ದುಡಿಯುತ್ತಾನೆ. ಅವನು ಕಷ್ಟಪಟ್ಟು ದುಡಿಯುತ್ತಾನೆ ಅನ್ನುವುದೇ ಒಂದು ಪವಾಡದಂತೆ ಕಾಣಿಸುತ್ತದೆ. ಇವತ್ತು ಎಲ್ಲಿ ನೋಡಿದರೂ ಮೈಗಳ್ಳರೇ ಕಾಣಿಸುತ್ತಾರೆ. ಒಬ್ಬ ದುಡೀತಾನೆ ಅಂದ್ರೆ ಅದೇ ಗ್ರೇಟ್ ಅನ್ನುವ ಹಾಗಾಗಿದೆ.’

ನಮ್ಮೂರಲ್ಲಿ ಪುಟ್ಟ ಗೂಡಂಗಡಿ ಇಟ್ಟುಕೊಂಡು ಕಡ್ಲೆಬೀಜ, ಬೀಡಿ, ಸಿಗರೇಟು, ಎಳನೀರು, ಅಲಸಂದೆ ಮಾರುವ ಮಧ್ಯವಯಸ್ಕನ ಸಂಪಾದನೆ ಎಷ್ಟಿರಬಹುದು ಎಂದು ಊಹಿಸಲು ಶುರುಮಾಡಿದೆವು. ಎಷ್ಟು ಒದ್ದಾಡಿದರೂ ಅವನ ಆದಾಯ ಮತ್ತು ಖರ್ಚಿನ ಅಂದಾಜು ಸಿಗಲಿಲ್ಲ. ಎಲ್ಲೋ ಲೆಕ್ಕ ತಪ್ಪುತ್ತಿತ್ತು.

‍ಲೇಖಕರು G

25 February, 2011

15 Comments

  1. chand

    ಚೆಂದ ಇದೆ ಮಾರಾಯ್ರೆ… ಅದಕ್ಕೇ ನೋಡಿ ದುಡ್ಡು ಮಾಡುವುದು ಹೇಗೆ? ಎಂಬ ಪುಸ್ತಕಗಳಿಗೆ ಯಾವತ್ತೂ ಬೇಡಿಕೆ. ಇನ್ನು ಮುಂದೆ ಮಾಡಿದ ದುಡ್ಡು ಖರ್ಚು ಮಾಡಿದ್ದು ಹೇಗೆ ಎಂದು ಬರೆಯಬೇಕು! ನಮ್ಮ ಮನೆಯಲ್ಲಿ ವಾರದಿಂದ ಟ್ಯಾಪು ಸೋರುತ್ತಿತ್ತು, ಅದು ಸೋರಿ ಸೋರಿ ಕೊನೆಗೆ ಕೆಳಗಿನ ಮನೆಯ ಗೋಡೆಯಲ್ಲಿ ಲೀಕ್ ಆಗಲು ಶುರುವಾಯಿತು. ಅವರು ಮುಖ ಸೊಟ್ಟಗೆ ಮಾಡಿಕೊಂಡು ಬಂದರು. ಆವತ್ತು ಸಂಜೆಯೆ ಪ್ಲಂಬರ್ ಒಬ್ಬನನ್ನು ಹುಡುಕಿಕೊಂಡು ಬಂದೆ. ಆತ ಅದೇನೇನೋ ಹೋಗಿದೆ ಅಂದ, ಆತ ಹೇಳಿದ್ದೆಲ್ಲ ತಂದೆ. ಅರ್ಧಗಂಟೆಯಲ್ಲಿ ಎಲ್ಲ ಸರಿಹೋಯ್ತು. ಕೊನೆಗೆ ಆತ ಹೇಳಿದ ಫೀಸು ಎಷ್ಟು ಗೊತ್ತೇ 450 ರೂ! ನನಗೆ ದಿಗಿಲಾಗಿ ಹೋಯ್ತು. ತಿಂಗಳ ವಾಟರ್ ಬಿಲ್ಲೂ ಅಷ್ಟೊಂದು ಬರುವುದಿಲ್ಲ; ಯಾಕಪ್ಪಾ ಅಂದೆ. ಅದ್ಯಾವುದೋ ಪಾರ್ಟ್ ಹೆಸರು ಹೇಳಿ, ಅದನ್ನು ಹಾಕಿದರೆ ನಾವು ಚಾರ್ಜು ಮಾಡುವುದು ಅಷ್ಟೇ ಅಂದ. ಚರ್ಚೆ ಮಾಡಿ 350 ಕೊಟ್ಟೆ. ಆತ ಪ್ರತಿದಿನ ನಮ್ಮ ಅಪಾರ್ಟ್ ಮೆಂಟಿನ ಮುಂದೆ ಹಾದು ಹೋಗುತ್ತಾನೆ, ಕೈಲೊಂದು ಮೊಬೈಲು, ಅದೇ ಹಳೆ ಸೈಕಲ್ಲು, ಗೋಣಿಚೀಲದಲ್ಲಿ ಪ್ಲಂಬರ್ ಸಾಮಾನು… ಅರ್ಧಗಂಟೆಗೆ 300-400 ಸಂಪಾದನೆ ಮಾಡಿದವನು ದುಡ್ಡು ಏನು ಮಾಡುತ್ತಾನೆ? ಈ ಪ್ರಶ್ನೆ ಪ್ರತಿದಿನ ಕಾಡುತ್ತದೆ.
    ನಮಗೆ ಪ್ರತಿದಿನ ಕಾಡುವ ಈ ಒಗಟನ್ನು ಜೋಗಿ ಒಂಟೆಯ ಕಾಲಿಗೆ ಕಟ್ಟಿ ಓಡಿಸಿದ್ದಾರೆ…! ಚೆಂದ ಐತೆ..

    • bhale

      Chand!,

      avanige prati ghantegobba nimmanta giraaki sigabekalla… Dinakke obba sikkare punya… Dinakke saraasari 500 dudidaroo tingalige hadinaidu saavira… bengaloorinalli etakke aaguttade? Raajakaaranigalu dudiyade kotigattale jebigilisuttaraalla… avaren madtaare?

      • chand

        ಭಲೆ!

        ಭಲೆ! ನಿಮ್ಮ ಮಾತಿಗೆ ಮೆಚ್ಚಿದೆ! ಆದರೆ, ನನ್ನ ವಾದವನ್ನು ಆಕ್ಷೇಪ ಎಂದು ತಾವು ಭಾವಿಸಿದಂತಿದೆ. ಆತ ಎಷ್ಟು ದುಡಿಯುತ್ತಾನೆ ಎಂಬುದಲ್ಲ ಇಲ್ಲಿನ ಪ್ರಶ್ನೆ. ದುಡ್ಡಿನ ಜಿಜ್ಞಾಸೆಗೆ ಇಳಿದಾಗ ಬದುಕು ಹೇಗೆ ನಮಗೆ ಭಿನ್ನ ಭಿನ್ನವಾಗಿ ಕಾಣುತ್ತದೆ ಎಂಬುದನ್ನಷ್ಟೆ ಹೇಳಲು ಹೊರಟೆ ಅಷ್ಟೆ. ರಾಜಕಾರಣಿಗಳ ಮಾತು ಬಿಡಿ, ಅವರನ್ನು ಯಾರೊಂದಿಗೂ ಹೋಲಿಸುವುದು ಬೇಡ. ಹೊಲಸು ದುಡ್ಡು ಏನಾದರೂ ಮಾಡಿಕೊಂಡು ಹಾಳಾಗಿ ಹೋಗಲಿ ಬಿಡಿ…

    • ShivaRam H

      ನೋಡಿ,ಈ ಬದುಕು ಕೇವಲ ಲೆಕ್ಕಾಚಾರವಲ್ಲ. ಯಾಕೆಂದ್ರೆ ಕೆಲವೊಮ್ಮೆ ನಮ್ಮ ಲೆಕ್ಕಾಚಾರವೇ ತಲೆಕೆಳಗಾಗುತ್ತದೆಯಲ್ಲವೇ! ನಿಮ್ಮ ಮೇಲಿನ ಉದಾಹರಣೆಯನ್ನೇ ತೆಗೆದುಕೊಳ್ಳಿ. ” ಪ್ಲಂಬರ್ ನವ ಅರ್ಧಗಂಟೆಗೆ 300-400 ಸಂಪಾದನೆ ಮಾಡಿದವನು ದುಡ್ಡು ಏನು ಮಾಡುತ್ತಾನೆ ? ಈ ಪ್ರಶ್ನೆ ಪ್ರತಿದಿನ ಕಾಡುತ್ತದೆ” ಎಂದಿದ್ದೀರಿ. ಅವನಿಗೆ ಪ್ರತಿದಿನವೂ ಪ್ರತಿ ಅರ್ಧ ಗಂಟೆಗೆ 300-400 ಸಿಗುತ್ತದೆಯೇ..? ಹಾಗೆ ದಿನದ ಆರೇಳು ಗಂಟೆಯೂ ಸಿಕ್ಕರೆ ತಾನೆ, ಅವನು ದುಡ್ಡು ಏನು ಮಾಡುತ್ತಾನೆ ಎನ್ನೋ ಪ್ರಶ್ನೆ..? ನೋಡಿ, ಈವತ್ತು ಎಲ್ಲಾ ದುಡಿಮೆಯಲ್ಲೂ ಸ್ಪರ್ಧೆಯಿದೆಯಲ್ಲ… ಪ್ಲಂಬ ರ್ ಗಳೂ ಬೇಕಾದಷ್ಟು! ಹೀಗಿರೊವಾಗ ಅವನಿಗೆ ಕೆಲಸವೇ ಇಲ್ಲದ ದಿನಗಳೂ ಇರಬಹುದಲ್ಲವೇ…? ಆಗ ಅವನೇನು ಮಾಡುತ್ತಾನೆ ಖಾಲಿಯಾಗಿ….? ಹೀಗೆ ಚಿಂತಿಸಿ ನೋಡಿ, ಬದುಕು ಕೇವಲ ಲಕ್ಕಾಚಾರದ ಮೇಲೆ ನಿಂತಿಲ್ಲವೆನಿಸುತ್ತದೆ… ಹಾಗಾದ್ರೆ ಯಾವುದ್ರ ಮೇಲೆ ನಿಂತಿದೆ ನಮ್ಮ ಬದುಕು…? ಅವರವ್ರ ನಿರ್ಧ ರಿಸಬೇಕಾದ ವಿಚಾರ… ಅಲ್ಲವೇ?

  2. Jyothi

    Naanu degree aada koodle kelasakke seridaga banda sambala (92 nalli)563/- (13 dinada salary).. entha “thrill” aagittu andre.. oh! nantara 96 ralli eegina kelasa (RBI subsidiary) sikkaaga 4500/- approx irabahudu anta nanna colleague obbaru helidaaga.. aha!! swargakke moore mettalu.. aagidda “thrill” eega.. 40,000/- plus iddagaloo bartha illa maarayre.. 6 months ge omme DA bandaaga.. “eshtante?” anta keli swalpa thrill aagi matte marete hogteve.. 563/- bandaaga idda khushi eegella yaake agolla? antha kelikondre .. no answer!! thumba “onthhara” yaantrika ansutte. ayyoo… agella chinna 300-400/- kkella ondu gram ittalla! aagale thagondu itkobekittu annisutte.. matte.. (entha peddu allva naanu!).. u know it’s said “The biggest lie on the earth is `If I get “this” i’ll be happy!’ nija allva? naavella “hana” emba huchhu kudure hinde odo arabaru.. innondu maatoo jotege nenapagutte.. “I said “money, u r just a piece of paper.. it smiled and said “but i’ve not found a wastebin for me!” ellavoo mukhya.. adare iddudanne manasaare enjoy maaduvudu ideyalla.. adu nijakkoo ondu art! nice writeup!

  3. Basava Raju L

    ಲೇಖನ ಅಪೂರ್ಣವೆನಿಸುತ್ತಿದೆ

    ಖರ್ಚೆಷ್ಟು ಎಂದು ಕೂತು ಲೆಕ್ಕ ಹಾಕಿದ ಆ ನಿಮ್ಮ ಸಂಧರ್ಭವಂತೂ ಖಂಡಿತ ಇಂದಿನದ್ದಾಗಿರಲಿಕ್ಕಿಲ್ಲ, ಬೆಂಗಳೂರಿನ೦ಥ ನಗರಕ್ಕೆ ಬಂದ ಹೊಸತರಲ್ಲಿ ನಾವುಗಳೆಲ್ಲಾ ಮಾಡಿದ ಬಾಲಿಶ ಲೆಕ್ಕಾಚಾರದಂತಿದೆ.
    “ಈಗ್ಗೆ ಮೂವತ್ತು ವರ್ಷಗಳ ಹಿಂದೆ, ಅಪ್ಪಂದಿರು ಇಷ್ಟೊಂದು ಒಳ್ಳೆಯವರೂ ಜವಾಬ್ದಾರಿಯುಳ್ಳವರೂ ಆಗಿರಲೇ ಇಲ್ಲ” – ಅನ್ನೋ ಮಾತಂತೂ ಸತ್ಯ.
    ಆದಾಯ ಮತ್ತು ಖರ್ಚಿನ ಅಂದಾಜುಗಳು ಆಯಾ ವ್ಯಕ್ತಿಯ ಜವಾಬ್ದಾರಿಗಳೊಂದಿಗೆ ಬೆಸೆದಿರುವ ಇಂದಿನ reality ಲೇಖನದಲ್ಲಿ ಕಂಡು ಬರುತ್ತಿಲ್ಲ.

  4. ms manjunatha

    ನಾನೂ ಕೂಡ ಯಾವಗಲೂ ಇದನ್ನೇ ಯೋಚಿಸುತ್ತಿರುತ್ತೇನೆ.ಅನಂತಮೂರ್ತಿಯವರ ಮಾತು ನಿಜವೆನಿಸುತ್ತೆ.ಶ್ರಮಕ್ಕೂ ಸಂಪಾದನೆಗೂ ಸಂಬಂಧವಿಲ್ಲವೆನಿಸುತ್ತೆ.

    • ShivaRam H

      ನಿಮ್ಮ ಮಾತು ನಿಜ. ಶ್ರಮಕ್ಕೂ ಸಂಪಾದನೆಗೂ ಸಂಬಂಧವಿಲ್ಲ ಅನ್ನಬಹುದಾದ್ರೂ ನಮ್ಮ ಶ್ರಮಕ್ಕೆ ತಕ್ಕ ಪ್ರತಿ ಫಲ ದೊರಕದಿದ್ದಾಗ ತುಂಬ ಬೇಸರವಾಗುತ್ತೆ. ಆದ್ರೇನು! ಪಡೆದಷ್ಟೇ ಇದೆ ಭಾಗ್ಯ! ಬೇಸರ ಪಡದೇನೆ ದುಡಿದಷ್ಟೂ ದಾರಿ ಇದೆಯಲ್ಲ.

  5. ಪಾಂಡುರಂಗ ಆಚಾರ್ಯ

    ಉತ್ತಮ ಲೇಖನ, ಜನರ ಮನಸ್ಥಿತಿಯೇ ಹಾಗೆ, ಹತ್ತು ರೂಪಾಯಿ ಖರ್ಚು ಮಾಡಿದರೆ ಚಿಂತಿಸುತ್ತೇವೆ ಆದರೆ ನಮ್ಮಿಂದ ವಸೂಲದ ತೆರಿಗೆ ಹಣ ಹೇಗೆ ಸರ್ಕಾರ ಖರ್ಚುಮಾಡುತ್ತಿದೆ ಎಂದು ಯೋಚಿಸುವುದಿಲ್ಲ. ಇದು ಹೇಗೆಂದರೆ ‘ಯಾರದೋ ದುಡ್ಡು ಎಲ್ಲಮನ ಜಾತ್ರೆ’ ಎಂಬಂತೆ ಯಾಕೆಂದರೆ ಸರ್ಕಾರ ನಡೆಸುವವರು ನಮ್ಮಿಂದ ಆರಿಸಿ ಹೋದವರೇ ಅಲ್ಲವೇ.

  6. Gubbachchi Sathish

    “ಶ್ರಮಕ್ಕೂ ಸಂಪಾದನೆಗೂ ಸಂಬಂಧವಿಲ್ಲ” ನಮ್ಮ ಹುಡುಗರು ಮೊನ್ನೆ ಇದೇ ಧಾಟಿಯಲ್ಲಿ ಮಾತನಾಡಿದರು.
    ಧನ್ಯವಾದಗಳು.

  7. srinivas deshpande

    dear jogi,

    ee software duddu yavagge anayasavaagi haridu banthu nodi, allinda duddige bele illadanthaatu maaraayre

  8. vikas

    ಬಹಳ ಇಷ್ಟವಾಯಿತು ಬರಹ.. its so true….

  9. Radhika

    “ಬೆಳಗ್ಗೆ ಎರಡು ಇಡ್ಲಿ-ವಡೆ, ಕಾಫಿ, ಮಧ್ಯಾಹ್ನ ಅನ್ನ ಸಾರು, ರಾತ್ರಿ ಚಪಾತಿ ಅಥವಾ ರಾಗಿ ಮುದ್ದೆ. ಇದಕ್ಕ ತಗಲುವ ಖರ್ಚು ಹೆಚ್ಚೆಂದರೆ ನೂರು ರುಪಾಯಿ. ಅಂದರೆ ತಿಂಗಳಿಗೆ ಮೂರು ಸಾವಿರ. ಹಾಗಿದ್ದರೆ ಮೂರು ಲಕ್ಷ ದುಡಿಯುವ ವ್ಯಕ್ತಿ ಉಳಿದ ದುಡ್ಡನ್ನು ಏನು ಮಾಡುತ್ತಾನೆ.”. There is nothing to be surprised about. Somebody earning 3 lakhs would have a lifestyle matching his/her income. He/she would be paying 50% of his income as emi for the villa! One need not look at other’s life or income to see the truth. Our own life would be witness to the changing times.

  10. ಸಂದೀಪ್ ಕಾಮತ್

    ಸುಪ್ಪರ್ ಉಂಟು !

    ಹಂಗೆ ಹಿಂಗೆ ಮಾಡಿ ಜೋಗಿಯವರ ’ಹಳೆಯ ಬೀಗದ ಕಥೆ’ಯನ್ನು ಎಗರಿಸಿ ಬಿಟ್ರಿ ಅಲ್ವಾ?

  11. G N Mohan

    ‘ಹಳೆಯ ಬೀಗದ ಕಥೆ’ ಹಳೆಯದಾಗುವವರೆಗೂ ಹಾಕಲು ಬಿಡುತ್ತಿಲ್ಲ…ಮಾರಾಯ್ರೇ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading