ದಂಗೆಯೇಳುವುದು ಸುಲಭ ಮತ್ತು ಕಷ್ಟ ಯಾಕೆಂದರೆ…
– ಜೋಗಿ
ಒಂದು ವಿಚಿತ್ರ ಸಂದಿಗ್ಧ. ಅದು ಯಾಕೆ ವಿಚಿತ್ರ ಅನ್ನುವುದು ನಿಮಗೇ ಗೊತ್ತಾಗುತ್ತಾ ಹೋಗುತ್ತದೆ.
ನಮ್ಮ ಸಮಾಜವನ್ನು ಅಡ್ಡಕ್ಕೋ ಉದ್ದಕ್ಕೋ ಸೀಳಿ ನೋಡುವುದು ಪ್ರತಿಯೊಬ್ಬನಿಗೂ ಸಾಧ್ಯವಾಗುವ ಕೆಲಸ ಅಲ್ಲ. ಲೇಖಕರು ಅದನ್ನು ಮಾಡಬೇಕು ಅಂತ ನಾವು ನಿರೀಕ್ಷಿಸುತ್ತೇವೆ. ಓದುಗರೂ ಅಂಥ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಉದಾಹರಣೆಗೆ ಮಹಿಳಾ ಲೋಕದ ಸಂಕಷ್ಟಗಳೇನು. ಒಬ್ಬ ಮಹಿಳೆ ತನ್ನ ಬೇರೆ ಬೇರೆ ವಯೋಮಾನಗಳಲ್ಲಿ ಎದುರಿಸುವ ಸಮಸ್ಯೆಗಳೇನು? ಆ ಮಹಿಳೆ ಬೇರೆ ಬೇರೆ ಜಾತಿಗೆ ಸೇರಿದವಳಾಗಿದ್ದಾಗ ಅವಳ ಸಂಕಟಗಳೂ ಬೇರೆ ಬೇರೆ ಆಗುತ್ತಾ ಹೋಗುತ್ತವಾ? ಹೋಗುತ್ತವೆ ಅನ್ನುವುದನ್ನು ಒಪ್ಪಿಕೊಂಡರೆ, ಅದಕ್ಕೆ ತಕ್ಕಂತೆ ಅವರ ಭಾವನೆಗಳೂ ಸಂವೇದನೆಗಳೂ ರೂಪಿತವಾಗುತ್ತಾ ಹೋಗುವುದೂ ಸಾಧ್ಯವಿದೆಯಲ್ಲ? ಅಂಥ ಹೊತ್ತಲ್ಲಿ ಸಮಗ್ರವಾದ ಅಧ್ಯಯನವೋ ನೋಟವೋ ನಮ್ಮನ್ನು ಎಷ್ಟರ ಮಟ್ಟಿಗೆ ಆ ಜಗತ್ತನ್ನು ನೋಡುವುದಕ್ಕೆ ಸಹಾಯ ಮಾಡುತ್ತದೆ. ಅದೇ ಲೇಖಕ ಮತ್ತಷ್ಟು ಒಳಪದರಗಳಿಗೆ ಹೋಗುವುದಕ್ಕೆ ಸಾಧ್ಯವಾದರೆ ಅವನ ದೃಷ್ಟಿಕೋನ ಹೇಗೆ ಬದಲಾಗುತ್ತದೆ?
ತನ್ನ ಮನೆಯ ಜಗಲಿಯಲ್ಲಿ ಕುಳಿತುಕೊಂಡು, ಜಗತ್ತನ್ನು ನೋಡುವ ವ್ಯಕ್ತಿಯ ಮುಂದೆ ಅವನ ಮನಸ್ಥಿತಿಗೆ, ಓದಿಗೆ, ಸಂಸ್ಕಾರಕ್ಕೆ, ಪರಿಸರಕ್ಕೆ ತಕ್ಕಂಥ ಜಗತ್ತೇ ಕಾಣಿಸುತ್ತಾ ಹೋಗುತ್ತದೆ ಅನ್ನುವುದು ಸತ್ಯ ಮತ್ತು ಸುಳ್ಳು. ಸಹಾನುಭೂತಿ ಎಂಬುದು ಅನುಕಂಪಕ್ಕಿಂತ ವಿಶಾಲವಾದ ಅರ್ಥವುಳ್ಳ ಪದ. ಪಾಳೇಗಾರನೊಬ್ಬ ಜೀತದಾಳುಗಳನ್ನು ದುಡಿಸುತ್ತಿರುವುದು, ಅದನ್ನು ನೋಡುತ್ತಾ ಬೆಳೆಯುವ ಅವನ ಓದುಬಲ್ಲ ಮಗನಿಗೆ ಪಾಪಪ್ರಜ್ಞೆಗೆ ಕಾರಣವಾಗಬಹುದು. ಅವನಲ್ಲಿ ಮರುಕ ಹುಟ್ಟಬಹುದು. ಅದೇ ಪಾಳೇಗಾರನ ಪಾಲಿಗೆ ಅದೊಂದು ಸಹಜ ಘಟನೆ. ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಂಥ ಒಂದು ವಿದ್ಯಮಾನ. ಅದರಲ್ಲಿ ಪಾಪಪ್ರಜ್ಞೆ, ಅಪರಾಧೀ ಪ್ರಜ್ಞೆ ಅನುಭವಿಸುವುದಕ್ಕೇನೂ ಇಲ್ಲ. ಅವನ ತಾತ ಅದೇ ಗುಲಾಮರನ್ನು ದುಡಿಸುತ್ತಿದ್ದರು. ಅವನ ಅಪ್ಪನೂ ಅದನ್ನೇ ಮಾಡುತ್ತಿದ್ದರು.
ಹಳ್ಳಿಗಳಲ್ಲಿ ಇಂಥ ಪ್ರವೃತ್ತಿಯೊಂದಿತ್ತು. ನೂರಾರು ಎಕರೆ ಜಮೀನು ಹೊಂದಿದ್ದ ಜಮೀನ್ದಾರ ಒಬ್ಬನಿರುತ್ತಿದ್ದ. ಅವನ ಹೊಲದಲ್ಲಿ ನೂರಾರು ಆಳುಗಳು ಕೆಲಸ ಮಾಡುತ್ತಿದ್ದರು. ಅವರಿಗೆ ಅವನು ಕಾಲಕಾಲಕ್ಕೆ ತಕ್ಕ ಸಂಬಳ ಕೊಡುತ್ತಿದ್ದ. ಅವರನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆ ಆಳುಗಳೆಲ್ಲ ಆತನನ್ನು ಅತ್ಯಂತ ಭಯಭಕ್ತಿಯಿಂದ ನೋಡುತ್ತಿದ್ದರು. ಅವನು ಬರುವುದನ್ನು ಕಂಡರೆ ಬದಿಗೆ ಸರಿಯುತ್ತಿದ್ದರು, ಎದ್ದು ನಿಂತು ಕೈ ಮುಗಿಯುತ್ತಿದ್ದರು. ತಮ್ಮ ಪೈಕಿ ಯಾರಾದರೂ ಒಬ್ಬನ ಜೊತೆ ಮಾತಾಡಿದರೂ ಸಾಕು ಸಂತೋಷಪಡುತ್ತಿದ್ದರು. ಮಗಳ ಮದುವೆಗೋ ಅಪ್ಪನನ್ನು ಮಣ್ಣು ಮಾಡುವುದಕ್ಕೋ ಧಣಿ ಸಾಲ ಕೊಡುತ್ತಾನೆ ಎಂದು ಭಾವಿಸುತ್ತಿದ್ದರು. ಸಹಜವೆನ್ನಿಸುವಷ್ಟು ಸಹಜವಾದ ಸಂಬಂಧದಲ್ಲಿ ಎಲ್ಲೂ ಶೋಷಣೆ ಮತ್ತು ಶೋಷಿತ ಎಂಬ ಭಾವನೆಯೂ ಇಣುಕುತ್ತಿರಲಿಲ್ಲ. ಅವರ ಪೈಕಿ ಯಾರಾದರೂ ಒಬ್ಬನನ್ನು ನಾಳೆಯಿಂದ ತೋಟಕ್ಕೆ ಬರಬೇಡ ಅಂತ ಬೈದು ಕಳಿಸಿದರೆ, ಆತ ಅವಮಾನ, ಭಯ ಮತ್ತು ಅಭಧ್ರತೆಯಿಂದ ನರಳುತ್ತಿದ್ದ. ತನಗೆ ಮುಂದೇನು ಗತಿ, ಹೊಟ್ಟೆ ಹೊರೆಯುವುದು ಹೇಗೆ ಎಂದು ಗೊತ್ತಾಗದೇ ಪರದಾಡುತ್ತಿದ್ದ. ಮತ್ತೆ ಧಣಿಯ ಬಳಿಗೇ ಬಂದು ಕೆಲಸ ಕೊಡಿ ಅಂತ ಅಂಗಲಾಚುತ್ತಿದ್ದ. ಧಣಿ ಆತನ ಸರ್ವಾಪರಾಧಗಳನ್ನೂ ಮನ್ನಿಸಿ, ಅವನನ್ನು ಊಳಿಗಕ್ಕೆ ತೆಗೆದುಕೊಳ್ಳುತ್ತಿದ್ದ. ಅಲ್ಲಿಗೆ ಇಬ್ಬರೂ ಸಂತುಷ್ಟರಾಗುತ್ತಿದ್ದರು.
ಇಲ್ಲಿ ಧಣಿಯ ಮನಸ್ಸಿನಲ್ಲಿ ಬರುತ್ತಿದ್ದ ಯೋಚನೆಗಳೇನು? ತಾನು ಧರ್ಮಾತ್ಮ. ಎಲ್ಲರಿಗೂ ಕೆಲಸ ಕೊಟ್ಟಿದ್ದೇನೆ. ಎಲ್ಲರಿಗೂ ಜೀವನಾವಕಾಶ ಮಾಡಿಕೊಟ್ಟಿದ್ದೇನೆ. ಅವರು ನನ್ನಿಂದಾಗಿ ಸುಖವಾಗಿದ್ದಾರೆ. ಈ ಆಳುಗಳು ಧಣಿಗಾಗಿ ದುಡಿಯಬೇಕಿತ್ತು, ಹೋರಾಡಬೇಕಿತ್ತು. ಅವನ ಅಪ್ಪಣೆಯನ್ನು ಪಾಲಿಸಬೇಕಾಗಿತ್ತು. ತಾವು ಕೈದಿಗಳು ಅನ್ನುವುದು ಅವರಿಗೂ ಗೊತ್ತಿರಲಿಲ್ಲ. ಧಣಿ ಇದ್ದಾನೆ, ಅವನು ನಮಗೇನೂ ಕಡಿಮೆ ಮಾಡುವುದಿಲ್ಲ ಎಂಬ ನಂಬಿಕೆ, ನಾವು ಪಡೆದುಕೊಂಡು ಬಂದದ್ದೇ ಇಷ್ಟು ಎಂಬ ಭಾವನೆಯಲ್ಲಿ ಅವರು ದುಡಿತ ಮುಂದುವರಿಸುತ್ತಿದ್ದರು. ಪರಿಸ್ಥಿತಿ ಬದಲಾಯಿತು ಅಂದುಕೊಳ್ಳೋಣ. ಒಬ್ಬ ಆಳು ಸಿಟ್ಟಿಗೆದ್ದು ಧಣಿಯನ್ನು ಕತ್ತರಿಸಿ ಚೆಲ್ಲುತ್ತಾನೆ. ಅವನ ಮನೆಯವರನ್ನೂ ತುಂಡರಿಸಿ ಕೊಲ್ಲುತ್ತಾನೆ. ಇಡೀ ಹೊಲದ ಒಡೆಯ ತಾನಾಗುತ್ತಾನೆ. ಆಗ ಅವನ ಮನಸ್ಥಿತಿ ಮತ್ತು ಮಾತು ಹೇಗಿರುತ್ತದೆ? ಅವನು ಎಲ್ಲರ ಪಾಲಿಗೆ ಹೊಸ ನಾಯಕನಾಗುತ್ತಾನೆ. ಹೊಸ ಧಣಿ ಆಗುತ್ತಾನೆ. ನಮ್ಮಂತೆಯೇ ಇದ್ದವನು ಧಣಿಯಾದ ಅನ್ನುವ ಹೊಸ ಹುರುಪು ಆಳುಗಳಲ್ಲಿ ಮೂಡುತ್ತದೆ. ಎಲ್ಲೋ ಒಂದಿಬ್ಬರಿಗೆ ಆಳು ಕೂಡ ಧಣಿಯಾಗಬಹುದು ಎಂಬ ಸತ್ಯ ಹೊಳೆಯುತ್ತದೆ.
ಧಣಿಯಾದ ಅಳು ಕೆಲವೇ ದಿನಗಳಲ್ಲಿ ಧಣಿಯಂತೆಯೇ ವರ್ತಿಸತೊಡಗುವುದಿಲ್ಲ ಎಂದು ನಂಬಬಹುದೇ? ಅವನು ಆಳುಗಳನ್ನೆಲ್ಲ ಕರೆದು, ನೀವಿನ್ನು ಭಯಪಡಬೇಕಾಗಿಲ್ಲ. ನಾನು ನಿಮ್ಮನ್ನು ಚೆನ್ನಾಗಿ ನೋಡ್ಕೋತೀನಿ ಎಂದು ಭರವಸೆ ಕೊಡುತ್ತಾನೆ. ಜೊತೆಗೆ ಎಚ್ಚರಿಕೆಯನ್ನೂ ಆತ ಕೊಡಬಲ್ಲ. ತಾನೂ ಆಳಾಗಿದ್ದವನಾದ್ದರಿಂದ ಅವನಿಗೆ ಆಳುಗಳು ಮಾಡುವ ಸಣ್ಣಪುಟ್ಟ ವಂಚನೆ, ಕಳ್ಳತನ ಗೊತ್ತಿರುತ್ತದೆ. ಹೀಗಾಗಿ ಅವನು, ನಾನು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಅನ್ನುವುದರ ಜೊತೆಗೇ, ಇನ್ನು ಮೇಲೆ ಮೋಸ. ತಟವಟ, ವಂಚನೆ ಮಾಡುವಂತಿಲ್ಲ. ಅದೆಲ್ಲ ನನಗೆ ಗೊತ್ತಾಗುತ್ತದೆ ಎಂದು ಹೇಳಿ ಅವರ ಸಣ್ಣಪುಟ್ಟ ಸಂತೋಷವನ್ನೂ ಕಸಿದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕ್ರಮೇಣ ಅವನು ಆಳುಗಳ ಪಾಲಿಗೆ, ಮೊದಲಿನ ಧಣಿಗಿಂತ ಹೆಚ್ಚು ಅಪಾಯಕಾರಿಯೂ ಕ್ರೂರಿಯೂ ಆಗಿ ಪರಣಮಿಸುತ್ತಾನೆ. ಆಳುಗಳ ಅಗತ್ಯ ಮತ್ತು ಶಕ್ತಿ ಎರಡೂ ಗೊತ್ತಿರುವುದರಿಂದ, ಅವರನ್ನು ಹೆಚ್ಚು ಶ್ರೀಮಂತರಾಗಲು ಆತ ಬಿಡುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವನಿಗೆ ಆಳುಗಳಲ್ಲಿ ಒಬ್ಬ ದಂಗೆಯೆದ್ದು ತನ್ನನ್ನು ಮುಗಿಸುವ ಭಯವೂ ಇರುವುದರಿಂದ, ಮತ್ತೊಂದು ಕ್ರಾಂತಿ ಹುಟ್ಟದಂತೆ ನೋಡಿಕೊಳ್ಳುತ್ತಾನೆ. ಅದರ ಸಣ್ಣ ಸೂಚನೆ ಕಂಡರೂ ಸಾಕು, ಅಂಥವರನ್ನು ಕಡಿದು ಚೆಲ್ಲಿ ಎಲ್ಲರಲ್ಲೂ ಭಯ ಹುಟ್ಟಲೂ ಆತ ಕಾರಣನಾಗಬಹುದು.
ಇಂಥ ಸ್ಥಿತಿಯಲ್ಲಿ ಚಲನೆ ಅನ್ನುವುದು ನಿಜಕ್ಕೂ ಎಲ್ಲಿದೆ? ಒಂದು ಸಮಾಜ ಸರ್ವತೋಮುಖವಾದ ಬದಲಾವಣೆಯನ್ನು ಹೇಗೆ ದಕ್ಕಿಸಿಕೊಳ್ಳುತ್ತದೆ. ಒಂದು ಸಣ್ಣ ಪ್ರಶ್ನೆಯನ್ನು ಧಣಿಯಾಗಲೀ ಆಳಾಗಲೀ ಯಾಕೆ ಕೇಳಿಕೊಳ್ಳುವುದಿಲ್ಲ. ಇಲ್ಲಿ ಧಣಿ ಮತ್ತು ಆಳು ಎಂಬ ಸಂಬಂಧದ ಕೊಂಡಿಯಾಗಿರುವುದು , work -ದುಡಿಮೆ, ಕೆಲಸ – ಅನ್ನುವುದು ಇಬ್ಬರಿಗೂ ಯಾಕೆ ಹೊಳೆಯುವುದೇ ಇಲ್ಲ. ಶ್ರಮಕ್ಕೆ ಇರಬೇಕಾದ ಗೌರವ, ಮಾನ ಮತ್ತು ಸ್ವಾಭಿಮಾನವನ್ನು ನಾವು ಶ್ರಿಮಂತಿಕೆಯ ಜೊತೆ ಮಾಡಿಕೊಂಡ ಒಳಒಪ್ಪಂದಕ್ಕೆ ಒತ್ತೆಯಿಟ್ಟುಬಿಡುತ್ತೇವಾ?
ಇದಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿದ್ದ ಮಾನವ ಸಂಪನ್ಮೂಲ ಕೂಡ ಕಾರಣ ಇರಬಹುದೋ ಏನೋ? ಅಥವಾ ಹೊಟ್ಟೆಯ ಹಿಟ್ಟನ್ನು ಹುಟ್ಟಿಸಬಲ್ಲ ತಾಣಗಳಾದ ಹೊಲ, ತೋಟಗಳು ಕೆಲವೇ ಕೆಲವರ ಅಂಕೆಯಲ್ಲಿ ಇದ್ದುಬಿಟ್ಟು, ಉಳಿದವರು ಅದನ್ನೇ ಆಶ್ರಯಿಸಬೇಕಾಗಿ ಬಂದಿದ್ದರಿಂದ ಇಂಥ ಸ್ಥಿತಿ ಬಂದಿರಬಹುದಾ? ಒಂದು ಹಳ್ಳಿಯ ಮಂದಿಯೆಲ್ಲ ಇವತ್ತಿನಿಂದ ನನಗೆ ಸಿಗಬೇಕಾದ ಗೌರವ ಸಿಗದೇ ಹೋದರೆ ನಾನು ನಿನಗೋಸ್ಕರ ದುಡಿಯಲಾರೆ ಎಂದು ದಿಟ್ಟತನದಿಂದ ಹೇಳಿದ್ದರೆ ಏನಾಗುತ್ತಿತ್ತು?
ಈ ಪರಿಸ್ಥಿತಿ ಕೇವಲ ಹೊಲಗದ್ದೆಗಳಲ್ಲಿ ಕೆಲಸ ಮಾಡುವವರಿಗಷ್ಟೇ ಅಲ್ಲ, ಉದ್ಯಮ ಕ್ರಾಂತಿಯ ನಂತರವೂ ಮುಂದುವರಿಯಿತು. ಭಾರತದಲ್ಲಿ ಜಾತಿ, ಅಸ್ಪಶ್ಯತೆ, ದೇವರು, ಮಂತ್ರಗಳ ಮೂಲಕ ನಿಯಂತ್ರಿಸಲು ಹೊರಟದ್ದನ್ನು, ಬೇರೆ ದೇಶಗಳು ವರ್ಗಬೇಧ, ವರ್ಣಬೇಧದ ಮೂಲಕ ನಿಯಂತ್ರಿಸಿದವು. ವರ್ಕಿಂಗ್ ಕ್ಲಾಸ್ ಎಂಬ ಒಂದು ವರ್ಗವೇ ಸೃಷ್ಟಿಯಾಯಿತು. ಅವರಲ್ಲಿ ಸಜ್ಜನರಾದವರು ಮಿಡ್ಲ್ ಕ್ಲಾಸ್ ಮಂದಿಯಾಗಿ, ಪ್ರತಿಭಟನೆಯ ಕಾವನ್ನೇ ಕಳಕೊಂಡರು.
ಜನತಂತ್ರ ಎಂಬುದು ಚಾಲ್ತಿಗೆ ಬರುತ್ತಿದ್ದಂತೆ ಸಮಾನತೆಯನ್ನು ನಾಡು ಮೈಗೂಡಿಸಿಕೊಳ್ಳುತ್ತಿದ್ದಂತೆ, ಎಲ್ಲವೂ ಸರಿಹೋಗುತ್ತದೆ ಅನ್ನುವ ನಂಬಿಕೆ ಮೂಡಿದ್ದಂತೂ ನಿಜ. ಇವತ್ತು ಕೂಡ ಆಳುವ ವರ್ಗವೊಂದಿದೆ. ಅದು ದುಡಿಯುವ ವರ್ಗವನ್ನು ಓಲೈಸುತ್ತಿದೆ. ಅವರು ಕೇಳಿದ್ದನ್ನು ಕೊಡುತ್ತಿದೆ. ಕೇಳಿದ್ದನ್ನು ಕೊಡುವ ಮೂಲಕ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಹೋರಾಟವನ್ನು ಹತ್ತಿಕುತ್ತಿದೆ. ಹೇಗೆ ಆಳುಗಳ ನಡುವಿನಿಂದ ಎದ್ದು ಬಂದು ಧಣಿಯಾದವನಿಗೆ, ಮತ್ತೊಬ್ಬ ಆಳು ಕ್ರಾಂತಿ ಮಾಡಬಲ್ಲ ಎಂಬುದು ಗೊತ್ತಿತ್ತೋ, ಹಾಗೇ, ಜನರ ನಡುವಿನಿಂದ ಎದ್ದು ಬಂದ ನಾಯಕನೊಬ್ಬನಿಗೆ, ಇನ್ನೊಬ್ಬ ಕೂಡ ನಾಯಕ ಆಗಬಲ್ಲ ಎಂಬ ಭಯವಿರುತ್ತದೆ. ಅಂಥ ಕ್ರಾಂತಿಯನ್ನು, ದಂಗೆಯನ್ನು ಅಡಗಿಸುವುದಕ್ಕೆ ಅಂಥವರನ್ನು ಸಂತುಷ್ಟರನ್ನಾಗಿ, ಲೋಲುಪರನ್ನಾಗಿ ಆಮಿಷಕ್ಕೊಳಗಾದವರನ್ನಾಗಿ ಇಡಬೇಕು ಅನ್ನುವುದೂ ಗೊತ್ತಿರುತ್ತದೆ.
ಇವತ್ತು ಅದೇ ಆಗುತ್ತಿದೆ. ಯಾವುದೇ ಹೋರಾಟದ ಚರಿತ್ರೆಯನ್ನು, ವರ್ತಮಾನವನ್ನು ಮತ್ತು ಬದಲಾವಣೆಗೆ ಸಮಾನತೆಗೆ ತುಡಿಯುತ್ತಿರುವ ಜೀವಗಳ ದನಿಯನ್ನು ಕೇಳಿಸಿಕೊಳ್ಳಬೇಕಿದ್ದರೆ, ಇಂಥ ಸಂದಿಗ್ಧತೆಯ ದಾರಿಯಲ್ಲಿಯೇ ಸಾಗಬೇಕಾಗುತ್ತದೋ ಏನೋ?
ಆಕ್ರೋಶಕ್ಕೆ ರಚನಾತ್ಮಕತೆ, ಆವೇಶಕ್ಕೆ ಸಂವದೇನಾಶೀಲತೆ ಮತ್ತು ಪ್ರತಿಭಟನೆಯ ಕೊಡಲಿಗೆ ಸ್ಪಷ್ಟತೆಯ ಕಾವು ಇಲ್ಲದೇ ಹೋದರೆ ಎಲ್ಲವನ್ನೂ ಅನಗತ್ಯ ಅನುಮಾನದಿಂದ ನೋಡಲು ಆರಂಭಿಸುತ್ತೇವೆ. ಅದು ಹೋರಾಟದ ಹಾದಿಯನ್ನು ಮತ್ತಷ್ಟು ಗೊಂದಲಗೊಳಿಸುತ್ತದೆ ಅಷ್ಟೇ.






Fine line of thinking again. Congrats for that. Isn’t the entire equation based on supply to demand ratio? Dont we see very poor quality workers in prominent positions during demand and highly skilled persons being wasted when the supply is in surplus? This holds good for every aspect of life, equating humans to resources and breeding consumerism with people as commodities. When the choices are limited, concept of self-respect takes a side-line for most of the people. The fine line separating arrogance and self-respect is neither understood by most of the people nor taken kindly by most of the persons at power. Not sure if equality is a myth, but the wheel of time keep turing for sure; no one stays at the same place for ever.
Hmm … chendakkide baraha .. odda mele koodaa avana hattira hogi dainyadinda nilluva sthithi nenesidre sankatavenisthu …