ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ:ನರಕಾಸುರರ ಮುಂದೆ ಹೀಗೊಂದು ಕಿನ್ನರಿ …

-ಜೋಗಿ

ನಿಮ್ಮ ದೊಡ್ಡ ಸಮಸ್ಯೆ ಇದೇ. ನಿಮಗೆ ಸ್ಪಷ್ಟತೆ ಇಲ್ಲ. ಕವಿತೆಯನ್ನೇ ಬರೀರಿ, ಕತೆಯನ್ನೇ ಬರೀರಿ, ಅದು ಒಟ್ಟಾರೆಯಾಗಿ ಏನನ್ನೋ ಧ್ವನಿಸುತ್ತಿರಬೇಕು. ಬೇಂದ್ರೆಯವರ ಗೀತೆಗಳನ್ನು ಓದಿದರೆ ಪ್ರೇಮ ಮತ್ತು ಆಧ್ಯಾತ್ಮ, ಕುವೆಂಪು ಕಾದಂಬರಿಗಳಲ್ಲಿ ದಟ್ಟವಾದ ಸಾಮಾಜಿಕ ಪ್ರಜ್ಞೆ, ತೇಜಸ್ವಿಯವರ ಕತೆಗಳನ್ನು ತಮಾಷೆ ಮತ್ತು ವಿಸ್ಮಯ, ಅಡಿಗರ ಕವಿತೆಗಳಲ್ಲಿ ಅವಿರತ ಬಂಡಾಯ ಮತ್ತು ಪುರುಷೋತ್ತಮನಾಗುವ ಆಸೆ, ಚಿತ್ತಾಲರ ಕತೆಗಳಲ್ಲಿ ಮನುಕುಲದ ಬಗ್ಗೆ ಪ್ರೀತಿ, ಕಾಯ್ಕಿಣಿಯ ಕತೆಗಳಲ್ಲಿ ಸುಳಿಮಿಂಚು, ವಿವೇಕ ಶಾನುಭಾಗರ ಬರಹಗಳಲ್ಲಿ ಗಾಂಭೀರ್ಯ, ಖಾಸನೀಸರ ಎಲ್ಲಾ ಕತೆಗಳಲ್ಲೂ ಅನೂಹ್ಯ ಯಾತನೆ’ ಹೀಗೆ ಒಬ್ಬೊಬ್ಬರಿಗೂ ಒಂದೊಂದು ಸ್ಥಾಯೀಭಾವ ಇರುತ್ತದೆ.

ಅವರು ಅದನ್ನೇ ಉತ್ತಮಪಡಿಸುತ್ತಾ ಹೋಗುತ್ತಾರೆ. ಒಬ್ಬನೊಳಗಿರುವುದು ಒಂದೇ ಕತೆ. ಅದನ್ನೇ ಅವರು ಬೇರೆ ಬೇರೆ ಥರ ಹೇಳುತ್ತಿರುತ್ತಾನೆ. ವಾಲ್ಮೀಕಿ ಏನು ಬರೆದರೂ ಅಲ್ಲಿ ಸ್ಥಾಯಿಯಾಗಿರುವುದು ವಿರಹ, ವೇದವ್ಯಾಸರನ್ನು ಕಾಡಿದ್ದು ಯಾದವೀ ಕಲಹ, ಕುಮಾರವ್ಯಾಸನನ್ನು ಆವರಿಸಿಕೊಂಡದ್ದು ಸಖ್ಯ, ಕೆ ಎಸ್ ನರಸಿಂಹಸ್ವಾಮಿಯವರನ್ನು ತುಂಬಿಕೊಂಡಿದ್ದದ್ದು ಸೌಖ್ಯ ನಿಮಗ್ಯಾರಿಗೂ ಅಂಥದ್ದೊಂದು ನಿರಂತರವಾದ ಸ್ಥಾಯಿಯಾದ ಭಾವವೇ ಇಲ್ಲ.

ಇವತ್ತು ಬಂಡಾಯ ಅನ್ನುತ್ತೀರಿ, ನಾಳೆ ಮನುಷ್ಯಪ್ರೀತಿ ಅನ್ನುತ್ತೀರಿ, ನಾಡಿದ್ದು ಕ್ರಾಂತಿ ಎನ್ನುತ್ತೀರಿ, ಮತ್ತೊಂದು ದಿನ ಬಂದು ಪರಿಸರ ಪ್ರೇಮ ಎಂದು ಮಾತಾಡುತ್ತೀರಿ. ಅವೆಲ್ಲವೂ ಒಂದೇ ನಿಜ. ಆದರೆ ನೀವು ಅದನ್ನು ಬರೆಯುತ್ತಿರುವ ಕ್ರಮದಲ್ಲೇ ಏನೋ ತಪ್ಪಿದೆ.’

ಹಾಗಂತ ಮೂರು ವರ್ಷಗಳ ಹಿಂದೆ ಕವಿತೆ ತಂದುಕೊಟ್ಟ ಹುಡುಗನ ಮೇಲೆ ಕೂಗಾಡಿದ್ದೆ. ಅವನು ಕವಿತೆಗಳನ್ನು ಓದಿ ಅಂತ ಒಂದೇ ಸಮನೆ ಪೀಡಿಸತೊಡಗಿದ್ದ. ಅವನ ಕವಿತೆಗಳಲ್ಲಿ ಎಷ್ಟು ಹುಡುಕಾಡಿದರೂ ಖುಷಿಯಾಗುವಂಥದ್ದು ಏನೂ ಸಿಕ್ಕಿರಲಿಲ್ಲ. ಅವು ನವೋದಯ, ನವ್ಯ, ಬಂಡಾಯ ಮತ್ತು ದಲಿತ ಕವಿತೆಗಳ ಮಿಶ್ರಣದಂತಿದ್ದವು.

ಇದರಲ್ಲಿ ನಿನ್ನದು ಯಾವುದು ಹೇಳು’ ಎಂದು ರೇಗಿದ್ದೆ. ನಿನಗೆ ನಿಜಕ್ಕೂ ಸಾಮಾಜಿಕವಾಗಿ ಬದಲಾವಣೆ ಆಗಬೇಕು ಅನ್ನಿಸಿದೆಯಾ? ಎಂಥಾ ಬದಲಾವಣೆ ಬೇಕೆಂದು ನೀನು ಬಯಸುತ್ತಿದ್ದೀಯಾ? ಈ ದೇಶದಲ್ಲಿ ರಾಜಕೀಯವಾಗಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ನಿನಗೆ ಯಾವತ್ತಾದರೂ ಅನ್ನಿಸಿದ್ದುಂಟಾ? ರಾಜಕೀಯವನ್ನೇ ನಿರಾಕರಿಸಿದರೆ ಪ್ರಗತಿಗೆ ಪೂರಕವಾದ ಮತ್ತೊಂದು ವ್ಯವಸ್ಥೆ ನಮ್ಮಲ್ಲಿದೆಯಾ?

ಒಂದು ಕಾಲದಲ್ಲಿ ಇಂಥ ಪ್ರಶ್ನೆಗಳು ನಮಗೆಲ್ಲ ಮೂಡುತ್ತಿದ್ದವು. ಕೆಲಸ ಸಿಗುವ ಭರವಸೆ ನಮಗಂತೂ ಇರಲಿಲ್ಲ. ನಾವು ಓದುತ್ತಿದ್ದ ದಿನಗಳಲ್ಲಿ ಅನುಭವಿಸಿದ ತಲ್ಲಣಗಳನ್ನೋ ಆತಂಕಗಳನ್ನೋ ಈಗಿನ ವಿದ್ಯಾರ್ಥಿಗಳು ಅನುಭವಿಸುತ್ತಿಲ್ಲ ಎಂಬುದು ಅವರ ಮಾತಿನಿಂದಲೇ ವ್ಯಕ್ತವಾಗುತ್ತಿತ್ತು. ಅವರ ಸಂತೋಷಗಳೇ ಬೇರೆ, ಸುಖಗಳೇ ಬೇರೆ, ರೋಚಕತೆಗಳೇ ಬೇರೆ. ತೇಜಸ್ವಿಯವರ ತುಕ್ಕೋಜಿ’ ಕತೆಯನ್ನು ಓದಿದಾಗ, ಅವನತಿ’ ಕತೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದಾಗ ನಮಗೆ ಇಡೀ ಭಾರತದ ಚಿತ್ರವೇ ಕಣ್ಮುಂದೆ ಬಂದಂತಾಗುತ್ತಿತ್ತು.

ಅದೇ ಹೊತ್ತಿಗೆ ಕೆ ವಿ ಸುಬ್ಬಣ್ಣ ಮುಂತಾದವರು ಲೋಹಿಯಾ ಬರೆದ ರಾಜಕೀಯದ ನಡುವೆ ಬಿಡುವು’ ಸಂಕಲನದ ಲೇಖನಗಳನ್ನು ಅನುವಾದಿಸಿಕೊಟ್ಟಿದ್ದರು. ಲಂಕೇಶರು ಅಳುವ ನಾಯಕನನ್ನು ನಂಬಬಾರದು ಎಂದಿದ್ದರು. ಕಾಫಿ ಬೆಳೆಯನ್ನು ಮುಂದಿಟ್ಟುಕೊಂಡು ತೇಜಸ್ವಿ ನಮಗೆಲ್ಲ ಇಡೀ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ, ರೈತ ಹೇಗೆ ಎಲ್ಲಾ ಕಡೆಯಲ್ಲೂ ಸೋಲುತ್ತಿದ್ದಾನೆ ಎನ್ನುವುದನ್ನು ಅರ್ಥವಾಗುವಂತೆ ವಿವರಿಸಿದ್ದರು.

ಆ ಕಾಲವೇ ಹಾಗಿತ್ತು. ಯಾವುದನ್ನೂ ಕೂಡ ನಂಬಬೇಡ. ಎಲ್ಲವನ್ನೂ ಅನುಮಾನಿಸು ಎಂಬುದನ್ನು ನಮಗೆ ಅರ್ಥಮಾಡಿಸಲು ಹೊರಟವರ ದೊಡ್ಡ ಪಂಗಡವೇ ಜೊತೆಗಿತ್ತು. ಹೀಗಾಗಿ ಬರೆಯುವುದಕ್ಕೆ ನಾವು ಅಂಜುತ್ತಿದ್ದೆವು. ಎಲ್ಲರಿಗೂ ಲೇಖಕರಾಗಬೇಕು ಅಂತ ಅನ್ನಿಸುತ್ತಲೇ ಇರಲಿಲ್ಲ. ಓದುಗ ಕೂಡ ಬರಹಗಾರನಿಗೆ ಸಮಾನ ಎಂಬ ಗೌರವ ನಮ್ಮಲ್ಲಿ ಮೂಡುವಂತೆ ಬರಹಗಾರರೂ ನಮ್ಮ ಅರಿವನ್ನು ಹೆಚ್ಚಿಸುತ್ತಿದ್ದರು.

ಅಂಥ ಕೆಲಸವನ್ನು ಮಾಡಿದವರು ಮಾಸ್ತಿ. ಅವರ ಕತೆಗಳನ್ನು ಓದುತ್ತಾ ಇದ್ದಾಗ ನಮ್ಮ ಸುತ್ತಲ ಜಗತ್ತಿನ ವಿಕ್ಷಿಪ್ತ ಸಂಗತಿಗಳು ಅರ್ಥವಾಗುತ್ತಿದ್ದವು. ಯಾರೋ ಎಲ್ಲೋ ಸಿಕ್ಕಿ ಈ ಕತೆಯನ್ನು ಹೇಳಿದರು ಎಂದೇ ಶುರುವಾಗುತ್ತಿದ್ದ ಅವರ ಕತೆಗಳು, ಅವನು ಹಾಗೆ ಹೇಳಿದ. ನಿಜವಾಗಿ ನಡೆದದ್ದು ಏನೋ ನನಗೆ ಗೊತ್ತಿಲ್ಲ ಎಂಬ ವಿನಯದಲ್ಲಿ ಅಪನಂಬಿಕೆಯಲ್ಲಿ ಮತ್ತು ವಿಷಾದದಲ್ಲಿ ಕೊನೆಯಾಗುತ್ತಿತ್ತು. ಆ ವಿಷಾದ ಕೂಡ ನಮ್ಮನ್ನು ಅರಳಿಸುವ ಸಂಗತಿಯಾಗಿತ್ತಲ್ಲವೇ ಎಂದು ಒಮ್ಮೊಮ್ಮೆ ಖುಷಿಯಾಗುತ್ತದೆ.

ನನ್ನ ಮುಖೋದ್ಗತ ನಿಮ್ಮ ಹೃದ್ಗತವೇ ಆದ ದಿನ ಸುದಿನ’ ಹಾಗಂತ ಗಂಗಾಧರ ಚಿತ್ತಾಲರು ಬರೆದದ್ದನ್ನು ಓದಿ ಪುಳಕಿತರಾಗಿದ್ದೆವು. ಯಶವಂತ ಚಿತ್ತಾಲರ ಕತೆಯಲ್ಲಿ ಅಲ್ಲಲ್ಲಿ ಪ್ರಸ್ತಾಪವಾಗುವ ಇನ್ನೂ ಓದಿರದ ಕಾಗದ, ಅದನ್ನು ಕೊನೆಯವರೆಗೂ ಓದದ ನಾಯಕ, ಬಾವಿಯ ಬಳಿ ಧುತ್ತೆಂದು ಪ್ರತ್ಯಕ್ಷವಾಗುವ ಪೊತ್ತೆಮೀಸೆಯ ಮನುಷ್ಯ, ಮುಚ್ಚಿದ ಬಾಗಿಲನ್ನು ಸರಿ ಮಾಡುವುದಕ್ಕೆ ಬಂದವನ ಕಾಮೋತ್ಕರ್ಷ, ಆ ಕತೆಗೆ ಸೆರೆ’ ಎಂದು ಹೆಸರಿಡುವ ಸಾಂಕೇತಿಕತೆ, ಬುಡಾಣಸಾಬರು ಬಹಳ ಮುದುಕರು.. ಎಂದು ಹಾಡುತ್ತಾ ಭಯವನ್ನು ಮೀರಲೆತ್ನಿಸುವ ಹುಡುಗ, ಕತೆಯಲ್ಲಿ ಬಂದವನು ಮನೆಗೂ ಬಂದು ಕದತಟ್ಟುವ ಪರಿ ಇವೆಲ್ಲವನ್ನೂ ಓದಿಮುಗಿಸುತ್ತಿದ್ದ ಹಾಗೇ, ನಿಗೂಢ ಮನುಷ್ಯರು’ ಎಂಬ ವಿಚಿತ್ರ ಭಯ ಹುಟ್ಟಿಸುವ ಕತೆಯೊಂದನ್ನು ತೇಜಸ್ವಿ ಬರೆದಿರುತ್ತಿದ್ದರು.

ಅಲ್ಲಿ ಕಾಡಿಗೆ ಹಳೇ ಕಾರಲ್ಲಿ ಪ್ರಯಾಣ ಹೊರಟವರು, ಆ ಮಳೆಯ ರಾತ್ರಿ, ಹೂತು ಹೋದ ಕಾರು, ಕಾಡಿನ ನಡುವೆ ಒಂಟಿ ಮನೆ, ಅಲ್ಲೊಬ್ಬ ನಿಗೂಢ ಮನುಷ್ಯ. ರಾತ್ರಿ ಯಾರೋ ಓಡಾಡಿದಂತೆ, ಕೆಮ್ಮಿದಂತೆ, ತನ್ನನ್ನು ಅಣಕಿಸಿದಂತೆ ಅನ್ನಿಸುವ ವಿಸ್ಮಯ, ಕುಸಿದುಬೀಳುವ ಉಗ್ರಗಿರಿ- ಹೀಗೆ ಅದು ಊಹೆಗೂ ನಿಲುಕದ ಮತ್ತೊಂದು ಜಗತ್ತು. ಕಾನೂರು ಹೆಗ್ಗಡಿತಿ ಕಾದಂಬರಿಯ ಹಂದಿಬೇಟೆಯೂ ಹಾಗೆಯೇ. ಮಲೆಗಳಲ್ಲಿ ಮದುಮಗಳು’ ಓದಿ ಮುಗಿಸಿದ ನಂತರ ಇಡೀ ಮಲೆನಾಡು ಬೇರೆಯೇ ಆಗಿ ಕಾಣಿಸುತ್ತಿತ್ತು.

ದೇವರು ರುಜು ಮಾಡಿದನು, ಕವಿ ಪರವಶನಾಗುತ ಅದ ನೋಡಿದನು ಎಂಬ ಸಾಲನ್ನು ಓದಿ ಸಂತೋಷಪಡುತ್ತಿದ್ದ ಹಾಗೇ, ಅತ್ತಲಿಂದ ಕೀರ್ತಿನಾಥ ಕುರ್ತಕೋಟಿಯವರು ಆ ಕವಿತೆಯೇ ಸರಿಯಿಲ್ಲ. ದೇವರು ರುಜು ಮಾಡಿದನು ಅನ್ನುವುದು ಕವಿತೆ. ಅದ ಪರವಶನಾಗುತ ಕವಿ ನೋಡಿದನು ಎನ್ನುವುದು ಕವಿತೆ ಅಲ್ಲ. ಎಲ್ಲಿ ಕವಿ ಕಾಣುವಂತೆ ಹಾಜರಿರುತ್ತಾನೋ ಅದು ಕವಿತೆಯಲ್ಲ ಎಂದು ನಮ್ಮ ಅರಿವನ್ನೂ ವಿಸ್ತರಿಸುತ್ತಿದ್ದರು. ಹಾಗಂದ ಮಾತ್ರಕ್ಕೆ ಆ ಕವಿತೆಯನ್ನು ನಾವು ತಿರಸ್ಕರಿಸುತ್ತಲೂ ಇರಲಿಲ್ಲ.

ಅಪ್ಪಟ ನಾಸ್ತಿಕರಾಗಿದ್ದ ನಮ್ಮನ್ನು ಕೂಡ ಅಹುದಹುದೆನುವಂತೆ ಮಾಡಬಲ್ಲ ಶಕ್ತಿ ಕುವೆಂಪು ಕವಿತೆಗಳಿಗಿತ್ತು. ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ’ ಎಂಬ ಸಾಲು ದೇವರನ್ನೂ ಮೀರಿ, ಶಿವನನ್ನೂ ಮೀರಿ ಮತ್ತೇನನ್ನೋ ಧ್ವನಿಸಿ ಪುಳಕಿತಗೊಳಿಸುತ್ತಿತ್ತು. ಹಾಗೇ, ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು’ ಎಂದು ಕೆ ಎಸ್ ನ ಬರೆದಾಗ ನಮ್ಮೂರ ಹೊಲದ ಮಾಲಿಕ ಇದ್ದಕ್ಕಿದ್ದ ಹಾಗೆ ಜೋಯಿಸನಂತೆ ಕಾಣಿಸುತ್ತಿದ್ದ. ಎಲ್ಲ ಕೆರೆಗಳೂ ಸಿರಿಗೆರೆಯಾಗುತ್ತಿದ್ದವು. ಹೀಗೆ ನಮ್ಮೂರನ್ನೂ ನಮ್ಮ ಮನಸ್ಸನ್ನೂ ನಮ್ಮ ಕಲ್ಪನೆಯನ್ನೂ ಕವಿಗೆ ಒಗ್ಗಿಸಿಕೊಂಡು ಕವಿತೆಗೆ ಒಗ್ಗಿಸಿಕೊಂಡು ಅದನ್ನು ನಾವು ಮೈದುಂಬಿಕೊಳ್ಳುವ ಖುಷಿಯನ್ನು ಅನುಭವಿಸುತ್ತಿದ್ದೆವು.

ಅರಿವೆ ಇರಲಿಲ್ಲ, ಪರಿವೆ ಇರಲಿಲ್ಲ’ ಹಾಗಂತ ಪೇಜಾವರ ಸದಾಶಿವರಾಯರು ಬರೆದಾಗ ಮತ್ತೊಂದು ಜಗತ್ತು

ತೆರೆದುಕೊಂಡಿತ್ತು. ಅದನ್ನು ವಿಸ್ತರಿಸಿದ್ದು ಕ್ಲಿಪ್ಜಾಯಿಂಟ್’ ಕತೆ. ಆ ಕತೆಯ ಜಗತ್ತು ನಮ್ಮದಾಗಿರಲಿಲ್ಲ. ಆದರೆ ಬೆಂಗಳೂರು ಬಹುಶಃ ಹಾಗಿದ್ದೀತೇನೋ ಅನ್ನಿಸುವಂತಿತ್ತು. ಮೌನಿ’ ಕತೆಯಲ್ಲಿ ಬರುವ ಅಪ್ಪಣ್ಣಭಟ್ಟರೂ ಕುಪ್ಪಣ್ಣಭಟ್ಟರೂ ನಮ್ಮೂರಲ್ಲೇ ದಿನಾ ಎದುರಾಗುತ್ತಿದ್ದರು. ಇವೆಲ್ಲ ಶ್ರೀಮದ್ಗಾಂಭೀರ್ಯದಿಂದ ನಮ್ಮನ್ನು ಒಳಗೊಳ್ಳುತ್ತಿದ್ದರೆ ಭುವನೇಶ್ವರಿ ಹೆಗಡೆ, ಡುಂಡಿರಾಜ್ ಮುಂತಾದವರು ಮತ್ತೊಂದು ದಿಕ್ಕಿನಿಂದ ನಮ್ಮ ಲವಲವಿಕೆಯನ್ನು ಜೀವಂತವಾಗಿರಿಸುತ್ತಾ ಬರುತ್ತಿದ್ದರು.

ಜೊತೆಗೇ ಬಿಜಿಎಲ್ ಸ್ವಾಮಿ ಕಾಡಿಗೆ ಹೋಗಿ ಬಂದ ಕತೆಯನ್ನು ಹೇಳಿ ನಗಿಸಿದರೆ, ನವರತ್ನರಾಮರಾಯರ ಕೆಲವು ನೆನಪುಗಳು ಮತ್ತೊಂದು ಜಗತ್ತನ್ನು ಕಣ್ಮುಂದೆ ಇಳಿಸುತ್ತಿತ್ತು. ಅವೆರಡನ್ನೂ ಮುಗಿಸುವ ಹೊತ್ತಿಗೆ ರಂಗಣ್ಣನ ಕನಸಿನ ದಿನಗಳಲ್ಲಿ ನಾವು ಸಂಚರಿಸುತ್ತಿದ್ದೆವು.

ದೀಪಾವಳಿ ಬಂತೆಂದರೆ ನಮಗೆ ಸುಗ್ಗಿ. ಮನೆಗ ದೀಪಾವಳಿ ವಿಶೇಷಾಂಕ ಬರುತ್ತದೆ ಎಂಬ ಸಂಭ್ರಮ. ಅದರ ತುಂಬ ಸೊಗಸಾದ ಕತೆಗಳೂ ಕವಿತೆಗಳೂ ತುಂಬಿಕೊಂಡು ನಮ್ಮನ್ನು ಕನಿಷ್ಟ ಮೂರು ತಿಂಗಳ ಕಾಲ ನೆಮ್ಮದಿಯಾಗಿಟ್ಟಿರುತ್ತಿದ್ದವು. ಅದನ್ನು ಕೊಳ್ಳುವುದಕ್ಕೆಂದೇ ವರ್ಷಪೂರ್ತಿ ಹಣ ಕೂಡಿಡುವುದೂ ಇತ್ತು. ಹಾಗೇ, ಹಳೆಯ ವಿಶೇಷಾಂಕಗಳನ್ನೂ ಮತ್ತೆ ಮತ್ತೆ ಓದುವುದೂ ಇತ್ತು. ವಿವೇಕ್ ಶಾನಭಾಗ, ಜಯಂತ ಕಾಯ್ಕಿಣಿ ಪರಿಚಯವಾದದ್ದೇ ವಿಶೇಷಾಂಕಗಳ ಮೂಲಕ.

ದೀಪಾವಳಿಯನ್ನು ಉಲ್ಲಸಿತಗೊಳಿಸುವಲ್ಲಿ ಹಿರಿಯ ಲೇಖಕರ ಪಾತ್ರವೂ ಕಡಿಮೆ ಏನಿರಲಿಲ್ಲ. ನರಕಾಸುರನ ಕುರಿತು ಬನ್ನಂಜೆ ಗೋವಿಂದಾಚಾರ್ಯರು ಸಂಸ್ಕೃತ ಕಾವ್ಯಗಳನ್ನು ಉಲ್ಲೇಖಿಸಿ ಬರೆಯುತ್ತಿದ್ದರು. ಲಂಕೇಶರು ನಮ್ಮೊಳಗಿನ ನರಕಾಸುರನ ಬಗ್ಗೆ ಬರೆದು ಬೆಚ್ಚಿ ಬೀಳಿಸುತ್ತಿದ್ದರು. ಅವೆರಡನ್ನೂ ಓದಿ ಪುಟ ತಿರುಗಿಸಿದರೆ ಅಲ್ಲೊಂದು ಲಯಬದ್ದ ಸಾಲು; ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೇ… ಎಲ್ಲಿ ಜಾರಿತೋ…

ಕೇವಲ ಕವಿಗಳಷ್ಟೇ ಅಲ್ಲ. ಲೇಖಕರಷ್ಟೇ ಅಲ್ಲ. ಇದ್ದಕ್ಕಿದ್ದಂತೆ ಸಂಸ್ಕಾರ’ ಸಿನಿಮಾ  ಬಂತು. ಅಮೇಲೆ ಕಾಡು’. ಅದಾದ ನಂತರ ಒಂದಾನೊಂದು ಕಾಲದಲ್ಲಿ’ . ಇವತ್ತಿಗೂ ನೋಡಲು ಸಾಧ್ಯವಾಗದ, ನೋಡಬೇಕೆಂಬ ಆಸೆಯನ್ನು ಬಿಟ್ಟುಕೊಡದ ತಬ್ಬಲಿಯು ನೀನಾದೆ ಮಗನೆ’, ಭರಣರ ಗ್ರಹಣ’, ಆಮೇಲೆ ಬಂದ ಅನ್ವೇಷಣೆ’. ಇವನ್ನು ಸವಿಯುವ ಹೊತ್ತಿಗೇ ಕಾಕನಕೋಟೆ, ಎಲ್ಲಿಂದಲೋ ಬಂದವರು. ಅವುಗಳ ಸೊಗಸಾದ ಹಾಡುಗಳು. ಅಷ್ಟು ಸಾಲದು ಎಂಬಂತೆ ಹೊರಬಂದ ನಿಸಾರ್ ಅಹಮದ್ ಅವರ ಹಾಡುಗಳ ಕೆಸೆಟ್ಟು: ನಿತ್ಯೋತ್ಸವ. ಮತ್ತದೇ ಬೇಸರ ಅದೇ ಸಂಜೆ, ಅದೇ ಏಕಾಂತ ಅಂತ ಹಾಡಿಕೊಂಡರೂ ನಾವು ಏಕಾಂಗಿಗಳಾಗಿರಲೇ ಇಲ್ಲ.

ಆ ಸಂಭ್ರಮ ಈಗೆಲ್ಲಿದೆ ಎಂದು ಮೊನ್ನೆ ಮಾತಾಡಿಕೊಂಡೆವು. ಒಂದು ಭಾಷೆಯನ್ನು ಉಳಿಸುವುದು ಹಾಗೆ. ಭಾಷೆಯೊಂದು ವಿಶಿಷ್ಟವಾದ ಕರ್ತೃತ್ವಶಕ್ತಿಯಿದೆ. ಅದು ಇಡೀ ಜಗತ್ತಿನ ಸಂತೋಷವನ್ನು ನಮ್ಮ ಮುಂದೆ ತಂದಿಡಬಲ್ಲದು. ಹಾಗೆ ತಂದಿಡುವಂಥ ಕೆಲಸವನ್ನು ಮಾಡಬೇಕಾದವರು ನಮ್ಮ ಕವಿಗಳು, ಕತೆಗಾರರು, ನಿರ್ದೇಶಕರು, ಗಾಯಕರು, ಸಂಗೀತ ಸಂಯೋಜಕರು.

ಅವರು ಅದನ್ನು ಮಾಡದೇ ಹೋದಾಗ ಕನ್ನಡವನ್ನು ಉಳಿಸುವ ಬೇರೆ ಬೇರೆ ಹೋರಾಟಗಳು ಬೇಕಾಗುತ್ತವೆ. ಸಾವಿರ ಹೋರಾಟಗಳಿಗಿಂತ ಒಬ್ಬ ರಾಜ್ಕುಮಾರ್ ಶ್ರೇಷ್ಠ, ಸಾವಿರ ಕ್ರಾಂತಿಗಿಂತ ಒಬ್ಬ ಕುವೆಂಪು ದೊಡ್ಡವರು, ಸಾವಿರ ಯುದ್ಧಕ್ಕಿಂತ ಒಬ್ಬ ಬುದ್ಧ ಬದಲಾವಣೆಯ ಹರಿಕಾರ ಎಂಬುದು ಅರ್ಥವಾಗದ ಹೊರತು ನಿಜಕ್ಕೂ ಹೊಸದೇನೂ ಹುಟ್ಟಲಾರದು.

‍ಲೇಖಕರು avadhi

20 November, 2010

7 Comments

  1. Keshav

    ಜೋಗಿ,

    ನಾನು ಮಾಡಿದ್ದೆಲ್ಲ ನಿಮಗೆ ಗೊತ್ತಾದದ್ದು ಯಾವಾಗ? ನಾನು ನಿಮ್ಮನ್ನು ಒಮ್ಮೆಯೂ ಭೇಟಿಯಾಗಿಲ್ಲ, ಮಾತಾಡಿಸಿಲ್ಲ!

    ಬೇಂದ್ರೆಯವರ ’ಜೋಗಿ’ಯ ಅರ್ಥ ಹುಡುಕಲು ಪಬ್ಲಿಕ್ ಲೈಬ್ರರಿಯ ಎಲ್ಲ ವಿಮರ್ಶೆ ಪುಸ್ತಕಗಳನ್ನು ಜಾಳಾಡಿಸಿದ್ದೆ.

    ಕುವೆಂಪು ಅವರ ಕವಿತೆ ಓದುವಾಗ ಸಂಸ್ಕೃತ ಡಿಕ್ಷನರಿ ಹಿಡಿದೇ ಕೂರುತ್ತಿದ್ದೆ. ಅ ಎರಡೂ ಕಾದಂಬರಿಗಾಳನ್ನು ಓದುವಾಗ ಮೂರು ದಿನ ಹುಷಾರಿಲ್ಲವೆಂದು ಕಾಲೇಜಿಗೆ ಚಕ್ಕರ್ ಹೊಡೆದು ದಿನ ರಾತ್ರಿ ಮಲಗಿಕೊಂಡೇ ಓದಿ ಮುಗಿಸಿದ್ದೆ.

    ತೇಜಸ್ವಿಯವರ ’ಕರ್ವಾಲೋ’ ಬಗ್ಗೆ ತಿಂಗಳುಗಟ್ಟಲೇ ಸಿಕ್ಕ ಸಿಕ್ಕವರ ಹತ್ತಿರ ಮಾತಾಡುತ್ತಿದ್ದೆ (ನನ್ನನ್ನು ಹುಚ್ಚ ಅಂದುಕೊಂಡಿದ್ದರೋ ಏನೋ?)

    ಅಡಿಗರ ’ಭೂಮಿಗೀತ’ ಮತ್ತು ’ಹಿಮಗಿರಿಯ ಕಂದರ’ಗಳನ್ನು ಪರೀಕ್ಷೆಗೆ ಓದುವಂತೆ ವಾರಕ್ಕೆರೆಡು ಸಲ ಓದಿ ಹೊಸ ಅರ್ಥ ಹೊಳೆದು ಪುಳಕಿತನಾಗುತ್ತಿದ್ದೆ.

    ಚಿತ್ತಾಲರ ’ಕತೆಯಾದಳು ಹುಡುಗಿ’ ಕಥಾಸಂಕಲನವನ್ನು ಓದಿ, ವಾರಗಟ್ಟಲೇ ಸನ್ನಿ ಹಿಡಿದವನಂತೆ ಆಗಿಬಿಟ್ಟು, ಅದೇ ಜೋಶಿನಲ್ಲಿ ’ನನ್ನ ಕತೆ’ ಎಂಬ ಹೆಸರಿನ ಕತೆ ಬರೆದು, ’ತರಂಗ’ಕ್ಕೆ ಕಳಿಸಿ, ’ತಿಂಗಳ ಅತ್ಯುತ್ತಮ ಕತೆ’ ಎಂದು ಪ್ರಕಟವೂ ಆಗಿ ಕಂಗಾಲಾಗಿದ್ದೆ.

    ಖಾಸನೀಸರ ’ತಬ್ಬಲಿಗಳು’ ಕತೆ ನನ್ನ ಸುತ್ತ ಮುತ್ತ ಎಲ್ಲ ಕಡೆ ನಡೆಯುತ್ತಿರುವಂತೆ ಕಾಣುತ್ತಿತ್ತು.

    ಇವತ್ತು ಎಲ್ಲ ಬದಲಾಗಿದೆ. ಆಧುನಿಕತೆ ಮತ್ತು ಪಾಶ್ಚಾತ್ಯೀಕರಣದ ಒಂದಿನ ಭಾರತದಲ್ಲಿ ಇಂಗ್ಲೀಷ್ ಶಿಕ್ಷಣದ ಅನಿವಾರ್ಯತೆಯ ನಡುವೆ ಸರಕಾರ ಹೇರಿರುವ ಕಡ್ಡಾಯ ಕನ್ನಡ (ಒಂದು ಸಬ್ಜೆಕ್ಟು)ವನ್ನು ಓದುವ ಇಂದಿನ ನಗರೀಕರಿಗೆ ಹಳೆಗನ್ನಡ-ನಡುಗನ್ನಡ-ಹೊಸಗನ್ನಡ ಎಂದರೂ ಅಷ್ಟೇ, ನವೋದಯ- ನವ್ಯ-ಬಂಡಾಯ- ದಲಿತ ಎಂದರೂ ಅಷ್ಟೇ…ಎರಡೂ ಅರ್ಥವಾಗುವುದಿಲ್ಲ, ಅಥವಾ ಅವೆಲ್ಲ ಅರ್ಥವಿಲ್ಲದವುಗಳು.

    ಹಾಸ್ಟೇಲಿನ ಒಂದು ಚಿಕ್ಕ ಕೋಣೇಯಲ್ಲಿ ಕೂತು ಶಾಂತಿನಾಥ ದೇಸಾಯಿಯವರ ‘ಕ್ಷಿತಿಜ‘ ಅಥವಾ ಅನಂತಮೂರ್ತಿಯವರ ‘ಭಾರತೀಪುರ‘ ಓದುತ್ತ ನಮ್ಮ ಹುಳುಕನ್ನೂ ಆಧುನಿಕತೆಯ ಹುಳುಕನ್ನೂ, ಹಳ್ಳಿಯ ಜೊತೆ ‘ಫಾರೀನ್‘ನನ್ನೂ ಒಟ್ಟೊಟ್ಟಿಗೆ ಒಂದಿಷ್ಟೂ ಸರಳಗೊಳಿಸದೇ ಅದರ ಪೂರ್ಣ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳಲು ಹೆಣಗುತ್ತಿದ್ದೆವು.

    ಪ್ರತಿವಾರ ಯಾವ್ಯಾವುದೋ ಕತೆ-ಕಾವ್ಯಗಳ ಕುರಿತು ಬರೆಯುತ್ತಿದ್ದ ಸ್ವಗತಗಳು, ಬಸವಣ್ಣನನ್ನೂ ಮಾರ್ಟಿನ್ ಲೂಥರ್ ನನ್ನೂ ಒಂದೇ ತಕ್ಕಡಿಯಲ್ಲಿಟ್ಟು ಬರೆಯಬಲ್ಲ ಟಿಪ್ಪಣೆ, ಮಾಸ್ತಿಯನ್ನೂ ಚಿತ್ತಾಲರಷ್ಟೇ ಆಪ್ತವಾಗಿಸಬಲ್ಲ ಬರಹಗಳು, ಲೇಖಕರ ಜೊತೆಗಿನ ಜಗಳಗಳು, ರಾಜಕೀಯದವರೊಡನೆ ಇಳಿದ ಕದನಗಳು….

    ಯಾವುದಕ್ಕೂ ಒಂದು ಕಡೆ ಒಂಟಿಕೊಳ್ಳದಂತೆ, ನಿಂತ ನೀರಾಗದಂತೆ ತಡೆಯುವ ಒಂದು ಸಂವಹನ ಕ್ರಿಯೆಯಲ್ಲಿ ಇದ್ದಂತೆ ಭಾಸವಾಗುತ್ತಿತ್ತು. ತರಂಗ-ಸುಧಾಗಳು, ಮಯೂರ-ತುಷಾರಗಳು, ಯುಗಾದಿ-ದೀಪಾವಳಿ ವಿಶೇಷಾಂಕಗಳು ನಮ್ಮೊಳಗಿನ ಜೀವಂತಿಕೆ ಆರಿ ಹೋಗದಂತೆ ಕಾಯ್ದುಕೊಂಡಿದ್ದವು.

    ನೀವೇ ಎಲ್ಲ ಬರೆದಾಗಿದೆಯಲ್ಲ!

    ನನ್ನೆಲ್ಲ ನೆನಪುಗಳನ್ನು ಇಷ್ಟು ಚೆನ್ನಾಗಿ ಬರೆದದ್ದಕ್ಕೆ ತುಂಬ ಥ್ಯಾಂಕ್ಸ್!

  2. harsha

    ಜೋಗಿ ಸರ್ ಹಾಗೂ ಕೇಶವ ಸರ್, ನಿಮ್ಮಿಬ್ಬರ ಬರಹಗಳನ್ನೂ ಓದಿದಾಗ ನಿಮ್ಮ ಆ ಕಾಲದ ಬಗ್ಗೆ ಮತ್ತು ನಿಮ್ಮ ಬಗ್ಗೆ ಸಕತ್ ಹೊಟ್ಟೆಕಿಚ್ಚಾಗುತ್ತಿದೆ.

  3. savitri

    Sir, kavithe mattu barahagala bagge vyaktapadisiruva tamma abhiprayagallige taledoogalebeku.

  4. usha

    ತುಂಬಾ ಸಕತ್ತಾದ ವಿಶ್ಲೇಷಣೆ! ಇಷ್ಟವಾಯಿತು.

  5. H.S. Raghavendra Rao

    ಪ್ರಿಯ ಜೋಗಿ ಅವರೇ,
    ಈ ಲೇಖನ ಬಹಳ ಚೆನ್ನಾಗಿದೆ. ಒಂದು ತಲೆಮಾರಿನ ತಲ್ಲಣ-ಉಲ್ಲಾಸಗಳನ್ನು ಸಮರ್ಥವಾಗಿ ಹಿಡಿದಿಟ್ಟಿದೆ. ಅದು ನಮ್ಮ ತಲೆಮಾರು ಕೂಡ ಹೌದು. ಇವುಗಳ ಸಂಗಡವೇ ಸಾಮಾಜಿಕ ಎಚ್ರರವನ್ನೂ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ರಸಿಕರು ಮತ್ತು ಸಂವೇದನಶೀಲರು ಒಟ್ಟಿಗೆ ಆಗಬೇಕು. ಹುಸಿಯಲ್ಲದ ಕ್ರಿಯಾಶಿಲತೆಯೂ ಬೇಕಲ್ಲವೇ?
    ಎಚ್.ಎಸ್. ರಾಘವೇಂದ್ರರಾವ್

  6. ಡಾ.ಎಸ್.ವಿ.ಕಶ್ಯಪ್

    odabekembuva makkalige nimma lekhna sahityabysakke darideepvagide chennagide

  7. ashok shettar

    ೨೫-೩೦ ವರ್ಷಗಳ ಹಿಂದಿನ ನನ್ನ ಮನಸ್ಥಿತಿಯ ಬೇಸರ, ಹುರುಪು,ಸಣ್ಣ-ಪುಟ್ಟ ಸಂತಸ, ನಿರೀಕ್ಷೆ, ಕನಸು,ಮೆಚ್ಚುಗೆ,ಅನುಮಾನಗಳ, ನೆನಪುಗಳ ಸಂದಿಗೊಂದಿಗಳಲ್ಲಿ ಒಂದು ಸುತ್ತು ಸುತ್ತಿ ಬಂದಂತಾಯಿತು.ಚೆನ್ನಾಗಿ ಬರೆದಿದ್ದಾರೆ ಜೋಗಿಯವರು.ಕೇಶವ ಕುಲಕರ್ಣಿಯವರ ಪ್ರತಿಕ್ರಿಯೆ ಕೂಡ ಅಷ್ಟೇ ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading