ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ:ಐವತ್ತು ಮುಗಿಸಿದ ಆಪ್ತಮಿತ್ರನ ನೆನೆಯುತ್ತಾ..

ಸುಮ್ಮನೆ ನೋಡಿದರೆ ಅಪ್ಪಟ ಕಮ್ಯುನಿಸ್ಟ್ ಕಾರ್ಯಕರ್ತನಂತೆ ಕಾಣಿಸುವ ಈ ಗೆಳೆಯ ಪರಮ ಮೌನಿ. ಜಗದ ಗೊಂದಲ ಬೇಡ ಎಂಬಂತೆ ಇರಬಲ್ಲ. ತುಂಬ ತಕರಾರು ಮಾಡಿದರೆ ಎದ್ದು ಹೋಗಿ ಪ್ರತಿಭಟಿಸಬಲ್ಲ. ಅವಡುಗಚ್ಚಿ ಬರೆಯುವುದಕ್ಕೆ ಕೂತರೆ ತಾನು ಕಂಡ ವ್ಯಕ್ತಿಗಳ ಬಗ್ಗೆ, ಸಂಗತಿಗಳ ಬಗ್ಗೆ ಕರಾರುವಾಕ್ಕು ಮತ್ತು ಒಳನೋಟ ಇಟ್ಟುಕೊಂಡ ಬರೆಯಬಲ್ಲ. ಖಾಸಗಿ ದರ್ಬಾರಿನಲ್ಲಿ ಮಾತು ಶುರು ಮಾಡಿದರೆ ಒಂದೊಂದು ಮಾತೂ ಈಟಿ. ಅಗಾಧ ನೆನಪಿನ ಶಕ್ತಿ. ಕವಿಗಳ ಬಗ್ಗೆ ಕಡುಕೋಪ, ಸಂಗೀತದ ಬಗ್ಗೆ ಮಡುಗಟ್ಟಿದ ಪ್ರೀತಿ. ಬದುಕೇ ಇಷ್ಟು ಅನ್ನುವ ನಿರ್ಭಾವುಕತೆ. ಇನ್ನಷ್ಟು ತೀವ್ರವಾಗಿ ಬದುಕುವ ಹುಮ್ಮಸ್ಸು. ದೂರದಿಂದ ನೋಡಿದವರು ಈತ ಕಟ್ಟುನಿಟ್ಟು ಮತ್ತು ಶಿಸ್ತಿನ ಅಪಾಯಕಾರಿ ಎಂದು ಭಾವಿಸುವುದುಂಟು. ಆ ಭಾವನೆಯನ್ನು ಹೋಗಲಾಡಿಸುವುದಕ್ಕೆ ಇದುವರೆಗೂ ಯಾವ ಪ್ರಯತ್ನವನ್ನೂ ಮಾಡಿದ್ದನ್ನು ನಾನಂತೂ ನೋಡಿಲ್ಲ. ಗೊತ್ತಿಲ್ಲದ ಫೋನ್ ನಂಬರನ್ನು ಯಾವತ್ತೂ ಎತ್ತದ,ಅಹಂಕಾರಿಗಳನ್ನು, ಕವಿಗಳನ್ನು, ಕುಹಕಿಗಳನ್ನು ಸದಾ ದೂರ ಇಡುವ, ತುಂಬ ಆಪ್ತರನ್ನೂ ಒಳಕೋಣೆಗೆ ಬಿಟ್ಟುಕೊಳ್ಳದ ಈ ಗೆಳೆಯನ ಹೆಸರು ಉದಯ ಮರಕಿಣಿ.

ಸುಮ್ಮನೆ ನೋಡಿದರೆ ಅಪ್ಪಟ ಕಮ್ಯುನಿಸ್ಟ್ ಕಾರ್ಯಕರ್ತನಂತೆ ಕಾಣಿಸುವ ಈ ಗೆಳೆಯ ಪರಮ ಮೌನಿ. ಜಗದ ಗೊಂದಲ ಬೇಡ ಎಂಬಂತೆ ಇರಬಲ್ಲ. ತುಂಬ ತಕರಾರು ಮಾಡಿದರೆ ಎದ್ದು ಹೋಗಿ ಪ್ರತಿಭಟಿಸಬಲ್ಲ. ಅವಡುಗಚ್ಚಿ ಬರೆಯುವುದಕ್ಕೆ ಕೂತರೆ ತಾನು ಕಂಡ ವ್ಯಕ್ತಿಗಳ ಬಗ್ಗೆ, ಸಂಗತಿಗಳ ಬಗ್ಗೆ ಕರಾರುವಾಕ್ಕು ಮತ್ತು ಒಳನೋಟ ಇಟ್ಟುಕೊಂಡ ಬರೆಯಬಲ್ಲ. ಖಾಸಗಿ ದರ್ಬಾರಿನಲ್ಲಿ ಮಾತು ಶುರು ಮಾಡಿದರೆ ಒಂದೊಂದು ಮಾತೂ ಈಟಿ. ಅಗಾಧ ನೆನಪಿನ ಶಕ್ತಿ. ಕವಿಗಳ ಬಗ್ಗೆ ಕಡುಕೋಪ, ಸಂಗೀತದ ಬಗ್ಗೆ ಮಡುಗಟ್ಟಿದ ಪ್ರೀತಿ. ಬದುಕೇ ಇಷ್ಟು ಅನ್ನುವ ನಿರ್ಭಾವುಕತೆ. ಇನ್ನಷ್ಟು ತೀವ್ರವಾಗಿ ಬದುಕುವ ಹುಮ್ಮಸ್ಸು. ದೂರದಿಂದ ನೋಡಿದವರು ಈತ ಕಟ್ಟುನಿಟ್ಟು ಮತ್ತು ಶಿಸ್ತಿನ ಅಪಾಯಕಾರಿ ಎಂದು ಭಾವಿಸುವುದುಂಟು. ಆ ಭಾವನೆಯನ್ನು ಹೋಗಲಾಡಿಸುವುದಕ್ಕೆ ಇದುವರೆಗೂ ಯಾವ ಪ್ರಯತ್ನವನ್ನೂ ಮಾಡಿದ್ದನ್ನು ನಾನಂತೂ ನೋಡಿಲ್ಲ. ಗೊತ್ತಿಲ್ಲದ ಫೋನ್ ನಂಬರನ್ನು ಯಾವತ್ತೂ ಎತ್ತದ,ಅಹಂಕಾರಿಗಳನ್ನು, ಕವಿಗಳನ್ನು, ಕುಹಕಿಗಳನ್ನು ಸದಾ ದೂರ ಇಡುವ, ತುಂಬ ಆಪ್ತರನ್ನೂ ಒಳಕೋಣೆಗೆ ಬಿಟ್ಟುಕೊಳ್ಳದ ಈ ಗೆಳೆಯನ ಹೆಸರು ಉದಯ ಮರಕಿಣಿ.

Uday and Girish Raoನೀವು ಹತ್ತಾರು ವರ್ಷಗಳಿಂದ ಕನ್ನಡಪ್ರಭದ ಓದುಗರಾಗಿದ್ದರೆ ಉದಯ ಮರಕಿಣಿಯ ಹಾಸ್ಯದ ಪಟ್ಟಿಗೆ ಖಂಡಿತ ಸಿಲುಕಿರುತ್ತೀರಿ. ಏಕತಾನತೆ, ಅವವೇ ಮಾತುಗಳ ಚರ್ವಿತ ಚರ್ವಣ, ಓಬೀರಾಯನ ಕಾಲದ ಶೈಲಿಯಿಂದ ಸಿನಿಮಾ ವಿಮರ್ಶೆಯನ್ನು ಆಚೆಗೆಳೆದು ತಂದವರು ಉದಯ್.  ಹಾಗೆ ನೋಡಿದರೆ ಸಿನಿಮಾ ಪತ್ರಿಕೋದ್ಯಮದಲ್ಲಿ ಮತ್ತೊಂದು ಅಧ್ಯಾಯವನ್ನು ಆರಂಭಿಸಿದವರು ಅವರೇ. ಅಲ್ಲಿಯ ತನಕ ಕೇವಲ ವರದಿಗಾರಿಕೆ ಮಾತ್ರ ಆಗಿದ್ದ, ಸಿನಿಮಾ ರಿಪೋರ್ಟಿಂಗ್ ಉದಯ್ ಬರಹಗಳಿಂದ ಹೊಸ ಹುಮ್ಮಸ್ಸು ಪಡಕೊಂಡಿತು. ಅನೇಕ ಕಲಾವಿದರು, ನಿರ್ದೇಶಕರು ಮರಕಿಣಿ ತಮ್ಮ ಬಗ್ಗೆ ಬರೆಯಬೇಕು ಎಂದು ಹಂಬಲಿಸುತ್ತಿದ್ದರು. ಉದಯ್ ಅವರನ್ನೆಲ್ಲ ಹೊಗಳಿ ಬರೆಯುತ್ತಿರಲಿಲ್ಲ,ಅವರನ್ನು ಮೆಚ್ಚಿಸಲೂ ಯತ್ನಿಸುತ್ತಿರಲಿಲ್ಲ. ಅವರ ಶಕ್ತಿ ಮತ್ತು ಮಿತಿಗಳನ್ನು ಆಪ್ತ ಗೆಳೆಯನ ಹಾಗೆ ವಿವರಿಸಬಲ್ಲವರಾಗಿದ್ದರು. ಉಪೇಂದ್ರ ನಟಿಸಿದ ಎ ಬಿಡುಗಡೆಯಾದ ದಿನ. ಎಲ್ಲರೂ ಅದೊಂದು ಕೆಟ್ಟ ಚಿತ್ರ ಎಂದು ಪರಿಗಣಿಸಿ ಅದರ ಕುರಿತು ಮಾತಾಡುವುದೂ ತಪ್ಪು ಎಂಬಂತೆ ಕೂತಿದ್ದರು. ಉದಯ್ ಆ ಸಿನಿಮಾದ ಶಕ್ತಿಯನ್ನು ಗುರುತಿಸಿದ್ದರು. ಮುಂದಿನ ವಾರದ ಚಿತ್ರಪ್ರಭ ಪುರವಣಿಯಲ್ಲಿ ಉಪೇಂದ್ರ ಕುರಿತ ಲೇಖನ ಇತ್ತು. ಅದಕ್ಕೆ ಉದಯ್ ಕೊಟ್ಟ ಟೈಟಲ್ಲು- ಎ ಸ್ಟಾರ್ ಈಸ್ ಬಾರ್ನ್. ಅದು ಸುಳ್ಳಾಗಲಿಲ್ಲ.

ರಮೇಶ್ ಅರವಿಂದ್ ಆಗೆಲ್ಲ ಮಧ್ಯಮ ವರ್ಗದ ಪ್ರೇಮಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಚಿತ್ರದ ಕೊನೆಯಲ್ಲಿ ಪ್ರೀತಿಸಿದವಳನ್ನು ಬೇರೆಯವರಿಗೆ ಬಿಟ್ಟುಕೊಡುವ ಪಾತ್ರವೇ ಅವರಿಗೆ ಸಿಗುತ್ತಿತ್ತು. ಅಂಥ ಒಂದು ಸಂದರ್ಭದಲ್ಲಿ ಉದಯ್ ರಮೇಶ್ ಅರವಿಂದ್‌ಗೆ ಕೊಟ್ಟ ಬಿರುದು- ತ್ಯಾಗರಾಜ. ಅದನ್ನು ರಮೇಶ್ ಎಷ್ಟು ಇಷ್ಟಪಟ್ಟಿದ್ದರೆಂದರೆ ಸಂದರ್ಶನಗಳಲ್ಲಿ  ನಾಲ್ಕಾರು ಸಲವಾದರೂ ಅದನ್ನವರು ಹೇಳಿರಬೇಕು. ಉದಯ್ ಸಂದರ್ಶನವೊಂದನ್ನು ಮೆಚ್ಚಿದ ರಮೇಶ್ ಅವರಿಗೊಂದು ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಜಗತ್ತಿನ ಅತ್ಯುತ್ತಮ ಸಂದರ್ಶನಗಳಿದ್ದ ಪುಸ್ತಕ ಅದು. ಅದರ ಒಳಪುಟದಲ್ಲಿ ರಮೇಶ್ ಒಂದು ಸಾಲು ಬರೆದಿದ್ದರು- ನಾನು ಕಂಡ ಅತ್ಯುತ್ತಮ ಸಂದರ್ಶಕನಿಗೆ,ಪ್ರೀತಿಯಿಂದ.

ಕನ್ನಡಪ್ರಭದಲ್ಲೊಂದು ರಗಳೆಯಿತ್ತು. ಅದು ಜಾಹೀರಾತುಗಳನ್ನು ನಂಬಿಕೊಂಡ ಪತ್ರಿಕೆ. ಯಾವ ಸಿನಿಮಾವನ್ನೂ ತೆಗಳಬಾರದು ಎಂಬ ಅಲಿಖಿತ ನಿಯಮವಿತ್ತು. ಅಂಥ ಸಂದಿಗ್ಥದಲ್ಲೂ ಸಿನಿಮಾದ ಕುರಿತು ಓದುಗರಿಗೆ ಸ್ಪಷ್ಟ ಚಿತ್ರಣ ಸಿಗುವಂತೆ ಬರೆಯುತ್ತಿದ್ದವರು ಉದಯ್. ಅವರಿಗೆ ವ್ಯಂಗ್ಯ ಸಿದ್ಧಿಸಿತ್ತು. ಸಂಬಂಧಪಟ್ಟವರು ಸಂತೋಷಪಡುವಂತೆ, ಹೊರಗಿನವರು ಅದರ ಒಳಾರ್ಥವನ್ನು ತಿಳಿಯಬಲ್ಲಂತೆ ಉದಯ್ ಬರೆಯುತ್ತಿದ್ದರು. ಅವರು ಸಿನಿಮಾ ನೋಡಿದರು ಎಂದರೆ ನಿರ್ಮಾಪಕ, ನಿರ್ದೇಶಕರಿಗೆ ಖುಷಿ. ಅವರು ಹೊರಾಂಗಣ ಚಿತ್ರೀಕರಣ ವೀಕ್ಷಿಸಲು ಬರುತ್ತಾರೆ ಎಂದರೆ ಸಹಕಲಾವಿದರಿಗೆ ಸಂತೋಷ. ಒಂದು ಸಣ್ಣ ಪಾತ್ರದಲ್ಲಿ ನಟಿಸುವ ಸಹಕಲಾವಿದನನ್ನೂ ಮಾತಾಡಿಸಿ, ಅವನ ಮನಸ್ಸಿನಲ್ಲಿದ್ದುದನ್ನೂ ಉದಯ್ ಬರೆಯುತ್ತಿದ್ದರು. ಅವರು ಬರೆದ ಒಂದು ವರದಿ ಓದಿದರೆ ಸಾಕು, ಇಡೀ ಸನ್ನಿವೇಶವೇ ಕಣ್ಮುಂದೆ ಸುಳಿಯುತ್ತಿತ್ತು.

-2-

ದಕ್ಷಿಣ ಕನ್ನಡದ ಅಂಚಲ್ಲಿರುವ ಅಡ್ಯನಡ್ಕ ಎಂಬ ಪುಟ್ಟ ಊರಿನ ಮರಕಿಣಿ ಎಂಬಲ್ಲಿಂದ ಬಂದವರು ಉದಯ್. ಓದಿದ್ದು ಬಿಬಿಎಂ. ಪುತ್ತೂರು ವಿವೇಕಾನಂದ ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ಸಜ್ಜನ ಹುಡುಗ. ಬೆಂಗಳೂರಿಗೆ ಬಂದು ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಕೊಂಡು ಪತ್ರಿಕೋದ್ಯಮಕ್ಕೆ ಕಾಲಿಡುತ್ತಿದ್ದಂತೆ ಎದುರಾದವರು ರವಿ ಬೆಳಗೆರೆ. ಸಂಯುಕ್ತ ಕರ್ನಾಟಕದ ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ಉದಯ್ ಮತ್ತು ರವಿ ಜನಪ್ರಿಯ ಜೋಡಿ. ರವಿ ಮನೆಯಲ್ಲೇ ಉದಯ್ ವಾಸ್ತವ್ಯ. ಅಲ್ಲಿಂದ ನಂತರ ಸಿಕ್ಕವರು ವೈಯನ್ಕೆ. ಅಷ್ಟು ಹೊತ್ತಿಗಾಗಲೇ ಕನ್ನಡಪ್ರಭದಲ್ಲಿದ್ದ ಹಿರಿಯ ಪತ್ರಕರ್ತರೊಬ್ಬರು ರಾಜ್ ವಿರುದ್ಧ ಅದೇನನ್ನೋ ಬರೆದು ಪತ್ರಿಕೆಯನ್ನೇ ಕಷ್ಟಕ್ಕೆ ದೂಡಿದ್ದರು. ಆ ಅನಾಹುತವನ್ನು ರಿಪೇರಿ ಮಾಡುವುದಕ್ಕೆ ಬಂದವರು ಉದಯ್.  ಒಂದೇ ವರುಷದಲ್ಲಿ ಮತ್ತೆ ಕನ್ನಡಪ್ರಭ ಚಿತ್ರರಂಗದ ಅಚ್ಚುಮೆಚ್ಚಿನ ಪತ್ರಿಕೆಯಾಯಿತು.

ನಾನು ಉದಯ್ ಭೇಟಿಯಾದದ್ದು ವೈಯೆನ್ಕೆ ಕೃಪೆಯಿಂದಾಗಿ. ಕನ್ನಡಪ್ರಭಕ್ಕೆ ಕನ್ನಡ ಚಿತ್ರರಂಗ ಬೆಂಬಲ ಹಿಂದೆಗೆದುಕೊಳ್ಳಲು ನಿರ್ಧರಿಸಿದ ದಿನಗಳಲ್ಲಿ ವೈಯೆನ್ಕೆ ಸಿಟ್ಟಾಗಿದ್ದರು. ನನಗೆ ಓದುಗರು ಮುಖ್ಯ. ಅವರಿಗೆ ಆಸಕ್ತಿ ಹುಟ್ಟಿಸುವಂಥದ್ದು ಬರೀರಿ. ಹಿಂದಿ ಚಿತ್ರರಂಗದ ಬಗ್ಗೆ ಬರೀರಿ ಅಂದರು. ನಾನು ಬಾಲಿವುಡ್ ಘಾಸಿಪ್ ಎಂಬ ಅಂಕಣ ಬರೆಯಲು ಆರಂಭಿಸಿದೆ.  ಅದಾಗಿ ಎರಡೋ ಮೂರೋ ವರ್ಷದ ನಂತರ ಮತ್ತೊಬ್ಬ ಗೆಳೆಯ ಶ್ಯಾಮ್ ಪ್ರೆಸ್ ಕ್ಲಬ್ಬಿನಲ್ಲಿ ನಮ್ಮನ್ನೆಲ್ಲ ಒಂದಾಗಿಸಿದರು.

ಅದಾದ ನಂತರ ನಮ್ಮಿಬ್ಬರ ಲಿವಿಂಗ್ ಟುಗೆದರ್ ಶುರುವಾಯಿತು. ಲಿಂಗದೇವರು ನಿರ್ದೇಶಿಸಿದ ಶಿಕಾರಿ ಸೀರಿಯಲ್ಲಿಗೆ ಜೊತೆಯಲ್ಲಿ ಸಂಭಾಷಣೆ ಬರೆದವು. ಚಿತ್ರಕತೆ ರಚಿಸಿದೆವು.  ರವಿಕಿರಣ್ ಶಕ್ತಿ ಎಂಬ ಮೆಗಾಸೀರಿಯಲ್ಲಿನ ಕೆಲಸ ಕೊಟ್ಟರು. ಅಲ್ಲಿಂದೀಚೆಗೆ ನಾವು ಏನಿಲ್ಲವೆಂದರೂ ಮೂವತ್ತೋ ನಲವತ್ತೋ ಸೀರಿಯಲ್ಲುಗಳಿಗೆ ಸಂಭಾಷಣೆ ಬರೆದಿರಬಹುದು. ಮೌನಿ, ಕಾಡಬೆಳದಿಂಗಳು ಮುಂತಾದ ಸಿನಿಮಾಗಳನ್ನೂ ನಾವು ಜೊತೆಯಾಗಿಯೇ ಬರೆದದ್ದು. ಉದಯ್ ಪರಮ ಸೋಮಾರಿ ಅಂದುಕೊಂಡಿದ್ದ ನಾನು ಗಾಬರಿಬೀಳುವಂತೆ ಕೆಲಸ ಮಾಡುವುದನ್ನು ಇದೇ ಅವಧಿಯಲ್ಲಿ ನಾನು ನೋಡಿದ್ದು. ಸಂತೆಯಲ್ಲಿ ಕೂತುಕೊಂಡೂ ಬರೆಯಬಲ್ಲವರು ಅವರು. ದಿನಕ್ಕೆ ಏನಿಲ್ಲವೆಂದರೂ ನಲವತ್ತು ಪುಟ ಸಲೀಸಾಗಿ ಬರೆಯಬಲ್ಲರು. ನಾನು ಡೆಡ್‌ಲೈನಿಗೆ ಕಾಯುವ ಅಸಾಮಿ. ಅವರು ಮೊದಲು ಕೆಲಸ ಮುಗಿಸಬೇಕು ಅನ್ನುವವರು.

ಉದಯ್ ಮತ್ತು ವೈಯನ್ಕೆ ಇಬ್ಬರಿಗೂ ಒಂದಷ್ಟು ಸಾಮ್ಯಗಳಿವೆ. ಒಬ್ಬ ವ್ಯಕ್ತಿಯನ್ನು ನೋಡಿದ ತಕ್ಷಣ ಇವನು ಇಂಥವನೇ ಎಂದು ತೀರ್ಮಾನಮಾಡಬಲ್ಲ ಶಕ್ತಿ  ವೈಯನ್ಕೆಗಿತ್ತು, ಉದಯ್‌ಗೂ ಇದೆ. ಇಬ್ಬರಿಗೂ ಅಸಾಧ್ಯವಾದ ಪನ್ ಪಾಂಡಿತ್ಯ. ಆಕರ್ಷಕ ಶೀರ್ಷಿಕೆಗಳನ್ನು ಕೊಡುವಲ್ಲಿ ಉದಯ್ ಸಿದ್ಧಹಸ್ತರು. ವೈಎನ್ಕೆಯ ಹಾಗೇ ಉದಯ್ ಕೂಡ ಜನವಿರೋಧಿ ಆಂದೋಲನದ ನೇತಾರ. ಮಾತಿನ ಶತ್ರು. ವೇದಿಕೆಯ ವಿರೋಧಿ. ಅವರನ್ನೊಮ್ಮೆ ಮೂಡಬಿದರೆಗೆ ಕರೆದೊಯ್ದು ವೇದಿಕೆ ಹತ್ತಿಸಬೇಕಿದ್ದರೆ ಗೆಳೆಯರಿಗೆ ಸಾಕುಬೇಕಾಗಿ ಹೋಗಿತ್ತು.

ಮಿತವಾದ ಮಿತ್ರರು. ಸದ್ಯಕ್ಕಂತೂ ವೀರೇಶ್, ಲಿಂಗದೇವರು, ಹೆಚ್ ಎಂ ರಾಮಚಂದ್ರ, ನಾನು ಹೀಗೆ ನಾಲ್ಕೈದು ಮಂದಿ ಇದ್ದರೆ ಹೆಚ್ಚು. ಮಿತವಾದ ಮಾತು. ಹೆಣ್ಮಕ್ಕಳೆಂದರೆ ಭಯ, ಭಕ್ತಿ ಮತ್ತು ಅಲರ್ಜಿ. ಮದುವೆಯೇ ಆಗೋಲ್ಲ ಅನ್ನುತ್ತಿದ್ದ ಉದಯ್ ಪ್ರೇಮದಲ್ಲಿ ಬಿದ್ದು ಮದುವೆಯಾದರು. ಮಕ್ಕಳು ಬೇಡ ಅನ್ನುತ್ತಿರುವಾಗಲೇ ಅವಳಿ ಮಕ್ಕಳ ತಂದೆಯಾದರು. ನಿಮ್ಮ ಬರಹಗಳ ಒಂದು ಪುಸ್ತಕ ತರೋಣ ಅಂತ ಗೆಳೆಯರು ಒತ್ತಾಯ ಮಾಡುತ್ತಿದ್ದರೆ ನೋಡೋಣ ಅಂತ ಗಡ್ಡ ಸವರಿಕೊಂಡು ಮಾತು ಬದಲಾಯಿಸುತ್ತಾರೆ.

ಈ ನಾಸ್ತಿಕ ಮಿತ್ರನಿಗೆ ಐವತ್ತಾದ ಸಂದರ್ಭದಲ್ಲಿ ನಾವೊಂದಷ್ಟು ಮಂದಿ ಸೇರಿದ್ದೆವು. ಹಳೆಯ ದಿನಗಳನ್ನು ನೆನಪಿಸಿಕೊಂಡೆವು. ಮಿಕ್ಕ ಆಯುಷ್ಯವನ್ನು ಹೇಗೆ ಕಳೆಯುವುದು ಎಂದು ಯೋಚಿಸಲು ಪುರುಸೊತ್ತಿಲ್ಲದಷ್ಟು ಕೆಲಸ ಕೈಯಲ್ಲಿದೆ. ಚಿತ್ರೋದ್ಯಮ ಮೊದಲಿನಷ್ಟು ಹುಮ್ಮಸ್ಸಿನಿಂದ ಕೂಡಿಲ್ಲ. ಟೀವಿಯ ಮುಂದೆ ಮಾತಾಡಬಲ್ಲ ನಟ, ನಿರ್ದೇಶಕರು ಓದುವುದು ಬಿಟ್ಟಿದ್ದಾರೆ. ನಡುರಾತ್ರಿವರೆಗೆ ಕಾದು ಕೂತು ಅವರ ಬಾಯಿಬಿಡಿಸಿ, ಅವರ ಒಳಹೊರಗುಗಳನ್ನು ಅರ್ಥಮಾಡಿಕೊಳ್ಳುವ ವ್ಯವಧಾನ ಈಗಿನ ತರುಣ ಪತ್ರಕರ್ತರಿಗೂ ಇದ್ದಂತಿಲ್ಲ.

ಅಂಥ ಹೊತ್ತಲ್ಲಿ ಉದಯ್ ಫಸ್ಟ್ ಹಾಫ್ ಮುಗಿಸಿದ್ದಾರೆ. ನೆಕ್ಸ್ಟ್ ಹಾಫ್ ಮುಗಿಸಿದಾಗ ಮತ್ತೊಂದು ಸುದೀರ್ಘ ಪಾರ್ಟಿ ಮಾಡೋಣ ಅಂತ ಗೆಳೆಯ ರವಿ ಹೆಗಡೆ ಹೇಳಿದರು. ನಾವೆಲ್ಲ ಒಂದೇ ಏಟಿಗೆ ಖಂಡಿತಾ ಅಂದೆವು. ಇನ್ನೂ ಐವತ್ತು ವರ್ಷ ನಾವೆಲ್ಲ ಬದುಕಿರುತ್ತೇವೆ ಎಂಬ ಆಸೆಗಿಂತ ಮುಕ್ಕಾಗದೇ ಉಳಿಯಬಲ್ಲ ಸ್ನೇಹಕ್ಕೆ ಪಕ್ಕಾಗಬಲ್ಲವರು ಕೇವಲ ಬೆರಳೆಣಿಕೆಯ ಮಂದಿ ಅಷ್ಟೇ ಎಂಬ ಸತ್ಯ ನಮಗೆಲ್ಲ ಅರ್ಥವಾದಂತಿತ್ತು.

 

‍ಲೇಖಕರು avadhi

3 October, 2011

22 Comments

  1. harshakumar

    ಇಂತಹ ಒಬ್ಬ ಸಹೃದಯಿಯನ್ನು ಹತ್ತಿರದಿಂದ ಪರಿಚಯಿಸಿದ ಜೋಗಿ ಸರ್ ಥ್ಯಾಂಕ್ಯೂ…

  2. savitri

    ಧನ್ಯವಾದಗಳು ಸರ್. ಉದಯ್ ಸರ್ ಬರೆದ ಲೇಖನಗಳನ್ನು ಓದಿದ್ದೆ. ಆದರೆಮವರ ಬಗ್ಗೆ ಏನೂ ಗೊತ್ತಿರಲಿಲ್ಲ. ಅವರ ವ್ಯಕ್ತಿತ್ವವನ್ನು ಓದುಗರಿಗೆ ಪರಿಚಯಿಸಿದ್ದಕ್ಕೆ ಖುಷಿಯಾಯಿತು. ಉದಯ್ ಸರ್ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುವೆ.

  3. armanikanth

    ತುಂಬಾ ಆಪ್ತವಾದ ಬರಹ
    ಮರಕಿಣಿಯವರ ಬರಹಗಳನ್ನು ಓದಿ ತುಂಬಾ ಖುಷಿ ಪಟ್ಟವರಲ್ಲಿ ನಾನೂ ಒಬ್ಬ.
    ಮಣಿಕಾಂತ್.ಎ.ಆರ್.

  4. shobhavenkatesh

    50 mugisida markini avarige modalu shubhashaygalu heli jogi maneyalli thamma gelayanana bagge barediruva reeti chennagi moodi bandide.

  5. D.RAVIVARMA

    jogi sir,mattondu wonderful lekhana odisidiri,uday marikini avara baraha odidde,but nimma jeevantha basheyalli avara badukina kiru chitrana bahala chennagi moodi bandide,halavomme poorvagra peeditaragi kelavara bagge tappu grahikegalannu mudisikondirutteve,but a creative writer anthaha grahikegalannu daati santeyalli kootu baredu shock needuttare,bahushaha nimma uday anthahavareno avara first half bagge manamuutuva hage bareda nimagu,avara next half innu hechhu creative agirali endu asisutta…..
    D.RAVI VARMA HOSPET

  6. jagadishkoppa

    ಪ್ರಿಯ ಜೋಗಿಯವರಿಗೆ, ಮರಕ್ಕಿಣಿ ಬಗ್ಗೆ ಆತ್ಮೀಯವಾಗಿ ಬರೆದಿದ್ದೀರಿ. ಎರಡು ದಶಕದ ಹಿಂದೆ ನಾನು ಬಳೆಗೆರೆ ರೆಸಿಡೆನ್ಸಿ ರಸ್ತೆಯ ಇಂಪೀರಿಯಲ್ ಹಾಗೂ ಸಂಯುಕ್ತ ಕನಾ೵ಟಕ್ಕೆ ಹೊಂದಿಕೊಂಡು ಇದ್ದ ಚೈನೀಸ್ ಹೋಟೆಲ್ ನಲ್ಲಿ ರಾತ್ರಿಯೆಲ್ಲಾ ಹರಟೆ ಹೊಡೆಯುವಾಗ ನಮ್ಮ ಜೊತೆ ತಪ್ಪದೆ ಇರುತಿದ್ದ ಮಿತ್ರ ಮರಕ್ಕಣಿಗೆ 50 ವಯಸ್ಸು ಅಂದ್ರೆ ನಂಬುವುದು ಕಷ್ಟ.
    ಮರಕ್ಕಿಣಿಯಲ್ಲಿ ನಾನು ಕಂಡ ವಿಶೇಷ ಅಂದ್ರೆ, ಯಾವುದೇ ವಿಷಯವಿರಲಿ ಅದರ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅವರ ವೈಶಿಷ್ಟ. ಈಗಲೂ ಪ್ರೆಸ್ ಕ್ಲಬ್ ನಲ್ಲಿ ನಿಮ್ಮಿಬ್ಬರ ಜುಗಲ್ ಬಂದಿ ಮುಂದುವರಿದಿದೆಯಾ? ನೀವು ನೆನಪಾದಾಗ,ಉದಯ್, ಉದಯ ನೆನಪಾದಾಗ ನೀವು ಒಟ್ಟಿಗೆ ನೆನಪಾಗುತ್ತೀರಿ. ಇದು ನಿಮ್ಮ ಗೆಳೆತನದ ವಿಶೇಷ.

  7. Sharadhi

    I don’t understand this saahithya etc, but a phrase caught my eyes “ಒಬ್ಬ ವ್ಯಕ್ತಿಯನ್ನು ನೋಡಿದ ತಕ್ಷಣ ಇವನು ಇಂಥವನೇ ಎಂದು ತೀರ್ಮಾನಮಾಡಬಲ್ಲ ಶಕ್ತಿ ವೈಯನ್ಕೆಗಿತ್ತು, ಉದಯ್‌ಗೂ ಇದೆ”, I am pretty bad at understanding people, and thinking of outsourcing it to Uday Markini, if he’s interested in a business opportunity abroad! 🙂

  8. Santhosh Ananthapura

    Dear Sir,
    An excellent piece of writing !!! “ನಾವೆಲ್ಲ ಒಂದೇ ಏಟಿಗೆ ಖಂಡಿತಾ ಅಂದೆವು. ಇನ್ನೂ ಐವತ್ತು ವರ್ಷ ನಾವೆಲ್ಲ ಬದುಕಿರುತ್ತೇವೆ ಎಂಬ ಆಸೆಗಿಂತ ಮುಕ್ಕಾಗದೇ ಉಳಿಯಬಲ್ಲ ಸ್ನೇಹಕ್ಕೆ ಪಕ್ಕಾಗಬಲ್ಲವರು ಕೇವಲ ಬೆರಳೆಣಿಕೆಯ ಮಂದಿ ಅಷ್ಟೇ ಎಂಬ ಸತ್ಯ ನಮಗೆಲ್ಲ ಅರ್ಥವಾದಂತಿತ್ತು.” what a line !!!!!

  9. sham

    Good to know guys like Udaya Marakini and read about them too.

  10. Sritri

    ನಾನು ಕನ್ನಡಪ್ರಭ ಓದಲು ಶುರುಮಾಡಿದ್ದು ‘ಚಿತ್ರವಿಮರ್ಶೆ’ಗಾಗಿಯೇ! ಜೋಗಿ ಮತ್ತು ‘ಉಮ’ ಬರೆಯುತ್ತಿದ್ದ ಚಿತ್ರವಿಮರ್ಶೆಗಳು ಆ ಚಿತ್ರಗಳಿಗಿಂತ ಚೆನ್ನಾಗಿರುತ್ತಿದ್ದವು! ‘ಆಪ್ತಮಿತ್ರ’ದ ವಿಮರ್ಶೆ ಈಗಲೂ ನನಗೆ ನೆನಪಿದೆ.

  11. vijayaraghavan

    ಇವತ್ತು ನಾವೆಲ್ಲ ಮಾತಾಡಬೇಕಾದ ಅನಿವಾರ್ಯತೆ ಇರುವ ಕಷ್ಟಕಾಲ ಬಂದಿದೆ. ಜೋಗಿ, ದಯವಿಟ್ಟು ಮರಕಿಣಿಯವರಿಗೆ ಹೇಳಿ, ಮಾತನಾಡಲು. ಅವರಿಗೆ ಮಾಣಿಕ್ಯದಂಥ ಮಾತಾಡಲು ಬರುತ್ತದೆ ಎಂದು ನೀವೇ ಹೇಳಿದ್ದೀರಿ. ಮಾತು ಮಾಣಿಕ್ಯವಾದರೆ ಸಮಾಜ ಅದನ್ನು ಎತ್ತಿಕೊಳ್ಳುತ್ತದೆ, ಮಾತುಗಳನ್ನು ಎತ್ತಿಕೊಳ್ಳುವ ಸಮಾಜ ಸ್ವಸ್ಥವಾಗಿರುತ್ತದೆ.

  12. ಸಂದೀಪ್ ಕಾಮತ್

    ತುಂಬಾ ಚೆನ್ನಾಗಿದೆ ಲೇಖನ.

    ಧನ್ಯವಾದಗಳು.

  13. Mahendra Kumar H M

    Oh, my god. Sir completed 50 years. His writup and words fentastic. Jogi sir, yours writup on U. Maraking is too good.

    Thanks

  14. Shama, Nandibetta

    “ನಾವೆಲ್ಲ ಒಂದೇ ಏಟಿಗೆ ಖಂಡಿತಾ ಅಂದೆವು. ಇನ್ನೂ ಐವತ್ತು ವರ್ಷ ನಾವೆಲ್ಲ ಬದುಕಿರುತ್ತೇವೆ ಎಂಬ ಆಸೆಗಿಂತ ಮುಕ್ಕಾಗದೇ ಉಳಿಯಬಲ್ಲ ಸ್ನೇಹಕ್ಕೆ ಪಕ್ಕಾಗಬಲ್ಲವರು ಕೇವಲ ಬೆರಳೆಣಿಕೆಯ ಮಂದಿ ಅಷ್ಟೇ ಎಂಬ ಸತ್ಯ ನಮಗೆಲ್ಲ ಅರ್ಥವಾದಂತಿತ್ತು.” wonderful… Wishes for the next half….

    ನನಗಿನ್ನೂ ನೆನಪಿದೆ…ನಿಮ್ಮ ಬರಹ ಮಾತ್ರ ಓದಿದ್ದೇನೆ ಹೊರತು ನಾನು ನಿಮ್ಮನ್ನು ನೋಡಿರಲಿಲ್ಲ. ನಿಮಗೊಂದು ಸಿ.ದಿ. ತಲುಪಿಸಲು ಬಂದಿದ್ದೆ… ಅವತ್ತು ನೀವೇ ಅಂತ confuse ಮಾಡಿಕೊಂಡು ಅದನ್ನು ಅವರ ಬಳಿ ಕೊಟ್ಟು ಬಂದಿದ್ದೆ. ಗೊತ್ತಾದ ನಂತರ ಅದು ನಿಮಗಲ್ಲ ಅವರಿಗೆ ಅಂದೇ… ಬಿಡಿ ಯಾರಿಗೆ ಕೊಟ್ರೂ ಒಂದೇ ಅಂದಿದ್ದರು.. ಮತ್ತೊಮ್ಮೆ ನಕ್ಕು ಜೋಗಿ ಗೆ ತಲುಪಿಸುತ್ತೇನೆ ಅಂದರು… ಮತ್ತೊಮ್ಮೆ ಕನ್ನಡ ಪ್ರಭ ಆಫೀಸಿನ ಅಂಗಳದಲ್ಲಿ ನಾನು ನಿಂತಿದ್ದೆ. ವಿಶ್ ಮಾಡಿದಾಗ ಗುರುತು ಹಿಡಿದು ಮಾತಾಡಿಸಿದರು. ಅವರ ನೆನಪಿನ ಶಕ್ತಿ ಬಗ್ಗೆ ಅಸೂಯೆ ಪಟ್ಟಿದ್ದೆ.. ಈಗ ಈ ಬರಹ ಓದಿದ ನಂತರ ಅವೆಲ್ಲ ಮತ್ತೊಮ್ಮೆ ನೆನಪಾಯ್ತು…

  15. Prakash VL

    ಜೋಗಿ, ಉದಯ ಮರಕಿಣಿ ಅವರ ಬರಹಗಳನ್ನು ಓದುತ್ತಲೇ ಅವರನ್ನು ಅಭಿಮಾನಿಸುತ್ತಲೇ ಬೆಳೆದ ನನಗೆ ಒಂದು ದಿನ ದಿಢೀರ್ ಎಂದು ಕನ್ನಡಪ್ರಭದ ಮ್ಯಾಗಜೀನ್ ವಿಭಾಗದಲ್ಲಿ ಸೇರಿಬಿಡಬಹುದು ಎನ್ನುವುದು ಇಂದಿಗೂ ನಂಬಲಾಗದ ವಿಸ್ಮಯ!
    ಬರೆಯುವ ಉತ್ಸಾಹದ ಯಾವುದೇ ಪತ್ರಕರ್ತರಿಗೂ ಈ ಇಬ್ಬರೂ ಮಾದರಿ. ಸುಮಾರು ನಾಲ್ಕು ವರ್ಷಗಳ ಕಾಲ ಅವರೊಂದಿಗೆ ಇದ್ದೆ ಎನ್ನುವುದೂ ಹೆಮ್ಮೆ.
    ಎಲ್ಲ ಸಂದರ್ಭಗಳಲ್ಲೂ ಕೂಲ್ ಆಗಿರುವ ಉದಯ ಮರಕಿಣಿ, ಜೋಗಿ ಅವರಿಂದ ಬಹಳಷ್ಟು ಬದುಕಿನ ಪಾಠಗಳನ್ನು ಕಲಿತೆ.
    ಅವರೊಂದಿಗೆ ಎರಡು ಪ್ರಸಂಗಗಳು ನನಗೆ ಬಹಳ ಚೆನ್ನಾಗಿ ನೆನಪಿದೆ. ನನ್ನ ಮೊದಲ ಸಿನಿಮಾ ವರದಿ- ಕೋತಿಗಳು ಸಾರ್ ಕೋತಿಗಳು.
    ನಾನು ಸಾಕಷ್ಟು ತಿದ್ದಿ ತೀಡಿ ಅದನ್ನು ರೂಪಿಸಿದ್ದೆ. ಕಾಮಿಡಿ ಚಿತ್ರವಾದ್ದರಿಂದ ಹಾಸ್ಯ ರಸದಲ್ಲೇ ನೀಡಬೇಕು ಎಂದು ತಿಳಿದು ವಿನೋದ ತುಂಬಿದ್ದೆ. ಅದನ್ನು ಓದಿದ ಉದಯ್, `ಚೆನ್ನಾಗಿದೇರಿ. ಇನ್ನು ಎಲ್ಲ ಸಿನಿಮಾ ಗೋಷ್ಠಿಗಳೂ ಪ್ರಕಾಶ್ ಗೆ’ ಎಂದುಬಿಟ್ಟರು. ಅದು ನನಗೆ ಅವರು ನೀಡಿದ ದೊಡ್ಡ ಕಾಂಪ್ಲಿಮೆಂಟ್.
    ನಂತರ ಮಲಯಾಳಂ ನಟ ಮೋಹನ್ ಲಾಲ್ ಬೆಂಗಳೂರಿಗೆ ಬಂದಾಗ ಉದಯ್ ಕನ್ನಡಪ್ರಭದಲ್ಲಿ ಲೀಡ್ ಲೇಖನ ಬರೆದಿದ್ದರು. ನನಗೆ ಅದನ್ನು ಓದಿ ನಿಜಕ್ಕೂ ಬಹಳ ಇಷ್ಟವಾಯಿತು. ಅವರಿಗೆ ಅದನ್ನು ಹೇಳಿಯೂ ಬಿಟ್ಟೆ. ಅವರ ಬರಹಗಳನ್ನು ಎಷ್ಟೋ ಮಂದಿ ಮೆಚ್ಚಿಕೊಂಡಿರಬಹುದು. ಬರಹದಲ್ಲಿ ಅವರ ತೊಡಗಿಕೊಳ್ಳುವಿಕೆ ಎಲ್ಲರಿಗೂ ಮಾದರಿ.
    ಅಷ್ಟೇ ಅಲ್ಲ, ಜೋಗಿ ಗುರುತಿಸಿದ ಉಪ್ಪಿ ಎ ಸಿನಿಮಾ ಬಂದಾಗ ಉದಯ್ ರೂಪಿಸಿದ ಚಿತ್ರಪ್ರಭ ಇಂದಿಗೂ ನನ್ನ ಸಂಗ್ರಹದಲ್ಲಿದೆ. ಜೋಗಿ ಬರೆದ ಬಾಲಿವುಡ್ ಘಾಸಿಪ್ ಗಳೂ….

  16. A.G.Sheshadri

    ತುಂಬಾ ಚೆನ್ನಾಗಿದೆ ಸಾರ್ ….ಎಂದಿನಂತೆ.

  17. Shivakumar Menasinakai

    Jogi sir, nimma moolaka Marakini sirge happy birth day,

  18. surekha

    ತುಂಬಾ ಚೆನ್ನಾಗಿದೆ ಗೆಳೆಯನ ಬಗೆಗಿನ ಆಪ್ತ ಲೇಖನ. ಉತ್ತಮ ಗೆಳೆಯರು ಸಿಗುವುದು ಅದೃಷ್ಟವೆ ಅಲ್ಲವೆ.
    ಹುಡುಗಿಯರೆಂದರೆ ಅಲಜರ್ಿ ಅನ್ನುವವರೇ ಮೊದಲು ‘ಪ್ರೀತಿಗೆ ಪರವಶನಾದೆನು’ ಅಂತಾರಲ್ಲ ಯಾಕೆ?

  19. palguna hombalaiah

    Nanna nechina hiriya mitra uday avra bagge lekhana bareda mitra jociyavarige dhanyavaadagalu. uday hecchu maatanaaduvudilla,hrudayakke hattiraaguttaare. nisturavaadi,bhaavajeevi.hosabarannu protsahisuva.praamanikarannu preetisuva uday marakini sir’NOORU VARUSHA BAALIRI’.

  20. ಧ್ರುವ ಆರ್.ಪಾಂಡು

    ಇದನ್ನೆಲ್ಲ ಓದುತ್ತಿದ್ದರೆ ನನಗೆ ನನ್ನ ನೆಚ್ಚಿನ ಕನ್ನಡಪ್ರಭದ ಹಳೆಯ ದಿನಗಳು ತುಂಬಾ ನೆನಪಾದವು. ಕನ್ನಡ ಪ್ರಭದ ಹಳೆಯ ದಿನಗಳು ಅಂತ ಹೇಳೋದಕ್ಕೆ ಕಾರಣವಿದೆ. ಆಗ ನಮಗೆ ಕನ್ನಡಪ್ರಭ ಎಂದರೆ ಜೋಗಿ, ವೈ ಎನ್ ಕೆ, ಮರಕಿಣಿ ಮತ್ತು ರಂಗನಾಥ್ ಆಗಿತ್ತು. ಬೇರೆ ಪತ್ರಿಕೆಗಳಲ್ಲಿ ಯಾರಿದ್ದಾರೆ ಯಾರು ಬರೀತಾರೆ ಅಂತ ಯಾರಿಗೂ ತಿಳಿದಿರದಿದ್ದ ದಿನಗಳು ಅವು. ಆದರೆ ಕನ್ನಡ ಪ್ರಭದ ನೀವೆಲ್ಲ ಎಲ್ಲರಿಗೂ ತಿಳಿದಿದ್ದಿರಿ. ಕನ್ನಡಪ್ರಭ ನಿಮ್ಮಗಳದೇ ಸ್ವಂತ ಪತ್ರಿಕೆ ಇರಬಹುದೇನೋ ಎಂಬ ಅನುಮಾನ ಹಲವರಿಗೆ ಬಂದಿರಲಿಕ್ಕೂ ಸಾಕು. ಆದರೆ ಈಗ ಇದ್ದಕ್ಕಿದ್ದಹಾಗೆ ಏನಾಯಿತು? ಯಾಕೆ ಹೀಗೆ ಮಾಡಿದಿರಿ ನೀವೆಲ್ಲ? ನಿಮ್ಮನ್ನೆಲ್ಲ ಕನ್ನಡ ಪ್ರಭ ಬಿಟ್ಟು ಬೇರೆ ಕಡೆ ನಿಮಗೆ ಒಪ್ಪದ ಪಾತ್ರಗಳಲ್ಲಿ ನೋಡಲು ಯಾಕೋ ಕಷ್ಟ. ಒಂದೇ ಮಾತಲ್ಲಿ ಹೇಳುವುದಾದರೆ ನಿಮಗೆ ಟಿ.ವಿ. ಮೀಡಿಯಾ ಕ್ಕಿಂತಲೂ ಪತ್ರಿಕೆಯೇ ಹಿತ. ಬಿಡಿ. ಒಟ್ಟಿನಲ್ಲಿ ಗೆಳೆಯರ ಬಗ್ಗೆ ಓದಿ ತುಂಬಾ ಖುಷಿಯಾಯಿತು.

  21. Dinesh Patwardhan

    udaya mattu kiniyannu baraha galinda nodidda nanage hattiradalle eddare anisitu, olleya baraha.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading