ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆದಿದ್ದಾರೆ: ಅನುಭವದರಮನೆ ಮುಂದೆ ಅಕ್ಷರದ ಭಿಕ್ಷಾಪಾತ್ರೆ

ಒಳ್ಳೆಯ ಕತೆ ಹೇಗೆ ಹುಟ್ಟುತ್ತದೆ.
 
ಆಕಸ್ಮಿಕವಾಗಿ,ಅದೃಷ್ಟದಿಂದ, ಪ್ರತಿಭೆಯಿಂದ, ಪರಿಶ್ರಮದಿಂದ, ಅಭ್ಯಾಸ ಬಲದಿಂದ,ಒತ್ತಡದಿಂದ, ಒತ್ತಾಯದಿಂದ, ಬರೆಯಲೇ ಬೇಕು ಅನ್ನುವ ಹಟದಿಂದ?
ಇದ್ಯಾವುದೂ ಉತ್ತರ ಅಲ್ಲ, ಇವೆಲ್ಲವೂ ಉತ್ತರವೇ. ಒಬ್ಬೊಬ್ಬರ ಪಾಲಿಗೆ ಒಂದೊಂದು ನಿಜ. ಎಲ್ಲರ ಪಾಲಿಗೂ ಎಲ್ಲವೂ ಸುಳ್ಳು. ಒಂದು ಒಳ್ಳೆಯ ಕತೆ ಹೇಗೆ ಸೃಷ್ಟಿಯಾಗುತ್ತದೆ ಅನ್ನುವುದು ಬಹುಶಃ ಕತೆಗಾರನಿಗು ಗೊತ್ತಿರುವುದಲ್ಲ. ಕವಿಗೂ ಗೊತ್ತಿರುವುದಲ್ಲ.
 
ಆಳದನುಭವವನ್ನು ಮಾತು ಕೈ ಹಿಡಿದಾಗ
ಕಾವು ಬೆಳಕಾದಾಗ ಒಂದು ಕವನ.
ಆದರೆ ಆಳದನುಭವವನ್ನು ಮಾತು ಕೈ ಹಿಡಿಯುವುದು ಯಾವಾಗ? ಕಾವು ಯಾವಾಗ ಬೆಳಕಾಗುತ್ತದೆ? ಅದು ಯಾವ ಕವಿಗೂ ಬಹುಶಃ ಗೊತ್ತಿರುವುದಿಲ್ಲ. ಏಕಾಂತ, ಏಕಾಗ್ರತೆ ಧ್ಯಾನಸ್ಧ ಸ್ಧಿತಿ ಅಂತೆಲ್ಲ ನಾವೆಷ್ಟೇ ಹೇಳಿಕೊಂಡರೂ ಕೊನೆಗೂ ಅಕ್ಷರವಾದಾಗ ಏನು ಉಳಿಯುತ್ತದೆ ಎಂಬುದು ನಿಗೂಢವೇ.

ಏನು ಬರೀಬೇಕು ಅಂತ ನಾನು ತೀರ್ಮಾನ ಮಾಡಿ ಕೊಂಡಿದ್ದೀನಿ. ಕತೆ ಹೀಗೆ ಶುರುವಾಗುತ್ತೆ, ಹೀಗೆ ಮುಂದುವರಿಯುತೆ, ಹೀಗೆ ಕೊನೆಯಾಗುತ್ತೆ ಅಂತ ನಿರ್ಧರಿಸಿ ಬರೆಯುವುದಕ್ಕೆ ಹೊರಡುವ ಕತೆಗಾರ ಕೂಡ ಎಡುವುತ್ತಾನೆ. ಹಾಗೆ ಎಡವಿದಾಗಲೇ ಅಂದುಕೊಳ್ಳದೇ ಇದ್ದದ್ದು ಹೊಳೆಯುತ್ತದೆ. ಹಾಗೆ ಹೊಳೆದಾಗಲೇ ಕತೆ ಗಾರನ ಊಹೆಯನ್ನೂ ಮೀರಿದ್ದೇನೋ ಸೃಷ್ಟಿಯಾಗುತ್ತದೆ.
 
ಅದು ಮ್ಯಾಜಿಕ್ ಅಧವಾ ಪವಾಡ. ಅಂತದೊಂದು ಮಾಂತ್ರಿಕ ಶಕ್ತಿ ಇರುವುದರಿಂದಲೇ ಕತೆಯೋ ಕವಿತೆಯೋ ಎಲ್ಲರ ಸೊತ್ತಾಗುತ್ತದೆ. ಎಲ್ಲರಿಗೂ ಆಪ್ತವಾಗುತ್ತದೆ. ಲೆಕ್ಕಾಚಾರ ಹಾಕಿ ಬರೆದದ್ದು ಗಣಿತದ ಸೂತ್ರಗಳ ಪ್ರಕಾರ ಬಿಡಿಸಿದ ಬೀಜರೂಪ ಸಮಸ್ಯೆಯಂತೆ ಕಂಡರೆ, ಲೆಕ್ಕ ತಪ್ಪಿದಾಗ ಮೂಡಿದ್ದು ಎಲ್ಲಾ ಲೆಕ್ಕಾಚಾರಗಳನ್ನೂ ಮೀರಿಸಿ ಬೆಳೆದುಬಿಡುತ್ತದೆ. ಅದಕ್ಕೆ ಕವಿ ಪರವಶಜೀವಿ. ದೇವರು ರುಜು ಮಾಡುತ್ತಾನೆ. ಕವಿ ಪರವಶನಾಗುತ್ತಾ ಅದನ್ನು ನೋಡುತ್ತಾನೆ.
 
ಇಲ್ಲದೇ ಹೋದರೆ ಯಾವುದು ಒಳ್ಳೆಯ ಸಾಹಿತ್ಯ, ಒಳ್ಳೆಯ ಪ್ರಸಂಗ ಅನ್ನುವುದು ಎಲ್ಲರಿಗೂ ಗೊತ್ತಿರುತೆ ತಾನೇ. ಮಹಾಭಾರತ, ರಾಮಾಯಣದಂಧ, ಅಣ್ಣಾ ಕರೆನಿನಾದಂತ, ವಾರ್ ಅಂಡ್ ಪೀಸ್ ನಂಥ , ಮಾರ್ಕ್ವೆಸ್ ನ ‘ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ನಂಥ ಒಂದು ಕೃತಿಯನ್ನು ಯಾರು ಬೇಕಾದರೂ ಬರೆಯಬಹುದಲ್ಲ. ಅಂಥ ಕೃತಿಗಳ ಹೂರಣ ಏನು, ಕತೆಯನ್ನು ಅದೇ ಶೈಲಿಯಲ್ಲಿ ಹೇಳಿ ಗೆಲ್ಲಬಹುದಲ್ಲ.
 
ಕತೆ ಹೇಳುವುದು ಕಲಿಯುವನ್ತಹದ್ದು ಅಲ್ಲ. ಹತ್ತಿಪ್ಪತ್ತು ಒಳ್ಳೆಯ ಪ್ರಸಂಗಗಳನ್ನು ಒಟ್ಟಾಗಿಸಿದರೆ ಅದು ಒಳ್ಳೆಯ ಕತೆಯೋ ಕಾದಂಬರಿಯೊ ಆಗುವುದಿಲ್ಲ. ಅದು ಹಾಗೊಂದು ಪ್ರೀತಿಸುವಂಥ ಕತೆಯೋ ಕವಿತೆಯೊ ಕಾದಂಬರಿಯೋ ಆಗುವುದು ಆಯಾ ಕವಿಯ ಪುಣ್ಯ ಅಷ್ಟೇ.
 
ಸಿನೆಮಾ ಕೂಡ ಅಷ್ಟೇ. ಕತೆ ಏಕಾಂತದಲ್ಲಿ ಹುಟ್ಟಿದರೆ, ಸಿನೆಮಾ ಲೋಕಾಂತದಲ್ಲಿ ಹುಟ್ಟುತ್ತದೆ. ಪ್ರತಿಯೊಂದು ದೃಶ್ಯವೂ ಸೊಗಸಾಗಿರಬೇಕು, ಅರ್ಥಪೂರ್ಣ ವಾಗಿರಬೇಕು ಎಂಬ ಒತ್ತಾಯದಲ್ಲೇ ಹಲವಾರು ಮಂದಿಕುಳಿತು ಸಿನೆಮಾದ ಕತೆ ಮಾಡುತ್ತಾರೆ. ಹಾಗೆ ಮಾಡಿದ ಕತೆ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಅದೇ ಅಂತಿಮ ಅಲ್ಲ. ಚಿತ್ರಕತೆ, ಸಂಭಾಷಣೆ ಸೊಗಸಾಗಿದ್ದ ಮಾತ್ರಕ್ಕೆ ಸಿನೆಮಾ ಕೂಡ ಸೊಗಸಾಗಿರಬೇಕು ಎಂದೇನಿಲ್ಲ. ಸಿನೆಮಾ ಸೊಗಯಿಸುವುದು ಮತ್ತದೇ ಮ್ಯಾಜಿಕ್ ನಿಂದ. ಕತೆಯೇ ಬೇರೆ ಚಿತ್ರಕತೆಯೇ ಬೇರೆ, ಸಿನೆಮಾ ರೂಪವೇ ಬೇರೆ. ಅಲ್ಲಿ ಅದು ಇನ್ನೇನೋ ಆಗಿ ಸಿನೆಮಾ ಆಗಬೇಕು.
 
ಒಂದು ಒಳ್ಳೆಯ ಕಾದಂಬರಿ ಬರೆದವನ ಮತ್ತೊಂದು ಕಾದಂಬರಿಯೋ ಕತೆಯೋ ಚೆನ್ನಾಗಿರುತ್ತದೆ ಅನ್ನುವ ನಿರೀಕ್ಷೆ ಇಟ್ಟುಕೊಳ್ಳುವ ಹಾಗೂ ಇಲ್ಲ. ಅದು ಸ್ವತಃ ಲೇಖಕನಿಗೂ ಗೊತ್ತಿರುವುದಲ್ಲ. ಬರೆಯತ್ತಾ ಅವನು ಬಿಡುಗಡೆ ಹೊಂದುತ್ತಾ ಹೋಗುತ್ತಾನೆ. ಆಕ್ಷಣದಲ್ಲಿ ಅವನು ಅನುಭವಿಸಿದ ಸಂತೋಷ ಮಾತ್ರವೇ ಅವನದು. ಬರೆದಾದ ಮೇಲೆ ಅದನ್ನು ತಿದ್ದುತ್ತೇನೆ, ಮತ್ತೆ ಬರೆಯುತ್ತೇನೆ ಅನ್ನುವುದು ಸುಳ್ಳು. ಹಾಗೆ ಮತ್ತೊಮ್ಮೆ ಬರೆಯಲು ಹೋದಾಗ ಅದು ಬೇರೆಯೇ ಆಗುತ್ತದೆ. ಬೇರೆ ಆಗದೆ ಹೋದರೆ ಅವನು ಕವಿಯಲ್ಲ, ಕತೆಗಾರನೂ ಅಲ್ಲ, ವರದಿಗಾರ.
 
ಹೀಗಾಗಿ ನಾವು ಒಬ್ಬ ಲೇಖಕನ ಪದಪ್ರಯೋಗ, ಶಬ್ದ ಭಂಡಾರ, ಶೈಲಿಗಳನ್ನು ಊಹಿಸಬಹುದೇ ಹೊರತು ಕತೆ ಕಟ್ಟಿಕೊಡುವ ಅಪೂರ್ವ ಮಾಂತ್ರಿಕತೆಯನ್ನು ಖಂಡಿತಾ ಊಹಿಸಲಾರೆವು. ಅದು ಕತೆಗಾರನೂ ಸೇರಿದಂತೆ ಎಲ್ಲರ ಪಾಲಿಗೂ ನಿಗೂಢವೇ. ಆ ಮಿಸ್ಟರಿಯೇ ಇವತ್ತು ಕಲೆಯನ್ನು ವಿಜ್ಘಾನ. ವ್ಯಾವಹಾರಿಕತೆ, ದುಡ್ಡಿನ ದರ್ಪ ಮತ್ತು ನಾನು ಏನು ಬೇಕಾದರೂ ಮಾಡಿ ಗೆಲ್ಲ ಬಲ್ಲೆ ಎಂಬ ಅಹಂಕಾರ ದಿಂದ ಕಾಪಾಡಿರುವುದು ಸೃಜನಶೀಲ ಬರವಣಿಗೆ ಅನ್ನುವುದು ಮೂಲಭೂತ ಪ್ರವೃತಿಯ ಹಾಗೆ. ಆಹಾರ ನಿದ್ರೆ ಮೈಥುನದ ಹಾಗೆ. ಆ ಕ್ಷಣಕ್ಕೆ ಎಷ್ಟೆಷ್ಟು ಒದಗುತ್ತದೊ ಅಷ್ಟು. ಒಮ್ಮೊಮ್ಮೆ ಮೃಷ್ಟಾನ್ನವೂ ಸವಿಯಾಗಿರುತ್ತದೆ.
 
ಕವಿಯೋ, ಕತೆಗಾರನೋ, ಕಾದಂಬರಿಕಾರನೋ ಹೆಗಲಿಗೊಂದು ಜೋಳಿಗೆ ಹಾಕಿಕೊಂಡು ಅಲೆಯುತ್ತಿರುತ್ತಾನೆ. ಭವತಿ ಭಿಕ್ಷಾಂ ದೇಹಿ ಎನ್ನುತ್ತಾ ವರ್ತಮಾನದ ಮುಂದೆ ನಿಲ್ಲುತ್ತಾನೆ. ಆ ಕ್ಷಣ ಅವನಿಗೆ ಏನನ್ನು ದಾನ ಮಾಡುತ್ತದೋ ಅದೇ ಅವನ ಆ ಹೊತ್ತಿನ ಭಿಕ್ಷೆ. ಆ ಭಿಕ್ಷೆಯ ಮೇಲೆ ಅವನಿಗೆ ಯಾವ ಅಧಿಕಾರವೂ ಇಲ್ಲ. ಅದನ್ನು ಅವನು ನಿರಾಕರಿಸುವ ಹಾಗೂ ಇಲ್ಲ.
 
ಇಂಧ ಅಕ್ಷರದ ಭಿಕ್ಷಾಪಾತ್ರೆ ಹಿಡಿದು, ಅನುಭವದರ ಮನೆಯ ಮುಂದೆ ನಿಂತವನ ಜೋಳಿಗೆಯಲ್ಲಿ ಆ ದಿನ, ಆ ಕ್ಷಣ ಏನಿರುತ್ತೆ ಅಂತ ಯಾರಿಗೆ ಗೊತ್ತು? ಕವಿಗೂ ಗೊತ್ತಿಲ್ಲದ್ದನ್ನು ತಮಗೆ ಗೊತ್ತು ಎನ್ನುವ ವಿಮರ್ಶಕರ ಬಗ್ಗೆ ಏನನ್ನೋಣ?
+++
ಒಂದು ಕೃತಿಯನ್ನು ಯಾರಾದರೂ ಯಾಕೆ ಓದುತ್ತಾರೆ? ಆ ಕ್ಷಣದ ಸಂತೋಷಕ್ಕೆ, ಖುಷಿಗೆ, ಅದು ಒದಗಿಸುವ ಸಾಂತ್ವನಕ್ಕೆ, ಸಮಾಧಾನಕ್ಕೆ. ಅದಕ್ಕೊಂದು ಸಾಂಸ್ಕೃತಿಕ ತಳಹದಿ, ತಾತ್ವಿಕ ನೆಲೆಗಟ್ಟು ಇರಬೇಕಾ? ಒಂದು ಕೃತಿ ಸಾಮಾಜಿಕವಾಗಿ ಮಹತ್ವದ್ದನ್ನೇನಾದರೂ ಹೇಳುತ್ತಿರಬೇಕಾ?
 
ರಸಗ್ರಹಣ, ಕಾವ್ಯಾಸ್ವಾದನೆ ಎಲ್ಲವೂ ಒಂದು ವಿಚಿತ್ರ ಕಾಲಘಟ್ಟದಲ್ಲಿ ಅರ್ಥ ಕಳೆದುಕೊಂಡು ನಿಂತಿವೆ. ತೆಯನ್ನೂ ಕಾದಂಬರಿಯನ್ನೂ, ಕವಿತೆಯನ್ನೂ ಕೇವಲ ಕವಿತೆಯಾಗಿಯೋ ಕಾವ್ಯವಾಗಿಯೋ ಕಾದಂಬರಿಯಾ ಗಿಯೋ ನೋಡುವುದನ್ನು ಬಿಟ್ಟು ನಮ್ಮ ಬಹುತೇಕ ವಿಮರ್ಶಕರು, ಸಾಮಾಜಿಕವಾಗಿ ಅದು ಯಾವ ಸ್ಟೇಟ್ಮೆಂಟ್ ಮಾಡುತ್ತದೆ ಎನ್ನುವುದನ್ನು ನೋಡುತ್ತಾರೆ. ಸಂಸ್ಕೃತಿ ವಿಮರ್ಶೆ ಎನ್ನುವುದು ಕಾವ್ಯದ ಸಾಹಿತ್ಯದ ವಿರುದ್ದವಾಗಿ ಕೆಲಸ ಮಾಡಲು ಆರಂಭಿಸಿ ವರ್ಷಗಳೇ ಕಳೆದಿವೆ.
 
ಸಂಸ್ಕೃತಿ ವಿಮರ್ಶೆ ಯಾಕೆ ಅಪಾಯಕಾರಿ ತಪ್ಪಾಗುತ್ತದೆ. ಸಂಸ್ಕೃತಿ ವಿಮರ್ಶೆ ಎಂಬುದು ಸಾಹಿತ್ಯ ವಿಮರ್ಶೆಯ ವ್ಯಾಪ್ತಿಯನ್ನು ಮೀರಿದ್ದು. ಅದು ಸಾಹಿತ್ಯದ ಜೊತೆಗೇ, ತಾತ್ವಿಕತೆಯನ್ನು ಸಾಮಾಜಿಕ ಸ್ಧಿತಿಗತಿಯನ್ನು ಏಕಕಾಲದಲ್ಲಿ ಒಳಗೊಳ್ಳುತ್ತದೆ. ಹೀಗಾಗಿ ಸಾಹಿತ್ಯ ಕೃತಿಯ ಮೌಲ್ಯ ಮಾಪನ, ರಸಗ್ರಹಣ ಹಿಂದಕ್ಕೆ ಸರಿದು, ಆ ಕೃತಿಯ ಮೂಲಕ ಇನ್ನೇನನ್ನೋ ಹುಡುಕುವ ಚಾಳಿ ಶುರುವಾಗುತ್ತದೆ.
 
ಲೇಖಕನ ನಿಲುವು ಸರಿಯೋ ತಪ್ಪೋ, ಅವನು ಪಾತ್ರ ಗಳ ಮೂಲಕ ಸದ್ಯದ ರಾಜಕೀಯ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಗ್ರಹಿಸುವ ಪ್ರಯತ್ನ ಮಾಡಿದ್ದಾನಾ? ಎಲ್ಲ ವರ್ಗಗಳಿಗೂ ಅಲ್ಲಿ ಪ್ರಾತಿನಿಧ್ಯ ಸಿಕ್ಕಿದೆಯಾ? ಒಂದು ಪಾತ್ರವನ್ನು ಒಬ್ಬ ಕತೆಗಾರ ಸೃಷ್ಟಿಸುವ ಹೊತ್ತಿಗೆ ಅವನ ಅಭಿಪ್ರಾಯ ಏನು? ಅವನು ಯಾರನ್ನು ಬೆಂಬಲಿಸುತ್ತಾನೆ? ಅಲ್ಪಸಂಖ್ಯಾತರ ಕುರಿತು ಅವನು ಏನನ್ನು ಹೇಳುತ್ತಾನೆ? ಅವನು ಸನಾತನ ವಾದಿಯೇ? ಹೀಗೆ ಕೃತಿಗೆ ಏನಕೇನ ಸಂಬಂಧವಿಲ್ಲದ ಅಂಶಗಳನ್ನು ಮುಂದಿಟ್ಟುಕೊಂಡು ಕೃತಿಯನ್ನು ಚರ್ಚಿಸಲಾಗುತ್ತದೆ.
 
ಬಹುಶಃ ಓದುಗ ಸಾಹಿತ್ಯ ಕೃತಿಯ ಮೇಲಿನ ಪ್ರೀತಿ, ನಂಬುಗೆ ಕಳೆದುಕೊಳ್ಳಲು ಇದೂ ಒಂದು ಕಾರಣವಿರಬಹುದು. ಆಧುನಿಕ ಸಮಾಜದ ಎಲ್ಲ ಸಮಸ್ಯೆಗಳ ತಾಯಿಬೇರು ಎನ್ನುತ್ತಾರೆ ಮನೋ ವಿಜ್ಘಾನಿಗಳು. ನಮ್ಮ ಒತ್ತಡ, ಉದ್ವೇಗ, ನಿರುತ್ಸಾಹ, ಲೋಲುಪತೆ-ಎಲ್ಲದರ ಹಿಂದೆ ಕೆಲಸ ಮಾಡುವ ಶಕ್ತಿ ಸ್ವಾರ್ಥವಲ್ಲ. ಅಹಂಕಾರವಲ್ಲ, ಲೋಭ, ಮೋಹ, ಮಾತ್ಸರ್ಯವಲ್ಲ. ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿರುವ ಪಾಪಪ್ರಜ್ಞೆ. ಪುರಾಣಗಳಲ್ಲಿ ಬರುವ ಪಾಪದ ಕಲ್ಪನೆಗೆ ವರ್ತಮಾನದಲ್ಲಿ ಉದಾಹರಣೆಗಳು ಸಿಗುತ್ತಿವೆ.
ಈ ಬಗ್ಗೆ ಮೊದಲ ಮಾತಾಡಿದವನು ಕಾಫ್ಕಾ. ಈ ಕಾಫ್ಕಾನ ಡೈರಿಯೇ ಕುತೂಹಲಕಾರಿ.

‍ಲೇಖಕರು avadhi

24 October, 2008

5 Comments

  1. malnadhudgi

    ಕವಿಯೋ, ಕತೆಗಾರನೋ, ಕಾದಂಬರಿಕಾರನೋ ಹೆಗಲಿಗೊಂದು ಜೋಳಿಗೆ ಹಾಕಿಕೊಂಡು ಅಲೆಯುತ್ತಿರುತ್ತಾನೆ. ಭವತಿ ಭಿಕ್ಷಾಂ ದೇಹಿ ಎನ್ನುತ್ತಾ ವರ್ತಮಾನದ ಮುಂದೆ ನಿಲ್ಲುತ್ತಾನೆ. ಆ ಕ್ಷಣ ಅವನಿಗೆ ಏನನ್ನು ದಾನ ಮಾಡುತ್ತದೋ ಅದೇ ಅವನ ಆ ಹೊತ್ತಿನ ಭಿಕ್ಷೆ. ಆ ಭಿಕ್ಷೆಯ ಮೇಲೆ ಅವನಿಗೆ ಯಾವ ಅಧಿಕಾರವೂ ಇಲ್ಲ. ಅದನ್ನು ಅವನು ನಿರಾಕರಿಸುವ ಹಾಗೂ ಇಲ್ಲ.
    Super You only can write like this

  2. Sharath Chandra

    I can only say “Thank u very much”…!!

  3. ಮಂದಾರ

    ಈಗೀಗ ಸಣ್ಣಕಥೆಗಳನ್ನು ಬರೆಯಲು ಪ್ರಯತ್ನಿಸುತ್ತಿರುವ ನನಗೆ ಜೋಗಿ ಲೇಖನ ಒಳ್ಳೆ ಟಿಪ್ಸ್‌ಗಳನ್ನು ನೀಡಿದೆ. ಅವಧಿಗೂ, ಜೋಗಿಗೂ ಥ್ಯಾಂಕ್ಸ್

  4. shreedevi kalasad

    ಸಂಸ್ಕೃತಿ ವಿಮರ್ಶೆ ಯಾಕೆ ಅಪಾಯಕಾರಿ ತಪ್ಪಾಗುತ್ತದೆ. ಸಂಸ್ಕೃತಿ ವಿಮರ್ಶೆ ಎಂಬುದು ಸಾಹಿತ್ಯ ವಿಮರ್ಶೆಯ ವ್ಯಾಪ್ತಿಯನ್ನು ಮೀರಿದ್ದು. ಅದು ಸಾಹಿತ್ಯದ ಜೊತೆಗೇ, ತಾತ್ವಿಕತೆಯನ್ನು ಸಾಮಾಜಿಕ ಸ್ಧಿತಿಗತಿಯನ್ನು ಏಕಕಾಲದಲ್ಲಿ ಒಳಗೊಳ್ಳುತ್ತದೆ. ಹೀಗಾಗಿ ಸಾಹಿತ್ಯ ಕೃತಿಯ ಮೌಲ್ಯ ಮಾಪನ, ರಸಗ್ರಹಣ ಹಿಂದಕ್ಕೆ ಸರಿದು, ಆ ಕೃತಿಯ ಮೂಲಕ ಇನ್ನೇನನ್ನೋ ಹುಡುಕುವ ಚಾಳಿ ಶುರುವಾಗುತ್ತದೆ.
    ಜೋಗಿಯವರೇ ಇದು ಹೌದೇನೋ..

  5. ಡಿ.ಎಸ್.ರಾಮಸ್ವಾಮಿ

    ಪ್ರಿಯರಾದ ಜೋಗಿಯವರಲ್ಲಿ,
    ನಿಮ್ಮ ಬರಹಗಳ ರೀತಿ ಈ ಕಾಲದಲ್ಲಿ ವಿರಳ. ಉಪದೇಶ ಅಥವ ದೀಕ್ಷೆಕೊಡುವವರ ಥರ ಮಾತಾಡುವವರ ನಡುವೆ ಎದೆಯಾಳಕ್ಕೆ ಇಳಿಯುವ ಹಾಗೆ ಅಹುದು ಅಹುದು ಅನ್ನುವ ಹಾಗೆ ಬರೆಯುತ್ತೀರಲ್ಲ,ಅದು ನಿಮ್ಮ ಪೂರ್ವಾರ್ಜಿತ ನಮ್ಮ ಅಯಾಚಿತ. ಅಂದಹಾಗೆ ಹಿಟ್ ವಿಕೆಟ್ ಯಾವಾಗ ಉದುರುತ್ತೆ? ಕುತೂಹಲ ಹುಟ್ಟಿಸಿದೆ. ಈ ಟಿವಿಯ ’ಬಂದೇ ಬರತಾವ ಕಾಲ’ ಒಳ್ಳೆಯ ಕಾಕ್ಟೇಲ್. ಆದರೆ ಭೈರಪ್ಪನವರ ಬಗ್ಗೆ ಮೊನ್ನೆ ಕೆಂಡಸಂಪಿಗೆಯಲ್ಲಿ ಬರೆದುದು ಯಾಕೆ ಅಷ್ಟು ಚರ್ಚೆಗೆ ಕಾರಣವಾಯಿತೋ ಅಂತೂ ಇದು ನಮ್ಮ ಕಾಲದ ಎಡ ಬಲಗಳಿಗಿಂತಲೂ ಗುಂಪುಗಾರಿಕೆಯ ಥರವೇ ಕಾಣುತ್ತಿದೆ. ಕನ್ನಡಪ್ರಭದ ದೀಪಾವಳಿ ವಿಶೇಷಾಂಕ ಕೂಡ ನಿಮ್ಮ ಕನಸನ್ನು ನಮ್ಮವರೆಗೂ ಮುಟ್ಟಿಸಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading