ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆದಿದ್ದಾರೆ: ಅಂತ್ಯ ಸಂಸ್ಕಾರಂ

ಶಟಪ್

ಹಾಗಂತ ಒಮ್ಮೆ ರೇಗಿ ತನ್ನ ಅವಿವೇಕಕ್ಕೆ ತಾನೇ ಬೈದುಕೊಳ್ಳುತ್ತಾ ಮುಚ್ಚುಬಾಯಿ ಸುಮ್ಮನಾಯಿತು. ಅಲ್ಲೇ ಪಕ್ಕದಲ್ಲಿ ಕೂತಿದ್ದ ಉಸಿರೆತ್ತಬೇಡ ಸಣ್ಣಗೆ ನಕ್ಕಿತು. ನಿನ್ನ ನೀನು ಮರೆತರೇನು ಸುಖವಿದೆ, ತನ್ನತನವ ತೊರೆದರೇನು ಸೊಗಸಿದೆ ಎಂದು ಹಳೇಹಾಡು ಗುನುಗಿಕೊಂಡು ತುಂಟತನದಿಂದ ನಕ್ಕಿತು.

ಗಾಂಭೀರ್ಯಕ್ಕೂ ಸಿದ್ಧಾಂತಕ್ಕೂ ಆ ನಗು ಎಳ್ಳಷ್ಟೂ ಇಷ್ಟವಾಗಲಿಲ್ಲ. ನಾವು ಅಳಿವಿನ ಅಂಚಿನಲ್ಲಿದ್ದೇವೆ, ಕಷ್ಟಕಾಲದಲ್ಲಿದ್ದೇವೆ ಅನ್ನುವುದನ್ನು ಮರೆತು ನಗುತ್ತಿರುವ ಇವರ್ಯಾರಿಗೂ ತಮ್ಮ ತಮ್ಮ ಪರಿಸ್ಥಿತಿಯ ಅರಿವಿಲ್ಲ ಎಂದು ಗಾಂಭೀರ್ಯ ಪಿಸುಗುಟ್ಟಿತು. ಇವರು ಉದ್ಧಾರವಾಗೋದಿಲ್ಲ ಎಂದು ಗೊಣಗಿತು. ಉದ್ದಾರವಾಗೋದು ಹಾಗಿರಲಿ, ಉಳಿಗಾಲವೇ ಇಲ್ಲವಲ್ಲ ಎಂದು ಸಿದ್ಧಾಂತ ನಿಟ್ಟುಸಿರಿಟ್ಟಿತು.

ಸುದ್ದಿಗಂತೂ ಸಿಟ್ಟು ಬಂದಿತ್ತು. ನನ್ನನ್ನು ಎಲ್ಲರೂ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಹಳ್ಳಿಗಳಲ್ಲಿ ಮಾತ್ರ ಕೆಲವರು ಹಳಬರು ನನಗೆ ಗೌರವ ಕೊಡುತ್ತಾರೆ. ಉಳಿದಂತೆ ಯಾರೂ ನನ್ನನ್ನು ಕರೆಯುವುದೇ ಇಲ್ಲ. ನಾಲಗೆ ಹೊರಳದೇ ಇರುವವರು ಕೂಡ ಆ ಕೆಟ್ಟ ಪದ ಬಳಸುತ್ತಾರೆ ಎಂದು ಸುದ್ದಿ ಗೊಣಗಾಡಿತು. ಇದೂ ಸುದ್ದಿಯಾಗುವುದಿಲ್ಲ ಎಂದು ಸಿದ್ಧಾಂತ ಅನುಕಂಪದಿಂದ ಸುದ್ದಿಯನ್ನೇ ನೋಡಿತು. ಸುದ್ದಿಯ ಕಣ್ಣಂಚಲ್ಲಿ ನೀರಿತ್ತು.

ಹೀಗೆ ಇದ್ರೆ ನಾವು ಖಂಡಿತಾ ಉದ್ಧಾರ ಆಗೋಲ್ಲ. ನಮ್ಮಂಥ ಅಪರೂಪದ ಜನಾಂಗಕ್ಕೆ ಸೇರಿದವರೆಲ್ಲ ಒಂದಾಗಲೇ ಬೇಕು ಎಂದು ಆಜಾತಶತ್ರು ವಾದಿಸಿತು. ಅಜಾತಶತ್ರುವಿಗೆ ಐತಿಹಾಸಿಕ ಕಾದಂಬರಿಗಳನ್ನು ಬರೆಯುವವರು ಕಡಿಮೆಯಾದ ನಂತರ ಬೇಡಿಕೆಯೇ ಇರಲಿಲ್ಲ. ಹಾಗೇ ವೀರಮಾರ್ತಾಂಡ, ಮುಕುಟಮಣಿ, ಅಗ್ರಜರು ಕೂಡ ದಿಕ್ಕಿಲ್ಲದೇ ಓಡಾಡುತ್ತಿದ್ದರು. ಅವರನ್ನು ನಿಘಂಟಿನಲ್ಲಿ ಹುಡುಕುವವರೂ ಕೂಡ ಕಣ್ಣಾಡಿಸದೇ ಮುಂದೆ ಸಾಗುತ್ತಿದ್ದರು.

ನಿಜಕ್ಕೂ ನಮ್ಮನ್ನು ಕಾಪಾಡಿರೋದು ಯಾರು ಗೊತ್ತಾ. ಪೌರಾಣಿಕ ನಾಟಕದೋರು. ದೇವುಡು ಇದ್ದ ಕಾಲಕ್ಕೆ ಹೇಗಿದ್ದೆ ಗೊತ್ತಾ ನಾನು. ಈಗಂತೂ ಯಾರೂ ನನ್ನ ಕೇರೇ ಮಾಡೋದೇ ಇಲ್ಲ. ನಮಗೆಂಥ ಬಲ ಇತ್ತು ಗೊತ್ತಾ. ಈಗ ರಾಜ್ಯ ಕಳಕೊಂಡ ಪಾಂಡವರ ಥರ ಆಗಿಬಿಟ್ಟಿದ್ದೀವಿ. ಏನಾದರೂ ಮಾಡಿ ಮತ್ತೆ ಪ್ರವರ್ಧಮಾನಕ್ಕೆ ಬರಲೇಬೇಕು ಎಂದು ಪಟ್ಟಾಭಿಷೇಕ ಅಬ್ಬರಿಸಿತು. ಪಟ್ಟಾಭಿಷೇಕ ತನ್ನನ್ನು ನೆನಪಿಸಿಕೊಂಡಿದ್ದಕ್ಕೆ ಪ್ರವರ್ಧಮಾನಕ್ಕೆ ಖುಷಿಯಾಯಿತು. ಅದು ತುಸುವೇ ನಾಚಿ ಕೆನ್ನೆ ಕೆಂಪು ಮಾಡಿಕೊಂಡಿತು.

ಕುಮಾರವ್ಯಾಸ ಇಲ್ಲದೇ ಹೋಗಿದ್ದರೆ ನಾನಂತೂ ಬದುಕಿರುತ್ತಲೇ ಇರಲಿಲ್ಲ. ಈಗಂತೂ ಅವನನ್ನು ನೆನಪಿಸಿಕೊಳ್ಳುವವರೂ ಇಲ್ಲ. ಹಾಗೆ ನೋಡಿದರೆ ನನ್ನನ್ನು ಉಳಿಸಿಕೊಂಡು ಬರುತ್ತಿರುವವರು ವಿದ್ಯಾರ್ಥಿಗಳು. ಬೈದುಕೊಳ್ಳುತ್ತಾರೆ ನಿಜ. ಆದರೆ ಬೈದುಕೊಂಡೇ ನನ್ನನ್ನು ಸ್ಮರಿಸುತ್ತಾರೆ ಎಂದು ಧರಿತ್ರೀಪಾಲ ಕಣ್ತುಂಬಿಕೊಂಡಿತು. ನನ್ನನ್ನೇ ಕೇಳೋರಿಲ್ಲ, ನಿನ್ನನ್ನು ಯಾರಮ್ಮಾ ಕೇಳ್ತಾರೆ ಎಂದ ಬೆಮರ್ದಂ ಕಂಕುಳು ಒರೆಸಿಕೊಂಡು ತಲೆಮೇಲೆ ಬಟ್ಟೆಹಾಕಿಕೊಂಡು ಕೂತಿತು.

ನಾವೆಲ್ಲರೂ ಸೇರಿ ಏನಾದರೂ ಮಾಡಲೇಬೇಕು ಎಂಬ ಉತ್ಸಾಹವಂತೂ ಅವಕ್ಕೆ ಬಂದುಬಿಟ್ಟಿತ್ತು. ನಮ್ಮನ್ನೆಲ್ಲ ಕಠಿಣ ಅಂದ್ಕೊಂಡು ಬಿಟ್ಟಿದ್ದಾರೆ. ಏನಂಥ ಕಷ್ಟ ಕೊಟ್ಟಿದ್ದೀವಿ ನಾವು. ಬಾಲ್ಯದಿಂದಲೂ ನಮ್ಮ ಜೊತೆಗಿದ್ದವರನ್ನು ಕೊನೇ ತನಕ ಕೈ ಬಿಟ್ಟಿದ್ದೀವಾ. ಪ್ರಾಣಕ್ಕೆ ಪ್ರಾಣ ಕೊಟ್ಟಿಲ್ವಾ ನಾವು. ಯಾಕೆ ಹೀಗೆ ನಮ್ಮನ್ನು ಎಲ್ಲರೂ ಸೇರಿ ದೂರ ಇಡೋಕೆ ನೋಡ್ತಿದ್ದಾರೆ ಎಂದು ಅವೆಲ್ಲ ಸಂಕಟಪಡುತ್ತಾ, ಕಕ್ಕುಲಾತಿಗೊಳ್ಳುತ್ತಾ, ಬೇಸರಪಟ್ಟುಕೊಳ್ಳುತ್ತಾ ಮಾತಾಡುತ್ತಾ ಕೂತವು.

ಹೀಗೆ ನೀವು ನೀವೇ ಸೇರಿ ಮಾತಾಡೋದರಿಂದ ಯಾವ ಪ್ರಯೋಜನವೂ ಇಲ್ಲ ಕಣ್ರೋ. ಏನಾದ್ರೂ ಮಾಡಿ ನಾವು ಹೋರಾಟ ಮಾಡಬೇಕು ಎಂದು ಛತ್ರಪತಿ ಹೇಳಿತು. ಛತ್ರಪತಿಯ ಮಾತಿನಲ್ಲಿ ಎಲ್ಲರಿಗೂ ಅಪಾರ ನಂಬಿಕೆ ಇದ್ದದ್ದರಿಂದ ಅವೆಲ್ಲವೂ ಅದರ ಜೊತೆ ಕೈ ಜೋಡಿಸಲು ಒಪ್ಪಿಕೊಂಡವು.

ಹೋರಾಟದ ಸ್ವರೂಪ ಹೇಗಿರಬೇಕು ಎಂದು ಮೊದಲು ಇತ್ಯರ್ಥವಾಗಬೇಕು ಎಂದು ಷಟ್ಪದಿ ಒತ್ತಾಯಿಸಿತು. ಅಷ್ಟಷಟ್ಪದಿ ಅದಕ್ಕಿಂತ ನಾವು ಚಲಾವಣೆಗೆ ಬರುವುದು ಮುಖ್ಯ ಎಂದು ಪ್ರತಿಪಾದಿಸಿತು. ಶಾರ್ದೂಲ ವಿಕ್ರೀಡಿತಕ್ಕಂತೂ ತನ್ನನ್ನು ವ್ಯಾಕರಣಿಗಳೂ ನೆನಪಿಸಿಕೊಳ್ಳುತ್ತಿಲ್ಲ ಎಂದು ಸಂಕಟವಾಗುತ್ತಿತ್ತು. ಗಂಟೆಗಟ್ಟಲೆ ನಡೆದ ಚರ್ಚೆಯ ನಂತರ ಅವೆಲ್ಲರೂ ಸೇರಿ ಮೂರು ತೀರ್ಮಾನಗಳನ್ನು ಕೈಗೊಂಡವು:

1. ಆಧುನಿಕ ಕಾಲಘಟ್ಟದಲ್ಲಿ ತಮ್ಮನ್ನು ಅತಿಯಾಗಿ ಪ್ರೀತಿಸಿದ ಕುವೆಂಪು ಅವರನ್ನು ತಮ್ಮ ಮಾರ್ಗಪ್ರವರ್ತಕರೆಂದು ಸ್ವೀಕರಿಸುವುದು.

 

2. ತಮ್ಮನ್ನು ತುಳಿದು ನಾಶ ಮಾಡಿದ ನವ್ಯ ಸಾಹಿತ್ಯದ ಹರಿಕಾರರ ವಿರುದ್ಧ ಸಮರ ಸಾರುವುದು

 

3. ಇವೆರಡಕ್ಕಿಂತ ಮುಖ್ಯವಾಗಿ ತಮ್ಮನ್ನು ಮತ್ತೆ ಚಲಾವಣೆಗೆ ತರಬಲ್ಲ ಅತ್ಯುತ್ತಮ ಸಾಹಿತಿಯನ್ನು ಹುಡುಕಿ, ಅವನ ಬಳಿ ಹೋಗಿ ತಮ್ಮ ಕಷ್ಟ ಹೇಳಿಕೊಂಡು, ಆತನಿಗೆ ಬೆಂಗಾವಲಾಗಿ ನಿಂತು ತಮ್ಮನ್ನು ಒಳಗೊಳ್ಳುವಂಥ ಮಹಾಕೃತಿಯನ್ನು ರಚಿಸುವಂತೆ ಹೇಳುವುದು.

 

ಇವನ್ನೆಲ್ಲ ತಕ್ಷಣವೇ ಕಾರ್ಯರೂಪಕ್ಕೆ ತರಬೇಕೆಂದೂ, ಅದಕ್ಕೆ ತಕ್ಕ ಕವಿಯೊಬ್ಬನನ್ನು ಹುಡುಕಬೇಕೆಂದೂ ಠರಾವು ಮಂಡನೆಯಾಯಿತು. ಅದನ್ನು ಎಲ್ಲರೂ ಒಪ್ಪಲಿಲ್ಲ. ಕೆಲವರು ಕವಿ ಉತ್ತಮವೆಂತಲೂ ಮತ್ತೆ ಕೆಲವರು ಕಾದಂಬರಿಕಾರ ಉತ್ತಮ ಎಂದೂ ವಾದಿಸಿದರು. ಕೊನೆಗೆ ಗುಪ್ತ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹಿಸಿದಾಗ ಕವಿ, ಕಾದಂಬರಿಕಾರ, ನಾಟಕಕಾರ ಎಲ್ಲವೂ ಆಗಿರುವವನ ಮೊರೆಹೋಗುವುದು ವಾಸಿ ಎಂದು ವ್ಯಕ್ತವಾಯಿತು. –

ಅವರೆಲ್ಲ ಸೇರಿ ಕವಿಪುಂಗವನನ್ನು ಭೇಟಿ ಮಾಡಿದರು. ಕವಿ ಅವರ ಅಹವಾಲುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡ. ಅವರ ಪೈಕಿ ಅನೇಕರನ್ನು ಅವನು ನೋಡಿಯೂ ಇರಲಿಲ್ಲ. ಮೂಲತಃ ನವ್ಯಕವಿಯಾಗಿದ್ದ ಅವನು, ಮಹಾಕಾವ್ಯಗಳನ್ನು ಓದಿಕೊಂಡವನೇನೂ ಆಗಿರಲಿಲ್ಲ. ಆದರೆ ಮಹಾಕಾವ್ಯದ ಬಗ್ಗೆ ಓತಪ್ರೋತವಾಗಿ ಮಾತಾಡುತ್ತಿದ್ದುದರಿಂದ ಅವನೇ ಸರಿಯಾದ ವ್ಯಕ್ತಿ ಎಂದು ಅವೆರೆಲ್ಲ ಆರಿಸಿ ಮೋಸಹೋಗಿದ್ದರು.

ಎಲ್ಲರಿಗಿಂತ ಮೊದಲು ಅನುಮಾನಬಂದದ್ದು ಕುಶಾಗ್ರಮತಿಗೆ. ತನ್ನ ಉಗಮ ಹೇಗಾಯಿತು ಎಂದು ಕುಶಾಗ್ರಮತಿ ಕೇಳಿದಾಗ ಆತ ಹಾರಿಕೆಯ ಉತ್ತರ ಕೊಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದ. ಅವನು ಪ್ರಸಿದ್ಧ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ತನೂ ಆಗಿದ್ದರಿಂದ ಅಷ್ಟು ಸುಲಭವಾಗಿ ಅವನನ್ನು ತಳ್ಳಿಹಾಕಲು ಅವರ ಮನಸ್ಸು ಒಪ್ಪಲಿಲ್ಲ. ಒಂದೆರಡು ದಿನ ಅವನ ಜೊತೆಗಿದ್ದು ಅವನ ಪ್ರೌಢಿಮೆ ಎಷ್ಟೆಂದು ತಿಳಿಯುವುದು ಒಳ್ಳೆಯದು ಎಂದು ವಾರ್ಧಿಕ ಅಪ್ಪಣೆ ಕೊಡಿಸಿತು. ಹಿರಿಯನಾದ ಅದರ ಮಾತುಗಳನ್ನು ಮೀರುವುದನ್ನು ಯಾರಿಗೂ ಮನಸ್ಸಾಗಲಿಲ್ಲ.

ಆದರೆ, ಅನಭಿಷಿಕ್ತಕ್ಕೆ ಯಾಕೋ ಈ ಒಟ್ಟೂ ಯೋಜನೆಯ ಕುರಿತೇ ಅನುಮಾನವಿತ್ತು. ಒಬ್ಬ ಸಾಹಿತಿ ತಮ್ಮ ಬೆಂಬಲಕ್ಕೆ ನಿಲ್ಲಬಹುದು. ಉಳಿದವರ ಗತಿ ಏನು. ಆ ಸಾಹಿತಿಗೂ ಉಳಿದ ಸಾಹಿತಿಗಳೂ ಸಂಬಂಧ ಹೇಗಿದೆ. ತಮ್ಮನ್ನು ಆ ಸಾಹಿತಿ ಬೆಂಬಲಿಸಿದ್ದನ್ನು ಉಳಿದವರೂ ಒಪ್ಪದೇ ಹೋದರೆ ಗತಿಯೇನು ಎಂಬ ಗಾಬರಿಯಲ್ಲಿ ಅನಭಿಷಿಕ್ತ ಕೂತಿರಬೇಕಿದ್ದರೆ, ನಭೋಮಂಡಲ ಎದುರಾಯಿತು. ನಭೋಮಂಡಲಕ್ಕೂ ಹಳಬರ ಜೊತೆ ಸೇರಿಕೊಳ್ಳುವ ಆಸೆ ಇರಲಿಲ್ಲ. ವಿಜ್ಞಾನವನ್ನು ಕನ್ನಡದಲ್ಲಿ ಕಲಿಯುವ ಹುಡುಗರು ತನ್ನನ್ನು ಪೊರೆಯುತ್ತಿದ್ದಾರೆ ಎಂದು ನಭೋಮಂಡಲ ಭಾವಿಸಿತ್ತು. ಅಲ್ಲದೇ, ತುಂಬ ಹಿಂದೆಯೇ ಭಾಷ್ಪೀಭವನ ಅದಕ್ಕೊಂದು ಕಿವಿಮಾತು ಹೇಳಿತ್ತು- ಕವಿಗಳನ್ನು ನೆಚ್ಚಿಕೊಳ್ಳುವುದಕ್ಕಿಂತ ವಿಜ್ಞಾನಿಗಳನ್ನು ನಂಬಿದರೆ ಲಾಭ ಜಾಸ್ತಿ. ಕವಿಗಳಿಂದ ಅಂಥ ಲಾಭವೇನಿಲ್ಲ ಎನ್ನುವುದನ್ನು ಅದು ತರ್ಕಬದ್ಧವಾಗಿ ಮನದಟ್ಟುಮಾಡಿಕೊಟ್ಟಿತ್ತು. ಅಭಿಯಂತರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸರ್ಕಾರದ ಕೃಪೆಯನ್ನು ಬಯಸುವುದು ಎಲ್ಲಕ್ಕಿಂತ ಒಳ್ಳೆಯದು. ನಾನು ನೋಡಿ ಹೇಗೆ ಚಲಾವಣೆಗೆ ಬಂದಿದ್ದೇನೆ ಎಂದು ಎದೆಯುಬ್ಬಿಸಿಕೊಂಡು ಓಡಾಡುತ್ತಿತ್ತು. ಹೀಗೆ ಯಾರು ಉತ್ತಮ, ಯಾರು ಮಧ್ಯಮ, ಯಾರು ಅನಗತ್ಯ ಎಂದು ತಿಳಿಯದೇ ಅನೇಕರು ಕಂಗಾಲಾಗಿ ಕೂತಿದ್ದರು.

ಮೂರನೇ ದಿನಕ್ಕೆ ತಾವು ಆರಿಸಿಕೊಂಡ ಕವಿಯ ಸಾಮರ್ಥ್ಯ ಅವುಗಳಿಗೆ ತಿಳಿದೇ ಹೋಯಿತು. ಆತ ಸಾವಿರಾರು ಪುಟಗಳನ್ನು ಬರೆದಿಟ್ಟಿದ್ದ. ಅವುಗಳಿಗೆ ಯಾವ ಮನ್ನಣೆಯೂ ಇರಲಿಲ್ಲ. ಅವನು ಬರೆದದ್ದನ್ನು ವಿಶ್ವವಿದ್ಯಾಲಯಗಳ ಪ್ರಸರಾಂಗ ವಿಭಾಗಗಳು ಪ್ರಕಟಿಸುತ್ತಿದ್ದವು. ಬರೆದವನಿಗೆ, ಮುದ್ರಿಸಿದವನಿಗೆ, ಬರೆಯಲು ಕೊಟ್ಟವನಿಗೆ ಕೈ ತುಂಬ ದುಡ್ಡು ಸಿಗುತ್ತಿತ್ತು ಎನ್ನುವುದನ್ನು ಬಿಟ್ಟರೆ ಆ ಪುಸ್ತಕಗಳನ್ನು ಎಂದೂ ಚಾಲ್ತಿಗೇ ಬರುತ್ತಿರಲಿಲ್ಲ. ಹೀಗಾಗಿ ಅವುಗಳಲ್ಲಿ ಸೇರಿ ಉಗ್ರಾಣ ಸೇರುವುದು ಬೇಡ ಎಂದು ಹಲವರು ಹಿಂಜರಿದರು. ಹೊಸ ಕವಿಯನ್ನು ಹುಡುಕಿಕೊಂಡು ಹೋಗೋಣ , ಹೇಗೂ ಇಷ್ಟು ದಿನ ಕಾದಿದ್ದೇನೆ. ಇನ್ನೊಂದಷ್ಟು ದಿನ ಕಾಯೋದರಲ್ಲಿ ತಪ್ಪೇನಿದೆ ಎಂದು ಅವುಗಳೆಲ್ಲ ಸರ್ವಾನುಮತದಿಂದ ತೀರ್ಮಾನಿಸಿದವು. ಸದ್ಯದ ಬಂಧನ ತಪ್ಪಿದ್ದಕ್ಕೆ ಎಷ್ಟೋ ಮಂದಿಗೆ ಖುಷಿಯಾಗಿತ್ತು.

ಆಧುನಿಕ ಕವಿಗಳಲ್ಲಿ ಅನೇಕರು ಅವುಗಳನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಕತೆಗಾರರಿಗಂತೂ ಅವರಲ್ಲಿ ಅನೇಕರ ಮುಖಪರಿಚಯವೂ ಇರಲಿಲ್ಲ. ಕಾದಂಬರಿಕಾರರು ತಮ್ಮ ಕೃತಿಯಲ್ಲಿ ಜಾಗವಿಲ್ಲ ಎಂದು ಕೈಚೆಲ್ಲಿ ಕುಳಿತುಬಿಟ್ಟರು. ಸಂಶೋಧಕರೂ ತಮ್ಮ ಬಳಿ ಬರಬೇಡ ಎಂದು ಕಟುವಾಗಿಯೇ ಹೇಳಿಬಿಟ್ಟರು. ಕೊನೆಗೆ ಬೇರೆ ದಾರಿಯೇ ತೋಚದೇ ಅವುಗಳೆಲ್ಲ ತಮ್ಮ ಅಳಿವು ನಿಶ್ಚಿತ ಎಂದು ಕುಳಿತುಕೊಂಡಿರುವ ಹೊತ್ತಿಗೆ ಹಿರಿಯ ಭಾಷಾವಿಜ್ಞಾನಿಯೊಬ್ಬರು ಹೊಸ ನಿಘಂಟು ತಯಾರಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ, ಅವರ ಮನೆಗೆ ದೌಡಾಯಿಸಿದವು. ಅವರೂ ಕೂಡ ನಿಮಗೆ ನಮ್ಮಲ್ಲಿ ಜಾಗವಿಲ್ಲ ಎಂದು ಒಂದೇ ಮಾತಲ್ಲಿ ಹೇಳಿಬಿಟ್ಟರು. ನನ್ನದು ಹೊಸಗನ್ನಡ ನಿಘಂಟು ಎಂದು ಅದರ ರೂಪರೇಷೆಗಳನ್ನು ತೋರಿಸಿ ಪಾರಾದರು.

ಮತ್ತೆ ಪುತಿನರಸಿಂಹಚಾರ್ಯರೋ, ಪುಟ್ಟಪ್ಪನವರೋ ಹುಟ್ಟಿಬಂದಾರೆಂದು ಕಾಯುವುದೇ ಸೂಕ್ತ ಎಂದು ಜೊನ್ನಜೇನು, ಚಕೋರಚುಂಬನ. ಕೃಪಾಂಬೋಧಿಗಳೆಲ್ಲ ಸಹನೆಯಿಂದ ಕಾಯಲು ತೀರ್ಮಾನಿಸಿದವು. ಅಷ್ಚುಕಾಲ ಕಾಯುವುದಕ್ಕೆ ನಮಗೆ ಮನಸ್ಸಿಲ್ಲ ಎಂದು ಹೇಳಿ ಒಂದಷ್ಟು ಪದಗಳು ಹೋಗಿ ಕವಿಯೊಬ್ಬರ ಮನೆಮುಂದೆ ಧರಣಿಕೂತವು.

ಆ ಪದಗಳು ಅಲ್ಲಿರುವುದನ್ನು ಕಂಡ ಪ್ರಕಾಶಕರೂ, ಓದುಗರೂ ಅತ್ತ ಸುಳಿಯುವುದನ್ನು ತಪ್ಪಿಸಿಕೊಳ್ಳಲು ಬಳಸುದಾರಿ ಹಿಡಿದು ಸಾಗತೊಡಗಿದರು. ತುಂಬ ದಿನಗಳ ನಂತರ ಒಣಗಿ ಬಿದ್ದಿದ್ದ ಅವುಗಳನ್ನು ಕವಿಪತ್ನಿ ಗುಡಿಸಿ ಪಕ್ಕಕ್ಕೆ ಸರಿಸಿ, ರಂಗೋಲಿ ಹಾಕಿ ಯುಗಾದಿ ಆಚರಿಸಿದರು.

 

 

 

 

‍ಲೇಖಕರು G

7 April, 2011

11 Comments

  1. Blogger

    Love you Jogi…

  2. H.LAKSHMANA RAO

    ತು೦ಬಾ ಚೆನ್ನಾಗಿದೆ ಇನ್ನೂ ಬೇಕು ಎನಿಸಿತು, ಹಾಗೇ ಎಸ್. ವಿ. ಕಶ್ಯಪ್ ರವರ ಶುದ್ದಗೆ ಕಣ್ಣಮು೦ದೆ ಬ೦ತು, ಧನ್ಯವಾದಗಳು

  3. Dr.Nagesh

    Astonishing way of presentation boss, Salute you.

  4. sritri

    ಈ ನವ್ಯ ರಮ್ಯ ಕೋಶ …ಪೂರ್ಣೇಂದುಹಾಸಭಾಸ:))

  5. ms manjunatha

    ಗತಿಸಿ ಹೋದ ಪದಗಳಿಗೆ ಆಪ್ತ ಶ್ರದ್ಧಾಂಜಲಿ,ಅವುಗಳ ಆತ್ಮಕ್ಕೆ ಶಾಂತಿ ಸಿಗಲಿ,ಪುನರ್ಜನ್ಮಕ್ಕಾಗಿ ಕಾಯುವ,ಪುಳಕಗೊಳ್ಳುವಾ!

  6. Arvind Subbanna

    hosa jaadina anvEShaNeyallE manuShyana badhuku maththu adharallE avana beLavaNige. shri jOgiyavara I lEKana Kamditha hosa aleya shuBaaramba. Yugaadhiya samdharBadhalli lEKanakkomdhu navyatheyannu thamdhukottiruva jOgiyavarige DhanyavaadhagaLu. mumdhuvarikeyannu nirIkShisuththidhdhEve.

  7. srinivas deshpande

    Dear Jogi,

    Idella nimage hege holeyutthe?. srijana sheelathege namaskar- Deshpande

  8. Gowridattu

    ಆ ಪದಗಳೆಲ್ಲಾ ನಿಮ್ಮ ಮುಂದೆ ಧರಣಿ ಹೂಡಿದವೆಂದು ಕಾಣುತ್ತದೆ. ಅದಕ್ಕೆ ಈ ಬರವಣಿಗೆ ! ಅದಿರಲಿ… ಆ ಕವಿ ಪುಂಗವ ಯಾರು ?

  9. savitri

    ಹಾಗಾದ್ರೆ ಆ ಕೆಲವು ಪದಗಳಿಗೆ ನ್ಯಾಯ ಸಿಗಲೇ ಇಲ್ವಲ್ಲ ಸರ್!

  10. santhosh tarikere

    this kind of articles can be written by you and you only.. hats off

  11. Ravi

    Dear sir,

    i need your jogimane “chalam yamba nigi nigi khenda ondu sudhirga nittusiru…”

    please send me such books to my mail id.i hope you will.
    thanking you in advance…

    regards,
    Ravi…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading