ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಕೇಳುತ್ತಾರೆ: ವಿಶ್ವ ಕನ್ನಡ ಸಮ್ಮೇಳನ ಯಾರಿಗೆ ಸೇರಿದ್ದು?

ಈ ಬಾರಿ ಜೋಗಿ ‘ಜುಗಾರಿ ಕ್ರಾಸ್’ ಅಂಕಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶ್ವ ಕನ್ನಡ ಸಮ್ಮೇಳನಕ್ಕೆ ಎನ್ ಆರ್ ನಾರಾಯಣಮೂರ್ತಿ ಅವರನ್ನು ಆಹ್ವಾನಿಸುತ್ತಿರುವ ಬಗ್ಗೆ ಆರಂಭವಾಗಿರುವ ಅವರ ವಾದ ಇನ್ನಷ್ಟು ವಿಷಯಗಳನ್ನು ಕೈಗೆತ್ತಿಕೊಂಡಿದೆ.

ಖಂಡಿತಾ ಇದು ಚರ್ಚೆಯನ್ನ ಬೇಡುವ ಲೇಖನ. ಜುಗಾರಿ ಕ್ರಾಸ್ ಇರುವುದೇ ಚರ್ಚೆಗಾಗಿ, ಸಂವಾದಕ್ಕಾಗಿ ಬನ್ನಿ ಚರ್ಚಿಸಿ.

ವಿಶ್ವ ಕನ್ನಡ ಸಮ್ಮೇಳನ ಯಾರಿಗೆ ಸೇರಿದ್ದು?

ಏನೋ ಮಾತಾಡುತ್ತಿದ್ದಾಗ ಗೆಳೆಯ ಹಮೀದ್ ಪಾಳ್ಯ ಈ ಪ್ರಶ್ನೆ ಮುಂದಿಟ್ಟರು. ಅದು ಸರ್ಕಾರದ್ದಾ, ಸಾಹಿತಿಗಳದ್ದಾ, ಕಲಾವಿದರದ್ದಾ, ಸಿನಿಮಾ ನಟರದ್ದಾ, ಕಿರುತೆರೆಯವರದ್ದಾ? ಕನ್ನಡ ಸಮ್ಮೇಳನವೇನೋ ಸಾಹಿತಿಗಳ ಸಮ್ಮೇಳನ ಅಲ್ಲವಲ್ಲ. ಸಾಹಿತಿಗಳೇ ಅದರ ರೂಪರೇಷೆಗಳನ್ನು ನಿರ್ಧಾರ ಮಾಡಬೇಕು ಎಂಬ ಕಾನೂನಾದರೂ ಎಲ್ಲಿದೆ? ಸರ್ಕಾರ ಸಮ್ಮೇಳನ ನಡೆಸುವುದಕ್ಕೆ ನೇಮಿಸಿದ ಸಮಿತಿಯಲ್ಲಿ ಒಂದಿಬ್ಬರು ಸಾಹಿತಿಗಳೂ ಇರಲಿ, ತಪ್ಪೇನಿಲ್ಲ. ಅದರ ಬದಲು ಸಾಹಿತಿಗಳೇ ಎಲ್ಲವನ್ನೂ ನಿರ್ಣಯ ಮಾಡಬೇಕು ಎನ್ನುವುದು ಎಷ್ಟರ ಮಟ್ಟಿಗೆ ಸರಿ.

ಹಾಗಂತ ಇಬ್ಬರೂ ಮಾತಾಡಿಕೊಂಡೆವು. ಈ ಮಧ್ಯೆ ಸುಗಮ ಸಂಗೀತ ಗಾಯಕರು ತಮಗೆ ಸಂಭಾವನೆಯಲ್ಲಿ ಪಕ್ಷಪಾತ ಮಾಡಿದ್ದಾರೆ ಎಂದು ದೂರಿದ್ದಾರೆ. ಬರಗೂರು ರಾಮಚಂದ್ರಪ್ಪ, ಯಾವ ಕಾರಣಕ್ಕೂ ಇನ್ಫೋಸಿಸ್ ನಾರಾಯಣಮೂರ್ತಿಯವರು ಸಮ್ಮೇಳನವನ್ನು ಉದ್ಘಾಟಿಸಬಾರದು ಎಂದು ಗರ್ಜಿಸಿದ್ದಾರೆ. ಇದರ ಜೊತೆ ಸಣ್ಣ ಪುಟ್ಟ ತಕರಾರು, ಕಿರಿಕಿರಿ, ಸಮಸ್ಯೆ.

ಬರಗೂರು ಅವರ ನಿಲುವಿನ ಬಗ್ಗೆ ಮಾತಾಡುತ್ತಿದ್ದಾಗ ಮತ್ತೊಬ್ಬ ಮಿತ್ರರು ತಮ್ಮ ಅಭಿಪ್ರಾಯ ಮುಂದಿಟ್ಟರು: ಬರಗೂರು ತಪ್ಪು ಮಾಡುತ್ತಿದ್ದಾರೆ. ಒಬ್ಬ ಸಾಹಿತಿಯೇ ಕನ್ನಡ ಸಮ್ಮೇಳನವನ್ನು ಉದ್ಘಾಟನೆ ಮಾಡಬೇಕು ಅಂತೆಲ್ಲಿದೆ. ನಾರಾಯಣಮೂರ್ತಿ ಸಾಮಾನ್ಯ ಸಾಧನೆ ಮಾಡಿಲ್ಲ. ಅತ್ಯಂತ ಹೆಚ್ಚು ಕನ್ನಡಿಗರಿಗೆ ಉದ್ಯೋಗ ಕೊಟ್ಟಿದ್ದಾರೆ. ಅಂಥದ್ದೊಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಅವರು ಎಷ್ಟು ಬಡತನದಿಂದ ಮೇಲೆ ಬಂದಿದ್ದಾರೆ ಅನ್ನುವುದು ನನಗೆ ಗೊತ್ತಿದೆ. ಅವರ ಬದುಕು ಯಾವತ್ತೂ ನನಗೆ ಸ್ಪೂರ್ತಿಯೇ. ಆದರೆ ಈ ಸಾಹಿತಿಗಳ ಪಡೆ ಯಾವಾಗಲೂ ಉದ್ಯಮಿಗಳನ್ನು ಕಡೆಗಣಿಸುತ್ತಾ ಬಂದಿದೆ. ಅವರು ಬಂಡವಾಳಶಾಹಿಗಳೆಂದು ಬೈಯುವುದು ಸಾಹಿತಿಗಳ ಹಳೆಯ ಚಟಗಳಲ್ಲಿ ಒಂದು. ನಾರಾಯಣ ಸ್ವಾಮಿ ಕನ್ನಡಕ್ಕೋಸ್ಕರ ಏನು ಮಾಡಿದ್ದಾರೆ ಅಂತ ಕೇಳುತ್ತಾರಲ್ಲ? ಏನು ಮಾಡಬೇಕಾಗಿತ್ತು ಅವರು. ನಾಲ್ಕೈದು ಪುಸ್ತಕ ಬರೆದು ಪ್ರಕಟಿಸಬೇಕಿತ್ತಾ? ಕವನ ಓದಬೇಕಿತ್ತಾ? ವಿಮರ್ಶೆ ಮಾಡಬೇಕಾಗಿತ್ತಾ? ಅಂಥ ದೊಡ್ಡ ಸಂಸ್ಥೆ ಕಟ್ಟಿ ಲಕ್ಷಾಂತರ ಮಂದಿ ಕನ್ನಡಿಗರಿಗೆ ಉದ್ಯೋಗ ದೊರಕುವಂತೆ ಮಾಡಿದ್ದು ಸಣ್ಣ ಸಾಧನೆಯಾ?

ಸುಗಮ ಸಂಗೀತ ಕಲಾವಿದರ ತಕರಾರಿರ ಕುರಿತೂ ಮತ್ತೊಬ್ಬ ಮಿತ್ರರು ರೇಗಿದರು. ಅವರು ಅತ್ಯುತ್ತಮ ಕೆಮರಾಮನ್. ಸಾಕಷ್ಟು ಹುಡುಗರಿಗೆ ಪಾಠ ಹೇಳಿದವರು. ಕನ್ನಡ ಸಾಹಿತ್ಯವನ್ನು ಓದಿಕೊಂಡವರು. ರವೀಂದ್ರನಾಥ್ ಠಾಗೂರರ ಸಾಹಿತ್ಯದಿಂದ ಪ್ರಭಾವಿತರಾದವರು. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಇದ್ದು ಬಂದವರು.

ಎಸ್ಪಿ ಬಾಲ ಸುಬ್ರಹ್ಮಣ್ಯ ಅವರಿಗೆ ಅಷ್ಟೊಂದು ಸಂಭಾವನೆ ಕೊಡುತ್ತೀರಿ. ಅಷ್ಟೊಂದು ಗೌರವ ಕೊಡುತ್ತೀರಿ. ನಮಗೂ ಕೊಡಿ ಅಂತ ಇವರೆಲ್ಲ ಕೇಳುತ್ತಾರಲ್ಲ. ಎಸ್ಪಿಯವರನ್ನು ಇವರು ಪರಭಾಷಾ ಗಾಯಕರೆಂದು ಕರೆಯುತ್ತಿರುವುದೇ ಮೊದಲ ತಪ್ಪು. ಮೊನ್ನೆ ಮೊನ್ನೆ ಅಶ್ವತ್ಥರ ನೆನಪಿನಲ್ಲಿ ಇವರೆಲ್ಲ ಭಾವಗೀತೆ ಹಾಡುತ್ತಿರುವಾಗ ಅಲ್ಲಿಗೆ ಎಸ್ಪೀಬಿ ಕೂಡ ಬಂದಿದ್ದರು. ಅವರು ಕೈಗೆ ಮೈಕ್ ತೆಗೆದುಕೊಂಡು ಬಾಯ್ತೆರೆಯುತ್ತಿದ್ದಂತೆ ಸಭಿಕರಲ್ಲಿ ರೋಮಾಂಚನ. ಎಷ್ಟು ವರ್ಷಗಳಿಂದ ಅವರು ಕನ್ನಡದ ಹಾಡು ಹಾಡಿಲ್ಲ. ಈಗಲೂ ಅವರನ್ನು ಪರಭಾಷಿಗರೆಂದು ಕರೆಯುವುದು ನಮ್ಮ ಅಲ್ಪಬುದ್ಧಿಯನ್ನು ತೋರಿಸುತ್ತದೆ.

ಬೇಕಿದ್ದರೆ ಎಸ್ಪೀಬಿ ಪಕ್ಕದಲ್ಲಿ ಈ ಗಾಯಕರನ್ನು ನಿಲ್ಲಿಸಿ ನೋಡಿ. ಕನ್ನಡಿಗರೇ ಯಾರ‍್ಯಾರಿಗೆ ಎಷ್ಟೆಷ್ಟು ಸಂಭಾವನೆ ಎಂದು ನಿರ್ಧರಿಸಲಿ. ಎಸ್ಪೀಬಿಯವರು ನೂರು ರುಪಾಯಿ ಪಡೆದರೆ, ಇವರು ಮೂರು ಕಾಸಿಗೂ ಯೋಗ್ಯರಲ್ಲ ಎಂದು ಕನ್ನಡ ಜನತೆಯೇ ನಿರ್ಧರಿಸದೇ ಇದ್ದರೆ ಕೇಳಿ ಎಂದು ಅವರು ಬೇಸರ ಮಾಡಿಕೊಂಡರು.

ಇದೊಂದು ವಿಚಿತ್ರ ಕಾಯಿಲೆ. ಕನ್ನಡದ ಕುರಿತಾದ ಎಲ್ಲ ಕಾರ್ಯಕ್ರಮಗಳೂ ಸಾಹಿತ್ಯ ಸಮ್ಮೇಳನ ಎಂದು ತಪ್ಪು ತಿಳಿಯುವ ಸಾಹಿತಿಗಳು ನಮ್ಮಲ್ಲಿದ್ದಾರೆ. ಕನ್ನಡದ ಕೀರ್ತಿಯನ್ನು ಮೆರೆಸುವವರು ಕೇವಲ ಬರಹಗಾರರು ಎಂದು ಸಾಹಿತಿಗಳ ಬಳಗ ತಪ್ಪು ತಿಳಿದಂತಿದೆ. ನಮ್ಮಲ್ಲಿ ಸಾಹಿತಿಗಳಿಗಿಂತ ಅಮೂಲ್ಯವಾದ ಸೇವೆ ಸಲ್ಲಿಸಿದ ಲಕ್ಷಾಂತರ ಮಂದಿ ಸಿಗುತ್ತಾರೆ. ಸಾವಿರಾರು ಮಂದಿಯ ಪ್ರಾಣ ಉಳಿಸಿರುವ ವೈದ್ಯರು, ಕನ್ನಡ ಪ್ರೀತಿಯನ್ನು ಬೆಳೆಸಿರುವ, ಬೆಳೆಸುತ್ತಾ ಬಂದಿರುವ ಅಧ್ಯಾಪಕರು, ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಬ್ಯಾಂಕ್ ಉದ್ಯೋಗಿ, ಕನ್ನಡದ ಕವಿಗಳ ಸಾಲುಗಳನ್ನು ಆಟೋರಿಕ್ಷಾದ ಹಿಂದೆ ಬರೆದುಕೊಂಡು ಹೆಮ್ಮೆಪಡುವ ಆಟೋಡ್ರೈವರ್, ಅತ್ಯುತ್ತಮ ಇಂಜಿನಿಯರ್‌ಗಳು, ಅಧಿಕಾರಿಗಳು, ಗುಮಾಸ್ತರು, ಕನ್ನಡ ಹಾಡನ್ನು ಕೇಳುತ್ತಾ, ಕನ್ನಡ ಸಿನಿಮಾ ನೋಡುತ್ತಾ ತನ್ನ ಪಾಡಿಗೆ ಹೊಲದಲ್ಲಿ ದುಡಿಯುವ ರೈತ- ಇವೆರೆಲ್ಲರೂ ಕನ್ನಡದ ಕಟ್ಟಾಳುಗಳೇ. ಹಾಗೆ ನೋಡಿದರೆ ಒಬ್ಬ ಲೇಖಕನಿಗಿಂತ ವ್ಯಾಪಕವಾಗಿ ಇವರೆಲ್ಲ ಕನ್ನಡದ ಕೆಲಸ ಮಾಡುತ್ತಿರುತ್ತಾರೆ. ಸುಮ್ಮನೆ ನೆನಪಾಗುವ ಹೆಸರು; ಮೂಡಬಿದರೆಯ ಆಳ್ವಾ ಕಾಲೇಜಿನ ಮೋಹನ್ ಆಳ್ವಾ, ಪುತ್ತೂರಿನ ಕರ್ನಾಟಕ ಸಂಘದ ಪುರಂದರ ಭಟ್ಟರು, ಊರಿಂದೂರಿಗೆ ಸಂಚರಿಸುತ್ತಾ ಸ್ಕೂಲುಗಳಲ್ಲಿ ಉಚಿತವಾಗಿ ಕನ್ನಡದ ಗೀತೆಗಳನ್ನು ಹಾಡುತ್ತಾ ಸಾಗುತ್ತಿದ್ದ ಬೆಂಡರವಾಡಿ ಕೃಷ್ಣಶರ್ಮ, ಎಲ್ಲಾ ಕನ್ನಡದ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಾ, ಕನ್ನಡ ಪುಸ್ತಕ ಕೊಂಡು ಓದಿ, ಲೇಖಕರು ಮಂಗಳೂರಿಗೆ ಬಂದರೆ ಮನೆಗೆ ಕರೆಯಿಸಿಕೊಂಡು ಒಳ್ಳೆಯ ಸತ್ಕಾರ ನೀಡುವ ಶ್ರೀನಿವಾಸ ದೇಶಪಾಂಡೆ, ಮೊಗಸಾಲೆ ಎಂಬ ಪುಟ್ಟ ಊರಲ್ಲಿ ಒಳ್ಳೆಯ ಲೈಬ್ರರಿಯನ್ನು ಕಟ್ಟಿಕೊಟ್ಟು ಅಲ್ಲೊಂದು ಜಾಗೃತಿ ಹುಟ್ಟಿಸಿದ ನಾ. ಮೊಗಸಾಲೆ, ತಮ್ಮ ಅಂಗಡಿಗೆ ಬರುವ ಗಿರಾಕಿಗಳಿಗೆ ಆ ದಿನ ಕರ್ನಾಟಕದಲ್ಲಿ ಏನೇನಾಯಿತು, ಮಹತ್ವದ ಸಂಗತಿಗಳೇನು ನಡೆದವು ಅನ್ನುವುದನ್ನು ತಮ್ಮ ಭಾಷೆಯಲ್ಲಿ ವಿವರಿಸುತ್ತಿದ್ದ ಬಂಟ್ವಾಳದ ಕಾಮತ್- ಹೀಗೆ ಪ್ರಸಿದ್ಧಿಯ ಆಸೆಯಾಗಲೀ, ದುಡ್ಡಿನ ಹಂಬಲವಾಗಲೀ ಇಟ್ಟುಕೊಳ್ಳದೇ ನೆಮ್ಮದಿಯಾಗಿರುವ ಮಂದಿ ಪ್ರತಿ ಊರಲ್ಲೂ ಸಿಗುತ್ತಾರೆ.

ವಿಶ್ವ ಕನ್ನಡ ಸಮ್ಮೇಳನ ಅವರೆಲ್ಲರಿಗೂ ಸೇರಿದ್ದು.

ಇಷ್ಟಕ್ಕೂ ಸಾಹಿತಿಗಳು ಕನ್ನಡ ಉಳಿಸುವುದಕ್ಕೆ ಎಷ್ಟು ನೆರವಾಗಿದ್ದಾರೆ ನೋಡೋಣ. ನಮ್ಮಲ್ಲಿ ತಾವೇ ಕನ್ನಡದ ವಕ್ತಾರರೆಂದೂ, ಕನ್ನಡವನ್ನು ಉಳಿಸುವ ಪಣ ತೊಟ್ಟವರೆಂದೂ ಕೊಚ್ಚಿಕೊಳ್ಳುವ, ಭಾಷಣ ಮಾಡುವ ಸಾಹಿತಿಗಳ ಪೈಕಿ ಬಹುತೇಕರು ನಾಲ್ಕೋ ಐದೋ ಪುಸ್ತಕ ಬರೆದವರು. ಅವುಗಳು ತಲಾ ಸಾವಿರ ಪ್ರತಿ ಮಾರಾಟವಾಗಿದ್ದರೆ ಪುಣ್ಯ. ಏಳು ಕೋಟಿ ಕನ್ನಡಿಗರ ಪೈಕಿ ಹತ್ತು ಸಾವಿರ ಮಂದಿ ಅವರನ್ನು ಓದಿರುತ್ತಾರೋ ಇಲ್ಲವೋ? ಹೀಗೆ ಪುಸ್ತಕಗಳನ್ನು ಬರೆಯುವುದನ್ನು ಬಿಟ್ಟರೆ ಅವರು ಕನ್ನಡಕ್ಕೇನು ಮಾಡಿದ್ದಾರೆ ಎಂದು ಕೇಳಿಕೊಂಡರೆ ಮೌನವೇ ಉತ್ತರ.

ನಾವು, ಬರೆಯುವವರು, ಕನ್ನಡದಲ್ಲಿ ವ್ಯವಸಾಯ ಮಾಡುವ ಪತ್ರಕರ್ತರು, ಲೇಖಕರು, ಗಾಯಕರು, ನಟರು ಮತ್ತು ಕಲಾವಿದರು ನೆನಪಿಟ್ಟುಕೊಳ್ಳಬೇಕಾದ ಸತ್ಯ ಒಂದಿದೆ. ನಮ್ಮಿಂದ ಕನ್ನಡಿಗರಿಗೆ ಉಳಿಗಾಲ ಇದೆ ಎಂದು ಭಾವಿಸುವುದು ಶುದ್ಧ ಮೂರ್ಖತನ. ನಾವಿದ್ದರೆ ಕನ್ನಡ ಉಳಿಯುತ್ತದೆ ಎಂದು ತಿಳಿಯುವುದು ಅಹಂಕಾರ ಮತ್ತು ಹುಂಬತನ. ಕನ್ನಡ ಉಳಿದರೆ ನಾವು ಉಳಿಯುತ್ತೇವೆ. ಕನ್ನಡಿಗರಿದ್ದರೆ ನಾವಿದ್ದೇವೆ ಎನ್ನುವ ವಿನಯವನ್ನು ಮೈಗೂಡಿಸಿಕೊಳ್ಳದೇ ಹೋದರೆ, ಅಪಾಯ ಕಾದಿದೆ.

ಒಂದು ಭಾಷೆ ಉಳಿಯುವುದು ಮತ್ತು ಬೆಳೆಯುವುದು ಬೇರೆ ಬೇರೆ ಭಾಷೆಯ ಪ್ರತಿಭಾವಂತರು ಆ ಭಾಷೆಯ

ತೆಕ್ಕೆಯೊಳಗೆ ಬಂದಾಗ. ಇಂಗ್ಲಿಷು ಅಷ್ಟು ಶ್ರೀಮಂತವಾದದ್ದು ಹಾಗೆಯೇ. ವಿಶ್ವದ ಎಲ್ಲಾ ಭಾಷೆಗಳ ಸಾಹಿತ್ಯವೂ ಇಂಗ್ಲಿಷಿಗೆ ಬಂತು. ಯಾವ ಭಾಷೆಯಲ್ಲಿ ಬರೆದರೂ ಅದು ಇಂಗ್ಲಿಷಿ ಮುಖಾಂತರ ನಮ್ಮದಾಗುತ್ತದೆ. ನಾವು ಮನಸ್ಸು ಮಾಡಿದರೆ ಅದು ಕನ್ನಡದ ಮೂಲಕವೇ ನಮ್ಮದಾಗುವುದು ಕಷ್ಟವೇನಲ್ಲ.

ನಡೆಯುತ್ತಿರುವುದು ವಿಶ್ವ ಕನ್ನಡ ಸಮ್ಮೇಳನ. ಇದಕ್ಕೆ ನನಗೆ ಆಹ್ವಾನ ಬೇಕಿಲ್ಲ. ಕನ್ನಡದಿಂದ ನಾನು ಸಾಕಷ್ಟು ಪಡೆದಿದ್ದೇನೆ ಎಂದು ಕೋಟಿ ಕೋಟಿ ಸಂಭಾವನೆ ಪಡೆಯುವ ನಟ ಭಾವಿಸುವುದಿಲ್ಲ. ದಯವಿಟ್ಟು ವಿಶ್ವ ಕನ್ನಡ ಸಮ್ಮೇಳವದಲ್ಲಿ ಭಾಗವಹಿಸಿ, ಒಂದು ಹಾಡು ಹಾಡಿ, ಕನ್ನಡಿಗರನ್ನು ರಂಜಿಸಿ ಎಂದು ಅವರ ಮುಂದೆ ಸರ್ಕಾರ ಗೋಗರೆಯಬೇಕಾಗಿದೆ. ಅದಕ್ಕೆ ಅವರು ಸಂಭಾವನೆಯನ್ನೂ ಪಡೆಯುತ್ತಾರೆ. ಸಂಭಾವನೆ ಕಡಿಮೆಯಾದರೆ ಕೊರಗುತ್ತಾರೆ. ಕನ್ನಡಕ್ಕೆ ಬಂದು ಹಾಡುವ ಪರಭಾಷಾ ಕಲಾವಿದರಿಗೆ ನೀಡುವ ಸಂಭಾವನೆಯನ್ನೇ ತಮಗೂ ನೀಡಬೇಕು ಎಂದು ಪಟ್ಟು ಹಿಡಿಯುತ್ತಾರೆ.

ಅತಿಥಿಗಳು ಬಂದಾಗ ಎತ್ತರದಲ್ಲಿ ಕೂರಿಸಿ, ನಾವು ಕೆಳಗೆ ಕೂರುವುದು ನಮ್ಮ ಸೌಜನ್ಯ. ಎಸ್ಪೀಬಿ ಪರಭಾಷಾ ಗಾಯಕರೇ ಅಂತಿಟ್ಟುಕೊಳ್ಳೋಣ. ನಮ್ಮ ಸಂಭ್ರಮಕ್ಕೆ ಅವರು ಬಂದಾಗ ಅವರನ್ನು ಗೌರವಿಸುವುದರಲ್ಲಿ ಏನು ತಪ್ಪಿದೆ. ನಾರಾಯಣ ಮೂರ್ತಿಯವರನ್ನು ಕರೆದು, ಕನ್ನಡದಲ್ಲಿ ನಾವಿಂತಿಂಥ ಸಾಧನೆ ಮಾಡಿದ್ದೇವೆ. ನೀವೂ ನಿಮ್ಮ ನೆಲೆಯಲ್ಲಿ ಸಾಧನೆ ಮಾಡಿದ್ದೀರಿ. ಬನ್ನಿ ಮೂರು ದಿನ ಜೊತೆಗಿರೋಣ ಅನ್ನೋದು ಅವಮಾನವೇ?

ವಿಶ್ವ ಕನ್ನಡ ಸಮ್ಮೇಳನವನ್ನು ಓಬೀರಾಯನ ಕಾಲದಲ್ಲಿ ನಾಲ್ಕು ಕವಿತೆ, ಆರು ಕತೆ, ಎರಡು ಪ್ರಬಂಧ ಬರೆದ ಸಾಹಿತಿಯೇ ಉದ್ಘಾಟಿಸಬೇಕು ಎಂದು ಒತ್ತಾಯಿಸುವುದು ನಮ್ಮ, ಲೇಖಕರ ಸಣ್ಣತನದಂತೆ ಭಾಸವಾಗುತ್ತಿದೆ. ಕನ್ನಡದಿಂದ ಸಾಹಿತ್ಯವೇ ಹೊರತು, ಸಾಹಿತ್ಯದಿಂದ ಕನ್ನಡ ಅಲ್ಲ ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳುವುದು ಯಾವಾಗ?

 

 

‍ಲೇಖಕರು G

3 March, 2011

33 Comments

  1. Jayadeva Prasad Moleyar

    Excellent article. ನನ್ನ ಅಭಿಪ್ರಾಯವೂ ಇದೇನೇ. ಸಾಹಿತಿಗಳು ತಮ್ಮ ಗಡಿ ಮೀರಿ ತಮಗೆ ಏನೇನೂ ಗೊತ್ತಿಲ್ಲದ ಬಿಸಿನೆಸ್/ಆರ್ಥಿಕತೆಯಂತಹ ವಿಷಯಗಳ ಬಗ್ಗೆ ತಪ್ಪು ತಪ್ಪು ಬರೆದು ಜನರಿಗೆ ತಪ್ಪು ಅಭಿಪ್ರಾಯ ಕೂಡಾ ಮೂಡಿಸುತ್ತಾರೆ. ಇದು ಆರೋಗ್ಯಕರವಲ್ಲ. ತಮ್ಮ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ ಸಾವಿರಾರು ಜನರು ಅದನ್ನು ಓದಿ ಪ್ರಭಾವಿತರಾಗುವ ಕಾರಣ ಬರಹಗಾರರು ಸಾಕಷ್ಟು ಅಧ್ಯಯನ/ಚಿಂತನೆ ನಡೆಸದೆ ಗೊತ್ತಿಲ್ಲದ ವಿಷಯಗಳ ಮೇಲೆ ಬರೆಯಲು ಹೋಗಬಾರದು.

    BTW, ಜೋಗಿ, ಅವರು ಬೆಂಡರವಾಡಿ ’ಸುಬ್ರಮಣ್ಯ’ ಶರ್ಮ ಅಲ್ವಾ? ಅವರ ಪೆಪ್ಪರಮಿಂಟ್ ಸವಿದವರಲ್ಲಿ ನಾನೂ ಒಬ್ಬ. ನಮ್ಮ ಮನೆಗೆ ಬರ್ತಾ ಇದ್ರು.ಅದ್ಭುತವಾದ ಕನ್ನಡ ಪರಿಚಾರಕ!

    ಜಯದೇವ ಪ್ರಸಾದ ಮೊಳೆಯಾರ

    • jogimane

      ಹೌದು. ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ. ತಕ್ಷಣ ನೆನಪಾಗಲೇ ಇಲ್ಲ. ಮೂವತ್ತು ವರ್ಷಗಳ ಹಿಂದೆ ನೋಡಿದ್ದು.

  2. ಸಿ. ಎನ್. ರಾಮಚಂದ್ರನ್

    ಜೋಗಿಯವರ ವಾದ ಅರ್ಥಪೂರ್ಣವಾಗಿದೆ; ಅದಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇದೆ. ’ಕನ್ನಡ ಉಳಿದರೆ ಸಾಹಿತಿಗಳು, ಕಲಾವಿದರು’ ಎಂಬ ಮಾತನ್ನು ಕನ್ನಡಾಭಿಮಾನಿಗಳೆಲ್ಲರೂ ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಜೋಗಿಯವರಿಗೆ ಅಭಿನಂದನೆಗಳು.
    ಸಿ. ಎನ್. ರಾಮಚಂದ್ರನ್

  3. Dr. Indira hegde

    ಜೋಗಿಯವರು ಚೆನ್ನಾಗಿ ಬರೆದಿದ್ದಾರೆ. ‘ವಿಶ್ವ ಕನ್ನಡ ಸಂಸ್ಕೃತಿ ಸಮ್ಮೆಳನ’ ಎಂದು ಹೆಸರಿಡಬೆಕಿತ್ತು ವಿಶ್ವ ಕನ್ನಡಸಮ್ಮೆಳನಕ್ಕೆ. ಕನ್ನಡ ನಾಡು ನುಡಿ ಸಂಸ್ಕೃತಿಗೆ ತಮ್ಮ ದುಡಿಮೆಯ ಮಿತಿಯಲ್ಲಿಯೇ ಪ್ರತ್ಯಕ್ಷವೋ ಪರೋಕ್ಷವೋ ಸೇವೆ ಸಲ್ಲಿಸಿ, ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ ಎನ್ನುತ್ತಿರುವವರೆಲ್ಲರೂ ವಿಶ್ವ ಕನ್ನಡ ಸಮ್ಮೆಳನದಲ್ಲಿ ಭಾಗಿಯಾಗಲು ಅರ್ಹರು. ವಿಶ್ವ ಕನ್ನಡ ಸಮ್ಮೇಳನ ಇಂತವರಿಗೆ ಸೆರಿದ್ದು.

  4. Dr. Indira hegde

    ಒಂದು ವಿಷಯ ಮರೆತೆ. ಮೊಗಸಾಲೆ ಎನ್ನುವುದು ಮೊಗಸಾಲೆಯವರು ಹುಟ್ಟಿದ ಊರು. ಅವರ ಕರ್ಮ ಭೂಮಿ ಮೂಡಬಿದಿರೆಯ ಸಮೀಪ ಬೆಳುವಾಯಿಯ ಬಳಿ ಇರುವ ಕಾಂತಾವರ. ಿದು ದಟ್ಟ ಕಾನನದ ನಡುವ ಇರುವ ಹಳ್ಳಿ. ಈಗಲೂ ಬಸ್ ಸೌಕರ್ಯ ಇಲ್ಲ. ಕಾಂತಾವರ ೆಂಬ ೈತಿಹಾಸಿಕ ದೇವಸ್ಥಾನ ಇಲ್ಲಿ ಇರುವುದರಿಂದ ಇದು ಪ್ರಸಿದ್ಧಿಯಾಗಿತ್ತು. ಮೊಗಸಾಲೆ ಅವರು ಅಲ್ಲಿ ನೆಲೆಸಿದ ಮೇಲೆ (ಇವರ ಮಡದಿಯಊರು) ಕಾಂತಾವರ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಬೆಳಗಿತು.

  5. ಆಸು ಹೆಗ್ಡೆ

    ಜೋಗಿಯವರ ಮಾತಿಗೆ ಎರಡು ಮಾತಿಲ್ಲ.

    ಈ ಸಮ್ಮೇಳನವನ್ನು “ವಿಶ್ವ ಕನ್ನಡಿಗರ ಸಮ್ಮೇಳನ” ಎಂದು ಕರೆದಿದ್ದರೆ ಯಾವ ಪ್ರಶ್ನೆಯೇ ಏಳತ್ತಿರಲಿಲ್ಲ, ಎಂದು ನನ್ನೆಣಿಕೆ.

    ಇದು ಬಹುಷಃ ಭಾಷೆಯ ಸಮ್ಮೇಳನ ಇರಬೇಕು ಎಂದು ಏನಿಸಿದವರು,
    ಭಾಷೆ ಅಂದರೆ ಬರಿ ಬರೆಯಲು ಮಾತ್ರ ಬಳಕೆಯಾಗುವುದು (ಮಾತಾಡುವವರಿಗೆ ಆಂಗ್ಲವೇ ಆಪ್ತ, ಅಲ್ಲವೇ),
    ಹಾಗಾಗಿ ಬರೆಯುವವರಿಗೆ ಮಾತ್ರ ಸಂಬಂಧಪಟ್ಟ ಸಮ್ಮೇಳನ ಇದು ಎಂದು ಅರ್ಥೈಸಿಕೊಂಡು ಕೂತ ಮಂದಿ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ ಅನಿಸುತ್ತಿದೆ.
    ಪ್ರಶ್ನೆಗಳು ಎದ್ದರೆ ಏಳಲಿ ಬಿಡಿ. ಎಲ್ಲರಿಗೂ ಉತ್ತರಿಸುವ ಅಗತ್ಯವೂ ಇರುವುದಿಲ್ಲ. ಪ್ರಶ್ನಿಸಿದವರಿಗೆ ಸಮ್ಮೇಳನದ ನಂತರ ಉತ್ತರಗಳು ದೊರೆಯಬೇಕು. ದೊರೆಯುತ್ತವೆ.

  6. Basava Raju L

    ಈ ಸಲದ ಸಮ್ಮೇಳನದ ಉದ್ಘಾಟಕರ ಆಯ್ಕೆಯ ಕುರಿತಾದ ವಾದ, ತಕರಾರುಗಳನ್ನ ಪತ್ರಿಕೆಗಳಲ್ಲಿ ಗಮನಿಸಿದ್ದೆನಾದರೂ, ಇದರಲ್ಲಿ ಸರಿ ತಪ್ಪುಗಳ ಕುರಿತು ಯೋಚಿಸುತ್ತಿರವ ಹೊತ್ತಿನಲ್ಲೇ ಮೂಡಿಬಂದ ಈ ನಿಮ್ಮ ಲೇಖನ ನಿಜಕ್ಕೂ ಗಮನಾರ್ಹವಾಗಿದೆ. ಜೊತೆಗೆ ‘ಹೌದಲ್ಲ ಹೀಗೂ ಮಾಡಬಹುದಲ್ಲಾ ತಪ್ಪೇನಿದೆ’ ಎಂದೆನಿಸಿದ್ದು ಮಾತ್ರವಲ್ಲ, ಅಂಧಾಭಿಮಾನಿಗಳ ಕಣ್ಣು ತೆರೆಸುವಂತಿದೆ ಈ ನಿಮ್ಮ ಬರಹ, ಧನ್ಯವಾದಗಳು.

  7. ವಸುಧೇಂದ್ರ

    ಜೋಗಿ,

    ನಿಮ್ಮ ಅಭಿಮತ ನನ್ನದೂ ಹೌದು. ಸಾಹಿತ್ಯವೆನ್ನುವುದು ಕನ್ನಡ ವಿಶ್ವದ ಒಂದು ಪುಟ್ಟ ಹಳ್ಳಿ ಮಾತ್ರ. ಕನ್ನಡ ಸಮ್ಮೇಳನವೆಂದ ತಕ್ಷಣ ಅದು ಸಾಹಿತಿಗಳ ಸಮಾವೇಶವೆಂಬ ಹುಸಿ ಭಾವದಿಂದ ಹೊರ ಬರಬೇಕು. ತಮಗೆ ತಿಳಿಯದ ಕ್ಷೇತ್ರಗಳಲ್ಲೂ ಸಾಹಿತಿಗಳು ಮೂಗು ತೂರಿಸುವದನ್ನು ಕಂಡು ಅಚ್ಚರಿಗೊಂಡಿದ್ದೇನೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಕನ್ನಡಿಗರು ಒಳ್ಳೆಯ ಸಾಧನೆಗಳನ್ನು ಮಾಡಿದ್ದಾರೆ. ಅವರ ಅಭಿಪ್ರಾಯಗಳನ್ನು ನಾವು ಗಮನಕೊಟ್ಟು ಕೇಳುವ ಅವಶ್ಯಕತೆಯಿದೆ. ಕನ್ನಡದ ವಿಚಾರದಲ್ಲಿ ಅವರಿಗೂ ಸಾಹಿತಿಗಳಷ್ಟೇ ಅಧಿಕಾರವಿದೆ.

    ವಸುಧೇಂದ್ರ

    • Nagesh

      ನನ್ನ ಅಭಿಪ್ರಾಯವು ಅದೇ ಆಗಿದೆ, ಸಾಹಿತಿಗಳು ಕನ್ನಡವನ್ನು ಉಳಿಸಲು ಗುತ್ತಿಗೆ ತೆಗೆದುಕೊಂಡ ಹಾಗೆ ಆಡುವುದನ್ನು ನಿಲ್ಲಿಸಲಿ.

  8. ಡಾ.ಬಿ.ಆರ್.ಸತ್ಯನಾರಾಯಣ

    ಬರಗೂರರು ಸಾಹಿತಿಯ ಕೈಯಿಂದಲೇ ಉದ್ಘಾಟನೆಯಾಗಬೇಕೆಂದು ಹಠ ಹಿಡಿದಿಲ್ಲ. ಒಬ್ಬ ಜಾನಪದ ಕಲಾವಿದನಿಂದಲೂ ಉದ್ಘಾಟನೆ ಮಾಡಿಸಲಿ ಎಂದಿದ್ದಾರೆ. ಇದನ್ನು ನೀವೆಲ್ಲಾ ಮುಚ್ಚಿಟ್ಟು ಏಕಮುಖವಾಗಿ ಬರಗೂರರನ್ನು ವಿರೋಧಿಸುತ್ತಿದ್ದೀರಿ. (ಇತ್ತೀಚಿಗೆ ಇನ್ಫೊಸಿಸ್ 400ಕ್ಕೂ ಹೆಚ್ಚು ಕೋಟಿ ತೆರಿಗೆ ವಂಚನೆ ಆಪಾದನೆ ಹೊತ್ತಿದೆ.).
    ಒಬ್ಬ ಸಾಮಾನ್ಯ ಕನ್ನಡದ ರೈತ ಉದ್ಘಾಟನೆ ಮಾಡಿದರೂ ತೊಂದರೆಯೇನಿಲ್ಲ. ಸ್ಥಾನಗೌರವದಿಂದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಯಾರಾದರೂ ಉದ್ಘಾಟನೆ ಮಾಡಬಹುದಿತ್ತು.
    ಸಾಲುಮರದ ತಿಮ್ಮಕ್ಕ, ಸಾವಯವ ಕೃಷಿ ತಜ್ಞ ನಾರಾಯಣ ರೆಡ್ಡಿ, ಲಂಡನ್ ಮೇಯರ್ ನೀರಜ್ ಪಟೇಲ್ ಯಾರಾದರೂ ಆಗಬಹುದಲ್ಲವೇ? ಬರಗೂರರು ಏಕೆ ನಾರಾಯಣಮೂರ್ತಿಯವರನ್ನು ವಿರೋಧಿಸಿದ್ದರು ಎನ್ನುವುದಕ್ಕಿಂತ ನೀವು ನಾರಾಯಣಮೂರ್ತಿಯವರೇ ಉದ್ಘಾಟನೆ ಮಾಡಲಿ ಎಂಬ ಹಠಕ್ಕೆ ಬಿದ್ದವರಂತೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯವಾಗುತ್ತಿದೆ.

    • NAGABHUSHAN

      With reference to the mention about the 400-crore tax evasion alleged against Infosys, please note this report was about their US operations and there could be several reasons for the same, one of them being it is an Indian company doing business in US. To insinuate that Mr. Narayanamurthy was at the helm of this affair and directed that the fraud be committed is ridiculous. Tata is an equally respected name for generations and Ratan Tata is also facing allegations about the Telecom licencing fiasco – such is the business environment we have. So if it okay for the President, VP, PM or CM to inaugurate, do we also expect these honorable people to feel responsible for the 400-crore evasion?!
      It is a charge that is being examined, ultimately it may boil down there was some confusion in the interpretation of Tax Laws and Infosys will agree to abide by law.
      It is common to see the spouses of literati honored alongside themselves and we do not question that. Likewise a thought could have been spared to the contribution of Mrs. Sudha Murthy to society and Kannada.
      It appears that the “Why Not?” is simply a reaction to the “Why?” which came first.
      And why ever not?

  9. Surendranath

    Jogi, I would like to extend your argument. Let us look at what Mr Baraguru has done to Kannada and Karnataka before he asks what Mr Narayanamurthy has done. I remember that Mr Baragur was the president for Kannada Development Board. Is it right or am I hallucinating? Has he done anything worth remembering? I don’t know how many still remember (or knew/know) that he was the president. His best achievement was he being close to the first family of Kannada film industry and was eternally installed himself at the doorsteps trying his hard luck to get some dates and their endorsements for his films. He calls himself as a film maker. In Kannada. Let me ask him. How many Kannadigas have seen his films. Or has he himself ever watched his film second time? He could only influence to declare his Ekalavya as children’s film and get an award as against other really good children’s films. His films were more whimsical and products of creatively unsound mind than artworks to say least. (Well, this is not a forum to discuss and review his films.) He calls himself a writer. When was the last time he ever wrote something worthwhile. And how many copies of his book were/are sold? Has his writing ever touched an ordinary life in Karnataka? It is high time he stopped thinking that he is an authority and can direct everything that happens in Karnataka. Kannada is not his authority alone. Karnataka and Kannada have grown beyond his comprehension. It belongs to all who live in Karnataka. I would welcome even if Karnataka Government asks Premji to inaugurate. Haven’t they contributed to the GDP of Karnataka? If thousands of ordinary lives in Karnataka ate two meals a day, is because of these people. Let us all work together and make life a better thing to live. And make Karnataka a place to live. Let us not further fragment Karnataka on minor issues. (I am sorry. I know I should have written in Kannada. But my system has lost the Kannada script and will take some time to reinstall the script.)

    • ಡಾ.ಬಿ.ಆರ್.ಸತ್ಯನಾರಾಯಣ

      ಬರಗೂರು ರಾಮಚಂದ್ರಪ್ಪನವರು ಎತ್ತಿರುವ ವಿಷಯಗಳ ಸಾದಕ ಬಾದಕಗಳನ್ನು ಕುರಿತು ನೀವು ಬರೆಯದೆ, ವೈಯಕ್ತಿಕವಾಗಿ ಅವರ ಮೇಲೆ ಈ ರೀತಿ ಧಾಳಿ ಮಾಡಿರುವುದು ನಿಮ್ಮ ವಾದದ ದೌರ್ಬಲ್ಯವನ್ನು ತೋರಿಸುತ್ತದೆ. (ಜೊತೆಗೆ ಅನಾವಶ್ಯಕವಾಗಿ ರಾಜ್ ಕುಟುಂಬದ ಹೆಸರನ್ನು ವ್ಯಂಗ್ಯವಾಗಿ ಎಳೆದು ತಂದಿದ್ದೀರಿ. ಇಲ್ಲಿ ಅದರ ಅವಶ್ಯಕತೆ ಖಂಡಿತ ಇರಲಿಲ್ಲ.)
      Has he done anything worth remembering? I don’t know how many still remember (or knew/know) that he was the president. ಬರಗೂರು ರಾಮಚಂದ್ರಪ್ಪ ಏನು ಮಾಡಿದ್ದಾರೆ ಎಂಬುದು ನಿಮಗೆ ಗೊತ್ತಿಲ್ಲ ಎಂದರೆ ಬೇರಾರಿಗೂ ಗೊತ್ತೇ ಇಲ್ಲ ಎಂದು ಅರ್ಥವೇ? ಇಂಜನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಮೊದಲ ವರ್ಷದ ಎರಡು ಸೆಮಿಸ್ಟರ್ ನಲ್ಲಿ ಕನ್ನಡವನ್ನು ಕಲಿಯುವಂತೆ ಮಾಡಿಸಿದ್ದು ಬರಗೂರರು ಅಧಿಕಾರದಲ್ಲಿ ಇದ್ದಾಗಲೇ! ಆದರೆ ನಂತರ ಆಳುವವರು ಕಾಲೇಜು ಆಡಳಿತ ಮಂಡಳಿಯವರ ಲಾಬಿಗೆ ಶರಣಾಗಿ ಅದನ್ನು ವ್ಯವಸ್ಥಿತವಾಗಿ ನಿಲ್ಲಿಸಿದ್ದು ಎಲ್ಲರಿಗೂ ಗೊತ್ತಿದೆ. ನಿಮಗೆ ಗೊತ್ತಿಲ್ಲ ಎಂದರೆ, ( don’t know how many still remember (or knew/know) that he was the president.) ಅದು ನಿಮ್ಮ ಅಜ್ಞಾನ ಹಾಗೂ ಅರೆಬರೆ ಜ್ಞಾನದ ಅಹಂಕಾರವಲ್ಲದೆ ಬೇರೇನೂ ಅಲ್ಲ.

  10. kumvee

    jogi barediruvudu sariyaagide,
    kannada sahitya, bhashe uliyuvudu beleyudu kevala barahagararindalla, paricharakarinda, phalanubhavigalinda, muthy udghatane madidarenu tappu?

  11. ಕವಿಸ್ವರ,ಶಿಕಾರಿಪುರ

    ಹೌದು, ವಿಶ್ವಕನ್ನಡ ಸಮ್ಮೇಳನ ಪ್ರತಿಯೊಬ್ಬ ಕನ್ನಡಿಗನಿಗೂ ಸೇರಿದ್ದು.. ಹಾಗಂತ ಜೋಗಿಯವರ ಲೇಖನದಲ್ಲಿ ಮೂಡಿರುವ ಹಲವು ನಿಲುವುಗಳನ್ನು ಸರ್ವತಾ ಒಪ್ಪುವುದಕ್ಕೆ ಕನ್ನಡದ ಸಾಕ್ಷಿಪ್ರಜ್ಞೆ ಇರುವವರಿಗೆ ಸಾಧ್ಯವಿಲ್ಲ.. ವಿಶ್ವ ಕನ್ನಡ ಸಮ್ಮೇಳನ ಯಾರಿಗೂ ಸೀಮಿತವಲ್ಲ ನಿಜ, ಆದರೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅದಮ್ಯ ಕಾಳಜಿ ಇರುವ ವ್ಯಕ್ತಿ ಉದ್ಘಾಟಿಸಿದಲ್ಲಿ ಮಾತ್ರ ಕನ್ನಡ ಮನಸ್ಸುಗಳಲ್ಲಿ ಕಿಂಚಿತ್ತಾದರೂ ಆತ್ಮಸಾಕ್ಷಿಯ ಸಂವಹನವಾಗಲು ಸಾಧ್ಯ.. ಕನ್ನಡ ನಾಡು-ನುಡಿ ಬಗ್ಗೆ ಪರಿಣಾಮಕಾರಿಯಾಗಿ ಸಂಚಲನವನ್ನುಂಟು ಮಾಡಬಲ್ಲ ಕನ್ನಡದ ಮುತ್ಸದ್ದಿಯೊಬ್ಬರು ಸಂಸ್ಕೃತಿಪ್ರಜ್ಞೆಯನ್ನು ಪ್ರವಹಿಸಬಲ್ಲರು.. ಕನ್ನಡಿಗರಿಗೆ ತಮ್ಮ ಸಂಸ್ಥೆಯಲ್ಲಿ ನೇಮಕ ಮಾಡಲು ಹಿಂಜರಿಯುವ, ತಮ್ಮದೇ ಕ್ಷೇತ್ರದಲ್ಲಿ ಕನ್ನಡ ಕಂಪ್ಯೂಟರ್ ತಂತ್ರಾಂಶವೊಂದು ರೂಪುಗೊಳ್ಳಲು ಕಿಂಚಿತ್ತೂ ಸಹಕರಿಸದ ನಾರಾಯಣ ಮೂರ್ತಿಯವರು ಉದ್ದಿಮೆದಾರರ ಮತ್ತು ಹೂಡಿಕೆದಾರರ ಸಮಾವೇಶ ಉದ್ಘಾಟಿಸಲು ಸೂಕ್ತರು.. ಇದನ್ನು ವಿರೋಧಿಸಿದ ಮಾತ್ರಕ್ಕೆ ನಾವೇನೂ ನಾರಾಯಣಮೂರ್ತಿಯವರ ವಿರೋಧಿಗಳೂ, ಕನ್ನಡ ಉದ್ದಿಮೆದಾರರ ದ್ವೇಷಿಗಳೂ ಆಗುವುದಿಲ್ಲ.. ಅವರ ಶಾಧನೆ ಪ್ರಶ್ನಾತೀತ., ಇವರಂತೆಯೇ ಪ್ರತಿಭಾಧಾರಿತವಾಗಿ ಕನ್ನಡ ಹುಡುಗರಿಗೆ ಅನೇಕ ಖಾಸಗಿ ಕಂಪನಿಗಳು ಉದ್ಯೋಗ ಕೊಟ್ಟಿವೆ.. ಕನ್ನಡಿಗರಾಗಿ ಕನಿಷ್ಟ ಪಕ್ಷ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿಯೇ ಕಲಿಸುವುದಕ್ಕೆ ವಿರೋಧ ವ್ಯಕ್ತಪಡಿಸುವ ಮೂರ್ತಿಯವರ ಭಾಷಾ ಕಾಳಜಿ ಸಂಶಯಾಸ್ಪದ.. ಜೋಗಿಯವರು ಹೇಳಿದಂತೆ ನಾಲ್ಕು ಕವನ,ಕಾವ್ಯ, ವಿಮರ್ಶೆ ಬರೆಯುವುದು ಬೇಡ, ಕನಿಷ್ಟ ಪಕ್ಷ ಕನ್ನಡ ಆತ್ಮಸಾಕ್ಷಿಯ ಬಗ್ಗೆ ಕರೆಕೊಡುವ, ಕನ್ನಡ ಸಂಸ್ಕೃತಿಯ ನಿಯತ್ತುಳ್ಳ ಯಾವುದೇ ಕ್ಷೇತ್ರದ ನಿಸ್ಪೃಹ ಕನ್ನಡ ಮನಸ್ಸೊಂದರ ಅಗತ್ಯವಿದೆಯಷ್ಟೆ..

    ಇಷ್ಟಾದರೂ ಕನ್ನಡ ಸಂಸ್ಕೃತಿಯ ಗಂಧ-ಗಾಳಿಯಿಲ್ಲದ ಹೇಮಾಮಾಲಿನಿ ಎಂಬ 111 ಕೋಟಿ ಶ್ರೀಮಂತೆ ರಾಜನರ್ತಕಿಯನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿತ್ತಿರುವ, ಈ ಸಮ್ಮೇಳನ ಆಯೋಜಿಸಿರುವ ಸರ್ಕಾರಕ್ಕಾದರೂ ಕನ್ನಡ ನಿಯತ್ತಿದೆಯೆ… ಚರ್ಚೆಯಾಗಲಿ…

  12. Padmaraj Saptasagar

    ಜೋಗಿಯವರ ಅಭಿಪ್ರಾಯ ಅತ್ಯಂತ ಸೂಕ್ತವಾಗಿದೆ,ಇವತ್ತು ಸಾಹಿತಿಗಳು ಕನ್ನಡದ ಅಭಿವೃದ್ದಿಗೆ ಕಾಣಿಕೆ ನೀಡಿದವರಲ್ಲಿ ಒಂದು ಭಾಗ ಮಾತ್ರ.ಸಾಹಿತ್ಯ ಬರೆಯದೆ ಕನ್ನಡವನ್ನು ಉಳಿಸಿ ಬೆಳಸುತ್ತಿರುವವರ ಸಂಖ್ಯೆ ದೊಡ್ಡದಿದೆ ವಿಷಾದವೆಂದರೆ ಇಂದು ಪ್ರಚಾರಕ್ಕೆ ಬಂದವರು ಮಾತ್ರವೇ ಅವಕಾಶ ಗಿಟ್ಟಿಸಿ ಕೊಳ್ಳುತ್ತಿದಾರೆ.
    ಹಾಗೇನೆ ನಮ್ಮ ಸುಗಮ ಸಂಗೀತದ ಗಾಯಕರ ನೋವು SPB ಯವರ ಬಗ್ಗೆ ಅಲ್ಲ ಅನ್ಸುತ್ತೆ,ನನಗನ್ನಿಸುವ ಹಾಗೆ ಅವರ ದೂರು ಕೈಲಾಶ್ ಖೇರ್ ಹಾಗೂ ಹಿಂದಿಯ ಕಲಾವಿದರಿಗೆ ಮಣೆ ಹಾಕೋ ಸರ್ಕಾರದ ನೀತಿಯ ಬಗ್ಗೆ ಇರಬಹುದು.
    ಅವಧಿಗೆ ಒಂದು ಮನವಿ – ಪಂಪ ಪ್ರಶಸ್ತಿಯ ಬಗ್ಗೆ ಸಹ ಚರ್ಚೆ ಆಗಬೇಕು. ಇವತ್ತು ಚಂಪಾ ವಿಷಯದಲ್ಲಿ ರಾಜಕೀಯ ಪ್ರವೇಶ ಆಗಿದೆ.

  13. paarvathi cheeranahally

    Agree with Dr B R Satyanarayan.dispute is with NANI. He is not ready to sing our national anthem- Ja na ga na mana. he may born in karnataka, but he is not kannadiga OR Indian by his behavior. invite any pro kannada Industrialist, if he may not born kannadiga, then also we welcome it.

    problem is not with Industrialist. it is with nani.he is PAKKA VYAAPARI !
    what u say Mr jogi ?

    PAARVATHI CHEERANAHALLY

  14. V Gayathri

    ನಾರಾಯಣಮೂರ್ತಿ ಒಬ್ಬ ವ್ಯಕ್ತಿಯಷ್ಟೆ ಹೇಗಾದಾರು? ನವ ಉದಾರೀಕೃತ ಜಗತ್ತಿನ ಐಟಿ ಜಗತ್ತಿನ ಪ್ರತೀಕವಾದ ಇವರನ್ನು ಒಬ್ಬ ವ್ಯಕ್ತಿ ಎಂಬಂತೆ ನೋಡುವುದೇಕೆ? ಈ ಐಟಿ ಸೆಕ್ಟರ್ ಹೇಳಿ ಕೇಳಿ ಸೇವಾ ಕ್ಷೇತ್ರ. ಉತ್ಪಾದನಾ ವಲಯಕ್ಕೆ ಒತ್ತಾಸೆಯಾಗಿ ಇರಬೇಕಾದ್ದು ಸೇವಾ ಕ್ಷೇತ್ರ. ಆದರೆ ಇವತ್ತಿನ ನವ ಉದಾರೀಕೃತ ಜಗತ್ತಿನಲ್ಲಿ ಸೇವಾ ಕ್ಷೇತ್ರಕ್ಕೆ ಸಲ್ಲುತ್ತಿರುವ ಹೂಡಿಕೆ ಉತ್ಪಾದನಾ ಕ್ಷೇತ್ರಕ್ಕಿಂತ ಎಷ್ಟು ಪಟ್ಟು ಅಧಿಕ! ಇದರ ಲಾಭ ಪಡೆದೇ ಅಲ್ಲವೆ ಇನ್ಫೋಸಿಸ್ ಇಷ್ಟು ಶ್ರೀಮಂತವಾದದ್ದು. ಈ ಅಸಮತೋಲನ ಬೆಳವಣಿಗೆಯಿಂದ ಉತ್ಪಾದನಾ ಕ್ಶೇತ್ರಕ್ಕೆ ಏನಾಗಿದೆ? ಅಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆಗೂ ಈ ಐಟಿ ಕ್ಷೇತ್ರ ಸೃಷ್ಟಿಸುತ್ತಿರುವ ನೌಕರಿಗಳ ಸಂಖ್ಯ್ರೆಗೂ ಏನಾದರೂ ಅರ್ಥ ಸಂಬಂಧ ಇದೆಯೇ?
    ಇನ್ಫೋಸಿಸ್ನಿಂದ ನಿವೃತ್ತರಾಗಿರುವ ನಾರಾಯಣಮೂರ್ತಿಯವರು ಅದಕ್ಕೆ ಸಲಹಾಗಾರರಾಗಿ ಕೊಡುತ್ತಿರುವ ಕೆಲ ಘಂಟೆಗಳಿಗೆ ಅವರು ಪಡೆಯುತ್ತಿರುವ ಮಾಸಿಕ ಸಂಬಳ ೪೩ ಲಕ್ಷವಂತೆ. ಇಂಥ ’ಯಶಸ್ವಿ’ ವ್ಯಕ್ತಿ ಒಂದು ವಿಶ್ವ ಕನ್ನಡ ಸಮ್ಮೇಳನವೇ ಏಕ? ಅವರು ಬದುಕಿರುವವರೆಗೂ ಪರ್ಮನೆಂಟ್ ಇನ್ವೈಟಿಯಾಗಿ ಶಾಶ್ವತ ಅಧ್ಯಕ್ಷ ಸ್ಥಾನ ಪಡೆಯಲಿ.
    ವಿ. ಗಾಯತ್ರಿ

  15. ಕೆಎಲ್ಕೆ

    ಸಮ್ಮೇಳನ ಸಾಹಿತಿಯಿಂದಲೇ ಏಕೆ ಉಧ್ಗಾಟನೆಯಾಗಬೇಕು ಎಂಬ ಚರ್ಚೆ ಇಲ್ಲಿ ಅಪ್ರಸ್ತುತ. ಸಾಹಿತಿಯೇ ಬೇಕು ಅಂತಾ ಯಾರೂ ಹೇಳಿಲ್ಲ. ನಾರಾಯಣ ಮೂರ್ತಿಯವರು ಬೇಡ ಎಂಬುದಷ್ಟೇ ಸದ್ಯದ ಕೂಗು. ಅದರಲ್ಲಿ ಹುರುಳಿಲ್ಲದಿಲ್ಲ. ನಾಮೂ ಕನ್ನಡ ಮಾಧ್ಯಮ(ಶಿಕ್ಷಣದಲ್ಲಿ)ವಿರೋಧಿ. ಅವರ ಬಾಯಿಂದ ಒಂದೇ ಒಂದು ಕನ್ನಡ ಶಬ್ದ ಹೊರಬಂದ ( ಸಾರ್ವತ್ರಿಕವಾಗಿ) ಉದಾಹರಣೆ ಇದ್ದರೆ ನೀಡಿ. ಕನ್ನಡ ಮಾತನಾಡಿದರೆ ತನ್ನ ಘನತೆಗೆ ಕುಂದು ಅಂತ ತಿಳಿದಿರುವ ಮೌಂಟ್ ಕಾರ್ಮೆಲ್ ಕಾಲೇಜು ಹುಡುಗಿಯ ಕನ್ನಡ ಪ್ರೇಮದಷ್ಟೇ ಅವರ ಕನ್ನಡ ಕಾಳಜಿ ಕೂಡ. ಕಂಪನಿ ಕಟ್ಟಿ ಕನ್ನಡಿಗರಿಗೆ ಕೆಲಸ ಕೊಟ್ಟಿದಾರೆ ಅನ್ನುವುದೇ ಅವರ ಸಾಧನೆ ಎಂದಾದರೆ, ಅಜಿಂ ಪ್ರೆಮ್ ಜಿ ಅದಕ್ಕಿಂತ ಕಡಿಮೆಯೇನಲ್ಲ. ಇಂದಿಗೂ ಇನ್ಫೋಸಿಸ್ ನಲ್ಲಿ ಸಂಕ್ರಾಂತಿಗೆ ರಜೆ ಇಲ್ಲ; ಓಣಂಗೆ ಪ್ರತಿ ಬಾರಿ ರಜೆ.
    ಅದೆಲ್ಲ ಬಿಡಿ. ಎಲ್ಲ ವಾದ-ವಿವಾದಗಳ ನಡುವೆಯೂ ನಾಮೂ ಉಧ್ಗಾಟನೆಗೆ ಬರುತಾರೆ ಎಂದಾದರೆ, ನನಗಿರುವ ಭಯ ಒಂದೇ. ಅವರು ಅಲ್ಲಿ ಇಂಗ್ಲೀಶಿನಲ್ಲಿ ಮಾತನಾಡಿ ‘ ಇಂತ ಸಮ್ಮೇಳನಗಳಿಂದ ಏನೂ ಪ್ರಯೋಜನವಿಲ್ಲ, ಸುಮ್ಮನೆ ಸಮಯ ವ್ಯರ್ಥ ಮಾಡದಿರಿ, ಇಂಗ್ಲೀಶ್ ಕಲಿಯಿರಿ, ಜೀವನದಲ್ಲಿ ಮುಂದೆ ಬನ್ನಿ’ ಎಂದು ಭಾಶಣ ಮಾಡುವ ಸಾಧ್ಯತೆಗಳಿವೆ. ನಾಮೂ ಬರುತ್ತಾರೆಂದರೆ ಅಲ್ಲಿ ಕನ್ನಡದ ಹೊರತಾಗಿ ಇತರೆ ಭಾಷೆಯ ಮಾಧ್ಯಮದವರು/ಪತ್ರಕರ್ತರು ಕೂಡ ನೆರೆದಿರುತ್ತಾರೆ!!

  16. ಉಷಾಕಟ್ಟೆಮನೆ

    ನಾರಾಯಣಮೂರ್ತಿಗಳು ಕನ್ನಡಿಗರೆನ್ನುವುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ಅವರು ಕನ್ನಡ ನಾಡಿನಲ್ಲಿ ಹುಟ್ಟಿದ್ದಾರೆ.ಆದರೆ ಅವರಿಗೆ”ಕನ್ನಡದ ಸಂಸ್ಕೃತಿ’ ಗೊತ್ತಿದೆಯೋ ಇಲ್ಲವೋ ನಮಗೆ ತಿಳಿಯದು. ಯಾಕೆಂದರೆ ಅವರು ಕನ್ನಡ ಮಾತಾಡಿದ್ದನ್ನು ಯಾರೂ ಕೇಳಿಲ್ಲ. ಭಾಷೆಯೆಂಬುದು ಅದನ್ನು ಆಡುವವರ ಸಂಸ್ಕೃತಿಯನ್ನು ಪ್ರತಿನಿಧಿಸುತ್ತೆ. ’ಭಾಷೆ ಸಂಸ್ಕೃತಿಯ ಮೊತ್ತ” ಬಹುಶಃ ಇದು ಬರಗೂರರ ಮಾತೇ ಇರಬೇಕು. ಈ ಲೇಖನ ಬರೆದವರು ಮತ್ತು ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ದೃಶ್ಯ ಮಾಧ್ಯಮಕ್ಕೆ ಸಂಬಂಧಪಟ್ಟವರು.ಅವರಲ್ಲಿ ನನ್ನದೊಂದು ವಿನಂತಿ; ಕನ್ನಡದಲ್ಲಿ ಹಲವಾರು ಚಾನಲ್ ಗಳಿವೆ.ಅದರಲ್ಲೂ ಐದು ಸುದ್ದಿ ಚಾನಲ್ ಗಳಿವೆ. ನಾರಾಯಣಮೂರ್ತಿಗಳನ್ನು ತಮ್ಮ ಸ್ಟುಡಿಯೋಕ್ಕೆ ಕರೆಸಿ ಅವರನ್ನೊಮ್ಮೆ ಕನ್ನಡದಲ್ಲಿ ಸಂದರ್ಶನ ಮಾಡಿಬಿಡಿ. ಆಗ ಅವರಿಗೂ ಕನ್ನಡ ಬರುತ್ತದೆ. ಕನ್ನಡದ ಮನಸ್ಸಿದೆ ಎಂಬುದು ನಮಗೆ ಗೊತ್ತಾಗುತ್ತದೆ
    ಉಷಾಕಟ್ಟೆಮನೆ.

    • ಕೆಎಲ್ಕೆ

      ಹ್ಹ ಹ್ಹಾ…ಬೇಕಾದರೆ ಒಬಾಮಾನ ಮನವೊಲಿಸಿ ಕನ್ನಡ ಚ್ಯಾನಲ್ಲಿನವರು ಒಂದು ಸಂದರ್ಶನ ಮಾಡಿಸಿಬಿಡಬಹುದು. ಆದರೆ, ನಮ್ಮ ಮೂರ್ತಿಗಳು….ಸಾಧ್ಯವೇ ಇಲ್ಲ!! ಸರಿಯಾಗಿ ಹೇಳಿದ್ದೀರಿ ಉಷಾ.
      ಅವರು ಸಮ್ಮೇಳನದಲ್ಲೂ ಕನ್ನಡ ಮಾತನಾಡಿಯಾರು ಎಂಬ ಭರವಸೆ ನನಗಿಲ್ಲ. ಇಲ್ಲಿ ನಾಮೂ ಪರ ವಾದ ಮಾಡುತ್ತಿರುವವರಿಗೆಲ್ಲ ಈ ಸಂಶಯ ಯಾಕೆ ಬರುತ್ತಿಲ್ಲ ಎಂಬುದೇ ಆಶ್ಚರ್ಯ !!

    • Gowridattu

      Usha,
      Sariyagi heliddiri.
      Nimma abhiprayave nanna abhipraya kuda !

  17. RJ

    ಇಲ್ಲಿ ಬರಗೂರರು ಪ್ರಶ್ನೆ ಎತ್ತಿದ್ದಾರೆ ಅಂದ ತಕ್ಷಣ ”ನೀವೇನು ಮಾಡಿದ್ದೀರಿ..” ಅಂತ ತೀರ ವ್ಯಂಗವಾಗಿ ವೈಯಕ್ತಿಕವಾಗಿ ಕೇಳುವದು ತಪ್ಪಾಗಬಹುದು.
    ಬರಗೂರರ ವೈಯಕ್ತಿಕ ಕೊಡುಗೆಗಿಂತ ಅವರ ಪ್ರಶ್ನೆಗೆ ಉತ್ತರಿಸುವದು ಸದ್ಯದ ಹೊಣೆಗಾರಿಕೆ ಎಂದೆನಿಸುತ್ತದೆ.

    ಇಷ್ಟಕ್ಕೂ ನಾರಾಯಣ ಮೂರ್ತಿಯವರೇ ಯಾಕೆ ಉದ್ಘಾಟಿಸಬೇಕು ಎಂದು ಪ್ರಶ್ನೆಗಿಂತ ಮೂರ್ತಿಯವರು ಕೂಡ ಯಾಕಾಗಬಾರದು ಎಂಬುದು
    ಪ್ರಸ್ತುತ ಸಾಧ್ಯತೆಗಳಲ್ಲೊಂದು.ಕನ್ನಡಿಗನಾಗಿ ಹುಟ್ಟಿ,ಕನ್ನಡ ಪರಿಸರದಲ್ಲಿ ಬೆಳೆದು,ಕನ್ನಡ ಜನತೆ ಹೆಮ್ಮೆ ಪಟ್ಟುಕೊಳ್ಳುವಂಥ ಮಟ್ಟಕ್ಕೆ ಬೆಳೆದಿರುವ
    ಮೂರ್ತಿಯವರು ‘ವಿಶ್ವ ಕನ್ನಡ ಸಮ್ಮೇಳನ’ವನ್ನು ಉದ್ಘಾಟಿಸುವದರಲ್ಲಿ ಯಾವ ಕೊರತೆಯೂ ಕಾಣುತ್ತಿಲ್ಲ.ಹಾಗೆಯೇ,ಇಂಥದೊಂದು ಸಮ್ಮೇಳನವನ್ನು
    ಉದ್ಘಾಟಿಸುವವರು ಸಾಹಿತಿಯೆಂಬ ಭುಜಕೀರ್ತಿಗಳನ್ನು ಹೊಂದಿರಲೇಬೇಕೆಂದು ಅಪೇಕ್ಷಿಸುವದು ಕೂಡ ನಮ್ಮನ್ನು ನಾವೇ ಸಂಕುಚಿತ ಮನಸ್ಸಿನವರಂತೆ
    ಬಿಂಬಿಸಿಕೊಂಡಂತೆ.
    ಅದೊಂಥರಾ,ಅಕ್ಕಪಕ್ಕ ನೋಡದಂತೆ ಕುದುರೆ ಕಣ್ಣಿನ ಪಕ್ಕ ಪಟ್ಟಿ ಕಟ್ಟಿದಂತೆ.

    ಇಷ್ಟಕ್ಕೂ ನಾರಾಯಣಮೂರ್ತಿ ಒಬ್ಬ ಪ್ರತಿಭಾವಂತ industrialist.ಹಾಗೆಯೇ ಇನ್ನೂ ಅನೇಕ ಜನ ತಮ್ಮ ತಮ್ಮ field ನಲ್ಲಿ ಅಪಾರ ಪ್ರತಿಭೆ ಮೆರೆದಿದ್ದಾರೆ.
    ವಿಜ್ಞಾನಿಯ ಕೆಲಸ ದೇಶಕ್ಕಾಗಿ ಹೊಸ ವಿಷಯವೊಂದನ್ನು ಕಂಡುಹಿಡಿಯುವದು.ಸಂಗೀತಗಾರ ಹೊಸ ಸ್ವರ ಅನ್ವೇಷಿಸುತ್ತಾನೆ.ಸಹೃದಯದ ಡಾಕ್ಟ್ರು ಬಡಮಕ್ಕಳ ಅಪರೇಷನ್ ಮಾಡ್ತಾನೆ.ಇಂಜಿನೀರ್ ಯಂತ್ರಗಳ ಜೊತೆ ಬದುಕುತ್ತ ದೇಶವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯುತ್ತಾನೆ..
    ಇಲ್ಲಿ ಡಾಕ್ಟರನ್ನ ನೀನ್ಯಾಕೆ ಮಿಲ್ಟ್ರಿ ಸೇರಿಕೊಂಡು ಯುದ್ಧದಲ್ಲಿ ಭಾಗವಹಿಸಲಿಲ್ಲ ಅಂತ ಅಪೇಕ್ಷೆ ಮಾಡೋದೇ ಅಪದ್ಧ!
    ಮೂರ್ತಿಯವರ ವಿಷಯಕ್ಕೂ ಇದೇ ಸೂತ್ರ ಅನ್ವಯಿಸುತ್ತದೆ.ಆತ ದೇಶದ ಹೆಮ್ಮೆಯ ಐಟಿ ಉದ್ಯಮಿ ಅಷ್ಟೇ.
    ಅದರಲ್ಲೂ ಅವರು ಕನ್ನಡಿಗ ಅನ್ನುವದು ಮಹತ್ವದ್ದಾಗುತ್ತದೆ.

    ವಿಶ್ವಕನ್ನಡ ಕನ್ನಡ ಸಮ್ಮೇಳನವನ್ನು ರೋಲ್ ಮಾಡೆಲ್ ಎನಿಸಿಕೊಂಡ ಯಾರಾದರೂ ಉದ್ಘಾಟಿಸಬಹುದಿತ್ತು.ಒಟ್ಟಿನಲ್ಲಿ ಅವರು ಕನ್ನಡಿಗರಾಗಿರಬೇಕು.
    ಹೀಗಾಗಿ ಮೂರ್ತಿಯವರ ಆಯ್ಕೆಯಲ್ಲಿ ಕೊಸರಿಲ್ಲ ಅಂತ ಭಾವಿಸುವದರಲ್ಲಿ ತಪ್ಪೇನಿಲ್ಲ.

    -RJ

  18. siddamukhi

    ಇನ್ಫೋಸಿಸ್ ನಾರಾಯಣಮೂತರ್ಿ ಕನ್ನಡಿಗರು, ಉದ್ಯಮಿಗಳು, ಪ್ರತಿಭಾನ್ವಿತರು ಎಂಬುದರಲ್ಲಿ ಅನುಮಾನವೇ ಇಲ್ಲ. ಬಡತನದ ಬೇಗೆಯಿಂದ ಬೆಂದ ಮೂತರ್ಿಯವರು, ರಾತ್ರೋರಾತ್ರಿ ದೈತ್ಯನಂತೆ ಬೆಳೆದದ್ದು ಹೇಗೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸಿಕ್ಕುವುದು ಇಲ್ಲ ಅನ್ನಿಸುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಂಸ್ಥೆಯ ಲಾಭ ಪ್ರಕಟಿಸುವ ಮೂತರ್ಿಯವರು ಕನ್ನಡಿಗರು ಎಷ್ಟು ಮಂದಿ ಇದ್ದಾರೆ ಎಂಬುದನ್ನು ಪ್ರಕಟಿಸಲಿ. ಕನರ್ಾಟಕ ಸಕರ್ಾರ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭೂಮಿ, ನಿರಂತರ ನೀರು, ವಿದ್ಯುತ್ ಪೂರೈಕೆ, ನುಣುಪಾದ ರಸ್ತೆ, ತೆರಿಗೆ ವಿನಾಯಿತಿ ಎಲ್ಲವನ್ನೂ ಕೊಟ್ಟಿದೆ. ಹೀಗಿದ್ದಾಗ ಕನ್ನಡಿಗರಿಗೆ ಕೆಲಸ ಕೊಡಬಾರದೆ? ಕನ್ನಡ ನಾಡು, ನುಡಿ, ಸಂಸ್ಕೃತಿಗೆ ನಾರಾಯಣ ಮೂತರ್ಿಯವರ ಕೊಡುಗೆ ಏನು? ರಾಷ್ಟ್ರಗೀತೆ, ನಾಡಗೀತೆಗೆ ಅವಮಾನ ಮಾಡಿದ ಮೂತರ್ಿ ಅವರು ಯಾವ ನೈತಿಕತೆ ಇಟ್ಟುಕೊಂಡು ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಿಸಬೇಕು. ಇಂತಹ ಹತ್ತು ಹಲವು ಕಾರಣಗಳಿಗಾಗಿ ಸಮ್ಮೇಳನ ಉದ್ಘಾಟನೆಗೆ ಇನ್ಫಿ ಮೂತರ್ಿ ಅವರು ಬೇಡವೆಂದಷ್ಟೇ ಬರಗೂರು ರಾಮಚಂದ್ರಪ್ಪ ಹೇಳಿದ್ದು. ಬರಗೂರರ ಇಂತಹ ನಿಷ್ಠುರ ಹೇಳಿಕೆ ಒಂದು ವರ್ಗದ ನಿದ್ದೆಗೆಡಿಸಿದೆ. ಹೀಗಾಗಿ ಬರಗೂರು ರಾಮಚಂದ್ರಪ್ಪನವರನ್ನು ಹೆಣೆಯಲು ಹೊರಟಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಜೋಗಿ ಅವರು ಎತ್ತಿರುವ ಕೆಲವು ಪ್ರಶ್ನೆಗಳು ಸರಿ ಎನಿಸಿದರೂ ಬಹುತೇಕ ಪ್ರಶ್ನೆಗಳು ಒಂದು ವರ್ಗವನ್ನು ಓಲೈಸುವಂತಿವೆ. ಜೋಗಿ ಅವರು ಇನ್ಫೋಸಿಸ್ ಮೂತರ್ಿ ಅವರನ್ನು ಸಮಥರ್ಿಸಿಕೊಳ್ಳುವ ಭರದಲ್ಲಿ ಸಮತೋಲನ ಕಳೆದುಕೊಂಡ ವಾದಸರಣಿ ಮಂಡಿಸಿರುವುದು ಎದ್ದು ಕಾಣುತ್ತದೆ. ಜೋಗಿ ಉಲ್ಲೇಖಿಸಿರುವ ಹೆಸರುಗಳ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಿ? ಜಾತಿ ವಾಸನೆ ಬಡಿಯುವುದಿಲ್ಲವೇ? ಇತಿಹಾಸದ ಉದ್ದಕ್ಕೂ ವಾದ ಸರಣಿಗೆ ತಕ್ಕ ವ್ಯಾಖ್ಯಾನ ಮಾಡಿಕೊಂಡು ಬಂದವರಲ್ಲವೇ? ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಕಂಡು ಬರುವುದು ಬರಗೂರರನ್ನು ಬಗ್ಗು ಬಡಿಯುವ ಹುನ್ನಾರವೇ ಹೊರತು, ಮುಕ್ತ ಚಿಂತನೆಯಲ್ಲ ಎಂಬುದು ತಿಳಿಯುತ್ತದೆ. ಸಿದ್ದಮು

  19. ಸಂದೀಪ್ ಕಾಮತ್

    ಇಲ್ಲಿ ಆಗ್ತಾ ಇರೋದು ಬರಗೂರರನ್ನು ಬಗ್ಗು ಬಡಿಯುವ ಕೆಲಸ ಆದರೆ ,ಬರಗೂರು ಮಾಡಿದ್ದು ನಾರಾಯಣಮೂರ್ತಿಯವರನ್ನು ಬಗ್ಗು ಬಡಿಯುವ ಕೆಲಸ ಅನ್ನೋದನ್ನೂ ನಾವು ಒಪ್ಪಬೇಕಾಗುತ್ತದೆ.

    ಸ್ವತ: ಒಬ್ಬ ಸಾಹಿತಿಯಾಗಿ ಜೋಗಿಯವರ ಈ ಲೇಖನ ನಿಜಕ್ಕೂ ಅಭಿನಂದನೀಯ.

    ನಾವು ಮಾಡಿದ್ದು ಕನ್ನಡಕ್ಕೆ ಮಾಡಿದ ಕೊಡುಗೆ ಅನ್ನೋದು ನಾವಂದು ಕೊಂಡರೆ ನಮ್ಮಂಥ ಮೂರ್ಖರು ಯಾರೂ ಇಲ್ಲ. ಸಾವಿರಾರು ವರ್ಷ ಇತಿಹಾಸ ಇರೋ ಕನ್ನಡ ಭಾಷೆಗೆ ನಮ್ಮ ಕೊಡುಗೆಯ ಅಗತ್ಯ ಇಲ್ಲ. ಸಾಹಿತಿಗಳೇನಾದರೂ ಅಲ್ಪ ಸ್ವಲ್ಪ ಹೆಸರು ಕೀರ್ತಿ ,ಹಣ(?) ಮಾಡಿದ್ದರೆ ಅದು ಕನ್ನಡದಿಂದ ಅವರಿಗೆ ದೊರೆತ ಕೊಡುಗೆಯೇ ಹೊರತು ಕನ್ನಡಕ್ಕೆ ಅವರು ಕೊಟ್ಟ ಕೊಡುಗೆ ಅಲ್ಲ.
    ಇಂಥದ್ದೇ ಒಂದು ಭ್ರಮೆಯಲ್ಲಿ ಬದುಕುವವರು ಚಿತ್ರರಂಗದವರು. ಸಿನೆಮಾದ ಹೆಸರು ಮುಹೂರ್ತದಿಂದ ಹಿಡಿದು ಎಲ್ಲವೂ ಸುತ್ತುತ್ತಾ ಇರೋದು ಹಣದ ಹಿಂದೆ, ಅಕಸ್ಮಾತ್ ಥಿಯೇಟರ್ ಸಿಕ್ಕಿಲ್ಲಾ ಅಂದ್ರೆ ಆಗ ಅವರಿಗೆ ನೆನಪಾಗೋದು ಕನ್ನಡ !

    ಯಡಿಯೂರಪ್ಪನವರ ಜೊತೆ ಅನಗತ್ಯ ಸಭೆಯಲ್ಲಿ ಕೂರುವ ಜನರಿಗಿಂತ ನಾರಾಯಣ ಮೂರ್ತಿಯವರು ಎಷ್ಟೋ ವಾಸಿ. ಮುಖ್ಯಮಂತ್ರಿ ಅನ್ನೋದು ಬಿಟ್ಟರೆ ಸನ್ಮಾನ್ಯ ಯಡಿಯೂರಪ್ಪನವ್ರಿಗೇನು ಅರ್ಹತೆ ಇದೆ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕೆ? ಅವರೇನು ಸಾಹಿತಿಯೇ, ಜನಪದ ಕಲಾವಿದರೇ?

    ಹಾಗೆ ನೋಡಿದರೆ ಕನ್ನಡ ಸಾಹಿತ್ಯಕ್ಕೆ ರೇಣುಕಾಚಾರ್ಯರ ಕೊಡುಗೆ ತುಂಬಾ ಇದೆ. ಅವರ ಹಗರಣಗಳಿಂದಾಗಿಯೇ ಪತ್ರಿಕೆಯೊಂದರ ಸಾವಿರಾರು ಪ್ರತಿಗಳು ಹೆಚ್ಚಿಗೆ ಮಾರಾಟ ಆಗಿತ್ತು!

  20. ಸಿ. ಎನ್. ರಾಮಚಂದ್ರನ್

    ಜೋಗಿಯವರ ಲೇಖನಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಜೋಗಿ ಪ್ರಾರಂಭಿಸಿದ ಚರ್ಚೆ ದಿಕ್ಕು ತಪ್ಪುತ್ತಿದೆ ಎಂದು ತೋರುತ್ತದೆ. ಇದರ ಮೂಲ ಸ್ವಲ್ಪ ಮಟ್ಟಿಗೆ ಜೋಗಿಯವರ ಲೇಖನದಲ್ಲಿಯೇ ಇದೆ — ಅವರು ಸಾಹಿತಿಗಳ ಬಗ್ಗೆ (ಮುಖ್ಯವಾಗಿ ಬರಗೂರರ ಬಗ್ಗೆ) ಉಪಯೋಗಿಸಿರುವ ಕುಚೋದ್ಯದ ಧಾಟಿ; ಈಗ ಅದು ಮುಂದೆ ಹೋಗಿ ’ಬರಗೂರರು ಯಾರು? ನಾರಾಯಣ ಮೂರ್ತಿ ಕನ್ನಡಿಗರೆ?’ ಎಂಬಂತಹ, ಚರ್ಚೆಗೆ ಸಂಬಂಧಪಡದ ವೈಯಕ್ತಿಕ ನಿಂದೆಗೆ ತಲಪಿದೆ. ಇದು ದುರದೃಷ್ಟಕರ. ವ್ಯಕ್ತಿಗಳನ್ನು ಮರೆತು, ನಮಗೆ ವೈಚಾರಿಕ ಚರ್ಚೆ ಮಾಡಲು ಸಾಧ್ಯವೆ ಇಲ್ಲವೆ? (ಕ. ಸಾ. ಅ.ಯ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಲೇಖಕ-ಚಿತ್ರ ತಯಾರಕ-ಬಂಡಾಯ ಸಂಘಟಕರಾಗಿ ಬರಗೂರು ರಾಮಚಂದ್ರಪ್ಪನವರು ಮಾಡಿರುವ ಕೆಲಸ ಗೊತ್ತಿಲ್ಲದಿದ್ದರೆ ಅದು ಶೋಚನೀಯ ಎಂದಷ್ಟೇ ಹೇಳಬಹುದು.)
    ನನ್ನ ದೃಷ್ಟಿಯಲ್ಲಿ, ಎಲ್ಲರೂ ಚರ್ಚಿಸಬೇಕಾದದ್ದು ಒಂದೇ ವಿಷಯ: ವಿಶ್ವ ಕನ್ನಡ ಸಮ್ಮೇಳನವನ್ನು (ಅಥವಾ ಅಂತಹ ಇತರ ಸಮ್ಮೇಳನಗಳನ್ನು) ಸಾಹಿತಿಗಳೇ ಉದ್ಘಾಟಿಸಬೇಕೆ ಅಥವಾ ಸಾಹಿತ್ಯೇತರ ಕ್ಷೇತ್ರಗಳಲ್ಲಿ ಅಸಾಧಾರಣ ಕೆಲಸ ಮಾಡಿರುವ ಕನ್ನಡಿಗರೂ ಉದ್ಘಾಟಿಸಬಹುದೆ? ಒಂದು ಭಾಷೆ-ಸಾಹಿತ್ಯ-ಸಂಸ್ಕೃತಿಗಳಿಗಾಗಿ ಸಾಹಿತಿಗಳೂ ದುಡಿಯುತ್ತಾರೆ –ಹಾಗೆಯೇ ಆಡಳಿತಗಾರರು, ಸಂಗೀತ-ನೃತ್ಯ-ಚಿತ್ರಕಲೆ ಇತ್ಯಾದಿ ಕ್ಷೇತ್ರಗಳ ಕಲಾವಿದರು, ಉದ್ಯಮಪತಿಗಳು, ರಾಜಕಾರಣಿಗಳು, ವಿಜ್ಞಾನಿಗಳು, ಸಂಶೋಧಕರು, ಇತ್ಯಾದಿ ಅನೇಕ ಪ್ರತಿಭಾವಂತರೂ ದುಡಿಯುತ್ತಾರೆ; ಒಂದು ಸಮಾಜದ ಪ್ರಗತಿಯಾಗಲು ಇವರೆಲ್ಲರ ಕೊಡುಗೆಯೂ ಬೇಕು. (ಈಗ, ಡಾ. ನರಸಿಂಹಯ್ಯನವರು / ಡಾ. ಗಂಗೂಬಾಯಿ ಹಾನಗಲ್ / ಶ್ರೀ ನಿಜಲಿಂಗಪ್ಪನವರು / ಚಿತ್ರಕಾರ ವೆಂಕಟಪ್ಪನವರು / … ಇತ್ಯಾದಿ ಮಹನೀಯರು ಬದುಕಿದ್ದರೆ, ಅವರಲ್ಲಿ ಯಾರು ಬೇಕಾದರೂ ಸಮ್ಮೇಳನವನ್ನು ಉದ್ಘಾಟಿಸಬಹುದಿತ್ತಲ್ಲವೆ?)
    ಎಂದರೆ, ವಿ. ಕ. ಸಮ್ಮೇಳನದ ಉದ್ಘಾಟನೆ ಯಾವುದೇ ಕ್ಷೇತ್ರದ ಪ್ರತಿಭಾವಂತ ವ್ಯಕ್ತಿಯಿಂದ ಆಗಬಹುದು. ಇಷ್ಟೇ ನನ್ನ ವಾದ. ಇದಕ್ಕಾಗಿ ’ಅವರ ಕೊಡುಗೆ ಎಷ್ಟೂ?’ ’ಅವರು ಯಾರು?’ ಎಂಬಂತಹ ಭರ್ತ್ಸನೆ ಅನವಶ್ಯಕ.
    ಸಿ. ಎನ್. ರಾಮಚಂದ್ರನ್

    • Sudha ChidanandaGowda.

      Ramachandran Sir, tumba sariyaada reetiyalli charcheya daariyannu eludu nillisiddeeri. Bhasheya bagge business janara drushtikona bhaya hittisuvantide. Prashne enembude bahujanarige arthavaagade maatu ellello hogibiduttade.Saahitigalu tamage tilidillada vishayadalli matanaadivudu eshtu abhaasavo saahityada arivillada businesmangalu, tantragnaru kate kaviteya bagge hecchu tilidukollade haguravaagi vimarshe maadaletnisuvudu ashte abhaasaddu. vaiyaktika nindaneyannu saamanyavaagi saahitigalu maadalu sankocha paduttaare. koncha sukshmagnati illi agaty enisuttade.

      Sudha Chidanandagowda.

  21. Sanjeev Kubakaddi

    Jogi, nimma vada khandita opputtene.

  22. parasu rama

    ಓಬಿರಾಯನ ಕಾಲದ ನಾಲ್ಕು ಕವಿತೆ, ಆರು ಕಥೆ ಬರೆದ ಲೇಖಕನಿಂದ ವಿಕ ಸಮ್ಮೇಳನ ಉದ್ಘಾಟನೆ ಮಾಡಿಸಬೇಕೇ? ಎಂದು ಜೋಗಿ ಕೇಳುವ ಮೂಲಕ ಸಾಹಿತ್ಯವನ್ನು ತೂಕಕ್ಕೆ ಹಾಕಿದ್ದಾರೆ. ಬರಗೂರು ಅವರು ನಾರಾಯಣಮೂರ್ತಿ ಉದ್ಘಾಟನೆಗೆ ಸಲ್ಲದು ಎಂದಿದ್ದಾರೆ. ಸಾಹಿತಿಗಳೇ ಆಗಬೇಕು ಎಂದು ಎಲ್ಲೂ ಹೇಳಿಲ್ಲ. ನಾರಾಯಣ ಮೂರ್ತಿ ಪರ ಓಟು ಹಾಕುವ ಅಧಿಕಾರ ಜೋಗಿಗೆ ಇದೆ. ಅದಕ್ಕಾಗಿ ಪ್ರಶ್ನೆ ಮಾಡಿದವರನ್ನು ಗಲ್ಲಿಗೆ ಹಾಕುವ ಅಧಿಕಾರ ಅವರಿಗೆ ಇಲ್ಲ. ಅವರ ಭಾಷೆ ತೀರಾ ಉಡಾಫೆಯಿಂದ ಕೂಡಿದೆ.
    – ಪರಶುರಾಮ ಕಲಾಲ್

  23. ಲಕ್ಷ್ಮೀನಾರಾಯಣ ವಿ.ಎನ್

    ಯಾವುದೇ ಅಬಿಪ್ರಾಯಕ್ಕೆ,ನೋಟಕ್ಕೆ, ಗ್ರಹಿಕೆಗೆ ಹಿನ್ನೆಲೆ-ಮುನ್ನೆಲೆ ಎಂಬ ಆಯಾಮಗಳಿವೆ. ಹಿನ್ನೆಲೆ ಯಾವುದು, ಮುನ್ನೆಲೆ ಯಾವುದು ಎಂಬುದನ್ನು ಸಂದರ್ಭ, ಉದ್ದೇಶ ಮತ್ತು ಗ್ರಹಿಸುವವರ ದೃಷ್ಟಿಕೋನಗಳು ನಿರ್ಧರಿಸುತ್ತವೆ.ಇವನ್ನು ಗಮನಿಸದಿದ್ದರೆ ಎಲ್ಲವೂ ಎಲ್ಲದಕ್ಕೂ ಸಂಬಂಧಿಸಿರುವುದರಿಂದ ಯಾವುದನ್ನೂ ಸರಿ-ತಪ್ಪುಗಳ ಚೌಕಟ್ಟಿನಲ್ಲಿ ನಿರ್ಣಯಿಸುವುದು ಅಸಾಧ್ಯವಾಗುತ್ತದೆ. ಚರಿತ್ರಕಾರರ ಸಮ್ಮೇಳನವನ್ನು ಆ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ಕೊಟ್ಟಿರುವರುವ ಚರಿತ್ರಕಾರನ/ಳ,ವಿಜ್ಞಾನಿಗಳ ಸಮ್ಮೇಳನವನ್ನು ವಿಜ್ಞಾನಿಯ, ಕನ್ನಡಭಾಷಿಕರ ಸಮ್ಮೇಳನವನ್ನು ಕನ್ನಡಭಾಷೆಯಲ್ಲಿ ಗಣನೀಯಸಾಧನೆಮಾಡಿರುವವರ ಮುಂದಾಳತ್ವದಲ್ಲಿ ನಡೆಸಬೇಕೆನ್ನುವ ಅಪೇಕ್ಷೆಯ ಹಿಂದೆ ಇಂಥ ಗ್ರಹಿಕೆ ಇದೆ. ಇದನ್ನು ಲಕ್ಷಿಸದೆ ಎಲ್ಲಿಂದ ಎಲ್ಲಿಗೆ ಬೇಕಾದರೂ ಸಂಬಂಧ ತೋರಿಸುವಂಥ ಪ್ರಮೇಯಗಳನ್ನು ಮಂಡಿಸುವುದು ಹೆಡ್ಡರು ಅಥವಾ ಸಮಯಸಾಧಕರು ಮಾತ್ರ ಮಾಡಬಹುದಾದ ಕೆಲಸ. ನಾರಾಯಣ ಮೂರ್ತಿಯವರು ಕನ್ನಡಭಾಷಿಕರನ್ನು ವಿಶ್ವಕನ್ನಡ (ಇದು ಜಗದ್ಗುರು ಪದದಲ್ಲಿನ ಜಗತ್ ಎಂಬ ಅರ್ಥದಂತೆ ಅಲ್ಲ ಎಂದಾದರೆ)ಸಮ್ಮೇಳನದಲ್ಲಿ ಪ್ರತಿನಿಧಿಸುವಂಥ ಕೊಡುಗೆ ನೀಡಿರುವುದಾದರೆ ಅವರೂ ಆಗಲಿ. ಆದರೆ ಇನ್ಫೋಸಿಸ್ ಬೆಳೆಸಿ ಗಳಿಸಿದ ಸ್ವಂತ ಸಂಪತ್ತನ್ನು ಕನ್ನಡಭಾಷಿಕರ ಸಂಪತ್ತಿಗೆ ಕೊಟ್ಟ ಕೊಡುಗೆಯೆಂದು ಭಾವಿಸುವುದಾದರೆ ಅವರೇ ಸಮ್ಮೇಳನಾಧ್ಯಕ್ಷರಾಗಲಿ ಎಂದು ಆಗ್ರಹಿಸುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಅವರನ್ನು ಈ ಭೂಮಿಗೆ ತಂದ ಅವರ ತಾಯಿ-ತಂದೆಯರು ಈ ಗೌರವಕ್ಕೆ ಹೆಚ್ಚು ಯೋಗ್ಯರು.ಅವರಲ್ಲಿ ಯಾರಾದರೂ ಅಥವಾ ಇಬ್ಬರೂ, ಅಥವಾ ಅವರ ಬೆನ್ನಿಗೆ ನಿಂತು ಅವರ ಈ ಮಟ್ಟದ ‘ಸಾಧನೆ’ಗೆ ಕಾರಣೀಭೂತರಾಗಿರಬಹುದಾದ ಅವರ ಶ್ರೀಮತಿಯವರೋ ಆಗಬಹುದಲ್ಲ? ಇದು ಅಷ್ಟೊಂದು ವಿಶ್ವಾತ್ಮಕವಲ್ಲ ಎಂದೆನಿಸಿದರೆ ನಾರಾಯಣಮೂರ್ತಿಯವರ ಸಾಧನೆ-ಸಂಪತ್ತಿನ ಗಳಿಕೆಗೆ ಸಾಧನ ಒದಗಿಸಿರುವ ಬಿಲ್ಗೇಟ್ ಯಾಕೆ ಕನ್ನಡ ಭಾಷಿಕರ ವಿಶ್ವ ಸಮ್ಮೇಳನವನ್ನು ಉದ್ಘಾಟಿಸಬಾರದು? ಇದು ವ್ಯಂಗ್ಯ ಅಥವಾ ಕುಚೋದ್ಯದ ಮಾತಲ್ಲ. ಸಂದರ್ಭ-ಉದ್ದೇಶ-ದೃಷ್ಟಿಕೋನಗಳನ್ನು ಮರೆತು , ಹಿನ್ನೆಲೆ-ಮುನ್ನೆಲೆಗಳ ಅರಿವಿಲ್ಲದೆ ಮಂಡಿಸುವ ಮುಗ್ಧ ಅಥವಾ ಧೂರ್ತ ವಾದಗಳ ತಾರ್ಕಿಕ ಆಯಾಮಗಳ ಒಂದು ಉದಾಹರಣೆ ಅಷ್ಟೆ.
    ನಮ್ಮ ಭಾಷಿಕರ ಆಳವಾದ ಕಾಳಜಿಗಳ ಹಿನ್ನೆಲೆಯಲ್ಲಿ ವಿಶ್ವಕನ್ನಡ ಸಮ್ಮೇಳನದ ಅರ್ಥಪೂರ್ಣತೆಯನ್ನು ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಪರಿಶೀಲಿಸಿದರೆ ಇಂಥ ಚರ್ಚೆಯಿಂದ ಎಲ್ಲರಿಗೂ ಅನುಕೂಲವಾಗಬಹುದೆಂದು ನನ್ನ ಭಾವನೆ.

  24. ಚೈತನ್ಯ

    ಜೋಗಿಯವರು ಬರೆದದ್ದು ಸರಿಯಾಗಿದ್ದರೂ ಸ್ವಲ್ಪ ಕೆರಳಿಸುವಂತಿದೆ.
    ನಾರಾಯಣಮೂರ್ತಿಯವರನ್ನು ಕರೆದಿದ್ದರಲ್ಲಿ ಏನೂ ತಪ್ಪಿಲ್ಲ. ಅವರು ಈವತ್ತಿನ ಮಟ್ಟಕ್ಕೆ ಬರಲು ತುಂಬಾ ಯೋಜನೆಗಳನ್ನು ಊರ್ಜಿತಗೊಳಿಸಿದ್ದಾರೆ. ಅವರ ದೇವೇಗೌಡರ ಹಿಂದಿನ ಜಗಳ ನಮಗೆ ಗೊತ್ತಿದ್ದದ್ದೇ… ಬರಗೂರರ ಮಾತಿನಲ್ಲಿ ಈ “ಜಾತ್ಯಾತೀತತೆ”ಯ ವಾಸನೆ ಕೂಡಾ ಇರಬಹುದು ಅಂತ ಕೆಲವೊಮ್ಮೆ ಅನ್ನಿಸುತ್ತೆ. ಇಷ್ಟು ದೊಡ್ಡ ಸಮ್ಮೇಳನದಲ್ಲಿ ಇಂತಹ ಅಪಸ್ವರ ಸಾಮಾನ್ಯ. ಅವರಿಗೆ ಉದ್ಘಾಟಿಸಲು ಕರೆಸದಿದ್ದರೆ ಅವರಿಗೇನೂ ನಷ್ಟ ಇಲ್ಲ. ಕರೆದೂ ಕೂಡಾ ಅವರು ಬರದೇ ಇರುವ ಅಸಡ್ಡೆ ತೋರಿಸಿದ್ದರೆ ನಾವು ಅವರನ್ನು ದೂಷಿಸಬಹುದಿತ್ತು. ನಿಜವಾಗಿಯೂ ಹುರುಳಿಲ್ಲದ ಚರ್ಚೆ.
    ಅವರು ಈವತ್ತಿನ ಬದಲಾಗುತ್ತಿರುವ ಜಗತ್ತನ್ನು ಯಶಸ್ವಿಯಾಗಿ ಅರಿತು ಉದ್ಯಮಿಯಾಗಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ.
    ಮೊಗಸಾಲೆಯವರು ಗ್ರಂಥಾಲಯ,ಕನ್ನಡ ಸಂಘಗಳ ಮೂಲಕ ಹೆಸರಾಗಿರುವುದು ಕಾಂತಾವರ ಊರಿನಿಂದ ಎಂದು ತಿಳಿದಿದ್ದೇನೆ. ಅಲ್ವಾ ಜೋಗಿ ಸರ್?
    ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ ಅವರು ಹೋದ ವರ್ಷ ಕಾಂತಾವರಕ್ಕೆ ಬಂದಾಗ ಹೋಗಿದ್ದೆ. ಹಿಂದೆ ಹೇಗಿದ್ದರೋ ಗೊತ್ತಿಲ್ಲ. ನಾನು ಅವರಲ್ಲಿ ನೋಡಿದ್ದು ಮಗುವಿನ ಹುಮ್ಮಸ್ಸನ್ನೇ..

  25. Harisha G.B

    ಜೋಗಿ ಎತ್ತಿರೊ ಪ್ರಶ್ನೆ ಸಕಾಲಿಕ.ಸಾಹಿತಿಗಳೇ ಸಮ್ಮೇಳನ ಆರಂಭಿಸಬೇಕು ಅಂತ ಏನೂ ಇಲ್ಲ.ಆದರೆ ಜನಗಣಮನ ಅವಮಾನಿಸಿಸುವ ನಾರಾಯಣ ಮೂರ್ತಿ,ಕನ್ನಡಿಗರಿಗೆ ಉದ್ಯೋಗ ಕೊಡಲೆಂದು ಕಂಪನಿ ಶುರು ಮಾಡಿಲ್ಲ ಎನ್ನುವ ನಾರಾಯಣ ಮೂರ್ತಿ,ಕನ್ನಡದ ಬೆಳವಣಿಗೆಗೆ ಇದುವರೆಗೂ ಯಾವುದೇ ಸಾಫ್ಟ್ ವೇರ್ ನಿರ್ಮಿಸಲು ಕೈ ಹಾಕದ ಈ ವ್ಯಕ್ತಿಗೆ ಇಂಥ ಮಹತ್ವದ ಕನ್ನಡ ಕುರಿತ ಸಮ್ಮೇಳನ ಆರಂಭಿಸಲು ಖಂಡಿತ ಯಾವ ಅರ್ಹತೆಯೂ ಇಲ್ಲ.ಆತನದು ಕನ್ನಡಕ್ಕೆ ಮಿಡಿಯುವ ಮನಸ್ಸಲ್ಲ.

  26. ರಾಜಾರಾಂ ತಲ್ಲೂರು

    ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ಯಾರೋ ರಾಜಕಾರಣಿಯ ಬದಲು ಇವರು ಮಾಡುತ್ತಾರೆ; ಅಷ್ಟೇ. ಆದರೆ ಈ “ಇವರನ್ನು” ಆಯ್ಕೆ ಮಾಡಿದ ಕನ್ನಡ ಮನಸ್ಸು ಕಳೆದ ೫೦ ವರ್ಷಗಳಲ್ಲಿ ಎಷ್ಟು ಕೊಳೆಯುತ್ತಾ ಬಂದಿದೆ ಎಂಬುದು ಬಹಳ ಸಂಕಟ ತರುವ ಸಂಗತಿ. ಕನ್ನಡ ಬದುಕಿನ ಎಲ್ಲ ಸ್ಥರಗಳಲ್ಲಿ ಈ ರೀತಿಯ ಬದಲಾವಣೆ ಆಗುತ್ತಿದೆ ಮತ್ತು ಈ ಘಟನೆ ಪರಿಸ್ಥಿತಿ ಎಷ್ಟು ವಿಪರೀತಕ್ಕೆ ಹೋಗುತ್ತಿದೆ ಎಂಬುದರ ಸಂಕೇತ.
    ಓಬೀರಾಯನ ಕಾಲದ ಕಾನೂನುಗಳ ಹುಳುಕುಗಳನ್ನೇ ಲಾಭದ ದಾರಿಯಾಗಿ ಹಿಡಿದು (ಉದಾ. ಕಂಪನಿ ಲಾ, ಲೇಬರ್ ಲಾ) ಅತ್ಯಂತ ಅನೈತಿಕವಾಗಿ ನಡೆಯುತ್ತಿರುವ “ಇವರ” ಮಾದರಿ ಐಟಿ ವ್ಯವಹಾರಗಳು ಮುಂದೊಂದು ದಿನ ದೊಡ್ಡ ಸ್ಕ್ಯಾಂಡಲ್ ಆಗಿ ಧುತ್ತೆಂದು ಬಂದು ನಿಂತರೆ ಅಚ್ಚರಿಯಿಲ್ಲ. ಅಲ್ಲಿಯ ತನಕ “ಇವರು” ಎಲ್ಲೂ ಸಲ್ಲಬಲ್ಲವರೇ! (ಸತ್ಯಂ ರಾಜು ಪ್ರಕರಣ ನೆನಪಿಸಿಕೊಳ್ಳಿ). ರಿಯಲ್ ಎಸ್ಟೇಟ್ ದಲ್ಲಾಳಿಗಳು, ಮದ್ಯದ ದೊರೆಗಳು ಅಥವಾ ತಲೆಹಿಡುಕರ ವ್ಯವಹಾರಕ್ಕೂ ಇದಕ್ಕೂ ಏನೂ ವ್ಯತ್ಯಾಸ ಇಲ್ಲ.
    ಜೋಗಿ ಹೇಳಿದಂತೆ ನಮ್ಮಲ್ಲಿ ಸಾಹಿತಿಗಳಿಗಿಂತ ಅಮೂಲ್ಯ ಸೇವೆ ಸಲ್ಲಿಸಿದ ಹಲವರಿದ್ದಾರೆ. ಆದರೆ ಅವರನ್ನು ಕರೆದಾಗ “ಅಯ್ಯೋ ನನಗಿಂತ ಅರ್ಹರು ಇಂತವರಿದ್ದಾರೆ, ಅವರಲ್ಲಿ ಯಾರನ್ನಾದರೂ ಕರೆಯಿರಿ ಎಂಬ “ವಿನಯ” ಅವರಲ್ಲಿರುತ್ತದೆ. ಇದು ಆರೋಗ್ಯವಂತ ಕನ್ನಡ ಮನಸ್ಸಿನ ಲಕ್ಷಣ. ನಾನು ಈ ದೇಶದ ರಾಷ್ಟ್ರಪತಿಯೂ ಆಗಬಲ್ಲೆ, ಬಿಟ್ಟರೆ ಏನೂ ಆಗಬಲ್ಲೆ ಎಂಬ ಮನಸ್ಸು ಆರೋಗ್ಯವಂತ ಅಲ್ಲ. ಅದು “ನವ ಹೊಟ್ಟೆಬಾಕ” ಸಂಸ್ಕೃತಿ. ಅಂತಹವರಿಗೆ ಮಣೆ ಹಾಕುತ್ತಿದ್ದೇವಲ್ಲಾ ಎಂಬುದು ನನ್ನ ಸಂಕಟ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading