ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಏಕೆ ಬರೆದರು, ನಾವೇಕೆ ಓದುತ್ತಿದ್ದೇವೆ?

jokathe.jpg“ನಾನಿದನ್ನು ಬರೆಯಬಾರದಿತ್ತು ಅಂದುಕೊಳ್ಳುವ ಹೊತ್ತಿಗೇ, ನೀವಿದನ್ನು ಓದುತ್ತಾ ಇದ್ದೀರಿ!”

ಇದು ಜೋಗಿಯವರ ಸ್ಟೈಲ್. ಅವರ ಕಥಾ ಸಂಕಲನದ ಮುಖದಲ್ಲಿ ಮಿನುಗುತ್ತಿರುವ ಸ್ಮೈಲ್. ಬಹುಶಃ ನೀವು ಈ ಬರಹವನ್ನು ಮತ್ತೊಮ್ಮೆ ಓದುವ ವೇಳೆಗೆ ಅವರ ಕಥಾ ಸಂಕಲನವೇ ನಿಮ್ಮ ಕೈಯಲ್ಲಿದ್ದರೂ ಇದ್ದೀತು. ಜೋಗಿ ಇತ್ತೀಚೆಗೆ ಮಾಡಿದ ತಮ್ಮ ಹೊಸ ರೀತಿಯ ಪ್ರಯೋಗಗಳಿರುವ ಕಥೆಗಳಲ್ಲಿ ಅವರಿಗೆ ಮೆಚ್ಚುಗೆಯಾದ ೨೪ನ್ನು ಆರಿಸಿ “ಜೋಗಿ ಕಥೆಗಳು” ಸಂಕಲನ ತಂದಿದ್ದಾರೆ. ಅಂಕಿತ ಪ್ರಕಾಶನ ಇದನ್ನು ಪ್ರಕಟಿಸಿದೆ. ಜೋಗಿ ಕಥೆಗಳ ಬಗ್ಗೆ, ಅವರು ತಮ್ಮೆದುರಿನ ಸಮುದಾಯದ ಜೊತೆ ಸಂವಾದಿಸುವ ರೀತಿಯ ಬಗ್ಗೆ ಹೇಳಲು ಈ ಮುಖಪುಟದ ಚಹರೆಯೇ ಸಾಕು.

ಈ ಸಂಕಲನದಲ್ಲಿರುವ ಕಥೆಗಳನ್ನು ಕಥೆಗಾರ ವಿವೇಕ ಶಾನಭಾಗ ಕಂಡಿರುವ ಪರಿ ಹೀಗಿದೆ. ಇದೇ ಮೊದಲ ಬಾರಿಗೆ ಬ್ಲಾಗಮಂಡಲದಲ್ಲಿ ಇದು ಕಾಣಿಸಿಕೊಳ್ಳುತ್ತಿದೆ.

*

vivek.jpgಧುನಿಕ ಅನುಭವದ ವಿಚ್ಛಿದ್ರತೆಯನ್ನು ಪರಿಶೀಲಿಸುವ ಇಲ್ಲಿಯ ಕಥೆಗಳ ಹೊಸತನ ಮತ್ತು ಪ್ರಯೋಗಶೀಲತೆ ಒಮ್ಮೆಲೇ ಮನಸ್ಸನ್ನು ಸೆಳೆಯುತ್ತವೆ. ಕಥಾರಚನೆಯ ಮತ್ತು ಭಾಷಾ ಪ್ರಯೋಗದ ಅನೇಕ ಹೊಸ ಸಾಧ್ಯತೆಗಳು ಇಲ್ಲಿವೆ. ಹಲವು ವಾಸ್ತವಗಳು, ಹಲವು ಭ್ರಾಮಕಗಳು ಕೂಡಿ ಉಂಟಾದ ಈ ಜಗತ್ತು, ಒಂದು ಸಾಧ್ಯತೆಯಾಗಿ ನಮ್ಮೊಳಗೇ ಎಲ್ಲೋ ಅವಿತು ಕೂತಿದೆಯೇನೋ ಎಂಬ ತಲ್ಲಣವನ್ನೂ ಹುಟ್ಟಿಸುತ್ತದೆ. ಬಹು ಮುಖ್ಯವಾದುದೆಂದರೆ ಇವು ಕನ್ನಡದ ಒಳಗೇ ಹುಟ್ಟಿದ ಹೊಸ ರಚನೆಗಳು. ಹೀಗೆ ಭಾಷೆಯ ಹೊಟ್ಟೆಯಿಂದ ಬಂದ ಪ್ರಯೋಗಶೀಲತೆ ಮಾತ್ರ ಗಟ್ಟಿಯಾಗಿರುತ್ತದೆ ಹಾಗೂ ಕನ್ನಡ ಬದುಕಿನ ಹೃದಯವನ್ನು ಹಿಡಿಯಲು ಶಕ್ತವಾಗಿರುತ್ತದೆ.

ಕಿರುಗತೆಗಳಿಗೆ ಚುರುಕುತನ ಮಾತ್ರ ಇದ್ದರೆ ಸಾಲದು; ಜೊತೆಗೆ ಪರಿಣಿತ ಕಲೆಗಾರಿಕೆಯೂ ಬೇಕು. ಆ ಸಾಮರ್ಥ್ಯ ಇಲ್ಲಿಯ ಎಲ್ಲ ಕಥೆಗಳಲ್ಲೂ ಕಾಣುತ್ತದೆ. ಜೊತೆಗೆ ಕನ್ನಡ ಸಾಹಿತ್ಯ ಸ್ಮೃತಿಯಿಂದ ಹೆಕ್ಕಿದ, ಜೋಗಿಯವರಿಗೇ ವಿಶಿಷ್ಟವಾದ ಕೆಲವು ಪದ ಪ್ರಯೋಗಗಳು, ಪಾತ್ರಗಳು, ಹೆಸರುಗಳು, ಸಂದರ್ಭಗಳು ಇವೆ.

ಇವು ಆಯಾ ಕಥೆಯ ಹರವನ್ನು ಮಾತ್ರವಲ್ಲ, ಕೆಲವೊಮ್ಮೆ ಮೂಲದ ಪ್ರಸ್ತುತತೆಯನ್ನೂ ಹಿಗ್ಗಿಸುತ್ತವೆ. ಹಾಗಾಗಿ ಈ ಕಥೆಗಳ ಜೀವಜಾಲವು ಹಿಂದೆಲ್ಲೋ ಶುರುವಾಗಿ ಮುಂದೆಲ್ಲೋ ದೂರದವರೆಗೆ ಹರಡಿಕೊಂಡಿದೆ.

ವಿವೇಕ ಶಾನಭಾಗ

‍ಲೇಖಕರು avadhi

4 July, 2007

1 Comment

  1. jogi

    ನಿಮ್ಮ ಪ್ರೀತಿಗೆ ಕೃತಜ್ಞ.
    ಪುಸ್ತಕ ಬಿಡುಗಡೆ ಸಮಾರಂಭಕ್ಕೆ ದಯವಿಟ್ಟು ಬನ್ನಿ.
    -ಜೋಗಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading