(ಒಂದು ಸುದೀರ್ಘ ಕತೆ)
ಜೋಗಿ
ಆವತ್ತು ಅಚಾನಕ ಮಳೆಯಾಯಿತು. ಮಾರ್ಚು ತಿಂಗಳ ಕೊನೆಯ ದಿನಗಳವು. ಕೆರೆ ಏರಿಯ ಮೇಲೆ ನಡಕೊಂಡು, ಗೇರು ಗುಡ್ಡೆ ಹತ್ತಿ, ಗಣಪಣ್ಣನ ಸೋಡಾ ಶರಬತ್ತು ಅಂಗಡಿಯನ್ನು ಬಳಸಿಕೊಂಡು ಬರುವ ಹೊತ್ತಿಗೆ ಮೊದಲ ಹನಿ ಬಿತ್ತು. ಥಟ್ಟನೆ ಮುಂಗೈಗೇ ಬಿದ್ದ ಹನಿಯನ್ನು ಅದು ಮಳೆಹನಿ ಆಗಿರಲಿಕ್ಕೆ ಸಾಧ್ಯವೇ ಇಲ್ಲ ಎಂದು ನಿರಾಕರಿಸುತ್ತಾ ದತ್ತಣ್ಣ ಆಕಾಶ ನೋಡಿದರು. ಮೋಡದ ಕುರುಹು ಕೂಡ ಇರಲಿಲ್ಲ. ಮಧುರವಾದ ದಾಂಪತ್ಯ ಅಳಿದುಹೋದ ವಿಧುರ ಒಂಟಿ ಬಾಳಿನಂತೆ ಆಕಾಶ ನೀಲಿ ನೀಲಿಯಾಗಿ ಹಬ್ಬಿಕೊಂಡಿತ್ತು. ಒಂದೆಳೆ ಬಿಳಿ ಮೋಡ ಕೂಡ ದತ್ತಣ್ಣನ ಕಣ್ಣಿಗೆ ಬೀಳಲಿಲ್ಲ. ಯಾವುದೋ ಹಕ್ಕಿ ಉಚ್ಚೆ ಹೊಯ್ದಿರಬೇಕು ಅಂದುಕೊಂಡು ಮುಂಗೈಯನ್ನು ಮೂಗಿನ ಸಮೀಪ ತಂದು ಮೂಸಿ ನೋಡಿದರು. ಮುಂಜಾನೆ ನೋಯುತ್ತಿರುವ ಕೈಗೆ ಹಚ್ಚಿಕೊಂಡ ತ್ಯಾಂಪಣ್ಣ ಭಂಡಾರಿ ನೋವಿನೆಣ್ಣೆಯ ವಾಸನೆ ಮಾತ್ರ ಮೂಗಿಗೆ ಬಡಿಯಿತು. ದತ್ತಣ್ಣ ಮತ್ತೊಮ್ಮೆ ಗುಮಾನಿಯಿಂದ ಆಕಾಶ ನೋಡಿದರು.
ಆವತ್ತೇ ರಾತ್ರಿ ನಿರ್ಮಲಾ ಟೀಚರ್ ಅವರ ಕನಸಲ್ಲಿ ಕಾಣಿಸಿಕೊಂಡರು. ದತ್ತಣ್ಣ ಮೊಸರಲ್ಲಿ ಕಲಸಿದ ಅವಲಕ್ಕಿಯನ್ನೂ ಮಿಡಿ ಉಪ್ಪಿನಕಾಯಿ ನೆಂಚಿಕೊಂಡು ತಿಂದು, ಐದೂ ಬೆರಳುಗಳನ್ನೂ ಚೀಪಿ, ಎಡಗೈ ನೆಲಕ್ಕೂರಿ ಎದ್ದು, ಜಗಲಿಗೆ ಬಂದು ಬಾಯಿ ಮುಕ್ಕಳಿಸಿ ಉಗಿಯುವುದಕ್ಕೂ, ಮಳೆ ಶುರುವಾಗುವುದಕ್ಕೂ ಸರಿಹೋಯಿತು. ಹೆಂಚಿನ ಮೇಲೆ ಯಾರೋ ಕಲ್ಲೆಸೆದಂತೆ ಆಲಿಕಲ್ಲುಗಳು ಬಿದ್ದವು. ದತ್ತಣ್ಣ ಬೆಚ್ಚಿ ನೋಡುತ್ತಿದ್ದಂತೆ ಆಲಿಕಲ್ಲು ಮಳೆ ಶುರುವಾಗೇ ಬಿಟ್ಟಿತು. ಈ ವರ್ಷ ದ್ರಾಕ್ಷಿ ಬೆಳೆ ಸರ್ವನಾಶ ಆಗೋದು ಖಂಡಿತ ಅಂತ ಹೇಳಿಕೊಂಡು ದತ್ತಣ್ಣ ಮಳೆಯನ್ನೇ ನೋಡುತ್ತಾ ನಿಂತರು.
ಆವತ್ತು ಬಿದ್ದ ಮಳೆಗೂ ನಿರ್ಮಲಾ ಟೀಚರ್ ಕನಸಲ್ಲಿ ಬಂದಿದ್ದಕ್ಕೂ ಏನಾದರೂ ಸಂಬಂಧವಿದೆಯೇ ಅಂತ ದತ್ತಣ್ಣ ಹಲವಾರು ಸಲ ಯೋಚಿಸಿದ್ದಾರೆ. ನಿರ್ಮಲಾ ಟೀಚರಿಗೆ ಮಳೆಯೆಂದರೆ ಪ್ರಾಣ. ನಾನು ನಿಮ್ಮೂರಿಗೆ ಬರೋ ತನಕ ಮಳೇನೇ ನೋಡಿರಲಿಲ್ಲ ಅಂತ ನಿರ್ಮಲಾ ಎಷ್ಟೋ ಸಲ ಸ್ಕೂಲಲ್ಲಿ ಹೇಳಿಕೊಂಡದ್ದನ್ನು ದತ್ತಣ್ಣ ಕೇಳಿಸಿಕೊಂಡಿದ್ದಾರೆ. ನಿರ್ಮಲಾಳ ಊರು ಯಾವುದು ಅಂತ ಅವರಿಗೆ ಥಟ್ಟನೆ ನೆನಪಾಗಲಿಲ್ಲ. ರಾಯದುರ್ಗವೋ ರಾಯಪುರವೋ ಅಂತ ಅವಳೇ ಹೇಳಿದ್ದಳಲ್ಲ? ಪಾಪ, ಅವಳೂರಲ್ಲಿ ಮಳೆಯೇ ಆಗುತ್ತಿರಲಿಲ್ಲವೇನೋ ಎಂದು ದತ್ತಣ್ಣ ಆವತ್ತು ಲೊಚಗುಟ್ಟಿದ್ದರು.
ದತ್ತಣ್ಣ ಸ್ಕೂಲಿಂದ ಮನೆಗೆ ನಡೆದುಕೊಂಡೇ ಬರುವುದು. ಒಮ್ಮೊಮ್ಮೆ ಅದೇ ಸ್ಕೂಲಲ್ಲಿ ಸಮಾಜ ವಿeನ ಪಾಠ ಮಾಡುವ ಬಾಲಕೃಷ್ಣ ಅವರನ್ನು ಮನೆ ತನಕ ಬಿಟ್ಟು ಹೋಗುತ್ತಾನೆ. ಬಾಲಕೃಷ್ಣ ಕೊಂಚ ಉಗ್ಗುತ್ತಾ ಮಾತಾಡುವುದರಿಂದ ಮಕ್ಕಳಿಗೆ ಅವನೆಂದರೆ ತಮಾಷೆ. ಮಿಕ್ಕ ಮೇಷ್ಟ್ರುಗಳಿಗೆ ಅವನ ಮಾತು ಕೇಳುವ ವ್ಯವಧಾನ ಇಲ್ಲ. ಇವತ್ತು ಶುರುಮಾಡಿದ್ರೆ ನಾಳೆ ಮುಗಿಸ್ತಾನೆ ಮನ್ಷ ಅಂತ ಅವರೆಲ್ಲ ಬಾಲಕೃಷ್ಣನ ಸರಹದ್ದಿನಲ್ಲಿ ಬರುವುದನ್ನು ತಪ್ಪಿಸಿಕೊಂಡೇ ಓಡಾಡುತ್ತಾರೆ. ದತ್ತಣ್ಣನಿಗೆ ಬಾಲಕೃಷ್ಣನ ಬಗ್ಗೆ ಅನುಕಂಪ ಮತ್ತು ಪ್ರೀತಿ. ಹೀಗಾಗಿ ಒಮ್ಮೊಮ್ಮೆ ದತ್ತಣ್ಣ ಬಾಲಕೃಷ್ಣನ ಸೈಕಲ್ಲಿನಲ್ಲಿ ಡಬಲ್ ರೈಡ್ ಹೋಗುವುದೂ ಉಂಟು. ಅಥವಾ ಸೈಕಲ್ ತಳ್ಳಿಕೊಂಡು ಮಾತಾಡಿಕೊಂಡು ಹೋಗುವುದೂ ಇದೆ. ಹಾಗೆ ಹೋಗುವಾಗೆಲ್ಲ ಕೆರೆ ಏರಿ ಬಳಸದೇ, ರಸ್ತೆಯಲ್ಲೇ ಇಬ್ಬರೂ ನಡಕೊಂಡು ಹೋಗುತ್ತಾರೆ. ಮಿಕ್ಕಂತೆ ದತ್ತಣ್ಣ ಸ್ಕೂಲು ಹಿಂದಿನ ಗುಡ್ಡ ಏರಿ, ಕೆರೆ ಏರಿಯ ಮೇಲೆ ನಡೆದು, ಅದರಾಚೆಗೆ ಸಿಗುವ ಸ್ಮಶಾನದೊಳಗಿಂದಲೇ ನಡೆದು ಮನೆ ಸೇರುವುದು. ಸ್ಕೂಲಿಗೂ ಮನೆಗೆ ಬೆನ್ನು ಬೆವರುವಷ್ಟು ದೂರ. ವೇಗವಾಗಿ ನಡೆದರೆ ಹಣೆಯೂ ಬೆವರೀತು.
ದತ್ತಣ್ಣ ಮದುವೆ ಆಗಿರಲಿಲ್ಲ. ಮದುವೆ ಆಗುವ ಹೊತ್ತಿಗೆ ಅವರಿಗೆ ತಮ್ಮವರು ಅಂತ ಯಾರೂ ಇರಲಿಲ್ಲ. ಅಪ್ಪ ಅಮ್ಮ ಇಬ್ಬರೂ ತೀರಿಕೊಂಡದ್ದರಿಂದ, ದತ್ತಣ್ಣ ಬೆಳೆದದ್ದು ದೇವಸ್ಥಾನದ ಮೊಕ್ತೇಸರ ಸುಬ್ರಾಯ ಶರ್ಮರ ಮನೆಯಲ್ಲೇ. ಶರ್ಮರ ಮಕ್ಕಳೊಟ್ಟಿಗೇ ಸ್ಕೂಲಿಗೆ ಹೋಗಿ, ಓದಿ, ಮಂಗಳೂರಲ್ಲಿ ಬಿಯೆಡ್ ಮಾಡಿ ಈಗ ತಾನು ಓದಿದ ಶಾಲೆಗೇ ವಿeನದ ಮೇಷ್ಟರಾಗಿ ಬಂದಿದ್ದಾರೆ. ವಿeನ ತುಂಬ ಚಂದ ಕಲಿಸ್ತಾರೆ ಅಂತ ಅವರ ಬಗ್ಗೆ ಮಕ್ಕಳು ಹೇಳಿಕೊಂಡು ಓಡಾಡುತ್ತವೆ. ದತ್ತಣ್ಣ ಎಲ್ಲವನ್ನೂ ವೈeನಿಕವಾಗಿಯೇ ನೋಡುವವರು. ಮಳೆ ಹೇಗೆ ಬರುತ್ತದೆ ಅನ್ನುವುದನ್ನು ಕೂಡ ಪ್ಪಯೋಗ ಮಾಡಿಯೇ ತೋರಿಸುವವರು. ಪ್ರತಿಯೊಂದು ಕ್ರಿಯೆಗೂ ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಅನ್ನುವುದನ್ನು ಗಾಢವಾಗಿ ನಂಬಿದವರು.
ಅದು ಸುಳ್ಳು ಅಂತ ಗೊತ್ತಾದದ್ದು ನಿರ್ಮಲಾ ಟೀಚರ್ ವಿಚಾರದಲ್ಲೇ. ನಿರ್ಮಲಾ ಕೂಡ ಮದುವೆ ಮಾಡಿಕೊಂಡಿರಲಿಲ್ಲ. ಅವರದ್ದೂ ಬಡತನದ ಕತೆಯೇ. ಅವರೂ ಬೆಳೆದದ್ದು ಚಿಕ್ಕಪ್ಪನ ಆಶ್ರಯದಲ್ಲೇ. ಚಿಕ್ಕಪ್ಪನೇನೂ ನಿರ್ಮಲಾಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರಂತೆ. ಆದರೆ ಚಿಕ್ಕಮ್ಮ ನಿರ್ಮಲಾಳಿಗೂ ಚಿಕ್ಕಪ್ಪನಿಗೂ ಸಂಬಂಧ ಇದೆ ಅಂತ ಸುದ್ದಿ ಹಬ್ಬಿಸಿ, ನಿರ್ಮಲಾ ಮನೆ ಬಿಟ್ಟು ಹೋಗುವಂತೆ ಮಾಡಿದಳಂತೆ. ಮನೆಯಲ್ಲೇ ಇಟ್ಟುಕೊಂಡಿದ್ದರೆ, ಅವಳ ಮದುವೆ ಖರ್ಚನ್ನೂ ಭರಿಸಬೇಕಾಗುತ್ತಲ್ಲ ಎಂಬ ದುರಾಸೆಯಿಂದಲೇ ಚಿಕ್ಕಮ್ಮ ತನ್ನನ್ನು ಹೊರಗೆ ಹಾಕಿದ್ದು ಅಂತ ನಿರ್ಮಲಾ ತುಂಬ ಬೇಸರವಾದಾಗ ಹೇಳಿಕೊಳ್ಳುವುದೂ ಉಂಟು.

ನಿರ್ಮಲಾ ಆ ಶಾಲೆಗೆ ಶಿಕ್ಷಕಿಯಾಗಿ ಬಂದು ಏಳು ವರುಷ ಆಗಿದೆ. ನಿರ್ಮಲ ಟೀಚರ್ ಮದುವೆ ಆಗಿಲ್ವಂತೆ ಅನ್ನುವ ಸುದ್ದಿ ಸ್ಕೂಲು, ಊರು ತುಂಬ ಹಬ್ಬಿ, ಆಕೆಯ ಕುರಿತು ಕುತೂಹಲಕಾರಿ ಕತೆಗಳು ಹಬ್ಬುವ ಹೊತ್ತಿಗಾಗಲೇ, ಅವರು ತುಂಬ ಒಳ್ಳೆಯ ಇಂಗ್ಲಿಷ್ ಶಿಕ್ಷಕಿ ಅನ್ನುವುದು ಮಕ್ಕಳಿಗೆ ಗೊತ್ತಾಗಿ ಹೋಗಿತ್ತು. ತಮ್ಮ ಮಕ್ಕಳು ಕಷ್ಟ ಕಷ್ಟ ಅನ್ನುತ್ತಿದ್ದ ಇಂಗ್ಲಿಷನ್ನು ಸುಲಭವಾಗಿ ಕಲಿಯಲು ಶುರುಮಾಡಿದ್ದು ಊರವರ ಗಮನಕ್ಕೂ ಬಂದಿತ್ತು. ಶಿಸ್ತನ್ನು ಮೈಗೂಡಿಸಿಕೊಂಡಂತಿದ್ದ ನಿರ್ಮಲಾ ಟೀಚರ್ ಬೆಳಗ್ಗೆ ಒಂಬತ್ತು ಗಂಟೆಗೆ ಶೆಣೈ ಹೋಟೆಲ್, ಒಂಬತ್ತೂ ಐದಕ್ಕೆ ಕಾಮತರ ಮನೆ, ಒಂಬತ್ತೂ ಒಂಬತ್ತಕ್ಕೆ ಕೆರೆ ಏರಿ, ಒಂಬತ್ತೂ ಹದಿನಾಲ್ಕಕ್ಕೆ ಶಾಲೆಯ ಗೇಟು ದಾಟುವುದನ್ನು ರಂಜನ್ ಕರಾರುವಾಕ್ಕಾಗಿ ಲೆಕ್ಕ ಹಾಕಿ, ಇದು ಸುಳ್ಳು ಅಂತ ಯಾರಾದರೂ ಸಾಬೀತು ಮಾಡಿದರೆ ನಾನು ಕೆಲಸ ಬಿಡುತ್ತೇನೆ ಎಂದು ಸವಾಲು ಹಾಕಿದ್ದ. ರಂಜನ್ ಏನು ಕೆಲಸ ಮಾಡುತ್ತಾನೆ ಅನ್ನುವುದೇ ಯಾರಿಗೂ ಗೊತ್ತಿಲ್ಲದೇ ಇದ್ದದ್ದರಿಂದ ಯಾರೂ ಆ ಸವಾಲನ್ನು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಆದರೆ, ನಿರ್ಮಲಾ ಟೀಚರ್ ಶಿಸ್ತಿನ, ಸಮಯಪಾಲನೆಯ ಹೆಂಗಸು ಅನ್ನುವುದು ಇಡೀ ಊರಿಗೆ ಗೊತ್ತಾಗಿಹೋಯಿತು.
ನಿರ್ಮಲಾ ಮನಸ್ಸು ಮಾಡಿದರೆ ಇಷ್ಟು ಹೊತ್ತಿಗೆ ಈ ಮನೆಯ ದೀಪ ಅವಳೇ ಹಚ್ಚುವಂತಾಗುತ್ತಿತ್ತು ಅಂತ ಆ ಮಳೆಯ ರಾತ್ರಿ ಯೋಚಿಸುತ್ತಾ, ದತ್ತಣ್ಣ ಜಗಲಿಯಲ್ಲಿ ನಿಂತು ಯೋಚಿಸಿದರು. ಅಕಾಲದಲ್ಲಿ ಬಂದ ಮಳೆಯಿಂದಾಗಿ ಸುಟ್ಟು ಸುಡುಗಾಡಾಗಿದ್ದ ಮಣ್ಣು ಹಿತವಾದ ಪರಿಮಳ ಸೂಸುತ್ತಿತ್ತು. ಮಣ್ಣು ಸೂಸುವ ಪರಿಮಳಕ್ಕೆ ಮೃದ್ಗಂಧ ಅನ್ನುತ್ತಾರೆ ಎಂದು ನೆನಪಿಸಿಕೊಳ್ಳುತ್ತಾ ದತ್ತಣ್ಣ ಆಕಾಶವನ್ನೂ ಭೂಮಿಯನ್ನೂ ನೋಡಿದರು. ಮಳೆ ಬರುವ ಸಣ್ಣ ಸೂಚನೆಯನ್ನೂ ಕೊಡದ ಆಕಾಶದಲ್ಲಿ ಕಪ್ಪು ಮೋಡ ಕವಿದದ್ದಾದರೂ ಹೇಗೆ, ಮಳೆ ಸುರಿದದ್ದಾದರೂ ಹೇಗೆ, ಸಂಜೆ ತನ್ನ ಕೈಗೆ ಬಿದ್ದದ್ದು ಮಳೆ ಹನಿಯೇ ಇರಬೇಕಲ್ಲವೇ- ಎಂದೆಲ್ಲ ಬೆರಗಾಗುತ್ತಾ ದತ್ತಣ್ಣ ಅಲ್ಲೇ ಹಾಗೇ ತುಂಬ ಹೊತ್ತು ನಿಂತಿದ್ದರು.
-೨-
ನಿರ್ಮಲಾ ಟೀಚರ್ ಮನಸ್ಸು ಮಾಡಿದ್ದರೆ, ದತ್ತಣ್ಣನಿಗೂ ನಿರ್ಮಲಾಗೂ ಮದುವೆ ಆಗಿ ಮೂರು ವರುಷ ಆಗಿರುತ್ತಿತ್ತು. ಅವರಿಬ್ಬರೂ ಅವಿವಾಹಿತರು ಎಂದು ಎಲ್ಲರಿಗೂ ಗೊತ್ತಿದ್ದರೂ, ಇಬ್ಬರನ್ನೂ ಒಂದು ಮಾಡಬಹುದು ಅನ್ನುವ ಯೋಚನೆ ಬಂದದ್ದು ಪೀಟಿ ಮಾಸ್ಟರ್ ಲಕ್ಷ್ಮಣನಿಗೆ. ಅಲ್ಲಾರೀ, ಅದಕ್ಕೆ ಗತಿಯಿಲ್ಲ, ಇದಕ್ಕೆ ಮತಿಯಿಲ್ಲ- ಎರಡೂ ಒಳ್ಳೇ ಬಳ್ಳಮಂಜದ ಜೋಡಿ. ಒಂದು ಮದುವೆ ಎಬ್ಬಿಸಿಯೇ ಬಿಡುವಾ ಅಂತ ಲಕ್ಷ್ಮಣ ಒಂದು ದಿನ ದತ್ತಣ್ಣನ ಎದುರೇ ಮಿಕ್ಕವರ ಹತ್ತಿರ ಹೇಳಿದ್ದನ್ನು ದತ್ತಣ್ಣ ಕೂಡ ನಿರ್ಭಾವುಕರಾಗಿ ಕೇಳಿಸಿಕೊಂಡರು. ಅಲ್ಲಿಯ ತನಕ ಅವರಿಗೆ ಮದುವೆಯ ಯೋಚನೆಯೂ ಬಂದಿರಲಿಲ್ಲ. ಅವರನ್ನು ಮದುವೆ ಯಾಕೆ ಮಾಡ್ಕೊಂಡಿಲ್ಲ ಅಂತ ಯಾರೂ ಕೇಳಿರಲೂ ಇಲ್ಲ. ಮದುವೆ ಆಗಿ ದತ್ತಣ್ಣ ಅಂತ ಯಾರೂ ಅವರಿಗೆ ಹೇಳಿರಲೂ ಇಲ್ಲ. ಹಾಗೆ ಹೇಳಬಹುದಾದ ಶರ್ಮರು ಯಾವತ್ತೋ ತೀರಿಕೊಂಡಿದ್ದರು. ಮಿಕ್ಕಂತೆ ಆ ಶಾಲೆಗೆ ಬಂದು ಹೋಗುವ ಮೇಷ್ಟರುಗಳಿಗೆ ದತ್ತಣ್ಣನ ಚರಿತ್ರೆ ಗೊತ್ತಿರಲಿಲ್ಲ. ಅಲ್ಲಿ ಟ್ರಾನ್ಸ್-ರ್ ಆಗದೇ ಉಳಿದುಕೊಂಡವರೆಂದರೆ ದತ್ತಣ್ಣ ಒಬ್ಬರೇ. ಅವರು ಯಾವತ್ತೂ ವರ್ಗ ಮಾಡಿ ಅಂತ ಕೇಳಿಕೊಂಡವರೇ ಅಲ್ಲ. ಆ ಕೊಂಪೆಗೆ ಬಂದ ಮಿಕ್ಕ ಮೇಷ್ಟ್ರುಗಳೆಲ್ಲ ಆರೇ ತಿಂಗಳಿಗೆ ಕಂಗಾಲಾಗಿ ಹೋಗುತ್ತಿದ್ದರು. ಪದ್ಮುಂಜದ ಮಳೆ, ಬಿಸಿಲು, ಚಳಿ, ಧೂಳು, ರುಚಿಯಿಲ್ಲದ ಬಾಳು ಸಾಕೆನಿಸಿ ಅದ್ಯಾರದೋ ಕೈ ಕಾಲು ಹಿಡಿದೋ ದುಡ್ಡು ತಿನ್ನಿಸಿಯೋ ಬೇರೆ ಸ್ಕೂಲುಗಳಿಗೆ ವರ್ಗಾ ಮಾಡಿಸಿಕೊಂಡು ಹೋಗುತ್ತಿದ್ದರು. ಹೀಗಾಗಿ ಆ ಸ್ಕೂಲಿನಲ್ಲಿ ಪರ್ಮನೆಂಟಾಗಿದ್ದವರೆಂದರೆ ದತ್ತಣ್ಣ, ಬಾಲಕೃಷ್ಣ ಮತ್ತು ಕಳೆದ ಆರು ವರುಷಗಳಿಂದ ವರ್ಗಾ ಮಾಡಿಸಿಕೊಳ್ಳಲು ಆಗದೇ ಸೋತು ಹೋದ ಲಕ್ಷ್ಮಣ ಮಾತ್ರ.
ದತ್ತಣ್ಣನಿಗೂ ನಿರ್ಮಲಾಗೂ ಮದುವೆ ಮಾಡುವ ಯೋಚನೆ ಬಂದದ್ದೇ ತಡ, ಲಕ್ಷ್ಮಣ ಕಾರ್ಯತತ್ಪರನಾಗಲು ನಿರ್ಧರಿಸಿದ. ದತ್ತಣ್ಣ ಮಾತ್ರ, ಬೇಡ್ವೋ ಮಾರಾಯ. ನಾನು ಮದುವೆ ಆಗೋದಿಲ್ಲ. ಆಗೋ ಹಾಗಿದ್ದರೆ ಯಾವತ್ತೋ ಆಗ್ತಿದ್ದೆ. ಬೇಡ ಅಂತಲೇ ಸುಮ್ಮನಿದ್ದದ್ದು ಅಂತ ಲಕ್ಷ್ಮಣನ ಉತ್ಸಾಹ ಭಂಗ ಮಾಡಲು ನೋಡಿದರು. ಲಕ್ಷ್ಮಣ ಮಾತ್ರ ತಾನು ಹುಟ್ಟಿ ಬಂದದ್ದೇ ದತ್ತಣ್ಣನಿಗೂ ನಿರ್ಮಲಾಗೂ ಮದುವೆ ಮಾಡಿಸುವುದಕ್ಕೆ ಎಂದು ನಿರ್ಧಾರ ಮಾಡಿದಂತಿತ್ತು. ದತ್ತಣ್ಣ, ನಾವೆಲ್ಲ ಮದುವೆ ಮಾಡಿಕೊಂಡು ಒದ್ದಾಡ್ತಿಲ್ವಾ? ನೀವೊಬ್ಬರು ಸುಖವಾಗಿರೋಕೆ ನಾವು ಬಿಡ್ತೀವಾ? ಈ ಸಲ ನಿಮಗೊಂದು ಜೋಡಿ ತಂದೇ ಬಿಡೋದು, ನೀವು ಬೇಡ ಅಂದ್ರೂ ಸರಿಯೇ. ರಿಟೈರ್ ಆದ ಮೇಲೆ ಪಾಠ ಮಾಡೋದಕ್ಕೆ ಯಾರೋ ಒಬ್ಬರು ಬೇಕಾಗ್ತದೆ ಮಾಸ್ಟ್ರೇ ಎಂದು ತಮಾಷೆಯಾಗಿ ಮಾತಾಡುತ್ತಾ, ಲಕ್ಷ್ಮಣ ನಿರ್ಮಲಾ ಮತ್ತು ದತ್ತಣ್ಣ ಮದುವೆ ಆಗಲಿದ್ದಾರೆ ಅನ್ನೋ ಸುದ್ದಿಯನ್ನು ಅರ್ಧ ಊರಿಗೆ ತಲುಪಿಸಿದ್ದ ಲಕ್ಷ್ಮಣ.
ದತ್ತಣ್ಣ, ಮದುವೆ ಮಾಡ್ಕೋತೀರಂತೆ ಅಂತ ಸಿಕ್ಕ ಸಿಕ್ಕವರೆಲ್ಲ ದತ್ತಣ್ಣನನ್ನು ಕೇಳಲು ಶುರುಮಾಡಿದಾಗಲೇ ಈ ಸುದ್ದಿ ರಹಸ್ಯವಾಗಿ ಉಳಿದಿಲ್ಲ ಅಂತ ದತ್ತಣ್ಣನಿಗೂ ಗೊತ್ತಾದದ್ದು. ಹಾಗೆ ಕೇಳಿದವರಿಗೆಲ್ಲ, ಇಲ್ಲಾ, ನಾನು ಮದುವೆ ಮಾಡ್ಕೋತಿಲ್ಲ ಅಂತ ಹೇಳಬೇಕೆಂದುಕೊಂಡ ದತ್ತಣ್ಣ, ಏನೋ ಒಂದು ಯೋಚನೆ ಬಂದು ಹಾಗೆ ಹೇಳದೇ ಸುಮ್ಮನಿದ್ದುಬಿಟ್ಟಿದ್ದರು. ತಾನು ನಿರ್ಮಲಾಳನ್ನು ಮದುವೆಆಗೋ ಸುದ್ದಿ ಊರಿಗೆಲ್ಲ ಗೊತ್ತಾಗಿದೆ ಅಂದ ಮೇಲೆ ನಿರ್ಮಲಾ ಟೀಚರಿಗೂ ಗೊತ್ತಾಗಿರುತ್ತೆ. ಆಕೆಯನ್ನೂ ಎಲ್ಲರೂ ಇದೇ ಪ್ರಶ್ನೆ ಕೇಳಿರುತ್ತಾರೆ. ಆಕೆ ಏನು ಉತ್ತರ ಕೊಟ್ಟಿದ್ದಾಳೋ ತನಗೆ ಗೊತ್ತಿಲ್ಲ. ಆಕೆ ಹೌದು ಅಂತ ಹೇಳಿ, ತಾನು ಇಲ್ಲ ಅಂದರೆ ಪಾಪ, ಅವಳಿಗೆ ಅವಮಾನ ಮಾಡಿದಂತಾಗುತ್ತೆ. ಅವಳು ಇಲ್ಲ ಅಂತ ಹೇಳಿ, ತಾನು ಹೌದು ಅಂದರೆ ಸುಳ್ಳು ಹೇಳಿದಂತಾಗುತ್ತೆ. ಯಾವುದಕ್ಕೂ ಲಕ್ಷ್ಮಣನನ್ನು ಹಿಡಿದು, ಇದಕ್ಕೊಂದು ಪರಿಹಾರ ಹುಡುಕುವಂತೆ ಮಾಡಬೇಕು. ಈ ಸುದ್ದಿ ಹಬ್ಬಲು ಬಿಡಬಾರದು ಅಂತ ತೀರ್ಮಾನ ಮಾಡಿದ್ದರು ದತ್ತಣ್ಣ.
-೩-
ಒಂದು ಗಾಜಿನ ಲೋಟದೊಳಗೆ ಅರ್ಧ ಗ್ಲಾಸು ನೀರು ತುಂಬಿಸಿ. ಅದರೊಳಗೆ ಒಂದು ನೇರವಾದ ಕಡ್ಡಿಯನ್ನು ಹಾಕಿ. ಆ ಕಡ್ಡಿ ನೀರಿನಿಂದ ಹೊರಬರುವ ಜಾಗದಲ್ಲಿ ಮುರಿದಂತೆಯೋ ಬಗ್ಗಿದಂತೆಯೋ ಕಾಣುತ್ತದೆ. ಹೀಗೆ ಕಾಣಿಸುವುದಕ್ಕೆ ಕಾರಣ ಏನು? ಬೆಳಕಿನ ವಕ್ರೀಭವನವೇ ಕಾರಣ. ಅಲೆಯ ವೇಗದಲ್ಲಿನ ಬದಲಾವಣೆಯಿಂದ ಹೀಗಾಗುತ್ತದೆ. ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹಾಯುವಾಗ ವಕ್ರೀಭವನ ಹೊಂದುತ್ತದೆ. ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಬೆಳಕು ಹಾಯುವಾಗ ಬೆಳಕಿನ ವೇಗದಲ್ಲಿ ಯಾಕೆ ಬದಲಾವಣೆ ಆಗುತ್ತದೆ ಎಂದರೆ, ಆಯಾ ಮಾಧ್ಯಮದ ಅಲೆಯ ಸಾಂದ್ರತೆಯಲ್ಲಿ ಇರುವ ವ್ಯತ್ಯಾಸವೇ ಕಾರಣ.
ಇದನ್ನು ಮತ್ತಷ್ಟು ಸರಳವಾಗಿ ಹೇಳುವುದಾದರೆ, ನಿರ್ಮಲಾ ಟೀಚರ್ ಮನಸ್ಸಿನ ಅಲೆಯ ವೇಗಕ್ಕೂ ದತ್ತಣ್ಣ ಮನಸ್ಸಿನ ಅಲೆಯ ವೇಗಕ್ಕೂ ತುಂಬ ವ್ಯತ್ಯಾಸವಿತ್ತು. ಹೀಗಾಗಿ ಅವರ ಮನಸ್ಸನ್ನು ತೂರಿಕೊಂಡು ಇವರ ಮನಸ್ಸಿಗೆ ಬರುವ ಗೊತ್ತಿಗೆ, ಆ ಪ್ರೇಮದ ಗೆರೆ ಮುರಿದಂತೆ ಕಾಣಿಸುತ್ತಿತ್ತು. ಅದು ಮುರಿದಿತ್ತೋ ಅಥವಾ ಮುರಿದಂತೆ ಕಾಣಿಸುತ್ತಿತ್ತೋ ಅನ್ನುವುದು ಲಕ್ಷ್ಮಣ ಮಾಸ್ಟರಿಗೆ ಸ್ಪಷ್ಟವಿರಲಿಲ್ಲ. ಅವರಿಗೆ ಅದು ಗೊತ್ತಾಗುವುದೂ ಸಾಧ್ಯವಿರಲಿಲ್ಲ. ಪೀಟಿ ಮಾಸ್ತರಾಗಿದ್ದ ಲಕ್ಷ್ಮಣನಿಗೆ ದತ್ತಣ್ಣನಷ್ಟು ಒಳ್ಳೆಯ ವಿeನದ ಶಿಕ್ಷಕರು ಸಿಕ್ಕಿರಲಿಲ್ಲ. ಹೀಗಾಗಿ ವಕ್ರೀಭವನ ಎಂಬುದು ಇದೆ ಅನ್ನುವುದು ಮರೆತೇಹೋಗಿತ್ತು.
-೪-
ಪರ್ಫೆಕ್ಟ್ ಪ್ರೋಗ್ರೆಸಿವ್ ಟೆನ್ಸ್
The perfect progressive tense describes actions that repeated over a period of time in the past, are continuing in the present, and/or will continue in the future.
The present perfect progressive tense tells you about a continuous action that was initiated in the past and finished at some point in the past; however, the action has some relation to the present time. Use have/has + been + ing.
Example:
-It has been raining, and the street is still wet.
– I have been running, and I am still tired.
ಮೂರನೆಯ ಉದಾಹರಣೆ.
I have been loving, and I am still lost
೫
ಹೊಂದಿಸಿ ಬರೆಯಿರಿ
ಮುಸ್ಸಂಜೆ – ಇದ್ದಕ್ಕಿದ್ದಂತೆ ನಾನು ಒಂಟಿ ಅನ್ನಿಸಿಬಿಡುತ್ತೆ.
ನಡುರಾತ್ರಿ – ನಮ್ಮೂರಲ್ಲಿ ಯಾವತ್ತೂ ಇಷ್ಟೊಂದು ಚಳಿ ಇರುತ್ತಿರಲಿಲ್ಲ
ಒಪ್ಕೊಂಡು ಬಿಡಬೇಕಾಗಿತ್ತು – ನೀರು ಸದಾ ಎತ್ತರದಿಂದ ತಗ್ಗು ಪ್ರದೇಶಕ್ಕೇ ಹರಿಯುತ್ತದೆ.
ಈ ವಯಸ್ಸಲ್ಲಿ ಮದುವೆ ಕಷ್ಟ – ಆಲಿಕಲ್ಲು ಮಳೆ ಯಾಕೆ ಸುರಿಯುತ್ತದೋ ಯಾರಿಗೂ ಗೊತ್ತಿಲ್ಲ.
ಕಿರುಬೆರಳಿಗೆ ಕೆಲಸವಿಲ್ಲ – ಇದ್ದಾಗ ಯಾರೂ ಗಮನಿಸುವುದಿಲ್ಲ. ಇಲ್ಲದೇ ಇದ್ದಾಗ ಅವಳಿಗೆ ನಾಲ್ಕೇ ಬೆರಳು ಅನ್ನುತ್ತಾರೆ.
ಮುಳ್ಳಿಲ್ಲದ ಗಡಿಯಾರ ಬೇಕು- ನಲವತ್ತೈದು ಅಂಥ ವಯಸ್ಸೇನಲ್ಲ.
-೬-
ಸುಮಾರು ದಿನಗಳ ನಂತರ ದತ್ತಣ್ಣನಿಗೆ ತನಗೆ ಬೀಳುತ್ತಿದ್ದ ಕನಸಿನ ಸತ್ಯ ಗೊತ್ತಾಯಿತು. ಅಷ್ಟೂ ದಿನ ತನ್ನ ಕನಸಿನಲ್ಲಿ ನಿರ್ಮಲಾ ಟೀಚರ್ ಬರುತ್ತಾರೆ ಅಂತಲೇ ದತ್ತಣ್ಣ ತಿಳಿದುಕೊಂಡಿದ್ದರು. ಅವರು ಯಾಕಾದರೂ ಬರುತ್ತಾರೋ ಅಂತ ಎಷ್ಟೋ ಸಲ ದತ್ತಣ್ಣನಿಗೆ ಅನ್ನಿಸುತ್ತಿತ್ತು. ಅವರು ಬಾರದಂತೆ ಮಾಡಬೇಕು ಅಂತ ದತ್ತಣ್ಣ ಅನೇಕ ಉಪಾಯಗಳನ್ನು ಮಾಡಿದ್ದರು. ಹಲವಾರು ರಾತ್ರಿ ನಿದ್ದೆ ಮಾಡುವುದನ್ನೇ ಬಿಟ್ಟುಬಿಟ್ಟಿದ್ದರು. ಸ್ಕೂಲಿಗೆ ಹೋದರೆ ಬೆಳಕಿನ ವಕ್ರೀಭವನ ಆದಂತೆ ಎಲ್ಲವೂ ಕೊಂಚ ಓರೆಓರೆಯಾಗಿಯೇ ಕಾಣಿಸುತ್ತಿತ್ತು. ಹೊಂದಿಸಿ ಬರೆಯುವುದು ಕಷ್ಟವಾದಂತೆ ಅನ್ನಿಸಿ ಸ್ಕೂಲು ಅಂದಾಗ ಹಾಸಿಗೆ ಅನ್ನುವ ಪದ ನೆನಪಾಗುತ್ತಿತ್ತು. ಮಾತಾಡುವಾಗ ವ್ಯಾಕರಣ ತಪ್ಪಾಗುತ್ತಿತ್ತು.
ನಿರ್ಮಲಾ ಕಿಟಕಿಯ ಕಡೆ ಮುಖ ಮಾಡಿ ಕೂರುತ್ತಿದ್ದಳು. ಕೈಯಲ್ಲಿ ಯಾವುದೋ ಪುಸ್ತಕ ಸದಾ ಅರೆತೆರೆದ ಅರೆ ಮುಚ್ಚಿದ ಸ್ಥಿತಿಯಲ್ಲಿರುತ್ತಿತ್ತು. ಕಣ್ಣೂ ಕೂಡ ಅದೇ ಸ್ಥಿತಿಯಲ್ಲಿ ತೆರೆದಿದೆಯೋ ಮುಚ್ಚಿದೆಯೋ ಗೊತ್ತಾಗದಂತೆ ಅರೆನಿಮೀಲಿತವಾಗಿರುತ್ತಿತ್ತು. ಲಕ್ಷ್ಮಣ ತಾನು ಮಾಡಿಸದೇ ಹೋದ ಮದುವೆಯ ಬಗ್ಗೆ ಪಶ್ಚಾತ್ತಾಪ ಪಟ್ಟವನಂತೆ ಓಡಾಡುತ್ತಿದ್ದ. ಒಂದು ಮಹತ್ಕಾರ್ಯವನ್ನು ಸಾಽಸಲು ಅವಕಾಶ ಕೊಡದೇ ಇದ್ದ ದತ್ತಣ್ಣ ಮತ್ತು ನಿರ್ಮಲಾ ಬಗ್ಗೆ ಆತನಿಗೆ ಸಿಟ್ಟು ಮತ್ತು ಅಸಹನೆ ಇದ್ದಂತೆ ಅವನ ವರ್ತನೆಯಿಂದ ಗೊತ್ತಾಗುತ್ತಿತ್ತು. ಒಂದು ಸಾರಿ ಅದು ಅಯಾಚಿತವಾಗಿ ಅವನ ಬಾಯಿಂದ ಹೊರಬಿದ್ದಿತ್ತು ಕೂಡ. ಮದುವೆಯಾಗಲು ದತ್ತಣ್ಣ ಕೂಡ ಒಪ್ಪಲಿಲ್ಲ ಎಂದು ಯಾರಿಗೋ ಹೇಳುತ್ತಾ ಆತ ಹತ್ತು ಬೆರಳಿದ್ದರೇನಾಯ್ತು ಮಾರಾಯ್ರೆ, ಉಚ್ಚೆ ಹೊಯ್ಯಲಿಕ್ಕಾಗ್ತದಾ ಎಂದು ಕೊಂಚ ಅಸಭ್ಯವಾಗಿ ಮಾತಾಡಿದ್ದ.
ದತ್ತಣ್ಣನ ಕನಸಲ್ಲಿ ನಿರ್ಮಲಾ ಬರಲಿಕ್ಕೆ ಶುರುವಾದದ್ದು, ಅವರಿಬ್ಬರೂ ಮದುವೆ ಆಗೋದಿಲ್ಲ ಅಂತ ಜಂಟಿಯಾಗಿ ತೀರ್ಮಾನಿಸಿದಾಗಲೇ. ಅದು ಅವರಿಬ್ಬರ ನಿರ್ಧಾರ ಅಂತ ಇಡೀ ಶಾಲೆಯೂ ಊರೂ ತಿಳಿದುಕೊಂಡಿದ್ದು. ಯಥಾರ್ಥದಲ್ಲಿ ಅದು ಅವರಿಬ್ಬರ ನಿರ್ಧಾರ ಆಗಿರಲಿಲ್ಲ. ಆ ಸುದ್ದಿ ಊರೆಲ್ಲ ಹಬ್ಬಿ, ನಿರ್ಮಲಾ ಕಿವಿಗೂ ಅದು ಬಿದ್ದು, ಇನ್ನೇನು ಅವರಿಬ್ಬರೂ ಮದುವೆ ಆಗುತ್ತಾರೆ ಅಂತ ಇಡೀ ಊರಿಗೆ ಊರೇ ಅಂದುಕೊಂಡ ಒಂದು ಮುಸ್ಸಂಜೆ, ದತ್ತಣ್ಣನ ಮನೆಗೆ ನಿರ್ಮಲಾ ಬಂದಿದ್ದಳು.
-೭-
ನಿರ್ಮಲಾ ಮತ್ತು ದತ್ತಣ್ಣ ಹೀಗೆ ಮಾತಾಡಿಕೊಂಡರು:
ನಿಮ್ಮನ್ನು ನಾನು ಮದುವೆ ಮಾಡ್ಕೋತೀನಿ ಅಂತ ಸುದ್ದಿ ಹಬ್ಬಿಸಿರೋದು ನೀವೇ ಏನು?
ಇಲ್ಲ, ನಾನಲ್ಲ.
ಮತ್ತೆ ನೀವೇ ಎಲ್ಲಾರಿಗೂ ಹೇಳ್ಕೊಂಡು ಬಂದಿದ್ದೀರಂತೆ.
ನಾನು ಯಾರ ಜೊತೆಗೂ ಮಾತಾಡಿಲ್ಲ. ಇಲ್ಲ. ಮಾತಾಡಿಲ್ಲ.
ಮದುವೆ ಆಗ್ತೀನಿ ಅಂತ ಹೇಳಿದ್ರೇನು?
ಇಲ್ಲ, ಹೇಳಿಲ್ಲ.
ಆಗಲ್ಲ ಅಂತ ಹೇಳಿದ್ರೇನು?
ಇಲ್ಲ, ಹೇಳಿಲ್ಲ.
ಆಗಲ್ಲ ಅಂತ ಹೇಳಿಲ್ಲ ಅಂದ್ರೆ ಅಗ್ತೀರಿ ಅಂತ ಅರ್ಥ ಅಲ್ವಾ?
ಇಲ್ಲ .. ಇಲ್ಲ. ಆಗಲ್ಲ.
ಅಂದ್ರೆ ನೀವು ನನ್ನ ಮದುವೆ ಆಗಲ್ಲ..
ಆಗಲ್ಲ.. ಅಂದ್ರೆ, ಆಗಬಾರದು ಅಂತಲ್ಲ..
ಅಂದ್ರೆ ಮದುವೆ ಆಗ್ತೀರಿ?
ಆದ್ರೂ ಆಗಬಹುದು.. ಆಗಲ್ಲ ಅಂದ್ರೆ ಆಗದೇನೂ ಇರಬಹುದು. ನಾನೇನೂ ಯೋಚನೆ ಮಾಡಿಲ್ಲ.
ಯಾವುದೂ ನಿಮಗೆ ಸ್ಪಷ್ಟ ಇಲ್ಲ. ಎಲ್ಲರೂ ಆಗು ಅಂದ್ರೆ ಆಗೋದು, ಬೇಡ ಅಂದ್ರೆ ಬಿಡೋದಕ್ಕೆ ಇದು ಊರ ವಿಚಾರ ಏನು? ಈಗ ನಾನು ಹೇಳ್ತೀನಿ ಕೇಳಿ.. ನೀವು ನನ್ನ ಮದುವೆ ಆಗ್ತಾ ಇಲ್ಲ. ಏನು ಹೇಳಿ, ನೀವು ನನ್ನನ್ನು ಮದುವೆ ಮಾಡ್ಕೋತಿಲ್ಲ.
-೮-
ದತ್ತಣ್ಣ ಆಕೆ ಹೊರಟು ಹೋದ ಮೇಲೆ ಕಂಗಾಲಾಗಿ ನಿಂತಿದ್ದರು. ನೀವು ನನ್ನ ಮದುವೆ ಮಾಡ್ಕೋತಿಲ್ಲ ಅಂದರೆ, ಅದು ಅವಳ ನಿರ್ಧಾರವೇ ತನ್ನದೇ. ತನ್ನ ನಿರ್ಧಾರವನ್ನು ಅವಳು ಹೇಳಿ ಹೋದಳೇ. ಅವಳನ್ನು ಮದುವೆ ಆಗೋಲ್ಲ ಅನ್ನೋದು ತನ್ನ ನಿರ್ಧಾರ ಆಗಿತ್ತೇ? ಅಗಿರಬೇಕು ಅಂತ ಅವಳು ಹೇಳಿದಳೇ? ಅವಳ ನಿರ್ಧಾರ ಏನಾಗಿತ್ತು ಹಾಗಿದ್ದರೆ? ಅವಳು ಮದುವೆ ಆಗೋದಕ್ಕೆ ಒಪ್ಪಿಕೊಂಡಿದ್ದಳೇ? ಅವಳಿಗೆ ಇಷ್ಟವಿತ್ತೇ?
ಬೆಳಕಿನ ವಕ್ರೀಭವನದಿಂದ ಇಷ್ಟೊಂದು ಓರೆಕೋರೆಗಳು ಸಂಭವಿಸುತ್ತವೆಯಾ?
-೯-
ದತ್ತಣ್ಣನಿಗೆ ನಿರ್ಮಲಾ ತನ್ನ ಕನಸಲ್ಲಿ ಬರುತ್ತಿಲ್ಲ ಅನ್ನೋದು ತುಂಬಾ ದಿನಗಳ ನಂತರ ಗೊತ್ತಾಯಿತು. ಅದರ ಬದಲು ತಾನೇ ಕನಸಿನಲ್ಲಿ ನಿರ್ಮಲಾ ಆಗಿ ಬದಲಾಗುತ್ತಿದ್ದೇನೆ. ತನ್ನ ಕನಸಿನಲ್ಲಿ ತಾನು ದತ್ತಣ್ಣ ಅಲ್ಲ, ನಿರ್ಮಲಾ ಆಗಿ ರೂಪಾಂತರ ಹೊಂದುತ್ತಿದ್ದೇನೆ. ನಾನು ನೋಡುತ್ತಿರುವುದು ನಿರ್ಮಲಾ ಆಗಿ ರೂಪಾಂತರ ಹೊಂದಿರುವ ತನ್ನನ್ನೇ.
ನಿರ್ಮಲಾ ಸ್ವಪ್ನದಲ್ಲಿ ತನ್ನ ರೂಪು, ಮನಸ್ಸು ಪಡೆಯುತ್ತಿರಬಹುದೇ? ತಾವಿಬ್ಬರೂ ಸ್ವಪ್ನದಲ್ಲಿ ನಿಜವಾಗುತ್ತಿದ್ದೇವೆಯೇ? ಸುಳ್ಳಾಗುತ್ತಿದ್ದೇವೆಯೇ? ಮೈ ಪಡೆದುಕೊಳ್ಳುತ್ತಿದ್ದೇವೇಯೇ? ಮೈ ಕಳೆದುಕೊಳ್ಳುತ್ತಿದ್ದೇವೆಯೇ?
ಒಂದು ದಿನ ಸ್ವಪ್ನದಲ್ಲಿ ನಿರ್ಮಲಾ ಟೀಚರ್ ಆದ ದತ್ತಣ್ಣನಿಗೆ ಜಾಮೂನು ತಿನ್ನುವ ಆಶೆಯಾಯಿತು. ಜಾಮೂನು ತನಗೆ ತುಂಬ ಇಷ್ಟ ಅಂತ ನೆನಪಾಯಿತು. ದತ್ತಣ್ಣನಿಗೆ ಜಾಮೂನು ಕಂಡರಾಗುತ್ತಿರಲಿಲ್ಲ. ತಾನು ಕನಸಲ್ಲಿ ನಿರ್ಮಲಾ ಆಗಿ ಜಾಮೂನು ಇಷ್ಟ ಅಂತ ಅನ್ನಿಸಿದ್ದು, ನಿರ್ಮಲಾಳದ್ದೇ ಆಸೆ ಇರಬಹುದು ಅಂದುಕೊಂಡು ದತ್ತಣ್ಣ ಬೆರಗಾಗಿ ಯೋಚಿಸುತ್ತಾ ಕೂತರು.
ತಾನೂ ನಿರ್ಮಲಾ ತುಂಬ ದಿನಗಳಿಂದ ಮಾತಾಡಿಲ್ಲವಲ್ಲ ಅಂದುಕೊಂಡರು. ತಾನು ಕನಸಲ್ಲಿ ಅವಳೇ ಆಗುತ್ತಿರೋದನ್ನು ಅವಳಿಗೆ ಹೇಳಬೇಕು. ಅವಳಿಗೆ ಜಾಮೂನು ತಿನ್ನಿಸಬೇಕು. ಜಾಮೂನು ನನಗಿಷ್ಟ ಅಂತ ನಿಮಗೆ ಹೇಗೆ ಗೊತ್ತಾಯ್ತು ಅಂತ ಕೇಳಿದಾಗ, ನಂಗೆ ತುಂಬ ಸಂಗತಿಗಳು ಗೊತ್ತು ಅಂತ ಹೇಳಿ ಅವಳು ಬೆರಗಾಗುವಂತೆ ಮಾಡಬೇಕು. ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಳ್ಳಬಹುದು ಅಂತ ಅವಳಿಗೆ ಹೇಳಬೇಕು ಅಂದುಕೊಂಡರು.
-೧೦-
ಒಂದು ಸಂಭಾಷಣೆ:
ದತ್ತಣ್ಣ: ಬನ್ರೀ ನಿರ್ಮಲಾ, ಜಾಮೂನು ತಿನ್ನೋಣ. ನಿಮಗೆ ಜಾಮೂನು ಇಷ್ಟ ತಾನೇ?
ನಿರ್ಮಲಾ: ನೀವು ಜಾಮೂನು ತಿಂತೀರಾ? ನಿಮಗೆ ಜಾಮೂನು ಅಂದ್ರೆ ಅಲರ್ಜಿ ತಾನೇ?







Very nice.
Shiva Billava
ಅವರಿಬ್ಬರ ಸುಪ್ತ ಒಲವು ಸ್ವಪ್ನದಲ್ಲೂ ನನ್ನನ್ನು ಎಡೆಬಿಡದೆ ಕಾಡಿತು.
ಅವರಿಬ್ಬರ ಸುಪ್ತ ಒಲವು ನನ್ನನ್ನು ಸ್ವಪ್ನದಲ್ಲಿಯೂ ಕಾಡಿತು. ಇಷ್ಟವಾಯಿತು.
ತುಂಬಾ ಚೆನ್ನಾಗಿದೆ
sir banglore varta bhavanada munde nim jate photo tegesikondidde. baraha ista aytu. nimma nanna akshara dhosti 8 varshaddu.
ಕಥೆಗೂ ಮಿಗಿಲಾದ ಅನುಭವ ಸೃಷ್ಟಿಸುವುದು, ಇಷ್ಟೊಂದು ಅದ್ಭುತವಾದ ಶೈಲಿಯಲ್ಲಿ ಬರೆಯುವುದು ನಿಮ್ಮಿಂದ ಮಾತ್ರ ಸಾಧ್ಯ ಜೋಗಿ ಸರ್.
ಜೋಗಿ ಸರ್..ಮನಸ್ಸಿನ ಸೂಜಿಗಲಗಲ್ಲುಗಳಿಗೂ ಕೆಲವೊಮ್ಮೆ…ದಿಕ್ಕು ತೋಚದೇ ಅಸಾಯಕತೆ ಅಥವಾ ದ್ವಂದ್ವದಲ್ಲಿಮುಳಿಗೆದ್ದು ಹೊಸದೊಂದು ಸಂಕೀರ್ಣತೆಯಲ್ಲಿನಲಗುತ್ತವೆ ಎನ್ನುವದಕ್ಕೇ ತಮ್ಮ ಮನೋಜ್ಞ ಕತೆಯಿಂದ ತಿಳಿಯುತ್ತದೆ, ಸರ್…ತುಂಬಾ ಉತ್ತಮ ಕತೆ..ವೈ.ಎಸ್.ಹರಗಿ
Woooooooooowwww.. Jogi Sir, “ಮೃದ್ಗಂಧ” ಅನ್ನುವ ಪದವೆ ರೋಮಾಂಚನ ಹುಟ್ಟಿಸುತ್ತೆ. ಇನ್ನು Physics,English Grammar, ಹೊಂದಿಸಿ ಬರೆಯಿರಿ, ಕೊನೆಲಿ ಬರೋ ಜಾಮೂನ್ Twist ; How Could i explain the thrill i had after reading this.
Awesome, i Could say is this is your best one…. You have a got good sense of blending the things.. is it kind of ” Magic realism” ?
Nimma choopu baravanige,nimma srujanasheelate, Srishti kriye maaya aagtaa ide jogi sir.
Please don’t mistake .idu nanna anisike
ಕಾವ್ಯದಲ್ಲಿ ಬರುವ ಬೆರಗಿನಂತೆ ಇವೆ ಕೊನೆಯ ಸಾಲುಗಲು. ಇಷ್ಟವಾಯಿತು .