ಮಾಲವಿಕಾ ಎಂಬ ಮೌನಿಯ ಕತೆ
ಮಾಲವಿಕಾಗೆ ಮನುಷ್ಯರೆಂದರೆ ಅಲರ್ಜಿ. ಪ್ರಶ್ನೆಗಳೆಂದರೆ ರೇಜಿಗೆ. ಎಲ್ಲರೂ ಅದದೇ ಪ್ರಶ್ನೆಗಳನ್ನು ಕೇಳುತ್ತಾರೆಂದು ಸಿಟ್ಟು. ಹೀಗಾಗಿ ಆಕೆ ಸಾಮಾನ್ಯವಾಗಿ ಗುಂಪಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ತುಂಬ ಮಂದಿ ಸೇರಿರುವ ಜಾಗಕ್ಕೆ ಹೋಗುವುದಿಲ್ಲ. ಅದೇ ಕಾರಣಕ್ಕೆ ಅವಳು ತನ್ನ ಆಪ್ತ ಗೆಳತಿಯ ಮದುವೆಗೂ ಹೋಗಿರಲಿಲ್ಲ.
ಆ ಮದುವೆಗೆ ಅವಳು ಹೋಗಿದ್ದರೆ ಅಷ್ಟು ಸುದ್ದಿ ಆಗುತ್ತಿರಲಿಲ್ಲವೇನೋ? ಅವಳ ಗೈರುಹಾಜರಿಯಲ್ಲಿ ಅವಳ ಬಗ್ಗೆ ತುಂಬ ಚರ್ಚೆಗಳಾದವು. ಅವಳ ಅಂತರ್ಮುಖಿ ವ್ಯಕ್ತಿತ್ವವನ್ನು ಒಂದು ಕಾಯಿಲೆ ಅಂತ ಯಾರೋ ಅಂದರು. ಅದು ಅವಳ ಕುಟುಂಬದಿಂದ ಬಂದ ಸಮಸ್ಯೆ. ಅವಳ ಅಮ್ಮ ಸಿಕ್ಕಾಪಟ್ಟೆ ಜಗಳಗಂಟಿ ಆಗಿದ್ದಳು ಅಂತ ಇನ್ನೊಬ್ಬಳು ಆಡಿಕೊಂಡಳು. ಅವಳ ವ್ಯಕ್ತಿತ್ವದಲ್ಲೇ ಏನೋ ಸಮಸ್ಯೆಯಿದೆ. ಹೀಗಾಗಿ ಆಕೆ ಹೊರಗೆ ಕಾಣಿಸಿಕೊಳ್ಳುವುದಿಲ್ಲ ಅಂತ ಮತ್ಯಾರೋ ಟೀಕಿಸಿದರು. ಅವಳು ಪ್ರೀತಿಸಿದ ಹುಡುಗ ಅವಳನ್ನು ಬಿಟ್ಟು ಹೋದನಂತೆ. ಆವತ್ತಿನಿಂದ ಹೀಗೆ ಅಂತ ಮತ್ತೊಬ್ಬರು ಸತ್ಯದ ತಲೆ ಮೇಲೆ ಹೊಡೆದಂತೆ ಹೇಳಿದರು. ಹೀಗೆ ಮಾಲವಿಕಾ ಆವತ್ತಿಡೀ ಸುದ್ದಿಯಾಗಿ, ಅವಳ ವರ್ತನೆಗೆ ನೆಪಗಳನ್ನು ಹುಡುಕುವ ವಿಚಾರ ಸಂಕಿರಣವೊಂದು ನಡೆದುಹೋಯಿತು. ಅಲ್ಲಿ ನಡೆದ ಸುದ್ದಿಯೆಲ್ಲ ಅವಳಿಗೆ ಮೂರು ದಿನ ನಂತರ ತಲುಪಿತು. ಮಾಲವಿಕಾ ಅದನ್ನೇನೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಜನಗಳ ಸ್ವಭಾವವೇ ಇಷ್ಟು ಅಂದುಕೊಂಡು ಸುಮ್ಮನಾದಳು.
ಈ ಒಂಟಿತನವನ್ನು ಮೀರುವುದಕ್ಕೆ ಅವಳಿಗೊಂದು ದಾರಿ ಸಿಕ್ಕಿಬಿಟ್ಟಿತ್ತು. ಕೆಲವು ತಿಂಗಳ ಹಿಂದೆ ಅವಳು ಫೇಸ್ಬುಕ್ಕಿನಲ್ಲೊಂದು ಅಕೌಂಟ್ ತೆರೆದಿದ್ದಳು. ಅದನ್ನೂ ಅವಳು ತನ್ನ ಹೆಸರಿನಲ್ಲಿ ತೆರೆದಿರಲಿಲ್ಲ. ಎಲ್ಲಿ ತನ್ನ ರಹಸ್ಯಗಳೆಲ್ಲ ಗೊತ್ತಾಗಿಬಿಡುತ್ತವೋ ಎನ್ನುವ ಭಯದ ಜೊತೆ, ಮತ್ತೆಲ್ಲಿ ಸಂಪರ್ಕಗಳು ಬೆಳೆಯುತ್ತವೋ ಅನ್ನುವ ಆತಂಕದಲ್ಲಿ ತನ್ನ ನಿಜವಾದ ಹೆಸರನ್ನು ಕೊಡದೇ, ಮಾಲತಿ ಅನ್ನುವ ಸುಳ್ಳು ಹೆಸರು ಕೊಟ್ಟಿದ್ದಳು. ಗೂಗಲ್ಲಿನಲ್ಲಿ ಸಿಕ್ಕ ಯಾವುದೇ ಅನಾಮಿಕ ಫೋಟೋವನ್ನು ಪ್ರೊಫೈಲಿಗೆ ಅಂಟಿಸಿದ್ದಳು. ಆರಂಭದಲ್ಲಿ ಹತ್ತೋ ಹನ್ನೆರಡೋ ಗೆಳೆತನದ ಮನವಿಗಳನ್ನು ಸ್ವೀಕರಿಸಿದ ನಂತರ ಅದೂ ಬೇಸರವಾಗಿ, ಸುಮ್ಮನಿದ್ದಳು. ಅವಳ ಅಕೌಂಟಿನಲ್ಲಿ ಗೆಳೆತನ ಕೋರಿ ಬಂದ ಆರುನೂರ ಹದಿನೆಂಟು ಮನವಿಗಳಿದ್ದವು. ಅವುಗಳತ್ತ ಕಣ್ಣೆತ್ತಿಯೂ ನೋಡಿರಲಿಲ್ಲ ಅವಳು.
ಈ ಮಧ್ಯೆ ಅವಳು ತನಗೆ ಅನ್ನಿಸಿದ್ದನ್ನೆಲ್ಲ ಮಾಲತಿಯ ಹೆಸರಲ್ಲಿ ಸ್ಟೇಟಸ್ ಸಂದೇಶವಾಗಿ ದಾಖಲಿಸಲು ಆರಂಭಿಸಿದಳು. ಅವಳ ಮೊದಲ ಸ್ಟೇಟಸ್ ಮೆಸೇಜು ಹೀಗಿತ್ತು:
ನಿಂಗೋಸ್ಕರ ಎಲ್ಲ ತ್ಯಾಗ ಮಾಡಿದೆ ಅನ್ನೋದು ಸುಳ್ಳು ಕಣೋ. ನಂಗೋಸ್ಕರ ಎಲ್ಲವನ್ನೂ ಮಾಡಿದೆ. ತಪ್ಪು ನಿಂದಲ್ಲ, ನಂದೂ ಅಲ್ಲ. ದಾಹದ್ದು, ವ್ಯಾಮೋಹದ್ದು. ಮತ್ತೆ ಅದೇ ಬೆಟ್ಟ ಏರಲಾರೆ. ಅದೇ ಕಣಿವೆಗೆ ಇಳಿಯಲಾರೆ. ಅದೇ ನೀರನ್ನು ಮುಟ್ಟಲಾರೆ.
ಅದು ಯಾರಿಗೆ ಯಾವ ಥರ ಅರ್ಥ ಆಯಿತೋ ಏನೋ. ಅದಕ್ಕೊಂದಷ್ಟು ಸಾಂತ್ವನಗಳು ಲೈಕುಗಳೂ ಬಂದಿದ್ದವು. ಕಾಲ ಎಲ್ಲವನ್ನೂ ಸರಿ ಮಾಡುತ್ತೆ ಅನ್ನುವುದರಿಂದ ಹಿಡಿದು ಪ್ರೀತಿಯೆಂಬ ದೋಣಿಗೆ ನಾವೇ ಅಂಬಿಗರು ಅನ್ನುವ ತಾತ್ವಿಕ ನಿಲುವುಗಳ ತನಕ ಕಾಮೆಂಟುಗಳು ರಾಶಿ ಬಿದ್ದವು.
ಸಂಜಯ ದೇಶಪಾಂಡೆ ಅನ್ನುವವನು ಮಾತ್ರ ಕಾಮೆಂಟು ಮಾಡಿರಲಿಲ್ಲ. ಅದರ ಬದಲು ಅವಳಿಗೊಂದು ಸಂದೇಶ ಕಳುಹಿಸಿದ್ದ. ಮಾಲತಿ, ನಿನ್ನ ಹೆಸರು ನನಗಿಷ್ಟ. ನಮ್ಮ ಹಳ್ಳಿಮನೆಯ ಅಂಗಳದಲ್ಲಿ ಮಾಲತಿ ಹೂವಿನ ಗಿಡವಿತ್ತು. ನಿನ್ನ ಹೆಸರು ಕೇಳಿದಾಗ ಆ ಹೂವಿನ ಪರಿಮಳ ನೆನಪಾಯಿತು.
ಮಾಲವಿಕಾ ಅದಕ್ಕೆ ಉತ್ತರಿಸಿರಲಿಲ್ಲ. ಅವಳಿಗೆ ಮಾಲತಿ ಅನ್ನುವುದು ಹೂವಿನ ಹೆಸರು ಅನ್ನುವುದೂ ಗೊತ್ತಿರಲಿಲ್ಲ. ಅಂಥ ಹೂವನ್ನು ಅವಳು ಯಾವತ್ತೂ ನೋಡಿರಲೂ ಇಲ್ಲ. ಆದರೂ ಸಂಜಯ ದೇಶಪಾಂಡೆಯ ಉತ್ತರ ಅವಳಿಗೇಕೋ ಇಷ್ಟವಾಗಿತ್ತು. ಅವಳು ಕ್ಯಾಪಿಟಲ್ ಅಕ್ಷರದಲ್ಲಿ ಅವನ ಸಂದೇಶಕ್ಕೆ THANX ಅಂತ ಉತ್ತರಿಸಿ ಸುಮ್ಮನಾಗಿದ್ದಳು.
ಅಲ್ಲಿಂದಾಚೆ ಮಾಲತಿ ತನ್ನ ಅನಿಸಿಕೆಗಳನ್ನು ಹೇಳಿಕೊಳ್ಳುವುದು, ಸಂಜಯ ಅದಕ್ಕೆ ಉತ್ತರಿಸುವುದು ನಡೆದೇ ಇತ್ತು. ಸಾಂತ್ವನ, ಸಮ್ಮೋಹ, ಯಾಚನೆ, ಪ್ರಾರ್ಥನೆ, ಆಲಾಪನೆ, ಅನ್ವೇಷಣೆ, ಧ್ಯಾನ, ಗಾಯನ, ಅರ್ಚನೆ ಹೀಗೆ ಎಲ್ಲವೂ ಸಂದೇಶಗಳಲ್ಲೇ ನಡೆಯತೊಡಗಿತು. ಅವಳಿಗೆ ಆತ ಯಾಕೋ ಇಷ್ಟವಾಗತೊಡಗಿದ. ಪ್ರತಿ ಸಂದೇಶದಲ್ಲೂ ಆತ ತನಗೆ ಮಾಲತಿ ಹೂವು ಇಷ್ಟ ಅಂತ ಬರೆಯುತ್ತಿದ್ದ. ಅವರ ಸುವಾಸನೆಯನ್ನು ಕೊಂಡಾಡುತ್ತಿದ್ದ. ಆಗೆಲ್ಲ ಮಾಲವಿಕಾಗೆ ಹೊಟ್ಟೆಕಿಚ್ಚಾಗುತ್ತಿತ್ತು.
ತನ್ನ ಒಂಟಿತನದ ಖಯಾಲಿಯನ್ನೂ ಅವಳು ಅವನಿಗೆ ಬರೆದು ತಿಳಿಸಿದ್ದಳು. ಅವನಿಂದ ಒಂದೆರಡು ಗಂಟೆ ಉತ್ತರ ಬರದೇ ಇದ್ದಾಗಾ ಕಂಗಾಲಾಗಿದ್ದಳು. ತಡವೇಕೆ ಅಂತ ಸಂಯಮದಿಂದಲೇ ಪ್ರಶ್ನಿಸಿದ್ದಳು. ಬರಬರುತ್ತಾ ಅವಳ ಸಂಯಮ ತುದಿಗಾಲಲ್ಲಿ ನಿಂತಿರುತ್ತಿತ್ತು. ಅವನು ಉತ್ತರಿಸುವುದು ಕೊಂಚ ತಡವಾದರೂ ಸಹನೆ ಮೀರುತ್ತಿತ್ತು. ಅದೇ ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ಮತ್ತೆ ಅವನೇ ಸಂತೈಸುತ್ತಿದ್ದ. ಒಮ್ಮೊಮ್ಮೆ ಅವಳು ಮುದ್ದು ಮಾಡುತ್ತಿದ್ದಳು. ಇನ್ನು ಮೇಲೆ ಅವನ ಜೊತೆ ಮಾತಾಡುವುದಿಲ್ಲ ಅಂತ ಕಂಪ್ಯೂಟರ್ ಆಫ್ ಮಾಡಿ ಕೂರುತ್ತಿದ್ದಳು. ಅರ್ಧ ಗಂಟೆಗೆಲ್ಲ ಮನಸ್ಸು ಚಡಪಡಿಸುತ್ತಿತ್ತು. ಈ ಅಕೌಂಟಿನ ಸಹವಾಸವೇ ಬೇಡ ಎಂದು ಒಮ್ಮೆ ತನ್ನ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಳು.
ಆವತ್ತು ಅವಳು ಅನುಭವಿಸಿದ ಯಾತನೆ ಅವಳಿಗಷ್ಟೇ ಗೊತ್ತು. ಬೆಳಗ್ಗೆ ಖಾತೆಯನ್ನು ನಿಷ್ಕ್ರಿಯಗೊಳಿಸಿದವಳಿಗೆ ಸಂಜೆಯ ಹೊತ್ತಿಗೆ ಅವನಿಗೇನೋ ಹೇಳಬೇಕು ಅನ್ನಿಸತೊಡಗಿತ್ತು. ಅವನೂ ಹೀಗೇನಾದರೂ ಮಾಡಿದರೆ ಅನ್ನಿಸಿತ್ತು. ಮತ್ತೆ ಖಾತೆಯನ್ನು ತೆರೆಯುವುದಕ್ಕೆ ಹೋದರೆ ಅದು ಇಪ್ಪತ್ತನಾಲ್ಕು ಗಂಟೆಗಳ ಅವಧಿ ಬೇಡಿತ್ತು.
ಇಪ್ಪತ್ತನಾಲ್ಕು ಗಂಟೆಗಳಿಗೋಸ್ಕರ ಅವಳು ನಿದ್ದೆ ಮಾಡದೇ ಕಾದಳು. ಮಾರನೇ ದಿನ ಬೆಳಗ್ಗೆ ಅವಳು ಅವನ ಖಾತೆ ತೆರೆದರೆ ಅವಳಿಗೊಂದು ಆಘಾತ ಕಾದಿತ್ತು. ಖಾತೆಯ ತುಂಬ ಯಾರು ಯಾರೋ RIP, ರೆಸ್ಟ್ ಇನ್ ಪೀಸ್, ಆತ್ಮಕ್ಕೆ ಶಾಂತಿ ಸಿಗಲಿ ಅಂತ ಬರೆದಿದ್ದರು. ಅವಳಿಗೆ ಸಂಜಯ ದೇಶಪಾಂಡೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನುವುದು ಗೊತ್ತಾಗಲು ಸ್ವಲ್ಪ ಹೊತ್ತೇ ಹಿಡಿಯಿತು.
ಮಾಲವಿಕಾ ಈಗಲೂ ಸಂಜಯನಿಗೆ ಎಲ್ಲ ಹೇಳಿಕೊಳ್ಳುತ್ತಾಳೆ. ಅವನ ಜೊತೆ ಮಾತಾಡುತ್ತಾಳೆ. ಅವನಿಗೆ ಸಂದೇಶ ಕಳುಹಿಸುತ್ತಾಳೆ. ಒಬ್ಬಂಟಿಯಾಗಿದ್ದಾಳೆ. ಏನು ಮಾಡಬೇಕು ಅನ್ನುವುದೇ ಗೊತ್ತಾಗುತ್ತಿಲ್ಲ. ಅಷ್ಟಕ್ಕೂ ಇದು ನಡೆದುಹೋದದ್ದು ಕೇವಲ ಒಂದೇ ವರ್ಷದ ಅವಧಿಯಲ್ಲಿ. ಅವಳನ್ನು ಅಲ್ಲಿಂದ ಹೊರಗೆ ತರುವುದು ಹೇಗೆ? ಅವನ ಖಾತೆಯನ್ನು ಮುಚ್ಚುವುದಕ್ಕೆ ಅವನು ಯಾರೆಂದು ಗೊತ್ತಿಲ್ಲ. ಅವನ ಪಾಸ್ವರ್ಡೂ ಗೊತ್ತಿಲ್ಲ. ಅವನ ಊರಿನ ಹೆಸರಿಲ್ಲ. ಅವನು ಕೆಲಸ ಮಾಡುವ ಸಂಸ್ಥೆಯ ಹೆಸರಿಲ್ಲ. ಅಷ್ಟಕ್ಕೂ ಅವನು ಅವನೇ ಅನ್ನುವುದೂ ಖಾತ್ರಿಯಿಲ್ಲ.
-2-
ಇಷ್ಟು ಹೇಳಿ ಆ ಹಿರಿಯರು ನಮ್ಮ ಮುಖ ನೋಡಿದರು. ಅವರಿಗೆ ಸುಮಾರು ಐವತ್ತೆರಡಿರಬಹುದು. ಸರ್ಕಾರಿ ಗುಮಾಸ್ತರು. ಲಂಚ ಪಡೆಯುವ ವಿಭಾಗದಲ್ಲಿ ಇಲ್ಲ. ಹೆಂಡತಿ ತೀರಿಕೊಂಡಿದ್ದಾಳೆ. ಇರುವ ಒಬ್ಬಳು ಮಗಳು ಹೀಗೆ ಕಂಪ್ಯೂಟರಿನಲ್ಲಿ ಕಳೆದು ಹೋಗಿದ್ದಾಳೆ. ನಾನೇನು ಮಾಡಬೇಕು ಹೇಳಿ ಅನ್ನುವ ಅವರ ಪ್ರಶ್ನೆಗೆ ನಮ್ಮ ಬಳಿಯೂ ಉತ್ತರ ಇರಲಿಲ್ಲ.
ನಿರಾಕಾರವಾದ ಒಂದು ಜೀವ ಮತ್ತೊಂದು ಜೀವವನ್ನು ಹೀಗೆ ಹಿಂಡಬಹುದೇ? ಅವನೂ ಅದನ್ನೇ ಮಾಡಿದ್ದಾನೆಂದು ನಂಬಲೇ? ಈಕೆ ಖಾತೆ ಮುಚ್ಚಿದ್ದಕ್ಕೋಸ್ಕರವೇ ಅವನು ಆತ್ಮಹತ್ಯೆ ಮಾಡಿಕೊಂಡಿರಬಹುದೇ? ಅವನು ನಿಜಕ್ಕೂ ಅಸ್ತಿತ್ವದಲ್ಲಿದ್ದ ವ್ಯಕ್ತಿಯಾ ಅಥವಾ ಇವೆಲ್ಲವನ್ನೂ ಅವನೇ ಮಾಡಿರಬಹುದಾ? ಪರಸ್ಪರ ಒಬ್ಬರನ್ನೊಬ್ಬರು ನೋಡದೇ, ದನಿ ಕೇಳದೇ, ಎಂದೂ ಸ್ಪರ್ಶಿಸದೇ ಅವನಿಗೆ ಸಾವು, ಇವಳಿಗೆ ವೈಧವ್ಯ ಪ್ರಾಪ್ತಿಯಾಗುವುದು ಕೂಡ ಈ ಕಾಲದ ವ್ಯಂಗ್ಯವಾ?
ತನ್ನ ಎದುರಿರುವ ಅಪ್ಪನ ಬಗ್ಗೆ ನಿಷ್ಕಾರುಣ್ಯ, ಅಲಕ್ಷ್ಯ. ಕಾಣಿಸದೇ ಇದ್ದ ಅವನ ಮೇಲೆ ಅಕ್ಕರೆ, ವ್ಯಾಮೋಹ ಮತ್ತು ಅಳಿಯದ ಪ್ರೀತಿ. ಈ ಗೊಂದಲವನ್ನು ಬಿಡಿಸುವುದು ಕಷ್ಟ. ಮನಸ್ಸು ಒಮ್ಮೊಮ್ಮೆ ಎಲ್ಲಿ ಹೋಗಿ ಸಿಲುಕಿಕೊಳ್ಳುತ್ತದೋ ಹೇಳುವುದು ಕಷ್ಟ. ನಾವು ಎಚ್ಚರಿಕೆಯಿಂದ ನಡೆದರೂ ರಸ್ತೆ ಜಾರಬಹುದು. ರಸ್ತೆ ಚೆನ್ನಾಗಿದ್ದರೂ ನಾವೇ ಎಡವಬಹುದು.
ಅವೆರಡರ ನಡುವೆ ಬೆಟ್ಟದಿಂದೊಂದು ಕಲ್ಲು ಉರುಳಿಕೊಂಡು ಬಂದು ತಲೆಯೊಡೆಯಬಹುದು.
ಯಾರಿಗೆ ಗೊತ್ತು? ಅಪ್ಪನ ಕಷ್ಟಗಳು ಒಂದೇ ಎರಡೇ? ಭಾವನೆಗಳು ಸತ್ತರೆ ಕೊರಡು, ಬದುಕಿದ್ದರೂ ಕೊರಡೇ.





ಪರಸ್ಪರ ಒಬ್ಬರನ್ನೊಬ್ಬರು ನೋಡದೇ, ದನಿ ಕೇಳದೇ, ಎಂದೂ ಸ್ಪರ್ಶಿಸದೇ ಅವನಿಗೆ ಸಾವು, ಇವಳಿಗೆ ವೈಧವ್ಯ ಪ್ರಾಪ್ತಿಯಾಗುವುದು ಕೂಡ ಈ ಕಾಲದ ವ್ಯಂಗ್ಯವಾ?
ಗೊತ್ತಿಲ್ಲ .. ಆದರೆ ಕಾಡುವ ಸಾಲುಗಳಿವು ..
ಚಾಟ್ ಗೆ , ನೆಟ್ ವರ್ಕ್ಗಳಿಗೆ ಅಟ್ಯಾಚ್ ಆಗಿ ಬದುಕು ದುರ್ಬರ ಗೊಲಿಸಿಕೊಳ್ಳುವುದು ವಿಪರ್ಯಾಸವೇನೋ ಎನಿಸುತ್ತದೆ…
There is a hospital in Hubli- Opposite to Vidyanagar police station called Manas. IF you come across any of such person please admit for a week. Everything will be fine.
Coming to article – as usual excellent writing by Jogi. Somehow I am feeling as continuation of manasajoshi article.
“ಪರಸ್ಪರ ಒಬ್ಬರನ್ನೊಬ್ಬರು ನೋಡದೇ, ದನಿ ಕೇಳದೇ, ಎಂದೂ ಸ್ಪರ್ಶಿಸದೇ ಅವನಿಗೆ ಸಾವು, ಇವಳಿಗೆ ವೈಧವ್ಯ ಪ್ರಾಪ್ತಿಯಾಗುವುದು ಕೂಡ ಈ ಕಾಲದ ವ್ಯಂಗ್ಯವಾ?”
ಈ ಸಾಲುಗಳು ತುಂಬಾ ಇಷ್ಟವಾದವು
ಬಹಳ ಚೆನ್ನಾಗಿದೆ… ಬರವಣಿಗೆಯ ಶೈಲಿ ತುಂಬಾ ಹಿಡಿಸಿತು..
ಹೀಗೂ ಆಗುತ್ತಾ, ನಿರೂಪಣೆ ಚೆನ್ನಾಗಿದೆ ಸರ್…
ರಸ್ತೆ ಚೆನ್ನಾಗಿದ್ದರೂ ನಾವೇ ಎಡವಬಹುದು…ಇದರ ಸಾಧ್ಯತೆ ಹೆಚ್ಚು.ಫೇಸ್ ಬುಕ್ ಆಗಿರಲಿ ಮತ್ತೊಂದಾಗಿರಲಿ, ಸ್ನೇಹವನ್ನು ಉಳಿಸಿಕೊಂಡು, ಬೆಳೆಸಿಕೊಳ್ಳುವ positive thinking ಇಲ್ಲಿ ಅಗತ್ಯವೇನೋ..
ಶಬ್ದಗಳಿಗೆ ನಿಲುಕದ ಯಾತನೆ,…
ಲೇಖನ ತುಂಬಾ ಚೆನ್ನಾಗಿದೆ ಸರ್, ಧನ್ಯವಾದಗಳು
ellaroo kelikollabekada prashnegalu. vikram hatwaara ondu kate nenapaayitu.
ಅವೆರಡರ ನಡುವೆ ಬೆಟ್ಟದಿಂದೊಂದು ಕಲ್ಲು ಉರುಳಿಕೊಂಡು ಬಂದು ತಲೆಯೊಡೆಯಬಹುದು.
ಯಾರಿಗೆ ಗೊತ್ತು? ಅಪ್ಪನ ಕಷ್ಟಗಳು ಒಂದೇ ಎರಡೇ? ಭಾವನೆಗಳು ಸತ್ತರೆ ಕೊರಡು, ಬದುಕಿದ್ದರೂ ಕೊರಡೇ.
.
ಮನಸ್ಸು ಒಮ್ಮೊಮ್ಮೆ ಎಲ್ಲಿ ಹೋಗಿ ಸಿಲುಕಿಕೊಳ್ಳುತ್ತದೋ ಹೇಳುವುದು ಕಷ್ಟ. ನಾವು ಎಚ್ಚರಿಕೆಯಿಂದ ನಡೆದರೂ ರಸ್ತೆ ಜಾರಬಹುದು. ರಸ್ತೆ ಚೆನ್ನಾಗಿದ್ದರೂ ನಾವೇ ಎಡವಬಹುದು
bahi aaptavaada baraha…..
hmm … inthavella aaguttave. baraha sooper jogi
ಸದ್ಯದ ಸೈಬರ್ ಜನರೇಷನ್ ವ್ಯಥೆಯ ಕಥೆಯಿದು. 🙁