ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜುಗಾರಿ ಕ್ರಾಸ್ : ಬರಹಗಾರರು ಯಾರ ಪರ?

‘ಅವಧಿ’ಯಲ್ಲಿ  ಪತ್ರಕರ್ತ ಜಿ ಪಿ ಬಸವರಾಜು ಅವರು ಚುನಾವಣೆಯನ್ನ್ನು ಹಿನ್ನೆಲೆಯಾಗಿಟ್ಟುಕೊಂಡು ‘ಬರಹಗಾರರ ಹೊಣೆಗಾರಿಕೆ’ ಎನ್ನುವ ಅಂಕಣವನ್ನು ಬರೆದಿದ್ದರು. ಆ ಲೇಖನ ಇಲ್ಲಿದೆ. ಇದಕ್ಕೆ ಹಿರಿಯರಾದ ಡಾ ವಿ ಎನ್ ಲಕ್ಷ್ಮಿನಾರಾಯಣ ಅವರು ಎತ್ತಿದ ತಕರಾರುಗಳು ಹಾಗೂ ಅದಕ್ಕೆ ಜಿ ಪಿ ಬಸವರಾಜು ನೀಡಿರುವ ಉತ್ತರವೂ ಇಲ್ಲಿದೆ.
ಪ್ರತಿಕ್ರಿಯೆಗಳಿಗೆ ಸ್ವಾಗತ

ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು

ಮಾನ್ಯರೆ,
ಜಿಪಿ ಬಸವರಾಜುರವರು ಕರ್ನಾಟಕದ ಎಲ್ಲ ಬರಹಗಾರರು ಮತ್ತು ಚಿಂತಕರ ಪ್ರತಿನಿಧಿಯೆಂಬಂತೆ ಕಾಂಗ್ರೆಸ್ ಪರವಾದ ವೋಟಿನ ರಾಜಕೀಯವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಅವರು ನನ್ನಂಥವರ ಪ್ರತಿನಿಧಿ ಅಲ್ಲ.ಅಥವಾ ನನ್ನಂಥವರು ಅವರು ಪ್ರತಿನಿಧಿಸುವಂಥ ಕರ್ನಾಟಕದ ಬರಹಗಾರರು-ಚಿಂತಕರು ಅಲ್ಲ.
ನಾನು ಈ ಕೆಳಗೆ ಲಗತ್ತಿಸಿರುವ ಕಾಗದವನ್ನು ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಿಗೂ ಕಳಿಸಿದ್ದೆ. ಮೈಸೂರಿನ ‘ಆಂದೋಲನ’ ಪತ್ರಿಕೆಯನ್ನುಳಿದು ಇನ್ನಾವ ಪತ್ರಿಕೆಯೂ ನನ್ನ ಈ ಪತ್ರವನ್ನು ಪ್ರಕಟಿಸಲಿಲ್ಲ. ಆದರೆ ‘ಕರ್ನಾಟಕದ ಬರಹಗಾರರು ಮತ್ತು ಚಿಂತಕರ’ ಕಾಂಗ್ರೆಸ್ ಸಮರ್ಥನೆಯನ್ನು ಸಾರುವ ತ್ರಿವರ್ಣ ಜಾಹಿರಾತು ಎಲ್ಲ ಪತ್ರಿಕೆಗಳಲ್ಲಿಯೂ ಪ್ರಕಟವಾಯಿತು.
ಇನ್ನು ಈ ಕಾಂಗ್ರೆಸ್ ಪರವಾದ ವೋಟಿನ ಕರೆಕೊಟ್ಟ ಬರಹಗಾರರು ಮತ್ತು ಚಿಂತಕರ ಪೈಕಿ ಯಾರ್ಯಾರಿಗೆ ಯಾವ ಯಾವ ಬಗೆಯ ವೈಯಕ್ತಿಕ ಗುಪ್ತ ಆಸೆಗಳಿದ್ದವು ಅಥವಾ ಇವೆ ಎಂಬುದು ಬಹಿರಂಗವಾಗಲು ಹೆಚ್ಚು ಕಾಲ ಕಾಯಬೇಕಾಗಿಲ್ಲ.
ಚುನಾವಣೆಗೆ ಮುಂಚೆ ನಾನು ಪತ್ರಿಕೆಗಳಿಗೆ ಕಳಿಸಿದ ಕಾಗದ ಹೀಗಿದೆ:
ಈ ಚುನಾವಣೆಯಲ್ಲಿ ನಿಜವಾದ ಆಯ್ಕೆ ಸಾಧ್ಯವೆ?
ಮೈಸೂರು-ಬೆಂಗಳೂರಿನಿಂದ ಕೆಲವು ಪ್ರಗತಿಪರ ಬುದ್ಧಿಜೀವಿಗಳು ‘ಭಾಜಪವನ್ನು ಅಧಿಕಾರದಿಂದ ಹೊರಗಿಡುವುದಕ್ಕಾಗಿ’ ಕಾಂಗ್ರೆಸ್ಸನ್ನು ಬೆಂಬಲಿಸಬೇಕೆಂದು ಕರೆಕೊಟ್ಟಿದ್ದಾರೆ.ಈಗಿರುವ ಚುನಾವಣಾ ಚೌಕಟ್ಟಿನಲ್ಲಿನ ಆಯ್ಕೆಯ ಸ್ವಾತಂತ್ರ್ಯದಲ್ಲಿ ಇದು ಅನಿವಾರ್ಯವೆಂಬಂತೆ ಕಾಣಿಸುತ್ತದೆ. ಇದೇ ಕಾರಣಕ್ಕಾಗಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಕಚ್ಚಿಕೊಂಡಿರಲು ಸಾಧ್ಯವಾಗಿದೆ. ಆದರೆ ಎರಡೂ ಪಕ್ಷಗಳ ಮಧ್ಯೆ ಇರುವ ವ್ಯತ್ಯಾಸಗಳೇನು? ಅವು ಸೈದ್ಧಾಂತಿಕವಾಗಿ ಹಾಗೂ ಆರ್ಥಿಕ-ರಾಜಕೀಯ ನೀತಿಗಳ ಅನುಷ್ಠಾನದಲ್ಲಿ ಭಿನ್ನವೇ ಎಂಬುದು ಪ್ರಶ್ನೆ.
ಭಾಜಪ ತೀವ್ರ ಕೋಮುವಾದಿ ಪಕ್ಷ . ಕಾಂಗ್ರೆಸ್ ಮೃದುಕೋಮುವಾದಿ. ಭ್ರಷ್ಟತೆಯಲ್ಲಿ ಎರಡೂ ಪಕ್ಷಗಳು ಪರಸ್ಪರ ಪೈಪೋಟಿಯಲ್ಲಿವೆ. ನೆಲ ಮಾಫಿಯಾ, ಜಲ ಮಾಫಿಯಾ, ಗಣಿ ಮಾಫಿಯಾ, ಶಿಕ್ಷಣ ಮಾಫಿಯಾ, ಮೀಡಿಯಾ ಮಾಫಿಯಾ ಮುಂತಾದ ಅಸಂವಿಧಾನಿಕ ಶಕ್ತಿಕೇಂದ್ರಗಳ ನಿಯಂತ್ರಕರು ಎರಡೂ ಪಕ್ಷಗಳ ನಿಯಂತ್ರಕರಾಗಿದ್ದಾರೆ. ಅಪರಾಧ ಹಿನ್ನೆಲೆಯ ಜನರು ಎರಡೂ ಪಕ್ಷಗಳ ಬೆನ್ನೆಲಬು.
ಕಾಂಗ್ರೆಸ್, ಜಾಗತೀಕರಣ, ಉದಾರೀಕರಣ, ಬಂಡವಾಳವಾದ ನಿಯಂತ್ರಿತ ಪ್ರಜಾತಂತ್ರವನ್ನು ಎತ್ತಿ ಹಿಡಿಯುವ, ಮೇಲುವರ್ಗದ ಹಿತಾಸಕ್ತಿಗಾಗಿ ಬಹುಜನರ ಹಿತಾಸಕ್ತಿಯನ್ನು ಬಲಿಕೊಡುವ ಆರ್ಥಿಕ ಮತ್ತು ರಾಜಕೀಯ ನೀತಿಯಲ್ಲಿ ನಂಬಿಕೆಯಿರಿಸಿರುವ ಪಕ್ಷ. ಭಾಜಪ ಕಾಂಗ್ರೆಸ್ ನ ನೀತಿಗಳನ್ನೇ ಹೊಂದಿರುವ, ಆದರೆ, ಸ್ವದೇಶೀ ಮುಸುಕನ್ನು ಹೊದ್ದ ಬಂಡವಾಳವಾದೀ ಫ್ಯಾಸಿಸ್ಟ್ ಪಕ್ಷ. ಗುಜರಾತ್ ಮಾದರಿಯ ಅಭಿವೃದ್ಧಿಯನ್ನು ಸಾಕಾರಗೊಳಿಸಲು ತುದಿಗಾಲಮೇಲೆ ನಿಂತ ಜಾಗತಿಕ ಉದ್ದಿಮೆದಾರರು ಮೋದಿಯನ್ನು ಓಲೈಸುತ್ತಿರುವ ಪರಿ ಮತ್ತು ಅದೇ ಭಾಜಪಕ್ಕೆ ಮಾದರಿಯಾಗಿರುವ ದೃಷ್ಟಾಂತ ನಮ್ಮ ಮುಂದಿದೆ.
ಭಾಜಪ ಹೇಗೇ, ಎಲ್ಲೇ ಅಧಿಕಾರಕ್ಕೆ ಬಂದರೂ ಯುಪಿಎ ಸರಕಾರ ಜಾಗತಿಕ ವ್ಯಾಪಾರಿ/ಉದ್ದಿಮೆದಾರ/ಸರಕಾರಗಳೊಂದಿಗೆ ಸಹಿ ಹಾಕಿರುವ ಒಡಂಬಡಿಕೆಗಳಲ್ಲಿ ಜಾಗತಿಕ ಸಾಲಾಧಾರಿತ ಗಣಿಗಾರಿಕೆ, ಕೈಗಾರಿಕೆ, ಅಣುವಿದ್ಯುತ್ ಯೋಜನೆ, ಮುಂತಾದ ಜಾಗತಿಕ ಕಾಮಗಾರಿಗಳಿಂದ ಹಿಡಿದು ಈಗಾಗಲೇ ಪ್ರಾರಂಭವಾಗಿರುವ ಮುಂಬೈ-ದೆಹಲಿ, ಮುಂಬೈ-ಬೆಂಗಳೂರು, ಚನ್ನೈ-ಬೆಂಗಳೂರು ಇಂಡಸ್ತ್ರಿಯಲ್ ಕಾರಿಡಾರ್ ಮಹಾ ಕಾಮಗಾರಿಗಳು ಅವುಗಳ ಹಿಂದಿರುವ ಇಂಗ್ಲೆಂಡ್, ಜಪಾನ್ ಮತ್ತು ಜರ್ಮನಿಗಳ ರಾಕ್ಷಸ ಉದ್ದಿಮೆದಾರರ ಲೂಟಿಯನ್ನು, ಅವರಿಂದಾಗುವ ಘಾತಕ ಪರಿಣಾಮಗಳನನ್ನು ಭಾಜಪ ತಡೆಯಲಾಗುವುದಿಲ್ಲ, ರದ್ದುಮಾಡುವುದಂತೂ ಕನಸಿನಲ್ಲೂ ಸಾಧ್ಯವಿಲ್ಲ. ಏನಿದ್ದರೂ ಈಗಾಗಲೇ ವರ್ತುಲ ರಸ್ತೆ, ಹೊರವರ್ತುಲ ರಸ್ತೆ, ಮಹಾನಗರ ವಿಸ್ತರಣೆ, ಚತುಷ್ಪಥ, ಷಟ್ಪಥ, ಅಷ್ಟಪಥ, ಉಪಗ್ರಹ ನಗರ, ಮೇಲ್ಸೇತುವೆ, ಮೆಟ್ರೊ ಮುಂತಾದ ನಗರ ಕೇಂದ್ರಿತ, ಬೃಹತ್ ಕಾಮಗಾರಿಗಳಲ್ಲಿ ತನಗೆ, ತನ್ನ ಗುತ್ತಿಗೆದಾರರಿಗೆ ಲಾಭಮಾಡಿಕೊಡುತ್ತಿರುವಂತೆ ಮುಂಬರುವ ಭಾರತದ ಗ್ರಾಮೀಣ ಜನರ ಮಹಾನಗರೀಕರಣ ಯೋಜನೆಗಳಲ್ಲೂ ಸಿಕ್ಕಷ್ಟು ಲೂಟಿಮಾಡುವ ಕೆಲಸವನ್ನು ಭಾಜಪ ರಾಜ್ಯದಲ್ಲಿರಲಿ, ಕೇಂದ್ರದಲ್ಲಿರಲಿ ಮಾಡುವುದು ಮಾತ್ರ ಸಾಧ್ಯ.
ಹಾಗೆ ನೋಡಿದರೆ ಕಾಂಗ್ರೆಸ್ಸಿನ ಎಲ್ಲಾ ಜನವಿರೋಧೀ ಯೋಜನೆಗಳ ಅತಿದೊಡ್ಡ ಫಲಾನುಭವಿ ಭಾಜಪವೇ ಆಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ಸೆನ್ನಿ, ಭಾಜಪವೆನ್ನಿ ಎರಡೂ ಒಂದೇ ಎನ್ನುವ ಸ್ಥಿತಿ ಇದೆ. ಇನ್ನು ಜಾತ್ಯತೀತ ಜನತಾ ದಳ, ಕರ್ನಾಟಕ ಜನತಾ ಪಕ್ಷ, ಮುಂತಾದ ಪುಡಿಪಕ್ಷಗಳ ಜೀವಸೆಲೆಗಳು, ಬೇರುಗಳು ಕಾಂಗ್ರೆಸ್ ಮತ್ತು ಭಾಜಪಗಳಲ್ಲೇ ಇರುವುದರಿಂದ ಇದಕ್ಕಿಂತ ಭಿನ್ನ ಸ್ಥಿತಿ ಏರ್ಪಡುವುದಿಲ್ಲ. ಪಕ್ಷೇತರರು ಗೆದ್ದೆತ್ತಿನ ಬಾಲಂಗೋಚಿಗಳು. ಆಯ್ಕೆ ನಿಜವಾಗಿಯೂ ಇಲ್ಲ. ಆದರೆ ತಮ್ಮ ಗುಪ್ತ ಕನಸು-ಹಿತಾಸಕ್ತಿಗಳನ್ನು ಹೊಟ್ಟೆಯಲ್ಲಿಟ್ಟುಕೊಂಡ ಬೆಂಗಳೂರು-ಮೈಸೂರು ಮೂಲದ, ಸಿದ್ಧರಾಮಯ್ಯಪರ ಪ್ರಗತಿಪರರಿಗೆ ಮಾತ್ರ ಕಾಂಗ್ರೆಸ್ ಅನಿವಾರ್ಯ ಆಯ್ಕೆಯಾಗಿದೆ. ಉಳಿದವರಿಗೆ ಇರುವ ದಾರಿ ಎಡಪಂಥೀಯ ಪರ್ಯಾಯದ ಪರ ಮತ ಚಲಾಯಿಸುವುದು ಅಥವಾ ತಮ್ಮ ಮತಕ್ಕೆ ಯೋಗ್ಯರಾದ ಪಕ್ಷಗಳಿಲ್ಲ ಎಂದು ತಿರಸ್ಕರಿಸುವ ದಾರಿಗಳನ್ನು ಹುಡುಕುವುದು.

ಜಿ.ಪಿ.ಬಸವರಾಜು

ರಾಜ್ಯದಲ್ಲಿ ಮೊನ್ನೆ ನಡೆದ ಚುನಾವಣೆ ಅತ್ಯಂತ ಸಂಕೀರ್ಣವಾದ ಮತ್ತು ಜಟಿಲವಾದ ಆಯ್ಕೆಯನ್ನು ಮತದಾರರ ಮುಂದಿಟ್ಟಿತ್ತು. ವಿ.ಎನ್‍.ಲಕ್ಷ್ಮೀನಾರಾಯಣ ಅವರು ತಳೆದ ನಿಲುವನ್ನೇ ನಮ್ಮ ಮತದಾರರು ತಳೆದಿದ್ದರೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಿತ್ತು; ಇಲ್ಲವೇ ಬಿಜೆಪಿಗೆ ಅಧಿಕಾರದಲ್ಲಿ ಪಾಲುದಾರಿಕೆಯನ್ನು ನೀಡುವ ಪಕ್ಷಗಳು ಅಧಿಕಾರದ ಅವಕಾಶವನ್ನು ಪಡೆದುಕೊಳ್ಳುತ್ತಿದ್ದವು. ಕರ್ನಾಟಕದ ಜನತೆ ಮತ್ತೊಮ್ಮೆ ‘ಆಪರೇಷನ್‍ ಕಮಲ’ದ ದುಷ್ಟ ರಾಜಕಾರಣವನ್ನು ನೋಡುತ್ತಿತ್ತು. ಅದನ್ನು ತಪ್ಪಿಸುವ ಉದ್ದೇಶದಿಂದಲೇ ಕಾಂಗ್ರೆಸ್ಸನ್ನು ಆಯ್ಕೆಮಾಡುವ ಅನಿವಾರ್ಯಸ್ಥಿತಿ ಕರ್ನಾಟಕ ಮತದಾರನ ಮುಂದಿತ್ತು. ಲಕ್ಷ್ಮೀನಾರಾಯಣ ಅವರು ತಮ್ಮ ಕಾಗದದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳೆಲ್ಲ ರಾಜಕೀಯ ವಿದ್ಯಮಾನಗಳನ್ನು ಬಲ್ಲವರು ತಿಳಿದೇ ಇದ್ದಾರೆ. ಎಡ ಪಕ್ಷಗಳನ್ನು ಬಿಟ್ಟರೆ, ಕಾಂಗ್ರೆಸ್‍ ಅಥವಾ ಬಿಜೆಪಿ ಅಥವಾ ದಳ ಅಥವಾ ಇನ್ನೊಂದು ಪಕ್ಷದ ಮಧ್ಯೆ ಅಂತರವೇ ಇಲ್ಲ, ಎಲ್ಲ ಪಕ್ಷಗಳಲ್ಲೂ ಭ್ರಷ್ಟರಿದ್ದಾರೆ, ಅಪರಾಧ ಹಿನ್ನೆಲೆಯವರಿದ್ದಾರೆ, ಕೋಮುವಾದಿಗಳಿದ್ದಾರೆ ಎಂಬುದು ಹೆಚ್ಚಿನ ವಿವಾದಕ್ಕೆ ಎಡೆ ಇಲ್ಲದಂತೆ ಒಪ್ಪಿಕೊಳ್ಳಬಹುದಾದ ಅಭಿಪ್ರಾಯವೇ. ಆದರೆ ಮೊನ್ನೆಯ ಚುನಾವಣೆಯಲ್ಲಿ ಇದ್ದ ಪ್ರಮುಖವಾದ ಪ್ರಶ್ನೆ ಒಂದೇ: ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯುವುದು. ಯಾಕೆ ಎನ್ನುವುದನ್ನು ಮತ್ತೆ ವಿವರಿಸಬೇಕಾಗಿಲ್ಲ. ಅದನ್ನು ನನ್ನ ಲೇಖನದಲ್ಲಿ ಹೇಳಿದ್ದೆ. ಬಿಜೆಪಿ ಮತ್ತು ಅದರ ಪರಿವಾರ ಕರ್ನಾಟಕದಲ್ಲಿ ಮಾಡಿದ ಕೃತ್ಯಗಳು ನಮಗೆಲ್ಲ ಮತ್ತೆ ಸರ್ವಾಧಿಕಾರ ಎಂದರೇನು, ಕೋಮುವಾದದ ಕೋರೆಹಲ್ಲುಗಳು ಎಷ್ಟು ಅಮಾನುಷವಾಗಿರುತ್ತವೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟವು.
ಕಾಂಗ್ರಸ್‍ ಪಕ್ಷಕ್ಕೆ ಮತನೀಡಿದವರೆಲ್ಲ ಆ ಪಕ್ಷದ ತತ್ವ ಸಿದ್ಧಾಂತ ಕಾರ್ಯವೈಖರಿಗಳನ್ನೆಲ್ಲ ಮೆಚ್ಚಿ ಮತನೀಡಿದ್ದಾರೆಂದಲ್ಲ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್‍ ನೇತೃತ್ವದ ಯುಪಿಎ ಸರ್ಕಾರ ಏನು ಮಾಡಿದೆ ಎನ್ನುವುದನ್ನೂ ಜನ ಬಲ್ಲರು.ಆದರೆ ಕರ್ನಾಟಕದ ಚುನಾವಣೆ ಇಂಥ ಎಲ್ಲ ಪ್ರಶ್ನೆಗಳನ್ನು ಪರಿಶೀಲಿಸುವ ಅವಕಾಶವನ್ನೇ ಮತದಾರರಿಗೆ ಕೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿಯೇ ಕೆಲವು ಬರಹಗಾರರು ಕಾಂಗ್ರೆಸ್ಸನ್ನು ಬೆಂಬಲಿಸುವ ನಿಲುವನ್ನು ತಳೆಯಬೇಕಾಯಿತು. ಈ ನಿಲುವನ್ನು ತಳೆಯುವ ಮುನ್ನ ಮೈಸೂರಿನಲ್ಲಿಯೂ ಒಂದು ಸಭೆ ನಡೆದಿತ್ತು. ಈ ಸಭೆಯಲ್ಲಿ ಲಕ್ಷ್ಮೀನಾರಾಯಣರು ಪ್ರಸ್ತಾಪಿಸಿರುವ ಸಂಗತಿಗಳೆಲ್ಲ ಚರ್ಚಿತವಾಗಿದ್ದವು.
ನಂತರವೇ ಬರಹಗಾರರು ಕಾಂಗ್ರೆಸ್ಸನ್ನು ಬೆಂಬಲಿಸುವಂತೆ ಮತದಾರರಿಗೆ ಮನವಿಮಾಡಿಕೊಳ್ಳುವ ನಿರ್ಣಯವನ್ನು ಅಂಗೀಕರಿಸಿದರು. ಈ ನಿರ್ಣಯಕ್ಕೆ ಸಹಿಹಾಕಿದವರಲ್ಲಿ ನಾನೂ ಒಬ್ಬ.
ಯಾರು ಯಾರನ್ನೂ ಸಮರ್ಥಿಸಬೇಕಾದ, ಪ್ರತಿನಿಧಿಸಬೇಕಾದ ಅಗತ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವುದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ಹೇಳುವ ಅವಕಾಶ ತೆರೆದೇ ಇರುತ್ತದೆ. ಚುನಾವಣೆಯ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ಪ್ರಕಟಿಸುವ, ಮತದಾರರಿಗೆ ಮನವಿ ಮಾಡಿಕೊಳ್ಳುವ ಅವಕಾಶ ಅಷ್ಟೇ ಮುಕ್ತವಾಗಿರುತ್ತದೆ.ಇಂಥ ಅವಕಾಶವನ್ನು ಬಳಸಿಕೊಂಡು ಕೆಲವು ಬರಹಗಾರರು ಮತದಾರರಿಗೆ ಮಾಡಿಕೊಂಡ ಮನವಿ ಲಕ್ಷ್ಮೀನಾರಾಯಣರಿಗೆ ‘ಓಟಿನ ರಾಜಕೀಯ’ವಾಗಿ ಕಂಡರೆ, ಅದು ಅಗತ್ಯವಾಗಿ ನಡೆಯಬೇಕಾದ ಕೆಲಸವೇ. ಲಕ್ಷ್ಮೀನಾರಾಯಣರ ಕಾಗದ ಕೂಡಾ ‘ಓಟಿನ ರಾಜಕೀಯ’ವೇ. ‘ಇನ್ನು ಈ ಕಾಂಗ್ರೆಸ್ ಪರವಾದ ವೋಟಿನ ಕರೆಕೊಟ್ಟ ಬರಹಗಾರರು ಮತ್ತು ಚಿಂತಕರ ಪೈಕಿ ಯಾರ್ಯಾರಿಗೆ ಯಾವ ಯಾವ ಬಗೆಯ ವೈಯಕ್ತಿಕ ಗುಪ್ತ ಆಸೆಗಳಿದ್ದವು ಅಥವಾ ಇವೆ ಎಂಬುದು ಬಹಿರಂಗವಾಗಲು ಹೆಚ್ಚು ಕಾಲ ಕಾಯಬೇಕಾಗಿಲ್ಲ’ ಎಂದು ಲಕ್ಷ್ಮೀನಾರಾಯಣ ಶಂಕಿಸಿದ್ದಾರೆ.ಅರ್ಹರಾದವರಿಗೆ ಅರ್ಹಸ್ಥಾನಗಳು ಸಹಜವಾಗಿಯೇ ಸಿಕ್ಕರೆ ನಾವೆಲ್ಲ ಸಂತೋಷ ಪಡಬೇಕು.ಅನರ್ಹರು ಅಂಥ ಸ್ಥಾನಗಳಿಗೆ ಬಂದರೆ ಸರ್ಕಾರದ ಕ್ರಮವನ್ನು ಟೀಕಿಸುವ, ಅದರ ವಿರುದ್ಧ ಹೋರಾಡುವ ಅವಕಾಶವಂತೂ ಇದ್ದೇ ಇರುತ್ತದೆ.’ಬರಹಗಾರನ ನೈತಿಕನಿಷ್ಠೆ’ಎನ್ನುವುದು ಕೂಡಾ ಪರೀಕ್ಷೆಗೆ ಒಳಗಾಗಬೇಕಾದದ್ದೇ.

‍ಲೇಖಕರು G

25 May, 2013

9 Comments

  1. Satyanarayana BR

    * ತಮ್ಮ ಗುಪ್ತ ಕನಸು-ಹಿತಾಸಕ್ತಿಗಳನ್ನು ಹೊಟ್ಟೆಯಲ್ಲಿಟ್ಟುಕೊಂಡ ಬೆಂಗಳೂರು-ಮೈಸೂರು ಮೂಲದ, ಸಿದ್ಧರಾಮಯ್ಯಪರ ಪ್ರಗತಿಪರರಿಗೆ ಮಾತ್ರ ಕಾಂಗ್ರೆಸ್ ಅನಿವಾರ್ಯ ಆಯ್ಕೆಯಾಗಿದೆ.
    * ಕಾಂಗ್ರೆಸ್ ಪರವಾದ ವೋಟಿನ ಕರೆಕೊಟ್ಟ ಬರಹಗಾರರು ಮತ್ತು ಚಿಂತಕರ ಪೈಕಿ ಯಾರ್ಯಾರಿಗೆ ಯಾವ ಯಾವ ಬಗೆಯ ವೈಯಕ್ತಿಕ ಗುಪ್ತ ಆಸೆಗಳಿದ್ದವು ಅಥವಾ ಇವೆ ಎಂಬುದು ಬಹಿರಂಗವಾಗಲು ಹೆಚ್ಚು ಕಾಲ ಕಾಯಬೇಕಾಗಿಲ್ಲ.
    ನಿಮ್ಮ ಈ ಅಭಿಪ್ರಾಯಗಳು ಸಕಾರಣವಾಗಿಯೇ ಇವೆ. ಎರಡನೆಯ ಅಭಿಪ್ರಾಯಕ್ಕೆ ಈಗಾಗಲೇ ಒಂದೊಂದಾಗಿ ಸಾಕ್ಷಿಗಳು ಸಿಗಲಾರಂಬಿಸಿವೆ. (ಮಗನ ಮೇಲೆ FIR ಹಾಕಿದರೆಂಬ ಕಾರಣಕ್ಕೆ ಒಬ್ಬ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿರುವ ಬಗ್ಗೆ ಇದುವರೆಗೆ ಯಾವೊಬ್ಬ ಸಾಹಿತಿ ಚಿಂತಕರೂ ಧ್ವನಿ ಎತ್ತಿಲ್ಲ. ತಪ್ಪು ಮಾಡಿದಾಗ ತಿದ್ದುವ ಜನರು ಸಿದ್ಧರಾಮಯ್ಯನವರ ಸುತ್ತ ಇಲ್ಲದಿದ್ದಲ್ಲಿ, ಇವರಿಗೂ ಯಡಿಯೂರಪ್ಪನವರಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಈ ಘಟನೆಯನ್ನು, ಮಾನ್ಯ ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರರು ಹಾಗೂ ಹೊಸ ಅಡ್ವಕೇಟ್ ಜನರಲ್ ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೊ ಗೊತ್ತಿಲ್ಲ)
    ಒಬ್ಬ ಬರಹಾಗರ ಪಕ್ಷಾತೀತವಾಗಿ, ಜಾತ್ಯತೀತವಾಗಿ ಇದ್ದರೆ ಸಾಹಿತ್ಯಕ ಲೋಕ ಆರೋಗ್ಯವಾಗಿರುತ್ತದೆ ಎಂದು ಭಾವಿಸಿರುವ ಓದುಗರಲ್ಲಿ ನಾನೂ ಒಬ್ಬ. ಆದರೆ ಕರ್ನಾಟಕದ ಪರಿಸ್ಥಿತಿಯಲ್ಲಿ ಬರಹಗಾರರಿಗೆ (ಎಲ್ಲರಿಗೂ ಅಲ್ಲ) ಕಾಂಗ್ರೆಸ್ ಅನಿವಾರ್ಯ ಅನ್ನಿಸಿರಬೇಕು. ಅದನ್ನು ವ್ಯಕ್ತಪಡಿಸಲು ಅವರು ಸ್ವತಂತ್ರರೂ ಕೂಡ. ಅದನ್ನು ಭಾಷಣದಲ್ಲೊ, ವಾಚಕರವಾಣಿಯಲ್ಲೊ ಪ್ರಸ್ತಾಪಿಸಿದ್ದರೆ ಸಾಕಿತ್ತು. ಆದರೆ, ದಿನಪತ್ರಿಕೆಗಳಲ್ಲಿ ಅಂತಹುದೊಂದು ತ್ರಿವರ್ಣದ ಜಾಹಿರಾತು ಕರ್ನಾಟಕದ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಜಾಹಿರಾತು ವೆಚ್ಚ ಲಕ್ಷಗಟ್ಟಲೆ ಇರುತ್ತದೆ. ಅಷ್ಟೊಂದು ಹಣವನ್ನು ಭರಿಸುವ ಶಕ್ತಿ ಕನ್ನಡ ಬರಹಗಾರರಿಗೆ ಮತ್ತು ಚಿಂತಕರಿಗೆ ಇದೆಯೆ? (ಇದೆ ಅನ್ನುವುದಾದರೆ ಸಂತೋಷ.) ಇಲ್ಲದಿದ್ದರೆ ಆ ಹಣವನ್ನು ಭರಿಸಿದವರು ಯಾರು? ಅದು ಕಪ್ಪೆ? ಬಿಳುಪೆ? ತಿಳಿದುಕೊಳ್ಳುವ ಹಕ್ಕು ಮತದಾರನಿಗೆ ಇದೆ ಅಲ್ಲವೆ?
    ಇನ್ನೂ ಒಂದು ಪ್ರಶ್ನೆ. ಆ ಜಾಹಿರಾತು ನೋಡಿ, ತಮ್ಮ ನಿರ್ಧಾರಗಳನ್ನು ಬದಲಾಯಿಸಿಕೊಂಡು ಎಷ್ಟು ಮಂದಿ ಕಾಂಗ್ರೆಸ್ಸಿಗೆ ಓಟು ಹಾಕಿದ್ದಾರೆ!? ನಿಜವಾಗಿಯೂ ಸಾಮಾನ್ಯ ಮತದಾರ, ಬರಹಗಾರರನ್ನು, ಚಿಂತಕರನ್ನು ಅಷ್ಟೊಂದು ಸೀರಿಯಸ್ಸಾಗಿ ತೆಗೆದುಕೊಂಡಿದ್ದಾನೆಯೆ? ಇದೊಂದು ಯಕ್ಷಪ್ರಶ್ನೆ! ಅದರ ಪರಿಣಾಮ ಮತದಾನದ ಮೇಲೆ ಏನೇ ಇರಲಿ. ಆದರೆ ಅಲ್ಪಸ್ವಲ್ಪ ಸಾಹಿತಿಗಳ ಬಗ್ಗೆ ತಿಳಿದುಕೊಂಡಿರುವ ನಗರದ ಸುಶಿಕ್ಷಿತ ಮತದಾರರ ಒಂದೆರಡು ಚರ್ಚೆಗಳನ್ನು ನಾನು ಸಂಜೆ ಪಾರ್ಕಿನಲ್ಲಿ ವಾಕಿಂಗ್ ಮಾಡುವಾಗ ಕೇಳಿಸಿಕೊಂಡಿದ್ದೇನೆ. (ಅದರ ಉಲ್ಲೇಖವಿರುವ ಲೇಖನವೇ ಬರುವುದರಿಂದ ಅದನ್ನು ಮತ್ತೊಮ್ಮೆ ಇಲ್ಲಿ ಪ್ರಸ್ತಾಪಿಸುವುದು ಬೇಡ).
    ಸಾಮಾನ್ಯ ಜನರು ಸಾಹಿತಿ ಚಿಂತಕರ ಇಂತಹ ನಿರ್ಧಾರಗಳ ಬಗ್ಗೆ ಏನೇನು ಅಭಿಪ್ರಾಯ ಪಡುತ್ತಾರೆ ಎಂಬುದನ್ನು ಸ್ವತಃ ಸಾಹಿತಿ ಚಿಂತಕರೂ ತಿಳಿದುಕೊಳ್ಳಬೇಕು. ಆದರೆ, ಅಂತಹ ಪೀಡ್ ಬ್ಯಾಕ್ ವ್ಯವಸ್ಥೆ ನಮ್ಮಲ್ಲಿ ಇಲ್ಲದಿರುವುದು ದುರಂತ.

  2. ನಾಗರಾಜ್ ಹೆತ್ತೂರ್

    ಯಾರ್ಯಾರು ಏನೇನು ಆಮಿಷಗಳನ್ನು ಇಟ್ಟುಕೊಂಡು ಸಾಹಿತಿಗಳು ಕಾಂಗ್ರೆಸ್ ಪರ ಪ್ರಚಾರ ಮಾಡಿದರೋ ಅದು ಸೆಕೆಂಡರಿ. ಆದರೆ ಪ್ರಜಾಪ್ರಭುತ್ವದ ಉಳಿವಿಗೆ ಸಾಹಿತಿಗಳು ಮುಂದಾಗಿ ಕನಿಷ್ಟ ದನಿ ಎತ್ತಿದ್ದಕ್ಕೆ ಹ್ಯಾಟ್ಸ್ ಎನ್ನಲೇಬೇಕು. ಆದರೆ ಅವರ ಕೆಲಸ ಮಾಡಬೇಕು. ಮತ್ತೊಬ್ಬರು ಸಿದ್ದಲಿಂಗಯ್ಯನವರಂತೆ ಆಗದಿದ್ದರೆ ಸಾಕು. ಯಡಿಯೂರಪ್ಪನನ್ನು ಬಸವಣ್ಣನಿಗೆ ಹೋಲಿಸಿದಂತೆ, ಸಿದ್ದರಾಮಯ್ಯನನ್ನು ಆಧುನಿಕ ಕನಕದಾಸ ಎಂಥಲೋ ದೇವರನ್ನಾಗಿ ಮಾಡಿದರೆ ಕಷ್ಟ. ರಾಜಕೀಯದ ಜಂಜಾಟದಲ್ಲಿ ಸಿದ್ದಲಿಂಗಯ್ಯನವರು ಬರವಣಿಗೆಯನ್ನೇ ಮರೆತುಬಿಟ್ಟಂತಿದೆ. ಏನು ಮಾಡುವುದು.. ಆದರೂ ನಮ್ಮ ಸಾಹಿತಿಗಳು ರಾಜ್ಯ ರಾಜಕಾರಣದ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಬಾಯಿ ಬಿಟ್ಟಿದ್ದಾರೆ. ಒಳ್ಳೆಯ ಬೆಳವಣಿಗೆ. ಸಂವಿಧಾನದ ವಿರುದ್ಧ ಕೆಲಸ ಮಾಡುವ ಮಾಡುವ ಹಿತಾಸಕ್ತಿಗಳ ವಿರುದ್ಧ ಇದೊಂದು ಬೆಳವಣಿಗೆ ಅಗತ್ಯವಿತ್ತು. ಸಾಹಿತಿಗಳು ಹೇಳುವ ಮಾತುಗಳನ್ನು ಕೇಳುವವರೂ ಇದ್ದಾರೆ. ಸಾಹಿತಿಗಳು ಕೇವಲ ಬರೆದುಕೊಂಡು ಕುಳಿತರೆ ಪ್ರಯೋಜನವಿಲ್ಲ. ಅಂತಹ ಸಂದರ್ಭದಲ್ಲಿ ಅವರ ಪಾತ್ರ ಮಹತ್ವದ್ದು. ಆದರೆ ಸಂಬಂಧವಿಲ್ಲದ ಅಧಿಕಾರದ ಬಗ್ಗೆ ಹಪಾಹಪಿ ಬೇಡ.ಸಾಹಿತಿಗಳು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲಿ….ಮತ್ತು ಬರೆವಣಿಗೆ ಮೂಲಕ ಎಚ್ಚರಿಸುತ್ತಲೇ ಇರಲಿ….

  3. ಓದುಗ, ಬೆಂಗಳೂರು

    ಸಾಹಿತಿಗಳು ರಾಜಕಾರಣ ಮಾಡಬಾರದು ಎನ್ನುವುದು ಸರಿಯಲ್ಲ, ಆದರೆ ಅವರು ಆ ರಾಜಕಾರಣಕ್ಕೆ ನ್ಯಾಯಮಾಡಬೇಕಾದುದು ಬಹಳ ಅನಿವಾರ್ಯ. ಕೇವಲ ಬೆಂಬಲಿಸಿ ಎಂದು ಜನತೆಗೆ ಕರೆಕೊಟ್ಟು, ಕಣ್ಣಮುಂದೆ ನಡೆಯುವ/ ನಡೆಯಬಹುದಾದ ಎಲ್ಲಾ ತರಹದ ರಾಜಕೀಯ ಕೆಡುಕುಗಳನ್ನು ಕಂಡು ಸುಮ್ಮನಿರುವುದು ಖಂಡಿತಾ ಸರಿಯಲ್ಲ; ಬದಲಾಗಿ ಉಗ್ರವಾಗಿ ಖಂಡಿಸಬೇಕಾದುದು “ಆ” ರಾಜಕಾರಣದ ಕರ್ತವ್ಯವಾಗಬೇಕು.
    ಅದೇ ರೀತಿ ಪೂರ್ವಸಿದ್ಧತೆಯೆಂಬಂತೆ, ಸಾಹಿತಿಗಳು ತಮ್ಮ ಸ್ವಲ್ಪ ಸಾಹಿತ್ಯ ಶ್ರಮ ಹಾಗೂ ಪಾಂಡಿತ್ಯಗಳನ್ನು ರಾಜಕೀಯದ ಬಂಡವಾಳವಾಗಿರುವ ಸಾಮಾಜಿಕ ಕೆಡುಕುಗಳನ್ನು ನಿರ್ಮೂಲನಮಾಡಲು ವಿನಿಯೋಗಿಸಿದರೆ, ರಾಜಕೀಯದ ಕೊಳಚೆಗಿಳಿಯದೆ ತಮ್ಮ ಮಾತನ್ನು ಜನರಿಗೆ ತಲುಪಿಸಬಹುದೆಂದನಿಸುತ್ತದೆ.

  4. ಎಂ.ಆರ್. ದತ್ತಾತ್ರಿ

    ಕಾಂಗ್ರೇಸೋ ಬಿಜೆಪಿಯೋ ಎನ್ನುವ ನಮ್ಮ ಯೋಚನೆಯಲ್ಲೇ ತೊಂದರೆಯಿದೆ. ಈ ವಿಚಾರವಾಗಿ ಒಬ್ಬ ಓದುಗರು ಪ್ರಜಾವಾಣಿಯ ವಾಚಕರವಾಣಿಗೆ ಒಂದು ಪತ್ರವನ್ನು ಬರೆದಿದ್ದರು (ಅವರ ಹೆಸರನ್ನು ಮರೆತೆ). ಪಕ್ಷವನ್ನು ನೋಡದೆ ಅಭ್ಯರ್ಥಿಯ ಗುಣಗಳನ್ನು ಅವಲೋಕಿಸಿ ಮತ ಹಾಕಿ ಎನ್ನುವುದು ಅವರ ಪತ್ರದ ಸಾರಾಂಶ. ಅದನ್ನು ನಾನು ಒಪ್ಪುತ್ತೇನೆ, ಕಾಂಗ್ರೆಸೋ ಬಿಜೆಪಿಯೋ ಎನ್ನುವ ವಾದವನ್ನಲ್ಲ.ಈ ರೀತಿಯ ಪಕ್ಷಪರವಾದವೇ, ಅಭ್ಯರ್ಥಿಯನ್ನು ಬಿಟ್ಟು ಪಕ್ಷವನ್ನು ಗೆಲ್ಲಿಸುವ ವಾದವೇ, ಶಿವರಾಮ ಕಾರಂತರನ್ನು ಸೋಲಿಸಿದ್ದು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಅಭ್ಯರ್ಥಿಗಳಿಗೆ ಮತವನ್ನು ನೀಡಿ ಆರಿಸುತ್ತೇವೆಯೇ ಹೊರತು ಪಕ್ಷವನ್ನಲ್ಲ. ಎರಡೂ ಪಕ್ಷಗಳು ಕ್ರಿಮಿನಲ್ ಹಿನ್ನೆಲೆಯುಳ್ಳ ಅನೇಕರನ್ನು ಚುನಾವಣೆಗೆ ನಿಲ್ಲಿಸಿದ್ದರಿಂದ ಪಕ್ಷ ಬೆಂಬಲಿಸಿದಲ್ಲಿ ಪರೋಕ್ಷವಾಗಿ ಒಂದು ಗುಂಪಿನ ಕ್ರಿಮಿನಲ್‍ಗಳನ್ನೂ ಬೆಂಬಲಿಸಿದಂತಾಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.
    ದತ್ತಾತ್ರಿ

  5. ಉದಯಕುಮಾರ್ ಹಬ್ಬು

    ಜನರಿಗೆ ಕುದುರೆ ಜೂಜಿನ ರಾಜಕಾರಣ ಹೇಸಿಗೆಯನ್ನುಂಟುಮಾದಿತ್ತು. ಸ್ಥಿರ ಸರಕಾರ ಬೇಕೆಂಬ ಮನಸ್ಸಿನಿಂದ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದಿದ್ದರೆ. ಭ್ರಷ್ಟಾಚಾರ. ಅಪರಾಧೀಕರಣ ಎಲ್ಲ ಪಕ್ಷದಲ್ಲಿಯೂ ಇವೆ. ಜನರು ಬುದ್ಧಿವಂತರು. ತಮಗೆ ಬೇಕಾದ ಸರಕಾರವನ್ನು ಆಯ್ಕೆ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕೋಮುವಾದಿರಾಜಕೀಯವನ್ನು ಜನರು ಸಹಿಸಲಿಲ್ಲ. ಲೇಖಕರಿಗೆ ರಾಜಕೀಯದಲ್ಲಿ ಸಕ್ರಿಯ ಪಾಲುಗೊಳ್ಳುವ ಎಲ್ಲ ಅಧಿಕಾರವಿದೆ. ಕೋಮು ಗಲಭೆಯೆಂಬ ವಿಷಸರ್ಪವನ್ನು ನಿರ್ನಾಮ ಮಾಡುವುದೇ ಕೋಮು ಸೌಹಾರ್ದವನ್ನು ಜಾರಿಗೆ ತರಬೇಕೆಂಬುದೇ ಸಾಹಿತಿಗಳ ಉದ್ದೇಶವಾಗಿತ್ತು. ಹಾಗಾಗಿ ಜಂರ ಮನಸ್ಸು ಸಾಹಿತಿಗಳ ಮನಸ್ಸು ಒಂದಾದರೆ ಅದಕ್ಕೆ ನಾವು ಸಾಹಿತಿಗಳನ್ನು ಅಭಿನಂದಿಸಬೇಕಿದೆ. ಯಾರಿಗೆ ಯಾವ ಲಾಭ ಎನ್ನುವುದನ್ನು ಕಾಲನೆ ನಿರ್ಧರಿಸಲಿದ್ದಾನೆ.ಎಡಪಂಥೀಯ ಪಕ್ಷವು ಜನಮಾನಸರಲ್ಲಿ ಇನ್ನೂ ಜಾಗವನ್ನು ಪಡೆಯಬೇಕಿದೆ. ಜನರು ಆ ಪಕ್ಷವನ್ನು ಇಷ್ಟಪಡುವಂತೆ ಎಡಪಂಥೀಯ ಪಕ್ಷವು ಪ್ರಯತ್ನಿಸಲಿ . ಲೇಖಕರ ಮೇಲೆ ಗೂಬೆ ಕೂಡಿಸುವದನ್ನು ಇನ್ನಾದರೂ ನಿಲ್ಲಿಸಿ. ಉದಯಕುಮಾರ ಹಬ್ಬು, ಕಿನ್ನಿಗೋಳಿ

  6. ದಿವಾಕರ ನಾ

    ಈ ವಿಷಯ ಕುರಿತು ಅವಧಿಯಲ್ಲಿ ನನ್ನ ಲೇಖನ ಪರ್ಯಾಯ ರಾಜಕಾರಣದ ಘಟಶ್ರಾದ್ಧ ಓದಿ.
    ನಾ ದಿವಾಕರ

  7. vasanth

    Our literary people have done right thing in supporting Congress. There was no alternative in Karnataka. Only option to ousted communal forces was to extend support to Congress. They did that. People in academia and literary world should speak up at the time of crisis. Karnataka was facing major political crisis, there was no accountability or responsibility from the ruling party at that time. They had taken people for a ride. They misused all the machinery to make money and favour their kith and kin including religious heads. It was major responsibility for the people of Karnataka to speak up and throw them out of the power. Our writers have done that. They should speak up when congress government do misdeeds. It is moral right of the writers. Otherwise people will forget them and move on. Writers should have a political perceptions of their own. Lankesh all along in his career did this. Pragathiranga was a example for that.

  8. ಪಂಡಿತಾರಾಧ್ಯ

    ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತಹಾಕುವಂತೆ ಮನವಿ ಮಾಡಿದ ಚಿಂತಕರ ಲೇಖಕರಲ್ಲಿ ನಾನೂ ಒಬ್ಬ. ಇದರ ಉದ್ದೇಶ ಗುಪ್ತವಾಗಿಲ್ಲ,ಇದ್ದುದು ಅತಂತ್ರ ವಿಧಾನಸಭೆಯ ಅಸಹಾಯಕತೆಯಿಂದ ಬಿಡುಗಡೆ ಪಡೆಯುವ ಸಾಧ್ಯತೆಗಳಲ್ಲಿ ಸಂಭಾವ್ಯ ಮಾರ್ಗದ ಆಯ್ಕೆ.ಇದನ್ನು ಅರ್ಥಮಾಡಿಕೊಳ್ಳದೆ ವರ್ತಿಸಿದರೆ ಈಗ ಗೆದ್ದವರ ವಿರುದ್ಧವೂ ಇದೇ ಅಸ್ತ್ರ ಪ್ರಯೋಗಿಸುವುದು ಅನಿವಾರ್ಯ. ಪುಡಿ ಪಕ್ಷಗಳನ್ನು ಅರಿಸಿ ಅವರನ್ನು ಸಹಿಸಿಕೊಳ್ಳುವ ದುಃಸ್ಥಿತಿಯಿಂದ ಮುಕ್ತರಾಗಲು ಮತದಾರರು ಎರಡು ಪಕ್ಷಗಳ ವ್ಯವಸ್ಥೆಯ ದಿಕ್ಕಿನಲ್ಲಿ ಸಾಗುವ ಸೂಚನೆ.ಕರ್ನಾಟಕದ ಮತದಾರರು ಮತದಾನದ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ದೊಡ್ಡಸಾಧನೆ ಮಾಡಿಲ್ಲದಿರಬಹುದು. ಆದರೆ ಯಶಸ್ವಿಯಾಗಿ ಉತ್ತೀರ್ಣರಾಗಿರುವುದಕ್ಕೆ ಅವರನ್ನು ಅಭಿನಂದಿಸಲೇ ಬೇಕು. ರಾಜಧರ್ಮ ಪಾಲನೆ, ರಾಜ ನಿರ್ಮಾಪಕ, ನಾಯಕ, ಮುಂದಾಳು, ಮುಖಂಡ ಇತ್ಯಾದಿ ರಾಜಶಾಹಿ ಪರಿಭಾಷೆಯೂ ಇಲ್ಲವಾಗಿ ಜನಪ್ರತಿನಿಧಿ ಎಂಬ ಪ್ರಜ್ಞಾಪೂರ್ವಕ ಅರಿವು ಪ್ರಜೆ ಮತ್ತು ಪ್ರತಿನಿಧಿ ಇಬ್ಬರಲ್ಲಿಯೂ ಆಳಕ್ಕೆ ಇಳಿಯಬೇಕು. ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಫಿ ಗೌರವಿಸುವ ಎಡ ಮತ್ತು ಬಲಪಂಥೀಯರಿಗೂ ಅವಕಾಶ ನೀಡಿದ್ದಾರೆ. ವಿವೇಚನೆಯಿಂದ ಮತ ಚಲಾಯಿಸುವಂತೆ ಮತದಾರರಿಗೆ ಮಾಡಿದ ಮನವಿಯ ಹಿಂದೆ ಗುಪ್ತ ಅಸೆಗಳಿವೆ ಎನ್ನುವುದು ಮನವಿಮಾಡಿದವರಿಗೆ ಮಾತ್ರವಲ್ಲ ಪ್ರಜ್ಞಾವಂತ ಮತದಾರರಿಗೂ ಮಾಡಿದ ಅಪಮಾನ.

  9. Vijendra

    Right action by the right people at the right time when the options r very much limited.much can b discussed but…….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading