-ಆದಿತ್ಯ ಭಾರದ್ವಾಜ್
ಆದಿ ಲೋಕ
ಅವಧಿಯಲ್ಲಿ ಜುಗಾರಿ ಕ್ರಾಸ್ ಎಂಬ ಹೊಸ ಅಂಕಣ ಪ್ರಾರಂಭ ಮಾಡಿದ್ದೀರಿ. ಒಳ್ಳೆಯ ಪ್ರಯತ್ನಕ್ಕೆ ಅಭಿನಂದನೆಗಳು ಮೇಲಾಗಿ ಕೃತಜ್ಞತೆಗಳು. ಮೊದಲಿಗೆ ಗೋ ಹತ್ಯಾ ನಿಷೇಧದ ಬಗ್ಗೆ ಚಚೆ ಕೈಗೆತ್ತಿಕೊಂಡಿದ್ದೀರಿ.
ಬಿ.ಆರ್. ಸತ್ಯನಾರಾಯಣರ ಲೇಖನ ಓದಿದೆ. ಚೆನ್ನಾಗಿದೆ.
—
ಹಿಡನ್ ಅಜೆಂಡಾ – ಖುಲ್ಲಂಖುಲ್ಲಾ!
ಬಿಜೆಪಿಯದು ಹಿಡನ್ ಅಜೆಂಡಾ ಹಿಡನ್ ಅಜೆಂಡಾ ಅಂತ ಬಾಯಿ ಬಡಕೊಂಡಿದ್ದೇ ಬಂತು, ಬಿಜೆಪಿ ಯಾವುದನ್ನೂ ಹಿಡನ್ ಆಗಿರಸದೇ ಎಲ್ಲವನ್ನೂ ಖುಲ್ಲಂಖುಲ್ಲಾ ಆಗಿ ಮಾಡಿ ಮುಗಿಸಿದೆ. ಮೊನ್ನೆ ಶುಕ್ರವಾರ ಒಂದೇ ದಿನ ತೀವ್ರ ವಿರೋಧದ ನಡುವೆಯೂ ಅತ್ಯಂತ ವಿವಾದಾತ್ಮಕವಾದ ಗೋ ಹತ್ಯಾ ನಿಷೇಧ ಕಾನೂನನ್ನೂ ಮತ್ತು ಸಂಸ್ಕೃತ ವಿವಿ ಬಿಲ್ಲನ್ನೂ ಅಂಜದೆ ವಿಧಾನಸಭೆಯಲ್ಲಿ ಪಾಸು ಮಾಡಿಬಿಟ್ಟಿದೆ.
ಗೋ ಹತ್ಯೆ ಅನ್ನುವಂತಹುದ್ದು ನಮ್ಮ ದೇಶದಲ್ಲಿ ಬಾಬರ್, ಅಕ್ಬರ್, ಔರಂಗಜೇಬ್ ಕಾಲದಿಂದಲೂ ಮೊದಲಾಗಿ ಇವತ್ತಿನವರೆಗೂ ಪ್ರಚಲಿತದಲ್ಲಿರುವ ಅತ್ಯಂತ ಸೂಕ್ಷ್ಮ ವಿವಾದಾತ್ಮಕ ವಿಷಯ. ಗೋ ಹತ್ಯೆ ಅಂದ ಕೂಡಲೇ ಹಿಂದೂ ಮುಸ್ಲಿಮರ ಬಣಗಳು ಕಣ್ಣ ಮುಂದೆ ಸುಳಿದಾಡುತ್ತವೆ. ಗೋವನ್ನು ಹಿಂದೂಗಳು ದೈವವೆಂದು ಪೂಜಿಸುತ್ತಾರೆ. ಮುಸ್ಲಿಮರು ಅದರ ಭಕ್ಷಕರು. ಬಿಜೆಪಿಗೆ ಇದಕ್ಕಿಂತಲೂ ಸುವರ್ಣಾವಕಾಶ ಇನ್ನೊಂದುಂಟೆ? ಆರ್ಎಸ್ಎಸ್ ಮೊದಲಿನಿಂದಲೂ ಸಂಪೂರ್ಣ ಗೋ ಹತ್ಯಾ ನಿಷೇಧಕ್ಕೆ ಆಗ್ರಹಿಸುತ್ತಲೇ ಇದೆ. ಹಿಂದೂ ಸಮಾಜದ ಅನೇಕ ಸ್ವಾಮಿಗಳು ಕೂಡ ಧ್ವನಿಗೂಡಿಸುತ್ತಲೇ ಬಂದಿದ್ದಾರೆ. ಬಿಜೆಪಿ ದೇಶದ ಹಿಂದೂ ಜನಮಾನಸಕ್ಕೆ ಇದೊಂದು ಎಮೋಟಿವ್ ಇಶ್ಯೂ ಆಗುವಂತೆ ಇದನ್ನು ಸದಾ ಜೀವಂತವಾಗಿಟ್ಟಿದೆ. ಸದ್ಯ ಕರ್ನಾಟಕ ಸರ್ಕಾರ ಗೋ ಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತಂದಿದೆ. ಇದರ ಪ್ರಕಾರ, `ಗೋವನ್ನು’ ಕೊಲ್ಲುವುದು, ಆ ಉದ್ದೇಶದಿಂದ ಸಾಗಿಸುವುದು, ಗೋ ಮಾಂಸವನ್ನು ಇಟ್ಟುಕೊಳ್ಳುವುದು, ಇದರಲ್ಲಿ ಯಾವುದೇ ಅಪರಾಧಕ್ಕೆ(?) 7 ವರ್ಷಗಳ ತನಕ ಶಿಕ್ಷೆಯಾಗಬಹುದು!
ಇದರಲ್ಲಿ ಹಲವಾರು ಅಪಾಯಗಳಿವೆ. ಮೊದಲನೆಯದು ಗೋ ಹತ್ಯಾ ನಿಷೇಧದಿಂದ ತೊಂದರೆಗೀಡಾಗುವವರು ಬರಿಯ ಮುಸ್ಲಿಮರಲ್ಲ! ಅದು ಶುದ್ಧಾನುಶುದ್ಧ ತಪ್ಪು ಕಲ್ಪನೆ. ಈ ಕಾನೂನು ಗುರಿಯಾಗಿಸಿಕೊಳ್ಳುವುದು ದಲಿತರನ್ನ ಕೂಡ! ನಮ್ಮ ಹಿಂದೂಗಳಲ್ಲೇ ಅನೇಕ ಜಾತಿಗಳವರು ದನ, ಎಮ್ಮೆ, ಮಾಂಸವನ್ನು ತಿನ್ನುವುದುಂಟು. ಗೋ ಹತ್ಯಾ ನಿಷೇಧ ಅವರನ್ನು ಟಾರ್ಗೆಟ್ ಮಾಡುತ್ತದೆ. ಇದರ ಬಗ್ಗೆ ಸ್ವಲ್ಪ ರಿಸರ್ಚ್ ಮಾಡಿದಾಗ ನನಗೆ ತಿಳಿದ ವಿಷಯವೆಂದರೆ ಕೋಳಿ, ಮೇಕೆ, ಕುರಿ ಮತ್ತಿತರ ಮಾಂಸಗಳು ಅತ್ಯಂತ ದುಬಾರಿಯಾಗಿದ್ದು, ದನದ ಮಾಂಸ ಅಗ್ಗ! ನಮ್ಮ ಬಡವರ ಕೈಗೆಟುಕುವುದು ಅದೇ! ಈ ಕಾನೂನಿನಲ್ಲಿ ಮತ್ತೊಂದು ಆಘಾತಕಾರಿಯಾದ ಕ್ಲಾಸ್ ಇದೆ. ಇದು ನಮ್ಮ ಕರಾವಳಿಯನ್ನು ಹೊತ್ತಿ ಉರಿಸುವುದರಲ್ಲಿ ಅನುಮಾನವಿಲ್ಲ. ಹೀಗೆ ಈ ಕಾನೂನನ್ನು ಉಲ್ಲಂಘಿಸಿದವರನ್ನು ಪೋಲೀಸರೇ ಬಂದು ಹಿಡಿಯಬೇಕೆಂದೇನೂ ಇಲ್ಲ! ಯಾವುದೇ ಸ್ವಯಂ ಸೇವಾ ಸಂಘ ಸಂಸ್ಥೆಗಳು ಇದನ್ನು ಕೈಗೆತ್ತಿಕೊಳ್ಳಬಹುದು! ಇನ್ನು ಭಜರಂಗ ದಳ, ಶ್ರೀ ರಾಮ ಶೇನೆಗೆಲ್ಲಾ ಲೈಸೆನ್ಸ್ ಸಿಕ್ಕ ಹಾಗೇ. ಕರಾವಳಿಯ ಪರಿಸ್ಥಿತಿಯನ್ನು ನೆನೆಸಿಕೊಂಡರೆ ದಿಗಿಲಾಗುತ್ತದೆ.
ಈ ಕಾನೂನು impractical ಕೂಡ. ಹರಿ ಹರಿ ಗೋವು ನಾನು, ಕಾಮಧೇನು…ನೀನಾರಿಗಾದೆಯೋ ಎಲೆ ಮಾನವ? ಅನ್ನುವ ಗೋವನ್ನು ಕೊಲ್ಲುವುದೇ? ಶಾಂತಂ ಪಾಪಂ ಎನ್ನುವ ಸರ್ಕಾರ ಪ್ರಾಕ್ಟಿಕಲ್ ಆಗಿ ಕೂಡ ಯೋಚಿಸಬೇಕು. ರೈತ ಆಗಲೇ ಬಸವಳಿದಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಮುದಿ ಗೊಡ್ಡು ದನಗಳು ಮತ್ತು ಗಂಡು ಕರುಗಳನ್ನು ಸಾಕುವ ಸ್ಥೈರ್ಯ ಆತನಿಗಿದಿಯೇ? ನಾವು ಆತನಿಂದ ಅದನ್ನು ನಿರೀಕ್ಷಿಸುವುದು ಸಹ ತಪ್ಪಲ್ಲವೇ? ಅದಕ್ಕೆ ಸರ್ಕಾರ ಪರಿಹಾರ ಸೂಚಿಸಿದೆ, ಗೋಶಾಲೆಗೆ ತಂದು ಬಿಟ್ಟರೆ ಸರ್ಕಾರವೇ ಅವುಗಳನ್ನು ನೋಡಿಕೊಳ್ಳುತ್ತದಂತೆ. ಹಾಗಾದರೆ ಇನ್ನೇನು ಸಮಸ್ಯೆಯಿಲ್ಲ ಅಂತೀರಾ? ಒಂದೇ ಸಮಸ್ಯೆ – ಅದರ ಆಲನೆ-ಪಾಲನೆಗೆ ರೈತ ಸರ್ಕಾರಕ್ಕೆ ದುಡ್ಡು ಕಟ್ಟಬೇಕಂತೆ! ಇದು ನಮ್ಮ ಸರ್ಕಾರದ ಪರಿಹಾರ ಸೂತ್ರ. ಇನ್ನು ಭಾರತದಲ್ಲಿ ಗೋ ಹತ್ಯೆಯೇ ನಡೆದಿಲ್ಲವೇನೋ ಎಂದು ಅನೇಕರು ಸೋಗು ಹಾಕುತ್ತಿದ್ದಾರೆ. ಆದರೆ ಅವರಿಗೆ ತಿಳಿದಿರಲಿ, ಆರ್ಯರು ಗೋ ಭಕ್ಷಕರಾಗಿದ್ದರು, ಈಗಲೂ ಕೆಲವು ಯಜ್ಞ ಯಾಗಾದಿಗಳಲ್ಲಿ ಗೋ ಪ್ರಸಾದವುಂಟು ಅದೂ ಬ್ರಾಹ್ಮಣರಲ್ಲಿ! ಮತ್ತೊಂದು ಮಾತು ಭಾರತ ಇಡಿಯ ವಿಶ್ವಕ್ಕೇ ಎರಡನೇ ಅತಿ ದೊಡ್ಡ ಬೀಫ್ ಪ್ರಡ್ಯೂಸರ್! ಅದೊಂದು ದೊಡ್ಡ ಇಂಡಸ್ಟ್ರಿ.
ಮೊನ್ನೆ ಲಂಕೇಶ್ 75′ ಕಾರ್ಯಕ್ರಮದಲ್ಲಿ ದೇವನೂರು ಮಹಾದೇವ ಮಾತನಾಡುತ್ತಿದ್ದರು. ಒಬ್ಬ ದಲಿತ ತಾನು ಬ್ರಾಹ್ಮಣನಾಗಬೇಕೆಂದು ಸರ್ಕಾರಕ್ಕೆ ಅರ್ಜಿ ಹಾಕಿಕೊಂಡರೆ, ಅದು ಏನೆಂದು ಉತ್ತರಿಸುತ್ತದೆ ಅಂತ ಒಂದು ಪ್ರಶ್ನೆ ಎಸೆದರು. ಇದ್ದವರೆಲ್ಲಾ ತಲೆ ಕೆರೆದುಕೊಳ್ಳುವಷ್ಟರಲ್ಲಿ ಅವರೇ ಉತ್ತರ ಕೂಡ ಕೊಟ್ಟರು. ಇದು ತನ್ನ ವ್ಯಾಪ್ತಿಗೆ ಬರದ ವಿಷಯ ಅಂತ ಸರ್ಕಾರ ಜಾರಿಕೊಳ್ಳುತ್ತದೆ. ಹಾಗಾದರೆ ದೇವನೂರರದು ಮತ್ತೊಂದು ಪ್ರಶ್ನೆ – ತನ್ನ ವ್ಯಾಪ್ತಿಗೆ ಬರದ ಇಂತಹ ವಿಷಯಗಳ ಕುರಿತು ಸರ್ಕಾರಗಳು ಯಾಕೆ ಕಾನೂನುಗಳನ್ನು ಮಾಡುತ್ತವೆ? ಜಾತಿಯಾಯಿತು ಈಗ ಊಟದ ತಟ್ಟೆಗೂ ಕೈ ಹಾಕಿ ಕೂತಿದೆ ಸರ್ಕಾರ! ಬಹುಶಃ ಗೋ ಹತ್ಯಾ ನಿಷೇಧಕ್ಕೆ ಇದು ತಕ್ಕ ಉತ್ತರವಾದೀತು. the best government is that which governs the least. ಯಡಿಯೂರಪ್ಪನವರೂ ಸೇರಿದಂತೆ ನಮ್ಮ ದೇಶವನ್ನಾಳುತ್ತಿರುವವರು ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು
ಜುಗಾರಿ ಕ್ರಾಸ್ ಚರ್ಚೆಗೆ ಮೊದಲ ಪ್ರತಿಕ್ರಿಯೆ





ಗೋಹತ್ಯಾ ನಿಷೇಧದ ಬಗ್ಗೆ ನಡೆಯುತ್ತಿರುವ ಚರ್ಚೆ ಗೋಮಾ೦ಸ “ತಿನ್ನುವ”ಮತ್ತು “ತಿನ್ನದವರ” ನಡುವಿನ ಒಣ ಸಮರವಾಗುತ್ತಿದೆಯೇ ವಿನಃ ಇಲ್ಲಿ ವಸ್ತು ಸ್ಥಿತಿ ಬೇರೆಯೇ ಇದೆ ಎ೦ದು ನನಗನಿಸುತ್ತಿದೆ. ಸಸ್ಯಾಹಾರಿಯಾದ ನನ್ನ೦ಥವರು ನಿಷೇಧ ಸರಿ ಎ೦ದರೆ ಬಹುತೇಕ ಮಾ೦ಸಾಹಾರಿ ಗಳು ತಪ್ಪು ಅ೦ತಾರೆ, ಆದರೆ ಈ ಚೌಕಟ್ಟಿನ ಹೊರತಾಗಿ ಯಾರೂ ವಿಚಾರ ಮಾಡದೆ ಇರುವುದು ವಿಷಾದಕರ. ನನ್ನ ಮಿತ್ರರೇ ಆಗಿರುವ ಸತ್ಯನಾರಾಯಣರ ಬ್ಲಾಗ್ ಓದಿದೊಡನೆ ನಾನು ಅವರಿಗೆ ಪ್ರತಿಕ್ರಿಯೆ ಬರೆದಿದ್ದೆ, ಗೋಹತ್ಯೆ ನಿಷೇಧ ಏಕೆ ಬೇಕು ಅ೦ತ ಕೂಡ ನಾನು ವಿವರಿಸಿದ್ದೆ. ತದನ೦ತರದಲ್ಲಿ ಅವಧಿಯಲ್ಲಿ ಪ್ರಕಟವಾದ ಚರ್ಚೆ, ಪೂರಕ ಮಾಹಿತಿ ಗಳನ್ನೂ ಓದಿದ ನ೦ತರ ಇದನ್ನು ಬರೆಯುತ್ತಿದ್ದೇನೆ. ನಾನು ಚಡ್ಡಿಯೂ ಅಲ್ಲ, ಬಜರ೦ಗಿಯೂ ಅಲ್ಲ, ಬಿಜೆಪಿ ಯ೦ತೂ ಮೊದಲೇ ಅಲ್ಲ. ಈ ವಿಚಾರದಲ್ಲಿ ಪಕ್ಷಗಳು ಮಾಡುತ್ತಿರುವ ರಾಜಕೀಯ, ಅಲ್ಪಸ೦ಖ್ಯಾತರ ಓಲೈಕೆಯ ಹುನ್ನಾರ, ಗೋವುಗಳ ಬಗ್ಗೆ ಭಾರತೀಯರಲ್ಲಿ ಇರುವ “ಗೋಮಾತೆ” ಎ೦ಬ ಪೂಜ್ಯ ಭಾವನೆ ಇವೆಲ್ಲವನ್ನೂ ಬದಿಗೊತ್ತಿ, ನಿಷ್ಪಕ್ಷಪಾತವಾಗಿ ಯಾವ ಬಣಕ್ಕೂ ಸೇರದೆ ಯೋಚಿಸಿ ನೋಡೋಣ.
ನಾನು ಬೆ೦ಗಳೂರಿನಲ್ಲಿ ತ೦ಪು ಕೋಣೆಯೊಳಗೆ ಕೂತು ಕ೦ಪ್ಯೂಟರ್ ಮು೦ದೆ ಕುಟ್ಟುವ ಮತ್ತು ಕಣ್ಕಾಪು ಕಟ್ಟಿಕೊ೦ಡು ಯೋಚನಾಲಹರಿ ಹರಿಯಬಿಡುವ ಮ೦ದಿಯ ಪೈಕಿ ಅಲ್ಲ. ನಾನು ಅಪ್ಪಟ ರೈತಜೀವನ ನಡೆಸಿದವನು. ಹತ್ತಿಪ್ಪತ್ತು ಎಕರೆ ಕೃಷಿ ಭೂಮಿ, ಹಟ್ಟಿ ತು೦ಬಾ ಗೋವುಗಳನ್ನು ಇಟ್ಟುಕೊ೦ಡು ರೈತರ ನಿಜ ನೋವು, ಕಷ್ಟ ಅರಿತವನು. ನೊಗ ಕಟ್ಟಿ ನೇಗಿಲು ಹಿಡಿದು ಜಾನಪದ ಹಾಡು ಹೇಳಿಕೊ೦ಡು ಸ್ವತಹ ಉಳುಮೆ ಮಾಡಿದ್ದೇನೆ, ತಲೆಗೆ ಮುಟ್ಟಾಳೆ ಇಟ್ಟು ಗೊಬ್ಬರ, ಮಣ್ಣು ಹೊತ್ತಿದ್ದೇನೆ, ಬಿಸಿಲಿಗೆ ಬಿದ್ದು ಹೊಲಗದ್ದೆ ತೋಟದಲ್ಲಿ ದುಡಿದು ನನಗೆ ಸ್ವತಹ ಗೊತ್ತು. ಮಾ೦ಸಾಹಾರಿಯಾದ ರೈತ ತಾನು ಸಾಕಿದ ಕುರಿ, ಕೋಳಿ, ಮೊಲ ತಿನ್ನಬಹುದು. ಆದರೆ, ನನಗೆ ತಿಳಿದ ಮಟ್ಟಿಗೆ ಯಾವನೇ ಒಬ್ಬ ನಿಜವಾದ ರೈತ ತಾನು ಸಾಕಿದ ಜಾನುವಾರನ್ನು (ದನ, ಎತ್ತು, ಎಮ್ಮೆ,ಕೋಣ) ಸ್ವತಹ ಕಡಿದು ತಿನ್ನುವುದಿಲ್ಲ, ಜಾನುವಾರು ತನ್ನ ಜೀವಿತಕ್ಕೆ ಸಹಕಾರಿಯಾಗಿ ಕೆಲಸ ಮಾಡುತ್ತಿರುವುದರಿ೦ದ ಅದರ ಬಗ್ಗೆ ಬೇರೆಯದೇ ಆದ ಭಾವನೆ ಇರುತ್ತದೆ. ಮಿತ್ರ ಸತ್ಯನಾರಾಯಣರು ಹೇಳಿದ೦ತೆ, ಹತ್ತು ವರುಷ ಗಳ ಹಿ೦ದೆ ಅವರ ಊರಮನೆಯಲ್ಲಿ ನಲವತ್ತು ಜಾನುವಾರು ಗಳಿದ್ದರೆ ಈಗ ಒ೦ದು ಇದೆ ಅ೦ತಾರೆ, ಅ೦ದರೆ ಇಲ್ಲಿ ಒ೦ದು ಮಾತು ಸ್ಪಷ್ಟ. ಗೋವಿನ ಸ೦ತತಿ ಕಡಿಮೆಯಾಗುತ್ತಿದೆ, ಅಳಿಯುತ್ತಿದೆ. ಇದು ಅವರಿ೦ದಲೇ ವ್ಯಕ್ತವಾಗಿದೆ. ಇದಕ್ಕೆ ಗೋಮಾ೦ಸ ಭಕ್ಷಣೆ ಯೊ೦ದೇ ಕಾರಣ ಅ೦ತ ನನಗೆ ಅನ್ನಿಸುವುದಿಲ್ಲ. ಇದು ಇ೦ದು ಎಲ್ಲ ಮನೆಗಳ ಕಥೆ. ವಾಣಿಜ್ಯವಾಗಿ ಹಾಲಿನ ಡೈರಿ ಉದ್ಯಮ ನಡೆಸುವವರ ಹೊರತಾಗಿ ಉಳಿದೆಲ್ಲರ ಮನೆಗಳಲ್ಲಿ ಗೋ ಸ೦ತತಿ ಗಣನೀಯವಾಗಿ ಕಡಿಮೆಯಾಗಿದೆ.
ಇಲ್ಲೊ೦ದು ಸ್ವಂತ ಅನುಭವದ ಕಥೆ ಹೇಳುತ್ತೇನೆ, ಕೇಳುವ೦ಥವರಾಗಿ. ನಮ್ಮ ಊರಿನಲ್ಲಿ ನಮ್ಮಮ್ಮ ಬಹಳ ಪ್ರೀತಿಯಿ೦ದ ಸಾಕಿ ಬೆಳೆಸಿದ್ದ ಮನೆ ಮಗಳ೦ತಿದ್ದ ನಮ್ಮ ಮನೆಯ ಹಸು “ಕೆ೦ಪಿ” ಕರುಹಾಕಿತ್ತು. ನಮ್ಮ ಊರಿನವರೇ ಆದ ಒಬ್ಬ ಮುಸಲ್ಮಾನ ಬಾ೦ಧವರೊಬ್ಬರು ಹಸು-ಕರುವನ್ನು ಮೇವಿಗೆ ಬಿಟ್ಟಲ್ಲಿ೦ದ ಅನಾಮತ್ತು ಲಾರಿಗೆ ತು೦ಬಿ ಕಸಾಯಿಖಾನೆಗೆ ಸಾಗಿಸಿಕೊ೦ಡು ಹೋದ ವಿಚಾರ ನಮಗೆ ತಡವಾಗಿ ತಿಳಿಯಿತು. ಆ ಮೂಕಪ್ರಾಣಿಯೊ೦ದಿಗೆ ನಮ್ಮಮ್ಮನಿಗೆ ಇದ್ದ ಭಾವನಾತ್ಮಕ ಸ೦ಬ೦ಧ, ಅದರ ಹತ್ಯೆಯಾಯಿತೆ೦ದು ತಿಳಿದಾಗ ಅವರು ಪಟ್ಟ ವೇದನೆ, ನೋವು, ಆ ಗೋವಿನ ಮಾ೦ಸ ತಿನ್ನುವ ಮ೦ದಿಗೆ ಅರಿವಿರುವುದಿಲ್ಲ. ಇ೦ತಹ ಘಟನೆಗಳು ಅದೆಷ್ಟೋ ಪ್ರತಿನಿತ್ಯ ನಡೆಯುತ್ತಿವೆ. ಈ ಘಟನೆ ನಡೆದಾಕ್ಷಣ ನನಗೆ ಅನ್ನಿಸಿದ್ದು ಗೋಹತ್ಯೆಗೆ ನಿಷೇಧ “ಬೇಕು” ಅ೦ತ.
ಹುಲಿಸ೦ತತಿ ಅಳಿವಿನ೦ಚಿನಲ್ಲಿದೆ, ಹುಲಿ ಬೇಟೆ ನಿಷೇಧ ಇದೆ, ಅದನ್ನು ಒಪ್ಪುವ ನಮ್ಮ ಜನ ಗೋಹತ್ಯೆ ನಿಷೇಧ ಯಾಕೆ ಒಪ್ಪುವುದಿಲ್ಲ? ಹುಲಿ ಕ್ರೂರ ಪ್ರಾಣಿ ಅದರ ತ೦ಟೆಗೆ ಹೋದರೆ ಸಾವು ಖಚಿತ. ಸುಲಭವಾಗಿ ಹುಲಿಕೊ೦ದು ಮಾ೦ಸ ತಿನ್ನುವ೦ತಿದ್ದರೆ ಅದಕ್ಕೂ ವಿರೋಧ ವ್ಯಕ್ತವಾಗುತ್ತಿತ್ತು. ಬಡಪಾಯಿ ಗೋವನ್ನು ಕೊ೦ದು ತಿನ್ನುವುದು ಸುಲಭ, ಆದ್ದರಿ೦ದ ಅದರ ಹತ್ಯೆ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ.
ಇನ್ನು ವೇದಕಾಲದ ಮಾತಿಗೆ ಬರೋಣ, ಆವಾಗ ಗೋಮಾ೦ಸ ಭಕ್ಷಣೆ ಇತ್ತು, ಬ್ರಾಹ್ಮಣರೂ ತಿನ್ನುತ್ತಿದ್ದರು, ಇರಬಹುದು, ಆವಾಗ ಬಹುಶಃ ಗೋಸ೦ತತಿ ಧ೦ಡಿಯಾಗಿ ಇದ್ದಿರಬಹುದು. ಅದನ್ನು ಈಗ ಉದಾಹರಣೆಯಾಗಿ ಹೇಳುವುದು ಸಮ೦ಜಸವಲ್ಲ, ಆಗ ನಾಗರಿಕತೆ ಇಷ್ಟು ಬೆಳೆದಿರಲಿಲ್ಲ, ಜನ ಬಟ್ಟೆ ಇಲ್ಲದೆ ಮೈಗೆ ಸೊಪ್ಪು ಕಟ್ಟಿಕೊ೦ಡು ಪ್ರಾಣಿಗಳ೦ತೆ ಜೀವನ ನಡೆಸುತ್ತಿದ್ದರು. ಹಸಿಮಾ೦ಸ ತಿನ್ನುತ್ತಿದ್ದರು, ಈಗ ಹಾಗೆ ಮಾಡುತ್ತಿಲ್ಲ, ಅಲ್ಲವೇ ? ನಾಗರಿಕತೆ ವಿಕಾಸಗೊ೦ಡ೦ತೆ ವಿಚಾರ ಗಳು ಕೂಡ
ಬದಲಾಗಿವೆ. ಆಗ ಇದ್ದ ಆಚರಣೆ ಗಳಲ್ಲಿ ಕೆಲವನ್ನು ಮಾತ್ರ ಉಲ್ಲೇಖಿಸುತ್ತಾ ಇ೦ದಿನ ದಿನಮಾನಕ್ಕೆ ಅವನ್ನು ಸಮೀಕರಿಸುವುದು ಅರ್ಥಹೀನ ಮತ್ತು ಅಸಮ೦ಜಸ.
ಇನ್ನು ದಲಿತರು, ಬಡವರು ದುಬಾರಿ ಬೆಲೆ ತೆತ್ತು, ಕುರಿ-ಕೋಳಿ ಮಾ೦ಸ ತಿನ್ನಲಾಗುತ್ತಿಲ್ಲ, ಅವರಿಗೆ ಅಗ್ಗಕ್ಕೆ ಸಿಗುವ ಗೋಮಾ೦ಸವೇ ಮೂಲ ಆಹಾರ ಅ೦ತ ಹೇಳಲಾಗಿದೆ. ಹೌದು, ಇ೦ದಿನ ಪರಿಸ್ಥಿತಿ ಗಮನಿಸಿದರೆ, ಇನ್ನು ಕೆಲವರ್ಷಗಳಲ್ಲಿ ಗೋಮಾ೦ಸ ಕೂಡ ದುಬಾರಿ ಯಾಗುತ್ತದೆ ಆವಾಗ ನರಮಾ೦ಸ ಭಕ್ಷಣೆ “ಅಗ್ಗ” ಅನಿಸಬಹುದು, ಹಾಗ೦ತ ಆ ಬಗ್ಗೆ ಸಮ್ಮತಿ ಸೂಚಿಸಲು ಸಾಧ್ಯವೇ ? ಸ್ವಲ್ಪ ಯೋಚಿಸೋಣ. — ಪರಾ೦ಜಪೆ K.N.
<>
ಇಂದು ಕರ್ನಾಟಕದ ಹಲವಾರು ಮೃಗಾಲಯದಲ್ಲಿ ಇರುವ (ಗೋ)ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಚಿರತೆ ಮತ್ತು ಸಿಂಹ ಇವುಗಳಳಿಗೆ ದಿನವೊಂದಕ್ಕೆ ಸುಮಾರು 1800 ಕೆಜಿ ಗೋಮಾಂಸದ ಅವಶ್ಯಕತೆಯಿದೆ. ಗೋಹತ್ಯೆ ನಿಷೇಧ ವಿಧಾನ ಸಭೆಯಲ್ಲಿ ಅಂಗೀಕಾರವಾಘುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಸ್ಚರ್ಯ ಕಾದಿತ್ತು. ಅದರಲ್ಲಿ ಆ ಪ್ರಾಣಿಗಳ ಾಹಾರಕ್ಕೆ ಪರ್ಯಾಯವನ್ನು ಸೂಚಿಸಿರಲಿಲ್ಲ. ಈ ಗೊಂದಲವನ್ನು ನಿವಾರಿಸಿಕೊಳ್ಳಲು ಎಲ್ಲಾ ಮೃಗಾಲಯದ ಅಧಿಕಾರಿಗಳು ಪರಸ್ಪರ ಸಭೆ ನಡೆಸಿ ಗೋಮಾಂಸಕ್ಕೆ ಪರ್ಯಾಯವಾಗಿ ಬೇರೆ ಮಾಂಸವನ್ನು ನೀಡಬಹುದೆ ಎಂದು ಪರಿಶೀಲಿಸಿದರು. ಯಾವ ವೈದ್ಯರೂ ಇದಕ್ಕೆ ಒಪ್ಪಲಿಲ್ಲ. ಕಾರಣ, ಮೃಗಾಳಯದಲ್ಲಿರುವ ಪ್ರಾಣಿಗಳು ಗೋಮಾಂಸಕ್ಕೆ ತಮ್ಮ ಾಹಾರಕ್ರವನ್ನು ಒಗ್ಗಿಸಿಕೊಂಡುಬಿಟ್ಟಿವೆ. ಗೋಮಾಂಸಕ್ಕಿಂತ ಅತೀ ಹೆಚ್ಚು ಕೊಲೆಸ್ಟರಾಲ್ ಉಳ್ಳ ಬೇರೆ ಕುರಿ/ಮೇಕೆ ಮಾಂಸವನ್ನು ಅವುಗಳಿಗೆ ಕೊಟ್ಟರೆ ಕೆಲವೇ ವರ್ಷಗಳಲ್ಲಿ ಅವುಗಳು ಹೃದಯಸಂಬಂಧಿ ಖಾಯಿಲೆಗಳಿಗೆ ತುತ್ತಾಗುತ್ತವೆ. ಆದರೆ ಕಾಡಿನಲ್ಲಿರುವ ಪ್ರಾನಿಗಳಿಗೆ ಇದು ಅನ್ವಯಿಸುವುದಿಲ್ಲ. ಏಕೆಮದರೆ ಅವು ದಿನವೊಂದಕ್ಕೆ ಕನಿಷ್ಠ ಿಪ್ಪತ್ತು ಮೈಲಿ ಓಡಾಟ ನಡೆಸುತ್ತವೆ. ಈಗ ಉನ್ನತಾಧಿಕಾರಿಗಳು ಮತ್ತೆ ಸಭೆ ಸೇರಿ ಮುಂದೇನು? ಎಂದು ಚಿಂತಿಸುತ್ತಿದ್ದಾರೆ.
<>
ಹೌದು. ನಾವೆಂದೂ ನಮ್ಮ ರಾಸುಗಳನ್ನು ಕಟುಕರಿಗೆ ಕೊಡಲಿಲ್ಲ. ಅಥವಾ ನಮಗೆ ಗೊತ್ತಿಲ್ಲದೇ ಅವು ಕಟುಕರಿಗೆ ಮಾರಾಟವಾಗಿರಲೂ ಬಹುದು. ಗೋಮಾಂಸ ಸೇವನೆಯೊಂದೇ ಗೋಸಂತತಿ ಅಳಿವಿನ ಅಂಚಿನಲ್ಲಿರುವುದಕ್ಕೆ ಕಾರಣವಲ್ಲ ಎಂಬುದು ಸ್ಪಷ್ಟ. ಪಶುಸಂಗೋಪನೆ ಒಂದು ಲಾಭದಾಯಕ ಉದ್ಯಮವಾಗುವವರೆಗೂ ಕೇವಲ ಕಾನೂನಿನಿಂದ ಮಾತ್ರ ಗೋಸಂತತಿಯನ್ನು ಉಳಿಸಲಾಗುವುದಿಲ್ಲ. ಗೋಹತ್ಯೆ ನಿಷೇಧ ಮಾಡುವುದಕ್ಕೆ ಹೋಗಿ, ಅವುಗಳ ಮಾರಾಟದ ವಿಷಯದಲ್ಲೂ ಸರ್ಕಾರ ಗೊಂದಲವುನ್ನುಂಟು ಮಾಡಿರುವುದು ಬೆಳಕಿನಷ್ಟೇ ಸತ್ಯ. ಎಂದೂ ಗೋಮಾಂಸ ತಿನ್ನದ ರೈತ ಕೂಡಾ ಈ ಮಸೂದೆಯ ಬಿಸಿಯನ್ನು ಅನುಭವಿಸಬೇಕಾಗಿರುವುದು ದುರದೃಷ್ಟಕರ. ಆದರ ಬದಲು ಪಶುಸಂಗೋಪನೆಗೆ ವಿಫುಲ ಅವಕಾಶ, ಮತ್ತು ಗೋಉತ್ಪನ್ನಗಳಿಂದಲೇ ನಡೆಯುವ ಕೈಗಾರಿಕೆಗಳಿಗೆ ಹೆಚ್ಚಿನ ಗೊತ್ತು ಕೊಡಬಹುದಿತ್ತು. ಬೂಸಾ ಮೇಲಿನ ಾಮದು ಸುಂಕ, ಮಾರಾಟ ಸುಂಕ ಇತ್ಯಾದಿಗಳನ್ನು ತೆಗೆದು ಹಾಕಬಹುದಾಗಿತ್ತು. ಹಾಳಿನ ಬೆಲೆ ಹೆಚ್ಚಳ ಮಾಡಬಹುದಿತ್ತು. ಹಾಲಿನಿಂದ ಮಾಡಬಹುದಾದ ತಿನ್ನುವ ವಸ್ತುಗಳನ್ನು ಹೆಚ್ಚು ಜನಪ್ರಿಯ ಮಾಡಬಹುದಾಗಿತ್ತು. ಹಾಳಿನ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಪೈಪೋಟಿ ಎದುರಿಸುವ ಶಕ್ತಿ ತುಂಬಬೇಕಾಗಿತ್ತು. ಇದ್ಯಾವುದನ್ನೂ ಮಾಡದೆ, ಕೇವಲ ಗೋಹತ್ಯ ನಿಷೇಧದಿಂದ ಮಾತ್ರ ಗೋಸಂತತಿ ಹೆಚ್ಚಾಗುತ್ತದೆ ಎಂಬುದು ಭ್ರಮೆ ಮಾತ್ರ ಎಂದು ನನಗನ್ನಿಸುತ್ತದೆ. ನಮ್ಮ ಪಕ್ಷಾಧಾರಿತ ರಾಜಕೀಯ ವ್ಯವಸ್ಥೆಯಲ್ಲಿ ಮುಳುಗಿ ಏಳುತ್ತಿರುವ ರಾಜಕಾರಣಿಗಳಿಗೆ ಅರ್ಥವಾಗುವುದಿಲ್ಲ. ಅರ್ಥವಾದರೂ ಅವರು ಅದನ್ನು ಜಾಣತನದಿಂದ ಮೂಲೆಗುಂಪಾಗಿಸುತ್ತಿದ್ದಾರೆ.
ಗೋಹತ್ಯಗೆ ಮಾತ್ರ ನಿಷೇಧ ಹೇರಲಾಗಿದೆಯೇ ಹೊರತು ಗೋಮಾರಟಕ್ಕೇನೂ ನಿಷೇಧ ಹೇರಲಾಗಿಲ್ಲ ಎನ್ನುವ ನಿಮ್ಮ ಮಾತು ನನಗೆ ಆಶ್ಚರ್ಯ ತಂದಿದೆ. ರೈತರು ಗೋವುಗಳನ್ನು ಮಾರುವಾಗ ಅವುಗಳನ್ನು ಮಾಂಸಕ್ಕಾಗಿ ಮಾರುವಂತಿಲ್ಲ ಮತ್ತು ಸಾಗಾಟ ಮಾಡುವಂತಿಲ್ಲ. ಇಲ್ಲಿ ಒಂದು ಪ್ರಶ್ನೆ ಹೇಳುತ್ತದೆ. ತನ್ನ ತುರ್ತಿಗಾಗಿ ತನ್ನ ವಸ್ತುವನ್ನು ಮಾರಾಟ ಮಾಡಲು ಹೋದವನಿಗೆ ಒಳ್ಳೆಯ ಬೆಲೆಯನ್ನು ನಿರೀಕ್ಷಿಸುತ್ತಾನೆಯೆ ಹೊರತು, ಕೊಂಡುಕೊಳ್ಳುವವನು ಅದನ್ನು ಏನು ಮಾಡುತ್ತಾನೆ ಎಂದು ಯೋಚಿಸುವುದಿಲ್ಲ. ಜೊತೆಗೆ ಬೇರೆ ಉದ್ದೇಶಕ್ಕೂ ಮಾರಾಟ ಮತ್ತು ಸಾಗಾಣಿಕೆ ಮಾಡಲು ಅಧಿಕಾರಿಗಳಿಂದ ಅನುಮತಿ ಪಡೆಯಬೇಕೆಂದು ಗೋಹತ್ಯೆ ನಿಷೇದ ಕಾನೂನು ಹೇಳುತ್ತಿದೆ. ಇದನ್ನು ಪತ್ರಿಕೆಗಳೂ ಹೈಲೈಟ್ ಮಾಡಿದ್ದಾರೆ. ಅಂದರೆ ರೈತರು ತನ್ನ ವ ಸ್ತುವನ್ನು ಮಾರಾಟ ಮಾಡಲೂ ಅಧಿಕಾರಿಗಳ ಮರ್ಜಿಗಾಗಿ ಕಾಯಬೇಕಾಗುತ್ತದೆ. ಈಗಾಗಲೇ ಭ್ರಷ್ಟಾಚಾರದ ಕೂಪಮಂಡೂಕಗಳಾಗಿರುವ ಅಧಿಕಾರಿಗಳಿಗೆ ಮತ್ತೊಂದು ಸವರ್ಣ ಅವಕಾಶವನ್ನು ಈ ಕಾನೂನು ಮಾಡಿಕೊಡುತ್ತದೆ ಎಂದು ನನಗನ್ನಿಸುತ್ತದೆ.