ಇದು ಜುಗಾರಿ ಕ್ರಾಸ್. ಚರ್ಚೆಗೆ ಇರುವ ತಾಣ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರ ಆಂದೋಲನ ರಾಷ್ಟ್ರ ಮನ್ನಣೆ ಗಳಿಸಿದೆ. ಆದರೆ ಈ ಹೋರಾಟ ಯಾರಿಗಾಗಿ, ಪರಿಣಾಮ ಏನು ಎನ್ನುವ ಬಗ್ಗೆ ಚರ್ಚೆಯೂ ಆರಂಭವಾಗಿದೆ. ಇಲ್ಲಿ ಶಿವಸುಂದರ್ ಭಿನ್ನ ನೋಟವನ್ನು ಕೊಟ್ಟಿದ್ದಾರೆ.
ಇವರ ನೋಟದ ಬಗ್ಗೆ ಚರ್ಚೆಯನ್ನು ಆರಂಭಿಸುತ್ತಿದ್ದೇವೆ. ಭಾಗವಹಿಸಿ
**
ಅಣ್ಣಾ ಹಜಾರೆ- ಕೊನೆಗೂ ಯಾರ ಹರಕೆಯ ಕುರಿಯಾದರು?
ಹಜಾರೆ ಗೆದ್ದರು..ಆದರೆ ಭ್ರಷ್ಟಾಚಾರ ಸೋಲಲಿಲ್ಲ!
– ಶಿವಸುಂದರ್
ಕಳೆದ ಒಂದು ವಾರದಿಂದ ಭಾರತದ ಮಧ್ಯಮ ವರ್ಗ ಅದರಲ್ಲೂ ನಗರದ ಮಧ್ಯಮ ವರ್ಗ ಒಂದು ಕ್ರಾಂತಿಯನ್ನೇ ಮಾಡಿದ ಧನ್ಯತೆಯಲ್ಲಿ ತೇಲಾಡುತ್ತಿದೆ. ಖ್ಯಾತ ಗಾಂಧೀವಾದಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಜನಲೋಕ್ಪಾಲ್ ಮಸೂದೆಯನ್ನು ಜಾರಿಗೆ ತರಲು ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ 97 ಗಂಟೆಗಳ ಉಪವಾಸದ ಮೂಲಕ ಭಾರತದಲ್ಲಿ ಕ್ರಾಂತಿಯ ಹೊಸ ಪರ್ವವೇ ಪ್ರಾರಂಭವಾಗಿದೆಯೆಂಬ ಭ್ರಾಂತಿಯನ್ನು ಮಾಧ್ಯಮಗಳೂ ಸಹ ಯಶಸ್ವಿಯಾಗಿ ಬಿತ್ತುತ್ತಲೇ ಇವೆ. ಕೆಲವು ಮಹಾಶಯರಂತೂ 97 ಗಂಟೆಗಳ ಈ ಕ್ರಾಂತಿಯನ್ನು ಈಜಿಪ್ಟ್ನ ತೆಹ್ರೀಕ್ ಚೌಕದ ಕ್ರಾಂತಿಗೂ ಹೋಲಿಸಿ ಸಂಭ್ರಮಿಸಿದರು.
ವಾಸ್ತವವಾಗಿ ಇಂಥಾ ಹೋಲಿಕೆಗಳೇ ಈ ಹೋರಾಟದ ಸುತ್ತಾ ಇರುವ ಭ್ರಾಂತಿಯ ಪರಿಮಾಣವನ್ನು ಸೂಚಿಸುತ್ತದೆ. ಈಜಿಪ್ಟ್, ಟುನಿಸಿಯಾ, ಇನ್ನಿತರ ಅರಬ್ ದೇಶಗಳಲ್ಲಿ ನಡೆಯುತ್ತಿರುವ ಜನಸಂಗ್ರಾಮಗಳಿಗೆ ಸ್ಪಷ್ಟ ಶತ್ರುಗಳಿದ್ದರು. ಇಡೀ ವ್ಯವಸ್ಥೆಯ ಭ್ರಷ್ಟಾಚಾರ, ನಿರಂಕುಶತ್ವಗಳ ಸಾಂದ್ರಿತ ರೂಪವಾದ ಆ ದೇಶದ ಅಧ್ಯಕ್ಷರ ವಿರುದ್ಧ ಅಲ್ಲಿಯ ಜನಹೋರಾಟಗಳು ನಡೆದವು. ಕನಿಷ್ಟ ಈಜಿಪ್ಟ್ ಮತ್ತು ಟುನಿಸಿಯಾಗಳಲ್ಲಿ ಭ್ರಷ್ಟರು, ದುಷ್ಟರು ಒಂದು ಕಡೆ ಇದ್ದರೆ ಅವರಿಂದ ಭಾಧಿತವಾದ ಇಡೀ ಜನತೆ ಮತ್ತೊಂದು ಕಡೆ ಧೃವೀಕರಣಗೊಂಡು ಹೋರಾಟ ನಡೆಸುತ್ತಿದ್ದರು. ಹೀಗಾಗಿ ಅಲ್ಲಿ ನಡೆದ ಸಂಗ್ರಾಮ ಮೌಲಿಕವಾಗಿಯೇ ಭಿನ್ನವಾಗಿತ್ತು.
ಆದರೆ ಇಲ್ಲಿ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಎಂದು ನಡೆಸಿದ ಸಂಗ್ರಾಮದಲ್ಲಿ ಯಾರು ಯಾರ ವಿರುದ್ಧ ನಡೆಸಿದ ಸಂಗ್ರಾಮ ಎಂಬುದೇ ಅರ್ಥವಾಗುವಂತಿರಲಿಲ್ಲ. ದೇಶದ ಅತ್ಯುನ್ನತ ಹುದ್ದೆಯಾದ ಪ್ರಧಾನ ಮಂತ್ರಿ ಮತ್ತು ಅತ್ಯುನ್ನತ ಪ್ರಜಾತಾಂತ್ರಿಕ ಸಂಸ್ಥೆಯಾದ ಸಂಸತ್ತಿನಲ್ಲಿ ನಡೆಯುವ ಭ್ರಷ್ಟಾಚಾರವನ್ನು ಹತ್ತಿಕ್ಕಲು ರೂಪಿಸಲಾದ ಲೋಕ್ಪಾಲ್ ಮಸೂದೆಗೆ ಜನಪರ ತಿದ್ದುಪಡಿ ತರಬೇಕೆಂದು ಪ್ರಾರಂಭವಾದ ಈ ಚಳವಳಿಯನ್ನು ವಿರೋಧಿಸಿದವರೇ ಇಲ್ಲ! ಏಕೆಂದರೆ ಪರಮ ಭ್ರಷ್ಟಾಚಾರಿಗಳು ಮತ್ತು ಕೊನೆಗೆ ಸಕರ್ಾರ ಸಹ ಭ್ರಷ್ಟಾಚಾರ ನಿಗ್ರಹದ ಬಗ್ಗೆ ಬದ್ಧತೆಯ ಮಾತುಗಳನ್ನಾಡಲು ಪ್ರಾರಂಭಿಸಿದವು.
ಯುದ್ಧದ ಎರಡು ಬಣದಲ್ಲೂ ಭ್ರಷ್ಟಾಚಾರಿಗಳೇ ಇದ್ದದ್ದರಿಂದ ಇದು ಒಂದು ಬಣದ ಭ್ರಷ್ಟಾಚಾರಿಗಳ ವಿರುದ್ಧ ಮತ್ತೊಂದು ಬಣದ ಭ್ರಷ್ಟಾಚಾರಿಗಳ ಹೋರಾಟವಾಗಿತ್ತು. ಈವರೆಗೆ ತನ್ನ ರಾಜಿರಹಿತ ಹೋರಾಟದ ನೈತಿಕ ಶಕ್ತಿಯಿಂದ ಸಾಕ್ಷಿ ಪ್ರಜ್ಞೆಯಾಗಿದ್ದ ಅಣ್ಣಾ ಹಜಾರೆಯವರ ಕುದುರೆಯನ್ನೇರಿ ದೆಹಲಿ ತಲುಪಲು ಬಿಜೆಪಿ ಪ್ರಯತ್ನಿಸಿತು. ಮತ್ತೊಂದು ಕಡೆ ಪ್ರಜಾತಾಂತ್ರಿಕ ರಾಜಕಾರಣದಲ್ಲಿ ಯಾವತ್ತೂ ನಂಬಿಕೆಯಿಲ್ಲದ, ಹಿಟ್ಲರ್ ಆದರೂ ಸರಿ, ಗಾಂಧಿಯಾದರೂ ಸರಿ ಯಾರಾದರೂ ಒಬ್ಬ ಅತಿಮಾನವ ಬಂದರೆ ಮಾತ್ರ ಈ ದೇಶ ಸರಿಹೋಗುತ್ತದೆ ಎಂಬ ಪ್ರಚ್ಚನ್ನ ಫ್ಯಾಸೀ ಮನೋಭಾವದ ಈ ದೇಶದ ಮೇಲ್ಮಧ್ಯಮ ವರ್ಗ ಭ್ರಷ್ಟಾಚಾರದ ಬಗ್ಗೆ ಮಾತ್ರವಲ್ಲ, ಪ್ರಜಾತಾಂತ್ರಿಕ ರಾಜಕಾರಣದ ಬಗೆಗೆ ತಮಗಿದ್ದ ಆಕ್ರೋಶವನ್ನು ಹೊರಹಾಕಲು ಈ ಸಂದರ್ಭವನ್ನು ಬಳಸಿಕೊಂಡಿತು.
ಈ ಆಂದೋಲನದಲ್ಲಿ ಕೇವಲ ಮೇಲ್ಮಧ್ಯಮ ವರ್ಗದ ಜನರು, ಉದ್ದಿಮೆಪತಿಗಳು, ಎನ್ಜಿಓಗಳೊಂದಿಗೆ, ಭ್ರಷ್ಟಾಚಾರ ತೊಲಗಬೇಕೆಂಬ ನೈಜ ಆಶಯವುಳ್ಳ ಲಕ್ಷಾಂತರ ಜನರು, ಪ್ರಗತಿಪರರೂ ದೇಶಾದ್ಯಂತ ಭಾಗವಹಿಸಿದರು. ಅವರೆಲ್ಲರ ಭಾಗವಹಿಸುವಿಕೆಯು ಅಪ್ರಾಮಾಣಿಕವೆಂದೋ, ಅಪ್ರಯೋಜಕವೆಂದೋ ಹೇಳುವುದು ಅವರ ಪ್ರಾಮಾಣಿಕ ಆಶಯಗಳಿಗೆ ಎಸಗುವ ಅಪಚಾರವಾಗುತ್ತದೆ. ಅದರ ಬಗ್ಗೆ ಗೌರವವಿಟ್ಟುಕೊಂಡೇ ಹೇಳಬೇಕಾದ ಎರಡು ಮಾತಿದೆ. ಒಂದು, ಈ ಚಳುವಳಿಯೊಳಗೇ ಬೇರೆ ಬೇರೆ ಮಟ್ಟದ ಭ್ರಷ್ಟರೂ ಮೊದಲಿಂದಲೇ ಸೇರಿಕೊಂಡಿದ್ದನ್ನು ಗಮನಿಸಲಾಗದಷ್ಟು ಅಮಾಯಕತೆ ಅವರ ನೈಜ ಆಶಯವನ್ನು ಸಾಕಾರಗೊಳಿಸಲು ಯಾವ ರೀತಿಯಿಂದಲೂ ಪ್ರಯೋಜನಕ್ಕೆ ಬರುವುದಿಲ್ಲ. ಎರಡು, ಇಂತಹದೊಂದು ಸಮೂಹ ಸನ್ನಿ ಏಕೆ, ಹೇಗೆ ನಡೆಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸದೇ ‘ಎಷ್ಟರ ಮಟ್ಟಿಗೆ ಪ್ರಯೋಜನವಾಗುತ್ತದೋ ಅಷ್ಟು ಪ್ರಯೋಜನ ಆಗಲಿ’ ಎಂದು ನಾವೂ ಅದರೊಳಗೆ ಸೇರಿಕೊಂಡುಬಿಡುವುದೂ ಅಪಾಯಕಾರಿಯಾಗಬಲ್ಲದು.
ಜಾಗತೀಕರಣ ನೀತಿಗಳ ಫಲಾನುಭವಿಯಾದ ಮೇಲ್ಮಧ್ಯಮ ವರ್ಗವೊಂದು ಈ ದೇಶದಲ್ಲಿ ಕಳೆದೆರಡು ದಶಕಗಳಲ್ಲಿ ಸೃಷ್ಟಿಯಾಗಿದೆ. ಇವತ್ತಿನ ಸಂಸದೀಯ ಪ್ರಜಾತಂತ್ರದ ಮೂಲ ರಚನೆಯಲ್ಲೇ ದೊಡ್ಡ ಸಮಸ್ಯೆ ಇರುವುದು ನಿಜ. ಆದರೆ ಯಾವ ರೀತಿಯ ಪ್ರಜಾತಂತ್ರದ ಬಗ್ಗೆಯೂ ವಿಶ್ವಾಸವಿರದ, ಕೇವಲ ಮಾರುಕಟ್ಟೆಯ ಅರಣ್ಯ ನ್ಯಾಯವಾದ ‘ಬಲವಿದ್ದವರು ಬದುಕಲಿ’ ಎಂಬ ನೀತಿಯ ಬಗ್ಗೆ ಮಾತ್ರ ದೃಢ ನಂಬಿಕೆ ಇರುವ ವರ್ಗ ಇದು. ಅವರಿಗೆ ಈ ದೇಶದ ಅತ್ಯಂತ ದೊಡ್ಡ ಸಮಸ್ಯೆಗಳೆಂದರೆ ಭ್ರಷ್ಟಾಚಾರ, ನಗರಗಳಲ್ಲಿನ ಟ್ರಾಫಿಕ್, ಮೀಸಲಾತಿಯಂತಹ ಸಂಗತಿಗಳು. ಭ್ರಷ್ಟಾಚಾರದ ಮೂಲ ಗಂಗೋತ್ರಿ ಯಾವುದು ಅದರ ನಿವಾರಣೆ ಹೇಗೆ ಎಂಬುದರ ಕುರಿತಾಗಲೀ, ಟ್ರಾಫಿಕ್ ಜಾಮ್ ಸಮಸ್ಯೆಗೆ ಹೇಗೆ ತಾವೂ ಭಾಗಿಗಳಾಗಿರುವ ಜಾಗತೀಕರಣ ಅಭಿವೃದ್ಧಿ ನೀತಿಯ ಫಲ ಎಂಬುದರ ಬಗ್ಗೆಯಾಗಲೀ ಚಿಂತನೆ ಮತ್ತು ಕ್ರಿಯೆ ಇವರಿಂದ ಸಾಧ್ಯವಿಲ್ಲ. ಆದರೆ ಹಜಾರೆಯವರ ಸುತ್ತ ನಿಮರ್ಾಣವಾದ ಸನ್ನಿಯು ಇಂತಹವರುಗಳಲ್ಲಿ ಇದ್ದಕ್ಕಿದ್ದಂತೆ ದೇಶಪ್ರೇಮವನ್ನು ಉಕ್ಕಿಸಿಬಿಡುವುದು ಮಾತ್ರ ಸುಳ್ಳಲ್ಲ. ಈ ದೇಶಪ್ರೇಮವು ಎಷ್ಟರ ಮಟ್ಟಿಗೆ ಮುಂದಿನ ವಾರದವರೆಗೆ ಇರುತ್ತದೆ ಎಂಬುದರ ಕುರಿತು ಹಾಗೂ ಅದು ಈ ದೇಶದ ಜನರ ಮೇಲಿನ ಪ್ರೇಮವಾಗಿ ಬದಲಾಗುತ್ತದೆ ಎಂಬುದನ್ನು ಅರಿಯಲು ಹೆಚ್ಚಿನ ವಿಶ್ಲೇಷಣೆಯೇನೂ ಅಗತ್ಯವಿಲ್ಲ.
ಹಿಂದೆ ಕೇಂದ್ರ ಸಕರ್ಾರದ ಚುಕ್ಕಾಣಿ ಹಿಡಿದಿದ್ದಾಗ ಲೋಕ್ಪಾಲ್ ಮಸೂದೆಯ ಬಗ್ಗೆ ಚಕಾರ ಎತ್ತದ ಅಡ್ವಾನಿ ಮತ್ತವರ ಬಿಜೆಪಿ ಅಣ್ಣಾ ಹಜಾರೆಯವರ ಸಂಪೂರ್ಣ ಬೆಂಬಲಕ್ಕೆ ನಿಂತಿತು. ಕನರ್ಾಟಕ ಹಿಂದೆಂದೂ ಕಾಣದಂಥ ಭ್ರಷ್ತಾಚಾರಿಯಾದ ಯಡಿಯೂರಪ್ಪನವರೂ ಸಹ ಹಜಾರೆ ಹೋರಾಟವನ್ನು ಬೆಂಬಲಿಸಿದರು. ಕೊನೆಗೆ ಈ ಹೋರಾಟವನ್ನು ಬೆಂಬಲಿಸಿ ಹಜಾರೆಯವರಿಗೆ ಫ್ರೀಡಂ ಪಾಕರ್ಿನಲ್ಲೇ 60/40 ಸೈಟು ಕೂಡಾ ಕೊಟ್ಟಿಬಿಡಬಹುದೆಂಬ ಅನುಮಾನವೂ ಹುಟ್ಟಿಬಿಟ್ಟಿತ್ತು!
ಅಲ್ಲಿ ಕೇಂದ್ರದಲ್ಲಿ ಸಹ ಬಾಬಾ ರಾಮ್ದೇವ್ನಂಥಾ ಗೋಸುಂಬೆ ಚಡ್ಡಿ ಸ್ವಾಮಿ, ರಾಜೀವ್ ಚಂದ್ರಶೇಖರ್ನಂಥ ಭ್ರಷ್ಟಾಚಾರಿ ಕಾಪರ್ೊರೇಟ್ ಉದ್ಯಮಪತಿ, ಕೊನೆಗೆ ಕಾಂಗ್ರೆಸ್, ಬಿಜೆಪಿ, ದಳ ಎಲ್ಲಾ ಪಕ್ಷಗಳೂ ಸಹ ಈ ಅಕ್ಷರ-ಅರ್ಥಗಳೇ ಇಲ್ಲದ ಸಮೂಹಗಾನಕ್ಕೆ ಕೋರಸ್ ಸೇರಿಸಿಬಿಟ್ಟವು. ಕೊನೆಗೆ ಭ್ರಷ್ಟಾಚಾರದ ನೇತಾರನಾದ ಕೇಂದ್ರದ ಕಾಂಗ್ರೆಸ್ ಪಕ್ಷ ತಾನು ಅತ್ಯಂತ ಸಂವೇದನಾಶೀಲ ಸಕರ್ಾರವೆಂಬಂತೆ ಅಣ್ಣಾ ಹಜಾರೆ ಸೂಚಿಸಿದವರನ್ನೇ ಕೂಡಿಸಿ, ಜನಲೋಕ್ಪಾಲ್ ಮಸೂದೆಯನ್ನು ರೂಪಿಸಲು ಒಂದು ಕಮಿಟಿಯನ್ನು ಮಾಡಿ ತಾವೂ ಸಹ ಭ್ರಷ್ಟಾಚಾರ ವಿರೋಧಿ ಗುಂಪಿಗೆ ಸೇರಿಕೊಂಡುಬಿಟ್ಟರು. ಎದುರಾಳಿಯಾಗಬೇಕಿದ್ದ ಶತ್ರುವನ್ನೇ ಜೊತೆಗೆ ಸೇರಿಸಿಕೊಂಡು ನಡೆದ ಈ ಯುದ್ಧದಲ್ಲಿ ಗೆದ್ದವರು ಹಜಾರೆಯಾದರೂ ಸೋತದ್ದು ಮಾತ್ರ ಭ್ರಷ್ಟಾಚಾರ ಅಲ್ಲವೇ ಅಲ್ಲ.
ಹೀಗಾಗಿ ಪೊಳ್ಳು ಕ್ರಾಂತಿಯ ಮತ್ತು ಪೊಳ್ಳು ಯಶಸ್ಸಿನ ಈ ಉನ್ಮಾದ ಒನ್ಡೇ ಕ್ರಿಕೆಟಿನ ಉನ್ಮಾದದಷ್ಟೇ ನಿರರ್ಥಕ ಮತ್ತು ಆತ್ಮಘಾತುಕ ಆಗದಿರಬೇಕೆಂದರೆ ಈ 97 ಗಂಟೆಗಳ ಕ್ರಾಂತಿಯ ಹಕೀಕತ್ತನ್ನು ಕೂಲಂಕಷವಾಗಿ ವಿಶ್ಲೇಷಿಸಬೇಕಿದೆ. ಇದೇ ಭಾರತದಲ್ಲಿ ಇರೋಮ್ ಶಮರ್ಿಳಾ ಎಂಬ ಮಣಿಪುರದ ಧೀರೋದ್ದಾತ್ತ ಮಹಿಳೆ ತನ್ನ ಜನರ ಮೇಲೆ ಸೈನಿಕರು ಹಿಂಸಾತ್ಮಕ ಅತ್ಯಾಚಾರ ನಡೆಸಲು ಅನುವು ಮಾಡಿಕೊಡುವ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯನ್ನು ರದ್ದುಗೊಳಿಸಬೇಕೆಂದು ಕಳೆದ 10 ವರ್ಷಗಳಿಂದ ಅತ್ಯಂತ ಅಹಿಂಸಾತ್ಮಕ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾಳೆ. ಆದರೆ 10 ವರ್ಷಗಳಿಂದ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕೆ ಸಕರ್ಾರವಾಗಲೀ, ನಾಗರಿಕ ಸಮಾಜವಾಗಲೀ ಸ್ಪಂದಿಸಲಿಲ್ಲ. ಈಗಲೂ ಆಕೆಯ ಹೋರಾಟ ಮುಂದುವರೆದೇ ಇದೆ. ಆದರೆ 10 ವರ್ಷವಿರಲೀ, 10 ದಿನಗಳು ನಡೆಯದ ಈ ಉಪವಾಸ ಸತ್ಯಾಗ್ರಹ ಮತ್ತು ಅದಕ್ಕೆ ಈ ದೇಶದ ಮೇಲ್ಮಧ್ಯಮ ವರ್ಗ, ಉದ್ದಿಮೆಪತಿಗಳಿಂದ ಸಿಕ್ಕ ಅಭೂತಪೂರ್ವ ಬೆಂಬಲವನ್ನು ಕಂಡ “ಸಂವೇದನಾಶೀಲ” ಸಕರ್ಾರ “ಹೋರಾಟಗಾರರ ಆಗ್ರಹಕ್ಕೆ ಮಣಿದುಬಿಟ್ಟಿತು”. ಈ ಹುಸಿ ಸಮರ, ಹುಸಿ ವಿಜಯದ ಹಿಂದೆ ಈ ದೇಶದ ಅಂತಸ್ಸಾಕ್ಷಿಯೇ ಭ್ರಷ್ಟಗೊಳ್ಳುತ್ತಿರುವ ಕುರುಹುಗಳು ಇವೆ.
ಯಾವುದೇ ಹೋರಾಟದ ಜಯ ಯಾವುದರ ವಿರುದ್ಧ ಹೋರಾಡಲಾಗುತ್ತಿದೆ, ಯಾರು ಹೋರಾಡುತ್ತಿದ್ದಾರೆ, ಅಂತಿಮವಾಗಿ ಪಡೆದುಕೊಂಡದ್ದು ಸಾರಾಂಶದಲ್ಲಿ ಶತ್ರುವಿಗೆ ಯಾವ ರೂಪದಲ್ಲಾದರೂ ಸಾರ ರೂಪದ ಪೆಟ್ಟನ್ನಾದರೂ ಕೊಡುತ್ತದೆಯೇ ಎಂಬುದನ್ನೇ ಆಧರಿಸಿರುತ್ತದೆ.
ಮೊದಲನೆಯದಾಗಿ ಅಣ್ಣಾ ಹಜಾರೆಯವರ ಹೋರಾಟ ಈ ದೇಶದಲ್ಲಿ ಆಳವಾಗಿ ಬೇರುಬಿಟ್ಟಿರುವ ಭ್ರಷ್ಟಾಚಾರದ ವಿರುದ್ಧ ಎಂದು ಬಣ್ಣಿಸಲಾಗುತ್ತಿದೆ. ಆದರೆ ಲೋಕ್ಪಾಲ್ ಮಸೂದೆಯಾಗಲೀ ಅಥವಾ ಅದರ ಜನಲೋಕ್ಪಾಲ್ ಸ್ವರೂಪವಾಗಲೀ ಕೇಂದ್ರದ ಅಧಿಕಾರಿ, ಸಂಸದರು ಮತ್ತು ಮಂತ್ರಿಮಂಡಲವನ್ನು ಮಾತ್ರ ತನ್ನ ವಿಚಾರಣಾ ಮತ್ತು ಶಿಕ್ಷೆಯ ವ್ಯಾಪ್ತಿಗೆ ತೆಗೆದುಕೊಳ್ಳುತ್ತದೆ. ಆದರೆ ಜಾಗತೀಕರಣದ ನಂತರದಲ್ಲಿ ಸಕರ್ಾರದ ಗಾತ್ರವೇ ಕಿರಿದಾಗುತ್ತಾ ಖಾಸಗೀ ಕ್ಷೇತ್ರದ ಪಾತ್ರ ಹಿರಿದಾಗುತ್ತಿದೆ. ಹಾಗೆಯೇ ಭ್ರಷ್ಟಾಚಾರವೂ ಸಹ ಅತ್ಯಂತ ಹೆಚ್ಚಾಗಿ ಲಕ್ಷ ಕೋಟಿ ರೂಪಾಯಿಗಳ ಸ್ವರೂಪ ಪಡೆದುಕೊಳ್ಳುತ್ತಿರುವುದು ಖಾಸಗಿ ಕ್ಷೇತ್ರವೂ ಸಕರ್ಾರಿ ವಲಯದಲ್ಲಿ ಪ್ರವೇಶ ಮಾಡಿದ ನಂತರ. ಉದಾರೀಕರಣ ಎಂದು ಕರೆಯಲ್ಪಡುವ ಈ ಶಾಸನ ಬದ್ಧ ಭ್ರಷ್ಟಾಚಾರದ ನೇರ ಫಲಾನುಭವಿಗಳು ಇಂದು ಅಣ್ಣಾ ಹಜಾರೆಯವರನ್ನು ಬೆಂಬಲಿಸುತ್ತಿರುವ ರಾಜೀವ್ ಚಂದ್ರಶೇಖರ್, ರಾಹುಲ್ ಬಜಾಜ್, ಅಂಬಾನಿ, ಟಾಟಾರಂಥ ಉದ್ಯಮಿಗಳೇ. ಇಂದು ಜಯ ಸಿಕ್ಕಿದೆ ಎಂದು ಹೇಳಲಾಗುತ್ತಿರುವ ಜನಲೋಕ್ಪಾಲ್ ಮಸೂದೆಯಿರಲಿ ಅಥವಾ ಈವರಗೆ ಅಸ್ತಿತ್ವದಲ್ಲಿದ್ದ ಯಾವುದೇ ತನಿಖಾ ಸಂಸ್ಥೆ ಅಥವಾ ಕಾನೂನುಗಳಾಗಲೀ ಈ ಭ್ರಷ್ಟಾಚಾರವನ್ನು ಭ್ರಷ್ಟಾಚಾರ ಎಂದೇ ಪರಿಗಣಿಸುವುದಿಲ್ಲ.
ಉದಾರೀಕರಣ-ಜಾಗತೀಕರಣ ಪೂರ್ವ ಕಾಲಘಟ್ಟದಲ್ಲಿ ಖಾಸಗಿ ವ್ಯಕ್ತಿಗೆ ಸಕರ್ಾರಿ ಅಧಿಕಾರಿ ಕಾನೂನು ಬಾಹಿರವಾಗಿ ಮಾಡಿಕೊಡುತ್ತಿದ್ದ ಅನುಕೂಲಗಳು ಮತ್ತು ಜನರ ಸಂಕ್ಷೇಮಕ್ಕೆ ನಿಗದಿಯಾಗಿದ್ದ ಹಣವನ್ನು ಗುಳುಂ ಮಾಡುವುದು ಇವುಗಳನ್ನೇ ಭ್ರಷ್ಟಾಚಾರವೆಂದು ಕರೆಯಲಾಗುತ್ತಿತ್ತು. ಭಾರತದ ಭ್ರಷ್ಟಾಚಾರದ ಇತಿಹಾಸವನ್ನು ನೋಡಿದರೆ ಈ ಬಗೆಯ ಭ್ರಷ್ಟಾಚಾರದ ಗಾತ್ರ 1991ರವರೆಗೆ ಹಲವು ಕೋಟಿ ರೂಪಾಯಿಗಳ ಗಡಿಯನ್ನು ದಾಟಿರಲಿಲ್ಲ. ಆದರೆ 1991ರ ನಂತರ ನಡೆದಿರುವ ಹಗರಣಗಳನ್ನು ನೊಡಿ. ಹರ್ಷದ್ ಮೆಹ್ತಾ 5000 ಕೋಟಿ, ಟೆಲಿಕಾಂ ಹಗರಣ 10-12,000 ಕೋಟಿ, ಈಗ ಕಾಮನ್ವೆಲ್ತ್ ಹಗರಣ 60,000 ಕೋಟಿ, 2 ಜಿ ಸ್ಪೆಕ್ರಂ ಹಗರಣ 2.5 ಲಕ್ಷ ಕೋಟಿಗಳಾದದ್ದೇ ಸಕರ್ಾರ ಮಾಡಬೇಕಾದ ಕೆಲಸವನ್ನೆಲ್ಲಾ ಕಡ್ಡಾಯವಾಗಿ ಲಾಭಕೋರ ಖಾಸಗೀ ಕಂಪನಿಗಳಿಗೆ ವಹಿಸಬೇಕೆಂಬ ನೀತಿ ಜಾರಿಗೆ ಬಂದದ್ದರಿಂದ. ಅಂದರೆ ಸಾರ್ವಜನಿಕ ಸಂಪನ್ಮೂಲಗಳನ್ನು ಶಾಸನಬದ್ಧವಾಗಿ ಲಾಭಕೋರ ಖಾಸಗಿ ಕಂಪನಿಗಳ ಪಾಲು ಮಾಡುವ ಕಣಛಟಛಿ-ಕಡಿತಚಿಣಜ ಕಚಿಡಿಣಛಿಠಿಚಿಣಠಟಿ (ಕಕಕ- ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಎಂಬ ನೀತಿ ಜಾರಿಗೆ ಬಂದಿರುವುದರಿಂದ. ಈ ನೀತಿಯೇ ಭ್ರಷ್ಟಾಚಾರದ ಗಂಗೋತ್ರಿ. ಇದನ್ನೇ ಅಭಿವೃದ್ಧಿಯ ಮೂಲಮಂತ್ರವೆಂದು ಎಲ್ಲಾ ಪಕ್ಷಗಳ ಸಕರ್ಾರಗಳು, ಇಂದು ಅಣ್ಣಾ ಹಜಾರೆಯವರ ಜೊತೆಯಲ್ಲಿರುವ ಕಾಪರ್ೊರೇಟ್ ಉದ್ಯಮಪತಿಗಳು, ಎನ್ಜಿಒಗಳು ಮತ್ತು ಈ ಅಭಿವೃದ್ಧಿ ಮಾದರಿಯ ಫಲಾನುಭವಿ ಮೇಲ್ಮಧ್ಯಮ ವರ್ಗದವರು ಪ್ರತಿಪಾದಿಸುತ್ತಾರೆ. 12ನೇ ಪಂಚವಾಷರ್ಿಕ ಯೋಜನೆಯಲ್ಲಿ ಶೇ.51ಕ್ಕಿಂತ ಹೆಚ್ಚಿನ ಈ ಬಗೆಯ ತಥಾಕಥಿತ “ಅಭಿವೃದ್ಧಿ ಯೋಜನೆ”ಗಳನ್ನು ಖಾಸಗಿ ಕ್ಷೇತ್ರಕ್ಕೆ ವಹಿಸಲಾಗಿದೆ. ಅಥರ್ಾತ್ ಈ ದೇಶದ ಜನರ ಅಭಿವೃದ್ಧಿಗೆ ದಕ್ಕಬೇಕಿದ್ದ ಸಂಪನ್ಮೂಲಗಳು ಪ್ರತ್ಯಕ್ಷವಾಗಿ ಮತ್ತು ಶಾಸನಬದ್ಧವಾಗಿ ಕಾಪರ್ೊರೇಟ್ ಉದ್ಯಮಪತಿಗಳ ತಿಜೋರಿಯನ್ನು ಸೇರುತ್ತಿದೆ. ಹೀಗಾಗಿ ಇಂದು ಈ ದೇಶದಲ್ಲಿ ಬಡವರು ಬಡವರಾಗುತ್ತಾ, ದೊಡ್ಡ ಶ್ರೀಮಂತರು ಇನ್ನೂ ದೊಡ್ಡ ಬಿಲಿಯನಾಧೀಶ್ವರರಾಗುತ್ತಿರುವುದಕ್ಕೆ ಅಭಿವೃದ್ಧಿ ಎಂಬ ಹೆಸರಿನ ಅತಿ ದೊಡ್ಡ ಶಾಸನಬದ್ಧ ಭ್ರಷ್ಟಾಚಾರವೇ ಕಾರಣ. ವಾಸ್ತವವಾಗಿ ಅಣ್ಣಾ ಹಜಾರೆಯವರ ಜನಲೋಕಪಾಲ್ ಮಸೂದೆಯಾಗಲೀ ಅಥವಾ ಇಂದು ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಅಭಿಯಾನಗಳಾಗಲೀ ಈ ಭ್ರಷ್ಟಾಚಾರದ ಬಗ್ಗೆ ಕಿಮ್ಮೆನ್ನುತ್ತಿಲ್ಲ.
ಉದಾಹರಣೆಗೆ ಕಳೆದ ಕೆಲವು ವರ್ಷಗಳ ಹಿಂದೆ ಸದ್ದಾಂ ಹುಸೇನ್ ಬದುಕಿದ್ದಾಗ “ಆಹಾರಕ್ಕಾಗಿ ತೈಲ ಯೋಜನೆ”ಯ ಹೆಸರಲ್ಲಿ ಇರಾಕ್ನಿಂದ ತೈಲ ಆಮದು ಮಾಡಿಕೊಂದು ಅದಕ್ಕೆ ಬದಲಾಗಿ ಆಹಾರವನ್ನು ರಫ್ತು ಮಾಡುವ ಒಪ್ಪಂದವಾಗಿತ್ತು. ಅದನ್ನು ಜಾರಿ ಮಾಡಲು ಸಕರ್ಾರವೇ ತನ್ನ ಸಕರ್ಾರಿ ಗೋದಾಮಿನಿಂದ ಆಹಾರ ಸರಬರಾಜು ಮಾಡಿ ಅಗ್ಗದ ತೈಲವನ್ನು ಇರಾಕ್ನಿಂದ ಆಮದು ಮಾಡಿಕೊಂಡು ಜನಸಾಮಾನ್ಯರಿಗೆ ಕಡಿಮೆ ಬೆಲೆಯ ಇಂಧನವನ್ನು ಸರಬರಾಜು ಮಾಡಬಹುದಿತ್ತು. ಆದರೆ ಆಹಾರವನ್ನು ಇರಾಕಿಗೆ ರಫ್ತು ಮಾಡುವ ಮತ್ತು ಅಲ್ಲಿಂದ ತೈಲವನ್ನು ಆಮದು ಮಾಡಿಕೊಳ್ಳುವ ಕಾಂಟ್ರಾಕ್ಟನ್ನು ಖಾಸಗಿಯವರಿಂದಲೇ ಮಾಡಿಸುವ ಯೋಜನೆ ರೂಪುಗೊಂಡಿತು. ಇದಕ್ಕೆ ಮಧ್ಯವತರ್ಿಯಾಗಿ ಕೆಲಸ ಮಾಡಿದ ಆಗಿನ ವಿದೇಶಾಂಗ ಮಂತ್ರಿ ನಟವರ್ಸಿಂಗ್ ಮಗ ಇದರಲ್ಲಿ ನೂರು ಕೋಟಿಗೂ ಹೆಚ್ಚು ದುಡ್ಡು ಮಾಡಿಕೊಂಡ. ಇದು ಬಯಲಾಗಿ ನಟವರ್ಸಿಂಗ್ ರಾಜೀನಾಮೆ ಕೂಡಾ ಕೊಡಬೇಕಾಯಿತು. ಆದರೆ ಸದ್ದಾಂ ಜೊತೆ ಒಪ್ಪಂದದಿಂದ ಎರಡು ಕಡೆ 20,000 ಕೋಟಿ ರೂಗಳಿಗೂ ಹೆಚ್ಚಿನ ಲಾಭ ಮಾಡಿಕೊಂಡಿದ್ದು ಅಂಬಾನಿಗಳು! ಅಂದರೆ ಸಕರ್ಾರಕ್ಕೆ , ಜನರಿಗೆ 20,000 ಕೋಟಿ ನಷ್ಟವಾದದ್ದು ಈ ಖಾಸಗೀಕರಣ ನೀತಿಯಿಂದ ಮತ್ತು ಅಂಬಾನಿಯಿಂದ! ಆದರೆ ಅದು ಈಗ ಶಾಸನಬದ್ಧ!
ಈ ಹಿಂದೆ ಅವರು ಈ ವಹಿವಾಟಿಗೆ ಸಕರ್ಾರಕ್ಕೆ ತೆರಿಗೆ ಕಟ್ಟಬೇಕಿತ್ತು. ಅದನ್ನು ಕೊಡದಿದ್ದರೆ ಅಪರಾಧವಾಗುತ್ತಿತ್ತು. ತೆರಿಗೆ ಪಾವತಿ ಮಾಡದೆ ಅವರ ವಹಿವಾಟಿಗೆ ಅನುಕೂಲ ಮಾಡಿಕೊಟ್ಟ ಅಧಿಕಾರಿ ಭ್ರಷ್ಟಾಚಾರಿಯಾಗುತ್ತಿದ್ದ. ಆದರೆ ಈಗ ಉದಾರೀಕರಣ ಮತ್ತು ಖಾಸಗೀಕರಣ ನೀತಿಗಳು ಈ ಎಲ್ಲಾ ಅಪರಾಧಗಳನ್ನು ಉತ್ತಮ ಅಭಿವೃದ್ಧಿ ಪರ ನೀತಿಗಳೆಂದು ಶಾಸನಬದ್ಧಗೊಳಿಸಿಬಿಟ್ಟಿದೆ. ಹೀಗಾಗಿ ಲೋಕಪಾಲ್ ಮಸೂದೆ ಹೆಚ್ಚೆಂದರೆ ಈ ವ್ಯವಸ್ಥಾಗತ ಭ್ರಷ್ಟಾಚಾರವನ್ನು ಅನುಷ್ಠಾನಕ್ಕೆ ತರುವಲ್ಲಿ ಮಂತ್ರಿಗಳು ಮತ್ತು ಅಧಿಕಾರಿಗಳು ಮಾಡುವ ಭ್ರಷ್ಟಾಚಾರದ ಬಗ್ಗೆ ಮಾತ್ರ ಕ್ರಮ ತೆಗೆದುಕೊಳ್ಳಬಹುದೇ ವಿನಃ ಖಾಸಗೀಕರಣದ ಮತ್ತು ಉದಾರೀಕರಣದ ಹೆಸರಿನಲ್ಲಿ ವ್ಯವಸ್ಥೆಯ ಭಾಗವೇ ಆಗಿಬಿಟ್ಟಿರುವ ಭ್ರಷ್ಟಾಚಾರವನ್ನು ಭ್ರಷ್ಟಾಚಾರವೆಂದೇ ಪರಿಗಣಿಸುವುದಿಲ್ಲ.
ಹೀಗಾಗಿ ಇಂದು ನಿಜಕ್ಕೂ ಈ ದೇಶದಿಂದ ಭ್ರಷ್ಟಾಚಾರವನ್ನು ಹೊಡೆದೋಡಿಸಬೇಕೆಂಬ ಆಶಯವುಳ್ಳವರು ಈ ದೇಶದ ಬಂಡವಾಳಶಾಹಿ ವ್ಯವಸ್ಥೆ, “ಅಭಿವೃದ್ಧಿ ಯೋಜನೆಗಳು”, ಕಕಕ- ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಎಂಬ ನೀತಿ, ಈ ದೇಶದ ಸಂಪನ್ಮೂಲಗಳನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಭ್ರಷ್ಟಾಚಾರವನ್ನು ಶಾಸನಬದ್ಧಗೊಳಿಸಿರುವ ಉದಾರೀಕರಣ-ಖಾಸಗೀಕರಣ ನೀತಿಗಳು ಇವೆಲ್ಲವನ್ನೂ ವಿರೋಧಿಸಬೇಕು. ಆದರೆ ಅಣ್ಣಾ ಹಜಾರೆಯವರ ಈ ಇಡೀ “ಆಂದೋಲನ” ಭ್ರಷ್ಟಾಚಾರದ ವ್ಯಾಖ್ಯಾನವನ್ನು ಕೇವಲ ರಾಜಕಾರಣಿಗಳಿಗೆ ಮಾತ್ರ ಸೀಮಿತಗೊಳಿಸಿತಲ್ಲದೆ, ಆ ಭ್ರಷ್ಟಾಚಾರವನ್ನು ಈ ದೇಶದ ಗಣ್ಯಮಾನ್ಯರಿಗೆ ಕೆಲವು ವಿಶೇಷ ಅಧಿಕಾರಗಳನ್ನು ಕೊಡುವುದರ ಮೂಲಕ ನಿಗ್ರಹಿಸಬಹುದೆಂಬ ಅತ್ಯಂತ ಅಪಾಯಕಾರಿ ಪರಿಹಾರವನ್ನು ಮುಂದಿರಿಸಿದೆ. ವಾಸ್ತವವಾಗಿ ಅಣ್ಣಾ ಹಜಾರೆಯವರ ಬೆನ್ನ ಹಿಂದೆ ಸೇರಿರುವ ರಾಜಕಾರಣಿಗಳಿಗೂ, ಉದ್ಯಮಪತಿಗಳಿಗೂ, ಉದಾರೀಕರಣ ನೀತಿಗಳ ಫಲಾನುಭವಿಗಳೇ ಆಗಿರುವ ಮೇಲ್ಮಧ್ಯಮವರ್ಗಕ್ಕೂ ಭ್ರಷ್ಟಾಚಾರದ ಈ ಬಗೆಯ ವ್ಯಾಖ್ಯಾನ ಹಾಗೂ ಪರಿಹಾರ ಅತ್ಯಂತ ಅನುಕೂಲಕರವಾದದ್ದೇ ಆಗಿದೆ. 10 ವರ್ಷದ ಉಪವಾಸವನ್ನು ಕ್ಯಾರೇ ಅನ್ನದ ಈ ವರ್ಗ 97ಗಂಟೆಗಳ ಉಪವಾಸಕ್ಕೆ ಬಗ್ಗಿದ್ದಕ್ಕೆ ಕಾರಣ ಇದು.
ಆದರೆ ಅದಕ್ಕಿಂತಲೂ ಹೆಚ್ಚಿನ ಮೌಲಿಕ ಭ್ರಷ್ಟಾಚಾರವೆಂದರೆ ಈ ಹುಸಿ ವಿಜಯವನ್ನು ಈ ದೇಶಕ್ಕೂ, ಜನತೆಗೂ ಸಿಕ್ಕ ಅತಿದೊಡ್ಡ ಗೆಲುವೂ ಎಂದು ನಂಬಿಸುತ್ತಿರುವುದು.
ಎರಡನೆಯದಾಗಿ, ಈ ಜನಲೋಕಪಾಲ್ ಮಸೂದೆ ಅಣ್ಣಾ ಹಜಾರೆ ಮತ್ತವರ ಮಿತ್ರರು ರೂಪಿಸಿದ ರೀತಿಯಲ್ಲೇ ಜಾರಿಗೆ ಬಂದರೆ ಕೆಲವು ಭ್ರಷ್ಟ ಮಂತ್ರಿಗಳು, ಪ್ರಧಾನಿ, ಇನ್ನಿತರರು ಶಿಕ್ಷೆಗೆ ಗುರಿಯಾಗಬಹುದು. ಆದರೆ ಅದಕ್ಕಾಗಿ ಅವರು ಸೂಚಿಸುತ್ತಿರುವ ಮಾಗರ್ೊಪಾಯಗಳು ಮಾತ್ರ ಪ್ರಜಾತಂತ್ರಕ್ಕೆ ದೊಡ್ಡ ಮಾರಕವಾಗಲಿದೆ. ಹೀಗಾಗಿ ಭ್ರಷ್ಟಾಚಾರದ ವ್ಯಾಖ್ಯಾನವನ್ನೇ ಕುಬ್ಜಗೊಳಿಸಿ ವ್ಯಕ್ತಿಗಳಿಗೆ ಮಾತ್ರ ಸೀಮಿತಗೊಳಿಸಿ ಶಾಸನಬದ್ಧ ಭ್ರಷ್ಟಾಚಾರವನ್ನು ಪ್ರಶ್ನಿಸಲೂ ಹೋಗದ ಈ ಆಂದೋಲನದ ಭೂಮಿಕೆಯೇ ಅತ್ಯಂತ ಪ್ರಶ್ನಾರ್ಹವಾಗಿದೆ.
ಸಂಸತ್ ಹಾಗೂ ಪ್ರಧಾನಿ ಮಂತ್ರಿಮಂಡಳದಲ್ಲಿ ನಡೆಯುವ ಭ್ರಷ್ಟಾಚಾರವನ್ನು ನಿಗ್ರಹಿಸಲು ಜನಲೋಕ್ಪಾಲ್ ಸೂಚಿಸಿರುವ ಮಸೂದೆಯಲ್ಲಿ ಸಕರ್ಾರ ಪ್ರಸ್ತಾಪಿಸಿದ ಮಸೂದೆಗಳಿಗಿಂತ ಕಠಿಣ ಎನಿಸಬಹುದಾದ ಕೆಲವು ಅಂಶಗಳಿರುವುದು ನಿಜ. ಆದರೆ ಈ ಮಸೂದೆಯಿಂದ ರಚಿತವಾಗುವ ಜನಲೋಕ್ಪಾಲ್ ಸಮಿತಿಯೇ ಅತ್ಯಂತ ಅಪ್ರಜಾತಾಂತ್ರಿಕವಾಗಿ ಆಯ್ಕೆಯಾಗುವ ಪ್ರಕ್ರಿಯೆಯನ್ನು ಹೊಂದಿದೆ. ಮೊದಲಿಗೆ ಈ ಹೋರಾಟದ ಕಾರಣದಿಂದ ಜನಲೋಕ್ಪಾಲ್ ಮಸೂದೆಯ ಕರಡನ್ನು ರಚಿಸಲು ರೂಪಿಸಲಾದ ಸಮಿತಿ. ಅದರಲ್ಲಿ ಶಾಂತಿಭೂಷಣ್ ಮತ್ತು ಪ್ರಶಾಂತಿ ಭೂಷಣ್ರಂತ ಜನಪರ ವಕೀಲರು ಇರುವುದು ನಿಜವಾದರೂ ಇದರ ಬಗ್ಗೆ ಸಕರ್ಾರ ಹೊರಡಿಸಿದ ಗೆಜೆಟ್ಟಿನಲ್ಲಿ “ಅಣ್ಣಾ ಹಜಾರೆಯವರು” ಸೂಚಿಸುವ ಐದು ಜನರನ್ನು ಒಳಗೊಂಡ ಸಮಿತಿ ಎಂದೇ ಆದೇಶವಿದೆ. ಇದು ಮತ್ತೆ ವ್ಯಕ್ತಿಗಳನ್ನು ಅದರಲ್ಲೂ ಜನತೆಗೆ ನೇರವಾಗಿ ಜವಾಬುದಾರರಾಗಿರುವಂತೆ ವ್ಯವಸ್ಥೆಯೊಳಗೆ ಇರದ ವ್ಯಕ್ತಿಗಳನ್ನು ಈ ದೇಶದ ಒಟ್ಟು ಜನಾಭಿಪ್ರಾಯದ ಸಾಂದ್ರ ರೂಪವಾಗಿರಬೇಕಾದ ಸಕರ್ಾರಕ್ಕಿಂತಲೂ ದೊಡ್ಡ ಸ್ಥಾನದಲ್ಲಿರಿಸುತ್ತದೆ. ಇದು ತತ್ಕಾಲದಲ್ಲಿ ಆಳುವ ಕಾಂಗೆಸ್, ವಿರೋಧಿ ಬಿಜೆಪಿಗಳಿಗೆ ಒಂದಷ್ಟು ಲಾಭ ತಂದುಕೊಡಬಹುದಾದರೂ ದೀರ್ಘಕಾಲದಲ್ಲಿ ಇದು ಪ್ರಜಾತಂತ್ರಕ್ಕೆ ಅತ್ಯಂತ ಅಪಾಯಕಾರಿ. ಅಂಬೇಡ್ಕರ್ ಅವರು ಹೇಳಿದ್ದು ಅದನ್ನೇ. ಯಾರೊಬ್ಬ ವ್ಯಕ್ತಿಯನ್ನು ಮಹಾತ್ಮ ಮಾಡುವುದು ಜನತೆಯನ್ನು ದೀನರನ್ನಾಗಿಸುವ ಮತ್ತೊಂದು ರೂಪ.
ಮೂರನೆಯದಾಗಿ ಲೋಕ್ಪಾಲ್ ಸದಸ್ಯರ ಆಯ್ಕೆಯ ಕುರಿತು. ಈ ದೇಶದ ಬುದ್ಧಿಜೀವಿಗಳು, ಜ್ಞಾನಪೀಠ ಪ್ರಶಸ್ತಿ ವಿಜೇತರು, ಭಾರತೀಯ ಸಂಜಾತ ನೊಬೆಲ್ ಪ್ರಶಸ್ತಿ ವಿಜೇತರೂ ಎಲ್ಲರೂ ಸೇರಿಕೊಂಡು ಲೋಕಪಾಲ್ ಸದಸ್ಯರನ್ನು ಆಯ್ಕೆ ಮಾಡಬಹುದೆಂಬ ಪ್ರಸ್ತಾಪ ಹೋರಾಟಗಾರರದ್ದು. ಇದರ ಹಿಂದಿರುವ ಮನೋಭಾವ ಅತ್ಯಂತ ಆಕ್ಷೇಪಣೀಯವಾದದ್ದು. ನೊಬೆಲ್ ಪ್ರಶಸ್ತಿ ವಿಜೇತರು, ಜ್ನಾನಪೀಠಿಗಳು ಹಾಗೂ ಯಾವುದೋ ನಿದರ್ಿಷ್ಟ ಕ್ಷೇತ್ರದಲ್ಲಿ ನಿಪುಣರಾದ ಬುದ್ಧಿಜೀವಿಗಳು ಜನರ ಬದುಕನ್ನು ಪ್ರಭಾವಿಸುವ ಭ್ರಷ್ಟಾಚಾರದ ನಿಗ್ರಹದ ಬಗ್ಗೆ ಪರಿಣಿತ ಸಲಹೆ ಕೊಡುತ್ತಾರೆಂಬ ತಿಳವಳಿಕೆಯೇ ಹಾಸ್ಯಾಸ್ಪದವಾದದ್ದು ಮತ್ತು ಅಪಾಯಕಾರಿಯಾದದ್ದು. ಒಂದು ರೀತಿಯಲ್ಲಿ ಇದು ಸಾಮಾನ್ಯ ಜನರ ವಿವೇಕವನ್ನೂ, ಜನತಂತ್ರವನ್ನು ಮತ್ತು ದೇಶದ ಆಗುಹೋಗುಗಳಲ್ಲಿ ಅವಿದ್ಯಾವಂತರ ಪಾತ್ರವನ್ನು ಅನುಮಾನದಿಂದಲೇ ನೋಡುವ ಪ್ರಜಾತಂತ್ರ ವಿರೋಧಿ ಶೋಷಕ ವರ್ಗಗಳ ತಿಳವಳಿಕೆಯೇ ಆಗಿದೆ. ಇನ್ನು ಈ ನೊಬೆಲ್ಗಳು ಮತ್ತು ಜ್ಞಾನಪೀಠಿಗಳ ರಾಜಕೀಯ ತಿಳುವಳಿಕೆ ಎಷ್ಟರ ಮಟ್ಟಿಗೆ ಜನಪರವಾಗಿರುತ್ತದೆ ಎಂಬುದು ಇನ್ನೊಂದು ವಿಷಯ. ಸಾಕ್ಷಾತ್ ಅಣ್ಣಾ ಹಜಾರೆಯವರೇ ಈ ಹೋರಾಟದಲ್ಲಿ ಜಯಗಳಿಸಿದ ನಂತರ ಈ ದೇಶದ ಮುಖ್ಯಮಂತ್ರಿಗಳು ಮೋದಿಯ ಗುಜರಾತಿನಿಂದ ಮತ್ತು ಮತ್ತು ಬಿಹಾರದ ನಿತೀಶ್ಕುಮಾರರ ಎನ್ಡಿಎ ಸಕರ್ಾರದಿಂದ ಪಾಠ ಕಲಿಯಬೇಕೆಂದು ಕರೆ ಕೊಟ್ಟಿದ್ದರು. ಹಾಗೆ ನೋಡಿದರೆ ಮೋದಿ ಅಧಿಕಾರಕ್ಕೆ ಬಂದ ಮೇಲೆ ಗುಜರಾತಿನಲ್ಲಿ ಲೋಕಾಯುಕ್ರರ ನೇಮಕವನ್ನೇ ಮಾಡಿಲ್ಲ. ಸುಜಲಾಂ ಯೋಜನೆಯಲ್ಲಿ 1700 ಕೋಟಿ, ರೋಜ್ಗಾರ್ ಯೋಜನೆಯಲ್ಲಿ 109 ಕೋಟಿ, ಮೀನುಗಾರಿಕಾ ಇಲಾಖೆಯಲ್ಲಿ 600 ಕೋಟಿ ಹಣ ಭ್ರಷ್ಟಾಚಾರವಾಗಿರುವುದು ಜಗಜ್ಜಾಹೀರಾಗಿರುವುದು ಹಜಾರೆ ಕಣ್ಣಿಗೆ ಬೀಳಲಿಲ್ಲ. ಹಾಗೆಯೇ ಗ್ರಾಮಾಂತರ ಪ್ರದೇಶದ ದಲಿತ ಹಾಗೂ ಭೂಹೀನ ಕಾಮರ್ಿಕರಿಗೆ ಸೇರಬೇಕಿದ್ದ ಲಕ್ಷಾಂತರ ಎಕರೆ ಗೋಮಾಳ ಭೂಮಿಯನ್ನು ಅಭಿವೃದ್ಧಿಯ ಹೆಸರಿನಲ್ಲಿ ಬಿಜೆಪಿ ಪರವಾದ ಉದ್ಯಮಿಗಳ ಸಣ್ಣ ಗುಂಪಿಗೆ ಪರಭಾರೆ ಮಾಡಿರುವುದು ಅದರ ವಿರುದ್ಧ ನಡೆಯುತ್ತಿರುವ ಹೋರಾಟಗಳನ್ನು ಕ್ರೂರವಾಗಿ ದಮನಿಸಿರುವುದು ಹಜಾರೆಯವರ ಕಣ್ಣಿಗೆ ಏಕೆ ಬೀಳುವುದಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಹಾಗೆಯೇ 2002ರ ಗುಜರಾತ್ ನರಮೇಧ ಸಹಾ! ಹಾಗಿದ್ದಲ್ಲಿ ಹಜಾರೆಯವರ ಭ್ರಷ್ಟಾಚಾರದ ಪರಿಕಲ್ಪನೆಯಲ್ಲಿ ಸಾಂವಿಧಾನಿಕ ಮೌಲ್ಯಗಳ ಹತ್ಯೆಯ ಪ್ರಶ್ನೆಯೇನು? ಹಾಗೆಯೇ ಜನರ ಸಂಪನ್ಮೂಲಗಳು ಬಂಡವಾಳಶಾಹಿಗಳ ಅಭಿವೃದ್ಧಿಗೆ ಹರಿದುಹೋಗುವುದು ಭ್ರಷ್ಟಾಚಾರವೆಂದು ಪರಿಗಣನೆಗೇ ಬರುವುದಿಲ್ಲ ಎಂದಾಯ್ತು!! ರಾಜ್ ಠಾಕ್ರೆಯ ನೇತೃತ್ವದಲ್ಲಿ ಮರಾಠಿಯರಲ್ಲದವರು ಮಹಾರಾಷ್ಟ್ರದಲ್ಲಿ ಎರಡನೇ ಆದ್ಯತೆಗೆ ತೃಪ್ತಿ ಪಟ್ಟುಕೊಳ್ಳಬೇಕೆಂಬ ಚಳವಳಿಯನ್ನೂ ಸಹ ಹಜಾರೆಯವರು ಬೆಂಬಲಿಸಿದ್ದರು. ಇದು ಭ್ರಷ್ಟಾಚಾರದ ಬಗ್ಗೆ ಮತ್ತು ಇಂದು ಸಾಂವಿಧಾನಿಕ ಮೌಲ್ಯಗಳಿಗೇ ಕುತ್ತು ತರುತ್ತಿರುವ ಇತರ ರಾಜಕೀಯ ವಿಷಯಗಳ ಬಗ್ಗೆ ಚಳವಳಿಯ ಮುಂಚೂಣಿಯಲ್ಲಿರುವ ಅಣ್ಣಾ ಹಜಾರೆಯವರ ನೆಲೆ ಮತ್ತು ನಿಲುವುಗಳು. ಇನ್ನು ನೊಬೆಲ್ ವಿಜೇತ ಭಾರತೀಯ ಸಂಜಾತ ನೈಪಾಲ್ ಅಂತೂ ಅತ್ಯಂತ ಪ್ರತಿಗಾಮಿ ತಿಳುವಳಿಕೆಯುಳ್ಳವರು. ವಿಖ್ಯಾತ ವಿಜ್ಞಾನಿಗಳು ಮತ್ತು ಸಾಹಿತಿಗಳು ರಾಜಕೀಯದ ಬಗ್ಗೆ, ಆಥರ್ಿಕತೆಯ ಬಗ್ಗೆ ಮೇಲ್ತೋರಿಕೆಯ ತಿಳವಳಿಕೆಯನ್ನೂ ಹೊಂದಿರುವುದಿಲ್ಲ. ಅದಕ್ಕೆ ಸಾಕಷ್ಟು ಉದಾಹರಣೆಗಳು ಕನರ್ಾಟಕದಲ್ಲೇ ಇವೆ!
ಇದು ಹಜಾರೆಯವರ ನೈತಿಕತೆಯನ್ನು ಬದ್ಧತೆಯನ್ನುಅನುಮಾನಿಸುವ ಪ್ರಶ್ನೆಯಲ್ಲ. ನೈತಿಕತೆಯ ಜೊತೆಜೊತೆಗೆ ಜನಪರ ರಾಜಕೀಯ ಆಥರ್ಿಕ ಚಿಂತನೆಗಳಿಲ್ಲದಿದ್ದರೆ ಹೇಗೆ ಅತ್ಯಂತ ಪ್ರಾಮಾಣಿಕರೂ ಸಹ ಮೋದಿಯಂತವರು, ರಾಜೀವ್ ಚಂದ್ರಶೇಖರ್, ಬಜಾಜ್ಗಳಂತವರು ಸವಾರಿ ಮಾಡುವ ಕುದುರೆಗಳಾಗಿಬಿಡುತ್ತಾರೆ ಎಂಬುದಕ್ಕೇ ಇದೊಂದು ಉದಾಹರಣೆಯಷ್ಟೆ.
ಈಗಾಗಲೇ ಈ ಭ್ರಷ್ಟಾಚಾರ ವಿರೋಧೀ “ಆಂದೋಲನ”ವನ್ನು ಸಂಘಪರಿವಾರ ಹೈಜಾಕ್ ಮಾಡಿಯಾಗಿದೆ. ವಾಸ್ತವವಾಗಿ ಬಿಜೆಪಿಯ ಇತ್ತೀಚಿನ ರಾಷ್ಟ್ರೀಯ ಕಾರ್ಯಕಾರಿಣಿ, ಅಖಿಲ ಭಾರತ ವಿದ್ಯಾಥರ್ಿ ಪರಿಷತ್ತಿನ ರಾಷ್ಟ್ರೀಯ ಕಾರ್ಯಕಾರಣಿ, ಪುತ್ತೂರಿನಲ್ಲಿ ನಡೆದ ಆರೆಸ್ಸೆಸ್ಸಿನ ಕಾರ್ಯಕಾರಿಣಿಯಲ್ಲಿ ತಮಗೆ ಅಂಟಿರುವ ಕೋಮುವಾದಿ ಹಣೆಪಟ್ಟಿಯನ್ನು ಜನರಿಂದ ಮರೆಮಾಚಬೇಕೆಂದರೆ ಕಾಂಗ್ರೆಸ್ ಸಕರ್ಾರದ ಭ್ರಷ್ಟಾಚಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರಚಾರಾಂದೋಲನವನ್ನು ಪ್ರಾರಂಭಿಸಬೇಕೆಂದು ನಿರ್ಣಯ ಕೈಗೊಂಡಿದ್ದವು. ಹಜಾರೆಯವರು ಲೋಕ್ಪಾಲ್ ಮಸೂದೆಯ ಬಗ್ಗೆ ಪ್ರಾರಂಭಿಸಿದ ಹೋರಾಟವೂ ಸಹ ಇದರ ಭಾಗವೇ ಎಂದು ಹೇಳಲು ಪುರಾವೆಗಳಿಲ್ಲವಾದರೂ ಅದರ ಸಂಪೂರ್ಣ ಲಾಭವನ್ನು ಪಡೆದುಕೊಂಡಿದ್ದು ಮತ್ತು ಪಡೆದುಕೊಳ್ಳುತ್ತಿರುವುದು ಮಾತ್ರ ಬಿಜೆಪಿಯೇ! ಬಿಜೆಪಿ ಆ ಬಗೆಯ ಲಾಭಗಳನ್ನು ಪಡೆದುಕೊಳ್ಳಬಾರದೆಂಬ ಬಗ್ಗೆ ಹಜಾರೆಯವರಿಗೂ ವಿಶೇಷ ವಿರೋಧವೇನೂ ಇರಲಿಲ್ಲ ಎಂಬುದು ಕೂಡಾ ಈಗ ಸ್ಪಷ್ಟವಾಗುತ್ತಿದೆ. ಇದಕ್ಕೆ ಕಾರಣ ಹಜಾರೆಯವರು ಬಿಜೆಪಿ ಪರ ಎಂಬುದಲ್ಲದೇ ಇರಬಹುದು. ಕಾಂಗ್ರೆಸ್ ಪಕ್ಷ ಅಸಹನೀಯವಾಗುವಷ್ಟು ಭ್ರಷ್ಟಾಚಾರ ನಡೆಸುತ್ತಿದೆ ಎಂಬುದೇ ಆಗಿರಬಹುದು. ಆದರೆ ಅದಕ್ಕಿಂತ ಮುಖ್ಯವಾದ ಕಾರಣ ಬಿಜೆಪಿ ತಾನೂ ಸಹ ಅಷ್ಟೇ ಭ್ರಷ್ಟಾಚಾರಿ ಎಂಬುದನ್ನು ಮರೆಮಾಚುವಷ್ಟು ಯಶಸ್ವಿಯಾಗಿ ಸಾರ್ವಜನಿಕ ಸಂಪರ್ಕವನ್ನು ಕಾದುಕೊಂಡಿರುವುದು!
ಇದೆಲ್ಲವನ್ನೂ ಕಾಣಬಲ್ಲಷ್ಟು ರಾಜಕೀಯ ಗ್ರಹಿಕೆ ಈ ಚಳವಳಿಗೆ ಇರಲೇ ಇಲ್ಲ. ಅಲ್ಲದೆ ಕಾಂಗ್ರೆಸ್ನ ಭ್ರಷ್ಟಾಚಾರದಿಂದ ಬೇಸತ್ತ ಜನತೆಗೆ ಒಂದು ವೇದಿಕೆಯೂ ಬೇಕಿತ್ತು. ಹೀಗೆ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆದ ಬಿಜೆಪಿ ಮತ್ತು ಸಂಘಪರಿವಾರ ಭ್ರಷ್ಟಾಚಾರದ ವ್ಯಾಖ್ಯಾನವು ಸಂಪೂರ್ಣವಾಗಿ ಕೇವಲ ಕಾಂಗ್ರೆಸ್ ವಿರೋಧಿಯಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಭ್ರಷ್ಟಾಚಾರ ವಿರೋಧಿ ಹೋರಾಟದ ಪ್ರಮುಖ ದಾಳಿ ಕಾಂಗ್ರೆಸ್ ಆಗಲೇ ಬೇಕು. ಆದರೆ ಬಿಜೆಪಿ ಅದಕ್ಕೆ ಕಮ್ಮಿಯೇನಲ್ಲ. ಈ ಚಳವಳಿಯನ್ನು ಬೆಂಬಲಿಸುತ್ತಿರುವ ಉದ್ದಿಮೆಪತಿಗಳು ಕಡಿಮೆ ಭ್ರಷ್ಟರೇನಲ್ಲ. ಆದರೆ ಸಂಘಪರಿವಾರ ಹಜಾರೆ ಒದಗಿಸಿದ ಭೂಮಿಕೆಯನ್ನು ಬಳಸಿಕೊಂಡು ಬಹಳ ಯಶಸ್ವಿಯಾಗಿ ಈ ಆಂದೋಲನದ ರಾಜಕೀಯ ಲಾಭವನ್ನು ಪಡೆದುಕೊಳ್ಳುತ್ತಿದೆ. ಅದರಲ್ಲೂ ಹಜಾರೆಯವರು ಮೋದಿಯನ್ನು ಮತ್ತು ನಿತೀಶರನ್ನು ಬೆಂಬಲಿಸಿ ನೀಡಿರುವ ಹೇಳಿಕೆಯಂತೂ ಸಂಘಪರಿವಾರಕ್ಕೆ 1975ರಲ್ಲಿ ನೀಡಿದ ಬೃಹತ್ ಜೀವದಾನವನ್ನೇ ನೀಡುತ್ತಿದೆ.
ಇತಿಹಾಸ ಮತ್ತೊಮ್ಮೆ ಮರುಕಳಿಸಿದಾಗ ಅದು ಮೋಸದಿಂದ ಕೂಡಿರುತ್ತದೆ ಎಂಬ ಹೇಳಿಕೆ ಇದೆ. ಅದನ್ನು ಬಿಜೆಪಿಯ ವಿಷಯದಲ್ಲಿ ಮೊದಲ ಬಾರಿ ಮೋಸ ಎರಡನೇ ಬಾರಿ ಮರುಕಳಿಸಿದರೆ ದ್ರೋಹ ಎಂದು ಬದಲಿಸಿಕೊಳ್ಳಬಹುದೇನೋ? 1948ರಲ್ಲಿ ಗಾಂಧಿಯನ್ನು ಕೊಲೆ ಮಾಡಿದ ನಂತರ ಪ್ರಧಾನ ಧಾರೆ ರಾಜಕಾರಣದ ಅಂಚಿಗೆ ಸರಿದು ಹೋದ ಸಂಘಪರಿವಾರ ಮತ್ತೆ ದೊಡ್ಡ ಮಟ್ಟದಲ್ಲಿ ಪ್ರಧಾನ ಧಾರೆ ರಾಜಕಾರಣದಲ್ಲಿ ಪ್ರವೇಶ ಪಡೆದದ್ದೇ ಜಯಪ್ರಕಾಶ್ ನಾರಾಯಣರ ಕಾಂಗ್ರೆಸ್ ವಿರೋಧೀ ಭ್ರಷ್ಟಾಚಾರ ವಿರೋಧೀ ಹೋರಾಟದ ಮೂಲಕ. ಆಗ ಜೆಪಿಯವರು ನೀವು ಆರೆಸ್ಸೆಸ್ಸನ್ನು ಫ್ಯಾಸಿಸ್ಟ್ ಎನ್ನುವುದಾದರೆ ನಾನೂ ಸಹ ಫ್ಯಾಸಿಸ್ಟೇ ಎಂದು ಘೋಷಿಸಿ ಅದರ ನರಹಂತಕ ದೇಶ ವಿಭಜಕ ವ್ಯೂಹತಂತ್ರಗಳ ಮೇಲೆ ಭ್ರಷ್ಟಾಚಾರ ವಿರೋಧೀ ಮಖಮಲ್ ಮುಸುಕನ್ನು ಹೊದಿಸಿಬಿಟ್ಟಿತು. ಆ ಮೂಲಕ ಮತ್ತೆ ಪ್ರಧಾನ ಧಾರೆ ರಾಜಕಾರಣವನ್ನು ಪ್ರವೇಶಿಸಿದ ಆಗಿನ ಭಾರತ ಜನಸಂಘ ಹಾಗೂ ಇಂದಿನ ಭಾರತೀಯ ಜನತಾ ಪಕ್ಷ ತನ್ನ ದೇಶವಿಭಜಕ ಮತ್ತು ಕೋಮುವಾದೀ ರಾಜಕೀಯದಿಂದ ಬೆಳೆದು ನಿಂತಿರುವ ಪರಿ ನಮ್ಮ ಮುಂದಿದೆ.
1999ರಲ್ಲಿ ಕೇಂದ್ರದಲ್ಲಿ ಅಧಿಕಾರ ಪಡೆದ ಬಿಜೆಪಿ ತಾನೂ ಸಹ ಕಾಂಗ್ರೆಸ್ನಷ್ಟೇ ಭ್ರಷ್ಟಾಚಾರಿ ಮಾತ್ರವಲ್ಲ ಜನವಿರೋಧೀ ಸಹ ಎಂದು ಸಾಬೀತು ಮಾಡಿದ ನಂತರ ಕಳೆದ ಎರಡು ಚುನಾವಣೆಗಳಿಂದ ಅಧಿಕಾರದಿಂದ ದೂರ ಉಳಿದಿದೆ. ಹೀಗಾಗಿ ಮತ್ತೆ ತನ್ನ ರಾಜಕೀಯ ಮೆರುಗನ್ನು ಪಡೆದುಕೊಳ್ಳಲು ಈಗ ಮತ್ತೆ ಕಾಂಗ್ರೆಸ್ ವಿರೋಧೀ ಭ್ರಷ್ಟಾಚಾರ ವಿರೋಧೀ ಆಂದೋಲನದ ವ್ಯೂಹತಂತ್ರದ ಅಗತ್ಯವಿತ್ತು. ಅದಕ್ಕೆ ಅಯಾಚಿತವಾಗಿ ಹಜಾರೆಯವರು ಕುದುರೆಯಾಗಿ ಒದಗಿದ್ದಾರೆ.
ಇದಲ್ಲದೆ ಒಬ್ಬ ಹಜಾರೆಯವರಿಂದ ಇಡೀ ರಾಜಕಾರಣವೇ ಕ್ಲೀನ್ ಆಗಬಹುದೆಂಬ ತಿಳವಳಿಕೆಯುಳ್ಳ ಮತ್ತು ಸಾರ್ವಜನಿಕ ಜೀವನವನ್ನು ಶುದ್ಧಗೊಳಿಸಲು ಜನರ ಪ್ರಜ್ಞಾಪೂರ್ವಕ ಭಾಗೀದಾರಿಕೆ ಮತ್ತು ಚಳವಳಿಯ ಬದಲಿಗೆ ಯಾರೋ ಒಬ್ಬ ಮಹಾತ್ಮನ ಆಗಮನಕ್ಕೆ ಕಾಯುವ ಈ ದೇಶದ ಮಧ್ಯಮ ವರ್ಗದ ಮನಸ್ಸತ್ವವು ಹೇಗೆ ಕಾಪರ್ೊರೇಟ್ ನಿರಂಕುಶತ್ವ ಮತ್ತು ಬಿಜೆಪಿ ಕೋಮುವಾದದೊಡನೆ ಹೊಂದಾಣಿಕೆ ಮಾಡಿಕೊಳ್ಳಬಲ್ಲದು ಎಂಬುದನ್ನೂ ಸಹ ಕಳೆದ 97 ಗಂಟೆಗಳು ತೋರಿಸಿಕೊಟ್ಟಿವೆ!
ಇದು ಪ್ರಜಾತಂತ್ರಕ್ಕೆ ಅಪಾಯಕಾರಿ. ಔಷಧಿಯೇ ರೋಗಕ್ಕಿಂತ ಅಪಾಯಕಾರಿಯಾಗಿಬಿಡುವ ಸನ್ನಿವೇಶ ಇದೀಗ ಪ್ರಜಾತಂತ್ರದ್ದು. ಭ್ರಷ್ಟಾಚಾರದ ಮೂಲ ಅಭಿವೃದ್ಧಿಯ ಹೆಸರಲ್ಲಿ ಈ ದೇಶದಲ್ಲಿ ಗಟ್ಟಿಗೊಳ್ಳುತ್ತಿರುವ ಪರಾವಲಂಬಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿದೆ. ಈ ಪಾಪದಲ್ಲಿ ಕಾಂಗ್ರೆಸ್, ಬಿಜೆಪಿ ಎಲ್ಲಾ ಪಕ್ಷಗಳಿಗೂ ಸರಿಸಮಾನ ಪಾಲಿದೆ. ಭ್ರಷ್ಟಾಚಾರ ವ್ಯವಸ್ಥಾಗತವಾಗಿರುವಾಗ ಅದನ್ನು ವೈಯಕ್ತಿಕ ನೆಲೆಯಲ್ಲಿ ಹುಡುಕುವುದು, ವ್ಯಕ್ತಿಗತ ನೆಲೆಯಲ್ಲಿ ಪರಿಹಾರ ಹುಡುಕುವುದು, ಭ್ರಷ್ಟಾಚಾರವನ್ನು ಹುಟ್ಟಿಹಾಕುವ ಬುನಾದಿಯನ್ನು ಭದ್ರಪಡಿಸಿಕೊಂಡು ಅದರ ಅಭಿವ್ಯಕ್ತಿಯನ್ನು ಮಾತ್ರ ಕಠಿಣವಾಗಿ ದಂಡಿಸುವುದು ಮತ್ತು ಅದನ್ನೇ ಸಾಧನೆಯೆಂದು ಭ್ರಮಿಸುವುದು ಎಲ್ಲವೂ ಪ್ರಜಾತಂತ್ರದ ಕ್ರೂರ ಪ್ರಹಸನದಂತೆ ಕಾಣುತ್ತದೆ. ಹೀಗಾಗಿ ಭ್ರಷ್ಟಾಚಾರದ ಗಂಗೋತ್ರಿಯಾದ ಈ ವ್ಯವಸ್ಥೆಯನ್ನು ಜನರ ಪ್ರಜ್ಞಾಪೂರ್ವಕ ಭಾಗೀದಾರಿಕೆ ಮತ್ತು ಸಮರಶೀಲ ಜನರ ಚಳವಳಿಯ ಮೂಲಕ ಬದಲಿಸುವ ಮೂಲಕ ಮಾತ್ರ ಭ್ರಷ್ಟಾಚಾರ ನಿಲ್ಲುತ್ತದೆ.
ಆದರೆ ವಾಸ್ತವವೆಂದರೆ ಅಂಥಾ ಚಳವಳಿಯ ಕೊರತೆರುವುದರಿಂದಲೇ ಮಹಾತ್ಮರಿಗೆ, ಪವಾಡಗಳಿಗೆ ಹಂಬಲಿಸುವ ಪರಿಸ್ಥಿತಿ ಎದುರಾಗುತ್ತದೆ. ಪರಿಹಾರವಿರುವುದು ಅಂತಹದೊಂದು ಚಳವಳಿಯ ನಿಮರ್ಾಣದಲ್ಲಿ ಅತ್ಯಂತ ಸಕ್ರಿಯರಾಗಿ ತೊಡಗಿಕೊಳ್ಳುವುದರಲ್ಲಿ ಮಾತ್ರ.







ಇದು ತುಂಬಾ ಸಿನಿಕ ದೃಷ್ಟಿ. ಇಂಥವರಿಗೆ ಜಗತ್ತಿನಲ್ಲಿ ಯಾವುದೂ ಸರಿ ಕಾಣುವುದಿಲ್ಲ. ಹಾಗಂತ ತಮಗೂ ಅದನ್ನು ಮಾಡಲಿಕ್ಕೆ ಬರುವುದಿಲ್ಲ.
ಹಾಗಾದರೆ ಏನು ಮಾಡಬೇಕೆಂದು ಸ್ಪಷ್ಟವಾಗಿ ಹೇಳಿ. ಮಾಡಿದ್ದಕ್ಕೆಲ್ಲ ಕೊಂಕು ಹೇಳುವ ನೀವು ಒಂದಾದರೂ ಸಣ್ಣ ಮಟ್ಟದ ಚಳುವಳಿ ರೂಪಿಸಿದ್ದೀರಾ? ಉಪದೇಶ ಹೇಳುವುದು ಸುಲಭ. ಏನೂ ಇಲ್ಲದೇ ಇರುವುದಕ್ಕಿಂತ ಲೋಕಪಾಲ ಮಸೂದೆ ಇರುವುದೇ ಒಳ್ಳೆಯದು.
ಚಂದ್ರಹಾಸ ಕುಮಾರ್
ದೊಡ್ಡ ಹೋರಾಟಗಾರರ ತರ ಫೋಸ್ ಕೊಡುವ ಅವಶ್ಯಕತೆ ಇಲ್ಲ.. ಇಲ್ಲಿ ಹೋರಾಟದ ಪ್ರಶ್ನೆ ಅಲ್ಲ.. 111 ಕೋಟಿ ಒಡೆಯನಾಗಿರುವ ಶಾಂತಿ ಭೂಷಣ್ ಬೇಕಿತ್ತಾ.. ಇಲ್ಲಿ ಸಾಧಿಸಿದ್ದಾದ್ರೂ ಏನು.. ಈ ಮಸೂದೆ ಆಗ್ಲೆ ಹಲವು ಭಾರಿ ಮಂಡನೆ ಆಗಿದೆ. ಇದರಲ್ಲಿರುವ ಹೊಸದಾದ್ದೂ ಏನು.. ಪ್ರಧಾನಿಯನ್ನು ಅದ್ರ ವ್ಯಾಪ್ತಿಯಲ್ಲಿ ತರುವುದು.. ಬಿಟ್ಟರೆ, ವರ್ಷದೊಳಗೆ ಪ್ರಕರಣ ಇತ್ಯರ್ಥಗೊಳಿಸೋದು.. ಈಗಿರುವ ಕಾನೂನಿನಲ್ಲೇ ಆ ಎಲ್ಲಾ ಅಂಶಗಳು ಇವೆ.. ಅದನ್ನ ಸರಿಯಾಗಿ ಪಾಲಿಸಬೇಕಷ್ಟೇ. ಆಗ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ.. ಅದು ಮೊದಲಾಗಬೇಕು… ಮೊದಲು ನಾವು ಸರಿಯಾಗಬೇಕು.. ಬಳಿಕ ಸಮಾಜ.. ಆಮೇಲೆ ದೇಶ. ಮಸೂದೆ ಮಂಡನೆ ಆದ್ರೆ ಭ್ರಷ್ಟಾಚಾರ ನಿರ್ಮೂಲನೆ ಆಗುತ್ತಾ… ಉತ್ತರ ಹೇಳಿ… ಆ ಚಳವಳಿಯಲ್ಲಿ ಭಾಗವಹಿಸಿದ ಎಲ್ಲರೂ ಎಷ್ಟು ಕ್ಲೀನ್ ಹ್ಯಾಂಡ್ ಗಳು ಆತ್ಮವಿಮರ್ಶೆ ಮಾಡಿಕೊಳ್ಳಿ… ನಿಮ್ಮ ಅಭಿಪ್ರಾಯ ನೀವು ಹೇಳಿ.. ಮತ್ತೊಬ್ಬರದ್ದನ್ನು ಕೇಳಿ….
+1 to ಚಂದ್ರಹಾಸ … ಸುಮ್ಮನೆ ಇದನ್ನ ಓದಿದೆ ಅನಿಸ್ತು.. something is better than nothing…
+1 to ಚಂದ್ರಹಾಸ ದೇಶದಲ್ಲಿ ನಡೆಯುವ ಎಲ್ಲಾ ಭ್ರಷ್ಟಾಚಾರಗಳೂ ರಾಜಕೀಯ ಕೃಪಾಪೋಷಿತ ಎಂಬುದು ಇವರಿಗೆ ತಿಳಿಯದೇ..? ಭ್ರಷ್ಟಾಚಾರದ ಬೇರು ಇರುವುದು ರಾಜಕಾರಣದಲ್ಲಿ.. ಅಲ್ಲಿಗೆ ಬಿಸಿ ಮುಟ್ಟಿದರೆ ಎಲ್ಲಾ ರಂಗದಲ್ಲೂ ಅದರ ಪರಿಣಾಮ ಪ್ರತಿಬಿಂಬಿಸುತ್ತದೆ..
“ಪರಿಹಾರವಿರುವುದು ಅಂತಹದೊಂದು ಚಳವಳಿಯ ನಿರ್ಮಾಣದಲ್ಲಿ ಅತ್ಯಂತ ಸಕ್ರಿಯರಾಗಿ ತೊಡಗಿಕೊಳ್ಳುವುದರಲ್ಲಿ ಮಾತ್ರ.”
ಅಂದರೆ ಇವರು ಕಿಡಿಯಿಲ್ಲದೆ ಬೆಂಕಿಯನ್ನು ಬಯಸುತ್ತಿರಬಹುದೋ..??
ಹುಳುಕು ಹುಡುಕುವುದು ತುಂಬಾ ಸುಲಭ..
‘ಭ್ರಷ್ಟಾಚಾರದ ಗಂಗೋತ್ರಿಯಾದ ಈ ವ್ಯವಸ್ಥೆಯನ್ನು ಜನರ ಪ್ರಜ್ಞಾಪೂರ್ವಕ ಭಾಗೀದಾರಿಕೆ ಮತ್ತು ಸಮರಶೀಲ ಜನರ ಚಳವಳಿಯ ಮೂಲಕ ಬದಲಿಸುವ ಮೂಲಕ ಮಾತ್ರ ಭ್ರಷ್ಟಾಚಾರ ನಿಲ್ಲುತ್ತದೆ’ ಇದು ಅಣ್ಣಾ ಹಜಾರೆ- ಕೊನೆಗೂ ಯಾರ ಹರಕೆಯ ಕುರಿಯಾದರು? ಹಜಾರೆ ಗೆದ್ದರು..ಆದರೆ ಭ್ರಷ್ಟಾಚಾರ ಸೋಲಲಿಲ್ಲ! ಲೇಖನದ ಕೊನೆ ವಾಕ್ಯಗಳು. ನಾನು ವೈಯಕ್ತಿಕವಾಗಿ ಅಪಾರವಾಗಿ ಗೌರವಿಸುವ ಮತ್ತು ಸಂಕೀರ್ಣತೆಗಳನ್ನು ಪರಿಹರಿಸಿ ಸೀದಾ ಸಾದಾ ಉತ್ತರವನ್ನು ನಮ್ಮ ಮುಂದಿಡಲು ಪ್ರಯತ್ನಿಸುವ ಶಿವಸುಂದರ್ ಅದೇಕೋ ಈ ಸಂದರ್ಭದಲ್ಲಿ ತುಂಬ ಗೊಂದಲದಲ್ಲಿದ್ದಾರೆ ಅನಿಸುತ್ತದೆ. ಜನರ ಪ್ರಜ್ಞಾಪೂರ್ವಕ ಭಾಗೀದಾರಿಕೆ ಮತ್ತು ಸಮರಶೀಲ ಜನರ ಚಳವಳಿಯ ಮೂಲಕ ಬದಲಿಸುವ ಮೂಲಕ ಮಾತ್ರ ಭ್ರಷ್ಟಾಚಾರ ನಿಲ್ಲುತ್ತದೆ’ಎಂದಿದ್ದಾರೆ. ಹಾಗಿದ್ದರೆ ‘ಭ್ರಷ್ಟಚಾರದ ವಿರುದ್ಧ ಇಂಡಿಯಾ’ ಎಂಬ ಸ್ವರೂಪವನ್ನು ತೆಗೆದುಕೊಳ್ಳುವ ಹಾದಿಯಲ್ಲಿ ಸಾಗುತ್ತಿರುವ ಚಳವಳಿಯಲ್ಲಿ ಪ್ರಜ್ಞಾಪೂರ್ವಕವಾಗಿ ತೊಡಗಿಸಿಕೊಂಡವರಿಲ್ಲವೇ. ಜನಲೋಲಪಾಲ್ ಮಸೂದೆ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಚಳವಳಿಗೆ ಮಾಧ್ಯಮಗಳು ಯಾವುದೇ ಕಾರಣಕ್ಕಾದರೂ ಬೆಂಬಲ ನೀಡಿರಲಿ ಇದರಿಂದ ಬಹುಸಂಖ್ಯಾತರು ಈ ಮಸೂದೆ ಬಗ್ಗೆ ಮೇಲ್ಮಟ್ಟದಲ್ಲಾದರೂ ತಿಳಿವಳಿಕಸ್ಥರಾದರೂ ಎಂಬುದನ್ನು ನಿರಾಕರಿಸಲು ಸಾಧ್ಯವೇ. ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಅನೇಕ ಬೋಧಕರು ಈ ಚಳವಳಿಯಲ್ಲಿ ಅಪ್ರಜ್ಞಾಪೂರ್ವಕವಾಗಿ ತೊಡಗಿಸಿಕೊಂಡಿದ್ದಾರೆ ಎನ್ನಲು ಸಾಧ್ಯವೇ. ಹಿಂಡಿ ಹಿಸುಕುತ್ತಿರುವ ಭ್ರಷ್ಟಾಚಾರದ ವಿರುದ್ಧ ಜನಸಾಮಾನ್ಯರಿಗೆ ಆಕ್ರೋಶವಿಲ್ಲವೇ. ಖಂಡಿತ ಇದೆ ಮತ್ತು ಚಳವಳಿಯಲ್ಲಿ ಭಾಗವಹಿಸಿದ ಬಹುತೇಕರು ಪ್ರಜ್ಞಾಪೂರ್ವಕವಾಗಿಯೇ ಈ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಆಂದೋಲನದ ಸಾಂಸ್ಥಿಕ ಸ್ವರೂಪದ ಜೊತೆಗೆ ಬೇರೆ ಬೇರೆ ಪ್ರತಿಭಟನೆ ಹೋಲಿಸುವುದು ಎಷ್ಟರ ಮಟ್ಟಿಗೆ ಸರಿ. ಭ್ರಷ್ಟಾಚಾರ ಪ್ರತಿಯೊಬ್ಬರಿಗೂ ಬಿಸಿ ಮುಟ್ಟಿಸಿದೆ, ವೈಯಕ್ತಿಕ ಸ್ತರಗಳಲ್ಲಿ ಅಪಾರ ನೋವುಂಟು ಮಾಡಿದೆ. ಇಂಥ ಸಂದರ್ಭದಲ್ಲಿ ಅಣ್ಣಾ ಹಜಾರೆ ಅವರಿಗೆಲ್ಲ ಧ್ವನಿಯಾದರು. ಇಂಥ ಧ್ವನಿ ಎದ್ದಿರುವುದು ಸ್ವಾಗತಾರ್ಹ.
ಸಮಾಜಶಾಸ್ತ್ರದ ವಿದ್ಯಾರ್ಥಿಯಾಗಿ ಮತ್ತು ಓರ್ವ ಪತ್ರಕರ್ತನಾಗಿ ಇದನ್ನು ನಾನು ಕ್ರಾಂತಿ ಎನ್ನುವುದಿಲ್ಲ. ಆದರೆ ಇದನ್ನೊಂದು ಕ್ರಾಂತಿ ಸ್ವರೂಪಕ್ಕೆ ಕೊಂಡೋಯ್ಯಬಹುದಾದ ಎಲ್ಲ ಕಿಡಿಗಳು ಇದರಲ್ಲಿವೆ. ಕಳೆದ ಆರು ದಶಕಗಳಿಂದ ಇಂಥದೊಂದು ಸನ್ನಿವೇಶ ನಿರ್ಮಾಣವಾಗಿರಲಿಲ್ಲ. ಜೆಪಿ ಚಳವಳಿಗೂ ಹೆಚ್ಚಿನ ಪ್ರಖರತೆ ಈ ಚಳವಳಿಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ನೋವುಂಡವರ ಮತ್ತು ವ್ಯವಸ್ಥೆ ಬಗ್ಗೆ ಕಿಡಿ ಕಾರುವವರ ಸಂಖ್ಯೆ ಹೆಚ್ಚಿರುವುದು ಜೊತೆಗೆ ಮಾಧ್ಯಮಗಳ ಮಹಾಪೂರದ ಸುದ್ದಿಗಳು. ಇದನ್ನೆಲ್ಲ ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕಾಗಿದೆ. ಈಜಿಪ್ಟ್ ಮತ್ತು ಲಿಬಿಯಾದ ಚಳವಳಿಗಳಲ್ಲಿ ಎದುರು ವ್ಯವಸ್ಥೆಯಿಲ್ಲ. ವ್ಯಕ್ತಿಗಳಿದ್ದಾರೆ. ಅಲ್ಲಿ ಗುರಿಯಿರುವಂತೆ-ಶತ್ರುವಿರುವಂತೆ ಇಲ್ಲಿಯೂ ಗುರಿ ಮತ್ತು ಶತ್ರು ಎರಡೂ ಇದೆ. ಆ ಶತ್ರುವೇ ಭ್ರಷ್ಟಾಚಾರದ ವ್ಯವಸ್ಥೆ. ಇದರ ವಿರುದ್ಧ ಕೂಗು ಎದ್ದಿರುವುದು ಪ್ರಬಲ ಬೆಳವಣಿಗೆ. ಅಷ್ಟಕ್ಕೂ ಸಾಮಾನ್ಯವಾಗಿ ಎಲ್ಲ ಚಳವಳಿಗಳ ಮುಂಚೂಣಿಯಲ್ಲಿರುವವರು ಮಧ್ಯಮವರ್ಗದವರೇ. ವ್ಯವಸ್ಥೆ ಬದಲಿಸುವ ತಾಕತ್ತು ಇರುವುದು ಇವರಿಗೆ.
‘ಸಮರಶೀಲ ಜನರ ಚಳವಳಿಯ ಮೂಲಕ ಬದಲಿಸುವ ಮೂಲಕ ಮಾತ್ರ ಭ್ರಷ್ಟಾಚಾರ ನಿಲ್ಲುತ್ತದೆ’ ಹೀಗೆಂದರೆ ಏನು…? ಬಂದೂಕಿನ ನಳಿಗೆ ಮುಖಾಂತರವೇ ಬದಲಾವಣೆ ಆಗಬೇಕೆನ್ನವುದೇ. ಈಗ ನಡೆಯುತ್ತಿರುವ ಚಳವಳಿ ತನ್ನಷ್ಟಕ್ಕೆ ಶಾಂತಿಯುತ ಸಮರಶೀಲ ಸ್ವರೂಪ ಪಡೆದುಕೊಳ್ಳುತ್ತಿರುವುದು ಕಾಣುತ್ತಿದೆಯಲ್ಲವೇ. ಅಷ್ಟಕ್ಕೂ ಬದಲಾವಣೆ ಎನ್ನುವುದು ಧುತ್ತನೇ ಆಗುವುದಲ್ಲ. ಬದಲಾವಣೆಗೆ ಬೇಕಾದ ಸನ್ನಿವೇಶಗಳು ನಿರ್ಮಾಣವಾಗುತ್ತಿದೆ ಎಂದು ಆಶಿಸಬಾರದೇಕೆ
ಚಳುವಳಿಗಳೆ ಸತ್ತುಹೋದ ಈ ಕಾಲದಲ್ಲಿ ಕೋಟಿ ಜನರನ್ನು ಒಗ್ಗೂಡಿಸಿದ ಒಂದು ಚರಿತ್ರಾರ್ಹ ಹೋರಾಟ ಇದು. ಬ್ರಷ್ಟಾಚಾರ ಸೋತಿಲ್ಲ ನಿಜ ಆದರೆ ಮೊದಲಬಾರಿಗೆ ಅದು ಹೆದರಿದೆ …
ಪಾಪ ಲೇಖಕರಿಗೆ ಅದು ಕಾಣಲೇ ಇಲ್ಲ.
+1 to ಚಂದ್ರಹಾಸ
ಯಾವುದೇ ಒಂದು ಸಮಸ್ಯೆಯನ್ನು ಎಲ್ಲಾ ಮಗ್ಗಲುಗಳಿಂದ ನೋಡಿದಾಗ ಮಾತ್ರ , ಅದರ ಒಳಗಿನ ವಾಸ್ತವ ಸಂಗತಿಗಳು ಸ್ಪಷ್ಟವಾಗಿ ಗೋಚರಿಸುತ್ತವೆ . ಶಿವಸುಂದರ್ ಅವರ ವಿಚಾರಗಳು ಸತ್ಯವಾಗಿವೆ , ಆದರೆ ಮೇಲು ಮಧ್ಯಮ ವರ್ಗದ ನಾವು ಇದನ್ನು ಒಪ್ಪುವುದಿಲ್ಲ . ಏಕೆಂದರೆ ಇದನ್ನು ಒಪ್ಪಿಕೊಂಡರೆ ,ನಮ್ಮ ಬುಡಕ್ಕೆ ಪೆಟ್ಟು ಬೀಳುತ್ತದೆ .
ಸಿ.ಪಿ.ನಾಗರಾಜ
ಶಿವಸುಂದರ್ ಅವರ ಅಭಿಪ್ರಾಯಗಳಿಗೆ ನನ್ನ ಕೆಲವು ಅನಿಸಿಕೆಗಳು ;
1 ಅಣ್ಣಾ ಹಜಾರೆಯವರ ಚಳುವಳಿಗೆ ಬೆಂಬಲವನ್ನು ನೋಡಿದಾಗ ಇದೊಂದು ಸಮೂಹಸನ್ನಿ ಎನ್ನಿಸಿದ್ದು ನಿಜವೆ. ಭ್ರಷ್ಟಾಚಾರ ತೊಲಗಬೇಕೆಂಬ ಅವರ ಆಶಯ ಪ್ರಾಮಾಣಿಕವಾಗಿದ್ದರೂ, ಅದರ ಬಗ್ಗೆ ಸ್ವಷ್ಟ ತಿಳುವಳಿಕೆಯಿಲ್ಲದಿರುವುದು
ಕಂಡುಬರುತ್ತಿತ್ತು. ಹಿಂದೆ ಗುರು ಇದ್ದ. ಮುಂದೆ ಗುರಿಯಿತ್ತು. ಆದರೆ ಇಂದು ಹಿಂದೆ ಗುರುವೂ ಇಲ್ಲ. ಮುಂದೆ
ಗುರಿಯು ಇಲ್ಲ.” ಎಂದು ಕವಿ ಕುವೆಂಪು ಹೇಳಿರುವುದು ನೆನಪಿಗೆ ಬರುತ್ತದೆ.
2 ಎಲ್ಲರ ಕಣ್ಣು ರಾಜಕಾರಣಿಗಳ ಭ್ರೃಷ್ಟಾಚಾರದ ಮೇಲೆಯೆ ಹೊರತು, ಉದ್ಯಮಿಗಳ ಶಾಸನಬಧ್ಧ ಭ್ರಷ್ಟಾಚಾರದ ಬಗ್ಗೆ ಮೇಲಲ್ಲ. ಇಬ್ಬರು ಒಂದಾಗಿ ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಶಿವಸುಂದರ್ ಅವರ ವಾದ ಸಮಂಜಸವಾಗಿದೆ
3 ಗುಜರಾತ ರಾಜ್ಯದ ಮೋದಿ ಹಾಗೂ ನಿತೀಶ್ ಬಗ್ಗೆ ಹೇಳಿರುವುದರಲ್ಲಿ ತಪ್ಪಿಲ್ಲ. ಎಲ್ಲವನ್ನು ಅನುಮಾನಿಸಬಾರದು
4 ಈ ಚಳುವಳಿಯು ಹೈಜಾಕ್ ಆಗಿರುವಾದು ನಿಜವಾದರೂ, ಪ್ರತಿಯೊಂದು ದೇಶಕ್ಕೊ ಒಬ್ಬ ಸಮರ್ಥ ನಾಯಕನ
ನಾಯಕನ ಅಗತ್ಯವಿರುತ್ತದೆ ಎಂಬುದು ಪ್ರಪಂಚದ ಇತಿಹಾಸವನ್ನು ಗಮನಿಸಿದಾಗ ತಿಳಿಯುತ್ತದೆ. ಉದಾ ;ಗಾಂಧಿ,
ಅಂಬೇಡ್ಕರ್. ಅಬ್ರಹಂಲಿಂಕನ್, ಬಸವಣ್ಣ, ನೆಲ್ಸನ್ ಮಂಡೇಲ, ಇತ್ಯಾದಿ. ಜನರನ್ನು ಮುನ್ನೆಡೆಸುವಂತಹ ನಾಯಕ
ಬೇಕಾಗಿದ್ದಾನೆ.
5 ಪ್ರಗತಿಪರರು, ಚಿಂತನಕಾರರು ಆದ ನಿಮ್ಮಂತಹವರು ಕೇವಲ ಲೋಪಗಳನ್ನು ತೋರಿಸದೆ, ಅವುಗಳಿಗೆ ಪರಿಹಾರ
ಮಾರ್ಗಗಳನ್ನು ಸೂಚಿಸಬೇಕು. ಇದು ನಮ್ಮಂತಹ ಜನಸಾಮಾನ್ಯರ ಆಶಯ.
The simmering discontent of the people of our country against corruption has manifested in large scale support for Anna Hazare’s fight. Corruption has engulfed all sectors of our society starting from legislature, executive, judiciary and now the media too. Not just that. You cannot brush aside Religious mutts, godmen, Corporate sector and so on. That is why a comprehensive bill which encompasses all section of the society is the need of the hour. But remember, just an Act of Parliament cannot eradicate corruption. Corruption is in the womb of this system. As long as inequality, poverty, exploitation persists corruption continues. Billionairs who were just 7 in number have now increased to 54. It is almost during the same period more than 2 lakh farmers of our country committed suicide. There is a direct link between increased no. of bilionaires and farmers death. More no of people accumulated more wealth at the cost of vast majority of people. If you dont call this corruption what else? Unless and until we fight this inequal system all our talk of fighting corruption would be a sham!
ಮೇಲ್ನೋಟಕ್ಕೆ ಇದೊಂದು ಪೂರ್ವಗ್ರಹ ಪೀಡಿತ ಬರಹದಂತೆ ಕಾಣುತ್ತಿದೆ.
ವಾರ್ತಾಭಾರತಿಯಿಂದ ದಾರಿ ತಪ್ಪಿ ಇತ್ತ ಬಂದಿದ್ದಾದರೂ ಹೇಗೆ?
ಈ ವಿಚಾರದಲ್ಲಿ ಚರ್ಚೆ ಅನವಶ್ಯಕ.
ಸಾಧ್ಯವಿದ್ದರೆ ಭ್ರಷ್ಟಾಚಾರ ನಿರ್ಮೂಲನಾ ಆಂದೋಲನದಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ.
ನನ್ನ ಪ್ರಕಾರ ನಿಸ್ವಾರ್ಥ ರಾಷ್ಟ್ರೀಯ ನಾಯಕತ್ವದ ಕೊರತೆ ಇಂದು ನೀಗಿದೆ.
ಕಳೆದ ಶನಿವಾರ ಉದಯವಾಣಿಯ ಮಣಿಪಾಲ ಮತ್ತು ಮುಂಬಯಿ ಆವೃತ್ತಿಗಳಲ್ಲಿ ಪ್ರಕಟವಾಗಿರುವ ನನ್ನ ಅನಿಸಿಕೆಗಳನ್ನು ಇಲ್ಲಿ ಕೊಡಮಾಡುತ್ತಿದ್ದೇನೆ.
http://athradi.wordpress.com/2011/04/18/corruption/
ಸರಿಯಾದ ಕೊಂಡಿ ಇಲ್ಲಿದೆ: http://74.127.61.106/epaper/PDF/2011-04-16/Man16041106M.pdf
shivasundar avara baraha akshrasha satya. nammalli aanekha manasugalu idannu oppikkolluvudilla. kaarana satya yavagalu kahiyagiruttade.
ಕೆಲವು ವಾರಗಳ ಹಿಂದೆ ಪ್ರಜಾವಾಣಿಯಲ್ಲಿ ಜನಲೋಕಪಾಲ್ ಮಸೂದೆಯ ಕುರಿತಾದ ದಿನೇಶ್ ಅಮೀನ್ ಮಟ್ಟು ಅವರ ಲೇಖನವೂ ಹೆಚ್ಚುಕಮ್ಮಿ ಇದೇ ತೆರನಾದ ದೂರಗಾಮಿ ಅಂಶಗಳನ್ನೇ ಒಳಗೊಂಡಿತ್ತು. ಪ್ರಸ್ತುತ ಮಸೂದೆಯ ಆತ್ಯಂತಿಕ ಪರಿಣಾಮಗಳ ಬಗೆಗಿನ ಸುಂದರ ಸ್ವಪ್ನದಲ್ಲಿ ತೇಲಾಡುತ್ತಿರುವ ಜನಸಾಮಾನ್ಯರಿಗಂತೂ ಈ ಸಂದರ್ಭದಲ್ಲಿ ಆ ಕುರಿತಾದ ನಕಾರಾತ್ಮಕ ಅಂಶಗಳನ್ನು ಒಪ್ಪಿ ಅರಗಿಸಿಕೊಳ್ಳುವ ಮಾನಸಿಕ ಸ್ಥಿತಿಯೇ ಇದ್ದಂತಿಲ್ಲ. ಭ್ರಷ್ಟಾಚಾರ ನಿಯಂತ್ರಣದ ವಿಚಾರವಾಗಿ ತೀವ್ರ ಹತಾಶೆಯ ಹಂತ ತಲುಪಿರುವ ಈ ದೇಶದ ಮನಸ್ಸುಗಳಿಗೆ ಹುಲ್ಲುಕಡ್ಡಿಯ ಆಸರೆಯಾದರೂ ,ಅದು ವಜ್ರಾಯುಧದಂತೆ ಗೋಚರಿಸುತ್ತಿರುವುದೂ ಇದೇ ಕಾರಣಕ್ಕೆ!ಆದರೂ ಸುಲಭವಾಗಿ ದಕ್ಕುವ ಯಾವುದೇ ಯಶಸ್ಸಿನ ಬಗೆಗೂ ಒಂದು ನಿರ್ದಿಷ್ಟ ಕೋನದ ಎಚ್ಚರ ಇರಲೇಬೇಕು. ಈ ದೃಷ್ಟಿಯಿಂದಲೇ ದಿನೇಶ್ ಅಮೀನ್ ಮಟ್ಟು ಹಾಗೂ ಶಿವಸುಂದರ್ ಅವರ ಅಭಿಪ್ರಾಯಗಳನ್ನು ನಾವು ಸದಭಿಪ್ರಾಯ ಸಹಿತ ಎಚ್ಚರದ ಸೂಕ್ಷ್ಮತೆಯೊಂದಿಗೇ ಪರಿಭಾವಿಸಬೇಕಿದೆ.
ಪ್ರಸ್ತುತ ಭೂ ಕಾಯ್ದೆಯ ನೀತಿ-ನಿಯಮಾವಳಿಗಳನ್ನೇ ತಿರುಚಿ ಕೃಷಿ ಭೂಮಿಯನ್ನೇ ರೆಸಾರ್ಟ್ ಮಾಡಹೊರಟಿದ್ದ ನನ್ನ ಗೊತ್ತಿನ ಪ್ರಭಾವಿ ಉದ್ಯಮಿಯೊಬ್ಬರು ಮೊನ್ನೆಮೊನ್ನೆ ಅಣ್ಣಾ ಹಜಾರೆಯವರ ಚಳವಳಿಯನ್ನು ಬೆಂಬಲಿಸಿ,ಸಮಾನ ಮನಸ್ಕರನ್ನು(!) ಒಗ್ಗೂಡಿಸಿ, ಭ್ರಷ್ಟಾಚಾರದ ವಿರುದ್ಧ ಅಹೋರಾತ್ರಿ “ಕ್ಯಾಂಪೇನ್” ಹೂಡಿದ್ದ ಚಿತ್ರ ನನ್ನ ಕಣ್ಣಲ್ಲಿನ್ನೂ ಬಿರುಗಾಳಿಯೆಬ್ಬಿಸುತ್ತಿದೆ! – ದಿನೇಶ್ ಕುಕ್ಕುಜಡ್ಕ