‘ಬುರ್ಖಾ ಮತ್ತು ಮಹಿಳಾ ಸಬಲೀಕರಣ’ ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದ ಒಳಗೆ ಮತ್ತು ಹೊರಗೆ ಚರ್ಚೆಗಳು ನಡೆಯುತ್ತಿವೆ.
ಈ ವಿಷಯದ ಬಗ್ಗೆ ಎರಡು ಬರಹಗಳು ಇಲ್ಲಿವೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.
ದಯವಿಟ್ಟು ಗಮನಿಸಿ, ಇಲ್ಲಿ ಚರ್ಚೆ ವಸ್ತು ಪ್ರಧಾನವಾಗಿರಲಿ, ಅವಹೇಳನ ಬೇಡ.
***
ಬಿ ಎಂ ಬಶೀರ್
ಸೆಪ್ಟೆಂಬರ್ ೫ರಂದು ಮಂಗಳೂರಿನಲ್ಲಿ ನಡೆದ ನನ್ನ ‘ಬಾಡೂಟದ ಜೊತೆಗೆ ಗಾಂಧಿ ಜಯಂತಿ’ ಕೃತಿ ಬಿಡುಗಡೆಯ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅಮೀನ್ ಮಟ್ಟು ಅವರು ಅತ್ಯಂತ ಪ್ರಜ್ಞಾಪೂರ್ವಕವಾಗಿ ಮಾತನಾಡಿದರು. ಇಡೀ ಭಾಷಣ ಅದ್ಭುತವಾಗಿತ್ತು. ಜೊತೆಗೆ ಭಾಷಣದಲ್ಲಿ ಅವರು ಮೊದಲೇ ಹೇಳಿಕೊಂಡಂತೆ ಆ ಮಾತುಗಳು ಪ್ರಜ್ಞಾಪೂರ್ವಕವಾಗಿಯೂ ಇತ್ತು. ಸಾಧಾರಣವಾಗಿ ಇತ್ತೀಚಿನ ದಿನಗಳಲ್ಲಿ ಅವರನ್ನು ಎಲ್ಲರೂ ‘‘ನೀವು ಬರೇ ಹಿಂದೂಗಳ ಅಥವಾ ಬ್ರಾಹ್ಮಣ ಕಂಧಾಚಾರವನ್ನಷ್ಟೇ ಟೀಕಿಸುತ್ತೀರಿ. ಆದರೆ ಮುಸ್ಲಿಮರ ಕುರಿತಂತೆ ಏನನ್ನೂ ಮಾತನಾಡುವುದಿಲ್ಲ…’’ ಟೀಕಿಸುತ್ತಿದ್ದರು. ಅಥವಾ ಆ ಹೆಸರಿನಲ್ಲಿ ಅವರ ಬಾಯಿ ಮುಚ್ಚಿಸುವನ ಪ್ರಯತ್ನವನ್ನು ಮಾಡುತ್ತಿದ್ದರು. ಆ ಕೊರತೆಯನ್ನು ಎಲ್ಲೋ ತುಂಬಿಸುವ ಉಮೇದು ಅವರ ಮಾತಿನಲ್ಲಿ ಇದ್ದುದನ್ನು ನಾನು ಕಂಡೆ. ಆದರೆ ಆ ವೇದಿಕೆಗೆ ಅವರ ಮಾತುಗಳು ತೀರ ಅಗತ್ಯವಾಗಿತ್ತು ಎನ್ನುವುದೂ ಅಷ್ಟೇ ಸತ್ಯ. ನನ್ನ ಕೆಲವು ಗೆಳೆಯರು ಅಮೀನ್ ಭಾಷಣಕ್ಕೆ ನನ್ನಿಂದ ಸ್ಪಷ್ಟೀಕರಣವೊಂದನ್ನು ಅಥವಾ ಉತ್ತರವೊಂದನ್ನು ಬಯಸಿದ್ದು ನನಗೆ ಬಳಿಕ ಗೊತ್ತಾಯಿತು.
ಆದರೆ ಅಮೀನ್‌ಮಟ್ಟು ಭಾಷಣದಲ್ಲಿ ಸಣ್ಣದೊಂದು ವಿರೋಧಾಭಾಸವಿತ್ತು. ಅವರು ಬುರ್ಖಾದ ಸಮಸ್ಯೆಯನ್ನು ಎತ್ತಿಕೊಂಡರು. ಮೂಲಭೂತವಾದವೇ ಬುರ್ಖಾ ಅಸ್ತಿತ್ವದಲ್ಲಿರಲು ಕಾರಣ ಎಂದು ಕರೆದರು. ಆದರೆ ಅದು ಒಂದು ಸಮಸ್ಯೆಯೇನೂ ಅಲ್ಲ ಎಂಬ ಉತ್ತರವನ್ನೂ ತಮ್ಮ ಭಾಷಣದಲ್ಲೇ ನೀಡಿದ್ದರು. ನನ್ನ ಮಟ್ಟಿಗೆ ಅದು ಎರಡೂ ನಿಜವಾಗಿತ್ತು. ನಿಜಕ್ಕೂ ಬುರ್ಖಾ ಪೂರ್ಣವಾಗಿ ಮೂಲಭೂತವಾದದ ಫಲವೇ ಆಗಿದ್ದರೆ, ಮೂಲಭೂತವಾದಿಗಳಿಂದಲೇ ತುಂಬಿಕೊಂಡಿರುವ ಪಾಕಿಸ್ತಾನದ ಅಂದಿನ ಪ್ರಧಾನಿ ಬುರ್ಖಾ ಹಾಕಿಕೊಂಡೇ ಓಡಾಡುವ ಸ್ಥಿತಿ ನಿರ್ಮಾಣವಾಗಿ ಬಿಡುತ್ತಿತ್ತು. ಬಾಂಗ್ಲಾದಲ್ಲಿ ಬುರ್ಖಾ ಹಾಕದೇ ಇರುವ ಹಸೀನಾ ಅಥವಾ ಖಲೀದಾ ಜಿಯಾ ಅವರು ಪಕ್ಕಾ ಸೆಕ್ಯುಲರ್ ಏನೂ ಅಲ್ಲ. ಅವರೂ ಪಕ್ಕಾ ಧಾರ್ಮಿಕ ಮನಸ್ಥಿತಿ ಇರುವ ನಾಯಕರೇ ಆಗಿದ್ದಾರೆ. ಮತ್ತು ಇಡೀ ಬಾಂಗ್ಲಾ ದೇಶ ಅವರನ್ನು ಮುಸ್ಲಿಮ್ ಎಂದೇ ಸ್ವೀಕರಿಸಿದೆ. ತಸ್ಲೀಮಾರ ಜೊತೆಗಿರುವ ಭಿನ್ನಮತ ಬುರ್ಖಾ ಧರಿಸದೇ ಇರುವ ಖಲೀದಾ, ಹಸೀನಾರಂತಹ ನಾಯಕಿಯರ ಜೊತೆಗೆ ಹೊಂದಿಲ್ಲ. ತಸ್ಲೀಮಾ ನಸ್ರೀನ್‌ರಂತಹ ಲೇಖಕಿಯಿಂದ ಬಾಂಗ್ಲಾದ ಮುಸ್ಲಿಮ್ ಮಹಿಳೆಯರಿಗೆ ಪ್ರಯೋಜನವಾದುದಕ್ಕಿಂತ ನಷ್ಟವಾದೇ ಅಧಿಕ. ಯಾಕೆಂದರೆ ತಸ್ಲೀಮಾ ಇಂದು ಜಗತ್ತಿನಲ್ಲಿ ಗುರುತಿಸಲ್ಪಡುತ್ತಿರುವುದು ಬಾಂಗ್ಲಾದ ಮಧ್ಯಮ ವರ್ಗದ ವಿರೋಧಗಳ ಮೂಲಕವಾಗಿದೆ.
ತಸ್ಲೀಮಾ ಇಂದು ಮುಖ್ಯವಾಗುತ್ತಿರುವುದು ಬಾಂಗ್ಲಾದ ತನ್ನದೇ ಜನ ಸಮುದಾಯದ ಹೆಣ್ಣು ಮಕ್ಕಳಿಗಲ್ಲ. ಅಮೆರಿಕದ ಶಕ್ತಿಗಳಿಗೆ ತಸ್ಲೀಮಾ ಬೇಕು. ರಶ್ದಿಯೂ ಬೇಕು. ಮಧ್ಯ ಪ್ರಾಚ್ಯದ ನಿಜವಾದ ಸಮಸ್ಯೆಗಳಿಗೆ ಧ್ವನಿಯೆತ್ತುತ್ತಾ, ಅಲ್ಲಿನ ಜನರ ಶಿಕ್ಷಣ, ಸಾಮಾಜಿಕ ಅಭಿವೃದ್ಧಿಗೆ ಹೋರಾಡುತ್ತಿರುವ ನೂರಾರು ಮುಸ್ಲಿಮ್ ಬರಹಗಾರರಿಗೆ, ಕಾರ್ಯಕರ್ತರಿಗೆ ಕೊಟ್ಟ ಬೆಲೆಗಿಂತ ದೊಡ್ಡ ಗೌರವವನ್ನು ರಶ್ದಿ ಮತ್ತು ತಸ್ಲೀಮಾ ಇವರಿಗೆ ಅಮೆರಿಕ ನೀಡುವುದಕ್ಕೆ ಇದೇ ಕಾರಣ. ಹತ್ತು ಹಲವು ಹೆಣ್ಣು ಮಕ್ಕಳೊಂದಿಗೆ ಮಜಾ ಉಡಾಯಿಸುತ್ತಾ, ತಲಾಕ್ ನೀಡುತ್ತಾ, ಮತ್ತೆ ಮದುವೆಯಾಗುತ್ತಾ ಬೇಜವಾಬ್ದಾರಿ ಹೇಳಿಕೆ ನೀಡುತ್ತಾ, ಮುಸ್ಲಿಮ್ ಮೂಲಭೂತವಾದವನ್ನು ವಿರೋಧಿಸುವ ಹೆಸರಿನಲ್ಲೇ ಅಮೆರಿಕದ ಅಂತಃಪುರದಲ್ಲಿ ವಿಲಾಸಿ ಬದುಕನ್ನು ಕಳೆಯುತ್ತಿರುವ ರಶ್ದಿ ಸಮಯ ಸಾಧಕ ಬರಹಗಾರನಾಗಿಯಷ್ಟೇ ನನಗೆ ಭಾಸವಾಗುತ್ತಾನೆ. ತಸ್ಲೀಮಾ ನಸ್ರೀನ್ ಒಬ್ಬ ಹೆಣ್ಣು ಮಗಳು ಎನ್ನುವ ಕಾರಣಕ್ಕಾಗಿ ಮತ್ತು ಹಲವು ಸಂದರ್ಭಗಳಲ್ಲಿ ಆಕೆ ಬಾಂಗ್ಲಾದ ಹಿಂದೂ ಅಲ್ಪಸಂಖ್ಯಾತರ ಬಗ್ಗೆ ನೀಡಿದ ದಿಟ್ಟ ಪ್ರತಿಕ್ರಿಯೆಗಾಗಿ ಆಕೆಯನ್ನು ಸಂಪೂರ್ಣ ನಿರಾಕರಿಸಲು ಸಾಧ್ಯವಾಗುವುದಿಲ್ಲ. ಈ ಎಲ್ಲ ಕಾರಣಗಳಿಂದ ನನಗೆ ಬಾಂಗ್ಲಾದಂತಹ ಧಾರ್ಮಿಕ ಒಲವುಳ್ಳ ದೇಶದಲ್ಲಿ ಪ್ರಧಾನಿಯಾಗಿಯು, ವಿರೋಧ ಪಕ್ಷದ ನಾಯಕರಾಗಿಯೂ ಯಶಸ್ವಿಯಾಗಿರುವ ಶೇಖ್ ಹಸೀನಾ, ಖಲೀದಾ ಜಿಯಾ ಮೊದಲಾದ ಹೆಣ್ಣು ಮಕ್ಕಳು ಹೆಚ್ಚು ಇಷ್ಟವಾಗುತ್ತಾರೆ. ಪಾಕಿಸ್ತಾನದಲ್ಲಿ ನನಗೆ ಬೇಜನಝೀರ್ ಭುಟ್ಟೋ ಇಷ್ಟವಾಗುವುದೂ ಇದೇ ಕಾರಣಕ್ಕೆ.
ಮೂಲಭೂತವಾದಿ ದೇಶಗಳು ಎಂದು ನಾವು ಭಾವಿಸಿಕೊಂಡಿರುವ ಪಾಕಿಸ್ತಾನ, ಬಾಂಗ್ಲಾದಲ್ಲಿ ಬುರ್ಖಾ ಹಾಕದೆಯೇ ಒಬ್ಬ ನಾಯಕಿಯಾಗಬಹುದು ಎಂದ ಮೇಲೆ, ಬುರ್ಖಾ ಎನ್ನುವುದು ಕೇವಲ ಮೂಲಭೂತವಾದಿ ಕಾರಣಗಳಿಂದಷ್ಟೇ ನೆಲೆನಿಂತಿರುವ ವ್ಯವಸ್ಥೆ ಅಲ್ಲ ಎನ್ನುವುದನ್ನು ಅಮೀನು ಮಟ್ಟು ಒಪ್ಪಿಕೊಂಡಂತೆಯೇ ಆಯಿತು. ಸಾರಾ ಅಬೂಬಕರ್ ಬುರ್ಖಾ ಹಾಕುವುದಿಲ್ಲ. ಅವರಂತೆ ನೀವೆಲ್ಲ ಯಾಕೆ ಇರಬಾರದು ಎಂದು ಕೆಲವರು ನನ್ನ ಸಮುದಾಯದ ಕೆಲವು ಬಡ ಹೆಣ್ಣು ಮಕ್ಕಳ ಬಳಿ ಕೇಳುವುದಿದೆ. ಸಾರಾ ಅಬೂಬಕರ್ ಬುರ್ಖಾ ಹಾಕುವುದಿಲ್ಲ ಎನ್ನುವ ಕಾರಣಕ್ಕಾಗಿ ಎಂದೂ ಸಮಾಜದಲ್ಲಿ ವಿವಾದಕ್ಕೊಳಗಾಗಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಕೇರಳ, ಕಾಸರಗೋಡು ಭಾಗದಿಂದ ಬಂದಿರುವ ಸಾರಾ ಅಬೂಬಕರ್ ಬುರ್ಖಾ ಹಾಕುವುದಿಲ್ಲ ಎನ್ನುವುದು ನನಗೆ ಅಚ್ಚರಿಯ ವಿಷಯವೇ ಅಲ್ಲ. ಯಾಕೆಂದರೆ ಕೇರಳದಲ್ಲಿ ಬುರ್ಖಾ ಎಂದೂ ಚರ್ಚೆಯ ವಿಷಯ ಆಗಿಲ್ಲ. ಅಲ್ಲಿ ಬುರ್ಖಾ ಧರಿಸುವವರೂ ಇದ್ದಾರೆ. ಹಾಗೆಯೇ ಬುರ್ಖಾ ಧರಿಸದೇ ದೈನಂದಿನ ಚಟುವಟಿಕೆಗಳನ್ನು ನಡೆಸುವವರೂ ಇದ್ದಾರೆ. ಹೆಚ್ಚಿನವರು ಸ್ಕಾರ್ಫ್‌ನ್ನು ಬಳಸುತ್ತಾರೆ. ಯಾರಾದರೂ ಪತ್ರಿಕೆಯವರು ಇದನ್ನು ಸುದ್ದಿಯಾಗಿ ಪ್ರಕಟಿಸಿದಾಗಷ್ಟೇ ಅದು ಚರ್ಚೆಯ, ವಿವಾದದ ವಿಷಯವಾಗುತ್ತದೆ. ‘ನೀವು ಯಾಕೆ ಬುರ್ಖಾ ಧರಿಸುತ್ತೀರಿ?’ ‘ನೀವು ಯಾಕೆ ಸ್ಕಾರ್ಫ್ ಧರಿಸುತ್ತೀರಿ?’ ಎನ್ನುವ ಪ್ರಶ್ನೆಗಳು ‘ನೀವು ಯಾಕೆ ಸ್ಕರ್ಟ್ ಧರಿಸುತ್ತೀರಿ?’ ‘ನೀವು ಯಾಕೆ ಜೀನ್ಸ್ ಧರಿಸುತ್ತೀರಿ?’ ಎನ್ನುವ ಪ್ರಶ್ನೆಯಷ್ಟೇ ಬೇಜವಾಬ್ದಾರಿತನದಿಂದ ಕೂಡಿದ್ದು.
ಬಟ್ಟೆ ಎನ್ನುವುದು ನಂಬಿಕೆಗೆ ಸಂಬಂಧಿಸಿದ ವಿಷಯವಲ್ಲ. ಅದು ಸಂವೇದನೆಗೆ ಸಂಬಂಧಿಸಿದ ವಿಷಯ. ‘ನೀನು ಯಾಕೆ ಮೈ ತುಂಬಾ ಬಟ್ಟೆ ಧರಿಸುತ್ತಿದ್ದೀಯ?’ ಎಂದು ನನ್ನ ಅಮ್ಮನ ಜೊತೆಗೆ ನಾನು ಕೇಳುವುದು ಅಥವಾ ಆ ಕುರಿತಂತೆ ಅವಳಿಗೆ ಗುಪ್ತ ಮತದಾನದ ಅವಕಾಶ ನೀಡುವುದು ಇತ್ಯಾದಿಗಳೆಲ್ಲ ಹಾಸ್ಯಾಸ್ಪದ ವಿಷಯ. ಮೈ ತುಂಬಾ ಬಟ್ಟೆ ಹಾಕುವ ಹೆಣ್ಣಿಗೆ ಜೀನ್ಸ್ ಅಥವಾ ಚೂಡಿಧಾರವನ್ನು ಕೊಟ್ಟು ‘ಇದನ್ನು ಧರಿಸಿ ನೀನು ಸಾರ್ವಜನಿಕವಾಗಿ ಓಡಾಡಬೇಕು’ ಎಂದು ಆದೇಶ ನೀಡುವುದು, ಒಬ್ಬ ಅರೆಬರೆ ಬಟ್ಟೆ ಧರಿಸುತ್ತಾ ಬದುಕನ್ನು ರೂಢಿಸಿಕೊಂಡ ಹೆಣ್ಣಿಗೆ ಜರತಾರಿ ಸೀರೆಯನ್ನು ಕೊಟ್ಟಂತೆಯೇ ಆಗಿದೆ. ಇಬ್ಬರ ಸಂವೇದನೆಯನ್ನೂ ಅದು ಘಾಸಿ ಮಾಡಬಲ್ಲುದು. ಸೀರೆ, ರವಿಕೆ ಧರಿಸುವ ಒಬ್ಬ ತಾಯಿಗೆ ಚೂಡಿಧಾರ ಧರಿಸುವಂತೆ ಒತ್ತಾಯಿಸಿದರೆ ಅದು ಎಷ್ಟು ಅಭಾಸವಾಗಬಹುದೋ ಹಾಗೆಯೇ, ಮೈ ತುಂಬಾ ಬಟ್ಟೆ ಧರಿಸಿದ ಹೆಣ್ಣಿನ ಮುಂದೆ ನಾವು ನಮ್ಮ ಇಷ್ಟದ ಬಟ್ಟೆಗಳನ್ನು ಇಟ್ಟು ‘ಧರಿಸಿಕೋ’ ಎನ್ನುವುದು ಕೂಡ. ಬಟ್ಟೆ ಎನ್ನುವುದು ಧರಿಸುವವರ ಆಯ್ಕೆಯೇ ಹೊರತು, ನೋಡುವವರ ಆಯ್ಕೆ ಅಲ್ಲ. ಯಾವುದು ಬುರ್ಖಾ? ಇದುವೇ ಬುರ್ಖಾ ಎನ್ನುವುದಕ್ಕೆ ಕುರ್‌ಆನ್‌ನಲ್ಲಾಗಲಿ, ಇಸ್ಲಾಮ್‌ನಲ್ಲಾಗಲಿ ಸ್ಪಷ್ಟ ವ್ಯಾಖ್ಯಾನವೇ ಇಲ್ಲ. ಇಂದಿಗೂ ದೇಶ, ಕಾಲಕ್ಕನುಗುಣವಾಗಿ ಬುರ್ಖಾಗಳಿಗೆ ಬಟ್ಟೆ ಉದ್ಯಮಗಳೇ ವ್ಯಾಖ್ಯಾನಗಳನ್ನು ನೀಡುತ್ತಾ ಬಂದಿವೆ. ಮೈ ತುಂಬಾ ಬಟ್ಟೆ ಹಾಕಿಕೊಳ್ಳುವುದಕ್ಕೆ ಇಸ್ಲಾಮ್ ಕಲಿಸುತ್ತದೆ ಎನ್ನುವುದನ್ನು ನಾನು ಓದಿದ್ದೇನೆ. ಆದರೆ ಬಟ್ಟೆಯ ಮೇಲೆ ಇನ್ನೊಂದು ಪೂರ್ಣ ಪ್ರಮಾಣದ ಬಟ್ಟೆಯನ್ನು ಹಾಕಿಕೊಳ್ಳಲಾಗಲಿ, ಮುಖವನ್ನು ಸಂಪೂರ್ಣ ಮುಚ್ಚಿಕೊಳ್ಳಲಾಗಲಿ ಎಲ್ಲೂ ಸ್ಪಷ್ಟ ಉಲ್ಲೇಖ ಇಲ್ಲ. ಬಟ್ಟೆ ಬದುಕಿನ ಭಾಗವಾಗಿ, ಸಾಂಸ್ಕೃತಿಕ ಬದಲಾವಣೆಯ ನೆಲೆಯಲ್ಲಿ ಹುಟ್ಟಿ ಬೇರೆ ಬೇರೆ ರೂಪಗಳನ್ನು ತಾಳುತ್ತಾ ಬಂದಿದೆ. ಭಾರತದ ಒಂದೊಂದು ಕಡೆ ಒಂದು ರೀತಿಯ ವಸ್ತ್ರ ಧಾರಣೆಗಳನ್ನು ಮಾಡುತ್ತಾರೆ. ಅದು ಅವರ ಸಂಸ್ಕೃತಿಯ ಭಾಗವಾಗಿದೆಯೇ ಹೊರತು ಧರ್ಮದ ಭಾಗವಾಗಿಲ್ಲ. ಬುರ್ಖಾ, ಸ್ಕಾರ್ಫ್ ಇತ್ಯಾದಿಗಳನ್ನು ತೊರೆಯುವುದು ವೈಚಾರಿಕತೆಯ ಭಾಗವೇ ಆಗಿದ್ದರೆ, ನನ್ನ ಬಾಲ್ಯದಲ್ಲಿ ನಾನು ಕಂಡ ಮರಿಯಮ್ಮಾದ, ಅವ್ವಮ್ಮಾದ, ಪಲ್ಲಿಮ್ಮಾದ ಇವರೆಲ್ಲ ಸಾರಾ ಅಬೂಬಕರ್ ಅವರಿಗಿಂತ ಮೊದಲೇ ಹುಟ್ಟಿದ ವಿಚಾರವಾದಿಗಳು. ಯಾಕೆಂದರೆ ಇವರು ಕಾಡಿಗೆ, ಗದ್ದೆಗೆ, ನದಿಗೆ ಹೋಗುವಾಗ ಬುರ್ಖಾ ಧರಿಸಿ ಹೋಗುತ್ತಿರಲಿಲ್ಲ.

ತಲೆಗೊಂದು ತಲೆವಸ್ತ್ರ. ಉದ್ದ ಕೈಯ ಕುಪ್ಪಸ. ಹಸಿರು ಅಥವಾ ನೀಲಿ ಬಣ್ಣದ ಸೀರೆ. ಕೈಯಲ್ಲೊಂದು ಕತ್ತಿ. ಹಾಗೆಂದು ಇವರೇನೂ ಇಸ್ಲಾಮ್ ಧರ್ಮದಿಂದ ಬಹಿಷ್ಕೃತರೇನೂ ಆಗಿಲ್ಲ. ನಾನು ಬಾಲ್ಯದಲ್ಲಿರುವಾಗ ಈ ಕಪ್ಪು ಬುರ್ಖಾಗಳು ಇರಲಿಲ್ಲ. ಬದಲಿಗೆ ‘ವಲ್ಲಿ’ ಎನ್ನುವ ವಸ್ತ್ರವನ್ನು ಹೊದ್ದುಕೊಳ್ಳುತ್ತಿದ್ದರು. ಅದು ಅವರ ಸಂಸ್ಕೃತಿಯ ಭಾಗವಾಗಿತ್ತು. ಸಂವೇದನೆಯ ಭಾಗವಾಗಿತ್ತು. ಡಬಲ್ ವಲ್ಲಿ ಎನ್ನುವುದೊಂದು ಇತ್ತು. ಇದನ್ನು ಇಬ್ಬರು ಹೆಂಗಸರು ಜೊತೆಯಾಗಿ ಹೊದ್ದುಕೊಳ್ಳುತ್ತಿದ್ದರು. ಇದಾದ ಬಳಿಕ ಲಂಗ ಬುರ್ಖಾ ಬಂತು. ನನ್ನ ತಾಯಿ ತನ್ನ ಜೀವನ ಪೂರ್ತಿ ಲಂಗ ಬುರ್ಖಾ ಹಾಕುತ್ತಿದ್ದರು. ಇದಾದ ಬಳಿಕ ಇದರಲ್ಲೇ ಬಗೆ ಬಗೆಯ ಕಲರ್ ಬುರ್ಖಾ ಬಂತು. ಇದು ಮುಗಿದ ಬಳಿಕ ‘ಡಿಸ್ಕೋ ಬುರ್ಖಾ’ ಎನ್ನುವುದು ಬಂತು. ಇದರಲ್ಲೂ ಬೇರೆ ಬೇರೆ ರೀತಿಯ ವೈವಿಧ್ಯಗಳಿದ್ದವು. ಮೊಣಕಾಲಿಗಿಂತ ಮೇಲೆ ಇರುವಂತಹದು. ಹಾಗೆಯೇ ಉದ್ದ ಕೈಗಳು, ಗಿಡ್ಡ ಕೈಗಳು. ಹಾಗೆಯೇ ತಲೆಗೆ ಧರಿಸುವ ಸ್ಕಾರ್ಫ್‌ನಲ್ಲಿಯೂ ವೈವಿಧ್ಯತೆಗಳು ಇದ್ದವು. ಅಂದ ಹಾಗೆ ಲಂಗ ಬುರ್ಖಾ, ಡಿಸ್ಕೋ ಬುರ್ಖಾ ಇತ್ಯಾದಿಗಳನ್ನೆಲ್ಲ ಯಾವುದೋ ಮೌಲ್ವಿಗಳು ಫತ್ವಾ ಹೊರಡಿಸಿ ಬಿಡುಗಡೆ ಮಾಡುತ್ತಿರಲಿಲ್ಲ. ಆಯಾಯ ಕಾಲಮಾನಕ್ಕೆ ತಕ್ಕಂತೆಯೇ ಮಾರುಕಟ್ಟೆಗಳು ಇದನ್ನು ಬಿಡುಗಡೆ ಮಾಡುತ್ತಿದ್ದವು. ಬುರ್ಖಾ ಎನ್ನುವುದು ಒಂದು ದೊಡ್ಡ ಉದ್ಯಮ. ಅದರ ಹಿಂದೆ ಬೃಹತ್ ವ್ಯಾಪಾರಿಗಳಿಂದ್ದಾರೆ. ಫ್ಯಾಶನ್ ಡಿಸೈನರ್‌ಗಳಿದ್ದಾರೆ. ಅವರ್ಯಾರೂ ಮದರಸಗಳಿಂದ ಬಂದವರಲ್ಲ. ಅತ್ಯಾಧುನಿಕ ವಸ್ತ್ರವಿನ್ಯಾಸಗಳನ್ನು ಕಲಿತು ಈ ಕ್ಷೇತ್ರಕ್ಕೆ ಕಾಲಿಟ್ಟವವರು. ಹಾಗೆಯೇ ತರುಣಿಯರು ತಮ್ಮ ಅಂತಸ್ತು, ವಿದ್ಯಾಭ್ಯಾಸ ಇವುಗಳಿಗೆ ಪೂರಕವಾಗಿ ತಮ್ಮ ತಮ್ಮ ಬುರ್ಖಾಗಳನ್ನು ಸ್ಕಾರ್ಫ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಹೀಗಿರುವಾಗ ಒಬ್ಬ ಮಹಿಳೆ ಧರಿಸಿದ ಧಿರಿಸಿಗೆ ನಾವು ಕೈ ಹಾಕುವುದು ಎಂದರೆ ಪರೋಕ್ಷವಾಗಿ ಆಕೆಯ ಸೆರಗಿಗೆ ಕೈ ಹಾಕಿದಂತೆಯೇ ಹೌದು.
ಇತ್ತೀಚೆಗೆ ಗಲ್ಫ್ ಶೈಲಿಯ ಬದುಕು ಒಂದು ಹೊಸ ಬುರ್ಖಾವನ್ನು ನಮ್ಮ ನಡುವೆ ತಂದಿದೆ. ಅದು ಭಾರತೀಯ ಬುರ್ಖಾಕ್ಕೆ ಭಿನ್ನವಾದುದು. ಬುರ್ಖಾ ಧರಿಸಿದ ಬಳಿಕ ಅರ್ಧ ಮುಖಕ್ಕೆ ಬಟ್ಟೆಯನ್ನು ಬಿಗಿದು ಕಟ್ಟುವುದು. ಇಷ್ಟೇ ಅಲ್ಲ. ಕೈಗೆ ಕಪ್ಪು ಗ್ಲೌಸ್‌ಗಳನ್ನು ಕೂಡ ಕೆಲವರು ಧರಿಸುತ್ತಾರೆ. ‘‘ಯಾರನ್ನೋ ಕೊಲೆ ಮಾಡಲು ಹೋಗುವುದಕ್ಕೆ ಸಿದ್ಧತೆಯಂತೆ’’ ನನಗೆ ಗ್ಲೌಸ್ ಕಂಡಿತ್ತು. ಅದೂ ತೀರಾ ಕೃತಕ ಮತ್ತು ಅತಿರೇಕದ ಎಲ್ಲ ಲಕ್ಷಣಗಳನ್ನು ಹೊಂದಿದ ಬುರ್ಖಾ ಆಗಿತ್ತು. ಯಾರನ್ನೋ ಪರೋಕ್ಷವಾಗಿ ಕೆರಳಿಸುವುದಕ್ಕಾಗಿ, ಮತ್ತು ಯಾರಿಗಾಗಿಯೋ ಧರಿಸಿದ್ದೇ ಹೊರತು ಅದು ಸಹಜವಾದ ಕ್ರಿಯೆ ಎಂದು ನನಗೆ ಅನ್ನಿಸಲಿಲ್ಲ. ವಿದೇಶದ ಹಣದ ಜೊತೆಗೆ ಬಂದ ಕೆಲವು ಸಿದ್ಧಾಂತಗಳು ತನ್ನ ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟುಕೊಂಡು ಬಂದ ಬುರ್ಖಾ ಅದಾಗಿತ್ತು. ವಿದೇಶದ ಹಣ ಮುಗಿದು ಹೋಗುವುದಕ್ಕೆ ಮುಂಚೆಯೇ ಈ ಬುರ್ಖಾ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಮೈ ತುಂಬಾ ಬಟ್ಟೆ ಧರಿಸಿದ, ಬುರ್ಖಾವನ್ನೇ ಧರಿಸದ ಎಷ್ಟೋ ಹೆಣ್ಣುಮಕ್ಕಳು ಇಂದು ನಮ್ಮ ನಡುವೆ ಬಹುಸಂಖ್ಯೆಯಲ್ಲಿದ್ದಾರೆ. ಇವರು ಯಾವ ಲೇಖಕಿಯರೂ ಅಲ್ಲ, ವೈಚಾರಿಕ ಚಿಂತಕಿಯರೂ ಅಲ್ಲ. ತಮ್ಮ ತಮ್ಮ ಬದುಕಿಗೆ ಪೂರಕವಾಗಿ ತೀರಾ ಸಹಜವಾಗಿ, ಗಿಡಗಳಲ್ಲಿ ಒಂದು ಹೂವು ಅರಳಿ, ಹಣ್ಣಾಗುವಂತೆಯೇ ಅವರು ತಮ್ಮ ತಮ್ಮ ವಸ್ತ್ರಗಳನ್ನು ಆರಿಸಿಕೊಂಡಿದ್ದಾರೆ. ಹಳತು ಹೋಗಿ ಹೊಸತು ಬಂದಿದೆ. ಆದುದರಿಂದಲೇ ಅದು ಯಾರ ಗಮನವನ್ನೂ ಸೆಳೆದಿಲ್ಲ. ಒಂದು ವೇಳೆ ಬುರ್ಖಾ ಉದುರುವುದಿದ್ದರೂ ಅದೇ ದಾರಿಯಲ್ಲಿ ಉದುರಬೇಕೇ ಹೊರತು, ಅದನ್ನು ಕಿತ್ತೆಗೆಯಲು ಹೋದಂತೆಯೇ ಅದು ಬಿಗಿಯಾಗುತ್ತಾ ಹೋಗುತ್ತದೆ. ಬಟ್ಟೆಗಾಗಿ ಬದುಕು ಅಲ್ಲ. ಬದುಕಿಗಾಗಿ ಬಟ್ಟೆ. ಅವರವರ ಬದುಕಿಗೆ ಪೂರಕವಾಗಿ ಬಟ್ಟೆಗಳಲ್ಲಿ ಬದಲಾವಣೆಗಳು ಕಾಣುತ್ತಾ ಹೋಗುತ್ತದೆ. ಹಿಂದೆ ಕಾಡಿಗೆ ಕಟ್ಟಿಗೆಗೆ ಹೋಗುವ ಮರಿಯಮ್ಮಾದ ಸ್ಕಾರ್ಫ್ ಧರಿಸದೇ ತಲೆವಸ್ತ್ರ ಹಿಂದಕ್ಕೆ ಕಟ್ಟಿ, ಬುರ್ಖಾ ಇಲ್ಲದೆ ಓಡಾಡುತ್ತಿದ್ದರು. ಇಸ್ಲಾಮಿನಿಂದ ಯಾರೂ ಅವರನ್ನು ಬಹಿಷ್ಕರಿಸಿರಲಿಲ್ಲ. ಅದೇ ಮರಿಯಮ್ಮಾದನ ಮಕ್ಕಳು ಮುಂದೆ ಗಲ್ಫ್‌ಗೆ ಹೋದರು. ಹಣವಾಯಿತು. ದೊಡ್ಡ ಬಂಗಲೆ ಕಟ್ಟಿದರು. ಅಲ್ಲಿಂದ ಬರುವಾಗ ಚಿತ್ರ ವಿಚಿತ್ರ ಬುರ್ಖಾವನ್ನು, ವಿಚಿತ್ರ ಬದುಕಿನ ಶೈಲಿಯನ್ನು ಹಿಡಿದುಕೊಂಡು ಬಂದರು. ಮರಿಯಮ್ಮಾದ ತನ್ನ ಜೀವನದ ಕೊನೆಯಲ್ಲಿ ಬುರ್ಖಾ ಧರಿಸುತ್ತಾ ‘ತಾನು ಕೂಡ ಎಲ್ಲರಂತೆ ಆದುದಕ್ಕೆ ಹೆಮ್ಮೆ ಪಡುತ್ತಾ’ ಬದುಕಿದರು. ಹೌದು. ಬುರ್ಖಾ ಅವರಿಗೆ ಅಂತಸ್ತಿನ ವಿಷಯವಾಗಿತ್ತು. ಮರ್ಯಾದಸ್ಥರ ವಿಷಯವಾಗಿತ್ತು. ಅವರ ಮಗ ಗಲ್ಫಿಗೆ ಹೋಗಿ ತನ್ನ ತಾಯಿಗೆ ಅದನ್ನು ತಂದುಕೊಟ್ಟಿದ್ದ. ಹಾಗೆಂದು ಮರಿಯಮ್ಮಾದನ ಮುಂದೆ ‘ಅದೆಲ್ಲ ಸುಳ್ಳು, ಅನಗತ್ಯ, ಮೂಲಭೂತವಾದ’ ಎಂದು ಅವರನ್ನು ಬುರ್ಖಾ ಧರಿಸದಂತೆ ನಾನು ಒತ್ತಾಯಿಸುವುದು ಭ್ರಾಮಕ ವೈಚಾರಿಕತೆಯ ಪರಮಾವಧಿ. ಅಂತಹ ವೈಚಾರಿಕತೆ ಈ ನೆಲದೊಂದಿಗೆ, ಶ್ರೀಸಾಮಾನ್ಯರ ಬದುಕಿನೊಂದಿಗೆ ಯಾವ ಸಂಬಂಧವನ್ನು ಹೊಂದಿರುವುದಿಲ್ಲ ಎಂದು ನಂಬಿದ್ದೇನೆ.
ಆದುದರಿಂದ ನಾನು ಧರಿಸುವ ಧಿರಿಸುವ ಬದಲಾಯಿಸುವ ಕಡೆಗೆ ಹೆಚ್ಚು ಆಸಕ್ತನಾಗಿಲ್ಲ. ಅವರ ಬದುಕಿನಲ್ಲಿ ಬದಲಾವಣೆಯಾಗಬೇಕು ಎನ್ನುವುದು ನನ್ನ ಆಶಯ. ಅವರು ಹೆಚ್ಚು ಶಿಕ್ಷಣವನ್ನು ಪಡೆಯಬೇಕು. ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಬೇಕು. ಅವರ ಬದುಕಿನಲ್ಲಿ ಅಮೂಲಾಗ್ರ ಬದಲಾವಣೆಯಾದಾಗ ಅವರ ವಸ್ತ್ರ ಧಾರಣೆ ಇತ್ಯಾದಿಗಳಲ್ಲೂ ಬದಲಾವಣೆಯಾಗಬಹುದು. ಅಥವಾ ಅವರಿಗೆ ವಸ್ತ್ರದಲ್ಲಿ ಬದಲಾವಣೆ ಇಷ್ಟವಿಲ್ಲದೆ ಇದ್ದರೆ, ನಾನಂತೂ ಅವರದನ್ನು ಬದಲಾಯಿಸಬೇಕು ಎಂದು ಬಯಸಲಾರೆ. ಒಂದು ಕಾಲದಲ್ಲಿ ಮುಸ್ಲಿಮ್ ಹೆಣ್ಣು ಮಕ್ಕಳು ಶಾಲೆ ಕಲಿಯುವುದೇ ಒಂದು ಅಪರೂಪದ ಸುದ್ದಿಯಾಗಿತ್ತು. ಸುಮಾರು 90ರ ಆರಂಭದಲ್ಲಿ ಡಿಗ್ರಿ ಮುಗಿಸಿದ ಒಂದೆಡೆರಡು ಹೆಣ್ಣು ಮಕ್ಕಳಷ್ಟೇ ಇದ್ದರು. ಆದರೆ ಇಂದು ಪದವಿ ಮಾಡದ ಹೆಣ್ಣು ಮಕ್ಕಳೇ ಇಲ್ಲ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಗ್ರಾಮೀಣ ಹೆಣ್ಣು ಮಕ್ಕಳು ಸ್ಕಾರ್ಫ್ ಹಾಕಿಕೊಂಡು, ತಮ್ಮದೇ ಒತ್ತಾಯದೊಂದಿಗೆ ಶಾಲೆಗೆ ಕಾಲಿಡತೊಡಗಿದರು. ಆಗ ಈ ಸ್ಕಾರ್ಫ್‌ನ ಕುರಿತಂತೆ ಸಂಘಪರಿವಾರ ವಿವಾದವನ್ನು ಎಬ್ಬಿಸಿತು. ಶಾಲೆಗೆ, ಕಾಲೇಜುಗಳಿಗೆ ಸ್ಕಾರ್ಫ್ ಹಾಕಿ ಪ್ರವೇಶಿಸಬಾರದು ಎಂದು ಕೆಲವರು ತಕರಾರು ತೆಗೆದರು. ಇದು ಎಷ್ಟರ ಮಟ್ಟಿಗೆ ಮುಂದೆ ಹೋಯಿತು ಎಂದರೆ ಎಷ್ಟೋ ಹೆಣ್ಣು ಮಕ್ಕಳು ಶಾಲೆ ತೊರೆಯುವಂತಹ ಸ್ಥಿತಿ ನಿರ್ಮಾಣ ಮಾಡಿತು. ಅಳಿದುಳಿದವರು ತಮ್ಮದೇ ಧಾರ್ಮಿಕ ಸಂಘಟನೆಗಳು ನಡೆಸುವ ಶಾಲಾ ಕಾಲೇಜುಗಳಿಗೆ ತೆರಳುವ ವಾತಾವರಣವನ್ನು ಸೃಷ್ಟಿಸಿತು.
ಇಂತಹ ಸಂದರ್ಭದಲ್ಲಿ ಕೆಲವು ಅರೆಬೆಂದ ವಿಚಾರವಾದಿಗಳೇ ‘‘ನಿಮಗೆ ಸ್ಕಾರ್ಫ್ ಬೇಕೋ-ಶಿಕ್ಷಣ ಬೇಕೋ’’ ಎನ್ನೋ ಬ್ಲಾಕ್‌ಮೇಲ್‌ಗೆ ಇಳಿದರು. ಕೆಲವು ಹೆಣ್ಣು ಮಕ್ಕಳು ಇದನ್ನು ದಿಟ್ಟವಾಗಿ ಪ್ರತಿಭಟಿಸಿದರು. ಸ್ಕಾರ್ಫ್ ಧರಿಸದೇ ಒಬ್ಬ ಹೆಣ್ಣಿಗೆ ಹೊರಗೆ ಇಳಿಯಲು ಅಸಾಧ್ಯವಾಗುತ್ತದೆ ಎನ್ನುವುದಾದರೆ ಆ ಸಂವೇದನೆಯನ್ನು ನಾವು ಗೌರವಿಸಬೇಕು. ಹೆಣ್ಣು ಮಕ್ಕಳನ್ನು ಯಾವ ರೀತಿಯಲ್ಲಾದರೂ ಒಲಿಸಿ ಶಾಲೆ, ಕಾಲೇಜುಗಳಿಗೆ ಸೇರಿಸಿ ಎಂದು ನಮ್ಮ ಶಿಕ್ಷಣ ನೀತಿ ಹೇಳುತ್ತದೆ. ಸ್ಕಾರ್ಫ್ ಅವೈಚಾರಿಕ ಸಂಗತಿಯೇ ಆಗಿದ್ದರೆ, ಶಿಕ್ಷಣವೇ ಅವಳನ್ನು ಸ್ಕಾರ್ಫ್ ಹಾಕದಂತೆ ತಡೆಯುತ್ತದೆ. ಇಂದು ಸ್ಕಾರ್ಫ್ ಧರಿಸಿಯೇ ಡಾಕ್ಟರ್‌ಗಳಾಗಿ, ಇಂಜಿನಿಯರ್‌ಗಳಾಗಿ ನೂರಾರು ಮುಸ್ಲಿಮ್ ಮಹಿಳೆಯರು ಸಾಧನೆ ಮಾಡಿದ್ದಾರೆ. ಸ್ಕಾರ್ಫ್ ಧರಿಸಿಯೇ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಪಡೆದ ಅಥ್ಲೆಟಿಕ್‌ಗಳ ಬಗ್ಗೆ ವರದಿಯಾಗಿವೆ. ಮುಸ್ಲಿಮ್ ಮಹಿಳೆಯರನ್ನು ಮುಖ್ಯವಾಹಿನಿಗೆ ಕರೆದುಕೊಳ್ಳುವುದು ಶಿಕ್ಷಣದ ಹೆಬ್ಬಾಗಿಲನ್ನು ತೆರೆಯುವ ಮೂಲಕ. ಇಂದು ಸಂಘಪರಿವಾರವೂ ಸೇರಿದಂತೆ ಹಲವಾರು ಸಂಘಟನೆಗಳ ಅಡೆತಡೆಗಳನ್ನು ಎದುರಿಸಿ ಮುಸ್ಲಿಮ್ ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಧಾಪುಗಾಲು ಇಡುತ್ತಿದ್ದಾರೆ. ಮುಸ್ಲಿಮ್ ಮಹಿಳೆಯರೇ ಒಂದಾಗಿ ‘ಮರಳಿ ಬಾ ಶಾಲೆಗೆ’ ಎಂದು ಅಳಿದುಳಿದ ಮಹಿಳೆಯರನ್ನು ಶಿಕ್ಷಿತರನ್ನಾಗಿಸಲು ಮುಂದಾಗಿದ್ದಾರೆ. ಇದನ್ನೆಲ್ಲ ನಾವು ಗುರುತಿಸಿ, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಾ ಹೋಗುವುದೇ ನಿಜವಾದ ಮಹಿಳಾ ಸಬಲೀಕರಣವಾಗಿದೆ.
ಎರಡು ಘಟನೆಗಳನ್ನು ನಾನು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ನಮೂದಿಸಿದ್ದೆ. ಒಂದು, ಕಳೆದ ಎಸೆಸೆಲ್ಸಿ ಫಲಿತಾಂಶದಲ್ಲಿ ಬೆಳ್ತಂಗಡಿಯ ಮುಸ್ಲಿಮ್ ತರುಣಿಯೊಬ್ಬಳು ಸಾಧಿಸಿದ ಸಾಧನೆ. ಆಕೆ ಕನ್ನಡ ಮಾಧ್ಯಮದಲ್ಲಿ ಬರೆದು ಇಡೀ ರಾಜ್ಯಕ್ಕೆ ಎರಡನೆ ಸ್ಥಾನ ಪಡೆದಿದ್ದಳು. ಅಂದ ಹಾಗೆ ಈಕೆ ಒಬ್ಬ ಮದರಸ ಶಾಲೆಯ ವೌಲವಿಯ ಮಗಳು. ಇನ್ನೊಂದು, ಶಿವಮೊಗ್ಗದಲ್ಲಿ ನಡೆದ ಘಟನೆ. ಈಕೆಯೂ ಒಬ್ಬ ಮುಸ್ಲಿಮ್ ತರುಣಿ. ಹೆರಿಗೆಯಾದ ಮರುದಿನವೇ ಅಂಬುಲೆನ್ಸ್‌ನಲ್ಲಿ ಹೋಗಿ ಶಿಕ್ಷಕ ಹುದ್ದೆಯ ಪರೀಕ್ಷೆಗೆ ಹಾಜರಾಗಿದ್ದಳು. ಆಕೆಯ ಕುಟುಂಬ, ಸಮಾಜ ಎಲ್ಲರೂ ಅದಕ್ಕೆ ಸಹಕರಿಸಿದ್ದರು. ಈ ಘಟನೆಗಳು ನಮ್ಮ ಭವಿಷ್ಯದ ಆಶಾಕಿರಣಗಳಾಗಿವೆ. ಇಲ್ಲಿ ‘ಆಕೆ ಬುರ್ಖಾ ಹಾಕಿದ್ದಳೋ…ಇಲ್ಲವೋ’’ ಎನ್ನುವ ಪ್ರಶ್ನೆಯೇ ಅಪ್ರಸ್ತುತ. ಅಂತಹ ಪ್ರಶ್ನೆಯನ್ನು ಯಾರೇ ಪ್ರಶ್ನಿಸಲಿ. ಆತ ಸಂಘಪರಿವಾರದವನಾಗಿರಲಿ ಅಥವಾ ವೈಚಾರಿಕ ಮೂಲಭೂತವಾದಿಯಾಗಿರಲಿ. ಅದು ಉತ್ತರಿಸುವುದಕ್ಕೆ ಅನರ್ಹವಾದ ಪ್ರಶ್ನೆ.
***
ಎಸ್ ಸಿ ದಿನೇಶ್ ಕುಮಾರ್
ಅವಮಾನವನ್ನು ಅನುಭವಿಸಿದವನಿಗೇ ಅದು ಅವಮಾನ ಅನಿಸದಿದ್ದರೆ ಅದು ಅವಮಾನವೇ ಅಲ್ಲ ಎಂದು ಕನ್ನಡದ ಚಿಂತಕರೊಬ್ಬರು ಜಾತಿ ಕುರಿತ ಚರ್ಚೆಯೊಂದರಲ್ಲಿ ಹೇಳಿದ್ದರು. ಬುರ್ಖಾ ಪದ್ಧತಿಯನ್ನು ಈಗಿನ ಕಾಲಘಟ್ಟದಲ್ಲೂ ಸಮರ್ಥಿಸಿಕೊಳ್ಳುತ್ತಿರುವವರೂ ಇಂಥದ್ದೇ ವಾದವನ್ನು ಮುಂದಿಡುತ್ತಿದ್ದಾರೆ. ಬುರ್ಖಾ ನಿಮಗಿಷ್ಟವೇ ಇಲ್ಲವೇ ಎಂದು ಮಹಿಳೆಯರಿಗೆ ಖಾಸಗಿಯಾಗಿ ಕೇಳುವುದೂ ಅವರಿಗೆ ಮೂರ್ಖತನವಾಗಿಬಿಡುತ್ತದೆ.

ಸಮಸ್ತ ಮಹಿಳೆಯರ ಪರವಾಗಿ ನಾವೇ ಮಾತನಾಡುತ್ತೇವೆ ಎಂದುಹೇಳಿಕೊಳ್ಳುವುದೂ ಸಹ ಪುರುಷಾಹಂಕಾರದ ರೂಪ ಎಂಬುದನ್ನು ಅವರು ಮರೆಯುತ್ತಾರೆ. ಬುರ್ಖಾ ಕುರಿತ ಚರ್ಚೆಯಲ್ಲಿ ಕೆಲವರು ಮಾತನಾಡುವುದನ್ನು ಗಮನಿಸಿದರೆ, ಬುರ್ಖಾ ಒಂದೇ ಮೈತುಂಬಾ ಬಟ್ಟೆ ಮುಚ್ಚುವ ಸಭ್ಯ ಉಡುಪು, ಮಿಕ್ಕಂತೆ ಉಳಿದೆಲ್ಲವೂ ಅಸಭ್ಯ ಎಂಬ ಹೊಣೆಗೇಡಿ, ಅರ್ಥಹೀನ ವಾದ ಕಾಣಿಸಿಕೊಳ್ಳುತ್ತಿದೆ. ಮೂಲಭೂತವಾದ ಮಿತಿಮೀರಿದರೆ ಏನಾಗುತ್ತದೆ ಎಂಬುದಕ್ಕೆ ಇದೆಲ್ಲ ಸಾಕ್ಷಿ.







ನಿಮಗ್ಯಾರು ಹೆಣ್ಣುಮಕ್ಕಳ ಬಗ್ಗೆ ನಿರ್ಧಾರ ತೆಗೆದ್ಕೋ, ರಕ್ಷಣೆ ಮಾಡೋ ಅಧಿಕಾರ ಕೊಟ್ಟಿದ್ದು? ಮೊದ್ಲು ನೀವು ರೆಪೇರಿ ಆಗಿ… ಆಮೇಲೆ ಉಪನ್ಯಾಸ ಕೊಡಿ! ಏ ಥೂ… ಬುರ್ಖಾ ಬಗ್ಗೆ ಹೆಣ್ಣುಮಕ್ಕಳ ತಿರ್ಮಾನವೇ ಅಂತಿಮ ನೀವೇನೂ ಕಡ್ಡಿ ಆಡಿಸಬೇಡಿ
ಬಶೀರ್ ರವರು ಸಮರ್ಥಿಸಿಕೊಳ್ಳಲಾಗದ್ದನ್ನು ಸಮರ್ಥಿಸಿಕೊಳ್ಳಹೊರಟಿದ್ದಾರೆ. ಇಂಥ ವಾದಗಳು ಎಲ್ಲಾ ಧಾರ್ಮಿಕ ಕಂದಾಚಾರವನ್ನೂ ಸಮರ್ಥಿಸಿಕೊಳ್ಳ ಹೊರಡುವವರಲ್ಲಿ ಯಥೇಚ್ಚವಾಗಿ ಕಾಣುತ್ತಾ ಬಂದಿದ್ದೇವೆ. ಮೈ ಪೂರ್ತಿ ಮುಚ್ಚಿಕೊಳ್ಳದೇ ಮನೆಯಿಂದ ಹೊರಗೆ ಬರಲಾಗದಿರುವ ಸಂವೇದನೆಯೋ ವೇದನೆಯೋ ? ಬುರ್ಖಾಕ್ಕೆ ನರಕ, ಸ್ವರ್ಗಗಳ ಜೊತೆ ಸಂಬಂಧ ಕಲ್ಪಿಸಿರುವುದರ ಜೊತೆಗೆ ಧಾರ್ಮಿಕ ಸನ್ನಡತೆ , ದುರ್ನಡತೆ , ಬಹಿಷ್ಕಾರಗಳ ಜೊತೆ ಸಂಬಂಧವನ್ನು ಕೈಬಿಡಿ ಬುರ್ಖಾ ತನ್ನಿಂದ ತಾನೆ ಹಾರಿಹೋಗುತ್ತದೆ ಮಹಿಳಾ ಸಮಾನತೆಯ ಬಿರುಗಾಳಿಯಲ್ಲಿ.
thanks for this article bashir sir , and do please enlighten us about the sharia court ruling in muzzafarnagar recently of making father-in-law as husband of his daugther-in-law since he raped her when her husband was abroad working . and making that women mother of her hushband.thanks
ಬುರ್ಖಾ ಧರಿಸುವುದನ್ನುಉ ತುಂಬಾ ನಯವಾದ ಭಾಷೆಯಲ್ಲಿ ಬಶೀರ್ ಸಮರ್ಥಿಸಿಕೊಳ್ಳುತ್ತಾರೆ. ಅದವರ ನಿಲುವು ಅದನ್ನು ನಾನು ಪ್ರಶ್ನಿಸುವುದಿಲ್ಲ.
ಬಶೀರ್ ಅವರಲ್ಲಿ ನನ್ನ್ನ ಪ್ರಶ್ನೆಗೆ, ಅದು ಪ್ರಶ್ನೆಯಲ್ಲ ಸಣ್ಣದೊಂದು ಗೊಂದಲ. ಅದಕ್ಕವರು ಉತ್ತರ ಕೊಡುತ್ತಾರೆಂದು ನಂಬಿದ್ದೇನೆ; ಅವರೊಂದು ಪತ್ರಿಕೆಯ ಸಂಪಾದಕ. ಪತ್ರಿಕೋದ್ಯಮ ಕಲಿಯುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅವರಲ್ಲಿಗೆ ಟ್ರೈನಿಂಗ್ ಗೆ ಎಂದು ಬರುತ್ತಾರೆ..ಹಾಗೆ ಬರುವ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾವನ್ನು ಧರಿಸಿ ಬರುತ್ತಾರೆಂದು ಕೇಳಿದ್ದೇನೆ. ಇದು ನಿಜವೇ?
ಇದು ನಿಜವೆಂದಾದರೆ, ಮುಂದೆ ನಮ್ಮ ರಾಜಕಾರಣಿಗಳನ್ನು, ಧಾರ್ಮಿಕ ಮುಖಂಡರನ್ನು, ಸಮಾನ ಹಕ್ಕುಗಳಿಗಾಗಿ ಹೋರಾಡುವ ಹೋರಾಟಗಾರರನ್ನು ಈ ಭಾವಿ ಪತ್ರಕರ್ತರು ಸಂದರ್ಶನ ಮಾಡುವ ದ್ರುಶ್ಯಗಳನ್ನು ನಾನೀಗ ಕಲ್ಪಿಸಿಕೊಳ್ಳುತ್ತಿದ್ದೇನೆ.
ತಮ್ಮ ವಾದಕ್ಕಾಗಿ ಇನ್ನೊಬ್ಬರ ಮಾತುಗಳಿಗೆ ಕಿವುಡರಾಗಿ ತಮ್ಮದೇ ಅಂತಿಮ, ಅದನ್ನು ಪ್ರಶ್ನಿಸುವಂತಿಲ್ಲ, ನಾವು ನಿಮ್ಮ ರಕ್ಷಕರು, ನೀವು ನಾವು ಹೇಳಿದಂತೆ ಪಾಲಿಸಬೇಕು. ಅದರಲ್ಲಿ ಭಿನ್ನಾಭಿಪ್ರಾಯ ಇರಕೂಡದು ಎನ್ನೋ ವಾದ ಮೂಲಭೂತವಾದವೇ ಆಗಿದೆ. ವೈಚಾರಿಕ ಮೂಲಭೂತವಾದ, ಕಮ್ಯುನಿಸ್ಟ್ ಮೂಲಭೂತವಾದ ಎಂದಾಗ ಕೆಲವು ಹುಡುಗರು ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿಗಳಂತೆಯೇ ಪರಚಾಡುತ್ತಿದ್ದಾರೆ. ಇದು ನಿಜಕ್ಕೂ ಅಪಾಯಕಾರಿಯಾಗಿದೆ. ಮುಸ್ಲಿಂ ಮೂಲಭೂತವಾದಿಗಳು, ಹಿಂದೂ ಮೂಲಭೂತವಾದಿಗಳು ಅರಚಾಡೋದು ತೀರ ಸಹಜ. ಸಹಿಸಿಕೊಬಹುದು. ಆದರೆ ಇಲ್ಲಿ ಕೆಲವು ಹುಡುಗರು ತಮ್ಮ ತಮ್ಮ ಮೂಗಿನ ನೇರಕ್ಕೆ ನನ್ನ ಲೇಖನವನ್ನು ಅರ್ಥ ಮಾಡಿಕೊಂಡು, ವ್ಯಾಖ್ಯಾನಿಸಿಕೊಂಡು ಅರಚಾಡೋದು ವಿಪರ್ಯಾಸವಾಗಿದೆ. ಕ್ರಾಂತಿಯನ್ನು ವಾಸ್ತವಕ್ಕೆ ದೂರವಾಗಿ ರೋಮಾಂಟಿಕ್ ಮತ್ತು ರೋಚಕ ಕಣ್ಣಿನಿಂದ ನೋಡುವ ಇವರ ಮಿತಿಗಳು ನನಗೆ ತಿಳಿದಿರೋದರಿಂದ ಅವರ ವರ್ತನೆ ನನಗೆ ಅಚ್ಚರಿ ತಂದಿಲ್ಲ.
keraladalli burkhaa charcheya vishaya vaagiralilla ennuvudu aamshika satya. kasaragodina kalejinalli burkha dharisada karanakke obbake hennumagalu edurisida himse, daurjanyagala bagge naanu chennagi balle. bada kutumbadavaraadaruu aakeya hethavara bembala aakegithu mathu aake tumba dhairyashaaliyagiddudarinda avalu konevareguu avarige maniyade badukuvudakke sadhyavaayitu. unnata vidyabhyasakkagi kaleju seruthiruva hennu makkalige tammavarindale ondu bageya “ragging”ge olagaagalu idonduondu vishayavaaguttade ennuvuduu satya.ondanthuu nija sabhya udupannu toduvudu naagarika samajakke hitakara .Basheerare helidante burkha toduvudu athavaa todadiruvudu avaravara aykege bittare chennallave?
ಅಂತ ನೀವೇ ಹೇಳಿದ್ದೀರ ಅಂದ ಮೇಲೆ ಕಾಲೇಜ್ ಅಥವಾ ಶಾಲೆಗಳಲ್ಲಿ ಬುರ್ಖಾ ಹಾಕಿ ಅಂತ ಯಾಕೆ ಹೋರಾಟ ಮಾಡ್ತಿದಾರೆ ನಿಮ್ಮವರು…
ಬುರ್ಖಾ ಮೈ ಮುಚ್ಚುವ ಬಟ್ಟೆ ಒಪ್ಪಿಕೊಳ್ಳುತ್ತೇನೆ. ಬುರ್ಖಾ ಧರಿಸುವುದು ಗಂಡಸರಿಗೆ ಆಕರ್ಷಣೆ ಆಗದಿರಲಿ ಅಂತ ಆದರೆ ಪ್ಯಾಶನ್ ಬುರ್ಖಾ ಧರಿಸಿ ನೆಪ ಮಾತ್ರಕ್ಕೆ ಬುರ್ಖಾ ಹಾಕಿ ತಿರುಗಾಡುವವರಿಗೆ ಯಾಕೋ ಬುರ್ಖಾ ನಾ ಕಾಣೆ…
ಬುರ್ಖಾ ಬಗ್ಗೆ ಇಷ್ಟೆಲ್ಲಾ ಬರೆಯುವ ನೀವು ನಿಮ್ಮ ಅಕ್ಕ ತಂಗಿ ಗೆ ಒಂದು ದಿನ ನಾದ್ರೂ ಬುರ್ಖಾ ಹಾಕದೆ ಹೊರಗೆ ಕಳಿಸಿದಿರ ಸರ್ ಅಥವಾ ನಿಮಗೆ ಬುರ್ಖಾ ಧರಿಸಲು ಇಷ್ಟವೋ ಇಲ್ಲವೋ ಎಂದು ಕೇಳಿದಿರಾ ಸರ್ … ಬಹುಷ ಇಲ್ಲ ಅನ್ಸುತ್ತೆ.. ಯಾಕೆಂದರೆ ನಿಮ್ಮವರ ಸೇಫ್ಟಿ ನಿಮ್ಮ ತಲೆಯಲ್ಲಿ ತಿರುಗ್ತಾ ಒಂದು ಇರುತ್ತೆ. ಒಂದು ರೀತಿ ಭಯ ಮತ್ತು ನಿಮ್ಮ ಸಂಪ್ರದಾಯ ಮೀರಿ ಹೋಗೊದಿಲ್ಲ. ಗೀಚಿ ಹಾಕುವವರು ಯಾವತ್ತು ಅದನ್ನು ಯೋಚನೆ ಮಾಡೊದಿಲ್ಲ.. ನೀವು ಗೀಚಿ ಹಾಕಿದಷ್ಟು ಸುಲಭ ಅಲ್ಲ ಸರ್ ಜೀವನ. ಅದು ನಿಮಗೂ ಗೊತ್ತು. …..
ನನ್ನ ಲೇಖನದೊಳಗಿಂದ ತಮ್ಮ ಅಗತ್ಯಕ್ಕೆ ಬೇಕಾದ ನಾಲ್ಕು ಸಾಲುಗಳನ್ನು ಆಯ್ದು ಕೆಲವರು ಕ್ರಾಂತಿಕಾರಿಯಾಗಿ,ಭಾವುಕವಾಗಿ ಬರೆಯುತ್ತಿದ್ದಾರೆ. ನನ್ನ ಲೇಖನ ಬುರ್ಖದ ಪರ ಆಗಿಲ್ಲ ಎನ್ನೋದು ಮೇಲ್ನೋಟಕ್ಕೆ ಯಾರಿಗೂ ಅರ್ಥವಾಗತ್ತೆ. ಬುರ್ಖದ ಬಗ್ಗೆ ರೋಮಾಂಟಿಕ್, ಹಾಗು ರೋಚಕ ಹೇಳಿಕೆಗಳ ಬದಲಿಗೆ ಅದನ್ನು ಹೇಗೆ ವಾಸ್ತವ ನೆಲೆಯಲ್ಲಿ ಎದುರಿಸಬಹುದು ಎನ್ನೋ ದಾರಿಯೊಂದನ್ನು ನಾನು ನನ್ನ ಬರಹದಲ್ಲಿ ತೆರೆದಿಟ್ಟಿದ್ದೇನೆ ಅಷ್ಟೇ. ಉಳಿದಂತೆ ಇಲ್ಲಿರುವ ಕೆಲವು ಕ್ರಾಂತಿಕಾರಿ ಹುಡುಗರೊಂದಿಗೆ ನನ್ನ ಯಾವುದೇ ಚರ್ಚೆ ಇಲ್ಲ. ನಮಸ್ಕಾರ
Mr. Bashir,
Neevu Burkha para illa illa; Burkha culture nimma mahileyara svathanthrya harana endu neravagi heli. Nera heloke dhairya salada? Ee ketta parampare/samskruthiya bagge horadi
ಸತ್ಯ ಯಾವತ್ತೂ ಕಹಿಯಾಗಿಯೇ ಇರುತ್ತೆ ಅಲ್ವಾ ಸರ್. ಅದನ್ನು ಒಪ್ಪಿಕೊಳ್ಳುವ ದೊಡ್ಡ ಗುಣ ಯಾರಲ್ಲೂ ಇಲ್ಲ..
ನೀವು ಬುರ್ಖಾ ದ ಪರ ಇಲ್ಲ ಅಂತ ವಾದ ಮಾಡಬಹುದು ಬರೆದು ಹಾಕಬಹುದು ಆದರೆ ಸತ್ಯ ನಿಮ್ಮ ಮನಸಿಗಷ್ಟೇ ಗೊತ್ತು.
ಈ ದೇಶದಲ್ಲಿ ಎಲ್ಲರಿಗೂ ಅವರಿಗೆ ಇಷ್ಟವಾದ ಬಟ್ಟೆಗಳನ್ನು ಹಾಕಿಕೊಳ್ಳಲು ಸ್ವಾತಂತ್ರ್ಯವಿದೆ. ಈ ಸ್ವಾತಂತ್ರ್ಯ ಸ್ವೇಚ್ಚಾಚಾರವಾದರೆ ಅದು ವಿದೇಶಿ ಮುಕ್ತ ಸಂಸ್ಕೃತಿಯ ಅನುಕರಣೆಯಾಗುತ್ತದೆ. ಆದರೆ ಯಾವಾಗ ಒಂದು ಧರ್ಮ ಅಥವಾ ಆಯಾ ಧರ್ಮದ ಮೂಲಭೂತವಾದಿಗಳು ಮಹಿಳೆಯರಿಗೆ ಇಂತದೇ ಬಟ್ಟೆ ಹಾಕಿಕೊಳ್ಳಬೇಕು ಎಂದು ಆಜ್ಞೆ ಮಾಡಿದರೆ, ಅಥವಾ ಪೋಷಕರು ಒತ್ತಾಯ ಮಾಡಿದರೆ ಅದು ಸ್ವಾತಂತ್ರ್ಯದ ಹರಣ ವಾಗುತ್ತದೆ. ಒಬ್ಬ ಮುಸ್ಲಿಂ ಮಹಿಳೆ ಇಷ್ಟ ಪಟ್ಟು ಬುರ್ಕಾ ಧರಿಸಿದರೆ ಯಾವುದೇ ಅಭ್ಯಂತರವಿಲ್ಲ. ಆದರೆ ಅದು ಸಂಪ್ರದಾಯದ ಹೆಸರಲ್ಲಿ ಹೇರಿಕೆಯಾದರೆ ಅಮಾನವೀಯವೆನಿಸುತ್ತದೆ. ಬಹುತೇಕ ಸಂಪ್ರದಾಯವಾದಿ ಧಾರ್ಮಿಕರ ಮನೆಗಳಲ್ಲಿ ಇರುವ ಪುರುಷರು ತಮ್ಮ ಮನೆಯ ಮಹಿಳೆಯರಿಗೆ ಹೀಗೆ ಒತ್ತಾಯ, ಒತ್ತಡ, ಹೆದರಿಕೆ, ಆಜ್ಞೆಗಳ ಮೂಲಕ ಇಂತಹುದೇ ಬಟ್ಟೆಗಳನ್ನು ಹಾಕಿಕೊಳ್ಳಬೇಕು ಎಂದು ಹೇರಿಕೆ ಮಾಡಿದರೆ ಅದು ಸಮರ್ಥನೀಯವೆನಿಸುವುದಿಲ್ಲ. ಆದರೆ ಮಹಿಳೆಯನ್ನು ಈ ರೀತಿ ಸಂಪೂರ್ಣವಾಗಿ ಬೂರ್ಖಾಗಳಲ್ಲಿ ಬಂದಿಸಿಡುವುದು ಅದ್ಯಾಕೋ ಮಹಿಳಾವಿರೋಧಿ ಎನ್ನಿಸುವಂತಿದೆ. ಪರುಷ ಪ್ರಧಾನ ವ್ಯವಸ್ಥೆ ಮಹಿಳೆಯರನ್ನು ತಮ್ಮ ನಿಯಂತ್ರಣದಲ್ಲಿಡುವ ಹುನ್ನಾರವೆನ್ನಿಸುತ್ತದೆ. ಧರ್ಮ ಯಾವುದೇ ಇರಲಿ ಮಹಿಳೆಯರ ಮೂಲಭೂತ ಸ್ವಾತಂತ್ರ್ಯದ ಹರಣವಾಗದಿರಲಿ. ಯಾವುದೇ ಧಾರ್ಮಿಕ ಆಚರಣೆಗಳು ಲಿಂಗತಾರತಮ್ಯವನ್ನು ಸೃಷ್ಟಿಸದಿರಲಿ.
ಮಾನ್ಯ ಬಷೀರ್ ಅವರೆ,
ಬುರ್ಖಾ ಎನ್ನುವುದು ಒಂದು ಉಡುಗೆಯ ಸಂಸ್ಕೃತಿಯೋ ಅಥವಾ ಉಡುಗೆಯ ಸಂಹಿತೆಯೋ ಎನ್ನುವುದನ್ನು ನೀವು ಸ್ಪಷ್ಟ ಪಡಿಸಿಲ್ಲ. ಯಾವುದೇ ನಾಗರಿಕತೆಯಲ್ಲಿ ಸಂಸ್ಕೃತಿ ಎಂಬುದು ಅಭಿರುಚಿ ಮತ್ತು ಸೌಂದರ್ಯಪ್ರಜ್ಞೆಗಳನ್ನು ಮೈಗೂಡಿಸಿಕೊಂಡು ಸಹಜವಾಗಿ ರೂಪುಗೊಂಡಿರುತ್ತದೆ. ಆದರೆ ಸಂಹಿತೆಯ ಹಿಂದೆ ಒಂದು ಸಾಂಸ್ಕೃತಿಕ ರಾಜಕಾರಣ ಮತ್ತು ಮೂಲಭೂತವಾದದ ಹಿತಾಸಕ್ತಿಗಳು ಕೆಲಸ ಮಾಡುತ್ತಿರುತ್ತವೆ. ಬುರ್ಖಾ ವಸ್ತ್ರಸಂಹಿತೆಯ ಬಗ್ಗೆ ಕುರಾನ್ ಎಲ್ಲೂ ಸ್ಪಷ್ಟವಾಗಿ ಷರತ್ತು ನಿಬಂಧನೆಗಳನ್ನು ಹೇಳಿಲ್ಲ ಎಂಬ ನಿಮ್ಮ ವಾದ ವೇದಗಳಲ್ಲಿ ಜಾತಿ ಪದ್ಧತಿಯನ್ನು ಅನುಸರಿಸಬೇಕು ಎಂಬ ಉಲ್ಲೇಖವಿಲ್ಲ ಎಂಬ ಬಾಲಗಂಗಾಧರರ ವಾದವನ್ನು ಹೋಲುತ್ತದೆ. ವೇದಗಳಲ್ಲಿ ಹೇಳಿಲ್ಲ ಎಂದಾಕ್ಷಣ ಜಾತೀಯತೆಯ ಹಿಂದೆ ಮೂಲಭೂತವಾದಿಗಳ ಹುನ್ನಾರವಿಲ್ಲ ಎಂದರ್ಥವೇ?
ವಿಲಕ್ಷಣವಾದ ಉಡುಗೆಗಳನ್ನು ಧರಿಸುವ ಬಂಜಾರಾ ಸಂಸ್ಕೃತಿಯ ವೈಶಿಷ್ಟ್ಯವನ್ನು ನನ್ನ ಬಂಜಾರಾ ಗೆಳೆಯನೊಬ್ಬನೊಂದಿಗೆ ಉತ್ಸಾಹದಿಂದ ಕೊಂಡಾಡಲು ಪ್ರಯತ್ನಿಸಿದಾಗ ಆತ ನಾವು ಒಂದೆಡೆ ನೆಲೆ ನಿಲ್ಲುವವರಲ್ಲ. ಆಗ ದಾಳಿಕೋರ ಮುಸಲ್ಮಾನರು ಮತ್ತು ರಜಪೂತ ಪಾಳೇಗಾರರು ನಮ್ಮ ಅಬಲೆಯರಾದ ಹೆಣ್ಣುಮಕ್ಕಳನ್ನು ಎಗ್ಗಿಲ್ಲದಂತೆ ಅಪಹರಿಸಿ ಅತ್ಯಾಚಾರ ಮಾಡುತ್ತಿದ್ದರು. ಅಂಥವರಿಂದ ಪಾರಾಗಲು ನಮ್ಮ ಹೆಣ್ಣುಮಕ್ಕಳು ದೊಡ್ಡ ಗಾತ್ರದ ಮೂಗುತಿ, ಕಿವಿಯೋಲೆ, ವಿಕಾರವಾದ ಬಳೆಗಳು ಇತ್ಯಾದಿಗಳ ನೆರವಿನಿಂದ ತಮ್ಮನ್ನು ತಾವು ಸಾಧ್ಯವಾದಷ್ಟೂ ವಿರೂಪಗೊಳಿಸಿಕೊಂಡರು ಇದನ್ನು ಸಂಸ್ಕೃತಿ ಎಂದು ಕರೆಯದೆ ಹೆಣ್ಣುಮಕ್ಕಳ ಪಾಲಿಗೆ ಒಂದು ಕಳಂಕ ಮತ್ತು ಜನಾಂಗೀಯ ಅಪಮಾನ ಎಂದು ಭಾವಿಸಬೇಕು ಎಂದು ಆತ ನನ್ನ ಉತ್ಸಾಹದ ವರ್ಣನೆಯನ್ನು ಅರ್ಧಕ್ಕೇ ನಿಲ್ಲಿಸಿದ್ದ.
ಬೇಗಂ ಖಾಲಿದಾ ಜೀಯಾ, ಶೇಖ್ ಹಸೀನಾ, ಬೇನಜೀರ್ ಭುಟ್ಟೋರಂತಹ ಆಗರ್ಭ ಶ್ರೀಮಂತರು, ವಿದ್ಯಾವಂತರು ಮತ್ತು ಶಕ್ತಿಶಾಲೀ ರಾಜಕಾರಿಣಿಗಳು ಮುಸ್ಲಿಂ ಔದಾರ್ಯಕ್ಕೆ ನಿದರ್ಶನಗಳಾಗಲಾರರು. ಮುಸ್ಲಿಂ ಕಂದಾಚಾರಿಗಳು ಜಡ ವೈದಿಕರಷ್ಟೇ ನೀಚತನವನ್ನು ಬೆಳೆಸಿಕೊಂಡಿರುವರು ಎನ್ನುವುದರಿಂದ ಯಾರಿಗೂ ಅನಾಹುತವಾಗಲಾರದು ಎಂದು ಭಾವಿಸುತ್ತೇನೆ.
ಸಲ್ಮಾನ್ ರಷ್ದಿಯಂತಹ ಪ್ರಭಾವೀ ಮತ್ತು ಸೂಕ್ಷ್ಮಜ್ಞ ಲೇಖಕನ ಬರಹದ ಚರ್ಚೆಯನ್ನು ಬಿಟ್ಟು ಅವನ ಲೋಲುಪತೆ, ಲಂಪಟತೆ ಮತ್ತು ಅವನ ಖಾಸಗಿ ಬದುಕನ್ನು ಟೀಕಿಸುವುದು ಇಲ್ಲಿ ಅಪ್ರಾಸಂಗಿಕವೆನಿಸುತ್ತದೆ. ಇಂತಹ ಟೀಕೆಗೂ ಬಲಪಂಥೀಯರ ಅನಂತಮೂರ್ತಿಯ ಟೀಕೆಗೂ ಯಾವ ವ್ಯತ್ಯಾಸವಿದೆ ನೀವೇ ಹೇಳಿ?
I fully agree with Dr.T.V.Murthy. I know a few Muslim girls who hate wearing the awful burkha. They even told me they hate Talakh system. They truly felt miserable about it. I know a once ordinary Muslim girl now a famous personality who felt elated after she was able to throw away her burka. For centuries you Muslim men made women wear burka. For at least this one century you wear it and see . red saree shaved head widows are not seen anywhere now. Widows are getting. Remarried. Inter caste marriages are common now. We are evolving forever. When will you?
Bashir,
The primary purpose for a muslim woman is forced to wear a burqa is to prevent men getting aroused by her..the way I see it the problem lies with men and not the poor muslim women..if some testosterone driven man has problems of self control why should the muslim women be punished by forcing her to wear a burqa. Can you please answer this..also is this same reason why muslim women are not allowed to offer namaaz in mosques along with men?
ಮುಸ್ಲಿಮರನ್ನು, ಹಾಗೂ ಅವರ ಧರ್ಮ ಮತ್ತು ಸಂಸ್ಕೃತಿಯನ್ನು ನಾನು ಬಹಳ ಹತ್ತಿರದಿಂದ ನೋಡಿದಾಗ ಹಿಜಾಬ್ ಮತ್ತು ಬುರ್ಖಾ ಬೇರೆ ಬೇರೆಯೆಂದು ತಿಳಿಯುತ್ತದೆ. ಬಷೀರ್ ಸರ್ ರವರ ಲೇಖನವನ್ನು ಓದಿದಾಗ ಅವರು ಸಮರ್ಥಿಸಿದ್ದು ಪರ್ದಾವನ್ನಾಗಲಿ ಅಥವಾ ಬುರ್ಖಾವನ್ನಾಗಲಿ ಅಲ್ಲ, ಬದಲಾಗಿ ವಸ್ತ್ರಧಾರಣೆಯ ಹಕ್ಕನ್ನು. (ರೈಟ್ ಟು ಡ್ರೆಸ್) ಎಂದು ಹೇಳಬಹುದು. ಅದಕ್ಕಾಗಿ ಬಷೀರ್ ಸರ್ ಅವರನ್ನು ಅಭಿನಂದಿಸಲೇಬೇಕು. ಇನ್ನೊಂದೆಡೆ, ಪರ್ದಾ ಮತ್ತು ಬುರ್ಖಾದ ವ್ಯತ್ಯಾಸವನ್ನು ಬಲ್ಲ ಧಾರ್ಮಿಕ ’ಮೂಲಭೂತವಾದಿ’ ಮಹಿಳೆಯರು ಆ ಬಗ್ಗೆ ಮುಸ್ಲಿಮ್ ಸಮುದಾಯದ ಸ್ತ್ರೀಯರಲ್ಲಿ ’ಬೆರೆತು’ ಅದರ ತಿಳುವಳಿಕೆಯನ್ನು ಹೆಚ್ಚಿಸುತ್ತಿರುವುದನ್ನು ಗಮನಿಸಬಹುದು. ಆದರೆ ಒಂದು ವಸ್ತ್ರಸಂಸ್ಕೃತಿ ರಾತ್ರೋರಾತ್ರಿಯೇ ಬದಲಾಗಬೇಕೆಂದು ಬಯಸುವುದು ಎಷ್ಟು ಮೂರ್ಖತನವೋ, ಬಲವಂತದಿಂದ, ಅಥವಾ ತುಚ್ಚಿಕರಿಸಿ, ಅಥವಾ ತಮಾಷೆಯ ವಸ್ತುವನ್ನಾಗಿಸಿ ಬದಲಾವಣೆಯನ್ನು ಬಯಸುವುದು ಅಷ್ಟೇ ಮೂರ್ಖತನ.
ಕೇವಲ ಮೂಲಭೂತವಾದಿಗಳಿಂದ ಬುರ್ಖಾ ಎಂಬ ವಸ್ತ್ರ ಸಂಸ್ಕೃತಿಯು ಬೆಳೆದಿದೆಯೆನ್ನುವುದು ಕೂಡಾ ಸಮಂಜಸವಲ್ಲ. ಅದರಲ್ಲಿ ಬುರ್ಖಾ ವ್ಯಾಪರಸ್ಥರ ಪಾಲೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ, ನಾನು ನನ್ನ ಆಪ್ತರಿಂದ ಕೇಳಿ ತಿಳಿದ ಪ್ರಕಾರ, ದೊಡ್ಡ ಪಾಲು ಕಾಮುಕ ಪುರುಷವರ್ಗಕ್ಕೆ ಸಲ್ಲುತ್ತದೆ. ಇಸ್ಲಾಮಿನ ಗಂಧಗಾಳಿಯೂ ಇಲ್ಲದ ಅಥವಾ ಯಾವುದೇ ಮೂಲಭೂತವಾದಿಗಳ ಪ್ರಭಾವದಲ್ಲಿಯೂ ಇಲ್ಲದ ಗಣನೀಯ ಸಂಖ್ಯೆಯ ಮಹಿಳೆಯರೂ ಬುರ್ಖಾದಾರಿಗಳಾಗಿರುತ್ತಾರೆ. ಯಾವುದೇ ಸುಶಿಕ್ಷಿತ ಬುರ್ಖಾದಾರಿ ಮಹಿಳೆಯಲ್ಲಿ ಕೇಳಿ ನೋಡಿ, ಯಾಕೆ ಬುರ್ಖಾ ಧರಿಸುತ್ತೀರಾ ಎಂದು, ಬಹುತೇಕ ಎಲ್ಲಾ ಉತ್ತರಗಳು – ಪುರುಷರ ಕೆಟ್ಟ ದೃಷ್ಟಿ ಬೀಳದಿರಲು- ಎಂದೇ ಆಗಿರುತ್ತದೆ. ಅದುದರಿಂದ ಕೇವಲ ಮುಸ್ಲಿಮ್ ಮೂಲಭೂತವಾದಿಗಳನ್ನು ದೂರುವ ರಾಜಕೀಯದಲ್ಲಿ ಕಮ್ಯುನಿಸ್ಟ್ ಮೂಲಭೂತವಾದಿಗಳು ಪುರುಷಹಂಕಾರವನ್ನು ರಕ್ಷಿಸುವ ಲಕ್ಷಣಗಳು ಕಾಣಿಸುತ್ತವೆ.
ಅದಿರಲಿ, ಆಧುನಿಕತೆಯ ಹೆಸರಿನಲ್ಲಿ ಮಹಿಳೆಯನ್ನು ನಗ್ನಗೊಳಿಸುತ್ತಿರುವ ಬಂಡವಾಳಿಶಾಹಿಗಳ ಬಗ್ಗೆ ತಲೆಕೆಡಿಸಿಕೊಳ್ಳದ, ತಮ್ಮನ್ನು ತಾವು ಬುದ್ದಿಜೀವಿಗಳೆಂದು ಕರೆದುಕೊಳ್ಳುವವರಿಗೆ ಪುರುಷಜಾತಿಯ ಬಹಳಾರು ನೀಚ ಮನಸ್ಥಿತಿ ಹಾಗೂ ಚಟುವಟಿಕೆಗಳು ಕಾಣವು, ಏಕೆಂದರೆ ಮಹಾನ್ ಪುರುಷರಿಗೆ ತಮ್ಮನ್ನು ’ಸ್ತ್ರೀವಿಮೋಚಕ’ರೆಂದು ಗುರುತಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಬಹಳ ಸುಲಭ. ಒಟ್ಟಾರೆಯಾಗಿ ತಮ್ಮ ತಮ್ಮ ಸಿದ್ದಾಂತದ ಬೇಳೆಯನ್ನು ಬೇಯಿಸುವ ಪ್ರಹಸನದಲ್ಲಿ ಪುರುಷ ಮುಸ್ಲಿಮ್ ಮೂಲಭೂತವಾದಿಗಳು ಹಾಗೂ ಕಮ್ಯುನಿಸ್ಟ್ ಮೂಲಭೂತವಾದಿಗಳು ಮುಸ್ಲಿಮ್ ಮಹಿಳೆಯ ಮಾನ ಹರಾಜು ಮಾಡುತ್ತಿರುವುದು ವಿಪರ್ಯಾಸ.
ಇಲ್ಲಿ ಮಂಡಿಸಲ್ಪಟ್ಟಿರುವ ” ಹುಡುಗರ ” ಅಭಿಪ್ರಾಯಗಳಿಗೆ ದಯತೋರಿ ಪ್ರತಿಕ್ರಯೆನೀಡಿರುವ ವಯೋವೃದ್ದ , ಜ್ಞಾನವೃದ್ಧ ಬಶೀರ್ ರವರಿಗೆ ಕೃತಜ್ಞತಾ ಪೂರ್ವಕ ವಂದನೆಗಳು. ತಮ್ಮಲ್ಲಿ ಈ ಕ್ರಾಂತಿಕಾರಿ ಹುಡುಗನ ವಿಜ್ಞಪ್ತಿ ಏನೆಂದರೆ ಸಮಾಜದಲ್ಲಿ ದಾರಿಯಲ್ಲಿ ಮನುಷ್ಯರಾಗಿ ಬೇರೆಯವರಿಗೆ ಕಂಡುಬರುವ ಹಕ್ಕನ್ನು ಇಸ್ಲಾಂ ಧರ್ಮವನ್ನನುಸರಿಸುವ ಮಹಿಳೆಯರಿಗೆ ನೀಡುವ ಮಾನವೀಯತೆಯನ್ನು ಧಾರ್ಮಿಕ ಮುಖಂಡರು ಮೆರೆಯಲಿ . ಇಸ್ಲಾಂ ಧರ್ಮದ ಗಂಡಸರಿಗೆ ಮೇಲೆ ಹೇರದ ಯಾವ ಉಡುಪಿನ ಕಟ್ಟಳೆಯನ್ನೂ ಆ ಧರ್ಮಕ್ಕೆ ಸೇರಿದ ಮಹಿಳೆಯರ ಮೇಲೆ ಹೇರಬೇಡಿ . ಮತ್ತು ಅದನ್ನು ಅವರ ಇಚ್ಛೆಯ ಉಡುಪನ್ನು ಧರಿಸುವ ಹಕ್ಕು ಎಂದು ಹಕ್ಕು ಎಂಬ ಪದಕ್ಕೇ ಅವಮಾನ ಮಾಡಬೇಡಿ. ಮತ್ತು ಇತರ ಎಲ್ಲಾ ಸಾಮಾಜಿಕ , ಧಾರ್ಮಿಕ , ಗೃಹಕೃತ್ಯದ ವಿಷಯದಲ್ಲಿಯೂ ಇಸ್ಲಾಂ ಧರ್ಮದ ಮಹಿಳೆಯರಿಗೂ ಸಮಾನ ಹಕ್ಕುಗಳನ್ನು ನೀಡಿ ಎಂದು ನಿಮ್ಮ ಧರ್ಮದೊಳಗೇ ಸಮಾಜ ಸುಧಾರಣೆಯ ಧ್ವನಿಗಳನ್ನೆತ್ತಿ ಎಂದು ಮುಸ್ಲಿಂ ಸಮುದಾಯಕ್ಕೆ ಸೇರಿದ ಎಲ್ಲಾ ಪ್ರಜ್ಞಾವಂತರಿಗೆ ಮನವಿ ಮಾಡುವ , ಒತ್ತಾಯ ಮಾಡುವ ಹಕ್ಕು ನಮ್ಮಿಂದ ಕಸಿದುಕೊಳ್ಳುವ ಸಾಹಸಕ್ಕೆ ಕೈ ಹಾಕಬೇಡಿ . ಮುಸ್ಲಿಂ ಮಹಿಳೇಯರೆಲ್ಲರಿಗೂ ನಿಮ್ಮ ಧರ್ಮದ ೊಳಗೆ , ನಿಮ್ಮ ಸಮಾಜದ ೊಳಗೆ ಇರುವ ಅಸಮಾನತೆಯ ವಿರುದ್ಧ ದನಿಯೆತ್ತಿ , ಸಮಾನತೆಗಾಗಿ ಹೋರಾಡಿ ಎಂಬ ಕರೆಯನ್ನು ಹಿಂದೂ ಧರ್ಮದ ,ಬೇರಾವ ಧರ್ಮದ ಮಹಿಳೆಯರಿಗೂ , ಪುರುಷರಿಗೂ ನೀಡುವಂತೆ ನೀಡುವ ಹಕ್ಕನ್ನು ಮತ್ತು ಕರ್ತವ್ಯವನ್ನು ನಾವು ಮಾಡಲು ಕಂಕಣಬದ್ಧರಾಗಿದ್ದೇವೆ. ಈ ಹುಡುಗನ ವಿಜ್ಞಪ್ತಿಯನ್ನು ಹಿರಿಯರಾದ ತಾವು ಕರುಣೆಯಿಂದ ಪರಿಶೀಲಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ.
,ಬೂರ್ಖಾ ಹಾಕುವುದು ಸರಿಯೋ ತಪ್ಪೋ ಎಂದು ನಾನು ಇಲ್ಲಿ ವಾದಿಸುತ್ತಿಲ್ಲ. ಅದು ಅವರ ಇಚ್ಚೆಗೆ ಬಿಟ್ಟಿದ್ದು. ಬಿ ಎಂ ಬಶೀರ್ ರವರ ಸ್ವಷ್ಟತೆಯಿಲ್ಲದ ಬರಹಕ್ಕೆ ನನ್ನ ಪ್ರತಿಕ್ರಿಯೆಯಷ್ಟೆ.
ಬಿ ಎಂ ಬಶೀರ್ ರವರು “ ಒಂದೆಡೆ ಬರೆಯುತ್ತಾರೆ, “ಸ್ಕಾರ್ಫ್ ಧರಿಸದೇ ಒಬ್ಬ ಹೆಣ್ಣಿಗೆ ಹೊರಗೆ ಇಳಿಯಲು ಅಸಾಧ್ಯವಾಗುತ್ತದೆ ಎನ್ನುವುದಾದರೆ ಆ ಸಂವೇದನೆಯನ್ನು ನಾವು ಗೌರವಿಸಬೇಕು. ಹೆಣ್ಣು ಮಕ್ಕಳನ್ನು ಯಾವ ರೀತಿಯಲ್ಲಾದರೂ ಒಲಿಸಿ ಶಾಲೆ, ಕಾಲೇಜುಗಳಿಗೆ ಸೇರಿಸಿ ಎಂದು ನಮ್ಮ ಶಿಕ್ಷಣ ನೀತಿ ಹೇಳುತ್ತದೆ. ಸ್ಕಾರ್ಫ್ ಅವೈಚಾರಿಕ ಸಂಗತಿಯೇ ಆಗಿದ್ದರೆ, ಶಿಕ್ಷಣವೇ ಅವಳನ್ನು ಸ್ಕಾರ್ಫ್ ಹಾಕದಂತೆ ತಡೆಯುತ್ತದೆ….”
ಆದರೆ, ಹೆಣ್ಣು ತನ್ನ ಇಷ್ಟಕ್ಕೆ ಅನುಸಾರವಾಗಿ ವಸ್ತ್ರ ಧರಿಸಲು ಅಲ್ಲಿನ ಧಾರ್ಮಿಕ ಮುಖಂಡರು ಬಿಡುತ್ತಿಲ್ಲವೆಂಬುದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದಿದೆ. ಇಂದು ಪ್ರತಿಷ್ಟಿತ ಶಾಲೆಗಳಲ್ಲಿ ಕಲಿಯುವ ವಿಧ್ಯಾರ್ಥಿನಿಯರು, ಮನೆಯಿಂದ ಶಾಲೆಗೆ ಹೊರಡುವಾಗ ಬೂರ್ಖಾ ದರಿಸಿಯೇ ಶಾಲೆಗೆ ಬರುತ್ತಾರೆ. ಹಾದಿಯಲ್ಲಿ ಅಥವಾ ಶಾಲೆ ಸಮೀಪಿಸುತ್ತಿದ್ದಂತೆ ಬೂರ್ಖಾ ತೆಗೆದು ಶಾಲೆಯ ಸಮವಸ್ತ್ರವಾದ ಅರ್ದ ಲಂಗ (ಸ್ಕರ್ಟ್) ಧರಿಸುತ್ತಾರೆ. ಮತ್ತು ಶಾಲೆಯಿಂದ ಹೊರಗೆ ತಮ್ಮವರ ಪರಿಚಯವಿಲ್ಲದ ಸ್ಥಳಗಳಲ್ಲಿ ಅವರು ಸ್ಕರ್ಟ್ ಧರಿಸಿಯೇ ಓಡಾಡುತ್ತಾರೆ. ಮನೆ ಸಮೀಪಿಸುತ್ತಿದ್ದಂತೆ ಬೂರ್ಖಾ ಧರಿಸುತ್ತಾರೆ. ಅದೇ ರೀತಿ ಗಾರ್ಮೆಂಟ್, ಕಾರ್ಖಾನೆ, ವ್ಯಾಪಾರ ಮಳಿಗೆ ಮತ್ತು ಇತರೆ ಉದ್ಯೋಗಗಳಿಗೆ ಹೋಗುವ ಹಲವು ಮಹಿಳೆಯರು ಮನೆಯಿಂದ ಹೊರಹೋಗುವಾಗ ಮತ್ತು ಮನೆಗೆ ಮರಳುವಾಗ ಮಾತ್ರ ಬೂರ್ಖಾ ಧರಿಸುತ್ತಾರೆ. ಈ ಬಗ್ಗೆ ಹಲವು ಮುಸ್ಲೀಂ ಸ್ನೇಹಿತರನ್ನು ಪ್ರಶ್ನಿಸಿದಾಗ, ಅವರ ಸ್ಥಳೀಯ ಧಾರ್ಮಿಕ ಮುಖಂಡರು ಇಂತಹ ಕಟ್ಟುಪಾಡು ವಿದಿಸಿರುವ ಬಗ್ಗೆ ತಿಳಿಸುತ್ತಾರೆ. ಇಂತಹ ಕಟ್ಟುಪಾಡುಗಳನ್ನು ಎದುರಿಸಿ ನಿಲ್ಲುವ ಧೈರ್ಯ ಸಾಲದೇ, ತಮಗಿಷ್ಟವಿಲ್ಲದಿದ್ದರೂ ಬೂರ್ಖಾ ಧರಿಸುವ ಒತ್ತಡಕ್ಕೆ ಮುಸ್ಲೀಂ ಮಹಿಳೆಯರು ಒಳಗಾಗುತ್ತಾರೆ. ಹಲವು ಕುಟುಂಬದ ಪುರುಷರೂ ತಮಗೆ ಇಷ್ಟವಿಲ್ಲದಿದ್ದರೂ ಇದನ್ನು ಒಪ್ಪಿಕೊಳ್ಳುತ್ತಾರೆ. ಪರಿಸ್ಥಿತಿ ಹೀಗಿರುವಾಗ “…ಆ ಸಂವೇದನೆಯನ್ನು ನಾವು ಗೌರವಿಸಬೇಕು” ಎನ್ನುವ ಬಶೀರ್ ಅನಿಸಿಕೆಗೆ ಅರ್ಥವಿಲ್ಲವೆನಿಸುತ್ತದೆ. ಬೂರ್ಖಾ ಧರಿಸುವ ಹೆಣ್ಣಿನ ಸಂವೇದನೆಯನ್ನು ನಾವು ಗೌರವಿಸೋಣ. ಅದೇ ರೀತಿ ಬೂರ್ಖಾವನ್ನು ಧರಿಸಲು ಇಷ್ಟವಿಲ್ಲದ ಹೆಣ್ಣಿನ ಸಂವೇದನೆಯನ್ನೂ ನಾವು ಗೌರವಿಸೋಣ ಎಂಬ ಮಾತು ಬಶೀರ್ ರವರಿಂದ ಬರಬೇಕಿತ್ತು.
ಇಂದು ಸಂಘಪರಿವಾರವೂ ಸೇರಿದಂತೆ ಹಲವಾರು ಸಂಘಟನೆಗಳ ಅಡೆತಡೆಗಳನ್ನು ಎದುರಿಸಿ ಮುಸ್ಲಿಮ್ ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಧಾಪುಗಾಲು ಇಡುತ್ತಿದ್ದಾರೆ. Sangha parivara yavvaga mattu hege muslim mahileyarige shikshana padeyadanthe adethade untumaadide? svalpa vivarisi heli. please
ಧರ್ಮದೊಳಗಿನ ಯಾವುದೇ ಮೌಡ್ಯಗಳ ಕುರಿತು ಮಾತಾಡಿದಂತೆ ಆಹಾರ ಮತ್ತು ಉಡುಪಿನ ಕುರಿತಂತೆ ಬೀಸಾಗಿ ಮಾತನಾಡೂದು ಕೆಲವೊಮ್ಮೆ ತಪ್ಪು ಧ್ವನಿಗಳನ್ನು ನೀಡಬಹುದು. ನೀವು ಬುರ್ಖಾ ಯಾಕೆ ಧರಿಸುತ್ತೀರಿ, ಸ್ಕಾರ್ಫ್ ಯಾಕೆ ಧರಿಸುತ್ತೀರಿ ? ಎಂಬ ಪ್ರಶ್ನೆ ನೀವು ಗೋಮಾಂಸ ಯಾಕೆ ಸೇವಿಸುತ್ತೀರಿ ಎಂದು ಕೆಲವರು ಕೇಳಿದಂತೆಯೇ ಧ್ವನಿಸೋದು ಇದೆ ಕಾರಣಕ್ಕೆ. (ಕೆಲವು ಹುಡುಗರು ಬುರ್ಖಾ, ಸ್ಕಾರ್ಫ್, ನಿಕಾಬ್ ಇವುಗಳ ವ್ಯತ್ಯಾಸವೇ ತಿಳಿಯದೆ ವಾದಿಸುತ್ತಿದ್ದರು). ಯಾವುದೇ ಕಾರಣಕ್ಕೆ ಒಂದು ಉಡುಪು ಧಾರಣೆ ಆರಂಭವಾಗಲಿ, ಧರಿಸುತ್ತಾ ಹೋದಂತೆ ಅದು ನಿಧಾನಕ್ಕೆ ಬದುಕಿನ, ಮೈ ಮೇಲಿನ ಸಂವೇದನೆಯ ಭಾಗವಾಗುತ್ತದೆ. ಆದುದರಿಂದಲೇ ಇದು ಯಾವುದೇ ಆದೇಶದಿಂದಲಾಗಲಿ, ನಮ್ಮಂಥವರ ಘೋಶನೆಗಳಿನ್ದಾಗಲಿ(ಬುರ್ಖಾ ಬೇಕು -ಬೇಡ) ಇಲ್ಲವಾಗಿಸೋದು ಸಾಧ್ಯವಿಲ್ಲ. ಬದಲಿಗೆ ಅವರ ಬದುಕಿನಲ್ಲಿ (ಶಿಕ್ಷಣದ ಮೂಲಕ, ಸ್ವಾವಲಂಬಿ ಸಾಧನೆಗಳ ಮೂಲಕ) ಬದಲಾವನೆಗಳಾದಾಗ ಧಿರಿಸಿನಲ್ಲೂ ಸಹಜವಾಗಿ ಬದಲಾವಾನೆ ಆಗುತ್ತದೆ. ಇದನ್ನು ನನ್ನ ಲೇಖನದಲ್ಲಿ ನಾನು ಹೇಳಿದೆ. ಆದರೆ ಇಲ್ಲಿ ಕೆಲವು ಚಿಂತಕರು ಬುರ್ಖಾ ಹೋದರೆ ಅವರ ಬದುಕಿನಲ್ಲಿ ಬದಲಾವಣೆ ಯಾಗುತ್ತೆ ಎಂದು ಚರ್ಚಿಸಿದರು. ನಾನು, ಬದುಕಿನಲ್ಲಿ ಬದಲಾವಣೆಯಾದರೆ ಧಿರಿಸಿನಲ್ಲಿ ಬದಲಾವಣೆಯಾಗುತ್ತದೆ ಎಂದೇ. ಅಷ್ಟೇ. ಇಲ್ಲಿ ಬುರ್ಖಾ ಕುರಿತಂತೆ ಮಾತನಾಡಿದ ದಿನೇಶ್ ಅಮೀನ್ ಮಟ್ಟು, ಜಿ. ಎನ್. ನಾಗಾರಾಜ್ ರಂಥವರು ಮುಸ್ಲಿಂ ಸಮುದಾಯದ ಕುರಿತಂತೆ ಇಟ್ಟಿರುವ ಕಾಳಜಿಯ ಬಗ್ಗೆ ನನಗಂತೂ ಯಾವ ಅನುಮಾನವೂ ಇಲ್ಲ. ದಲಿತರು, ಅಲ್ಪಸಂಖ್ಯಾತರು, ದುರ್ಬಲರ ಪರವಾಗಿ ಅಮೀನು ಮಟ್ಟು ತಳೆಯುತ್ತಾ ಬಂದಿರುವ ನಿಲುವು ಅತ್ಯಂತ ಶ್ರೇಷ್ಠ ವಾದುದು. ಅದರ ಬಗ್ಗೆ ಅನುಮಾನ ವ್ಯಕ್ತ ಪಡಿಸೋದು ನಮಗೆ ನಾವೇ ದ್ರೋಹ ಮಾಡಿಕೊಂಡಂತೆ. ಈ ಚರ್ಚೆಯ ಬಳಿಕ ಮಟ್ಟು, ನಾಗರಾಜ್ ಕುರಿತಂತೆ ನನ್ನ ಪ್ರೀತಿ ದುಪ್ಪಟ್ಟಾಗಿದೆ. ಉಳಿದಂತೆ ನನ್ನ ಲೇಖನದಲ್ಲಿ ಬಳಸಿದ “ಸೆರಗಿಗೆ ಕೈ ಹಾಕಿದಂತೆ” “ವೈಚಾರಿಕ ಮೂಲಭೂತವಾದಿ” ಎನ್ನೋ ಶಬ್ದ ಮಟ್ಟು ಸೇರಿದಂತೆ ಕೆಲವು ಗೆಳೆಯರಿಗೆ ತೀವ್ರ ನೋವು ಕೊಟ್ಟಿದೆ ಎಂದು ತಿಳಿಯಿತು. ಇದು ಉದ್ದೇಶ ಪೂರ್ವಕವಾಗಿ ಅಥವಾ ಯಾರಿಗೋ ವೈಯಕ್ತಿಕವಾಗಿ ಬಳಸಿದ ಶಬ್ದ ಅಲ್ಲ. ಆದರೂ ಈ ಶಬ್ದ ಬಳಕೆ ಋಣಾತ್ಮಕವಾದುದನ್ನು ಧ್ವನಿಸುತ್ತದೆ ಎಂದು ನನಗೂ ಈಗ ಅನ್ನಿಸುತ್ತಿದೆ. ಇದಕ್ಕಾಗಿ ನಾನು ವಿಷಾದಿಸುತ್ತಿದ್ದೇನೆ. ಮತ್ತು ಈ ಎರಡೂ ವಾಕ್ಯವನ್ನು ನಾನು ಹಿಂದಕ್ಕೆ ತೆಗೆದುಕೊಂಡಿದ್ದೇನೆ. ಅದಕ್ಕೆ ಕತ್ತರಿ ಹಾಕಿದ್ದೇನೆ. ನನ್ನ ಬರಹದಿಂದ ಯಾರಿಗೇ ನೋವಾಗಿದ್ದರು ಕ್ಷಮೆ ಇರಲಿ. ಈ ಚರ್ಚೆ ಒಂದು ಒಳ್ಳೆಯ ಸಮಾಜವೊಂದನ್ನು ನಿರ್ಮಿಸಲು ಪೂರಕವಾಗಲಿ ಎಂದು ನಾನು ಬಯಸುತ್ತೇನೆ. ಇಲ್ಲಿಗೆ ಈ ಕುರಿತಂತೆ ನನ್ನ ಭಾಗದ ಹೇಳಿಕೆ ಪ್ರತಿ ಹೇಳಿಕೆಗಳನ್ನು ನಿಲ್ಲಿಸಿದ್ದೇನೆ