ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೀವದಲಿ ಜಾತ್ರೆ ಮುಗಿದಂತೆ……

ಸಮ್ಮೇಳನ ಮುಗಿದೋಯ್ತು ಭರಪೂರ ..

ರಣ ರಾವು ಹೊಡಿತೈತಿ ವಿಜಾಪುರ ……

ಶಿವು ಮೊರಿಗೇರಿ

ಕೊನೀಗೂ ವಿಜಾಪುರದ ಸಾಹಿತ್ಯ ಸಮ್ಮೇಳನ ಕೊನಿಯಾತು ನೋಡ್ರಿ. ಇನ್ನೇನಪ್ಪಾ ಯಲ್ಲಾ ಮುಗಿತಲ್ಲಾ ಹೊಂಡದಾ, ಇನ್ನು ಮನಿಗ್ಯ ? ಅಂದ್ಕಂಡು, ವಿಜಾಪುರ ಬಿಡಾಕಿಂತ್ಲು ಮುಂಚೆ, ಆ ಸಮ್ಮೇಳನ ನಡೆದ ಜಾಗನ ಕೊನೀಬಾರಿ ಇನ್ನೊಮ್ಮಿ ಕಣ್ತುಂಬ್ಕಬೇಕು ಅನ್ನಿಸ್ತು .ತಡಾನ ಮಾಡ್ಲಿಲ್ಲ. ನೇರ ಸೈನಿಕ ಸಾಲಿ ಮೈದಾನದೊಳಗ ಹೋಗಿ ನೋಡಿದ್ರ, ಜನಾ ಜಾತ್ರಿಯಿಂದ ತುಂಬಿಕಂಡಿದ್ದ ಮೈದಾನ ಬೆತ್ಲ ಬಿದ್ದಿತ್ತು. ಪಾಪ ಅನ್ನಿಸ್ತು ನೋಡಿ.

ಒಂದೆಜ್ಜಿ ಇಡಾಕೂ ಜಾಗನ ಸಿಗದಿದ್ದ ವೇದಿಕಿ ಮುಂದ್ಲ ಜಾಗದಾಗಿನ ಕೆಂಪು ಕುರ್ಚಿಗಳು ಟಂ,ಟಂ, ಲಾರಿಗಳ ಮ್ಯಾಲ ಮಕ್ಕಣಕತ್ತಿದ್ವು. ಮುಖ್ಯ ವೇದ್ಕಿ ಮ್ಯಾಗಳ ದೊರಿಗಳು ಕುಂದ್ರ ಸಿಂಹಾಸನಗಳು, ದುಂಡಗ ಖಾಲಿ ಕುಂತು ಅಲ್ಟಿ ಹೊಡಿತಿದ್ವು. ನೂರಾರು ಸಾಧಕರ ಕೊಳ್ಳಾಗ ಮೆರದಿದ್ದ ಊವ್ವಿನ ಮಾಲಿಗಳು ಟೇಜ್ ಸೆಟ್ ಹಿಂದೆ, ಮಕ ಒಣಗಿಸ್ಕಂಡು ಬಿದ್ದಿದ್ವು. ಕನ್ನಡ ಭುವನೇಶ್ವರಿ ಪೋಟೋ ಹೋಗಿ, ಅಕ್ಕಿಗ್ಯ ನೆಳ್ಳು ಮಾಡಿದ್ದ ಪಲ್ಲಕ್ಕಿ ಕೊಡಿ, ಅನಾಥವಾಗಿ ಖಾಲಿ ನಿಂತಿತ್ತು. ಟೇಜಿನ ಮುಂದೆ ಜನಗಳಿಗ್ಯ, ಹಗಲನ್ನ ಅಣಕಿಸಂತ ಬೆಳಕು ನೀಡತ್ತಿದ್ದ ದೊಡ್ಡ ದೊಡ್ಡ ಲೈಟುಗಳನ್ನ, ಮ್ಯಾಗಿಂದ ಇಳಿಸಾಕತ್ತಿದ್ರು. ಮೂರು ದಿವ್ಸದಿಂದನೂ ಕಿವಿ ರಮ್ ಗುಟ್ಟಂಗ ಸೌಂಡು ಮಾಡ್ತಿದ್ದ ಮೈಕು, ಡಕ್ಕುಗಳನ್ನೆಲ್ಲ, ಎತ್ತಿ ಲಾರೀಗ್ಯ ಬಿಸಾಕತಿದ್ರು. ಪಾಪ ಟೇಜಿನ ಸೆಟ್ಟಿನ ಒಳಗ ಯಾರಾ ನಿದ್ದಿಗೆಟ್ಟು, ದುಪ್ಪಡಿ ಹೊದ್ಕಂಡು ಮಕ್ಕಂಡ್ರ,ಯಾರಾ, ಕಿಡಿಗೇಡಿಗಳು, ಅತನ ಮ್ಯಾಲ ಮನ್ನಿ ಹೂವಿನಾರಾನ ಹೆಣಕ್ಕ ಹಾಕಿದಂಗ ಹಾಕಿದ್ರು.ನೋಡಾಕ ಥೇಟ್ ಹೆಣ ಕಂಡಂಗಾ ಕಾಣಕತ್ತಿತ್ತು.
ವೇದಕಿಯ ಮುಂದಲ ಅಂಗಳದಾಗ ಸಾಲಗಟ್ಟಿ ಹಾಕಿದ್ದ ಎಲ್ಲಾ ಬುಕ್ಕದ ಮಳಗಿಗಳು, ಎಲ್ಲಾ ಸಪಾಟು ಆಗಿದ್ವು.ಆ ಮೈದಾನದಾಗ ನೀವಿಗ ಎಲ್ಲಿ ನೋಡಿದ್ರು, ಬರೆ ಹಾಳಿ, ಪ್ಲಾಸ್ಟಿಕ್ ಚೀಲಗಳಾ ತುಂಬಿಕಂಡಾವು. ಹಂಗ ಹಿಂದನಾ, ಒಂದು ಟ್ಯಾಕ್ರಿ ತಗಂಡು ಅಲ್ಲಿನ ಸಿಬ್ಬಂದಿ ಕಸ,ಕಡ್ಡಿ,ಎಲ್ಲದನ್ನೂ ಲೋಡ್ ಮಾಡಕತ್ತಿದ್ರು. ನಾನು ಕ್ಯಾಮರಾ ತಗಂಡು ಪೋಟೋ ತೆಗಿಯಾಕರ,’ಬರೆ ಪೋಟೋ ತೆಕ್ಕಂಡು ಹಂಗ ಹೋಗಬ್ಯಾಡ್ರಿ…ಓಟು,ಒಂದ್ನಾಕು ಪೇಪರಿಗ್ಯ ಆಕ್ರಿ’ ಅಂದೋರೂ ಅದಾರ, ‘ಪೋಟೋ ತೆಕ್ಕೋರಿ ಅಡ್ಡಿಯಿಲ್ಲ, ಆದ್ರ ಯಲ್ಲೀ ಆಕಬ್ಯಾಡ್ರಿ’ ಅಂದೋರೂ ಅದಾರ. ಹಂಗಾ ನಾನು ಈ ಲಾರಿ ಡ್ರೈವರ್ ಗಳನ್ನ, ಅಲ್ಲಿ ಕೆಲ್ಸ ಮಾಡಾರ್ನ,’ಮುಗಿತೇನ್ರಣ್ಣಾ ಜಾತ್ರಿ?’ ಅಂದದ್ಕ, ಊನಪ್ಪಾ, ಇವತ್ತೊಂದಿನ ಇದನ್ನೆಲ್ಲಾ ವಾಣಾ ಮಾಡಿಬಿಟ್ರ, ಮುಗಿತು ನೋಡು, ಅಂದ್ರು.

ಅವರನ್ನ ಮಾತಾಡಿಸ್ಕಂಡು ಮುಂದೆ ಬರ್ತಾ ಇದ್ದಂಗನ, ನನಿಗ್ಯ ಈ ಸಮಾನಾಂತರ ವೇದಿಕಿ ನೆಪ್ಪಾತು. ಅಯ್ಯಾ ಇವನಾಪ್ಪನ, ಇನ್ನೊಂದು ವೇದ್ಕಿ ಮಾತಾಡಸದ ಹಂಗಾ ವಂಟ್ರ, ಸರಸ್ವತಿ ಮೆಚ್ಚತಾಳೇನು ? ಅಂದ್ಕಂಡು, ಹೋದ್ರ ಅಲ್ಲೀ ಅಲೆ ಎಲ್ಲಾ ಕಾಲಿಯಾಗಿತ್ತು ಜಾಗ. ಅಲಂಕಾರಕ್ಕ ಅಂತ ಬಂದಿದ್ದ ಬಂಗಾರದ ಬಣ್ಣದ ಕಂಬಗಳು, ಬಿಸಲಾಗ ಹಂಗಾ ನಿಂತಿದ್ವು. ಅಲ್ಲೇ ಪಕ್ಕದಾಗಿನ ಔಟ್ ಅನ್ನಾ ಬೋರ್ಡ್ ಮಗ್ಗಲಾಗೇಸಿ ಆದು ಮುಂದ ಹೋದ್ರ, ‘ಕಂಟಿ ಅಡಿಟೋರಿಯಮ್’ ಮುಂದ ಎಲ್ಲರಿಗೂ ಆಶಿರ್ವಾದ ಮಾಡತಿದ್ದ, ಬೆಳ್ಳಿ ಬಣ್ಣದ ಗಣಪ ನೆಪ್ಪಾದ ಹುಡ್ಕಿದ್ಯ, ಸಿಗ್ಲಿಲ್ಲ. ಹಂಗ ಆ ಅಡಿಟೋರಿಯಂ ಒಳಗ ಹೋದ್ರ, ಕೊನೇ ಸೀಟಿಗ್ಯ ಕುಂತಿದ್ದ ನಮ್ಮ ಗಣಪಾ.! ಮೂರು ದಿನದಿಂದ ಕೋಟಿ ಜನಕ್ಕ ಆಶೀರ್ವಾದ ಮಾಡಿ, ಇವತ್ತು, ಟಾಕೀಜದೊಳಗ ಕೊನೇ ಸೀಟಿನಾಗ ಕುಂತು, ಖಾಲೀ ಟೇಜು ನೋಡಕ್ಕತ್ಯಾನ ಅನ್ನಿಸ್ತು. ಆ ಸಮಾನಾಂತರ ವೇದ್ಕೀನೂ ಬಿಕೋ ಅಂತಿತ್ತು.
ವೇದ್ಕಿ ಮಗ್ಗಲ ಗ್ವಾಡಿಗ್ಯ ನಾಕು ಪೋಟೋ ಹಾಕಿದ್ರು, ಅದ್ರಾಗ ಹೆಣ್ಣು ಗೊಂಬಿ ವೀಣಾ ಹಿಡ್ಕಂಡು, ಯಾರೋ ಕಳ್ಖಂಡೋರ್ನ, ನೆಪ್ಪು ಮಾಡ್ಕಣಕತ್ತ್ಯಾಳ ಅನ್ನಿಸ್ತು. ಬಹುಶ್ಯ ಆಕಿ, ಮನ್ನಿಲಿಂದ ನಡಿದ ಕಾರ್ಯಕ್ರಮಗಳನ್ನ, ಬಂದೋದ ಅಥಿತಿಗಳನ್ನ, ನೆಪ್ಪು ಮಾಡಿಕಂಡು ಒಬ್ಬಂಟಿಯಾಗಿ ಬಿಟ್ಟೋದ್ರೆಲ್ಲೋ ನನ್ನಾ…. ಅಂತ ಹೇಳತಿರಬೌದು.ಶಿವಶಿವಾ ಎನ್ನುತ್ತಾ ಆ ಜಾಗದಿಂದ ಆಚೆ ಬಂದು ರೋಡಿನಾಗ ನಿಂತು ಹಿಂದಕ್ಕ ತಿರುಗಿ ನೋಡಿದ್ರ, ಸೈನಿಕ ಸಾಲಿಯ ದೊಡ್ಡ ಗೇಟ್ ಬಂದಾತು. ಹಂಗ ಮುಂದ್ಲ ಸರ್ಕಲ್ ಗೆ ಹೋಗಿ ನಡಿದಿದ್ದನ್ನೆಲ್ಲಾ ನಿಮ್ಮ ಜತಿಗ್ಯ ಅಂಚ್ಕಣಾನು ಅಂತ ಸೈಬರ್ ಸೆಂಟರ್ ಕಡಿ ಬರಾಕ, ಟಂ ಟಂ ಹತ್ತಿದ್ರ ಒಂದು ಮುದ್ಕಿ ಕುಂತು, ಆ ಸಾಲಿ ಕಡಿ ನೋಡಿ,’ ಎಲ್ಲಾ ವಾಣಾ ಮಾಡಕ್ಕತ್ಯಾರ ನೋಡಪಾ ‘ ಅಂದ್ಲು. ನನಿಗ್ಯ ಅಚ್ಚರಿಯಾಗಿ ‘ ಯಮ್ಮಾ ಒಂದು ಮಾತು ಕೇಳತ್ನಿ..? ಅಂದದ್ಕ ‘ಕೇಳಾ ಯಪ್ಪಾ ಏನದು ?’ ಅಂದದ್ಕ ಅಲ್ಲಬೇ ಯಮ್ಮಾ ಇಲ್ಲಿ ಜಾತ್ರಿಗ್ಯ ಲಕ್ಷಗಟ್ಲಿ ಜನ ಬಂದಾರ, ಅದ್ರಾಗ ನಿಮ್ಮಂತ ಮುತ್ಯಾರು ಬಂದಿದ್ರು. ನೀನೂ ಬಂದಿದ್ದೇನಮ್ಮಾ ?ಅಂತ ಕೇಳಿದ್ಕ, ಹೂನಾ ತಮ್ಮಾ ಬಂದಿದ್ಯಾ..ಯಾಕಂದ್ರ ಸರ್ಕಾದೋರು ನಮ್ಮ ಮಕ್ಕಳಿಗ್ಯ ಸಾಲ್ಯಾಗ, ಬಟ್ಟಿ ಕೊಟ್ಟಾರ, ಬುಕ್ಕಾ ಕೊಡ್ತಾರ, ಸೈಕಲ್ ಕೊಡ್ತಾರ,ಮದ್ಯಾಹ್ನದ ಹೋತ್ನಾಗ ಬಿಸಿ ಕೂಳು ಕೊಡ್ತಾರ, ಹುಟ್ಟಿದ ಕೂಡ್ಲ, ಹೆಣ್ಣು ಮಕ್ಕಳಿಗ್ಯ ಒಂದು ಲಕ್ಷ ರೂಪಾಯಿ ಕೊಡ್ತಾರ, ಇಟಕೊಂದು ನಮಿಗ್ಯ ಸಾಯಾ ಮಾಡಿರ ದೊಡ್ಡೋರು ಬರತಾರಂದ್ರ ನಾವು ನೋಡಾಕ ಬಂದ್ರ ನಾವೇನು ಬಡವ್ರು ಅಕ್ಕೀವೇನು ? ರ್ವಕ್ಕೇನು ಗಳಿಸ್ತೈತಿ ತಮ್ಮಾ, ಸಾಯಾದ್ರಾಗ ಇದನ್ನೆಲ್ಲಾ ನೋಡಿಬಿಡಾಕು. ನಮ್ಮ ಕಡೀಗ್ಯ , ಹರೆದಾರು ನಾಕಾಣಿ. ಯಜಮಾನ್ರ ಎಂಟಾನಿ, ಯಾಕಂದ್ರ ಸಾಯಾ ವಯಸ್ಸಿಗ್ಯ ಇಂಥ ಜಾತ್ರಿ ನೋಡಾದು ಬಿಟ್ಟು ಇನ್ನೇನೈತಿ ? ಆಟಕೂ ಇದೇನಾ 90 ವರ್ಸದ ಇಂದ್ಯ ನಡಿದಿತ್ತಂತ್ಯ. ನಮ್ಮ ಪುಣ್ಯ ಈ ವರ್ಸ ನಡೀತು. ಹೋತ್ ಮತ್ಯ ಇಂಥಾ ಜಾತ್ರಿ ನೋಡಾಕ ಇನ್ನು ಎಟ್ಟು ತಲಿಗಾಣಬೇಕಾ ಏನಾ…. ಇಂಥಾ ಜಾತ್ರಿ ಬಿಟ್ಟೋರುಂಟೇಪ್ಪಾ? ಅಂತ ನನಿಗ್ಯ ಮಕಾ ಮಕಾ ಬೈದಂಗಾತು. ‘ ಈ ವಜ್ಜಿ ಇಟಾಕಂದು ಮಾತಾಡತೈತಲ್ಲ ಹೆಸರು ಕೇಳ್ಯಾಬಿಡಾನು ಅಂತ ಕೇಳಿದ್ಕ, ಯಪ್ಪಾ ಗಂಗೂಬಾಯಿ ಗೊರನಾಳ ಅಂತ ನನ್ನೆಸ್ರು. ಸಾ.ಸಾಲಟಗಿ. ಇಂಡಿ ತಾಲೂಕಪಾ ಯಪ್ಪಾ, ನಾನು ಮಾಜಿ ಟಿ.ಪಿ.ಅದೀನಪ್ಪಾ ಅಂತು. ನಮಸ್ಕಾರಬೇ ಯಮ್ಮಾ. ನಾ ಯಿನ್ನು ಬರ್ತೀನಿ ಅಂತೇಳಿ ಅಲ್ಲಿಂದ ಬಂದುಬಿಟ್ಟೆ.

ಇನ್ನೇನು ಗುಂಬಜ್, ಇಬ್ರಾಹಿಂ ರೋಜಾ, ಬಾರಾ ಕಮಾನು, ಹುಬ್ಳಿ ಬುರ್ಜು, ಮೊಲಕ್ ಮೈದಾನ್ ತೋಪು, ಸಂಗೀತ್ ಮಹಲ್ ಹಿಂಗ, ಇನ್ನೂ ಏನೇನಾ ಅದಾವಂತ. ನೋಡ್ಕಂಡು ವಿಜಾಪುರಕ್ಕೊಂದು ಸಲಾಂ ಹೇಳಿ ನಮ್ಮ ಮನಿಗ್ಯ ಹೋಗಬೇಕು ನೋಡ್ರಿ.. ಇಷ್ಟೆಲ್ಲಾ ನೋಡಿದ ಮ್ಯಾಲ ನನಿಗನ್ನಿಸಿದ್ದಂದ್ರ, ಸಮ್ಮೇಳನ ಮುಗಿದೋಯ್ತು ಭರಪೂರ ..ರಣ ರಾವು ಹೊಡಿತೈತಿ ವಿಜಾಪುರ …… ಅನ್ನೋ ನೋವು, ನೆನಪು, ಎದಿಯೊಳಗ ಹಸಿ ಹಸಿಯಾಗಿ ಹಂಗಾ ಕುಂತೈತಿ.

‍ಲೇಖಕರು G

12 February, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading