ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೀತಗಾರ ವೆಂಕಟಯ್ಯನ ಹೋರಾಟ ಮತ್ತು ರಾತ್ರಿ ಸಿಕ್ಕ ಸ್ವಾತಂತ್ರ್ಯ ..!

ನಾಗರಾಜ ಹೆತ್ತೂರು

ಸುಮಾರು 5 ವರ್ಷ ಇರಬಹುದು. ನಾನು ರಾಜ್ಯ ಮಟ್ಟದ ಪತ್ರಿಕೆಯೊಂದರ ವರದಿಗಾರನಾಗಿದ್ದೆ. ಹಾಸನದಿಂದ ಸುಮಾರು 8 ಕಿ.ಮೀ. ದೂರದಲ್ಲಿ ಕಡದರವಳ್ಳಿ ಎಂಬ ಗ್ರಾಮ ಇದೆ. 25 ವರ್ಷದ ಹಿಂದೆ ಅಂದಿನ ರಾಜ್ಯಮಟ್ಟದ ನಾಯಕರಾಗಿದ್ದ ದಿ. ಚಂದ್ರಪ್ರಸಾದ್ ತ್ಯಾಗಿ ಅವರ ನೇತೃತ್ವದಲ್ಲಿ ಈ ಭಾಗದಲ್ಲಿ ಹತ್ತಾರ ವರ್ಷಗಳಿಂದ ಜೀತಗಾರರಾಗಿ ದುಡಿಯುತ್ತಿದ್ದ ದಲಿತರನ್ನು ಬಿಡುಗಡೆಗೊಳಿಸಲಾಗಿತ್ತು. ಬಹುಶಃ ಅರಕಲಗೂಡಿನ ಗಂಗೂರು ಗ್ರಾಮದ ಜೀತ ಪ್ರಕರಣ ರಾಜ್ಯದಲ್ಲೇ ದೊಡ್ಡ ಸುದ್ದಿ ಎಬ್ಬಿಸಿದ ಪ್ರಕರಣ. ಸುಮಾರು 100 ಕುಟುಂಬಗಳನ್ನು ಜೀತ ವಿಮುಕ್ತರನ್ನಾಗಿ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಹಾಸನ ತಾಲೂಕಿನ ಕಡದರವಳ್ಳಿ ಗ್ರಾಮದಲ್ಲೂ ಸುಮಾರು 25 ಕ್ಕೂ ಹೆಚ್ಚು ಕುಟುಂಬಗಳನ್ನು ಜೀತ ದಿಂದ ಬಿಡುಗಡೆಗೊಳಿಸಲಾಗಿತ್ತು. ಅದರಲ್ಲಿ ಒಬ್ಬ ಜೀತ ವಿಮುಕ್ತ ವೆಂಕಟಯ್ಯ ಎಂಬ ವ್ಯಕ್ತಿ ಇದ್ದರು. ಚಂದ್ರಪ್ರಸಾದ್ ತ್ಯಾಗಿ ಯವರು ಬದುಕಿದ್ದ ಸಂದರ್ಭದಲ್ಲಿ ಅವರ ಮನೆಗೆ ಭೇಟಿ ಮಾಡಲು ಹೋಗಿದ್ದಾಗ ಈ ವ್ಯಕ್ತಿ ಅಲ್ಲಿಗೆ ಬಂದಿದ್ದರು. ವಯಸ್ಸು 50 ದಾಟಿತ್ತು. ಜೀವನವಿಡಿ ಗೌಡರ ಮನೆಯಲ್ಲಿ ಜೀತ ಇದ್ದವನು. ಸರ್ಕಾರ ಜೀತ ವಿಮುಕ್ತ ಮಾಡಿತ್ತೇ ವಿನಃ ಅವರಿಗೆ ತಕ್ಷಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿರಲಿಲ್ಲ.

ಪ್ರತಿ ಜೀತ ಕುಟುಂಬಕ್ಕೆ 2 ಎಕರೆ ಜಮೀನು ನೀಡಬೇಕೆಂದು ಆದೇಶವಾಗಿತ್ತು. ಆದರೆ ಭೂಮಿ ಮಾತ್ರ ನೀಡಿರಲಿಲ್ಲ. ಭೂಮಿ ಹುಡುಕುವುದೇ ಒಂದು ದೊಡ್ಡ ಕೆಲಸವಾಗಿತ್ತು. ನಮಗೆ ಭೂಮಿ ಕೊಡಿಸಿಕೊಡಿ ಎಂದು ವೆಂಕಟಯ್ಯ ತ್ಯಾಗಿ ಅವರ ಹಿಂದೆ ಬಿದ್ದಿದ್ದರು. ಕೈಯ್ಯಲ್ಲಿ ಉಳಿದ ಜೀತ ವಿಮುಕ್ತರ ಪಟ್ಟಿ, ಸರ್ಕಾರ ಜೀತ ವಿಮುಕ್ತ ಮಾಡಿದ ಆದೇಶ. ಡಿಸಿ, ಮಂತ್ರಿ, ಶಾಸಕರಿಗೆ ಕೊಟ್ಟ ಮನವಿಗಳ ದೊಡ್ಡ ಗಂಟೇ ಇತ್ತು. ಸುಮಾರು 10 ವರ್ಷ ಅವರ ಹಿಂದೆ ಹೋದರೂ ಭೂಮಿ ಮಾತ್ರ ಸಿಕ್ಕಿರಲಿಲ್ಲ. ಇದರ ಬಗ್ಗೆ ಪತ್ರಿಕೆಲಿ ಬರೆಸಿ ಬೇಗ ಭೂಮಿ ಸಿಕ್ಕುತ್ತದೆ ಎಂದು ವೆಂಕಟಯ್ಯನಿಗೆ ಯಾರೋ ಹೇಳಿ ಕಳಿಸಿದ್ದರು.
ಹೀಗೆ ಒಂದು ದಿನ ತ್ಯಾಗಿ ಮನೆಗೆ ಹೋಗಿದ್ದಾಗ ಪರಿಚಯವಾದರು. ನಾನು ನಮ್ಮ ಕಚೇರಿ ಹತ್ತಿರ ಬರುವುದಕ್ಕೆ ಹೇಳಿದ್ದೆ. ಅದಾದ ನಂತರ ನಮ್ಮ ಕಚೇರಿಗೆ ಹುಡುಕಿಕೊಂಡು ಬರಲು ಪ್ರಾರಂಭಸಿದರು. ಸಣ್ಣಪುಟ್ಟ ವಿಚಾರಕ್ಕೂ ನನ್ನ ಸಲಹೆ ಕೇಳಲು ಕಚೇರಿ ಗೆ ಬರಲು ಪ್ರಾರಂಭಿಸಿದರು. ನಾನು ಬಂದಾಗ ಪ್ರೀತಿಯಿಂದ ಮಾತನಾಡಿಸಿ ಭರವಸೆ ನೀಡುತ್ತಿದ್ದೆ. ಅವರ ಹಳೆ ಪಂಚೆ, ಕೈಯ್ಯಲ್ಲೊಂದುಪ್ಲಾಸ್ಟಿಕ್, ಮುಗ್ಧ ಮುಖ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಕೂಲಿ ಮುಗಿಸಿಕೊಂಡು ನೇರ ಅಲ್ಲಿಗೆ ಬರುತ್ತಿದ್ದರು. ವಾರದಲ್ಲಿ ಒಮ್ಮೆಯಾದರೂ ಬಂದು ನನ್ನ ಕೇಳುತ್ತಿದ್ದರು. ನಾನು ಇರದಿದ್ದರೆ ನಮ್ಮ ಮುಖ್ಯಸ್ಥರನ್ನು ಕೇಳುತ್ತಿದ್ದರು. ಪಾಪ ಅಮಾಯಕ. ಆಗ ನಮ್ಮ ಎಚ್ ಕೆ. ಕುಮಾರಸ್ವಾಮಿ ಮಂತ್ರಿಯಾಗಿದ್ದರು ಅವರ ಬಳಿ ಕರೆದುಕೊಂಡು ಹೋದೆ. ಹೀಗೆ ಅವನು ಕಚೇರಿಗೆ ಬರುವುದು ನನ್ನ ಆಗಿನ ಸ್ಥಾನಿಕ ಸಂಪಾದಕರಿಗೆ ಇಷ್ಟವಾಗುತ್ತಿರಲಿಲ್ಲ. ಒಂದು ದಿನ ಕರೆದು ಹೇಳೆ ಬಿಟ್ಟರು. ನಾಗರಾಜ್ ನಿಮ್ಮ ಹೋರಾಟವನ್ನು ಹೊರಗೆ ಇಟ್ಟುಕೊಳ್ಳಿ ಆಫಿಸ್ ತನಕ ತರಬೇಡಿ ಎಂದು.
ಮೂಲತಃ ಆ ವ್ಯಕ್ತಿಗೆ ಚಳವಳಿ, ದಲಿತರು ಎಂದರೇನೆ ಆಗುತ್ತಿರಲಿಲ್ಲ. ಆ ಕ್ಷಣಕ್ಕೆ ನಾನು ಕೂಡ ಆಯ್ತು ಎಂದೆ. ಅದೇ ಸಂದರ್ಭದಲ್ಲಿ ಇಲ್ಲಿನ ಜೀತಗಾರರ ಬಗ್ಗೆ ಗಮನ ಸೆಳೆಯಲೆಂದು ನಾನು , ನಮ್ಮ ಶ್ರೀನಿವಾಸ ಗೌಡ, ಮಂಜು ಬನವಾಸೆ, ಪಿ. ಮಂಜುನಾಥ್ ಮುಂತಾದವರು ಮಾತನಾಡಿಕೊಂಡು ಆಗಸ್ಟ್ 14 ರಮಧ್ಯ ರಾತ್ರಿ ಇದೇ ವೆಂಕಟಯ್ಯನನಿಂದ ಇದೇ ಹಾಸನದ ಹೇಮಾವತಿ ಪ್ರತಿಮೆ ಎದುರು ಧ್ವಜಾರೋಹಣ ಮಾಡಿಸಿದ್ದೆವು. ಜಿಲ್ಲಾಧಿಕಾರಿಯನ್ನು ಅಲ್ಲಿಗೆ ಕರೆಸಿ ಮನವಿ ಕೂಡ ಕೊಟ್ಟು ಸ್ವಾಮಿ ದಯವಿಟ್ಟು ಇವರಿಗೆ ನಿಜವಾದ ಸ್ವಾತಂತ್ರ ಕೊಡಿಸಿ ಎಂದು ಮನವಿ ಮಾಡಿದ್ದೆವು ಪಾಪ ಅಂದಿನ ಡಿಸಿ ಅಶ್ವಥನಾರಾಯಣಗೌಡರು ಕೂಡ ಪೂರಕವಾಗಿ ಸ್ಪಂಧಿಸಿದ್ದರು.
ನಿಜ ಹೇಳಬೇಕೆಂದರೆ. ಅವತ್ತು ಧ್ವಜರೋಹಣ ಮಾಡಿದ್ದ ವೆಂಕಟಯ್ಯ ಸ್ವತಂತ್ರ ಸಿಕ್ಕಷ್ಟೆ ಸಂತಸಗೊಂಡಿದ್ದ. ಆವತ್ತು ಆ ಊರಿನ ಹತ್ತಕ್ಕೂ ಹೆಚ್ಚು ಮಂದಿಯನ್ನೂ ಕರೆದುಕೊಂಡು ಬಂದಿದ್ದ. ಅಂದಿನ ಆ ಖುಷಿಯನ್ನು, ಆ ಪ್ರೀತಿಯನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಡಿಸಿ ಜೊತೆ ಧ್ವಜ ಹಾರಿಸಿದ್ದು ಅವರ ಭಾಗ್ಯ ಎಂದುಕೊಂಡಿದ್ದರು. ಅದಾದ ನಂತರ ಕೆಲವು ಸಂದರ್ಭ ವೆಂಕಟಯ್ಯ ನನ್ನ ಕಚೇರಿಗೆ ಮಾತನಾಡಿಸಲು ಬರುತ್ತಿದ್ದನಾದರೂ ಆತನನ್ನು ಹೊರಗಡೆ ಮಾತನಾಡಿಸಿ ಕಳಿಸುತ್ತಿದ್ದೆ. ಅದಾದ ನಂತರ ಕೆಲವು ತಿಂಗಳಲ್ಲಿ ನಾನು ಆ ಪತ್ರಿಕೆಗೆ ರಾಜಿನಾಮೆ ಕೊಟ್ಟು ಹೊರಬಂದು ಸ್ವತಂತ್ರನಾದೆ (5 ವರ್ಷದ ಹಿಂದೆ ). ನಂತರ ವೆಂಕಟಯ್ಯನ ಸಂಪರ್ಕ ಕಡಿದು ಹೋಗಿತ್ತು.
3 ವರ್ಷದ ಹಿಂದೆ ಆ ಗ್ರಾಮಕ್ಕೆ ಹೋಗಿದ್ದೆ. ವೆಂಕಟಯ್ಯ ತೀರಿಕೊಂಡಿದ್ದ. ಪಾಪ ಅಷ್ಟೆಲ್ಲ ಹಾಸನಕ್ಕೂ ಕಡದರವಳ್ಳಿಗೂ ಕಾಲು ಸವೆಸಿದ ಹೊರತು ಆತನಿಗೊಂದು ಭೂಮಿ ಕೊಡಿಸಲು ಸಾಧ್ಯವಾಗಲಿಲ್ಲ. ಆತನ ಮಗ ನನ್ನ ಗುರುತಿಸಿ ಸಾರ್ ನಿಮ್ಮ ಬಗ್ಗೆ ಅಪ್ಪ ಹೇಳುತ್ತಿದ್ದರು ಎಂದ. ಕಣ್ಣೀರು ಬಂತು. ಜೀತ ವಿಮುಕ್ತರರನ್ನು ಮಾಡುವ ಸರ್ಕಾರ ಅವರಿಗೆ ಕೊಡುವ ಭರವಸೆಗಳನ್ನು ಈಡೇರಿಸದಿದ್ದರೆ ವೆಂಕಟಯ್ಯನಂತಹವರ ಜೀವ ಹೇಗೆ ಕಳೆದು ಹೋಗುತ್ತದೆ ಎಂದು ಯೋಚಿಸಿದರೆ ನಿಜಕ್ಕೂ ದುಃಖ ಆಗುತ್ತದೆ.
ಈವತ್ತು ವೆಂಕಟಯ್ಯ ನೆನಪಾಗಲು ಕಾರಣ ಇಷ್ಟು..
ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಗಂಗೂರು ಜೀತ ವಿಮುಕ್ತ ರ ಕತೆಯೂ ಇದೇ ವೆಂಕಟಯ್ಯನಂತಹದ್ದೆ. 40 ವರ್ಷದ ಹಿಂದೆ ಜೀತಗಾರರನ್ನು ಪತ್ತೆ ಹಚ್ಚು ಜೀತ ವಿಮುಕ್ತ ಮಾಡಿದ ಸರ್ಕಾರ ಅವರಿಗೆ ಹಿಡಿ ಜಮೀನು ನೀಡಿಲ್ಲ . ದುರಂತ ಎಂದರೆ ವೆಂಕಟಯ್ಯನವರ ಮಕ್ಕಳು ಇಂದು ಅದೇ ಭೂಮಿಗಾಗಿ ಕಂಡಕಂಡವರ ಕಾಲು ಹಿಡಿಯುತ್ತಿದ್ದಾರೆ. ಈವತ್ತು ಅದೇ ವೆಂಕಟಯ್ಯನವರ ಸಮಕಾಲೀನ ಗಂಗೂರಿನ ಒಬ್ಬ ವ್ಯಕ್ತಿ ಮಗ ನನಗೆ ಕರೆ ಮಾಡಿ ಸಾರ್ ಮಂತ್ರಿ ಎಚ್.ಸಿ. ಮಹದೇವಪ್ಪ ಬಂದಿದ್ದಾರೆ ನೀವು ಪ್ರಶ್ನೆ ಎತ್ತಿ ಸಾರ್ ಎಂದ . ತಕ್ಷಣ ಓದಿದೆ. ನನ್ನ ಮಾಧ್ಯ ಗೆಳೆಯರಿಗೆ ಇದೊಂದು ಇಶ್ಯೂ ಪ್ರಸ್ತಾಪಿಸಿ ಎಂದೆ ಅಷ್ಟರಲ್ಲಿ ಪತ್ರಿಕಾಗೋಷ್ಠಿ ಮುಗಿಯಿತು ಎಂದರು. ಮನಸ್ಸಿಗೆ ಬೇಸರವಾಯಿತು.
ಅವರನ್ನು ಕೂರಿಸಿಕೊಂಡು ಕತೆ ಕೇಳಿದೆ. ಜೀತಗಾರರಾಗಿದ್ದಲೂ ಇದೇ ರೀತಿಯ ಪರಿಸ್ಥಿತಿ ಅನುಭವಿಸುತ್ತಿದ್ದರು ಎಂಬಂತೆ ಇತ್ತು. ಸರ್ಕಾರಗಳು ಮಾಡುವ ಯಡವಟ್ಟುಗಳಿಂದ ಈ ಕುಟುಂಬಗಳು ಬೀದಿಗೆ ಬಿದ್ದಿವೆ. ವ್ಯವಸ್ಥೆ ನೆನಪಿಸಿಕೊಂಡರೆ ಅಸಹ್ಯ ಎನಿಸುತ್ತದೆ. 100 ಜನಕ್ಕೆ ಎರಡು ಎಕರೆ ಭೂಮಿ ಕೊಡಲು ಆಗದ ಇದೆಂಥಹ ವ್ಯವಸ್ಥೆ ಮತ್ತು ಸರ್ಕಾರ…! ನಿಜಕ್ಕೂ ನಾಚಿಕೆ ಆಗಬೇಕು. ಅವರ ಕತೆ ಕೇಳುತ್ತಾ ವೆಂಕಟಯ್ಯ ನೆನಪಾದರು…… ನಾಳೆಯಿಂದ ಜೀತ ವಿಮುಕ್ತರ ಕತೆಗಳನ್ನು ಹುಡುಕಿಕೊಂಡು ಹೊರಟಿದ್ದೇನೆ…. ವೆಂಕಟಯ್ಯನ ನೆನಪಿನಲ್ಲಿ…
 

‍ಲೇಖಕರು G

19 October, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading