ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ.ಪಿ.ಬಸವರಾಜು ಹೊಸ ಕವಿತೆ- ದಸರಾ ಎಂದರೆ


ಜಿ.ಪಿ.ಬಸವರಾಜು

—-

ಈ ಸಲದ ಕುಸ್ತಿಯಲ್ಲಿ ಸೋಲುವುದಿಲ್ಲ ನಮ್ಮೂರ
ಪೈಲ್ವಾನ; ಕಳೆದಸಲ ಮರೆತಿದ್ದ ಪಟ್ಟುಗಳನ್ನೆಲ್ಲ ಈಗ
ಗಟ್ಟಿಮಾಡಿ ಕಾದಿದ್ದಾನೆ ಎದುರಾಳಿಗೆ; ಒಂದರೆಗಳಿಗೆ
ಎದುರಾಳಿ ಮೈಮರೆತರೂ ಸಾಕು ನಮ್ಮ ಪೈಲ್ವಾನ
ಕೆಡವಿ ಮಣ್ಣುಮುಕ್ಕಿಸುತ್ತಾನೆ ಮತ್ತೆ ಮೇಲೇಳದಂತೆ

ಈ ಮಣ್ಣು ಹಾಗೇ ಫಲವತ್ತು, ಅದಕ್ಕೇ
ಜನ ಮುಗೆಬಿದ್ದಿದ್ದಾರೆ, ಚಾಮುಂಡಿಯ
ತಪ್ಪಲೆಂದರೆ ಸುಮ್ಮನೇ ಅಲ್ಲ, ಸಾಕ್ಷಾತ್
ಅಮ್ಮನೇ ಕಣ್ಣರಳಿಸಿ ಕಾಯುತ್ತಾಳೆ ತನ್ನ
ಸಂತಾನ; ಮಣ್ಣಲ್ಲ ಇದು ಥೇಟು ಹೊನ್ನು

ಬೆವರೊರೆಸಿಕೊಳ್ಳುತ್ತಾರೆ ದೂರದ ಹೊಲಗಳಲ್ಲಿ
ದುಡಿವ ಮಂದಿ, ಸುರಿಸುತ್ತಾನೆ ಸೂರ್ಯ ಅವರ
ನೆತ್ತಿಯ ಮೇಲೆ ಬೆಂಕಿ, ಮೋಡಗಳೂ ಹಾಗೆ ಜಡಿ
ಮಳೆಯೆಂದರೆ ಒಡಲು ಕಂಪಿಸುವುದು, ಒಳಗೆಲ್ಲ
ಥಂಡಿ, ಕೆಸರಲ್ಲಿ ಊರಿದ ಹೆಜ್ಜೆ ಕೀಳುವುದೆ ಕಷ್ಟ
ಮನೆಯ ದಾರಿಯಲ್ಲಿ ಹಳ್ಳಕೊಳ್ಳ ನೀರೋ ನೀರು
ದಾಟಲಾಗದ ಒಡ್ಡುಗಳು, ತಳವೊಡೆದ ದೋಣಿಯ
ಈ ನೀರಲ್ಲಿ ತೇಲಿಸಿದರೆ ಹೆಣವೂ ಸಿಕ್ಕುವುದಿಲ್ಲ
ಗುಡುಗು ಎದೆನಡುಗಿಸುವುದು, ಸಿಡಿಲು ಇವರೆಲ್ಲ
ನಿಂತ ಮರಕ್ಕೇ ಬಡಿದು ಓಡಿದ್ದಾರೆ ಎಲ್ಲ ದಿಕ್ಕೆಟ್ಟು

ಈ ಬಾರಿಯ ದಸರಾ ಭಲೇ ಜೋರು, ಊರು
ಸಿಂಗಾರ, ಅರಮನೆಯು ಝಗಮಗ, ಗದ್ದಲವೊ
ಗದ್ದಲ, ಯಾರ ಮುಖ ಯಾರಿಗೆ ಕಾಣುವುದು
ಈ ಮುಖವಾಡಗಳಲ್ಲಿ, ನಿಂತರೆ ಲಾತ ಬೀಳುವುದು
ನಡೆಯುತ್ತಲೇ ಇರಬೇಕು, ಎಲ್ಲಿಗಾದರೂ ಸರಿ
ಜಂಬೂ ಸವಾರಿ ಸಾಗಲೇ ಬೇಕು, ಹುಷಾರಿ
ಎಂದು ಹೇಳುವ ಹೊತ್ತಿಗೇ ಕಣ್ಮರೆಯಾಗಿವೆ
ಪಾಕೀಟು, ಮೊಬೈಲು; ಇದು ದಸರಾ ಜಾದು!

ಪೈಲ್ವಾನ್ ಬಿದ್ದ ಮತ್ತೆ ಎದ್ದ ಎದುರಾಳಿಗೆ ಹೊಡೆದ
ಜನ ಚಪ್ಪಾಳೆ ತಟ್ಟಿದರು, ಕೇಕೆ ಹೊಡೆದರು, ಗೆದ್ದವನು
ಯಾರು, ಕಾಣಲಿಲ್ಲ ಗಲಾಟೆಯಲ್ಲಿ ಜಟ್ಟಿಯ ಮುಖ
ಕಣ್ಣುಮುಚ್ಚಿ ಚಿಹ್ನೆಯ ಮೇಲೆ ಒತ್ತಿ ಅಭ್ಯರ್ಥಿ ಆರಿಸಿದಂತೆ

ಊರತುಂಬ ಮೆರವಣಿಗೆ ಹೊರಟು ಜಯಘೋಷ ಕೂಗಿ
ಸುಸ್ತಾಗಿ ನೋಡಿದರೆ ನಮ್ಮ ಪೈಲ್ವಾನ ಅಲ್ಲಿರಲೇ ಇಲ್ಲ; ಅರೆ!
ಗೆದ್ದವರು ಯಾರು? ನೋಡಲೇ ಇಲ್ಲವಲ್ಲ ನಾವು ತಿಳಿದವರು

‍ಲೇಖಕರು avadhi

17 October, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading