
ಜಿ.ಪಿ.ಬಸವರಾಜು
**
ಬಹುಮುಖೀ ಸಂಸ್ಕೃತಿಯ ಸಮೃದ್ಧ ನೆಲೆ ಕರ್ನಾಟಕ. ಇಲ್ಲಿ ಹಲವು ಭಾಷೆಗಳು, ಅನೇಕ ಸಮುದಾಯಗಳು, ವಿಭಿನ್ನ ಸಂಸ್ಕೃತಿಗಳು ಕೈ ಕೈ ಹಿಡಿದು ಶತಮಾನಗಳ ಕಾಲದಿಂದ ಬದುಕುತ್ತ ಬಂದಿವೆ. ಸಹಬಾಳ್ವೆ ಎನ್ನುವುದು ನಮ್ಮ ರಾಜ್ಯದ ನರನಾಡಿಗಳಲ್ಲಿ ಸದಾ ಮಿಡಿಯುತ್ತಿರುವ ಜೀವ ಚೈತನ್ಯ. ಈ ಸಮೃದ್ಧಿಯನ್ನು ಹೆಚ್ಚಿಸುವ ದಿಕ್ಕಿನಲ್ಲಿ ಕ್ರಿಯಾಶೀಲವಾಗಲು ಅಗತ್ಯವಾದ ಸ್ವಾಯತ್ತ ಸಂಸ್ಥೆಗಳೂ ನಮ್ಮಲ್ಲಿವೆ. ಭಾಷೆ, ಸಾಹಿತ್ಯ, ಕಲೆ, ನೃತ್ಯ, ನಾಟಕ, ಪರಂಪರಾಗತ ಕಲೆಗಳಾದ ಯಕ್ಷಗಾನ, ಬಯಲಾಟ, ಜಾನಪದಗಳನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಈ ಸಂಸ್ಥೆಗಳು ನಿರಂತರವಾಗಿ ದುಡಿಯುತ್ತಲೇ ಬಂದಿವೆ. ಈ ಕಾರಣದಿಂದಾಗಿಯೇ ಸ್ವಾಯತ್ತ ಸಂಸ್ಥೆಗಳಿಗೆ ಪ್ರಾಮುಖ್ಯತೆ ಬಂದಿದೆ. ಈ ಸಂಸ್ಥೆಗಳ ಸ್ವಾಯತ್ತತೆ ಒಂದು ನಾಡಿನ ಘನತೆಯನ್ನು ಎತ್ತಿಹಿಡಿಯುವಲ್ಲಿ ಬಹುಮುಖ್ಯ ಕೊಡುಗೆಯನ್ನು ನೀಡಬಲ್ಲದು.
ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರು ಸ್ವಾಯತ್ತ ಸಂಸ್ಥೆಗಳ ಸಂಖ್ಯೆ ಸರಿ ಸುಮಾರು ೨೨. ಕನ್ನಡ, ತುಳು, ಕೊಂಕಣಿ, ಕೊಡವ, ಬ್ಯಾರಿ, ಅರೆಭಾಷಿ. ಲಂಬಾಣಿ ಭಾಷೆಗಳ ಅಕಾಡಮಿಗಳಿವೆ. ಇವಲ್ಲದೆ ಲಲಿತ ಕಲಾ ಅಕಾಡೆಮಿ, ನೃತ್ಯ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ. ನಾಟಕ ಅಕಾಡೆಮಿ, ಬಯಲಾಟ ಅಕಾಡೆಮಿ, ಜಾನಪದ ಅಕಾಡೆಮಿಗಳಿವೆ. ಮೈಸೂರು, ಧಾರವಾಡ, ಶಿವಮೊಗ್ಗ, ಕಲಬುರ್ಗಿ ಮತ್ತು ದಾವಣಗೆರೆಯಲ್ಲಿ ರಂಗಾಯಣಗಳಿವೆ. ಉಡುಪಿಯಲ್ಲಿ ಯಕ್ಷರಂಗವೂ ಇದೆ. ಜೊತೆಗೆ ಕುವೆಂಪು ಭಾಷಾ ಭಾರತಿ, ಕನ್ನಡ ಪುಸ್ತಕ ಪ್ರಾಧಿಕಾರಗಳೂ ಇವೆ. ಇವೆಲ್ಲ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ನೆರವಾಗುವಂಥ ವಿವಿಧ ಕಾರ್ಯಚಟುವಟಿಕೆಗಳಲ್ಲಿ ತೊಡಗಬೇಕಾದ ಸ್ವಾಯತ್ತ ಸಂಸ್ಥೆಗಳು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರೇಳು ತಿಂಗಳು ಕಳೆದಿವೆ. ಈ ಸರ್ಕಾರದ ಬಗ್ಗೆ ಜನ ವಿಶ್ವಾಸ ತೋರಿಸಿದರು. ಕನಸುಗಳನ್ನು ಕಟ್ಟಿದರು. ಬೆಳಗಾಗುವುದರೊಳಗೆ ಸರ್ಕಾರ ಸ್ವರ್ಗವನ್ನೇ ತಂದು ಭೂಮಿಗೆ ಇಳಿಸುತ್ತದೆ ಎಂಬ ಭ್ರಮೆ ಯಾರಿಗೂ ಇರುವುದಿಲ್ಲ. ಆದರೆ ಹಿಂದಿನ ಸರ್ಕಾರ ಮಾಡಿದ್ದ ಅಧ್ವಾನಗಳೆಲ್ಲ ಕೊನೆಗೊಂಡು ಹೊಸ ಜನಪರ ಆಡಳಿತ ತಲೆ ಎತ್ತುತ್ತದೆ ಎಂಬ ಕನಸು ಬಹು ಜನರದಾಗಿತ್ತು.
ಸಿದ್ದು ಸರ್ಕಾರ ಪ್ರಜಾಪ್ರಭುತ್ವ ಮೌಲ್ಯಗಳಿಗೆ ತಕ್ಕ ಬೆಲೆಯನ್ನು ಕೊಟ್ಟು ಮುಂದಡಿ ಇಡುತ್ತಿರುವುದು ಮೇಲು ನೋಟಕ್ಕೆ ಕಾಣಿಸುತ್ತಿದೆ. ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ್ದ ಗ್ಯಾರಂಟಿಗಳನ್ನು ಜಾರಿ ಮಾಡುವುದಕ್ಕಾಗಿ ಈ ಸರ್ಕಾರ ಬೆವರು ಹರಿಸುತ್ತಿರುವುದು ಕೂಡಾ ಕಾಣಿಸುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕೂಡಾ ಆಗಿಲ್ಲ. ಹೀಗಾಗಿ ಸರ್ಕಾರದ ಸಾಧನೆಯನ್ನು, ಏಳು–ಬೀಳುಗಳನ್ನು ಗುರುತಿಸುವ, ವಿಮರ್ಶಿಸುವ ಕೆಲಸಕ್ಕೆ ಇನ್ನೂ ಸಮಯವಿದೆ.
ಸರ್ಕಾರದ ನಡೆ ಇನ್ನು ಮೂರ್ನಾಲ್ಕು ತಿಂಗಳಲ್ಲೇ ಎದುರಾಗುವ ಲೋಕಸಭಾ ಚುನಾವಣೆಯ ಮೇಲೇ ಕಣ್ಣಿಟ್ಟಿದೆ. ಇದು ಅಸಹಜವೇನಲ್ಲ. ಆದರೂ ತನಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ದಿಕ್ಕಿನಲ್ಲಿ ಇನ್ನಷ್ಟು ಬಿರುಸಿನಿಂದ ಕೆಲಸ ಮಾಡಬೇಕು. ಆಗ ಜನತೆಯ ನಂಬಿಕೆ ಹೆಚ್ಚಾಗುತ್ತದೆ. ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಸುಲಭವೂ ಆಗುತ್ತದೆ. ಒಂದು ಹೆಜ್ಜೆ ಮುಂದಿಟ್ಟರೆ ಏನೋ ಎಂಬ ಅನುಮಾನದಲ್ಲಿಯೇ ಹೆಚ್ಚು ಸಮಯ ಕಳೆಯುವುದು ವ್ಯವಹಾರಿಕ ನಡೆಯಾಗುವುದಿಲ್ಲ.
ನಿಗಮ ಮಂಡಳಿಯ ನೇಮಕದಲ್ಲಿ ಸರ್ಕಾರ ತೀರ ಉತ್ಸಾಹವನ್ನು ತೋರಿಸುತ್ತಿದೆ. ಈ ಉತ್ಸಾಹಕ್ಕೆ ಕಾರಣ ಪಕ್ಷದ ಒಳಗೇ ಇರುವ ಒತ್ತಡ. ಮಂತ್ರಿಗಿರಿ ಸಿಕ್ಕದ ಶಾಸಕರು, ಪ್ರಭಾವೀ ನಾಯಕರು, ಪಕ್ಷದ ಕಾರ್ಯಕರ್ತರು ದಿನದಿಂದ ದಿನಕ್ಕೆ ಹೇರುತ್ತಿರುವ ಒತ್ತಡ ಸುಲಭದ್ದಲ್ಲ. ಕಾಂಗ್ರೆಸ್ ಹೈಕಮಾಂಡ್ ಕೂಡಾ ಚುನಾವಣೆಯ ಲೆಕ್ಕಾಚಾರದಲ್ಲಿಯೇ ಮುಳುಗಿರುವುದರಿಂದ ಈ ನೇಮಕಗಳು ಸರಳವಾಗಿಲ್ಲ. ಪಕ್ಷದೊಳಗಿರುವ ಅತೃಪ್ತರನ್ನು ಸಮಾಧಾನ ಪಡಿಸಲು ಹೋಗಿ ಮತ್ತಷ್ಟು ಅತೃಪ್ತಿಯನ್ನು ತಂದುಕೊಳ್ಳುವುದು ಸರಿಯಲ್ಲ ಎನ್ನುವ ಚಿಂತನೆಯಲ್ಲಿ ಈ ನೇಮಕಾತಿಗಳು ನಿಧಾನವಾಗುತ್ತಿವೆ. ರಾಜಕೀಯ ಚದುರಂಗದಾಟವನ್ನು ಬಲ್ಲ ಚಾಣಾಕ್ಷರು ಇದನ್ನೆಲ್ಲ ನೋಡಿಕೊಳ್ಳುತ್ತಿದ್ದಾರೆ.
ಮುಖ್ಯವಾಗಿ ಆಗಬೇಕಾಗಿರುವ ಕೆಲಸವೆಂದರೆ ನಮ್ಮ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ. ಸರ್ಕಾರ ಇದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ.

ಜನತಂತ್ರ ವ್ಯವಸ್ಥೆಯಲ್ಲಿ ಸ್ವಾಯತ್ತ ಸಂಸ್ಥೆಗಳ ಪಾತ್ರ ಬಹಳ ದೊಡ್ಡದು. ಈ ಕಾರಣಕ್ಕಾಗಿಯೇ ಈ ಸಂಸ್ಥೆಗಳು ಮಹತ್ವದ ಸಂಸ್ಥೆಗಳು. ಈ ಸಂಸ್ಥೆಗಳನ್ನು ಸರಿಯಾದ ರೀತಿಯಲ್ಲಿ ರೂಪಿಸುವುದು ಸಾಧ್ಯವಾದರೆ ಅದು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಜನತೆಯ ಹಿತವನ್ನು ಕಾಯಲು ಸಾಧ್ಯವಾಗುತ್ತದೆ. ಹಿಂದಿನ ಬಿಜೆಪಿ ಸರ್ಕಾರ ಬೇಕಾಬಿಟ್ಟಿಯಾಗಿ ನಡೆದುಕೊಂಡು, ಬಹುಪಾಲು ಅನರ್ಹರನ್ನೇ ನೇಮಕಮಾಡಿದ್ದರ ಪರಿಣಾಮವನ್ನು ಜನ ನೋಡಿದ್ದಾರೆ. ಮೈಸೂರು ರಂಗಾಯಣದ ನಿರ್ದೇಶಕರಂತೂ ದೊಡ್ಡ ರಾದ್ಧಾಂತವನ್ನೇ ಮಾಡಿ ಸಾಂಸ್ಕೃತಿಕ ಲೋಕವೇ ನಾಚಿಕೆಪಟ್ಟುಕೊಳ್ಳುವಂತೆ ಮಾಡಿದರು. ಇಂಥ ವ್ಯಕ್ತಿಗಳ ನೇಮಕಾತಿ ಕನ್ನಡ ನಾಡನ್ನು ಮುನ್ನಡೆಗೆ ತಡೆಯೊಡ್ಡುವುದು ಮಾತ್ರವಲ್ಲ, ಪಕ್ಷ ಮತ್ತು ಸರ್ಕಾರದ ಘನತೆಯನ್ನು ಕುಗ್ಗಿಸುತ್ತದೆ.
ಯಾವ ನೇಮಕಾತಿಯನ್ನೂ ಮಾಡದೆ ಈ ಸ್ವಾಯತ್ತ ಸಂಸ್ಥೆಗಳನ್ನು ಬಹಳ ಕಾಲ ನಿಷ್ಕ್ರಿಯವಾಗಿ ಉಳಿಸುವುದು ಜನತಂತ್ರ ವ್ಯವಸ್ಥೆಗೆ ಒಳ್ಳೆಯದಲ್ಲ. ಆರೇಳು ತಿಂಗಳ ಕಾಲ ಈ ಸಂಸ್ಥೆಗಳು ಸುಮ್ಮನೆ ಬಿದ್ದುಕೊಂಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇವುಗಳ ನೇಮಕಾತಿಗೆ ರಾಜಕೀಯ ಒತ್ತಡ ಇಲ್ಲವೆಂದಲ್ಲ. ನಿಗಮ ಮಂಡಳಿಗಳಿಗಿರುವಷ್ಟು ಒತ್ತಡ ಇಲ್ಲಿರುವುದಿಲ್ಲ. ಸರ್ಕಾರ ಇನ್ನೊಂದು ಅಂಶವನ್ನೂ ಮುಖ್ಯವಾಗಿ ಗಮನಿಸಬೇಕು. ರಾಜಕೀಯ ನೇಮಕಾತಿಯಂತೆ ಈ ಸಂಸ್ಥೆಗಳ ನೇಮಕಾತಿ ಆಗಬಾರದು. ಈ ದಿಕ್ಕಿನಿಂದ ನೋಡಿದಾಗ ಅರ್ಹ ವ್ಯಕ್ತಿಗಳನ್ನು ಗುರುತಿಸಲು ಸರ್ಕಾರ ಪರಿಣತರ ಸಮಿತಿಯನ್ನು ರಚಿಸಿ, ಸಮಿತಿಯ ಶಿಫಾರಸುಗಳನ್ನು ಮಾನ್ಯಮಾಡಿ ನೇಮಕಾತಿ ಮಾಡಬೇಕು. ಯೋಗ್ಯರು ಬಂದರೆ ಕನ್ನಡ ಭಾಷೆ, ಸಂಸ್ಕೃತಿ, ಕಲೆ, ಸಂಗೀತ ಮುನ್ನಡಿ ಇಡಲು ಅಗತ್ಯವಾದ ಚಟುವಟಿಕೆಗಳು ನಡೆಯುತ್ತವೆ. ಇದು ಅಗತ್ಯವಾಗಿ ಆಗಬೇಕಾದ ಬಹುಮುಖ್ಯ ಕೆಲಸ. ರಾಜಕಾರಣಿಗಳ ಮೇಲೆ ಒತ್ತಡ ತಂದು ಇಂಥ ಸಂಸ್ಥೆಗಳಿಗೆ ನುಗ್ಗುವ ಜನರನ್ನು ತಡೆಯಬೇಕಾಗಿರುವುದು ನಾಡಿನ ಹಿತದೃಷ್ಟಿಯಿಂದ ಅಗತ್ಯವಾದ ಕೆಲಸವೇ. ಒತ್ತಡ, ಶಿಫಾರಸು, ರಾಜಕಾರಣಿಗಳ ಒಲವು–ನಿಲುವು ಇವೆಲ್ಲ ಇರುತ್ತವೆಯಾದರೂ, ಸರ್ಕಾರ ಇದಕ್ಕೆಲ್ಲ ಮಣಿಯಬಾರದು.






0 Comments