‘ಕುಂದಗೋಳ’ ನಮ್ಮಲ್ಲಿನ್ನೂ ಉಳಿದಿದೆ
ಕಾರ್ಪೋರೇಟ್ ಜಗತ್ತಿನಲ್ಲಿ ಸಾಹಿತ್ಯ, ಸಂಗೀತ, ಚಿತ್ರಕಲೆ ಇತ್ಯಾದಿಗಳಿಗೆ ಜಾಗವೇ ಇಲ್ಲ. ಅಲ್ಲಿ ಉತ್ಪಾದನೆ, ಅದರ ಮಾರುಕಟ್ಟೆ, ಹಣ, ಲಾಭ, ನಷ್ಟ ಇತ್ಯಾದಿ ವಿದ್ಯಮಾನಗಳಿಗಷ್ಟೇ ಜಾಗ. ಕೊಳ್ಳುವ, ಮಾರುವ, ಉತ್ಪಾದಿಸುವ ಅಗತ್ಯಗಳಿಗಾಗಿ ಮನುಷ್ಯನನ್ನು, ಅವನ ಬುದ್ಧಮತ್ತೆಯನ್ನು ಬಳಸಲಾಗುವುದು. ಯಾರನ್ನು ಬಳಸಿಕೊಳ್ಳಬೇಕು, ಯಾರಿಂದ ತನಗೆಷ್ಟು ಲಾಭ ಇತ್ಯಾದಿ ಇಂಥ ವಿಚಾರಗಳೇ ಕಾರ್ಪೊರೇಟ್ ಜಗತ್ತಿಗೆ ಗೊತ್ತಿರುವುದು. ಅದರಾಚೆಗೆ ಅದರ ವಿಚಾರಗಳು ಹೊರಳುವುದೇ ಇಲ್ಲ. ಇದು ಕಠೋರವಾಗಿ ಕಾಣಬಹುದು; ಆದರೆ ಈ ಜಗತ್ತಿನ ಅಸ್ತಿತ್ವವೇ ಹೀಗೆ.
ವಿಚಿತ್ರ ಎಂದರೆ ಭಾರತವೂ ಸೇರಿದಂತೆ ಎಲ್ಲ ರಾಷ್ಟ್ರಗಳಲ್ಲೂ ಈ ಕಾರ್ಪೋರೇಟ್ ಜಗತ್ತು ಕಲೆ, ಸಾಹಿತ್ಯ, ಸಂಗೀತದ ಪರಿಪೋಷಕನಂತೆ ತೋರಿಸಿಕೊಳ್ಳುತ್ತದೆ. ಕಲಾವಿದರಿಗಾಗಿ, ಸಾಹಿತಿಗಳಿಗಾಗಿ ದೊಡ್ಡ ಪ್ರಮಾಣದಲ್ಲಿಯೇ ಹಣ ಸುರಿಯಲು ಈ ಜಗತ್ತು ಮುಂದೆ ಬರುತ್ತದೆ. ಇವತ್ತು ದೊಡ್ಡ ಬಜೆಟ್ಟಿನ ಕಾರ್ಯಕ್ರಮಗಳನ್ನು ಸಾಹಿತಿಗಳು, ಕಲಾವಿದರು ರೂಪಿಸುತ್ತಿದ್ದರೆ ಅದರ ಹಿಂದೆ ಕಾರ್ಪೋರೇಟ್ ಜಗತ್ತಿನ ಬೆಂಬಲವಿರುತ್ತದೆ. ಒಂದು ಕೈಯಿಂದ ಉದಾರವಾಗಿ ಹಣವನ್ನು ಕೊಡುವ ಈ ಜಗತ್ತು ಇನ್ನೊಂದು ದಿಕ್ಕಿನಿಂದ ಈ ಹಣವನ್ನು ಮರಳಿ ಪಡೆಯುವುದಕ್ಕಾಗಿ ತನ್ನದೇ ಆದ ಚಿಂತನೆಯನ್ನೂ ಕೊಡುತ್ತದೆ. ಇದರ ಪರಿಣಾಮವಾಗಿಯೇ ನಾವಿಂದು ಇವತ್ತು ಕಲೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಬೆಚ್ಚಿಬೀಳಿಸುವಂಥ ಬದಲಾವಣೆಗಳನ್ನು ಕಾಣುತ್ತಿದ್ದೇವೆ.
ಪ್ರಾಯೋಜಕತ್ವ (ಸ್ಪಾನ್ಸರ್ಷಿಪ್) ಎಂಬ ಪರಿಭಾಷೆಯನ್ನು ಹುಟ್ಟುಹಾಕಿದ್ದೇ ಈ ಕಾರ್ಪೋರೇಟ್ ಜಗತ್ತು. ಈ ಪ್ರಾಯೋಜಕತ್ವವನ್ನು ನೀಡಿ ಆ ಮೂಲಕ ತನ್ನ ಉತ್ಪನ್ನವನ್ನು ಮಾರಾಟ ಮಾಡಲು ಗಿರಾಕಿಗಳನ್ನು ಬೇಟೆಯಾಡುವುದೇ ಇದರ ಹಿಂದಿನ ಉದ್ದೇಶ. ಇದು ಒಂದು ಅರ್ಥದಲ್ಲಿ ಕಂಪೆನಿಗಳ ಜಾಹಿರಾತು. ಕಾರ್ಯಕ್ರಮಕ್ಕೆ ಬರುವವರಿಗೆ ಇದರ ಅಪಾಯದ ಸುಳಿವು ಕೂಡಾ ಸಿಕ್ಕುವುದಿಲ್ಲ. ಕಾರ್ಯಕ್ರಮಕ್ಕೆ ಪ್ರವೇಶ ಧನದ ಮೂಲಕವೇ ಪ್ರವೇಶ ಎಂದಾಗ ನಮಗೆಲ್ಲ ಒಂದಿಷ್ಟು ಕೋಪ ಬರಬಹುದೇ ಹೊರತು, ಉಚಿತ ಪ್ರವೇಶವಾದರೆ ನಮ್ಮ ಆಕ್ಷೇಪಣೆ ಏನೂ ಇರುವುದಿಲ್ಲ.
ಈ ಕಾರ್ಪೋರೇಟ್ ಜಗತ್ತಿನ ವಿಧಿವಿಧಾನಗಳು ಈಗಾಗಲೇ ನಮ್ಮ ಬಹುಪಾಲು ಕಾರ್ಯಕ್ರಮಗಳನ್ನು ನಿರ್ಧರಿಸುವ ವಿಧಿ ವಿಧಾನಗಳಾಗಿವೆ. ನಮಗೆ ಈ ಬಗ್ಗೆ ಎಷ್ಟು ಎಚ್ಚರ ಇದೆಯೋ ಇಲ್ಲವೋ ಅದು ಬೇರೆಯ ಮಾತು. ಆದರೆ ಈಗ ನಡೆಯುತ್ತಿರುವ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳ ಹಿಂದೆ ಕಾರ್ಪೋರೇಟ್ ಜಗತ್ತಿನ ಚಿಂತನೆ ಇರುವುದು ಸ್ಪಷ್ಟ. ಬೆಂಗಳೂರಿನ ಚೌಡಯ್ಯದಲ್ಲಿ ನಡೆಯುವ ಕೆಲವು ಕಾರ್ಯಕ್ರಮಗಳ ಉದಾಹರಣೆಯನ್ನು ಇಲ್ಲಿ ಕೊಡಬಹುದು. ಜಾಕೀರ್ ಹುಸೇನ್, ಹರಿಪ್ರಸಾದ್ ಚೌರಾಸಿಯಾ, ಜಸರಾಜ್ ಇತ್ಯಾದಿ ಮಹಾನ್ ಉಸ್ತಾದರ ಕಾರ್ಯಕ್ರಮಗಳನ್ನು ನೋಡಿ. ಒಂದು ಸಾವಿರ ರೂಪಾಯಿ ಪ್ರವೇಶ ಧನ ಈ ಕಾರ್ಯಕ್ರಮಗಳಿಗಿರುತ್ತದೆ. ಪ್ರವೇಶ ನಿಯಮಗಳೂ ಇರುತ್ತವೆ. ಈ ದೊಡ್ಡ ಪ್ರಮಾಣದ ಪ್ರವೇಶಧನವನ್ನು ಉತ್ಸಾಹದಿಂದಲೇ ಕೊಡುವ ಒಂದು ವರ್ಗವೂ ಇರುತ್ತದೆ. ಪ್ರವೇಶಧನ ಕೊಡಲಾಗದವರು ಅತ್ತ ತಲೆ ಹಾಕುವುದೇ ಇಲ್ಲ. ಕಲಾವಿದರಿಗೆ ದೊಡ್ಡ ಪ್ರಮಾಣದ ಗೌರವಧನ, ತಾರಾ ಹೋಟೆಲುಗಳ ಸೌಲಭ್ಯ, ವಿಮಾನ ಸೌಕರ್ಯ ಇತ್ಯಾದಿ ಎಲ್ಲ ವೈಭೋಗಗಳನ್ನೂ ಒದಗಿಸುವ ಈ ಕಾರ್ಪೋರೇಟ್ ಜಗತ್ತು ತಾನು ವ್ಯಯಮಾಡಿದ ಹಣವನ್ನು ಲಾಭ ಸಮೇತ ಪಡೆಯಲು ತನ್ನದೇ ಮಾರ್ಗಗಳನ್ನು ಹುಡುಕುತ್ತದೆ. ಅನೇಕ ಉತ್ಪನ್ನಗಳಿಗೆ ದೊಡ್ಡ ಪ್ರಮಾಣದ ಜಾಹಿರಾತು ಒದಗಿಸುವುದು, ಪ್ರವೇಶ ಧನದ ಮೂಲಕ ಗ್ರಾಹಕರನ್ನು ಸೆಳೆದುಕೊಳ್ಳುವುದು ಇತ್ಯಾದಿ ಹಲವು ವಿಧಾನಗಳನ್ನು ಅದು ಕಂಡುಕೊಂಡಿರುತ್ತದೆ. ತನಗೆ ಬೇಕಾದ ನಿಯಮಗಳನ್ನು ರೂಪಿಸಿಕೊಳ್ಳುವ ಹಕ್ಕನ್ನೂ ಅದು ಪಡೆದಿರುತ್ತದೆ.
ಇನ್ನೊಂದು ಉದಾಹರಣೆಯನ್ನು ನೋಡುವುದಾದರೆ, ಬೆಂಗಳೂರಿನ ‘ರಂಗಶಂಕರ’ದ ಉದಾಹರಣೆಯನ್ನೇ ನೋಡಬಹುದು. ಅಲ್ಲಿನ ನಾಟಕಗಳಿಗೆ ಇಡುವ ಪ್ರವೇಶ ಧನವನ್ನು ನೋಡಿ. ಒಳ ಪ್ರವೇಶಿಸಲು ಇರುವ ನಿಯಮಗಳನ್ನು ನೋಡಿ. ಮೈಸೂರಿನ ‘ರಂಗಾಯಣ’ದಲ್ಲಿರುವ ಸ್ವಾತಂತ್ರ್ಯ ಅಲ್ಲಿರುವುದಿಲ್ಲ. ‘ರಂಗಾಯಣ’ದ ಪ್ರವೇಶ ರೂ 25ಕ್ಕೆ ನಿಲುಕುತ್ತದೆ; ‘ರಂಗಶಂಕರ’ದಲ್ಲಿ ಅದು ಸಾಧ್ಯವಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾಲ್ಗಳಲ್ಲಿರುವ ಚಿತ್ರಮಂದಿರಗಳ ಉದಾಹರಣೆಯನ್ನೂ ತೆಗೆದುಕೊಳ್ಳಬಹುದು. ಅಲ್ಲೊಂದು ಅಪರೂಪದ ಚಿತ್ರಬಂದರೆ ಅದನ್ನು ನೋಡಲು ಚಿತ್ರಪ್ರೇಮಿಯೊಬ್ಬ ಏನೆಲ್ಲ ಚಿತ್ರಹಿಂಸೆಯನ್ನು ಅನುಭವಿಸಬೇಕು ಎಂಬುದನ್ನು ಗಮನಿಸಿ. (ಮಂಗಳೂರಿನ ಮಿತ್ರ ಅಶೋಕ ವರ್ಧನ ಅವರು ಇತ್ತೀಚೆಗೆ ಈ ಬಗ್ಗೆ ಒಂದು ಲೇಖನವನ್ನೇ ಬರೆದಿದ್ದರು.) ಇಂಥ ಅನೇಕ ಉದಾಹರಣೆಗಳನ್ನು ಕೊಡುತ್ತ ಹೋಗಬಹುದು.
ಧಾರವಾಡದ ಸಾಹಿತ್ಯ ಸಂಭ್ರಮದ ಹಿಂದೆ ಎರಡು ರೀತಿಯ ಚಿಂತನೆಗಳು ಕ್ರಿಯಾಶೀಲವಾಗಿರುವುದನ್ನು ಗಮನಿಸಬಹುದು. ಒಂದು ಆಧುನಿಕ ತಲೆಮಾರಿನ ಚಿಂತನೆ. ಇದು ಕಾರ್ಪೋರೇಟ್ ಜಗತ್ತಿನ ವಿದ್ಯಮಾನಗಳಿಂದ ಪ್ರಭಾವಿತವಾಗಿರುವಂಥದ್ದು. ಸಹಜವಾಗಿಯೇ ಇದರ ಚಿಂತನೆ ಕಾರ್ಪೋರೇಟ್ ಜಗತ್ತಿನ ಚಿಂತನಾ ವಿಧಾನವನ್ನೇ ಅನುಕರಿಸುವಂಥದ್ದು. ಇದರ ಪರಿಣಾಮವಾಗಿಯೇ ರೂ 1500 ಪ್ರವೇಶಧನ ಮತ್ತು ಕನ್ನಡ ಸಂದರ್ಭದಲ್ಲಿ ಹಾಸ್ಯಾಸ್ಪದವೆನ್ನಿಸುವ ಪ್ರವೇಶ ನಿಯಮಗಳು ರೂಪಗೊಂಡದ್ದು. ಇನ್ನೊಂದು ಹಳೆಯ ತಲೆಮಾರು. ಅದರ ಚಿಂತನೆ ನಿಜಕ್ಕೂ ನಮ್ಮ ಸಾಹಿತ್ಯ, ಕಲೆಗಳ ಮೇಲಿನ ಕಾಳಜಿಯಿಂದ ರೂಪಗೊಂಡಿದ್ದು. ಜೈಪುರ ಸಾಹಿತ್ಯೋತ್ಸವದಲ್ಲಿ ಅಲಕ್ಷ್ಯಕ್ಕೆ ಗುರಿಯಾದ ಪ್ರಾದೇಶಿಕ ಭಾಷೆ, ಸಾಹಿತ್ಯಗಳಿಗೆ ಮರುಗುವಂಥದ್ದು. ಈ ತಲೆಮಾರು ಸಹಜವಾಗಿಯೇ ಪ್ರಾದೇಶಿಕ ಭಾಷೆಗಳು, ಸಾಹಿತ್ಯ, ಕಲೆಗಳಿಗೆ ನ್ಯಾಯಯುತವಾಗಿ ಸಿಕ್ಕಬೇಕಾದ ಗೌರವದ ಪರವಾಗಿ ನಿಲ್ಲುವಂಥದ್ದು. ಜೊತೆಗೆ ಈ ಭಾಷೆ, ಸಾಹಿತ್ಯದಲ್ಲಿ ನಡೆಯುತ್ತಿರುವ ಹೊಸ ಹೊಸ ಪ್ರಯೋಗಗಳನ್ನು, ಪ್ರಯತ್ನಗಳನ್ನು ಗುರುತಿಸಿ, ಒರೆಗೆ ಹಚ್ಚಿ, ವಿಶ್ಲೇಷಿಸಿ, ತುಲನಾತ್ಮಕವಾಗಿ ನೋಡುವ ಹಂಬಲವನ್ನೂ ಉಳ್ಳದ್ದು.
ಕಾರ್ಪೋರೇಟ್ ಜಗತ್ತು ನಮ್ಮ ದೇಶವನ್ನು ಪ್ರವೇಶಿಸಿದ್ದು, ನಮ್ಮ ಚಿಂತನಾ ಕ್ರಮದ ಮೇಲೂ ಪ್ರಭಾವ ಬೀರಲು ಆರಂಭಿಸಿದ್ದು ಇದೇ ಈಗ ನಡೆದ ಸಂಗತಿಯಲ್ಲ. ಇದು ನಮ್ಮೊಳಗೆ ಪ್ರವೇಶ ಪಡೆದು ದಶಕಗಳೇ ಕಳೆದಿವೆ. ಈಗ ಕಾರ್ಪೋರೇಟ್ ಜಗತ್ತಿನ ಆರ್ಭಟವೇ ಹೆಚ್ಚಾಗಿದೆ. ನಮ್ಮ ಸಂಗೀತಗಾರರಿಗೆ ಕೈತುಂಬ ರೊಕ್ಕ ಸಿಕ್ಕುವುದು ಅಲ್ಲಿಯೇ. ನಮ್ಮ ಕಲಾವಿದರ ಪೇಂಟಿಂಗ್ಗಳಿಗೆ ಲಕ್ಷಾಂತರ ರೂಪಾಯಿ ದೊರಕುವುದು ಅಲ್ಲಿಯೇ. ಆದರೂ ನಮ್ಮಲ್ಲಿ ಇನ್ನೂ. ಕುಂದಗೋಳ ಉಳಿದುಕೊಂಡಿದೆ. ವರ್ಷಕ್ಕೊಮ್ಮೆ ಅಲ್ಲಿ ನಡೆಯುವ ಸಂಗೀತೋತ್ಸವ, ರಾಜಗುರು ಹೆಸರಿನಲ್ಲೊ, ಮನ್ಸೂರ್, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಗುರುರಾವ್ ದೇಶಪಾಂಡೆ, ಪಂಡಿತ ತಾರಾನಾಥ್, ಪಂಚಾಕ್ಷರ ಗವಾಯಿ ಮೊದಲಾದ ಮಹಾನ್ ಕಲಾವಿದರ ಸ್ಮರಣೆಯಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳು, ಅಹೋರಾತ್ರಿ ಉತ್ಸವಗಳು ಈಗಲೂ ಕೇಳುಗರಿಗೆ ಸುವರ್ಣಾವಕಾಶವನ್ನೇ ತೆರೆದಿಡುತ್ತವೆ. ಬೆಚ್ಚಗಿನ ಒಂದು ಹೊದಿಕೆ, ತಿನ್ನಲು ಕುರುಕಲು ತಿಂಡಿ ತಂದರಾಯಿತು; ಯಾವ ಪ್ರವೇಶಧನವೂ ಇಲ್ಲ; ಯಾವ ನಿಯಮ ನಿರ್ಬಂಧವೂ ಇಲ್ಲ. ಚಾ ಕುಡಿದು, ಪಾನ್ ಹಾಕಿ, ಅಲ್ಲಿಯೇ ಉಗಿದು, ‘ವಾಹ್ವಾ’ ಎನ್ನುವ ಶಿಫಾರಸನ್ನು ಅಲ್ಲಿಂದಲೇ ರವಾನಿಸಿ, ಚಪ್ಪಾಳೆ ತಟ್ಟಿ, ತಮಗೆ ಬೇಕಾದ ಭಜನ್ ಅಥವಾ ಅಭಂಗ್ ಅಥವಾ ಮರಾಠೀ ನಾಟ್ಯಗೀತೆಯನ್ನು ಹಾಡುವಂತೆ ಅಲ್ಲಿಂದಲೇ ಕೂಗಿ ಸುಖಿಸುವುದು; ನೇರವಾಗಿ ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಕ್ಕನ್ನು ಇಲ್ಲಿನ ಜನ ಉಳಿಸಿಕೊಂಡಿದ್ದಾರೆ. ಜನರ ಈ ಪ್ರತಿಕ್ರಿಯೆಯೇ ಒಂದು ಅರ್ಥದಲ್ಲಿ ಕಲಾವಿದರ ವಿಮರ್ಶೆಯೂ ಆಗಿರುತ್ತದೆ. ಇದನ್ನು ಮಾನ್ಯಮಾಡುವ ಗುಣವೂ ನಮ್ಮ ಕಲಾವಿದರಲ್ಲಿದೆ.
ಇದು ವಾಸ್ತವ ಜಗತ್ತು; ಆಳವಾಗಿ ಬೇರುಬಿಟ್ಟಿರುವ ಜಗತ್ತು. ಈ ಜಗತ್ತಿನ ಜೊತೆ ಕಾರ್ಪೋರೇಟ್ ಜಗತ್ತು ಸ್ಪರ್ಧಿಸಬೇಕಾಗಿದೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಒಪ್ಪಿಕೊಂಡಿರುವ ರಾಷ್ಟ್ರ ನಮ್ಮದು. ಇಲ್ಲಿ ಎಷ್ಟು ಜಗತ್ತುಗಳೂ ಇರಬಹುದು. ಜನಕ್ಕೆ ಒಪ್ಪಿತವಾಗುವ ಜಗತ್ತು ಉಳಿದಿರುತ್ತದೆ.





Good thoughtful article!
Correct sir!!
ಖಂಡಿತಾ ನಮ್ಮೊಳಗೇ ಎಚ್ಚರ ಮೂಡಿಸುವ ಲೇಖನ…
ನನ್ನಂಥ ಸಣ್ಣವನ ಅನಿಸಿಕೆ ಇಷ್ಟು…. ರಂಗಶಂಕರದಲ್ಲಿ 49 ರೂಪಾಯಿಗಳಿಗೆ ಕೂಡ ನಾಟಕ ಪ್ರದರ್ಶನ ಉಂಟು… ಆಯಾ ರಂಗತಂಡಗಳು ನಿರ್ಧರಿಸುವ ಪ್ರವೇಶ ಧನಕ್ಕೆ ರಂಗಶಂಕರದ ಮಧ್ಯಸ್ಥಿಕೆ ಇಲ್ಲವೆಂದು ನನ್ನ ಅಭಿಪ್ರಾಯ… ನಾನು ತಪ್ಪಾಗಿ ತಿಳಿದಿದ್ದಲ್ಲಿ ದಯವಿಟ್ಟು ಸರಿಪಡಿಸಿ. ಇನ್ನು ಅಲ್ಲಿಯ ನಿಯಮಕ್ಕೂ ಮಾಲ್ ಗಳಲ್ಲಿ ಸಿನೆಮಾ ನೋಡುವವರು ಸೂಪರ್ ಮಾರ್ಕೆಟ್ ಮೂಲಕವೇ ಹಾದುಹೋಗಬೇಕೆಂಬ ಕೊಳ್ಳುಬಾಕತನದ ಹುನ್ನಾರವನ್ನು ನಿಯಮದ ರೀತಿ ಮಾಡುವುದಕ್ಕೂ ಎಲ್ಲೋ ಹೋಲಿಕೆ ಮಾಡಿದ್ದೀರಿ ಎನ್ನಿಸುತ್ತದೆ. ಹಾಗಿದ್ದಲ್ಲಿ, ಅದು ಸರಿಯಲ್ಲವೆಂದು ನನ್ನ ಭಾವನೆ. ರಂಗಶಂಕರದಲ್ಲಿ ನಿಯಮಗಳು ಇರುವುದು ಜನರ ಅನುಕೂಲಕ್ಕಾಗಿ ಜೊತೆಗೆ ಕಲಾವಿದರ ಅನುಕೂಲಕ್ಕಾಗಿ ಕೂಡ… ಅಲ್ಲಿ ಇರುವುದು ಇಂಟಿಮೇಟ್ ಥಿಯೇಟರ್ ಮಾದರಿಯ ರಂಗಭೂಮಿ. ಹೀಗಾಗಿ, ಅಲ್ಲೇ ನಾಟಕ ನೋಡುತ್ತಾ ಕುರುಕಲು ತಿಂಡಿಗಳನ್ನು ತಂದು ತಿನ್ನುವುದು, ಶಬ್ದ ಮಾಡುವುದು, ಪ್ರದರ್ಶನದ ಮಧ್ಯೆ ಓಡಾಡುವುದು ಮಾಡಿದಾಗ, ಅಲ್ಲಿ ರಂಗದ ಮೇಲಿರುವ ಕಲಾವಿದರಿಗೂ ಹಿಂಸೆಯೇ… ನಾನು ರಂಗಶಂಕರವನ್ನು ವಹಿಸಿಕೊಂಡು ಮಾತಾಡುತ್ತಿಲ್ಲ. ಅಲ್ಲಿರುವ ನಿಯಮಗಳ ಬಗ್ಗೆ ಹೇಳುತ್ತಿದ್ದೇನೆ ಅಷ್ಟೇ.
ರಂಗಾಯಣದ ವನರಂಗಕ್ಕೂ ರಂಗಶಂಕರದ ಇಂಟಿಮೇಟ್ ಥೀಯೇಟರ್ ಮಾದರಿಗೂ ಹೋಲಿಕೆ ಸರಿಯಲ್ಲವೆಂದು ನನ್ನ ಅನಿಸಿಕೆ. ಮೇಷ್ಟ್ರು ವನರಂಗ ಮಾಡಿದ ಕಾನ್ಸೆಪ್ಟ್ ಮತ್ತು ಸಂಕೇತ್ ತಂಡ ಮಾಡಿದ ರಂಗಶಂಕರದ ಮಾದರಿ ಸಂಪೂರ್ಣವಾಗಿ ವಿಭಿನ್ನ..
ಇನ್ನು, ಸಂಗೀತ ಸಮ್ಮೇಳನಗಳ ಬಗ್ಗೆ ಹೇಳಿದ್ದೀರಿ. ಅದರಲ್ಲಿ ಒಂದು ಹೆಸರು ನನಗೆ ಎದ್ದು ಕಂಡಿದ್ದು ಗುರುರಾವ್ ದೇಶಪಾಂಡೆ ನೆನಪಿನ ಅಹೋರಾತ್ರಿ ಸಂಗೀತ ಉತ್ಸವ. ಏಕೆಂದರೆ ಈ ಉತ್ಸವಕ್ಕೆ ನಾನು ಪ್ರತಿ ವರ್ಷ ತಪ್ಪದೆ ಹೋಗುತ್ತೇನೆ. ನೀವು ಹೇಳಿದಂತೆ ಅಲ್ಲಿ ಉಚಿತ ಪ್ರವೇಶವೇ. ಆದರೆ ಅಲ್ಲಿ ವೇದಿಕೆಯ ಗೋಡೆಯ ಮೇಲೆ ಗಮನಿಸಿದ್ದೀರಾ ? ಕೆನರಾ ಬ್ಯಾಂಕ್, ಮತ್ತಿತರ ಸಂಸ್ಥೆಗಳು ಪ್ರಾಯೋಜಿಸಿರುವ ಬಗ್ಗೆ ದೊಡ್ಡ ದೊಡ್ಡ ಬ್ಯಾನರ್ ಗಳು ಇರುತ್ತವೆ. ನಿಜವೇ. ಪಂಡಿತ್. ವಿನಾಯಕ ತೊರವಿಯವರು ಕೆಲಸ ಮಾಡುತ್ತಿದ್ದ ಕೆನರಾ ಬ್ಯಾಂಕ್ ಸಹಾಯ ಮಾಡುತ್ತಿದೆ ಎಂದೇ ಇಟ್ಟುಕೊಂಡರೂ, ಅಲ್ಲಿ ದೂರುದ್ದೇಶ ಇಲ್ಲವೇ ? ಖಂಡಿತಾ ಇದೆ. ತಮ್ಮ ಬ್ಯಾಂಕಿನ ವಿವಿಧ ಯೋಜನೆಗಳಿಗೆ ಅಲ್ಲಿಗೆ ಬರುವವರ ಗಮನ ಸೆಳೆಯುವ ಉದ್ದೇಶ ಖಂಡಿತಾ ಉಂಟು.
ಇಷ್ಟೆಲ್ಲಾ ಹೇಳಿ, ನಾನು ನಿಮ್ಮ ವಿಚಾರ ಸರಣಿಯನ್ನು ಒಂದು ಮಟ್ಟಕ್ಕೆ ಒಪ್ಪುತ್ತೇನೆ. ನೀವು ಹೇಳಿದ ಕೆಲವು ವಿಷಯಗಳಿಗೆ ನನ್ನ ಅನಿಸಿಕೆಯನ್ನು ಹಂಚಿಕೊಳ್ಳಬೇಕೆನಿಸಿತು. ಹೀಗಾಗಿ ನನ್ನ ಈ ಬಡಬಡಿಕೆ