ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎಸ್ ಸದಾಶಿವ, ಉಮಾರಾವ್ ಮತ್ತು ಸುಮಿತ್ರಾ ಬಾಯಿಯವರ ಪುಸ್ತಕಗಳು

ನಾಳೆ ಶನಿವಾರ ಪುಸ್ತಕಗಳ ಬಿಡುಗಡೆ. ಆಹ್ವಾನ ಪತ್ರಿಕೆಯ ಜೊತೆ ಉಮಾರಾವ್ ಅವರ ಪುಸ್ತಕದ ಮುಖಪುಟ ಮತ್ತು ಅವರ ಪುಸ್ತಕದ ಒಂದು ಅಧ್ಯಾಯ ನಿಮಗಾಗಿ :


1
ಹಿಂದೊಮ್ಮೆ ತುಂಬಾ ಚೆನ್ನಾಗಿದ್ದ ಆ ಊರಿಗೆ ಚಂದದೂರು ಎಂಬ ಹೆಸರಿತ್ತೆಂದೂ, ಜನರ ಬಾಯಲ್ಲಿ ಅದು ಚೆಂದೂರು ಆಯಿತೆಂದೂ ಪ್ರತೀತಿ.ಐವತ್ತರ ದಶಕದಲ್ಲಿ ಆ ರೀತಿಯ ಊರುಗಳು ಸಾಕಷ್ಟಿದ್ದವು. ಒಂದು ಮಾರ್ಕೆಟ್ ಬೀದಿ, ಒಂದು ಬಸ್ಸ್ಟ್ಯಾಂಡ್, ಒಂದು ಆಸ್ಪತ್ರೆ, ಒಂದು ಕಾಲೇಜು, ಒಂದು ಕಲ್ಯಾಣ ಮಂಟಪ, ಒಬ್ಬ ಪ್ರೈವೇಟ್ ಡಾಕ್ಟರ್, ಒಂದು ಬಳೆಯಂಗಡಿ, ಒಂದು ಪಬ್ಲಿಕ್ ಲೈಬ್ರರಿ, ಒಂದು ಕಾಫಿಬಾರ್, ಒಂದು ರೈಲ್ವೆ ಸ್ಟೇಷನ್, ಒಂದು ಬ್ರಾಹ್ಮಣರ ಅಗ್ರಹಾರ ಹೀಗೆ. ಬೇರೆ ಬೇರೆ ಜಾತಿಯವರಿಗಾಗಿ ಬೇರೆ ಬೇರೆ ಇದ್ದದ್ದು ಸ್ಮಶಾನಗಳು ಮಾತ್ರ.
ಚೆಂದೂರಿಗೆ ಎರಡು ಪ್ರಮುಖ ಬಡಾವಣೆಗಳಿದ್ದವು. ಒಂದು ಚಿಕ್ಕನಪಾಳ್ಯ, ಇನ್ನೊಂದು ಗಂಗೇನಹಳ್ಳಿ. ಊರೊಳಗೆ ಇದ್ದ ಅಗ್ರಹಾರ ಬಿಟ್ಟರೆ ಮಿಕ್ಕವರೆಲ್ಲರೂ ಇರುತ್ತಿದ್ದುದು ಈ ಎಕ್ಸ್ಟೆನ್ಶನ್ಗಳಲ್ಲಿ. ಇವುಗಳ ಹೊರತಾಗಿ ಊರಿಂದಷ್ಟು ದೂರದಲ್ಲಿ ಕೆರೆ ಹಳ್ಳವೂ ಇತ್ತು. ಊರೊಳಗಿರುವವರು ಅಲ್ಲಿ “ಮನೆಯಲ್ಲೇ ಕೋಳಿ ಸಾಕಿಕೊಳ್ಳುವ ಜನ ಇರುತ್ತಾರೆ” ಎಂದು ವರ್ಣಿಸುತ್ತಿದ್ದರು.
ಚಿಕ್ಕನಪಾಳ್ಯದ ಪ್ರಾರಂಭದಲ್ಲೇ ಆ “ಹಕ್ಕಿ ಮನೆ” ಇತ್ತು. ಅಲ್ಲಿರುತ್ತಿದ್ದುದು ಶಂಕರಿ ಎಂಬ ಒಂಟಿ ಹೆಂಗಸು. ಅವಳೆಲ್ಲಿಂದ ಬಂದಳು, ಅವಳಿಗೆ ಮದುವೆ ಆಗಿದೆಯೇ, ಅವಳು ಹೇಗೆ ಬದುಕುತ್ತಾಳೆ ಒಂದೂ ಸರಿಯಾಗಿ ಊರಿನ ಜನರಿಗೆ ಗೊತ್ತಿರಲಿಲ್ಲ. ಅವಳಿಗೀಗ ೪೦, ೫೦, ೬೦ ಎಷ್ಟು ವಯಸ್ಸಾದರೂ ಇರಬಹುದು. ದೊಡ್ಡ ಕಂಬಗಳ ಮೇಲೆ ನಿಂತ ಆ ಮಂಗಳೂರು ಹೆಂಚಿನ ಮನೆಯ ತುಂಬಾ ಪಂಜರಗಳು. ಅದರಲ್ಲಿ ಬಣ್ಣ ಬಣ್ಣದ ಚಿತ್ರ ವಿಚಿತ್ರ ಪಕ್ಷಿಗಳು ಇದ್ದುವು. ಅಲ್ಲದೆ ಅವಳು ವರಾಂಡದಲ್ಲಿ ನಿಂತು, ಸುತ್ತಲೂ ಹಾರಾಡುವ ಗುಬ್ಬಚ್ಚಿಗಳಿಗೆ, ಪಾರಿವಾಳಗಳಿಗೆ ಕಾಳು ಹಾಕುವುದೂ ಇತ್ತು. ದೊಡ್ಡ ಕುಂಕುಮ, ಪೂರ್ತಿ ಬೆಳ್ಳಗಾಗಿದ್ದ ಕೂದಲು, ಕೈ ತುಂಬಾ ಬಣ್ಣ ಬಣ್ಣದ ಗಾಜಿನ ಬಳೆಗಳು, ಕತ್ತಿನಲ್ಲಿ ಮಣಿಮಾಲೆಗಳು ಯಾವಾಗಲೂ ಎಲೆ-ಅಡಿಕೆ ಜಗಿಯುತ್ತಿರುವ ಬಾಯಿ.
ಶಂಕರಿ ಈಗಿರುವ ಮನೆಯಲ್ಲಿ ಶೆಟ್ಟರೊಬ್ಬರು ವಾಸವಾಗಿದ್ದರಂತೆ. ಹೆಂಡತಿ ತೀರಿಕೊಂಡ ಮೇಲೆ ಮಕ್ಕಳೂ ಇರದ ಅವರು ಅನಾಥರಾದರಂತೆ. ಜೊತೆಗೆ ಡಯಾಬಿಟೀಸ್ ಅತಿಯಾಗಿ ಒಂದು ಕಾಲನ್ನೂ ಕಳೆದುಕೊಂಡು ಹಾಸಿಗೆ ಹಿಡಿದಾಗ ಅವರನ್ನು ನೋಡಿಕೊಳ್ಳಲು ದೂರದ ಸಂಬಂಧಿಯೆಂದು ಹೇಳಿಕೊಳ್ಳುತ್ತಿದ್ದ ಶಂಕರಿ ಯಾವುದೋ ಹಳ್ಳಿಯಿಂದ ಬಂದಿಳಿದಳಂತೆ.
ಒಂದು ಕೈಯಲ್ಲಿ ಬಟ್ಟೆ ಗಂಟು, ಇನ್ನೊಂದಲ್ಲಿ ಒಂದು ಗಿಣಿ ಪಂಜರ ಹಿಡಿದು ಬಂದ ದಿನವೇ ವರಾಂಡದಲ್ಲಿ ಆ ಪಂಜರ ನೇತು ಹಾಕಿ ಊದುಬತ್ತಿ ಹಚ್ಚಿ, ಅದಕ್ಕೆ ಆರತಿ ಮಾಡಿದಳಂತೆ. ಅದನ್ನೆಲ್ಲಾ ನೋಡಿದ ಊರು ಜನರು ಶಂಕರಿಗೂ ಆ ಗಿಣಿಗೂ ಏನೋ ಇಂದ್ರಿಯಾತೀತ ಸಂಬಂಧವಿದೆ ಎಂದು ನಂಬತೊಡಗಿದರಂತೆ. ಶೆಟ್ಟರು ತೀರಿಕೊಂಡ ಮೇಲೂ ಅವಳು ಆ ಮನೆ ಬಿಟ್ಟಿರಲಿಲ್ಲ. ನಿಧಾನವಾಗಿ ಆ ಗಿಣಿಯ ಜೊತೆ ವಿಧವಿಧವಾದ ಪಕ್ಷಿಗಳೂ ಸೇರಿಕೊಂಡಿದ್ದವು. ಹಾಗಾಗಿ ಪಂಜರಗಳ ಸಂಖ್ಯೆಯೂ ಏರಿತ್ತು. ಮೊದಮೊದಲು. ಅವಳು ತನ್ನ ಪಕ್ಷಿಗಳೊಡನೆ ತನ್ನ ಪಾಡಿಗೆ ತಾನು ಇರುತ್ತಿದಳಂತೆ. ಒಂದು ದಿನ ಜ್ವರ ಕಾಯುತ್ತಿರುವ ಮಗುವನ್ನು ತಾಯಿ ಆಸ್ಪತ್ರೆಗೆ ಎತ್ತಿಕೊಂಡು ಹೋಗುತ್ತಿದ್ದಾಗ, ಮನೆ ಮುಂದೆ ನಿಂತಿದ್ದ ಶಂಕರಿ ಅವಳನ್ನು ಮಾತಾಡಿಸಿದಳಂತೆ.
ಅವಳು ತಲೆ ಮೇಲೆ ಕೈಯಿಟ್ಟ ಕೂಡಲೇ ಮಗು ಅಳು ನಿಲ್ಲಿಸಿತಂತೆ. “ಸುಮ್ನೆ ಮನೆಗೆ ಹೋಗು. ಮಗು ಹುಷಾರಾಗುತ್ತೆ” ಎಂದಳಂತೆ. ಮನೆಗೆ ಹೋಗುವಷ್ಟರಲ್ಲಿ ಮಗೂಗೆ ಜ್ವರ ಬಿಟ್ಟಿತ್ತಂತೆ. ಅಂದಿನಿಂದ ಶಂಕರಿ “ಹಕ್ಕಿ ಅಮ್ಮ” ಆಗಿ ಊರಲ್ಲೆಲ್ಲಾ ಪೂಜ್ಯಳಾಗಿಬಿಟ್ಟಿದ್ದಳು. ಹಾಗಾಗಿ ಮಕ್ಕಳಿಗೆ ಫಿಟ್ಸ್ ಬರಲಿ, ಬಾಣಂತಿಯರಿಗೆ ಸನ್ನಿಯಾಗಲಿ, ಹಿರಿಯರಿಗೆ ಲಕ್ವ ಹೊಡೆಯಲಿ, ಶಂಕರಿಯ ಹತ್ತಿರ ಹೋಗಿ ಅಷ್ಟು ಕಾಳು ಕಡಿ ಕೊಟ್ಟು ಅವಳ ಆಶೀರ್ವಾದ ಪಡೆದು ಬರುವ ಅಭ್ಯಾಸ ಊರಿನವರಿಗೆ ಹತ್ತಿಕೊಂಡಿತ್ತು. ಊರಜನ ಆಗಾಗ ಮನೆಯಲ್ಲಿ ಬೆಳೆದ ಹಣ್ಣು, ತರಕಾರಿ, ಹಬ್ಬ ಹರಿದಿನಗಳಾದರೆ ಸಿಹಿ ತಿಂಡಿ ಅವಳಿಗೆ ಅರ್ಪಿಸಿ ಬರುತ್ತಿದ್ದರು. ಅವಳ ಮುಂದೆ ಅವನ್ನಿಟ್ಟಾಗ ಅವಳು ಪಕ್ಷಿಗಳತ್ತ ಕೈಮಾಡಿ ಎಲ್ಲಾ ಅವಕ್ಕೆ ಸಮರ್ಪಣೆ ಎನ್ನುವಂತೆ ಕೈ ಮುಗಿಯುತ್ತಿದ್ದಳು. ಅವಳೆಂದೂ ಹಣ ಮುಟ್ಟುತ್ತಿರಲಿಲ್ಲ. ಅವಳೆಂದೂ ಮನೆ ಬಿಟ್ಟು ಹೊರಗೆ ಕಾಲಿಡುತ್ತಿರಲಿಲ್ಲ. ಅವಳೊಂದು ರೀತಿ ಊರನ್ನು ಬೇನೆಯಿಂದ ಕಾಯುವವಳೆಂಬ ನಂಬಿಕೆ ಎಲ್ಲರಲ್ಲೂ ಬೇರೂರಿತ್ತು.
ಶಂಕರಿ ಮನೆ ದಾಟಿ ಹೋದರೆ ಚಿಕ್ಕನಪಾಳ್ಯ ಕೊನೇವರೆಗೂ ಸಾಲು ಸಾಲು ಚಿಕ್ಕ ಹೆಂಚಿನ ಮನೆಗಳು. ಅಲ್ಲಿ ಲಾಯರ್ಗಳು, ಮೇಷ್ಟ್ರುಗಳು, ಸಣ್ಣ ವ್ಯಾಪಾರಿಗಳು, ಕ್ಲರ್ಕ್ಗಳು ವಾಸಿಸುತ್ತಿದ್ದರು. ಕೆಲವರಂತೂ ಹಳ್ಳಿಯಿಂದ ವರ್ಷಕ್ಕೊಮ್ಮೆ ಬರುವ ಅಷ್ಟು ಭತ್ತದ ಮೇಲೆ ಬದುಕು ಸಾಗಿಸುತ್ತಿದ್ದರು. ಆ ಬಡಾವಣೆ ಕೊನೆಯಲ್ಲಿ ಒಂದು ಪುರಾತನ ಶ್ರೀರಾಮದೇವರ ಗುಡಿ ಇತ್ತು. ಅದಕ್ಕಂಟಿಕೊಂಡಂತೆ ಪೂಜಾರಿ ಮನೆ. ಒಂದು ಕಲ್ಯಾಣಿ. ಅರಳೀಮರ, ಆಲದಮರ, ಪ್ರತಿ ರಾಮನವಮಿಯ ಪ್ರಯುಕ್ತ ಅಲ್ಲಿ ನಡೆಯುತ್ತಿದ್ದ ಹತ್ತು ದಿನದ ಹರಿಕಥೆ ಕಾರ್ಯಕ್ರಮಕ್ಕಾಗಿ ಊರವರೆಲ್ಲಾ ವರ್ಷಪೂರ್ತಿ ಕಾಯುತ್ತಿದ್ದರು.
ಇನ್ನು ಗಂಗೇನಹಳ್ಳಿಯಲ್ಲಿ ಇದ್ದವರು ಹೆಚ್ಚಾಗಿ ಮಂಡಿ ಮರ್ಚೆಂಟುಗಳು. ಹಾಗಾಗಿ, ಅಲ್ಲಿ ವಾಸಿಸುವವರಿಗೆ ಸ್ವಲ್ಪ ಅಹಂಕಾರ ಹೆಚ್ಚು. ಅಲ್ಲಿ ಕೆಲವರ ಹತ್ತಿರ ಕಾರು, ಡ್ರೈವರ್ ಸಹಿತ ಇದ್ದರು. ಅವರೆಲ್ಲರಲ್ಲಿ ಚಂದ್ರಪ್ಪನ ದರ್ಪ ಹೆಚ್ಚು. ಮಂಡಿಪೇಟೆಯಲ್ಲಿ ಆರು ಭಾರೀ ಅಂಗಡಿಗಳ ಒಡೆಯನಾಗಿದ್ದ ಅವನು ಗಂಗೇನಹಳ್ಳಿಯ ರಾಜನಂತೆ. ಅವನಿಗೆ ಮೂರು ಹೆಂಡತಿಯರೂ ಹನ್ನೊಂದು ಮಕ್ಕಳೂ ಇದ್ದರು. ಅವರಲ್ಲಿ ಯಾರ್ಯಾರು ಯಾರ್ಯಾರ ಮಕ್ಕಳೆಂದು ಚಂದ್ರಪ್ಪನಿಗೇ ಗೊತ್ತಿರಲಿಲ್ಲವೆಂದು ಅವನ ಹೆಂಡತಿಯರು ತಮಾಷೆ ಮಾಡಿಕೊಳ್ಳುತ್ತಿದ್ದರು. ಅವನಂತೂ ಯಾವಾಗಲೂ ಅಂಗಡಿ-ಬಿಸಿನೆಸ್, ಸಂಜೆಹೊತ್ತು ಕ್ಲಬ್ಬಲ್ಲಿ ಇಸ್ಪೀಟು. ರಾತ್ರಿ ಮನೆ ಸೇರುವುದು ಹನ್ನೊಂದು ಗಂಟೆಗೆ. ಹೆಂಡತಿ, ಮಕ್ಕಳು ಹಾಯಾಗಿರುವಂತೆ ಅವನು ಅವರನ್ನು ಚೆನ್ನಾಗಿ ನೋಡುಕೊಳ್ಳುತ್ತಿದ್ದ. ಒಡವೆ, ಬಟ್ಟೆ ಕೊಡಿಸುತ್ತಿದ್ದ. ಅವರಿಂದಲೂ ಅವನ ಪ್ರತಿಷ್ಠೆ ಹೆಚ್ಚಿತ್ತು. ಅವನ ಹೆಂಡತಿಯರ್ಯಾರು ಸಾಮಾನ್ಯವಾಗಿ ಹೊಸಿಲು ದಾಟಿ ಹೊರಗೆ ಬರುತ್ತಿರಲಿಲ್ಲ. ಹೀಗಾಗಿ ಕಾಲರಾ-ಪ್ಲೇಗು ಮುತ್ತಿದಾಗ ಮನೆಗೇ ಡಾಕ್ಟರನ್ನು ಕರೆಸಿ ತನ್ನ ಸುಪರ್ದಿನಲ್ಲೇ ಎಲ್ಲರಿಗೂ ಇನಾಕ್ಯುಲೇಶನ್ ಹಾಕಿಸುತ್ತಿದ್ದ. ಸೀರೆ ವ್ಯಾಪಾರಿಗಳು, ಚಿನ್ನದ ವರ್ತಕರು ಮನೆಗೆ ಸಾಮಾನು ತಂದು ತೋರಿಸುತ್ತಿದ್ದರು. ಅವನು ಅಲ್ಲೇ ವೆಲ್ವೆಟ್ ಹೊದಿಕೆಯ ಕುರ್ಚಿಯೊಂದರ ಮೇಲೆ ಕೂತಿರುತ್ತಿದ್ದ. ಹೆಂಗಸರೆಲ್ಲಾ ಚಾಪೆಮೇಲೆ ಕೂತು ತಮಗೆ ಬೇಕಾದ ಸೀರೆ, ಒಡವೆ ಆರಿಸಿಕೊಳ್ಳುತ್ತಿದ್ದರು.
ಇವನ ಔಟ್ಹೌಸಿನಲ್ಲಿ ಕಾವೇರಮ್ಮ ಎಂಬ ಅರವತ್ತು ಎಪ್ಪತ್ತು ವಯಸ್ಸಿನ ಹೆಂಗಸಿದ್ದಳು. ಅವಳು ಯಾರೊಡನೆಯೂ ಹೆಚ್ಚು ಮಾತಾಡುತ್ತಿರಲಿಲ್ಲ. ಮೌನವಾಗಿ ಮನೆಯ ತೋಟದ ಕೆಲಸ ನೋಡಿಕೊಳ್ಳುತ್ತಿದ್ದಳು. ಹೆಚ್ಚು ದುಡಿಯಲೂ ಕೈಲಾಗದ ಈಕೆಯನ್ನು ಚಂದ್ರಪ್ಪ ಏಕೆ ಔಟ್ಹೌಸು ಕೊಟ್ಟು ಇಟ್ಟುಕೊಂಡಿದ್ದಾನೆಂದು ಯಾರಿಗೂ ಗೊತ್ತಿರಲಿಲ್ಲ. ಅವರ ಬಗ್ಗೆ ಹಲವಾರು ಕತೆಗಳು ಹುಟ್ಟಿಕೊಂಡಿತ್ತು. “ಚಂದ್ರಪ್ಪ ಚಿಕ್ಕೋರಿದ್ದಾಗ ಈ ಮುದುಕಿನೇ ನೋಡ್ಕೋತಿತ್ತಂತೆ.” “ಈ ಮುದುಕಿ ಗಂಡ ಒಂದಿನ ಚಂದ್ರಪ್ಪನ ಹಳ್ಳೀಲಿ ಹೊಲದ ಕೆಲಸ ಮಾಡ್ತಾ ಹಾವು ಕಚ್ಚಿ ಹೋದ್ನಂತೆ. ತನ್ನಿಂದ ಆದ ಪಾಪ ಕಳ್ಕೋಳ್ಳೋಕೆ ಅನಾಥೆಯಾದ ಇವಳಿಗೆ ಆಸರೆ ಕೊಟ್ನಂತೆ” ಇತ್ಯಾದಿ.
ಗಂಗೇನಹಳ್ಳಿ ಮುಗಿದು ಒಂದರ್ಧ ಮೈಲಿ ನಡೆದು ಹೋದರೆ ಕೆರೆಹಳ್ಳ ಸಿಕ್ಕುತ್ತಿತ್ತು. ಆ ತಗ್ಗು ಪ್ರದೇಶದಲ್ಲಿ ನೂರಾರು ಜೋಪಡಿಗಳು. ಅಲ್ಲಿ ವಾಸಿಸುವವರು ಚೆಂದೂರಿನಲ್ಲಿ ಬೇರೆ ಬೇರೆ ರೀತಿಯ ಕೆಲಸಗಾರರು. ಕೂಲಿಯವರು, ಮನೆ ಕೆಲಸ ಮಾಡುವವರು, ಬೀದಿ ಗುಡಿಸುವವರು, ಚಮ್ಮಾರರು, ಕಲಾಯಿಯವರು, ಅಗಸರು, ಹಜಾಮರು. ಹೀಗೆ ಹಿಂದೊಮ್ಮೆ ಕೆರೆ ಇದ್ದ ಪ್ರದೇಶ ಬತ್ತಿ ಹಳ್ಳವಾಗಿ ಜನರಿಗೆ ವಸತಿ ಒದಗಿಸಿದ್ದ ಕೆರೆಹಳ್ಳದಲ್ಲಿ ಒಂದು ಮಳೆಯಾದರೂ ನೀರು ನಿಂತು ಕೊಚ್ಚೆಯಾಗಿ ಆಗಲೇ ಕೊಳೆಯಾಗಿರುವ ಪ್ರದೇಶವನ್ನು ಇನ್ನೂ ಹೊಲಸು ಮಾಡುತ್ತಿತ್ತು. ಇದರಿಂದ ಅಲ್ಲಿನ ಮಕ್ಕಳಿಗೆ ಯಾವಾಗಲೂ ಏನಾದರೂ ಒಂದು ಕಾಯಿಲೆ. ಕೆರೆಹಳ್ಳದ ನಡುವೆ ಇದ್ದ ಮಾರಮ್ಮನ ಗುಡಿ ಸುತ್ತ ಕೆಂಪು ದಾಸವಾಳ, ಕಣಗಲೆ, ತೋಟ. ಊರಲ್ಲಿ ಯಾವ ಮಕ್ಕಳಿಗೆ ಗೊಬ್ಬರ, ಸೀತಾಳ, ಸಿಡುಬು, ಗದಕಟ್ಟು ಬಂದರೂ ಸ್ನಾನ ಮಾಡಿಸಿದ ನಂತರ ಮುಡಿಪು ಕಳಿಸುತ್ತಿದ್ದುದು ಆ ಗುಡಿಗೇನೆ. ಆದರೆ ಅದನ್ನು ಚೆಂದೂರಿನ ಒಳಗಿರುವವರು ತಮ್ಮ ಕೆಲಸದವರ ಮೂಲಕ ಕಳಿಸುತ್ತಿದ್ದರೇ ಹೊರತು, ಯಾರೂ ಸ್ವತಃ ಅಲ್ಲಿಗೆ ಹೋಗುತ್ತಿರಲಿಲ್ಲ. ಅಲ್ಲಿಯೂ ಜಾತಿ ಪ್ರಕಾರ ವಿಭಾಗಗಳಿತ್ತೆಂದು ಕೆರೆಹಳ್ಳದ ಜನ ಹೇಳುತ್ತಿದ್ದರೂ ನೋಡುವವರಿಗೆ ಗೊತ್ತಾಗುವ ಹಾಗಿರಲಿಲ್ಲ.

‍ಲೇಖಕರು G

30 May, 2014

1 Comment

  1. udaykumar habbu

    ಚೆಂದದೂರಿನ ಕಥೆ ಚೆಂದಾಗಿಯೇ ಪ್ರಾರಂಭಗೊಂಡಿದೆ. ಯಾವುದಕ್ಕೂ ಪ್ರಚಾರ ಬೇಕು ಕಣ್ರೀ ಚಾಲ್ತಿಯಲ್ಲಿ ಬರೋಕೆ? ಕಾದಂಬರಿಯ ಶೈಲಿ ಓದಿಸಿಕೊಂಡು ಹೋಗುತ್ತೆ. ಶುಭವಾಗಲಿ. ಹೊಸತನ್ನು ಹೇಳ್ತಾ ಇದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading