
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..
ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.
‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯಲ್ಲಿ ಅಂಕಣವಾಗಿ ಬಂದ ‘ಮೀಡಿಯಾ ಡೈರಿ’ ಬಹುರೂಪಿಯಲ್ಲಿ ‘ಆ ಪತ್ರಿಕೋದ್ಯಮ’ ಎಂಬ ಶೀರ್ಷಿಕೆಯ ಪುಸ್ತಕವಾಗಿ ರೂಪುಗೊಂಡಿತು.
‘ಆ ಪತ್ರಿಕೋದ್ಯಮ‘ ಪ್ರತಿಗಾಗಿ ಸಂಪರ್ಕಿಸಿ : 70191 82729 ಅಥವಾ ಇಲ್ಲಿ ಕ್ಲಿಕ್ ಮಾಡಿ https://bit.ly/3nWUsuJ
ಇಂದಿನಿಂದ ಜಿ ಎನ್ ರಂಗನಾಥ ರಾವ್ ಅವರ ಹೊಸ ನಾಟಕ ಸರಣಿ ಬರೆಯಲಿದ್ದಾರೆ.
ಆಂಕ ಒಂದು
ದೃಶ್ಯ-೧
ತೆರೆ ಎದ್ದಾಗ ರಂಗ ಎಡ ತುದಿಯಲ್ಲಿ ಮೇಳದವರು ಆಸೀನರಾಗಿರುವುದು, ರಂಗ ಮಧ್ಯ ಭಾಗದಲ್ಲಿ ಕೊರಳಿಗೆ ಹಾರ್ಮೋನಿಯಂ ನೇತು ಹಾಕಿಕೊಂಡ ಸೂತ್ರಧಾರ ಮತ್ತು ರಂಗದ ಬಲ ತುದಿಯಲ್ಲಿ ಸುಮಾರು ಎಪ್ಪತ್ತು ಮಂದಿ ಜನ ಸಾಮಾನ್ಯರ ಗುಂಪು ಇದೆ. ಇವರೆಲ್ಲ ‘ಉದ್ಯೋಗ ಕೊಡಿ’, ಎಂದು ಘೋಷಣೆ ಕೂಗುತ್ತಿರುವರು.
ರಂಗದ ಹಿಂಚೂಣಿಯಲ್ಲಿ ಮುಖ್ಯಮಂತ್ರಿಗಳ ಭವ್ಯವಾದ ಅರಮನೆ. ಅಮೃತ ವರ್ಷಿಣಿ ಕುಮಾರ್, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಎನ್ನುವ ನಾಮ ಫಲಕ ಇದೆ. ರಂಗದ ಮೇಲೆ ಸೂತ್ರಧಾರನ ಮೇಲೆ ಬೆಳಕು ಬೀಳುವುದು. ಅಷ್ಟರಲ್ಲಿ “ಏಳು ಗಂಟೆ ಆಯ್ತು ನಾಟಕ ಶುರು ಮಾಡ್ರಯ್ಯ’ ಎಂದು ಪ್ರೇಕ್ಷಕನೊಬ್ಬ ಕೂಗುವನು.
ಸೂತ್ರಧಾರ: ಸಾವಧಾನ…ಸಾವಧಾನ…ಎರಡು ಬೆಲ್ ಆಗಿದೆ. ಮೂರನೇ ಬೆಲ್ಗೆ ನಾಟಕ ಶುರುವಾಗುತ್ತೆ.
(ಮೂರನೆಯ ಬೆಲ್ ಆಗುವುದು)
ಸೂತ್ರಧಾರ: ಜಯಹೇ ಕರ್ನಾಟಕ ಮಾತೆ…ಜಯಹೇ ಕರ್ನಾಟಕ ಮಾತೆ
ಹೇಳ್ತೇವೆ ನಾವು ಕಥೆಯೊಂದ ನಿಮಗ
ಸದ್ದು-ಗದ್ದಲ ಮಾಡದೆ ಕೇಳಿ ಸುಮ್ಮಗ
ಇದು ನಲವತ್ತು ಪರ್ಸೆಂಟೆ ಕಥಿ ಅಲ್ಲ
ನೂರಕ್ಕ ನೂರು ಪರ್ಸೆಂಟ್ ನಾಟಕ
ಪ್ರಾಚೀನ ಅರ್ವಾಚೀನಗಳ ಹೊಸ ಕಥಿ
(ಎಡತುದಿಯಲ್ಲಿರುವ ಜನಸಾಮಾನ್ಯರಿಂದ ಗುಸುಗುಸು;’ ಮುಖ್ಯ ಮಂತ್ರಿಗಳ ಬರೋದು ಯಾವಾಗ? ಸಾರ್ವಜನಿಕ ದರ್ಶನ ಇಲ್ಲವಾ?’ ಸೂತ್ರಧಾರ ಸ್ವಲ್ಪ ತಡೆದು).
ಸದ್ದು ….ಶಾಂತಿ…ಶಾ೦ತಿ….

ಪ್ರಜಾವರ್ಗ-ಸಭಾ೦ಗಣದಿ೦ದ: ಏಯ್ ನಿನ್ನ ಕಥೆ ಸಾಕು ನಾಟಕ ಶುರು ಮಾಡಯ್ಯ…
ಸೂತ್ರಧಾರ: ಮಾಡ್ತೀವಿ ಪ್ರೇಕ್ಷಕ ಮಹಾಶಯರೆ ನಿಮ್ಮನ್ನ ಬಿಟ್ಟು ನಾಟಕ ಮಾಡೋದಾದರೂ ಹೇಗೆ..
ಪ್ರಜಾವರ್ಗ: ನಡೀರೋ ಒಂದು ಕೈ ನೋಡೇ ಬಿಡೋಣ….
(ಎನ್ನುತ್ತ ತೋಳೇರಿಸಿ ರಂಗಕ್ಕೆ ನುಗ್ಗುವರು)
ಸೂತ್ರಧಾರ: ಬನ್ನಿ…ಬನ್ನಿ ನಿಮಗೇ ಕಾಯ್ತಿದ್ದೆ, ಈ ಕಡೆ ಕೂರಿ
(ಎಂದು ಪ್ರಜಾವರ್ಗವನ್ನು ಒಂದು ತುದಿಯಲ್ಲಿ ಕುಳ್ಳಿರಿಸುವನು. ಈ ಪ್ರಜೆಗಳೇ ಮುಂದೆ ನ್ಯಾಯಾಧೀಶರು, ವಕೀಲರು ಇತ್ಯಾದಿ ಪಾತ್ರಗಳನ್ನು ವಹಿಸುವರು)
ಪ್ರಜಾವರ್ಗ: ಬಂದಾಯ್ತಲ್ಲ ನಾಟಕ ಶುರುಮಾಡು ಸೂತ್ರಧಾರ
ಸೂತ್ರಧಾರ: ನಾನು ಸೂತ್ರಧಾರ ಅಲ್ಲ ಇಲ್ಲಿ ನಡೆಯುವ ಬದುಕಿನ ಸಾಕ್ಷಿಪ್ರಜ್ಞೆ ಚೆನ್ನಾಗಿ ತಿಳ್ಕೊಳ್ಳಿ (ಎಂದು)..
ಭೂರಮೆಯ ಮಕುಟಮಣಿ
ಕರುನಾಡ ವಜ್ರದ ಖಣಿ…..
-ಎಂದು ಸೊಲ್ಲನ್ನು ಎತ್ತಿಕೊಡುವನು. ಮೇಳ ಹಾಡನ್ನು ಮುಂದುವರಿಸುವುದು.
ಮೇಳ: ಭೂರಮೆಯ ಮಕುಟ ಮಣಿ
ಕರುನಾಡ ವಜ್ರದ ಖಣಿ
ಕರ್ನಾಟಕ ಸರ್ಕಾರ
ಇದರ ಮಹಿಮೆ ಅಪಾರ
ಇದಕಂತಾರ ನಲವತ್ತು ಪರ್ಸೆಂಟ್ ಸರ್ಕಾರ
ಒಳಗಿಲ್ಲ ಪರಕಾರ
ಮೈತುಂಬ ಜರತಾರ
ಮಧ್ಯ ರಂಗದ ಬಲತುದಿಯಲ್ಲಿ ಸೋಫಾ ಮೇಲೆ ಆಸೀನರಾಗಿರುವ ಶಾಸಕರು ಮತ್ತು ಅಧಿಕಾರಿಗಳ ಗುಸುಗುಸು:
ಹಂಡ್ರಡ್ ಪರ್ಸೆಂಟ್ ಆಗೋದು ಯಾವಾಗ?
ರಂಗದ ಮುಂಚೂಣಿಯಲ್ಲಿ ಬಲ ತುದಿಯಲ್ಲಿ ನಿಂತರುವ ಜನಸಾಮಾನ್ಯರ ಅಸಹನೆ ಹೆಚ್ಚುವುದು. ಪೆಟ್ರೋಲ್ ಬೆಲೆ, ಡೀಸಲ್ ಬೆಲೆ, ಗ್ಯಾಸ್ ಬೆಲೆ ಗಗನಕ್ಕೇರಿದೆ ಎಂದು ಕೆಲವರು ಮಾತಾಡಿಕೊಳ್ಳುವರು.
ಸೂತ್ರಧಾರ: ಸದ್ದು…ಪೆಟ್ರೋಲ್, ಡೀಸಲ್ ಬಳಕೆ ನಿಲ್ಲಿಸಬೇಕು. ಅದಕ್ಕೆ ಮೇಲ್ಪಂಕ್ತಿಯಾಗಿ ಮಾನ್ಯ ಮುಖ್ಯ ಮಂತ್ರಿಗಳು ಕಾರು ಬಳಸುವುದನ್ನು ನಿಲ್ಲಿಸಿದ್ದಾರೆ.
ಜನಸಾಮಾನ್ಯರ ಗುಂಪಿನಲ್ಲ ಒಬ್ಬ: ಅಗೋ ಗೇಟ್ ತೆಗೀತು…ಮುಖ್ಯಮಂತ್ರಿಗಳು ಬಂದ್ರೂ ಅಂತ ಕಾಣುತ್ತೆ.
(ಮುಖ್ಯ ಮಂತ್ರಿಗಳು ನಡೆದಕೊಂಡು ಜನಸಾಮಾನ್ಯರ ಗುಂಪಿನತ್ತ ಬರುವರು. ಸಿಂಹಾಸೋಪಾದಿಯ ಪೀಠದಲ್ಲಿ ಆಸೀನರಾಗುವರು.
ಜನ ಅವರತ್ತ ನುಗ್ಗಲು ಪ್ರಯತ್ನಿಸುವರು. ಭದ್ರತಾ ಸಿಬ್ಬಂದಿ ಅವರನ್ನು ತಡೆಯುವರು)
ಆಪ್ತ ಕಾರ್ಯದರ್ಶಿ ಸ್ವಾಹಾ ಕುಮಾರ್: ಸಾಹೇಬರಿಗೆ ಈಗ ವ್ಯಾಳೆ ಇಲ್ಲ. ಅರ್ಜಿಗಳನ್ನೆಲ್ಲ ಇತ್ತ ಕೊಡಿ. ಹ್ಞಾಂ ಯಾರೂ ಪೋಸ್ಟರ್
ಹಿಡಿಯೋ ಹಂಗಿಲ್ಲ. ಘೋಷಣೆ ಕೂಗೋ ಹಂಗಿಲ್ಲ.
(ಜನ ಸಾಮಾನ್ಯರು ಅರ್ಜಿಗಳನ್ನು ಆಪ್ತ ಕಾರ್ಯದರ್ಶಿಗೆ ಕೊಡುವರು. ಪೋಸ್ಟರುಗಳನ್ನು ಹಿಡಿದವರು ಅದನ್ನ ತಮ್ಮ ಮೈಗೆ ಸುತ್ತಿಕೊಳ್ಳುವರು. ಇನ್ನು ಕೆಲವರು ಬೇಡಿಕೆಗಳ ಘೋಷಣೆಗಳನ್ನು ಬರೆದ ಕುರ್ತಾಗಳನ್ನು ತೊಟ್ಟಿರುವರು)
ಮುಖ್ಯ ಮಂತ್ರಿಗಳು: ನಮ್ಮ ಸರ್ಕಾರ ನಿಮ್ದೇ ಸರ್ಕಾರ. ನಿಮ್ಮ ಸಲುವಾಗಿ ನಾವು ಏನೆಲ್ಲ ಮಾಡಿದೀವಿ ಅಂಬೋದು ನಿಮಗೆಲ್ಲ
ತಿಳಿದೇ ಇದೆ. ಅವರ ಕಿವೀಗೊಂದಿಷ್ಟು ಹಾಕ್ರೀ…
ಆಪ್ತ ಕಾಯುದರ್ಶಿ: ೧.ದನಗಳನ್ನ ದತ್ತು ತೆಗೆದುಕೊಳ್ಳಲು ವ್ಯವಸ್ಥಾ ಮಾಡಿರೋದು.
೨.ನೂರು ಮಂದೀಗೆ ಕಾಶೀ ಯಾತ್ರೆಗೆ ವ್ಯವಸ್ಥೆ ಮಾಡಿರೋದು
೩.ಗೌರಿ ಹಬ್ಬದ ವ್ಯಾಳ ಭಗಿನಿಯರಿಗೆ ದೇವಸ್ಥಾನಗಳಲ್ಲಿ ಬಳೇ ಬಾಗಿನ
೪.ಹಬ್ಬ ಹರಿದಿನಗಳಂದು ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ
೫.ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ
ಆಪ್ತ ಕಾರ್ಯದರ್ಶಿ ಸರ್ಕಾರದ ಸಾಧನೆಗಳ ಪಟ್ಟಿ ಓದುತ್ತಾ ಹೋದಂತೆ ಜನಸಾಮಾನ್ಯರು ‘ಪ್ರಸಾದವಯ್ಯಾ, ಮಹಾಪ್ರಸಾದವಯ್ಯ’ ಎಂದು ಉದ್ಗರಿಸುವರು.
ಮೇಳ:ಹಾಡಿದರೆ ಹಾಡುವೆನಯ್ಯ ನಿಮ್ಮ ಪರಮ ಪ್ರಸಾದವನೆ
ನೋಡಿದರೆ ನೋಡುವೆನಯ್ಯ ನಿಮ್ಮ ಪರಮ ಪ್ರಸಾದವನೆ
ಬೇಡಿದರೆ ಬೇಡುವೆನಯ್ಯ ನಿಮ್ಮ ಪರಮಪ್ರಸಾದವನೆ
ಕೂಡಿದರೆ ಕೂಡುವೆನಯ್ಯ ನಿಮ್ಮ ಪರಮಪ್ರಸಾದವನೆ
ಮುಖ್ಯ ಮಂತ್ರಿ: ನೋಡಿದಿರಾ ನಮ್ಮ ಮಹಿಮೆ. ನೀವು ಬೇಡ ಬೇಕು ನಾವು ಕೊಡಬೇಕು. ಇವತ್ತು ಸಂಜೆ ದಿಲ್ಲಿಯ ದಾದಾನ
ಕಚೇರಿಯಿಂದ ಹತ್ತು ಸಾವಿರ ಉದ್ಯೋಗ ನೇಮಕಾತಿ ಪತ್ರ ಬರಲಿದೆ ಏರ್ ಮೈಲ್ನಲ್ಲಿ. ಅದನ್ನ ಯೋಗ್ಯರಿಗೆ
ಆನ್ಲೈನ್ನಲ್ಲಿ ಕಳಿಸಲಾಗುವುದು. ಇಲ್ಲಿಗೆ ಸಭೆ ಬರಖಾಸ್ತಾಯಿತು.
(ರಂಗದ ಮೇಲೆ ನಸುಗತ್ತಲು ಆವರಿಸುವುದು. ಜನ ಕರಗಿ ಹೋಗುವರು. ಒಂದೆರಡು ಸೆಕೆಡುಗಳಲ್ಲೇ ಬೆಳದಿಂಗಳ ಬೆಳಕು ಪಸರಿಸುವುದು. ಈ ಬೆಳಕಲ್ಲಿ ವರ್ಷಿಣಿ, ಸೌದಾಮಿನಿ ಮತ್ತು ಅವರ ಇಬ್ಬರು ಸಖಿಯರು ಮುಖ್ಯ ಮಂತ್ರಿಗಳ ಮನೆಯಿಂದ ಹುಡುಗಾಟವಾಡುತ್ತ ರಂಗದ ಮುಂಚೂಣಿಗೆ ಬರುವರು).
ಸೂತ್ರಧಾರ: ಆಹಾ! ಎಂಥ ಸೌಂದರ್ಯ ಲಹರಿ
ವರ್ಷಿಣಿ: ಏನ್ರೀ ಅದು ಲಹರಿಪಹರೀ…
ಮೇಳ: ಆಕಾಶದ ಚಂದೀರ ಧರೆಗಿಳಿದು ಬಂದ್ಹಾ೦ಗ
ಇಳೆಗಿಳಿಯಿತು ಭುವನದ ಭಾಗ್ಯ
ಲಕ್ಷ ದೀಪೋತ್ಸವ ಬೆಳದಿಂಗಳಾ ಬಾಲೆಯರು
ಬೆಳದಿಂಗಳ ಸೌಂದರ್ಯ ಲಹರಿ
ಈ ಬಾಲೆಯರ ಜೋಡಿ
ವರ್ಷಿಣಿ: ಏನ್ರೀ ಅದು ಸೌಂದರ್ಯ ಲಹರಿ
ಸೂತ್ರಧಾರ: ಅದು ಹಂಸಿನಿಯರ ಸೊಬಗ ಸಂಗೀತ
ವರ್ಷಿಣಿ: ನಾವೀಗ ಹೊರಟೀವಿ…ಸಾಹೇಬ್ರು ಗೋಪ್ಯ ಸಭಾ ನಡೆಸ್ತಿದಾರ…ಹುಷಾರು ನೀ ಸೌಂದರ್ಯ ಲಹರೀನಾಗ ಮೈಮರೀಬ್ಯಾಡ. ಆಯ್ತಲ್ಲ.
ಸೂತ್ರಧಾರ: ವರ್ಷಿಣಿ ಬಾಯಾರ ನೀವೀಗ ಹೊರಟಿದ್ದು ಎಲ್ಲಿಗೆ
ಮೇಳ: ಮಾವನ ಮಗಳೇ
ಮಲ್ಲಿಗೆ ಅರಳೆ
ನೀ ಹೊರಟಿದ್ದಾರೂ ಎಲ್ಲಿಗೆ?
ಸೂತ್ರಧಾರ: ಹೌದಾ ಚೆಲುವಿ, ನೀ ಹೊರಟಿದ್ದಾರೂ ಎಲ್ಲಿಗೆ?
ವರ್ಷಿಣಿ: ಮಾವನೂ ಇಲ್ಲ ಮಗಳೂ ಇಲ್ಲ ಅಳಿಯನೂ ಇಲ್ಲ ಹಾಂಗೆಲ್ಲ ಬಡಬಡಿಸಬ್ಯಾಡ ತಿಳ್ಕೊ
ಸೂತ್ರಧಾರ: ಆಯ್ತು ನಮ್ಮ ಬೆಳದಿಂಗಳಾ ಈಗ ನೀ ಹೊರಟಿದ್ದು ಎಲ್ಲಿಗೆ?
ವರ್ಷಿಣಿ: ಅಭಿನವ ಕುಮಾರನ ಹುಟ್ಟುಹಬ್ಬದ ಗುಂಡು ಪಾರ್ಟೀಗೆ….
ಸೂತ್ರಧಾರ: ಗುಂಡು ಪಾರ್ಟಿ! ಹಾಗಂದ್ರೇನಾ ಹುಡ್ಗೀ
ಸೌದಾಮಿನಿ: ಬೀರು ರಮ್ಮು ವಿಸ್ಕಿ ವೈನು
ಮೋಜು ಮೇಜುವಾನಿ
ಏರ್ತಾ ಏರ್ತಾ ಏರ್ತಾ
ಸುರಸುಂದರಿಯರ ನೀಲಂಜನ ನೃತ್ಯ
ಸೂತ್ರಧಾರ: ಹೆಣಮಕ್ಕಳು ಹೆಂಡ ಕುಡಿಯೋದಾ!

ವರ್ಷಿಣಿ: ಹೌದು, ಏನೀಗ? ನಮ್ಮ ರೊಕ್ಕ ನಮ್ಮ ರಮ್ಮು, ನಮ್ಮ ಲೈಫು…ನೀನು ಏನಾದರೂ ಭಾನಗಡಿ
ಮಾಡದೀರ ಬದೀಗ ಸರಿ
ಸೂತ್ರಧಾರ: ಕೂಸ ನಾನು ಸಾಕ್ಷಿಪ್ರಜ್ಞೆ ಇದೀನಿ ಹೇಳಬೇಕಾದ್ದು ಹೇಳಲೇ ಬೇಕು
ವರ್ಷಿಣಿ: ನೀ ಸೂತ್ರಧಾರನೂ ಅಲ್ಲ ಸಾಕ್ಷಿ ಪ್ರಜ್ಞೆಯೂ ಅಲ್ಲ, ಬರೀ ದಾರ
ಸೂತ್ರಧಾರ: ಮತ್ತ ಸೂತ್ರ
ವರ್ಷಿಣಿ: ನಾನು ಸೂತ್ರ
ಸೂತ್ರಧಾರ: ಅದು ಲೋಕವ್ಯವಹಾರ ಅಲ್ಲ. ದಾರ ಮುಂದ
ವರ್ಷಿಣಿ: ದಾರ ಮುಂದ ಸೂಜಿ ಹಿಂದ ಬೇಂದ್ರೆ ಕಾಲಕ್ಕಾಯಿತು. ಸಾಕ್ಷಿಪ್ರಜ್ಞೆ ಅಡಿಗರ ಕಾಲಕ್ಕಾಯ್ತು. ಈಗ ಸೂಜಿ ಮುಂದ ದಾರ
ಹಿಂದ
ಸೌದಾಮಿನಿ: ವರ್ಷಾ, ಟೈಮ್ ಆಯ್ತು, ಆ ಮೂಳನ ಕೂಡ ನಿಂದೇನು…
ವರ್ಷಿಣಿ: ಹೊರಡಾದ ಮತ್ತ
ಸೌದಾಮಿನಿ: ರಾತ್ರಿ ನೀ ಅಭಿನವನ ಕೂಡಾನೆ ಉಳಿಯೋಳ?
ವರ್ಷಿಣಿ: ಹೌದ್ ಕಣೇ ಅವನ ಜನ್ಮದಿನದಿಂದಲೇ ನಮ್ಮ ಲಿವ್ ಇನ್ ರಿಲೇಷನ್ಶಿಪ್ ಪ್ರಯೋಗ ಶುರುವಾಗ್ತದ (ಸಖಿ ಚಾರುಮತಿಯು ತಿರುಗಿ) ಚಾರು ನಾನು ಅಲ್ಲೇ ಉಳಿಯವಳು, ನನ್ನ ಸೂಟ್ಕೇಸೆ ಎಲ್ಲ ಸರೀ ಮಾಡೀಯ ತಾನೆ
ಚಾರುಮತಿ: ಹ್ಞೂಂನ್ರೀ
ವರ್ಷಾ: ನೀನೂ ನನ್ನ ಜೋಡಿ ಅಲ್ಲೇ ಉಳಿಯಾಕಿ, ನಿಂದೂ ಎಲ್ಲ ತಗೊಂಡೀಯಲ್ಲ
ವರ್ಷಾ: ಮತ್ತ ನಡೀರಿ ಇನ್ನ ಲಗೂನ ಹೊರಡಾಣ
ಸೂತ್ರಧಾರ: ರಾತ್ರಿ ನೀ ಬರೋದಿಲ್ಲ
ವರ್ಷಿಣೀ: ಇಲ್ಲ. ನಾ ಹೇಳೀದನಲ್ಲ, ನಂದು, ಅಭಿನವ ಕೃಷ್ಣ ಕುಮಾರಂದು ‘ಲಿವಿನ್ ರಿಲೇಶನ್ ಶಿಪ್’ ಇವತ್ನಿಂದ ಶುರುವಾಗ್ತದೆ ಅಂತ
ಸೂತ್ರದಾರ: ‘ಲಿವಿ೦ಗ್ ಇನ್ ರಿಲೇಶನ್…’ ಹಾಗಂದ್ರೇನು?
ವರ್ಷಿಣಿ: ಹಾಗಂದ್ರ, ವಯಸ್ಸಗೆ ಬಂದ ಗಂಡೂ ಹೆಣ್ಣೂ ಮದುವಿ ಮಾಡಕೊಳ್ಳದೀರ ಒಂದೇ ಮನೆಯಾಗ ಒಟ್ಟಗೆ ಬದುಕೋದು
ಅಂತಾ. ಬಾಳೊಕ ಕೂಡೂದು, ಕೂಡೂಕ ಒಟ್ಟಿಗೆ ಬಾಳೋದು
(ವರ್ಷಿಣಿ, ಸೌದಾಮಿನಿ ಮತ್ತು ಇಬ್ಬರು ಸಖಿಯರು ನಿರ್ಗಮಿಸುವರು/ಸೂತ್ರಧಾರ ನಿಬ್ಬೆರಗಾಗಿ ನಿಲ್ಲುವನು)
ಮೇಳ: ಹೊರಟಾರ ಆಡಾಕ. ಆಡಿ ಕೂಡಾಕ
ನವನವೀ ಆಟ ಆಡಿ ಕೂಡಾಕ
ಕೂಡಿಬಾಳಾಕ ಬಾಳಿ ಕೂಡಾಕ
-ತೆರೆ ಬೀಳುವುದು-
। ಉಳಿದದ್ದು ನಾಳೆಗೆ ।






0 Comments