– ಜಿ ಎನ್ ಮೋಹನ್

ಎಲ್ಲಾ ವೇದಗಳಲ್ಲಿಯೂ ಜಾಗ ಪಡೆದುಕೊಂಡಿರುವ, ಎಲ್ಲಾ ರೀತಿಯ ಆಚರಣೆಯಲ್ಲಿಯೂ ಬಳಸುವಂತಹ ಒಂದು ಸೂಕ್ತವಿದೆ ಎಂದರೆ ಅದು ‘ಪುರುಷಸೂಕ್ತ’. ಅಂತಹ ಪುರುಷ ಸೂಕ್ತವನ್ನು ರಂಗಕ್ಕೇರಿಸುವ ಒಂದು ವಿಶಿಷ್ಟ ಪ್ರಯತ್ನ ಬೆಂಗಳೂರಿನಲ್ಲಿ ಜರುಗಿತು. ಪ್ರಾಚೀನವಾದ, ಶಬ್ದಕ್ಕೆ ಮಾತ್ರ ನಿಲುಕಿದ್ದ ಕೃತಿಗಳನ್ನು ದೃಶ್ಯಕ್ಕೆ ಅಳವಡಿಸಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡೇ ರಚಿತವಾಗ ‘ಅಭಿಜ್ಞಾನ’ ತಂಡ ಈ ವಿಶೇಷ ಪ್ರಯತ್ನಕ್ಕೆ ಕೈ ಹಾಕಿತು.
ಪುರುಷ ಸೂಕ್ತವೇ ಏಕೆ? ಎನ್ನುವ ಪ್ರಶ್ನೆಯನ್ನು ನಾನು ಮುಂದಿಟ್ಟದ್ದು ಜೆ. ಶ್ರೀನಿವಾಸ ಮೂರ್ತಿಯವರ ಮುಂದೆ. ಜೆ. ಶ್ರೀನಿವಾಸಮೂರ್ತಿ ಅವರು ನಾಲ್ಕು ದಶಕಗಳಿಂದ ಸಂಸ್ಕೃತವನ್ನ ಬೋಧಿಸುತ್ತಿದ್ದಾರೆ. ಸಂಸ್ಕೃತವನ್ನು ಸಮಕಾಲೀನಗೊಳಿಸುವುದು, ಸಂಸ್ಕೃತವನ್ನು ಇಂದಿನ ಕಣ್ಣುಗಳ ಮೂಲಕ ವಿಶ್ಲೇಷಣೆಗೆ ಒಳಪಡಿಸುವುದು ಇವರ ಆಸಕ್ತಿಯ ವಿಷಯ. ಹೀಗಾಗಿಯೇ ಇವರು ಸಂಸ್ಕೃತ ಅಧ್ಯಾಪಕ ಎನ್ನುವ ಸೀಮಿತ ಚೌಕಟ್ಟಿಗೆ ಒಳಪಟ್ಟವರಲ್ಲ. ಆಗಿನ ಕಾಲದ ಸತ್ವವನ್ನು, ಸತ್ಯವನ್ನು ಇಂದಿನ ಕುಲುಮೆಯಲ್ಲಿ ಕಾಯಿಸಿ ಪರೀಕ್ಷಿಸುವವರು. ಪರೀಕ್ಷೆಯಲ್ಲಿ ಗೆದ್ದದ್ದನ್ನು ಜನರ ಮುಂದೆ ಇಡುವವರು. ಜೆ ಶ್ರೀನಿವಾಸಮೂರ್ತಿ ಅವರ ‘ಆಮುಖ’ ಕೃತಿಯಲ್ಲಿ ಅವರು ಎತ್ತಿರುವ ಪ್ರಶ್ನೆಗಳು ಇದನ್ನೇ ಸಾಬೀತುಪಡಿಸುತ್ತದೆ.

‘ಪುರುಷಸೂಕ್ತ’ ಇದುವರೆಗೂ ಪಠಣಕ್ಕೆ ಮಾತ್ರ ಸೀಮಿತವಾಗಿತ್ತು. ಸೂಕ್ತದ ಪಠಣವೇ ನಾದದ ರೂಪು ಪಡೆದು ಕಿವಿಗಳನ್ನು ಆಕ್ರಮಿಸಿಕೊಂಡು ಗೆಲ್ಲಲು ಸಾಧ್ಯವಾಗಿತ್ತು. ಹಾಗೆ ಶೃತಿಗೆ ಮಾತ್ರ ಮೀಸಲಾಗಿದ್ದ ಒಂದು ಸೂಕ್ತವನ್ನು ದೃಶ್ಯಕ್ಕೆ ಅಳವಡಿಸುವ ಮೊದಲ ಪ್ರಯತ್ನ ಇದು. ಹಾಗಾಗಿಯೇ ‘ಅಭಿಜ್ಞಾನ’ ಈ ಪ್ರಯತ್ನವನ್ನು ಎಲ್ಲಿಯೂ ನಾಟಕ ಎಂದು ಕರೆದುಕೊಂಡಿಲ್ಲ ಬದಲಿಗೆ ‘ಶೃತಿಗೆ ದೃಶ್ಯ ರೂಪ’ ಎಂದು ಬಣ್ಣಿಸಿದೆ. ಇಡೀ ಈ ಒಂದು ಪ್ರಯೋಗ ಜೆ ಶ್ರೀನಿವಾಸ ಮೂರ್ತಿಯವರ ಕಲ್ಪನೆಯ ಕೂಸು. ಇದಕ್ಕೆ ಸಾಥ್ ಕೊಟ್ಟವರು ಇಂತಹದೇ ಹುಡುಕಾಟವನ್ನು ನಿರಂತರವಾಗಿ ನಡೆಸುತ್ತಾ ಬಂದಿರುವ ಜೋಸೆಫ್ ಜಾನ್. ಈ ರೀತಿಯದ್ದೇ ಬದಲಾವಣೆಗೆ ತುಡಿಯುತ್ತಿರುವ ಚರಣ್ ಸಿ ಎಸ್ ಹಾಗೂ ವಾಸುದೇವ.
ಒಂದು ರೀತಿಯಲ್ಲಿ ಇದು ನಾಲ್ವರು ಸೇರಿ ನಡೆಸಿದ ಒಂದು ವಿಶಿಷ್ಠ ಹುಡುಕಾಟ. ಹಾಗಾಗಿಯೇ ಇದನ್ನು ನಾಟಕವಾಗಿ ವಿಮರ್ಶಿಸುವುದೇ ತಪ್ಪು. ಈ ಹುಡುಕಾಟ ಕೊಟ್ಟಿದ್ದೇನು ಎಂದು ಅರಿಯುವುದೇ ಹೆಚ್ಚು ಸರಿ ಎನಿಸುತ್ತದೆ. ಈ ಪ್ರಯೋಗ ನೋಡಿದ ಎಲ್ಲರೂ ಇದು ನನಗೆ ಕೊಟ್ಟದ್ದೇನು ಎನ್ನುವುದರ ಮಂಥನವನ್ನು ಪ್ರಯೋಗ ಮುಗಿದ ನಂತರವೂ ಮುಂದುವರಿಸಿದ್ದರು. ಈ ಪ್ರಯೋಗ ನನಗೆ ಪುರುಷಸೂಕ್ತವನ್ನು ದಾಟಿಸಿತೆ? ಈ ಪ್ರಯೋಗ ಪಠ್ಯವನ್ನು ಹಿನ್ನೆಲೆಗೆ ಬಿಟ್ಟು ಒಂದು ಅದ್ಭುತ ದೃಶ್ಯಲೋಕವನ್ನು ಮಾತ್ರ ಮುಂದಿಟ್ಟಿತೇ ಅಥವಾ ನಾವು ಪಠ್ಯದ ಗೋಜಿಲ್ಲದೆ ದೃಶ್ಯದ ಮೂಲಕ ನಮಗೆ ಏನು ಬೇಕೋ ಅದನ್ನು ಮಾತ್ರ ಕಟ್ಟಿಕೊಳ್ಳಲು ಸಾಧ್ಯವೇ? ಎನ್ನುವ ಪ್ರಶ್ನೆಗಳನ್ನು ಎತ್ತಿತು.

ಬಹುಷಃ ಈ ರೀತಿಯ ಪ್ರಶ್ನೆಯನ್ನು ಎದ್ದು ನಿಲ್ಲುವಂತೆ ಮಾಡುವುದೇ ಈ ಪ್ರಯೋಗದ ಹಿಂದಿದ್ದವರ ಉದ್ಧೇಶವೂ ಆಗಿತ್ತು ಎನಿಸುತ್ತದೆ. ‘ಸಿದ್ಧ ಮಾದರಿಗಳನ್ನು ಅನುಸರಿಸದೆ ಹೊಸ ಅಭಿನಯದ ರೀತಿಗಳನ್ನು ಮತ್ತು ಹೊಸ ರಂಗಪಠ್ಯಗಳನ್ನೂ ಹುಡುಕುತ್ತಾ ಹೊರಟಿದ್ದೇವೆ’ ಎನ್ನುವ ‘ಅಭಿಜ್ಞಾನ’ ತಂಡ ಭಾರತೀಯ ರಂಗ ವಿಮರ್ಶೆಯ ಮಾನದಂಡಗಳ ಪುನರ್ ಪರಿಶೀಲನೆಯೂ ಸಹಾ ನಮ್ಮ ಒಂದು ಮುಖ್ಯ ಉದ್ದೇಶ ಎಂದು ಸಾರಿಕೊಂಡಿದೆ.
ಈ ಪ್ರಯೋಗ ಸಂಪೂರ್ಣವಾಗಿ ನಿಂತಿರುವುದು ‘ಪುರುಷಸೂಕ್ತ’ದ ಪಠಣದ ಮೇಲೆ ಮಾತ್ರ. ಪುರುಷ ಸೂಕ್ತದ ಪಠಣ, ಅದರ ಕನ್ನಡ ಅನುವಾದವನ್ನು ಅಲ್ಲಲ್ಲಿ ಮಂಡಿಸುತ್ತಾ ಹೋಗುವುದರಿಂದ ಈ ಪ್ರಯೋಗ ಈ ಕಾರಣಕ್ಕಾಗಿಯೇ ನೋಡುಗರನ್ನು ತಲುಪಬೇಕಾದರೆ ದೃಶ್ಯದ ಮೇಲೆಯೇ ಒರಗಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡುಬಿಟ್ಟಿದೆ. ಸಂಸ್ಕೃತ ಶ್ಲೋಕವನ್ನೋ, ಸುಭಾಷಿತವನ್ನೋ ಕನ್ನಡದ ಅನುವಾದದ ಮೂಲಕ ಒಳಗು ಮಾಡಿಕೊಳ್ಳುವುದು ಮಾತ್ರ ಗೊತ್ತಿರುವ ನಮಗೆ ಈ ಪ್ರಯೋಗ ಒಂದು ರೀತಿಯಲ್ಲಿ ಅದನ್ನೇ ದೃಶ್ಯ ಅನುವಾದದ ಮೂಲಕ ಅರಿಯುವಂತೆ ಮಾಡುವ ಹೊಸ ದಾರಿಯೊಂದನ್ನು ಸೃಷ್ಟಿ ಮಾಡಿಕೊಟ್ಟಿತು. ಈ ಪ್ರಯೋಗದ ಪ್ರಮುಖ ಸಫಲತೆ ಇದೇ ಅನಿಸುತ್ತದೆ.
ಪುರುಷ ಸೂಕ್ತ ಕಾಲಾನುಕಾಲದಿಂದಲೂ ಅರ್ಥ ಮಾಡಿಕೊಳ್ಳಲು, ವಿಶ್ಲೇಷಣೆ ಮಾಡಲು, ಅರ್ಥ ಮಾಡಿಕೊಂಡಷ್ಟೂ ತೇಜಸ್ವಿಯವರ ಕರ್ವಾಲೋದ ಹಾರುವ ಓತಿಯಂತೆ ಸಿಕ್ಕಿದರೂ ಸಿಕ್ಕಂತೆ ಇರುವ ಸೂಕ್ತ. ಜಿ ಎಸ್ ಶಿವರುದ್ರಪ್ಪ ಇದೇ ಹೆಸರಿನಲ್ಲಿ ಬರೆದಿರುವ ಕವಿತೆ ಪುರುಷ ಸೂಕ್ತವನ್ನು ಅರ್ಥ ಮಾಡಿಕೊಳ್ಳಲು ಇರುವ ಒಂದು ಒಳ್ಳೆಯ ಪಾಠ ಎಂದುಕೊಂಡಿದ್ದೇನೆ. ಸೃಷ್ಟಿಯ ರಚನೆಯನ್ನೂ, ವಿಸ್ಮಯವನ್ನೂ, ಅದರ ವಿಸ್ತಾರವನ್ನೂ ಮುಂದಿಡುವ ಕೃತಿಯೇ ಪುರುಷಸೂಕ್ತ. ಅಂತಹ ಒಂದು ಸೂಕ್ತವನ್ನು ಎತ್ತಿಕೊಂಡ ‘ಅಭಿಜ್ಞಾನ’ ಈ ಸೂಕ್ತವನ್ನು ಒಂದು ಕಾಲಕ್ಕೆ ಮಾತ್ರ ಸೀಮಿತಗೊಳಿಸದೆ ಇಂದಿನ ಮೊಬೈಲ್, ಐಪಾಡ್, ನ್ಯಾನೋ, ದೇವಕಣ ಸೃಷ್ಟಿಯ ಕಾಲಕ್ಕೂ ತಂದು ನಿಲ್ಲಿಸಿರುವುದು ಇಡೀ ಪ್ರಯೋಗದ ಯಶಸ್ಸು. ಅಂದಿನಿಂದ ಇಂದಿನವರೆಗಿನ ಎಲ್ಲಾ ಸೃಷ್ಟಿ ವಿಸ್ಮಯಗಳನ್ನೂ ಈ ಪ್ರಯೋಗ ಬೆರಗುಗಣ್ಣಿನಿಂದ,ಹಾಗೆಯೇ ತೆರೆದ ಕಣ್ಣಿನಿಂದ ನೋಡಿದೆ.
ಪುರುಷ ಸೂಕ್ತ ಗೊತ್ತಿಲ್ಲದ, ಓದಿಲ್ಲದ, ಕೇಳಿಲ್ಲದ ನೋಡುಗರಿಗೆ ಕಬ್ಬಿಣದ ಕಡಲೆಯಾಗಿ ಬಿಡಬಹುದಾಗಿದ್ದ ವಸ್ತುವನ್ನು ಕಲರಿಪಯಟ್ಟು, ಕೊಡಿಯಾಟ್ಟಂ, ಮಲ್ಲಕಂಭ, ಛಾವ್, ಯೋಗದ ಮೂಲಕ ಜೋಸೆಫ್ ಯಶಸ್ವಿಯಾಗಿ ದಾಟಿಸಿದ್ದಾರೆ. ಚರಣ್ ಹಾಗೂ ವಾಸುದೇವ ಜೋಡಿಯಂತೂ ರಂಗವನ್ನು ಒಂದು ಆಟಿಕೆಯೇನೋ ಎಂಬಂತೆ ಬಳಸಿಕೊಂಡಿದ್ದಾರೆ. ಇಡೀ ರಂಗದ ಅಗಲ, ಎತ್ತರ ಎರಡನ್ನೂ ಆಕ್ರಮಿಸಿಕೊಂಡುಬಿಡುತ್ತಾರೆ. ಹಾಗಾಗಿಯೇ ಇದು ದೃಶ್ಯ ವೈಭವವೇ ಸರಿ.
ಸೃಷ್ಟಿಯನ್ನು ಕುರಿತು ಇರುವ ಹಿರಣ್ಯ ಗರ್ಭ, ನಾಸದೀಯ ಹಾಗೂ ಪುರುಷ ಸೂಕ್ತಗಳ ಪೈಕಿ ಜೆ ಶ್ರೀನಿವಾಸಮೂರ್ತಿ ಪುರುಷ ಸೂಕ್ತವನ್ನೇ ಆರಿಸಿಕೊಳ್ಳಲು ಅದು ಅತ್ಯಂತ ವ್ಯಾಪಕವಾಗಿ ಬಳಕೆಯಲ್ಲಿದೆ ಎನ್ನುವುದರ ಜೊತೆಗೆ ಇದು physical, psychological ಹಾಗೂ social ಸೃಷ್ಟಿಯ ಬಗ್ಗೆಯೂ ಮಾತನಾಡುತ್ತದೆ ಎನ್ನುವುದು ಮುಖ್ಯವಾಗಿತ್ತು. ಪುರುಷ ಸೂಕ್ತವನ್ನು ಅರ್ಥಮಾಡಿಕೊಂಡಷ್ಟೂ ಅದರಲ್ಲಿ ಮಿಗಿಲಾದ ಇನ್ನೂ ಅರ್ಥಗಳಿವೆ ಎನ್ನುವುದಕ್ಕೆ ಸಾಕ್ಷಿ ಈ ಪ್ರಯೋಗ ನಡೆಸಿದ ದೃಶ್ಯ ಹುಡುಕಾಟದಲ್ಲಿಯೇ ಇದೆ. ಪುರುಷ ಸೂಕ್ತ ‘ಅಭಿಜ್ಞಾನ’ ಅಂದುಕೊಂಡಂತೆಯೇ ಒಂದು ಹೊಸ ರೀತಿಯ ಹುಡುಕಾಟಕ್ಕಂತೂ ಕಾರಣವಾಯಿತು. ಆದರೆ ಪುರುಷ ಸೂಕ್ತದ ಪಠ್ಯ, ಅನುವಾದ, ವಿಶ್ಲೇಷಣೆಯ ಹಿನ್ನೆಲೆ ಒದಗಿಸಿದ್ದಿದ್ದರೆ ಪ್ರಯೋಗವನ್ನು ಅರ್ಥಮಾಡಿಕೊಳ್ಳುವ ಒಂದು ಸರಿಯಾದ ಮನೋಸಜ್ಜಿಕೆ ನಿರ್ಮಾಣವಾಗುತ್ತಿತ್ತೇನೋ. ಈ ಕೊರತೆಯ ನಡುವೆಯೂ ಕನ್ನಡ ರಂಗಭೂಮಿ ಇತ್ತೀಚಿನ ದಿನಗಳಲ್ಲಿ ಕಂಡ ಒಂದು ವಿಭಿನ್ನವಾದ ಯಶಸ್ವಿ ನಾಟಕ ಇದು ಎನ್ನುವುದರಲ್ಲಿ ಎರಡು ಮಾತೇ ಇಲ್ಲ.






ನಿಮ್ಮ ಈ ವಿಮರ್ಶೆ ಓದಿದ ಅಕ್ಷರ ಅವರು ಈ ನಾಟಕವನ್ನು ನೀನಾಸಮ್ ಶಿಬಿರಕ್ಕೆ ಕರೆಸಬೇಕೆಂದು ಹೇಳುತ್ತಿದ್ದರು. ಆಗಿನಿಂದಲೂ ಇದನ್ನು ಓದಬೇಕೆಂದು ಆಸೆಪಟ್ಟಿದ್ದೆ.. ಇಲ್ಲಿ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು. ಒಂದು ಕಲಾಕೃತಿ ಜಗತ್ತಿಗೆ ಪರಿಚಯವಾಗುವುದು ವಿಮರ್ಶೆಯಿಂದಲೇ ಅಲ್ಲವೆ..? ಆನಂದ ಬೇರೆ, ವಿಮರ್ಶಾತ್ಮಕ ನೋಟ ಬೇರೆ..!ಬಹಳ ಚಂದ ಗ್ರಹಿಕೆಗೆ ಸಿಕ್ಕಿದೆ ಪುರುಷಸೂಕ್ತ
ನಾನಿಂದು ಆ ನಾಟವನ್ನು ನೋಡಲು ಹೊರಟಿದ್ದೇನೆ. ನೋಡಿ ಬಂದ ಮೇಲೆ ನಿಮ್ಮ ಬರಹವನ್ನು ಓದುವೆ. ಹಿಂದಿನ ಪ್ರದರ್ಶನವನ್ನು ನೋಡಲಾಗಿಲ್ಲ. ಅಂದು ಇದನ್ನು ನೋಡಲು ತಾವು ಹೋಗುವುದಾಗಿ ನನ್ನನ್ನು ಬರುತ್ತೀರಾ ಎಂದು ಹಿರಿಯ ರಂಗಕರ್ಮಿ ವಿಜಯಮ್ಮನವರು ಕೇಳಿದ್ದರು. ಆದರೆ ನನಗೆ ಹೋಗಲಾಗಿರಲಿಲ್ಲ. ಇಂದು ಅದೇ ನಾಟಕ ವಿಜಯನಗರದ ಹಂಪಿನಗರದ [ಅರ್.ಪಿ.ಲೇಔಟ್] ಕೇಂದ್ರ ಗ್ರಂಥಾಲಯದಲ್ಲಿ ಸಂಜೆ ೬.೩೦ ಕ್ಕೆ ಪ್ರದರ್ಶನಗೊಳ್ಳಲಿದೆ ಎಂದು ಪತ್ರಿಕೆಗಳಿಂದ ತಿಳಿದು ಬಂದಿದೆ. ಆಸಕ್ತರು ಬರಬಹುದು.
ಪುರುಷ ಸೂಕ್ತ ದಂತಹ ಬೆರಗಿಗೆ ಇಡೀ ರಂಗದ ಅಗಲ, ಉದ್ದ ,ಎತ್ತರ ಎಲ್ಲವನ್ನು ಆಕ್ರಮಿಸಿಕೊಳ್ಳಬೇಕಾದುದನ್ನು ಅತ್ಯಂತ ಸುಂದರವಾಗಿ ವಿವರಿಸಿದ್ದಿರಿ. ಇದರ ಸಫಲತೆಯನ್ನು ಇದಕ್ಕಿಂತ ಚೆನ್ನಾಗಿ ವಿವರಿಸಲು ಸಾಧ್ಯವೇ ಇಲ್ಲವೇನೋ. ಧನ್ಯವಾದಗಳು
-ಅನಿಲ ತಾಳಿಕೋಟಿ
VSHLESHANE CHANNAGIDE.CHITRAGALU KALATMAKAVAGIVE NATAKAVANNU NODABEKEMBA AAPEEKHSEYAGUTTIDE.