
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.
ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.
ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.
ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.
ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.
38
ಹುಳುವಾಗಿ, ಚಾಂಡಾಲನಾಗಿ ,ಹೆಣ್ಣಾಗಿ ಹುಟ್ಟು…
ಹೇ ಗರುಡ , ಬ್ರಾಹ್ಮಣರನ್ನು ಕೊಲ್ಲುವವವರು ಕ್ಷಯ ರೋಗಿಯಾಗಿ, ಗೋಹತ್ಯೆ ಮಾಡುವವರು ಕುಬ್ಜನೋ ಮೂರ್ಖನೋ ಆಗುತ್ತಾನೆ ,.ಕುಷ್ಠರೋಗಿಯಾಗುತ್ತಾನೆ. ಈ ಎರಡೂ ಪಾಪಗಳನ್ನು ಮಾಡುವವರು ಚಾಂಡಾಲರಾಗಿ ಜನಿಸುತ್ತಾರೆ. ಸ್ತ್ರೀಯರನ್ನು ಕೊಲ್ಲುವವರಯ, ಗರ್ಭಪಾತ ಮಾಡುವವರು ಮ್ಲೇಚ್ಛ ಜಾತಿಯಲ್ಲಿ ಹುಟ್ಟುತ್ತಾರೆ. ಅವರು ರೋಗಿಯಾಗಿ ಸಾಯುತ್ತಾರೆ. ಬುದ್ಧಿ ಮಾಂದ್ಯ ಸ್ತ್ರೀಯ ಜೊತೆಗೆ ಭೋಗ ಮಾಡುವವರು ನಪುಂಸಕರಾಗುತ್ತಾರೆ. ಗುರುಪತ್ನಿಯ ಸಂಗ ಮಾಡುವವರು ಅಸಹ್ಯ ಚರ್ಮ ರೋಗಕ್ಕೆ ಬಲಿಯಾಗುತ್ತಾರೆ. ಶ್ರಾದ್ಧಗಳಲ್ಲಿ ಅಶುದ್ಧ ಅನ್ನ ಬಡಿಸುವವರು ಬಿಳಿ ಕುಷ್ಠ ರೋಗದಿಂದ ಪೀಡಿತರಾಗುತ್ತಾರೆ. ಗುರು, ಹಿರಿಯರನ್ನು, ಪಂಡಿತರನ್ನು ಅಪಮಾನಿಸುವವ ಮೂರ್ಛೆ ರೋಗಿಯಾಗುತ್ತಾನೆ. ಸುಳ್ಳು ಸಾಕ್ಷಿ ಹೇಳುವವನು ಮೂಕನಾಗುತ್ತಾನೆ. ಸುಳ್ಳು ಭಾಷಣವನು ಮಾಡುವವರು ತೊದಲಿಸುವವರಾಗುತ್ತಾರೆ.
ರತ್ನಗಳನ್ನು ಕಳ್ಳತನ ಮಾಡುವವರು ನೀಚ ಕುಲದಲ್ಲಿ ಹುಟ್ಟುತ್ತಾರೆ. ಚಿನ್ನವನ್ನು ಕಳವು ಮಾಡುವವರು ,ಕಬ್ಬಿಣ ಲೋಹಗಳನ್ನು ಕಳವು ಮಾಡುವವರು ಬಡವರಾಗುತ್ತಾರೆ.ಅನ್ನ ಧಾನ್ಯಗಳನ್ನು ಕಳ್ಳತನ ಮಾಡುವವರು ಚಿಟ್ಟೆಯಾಗುತ್ತಾರೆ. ಜೇನು ತುಪ್ಪ ಕಳ್ಳತನ ಮಾಡುವವರು ಸೊಳ್ಳೆಗಳಾಗುತ್ತಾರೆ.ಉಪ್ಪು ಕಳ್ಳತನ ಮಾಡುವವರು ಇರುವೆಗಳಾಗುತ್ತಾರೆ. ಹೂವು ಹಣ್ಣುಗಳನ್ನು ಕಳ್ಳತನ ಮಾಡುವವರು ಕೋತಿಯ ಯೋನಿಯಲ್ಲಿ ಜನಿಸುತ್ತಾರೆ.ಪತಿಯನ್ನು ಧಿಕ್ಕರಿಸುವ ಪತ್ನಿಯರು ಹೇನುಗಳಾಗಿ, ಯಾವ ಸ್ತ್ರೀಯರು ಪರಪುರುಷರ ಜೊತೆ ಅನೈತಿಕ ಸಂಬಂಧವಿಟ್ಡುಕೊಂಡಿರುತ್ತಾರೋ ಕತ್ತೆಯಾಗಿ ಎರಡು ತಲೆಯ ಹಾವಾಗಿ ಹುಟ್ಟುತ್ತಾರೆ. ತಮ್ಮದೇ ಗೋತ್ರದ ಸ್ತ್ರೀಯರ ಜೊತೆ ಸಂಬಂಧ ಹೊಂದಿರುವವರು ಕರಡಿಯ ಯೋನಿಯಲ್ಲಿ ಹುಟ್ಟುತ್ತಾರೆ.
ಹೇ ಗರುಡ, ಯಾವ ಬ್ರಾಹ್ಮಣರು ಹಣದ ಆಸೆಯಿಂದ ಪೂಜೆ ಪಾಠಗಳನ್ನು ಮಾಡುತ್ತಾರೆಯೋ ಅಂತಹವರು ಶೂದ್ರರ ಯೋನಿಯಲ್ಲಿ ಜನಿಸುವವರು. ಬ್ರಹ್ಮಹತ್ಯೆ ಮಾಡುವವರು ಕತ್ತೆ, ಒಂಟೆ, ಎಮ್ಮೆಯ ಯೋನಿಯಲ್ಲಿ ಜನಿಸುವರು.
ಹೀಗೇ ಪುಟಗಟ್ಟಲೆ ಯಾವುದೇ ವಿವೇಚನೆ, ತರ್ಕ ಇಲ್ಲದೆ ಯಾವ ಯಾವ ಕೃತ್ಯಕ್ಕೆ ಯಾವ ಯಾವ ಪ್ರಾಣಿ ಜನ್ಮವನ್ನು ಪಡೆಯುತ್ತಾರೆ ಎಂಬುದನ್ನು ಗರುಡ ಪುರಾಣದಲ್ಲಿ ಪಟ್ಟಿ ಮಾಡಲಾಗಿದೆ.
ಒಪ್ಪುವುದಕ್ಕೆ ತಕ್ಕನಾದ ಕಾರ್ಯ ಕಾರಣ ಸಂಬಂಧಗಳ ಚಿಂತೆಯೇ ಇಲ್ಲದೆ ಗರುಡ ಪುರಾಣವು ನರಕದಲ್ಲಿನ ವಿವಿಧ ಯಾತನೆಗಳನ್ನು ವರ್ಣಿಸುತ್ತವೆ. ನರಕಕ್ಕೆ ಒಯ್ದಿರುವುದು ಈ ಪುರಾಣದ ಪ್ರಕಾರವೇ ಕೇವಲ ಜೀವವನ್ನು. ದೇಹವನ್ನಲ್ಲ. ದೇಹದಲ್ಲಿ ಮಾತ್ರವೇ ಸುಖವನ್ನಾಗಲೀ, ನೋವನ್ನಾಗಲೀ ಅನುಭವಿಸುವುದಕ್ಕೆ ಅವಶ್ಯವಾದ ಸಾಧನಗಳಾದ ಅಂಗಗಳಿರುವುದು. ದೇಹದಿಂದ ಜೀವವನ್ನು ಕಿತ್ತಕೊಂಡು ಹೊರಟ ಮೇಲೆ ಜೀವಕ್ಕೆ ಹಸಿವು ನೀರಡಿಕೆಗಳಿಲ್ಲ, ನೋವನ್ನನುಭವಿಸುವ ಶರೀರವೇ ಇಲ್ಲ. ಪಂಚೇದ್ರಿಯಗಳಿಲ್ಲ. ಹಾಗಾದರೆ ಹಲವು ರೀತಿಯ ನರಕ ಯಾತನೆಯ ನೊವು,ಸಂಕಟಗಳನ್ನು ಅನುಭವಿಸುವವರ್ಯಾರು ? ಹೇಗೆ ?
ಉಪನಿಷತ್ತುಗಳು ಶರೀರವನ್ನು ಬಿಟ್ಟು ಹೊರಡುವುದು ದೇಹದೊಳಗಿನ ಆತ್ಮ, ಅವಿನಾಶಿಯಾದ ಆತ್ಮ. ಅದಕ್ಕೆ ಯಾವ ಇಂದ್ರಿಯಗಳೂ ಇರುವುದಿಲ್ಲ. ಆಕಾರವಿಲ್ಲ. ಅದು ಕೇವಲ ಬೆಳಕು ಮಾತ್ರ ಎನ್ನುತ್ತವೆ. ಹಾಗೆಂದ ಮೇಲೆ ನೋವನ್ನು ಅನುಭವಿಸುವುದು ಹೇಗೆ ?
ಹಾಗೆಯೇ ವಿವಿಧ ಪಾಪ ಕರ್ಮಗಳು ಎಂದು ಯಾವೆಲ್ಲವನ್ನೂ ವಿವರಿಸಲಾಗಿದೆಯೋ ಅದಕ್ಕೂ ಅವುಗಳಿಂದಾಗಿ ಯಾವ ಜನ್ಮ ಪ್ರಾಪ್ತಿಯಾಗುವುದೆಂದು ಹೇಳಲಾಗಿದೆಯೋ ಅವುಗಳಿಗೂ ಕೂಡಾ ತಾಳ ಮೇಳಗಳಿಲ್ಲ.
ಮತ್ತೊಂದು ಮುಖ್ಯ ಅಂಶವೆಂದರೆ ಮೇಲೆ ಹೇಳಿದಂತೆ ಶೂದ್ರ ಜನ್ಮ, ಚಂಡಾಲ ಮತ್ತಿತರ ನೀಚ ಜನ್ಮ ಪ್ರಾಪ್ತವಾಗುವುದು ಉತ್ತಮ ಜನ್ಮ ಪಡೆದಿದ್ದವರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳ ಫಲವಾಗಿ. ಹಾಗೆಂದ ಮೇಲೆ ಒಂದು ನಿರ್ದಿಷ್ಟ ಕಾಲದಲ್ಲಿ ಇರುವ ಶೂದ್ರರು, ದಲಿತರುಗಳು ಹಿಂದಿನ ಜನ್ಮದಲ್ಲಿ ಬ್ರಾಹ್ಮಣರಾಗಿ ಹುಟ್ಟಿ ವಿವಿಧ ಪಾಪಗಳನ್ನು ಎಸಗಿದ ಫಲವಾಗಿ ಈಗ ಶೂದ್ರ, ದಲಿತರಾಗಿ ಹುಟ್ಟಿದ್ದಾರೆ ಎಂದರೆ ಅಷ್ಟೊಂದು ಬ್ರಾಹ್ಮಣರು ಎಲ್ಲಿದ್ದರು ? ಯಾವ ಕಾಲದಲ್ಲಾದರೂ ಅಷ್ಡೊಂದು ಬ್ರಾಹ್ಮಣರು ಇದ್ದರೆ ?
ಹೀಗೆ ಹಲ ಹಲವು ಪ್ರಶ್ನೆಗಳು ಏಳುತ್ತವೆ. ಅತಾರ್ಕಿಕತೆ ಎದ್ದು ತೋರುತ್ತದೆ.

ಹಿಂದಿನ ಲೇಖನದಲ್ಲಿ ಹೇಳಿದಂತೆ ಗರುಡ ಪುರಾಣವನ್ನು ಬ್ರಾಹ್ಮಣರು ತಮ್ಮ ಮನೆಯವರ ಸಾವಿನ ಸಂದರ್ಭದಲ್ಲಿ ಓದಿಸಬೇಕೆಂಬ ಕಟ್ಟಲೆಯಿತ್ತು. ಅವರು ಮಾಡುವ ಹರಿಕತೆ,ಪುರಾಣಗಳಲ್ಲಿ,ಪೌರಾಣಿಕ ನಾಟಕಗಳಲ್ಕಿ ಇವುಗಳನ್ನು ಭಯ ಹುಟ್ಟುವಂತೆ ಬಣ್ಣಿಸಲಾಗುತ್ತಿತ್ತು. ಹಿಂದಿನ ಲೇಖನಕ್ಕೆ ಪ್ರತಿಕ್ರಿಯೆ ನೀಡಿದ ಗೋಪಾಲ ಪೆರಾಜೆ ಮತ್ತು ವನಮಾಲಾ ಕಟ್ಟೇಗೌಡರು ಮುದ್ರಣ ಯುಗದಲ್ಲಿ ನರಕದ ಹಿಂಸೆ ಬಗ್ಗೆ ಜನರನ್ನು ಭೀತರನ್ನಾಗಿಸಲು ಭಯಂಕರ ಹಿಂಸೆಗಳ ಬಗ್ಗೆ ಕ್ಯಾಲೆಂಡರ್ ರೀತಿಯ ಪೋಸ್ಟರ್ಗಳನ್ನು ಮುದ್ರಿಸಲಾಗುತ್ತಿತ್ತು ಮತ್ತು ಅವುಗಳನ್ನು ಮನೆಗಳಲ್ಲಿ ,ಮಠಗಳಲ್ಲಿ ತೂಗು ಹಾಕುತ್ತಿದ್ದರು ಎಂಬುದನ್ನು ನೆನಪಿಸಿದ್ದಾರೆ. ಹೀಗೆ ಎಂತೆಹುದೋ ರೂಪದ ಪುನರ್ಜನ್ಮ ಸಂಭವಿಸುತ್ತದೆ ಎಂಬುದನ್ನು ಅಂದಿನ ಸಾಮಾನ್ಯ ಜನರ ಸಾಮಾನ್ಯ ತಿಳುವಳಿಕೆಯ ಭಾಗವಾಗಿ ಮಾಡುವ ಹಲವು ವಿಧದ ಪ್ರಯತ್ನಗಳು ನಡೆಯುತ್ತಿದ್ದವು.
ಗರುಡ ಪುರಾಣದ ಮೇಲಿನ ದೀರ್ಘ ಉಲ್ಲೇಖ ಜನರನ್ನು ಭಯಭೀತಗೊಳಿಸುವ ಬಹಳ crude ಪ್ರಯತ್ನ. ಆದರೆ ಇವುಗಳ ಮೂಲ ಅತ್ಯಂತ ಉಚ್ಛ ಮಟ್ಟದ ಚಿಂತನೆಗಳ ಫಲ ಎಂದು ದೇಶದಲ್ಲಿ ಮತ್ತು ಜಗತ್ತಿನಲ್ಲಿ ಕೂಡಾ ಪ್ರಸಿದ್ಧಿಗೆ ತರಲಾಗಿರುವ ಉಪನಿಷತ್ತುಗಳು.
ಉಪನಿಷತ್ತುಗಳಲ್ಲಿ ಪುನರ್ಜನ್ಮದ ಕಲ್ಪನೆಯ ಹುಟ್ಟು :
ಋಗ್ವೆದಗಳಲ್ಲಿ ಸ್ವರ್ಗದ ಕಲ್ಪನೆ ಬಿಟ್ಟರೆ ನರಕದ ಕಲ್ಪನೆಯೂ ಇಲ್ಲ. ಅಥರ್ವಣ ವೇದ ಮತ್ತು ಕೆಲವು ಬ್ರಾಹ್ಮಣ ಗ್ರಂಥಗಳಲ್ಲಿ ಮಾತ್ರ ನರಕದ ಪ್ತಸ್ತಾಪವಿದೆ. ಆದರೆ ಪುನರ್ಜನ್ಮದ ಪ್ರಸ್ತಾಪವಿಲ್ಲ. ಪ್ರಸಿದ್ಧ ಸಂಸ್ಕೃತ ವಿದ್ವಾಂಸ ಮತ್ತು ತತ್ವಶಾಸ್ತ್ರಜ್ಞರಾದ ಹಿರಿಯಣ್ಣನವರು ಹೇಳುವಂತೆ ‘ ಈ ಭಾವನೆಯನ್ನು ಸ್ಪಷ್ಟವಾಗಿ ನಿರೂಪಿಸಿ ಯಾವುದೋ ಒಂದು ಊಹೆಯ ಲೋಕದಿಂದ ಜನನ, ಮರಣಗಳ ಚಕ್ರವನ್ನು ಈ ಜಗತ್ತಿಗೇ ವರ್ಗಾಯಿಸಿದ್ದು ಉಪನಿಷತ್ತುಗಳು ಮಾಡಿದ ಕಾರ್ಯ. ಈ ನಂಬಿಕೆಯ ಪ್ರಕಾರ ಸತ್ತ ಮೇಲೆ ಜೀವವು ಮತ್ತೊಂದು ದೇಹವನ್ನು ಹೊಗುತ್ತದೆ. ಈ ಸಿದ್ಧಾಂತದ ಆರಂಭ ಸ್ವರೂಪಲ್ಲಿ ಒಂದು ಜೀವದ ಮುಗಿವಿಗೂ ಮತ್ತೊಂದರ ಮೊದಲಿಗೂ ನಡುವೆ ಅಂತರವಿಲ್ಲ. “ಕಠೋಪನಿಷತ್ತು, ಪ್ರಶ್ನೋಪನಿಷತ್ತು, ಐತರೇಯ ಉಪನಿಷತ್ತು ಮೊದಲಾದವುಗಳಲ್ಲಿ ಮತ್ತೆ ಮತ್ತೆ ಪುನರ್ಜನ್ಮದ ಪ್ರಸ್ತಾಪ ಬಂದಿದೆ. ಬ್ರಹದಾರಣ್ಯಕ ಉಪನಿಷತ್ತಿನಲ್ಲಿ ಯಾಜ್ಞವಲ್ಕ್ಯರು ಮತ್ತು ಇತರರು ಪುನರ್ಜನ್ಮದ ಬಗ್ಗೆ ಸಾಕಷ್ಟು ವಿವರವಾಗಿ ನಿರೂಪಿಸಿದ್ದಾರೆ.
ಸ ಯತ್ರಾಯ ಮಣಿಮಾನಂ ನ್ಯೇತಿ ಜರಾಯಾ ವೋಪತಪತಾವಾಣಿಮಾನಂ … ಪುರುಷಂ ಏವಮೇವಾಯಂ ಪುರುಷ ಸಂಪ್ರಮುಚ್ಯ ಪುನಃ ಪ್ರತಿ ನ್ಯಾಯಂ ಪ್ರತಿ ಯೋನ್ಯಾದ್ರವತಿ ಪ್ರಾಣಾಯೈವ // 4-3-36 ಯಾವಾಗ ಇವನು ಬಡಕಲಾಗುವನೋ, ಮುಪ್ಪಿನಿಂದಾಗಲಿ ಕಾಯಿಲೆಗಳಿಂದಾಗಲೀ ತಪಿಸಿ ದುರ್ಬಲನಾಗುವನೋ ಆಗ ಪುರುಷನು ಈ ಅಂಗಗಳನ್ನು ಬಿಟ್ಟು ಮತ್ತೂ ಪ್ರತಿ ಯೋನಿಯಾಗಿ ಪ್ರಾಣಕ್ಕಾಗಿಯೇ ಓಡಿಬುರುತ್ತಾನೆ.
ಪೂರ್ವಮಪಿ ಆಯಂ ದೇಹಾದ್ ದೇಹಾನ್ತರಮ್ ಅಸಕೃತ್ ಗತವಾನ್ ಯಥಾ ಸ್ವಪ್ನ ಬುದ್ಧಾನ್ತೌ ಪುನಃಪುನರ್ಗಚ್ಛತಿ ತಥಾ ಪುನಃ ಪ್ರತಿ ನ್ಯಾಯಂ ಪ್ರತಿಗಮನಂ ಯಥಾಗತಮ್/ ಇದು ಶಂಕರರು ಮೇಲಿನ ಶ್ಲೋಕಕ್ಕೆ ಬರೆದ ಭಾಷ್ಯ – ಹಿಂದೆಯೂ ಹಲವು ಬಾರಿ ಇವನು ಒಂದು ದೇಹದಿಂದ ಮತ್ತೊಂದು ದೇಹವನ್ನು ಸೇರಿದ್ದನು. ಸ್ವಪ್ನದ ನಂತರ ಎಚ್ಚರವನ್ನು ಎಚ್ಚರದ ನಂತರ ಮತ್ತೆ ಸ್ವಪ್ನವನ್ನೂ ಹೇಗೆ ಪುನಃ ಪುನಃ ಅನುಭವಿಸುತ್ತಾನೋ ಅದೇ ರೀತಿ ಪುನಃ ಪುನಃ ಸಾಯುತ್ತಾನೆ ಮತ್ತು ಹುಟ್ಟುತ್ತಾನೆ.
ಒಂದು ದೇಹ ವಯಸ್ಸಿನಿಂದಾಗಲೀ, ರೋಗಗಳಿಂದಾಗಲಿ ಜೀವಿಸಲು ಅನರ್ಹವಾದರೆ ಅದನ್ನು ಬಿಟ್ಟು ಮತ್ತೊಂದು ದೇಹ ಧರಿಸಿ ಹುಟ್ಟುತ್ತಾನೆ. ಮತ್ತು ಹೀಗೆ ಮತ್ತೆ ಮತ್ತೆ ಹುಟ್ಟುತ್ತಲೇ ಇರುತ್ತಾನೆ . ಹೀಗೆ ಸಾವಿನ ನಂತರ ಕೂಡಲೇ ಇನ್ನೊಂದು ಜನ್ಮ ತಾಳುತ್ತಾನೆ ಎಂದು ಯಾಜ್ಞವಲ್ಕ್ಯರು ಪುನರ್ಜನ್ಮದ ಕಲ್ಪನೆಯನ್ನು ವಿವರಿಸುತ್ತಾರೆ.
ಈ ವಿವರಣೆಯಲ್ಲಿ ಮತ್ತೊಂದು ಮುಖ್ಯಅಂಶ ಸೇರಿಕೊಂಡಿದೆ. ಪುನರ್ಜನ್ಮ ಎಂಬ ಈ ಕಲ್ಪನೆಯೂ ಕೂಡಾ ಕನಸುಗಳ ಸ್ವರೂಪದ ಬಗೆಗಿನ ಅಂದಿನ ಕಲ್ಪನೆಯ ಅಡಿಪಾಯದ ಮೇಲೆಯೇ ಕಟ್ಟಿದ ಮತ್ತೂ ಒಂದು ಮಹಡಿ ಎಂಬುದು. ಮನುಷ್ಯರು ಮಲಗುತ್ತಾರೆ. ಕನಸು ಕಾಣುತ್ತಾರೆ. ಎಚ್ಚರಾಗುತ್ತಾರೆ. ಮತ್ತೆ ಮಲಗುತ್ತಾರೆ ಮತ್ತೆ ಎಚ್ಚರಾಗುತ್ತಾರೆ. ಅದೇ ರೀತಿ ಮನುಷ್ಯರು ಸಾವನ್ನಪ್ಪುತ್ತಾರೆ, ಮತ್ತೆ ಹುಟ್ಟುತ್ತಾರೆ. ಇಲ್ಲಿ ನಿದ್ದೆ ಮತ್ತು ಸ್ವಪ್ನವನ್ನು ಸಾವಿಗೂ, ಎಚ್ಚರಾಗುವುದನ್ನು ಮತ್ತೆ ಹುಟ್ಟುವುದಕ್ಕೂ ಸಮೀಕರಿಸಲಾಗಿದೆ.
ಉಪನಿಷತ್ತುಗಳ ತುಂಬೆಲ್ಲ ನಿದ್ದೆ, ಸ್ವಪ್ನಗಳ ಮೂಲಕವೇ ಈ ಕಲ್ಪನೆಗಳನ್ನು ಮಾಡಿಕೊಳ್ಳಲಾಗಿದೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ.
ಕಠೋಪನಿಷತ್ತುನಲ್ಲಿ ಸಾಕ್ಷಾತ್ ಯಮನೇ ಪುನರ್ಜನ್ಮದ ಬಗ್ಗೆ ಹೀಗೆ ಹೇಳಿದ್ದಾನೆ :
ಯೋನಿಮನ್ಯೇ ಪ್ರಪದ್ಯಂತೇ ಶರೀರತ್ವಾಯ ದೇಹಿನಃ /
ಸ್ಥಾಣುಮನ್ಯೇನುಸಂಯಂತಿ ಯಥಾ ಕರ್ಮ ಯಥಾ ಶ್ರುತಮ್ 5-7
ಅವರವರ ಕರ್ಮ ಮತ್ತು ಜ್ಞಾನಕ್ಕೆ ಅನುಸಾರವಾಗಿ ಬೇರೆ ದೇಹವನ್ನು ಧರಿಸುವುದಕ್ಕಾಗಿ ಪ್ರಾಣಿ ಅಥವಾ ಮನುಷ್ಯ ಜನ್ಮವನ್ನಾಗಲಿ ತಳೆಯುತ್ತಾರೆ ಅಥವಾ ಗಿಡ ಮರಗಳಾಗಿಯಾಗಿ ಹುಟ್ಟುತ್ತಾರೆ.

ಮನುಷ್ಯರು ಪುನರ್ಜನ್ಮ ಪಡೆಯುವಾಗ ಮಾನವರ ವಿವಿಧ ಜಾತಿಗಳಲ್ಲಿ ಮಾತ್ರವಲ್ಲ, ಪ್ರಾಣಿಗಳಾಗಿ ಅಥವಾ ಮರಗಿಡಗಳಾಗಿಯೂ ಹುಟ್ಟಬಹುದು. ಹೀಗೆ ಮರಗಿಡಗಳಿಗೂ ಪಾಪ,ಪುಣ್ಯ ಕರ್ಮಗಳನ್ನು ಆರೋಪಿಸಲಾಗಿದೆ. ಮರಗಿಡಗಳು ತಮ್ಮ ಅಸ್ತಿತ್ವದಿಂದಲೇ ಪುಣ್ಯ ಗಳಿಸುವುದನ್ನೇನೋ ಊಹಿಸಿಕೊಳ್ಳಬಹುದು. ಪಾಪ ಮಾಡುವುದನ್ನು ಹೇಗೆ ಊಹಿಸಿಕೊಳ್ಳುವುದು ? ಹೀಗೆ ಮರಗಿಡಗಳಾಗಿ ಪುಣ್ಯ ಅಥವಾ ಪಾಪ ಮಾಡುವುದನ್ನು ಅವು ಆಯ್ಕೆ ಮಾಡಿಕೊಳ್ಳಬಹುದೇ ಯಾವ ಪಾಪಕ್ಕೆ ಪ್ರಾಣಿಗಳಲ್ಲಿ ಹಿಂಸ್ರ ಪಶುವಾಗಿ ಹುಟ್ಟುವ ಶಿಕ್ಷೆ ದೊರೆಯಬಹುದು ? ಹಿಂಸ್ರ ಪಶುವಾಗಿ ಸಹಜವಾಗಿ, ಬೇರಾವುದೇ ಆಯ್ಕೆ ಇಲ್ಲದೆ ಆಹಾರಕ್ಕಾಗಿ ಇತರ ಪ್ರಾಣಿಗಳನ್ನು, ಮನುಷ್ಯರನ್ನು ಕೊಲ್ಲುವುದು ಪಾಪವೇ ,ಪುಣ್ಯವೇ ? ಹೀಗೆ ಹಲ ಹಲವು ಪ್ರಶ್ನೆಗಳು ಏಳುವುದು ಸಹಜ.
ಉಪನಿಷತ್ತುಗಳಲ್ಲಿ ಸತ್ತ ಕೂಡಲೇ ಬೇರೆ ಜನ್ಮ ಪಡೆಯುವುದೆಂದು ವಿವರಿಸಿರುವುದನ್ನು ಮೇಲೆ ಕಾಣಬಹುದು. ಆದರೆ ಮುಂದೆ ಕೆಲ ಕಾಲದ ನಂತರ ಮನುಷ್ಯರು ಸತ್ತ ಮೇಲೆ ಸ್ವರ್ಗ ಅಥವಾ ನರಕ ಯಾತನೆಯನ್ನು ಕೆಲ ಕಾಲದವರೆಗೆ ಅನುಭವಿಸುತ್ತಾರೆ. ಆ ನಂತರ ಮತ್ತೆ ಹುಟ್ಟುತ್ತಾರೆ ಎಂಬ ವಿವರಣೆಗಳನ್ನು ನೀಡಲಾಯಿತು. ಪುನರ್ಜನ್ಮದ ನಂಬಿಕೆಯ ಜೊತೆಗೆ ಹಿಂದಿನ ನಂಬಿಕೆಯಾದ ಸ್ವರ್ಗ,ನರಕಗಳ ನಂಬಿಕೆಯನ್ನೂ ಒಳಗೊಂಡಿತು. ಈ ಲೋಕದ ಕರ್ಮಗಳ ಫಲವಾಗಿ ಸ್ವರ್ಗ ಸುಖ ಯಾ ನರಕ ಯಾತನೆಯನ್ನೂ ಅನುಭವಿಸಬೇಕು. ನಂತರ ಈ ಲೋಕದಲಿ ಮತ್ತೆ ಜನ್ಮ ತಳೆದು ಸುಖ ಅಥವಾ ಸಂಕಟಗಳನ್ನು ಅನುಭವಿಸಬೇಕು. ಎಂದರೆ ಬ್ರಾಹ್ಮಣ ಗ್ರಂಥಗಳು ನೀಡುವ ಶಿಕ್ಷೆ ನರಕ ಯಾತನೆಯನ್ನೂ ಅನುಭವಿಸಬೇಕು. ನಂತರ ಉಪನಿಷತ್ತುಗಳು ವಿಧಿಸುವಂತೆ ಭೂಮಿಯ ಮೇಲೆ ಜನ್ಮವೆತ್ತಿ ಕೂಡಾ ಸಂಕಟ ಅನುಭವಿಸಬೇಕು. ಹೀಗೆ ಡಬಲ್ ಡಬಲ್ ಸುಖ ಅಥವಾ ಸಂಕಟದ ಸ್ಥಿತಿ ಮನುಷ್ಯರ ಮೇಲೆ ಹೇರಲ್ಪಟ್ಟಿತು.
ಆಗಾಗ ಒಂದೊಂದು ಕಾಲಕ್ಕೆ ಒಂದೊಂದು ರೀತಿಯ ಕಲ್ಪನೆ ಹುಟ್ಟಿದ ರೀತಿಯೇ ಇವೆಲ್ಲ ಕೇವಲ ಕಲ್ಪನೆಗಳು ಎಂಬುದನ್ನು ಸಾಬೀತುಪಡಿಸುತ್ತವೆ.
| ಇನ್ನು ಮುಂದಿನ ವಾರಕ್ಕೆ |






0 Comments