ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ನಾಗರಾಜ್ ಅಂಕಣ- ಶುಶ್ರುತರ ಅನಾಟಮಿಯ ಶೋಧಗಳು, ಶವಚ್ಛೇದನ, ಶಸ್ತ್ರಚಿಕಿತ್ಸೆ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

53

ಇಂದು ವಿಶ್ವಾದ್ಯಂತ ವೈದ್ಯಕೀಯ ವಿದ್ಯಾರ್ಥಿಗಳು ಓದುತ್ತಿರುವ ಮುಖ್ಯ ಗ್ರಂಥಗಳಲ್ಲಿ 19 ನೆಯ ಶತಮಾನದ ಗ್ರೇಯ ಅನಾಟಮಿ ಅತಿ ಹೆಚ್ಚು ದೇಶಗಳಲ್ಲಿ ಅತಿ ಹೆಚ್ಚು ಮುದ್ರಣಗಳನ್ನು ಕಂಡಿದೆ. ಭಾರತದ ವಿದ್ಯಾರ್ಥಿಗಳೂ ಅದರಲ್ಲಿರುವ ಲ್ಯಾಟಿನ್ ಪದಗಳ ಮೂಲಕ ಹೆಸರಿಸಲಾಗಿರುವ ದೇಹದ ಭಾಗಗಳು, ಮೂಳೆಗಳನ್ನು ಗಟ್ಟು ಮಾಡಲು, ನೆನಪಿಟ್ಟುಕೊಳ್ಳಲು ಪಡುವ ಪಾಡು ಅಷ್ಟಿಷ್ಟಲ್ಲ.

ಈ ಗ್ರಂಥಕ್ಕೆ ಬದಲಾಗಿ ಶುಶ್ರುತರ ಶರೀರ‌ ಶಾಸ್ತ್ರ ಎಂಬ ಗ್ರಂಥವನ್ನು ಜೊತೆಗೆ ಶುಶ್ರುತರ ಸರ್ಜರಿ (ಶಸ್ತ್ರಚಿಕಿತ್ಸಾ ಶಾಸ್ತ್ರ), ಚರಕರ ವೈದ್ಯಕೀಯ ತತ್ವಗಳ ಶಾಸ್ತ್ರ, ಚರಕರ ಫಿಸಿಯಾಲಜಿ, ಚರಕರ ಔಷಧಿ ಶಾಸ್ತ್ರ ಎಂಬ ವೈದ್ಯಕೀಯ ವಿಜ್ಞಾನದ ಮೂಲಭೂತ ಪಠ್ಯ ಗ್ರಂಥಗಳನ್ನು ವಿಶ್ವದ ವಿದ್ಯಾರ್ಥಿಗಳು ಓದುವಂತಾಗಿದ್ದರೆ ಭಾರತ ಎಷ್ಟೊಂದು ಹೆಸರಾಗುತ್ತಿತ್ತು! ಭಾರತದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಲಿಕೆ ಎಷ್ಟೊಂದು ಸುಲಭವಾಗಿರಬಹುದಾಗಿತ್ತು ! ಇಂತಹ ಮಾತನ್ನು ಇನ್ನೂ ಹಲವು ವಿಜ್ಞಾನಗಳ ಬಗ್ಗೆ ಹೇಳಬಹುದು. ಆದರೆ ಹಿಂದಿನ‌ ಲೇಖನಗಳಲ್ಲಿ ವಿವರಿಸಿದಂತೆ ಭಾರತದಲ್ಲಿನ ವೈದ್ಯಕೀಯ ಮತ್ತಿತರ ವಿಜ್ಞಾನಗಳ ಅವನತಿ  ಈ ಅಪರಿಮಿತ ಸಾಧ್ಯತೆಗಳನ್ನು ತಪ್ಪಿಸಿತು.‌

ಶುಶ್ರುತ ಸಂಹಿತೆಯಲ್ಲಿ ಇಂತಹ ಸಾಧ್ಯತೆಗೆ ವಿಪುಲ ಉದಾಹರಣೆಗಳಿವೆ.

ಮನುಷ್ಯರ ದೇಹದಲ್ಲಿ ಎಷ್ಟು ಮೂಳೆಗಳಿವೆ ?
ಯಾವುದೇ ಶಸ್ತ್ರ ವೈದ್ಯ ತಿಳಿದುಕೊಳ್ಳಬೇಕಾದ ಪ್ರಾಥಮಿಕ ಅಂಶಗಳಲ್ಲಿ ಇದೊಂದು ಮುಖ್ಯ ವಿಷಯ. ಯುರೋಪಿನಲ್ಲಿ ಕ್ರಿ.ಶ.ಎರಡನೇ ಶತಮಾನದ ಗಲೇನ್‌ನಿಂದ ಆರಂಭಿಸಿ 19 ನೆಯ ಶತಮಾನದ ಗ್ರೇ‌ಯ ಅನಾಟಮಿಯವರೆಗೆ ಮೂಳೆಗಳ ಲೆಕ್ಕ ಮಾಡಿದ್ದಾರೆ. ಆದರೆ ಬುದ್ಧ ಪೂರ್ವದ ಐದನೇ ಶತಮಾನದಲ್ಲಿಯೇ ಮನುಷ್ಯರ ಮೂಳೆಗಳ ಸಂಖ್ಯೆಯನ್ನು 300 ಎಂದು ಶುಶ್ರುತ ಸಂಹಿತೆಯಲ್ಲಿ ಗುರುತಿಸಲಾಗಿದೆ. ಆಗಿನ ಉಪಕರಣಗಳ ಲಭ್ಯತೆ ಮತ್ತು ತಿಳುವಳಿಕೆಯ ಆಧಾರದಲ್ಲಿ ಇದೊಂದು ಸಾಧನೆಯೇ ಸರಿ. ಚರಕ ಸಂಹಿತೆ ಮತ್ತು ಇತರ ಕೆಲ ವೈದ್ಯ ಗ್ರಂಥಗಳಿಗಿಂತಲೂ ಹೆಚ್ಚು ನಿಖರವಾದ ಸಂಖ್ಯೆ ಇದು. ಆಧುನಿಕ ಕಾಲದ ವಿಜ್ಞಾನ ಈ ಸಂಖ್ಯೆಯನ್ನು 206 ಎಂದು ನಿಗದಿಸಿದರೂ ಕೂಡಾ ಮೇಲೆ ಉಲ್ಲೇಖಿಸಿದ ಗಲೆನ್( 2 ನೆ ಶ) 248 ಎಂದೂ, 16 ನೇ ಶ. ವೆಸೇಲಿಯಸ್ 307 ಎಂದು ಗುರುತಿಸಿದ್ದಾರೆ ಎಂಬುದನ್ನು ಗಮನಿಸಬೇಕು.‌ ಶುಶ್ರುತ ಸಂಹಿತೆ 32 ಹಲ್ಲುಗಳನ್ನೂ ಮೂಳೆ ಎಂದು ಲೆಕ್ಕಿಸಿದೆ. ಜೊತೆಗೆ ಮಕ್ಕಳ ದೇಹದಲ್ಲಿ ವಯಸ್ಕರಿಗಿಂತ ಹೆಚ್ಚು ಮೂಳೆಗಳಿರುವುದರಿಂದ ಈ ವ್ಯತ್ಯಾಸ ಉಂಟಾಗಿದೆ. (ಗರ್ಭದೊಳಗಿನ ಶಿಶು ದೇಹದಲ್ಲಿ 800 ಕ್ಕಿಂತ ಹೆಚ್ಚೆಂದು ಕಾಣುವ ಮೂಳೆಗಳ ಸಂಖ್ಯೆ ಜನನದ ಸಮಯದಲ್ಲಿ 450 ಇರುತ್ತದಂತೆ. ವಯಸ್ಸಾಗುತ್ತಾ ಈ ಮೂಳೆಗಳಲ್ಲಿ ಹಲವು ಒಂದರೊಡನೊಂದು ಸೇರಿಕೊಳ್ಳುತ್ತವಾದ್ದರಿಂದ ಸಂಖ್ಯೆ ಕಡಿಮೆಯಾಗುತ್ತದಂತೆ.)

ಶರೀರದ ವಿವಿಧ ಅಂಗಗಳು, ಅವುಗಳ ಆಕಾರ ಮೊದಲಾದವನ್ನು, ಮೂಳೆಗಳ ವಿಧಗಳು, ಸಂಧಿ ಸ್ಥಾನಗಳು (joints),  ಕಣ್ಣು, ಕಿವಿ ಮುಂತಾದ ಜ್ಞಾನೇಂದ್ರಿಯಗಳ ಕೆಲಸದಲ್ಲಿ ಅತಿ ಮುಖ್ಯವಾದ ನರಗಳನ್ನು ಗುರುತಿಸಿದ್ದರು. ಮೆದುಳು, ನರ ಮಂಡಲದ ಪಾತ್ರ ಹೀಗೆ ಹಲವು ಶೋಧಗಳ ದಾಖಲೆಯ ಕೀರ್ತಿ ಶುಶ್ರುತ ಸಂಹಿತೆಯದು.

ಶಸ್ತ್ರಚಿಕಿತ್ಸೆಯ ವಿಧಾನ ಮತ್ತು ವಿಜ್ಞಾನ:
ಶುಶ್ರುತ ಸಂಹಿತೆಯಲ್ಲಿ ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದ ಒಂದು ಮುಖ್ಯ ಅಂಶವೆಂದರೆ ಅದರ ಶಸ್ತ್ರಚಿಕಿತ್ಸಾ ಉಪಕರಣಗಳು. ಅವುಗಳಲ್ಲಿ ಎಷ್ಟೊಂದು ಆಕಾರ, ಗಾತ್ರ ವೈವಿಧ್ಯತೆ ! ಎಷ್ಟೊಂದು ನಿಖರತೆ !!
ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಉಪಕರಣಗಳನ್ನು ವಿವರಿಸುವುದಕ್ಕೇ ಎರಡು ಅಧ್ಯಾಯಗಳನ್ನು ಮೀಸಲಿಡಲಾಗಿದೆ.
ಸೂತ್ರ ಸ್ಥಾನದ 8 ನೇ ಅಧ್ಯಾಯದಲ್ಲಿ  ಶಸ್ತ್ರಗಳು ಎಂದು ಕರೆಯಲ್ಪಟ್ಟ ಹರಿತವಾದ 20 ಉಪಕರಣಗಳು . ಅವುಗಳ ಜೊತೆಗೆ ಏಳನೇ ಅಧ್ಯಾಯದಲ್ಲಿ ಯಂತ್ರಗಳು ಎಂದು ಕರೆಯಲ್ಪಟ್ಡ ನೂರಾರು ಉಪಕರಣಗಳನ್ನು ವಿವರಿಸಲಾಗಿದೆ. ಅವುಗಳ ಗುಣ ಮಟ್ಟ, ಶಸ್ತ್ರಚಿಕಿತ್ಸೆ ನಡೆಸುವಾಗ ವಿವಿಧ ಉಪಕರಣಗಳನ್ನು ಹಿಡಿದುಕೊಳ್ಳುವ ರೀತಿ, ಅವುಗಳ ಸ್ವಚ್ಛತೆ, ಕಾಯಿಸಿದ ಎಣ್ಣೆಯಲ್ಲಿ ಅದ್ದಿ sterilization ಹೀಗೆ ಹಲವು ವಿವರಗಳನ್ನು ನೀಡಲಾಗಿದೆ.
ಈ ಉಪಕರಣಗಳನ್ನು ವೈದ್ಯರೇ ರೂಪಿಸಬೇಕು. ಅಧರಲ್ಲಿ ಲೋಹ ಕೆಲಸಗಾರರ ಜೊತೆ ಸಮಾಲೋಚಿಸಬೇಕು ಎಂಬುದು ಅಂದು ಈ ಕುಶಲ ಕರ್ಮಿಗಳನ್ನು ಕೀಳಾಗಿ ಕಾಣುವ ಮನೋಭಾವಕ್ಕೆ ವ್ಯತಿರಿಕ್ತವಾಗಿದೆ.

ಇಡೀ ವಿಶ್ವದಲ್ಲಿ ಪ್ರಭಾವವುಂಟು ಮಾಡಿದ ಮತ್ತೊಂದು ಮುಖ್ಯ ಅಂಶವೆಂದರೆ ಪ್ಲಾಸ್ಟಿಕ್ ಸರ್ಜರಿ- ಹರಿದ ಕಿವಿ, ಕತ್ತರಿಸಿದ ಮೂಗು,  ತುಟಿಗಳನ್ನು ಮತ್ತೆ ಪುನರ್ ರಚನೆ ಮಾಡುವ ವಿಧಾನವನ್ನು ವರ್ಣಿಸಲಾಗಿದೆ.

15 ರೀತಿಯ ಹೊರಗಿವಿಯ ದೋಷಗಳನ್ನು ಹಾಗೂ ಹರಿದ ಹೊರಗಿವಿಯನ್ನು ಶಸ್ತ್ರಚಿಕಿತ್ಸೆಯಿಂದ ಸರಿಪಡಿಸುವ ವಿಧಾನಗಳನ್ನು ವಿವರಿಸಲಾಗಿದೆ. ಅಂದು ಶಿಕ್ಷೆಯ ಕ್ರಮವಾಗಿ ವ್ಯಾಪಕವಾಗಿದ್ದ  ಮೂಗನ್ನು ಕೊಯ್ಯುವುದನ್ನು ಮತ್ತೆ ಪುನರ್ ರಚಿಸಲು ಅನುಸರಿಸುವ ವಿಧಾನ ಇಂದೂ ಅಳವಡಿಸಿಕೊಳ್ಳಲಾಗಿದೆ . ಭಾರತೀಯ ವಿಧಾನವೆಂದು ಪ್ರಸಿದ್ಧವಾಗಿದೆ.

ಈ ರೀತಿಯ ಪ್ಲಾಸ್ಟಿಕ್ ಸರ್ಜರಿಗೆ ಯಾವ ಭಾಗದಿಂದ ಮಾಂಸಲ ಭಾಗವನ್ನು ಆಯ್ದುಕೊಳ್ಳಬೇಕು, ಆಗ ವಹಿಸಬೇಕಾದ ಎಚ್ಚರ ಇವುಗಳ ವಿವರಣೆ ಇದೆ.

ಯುರೋಪಿನಲ್ಲಿ 18 ನೆಯ ಶತಮಾನಕ್ಕಿಂತ ಮೊದಲು ಪ್ಲಾಸ್ಟಿಕ್ ಸರ್ಜರಿ ಅನುಸರಿಸಲಾಗುತ್ತಿರಲಿಲ್ಲವೆಂದಾಗ ಶುಶ್ರುತ ಸಂಹಿತೆಯ ವೈದ್ಯರ ಕೊಡುಗೆಯ ವೈಜ್ಞಾನಿಕ ಮಹತ್ವವನ್ನು ಎತ್ತಿ ಹೇಳುತ್ತದೆ.

ಮೂಲ ವ್ಯಾಧಿ ಎನ್ನುವ ಪೈಲ್ಸ್, ಫಿಸ್ಟುಲಾಗಳು,  ಟಾನ್ಸಿಲ್ ದೊಡ್ಡದಾಗುವುದು ಇತ್ಯಾದಿ ಹಲವು ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸಾ ವಿಧಾನಗಳನ್ನು ವಿವರಿಸಲಾಗಿದೆ.

ಈ ಸಂಹಿತೆಯಲ್ಲಿ ಮತ್ತೊಂದು ಮುಖ್ಯ ಅಂಶವೆಂದರೆ ಮರ್ಮ ಸ್ಥಾನಗಳ ಪರಿಕಲ್ಪನೆ ಮತ್ತು ಅಪಾಯಕ್ಕನುಗುಣವಾಗಿ ಅವುಗಳ ವಿಂಗಡಣೆ. ಮರ್ಮ ಸ್ಥಾನವೆಂದರೆ ಎಲ್ಲಿ ಪೆಟ್ಟಾದರೆ ಪ್ರಾಣಕ್ಕೆ , ದೇಹಕ್ಕೆ ತೀವ್ರ ಹಾನಿಯಾಗುತ್ತದೆಯೋ ಅಂತಹ ಸ್ಥಾನಗಳು. ಅಂತಹ 107 ಸ್ಥಾನಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 19 ಸ್ಥಾನಗಳಲ್ಲಿ ಹಾನಿಯಾದರೆ ತತ್ ಕ್ಷಣ ಅಥವಾ ಒಂದು ವಾರದೊಳಗೆ ಪ್ರಾಣ ಹಾನಿ, 33 ಸ್ಥಾನಗಳಲ್ಲಿ ಹಾನಿಯಾದರೆ 15ರಿಂದ 30 ದಿನಗಳಲ್ಲಿ ಪ್ರಾಣ ಹಾನಿ, 44 ಸ್ಥಾನಗಳಲ್ಲಿ ಹಾನಿಯಾದರೆ ಪ್ರಾಣ ಉಳಿಯಬಹುದು, ಆದರೆ ಅಂಗವಿಕಲತೆ ಉಂಟಾಗಬಹುದು. ಈ ರೀತಿಯ ವಿಂಗಡಣೆ ಶಸ್ತ್ರಚಿಕಿತ್ಸಾ ವಿಜ್ಞಾನದಲ್ಲಿ ಹೊಸ ರೀತಿಯದು.
ಹಾಗೆಯೇ ವ್ರಣಗಳ, ಕುರುಗಳ ಚಿಕಿತ್ಸೆ , ವ್ರಣಗಳು ಮೊದಲು ಒಂದು ಭಾಗದ ಊತದಿಂದ ಆರಂಭವಾಗಿ ಚರ್ಮ, ಮಾಂಸ ಖಂಡ, ಮೂಳೆ ಮೊದಲಾದ ಆರು ಭಾಗಗಳಿಗೆ ಹರಡುತ್ತಾ ಉಲ್ಬಣಗೊಳ್ಳುತ್ತಾ ಹೋಗುವುದನ್ನು ಹಾಗೂ ಆಯಾ ಹಂತದಲ್ಲಿ ಅವುಗಳ ಚಿಕಿತ್ಸೆಯನ್ನು ಅತ್ಯಂತ ವೈಜ್ಞಾನಿಕವಾಗಿ ವಿವರಿಸಲಾಗಿದೆ.

ಹೀಗೆ ಇಂದಿನ‌ ವೈದ್ಯರಿಗೂ ಅಚ್ಚರಿ ಉಂಟು ಮಾಡುವಂತಹ ವಿವಿಧ ವಿಧಗಳ ಫ್ರಾಕ್ಷರ್‌ಗಳು, ಡಿಸ್‌ಲೋಕೇಷನ್‌ಗಳ , ಮೂತ್ರಾಶಯದ ಕಲ್ಲುಗಳನ್ನು ಹೊರತೆಗೆಯುವುದು ಇತ್ಯಾದಿ ರೀತಿಯ ಹಲವು ಶಸ್ತ್ರಚಿಕಿತ್ಸೆಗಳ ವಿವರಣೆಗಳಿವೆ.

ಶವಚ್ಛೇದನ (dissection) ಮಾಡದೆ ವೈದ್ಯನಾಗಲು ಸಾಧ್ಯವೇ!

ಶೋಧಯಿತ್ವಾ ಮೃತಂ ಸಮ್ಯಕ್ ದೃಷ್ಟವೋಂಗ ನಿಶ್ಚಯಃ (3-5-48)
ಮೃತ ದೇಹವನ್ನು  ಕತ್ತರಿಸಿ ಸಮಗ್ರವಾಗಿ ಕಣ್ಣಾರೆ  ನೋಡುವ ಮೂಲಕವೇ ದೇಹದ ಅಂಗಾಂಗಳನ್ನು ನಿಸ್ಸಂಶಯವಾಗಿ ತಿಳಿದುಕೊಳ್ಳಲು ಸಾಧ್ಯ.

ಮೇಲೆಯೇ ನಮಗೆ ಕಾಣುವ ಚರ್ಮದಿಂದ ಹಿಡಿದು ಒಳಗಿನ ಅಂಗಭಾಗಗಳನ್ನು ಶರೀರ ರಚನಾ ಶಾಸ್ತ್ರ ( ಅನಾಟಮಿ )ಯ ಜ್ಞಾನವಿಲ್ಲದೆ  ಸರಿಯಾಗಿ ವಿವರಿಸಲಾಗುವುದಿಲ್ಲ.

ಇದು ಶುಶ್ರುತ ಸಂಹಿತೆ ವೈದ್ಯ ವಿದ್ಯಾರ್ಥಿಗಳಿಗೆ ನೀಡುವ ನಿರ್ದೇಶ. ಅಷ್ಟೇ ಅಲ್ಲದೆ ಎಂತಹಾ ಶವವನ್ನು ಆರಿಸಬೇಕು, ಹೇಗೆ ಅವುಗಳನ್ನು ರಕ್ಷಿಸಬೇಕು,ಕೊಳೆಸಬೇಕು ಎಂಬುದನ್ನು ಬಹಳ ವಿವರವಾಗಿಯೇ ವರ್ಣಿಸಿದೆ.  ಮೇಲೆ ಹೇಳಿದಂತೆ ಸಂಹಿತೆಯಲ್ಲಿ ವಿವರಿಸಲಾಗಿರುವ ಶರೀರ ರಚನೆ, ಅದರ ವಿವಿಧ ಅಂಗ ಭಾಗಗಳು , ಮೂಳೆಗಳ ಸಂಖ್ಯೆ, ಕಣ್ಣಿನ ರಚನೆ, ಮೂತ್ರ ಕೋಶದ ರಚನೆ ಇತ್ಯಾದಿ ಹಲವು ಅಂಶಗಳು ಅಂದಿನ ವೈದ್ಯರು ವ್ಯಾಪಕವಾಗಿ ಶವಚ್ಛೇದನ   ಮಾಡಿರುವುದಕ್ಕೆ ಪುರಾವೆಯಾಗಿದೆ. ವಿವಿಧ ತಿಂಗಳಿನ ಬಸಿರಿನೊಳಗಣ  ಭ್ರೂಣದ ಬೆಳವಣಿಗೆಯನ್ನು ವಿವರಿಸಿರುವ ಪರಿಯೂ ಕೂಡಾ ವಿವಿಧ ಅವಧಿಯಲ್ಲಾದ ಗರ್ಭಪಾತದಿಂದ ದೊರೆತ ಭ್ರೂಣಗಳು  ಶವಚ್ಛೇದನ ಮತ್ತು ಅಧ್ಯಯನದ ಫಲ ಎಂಬುದು ಕಾಣುತ್ತದೆ.

ಶಸ್ತ್ರಕ್ರಿಯೆಯ ವಿವಿಧ ವಿಧಾನಗಳನ್ನು ಸಂಹಿತೆ ವಿವರಿಸುತ್ತದೆ-
8 ರೀತಿಯ ವಿವಿಧ ಶಸ್ತ್ರಕ್ರಿಯೆಯ ವಿಧಾನಗಳಿವೆ. ಛೇದನ (ಕತ್ತರಿಸುವುದು  excision), ಬೇಧನ (ಸೀಳುವುದು incision), ಲೇಖನ (ಕೆರೆಯುವುದು scrapping), ವ್ಯಧನ (ತೂತು ಮಾಡುವುದು puncturing), ವಿಶ್ರಾವಣ (ರಕ್ತ ಹೊರಗೆ ಹರಿಸುವುದು) , ಏಷಣ (ಹುಡುಕುವುದು probing), ಆಹಾರಣ ಹೀರುವುದು ಅಥವಾ ಸೆಳೆಯುವುದು  , ಸೀವನ (ಹೊಲಿಯುವುದು stitching) ಇವುಗಳಲ್ಲಿ ಒಂದೊಂದರಲ್ಲಿಯೂ ಬೇರೆ ಬೇರೆ ವಿಧಗಳಿವೆ. ಬೇಧನ incision ನ ಉದಾಹರಣೆ ತೆಗೆದುಕೊಂಡರೆ ಕೆಳಗಿನಿಂದ ಮೇಲೆ ಸೀಳುವುದು, ಮೇಲಿನಿಂದ ಕೆಳಗೆಳೆದು ಸೀಳುವುದು . ಹೊಲಿಯುವುದಕ್ಕೆ ಮೂರು ತೆರನ ಸೂಜಿಗಳನ್ನು ಬಳಸಿ ವಿವಿಧ ರೀತಿಯ ಹೊಲಿಗೆ ಹಾಕಬಹುದು. ಸಾವಯವ ದಾರವನ್ನು ಬಳಸುವುದು ಒಳ್ಳೆಯದು.

ಶವಚ್ಛೇದನದಿಂದ ದೊರೆಯುವ ದೇಹ ರಚನೆಯ ನಿಖರ ಜ್ಞಾನದ ಜೊತೆಗೆ ವೈದ್ಯರು ಶಸ್ತ್ರಕ್ರಿಯೆಗಳನ್ನು ಕೈಗೊಳ್ಳುವಷ್ಟು ಪರಿಣತರಾಗಲು ಅವಶ್ಯವಾದ ಅಭ್ಯಾಸದ ಅನಿವಾರ್ಯತೆಯನ್ನು ಒತ್ತಿ ಹೇಳುತ್ತದೆ. ವೈದ್ಯ ವಿಜ್ಞಾನದ ಹಲವು ವಿಭಾಗಗಳಲ್ಲಿ ಒಬ್ಬ ವಿದ್ಯಾರ್ಥಿಯು ಬಹಳ ಪರಿಣತನಾಗಿದ್ದರೂ ಅವನ ಗುರುವು ಅವನಿಗೆ ಶಸ್ತ್ರಕ್ರಿಯೆಯ ಅಭ್ಯಾಸ ಮಾಡುವಂತೆ ಗಮನ ಇಡಬೇಕು. ಅವನು ವೈದ್ಯ ವಿಜ್ಞಾನದಲ್ಲಿ ಬಹಳ ಪಾರಂಗತನಾಗಿದ್ದರೂ ಶಸ್ತ್ರಕ್ರಿಯೆಯ ಅಭ್ಯಾಸ  ಇಲ್ಲದಿದ್ದರೆ ಅವನು ಚಿಕಿತ್ಸೆ ನೀಡಲು, ಶಸ್ತ್ರಕ್ರಿಯೆಗಳನ್ನು ಕೈಗೊಳ್ಳಲು‌ಅರ್ಹನಾಗುವುದಿಲ್ಲ. 

ಪ್ರತ್ಯಕ್ಷತೋ ಹಿ ಯತ್ ದೃಷ್ಟಂ ಶಾಸ್ತ್ರದೃಷ್ಟಂ ಚ ಯದ್ಭವೇತ್/
ಸಮಾಸಭಸ್ತದುಭಯಂ ಭೂಯೋ ಜ್ಞಾನ ವಿವರ್ಧನಮ್ //
ಪ್ರತ್ಯಕ್ಷವಾಗಿ ಕಣ್ಣಾರೆ ನೋಡಿದ್ದು ಮತ್ತು ಗ್ರಂಥಗಳಿಂದ ಕಲಿತದ್ದು ಎರಡೂ ಸೇರಿದರೆ ಮಾತ್ರ ಚೆನ್ನಾದ ಜ್ಞಾನ ವರ್ಧಿಸುತ್ತದೆ. 3-5-49)
ವಿದ್ಯಾರ್ಥಿಗಳಿಗೆ ಶಸ್ತ್ರಕ್ರಿಯೆಯ ಕೌಶಲ್ಯವನ್ನು ರೂಢಿಸಿಕೊಳ್ಳುವಂತೆ ಮಾಡುವುದು ಹೇಗೆ ?   ಮೇಲೆ ವಿವರಿಸಿದ ವಿವಿಧ ರೀತಿಯ ಒಂದೊಂದು ಶಸ್ತ್ರಕ್ರಿಯೆಯ ವಿಧಾನವನ್ನು ಕಲಿಸುವುದಕ್ಕೂ ಬೇರೆ ಬೇರೆ ವಿಧಾನಗಳನ್ನು ಸಂಹಿತೆಯು ಬಹಳ ವಿವರವಾಗಿ ತಿಳಿಸಿದೆ.

ಛೇದನ , ಬೇಧನಗಳಿಗೆ ಕುಂಬಳ ಕಾಯಿ, ಸೋರೆಕಾಯಿ, ಕಲ್ಲಂಗಡಿ ಮೊದಲಾದ ಹಣ್ಣುಗಳನ್ನು ಅಭ್ಯಾಸ ಮಾಡಬೇಕು. ಪ್ರಾಣಿಗಳ ತಲೆಯನ್ನು ಕತ್ತರಿಸುವುದು, ಅವುಗಳ ಮೂತ್ರಾಶಯಗಳಿಗೆ ನೀರು ಅಥವಾ ಕೆಸರು ತುಂಬಿ ಅಭ್ಯಾಸ ಮಾಡುವುದು, ಅವುಗಳ ಚರ್ಮದ ಸೀಳುಗಳು, ತುಂಡುಗಳನ್ನು ಹೊಲಿಯುವುದು, ಮರದ ಹಲಗೆ, ಜೇನು ಮೇಣ ಇತ್ಯಾದಿಗಳನ್ನು ಬಳಸುವುದು ಇತ್ಯಾದಿ ಮನುಷ್ಯರ ಬೊಂಬೆಗಳನ್ನು ಬಳಸಿ ಗಾಯಗಳಿಗೆ ಕಟ್ಟು ಹಾಕುವುದು( bandaging ) ಕಲಿಸಬಹುದು. ಹೀಗೆ ಬ್ಯಾಂಡೇಜ್ ಮಾಡುವ 12 ವಿಧಾನಗಳನ್ನು ಶುಶ್ರುತ ಸಂಹಿತೆ ನಮೂದಿಸಿದೆ.

ಶುಶ್ರುತ ಮೇಲೆ ವಿವರಿಸಿದ ತನ್ನೆಲ್ಲ ಜ್ಞಾನಕ್ಕೆ ಪ್ರತ್ಯಕ್ಷ ದರ್ಶನ, ಪ್ರತ್ಯಕ್ಷವಾಗಿ ಕಂಡದ್ದರ ಮೇಲೆ ಆಧರಿಸಿದ ಅನುಮಾನ, ವಿಶ್ವದಲ್ಲಿ ಕಾಣುವ ಭೌತಿಕ ವಸ್ತುಗಳು, ಸಕಾರಣ ತರ್ಕ ಬದ್ಧತೆ , ಸಂವಾದ, ಚರ್ಚೆ, ಅಭ್ಯಾಸಾಧಾರಿತ ಕಲಿಕೆಯನ್ನು ಅವಲಂಬಿಸಿದೆ. ಆ ಕಾರಣ ಬಹಳ ವೈಜ್ಞಾನಿಕವಾಗಿದೆ.

ಆದರೆ ಚರಕ ಸಂಹಿತೆ, ಖಗೋಳ ವಿಜ್ಞಾನದ ವಿಷಯದಲ್ಲಿ ಕಂಡಂತೆ ಶುಶ್ರುತ ಸಂಹಿತೆಯ ವೈಜ್ಞಾನಿಕ ತಿಳಿವಿನ ಬೆಳವಣಿಗೆಗೂ ಬಹು ದೊಡ್ಡ ಅಪಾಯ ಒದಗಿತು. ಭಾರತದಲ್ಲಿ ರೂಪುಗೊಂಡ ಮನುಸ್ಮೃತಿ ಮೊದಲಾದ ಧರ್ಮಶಾಸ್ತ್ರಗಳು,  ಪುರಾಣಗಳು ಇಂತಹ ವಾತಾವರಣವನ್ನು ಪೂರ್ತಿ ನಾಶ ಮಾಡಿಬಿಟ್ಟವು. ಅಪಸ್ತಂಭ ಧರ್ಮ ಸೂತ್ರ, ಗೌತಮ ಧರ್ಮಸೂತ್ರ, ಮನುಸ್ಮೃತಿಗಳಲ್ಲಿ ಹೀಗೆ ಹೇಳಲಾಗಿದೆ :
ಶವಗಳನ್ನು ಮುಟ್ಟುವುದೇ ಮೈಲಿಗೆ. ಅದು ಚಾಂಡಾಲನನ್ನು,  ಮುಟ್ಟಾದ ಮಹಿಳೆಯನ್ನು , ಜಾತಿ ಬಹಿಷ್ಕೃತನನ್ನು ಮುಟ್ಟಿದಷ್ಟೇ ಅಪವಿತ್ರ . ಹಾಗೆ ಮುಟ್ಟಿದವರು ತಾವು ಧರಿಸಿದ ಉಡುಪಿನ ಸಹಿತವಾಗಿ ತಣ್ಣೀರು ಸುರಿದುಕೊಂಡು ಮೈಲಿಗೆ ಕಳೆದುಕೊಳ್ಳಬೇಕು ಎಂಬ ಕಟ್ಟಲೆಗಳನ್ನು ವಿಧಿಸಿತು. ಇದರಿಂದಾಗಿ ಶವಚ್ಛೇದನ ಮಾಡುವುದು ಸಮಾಜದಿಂದ, ಜಾತಿಯಿಂದ ಬಹಿಷ್ಕಾರ ಮೊದಲಾದ ಹಲವು ರೀತಿಯ ಶಿಕ್ಷೆಗಳ ಬೆದರಿಕೆಗೆ ಒಳಗಾಯಿತು. ಇಪ್ಪತ್ತನೆಯ ಶತಮಾನದವರೆಗೂ ಶವಚ್ಛೇದನ ಮಾಡಬೇಕಾಗುತ್ತದೆಂಬ ಅನಿವಾರ್ಯತೆಯಿಂದಲೇ ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿಯನ್ನು ನಿರಾಕರಿಸುತ್ತಿದ್ದರು.

ಇದು ಒಂದೆಡೆಯಾದರೆ ಶವಗಳು ತಮ್ಮ ಪೂರ್ಣ ರೂಪದಲ್ಲಿಯೇ ಅಂತಿಮ ಸಂಸ್ಕಾರಕ್ಕೆ ಒಳಗಾಗಬೇಕು. ಅದರ ಯಾವ ಅಂಗವೂ ಭಂಗವಾಗಬಾರದು. ಹಾಗೇನಾದರೂ ಆದರೆ ಅವರು ಮುಂದಿನ ಜನ್ಮದಲ್ಲಿ ಆಯಾ ಅಂಗಗಳನ್ನು ಕಳೆದುಕೊಳ್ಳುತ್ತಾರೆ ಇತ್ಯಾದಿ ನಂಬಿಕೆಗಳನ್ನು ಬಿತ್ತಲಾಯಿತು. ಇದರಿಂದಾಗಿ ಶವಗಳು ಶವಚ್ಛೇದನಕ್ಕೆ ದೊರೆಯದಂತಾಯಿತು. ತೀರಾ ಇತ್ತೀಚಿನವರೆಗೂ ವೈದ್ಯಕೀಯ ಕಾಲೇಜುಗಳಿಗೆ ಶವ ದೊರಕುವುದೇ ಬಹಳ ಕಷ್ಟಕರವಾಗಿತ್ತು.

ಶವಚ್ಛೇದನ ಒಂದು ಕಡೆ ಇರಲಿ ಈಗಲೂ ಕೂಡಾ ಮೃತರ ಕಣ್ಣಿನ‌ದಾನ, ಅಂಗಾಂಗ ದಾನಗಳ ಮೂಲಕ ಹಲ ಹಲವು‌ ಲಕ್ಷಾಂತರ ಜನರು ಆರೋಗ್ಯವಾಗಿ‌ ಬಾಳುವ ಸಾಧ್ಯತೆಗೆ ತಡೆ ಹಾಕುತ್ತಿದೆಯಲ್ಲಾ !
ಈ ಪರಿಸ್ಥಿತಿ ಭಾರತದ ವೈದ್ಯಕೀಯ ವಿಜ್ಞಾನ, ಅನಾಟಮಿ, ಶಸ್ತ್ರಚಿಕಿತ್ಸೆಯ ಜ್ಞಾನ ಬೆಳೆಯಲೇ ಇಲ್ಲ. ಮುಂದಿನ ಶತಮಾನಗಳಲ್ಲಿ ಲಭ್ಯವಾದ ಉಪಕರಣ ತಂತ್ರಜ್ಞಾನ, ಅರಿವುಗಳನ್ನು ಬಳಸಿಕೊಳ್ಳುವುದಾಗಲಿಲ್ಲ.‌ ಎಲ್ಲ ವೈಜ್ಞಾನಿಕ ಜ್ಞಾನ ಚರಕ, ಶುಶ್ರುತ ಸಂಹಿತೆಗಳಿಗೇ ಸೀಮಿತವಾಯಿತು. ಮುಂದೆ ರಚಿತವಾದ ಹಲವು ವೈದ್ಯಕೀಯ ಕೃತಿಗಳು ಕೇವಲ ಈ ಎರಡು ಕೃತಿಗಳಲ್ಲಿನ ವಿಷಯಗಳ ಪುನರಾವರ್ತನೆಗೆ ಸೀಮಿತವಾದವು. ಅದಕ್ಕಿಂತ ಹಾನಿಕರವಾಗಿ ಅವುಗಳಲ್ಲಿನ ವೈಜ್ಞಾನಿಕ ಅಂಶಗಳನ್ನು ಕೈ ಬಿಟ್ಟವು.

ಶುಶ್ರುತ ಸಂಹಿತೆಯಲ್ಲಿ ಮೌಢ್ಯ:
ಬ್ರಾಹ್ಮಣ್ಯದ ವಿಜೃಂಭಣೆಯ ಸನ್ನಿವೇಶ ಚರಕ ಸಂಹಿತೆಯಂತೆಯೇ ಶುಶ್ರುತ ಸಂಹಿತೆಯ ಪುನರ್ ರಚನೆ ಮಾಡುವ ಸಂಸರ್ಭದಲ್ಲಿ ಅದರಲ್ಲಿಯೇ ನಿರೂಪಿಸಿದ ಪ್ರತ್ಯಕ್ಷವೇ ಪ್ರಮಾಣ, ಸಕಾರಣ ತರ್ಕ, ಶೋಧಗಳನ್ನು ಮಾಡುವ ಉತ್ಸಾಹಗಳಿಗೆ ವಿರುದ್ಧವಾಗಿ ಹಲವು ಮೌಢ್ಯಗಳು ತೂರಿಸಲ್ಪಟ್ಟವು.

ರೋಗಗಳ ನಿವಾರಣೆಗೆ ಹೋಮ, ಹವನ, ಮಂತ್ರೋಚ್ಛಾರಣೆ, ಶಕುನ , ಬ್ರಾಹ್ಮಣರ ಪೂಜೆ ಇತ್ಯಾದಿಗಳನ್ನು ಅಲ್ಲಲ್ಲಿ ಸೇರಿಸಲಾಯಿತು.

ರೋಗಿಯನ್ನು ನೋಡಲು ಹೋಗುವಾಗ ಬ್ರಾಹ್ಮಣರ, ಹೋರಿಯ ದರ್ಶನವಾದರೆ, ರೋಗಿಯ ಕನಸಿನಲ್ಲಿ ಮೇಲ್ವರ್ಣಗಳನ್ನು, ಹಸುವನ್ನು, ರಾಜನನ್ನು ಕಂಡರೆ ರೋಗ ನಿವಾರಣೆಯ‌ ಸೂಚನೆ ಇಂತಹ ಮಾತುಗಳೂ ಈ ಸಂಹಿತೆಗಳಲ್ಲಿವೆ ಎಂಬುದು ವಿಷಾದಕರ.

ಕೊನೆಗೆ ಎಲ್ಲಕ್ಕಿಂತ ಮಿಗಿಲಾಗಿ –
ಪುರೋಹಿತಮತೇ ತಸ್ಮಾದ್ವರ್ತೇತ ಭಿಷಗಾತ್ಮವಾನ್ (1-34-8)
ವೈದ್ಯರು ಪುರೋಹಿತನ ನಿರ್ದೇಶನದಲ್ಲಿ ಕೆಲಸ ಮಾಡಬೇಕು. ಏಕೆಂದರೆ ವೈದ್ಯರು ವೈದ್ಯಕೀಯಕ್ಕೆ ಅನುಸಾರವಾಗಿ ನಡೆದರೆ ಸಂಕರಃ ಸರ್ವವರ್ಣಾನಾಂ ಪ್ರಣಾಶೋ ಧರ್ಮಕರ್ಮಾಣಾಮ್ (1-34-9) ಎಲ್ಲ ವರ್ಣಗಳ ಸಂಕರ, ಧರ್ಮ ಕರ್ಮಗಳ ಉಲ್ಲಂಘನೆಯಾಗುತ್ತದೆ.

ಎಲ್ಲ ಕಡೆಯಿಂದ ಇಂತಹ ನಿಬಂಧನೆಗಳು ವೈದ್ಯರನ್ನು ಬಂಧಿಸಿದಾಗ ವೈದ್ಯಕೀಯ ವಿಜ್ಞಾನದ ಹತ್ಯೆಯಾಯಿತು. ಜಗತ್ತು ಮುಂದೆ ಮುಂದೆ ಸಾಗಿತು. ಆದರೆ ಭಾರತ ಹಿಂದೆ ಹಿಂದೆ ಸಾಗುತ್ತಾ ಹೋಯಿತು.

ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

22 April, 2023

1 Comment

  1. Kusuma Patel

    Very informative Sir.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading