ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ನಾಗರಾಜ್ ಅಂಕಣ- ದೇಹದಿಂದ ದೂರವಾದೆ ಏಕೆ ಆತ್ಮನೇ ?!?

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

36

ಯೇನಂ‌ ವಿಶ್ವಮಿದ ವ್ಯಾಪ್ತಂ, ಯಂ ನ ವ್ಯಾಪ್ನೋಪಿ ಕಿಂಚನಂ/
ಅಭಾರೂಪಮಿದಂ ಸರ್ವಂ ಯಂ ಭಾಂತಮನುಭಾತ್ಯಮ್ //
ಯಾವನಿಂದ ಈ ವಿಶ್ವವೆಲ್ಲವೂ ವ್ಯಾಪ್ತವಾಗಿರುವುದೋ, ಯಾವನನ್ನು ಯಾವುದೂ ವ್ಯಾಪಿಸಲಾರದೋ,ಪ್ರಕಾಶಿಸುತ್ತಿರುವ ಯಾವನನ್ನು ಅನುಸರಿಸಿ ಪ್ರಕಾಶರೂಪವಾದುದೆಲ್ಲವೂ ಬೆಳಗುತ್ತಿರುವುದೋ ಅವನೇ ಈ ಆತ್ಮನು.
ಈ ಆತ್ಮನು ಹುಟ್ಟುವುದಿಲ್ಲ,ಸಾಯುವುದಿಲ್ಲ, ಬೆಳೆಯುವುದಿಲ್ಲ. ಕ್ಷಯಿಸುವುದಿಲ್ಲ. ಶಾಶ್ವತವಾಗಿರುತ್ತಾನೆ.

ಇವನು ನಿತ್ಯ ಅಖಂಡ ಸುಖಾನುಭವವುಳ್ಳವನು, ಯಾವಾಗಲೂ ಒಂದೇ ವಿಧವಾದ ಸ್ವರೂಪವುಳ್ಳವನು. ಜ್ಞಾನ ಮಾತ್ರ ಸ್ವರೂಪನು, ಪುರಾಣ ಪುರುಷನು (= ಜಗತ್ತಿನೆಲ್ಲದಕ್ಕಿಂತ ಹಳಬನು, ಮೊದಲಿಗನು.) ಇವನ ಪ್ರೇರಣೆಯಿಂದಲೇ  ವಾಕ್,ಪ್ರಾಣಗಳು ಚಲಿಸುತ್ತಿರುತ್ತವೆ.
ಯಾವನು ತಾನಾಗಿಯೇ ಎಲ್ಲವನ್ನೂ ನೋಡುತ್ತಾನೆಯೋ, ಯಾವನನ್ನು ಯಾವನೊಬ್ಬನೂ ನೋಡಲಾರನೋ, ಯಾವನು ಬುದ್ಧಿ ಮೊದಲಾದವನ್ನು ಚೇತನಗೊಳಿಸುತ್ತಾನೋ , ಯಾವನನ್ನು ಅವು ಚೇತನಗೊಳಿಸಲಾರವೋ ಅವನೇ ಈ ಆತ್ಮನು.

ಯಾವನು ಜಾಗ್ರತ್- ಸ್ವಪ್ನ- ಸುಷುಪ್ತಿಗಳಲ್ಲಿ ತೋರುವುದೆಲ್ಲವನ್ನೂ ಅರಿತುಕೊಳ್ಳುತ್ತಾನೆಯೋ ,  ಮನಸ್ಸಿನ ಅದರ ವೃತ್ತಿಗಳ ಇರುವಿಕೆ, ಇಲ್ಲದಿರುವಿಕೆಗಳನ್ನು ಅರಿಯುತ್ತಾನೋ ಮತ್ತು ನಾನು ಎಂಬುದಕ್ಕೆ ಆಶ್ರಯನಾಗಿರುವನೋ ಅವನೇ ಈ ಆತ್ಮನು.‌

ಇದು ಹಲವು ಉಪನಿಷತ್ತುಗಳಲ್ಲಿ ವಿವರಿಸಲಾಗಿರುವ ಆತ್ಮನ ಪರಿಕಲ್ಪನೆಯನ್ನು ಶಂಕರರು ಸಾರಾಂಶಗೊಳಿಸಿರುವ ರೀತಿ. ಆತ್ಮನ ಬಗೆಗಿನ  ಈ ವಿವರಣೆಯನ್ನು ವಿವರಿಸಲು, ಅರ್ಥೈಸಲು ಸಾವಿರಾರು ವರ್ಷಗಳಿಂದಲೂ ಹಲ ಹಲವು ಸಾವಿರ ಜನ ಋಷಿಗಳೆಂಬುವರು, ವಿದ್ವಾಂಸರು, ಬೋಧಕರು ಹಲ ಹಲವು ರೀತಿ ಪ್ರಯತ್ನ ಪಟ್ಟಿದ್ದಾರೆ. ಈ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಪ್ರಯತ್ನ ಪಡುತ್ತಲೇ ಇದ್ದಾರೆ. ಇಂದೂ ಭಾರತದಾದ್ಯಂತ ಸಾವಿರಾರು ಉಪನ್ಯಾಸಗಳು ನಡೆಯುತ್ತಲೇ ಇರುತ್ತವೆ.

ಬುಡಕಟ್ಟುಗಳ ಆದಿ ಮಾನವರು ತಮ್ಮ ಮುಗ್ಧತೆಯಲ್ಲಿ ಕನಸುಗಳಲ್ಲಿ ಕಾಣುವ ಘಟನೆಗಳ ಮೂಲಕ ಆತ್ಮದ ಕಲ್ಪನೆ ಮಾಡಿಕೊಂಡ ಬಗ್ಗೆ ಹಿಂದಿನ ಲೇಖನದಲ್ಲಿ ವಿವರಿಸಿದ್ದೇನೆ. ಅವರು,  ತೀರಿಕೊಂಡ ತಮ್ಮ ಬಳಗದವರು ಕಾಣಿಸಿಕೊಳ್ಳುವುದು, ತಾವೇ ಎಲ್ಲಿಯೋ ದೂರದಲ್ಲಿ ಇದ್ದವರೊಡನೆ, ಇಲ್ಲದವರೊಡನೆಯೂ ಅನೇಕ  ಘಟನೆಗಳಲ್ಲಿ ಭಾಗಿಯಾಗುವುದು, ಆದರೆ ತಮ್ಮ ದೇಹ ಇದ್ದಲ್ಲಿಯೇ ಇರುವುದನ್ನು ಕಂಡು ಚಕಿತರಾಗಿ ರೂಪಿಸಿಕೊಂಡ ಸರಳ ಕಲ್ಪನೆ ಒಂದು ಕಡೆ ದೈವ, ದೆವ್ವ ಮತ್ತೊಂದು ಕಡೆ ಆತ್ಮ.

ಆ ಕಲ್ಪನೆ ಉಪನಿಷತ್ತುಗಳ ಕಾಲದಲ್ಲಿ ಒಂದು ಪ್ರಮುಖ ಧಾರ್ಮಿಕ ಪರಿಕಲ್ಪನೆಯಾಗಿ ಮೇಲಿನಂತೆ ವಿವರಿಸಲಾಗಿದೆ. ಈ ವಿವರಣೆಗಳಲ್ಲಿ ಹಲವು  ಜನರ ನಿತ್ಯದ ಅನುಭವಗಳಿಗೆ ದೂರವಾದುದು. ಮತ್ತೆ ಹಲವನ್ನು ಇಂದಿನ ದೇಹ ಕ್ರಿಯಾಶಾಸ್ತ್ರ, ಮನಶ್ಶಾಸ್ತ್ರದ ಸಂಶೋಧನೆಗಳು ನಿರಾಕರಿಸಿವೆ.

ಆತ್ಮವು ಪ್ರಕಾಶಮಾನವಾದುದು, ಅದರಿಂದಲೇ ಎಲ್ಲವೂ ಬೆಳಗುತ್ತದೆ ಎಂಬ ವಿವರಣೆಯನ್ನೇ ತೆಗೆದುಕೊಳ್ಳೋಣ. ವಾಸ್ತವ ಜಗತ್ತಿನ ಯಾವುದೇ ವಸ್ತು ಬೆಳಗುವುದು ಬೆಳಕಿನಿಂದ. ಸೂರ್ಯನ ಬೆಳಕು ಬಹಳಷ್ಟು ಬೆಳಕಿನ ಮೂಲ ಎಂಬುದು ಎಲ್ಲರಿಗೂ ಅನುಭವಕ್ಕೆ ಬರುವ ವಿಷಯ. ಇನ್ನು ಕನಸುಗಳನ್ನು ತೆಗೆದುಕೊಂಡರೂ ಅವುಗಳಲ್ಲಿ ಕಾಣುವ ದೃಶ್ಯಗಳು ನಿಜ ಜೀವನದ ದೃಶ್ಯಗಳ ನೆನಪಿನ ಮೇಲೆ ಆಧರಿಸಲ್ಪಟ್ಟವು.  ಆದ್ದರಿಂದ ನಿಜ ಜೀವನದಲ್ಲಿ ಇಂತಹ ದೃಶ್ಯಗಳಲ್ಲಿ ಯಾವ ಬೆಳಕು ಸ್ವಾಭಾವಿಕವಾಗಿ ಇರುತ್ತದೋ ಅದೇ ಬೆಳಕೇ ನೆನಪಿನ ದೃಶ್ಯಗಳ ಸಂಯೋಜನೆಯಲ್ಲಿಯೂ ಕಾಣಿಸುತ್ತದೆಯೇ ಹೊರತು ಮತ್ಯಾವ ಬೆಳಕಿನ ಮೂಲ, ಪ್ರಭಾವ ಇರುವುದಿಲ್ಲ. ಎಚ್ಚರದಲ್ಲಿ  ನೋಡುವ ಕ್ರಿಯೆಯನ್ನೂ ಆತ್ಮನಿಗೇ ಆರೋಪಿಸಲಾಗಿದೆ. ಇದು ನೋಡುವುದು ಎಂಬ ಭೌತಿಕ ಕ್ರಿಯೆ ಎಂದಾದರೆ ಅದನ್ನು ಸಂಶೋಧನೆಗಳು ಕಣ್ಣು,ನರಜಾಲ,ಮೆದುಳಿನ ವಿವಿಧ ಭಾಗಗಳ ಸಹಕಾರದ ಕ್ರಿಯೆ ಮೊದಲಾದವುಗಳನ್ನು ವಿವರಿಸಿವೆ. ಅವುಗಳ ನೆನಪು ಮೆದುಳಿನ ಅಂಗಗಳಲ್ಲಿ ಉಳಿದುಕೊಳ್ಳುವ ಬಗ್ಗೆ ಕೂಡಾ ಸಂಶೋಧನೆಗೆ ಒಳಗಾಗಿವೆ. ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೂ ಇವೆ.

ನೋಡುವುದು ಎನ್ನುವುದು ಗಮನಿಸುವ, ತನ್ನ  ಹಿಂದಿನ ಅನುಭವಗಳ ಜೊತೆ ತುಲನೆ ಮಾಡಿ ಮನಸ್ಸು ವಿವರಿಸಿಕೊಳ್ಳುವ ಕ್ರಿಯೆಯನ್ನೂ ಶೋಧಿಸಲಾಗಿದೆ. ಶೋಧಿಸಲಾಗುತ್ತಿದೆ.

ಆತ್ಮನ ಕಾರ್ಯಗಳೆಂದು ವರ್ಣಿಸಿರುವ ಹಲವಂತೂ ಮನಸ್ಸಿನ ಮತ್ತು ಬುದ್ಧಿಯ ಕೆಲಸಗಳು. ಮತ್ತಿನ್ನೊಂದಿಷ್ಟು ಕೇವಲ ಕಲ್ಪನೆಗಳು.‌ ಕನಸುಗಳಲ್ಲಿ ಕಾಣುವ ದೃಶ್ಯ, ಘಟನೆಗಳನ್ನು ಆತ್ಮ ಸ್ವಯಂ ಸೃಷ್ಟಿಸುತ್ತದೆ ಎಂಬುದು ಅಂತಹುದೊಂದು. ಕನಸುಗಳಲ್ಲಿ ಕಾಣುವ ಹಲವು ದೃಶ್ಯ,ಘಟನೆಗಳು ಈಗಾಗಲೇ ಸಂಭವಿಸಿದ ದೃಶ್ಯ, ಘಟನೆಗಳ ತದ್ವತ್ ಕಾಪಿ ಅಲ್ಲ. ಆದರೆ ಅಂತಹ ದೃಶ್ಯ,ಘಟನೆಗಳ ಮೇಲೆ ಮನುಷ್ಯರ ಪ್ರಜ್ಞೆಯ ನೇರ ಮತ್ತು  ವ್ಯಕ್ತ ನಿಯಂತ್ರಣ ಇರುವುದಿಲ್ಲ. ಆದ್ದರಿಂದ ಅದು ಮನುಷ್ಯನ ಹಿಡಿತ ಮೀರಿದ ಬೇರಾವದೋ ಅವುಗಳನ್ನು ಸೃಷ್ಟಿಸುತ್ತದೆ ಎಂದು ಕಲ್ಪಿಸಿಕೊಳ್ಳಲಾಯಿತು.

ಮನುಷ್ಯರ ಬುದ್ಧಿ, ಮನಸ್ಸು, ಪ್ರಜ್ಞೆಯ ಕ್ರಿಯೆಗಳ ಜೊತೆಗೆ ಸುಪ್ತ ಪ್ರಜ್ಞೆಯ ಕ್ರಿಯೆಗಳನ್ನೂ ಸೇರಿಸಿ ಅವುಗಳನ್ನು ಆತ್ಮನಿಗೆ ಆರೋಪಿಸಲಾಗಿದೆ.
ಈ ಕಲ್ಪನೆಯ ಮುಂದುವರಿಕೆಯಾಗಿ‌ ಆತ್ಮ ವಾಸ್ತವ ಲೋಕದ ಯಾವ ಕಾಲ, ದೇಶಗಳ ಮಿತಿಗೂ ಒಳಪಟ್ಟಿಲ್ಲ. ನೈಸರ್ಗಿಕ  ನಿಯಮಗಳಿಗೂ ಬದ್ಧವಲ್ಲ. ಅವುಗಳನ್ನು ಮೀರಿದ್ದು. ತನ್ನದೇ ಆದ ಇಚ್ಛೆಯಂತೆ ಪ್ರವರ್ತಿಸುತ್ತದೆ ಎಂಬ ಕಲ್ಪನೆಯನ್ನು ವಿಸ್ತರಿಸಿ ಬೆಳೆಸಲಾಯಿತು. ಉಪನಿಷತ್ತುಗಳಲ್ಲಿ ಈ ಅಂಶ ಪದೇ ಪದೇ ಪ್ರಸ್ತಾಪವಾಗಿದೆ.

ಕಠೋಪನಿಷತ್ತಿನಲ್ಲಿ ಸ್ವತಃ ಯಮನೇ ಹೀಗೆ ಹೇಳುತ್ತಾನೆ :
ಅಸೀನೋ ದೂರಂ ವ್ರಜತಿ ಶಯಾನೋ ಸರ್ವತಃ/
(ಆತ್ಮನು ಕುಳಿತುಕೊಂಡಿದ್ದರೂ ದೂರ ಪಯಣ ಮಾಡುತ್ತಾನೆ. ಮಲಗಿಕೊಂಡಿದ್ದಂತೆಯೇ ಎಲ್ಲೆಲ್ಲಿಯೂ ಸಂಚರಿಸುತ್ತಾನೆ.)
ಆತ್ಮನ ಸಾಮರ್ಥ್ಯದ ಈ ಕಲ್ಪನೆಯಂತೂ ಸ್ವಪ್ನಗಳ ದೃಶ್ಯಗಳನ್ನು ಅವಲಂಬಿಸಿದ್ದು ಎಂಬುದು ಮೇಲ್ನೋಟಕ್ಕೇ ಎದ್ದು ಕಾಣುತ್ತದೆ.
ಇದೇ ಕಲ್ಪನೆಯನ್ನು ಯಾವ ಪರಿ ಬೆಳೆಸಲಾಗಿದೆ ಎಂಬುದನ್ನು ನೋಡೋಣ.

ಬೃಹದಾರಣ್ಯಕ ಉಪನಿಷತ್ತಿನಲ್ಲಿ ಕತಮ ಆತ್ಮೇತಿ (ಆತ್ಮನೆಂದರೆ ಯಾವನು ?) ಎಂಬ  ಜನಕ ರಾಜನ ಪ್ರಶ್ನೆಗೆ ಉತ್ತರವಾಗಿ ಯಾಜ್ಞವಲ್ಕ್ಯರು ಈ ಅಂಶವನ್ನು ಹೇಳಿದ್ದಾರೆ. ಆ ಶ್ಲೋಕಕ್ಕೆ ಶಂಕರರು ಭಾಷ್ಯವನ್ನು ವಿಸ್ತಾರವಾಗಿ ಬರೆಯುವಾಗ ವಿವರಿಸಿದ್ದು ಹೀಗೆ :
ಇಮಂ ಲೋಕಂ ಜಾಗರಿತ ವ್ಯವಹಾರ ಲಕ್ಷಣಂ ಕಾರ್ಯಕರಣಸಂಘಾತಾತ್ಮಕಂ ಲೌಕಿಕಶಾಸ್ತ್ರೀಯವ್ಯವಹಾರಾಸ್ಪದಂ ಅತಿಕ್ರಾಮತಿ ಅತೀತ್ಯ ಕ್ರಾಮತಿ.

(ಈ ಲೋಕವನ್ನು,  ಜಾಗರಿತ ವ್ಯವಹಾರ ಲಕ್ಷಣವಾಗಿರುವ ಕಾರ್ಯಕರಣ ಸಂಘಾತ ರೂಪವಾದ ಲೌಕಿಕ ವ್ಯವಹಾರಕ್ಕೆ ಆಶ್ರಯವಾಗಿರುವ ಈ ಲೋಕವನ್ನು ಅತಿಕ್ರಮಿಸುತ್ತಾನೆ,ದಾಟಿ ಹೋಗುತ್ತಾನೆ.)

ಶಂಕರರು ಜಾಗ್ರತ ಅವಸ್ಥೆಯಲ್ಲಿ ಈ ಲೋಕದಲ್ಲಿ ಕಾರ್ಯಗಳು ಮತ್ತು ಇಂದ್ರಿಯಗಳು ಜೊತೆಗೂಡಿದ ಲೌಕಿಕ ವ್ಯವಹಾರದ ನಿಯಮಗಳ ಮೇಲೆ ಆಧರಿತವಾದ ಈ ಲೋಕವನ್ನು ಮೀರುತ್ತಾನೆ. ಅದರ ನಿಯಮಗಳನ್ನು ದಾಟಿ ಹೋಗುತ್ತಾನೆ ಎನ್ನುತ್ತಾರೆ. ಕನಸಿನಲ್ಲಿ ಯಾವುದೇ ದೈಹಿಕ ಮಿತಿಗಳಿಲ್ಲದೆ ಎಲ್ಲೆಂದರಲ್ಲಿ ತಿರುಗುವ , ಭೌಗೋಳಿಕ ಮಿತಿಗಳನ್ನು ಮೀರಿ ಹಾರಾಡುವ ಸ್ಥಿತಿಯನ್ನು ಆಧರಿಸಿದ ಕಲ್ಪನೆ ಇದು. ಆತ್ಮನನ್ನು ಮನುಷ್ಯರ ಎಲ್ಲ ಮಿತಿಗಳನ್ನು , ಲೋಕದಲ್ಲಿ ಅನಿವಾರ್ಯವಾದ ನೈಸರ್ಗಿಕ ನಿಯಮಗಳನ್ನು ಮೀರುವ ಸಾಮರ್ಥ್ಯವುಳ್ಳ ಆತ್ಮನ ಪರಿಕಲ್ಪನೆ ಮೂಡಿದೆ. ಈ ಕಲ್ಪನೆಯೇ ಮುಂದುವರೆದು ಆತ್ಮನಿಗೆ ಸಾವು ಎಂಬುದೇ ಇಲ್ಲ ಎಂಬ ಕಲ್ಪನೆ ಮೂಡಿದೆ.

ಮೃತ್ಯೋ ರೂಪಾಣಿ ಅತಿಕ್ರಾಮತಿ ಕ್ರಿಯಾಫಲಾಶ್ರಯಾಣಿ (ಕ್ರಿಯಾಫಲಗಳಿಗೆ ಆಶ್ರಯವಾದ ಮೃತ್ಯವಿನ ರೂಪಗಳನ್ನು ಅತಿಕ್ರಮಿಸುತ್ತಾನೆ.)
ಮೃತ್ಯುವನ್ನೂ ಮೀರುವಂತಹ ಆತ್ಮನ ಗುಣ ವರ್ಣನೆ ಮಾಡಲು ಮೃತ್ಯು ದೇವತೆಯಾದ ಯಮನನ್ನು ಬಿಟ್ಟರೆ ಮತ್ಯಾರು ಅರ್ಹರು ? ಆದ್ದರಿಂದ ನಚಿಕೇತನೆಂಬ ಬಾಲಕನ ಪಾತ್ರ ಸೃಷ್ಟಿ ಮಾಡಲಾಗಿದೆ. ಅವನು ಯಮಲೋಕವನ್ನು ಸೇರಿ ಯಮನಿಂದಲೇ ಮೃತ್ಯುವಿನ ನಂತರದ ಸ್ಥಿತಿಯ ಬಗ್ಗೆ ಉತ್ತರ ಪಡೆಯುವಂತೆ ಬಹಳ ಆಕರ್ಷಕ ತಂತ್ರವಾಗಿ ಕಠೋಪನಿಷತ್ತನ್ನು ಹೆಣೆಯಲಾಗಿದೆ.

ಅದರಲ್ಲಿ ಯಮ ಹೇಳುತ್ತಾನೆ:
ನ ಹನ್ಯತೇ ಹನ್ಯಮಾನೇ ಶರೀರೇ
(ನಾಶವಾಗುವ ಶರೀರದಲ್ಲಿದ್ದರೂ ನಾಶವಾಗುವುದಿಲ್ಲ.)
ಆತ್ಮ ಅಣೋರಣಿಯಾನ್ ಮಹತೋ ಮಹೀಯಾನ್
ಅಣುವಿಗಿಂತ ಅಣುವಾಗಿ, ಮಹತ್ತಿಗಿಂತ ಮಹತ್ತಾಗಿದ್ದಾನೆ ಆತ್ಮ.‌

ಒಂದು ಕಡೆ ಮನಸ್ಸು, ಬುದ್ಧಿ, ಪ್ರಜ್ಞೆಗಳ ಕೆಲಸವನ್ನು ಆತ್ಮನಿಗೆ ಆರೋಪಿಸಲಾಗಿದೆ. ಇವುಗಳು ದೇಹದ ಒಂದು ಭಾಗವಾದ ಮೆದುಳಿನ, ನರ ಮಂಡಲದ ಶರೀರ ಕ್ರಿಯೆಗಳು. ಅವುಗಳನ್ನು ದೇಹದಿಂದ ಹೊರಗಿನ ಆತ್ಮನ ಲೆಕ್ಕಕ್ಕೆ ಸೇರಿಸಿಬಿಡಲಾಯಿತು.
ಮತ್ತೊಂದು ಕಡೆ, ಜಗತ್ತಿನ ಚಲನೆ, ಬಲ, ರೂಪ, ಆಕಾರ, ಗಾತ್ರ , ರಸಾಯನಿಕ ತಿರುಳು ಮತ್ತು ಅವುಗಳಿಗೆ ಅನ್ವಯಿಸುವ ಭೌತಿಕ ನಿಯಮಗಳಿಂದ ಆತ್ಮನನ್ನು ಮುಕ್ತನನ್ನಾಗಿ ಮಾಡಲಾಯಿತು.

ಹೀಗೆ ಅಶಾಶ್ವತ, ಸಾವಿಗೀಡಾಗುವ ದೇಹದಿಂದಲೂ, ಜಗತ್ತಿನ ನೈಸರ್ಗಿಕ ನಿಯಮಗಳಿಂದಲೂ ಮುಕ್ತನಾದ ಆತ್ಮ ಮೇಲೆ ಶಂಕರರು ವಿವರಿಸಿದಂತೆ ಶಾಶ್ವತ,ಅವಿನಾಶಿ ಎಂಬಂತೆ ಕಲ್ಪಿಸಿಕೊಳ್ಳಲಾಯಿತು.

ಪರಲೋಕ ಸೃಷ್ಟಿಯೂ ಕನಸುಗಳಲ್ಲಿಯೇ :
ಕನಸುಗಳಲ್ಲಿ ತೀರಿಕೊಂಡವರನ್ನು ಕಂಡಾಗ ಅವರು ಸತ್ತ ಮೇಲೆಯೂ ಇದ್ದಾರೆ ಆದರೆ ಎಲ್ಲಿ ?  ಸತ್ತವರ ಸಮಾಧಿಗಳಲ್ಲಿ ಅವರಿಗೆ ಆಹಾರ, ಪಾನೀಯ, ಉಡುಪು, ಅವರ ವಾಹನಗಳಾದ ಕುದುರೆ , ಅವರ ಸೇವಕರನ್ನೂ ಜೀವಂತ ಹುಗಿದು ಬಿಡುತ್ತಿದ್ದ ಬುಡಕಟ್ಟು/ ಕುಲಾಧಿಪತ್ಯಗಳ ಜನರಿಗೆ ಅವರು ಎಲ್ಲಿದ್ದಾರೆ ಎಂಬ ಪ್ರಶ್ನೆ ಕಾಡಿದ್ದು ಸಹಜ. ಅದಕ್ಕೆ ಅವರು ಕಂಡುಕೊಂಡ ಉತ್ತರ ಬಹಳ ಸರಳ – ಬೇರೇ ಲೋಕ ಅಷ್ಟೇ.
ಈ ಮುಗ್ಧ ನಂಬಿಕೆಯನ್ನೂ ಧರ್ಮಗಳು – ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳು  ಬಳಸಿಕೊಂಡು ಪರಲೋಕದ ಕಲ್ಪನೆಯನ್ನು ಬೆಳೆಸಿದವು. ಉಪನಿಷತ್ತುಗಳಲ್ಲಿ ಪರಲೋಕದ ಕಲ್ಪನೆಯನ್ನು ಮತ್ತಷ್ಟು ಬೆಳೆಸಲಾಗಿದೆ. ಪರಲೋಕದ ಕಲ್ಪನೆಯನ್ನು ಕನಸುಗಳು ಎಂಬ ಈ ಲೋಕದ ವಾಸ್ತವವನ್ನು ಬಳಸಿಕೊಂಡು ಆತ್ಮನ ಪರಿಕಲ್ಪನೆ ನಿಜವೆಂಬ ನಂಬಿಕೆ ಗಾಢವಾಗಿಸುವಂತೆ ನಿರೂಪಿಸಲಾಗಿದೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಯಾಜ್ಞವಲ್ಕ್ಯರು ಹೇಳುವಂತೆ ಕನಸುಗಳ ಸ್ಥಿತಿ ಒಂದು ಸಂಧಿ ಸ್ಥಾನ. ಲೋಕ ಮತ್ತು ಪರಲೋಕಗಳ ನಡುವಣ ಸ್ಥಳ. ಆತ್ಮನು ಈ ಎರಡೂ ಲೋಕಗಳ ನಡುವೆ ಸಂಚರಿಸುತ್ತಾನೆ ಎಂಬುದಕ್ಕೆ ಪುರಾವೆ.

ನಾಶವಾಗುವ ದೇಹದಲ್ಲಿ ನಾಶವಾಗದ ಆತ್ಮ, ಬದುಕಿದ್ದಾಗಲೇ ಕನಸಿನ ಸ್ಥಿತಿಯಲ್ಲಿ ಈ ಲೋಕ, ಪರಲೋಕ ಎರಡನ್ನೂ ಸಂಚಾರ ಮಾಡುವ ಆತ್ಮ ಮನುಷ್ಯರು ಸತ್ತ ಮೇಲೆ ಏನಾಗುತ್ತಾನೆ ?

ಬದುಕಿದ್ದಾಗಿನ ಪ್ರಶ್ನೆಗಳಿಗಿಂತ ಸತ್ತ ಮೇಲಿನ ಪ್ರಶ್ನೆ ವೇದಾಂತಕ್ಕೆ ಬಹಳ ಮುಖ್ಯವಾಯಿತು. ಕ್ರಿಶ್ಚಿಯನ್, ಮುಸ್ಲಿಂ ಮೊದಲಾದ ಧರ್ಮಗಳೂ ಕೂಡಾ ಆತ್ಮದ ಕಲ್ಪನೆ  ಮಾಡಿಕೊಂಡಿವೆ. ಆದರೆ ವೈದಿಕ ಧರ್ಮದಲ್ಲಿ ರೂಪಿಸಲ್ಪಟ್ಟ ಪುನರ್ಜನ್ಮ, ಯಾವ ಆಕಾರದಲ್ಲಿ,ರೂಪದಲ್ಲಿ ಈ ಪುನರ್ಜನ್ಮ, , ಅದಕ್ಕೆ ಕಾರಣಗಳ ಬಗ್ಗೆ ವಿಸ್ತಾರವಾದ ಸಿದ್ಧಾಂತ ಈ  ಯಾವುದೇ ಧರ್ಮಗಳಲ್ಲಿಲ್ಲ.

ಇದೇ ಕರ್ಮ ಸಿದ್ಧಾಂತದ ಹುಟ್ಟಿಗೆ ಕಾರಣವಾಯಿತು. ಜಾತಿ ವ್ಯವಸ್ಥೆಗೆ ಬಹು ಬಲವಾದ ಸಮರ್ಥನೆ ಒದಗಿಸಿತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

10 December, 2022

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading