ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ನಾಗರಾಜ್ ಅಂಕಣ- ದೇವರಿಗೆ ಮಾತ್ರ ದಾಸಿ, ದೇವದಾಸಿ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

9

ಎಲ್ಕಮ್ಮ ಎಂಬ ಆದಿ ಮಾನವರ ದೇವತೆಯೂ ಮತ್ತು ದೇವದಾಸಿ ಪದ್ಧತಿಯೂ .

“ಗಂಡನ ಗುರುತ ನನಗಿಲ್ಲ
ನಾನವರ ಬೆರೆಸಿ ಹಡೆದಿಲ್ಲ “
                         ‌‌-   ಜಾನಪದ

ಎಲ್ಲಮ್ಮ ಮತ್ತು ಆಕೆಯ ಮಗನ ನಡುವೆ ಜಾನಪದ ಕಾವ್ಯಗಳಲ್ಲಿ ಹೀಗೊಂದು ಸಂವಾದ ನಡೆಯುತ್ತದೆ .
ಮಗ ಹುಡುಗಾಟಿಕೆಗೆ ಹೆಣ್ಣು‌ಮಕ್ಕಳು ನೀರು ತರುವ  ಕೊಡಗಳಿಗೆ ಕಲ್ಲು ಒಗೆದಾಗ ಕೊಡ ಒಡೆಯುತ್ತದೆ
ಅವರು-
” ಬಾಲೇರ ಕೊಡಕೆ ಕಲ್ಲನು ಎಸೆದರ
ಬಾಲೇರೇನಂತ ಅನುತಾರ- ರಾಮಯ್ಯ,
ನೀ ತಂದೆ ಇದ್ದರೆಷ್ಟು ಉರಿತಿದ್ಯೋ “
ಎಂದು ಅವನಿಗೆ ತಂದೆ ಎಂಬುವನೇ ಇಲ್ಲ ಎಂಬುದನ್ನು ಎತ್ತಾಡಿ‌ ಹಂಗಿಸುತ್ತಾರೆ.
ಆಗ ಮಗ –
ಕಲ್ಲನು ಒಗೆದಾನ ಬಿರಿಬಿರಿ ಬಂದಾನ
ಯಾರೇನ ಅಂದಾರೋ ಮಾರ‌್ಯಾಕೆ ಬಾಡ್ಯಾವೋ
ಊರಾನ ಮಂದಿ ನಿನ ನಿಂದ್ಯಾವ ಮಾಡಿದರು
ತಂದೆಯ ತೋರೆ ನನ ತಾಯಿ
ಅರಸರ ಗುರುತ ನನಗಿಲ್ಲ ರಾಮಾ
ಅರಿಷಿಣ ಹಚ್ಚಿಲ್ಲ, ಮಣಿ ಮ್ಯಾಲೆ ಕುಂತಿಲ್ಲ
ನಾನವರ ಬೆರೆಸಿ ಹಡೆದಿಲ್ಲ ರಾಮಣ್ಣ ಅರಸರ ಗುರುತ ನನಗಿಲ್ಲ
ಗಂಡನ ಗುರುತ ನನಗಿಲ್ಲ
ಹಳ್ಳಾಕ ಹೋಗಿದ್ದೆ, ಹಳಮುಳ್ಳ ತುಳದಿದ್ದೆ
ಹಳ್ಳ ಸೋಕಿ ನಿನ್ನ ಹಡದಿದ್ದೆ
ಹಳದಾಗ ಇರುವಂತ ಅಗಸನ ತೋರವ್ವ
ಅವನಿಗಪ್ಪಂತ ಕರೆದೇನ
ಗುಡ್ಡಾಕ ಹೋಗಿದ್ದೆ ಸುಣಕಲ್ಲ ತುಳದಿದ್ದೆ ಸುಣಸೋಕಿ ನಿನ್ನ ಹಡೆದೇನೋ
ಗುಡದಾಗ ಇರುವ ಒಡ್ಡನ ತೋರವ್ವ
ಅವನಿಗಪ್ಪಂತ ಕರದೇನ
ಎಲ್ಲಮ್ಮ ಮತ್ತು ಆಕೆಯ ಮಗನೊಡನೆ ಇಷ್ಟೆಲ್ಲಾ ವಾದ ನಡೆದ ಮೇಲೆ
ಮಗನಿಗೆ ಸಿಟ್ಟು ಬಂದು
“ಗಂಡಯಿಲ್ಲದ ಅವ್ವಗ ಗಂಜೀಯ ಶ್ಯಾಲ್ಯಾಕ
ಗಂಧ,ಕುಂಕುಮವ್ಯಾಕ ಬಳಿಯಾಕ
ಹಾದರಗಿತ್ತಿ ಹಾಲ ನಾ ಹ್ಯಾಂಗ ಕುಡಿಯಲಿ ಹಾದಿಗಿ ಚೆಲ್ಲೋಗ ಯಲ್ಲಮ್ಮ “
ಎನ್ನುತ್ತಾನೆ.

ಪ್ರಸಿದ್ಧ ಜಾನಪದ ವಿದ್ವಾಂಸರಾದ ಎಂ ಎಸ್.ಸುಂಕಾಪುರ ಅವರ ಸಂಪಾದನೆಯ ಜೀವನ ಜೋಕಾಲಿ‌ ಎಂಬ ಸಂಕಲನದಲ್ಲಿರುವ ಜೋಗತಿ ಹಾಡು. ಮತ್ತೊಬ್ಬ ಜಾನಪದ ಸಂಕಲನಕಾರರಾದ ಮತಿಘಟ್ಟ ಕೃಷ್ಣಮೂರ್ತಿಯವರ ಏಳುಕೊಳ್ಳದ ಎಲ್ಲಮ್ಮ  ಸಂಗ್ರಹದಲ್ಲಿಯೂ   ಇದೇ ತಿರುಳಿನ ಹಾಡುಗಳಿವೆ.

ಆದಿ ಮಾನವರ ದೇವತೆ ಎಲ್ಲಮ್ಮ :

ಎಲ್ಲರಿಗೂ ಗೊತ್ತಿರುವಂತೆ ರೇಣುಕಾ‌ದೇವಿಗೆ ಗಂಡನಾಗಿ ಜಮದಗ್ನಿ ಇದ್ದಾರೆ. ಎಲ್ಲಮ್ಮನಿಗೆ ?
ರೇಣುಕೆಯೇ ಎಲ್ಲಮ್ಮನೆಂದು ಜನಜನಿತವಾದ ನಂಬಿಕೆ ಇರುವುದರಿಂದ ಜಮದಗ್ನಿಯೇ ಎಲ್ಲಮ್ಮನ ಗಂಡ ಎಂಬುದು ಬಹಳ ಜನರ ಮನಸ್ಸಿನಲ್ಲಿ‌ ಗಟ್ಟಿಯಾಗಿ ಕೂತಿರುವುದರಿಂದ ನನ್ನ ತಂದೆ ಯಾರು ಎಂಬ ಜಾನಪದದ ಹಾಡುಗಳಲ್ಲಿನ ಪ್ರಶ್ನೆ ಏಕೆ ಉದ್ಭವಿಸುತ್ತದೆ ಎಂದೆನ್ನಿಸುವುದು ಸಹಜ. ಹಾಗಾದರೆ ಹಲವು ಜಾನಪದ ಗೀತೆಗಳಲ್ಲಿ ಮಗನನ್ನು ತಂದೆ ಇಲ್ಲದವನೆಂದು ದೂರುವುದು, ಅವನ ತಾಯಿ ಎಲ್ಲಮ್ಮ ನಿನಗೆ ತಂದೆ ಇಲ್ಲವೆಂದು ಹೇಳುವುದು, ಅವನು ತಾಯಿ ಎಲ್ಲಮ್ಮನನ್ನು ಸಿಕ್ಕಾಪಟ್ಟೆ ಜರಿಯುವುದು ಇವೆಲ್ಲಾ ಏಕೆ ಬಂದಿವೆ ?

ಒಂದು ಮುಖ್ಯ ಅಂಶ ನಾವು ಗಮನಿಸಬೇಕಾದ್ದು ಎಲ್ಲಮ್ಮ‌ ದೇವದಾಸಿಯರ ದೇವತೆ. ದೇವದಾಸಿಯರ ವಿಷಯದಲ್ಲಿ ಪಾತಿವ್ರತ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ ರೇಣುಕಾದೇವಿ ಕೇವಲ ನದಿಯಲ್ಲಿ ಜಲಕ್ರೀಡೆಯಾಡುತ್ತಿದ್ದ ಗಂಧರ್ವ ದಂಪತಿಗಳನ್ನು ನೋಡಿದ ಮಾತ್ರಕ್ಕೆ ಪಾತಿವ್ರತ್ಯ ಕಳೆದುಕೊಳ್ಳುತ್ತಾರೆ. ತಕ್ಷಣವೇ ಪಾತಿವ್ರತ್ಯದ ಬಲದಿಂದ ಆಕಾಶ ಮಾರ್ಗವಾಗಿ ಸಂಚರಿಸುತ್ತಿದ್ದ, ಹಾವನ್ನು ತಲೆಯ ಮೇಲಿನ ಸಿಂಬೆಯನ್ನು ಮಾಡಿಕೊಳ್ಳುತ್ತುದ್ದ, ಮರಳಿನಿಂದಲೇ ಕೊಡವನ್ನು ಮಾಡಿಕೊಳ್ಳುತ್ತಿದ್ದ ರೇಣುಕೆ ಆ ಎಲ್ಲ ವಿಶೇಷ ಶಕ್ತಿಗಳನ್ನು ಆ ಕ್ಷಣದಲ್ಲಿ ಕಳೆದುಕೊಂಡು ನೆಲಕ್ಕೆ ದೊಪ್ಪನೆ ಬಿದ್ದು ಗಾಯಗೊಳ್ಳುತ್ತಾಳೆ. ಕೊನೆಗೆ ತಂದೆಯ ಆಜ್ಞೆಯ ಮೇರೆಗೆ ಮಗನಿಂದಲೇ‌ ತಲೆ ಕಡಿಸಿಕೊಳ್ಳುವ ಕ್ರೂರ ಶಿಕ್ಷೆಗೆ ಒಳಗಾಗುತ್ತಾರೆ. ಹೀಗೆ ಪಾತಿವ್ರತ್ಯವನ್ನು ಕಟ್ಟುನಿಟ್ಟಾಗಿ ಮಹಿಳೆಯರು ಪಾಲಿಸಬೇಕೆಂಬುದನ್ನು ಸಾರುವ ಪುರಾಣ ಇದು.

ದೇವದಾಸಿಯರ ದೇವತೆ ಎಲ್ಲಮ್ಮನನ್ನು ಪಾತಿವ್ರತ್ಯವನ್ನು ಪಾಲಿಸದಿದ್ದರೆ ಮಗನಿಂದಲೇ ಮರಣ ದಂಡನೆ ಪಡೆಯುವ ರೇಣುಕೆಯೊಂದಿಗೆ ಸಮೀಕರಿಸಿರುವುದು ಬಹಳ ದೊಡ್ಡ ದ್ವಂದ್ವ. ಈ ದ್ವಂದ್ವವನ್ನು ಬಿಡಿಸಿದ ನನ್ನ ಶೋಧದ ವಿವರ ನೀಡುವುದು ಈ ಲೇಖನದ‌ ಉದ್ದೇಶಕ್ಕೆ ಹೊರತು. (ಅದು ಒಂದು ಪ್ರತ್ಯೇಕ ಪುಸ್ತಕವಾಗಿ ಬರಲಿದೆ) ಈಗಿನ ಉದ್ದೇಶಕ್ಕೆ ಸಂಬಂಧಿಸಿದಂತೆ  ಒಂದು ಅಂಶ ಸ್ಪಷ್ಟ. ಜಾನಪದದ ಪ್ರಕಾರ ದೇವದಾಸಿಗಳ ದೇವತೆಯಾದ‌ ಎಲ್ಲಮ್ಮನಿಗೆ ಗಂಡ ಇರಲಿಲ್ಲ.‌ ಆಕೆಯ ಮಗನಿಗೆ‌ ಅಪ್ಪ ಗೊತ್ತಿರಲಿಲ್ಲ. ಎಲ್ಲಮ್ಮನಿಗೆ ಈಗಲೂ ಸಲ್ಲಿಸಲಾಗುತ್ತಿರುವ‌ ಪೂಜೆ, ಹರಕೆಗಳ ಸ್ವರೂಪವನ್ನು ವಿವರವಾಗಿ ಪರಿಶೀಲಿಸಿದರೆ ಹಾಗೂ ಜಾನಪದ ಗೀತೆಗಳಲ್ಲಿ ವಿವರಿಸಿರುವಂತೆ ಎಲ್ಲಮ್ಮ ಆದಿಮ ಜನರ ದೇವತೆ. ಎಲ್ಲಮ್ಮನಿಗೆ 80 ರ ದಶಕದಲ್ಲಿ ಕಾನೂನು ನಿಷೇಧ ಮಾಡುವವರೆಗೂ ಮಹಿಳೆಯರು ಮಾತ್ರವಲ್ಲ ಪುರುಷರೂ ಸಲ್ಲಿಸುತ್ತಿದ್ದ ಬೆತ್ತಲೆ ಸೇವೆ, ಮೈಮೇಲೆ ಬಟ್ಟೆಯಿಲ್ಲದೆ ಬೇವಿನ ಸೊಪ್ಪನ್ನು ಸುತ್ತಿಕೊಂಡು ಈಗಲೂ ಸಲ್ಲಿಸುತ್ತಿರುವ ಬೇವಿನ ಉಡಿಗೆಯ ಸೇವೆ ಇತ್ಯಾದಿಗಳ ಸ್ವರೂಪವೇ  ಬಟ್ಟೆ ತೊಡುವುದು ಗೊತ್ತಿಲ್ಲದ  ಆದಿ ಮಾನವರ ದೇವತೆ ಎಲ್ಲಮ್ಮ ಎಂಬುದನ್ನು ಸೂಚಿಸುತ್ತವೆ. ಆ ಕಾಲ ಮದುವೆ ಎಂಬ ಪದ್ಧತಿ ಇನ್ನೂ ಹುಟ್ಟೇ ಇಲ್ಲದ ಕಾಲ. ಅದರಿಂದಾಗಿಯೇ ಎಲ್ಲಮ್ಮ ಅರಿಷಿಣ ಹಚ್ಚಿಲ್ಲ, ಮಣೆ ಮ್ಯಾಲ‌ ಕುಂತಿಲ್ಲ. ಗಂಡನ‌ ಗುರುತು ನನಗಿಲ್ಲ ಎಂದು ಹೇಳಿದ್ದು. ಏಕೆಂದರೆ ….. ಮದುವೆ/ ವಿವಾಹದಿಂದ, ಪತಿ ನಿಷ್ಠ ಲೈಂಗಿಕ ಸಂಬಂಧಗಳಿಂದ  ಮಾತ್ರ ತಾನೇ ಮಕ್ಕಳಿಗೆ ಯಾರು ಅಪ್ಪ ಎಂದು ಸ್ಪಷ್ಟವಾಗಿ ಗೊತ್ತಾಗುವುದು. ಇಲ್ಲದಿದ್ದರೆ ಗೊತ್ತಾಗುವ ಬಗೆ ಹೇಗೆ ?  ಮಾನವರ ವಿಕಾಸದ ಲಕ್ಷಾಂತರ ವರ್ಷದ‌ ಬದುಕಿನಲ್ಲಿ ಮದುವೆ ಎಂಬ ಸಾಮಾಜಿಕ ಬಂಧ ಅಸ್ತಿತ್ವಕ್ಕೆ ಕೇವಲ  ನಾಲ್ಕಾರು ಸಾವಿರ ವರ್ಷದ್ದು.

ಜಗತ್ತಿನ ಮೊತ್ತ ಮೊದಲ ಮದುವೆಯ ದಾಖಲೆ ಮೆಸಪೊಟೋಮಿಯಾ ಪ್ರದೇಶದಲ್ಲಿ‌ ಕ್ರಿಸ್ತಪೂರ್ವ 2350ರದ್ದು.ಅದಕ್ಕೆ ಮೊದಲು ಗಂಡು ಹೆಣ್ಣುಗಳ ಲೈಂಗಿಕ ಸಂಬಂಧಗಳು ಹಿಂದಿನ ಲೇಖನದಲ್ಲಿ ವಿವರಿಸಿದಂತೆ , ಕೂಡುವಿಕೆಯ ಪರಿಣಾಮ ಮಕ್ಕಳ ಜನನ ಎಂಬುದರ ಅರಿವಿಲ್ಲದೆ ಏರ್ಪಡುತ್ತಿದ್ದವು.  ಮಾನವ ಸಮಾಜದ ವಿಕಾಸದೊಂದಿಗೆ   ಲೈಂಗಿಕ ಸಂಬಂಧಗಳೂ ಹಲವು ಹಂತಗಳಲ್ಲಿ ವಿಕಾಸವಾಗುತ್ತಾ ಬಂದಿವೆ.

ದೇವದಾಸಿ,  ದೇವರಿಗೆ ಮಾತ್ರ ದಾಸಿ :

ಎಲ್ಲಮ್ಮ ಮಾನವ ಸಮಾಜದ ಆದಿಮ ಹಂತದ  ದೇವತೆ. ಮಾನವರಿಗೆ ಅಂದು ಇದ್ದ ಸಾಮಾಜಿಕ ಸಂಬಂಧಗಳೆಲ್ಲ ಅಮ್ಮನ ಮೂಲಕವೇ . ಮಕ್ಕಳಿಗೆ ಜನ್ಮ ನೀಡುವ ಅಮ್ಮನ ವಿಶೇಷ ಶಕ್ತಿ, ಮಕ್ಕಳು, ಮೊಮ್ಮಕ್ಕಳಿಗೆ ನೀಡಿದ ವಿಶೇಷ ಅರಿವು ಇವುಗಳಿಂದ ಅವಳೇ ಒಂದು ಕುಲದ ಹಿರಿಯಳಾಗಿ ಮುನ್ನಡೆಸುವವಳು. ಅದರಿಂದಾಗಿ ಆಕೆಯ ನಿಧನದ ನಂತರ ಅವಳನ್ನು ಅವಳ ಮುಂದಿನ‌ ತಲೆಮಾರುಗಳೆಲ್ಲ ನೆನಪಿಸಿಕೊಳ್ಳಲಾರಂಭಿಸಿದವು, ಪೂಜಿಸಲಾರಂಭಿಸಿದವು. ಆ ಅಮ್ಮನ ನಂತರ ಹಿರಿಯಳೆಂಬ ಸ್ಥಾನವನ್ನು ಆ ಕುಲದ ಬಹಳಷ್ಟು ಸದಸ್ಯರ ತಾಯಿಯಾಗಿದ್ದ ಮತ್ತೊಬ್ಬ ಹೆಣ್ಣು ವಹಿಸಿಕೊಳ್ಳುವುದು ಅಂದಿನ ಸಹಜ ಪದ್ಧತಿಯಾಗಿತ್ತು. ಆದುದರಿಂದಲೇ ಅಂದು ಫೂಜಿಸಲ್ಪಟ್ಟ ಅಮ್ಮನ ಪೂಜೆ ಮಾಡುವವಳೂ ಹೆಣ್ಣೇ ಆಗಿದದ್ದುದೂ ಸಹಜವಾಗಿತ್ತು. ಎಲ್ಲಮ್ಮನಿಗೆ ಮುಡಿಪಾಗಿ  ಜೋಗತಿಯರಾಗುವವರು, ಮಾತಂಗಿಯರು ಅಂತಹ ಪೂಜಾರಿಣಿಯರು. ಅವರು ತಮ್ಮನ್ನು ತಾವು ಬಹುಕಾಲದಿಂದ ಕರೆದುಕೊಳ್ಳುತ್ತಿದ್ದುದು ಜೋಗತಿ, ಜೋಗಮ್ಮ ಎಂದೇ ಹೊರತು ದೇವದಾಸಿ ಎಂದು ಪರಿಗಣಿಸಿಕೊಂಡಿರಲಿಲ್ಲ. ಎಲ್ಲಮ್ಮನ ಭಕ್ತರೂ ಕೂಡಾ ಅವರನ್ನು ಜೋಗಮ್ಮ, ಮಾತಂಗಿ ಎಂದೇ. ದೇವದಾಸಿ ಎಂಬುದು ಇತ್ತೀಚಿಗೆ ಸಮಾಜ ಇತ್ತಿರುವ ಹೆಸರು.

ಅಂದು ಹೆಣ್ಣಿಗೆ ಇದ್ದ ಪ್ರಾಧಾನ್ಯದ ಫಲವಾಗಿ, ಅಮ್ಮನ ಮೇಲಿನ ಭಕ್ತಿಯ ಗುರುತಾಗಿ ಅಥವಾ ಯಾವುದಾರೊಂದು ಕಾರಣಕ್ಕೆ ಹೊತ್ತ ಹರಕೆಯ ಸಲ್ಲಿಕೆಯಾಗಿ ಪುರುಷರು ತಮ್ಮ ಪುರುಷತ್ವವನ್ನು ಅಮ್ಮನಿಗೆ ಅರ್ಪಿಸಿ ಹೆಣ್ಣಿನ‌ ವೇಷ ತೊಟ್ಟು ಜೋಗಪ್ಪಗಳಾಗುತ್ತಿದ್ದರು. “ಗಂಡ ಗಂಡರನೆಲ್ಲ ಹೆಂಡೀರ ಮಾಡಿ” ಎಂಬ ಮಾತು ಇಂತಹ ಪದ್ಧತಿಯಿಂದ ಬಂದಿದೆ. ಒಂದು ರೀತಿಯಲ್ಲಿ ಪುರುಷಾಧಿಪತ್ಯದ ಈ ಪ್ರಪಂಚದಲ್ಲಿ ಗಂಡಿನಂತೆ ಉಡುಪು ಧರಿಸುವ ಹುಡುಗಿಯರ ರೂಢಿಯ ಅಂದಿನ ರೂಪದಂತೆ ಕಾಣುತ್ತದೆ.

ಜೋಗತಿಯರನ್ನು ಓದುಗರೆಲ್ಲರೂ ನೋಡಿಲ್ಲದ ಸಾಧ್ಯತೆಯೇ ಇಂದು ಹೆಚ್ಚು. ಉತ್ತರ ಕರ್ನಾಟಕದಲ್ಲಿ ಅವರ ನೋಟ‌ ಸಾಮಾನ್ಯ.‌ ಅವರುಗಳು ಹಡಲಿಗೆ ಅಥವಾ ಪರಡಿ ಎಂದು ಕರೆಯುವ ಒಂದು ಬಿದಿರ ಬುಟ್ಟಿಯಲ್ಲಿ ಎಲ್ಲಮ್ಮನ ಸಂಕೇತವೆಂಬಂತೆ ಒಂದು ಮುಖವನ್ನು , ಅವಳ ಪ್ರಸಾದವೆಂಬಂತೆ ಅರಿಷಿಣವನ್ನು ಹೊತ್ತು ಬೇವಿನ ಸೊಪ್ಪಿನ ಗುಚ್ಛವನ್ನು ಹಿಡಿದು ಮನೆ ಮನೆಗೂ ಬರುವುದು ಪದ್ಧತಿ. ಕೆಲವೊಮ್ಮೆ ತಲೆಯ ಮೇಲೆ ಕೊಡವನ್ನೂ ಹೊತ್ತು ಬರುತ್ತಾರೆ. ಕೊಡಕ್ಕೇ ಎಲ್ಲಮ್ಮನ ಮುಖವನ್ನು ಅಂಟಿಸಲಾಗಿರುತ್ತದೆ. ಮಂಗಳವಾರ, ಶುಕ್ರವಾರ, ಹುಣ್ಣಿಮೆ ಅಮಾವಾಸ್ಯೆಗಳಂದು ಈ ಭೇಟಿ ವಿಶೇಷ.  ಉಧೋ ಉಧೋ ಎಲ್ಲಮ್ಮ ಎನ್ನುತ್ತಾ ಆಕೆಯನ್ನು ಸ್ತುತಿಸುವ ಹಾಡುಗಳನ್ನು ಹಾಡುತ್ತಾ ಬರುತ್ತಾರೆ. ಇಂತಹ ಕೆಲವು ಜೋಗತಿಯರು, ಜೋಗಪ್ಪಗಳು ಅಥವಾ ಇತರ ಭಕ್ತರು ಮೂರು ನಾಲ್ಕು ಜನರ ತಂಡವಾಗಿ ಚೌಡಿಕೆ ಎಂಬ ವಿಶೇಷ ವಾದ್ಯ ಹಿಡಿದು ನುಡಿಸುತ್ತಾ ಎಲ್ಲಮ್ಮನ ಲಾವಣಿಗಳನ್ನು, ಪದಗಳನ್ನು ಇನ್ನಿತರ ಜಾನಪದ ಕತೆಗಳನ್ನೂ ಹಾಡುತ್ತಾ ಊರೂರು ತಿರುಗುವುದುಂಟು.  ಇವುಗಳಿಗೆ ಚೌಡಿಕೆ ಪದಗಳು‌ ಎಂದೇ ಕರೆಯುತ್ತಾರೆ. ‌

ಇದೂ ಕೂಡಾ ಮಾನವರು ಅಲೆಮಾರಿಗಳಾಗಿ ಕಾಡಿನಿಂದ ಕಾಡಿಗೆ, ತಾತ್ಕಾಲಿಕ ವಸತಿಯಾದ ಬೀಡಿನಿಂದ ಬೀಡಿಗೆ ಅಲೆದಾಡುತ್ತಿದ್ದ ಸಮಯದಲ್ಲಿ ದೇವತೆಯನ್ನೂ ಅವರೊಂದಿಗೆ ಈ ಬುಟ್ಟಿಯಲ್ಲಿ ಹೊತ್ತು ತಿರುಗುತ್ತಿದ್ದ ಕಾಲದ ಪದ್ಧತಿ. ಆಗ ಎಲ್ಲಮ್ಮನಿಗೆ ಗುಡಿಗಳೂ ಇರಲಿಲ್ಲ. ಈಗಲೂ ಈ ದೇವತೆಯನ್ನು ಪೂಜೆ ಮಾಡುವ ಹಲವು ಸ್ಥಳಗಳು  ಬೆಟ್ಟ ಗುಡ್ಡಗಳ ಮೇಲಿನ ಗುಹೆಗಳು, ಮರದ ಬುಡಗಳು. ಇತ್ತೀಚೆಗಷ್ಟೇ ಸರಳ ಕಟ್ಟಡಗಳ ದೇವಾಲಯಗಳಲ್ಲಿ ಪೂಜಿಸಲಾಗುತ್ತಿರುವುದು.

ಜೋಗಮ್ಮಗಳ ಮೈ ಮೇಲೆ ಎಲ್ಲಮ್ಮ ತಾಯಿ ಬಂದು ವರಗಳನ್ನು ಕೊಡುತ್ತಾಳೆ ಎಂಬ ಪ್ರತೀತಿ ಇದೆ. ಆದ್ದರಿಂದ ಜೋಗಮ್ಮಗಳು ಸ್ವತಃ ಎಲ್ಲಮ್ಮನ ಸ್ವರೂಪ ಎಂದು ಇಂದೂ ಪರಿಗಣಿಸಲ್ಪಡುತ್ತಾರೆ , ಎಂದರೆ‌ ಹಿಂದಿನ ಶತಮಾನಗಳ ಮಾತೇನು ! ಈಗಲೂ ಮನೆಗಳಲ್ಲಿ ಮದುವೆಯಾದಾಗ ಜೋಗತಿಯರನ್ನು ಕರೆದು ಗೌರವಿಸಿ ಅವಳ ಕೈಯಿಂದ ತಾಳಿಯನ್ನು ಮುಟ್ಟಿಸುವುದು, ಮಕ್ಕಳ ನಾಮಕರಣ, ಗೃಹ ಪ್ರವೇಶ ಪಾ ಮುಂತಾದ ಶುಭ ಸಂದರ್ಭಗಳಲ್ಲಿ ಕೂಡಾ ಆಕೆಯ ಆಶಿರ್ವಾದ ಪಡೆಯುವುದು ರೂಢಿಯಲ್ಲಿದೆ.

ಎಲ್ಲಮ್ಮನಿಗೆ ಅರ್ಪಿತವಾದವರು, ಜೋಗತಿಯಾದವರು ಮದುವೆಯಾಗದಿರುವುದು ಕೂಡಾ ಎಲ್ಲಮ್ಮ ದೇವತೆಯಾಗಿ ಪೂಜಿಸಲ್ಪಟ್ಟ  ಆದಿ ಮಾನವರ ಕಾಲದ  ಪದ್ಧತಿಯ ಮತ್ತೊಂದು ಪುರಾವೆಯಾಗಿದೆ.  ಅಂದಿನ ಪದ್ಧತಿಯಂತೆ ಎಲ್ಲ ಹೆಣ್ಣುಗಳಿಗೂ ಗಂಡುಗಳಿಗೂ ಮದುವೆ ಎಂಬುದು ಇರಲಿಲ್ಲ.  ಅಂದಿನ ಎಲ್ಲಮ್ಮನ ಪೂಜಾರಿಣಿಯರಾದ ಜೋಗತಿಯರಿಗೂ ಮದುವೆ ಎಂಬುದು ಇರಲಿಲ್ಲ. ಎಲ್ಲರಂತೆ ಇವರೂ ಯಾರ ಜೊತೆಯಲ್ಲಾದರೂ ಲೈಂಗಿಕ ಸಂಬಂಧ ಇಟ್ಟುಕೊಳ್ಳಬಹುದಾಗಿತ್ತು.

ಮೇಲೆ ಹೇಳಿದಂತೆ ಹಲವು ಹಂತಗಳಲ್ಲಿ ಮಾನವರ ಲೈಂಗಿಕ ಸಂಬಂಧಗಳೂ ಬದಲಾದವು.  ಪುರುಷ ಪ್ರಾಧಾನ್ಯತೆಯ ಕಾಲದಲ್ಲಿ  ವಿವಾಹ /  ಮದುವೆ  ಪದ್ಧತಿ ಅಸ್ತಿತ್ವಕ್ಕೆ ಬಂದಿತು. ಪುರುಷಾಧಿಪತ್ಯದ ಸಮಾಜದ ಅಸ್ತಿವಾರವೇ ಆಯಿತು. ಆಗ ಒಂದು ಸಮಸ್ಯೆ ಎದುರಾಯಿತು.  ಮಹಿಳಾ ಕೇಂದ್ರಿತ ಸಮಾಜ ಮತ್ತು ಪುರುಷಾಧಿಪತ್ಯದ ಸಮಾಜದ ನಡುವಿನ ವೈರುಧ್ಯದ ಸಮಸ್ಯೆ ಅದು.

ಎಲ್ಲಮ್ಮನ ಒಕ್ಕಲು ನಾವು, ಅವಳ ಭಕ್ತರು ನಾವು ಎಂಬ ಎಲ್ಲಮ್ಮನ ಮೇಲಿನ ಗೌರವ, ಭಯ ಇನ್ನೂ ಮುಂದುವರಿದಿದೆ. ಆಕೆಯೇ ನಮ್ಮ ಬದುಕಿನ  ಧಾರಕಿ ಎಂಬ  ಭಾವನೆ ಮುಂದುವರೆದಿದೆ. ಈಗಲೂ ಎಲ್ಲಮ್ಮನ ಜಾತ್ರೆಗೆ ಉಧೋ ಉಧೋ ಎಂದು ದೂರ ದೂರದ ಊರುಗಳಿಂದ ಲಕ್ಷಾಂತರ ಜನ ಸೇರುತ್ತಾರೆ ಎಂದ ಮೇಲೆ ಸಾವಿರಾರು ವರ್ಷಗಳ ಹಿಂದೆ ಮದುವೆ ಪದ್ಧತಿ ರೂಢಿಗೆ ಬಂದ ಕಾಲದ ಪರಿಸ್ಥಿತಿ ಏನು ? 

ಎಲ್ಲಮ್ಮನ ಮೇಲಿನ ಭಯ ಭಕ್ತಿಯ ಕಾರಣಕ್ಕೆ ಎಲ್ಲಮ್ಮನ ಪೂಜೆಗೆಂದು ಅವಳ  ಒಕ್ಕಲುಗಳು ಒಬ್ಬ ಮಗಳನ್ನು ಅರ್ಪಿಸಲೇ ಬೇಕು. ಇಂದೂ ಕೂಡಾ ಆದಿ ಚುಂಚನಗಿರಿ ಭೈರವ ಮೊದಲಾದ ದೇವರ ಒಕ್ಜಲುಗಳು ತಮ್ಮ ಕುಟುಂಬದಲ್ಲಿ ಹಿರಿಯ ಮಗನಿಗೆ ದೀಕ್ಷೆ ಕೊಡಿಸಿ ಕಿವಿ ಚುಚ್ಚಿ  ಜೋಗಿಯಾಗಿ ಮಾಡಿದಂತೆ, ತಿಮ್ಮಪ್ಪನ, ನರಸಿಂಹನ ಇತರ ವೈಷ್ಣವ ದೇವತೆಗಳ ಭಕ್ತರು ಮನೆಯ ಹಿರಿಯ ಮಗನಿಗೆ ದಾಸಪ್ಪನನ್ನಾಗಿ ಮಾಡುವಂತೆ ಎಲ್ಕಮ್ಮನಿಗೂ ಕೂಡಾ ಕುಟುಂಬದ ಹಿರಿಯ ಮಗಳನ್ನು ಎಲ್ಲಮ್ಮನ ಪೂಜೆಗೆ ಸಮರ್ಪಿಸುವ ಪದ್ಧತಿ ಮುಂದುವರೆಯಿತು.

ಆದರೆ ಗಂಡ ಗಂಡರನೆಲ್ಲ ಹೆಂಡೀರ ಮಾಡಿದ ಪ್ರಬಲ ದೇವತೆ  ಎಲ್ಕಮ್ಮನ ಜೀವಂತ ರೂಪವೆಂದೇ‌ ಗೌರವಕ್ಕೆ ಪಾತ್ರವಾಗಿದ್ದ ಮಾತಂಗಿ, ಜೋಗತಿಯರನ್ನು ಮದುವೆಯಾಗುವ ಯೋಚನೆಯಾದರೂ ಸಾಧ್ಯವೇ ? ಎಲ್ಲಮ್ಮನಿಗೆ ಅರ್ಪಿತವಾದವರು ತಮ್ಮ ಹೆಂಡತಿಯಾಗುವುದೆಂದರೆ ಅವರನ್ನು  ತಮ್ಮ‌ ದಾಸಿಯರನ್ನಾಗಿ ಮಾಡಿಕೊಂಡಂತೆ‌ ಅಲ್ಲವೇ ? ಅದರಿಂದ ಎಲ್ಕಮ್ಮ ಮುನಿಯುತ್ತಾಳೆ, ತಮ್ಮ ಕುಟುಂಬಕ್ಕೆ ಕೇಡಾಗುತ್ತದೆ ಎಂದು ಜೋಗತಿಯರನ್ನು  ಮದುವೆಯಾಗಲು  ಪುರುಷರು ಹೆದರಿದರು. ವಿವಾಹದ  ಕಟ್ಟಳೆ ಅವರಿಗೆ ಅನ್ವಯವಾಗದೆ ಹೋಯಿತು. ಅವರು ತಾವು ಯಾವ ಗಂಡರಿಗೂ ದಾಸಿಯರಲ್ಲ, ದೇವರಿಗೆ ಮಾತ್ರ ದಾಸಿಯರು ಎಂದು ಮುಂದುವರೆದರು. ಹೀಗೆ ಅವರು ಹಿಂದಿನಂತೆಯೇ ತಮಗೆ ಇಚ್ಛೆ ಬಂದವರ ಜೊತೆ ಕೂಡುವ, ತಾಯಿಯ ಮನೆಯಲ್ಲೇ ಉಳಿಯುವ ಸ್ವಾತಂತ್ರ್ಯ ಉಳಿಯಿತು. ಅವರ ಮಕ್ಕಳು ಯಾವ ತಂದೆಯ ಮಕ್ಕಳು ಎಂದು ಗುರುತಿಸ್ಪಡದೆ ತಂದೆಯ ತಾಯಿಯ ವಂಶವಾಗಿಯೇ ಗುರುತಿಸಲ್ಪಟ್ಟರು. ಈಗಲೂ ದೇವದಾಸಿ ಎಂದು ಕರೆಯಲ್ಪಟ್ಟವರ ಮಕ್ಕಳಿಗೆ ಉತ್ತರ ಕರ್ನಾಟಕದ ಭಾಗಗಳಲ್ಲಿನ ಪದ್ಧತಿಯಂತೆ ತಂದೆಯ ಹೆಸರು ,ತಂದೆಯ ವಂಶದ ಹೆಸರು ಕೊಡಲ್ಪಡುವುದಿಲ್ಲ. ಸಾಮಾನ್ಯವಾಗಿ ಎಲ್ಲರ ಹೆಸರು ಚನ್ನಪ್ಪ ಗುರಪ್ಪ ಕಟ್ಟೀಮನಿ ಎಂದಿದ್ದರೆ ದೇವದಾಸಿಯರ ಮಕ್ಕಳ ಹೆಸರು ಚನ್ನಪ್ಪ ತಾಯಿ ದುರಗವ್ವ ಮಾದರ ಎಂದಿರುತ್ತದೆ.

ಎಲ್ಲಮ್ಮ ಮಾತ್ರವೇ ಅಲ್ಲದೆ ಬೇರೆ ದೇವತೆಗಳು, ದೇವರುಗಳಿಗೂ ಹೆಣ್ಣು ಮಕ್ಕಳನ್ನು ಅರ್ಪಿಸುವ ಪದ್ಧತಿಗಳಿವೆ. ಹೀಗೆ ದೇವತೆಗಳಿಗೆ, ದೇವರಿಗೆ ಅರ್ಪಿಸಲ್ಪಟ್ಟವರು ಆಯಾ ದೇವರ ಬಗ್ಗೆ ಕೀರ್ತಿಸುತ್ತಾ ಜೀವನ ಕಳೆಯುತ್ತಾರೆ. ಗಂಡು ದೇವರಿಗೆ ಅರ್ಪಿಸಲ್ಪಟ್ಟವರಿಗೆ ದೇವಸ್ಥಾನದಲ್ಲಿ ಹಾಡುವುದು, ನರ್ತಿಸುವುದು ಕಾಯಕ.

ನಮ್ಮ ದೇಶದ ಹಲವು ಸಂಗೀತಗಾರ್ತಿಯರು,ನೃತ್ಯಗಾತಿಯರು ಇಂತಹ ದೇವದಾಸಿಯರ ಮಕ್ಕಳು. ಪ್ರಸಿದ್ಧ ಸುಬ್ಬಲಕ್ಷ್ಮಿ, ತ್ಯಾಗರಾಜರ ಆರಾಧಕಳಾಗಿ ಹೆಸರಾದ ನಾಗರತ್ನಮ್ಮ  ಮೊದಲಾದ ಅನೇಕರು ದೇವದಾಸಿಯರು.
ಆದರೆ ಮುಂದೆ ರಾಜ ಪ್ರಭುತ್ವ, ಊರ ಗೌಡರು, ಪಾಳೆಯಗಾರರು ಎಂಬ ದಬ್ಬಾಳಿಕೆ , ದೌರ್ಜನ್ಯಗಳ ವ್ಯವಸ್ಥೆಯ‌ ಬೆಳವಣಿಗೆಯೊಂದಿಗೆ ವೇಶ್ಯಾ ವೃತ್ತಿ‌ ಬೆಳೆಯಿತು. ದೇವರಿಗೆ ಮಾತ್ರ ದಾಸಿಯಾಗಿ ಲೈಂಗಿಕ ಸ್ವಾತಂತ್ರ್ಯ ಪಡೆದಿದ್ದವರನ್ನು ಈ ದಬ್ಬಾಳಿಕೆಗಾರರು ತಮ್ಮ   ದಾಸಿಯರನ್ನಾಗಿ ಮಾಡಿಕೊಂಡರು. ಹೀಗೆ ದೇವರಿಗೆ ಮಾತ್ರ ದಾಸಿ ಎನ್ನುವ ಪದ್ಧತಿ ಸಂಪತ್ತಿನ ಒಡೆಯರ ದಾಸಿತನವಾಗಿ ಕೆಳಕ್ಕೆ ತಳ್ಳಲಾಯಿತು. ವೇಶ್ಯಾವೃತ್ತಿಯಂತೆ ಪರಿಗಣಿತವಾಯಿತು.

ಈಗ ದೇವದಾಸಿ ಪದ್ಧತಿ ನಿರ್ಮೂಲನಕ್ಕಾಗಿ ಚಳುವಳಿಗಳು ನಡೆದು  ಕಾನೂನುಗಳು, ದೇವದಾಸಿ ಕಲ್ಯಾಣ ಯೋಜನೆಗಳು ಅರೆ ಬರೆಯಾಗಿ ಜಾರಿಯಲ್ಲಿವೆ. ಈಗಲೂ ದೇವತೆಯ ಮೇಲಿನ ಭಯ ಭಕ್ತಿಯಿಂದಾಗಿ,ಇತರ ಪ್ರಲೋಭನೆಗಳಿಂದಾಗಿ ಎಲ್ಲಮ್ಮ ಮತ್ತಿತರ ಕೆಲ ದೇವತೆಗಳಿಗೆ ಹೆಣ್ಣು ಮಕ್ಕಳನ್ನು ಅರ್ಪಿಸುವುದು ಗುಟ್ಟಾಗಿ ಮುಂದುವರೆಯುತ್ತಿದೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

21 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading