ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ನಾಗರಾಜ್ ಅಂಕಣ- ಗಜಮುಖ, ಪಂಜುರ್ಲಿ, ಮೂಷಿಕವಾಹನ, ದಕ್ಷ ಬ್ರಹ್ಮ ಏನೀ ಸಂಬಂಧ ?

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

20

ಅಮ್ಮ‌ಗಳು ದಾಸಿಯರಾದದ್ದಕ್ಕೂ ಇದಕ್ಕೂ ಏನು ಸಂಬಂಧ ?
ಮೂಷಿಕನ ಮೇಲೆ ಗಜಮುಖನ ಸವಾರಿ !  ಗುಲಾಮಗಿರಿಯ ಆರಂಭವೇ ?

ಇಲಿಯ ಮೇಲೆ ಆನೆ ಮುಖ ಮಾತ್ರವಲ್ಲ ಆನೆ ಗಾತ್ರದ ಗಣಪತಿಯ ಸವಾರಿ ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಷಿಕ ವಾಹನನಾಗಿ ಗಜಮುಖನನ್ನು ನೋಡುವಾಗೆಲ್ಲಾ ಹಲವರಿಗೆ ಹುಟ್ಟುತ್ತದೆ. ಇಂತಹ ಸಂದೇಹಗಳನ್ನು ಹುಟ್ಟುವಾಗಲೇ ಮೊಳಕೆಯಲ್ಲಿಯೇ ಚಿವುಟಿ ಬಿಡಲಾಗುತ್ತದೆ. ದೇವರ ಬಗ್ಗೆ ಹಾಗೆಲ್ಲಾ ಪ್ರಶ್ನೆ ಮಾಡಬಾರದು ಗೊತ್ತಾ ? ಹೀಗೆ ಮಕ್ಕಳಿಗೆ ತಾಯಿ, ತಂದೆಯರು ಹೆದರಿಸಿ ಗಲ್ಲಕ್ಕೆ ಕೈ ಬಡಿಸಿ ಹೆದರಿಕೆ ಹುಟ್ಟಿಸುವುದು ನಮ್ಮ ದೇಶದಲ್ಲಿ ಅತಿ ಸಾಮಾನ್ಯ ಪ್ರಕ್ರಿಯೆ. ಅರಿವ ಕುತೂಹಲವನ್ನೂ ಅಲ್ಲಿಯೇ ಮೊಟಕಿ ಮಕ್ಕಳಿಗೆ ಅರಿವ ಬೆಡಗಿನ ಸವಿಯನ್ನೂ, ವಿಚಾರವಂತಿಕೆಯನ್ನೂ  ಇಲ್ಲವಾಗಿಸಿ‌ ಬಿಡುತ್ತಾರೆ.

ಈ ಪ್ರಶ್ನೆಗಳಿಗೆ ಮೊದಲು ಗಣಪತಿಗೆ ಆನೆಯ ಮುಖ ಬಂದದ್ದು ಹೇಗೆ ? ಇದಕ್ಕೆ ಒಂದು ಪೌರಾಣಿಕ ಉತ್ತರವನ್ನು ಪ್ರಚುರ ಪಡಿಸಲಾಗಿದೆ. ಗಣಪತಿಯ ತಲೆ ಕಡಿದ ಶಿವ ಪಾರ್ವತಿಯ ದುಃಖ ಶಮನ ಮಾಡಲು ಉತ್ತರಕ್ಕೆ ತಲೆ ಮಾಡಿ ಬಿದ್ದು ಸತ್ತಿದ್ದ ಆನೆಯ ತಲೆಯನ್ನು ಗಣಪತಿಯ ಮುಂಡಕ್ಕೆ ಜೋಡಿಸಿ ಮರುಜೀವ ನೀಡಿದ ಎಂಬ ವಿವರಣೆ ನಮಗೆಲ್ಲ ಗೊತ್ತಿರುವುದೇ ? ಅದನ್ನೇ ಅತ್ಯಂತ ಮುಂದುವರೆದ ವೈದ್ಯಕೀಯ ಶಸ್ತ್ರಚಿಕಿತ್ಸೆಯಾದ ಪ್ಲಾಸ್ಟಿಕ್ ಸರ್ಜರಿ ಆಗಲೇ ಭಾರತದ ಜನರಿಗೆ ಗೊತ್ತಿತ್ತು ಎಂದು ಸಾರುವುದು ಇತ್ತೀಚಿನ ಪುರಾಣೀಕರಣ.

ಆದರೆ ಈ ಕ್ರಿಯೆಯ ವಿವರಣೆಯೇ ಹಲ ಹಲವು ಪ್ರಶ್ನೆ, ಸಂದೇಶಗಳನ್ನು ಹುಟ್ಟು ಹಾಕುತ್ತದೆ. ಸತ್ತ ಆನೆಯ ತಲೆಯನ್ನು ಜೋಡಿಸುವುದು ಸಾಧ್ಯವೆಂದರೆ ಕತ್ತರಿಸಲ್ಪಟ್ಟ ಗಣಪತಿಯ ಮನುಷ್ಯ ಮುಖವನ್ನೇ ಮರಳಿ ಜೋಡಿಸವುದು ಮತ್ತಷ್ಟು ಸುಲಭದ ಮತ್ತು ಒಳ್ಳೆಯ ಕೆಲಸವಾಗಿರಲಿಲ್ಲವೇ ?  ಆನೆಯ ತಲೆಯನ್ನು ಮಾತ್ರ ಅಂಟಿಸಿದ್ದರೆ ಗಜಮುಖನಿಗೆ ಆನೆಯ ದಢೂತಿ ಶರೀರ ಹೇಗೆ ಬಂತು ? ಇತ್ಯಾದಿ. ಅಷ್ಟೇ ಅಲ್ಲ ಶಿವ ಇಂತಹ ಹಲವು ಸರ್ಜರಿಗಳಿಗೆ ಪ್ರಸಿದ್ಧ. ದಕ್ಷನ ತಲೆಯನ್ನು ವೀರಭದ್ರ ತರಿದ ಮೇಲೆ  ಟಗರಿನ ತಲೆಯನ್ನು ಕೂಡಿಸಿ ಬದುಕಿಸಿದ್ದು ಇಂತಹ ಮತ್ತೊಂದು ಅಮೋಘ ಯಶಸ್ವಿ ಚಿಕಿತ್ಸೆ. ಇದೇಕೆ ಶಿವನಿಗೇ ಇಂತಹ ಪ್ರಸಂಗಗಳು ಒದಗುತ್ತವೆ ಎಂಬ ಮತ್ತೊಂದು ಪ್ರಶ್ನೆ ಏಳುತ್ತದೆ !

ಈ ಎಲ್ಲ ಸಂದೇಹಗಳನ್ನು ಪರಿಹರಿಸಿಕೊಳ್ಳಬೇಕೆಂದರೆ ಅರಿವ ಬೆಡಗಿನ ಬೆನ್ನು ಹತ್ತಬೇಕು, ಸಾಹಸಗಳನ್ನು ಕೈಗೊಳ್ಳಬೇಕು. ಪುರಾಣದ ಈ ಕತೆಗಳ ಗೋಜಲಿನೊಳಗೆ ಹೊಕ್ಕು ಸರಿಯಾದ ಮಾನವ ಶಾಸ್ತ್ರದ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಸಮಾಧಾನಕರ ಉತ್ತರ ಕಂಡುಕೊಳ್ಳಬೇಕು.

ಅದಕ್ಕೆ ನಮ್ಮ ದೇಶದಲ್ಲಿ ಇಂದೂ ಅಸ್ತಿತ್ವದಲ್ಲಿರುವ ಹಲವಾರು ಸಮುದಾಯಗಳು, ಅವರ ಜೀವನ ಪದ್ಧತಿಗಳು ನಮ್ಮ ನೆರವಿಗೆ ಬರುತ್ತವೆ. ಮನುಷ್ಯ ಪ್ರಾಣಿಗಳ ನಡುವಣ ಸಂಬಂಧ ಮತ್ತು ಪ್ರಾಣಿಗಳನ್ನು ದೈವಗಳೆಂದು ಪೂಜಿಸುವ ಪದ್ಧತಿ ಉಗಮಗೊಂಡ ಬಗ್ಗೆ ವಿವರವಾಗಿ ಈ ಅಂಕಣದ “ಪ್ರಾಣಿಗಳು ದೇವರುಗಳೋ ಬಲಿಗಳೋ” ಎಂಬ ಲೇಖನದಲ್ಲಿ ನಮ್ಮ ದೇಶದ ಹಾಗೂ ವಿಶ್ವದ ವಿವಿಧ ದೇಶಗಳಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಹಾಗೂ ಹಿಂದೆ ಅಸ್ತಿತ್ವದಲ್ಲಿದ್ದ ಬಗೆಗಿನ ಮಾನವ ಶಾಸ್ತ್ರೀಯ ಅಧ್ಯಯನಗಳನ್ನು ಉಲ್ಲೇಖಿಸಿ ವಿವರಿಸಲಾಗಿದೆ. ಆ ಲೇಖನವನ್ನು ಓದಿದರೆ ಗಣಪತಿ ಮೂಷಿಕನ ಮೇಲೇರಿ ಕುಳಿತ ವೈಚಿತ್ರ್ಯದ ಬಗ್ಗೆ ಮತ್ತಷ್ಟು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗುತ್ತದೆ. ಅದನ್ನು ಓದದವರಿಗಾಗಿ ಮತ್ತು ಓದಿದವರಿಗೂ ನೆನಪಿಸುವ ಸಲುವಾಗಿ ಅದರ ಮುಖ್ಯಾಂಶಗಳು ಇಲ್ಲಿ.

ಕರಾವಳಿಯಲ್ಲಿ ಇನ್ನೂ ವ್ಯಾಪಕವಾಗಿರುವ ಭೂತಾರಾಧನೆ ಎಂಬ ಪದ್ಧತಿಯಲ್ಲಿ ಹಂದಿಯ ಮುಖವಾಡ ತೊಟ್ಟು ಪೂಜಿಸುವ ಪಂಜುರ್ಲಿ, ಕೋಣದ ಮುಖವಾಡ ತೊಟ್ಟು ಪೂಜಿಸುವ ಮೈಸಂದಾಯ ದೈವ, ಛತ್ತೀಸಘಡ, ಆಂಧ್ರ, ಝಾರ್ಖಂಡ್‌ಗಳಲ್ಲಿ ಕೋಣದ ಕೊಂಬು ತೊಟ್ಟು ಮಾಡುವ ಆರಾಧನಾ ನರ್ತನ, ಹರಪ್ಪಾ ಮೊಹೆಂಜದಾರೋಗಳ ಸಿಂಧೂ ಸಂಸ್ಕೃತಿಯ ಮುದ್ರೆಗಳ ಮೇಲೆ ಕಂಡ ಕೋಣದ ಕೊಂಬಿನ ದೈವ ಕೆಲ ಉದಾಹರಣೆಗಳು. ಇವುಗಳ ಜೊತೆಗೆ ಈಜಿಪ್ಟಿನ ಸಾಮ್ರಾಜ್ಞಿಯ ಹುಟ್ಟಿಗೆ ಕಾರಣವಾದ ಅಮುನ್, ಗ್ರೀಕ್ ದೈವ ಪ್ಯಾನ್, ಇಪೋನಾ ಎಂಬ ಕುದುರೆ ರೂಪದ ದೇವತೆ, ಡಯೋನಿಸಸ್ ಎಂಬ ಹೋರಿ ರೂಪದ ದೇವತೆ, ಅಮೇರಿಕದ ಆದಿವಾಸಿಗಳು ಕಾಡು ಕೋಣದ ಅಸ್ಥಿಪಂಜರದ ಮುಖದ ಭಾಗವನನ್ನೇಮುಖವಾಡವಾಗಿ ಮಾಡುವ ನರ್ತನ, ಜಗತ್ತಿನ ವಿವಿಧ ಭಾಗಗಳಲ್ಲಿ ಕರಡಿ,ಕೋಣಗಳ ಪೂಜೆಗಳು. ಈ ಪ್ರಾಣಿಗಳನ್ನು ತಮ್ಮ ಹಿರೀಕರು, ತಮ್ಮ ಅಜ್ಜ ಎಂದು ಭಾವಿಸುವ ಬಗ್ಗೆ ಆ ಲೇಖನದಲ್ಲಿ ವಿವರಿಸಲಾಗಿತ್ತು.

ಭಾರತದ ಹಾಗೂ ವಿಶ್ವಾದ್ಯಂತದ ಈ ಪ್ರಾಣಿ ರೂಪಗಳ ಪೂಜೆಗಳು ಗಣಪತಿಯ ಬಗ್ಗೆ ಮತ್ತು ಅವನ ಗಜಮುಖದ ಬಗ್ಗೆ ಏನು ಕಲಿಸುತ್ತವೆ ?

ಪಂಜುರ್ಲಿ, ಮೈಸಂದಾಯ ದೈವಗಳಂತೆಯೇ, ಸಿಂಧೂ ನಾಗರಿಕತೆಯ ಮುದ್ರೆಗಳಲ್ಲಿ ಕಂಡ ಕೋಣನ ಕೋಡುಗಳಂತೆಯೇ ಆನೆಯ ಮುಖವಾಡ ಧರಿಸಿದ ದೈವವೊಂದರ ಪೂಜೆ ನಡೆಯುತ್ತಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಬೆಡಗುಗಳೂ, ಪ್ರಾಣಿ ಪಕ್ಷಿಗಳ ಟೋಟೆಂಗಳೂ :

ಅಮ್ಮಂದಿರು ಜೆನೆಟಿಕ್ಸ್ ವಿಜ್ಞಾನಿಗಳೆಂಬಂತೆ ಒಬ್ಬಳೇ ತಾಯಿಯ ಗುಂಪಿನಲ್ಲಿ ಹತ್ತಿರದ ರಕ್ತ‌ ಸಂಬಂಧಿಗಳೊಡನೆ ಲೈಂಗಿಕ ಸಂಬಂಧಗಳಿಂದ ಊನವಾದ ಮಕ್ಕಳು ಹುಟ್ಟುತ್ತವೆ ಎಂಬುದನ್ನು ಕಂಡುಕೊಂಡ ನಂತರ ಯಾರೊಡನೆ ಲೈಂಗಿಕ ಸಂಬಂಧ ಬೆಳೆಸಬೇಕು, ಯಾರೊಡನೆ ಬಾರದು ಎಂಬುದನ್ನು ಸ್ಪಷ್ಟಪಡಿಸುವ ಬೆಡಗು,ಬಳಿ,ಗೋತ್ರ , ಕುಲ ಎಂಬ ಗುಂಪುಗಳನ್ನು ಬುಡಕಟ್ಟುಗಳ ಒಳಗೇ ರೂಪಿಸಿಕೊಂಡರು. ಈ ಬೆಡಗುಗಳನ್ನು ಪ್ರತ್ಯೇಕವಾಗಿ ಗುರುತಿಸುವುದು ತುರ್ತಿನದಾಯಿತು. ಆಗ ಬುಡಕಟ್ಟು ಜನರು ತಮಗೆ ಗೊತ್ತಿದ್ದ ಪ್ರಕೃತಿಯ ವಸ್ತುಗಳನ್ನೇ ಬೆಡಗುಗಳ ಗುರುತಾಗಿ ಆರಿಸಿಕೊಂಡರು. ಪ್ರಾಣಿ,ಪಕ್ಷಿ,ಗಿಡ ಮರ ಬಳ್ಳಿಗಳು ಈ ಗುರುತುಗಳಾದವು. ಅವುಗಳಲ್ಲಿ ತಮಗೆ ಬದುಕು ನೀಡಿದ್ದವೆಂದು ಭಾವಿಸಿದ ಪ್ರಾಣಿಗಳು, ಅದರಲ್ಲಿಯೂ ತಾವು ಸಂಚರಿಸುತ್ತಿದ್ದ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿದ್ದ ದೊಡ್ಡ ಪ್ರಾಣಿಗಳು ಈ ಬೆಡಗು,ಕುಲಗಳ ಗುರುತುಗಳಾದವು. ಹಲವು ಬುಡಕಟ್ಟು ಹಾಗೂ ಜಾತಿಗಳಲ್ಲಿ ಇಂದಿಗೂ ಎನುಮಲೋರು, ಕೋಣನೋರು, ಕುರಿ ಹಟ್ಟಿಯವರು, ಮಂದಲೋರು ( ದನಗಳ ಮಂದೆ )   ಮೊದಲಾದ ಪ್ರಾಣಿ ಮೂಲದ ಬೆಡಗುಗಳಿವೆ. ಇವುಗಳನ್ನು ಮಾನವ ಶಾಸ್ತ್ರಜ್ಞರು ಟೋಟೆಮ್ ಗುರುತುಗಳು ಎಂದು ಕರೆದಿದ್ದಾರೆ. ಹೀಗೆ ಪ್ರಾಣಿ ಮತ್ತಿತರ ಟೋಟೆಮ್ ಗುರುತುಗಳಿಗೆ‌ ಸಂಬಂಧಿಸಿ ಹಲವು ನಂಬಿಕೆ ಮತ್ತು ಆಚರಣೆಗಳು ಮೂಡಿವೆ.

ವಿಶ್ವಾದ್ಯಂತ ಬೆಡಗುಗಳ ಪದ್ಧತಿ ಹಾಗೂ    ಪ್ರಾಣಿ ರೂಪದ ದೈವಗಳ ಆಚರಣೆ ಪ್ರಚಲಿತವಾಗುದ್ದುದರಿಂದ ಟೋಟೆಮ್ ಪದ್ಧತಿಯೂ ವಿಶ್ವಾದ್ಯಂತ ವ್ಯಾಪಕವಾಗಿ ಬಳಕೆಯಲ್ಲಿದ್ದ ಪದ್ಧತಿ. ಈ ಪದ್ಧತಿಗೆ ಸಂಬಂಧಿಸಿ ಹಲ ಹಲವು ಆಕರಗಳು ದೊರೆತಿವೆ. ನೂರಾರು ಮಾನವ ಶಾಸ್ತ್ರಜ್ಞರು ಮತ್ತು ಜಾನಪದ ಸಂಶೋಧಕರು ಈ ಪದ್ಧತಿ ಮತ್ತು ಅದರ ಹಿಂದಿನ ನಂಬಿಕೆಗಳನ್ನು ವಿವರವಾಗಿ ದಾಖಲಿಸಿದ್ದಾರೆ.

ಬೆಡಗುಗಳು/ ಗೋತ್ರಗಳಿಗೆ ಪ್ರಾಣಿಗಳ ಹೆಸರುಗಳನ್ನು ಗುರುತಾಗಿಡುವ ಪದ್ಧತಿ ವೈದಿಕ ಗ್ರಂಥಗಳಲ್ಲಿಯೂ ದಾಖಲಾಗಿದೆ. ಮಾಂಸಾಹಾರವೆಂದರೆ‌ ಅಸಹ್ಯ ಪಡುವ ಬ್ರಾಹ್ಮಣರಲ್ಲಿ ಗೋತ್ರ, ಪ್ರವರ ಹೇಳುವುದು ಅನೂಚಾನವಾಗಿ ಬಂದ ಪದ್ಧತಿ. ಅವರ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ದೇವರ ಪೂಜೆ ಮಾಡಿಸುವಾಗೆಲ್ಲ ಇವುಗಳನ್ನು ಹೇಳಬೇಕು.

ಅವರ ಗೋತ್ರಗಳಿಗೆ ಪ್ರಸಿದ್ಧ ಋಷಿಗಳು  ಮೂಲ ಪುರುಷರೆಂದು ನಂಬಿಕೆ. ಆದರೆ  ಆ ಋಷಿಗಳ ಹೆಸರುಗಳೇ ಈ ಗೋತ್ರಗಳ ಪ್ರಾಣಿ ಮೂಲವನ್ನು ಸೂಚಿಸುತ್ತವೆ.  ಗೋತ್ರ ಎಂಬ ಹೆಸರೇ ಗೋವುಗಳ ಮಂದೆ ಎಂದು ಸೂಚಿಸುವ ಪ್ರಾಣಿ ಮೂಲದ ಹೆಸರು.  ಅಷ್ಟೇ ಅಲ್ಲದೆ ಕಾಶ್ಯಪ ಗೋತ್ರ ಆಮೆಯನ್ನು, ಭಾರದ್ವಾಜ ಗೋತ್ರ ಭಾರದ್ವಾಜ ಪಕ್ಷಿಯನ್ನು,  ಶಾಂಡಿಲ್ಯ ಗೋತ್ರ ಶಾಂಡಿಲ ಪಕ್ಷಿಯನ್ನು, ಅಜರು ಮೇಕೆಗಳನ್ನು, ಋಕ್ಷರು ಕರಡಿಗಳನ್ನು, ಶುನಕರು ನಾಯಿಗಳನ್ನು , ಮುದ್ಗಲರು ಒಂದು ಮೀನು ಜಾತಿಯನ್ನು, ವತ್ಸರು ಕರುಗಳನ್ನು, ಗೋತಮರು ಗೋವುಗಳನ್ನು ಸೂಚಿಸುತ್ತದೆ.

ಗಣಪತಿ ಗಜಮುಖನಾದದ್ದು :

ಪ್ರಾಣಿಗಳ ಹೆಸರಿನ ಬೆಡಗು/ ಗೋತ್ರಗಳಿವೆ ಎಂಬುದು ಆನೆಯ ಹೆಸರಿನ ಬೆಡಗೂ ಇರಲು ಸಾಧ್ಯ ಎಂಬುದರ ಸೂಚಕವಾಗಿದೆ. ಇದಕ್ಕೆ ಹಲವು ಶಾಸನಗಳಲ್ಲಿ ಮಾತಂಗರು ಎಂಬ ಆನೆಯ ಹೆಸರಿನ ಕುಲ ಪ್ರಸ್ತಾಪವಾಗಿದೆ. ಬೌದ್ಧ ಗ್ರಂಥಗಳಲ್ಲಿ ಕೋಸಲದ ರಾಜನಾಗಿ ಪ್ರಸ್ತಾಪಗೊಂಡಿರುವ ಪಸೇನದಿಯನ್ನು ಮಾತಂಗ ಚ್ಯುತಿ ಉಪಪನ್ನ ಎಂದರೆ ಆನೆಯ ವೀರ್ಯದಿಂದ ಜನಿಸಿದವನು ಎಂದು ಹೇಳುತ್ತದೆ. ಹೀಗೆ‌ ಆನೆಯ ಕುಲದ ಉದಾಹರಣೆಗಳು ಸಿಗುತ್ತವೆ.
ಹಾಗೆಯೇ ಇಲಿಯ ಹೆಸರಿನ ಬೆಡಗು ಕೆಲವು ಬುಡಕಟ್ಟುಗಳಲ್ಲಿವೆ. ಅಲೆಕ್ಸಾಂಡರನ ಜೊತೆ ಬಂದ ಗ್ರೀಕ್ ವಿದ್ವಾಂಸರು ಮೂಸಿಕಾನಿಸ್ ಎಂದು ಕರೆಯುವುದು ಅವರು ಕಂಡ ಇಲಿ ಕುಲದವರನ್ನು ಎಂದು ಚರಿತ್ರಕಾರರು‌ ಅಭಿಪ್ರಾಯ ಪಟ್ಟಿದ್ದಾರೆ. ದೇಬೀಪ್ರಸಾದ ಚಟ್ಟೋಪಾಧ್ಯಾಯರು ತಮ್ಮ ಲೋಕಾಯತ ಗ್ರಂಥದಲ್ಲಿ ಇವುಗಳನ್ನು ಉಲ್ಲೇಖಿಸುತ್ತಾರೆ.

ಕುಲಗಳಿಗೆ ಗಣಗಳೆಂದೂ ಕರೆಯುತ್ತಿದ್ದರು. ಇಂತಹ ಗಣಗಳ ಮುಖ್ಯಸ್ಥ ಗಣಪತಿ ಎಂದು ಕರೆಯಲ್ಪಟ್ಡ. ವಿವಿಧ ಗಣಗಳ ಗುರುತುಗಳಾದ ಪ್ರಾಣಿ,ಮರ ಮೊದಲಾದವುಗಳನ್ನು ಆಯಾ ಗಣಗಳವರು ಪೂಜಿಸುತ್ತಿದ್ದರು. ಅಂದಿನ ಪೂಜೆಯ ಪದ್ಧತಿ ಎಂದರೆ ಆಯಾ ಪ್ರಾಣಿ, ಪಕ್ಷಿ, ಮರಗಳ ಗುರುತುಗಳನ್ನು ಆಯಾ ಗಣದ ದೇವರ ಗುಡ್ಡ, ತಮ್ಮಡಿ  ನಲಿಕೆಯವರು ಮೊದಲಾದ ಹೆಸರುಗಳುಳ್ಳ ಗಣದ ಆರಾಧನೆಯ ಪದ್ಧತಿಯ ನಿರ್ವಾಹಕ (ಪೂಜಾರಿ, ಪುರೋಹಿತ )  ಧರಿಸಿ ಪೂಜೆ ಮಾಡುತ್ತಿದ್ದ. ಮರದ ಗುರುತು ಹೊಂದಿದ ಕುಲವಾಗಿದ್ದರೆ ಮರದ ಎಲೆಗಳು, ಎಳೆ ರೆಂಬೆಗಳನ್ನು ಧರಿಸಿ, ಪ್ರಾಣಿಯಾಗಿದ್ದರೆ ಪ್ರಾಣಿಯ ಅಸ್ಥಿಪಂಜರದ ಭಾಗವನ್ನು ಮುಖವಾಡದಂತೆ ಧರಿಸಿ ಪಂಜುರ್ಲಿ, ಮೈಸಂದಾಯ ದೈವ ಮತ್ತು ವಿಶ್ವದ ವಿವಿಧ ಬುಡಕಟ್ಟುಗಳಲ್ಲಿ ಮಾಡುತ್ತಿರುವಂತೆ ಆಯಾ ಕುಲದ ಪದ್ಧತಿಯಂತೆ ಪೂಜೆ ಮಾಡುತ್ತಿದ್ದ.

ಗಜ ಕುಲದ ಪೂಜಾರಿ ಗಜಮುಖ ಧರಿಸಿ ಪೂಜೆ ಮಾಡುವುದು ಅಂದಿನ ಸಹಜ ಪದ್ಧತಿಯಾಗಿತ್ತು. ಹೀಗೆ ಗಜಕುಲದ ಗಣಪತಿ ಗಜಮುಖ ಧರಿಸಿದ. ಇದೇ ಗಜಮುಖ ಗಣಪತಿಯ ಉಗಮದ ಮೂಲ. ವಾಜಸೇನಯೀ ಸಂಹಿತೆ, ಬೌಧಾಯನ ಧರ್ಮ ಸೂತ್ರ, ಮಹಾಭಾರತದಂತಹ ಹಲವು ವೈದಿಕ ಗ್ರಂಧಗಳಲ್ಲಿ ಹಲವು ರೂಪದ ಗಣಪತಿಗಳಿದ್ದರೆಂದು ಉಲ್ಲೇಖವಾಗಿದೆ.‌ ಅದರಲ್ಲಿ ನಾಲ್ಕು ರೀತಿಯ ಗಣಪತಿಗಳು ಹೆಚ್ಚು ಪ್ರಚಲಿತವಾಗಿದ್ದರು. ಅವರು ಹೋರಿ ಮುಖ, ಆನೆ ಮುಖ, ಹಾವಿನ ಮುಖ ಹೊತ್ತಿದ್ದರು ಎಂದು ಮಾನವ ಗೃಹ್ಯ ಸೂತ್ರದಲ್ಲಿ ಉಲ್ಲೇಖಿಸಲಾಗಿದೆ. ಗಣಪತಿ ಸ್ತುತಿಯಲ್ಲಿ ಬಳಸುವ ನೂರಾರು ಹೆಸರುಗಳಲ್ಲಿ ವೃಷಭ ( ಹೋರಿ ) ಧ್ವಜ ದ್ವಿಜಿಹ್ವಾ  (ಹಾವು ) ಎಂಬ ಹೆಸರುಗಳೂ ಇವೆ.

ಹಾಗೆಯೇ ಇಲಿ ಕುಲದ ಗಣಪತಿಗೆ ಇಲಿಯ ಮುಖವಾಡ ಧರಿಸಿ ಪೂಜೆ ಮಾಡವುದು ಸಹಜವಲ್ಲವೇ !
ಇದೇ ಪರಿಕಲ್ಪನೆಯನ್ನು ಬಳಸುವುದಾದರೆ ಪಂಜುರ್ಲಿಯನ್ನು ಪೂಜಿಸುವವರು ಹಂದಿ ಅಥವಾ ವರಾಹ ಮುಖ ಗಣಪತಿಯನ್ನು, ಮೈಸಂದಾಯ ದೈವದ ಪೂಜಕರು ಮಹಿಷ ಮುಖ ಗಣಪತಿಯನ್ನೂ ಪೂಜಿಸುತ್ತಾರೆ ಎನ್ನಬಹುದು.  ದಕ್ಷ ಎಂಬುವನು ಟಗರು ಕುಲದ ಗಣಪತಿ ಎನ್ನಬಹುದು. ಮಹಿಷಾಸುರ ಮಹಿಷ ಕುಲದ ಗಣಪತಿಯಾಗಿ ಕಂಡಿರಬಹುದು. ಮಹಿಷಕುಲದ ಶತ್ರುಗಳು ಈ ಗಣಪತಿಗೆ ಮಹಿಷಾಸುರನೆಂದು ಕರೆದಿರುಬಹುದು.
ಇಲಿಯನ್ನೇರಿದ ಆನೆಯ ಚೋದ್ಯ – ಮಾನವ ಇತಿಹಾಸದ ಅತಿ ದೊಡ್ಡ ತಿರುವು.

ಆನೆ ಕುಲದ ದೇವರಗುಡ್ಡ ಆನೆಯ ಮುಖವಾಡ ಧರಿಸಿ ಪೂಜೆ ಮಾಡಿದರೆ, ಇಲಿಯ ಮುಖವಾಡ ಧರಿಸಿ ಇಲಿ ಕುಲದ ಪೂಜಾರಿ ಪೂಜೆ ಮಾಡುತ್ತಿದ್ದ. ಇದು ಸಹಜ ಬುಡಕಟ್ಟು ಪ್ರಕ್ರಿಯೆ. ‌ ಆದರೆ ಗಜಮುಖ ಗಣಪತಿ ಇಲಿಯ ಮೇಲೇರಿದ್ದು ಅತ್ಯಂತ ಅಸಹಜ. ಇಂತಹ ಅಸಹಜ ಕ್ರಿಯೆ ಮಾನವ ಸಮಾಜದಲ್ಲಿ ಮೊತ್ತ ಮೊದಲು ಅತ್ಯಂತ ಅಸಹಜವಾದ ಗುಲಾಮಗಿರಿ ಅಸ್ತಿತ್ವಕ್ಕೆ ಬಂದದ್ದರ ಸಂಕೇತವಾಗಿದೆ. ಮಾನವ ಸಮಾಜದ ಇತಿಹಾಸದ ಅತಿ ದೊಡ್ಡ ತಿರುವಿನ ಹೆಗ್ಗುರುತಾಗಿದೆ.

ಹಿಂದಿನ  ಲೇಖನದಲ್ಲಿ ವಿವರಿಸಿದಂತೆ ಐವತ್ತು ಸಾವಿರ ವರ್ಷಗಳಿಗಿಂತ ಹೆಚ್ಚು ಕಾಲ ಅಮ್ಮ ಕೇಂದ್ರಿತವಾಗಿದ್ದ ಬುಡಕಟ್ಟುಗಳ ನಡುವೆ ಆಹಾರ,ಕಾಡು, ಭೂಮಿ ಮತ್ತಿತರ ಸಂಪತ್ತುಗಳಿಗಾಗಿ ಕಾಳಗಗಳು ಜರುಗತೊಡಗಿದವು. ಮೊದ ಮೊದಲು ಈ ಕಾಳಗದಲ್ಲಿ ಗೆದ್ದವರು ಸೋತವರನ್ನು ಅವಮಾನಿಸಿ ಬಿಟ್ಟು ಬಿಡುತ್ತಿದ್ದರು. ಆದರೆ ಕೃಷಿ , ಪಶು ಸಂಗೋಪನೆಗಳು ಹೆಚ್ಚಾದಂತೆ ಸೋತವರನ್ನು  ವಶಕ್ಕೆ ಪಡೆದು ತಮ್ಮ ಬುಡಕಟ್ಟಿಗೆ ಅಧೀನ ಮಾಡಿಕೊಳ್ಳತೊಡಗಿದರು.

ಇಲ್ಲಿಯವರೆಗಿನ ಮಾನವ ಇತಿಹಾಸದಲ್ಲಿ ಆಹಾರದ ಕೊರತೆಯಿಂದಾಗಿ ಹೆಚ್ಚು ಜನರು ಎಂದರೆ ತಿನ್ನಲು ಹೆಚ್ಚು ಬಾಯಿಗಳು, ಅವರನ್ನು ಜೊತೆ ಇಟ್ಟುಕೊಂಡರೆ ತಮ್ಮ ಹೊಟ್ಟೆಗೇ ಮೂಲ ಎಂದು ಜೊತೆಗೆ ಸೇರಬಯಸುವವರನ್ನೂ ದೂಡುವ ಪರಿಸ್ಥಿತಿ ಇತ್ತು.  ಬೇಟೆಯಿಂದಲೇ ಆಹಾರ ಎನ್ನುವ ಪರಿಸ್ಥಿತಿಯಲ್ಲಿ  ದೊಡ್ಡ ಪ್ರಾಣಿಗಳಿಂದ ಆಹಾರ ಹಲವೊಮ್ಮೆ ಯಥೇಚ್ಛವಾಗಿ ದೊರಕಿದರೂ ಅದನ್ನು ಉಳಿಸಿ ಕೆಲ ದಿನಗಳಷ್ಟೇ  ಕಾಪಿಡುವ ಸಾಧ್ಯತೆ ಇತ್ತು. ದೊಡ್ಡ ಪ್ರಾಣಿಯ ಬೇಟೆಗಳಿಗೆ ಮೊದಲಿಗಿಂತ ಹೆಚ್ಚು ಜನರು ಕೂಡಿ ಬದುಕುವ ಅಗತ್ಯ ಕಂಡರೂ ಅದೂ ಕೂಡಾ ಆಯಾ ಪ್ರಾಣಿಗಳ ಬೇಟೆಗೆ ಎಷ್ಟು ಅಗತ್ಯವೋ ಅಷ್ಟೇ ಎಂಬ ಮಿತಿಗೆ ಒಳಪಟ್ಟಿದ್ದವು. ಅದಕ್ಕಿಂತ ಹೆಚ್ಚಾದರೆ ಬುಡಕಟ್ಟುಗಳು ವಿಭಜನೆಗೊಂಡು ಬೇರೆ ಬೆಡಗು,ಕುಲ ಬುಡಕಟ್ಟುಗಳಾಗುತ್ತಿದ್ದವು. ಒಂದು ಕಾಡಿನ ಭರಿಸುವ ಸಾಮರ್ಥ್ಯಕ್ಕಿಂತ  (carrying capacity )  ಹೆಚ್ಚಾದರೆ  ವಲಸೆ ಹೋಗುತ್ತಿದ್ದವು.

ಆದರೆ ಕೃಷಿ ಧಾನ್ಯ, ಕಾಳಿನ ರೂಪದಲ್ಲಿ, ಪಶು ಸಂಗೋಪನೆಗಳು ಪ್ರಾಣಿಗಳ ದೊಡ್ಡ ಮಂದೆಗಳಾಗಿ ಆಹಾರವನ್ನು ಹಲವು ವರ್ಷಗಟ್ಟಲೆ ಕಾಪಿಡುವ ಸಾಮರ್ಥ್ಯವನ್ನು ಒದಗಿಸಿದವು. ಈ ರೀತಿ ಕಾಪಿಟ್ಟ ಧಾನ್ಯ ಹಾಗೂ ಪಶು ಸಂಪತ್ತು, ಅವುಗಳ ಉಪ ಉತ್ಪನ್ನಗಳನ್ನು ಬೇರೆ ಬುಡಕಟ್ಟುಗಳ ಜೊತೆ ವಿನಿಮಯ ಮಾಡಿ ತಮಗೆ‌ ಅವಶ್ಯವಾದ, ಅವಶ್ಯವಲ್ಲದ ಕೇವಲ ಸ್ಥಾನವನ್ನು ಹೆಚ್ಚಿಸುವ ಚಿನ್ನ,ಬೆಳ್ಳಿ ವಜ್ರ ಮತ್ತಿತರ ಅಪರೂಪದ ವಸ್ತುಗಳನ್ನು ಪಡೆದುಕೊಳ್ಳಲು ಅವಕಾಶ ಒದಗಿಸಿತು.

ಮಾನವ ಇತಿಹಾಸದಲ್ಲಿ ಮೊತ್ತ ಮೊದಲು ದುಡಿಯಲು ಹೆಚ್ಚು ಜನ ಸಿಕ್ಕರೆ ಹೆಚ್ಚು ಭೂಮಿಯನ್ನು ಕೃಷಿಗೆ ಒಳಪಡಿಸುವ, ಪಶು ಮಂದೆಗಳನ್ನು ದೊಡ್ಡದಾಗಿಸುವ ಸಾಧ್ಯತೆ ಒದಗಿತು. ಇದು ಕಾಳಗಗಳಲ್ಲಿ ಸೋತವರನ್ನು ಹಿಡಿತಂದು ದುಡಿಸಿಕೊಳ್ಳುವ ಪದ್ಧತಿಗೆ ನಾಂದಿ ಹಾಡಿತು.

ಗಜ ಕುಲ ಮತ್ತು ಇಲಿ ಕುಲದ ನಡುವೆ ಇಂತಹ ಸಂಘರ್ಷ ನಡೆದಾಗ ಇಲಿ ಕುಲ ಸೋತು ಹೋಗಿರುವ ಸಂದರ್ಭ ಇದೆ. ಹೇಳುವುದಾದರೆ ಸಾಮ್ರಾಟ್ ಖಾರವೇಲನ ಹಸ್ತಿ ಗುಂಫ – ಆನೆಗವಿಯ ಶಾಸನದಲ್ಲಿ ಮೂಷಿಕ ಕುಲದೊಡನೆ ಯುದ್ಧದಲ್ಲಿ ವಿಜೇತರಾದ ದಾಖಲೆ ಇದೆ. ಇಂತಹ ಎಷ್ಟೋ ಆನೆಕುಲಗಳು ಬೇರೆ ಬೇರೆ ಕುಲಗಳೊಡನೆ ಕಾದು ಗೆದ್ದಿರಬಹುದು ಅಥವಾ ಸೋತಿರಬಹುದು. ಅವುಗಳಲ್ಲಿ ಮೂಷಿಕ ಕುಲಗಳೂ ಕೆಲವು ಇರಬಹುದು.

ಗಜಮುಖ ಗಣಪತಿಯ ಕಥನದ ಮೂಲಕ ಮೂಷಿಕ ಕುಲದ ಮೇಲೆ ಅಂತಹುದೊಂದು ಗೆಲುವು ದೈವದ ರೂಪದಲ್ಲಿ , ಅದರ ಪುರಾಣ ಹಾಗೂ ವಿಗ್ರಹಗಳ ರೂಪದಲ್ಲಿ ದಾಖಲೆಗೆ ಒಳಗಾಗಿದೆ. ಅಂದು ಸೋತ ಕುಲ ಗೆದ್ದ ಕುಲದ ಅಧೀನದಲ್ಲಿ ಅವರ ದಾಸರಾಗಿ ವಾಸ ಮಾಡುವ ಒತ್ತಾಯಕ್ಕೆ ಒಳಗಾಗುತ್ತಿತ್ತು. ಆಗ ಅವರು ತಮ್ಮ ಸ್ವತಂತ್ರ ಅಸ್ತಿತ್ವದ ಎಲ್ಲ ಕುರುಹುಗಳನ್ನೂ ಗೆದ್ದ ಕುಲದ ಅಧೀನಕ್ಕೊಪ್ಪಿಸಬೇಕಾಗಿತ್ತು. ಅವುಗಳಲ್ಲಿ ಅವರ ಕುಲ ಸಂಕೇತವಾದ ಟೋಟೆಂ ಪ್ರಾಣಿಯ ಪೂಜೆ ಬಹಳ ಮುಖ್ಯ. ಏಕೆಂದರೆ ಅದು ಅವರ ಕುಲದ ಅಸ್ತಿತ್ವ, ಅದರ ಒಗ್ಗಟ್ಟನ್ನು ಕಾಪಾಡಿಕೊಳ್ಳುವ ಹೆಮ್ಮೆಯ ಗುರುತಾಗಿತ್ತು.

ಆದ್ದರಿಂದ ಮೂಷಿಕ ಕುಲದವರು ತಮ್ಮ ಕುಲ ದೈವವನ್ನು ಪೂಜಿಸುವ ಹಕ್ಕನ್ನು ಗೆದ್ದ ಗಜಕುಲ ಕಿತ್ತುಕೊಂಡಿತು ಮಾತ್ರವಲ್ಲ ಮೂಷಿಕ ಕುಲದ ದಾಸ್ಯತ್ವದ ಕುರುಹಾಗಿ ಆನೆಕುಲದ ದೇವರ ಅಂದರೆ ಗಜಮುಖ ಗಣಪತಿಯ ಸೇವೆಯನ್ನು  ಮೂಷಿಕ ಕುಲದ ಗಣಪತಿ ಮಾಡಬೇಕಾಗಿತ್ತು. ಆನೆ ಕುಲದ ಗಣಪತಿಯ ಹಬ್ಬ,ಜಾತ್ರೆಗಳಲ್ಲಿ ಮೂಷಿಕ ಕುಲದ ದಾಸ್ಯತ್ವ ಎಲ್ಲರ ಮುಂದೆ ಪ್ರದರ್ಶನವಾಗಬೇಕೆಂದರೆ, ಮತ್ತೆ ಸ್ವತಂತ್ರವಾಗಿ ಬದುಕುವ ಆಸೆಯನ್ನು ಕಮರಿಸಬೇಕೆಂದರೆ ಈ ಸೇವೆ ಮುಖ್ಯ ಸಂಕೇತವಾಗಿತ್ತು.

ಅದರ ವಾಸ್ತವ ರೂಪವೆಂದರೆ ಗಜಕುಲದ ಪೂಜಾರಿ, ಆನೆಯ ಮುಖವಾಡ ಹಾಕಿಕೊಂಡು ದೈವದ ಕಾರಣಿಕಗಳನ್ನು ನುಡಿಯುವಾಗ ಮೂಷಿಕ ಕುಲದ ಪೂಜಾರಿ ಮೂಷಿಕ ಮುಖವಾಡ ಧರಿಸಿ ಅವನ ಸೇವೆಯನ್ನು ಮಾಡಬೇಕಾಗಿತ್ತು. ಅದರಲ್ಲಿ ಆನೆ ಮುಖವಾಡ ಹೊತ್ತ ಪೂಜಾರಿಯನ್ನು ಹೊತ್ತು ಮೆರವಣಿಗೆ ಮಾಡುವುದೂ ಸೇರಿತ್ತೇನೋ ! ಗಣಪತಿಯನ್ನು ಇಲಿ ಹೊತ್ತು ಸಾಗುವುದಂತೂ ಅದನ್ನು ಸೂಚಿಸುವಂತಿದೆ.

ಬೇರೊಂದು ಕುಲದ ಜನರನ್ನು ದಾಸರನ್ನಾಗಿ ಮಾಡಿಕೊಳ್ಳುವ ಪ್ರಕ್ರಿಯೆ ಕೂಡಾ ವಿಶ್ವಾದ್ಯಂತದ ಪ್ರಕ್ರಿಯೆ. ವಿಶ್ವದ ಮಾನವ ಇತಿಹಾಸದಲ್ಲಿ ಮಾನವರು ಮಾನವರನ್ನು ಗುಲಾಮರಾಗಿ ಮಾಡಿಕೊಳ್ಳುವ ಕ್ರಿಯೆ ಮಹಿಳೆಯರ ಅಧೀನ ಸ್ಥಿತಿಗೆ, ಲೈಂಗಿಕ ಗುಲಾಮಗಿರಿಗೆ ಕಾರಣವಾಯ್ತು ಎಂಬ ವಿವರಗಳು ಮುಂದಿನ ಸಂಚಿಕೆಯಲ್ಲಿ.

| ಮುಂದಿನವಾರ |

‍ಲೇಖಕರು Admin

13 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading