ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ನಾಗರಾಜ್ ಅಂಕಣ- ಏಕಚಕ್ರಾಧಿಪತ್ಯ ಸಿಂಡ್ರೋಮ್

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

ಪ್ರಧಾನಿ ಪಟ್ಟ ಸ್ವೀಕರಿಸಿದ ನಂತರ ಮೋದಿಯವರು ಮೊತ್ತ ಮೊದಲ ಬಾರಿಗೆ ಸಂಸತ್ ಭವನವನ್ನು ಪ್ರವೇಶಿಸುತ್ತಿದ್ದಾರೆ. ಸಂಸತ್ ಭವನದ ಮೊದಲ ಮೆಟ್ಟಿಲಿಗೆ ಮಂಡಿಯೂರಿ, ಶಿರಬಾಗಿ ವಿನೀತರಾಗಿ ನಮಸ್ಕರಿಸುತ್ತಿದ್ದಾರೆ. ಈ ಚಿತ್ರ ಹಲವು ಕೋಟ್ಯಾಂತರ ಭಾರತೀಯರನ್ನು ಸೆಳೆಯಿತು. ಅಹಾ! ಏನು ವಿನಯ, ಸಂಸತ್ತು ಎಂದರೆ ಎಷ್ಟೊಂದು ಗೌರವ. ಇಲ್ಲಿಯವರೆಗೆ ಯಾರಾದರೂ ಪ್ರಧಾನಿ ಹೀಗೆ ಮಾಡಿದ್ದಾರಾ ! ಎಂಬಂತಹ ಉದ್ಗಾರಗಳು ಸಾಮಾನ್ಯ ಜನರಿಂದ ಹೊರಬಿದ್ದವು. ಮಾಧ್ಯಮಗಳು ಭೋರ್ಗರೆದವು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆಯ ಮಹಾಪೂರ.

ಆದರೆ ನಂತರದ ಏಳು ವರ್ಷಗಳಲ್ಲಿ ಸಂಸತ್ತಿನ ಸ್ಥಿತಿ ಎಲ್ಲಿಗೆ ಬಂದಿದೆ ಎಂಬುದು ಪ್ರಜ್ಞಾವಂತ ಜನರಿಗೆ ಮಾತ್ರ ತಿಳಿದಿರುವ ಸಂಗತಿ.

ಅಂತಹುದೇ ಮತ್ತೊಂದು ರೂಪಕವನ್ನು ಆಗಲೇ ಸೃಷ್ಟಿಸಿದ್ದಾರೆ ನಮ್ಮ ಆಧುನಿಕ ರೂಪಕ ಸಾಮ್ರಾಜ್ಯ ಚಕ್ರವರ್ತಿ. ಪ್ರಧಾನಿಯವರು ಸಂಸತ್ತಿನಲ್ಲಿ ತಮ್ಮ ಮೊದಲ ಭಾಷಣ ಮಾಡುತ್ತಿದ್ದಾರೆ. ಅದೂ ಅಂದು ಬಿಜೆಪಿ ಅಲ್ಪಮತ ಹೊಂದಿದ್ದ ರಾಜ್ಯ ಸಭೆಯಲ್ಲಿ. ಅದು ಸಂಸದೀಯ ರಂಗದ ಪರಿಣತ  ಹಿರಿಯರ ಸಭೆ ಕೂಡಾ. ‘ದೇಶವನ್ನಾಳುತ್ತಿದ್ದ ಸರ್ಕಾರಗಳು ರಾಜ್ಯಗಳ ಅಭಿಪ್ರಾಯ, ಒತ್ತಾಯಗಳನ್ನು ಕಡೆಗಣಿಸುತ್ತಿದ್ದವು. ನಾವು ಅದನ್ನು ಬದಲಾಯಿಸುತ್ತೇವೆ. ದೊಡ್ಡಣ್ಣನ ಧೋರಣೆ ಅನುಸರಿಸುವುದಿಲ್ಲ. ರಾಜ್ಯಗಳನ್ನು ಗೌರವಿಸುತ್ತೇವೆ. ನಾವೆಲ್ಲರೂ ದೇಶದ ಅಭಿವೃದ್ಧಿಗಾಗಿ ಒಟ್ಟುಗೂಡಿ ಕೆಲಸ ಮಾಡಬೇಕಾದ ಅಗತ್ಯ ಇದೆ. ನಾವು ಸಹಕಾರಿ ಒಕ್ಕೂಟ ತತ್ವವನ್ನು‌ ಪಾಲಿಸುತ್ತೇವೆ’.

ನಂತರ ಸಹಕಾರಿ ಒಕ್ಕೂಟ ತತ್ವ (cooperative federalism) ಎಂಬ ಮಾತು ಲೆಕ್ಕವಿಲ್ಲದಷ್ಟು ಬಾರಿ, ಸಂಸತ್ತಿನಲ್ಲಿ, ಅದರ ಹೊರಗೆ, ಕೆಂಪುಕೋಟೆಯ ಮೇಲೆ, ವಿದೇಶಗಳ ಸಂಸತ್ತಿನಲ್ಲಿ ಮತ್ತೆ ಮತ್ತೆ ಪುನರುಚ್ಛಾರಗೊಳ್ಳುತ್ತಲೇ ಇದೆ. ಟೀಂ ಇಂಡಿಯಾ ಎಂಬುದು ಅವರ ಹಲವು ಸಭೆಗಳಲ್ಲಿ ಎಲ್ಲರ ಗಮನ ಸೆಳೆಯುವ ಬೆನ್ನ ಹಿಂದಿನ ಬ್ಯಾನರ್.

2014 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಒಕ್ಕೂಟ ಸರ್ಕಾರ ಮತ್ತು ರಾಜ್ಯಗಳ ಸಂಬಂಧದ ಬಗ್ಗೆ ತನ್ನ ಪ್ರಣಾಳಿಕೆಯ ಮೂಲಕ ಜನರಿಗೆ ಕೊಟ್ಟ ಭರವಸೆಗಳು ಹೀಗಿದ್ದವು: ‘ಪರಸ್ಪರ ಸಮಾಲೋಚನೆಯ ಮೂಲಕ ಕೇಂದ್ರ ರಾಜ್ಯ ಸಂಬಂಧಗಳನ್ನು ಸಮಾನ ಸ್ಥಿತಿಗೆ ತರುತ್ತೇವೆ. ಸೌಹಾರ್ದಯುತವನ್ನಾಗಿ ಮಾಡುತ್ತೇವೆ. ರಾಷ್ಟ್ರದ ಅಭಿವೃದ್ಧಿಗೆ ರಾಜ್ಯಗಳೇ ಚಾಲಕರು’ ಬಹಳ ಸ್ವಾಗತಾರ್ಹವಾದ ಮಾತುಗಳು ಎಂದು ಭಾವಿಸುದುದು ಸಹಜವೇ ಆಗಿತ್ತು.

ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಮೋದಿಯವರು ಹಲವು ಬಾರಿ ಅಂದಿನ ಒಕ್ಕೂಟ ಸರ್ಕಾರದ ಬಗ್ಗೆ ಮಾಡಿದ ಕಟು ಟೀಕೆಗಳು ದೇಶದ ಮುಖ್ಯಮಂತ್ರಿಗಳು, ರಾಜಕೀಯ ಧುರೀಣರಿಗೆ ಪರಿಚಿತವಾಗಿದ್ದವೇ. ಆದ್ದರಿಂದ ಈ ಮಾತುಗಳು ಹೊಸ ವಾತಾವರಣವನ್ನು ಸೃಷ್ಟಿಸುತ್ತವೆ ಎಂದು ಭಾವಿಸಿದವರು ಹಲವರು. ಆದರೆ ಒಕ್ಕೂಟ ತತ್ವ ಈಗ ಯಾವ ಗತಿ ಹಿಡಿದಿದೆ ಎಂಬುದಕ್ಕೆ ದಿನ ದಿನವೂ ದೃಷ್ಟಾಂತಗಳು ದೊರಕುತ್ತವೆ.

ರಾಜ್ಯಗಳ ಸ್ವಾಯತ್ತತೆ, ಒಕ್ಕೂಟದೊಂದಿಗಿನ ಸಂಬಂಧಗಳ ಬಗೆಗಿನ ಚರ್ಚೆಯನ್ನು ಐದು  ಭಾಗವಾಗಿ ವಿಂಗಡಿಸಿಕೊಳ್ಳುತ್ತಾರೆ. ರಾಜಕೀಯ, ಆರ್ಥಿಕ, ಆಡಳಿತಾತ್ಮಕ, ಸಂವಿಧಾನಿಕ ಹಾಗೂ ಕಾನೂನಾತ್ಮಕ ಮತ್ತು ಸಾಂಸ್ಕೃತಿಕ – ಭಾಷಿಕ ಎಂಬ ಈ ಎಲ್ಲ ಸಂಬಂಧಗಳನ್ನೂ ವ್ಯಾಪಿಸುವಂತೆ ಮೋದಿ- ಬಿಜೆಪಿ- ಆರೆಸ್ಸೆಸ್ ಸರ್ಕಾರದ ಏಕಚಕ್ರಾಧಿಪತ್ಯವನ್ನು ಸ್ಥಾಪಿಸಲು ಈ ಏಳು ವರ್ಷಗಳ ಕಾಲವೂ ನಿರಂತರವಾಗಿ ಹಲ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂವಿಧಾನ ದತ್ತವಾದ ರಾಜ್ಯಗಳ ಹಕ್ಕುಗಳನ್ನು, ಅಧಿಕಾರವನ್ನು ಕಾಲಕಸದಂತೆ ತುಳಿಯಲಾಗಿದೆ.

ರಾಜ್ಯ ಪಟ್ಟಿಯಲ್ಲಿರುವ, ಒಕ್ಕೂಟ ಸರ್ಕಾರದ ವ್ಯಾಪ್ತಿಗೆ ಬರದ ಕೃಷಿ ಕಾನೂನುಗಳ ಪ್ರಶ್ನೆಯಿರಲಿ, ಆಹಾರದ ವಿತರಣೆ,ಕಾನೂನು ಸುವ್ಯವಸ್ಥೆ, ಆರೋಗ್ಯವಿರಲಿ, ಎರಡು ಸರ್ಕಾರಗಳಿಗೆ ಸೇರಿದ ಪಟ್ಟಿಗೆ ಬರುವ ಹೊಸ ಶಿಕ್ಷಣ ನೀತಿಯಿರಲಿ, ಭಾಷಾ ನೀತಿ, ವಿದ್ಯುತ್ ಖಾಸಗೀಕರಣವಿರಲಿ, ಬೆಲೆ ಏರಿಕೆ ನಿಯಂತ್ರಣ, ನಗರಾಭಿವೃದ್ಧಿ, ಉದ್ಯೋಗ ನಿರ್ಮಾಣ, ನೀರಾವರಿಯಿರಲಿ, 15 ನೇ ಹಣಕಾಸು ಆಯೋಗವಿರಲಿ, ಗಣಿ, ಕೈಗಾರಿಕೆ, ಅರಣ್ಯ, ಪರಿಸರ ಹೀಗೆ ಜನರ ಬದುಕಿನ ಹಲವು ರಂಗಗಳಲ್ಲಿ ರಾಜ್ಯಗಳ ಜೊತೆ ಯಾವ ಸಮಾಲೋಚನೆ ಮಾಡದೆ ಏಕಪಕ್ಷೀಯವಾಗಿ ಕ್ರಮಗಳನ್ನು ರಾಜ್ಯಗಳ ಮೇಲೆ ಹೇರಲಾಗಿದೆ.

ರಾಜ್ಯಗಳ ಅಧಿಕಾರ ಮಾತ್ರವಲ್ಲ, ಹಣಕಾಸು ಸಂಪನ್ಮೂಲಕ್ಕೆ ಧಕ್ಕೆಯಾಗಿದೆ. ಅದೇ ಸಮಯದಲ್ಲಿ ಜನಸಾಮಾನ್ಯರ ಬದುಕಿನ ಮೇಲೆ ಈ ಕ್ರಮಗಳಿಂದ ಉಂಟಾದ ಪರಿಣಾಮಗಳನ್ನು ಸುಧಾರಿಸಲು ರಾಜ್ಯ ಸರ್ಕಾರಗಳು ಅಪಾರ ವೆಚ್ಚ ಮಾಡಬೇಕಾಗಿದೆ. ದಿಲ್ಲಿ ಸರ್ಕಾರದಿಂದ ಹೊರಟ ಒಂದೊಂದು ಸುತ್ತೋಲೆ, ಸರ್ಕಾರಿ ಆಜ್ಞೆಗಳಲ್ಲಿಯೂ, ಅಂಗೀಕರಿಸಿದ ಕಾನೂನುಗಳಲ್ಲಿಯೂ ರಾಜ್ಯಗಳ ಹಕ್ಕು ಅಧಿಕಾರಗಳಿಗೆ ಕತ್ತರಿ‌ಹಾಕಲ್ಪಟ್ಟಿದೆ ಎಂಬುದನ್ನು ಎಚ್ಚರದಿಂದ ಗಮನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಎಲ್ಲ ವಿಭಾಗಗಳು, ಇಲಾಖೆಗಳ ಬಗೆಗಿನ‌ ವಿವರಗಳನ್ನರಿಯದೆ ಈ ಕುತಂತ್ರಗಳ ಪ್ರಮಾಣದ ಅರಿವಾಗುವುದಿಲ್ಲ. ಹಿಂದೀ ಹೇರಿಕೆಗೆ ಹೇಗೆಲ್ಲ, ಏನೆಲ್ಲ ಕುತ್ಸಿತ, ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂಬುದನ್ನು ಗಮನಿಸಿ. ರೈಲ್ವೆ, ಮೆಟ್ರೋ, ಅಂಚೆ ಇಲಾಖೆ, ಬ್ಯಾಂಕ್, ಇತರ ಒಕ್ಕೂಟ ಸರ್ಕಾರದ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ಪರೀಕ್ಷೆಗಳು, ಟೆಸ್ಟ್‌ಗಳು, ಉದ್ಯೋಗ ಸಂದರ್ಶನಗಳು ಹೀಗೆ ಎಲ್ಲ ಮಾರ್ಗಗಳ ಮೂಲಕ ಹಿಂದೀ ಹೇರಿಕೆ ಸಾಮಾನ್ಯ ಜನರಿಗೆ, ಉದ್ಯೋಗಾರ್ಥಿ ಯುವಜನರಿಗೆ ತೊಂದರೆ ಉಂಟುಮಾಡಲಾಗುತ್ತಿದೆ.

ಸ್ಥಳಾಭಾವದಿಂದ, ಕೊರೊನಾ ನಿಯಂತ್ರಣಕ್ಕೆ ಉಂಟಾಗಿರುವ ಹಾನಿಯ‌ ಬಗ್ಗೆ ಗಮನ‌ ಕೇಂದ್ರೀಕರಿಸುವ ಉದ್ದೇಶದಿಂದ ಮುಖ್ಯವಾದ ಕೆಲವು ಕ್ರಮ, ವಿಧಾನಗಳ ಪಟ್ಟಿಯನ್ನು ಮಾತ್ರ ಇಲ್ಲಿ ಕೆಳಗೆ ನೀಡಲಾಗಿದೆ. ಜಗವರಿಯೆ, ದಿಲ್ಲಿಯ ಒಬ್ಬ ಚಕ್ರವರ್ತಿ ಅಥವಾ ಬಾದಶಹಾ ತನ್ನ  ಅಧೀನದಲ್ಲಿಲ್ಲದ ಪ್ರಾಂತವೊಂದನ್ನು ಆಕ್ರಮಿಸಲು ತನ್ನೆಲ್ಲಾ ಗಜ, ತುರಗ, ಬಿಲ್ಲಾಳು, ಕಾಲಾಳುಗಳನ್ನೊಳಗೊಂಡ ಚತುರಂಗ ಸೈನ್ಯ ಬಲ, ಅವುಗಳ ಸೇನಾಧಿಪತಿಗಳು, ದಂಡುಗಳ ನಾಯಕರು, ಮಂತ್ರಿಗಳ ಸಮೇತ ಏಕಾ ಏಕಿ ಧಾಳಿಯಿಟ್ಟಂತೆ ಬಂಗಾಲದ ಮೇಲೆ, ಸ್ವಲ್ಪ ಮಟ್ಟಿಗೆ ತಮಿಳುನಾಡು, ಕೇರಳದ ಮೇಲೆ ಚುನಾವಣೆಗಳ ಸಮಯದಲ್ಲಿ ಧಾಳಿ ಮಾಡಿದ್ದು, ಸೋತ ಮೇಲೂ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸುವುದು, ಶಾಸಕರನ್ನು ಕೊಳ್ಳುವುದು, ಹಲವು ರಾಜ್ಯಗಳಲ್ಲಿ, ರಾಜ್ಯಪಾಲರ ದುರುಪಯೋಗ, ಆದಾಯ ತೆರಿಗೆ, ಇಡಿ, ಸಿಬಿಐ, ಎನ್‌ಐಎ, ಚುನಾವಣಾ ಆಯೋಗಗಳ ದುರುಪಯೋಗದ ಮೂಲಕ ವಿರೋಧ ಪಕ್ಷಗಳ ನಾಶದ ಪ್ರಯತ್ನಗಳು ಇಂತಹ ಏಕಚಕ್ರಾಧಿಪತ್ಯ ಸ್ಥಾಪನೆಯ ಆತುರವನ್ನು ತೋರುತ್ತದೆ.

ದಿಲ್ಲಿ, ಬಂಗಾಲ, ಮಹಾರಾಷ್ಟ್ರ, ಕೇರಳ ಸರ್ಕಾರಗಳಿಗೆ ನಿರಂತರ ಕಿರುಕುಳ, ಇತ್ತೀಚೆಗೆ ಬಂಗಾಲದ ಮುಖ್ಯ ಕಾರ್ಯದರ್ಶಿ ಪ್ರಸಂಗ, ಡಿಕೆ ಶಿವಕುಮಾರ್, ರೇವಣ್ಣ, ಕುಮಾರಸ್ವಾಮಿಯ ಆಪ್ತರು, ಡಿಎಂಕೆ ನಾಯಕರು, ಟಿಎಂಸಿ ನಾಯಕರ ಮೇಲೆ ಧಾಳಿ, ಪಿಣರಾಯ್ ವಿಜಯನ್ ಮೇಲೆ ಸುಳ್ಳು ಅಪಾದನೆ ಹೊರಿಸುವ ಪ್ರಸಂಗಗಳು ಇವುಗಳಿಗೆ ಕುಖ್ಯಾತ ಉದಾಹರಣೆಗಳು.

ಇಂತಹ ಪ್ರಯತ್ನಗಳು ಕೊರೊನಾ ಸಮಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಎಂತಹ ಹಾನಿ ಉಂಟಾಗಿರಬಹುದೆಂದು ಊಹಿಸಬಹುದು. ಬೇರೆ ಪಕ್ಷಗಳ ಸರ್ಕಾರಗಳಿರಲಿ ಕರ್ನಾಟಕದ ಯಡಿಯೂರಪ್ಪ ಸರ್ಕಾರದಂತೆ ತಮ್ಮದೇ ಪಕ್ಷದ ಸರ್ಕಾರಗಳನ್ನೂ ಅಸ್ಥಿರಗೊಳಿಸುವ  ಪ್ರಯತ್ನಗಳೂ ಕೂಡ ರಾಜ್ಯ ಸರ್ಕಾರಗಳ ಮೇಲಿನ ಧಾಳಿಗಳ ಒಂದು ಭಾಗ. ಹೀಗೆ ರಾಜ್ಯ ಸರ್ಕಾರಗಳನ್ನು, ಅವುಗಳನ್ನು ನಡೆಸುತ್ತಿರುವ ಪಕ್ಷಗಳನ್ನು ದ್ವೇಷಿಸುತ್ತಾ, ಧಾಳಿ‌ ಮಾಡುತ್ತಾ ಅವರೊಡನೆ ಸಹಕಾರದ ಮಾತಾಡುವುದಾದರೂ ಹೇಗೆ? ಎಲ್ಲರೂ ಒಟ್ಟಾಗಿ ಕೊರೋನಾ ನಿವಾರಣೆಯ ಒಂದೇ ಗುರಿಯಿಂದ ಕೆಲಸ ಮಾಡುವ ಮನಸ್ಥಿತಿ ರೂಪುಗೊಳ್ಳುವುದಾದರೂ ಹೇಗೆ?

ರಾಜ್ಯ ಸರ್ಕಾರಗಳನ್ನು ಪಕ್ಕಕಿಟ್ಟು ಅಧಿಕಾರಿಗಳ ಜೊತೆಗೆ ಒಕ್ಕೂಟ ಸರ್ಕಾರದ ಮಂತ್ರಿಗಳು, ಸ್ವತಃ ಪ್ರಧಾನಮಂತ್ರಿ ವ್ಯವಹರಿಸುವುದು, ರಾಜ್ಯ ಸರ್ಕಾರಗಳಿಗೆ ದತ್ತವಾದ ಅಧಿಕಾರದ ವಿಷಯಗಳಾದ ಕೃಷಿಯಂತಹ ರಂಘಳಲ್ಲಿ ರೈತರಿಗರ ನೇರ ಹಣ ವಿತರಣೆ ಕಾರ್ಯಕ್ರಮ ಮಾಡುವುದು, ಇಂತಹ ಕ್ರಮಗಳು ಸಂವಿಧಾನದ ಸ್ಪಷ್ಟ ಉಲ್ಲಂಘನೆ. ಇಂತಹ ಕ್ರಮಗಳನ್ನು ಎಗ್ಗಿಲ್ಲದೆ ಮಾಡುವುದು ಮೋದಿಯವರ ‘ಸಹಕಾರಿ ಒಕ್ಕೂಟ ತತ್ವ’ದ ನಿಜ ಸ್ವರೂಪವನ್ನು ತೋರಿಸುತ್ತದೆ. ಭಾರತ ದೇಶದ ಚಕ್ರವರ್ತಿ ನಾನು ಎಂಬ ಫ್ಯೂಡಲ್ ದರ್ಪದ ಪ್ರದರ್ಶನವಾಗುತ್ತದೆ. ರಾಜ್ಯಗಳ ಮುಖ್ಯಸ್ಥರನ್ನು ಸಾಮಂತರಂತೆ, ಮಾಂಡಲಿಕರಂತೆ ನಡೆಸಿಕೊಳ್ಳುವ ವರ್ತನೆಯಾಗುತ್ತದೆ.

ಕೊರೋನಾ ನಿರ್ವಹಣೆಯಲ್ಲಿ ಚಕ್ರವರ್ತಿ
ಇಂತಹ ದರ್ಪ ಕೊರೊನಾ ನಿರ್ವಹಣೆಯಲ್ಲಿ ಹೆಜ್ಜೆ ಹೆಜ್ಜೆಗೂ ಎದ್ದು ತೋರುತ್ತದೆ. ಸಂವಿಧಾನದಲ್ಲಿ ನಿರ್ದೇಶಿತವಾದ  ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳ ಮತ್ತು ಜಂಟಿ ಎಂಬ‌ ಮೂರು ಅಧಿಕಾರ ಮತ್ತು ಕರ್ತವ್ಯದ ಪಟ್ಟಿಗಳಲ್ಲಿ ಕೊರೋನಾ ನಿರ್ವಹಣೆಯಲ್ಲಿ ಅನ್ವಯವಾಗುವ ರೀತಿಯನ್ನು ಪರಿಶೀಲಿಸೋಣ. ಸಂವಿಧಾನದ ಏಳನೇ ಶೆಡ್ಯೂಲ್‌ನ ಒಕ್ಕೂಟ ಸರ್ಕಾರದ ಪಟ್ಟಿಯಲ್ಲಿರುವ ಅಂತರರಾಜ್ಯ ಕ್ವಾರಂಟೈನ್, ಅಂತರರಾಜ್ಯ ವಲಸೆಗಳು ಕೊರೊನಾ ನಿಯಂತ್ರಣಕ್ಕೆ ಅನ್ವಯವಾಗುತ್ತವೆ.

ರಾಜ್ಯ ಸರ್ಕಾರದ ಪಟ್ಟಿಯಲ್ಲಿ ಕೊರೋನಾಕ್ಕೆ ಅನ್ವಯವಾಗುವ ಎರಡು ಅಂಶಗಳು – ಸಾರ್ವಜನಿಕ ಆರೋಗ್ಯ ಹಾಗೂ ನೈರ್ಮಲ್ಯ, ಆಸ್ಪತ್ರೆಗಳು, ಚಿಕಿತ್ಸಾ ಕೇಂದ್ರಗಳು. ಜಂಟಿ ಪಟ್ಟಿಯಲ್ಲಿ ಸಾಮಾಜಿಕ ಭದ್ರತೆ ಮತ್ತು ಸಾಮಾಜಿಕ ವಿಮೆ ಇದೆ. ಕೊರೋನಾದಂತಹ ಮಹಾ ಸಾಂಕ್ರಾಮಿಕ ಪಿಡುಗಿನ‌ ಸಂದರ್ಭದಲ್ಲಿ ಬಹಳ ಮುಖ್ಯವಾದದ್ದು ಅಂತರರಾಷ್ಟ್ರೀಯ ವಲಸೆ ಮತ್ತು ಕ್ವಾರಂಟೈನ್.

2020 ರ ಜನವರಿಯ ಆರಂಭದಲ್ಲಿಯೇ ವಿಶ್ವದ ವಿವಿಧ ದೇಶಗಳಲ್ಲಿ ಕೊರೋನಾ ಸೋಂಕುಗಳು ವರದಿಯಾಗತೊಡಗಿದೊಡನೆಯೇ ಅಂತರರಾಷ್ಟ್ರೀಯ ಪ್ರಯಾಣಗಳ ಸಂಪೂರ್ಣ ನಿಯಂತ್ರಣ ಅಗತ್ಯವಾಗಿತ್ತು. ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ್ದರೆ ಕೊರೊನಾ ದೇಶದೊಳಗೆ ಪ್ರವೇಶ ಮಾಡುವುದನ್ನೇ ತಡೆಯಬಹುದಿತ್ತು. ಅಂತಹ ಪ್ರವಾಸಿಗರಿಗೆ  ಆಗ ಕ್ವಾರಂಟೈನ್ ಕಡ್ಡಾಯಗೊಳಿಸಿ‌ ಕಟ್ಟುನಿಟ್ಟಾಗಿ ಜಾರಿ ಮಾಡಲು ಸಾಧ್ಯವಾಗಿದ್ದರೆ ಕೂಡಾ ನಿಯಂತ್ರಣ ಸಾಧ್ಯವಾಗುತ್ತಿತ್ತು. ಆದರೆ ಮೋದಿ ಸರ್ಕಾರ ಇದರಲ್ಲಿ ವಿಫಲವಾಯಿತು.

ಟ್ರಂಪ್ ಮೇಳ‌ ಮಾತ್ರವಲ್ಲ ತಬ್ಲೀಗಿಗಳ‌ ಮೇಳಕ್ಕೂ ಅಗತ್ಯವಾದ ಎಲ್ಲ ಅನುಮತಿ, ವೀಸಾಗಳನ್ನು ನೀಡಿದ್ದು ಮೋದಿ‌ ಸರ್ಕಾರವೇ ಎಂಬುದನ್ನು, ಮರೆಯದಿರೋಣ. ಅವರುಗಳ ಟೆಸ್ಟ್, ಕ್ವಾರಂಟೈನ್ ಎರಡೂ ಮಾಡದೆ ದೇಶದೊಳಕ್ಕೆ ಪ್ರವೇಶಗೊಳಿಸಿ ನಂತರ‌ ಅವರ ಮೇಲೆಯೇ ಎಲ್ಲ ಅಪಾದನೆ, ವಿಷಪೂರಿತ ಅಪಪ್ರಚಾರ ನಡೆಸಲಾಯಿತು. ಆ ಸಮಯದಲ್ಲಿ ವಿದೇಶಗಳಿಂದ ಬೆಂಗಳೂರಿಗೆ ಬಂದ ಪ್ರಯಾಣಿಕರು ಇಲ್ಲಿ ಕೊರೋನಾ ಹರಡಿದರು.

ಹಾಗೆಯೇ ಇಂತಹ ಸಮಯದಲ್ಲಿ ಅಂತರರಾಜ್ಯ ಪ್ರಯಾಣಗಳನ್ನು ತಡೆಯುವುದು, ಕ್ವಾರಂಟೈನ್ ಕಟ್ಟುನಿಟ್ಟಾಗಿ ಮಾಡುವುದು, ಈ ಬಗ್ಗೆ ಅರಿವು ಮೂಡಿಸುವುದು ಸಂವಿಧಾನದ ಪ್ರಕಾರ ಮೋದಿ ಸರ್ಕಾರದ ಆದ್ಯ ಕರ್ತವ್ಯವಾಗಿತ್ತು.‌ ಭಾರತದ ಮಹಾನಗರಗಳು ಮತ್ತು ಇತರ ನಗರಗಳಿಗೂ ಕೋಟ್ಯಾಂತರ ಸಂಖ್ಯೆಯಲ್ಲಿ ಬೇರೆ ಬೇರೆ ರಾಜ್ಯಗಳಿಂದ ವಲಸೆ ಬಂದು ನೆಲಸಿರುವ ದುಡಿಮೆಗಾರರು ಆಯಾ ಸ್ಥಳದಲ್ಲಿಯೇ ಇರುವಂತೆ ಮಾಡುವುದು ಬಹಳ ತುರ್ತು ಅಗತ್ಯವಾಗಿತ್ತು. ಅದಕ್ಕೆ ಬೇಕಾದ್ದು ಅವರುಗಳಿಗೆ ಊಟ ಮತ್ತಿತರ ನಿತ್ಯ ಅಗತ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡಿ ಅವರುಗಳು ಮರುವಲಸೆ ಹೋಗುವುದನ್ನು ತಪ್ಪಿಸುವುದು ಒಕ್ಕೂಟ ಸರ್ಕಾರದ ಮೇಲೆ ಸಂವಿಧಾನ ಹೊರಿಸಿದ ಹೊಣೆಗಾರಿಕೆಯಾಗಿತ್ತು. ಅದನ್ನು ನಿರ್ವಹಿಸದ ಪರಿಣಾಮವಾಗಿ ಕೊರೋನಾ ಹಬ್ಬಿತು.

ಜನತೆಯ ಮೇಲೆ ಸಂಕಟವನ್ನು , ರಾಜ್ಯಗಳ ಮೇಲೆ ಬಹುದೊಡ್ಡ ಹೊರೆಯನ್ನು ಹೇರಲಾಯಿತು.‌ ಇದರಿಂದಾಗಿ ನಗರಗಳಲ್ಲಿ ಹಬ್ಬಿದ್ದ ಕೊರೋನಾ ಬೀಜವನ್ನು ದೇಶಾದ್ಯಂತ ಹಳ್ಳಿಗಳಿಗೆ ಕೊಂಡು ಹೋಗಿ‌ ಬಿತ್ತಿದಂತಾಯ್ತು. ಈಗಿನ ಎರಡನೇ ಅಲೆ ಹಳ್ಳಿಗಳಲ್ಲಿ ಬಿರುಸಾಗಿರುವುದಕ್ಕೆ, ಅಪಾರ ಸಾವು ನೋವಿಗೆ ಕಾರಣವಾಯಿತು. ಇಂತಹ ಸಂದರ್ಭದಲ್ಲಿ ರಾಜ್ಯಗಳ ಮೇಲೆ ಬಿದ್ದ ಹಣಕಾಸಿನ ಭಾರದ ಬಹುಭಾಗವನ್ನು ಮೋದಿ ಸರ್ಕಾರ ಭರಿಸಬೇಕಾಗಿತ್ತು. ಆರೋಗ್ಯ ಸೌಲಭ್ಯ ಕಲ್ಪಿಸಲು ಸಹಾಯ ಹಸ್ತ ಚಾಚಬೇಕಾಗಿತ್ತು.

ತುರ್ತಾಗಿ ಪ್ರತಿ ರಾಜ್ಯದಲ್ಲೂ ಖಾಯಂ ಮತ್ತು ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣ, ಡಾಕ್ಟರ್, ನರ್ಸ್‌ಗಳ ನೇಮಕಾತಿಗೆ ಒಕ್ಕೂಟ ಸರ್ಕಾರದ ಯೋಜನೆ ಅಗತ್ಯವಾಗಿತ್ತು. ಆದರೆ ಆ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದಿದ್ದುದು ಜನ ಸಾಮಾನ್ಯರಿಗೆ ಬಹು ದೊಡ್ಡ ಹಾನಿ ಉಂಟುಮಾಡಿತು.
ಇನ್ನು ವಿಪತ್ತು ನಿರ್ವಹಣಾ ಕಾಯಿದೆ ಒಂದನ್ನು ಸಂವಿಧಾನದ ಜಂಟಿ ಪಟ್ಟಿಯ ಅಡಿಯಲ್ಲಿ ರೂಪಿಸಲಾಗಿದೆ.

ಈ ಕಾಯಿದೆ ವಿಪತ್ತುಗಳ ನಿರ್ವಹಣೆಗೆ ಒಂದು ರಾಷ್ಟ್ರೀಯ ಯೋಜನೆ ರೂಪಿಸಬೇಕು. ಅದನ್ನು ರಾಜ್ಯ ಸರ್ಕಾರಗಳೊಡನೆ ಸಮಾಲೋಚಿಸಿ ರೂಪಿಸಬೇಕೆಂದು ಸ್ಪಷ್ಟವಾಗಿ ನಿರ್ದೇಶಿಸಿದೆ.‌ ಆದರೆ ಮೋದಿಯವರು ಅದಕ್ಕೆ ಬದಲಾಗಿ ದಿಢೀರ್ ಲಾಕ್ ಡೌನ್ ಘೋಷಿಸಿದಂತೆಯೇ ಫರ್ಮಾನು, ಹುಕುಂಶಾಹಿ ಆಡಳಿತ ಆರಂಭಿಸಿದರು. ಅವರು ಹೊರಡಿಸಿದ ರಾಜಾಜ್ಞೆಗಳನ್ನು‌ ತಮ್ಮ ರಾಜ್ಯದ ಪರಿಸ್ಥಿತಿ ಗೆ ಅನುಗುಣವಾಗಿ ತಜ್ಞರ ಸಲಹೆಯಂತೆ ತಿದ್ದುಪಡಿ ಮಾಡಿಕೊಳ್ಳುವುದನ್ನೂ‌ನಿಷೇಧಿಸಲಾಯಿತು.‌

ಸಂಪನ್ಮೂಲಗಳಲ್ಲಿ ಒಕ್ಕೂಟ ಸರ್ಕಾರದ ವಿಸ್ತಾರ, ರಾಜ್ಯ ಸರ್ಕಾರದ ಸೀಮಿತತೆ

ಮೋದಿ ಸರ್ಕಾರದ ಸಚಿವರುಗಳು, ಬಿಜೆಪಿಯ ನಾಯಕರುಗಳಿಂದ ಪದೇ ಪದೇ ರಾಜ್ಯ ಸರ್ಕಾರಗಳೂ ಹೊಣೆ ಹೊರಬೇಕು. ಕೇಂದ್ರ ಸರ್ಕಾರದ ಮೇಲೆಯೇ ಅವಲಂಬಿತವಾಗಬಾರದು ಎಂಬ ಮಾತನ್ನು ಕೇಳುತ್ತೇವೆ. ಅವುಗಳನ್ನು ಬಿಜೆಪಿ ಸಾಮಾಜಿಕ ಮಾಧ್ಯಮಗಳ ವಿಭಾಗ, ಆರೆಸ್ಸೆಸ್ ಸೇವಕರುಗಳು ಸುಂಟರಗಾಳಿಯ ವೇಗದಲ್ಲಿ ಹಬ್ಬಿಸುತ್ತಾರೆ.

ಈ ಮಾತುಗಳನ್ನು ಹೇಳಲು ಈ‌ ನಾಯಕರುಗಳಿಗೆ ನಾಚಿಕೆಯೂ ಆಗುವುದಿಲ್ಲ. ರಾಜ್ಯ ಸರ್ಕಾರಗಳಿಗೆ ಸಂವಿಧಾನ‌ದತ್ತವಾಗಿ ಇದ್ದ ಮುಖ್ಯ ಸಂಪನ್ಮೂಲ ಮಾರಾಟ ತೆರಿಗೆಗಳು.‌ ಸ್ವಲ್ಪ ಮಟ್ಟಿಗೆ ಸ್ಟಾಂಪ್ ಡ್ಯೂಟಿ. ಅವುಗಳಲ್ಲಿ ಪೆಟ್ರೋಲಿಯಂ, ಮದ್ಯ, ಸ್ಟಾಂಪ್ ಡ್ಯೂಟಿ ಈ ಮೂರನ್ನು ಬಿಟ್ಟು ಎಲ್ಲ ತೆರಿಗೆಯ ಹಕ್ಕು ಜಿಎಸ್‌ಟಿಯಲ್ಲಿ ಮಿಳಿತವಾಗಿದೆ. ಹೀಗೆ ರಾಜ್ಯ ಸರ್ಕಾರಗಳ ಆದಾಯ‌ ಮೂಲ ಸೀಮಿತ. ಈಗಂತೂ ಜಿಎಸ್‌ಟಿ ಪಾಲು ಸಿಕ್ಕರೆ ಉಂಟು, ಇಲ್ಲದಿದ್ದರೆ ಇಲ್ಲ. ಮುನ್ಸೂಚನೆ ಇಲ್ಲದೆ, ಸಮಾಲೋಚನೆ ಇಲ್ಲದೆ ಘೋಷಿತವಾದ ಮತ್ತು ವಿಸ್ತರಣೆಯಾಗುತ್ತಾ ಹೋದ ಲಾಕ್ ಡೌನ್ ಈ ತೆರಿಗೆ ಆದಾಯಗಳನ್ನು ಬಂದ್ ಮಾಡಿತು.‌ ‌ವಿಪರೀತ ವೆಚ್ಚದ ಹೊರೆ, ಆದಾಯದ ಕಡಿತದಿಂದ ರಾಜ್ಯ ಸರ್ಕಾರಗಳು ತತ್ತರಿಸಿದವು.

ಅದೇ ಸಮಯದಲ್ಲಿ ಒಕ್ಕೂಟ ಸರ್ಕಾರಕ್ಕೆ ವಿಸ್ತಾರವಾದ ಮತ್ತು ಹಿಗ್ಗುವಂತಹ ಸಂಪನ್ಮೂಲಗಳಿವೆ. ಅದರ ತೆರಿಗೆ ಮೂಲ ಮುಖ್ಯವಾಗಿ  ಆದಾಯ ತೆರಿಗೆ ಮತ್ತು‌ ಕಾರ್ಪೊರೇಟ್ ತೆರಿಗೆ. ಈಗಂತೂ ಪೆಟ್ರೋಲಿಯಂ ಕೂಡಾ ಒಂದು ಮುಖ್ಯ ತೆರಿಗೆ ಮೂಲವಾಗಿದೆ. ಕಾರ್ಪೊರೇಟ್ ತೆರಿಗೆ ಎಂಬುದು ಉತ್ಪಾದನೆ, ಮಾರಾಟ ಇತ್ಯಾದಿಗಳಲ್ಲಿ ತೊಡಗಿದ ಕಂಪನಿಗಳಿಂದ ಬರುವಂತಹುದು. ಕೈಗಾರಿಕಾ ಸಮಾಜದಲ್ಲಿ ಕೈಗಾರಿಕೆಗಳು ಹೆಚ್ಚು ಬೆಳೆಯುತ್ತಾ ಹೋಗುತ್ತವೆ. ಹೆಚ್ಚು ಲಾಭ ಗಳಿಸುತ್ತವೆ. 

ಕೊರೋನಾ ಕಾಲದಲ್ಲಿಯೂ ಅತ್ಯಂತ ಹೆಚ್ಚು ಲಾಭ ಗಳಿಸಿದ, ಜಗತ್ತಿಗೇ ಶ್ರೀಮಂತರಾದವರಿದ್ದಾರೆ. ಅವರುಗಳ ಮೇಲೆ ತೆರಿಗೆ ಹಾಕುವ ಅವಕಾಶ ಮೋದಿ ಸರ್ಕಾರಕ್ಕೆ ಮಾತ್ರ ಇರುವುದು. ಹಾಗೆಯೇ ಐಟಿ, ಬಿಟಿ ಕಂಪನಿಗಳು ಇಂತಹ ನೆಟ್ ಆಧಾರಿತ ಸೇವೆ ಕೊಡುವ ನೂರಾರು ಕಂಪನಿಗಳು ಲಾಭ ಗಳಿಸಿವೆ. ಇವುಗಳು ರಾಜ್ಯ ಸರ್ಕಾರಗಳಿಗೆ ತೆರಿಗೆ ಕೊಡುವುದಿಲ್ಲ.

ಜಗತ್ತಿನಲ್ಲಿಯೇ ಭಾರತ ಬಹಳ ಕಡಿಮೆ ಕಾರ್ಪೊರೇಟ್ ತೆರಿಗೆ, ಆದಾಯ ತೆರಿಗೆ ಸಂಗ್ರಹಿಸುತ್ತಿರುವ ದೇಶ. ಅಮೆರಿಕ ಮತ್ತು ಯುರೋಪಿನ‌ ಹಲವು ದೇಶಗಳು ಭಾರತದ ಒಂದೂವರೆ, ಎರಡು ಪಟ್ಟು ತೆರಿಗೆ ಸಂಗ್ರಹಿಸುತ್ತಿವೆ. ಕೊರೋನಾ ಸಂಕಟದ ಸಮಯದಲ್ಲಿ ಈ‌ ವಿಭಾಗಗಳಿಂದ ತೆರಿಗೆ ಸಂಗ್ರಹಿಸಿ ರಾಜ್ಯಗಳಿಗೆ ಅಗತ್ಯ ಬಜೆಟ್ ನೀಡುವುದು, ಹೊಸ ಆಸ್ಪತ್ರೆಗಳನ್ನು ಕಟ್ಟುವುದು, ಆಕ್ಸಿಜನ್, ಅಗತ್ಯ ಔಷಧಿಗಳ ತಯಾರಿಕೆ, ಲಸಿಕೆ ತಯಾರಿಕೆ ಮಾಡುವುದು, ಎಲ್ಲರಿಗೂ ಉಚಿತವಾಗಿ ಒದಗಿಸುವುದು, ದೇಶದ ಸಾಮಾನ್ಯ ಜನರ ಬವಣೆ ನೀಗಿಸುವ ಪರಿಹಾರ ಕಾರ್ಯಕ್ರಮ ರೂಪಿಸುವುದು ಒಕ್ಕೂಟ ಸರ್ಕಾರದ ಹೊಣೆಹಾರಿಕೆ. ಆದರೆ ಮೋದಿ- ಬಿಜೆಪಿ ಸರ್ಕಾರ ಬೇರೆ ಧರ್ಮದವರು ಸಾಯುವ ಬಗ್ಗೆ ಅವರು ಭಾರತದ ಪ್ರಜೆಗಳು ಎಂಬ ಕಾಳಜಿ ವಹಿಸುವುದಿರಲಿ, ಲಕ್ಷಾಂತರ ಹಿಂದೂಗಳು ಸಾವನ್ನಪ್ಪುತ್ತಿರುವಾಗ ತೆರಿಗೆ ಸಂಗ್ರಹಿಸುವ ತಮ್ಮ ಕರ್ತವ್ಯ ನಿರ್ವಹಿಸದಿರುವುದು ಕ್ರೂರ ನಿರ್ಲಕ್ಷ್ಯ.

ಸಂವಿಧಾನ ನೀಡಿರುವ ಅಧಿಕಾರವನ್ನು ಅವಶ್ಯವಿದ್ದಾಗ ಸೂಕ್ತವಾಗಿ ಬಳಸದಿರುವುದು ಕೂಡ ರಾಜ್ಯಗಳ ಹಕ್ಕು ಮತ್ತು ಸ್ವಾಯತ್ತತೆಗೆ ಎಸಗುವ ಅಪರಾಧ. ಆದರೆ ಮೋದಿ ಸರ್ಕಾರ ತಾವು ರಾಜ್ಯಗಳಿಗೆ ಸಹಾಯ ಮಾಡುವುದತ್ತ ಇರಲಿ. ಅವುಗಳಿಗೆ ಕಾನೂನು ಬದ್ಧವಾಗಿ ದಕ್ಕಬೇಕಾದ ಮೂರು ಲಕ್ಷ ಕೋಟಿ ರೂಗಳನ್ನು ಕೊಡಲು ನಿರಾಕರಿಸಿತು. ಅದಕ್ಕಾಗಿ ತಿಂಗಳುಗಟ್ಟಲೆ ಗುದ್ದಾಡಿದ ಮೇಲೆ ಸ್ವಲ್ಪ ಸ್ವಲ್ಪವಾಗಿ ಕೊಡಲಾರಂಭಿಸಿದೆ.

ಒಕ್ಕೂಟ ಸರ್ಕಾರಕ್ಕೆ ತೆರಿಗೆ ಸಂಪನ್ಮೂಲವಲ್ಲದೆ, ರಿಸರ್ವ್ ಬ್ಯಾಂಕಿನಿಂದ ಕಡಿಮೆ ಬಡ್ಡಿಗೆ ಸಾಲ ಪಡೆಯುವ, ಕೊರತೆ ಬಜೆಟ್ ಮಂಡಿಸಿ ಅದಕ್ಕೆ ರಿಸರ್ವ್ ಬ್ಯಾಂಕುಗಳಿಂದ ಹಣ ಪಡೆಯುವ, ರಿಸರ್ವ್ ಬ್ಯಾಂಕ್ ಮೀಸಲು ಹಣ ಕಸಿದುಕೊಳ್ಳುವ ಅಧಿಕಾರ, ಅವಕಾಶ ಇದೆ. ಸಾರ್ವಜನಿಕ ಬ್ಯಾಂಕುಗಳಲ್ಲಿನ ಠೇವಣಿ ಸಂಗ್ರಹ, ವಿಮಾ ಕಂಪನಿಗಳ ಠೇವಣಿ, ಸಾರ್ವಜನಿಕ ಉದ್ಯಮಗಳ ಉಳಿಕೆ ಹಣ ಇವುಗಳನ್ನು ಕೂಡಾ ತುರ್ತು ಸಮಯದಲ್ಲಿ ಹೊಣೆಗಾರಿಕೆಯಿಂದ ಪಡೆದು ನಂತರ ಹಿಂತಿರುಗಿಸುವ ಅವಕಾಶ ಇದೆ. ಹೀಗೆ ಹಲವು ಮಾರ್ಗಗಳಿವೆ. ಆದರೆ ಬೇಕಾದ್ದು ರಾಜ್ಯಗಳು ಜನರಿಗೆ ನೆರವು ನೀಡಲು ಮತ್ತು ತಾವೇ ತಮ್ಮ ಕರ್ತವ್ಯದ ಮಿತಿಯಲ್ಲಿ ಸಹಾಯ ಮಾಡುವ ಮನಸ್ಸು. ವಿಶ್ವದ ಹಲವು ದೇಶಗಳು ಈ ಮಾರ್ಗಗಳನ್ನು ಬಳಸಿ ಅಲ್ಲಿಯ ಜನರಿಗೆ ಲಕ್ಷಾಂತರ ಕೋಡಿಗಟ್ಟಲೆ ಸಹಾಯ ಮಾಡಿವೆ ಎಂಬುದನ್ನು ಗಮನಿಸೋಣ.

ಒಕ್ಕೂಟ ಸರ್ಕಾರ ತನ್ನ ಆದ್ಯ ಕರ್ತವ್ಯ ನಿರ್ವಹಿಸದಿರುವುದು ಮಾತ್ರವಲ್ಲ ರಾಜ್ಯ ಸರ್ಕಾರಗಳು ಜನರಿಗೆ ಸಹಾಯ ಮಾಡುವುದಕ್ಕೆ ಮುಂದಾದಾಗ ಅದಕ್ಕೆ ಅಡ್ಡಿಯುಂಟು ಮಾಡುವ ಕೆಲಸ ಮಾಡಿದೆ. ರಾಜ್ಯ ಸರ್ಕಾರಗಳು ತಮಗೆ ತುರ್ತಾಗಿ ಅಗತ್ಯವಾದ ಹಣಕ್ಕೆ ರಾಜ್ಯದಲ್ಲಿರುವ ಕಂಪನಿಗಳು ಮತ್ತಿತರ ಮೂಲಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ಪಡೆಯುವುದಕ್ಕೆ ತೆರಿಗೆ ವಿನಾಯತಿ ನಿರಾಕರಿಸಿ ಅಡ್ಡಿ ಉಂಟುಮಾಡಿದೆ. ಪ್ರಧಾನ‌ಮಂತ್ರಿ ಪರಿಹಾರ ನಿಧಿ‌ಕೈಬಿಟ್ಟು PM Cares ಎಂಬ ಸರ್ಕಾರೇತರ ಸಂಸ್ಥೆಯನ್ನು ಸರ್ಕಾರದ ಹೆಸರಿನಲ್ಲಿಯೇ ಸ್ಥಾಪಿಸಿ ದೇಶದೆಲ್ಲ ಕಂಪನಿಗಳು, ಅವು ಯಾವುದೇ ರಾಜ್ಯದಲ್ಲಿದ್ದರೂ ಕೂಡಾ ಕೇವಲ ಈ ಕಂಪನಿಗೆ ಕೊಟ್ಟರೆ ಮಾತ್ರ ತೆರಿಗೆ ಮತ್ತಿತರ ವಿನಾಯತಿಗಳು ಎಂದು ಕಟ್ಟಳೆ ಮಾಡಿದೆ. ಆ ಮೂಲಕ ರಾಜ್ಯಗಳ ಹಕ್ಕನ್ನು ಕಸಿದುಕೊಂಡಿದೆ.

ಜೊತೆಗೆ ರಾಜ್ಯಗಳಲ್ಲಿ ಜಾರಿ ಮಾಡಿದ ಕೇಂದ್ರ ಸರ್ಕಾರದ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೆ ಸತಾಯಿಸಿ ತಮ್ಮ ಸ್ವಲ್ಪ ಬಜೆಟ್‌ ಅನ್ನು ಇವುಗಳಿಗಾಗಿ ವ್ಯಯ ಮಾಡುವಂತೆ ಮಾಡಿ‌ ಸಂಕಟಕ್ಕೆ ಸಿಲುಕಿಸಿದೆ. ಹೀಗೆ ಹಣಕಾಸಿನ‌ ವಿಷಯಕ್ಕೆ ಸಂಬಂಧಿಸಿಯೇ ಪುಟಗಟ್ಟಲೆ ಬರೆಯಬಹುದು.

ವ್ಯಾಕ್ಸೀನ್ ಲಭ್ಯತೆ, ಕೊರತೆ

ಈಗ ಸದ್ಯ ಇಡೀ ದೇಶದಲ್ಲಿ ಚರ್ಚೆಗೊಳಗಾಗಿರುವುದು ವ್ಯಾಕ್ಸಿನೇಷನ್‌ ವಿಷಯ. ಸ್ವಾತಂತ್ರ್ಯ ಬಂದಾಗಿನಿಂದ ಅನುಸರಿಸಿರುವಂತೆ  ಇಡೀ ದೇಶಕ್ಕೆ ಅಗತ್ಯವಿರುವ ಲಸಿಕೆಗಳ ಉತ್ಪಾದನೆ, ಸರಬರಾಜು, ಸಾರ್ವತ್ರಿಕ ಉಚಿತ ಲಸಿಕೆ ಕಾರ್ಯಕ್ರಮ ರೂಪಿಸುವುದು ದಿಲ್ಲಿ ಸರ್ಕಾರಗಳ ಹೊಣೆಯಾಗಿದೆ. ಆದರೆ ಮೋದಿ ಸರ್ಕಾರ ಇಂತಹ ಹೊಣೆಯನ್ನು ನಿರಗವಹಿಸಲು ನಿರಾಕರಿಸುತ್ತಿರುವುದು ಸಂವಿಧಾನ ಬದ್ಧ ಕರ್ತವ್ಯದ ನಿರಾಕರಣೆ. ಅದನ್ನು ರಾಜ್ಯಗಳ ಜೊತೆ ಸಮಾಲೋಚನೆ ಮಾಡಿ ಕಾನೂನಿನಲ್ಲಿ ನಿರೂಪಿಸುದಂತೆ ರಾಷ್ಟ್ರವ್ಯಾಪಿ ಯೋಜನೆ ಮಾಡುವುದನ್ನು ಬಿಟ್ಟು ಇದ್ದಕ್ಕಿದ್ದಂತೆ ರಾಜ್ಯಗಳ ಮೇಲೆ ಜಾರಿಸಿದೆ. ಅಲ್ಲದೆ ಮರುದಿನದಿಂದಲೇ ಎಲ್ಲ ರಾಜ್ಯಗಳ ಮೇಲೆ ಅಪಾದನೆಗಳ ಸುರಿಮಳೆ ಮಾಡತೊಡಗಿದೆ. ಇವು ಇಂದು ದೇಶದ ಕೋರ್ಟ್‌ಗಳು ಕೈಗೆತ್ತಿಕೊಂಡು ಪ್ರಶ್ನಿಸುತ್ತಿವೆ.

ಸುಪ್ರೀಂ ಕೋರ್ಟ್‌ನ ಕ್ರಿಯಾಶೀಲ ನ್ಯಾಯಾಧೀಶ, ಚಂದ್ರಚೂಡ್‌ರವರು ಮೊನ್ನೆ ರಾತ್ರಿ ನಾನು ಸಂವಿಧಾನದ ಮೊದಲ ಪರಿಚ್ಛೇದ ಓದಿದೆ. ಅದರಲ್ಲಿ ಭಾರತ ಎಂಬ ರಾಜ್ಯಗಳ ಒಕ್ಕೂಟ ಎಂದು ಸ್ಪಷ್ಟವಾಗಿ ಹೇಳಿದೆ. ಅಂದರೆ ನಾವು ಒಕ್ಕೂಟ ತತ್ವವನ್ನು ಪಾಲಿಸಬೇಕೆಂದು ಅರ್ಥ.‌ ನೀವು ರಾಜ್ಯಗಳನ್ನು, ಮುನಿಸಿಪಲ್ ಕಾರ್ಪೊರೇಷನ್‌ಗಳನ್ನೂ ವ್ಯಾಕ್ಸೀನ್ ಕೊಳ್ಳಲು ಹೇಳಿ ‘ನಡು ನೀರಿನಲ್ಲಿ ಕೈ ಬಿಟ್ಟಿದ್ದೀರಿ’ ಎಂದು ಹೇಳಿದ ಮಾತು ದೇಶದ ಗಮನವನ್ನು ಸೆಳೆಯುವಂತಹುದು.

ಅದಕ್ಕೆ ಒಂದೆರಡು ದಿನಗಳ ಹಿಂದೆ ಕೇಂದ್ರ ಸರ್ಕಾರದ ವ್ಯಾಕ್ಸೀನ್ ನೀಡಿಕೆಯ ಮುಖ್ಯಸ್ಥ ವ್ಯಾಕ್ಸೀನ್ ಕೊರತೆಗೆ ರಾಜ್ಯಗಳೇ ಹೊಣೆ ಎಂದು ಹೇಳಿದ್ದರು. ದೆಹಲಿ, ಮಹಾರಾಷ್ಟ್ರ ಮೊದಲಾದ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಒಕ್ಕೂಟ ಸರ್ಕಾರ ಆಯಾ ರಾಜ್ಯಗಳನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಹನ್ನೊಂದು ಬಿಜೆಪಿಯೇತರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ನಂತರ ಒಡಿಶಾ ಮುಖ್ಯಮಂತ್ರಿ, ಬಂಗಾಲ ಮುಖ್ಯಮಂತ್ರಿಗಳೂ ವ್ಯಾಕ್ಸೀನ್‌ಗಳನ್ನು ಕೇಂದ್ರ ಸರ್ಕಾರವೇ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ಹೀಗೆ ಮೋದಿ-ಬಿಜೆಪಿ- ಆರೆಸ್ಸೆಸ್ ಕೂಟ ಸರ್ಕಾರ ಕೊರೋನಾ ವಿಷಯದಲ್ಲಿ ತಮಗೆ ಸಂವಿಧಾನ ನೀಡಿರುವ ಹೊಣೆಗಾರಿಕೆಯನ್ನು ನಿರ್ವಹಿಸದಿರುವುದು, ರಾಜ್ಯಗಳ ಹಕ್ಕುಗಳನ್ನು ನಿರಾಕರಿಸುತ್ತಿರುವುದು ಸಂವಿಧಾನದ ಒಕ್ಕೂಟ ಸ್ವರೂಪ ಮತ್ತು ರಾಜ್ಯಗಳ ಸ್ವಾಯತ್ತತೆಯ ಮೇಲೆ ಧಾಳಿಯಾಗಿದೆ. ಅಧಿಕಾರ ವಿಕೇಂದ್ರೀಕರಣಕ್ಕೆ ಬದಲಾಗಿ ಅಧಿಕಾರದ ಕೇಂದ್ರೀಕರಣದ ಅಂಗವಾಗಿದೆ. ಪ್ರಜಾಪ್ರಭುತ್ವ ನಾಶ, ಫ್ಯಾಸಿಸ್ಟ್ ದಬ್ಬಾಳಿಕೆಯ ಅಜೆಂಡಾದ ಮುಂದುವರೆದ ಭಾಗವಾಗಿದೆ. ಕಾರ್ಪೊರೇಟ್‌ಗಳನ್ನು ರಕ್ಷಿಸುವ, ಹಿಂದುತ್ವ ರಾಷ್ಟ್ರ ಸ್ಥಾಪನೆಯ ಕಾರ್ಪೊರೇಟ್- ಹಿಂದುತ್ವ ಶಕ್ತಿಗಳ ಜೋಡಿ ಮೈತ್ರಿಕೂಟದ ಲಕ್ಷಣವಾಗಿದೆ.

ಕೊರೋನಾ ಪರಿಸ್ಥಿತಿಗೆ ಅನ್ವಯಿಸಿದ ವಿಚಾರಗಳಿಂದ ಹೊರತಾಗಿ ಒಕ್ಕೂಟ- ರಾಜ್ಯಗಳ ಸಂಬಂಧ, ರಾಜ್ಯಗಳ ಸ್ವಾಯತ್ತತೆಯ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ, ಆಡಳಿತಾತ್ಮಕ ಆಯಾಮಗಳನ್ನೆಲ್ಲ ವಿವರವಾಗಿ ಪರಿಶೀಲಿಸಬೇಕು. ಲಕ್ಷ ದ್ವೀಪ, ಜಮ್ಮು ಕಾಶ್ಮೀರ ದೆಹಲಿ ರಾಜ್ಯದ ಹಕ್ಕುಗಳ ಕಡಿತ, ಪುದುಚೇರಿ ಬಂಗಾಲ, ಕೇರಳಗಳ ಮೇಲಿನ‌ ಧಾಳಿಗಳು ಇತ್ಯಾದಿಗಳ ವಿಶ್ಲೇಷಣೆಯ ಜೊತೆಗೆ  ಹಿಂದಿ- ಹಿಂದು- ಹಿಂದುಸ್ತಾನ್ ಅಜೆಂಡಾ ಮತ್ತು ದೇಶಕ್ಕೊಂದೇ ತೆರಿಗೆ ವ್ಯವಸ್ಥೆ, ಒಂದೇ ಮಾರುಕಟ್ಟೆ, ಒಂದೇ ಚುನಾವಣೆ ಮೊದಲಾದ ಘೋಷಣೆಗಳ ಹಿಂದಿನ ಮರ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಬಿಜೆಪಿಯ ಫ್ಯಾಸಿಸ್ಟ್ ಸ್ವರೂಪದ ಪೂರ್ಣ ಗಾತ್ರದ ಸ್ವರೂಪ ದರ್ಶನವಾಗಲು ಸಾಧ್ಯ. 

‍ಲೇಖಕರು Avadhi

5 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading