ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

4

ತೇಜಸ್ವಿಯವರ ಮಿಸ್ಸಿಂಗ್ ಲಿಂಕ್‌ಗಳೂ, ಮೆದುಳಿನ‌ ಬೆಳವಣಿಗೆಯೂ…


ತೇಜಸ್ವಿಯವರು ಮಿಸ್ಸಿಂಗ್ ಲಿಂಕ್ ಕೃತಿಯಲ್ಲಿ ವಿವರಿಸುವ ವಾನರ- ಮಾನವ ವಿಕಾಸದ ಮಿಸ್ಸಿಂಗ್ ಲಿಂಕ್‌ಗಳು ಅರಿವಿನ ತಾಣವಾದ ಮೆದುಳಿನ‌ ವಿಕಾಸದ ಮಿಸ್ಸಿಂಗ್ ಲಿಂಕ್‌ಗಳೂ ಹೌದು.

ತೇಜಸ್ವಿಯವರ ಮಿಸ್ಸಿಂಗ್ ಲಿಂಕ್ ಕನ್ನಡದ ಒಂದು ಅತ್ಯಂತ ಮಹತ್ವದ ಕೃತಿ.‌ ಮಾನವ ವಿಕಾಸದ ಒಂದು ಮುಖ್ಯ ಹಂತದ ಬಗೆಗಿನ ಶೋಧಗಳ ಫಲಿತಾಂಶವನ್ನಷ್ಟೇ ಮುಂದಿಡುವುದರಲ್ಲಿ ತೇಜಸ್ವಿಯವರಿಗೆ ಮನಸ್ಸಿಲ್ಲ. ಈ ಶೋಧಗಳ ಹಿಂದಿನ ವಿಜ್ಞಾನದ  ವಿಧಾನಗಳ ಬಗ್ಗೆ, ಅದರ ಸಾಹಸ, ಸಂತೋಷ, ದುಃಖಗಳ ಬಗ್ಗೆ  ಪತ್ತೇದಾರಿ ಕಾದಂಬರಿಯಂತೆ ವಿವರಗಳನ್ನು ಕಟ್ಟಿಕೊಡುತ್ತಾರೆ. ವಿಜ್ಞಾನದ ಸಂಶೋಧನೆಗಳನ್ನು ಅತ್ಯಂತಿಕ ಸತ್ಯಗಳೆಂದು ವೈಭವೀಕರಿಸದೆ,  ಅವುಗಳು ನಿರಂತರವಾಗಿ ಬೆಳವಣಿಗೆಯಾಗುತ್ತಾ ಹೋಗುವ ಪರಿಯನ್ನು ಚಿತ್ರಿಸುತ್ತಾರೆ. ಅವುಗಳ ನಿರಂತರ ಅಪೂರ್ಣತೆಯನ್ನು ಕೂಡಾ ಓದುಗರಿಗೆ ಮನದಟ್ಟು ಮಾಡುತ್ತಾರೆ . ಕೇವಲ ಸಾಹಿತ್ಯದ ಸಾಧನೆಗಳನ್ನು ಮಾತ್ರ ಹಲ ಹಲವು ರೀತಿಯಲ್ಲಿ ,ಅದರ ರೂಪ,ಭಾಷೆ ಇತ್ಯಾದಿಗಳನ್ನು ವರ್ಣಿಸಿ , ವೈಭವೀಕರಿಸುವ ಕನ್ನಡ ಬುದ್ಧಿ ಜೀವಿ ಲೋಕಕ್ಕೆ ಮಿಸ್ಸಿಂಗ್ ಲಿಂಕ್‌ನಂತಹ ಕೃತಿಗಳ ತಿರುಳು,ಅದನ್ನು ಮಂಡಿಸಿದ ಬಗೆ,ಅದರ ಭಾಷೆ ಇವುಗಳ ಬಗ್ಗೆ ಅದೇ ರೀತಿಯಲ್ಲಿ ವಿಮರ್ಶೆ ಮಾಡಬೇಕೆಂದೆನಿಸುವುದಿಲ್ಲ. ಕನ್ನಡ ಸಾಹಿತ್ಯಕ್ಕೆ ಹಲವು ಹತ್ತು ಸಾವಿರ ಹೊಸ ಯುವ ಪೀಳಿಗೆಯ ಓದುಗರನ್ನು ಸೆಳೆದ ಬಗ್ಗೆ ಕೂಡಾ ತುಟಿಯಂಚಿನ ಮಾತುಗಳನ್ನಾಡಿ ಮುಂದೆ ಸಾಗುತ್ತಾರೆ.

ತೇಜಸ್ವಿಯವರು ಈ ಕೃತಿಯಲ್ಲಿ ಮಾನವನ ವಿಕಾಸದ ವಿವಿಧ ದಾಪುಗಾಲು ಹೆಜ್ಜೆಗಳನ್ನು ಗುರುತಿಸಿದ ನಂತರ ಒಂದು ವಿಶೇಷ ಸಂಗತಿಯನ್ನು ಹೇಳುತ್ತಾರೆ.‌ “ಕೈ” ಗೆ ಸಿಕ್ಕ ಬಿಡುಗಡೆಯಿಂದಲೇ ಮೆದುಳಿನ ಬೆಳವಣಿಗೆ ಸಾಧ್ಯವಾಗಿದ್ದು ಎನ್ನುತ್ತಾರೆ. ನಮಗೆ ಸಾಮಾನ್ಯವಾಗಿ ಗೊತ್ತಿರುವುದು ಮೆದುಳಿನ ನಿರ್ದೇಶನದಂತೆ ಕೈ,ಕಾಲುಗಳು ತಮ್ಮ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ ಎಂದು.  ಆದರೆ ತೇಜಸ್ವಿಯವರು ಈ ವಿಷಯದಲ್ಲಿ ರಿವರ್ಸ್ ಗೇರ್ ಹಾಕುತ್ತಿದ್ದಾರೆ. ಇದು ಹೇಗೆ ಸಾಧ್ಯ ? ಬುದ್ಧಿಯೇ ಇಲ್ಲದ ಕೈ ಬುದ್ಧಿಯ ಕೇಂದ್ರವಾದ ಮೆದುಳಿನ ಬೆಳವಣಿಗೆ ಮಾಡುವುದೆಂದರೆ !  ಅವರ ಪುಸ್ತಕದ ಕೊನೆಯ ಅಧ್ಯಾಯದಲ್ಲಿ  ಅದನ್ನು ತೇಜಸ್ವಿಯವರು ಹೀಗೆ ವಿವರಿಸುತ್ತಾರೆ :

“ವಾನರಗಳು ತಮ್ಮ ಹಿಂಗಾಲುಗಳ ಮೇಲೆ ಹೆಚ್ಚು ಕುಳಿತುಕೊಳ್ಳುವ, ನಿಲ್ಲು, ಕೊಂಚ  ಮಟ್ಟಿಗೆ ನಡೆದಾಡುವ ಸಾಮರ್ಥ್ಯ ಪಡೆದಿದ್ದವು.‌ಅವುಗಳ ಮುಂಗಾಲುಗಳು ಮಂಗಗಳಿಗಿಂತ ಹೆಚ್ಚು ಸ್ವತಂತ್ರವಾಗುತ್ತಾ, ಸೂಕ್ಷ್ಮವಾಗುತ್ತಾ ಮುಂಗಾಲುಗಳಿಗೆ ಕೈ”ತನ” ಪ್ರಾರಂಭವಾಯ್ತು.‌.. ಬುದ್ಧಿಪೂರ್ವಕವಾದ ಕ್ರಿಯೆ ತನ್ನ ಮುಂಗಾಲುಗಳು ಸ್ವತಂತ್ರವಾದುದರಿಂದಲೇ ಚಿಂಪಾಂಜಿಗೆ ಸಾಧ್ಯವಾಗಿದ್ದು. ಎಂದರೆ ಕೈ ಸ್ವತಂತ್ರವಾಗುತ್ತಾ ಹೋದಂತೆ…. ಮೆದುಳಿನ ಮತ್ತು ಬುದ್ಧಿ ಶಕ್ತಿಯ ಮೇಲೆ ಒತ್ತಡ ಆರಂಭವಾಯ್ತು. ಮಿದುಳು ಬೆಳಯಲಾರಂಭಿಸಿದ್ದು ಇಲ್ಲಿಂದಲೇ.”

ಇದರಲ್ಲಿ ಎರಡು ಮುಖ್ಯ‌ ಅಂಶಗಳಿವೆ. ಒಂದು ಜೀವಿಗಳು ನೆಟ್ಟಗೆ ನಿಲ್ಲುವ ಸಾಮರ್ಥ್ಯ ಗಳಿಸಿಕೊಳ್ಳುವುದು, ಮತ್ತೊಂದು ಮುಂಗಾಲುಗಳು ಕೈಗಳಾಗಿ ದೇಹದ ಭಾರ ಹೊರುವ ಕರ್ತವ್ಯದಿಂದ ಬಿಡುಗಡೆ.

ನೆಟ್ಟಗೆ ನಿಲ್ಲುವ ಸಾಮರ್ಥ್ಯ ಗಲಿಸಿಕೊಂಡರೆ ಮಾತ್ರ ಕೈಗಳಿಗೆ ಬಿಡುಗಡೆ.

ನೆಟ್ಟನೆ ನಿಲುವು :

ಪ್ರಾಣಿ ಸಂಕುಲದಲ್ಲಿ ನೆಟ್ಟಗೆ ನಿಲ್ಲುವ ಸಾಮರ್ಥ್ಯವನ್ನು ನೆಟ್ಟಗೆ (ಪೂರ್ಣವಾಗಿ) ಪಡೆದುಕೊಂಡೊವುದು ಮಾನವ ಜೀವಿ ಮಾತ್ರ. ನೆಟ್ಟಗೆ ನಿಲ್ಲುವುದೆಂಬುದು ಒಂದು‌ ಅಗಾಧವಾದ ಪ್ರಕ್ರಿಯೆ. ಎಲ್ಲ ಜೀವಿಗಳೂ ಒಂದರಿಂದ ಮತ್ತೊಂದು ವಿಕಾಸವಾದವುಗಳೇ ಹೊರತು ಸ್ವಯಂ ಸೃಷ್ಡಿಯಲ್ಲ ಎಂಬುದು ಈಗಾಗಲೇ ಡಾರ್ವಿನ್ನರ ವಿಕಾಸವಾದ ಸಾಬೀತು ಮಾಡಿರುವ ಸಂಗತಿ.  ಅದ್ದರಿಂದ ಇಲ್ಲಿಯವರೆಗೆ ನಾಲ್ಕು ಕಾಲುಗಳಲ್ಲಿ ನಡೆಯುವುದಕ್ಕೆ ತಕ್ಕಂತೆ ರೂಪುಗೊಂಡಿದ್ದ ದೇಹದ ಎಲ್ಲಾ ಅಂಗಗಳೂ ಅಡಿಯಿಂದ ಮುಡಿಯವರೆಗೆ ಬದಲಾಗಬೇಕು.

ಪ್ರಕೃತಿಯ ನಿಯಮಗಳಿಗನುಸಾರವಾಗಿ ಪುನರ್ರೂಪಿಸಿಕೊಳ್ಳಬೇಕು. ಮೊದಲನೆಯದಾಗಿ ನಾಲ್ಕು ಕಾಲುಗಳ ಮೇಲೆ ನಡೆಯುತ್ತಿದ್ದಾಗ ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಸೆಳೆತಕ್ಕೆ ಸಾಕಷ್ಟು ವಿಶಾಲ ಆಧಾರ ಪ್ರಾಣಿಗಳಿಗೆ ದಕ್ಕುತ್ತಿತ್ತು. ಈಗ ಒಂದು ಅಡಿಯಷ್ಟು ಬಹಳ ಸೀಮಿತವಾದ ಸ್ಥಳದಲ್ಲಿ ಈ ಸೆಳೆತಕ್ಕೆ ಎದುರಾಗಿ ನಿಲುವನ್ನು ರೂಪಿಸಿಕೊಳ್ಳಬೇಕು.

ಇದಕ್ಕಾಗಿ ಮೊದಲು ತಲೆಯ ಆಕಾರ ಬದಲಾಗಬೇಕು. ಮುಖ ಪ್ರಾಣಿಗಳಂತೆ ಮುಂಚಾಚಿಕೊಳ್ಳುವಂತಿಲ್ಲ. ಮನುಷ್ಯನ ಮುಖ ಈಗಿರುವಂತೆ  ಚಪ್ಪಟೆಯಾಗಬೇಕು. ತಲೆಯ ಭಾರವನ್ನು ಬೆನ್ನು ಮೂಳೆ ಹೊರುವಂತೆ ಅದು ತಲೆಯ ಹಿಂದಿನಿಂದಲ್ಲ, ತಲೆಯ ಕೆಳಭಾಗದಿಂದ ಹೊರಡಬೇಕು.‌ಕತ್ತು ಕಿರಿದಾಗಬೇಕು. ಎದೆಗೂಡೂ, ಪಕ್ಕೆಲುಬುಗಳೂ ಕಿರಿದಾಗಬೇಕು. ದೇಹದ ಭಾರವನ್ನು ನಾಲ್ಕು ಕಾಲುಗಳು ಹೊರುತ್ತಿದ್ದಾಗಿನ ಬೆನ್ನು ಮೂಳೆಯ ಮೇಲೆ ಹಗುರವಾಗಿ ಮತ್ತು ಉದ್ದಕ್ಕೂ ಸಮನಾಗಿ ಬೀಳುತ್ತಿದ್ದ ಭಾರಕ್ಕೆ ಬದಲಾಗಿ ಬೆನ್ನು ಮೂಳೆಯೇ ಮುಖ್ಯ ಭಾರವನ್ನು ಹೊರಬೇಕು. ಅದಕ್ಕಾಗಿ ಬೆನ್ನು ಮೂಳೆಯ ಕೆಳಗಿನ ಭಾಗಗಳು ಹೆಚ್ಚು ಗಟ್ಟಿಯಾಗಬೇಕು. ಕುಂಡಿಯ ಚಿಪ್ಪು ಉದರದೊಳಗಿನ ಹಲವು ಅಂಗಾಂಗಳ ಭಾರ ಹೊರುವಂತೆ ಅಗಲಗೊಳ್ಳಬೇಕು. ಕುಂಡಿಯ ಮಾಂಸಖಂಡಗಳು ಬಲವಾಗಬೇಕು. ಕೈಗಳು ಕಾಲುಗಳಿಗಿಂತ ಗಿಡ್ಡವಾಗಬೇಕು. ಇಲ್ಲದಿದ್ದರೆ ದೇಹದ ಗುರುತ್ವಾಕರ್ಷಣ ಕೇಂದ್ರದ ಸಮತೋಲನ‌ ತಪ್ಪುತ್ತದೆ. ಸೆಳೆತ ಕಾಲುಗಳು ಇಡೀ ದೇಹದ ಭಾರವನ್ನು ಹೊರಲು ತಕ್ಕಂತೆ ಮೂಳೆಗಳು, ಮಾಂಸಖಂಡಗಳು, ಮಂಡಿ ಚಿಪ್ಪು, ಕೀಲುಗಳು ಬಲವಾಗಬೇಕು. ಪಾದಗಳು ದೇಹದ ಭಾರವನ್ನು ಹೊರುವಾಗಲೂ ಧುಮುಕುವಾಗ ಅದರ ಆಘಾತವನ್ನು ತಡೆದುಕೊಳ್ಳುವಂತೆ  ಸ್ಪ್ರಿಂಗಿನಂತಹ ರೂಪ ಪಡೆಯಬೇಕು.

ಮಹಿಳೆಯರಿಗೆ ಮತ್ತಷ್ಟು ಬದಲಾವಣೆಗಳು ಬೇಕು. ಗರ್ಭದ ಭಾರವನ್ನೂ ಕುಂಡಿಯ ಮೂಳೆ, ಕೀಲುಗಳು, ಮಾಂಸಖಂಡಗಳು ಹೊರಬೇಕು. ಸ್ತನ ಹಿಂಗಾಲುಗಳ ಸಂದಿನಿಂದ ಕೈಗಳ ಮಧ್ಯ ಭಾಗದ ಎದೆಗೂಡಿಗೆ ಚಲಿಸಬೇಕು. ಅದು ಮುಂಭಾರವಾಗದಂತೆ ಕುಂಡಿಗಳ ಹಿಂಭಾರ ಹೊಂದಾಣಿಕೆಯಾಗಬೇಕು. ಅದರ ಭಾಗವಾಗಿ ಗಂಡಸರ ದೇಹದ ತೂಕ ಹೆಚ್ಚಿದರೆ ಅದು ಹೊಟ್ಟೆಯ ಸುತ್ತ ಶೇಖರವಾದರೆ, ಹೆಚ್ಚಿದ ಹೆಂಗಸರ ತೂಕ ಕುಂಡಿಗಳ ಸುತ್ತ ಶೇಖರವಾಗುವ ವ್ಯವಸ್ಥೆ.

ಈ ಬದಲಾವಣೆಗಳು ಜೀವಿಗಳಲ್ಲಿ ಹಲವು ಕೋಟಿ ವರ್ಷಗಳ ಕಾಲ ನಡೆದಿವೆ.  
ಬೆಕ್ಕಿನ ಗುಂಪಿಗೆ ಸೇರಿದ ಪ್ರಾಣಿಗಳಲ್ಲಿ ಮುಂಗಾಲುಗಳನ್ನು ಎತ್ತಿ ಪ್ರಹಾರ ಮಾಡುವದು, ಒತ್ತಿ ಹಿಡಿದುಕೊಳ್ಳುವುದು ಮೊದಲಾದ ಸಣ್ಣ ಬದಲಾವಣೆಗಳನ್ನು ನೋಡುತ್ತೇವೆ. ದಟ್ಟ ಸದಾ ಹಸಿರು ಕಾಡುಗಳಲ್ಲಿ ಮರದ ಮೇಲೆಯೇ ಜೀವಿಸುವ ಮಂಗಗಳಾಗಿ ಕೊಂಬೆಯಿಂದ ಕೊಂಬೆಗೆ, ಮರದಿಂದ ಮರಕ್ಕೆ ಜಿಗಿಯುವ    ಕ್ರಿಯೆಯಲ್ಲಿ ರೆಂಬೆ ಕೊಂಬೆಗಳ ಮೇಲೆ ಹಿಡಿತ ಸಾಧಿಸಲು ನಾಲ್ಕು ಕಾಲುಗಳೂ ಕೈಗಳಂತೆಯೇ ಕೆಲಸ ಮಾಡಲಾರಂಭಿಸಿವೆ. ಮರಗಳಿಗೆ ಜೋತು ಬೀಳಲು ಕೈಗಳು ಕಾಲುಗಳಿಗಿಂತ ಹೆಚ್ಚು ಉದ್ದವಾಗಿರುತ್ತವೆ ಮತ್ತು ಶಕ್ತಿಯುತವಾಗಿರುತ್ತವೆ.  ಆದರಲ್ಲಿ ಮುಂಗಾಲುಗಳು ವಸ್ತುಗಳನ್ನು ಹಿಡಿದುಕೊಳ್ಳಲು, ಬಾಯಿಗಿಟ್ಟುಕೊಳ್ಳಲು ಕೈಗಳಂತೆ ಬಳಕೆಯಾಗಲಾರಂಭಿಸಿವೆ. ಭೂಮಿಯ ಮೇಲೆ ಮೂಳೆ ಇರುವ ಪ್ರಾಣಿಗಳು ಉದಯಿಸಿದಾಗಿನಿಂದ ಇರುವ ಐದು ಬೆರಳುಗಳಲ್ಲಿ ಹೆಬ್ಬೆರಳು ಇತರ ನಾಲ್ಕು ಬೆರಳುಗಳಿಗೆ ಎದುರಾಗಿ ಈ ಹಿಡಿತ ಸಾಧಿಸುವ ಕ್ರಿಯೆಗೆ ನೆರವಾಗಿದೆ. ಮಾನವರ ಬೆರಳುಗಳ ಸೂಕ್ಷ್ಮತೆಯನ್ನು ಪಡೆಯಲು ಎರಡೇ ಬೆರಳಿನಲ್ಲಿ ಹಿಡಿತ ಸಾಧಿಸುವ, ಬೆರಳುಗಳಿಂದ ಬಳಸಿ ಹಿಡಿದುಕೊಳ್ಳುವ ಕ್ರಿಯೆಗಳನ್ನು ರೂಢಿಸಿಕೊಳ್ಳಬೇಕು. ಪ್ರತಿ ಬೆರಳು ಹಾಗೂ ಬೆರಳುಗಳಲ್ಲಿನ ಮೂರು ಬೇರೆ ಬೇರೆ ಮೂಳೆಗಳ ಚಲನೆಯನ್ನು ನಿರ್ದೇಶಿಸುವ ಮಾಂಸಖಂಡಗಳು, ಹೆಬ್ಬೆರಳಿನ ಬಲವಾದ ಮಾಂಸಖಂಡಗಳು ಮತ್ತು ನೇರವಾಗಿ ಮಣಿಕಟ್ಟಿನೊಡನೆ ಅದರ ಜೋಡಣೆ ಮುಂತಾದವು ಬೆಳೆಯಬೇಕು. ಬೆರಳುಗಳ ತುದಿಗಳಲ್ಲಿ ಸ್ಪರ್ಶದ ಸೂಕ್ಷ್ಮತೆ ಹೆಚ್ಚುವಂತೆ ನರಕೋಶಗಳ ಸಾಂದ್ರತೆ ಹೆಚ್ಚಬೇಕು.
ವಾನರಗಳೂ ಕೂಡಾ ಮರಗಳ ಮೇಲೆಯೇ ಉಗಮಗೊಂಡವು. ಅವು ಅವುಗಳು ಆಹಾರವನ್ನರಸುತ್ತಾ ಭೂಮಿಯ ಮೇಲೆ ಓಡಾಡಲಾರಂಭಿಸಿದರೂ ಕೂಡಾ ಮರಗಳ ಮೇಲೆ ಕೊಂಬೆಗಳಿಗೆ ನೇತಾಡುತ್ತಾ ಸಾಗುವುದನ್ನು ಬಿಟ್ಟಿರಲಿಲ್ಲ. ಭೂಮಿಯ ಮೇಲೆ ಓಡಾಡುವಾಗ ನಾಲ್ಕೂ ಕಾಲುಗಳ ಮೇಲೆಯೇ ಓಡಾಟ. ಕೆಲವೊಮ್ಮೆ ಮಾತ್ರ ಚಿಂಪಾಂಜಿಯ ಬಗ್ಗೆ ತೇಜಸ್ವಿಯವರು ಹೇಳಿದಂತೆ ಹಿಂದಿನ ಕಾಲುಗಳ ಮೇಲೆ ನಿಂತುಕೊಳ್ಳುವುದು, ಕೊಂಚ ನಡೆಯುವುದು ಮಡಲಾರಂಭಿಸಿವೆ.  ಈ ವಿಷಯದಲ್ಲಿ ವಾನರಗಳ ಗುಂಪಿನ ಒಳಗೇ ವಿವಿಧ ಪ್ರಬೇಧಗಳ ನಡುವೆ ಮರಗಳ ಮೇಲೆ, ಭೂಮಿಯ ಮೇಲೆ ಜೀವಿಸುವ ಪ್ರಮಾಣದಲ್ಲಿ ವ್ಯತ್ಯಾಸಗಳಿವೆ. ಮುಂದೆ ಆಹಾರಕ್ಕಾಗಿಯೇ ನೀರಿನಲ್ಲಿ ಈಜುವ , ಮೀನು ಇತ್ಯಾದಿಗಳನ್ನು ಹಿಡಿಯುವ ಸಂದರ್ಭಗಳಲ್ಲಿ ಮುಂಗಾಲುಗಳು ಹೆಚ್ಚಾಗಿ ಕೈಗಳಂತೆ ಬಳಕೆಯಾಗುವುದು ಹೆಚ್ಚಾಗಿದೆ.

ಸದಾ ಹಸಿರು ಅರಣ್ಯಗಳ ಪ್ರಮಾಣ ಕಡಿಮೆಯಾದಂತೆ, ಹುಲ್ಲುಗಾವಲುಗಳು ಹೆಚ್ಚಾದಂತೆ, ನೀರಿನ‌ ಮೂಲಗಳ ಸಮೀಪ ಇರುವ ವಾನರಗಳು ಮರದ ರೆಂಬೆ ಕೊಂಬೆಗಳನ್ನು ಆಯುಧವಾಗಿ ಬಳಸಲಾರಂಭಿಸಿವೆ. ಮರಗಳ ಮೇಲಿನ ಹಣ್ಣು, ಬೀಜಗಳನ್ನು ಸೆಳೆದುಕೊಳ್ಳಲು ಕೋಲುಗಳನ್ನು ಬಳಸಿಕೊಳ್ಳುವುದು ಇತ್ಯಾದಿ.ಚಿಂಪಾಂಜಿಯೇ ವಾನರಗಳಲ್ಲೆಲ್ಲಾ ಅತಿ ಹೆಚ್ಚು ಮಾನವರಿಗೆ ಸಮೀಪ ಬಂಧು.

ಮಾನವ ವಿಕಾಸದ ಮೂರು ಹಂತಗಳು ಮತ್ತು ಪ್ರಬೇಧಗಳು :
ತೇಜಸ್ವಿಯವರು ಮಾನವ ವಿಕಾಸದಲ್ಲಿ ಈಗಿನ ಆಧುನಿಕ ಮಾನವರೆನ್ನುವ ಪ್ರಬೇಧ ಉಗಮವಾಗುವ ಮೊದಲಿನ  ಮೂರು ಹಂತಗಳನ್ನು , ಆ ಹಂತಗಳಲ್ಲಿನ ಮೂರು ಪ್ರಬೇಧಗಳನ್ನು ವಿವರಿಸಿದ್ದಾರೆ. ಈ ಮೂರು ಹಂತಗಳೂ ಕೂಡಾ ಆಧುನಿಕ ಪೂರ್ವ ಮಾನವನ‌ ನೆಟ್ಟನೆಯ ನಿಲುವಿನ ಬೆಳವಣಿಗೆ, ಕೈಯ ವಿಕಾಸ, ಮೆದುಳಿನ ವಿಕಸನದ ಮೂರು ಹಂತಗಳನ್ನು ಸೂಚಿಸುತ್ತವೆ.

ತೇಜಸ್ವಿಯವರು ಲೂಸಿ ಹಾಗೂ ಆಫ್ರಿಕಾನಸ್ ಬಗ್ಗೆ ಬರೆದಿದ್ದಾರಲ್ಲಾ ಮಾನವರಿಗೆ ಹತ್ತಿರದ ಆ ಪ್ರಬೇಧಗಳು ಸುಮಾರು 32-35 ಲಕ್ಷ ವರ್ಷಗಳ ಹಿಂದೆ ಉದಯಿಸಿದವು. ಇವು ಮಾನವರ ಆಕಾರಕ್ಕೆ ಹೋಲಿಸಿದರೆ ಮೂರೂವರೆ ನಾಲ್ಕು ಅಡಿಗಳಾಗಿ ಕುಳ್ಳನೆಯ ಜೀವಿಗಳು. ಆದರೆ ನೆಟ್ಟಗೆ ನಡೆದಾಡಬಲ್ಲ ಜೀವಿಗಳು. ಆದರೂ ಪೂರ್ಣವಾಗಿ ಮರದ ಮೇಲಿನ ಜೀವನ ಬಿಟ್ಟಿರಲಿಲ್ಲ. ಅವುಗಳ ದೇಹ ರಚನೆಯಲ್ಲಿ ಇನ್ನೂ ಮರಗಳ ಮೇಲಿನ ಜೀವನದ ಕುರುಹುಗಳು ಅವುಗಳ ಕೈಗಳ ಉದ್ದ ಮತ್ತು ಸ್ನಾಯು ಬಲ, ಕಾಲಿನೊಂದಿಗೆ ಅವುಗಳ ಪ್ರಮಾಣ ಇವುಗಳ ಮೂಲಕ ಕಾಣ ಬಂದಿವೆ. ಅದರಿಂದಾಗಿ ಅವುಗಳ ನೆಟ್ಟನೆ ನಿಲುವು ಇನ್ನೂ ಉತ್ತಮಗೊಳ್ಳಬೇಕಾದ ಸ್ಥಿತಿ ಹಾಗೂ  ಹೆಚ್ಚು ದೂರ ನಡೆದಾಡುವುದು ಕಷ್ಟಕರವೆನ್ನುವ ಸ್ಥಿತಿಯನ್ನು ಅದರ ಅಸ್ಥಿಪಂಜರದ ರಚನೆ ತೋರಿಸುತ್ತದೆ.

ಮರದ ಚಿಗುರೆಲೆಗಳು, ಹಣ್ಣುಗಳು, ಬೀಜಗಳು ಮುಂತಾದ ಆಹಾರ ಪ್ರಧಾನವಾದುದರಿಂದ ಅದರ ಶಕ್ತಿ ಮತ್ತು ರಕ್ತ ಶೇ.60 ರಷ್ಟು ಆಹಾರವನ್ನು ಜೀರ್ಣಿಸಿಕೊಳ್ಳುವುದಕ್ಕೇ ವೆಚ್ಚವಾಗುತ್ತಿತ್ತು.‌ ಮೆದುಳಿಗೆ ಸಿಗುತ್ತಿದ್ದ ರಕ್ತ ಕೇವಲ ಶೇ.10 ರಷ್ಟು. ಅದದಾಗಿ ಇವುಗಳ ಮೆದುಳಿನ ಗೂಡಿನ ಗಾತ್ರ ಕೇವಲ 350-500 ಸಿಸಿ ಮಾತ್ರ (ಕ್ಯೂಬಿಕ್ ಸೆಂಟಿಮೀಟರ್ ).

ಈ ಜೀವಿಗಳಿಂದಲೇ ಮರದ ರೆಂಬೆಗಳು ಕಲ್ಲುಗಳು ಅವುಗಳು ಇರುವಂತೆಯೇ   ಆಯುಧಗಳಾಗಿ ಬಳಸುವುದು ಆರಂಭವಾಗಿರಬಹುದು. ಆದರೆ ಅವುಗಳು ಗುರುತು ಹಿಡಿಯಲು‌ ಸಾಧ್ಯವಿಲ್ಲವಾದ್ದರಿಂದ ಕುರುಹುಗಳು ಸಿಕ್ಕಿಲ್ಲ. ಅವುಗಳ ಜೊತೆಗೆ ಆಹಾರವನ್ನು ಕೈಯಲ್ಲಿ ಹಿಡಿದು ವಾಸಸ್ಥಾನಕ್ಕೆ ಸಾಗಿಸುವುದು, ಪರಸ್ಪರ ಗುದ್ದಾಟಗಳಲ್ಲಿ ಮುಷ್ಟಿಯಿಂದ ಹೊಡೆಯುವುದು , ಶಿಶುಗಳನ್ನು ಕೈಗಳಲ್ಲಿ ಎತ್ತಿಕೊಳ್ಳುವುದು ಮುಂತಾದ ಕೆಲಸಗಳಿಗೆ ಕೈಗಳು ಹೆಚ್ಚು ಬಳಕೆಯಾಗಿರುವ ಸಾಧ್ಯತೆಗಳ ಬಗ್ಗೆ ಸಂಶೋಧಕರು ಚಿಂತಿಸಿದ್ದಾರೆ.

ಈ ಜೀವಿಗಳು ಆಹಾರ ಸಂಗ್ರಹಣೆ ಮತ್ತು ಸ್ವರಕ್ಷಣೆಗೆ ಕೋಲು ,ಕಲ್ಲುಗಳನ್ನು ಬಳಸಿದಾಗ ಅವರು ತಮಗೂ ತಮ್ಮ ಗುರಿಗೂ ಇರುವ ದೂರ, ಕೋಲಿಗಾಗಿ ಬಳಸಬೇಕಾದ ಮರಗಳ ಗಟ್ಟಿತನ, ಕಲ್ಲುಗಳ ಆಕಾರ, ಅವುಗಳ ಗಟ್ಟಿತನ, ಆಕಾರ ಇವುಗಳ ಬಗ್ಗೆ ಬುದ್ಧಿ ಶಕ್ತಿಯನ್ನು ಉಪಯೋಗಿಸಬೇಕಾಗಿ ಬಂದಿರುವ ಸಾಧ್ಯತೆಗಳಿವೆ. ಇವುಗಳಿಂದಾಗಿ ಮೆದುಳಿನ ಬೆಳವಣಿಗೆ, ಬುದ್ಧಿ ಶಕ್ತಿಯ ಬೆಳವಣಿಗೆ, ಕೈಗಳ ವಿಕಾಸ ಕಾಲುಗಳ ಶಕ್ತಿ, ಆಹಾರದ ವೈವಿಧ್ಯತೆ ಹೆಚ್ಚುತ್ತಾ ಹೋಗಿರುವ ಸಾಧ್ಯತೆಗಳಿವೆ. ಈ ಗುಣಗಳು ಸಣ್ಣ ಸಣ್ಣ ಪ್ರಮಾಣದಲ್ಲಿ ಕೂಡಿಕೊಳ್ಳುತ್ತಾ ಮುಂದೆ ಒಂದು ಹೊಸ ಪ್ರಬೇಧ ಮೂಡಿ ಬಂದಿರುವುದನ್ನು ತೇಜಸ್ವಿ ವಿವರಿಸಿದ್ದಾರೆ.

ಕೈಗಳ ಮಾನವರು- ಹೋಮೋ ಹೆಬಿಲಿಸ್ handy humans :
ಈ 25 ಲಕ್ಷ ವರ್ಷಗಳಿಂದ 16 ಲಕ್ಷ ವರ್ಷಗಳವರೆಗೆ ಜೀವಿಸಿದ್ದ ಈ ಮಾನವ ಜೀವಿಗಳ ಬಗ್ಗೆ ತೇಜಸ್ವಿಯವರು ಈ ರೀತಿ ವಿವರಿಸಿದ್ದಾರೆ” ಅವರಿಗೆ ( ಲೂಯಿಸ್ ಲೀಕಿ , ಅವರ ಪತ್ನಿ ಮೇರಿ ಲೀಕಿ ಮತ್ತವರ ತಂಡ ) ಒಲ್ಡೋವಿ ಮರಳುಗಾಡಿನಲ್ಲಿ ಹೋಮೋ ಹೆಬಿಲಿಸ್ ಮಾನವನ ವಾಸಸ್ಥಳಗಳು ಪತ್ತೆಯಾದವು. ದೂರದಿಂದ ಕಲ್ಲುಗಳನ್ನು ಹೊತ್ತು ತಂದು ಕೋಟೆಯಂಥ ಕಲ್ಲಿನ ಬೇಲಿಗಳನ್ನು ನಿರ್ಮಿಸಿಕೊಂಡು ಬದುಕುತ್ತಿದ್ದರು.ಇಲ್ಲೆಲ್ಲಾ ಇವರು ದೂರದೂರಗಳಿಂದ ವಿಶಿಷ್ಟ ಬಗೆಯ ಕಲ್ಲುಗಳನ್ನು ಕುಟ್ಟಿ ಆಯುಧಗಳನ್ನು ಕಲ್ಲಿನ ಉಳಿ, ಸುತ್ತಿಗೆ ,ಚಾಕುಗಳನ್ನು‌ಮಾಡಿ ಎಸೆದಿದ್ದ ಸ್ಪಷ್ಟ ಕುರುಹುಗಳಿದ್ದವು.”  ಇವರು ಹೆಚ್ಚು ಕಾಲ ಭೂಮಿಯ ಮೇಲೆ ನೆಟ್ಟಗೆ ನಡೆಯಬಲ್ಲವರಾಗಿದ್ದರು. ಆದರೆ  ಅವರ ದೇಹ ರಚನೆ ಇನ್ನೂ ಅವರು ಮರದ ಮೇಲಿನ ಜೀವನವನನ್ನು ಪೂರ್ತಿ ಬಿಟ್ಟಿರಲಿಲ್ಲ ಎಂಬುದನ್ನು ತೋರಿಸುತ್ತದೆ. ಹೀಗೆ ಅವರು ಇನ್ನೂ ಪೂರ್ಣವಾಗಿ ನಡೆದಾಡುವ ಮಾನರಾಗಿರಲಿಲ್ಲ.

ಈ ಪ್ರಬೇಧದ ಜೊತೆಗೆ ಮೊತ್ತಮೊದಲ ಮಾನವ ನಿರ್ಮಿತ ಕಲ್ಲಿನ ಆಯುಧಗಳು ಪತ್ತೆಯಾಗಿರುವುದರಿಂದ ಈ ಪ್ರಬೇಧವನ್ನು ಮಾನವರ ಪ್ರಬೇಧವಾಗಿ ನಾಮಕರಣ ಮಾಡಲಾಗಿದೆ. ಇವರ ಆಯುಧಗಳು ಕಲ್ಲಿನಿಂದ ಒಂದೆರಡು ಚಕ್ಕೆಗಳನ್ನಷ್ಟೇ ತೆಗೆದು ಹಾಕಿದ್ದು. ಇವು ಮುಂದೆ ಮಾನವರು ತಯಾರಿಸಿಕೊಂಡ ಶಿಲಾಯುಧಗಳಿಗೆ ಹೋಲಿಸಿದರೆ ಹೆಚ್ಚು ಕ್ರಿಯಾಶೀಲತೆ ಅವಶ್ಯವಾಗದ ಬಹಳ ಸರಳ ಆಯುಧಗಳು. ಕೇವಲ ಮೂಳೆಗಳಿಂದ ಮಾಂಸವನ್ನು ಕೆರೆದು ತೆಗೆಯಲು, ಮೂಳೆಗಳನ್ನು ಒಡೆಯಲು ಮಾತ್ರ ಉಒಯುಕ್ತವೆಂದು ಈ ಆಯುಧಗಳ ಸ್ವರೂಪ ತೋರಿಸಿದೆ. ಅಂದರೆ ಮಾಂಸಾಹಾರಿ ಪ್ರಾಣಿಗಳು ಅರೆಬರೆ ತಿಂದು ಬಿಟ್ಟು ಹೋದ ಕಳೇಬರದಿಂದ ಮಾಂಸವನ್ನು ಪಡೆಯುತ್ತಿದ್ದರು. ಸ್ವತಃ ಬೇಟೆಯಾಡಲು ಇವರು ಕಲಿತಿರಲಿಲ್ಲ ಎಂದರ್ಥ.  ಇದರಿಂದ ಮಾಂಸಾಹಾರದ ಪ್ರಮಾಣ ಹೆಚ್ಚಿದ ಫಲವಾಗಿ ಹೆಚ್ಚು ಪ್ರೋಟೀನ್ ಮತ್ತು ಪ್ರಾಣಿಜನ್ಯ ಕೊಬ್ಬು ಅವರಿಗೆ ದೊರಕಿತು. ಅವರ ಮೆದುಳಿನ‌ ಗಾತ್ರ ಹೆಚ್ಚಿತು.ಈ ಮಾನವ ಜೀವಿಗಳ ಮೆದುಳು ಗೂಡು 500 ರಿಂದ 900 ಸಿಸಿ ಗಾತ್ರದ್ದು. ಆಸ್ಟ್ರಲೋಪಿತಿಕಸ್ ಗುಂಪಿಗೆ ಸೇರಿದ ಲೂಸಿ ಮೊದಲಾದವುಗಳಿಗೆ ಹೋಲಿಸಿದರೆ ಈ ಮಾನವರ ಮೆದುಳು ಮತ್ತಷ್ಟು ಬೆಳವಣಿಗೆಯಾಗಿದೆ.

ನೆಟ್ಟಗೆ ನಿಂತ ಮಾನವ- ಹೋಮೋ ಎರೆಕ್ಟಸ್ :

18 ಲಕ್ಷ ವರ್ಷಗಳಿಂದ 1,10 ಲಕ್ಷ ವರ್ಷಗಳವರೆಗೆ ಅಸ್ತಿತ್ವದಲ್ಲಿದ್ದ ಈ  ಮಾನವ ಜೀವಿಗಳ ಉಗಮ ಮಾನವ ವಿಕಾಸದಲ್ಲಿ ಒಂದು ಮುಖ್ಯ ನೆಗೆತ. ಮೊತ್ತ ಮೊದಲು ಮಾನವರು ಉಗಮವಾದ ಆಫ್ರಿಕಾ ಖಂಡದಿಂದ ಹೊರಬಂದು ಮೂರು ಖಂಡಗಳಲ್ಲಿ ಬದುಕು ನಡೆಸಿದ ಮಾನವ ಜೀವಿಗಳಿವರು. ಭಾರತ, ಚೀನಾ, ಇಂಡೋನೇಷ್ಯಾ, ಮಧ್ಯ ಏಷಿಯಾದ ಜಾರ್ಜಿಯಾ, ಯುರೋಪಿನ ದಕ್ಷಿಣ ದೇಶಗಳಲ್ಲಿ ಈ ಮಾನವ ಜೀವಿಗಳ ಪಳೆಯುಳಿಕೆಗಳು ಸಿಕ್ಕಿವೆ.

ಇವರ ಆಯುಧಗಳು ನಿಜವಾಗಿ ಮಾನವರು ತಮ್ಮ ಬುದ್ಧಿಶಕ್ತಿಯನ್ನು ಬಳಸಿ ತಯಾರಿಸಿದ ಶಿಲಾಯುಧಗಳಾಗಿದ್ದವು. ಅವು ಕಲ್ಲಿನ ಎರಡೂ ಕಡೆ ನಿರ್ದಿಷ್ಟ ಚೂಪುತನ, ಆಕಾರಗಳನ್ನು ಪಡೆಯಲೆಂದು ತಯಾರಿಸಿದ್ದವುಗಳಾಗಿದ್ದವು. ಅದಕ್ಕಾಗಿ ಆರಿಸಿದ ಕಲ್ಲುಗಳಿಂದ ತಯಾರಾಗಿದ್ದವು. ಶಿಲಾಯುಧಗಳ ತಂತ್ರಜ್ಞಾನದಲ್ಲಿ ಒಂದು ನೆಗೆತವನ್ನು ತೋರಿಸಿದ ಕಲ್ಲು ಕೊಡಲಿಗಳು, ಈಟಿ ಮತ್ತು ಬಾಣದ ತುದಿಗೆ ಸಿಕ್ಕಿಸಿ ಹೆಚ್ಚು ಪರಿಣಾಮಕಾರಿಯಾಗಿ ಮಾಡಿದ ಬೇಟೆಯ ಆಯುಧಗಳನ್ನು ರೂಪಿಸಿಕೊಂಡಿದ್ದರು. ಈ ಆಯುಧಗಳನ್ನು ತಯಾರಿಸಲು  ಮುಂದಾಲೋಚನೆ, ನಿರ್ದಿಷ್ಟ ಉದ್ದೇಶ, ಅದಕ್ಕೆ ಅವಶ್ಯವಾದ ಆಯುಧಗಳನ್ನು ತಯಾರಿಸುವ ಯೋಜನೆ ಅಗತ್ಯವಾಗಿತ್ತು.  

ಈ ಕ್ರಿಯೆಗಳು ಒಮ್ಮೆಗೇ ಮೂಡಿ ಬರಲಿಲ್ಲ. ಹಲವು ಲಕ್ಷ ವರ್ಷಗಳ ಪ್ರಯೋಗ, ವಿಫಲತೆಗಳ ಮೂಲಕ ಸಾಧಿಸಿದ ಕೌಶಲ್ಯ. ಈ ಕ್ರಿಯೆಗಳು ತಮ್ಮ ಸಂಕೀರ್ಣತೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಂತೆ ಮೆದುಳಿನ ವೇಗದ ಬೆಳವಣಿಗೆ ಸಾಧ್ಯವಾಯಿತು. ಹಾಗೆಂದ ಮಾತ್ರಕ್ಕೇ ಇದು ಶಿಲಾಯುಧಗಳ ತಯಾರಿಕೆಯ ಉತ್ತುಂಗವೇನಲ್ಲ. ಈ ಘಟ್ಟವನ್ನು ಪ್ರಾಚೀನ ಶಿಲಾಯುಧ ಎಂದೇ ಹೆಸರಿಸಲಾಗಿದೆ. ಮುಂದೆ ಇನ್ನೂ ಮೇಲಿನ ಹಂತದ ಪ್ರಾಚಿನ ಶಿಲಾಯುಧಗಳ ಯುಗ ಮತ್ತು ನೂತನ ಶಿಲಾಯುಧಗಳನ್ನು ಮಾನವರು ರೂಪಿಸಿಕೊಂಡರು.

ಈ ಶಿಲಾಯುಧಗಳನ್ನು ಎರೆಕ್ಟಸ್ ಪ್ರಬೇಧದ ಮಾನವ ಜೀವಿಗಳು ಬಳಸಿ ಪರಿಣಾಮಕಾರಿಯಾಗಿ ಬೇಟೆಯಾಡುತ್ತಿದ್ದರು. ಬೇಟೆಯಾಡುವುದೇ ಬುದ್ಧಿ ಶಕ್ತಿಯನ್ನು ಬೆಳೆಸಿಕೊಳ್ಳುವ ಪ್ರೇರಣೆ ಮತ್ತು ಅವಕಾಶವನ್ನು ಒದಗಿಸುತ್ತದೆ.

ಶಿಕಾರಿಯಲ್ಲಿ ಬಹಳ ಅನುಭವ ಇದ್ದ ತೇಜಸ್ವಿಯವರು ಹೇಳುವಂತೆ ” ಶಿಕಾರಿ ಒಂದು ಬುದ್ಧಿಯುತ ಕ್ರಿಯೆ. ಮರದಲ್ಲಿ ನೇತಾಡುವ ಹಣ್ಣುಗಳನ್ನಾಗಲಿ, ಭೂಮಿಯೊಳಗಿನ ಗೆಡ್ಡೆಗಳನ್ನಾಗಲಿ ತಿನ್ನಲು ಬುದ್ಧಿಶಕ್ತಿ ಅಷ್ಟೊಂದು ಬೇಕಾಗಿಲ್ಲ.  ಆದರೆ ಶಿಕಾರಿ ತನ್ನಂತೆಯೇ ರಕ್ಷಣಾತ್ಮಕವಾಗಿರುವ ಇನ್ನೊಂದು ಪ್ರಾಣಿಯನ್ನು ಹಿಡಿಯಬೇಕಾದ ಕ್ರಿಯೆ. ಇಂದಿಗೂ ಒಂದು ಕಪ್ಪೆಯನ್ನಾಗಲಿ, ಇಲಿಯನ್ನಾಗಲಿ ಹಿಡಿಯಲು ಎಷ್ಟೊಂದು ಚಾತುರ್ಯ ಬೇಕಾಗುತ್ತದೆ ಯೋಚಿಸಿ. ಕಾಡು ಪ್ತಾಣಿಗಳಷ್ಟು ಬಲಶಾಲಿಯಲ್ಲದ ಪ್ರಾಣಿಯಾದರೆ ಅದು ಯಾವುದನ್ನು ಅವಲಂಬಿಸಬೇಕು ? ತನ್ನ ಕುಯುಕ್ತಿ, ತಂತ್ರ,ವ್ಯೂಹಗಳನ್ನು ಎಂದರೆ ಬುದ್ಧಿ ಶಕ್ತಿಯನ್ನು. ಆದ್ದರಿಂದಲೇ ಮನುಷ್ಯರ ಮೆದುಳು ಅಸಾಧಾರಣ ಗಾತ್ರಕ್ಕೆ ಬೆಳೆಯತೊಡಗಿತು.

ಎರೆಕ್ಟಸ್ ಮಾನವರು ಕೂಡಾ ಗುಂಪುಗಳಲ್ಲಿ ಸಾಮೂಹಿಕ ಜೀವನ ನಡೆಸುವವರಾಗಿದ್ದರು. ಕೂಡಿ ಬೇಟೆಯಾಡುತ್ತಿದ್ದುದರಿಂದ ತಮಗಿಂತ ಬಲಶಾಲಿ ಪ್ರಾಣಿಗಳನ್ನು ಹಿಡಿಯಲು ಶಕ್ತ ರಾಗಿದ್ದರು. ಈ ಸಮುದಾಯ ಜೀವನ ಮತ್ತು ಸಾಮೂಹಿಕ ಬೇಟೆಗಾರಿಕೆ ಅವರಲ್ಲಿ ಪರಸ್ಪರ ಸಂವಹನ ಕ್ರಿಯೆಯ ಅನುವಾರ್ಯತೆಯನ್ನು ಉಂಟು ಮಾಡಿದ್ದವು. ಅವರು ಕೈ ಮೊದಲಾದ ಅವಯವಗಳನ್ನು ಬಳಸಿ ಸಂಕೇತಗಳು, ವಿವಿಧ ರೀತಿಯ ಶಬ್ದಗಳ ಮೂಲಕ ಪರಸ್ಪರ ಸಂವಹನ ನಡೆಸುತ್ತಿದ್ದರು. ಇನ್ನೂ ಅವರಲ್ಲಿ ಭಾಷೆ ರೂಪುಗೊಂಡಿರಲಿಲ್ಲ ಎಂದು ತಿಳಿದು ಬಂದಿದೆ.

ಬೇಟೆಯಿಂದ ಇವರ ಆಹಾರ ಹೆಚ್ಚು ಮಾಂಸಾಹಾರದಿಂದ ಪುಷ್ಟಿಕರವಾಗಿತ್ತು. ಅದರ ಫಲವೆಂದರೆ ಇವರು ಇಲ್ಲಿಯವರೆಗಿನ ಎಲ್ಲ ಪ್ರಬೇಧಗಳಿಗಿಂತ ಹೆಚ್ಚು ಎತ್ತರದ ಮನುಷ್ಯರಾಗಿದ್ದರು. 5-6 ಅಡಿಗಳವರೆಗೂ ಬೆಳೆಯುತ್ತಿದ್ದರು. ಬಹಳ ಮುಖ್ಯ ಅಂಶವೆಂದರೆ ಗಂಡು ಹೆಣ್ಣುಗಳಲ್ಲಿ ಎತ್ತರ ಮತ್ತು‌ ದೇಹಾಕಾರದಲ್ಲಿ ಅಂತರವಿರಲಿಲ್ಲ. ಅಂದರೆ ಪುಷ್ಟಿಕರ ಮತ್ತು‌ ಸಮೃದ್ಧ ಆಹಾರದ ಫಲವಾಗಿ ಮಹಿಳೆಯರು ಅತ್ಯಂತ ವೇಗವಾಗಿ ಎತ್ತರದಲ್ಲಿ ಬೆಳವಣಿಗೆ ಪಡೆದಿದ್ದರು.

ಉತ್ತಮತರ ಆಯುಧಗಳ ತಯಾರಿಕೆ, ಬೇಟೆಗಾರಿಕೆ, ಸಮುದಾಯ ಜೀವನ, ಪ್ರೋಟೀನು ಯುಕ್ತ ಹಾಗೂ ಮೆದುಳಿನ ಬೆಳವಣಿಗೆಗೆ ಅತ್ಯಗತ್ಯವಾದ ಪ್ರಾಣಿಗಳ ಕೊಬ್ಬಿನ‌ ಅಂಶದಿಂದ ಕೂಡಿದ ಪುಷ್ಟಿಕರ ಆಹಾರ ಇವುಗಳೆಲ್ಕದರ ಫಲವಾಗಿ ಇವರ ಮೆದುಳು 900 ರಿಂದ 1200 ಸಿಸಿ ಗಾತ್ರದ್ದಾಗಿತ್ತು. ಅದರಲ್ಲಿಯೂ ಮುಮ್ಮೆದುಳಿನ ಬೆಳವಣಿಗೆ ಹೆಚ್ಚು ಪ್ರಕಟವಾಗಿತ್ತು. ಜನಸಂಖ್ಯೆಯೂ ಹೆಚ್ಚುತ್ತಿತ್ತು.

ದೂರ ದೂರದ ಖಂಡಗಳ ವಿವಿಧ ಕಷ್ಟಕರ ಪರಿಸ್ಥಿತಿಯನ್ನು ಎದುರಿಸಿ ಜೀವಿಸಬಲ್ಲ ಛಾತಿ ಬೆಳೆದಿತ್ತು. ಸಮುದ್ರ ಯಾನವನ್ನೂ ಸಾಧಿಸಿದ್ದರು.
ಹೀಗೆ ಮೂರು ಹಂತಗಳಲ್ಲಿ ಕೇವಲ 350 ಸಿಸಿ ಗಾತ್ರದ ಮೆದುಳಿನಿಂದ 1200 ಸಿಸಿ ಗಾತ್ರದ ಮೆದುಳಿನವರೆಗೆ ಮನುಷ್ಯರ ಮೆದುಳು ಬೆಳೆಯಿತು. ಮುಂದಿನ ಕಾಲಘಟ್ಟದಲ್ಲಿ ಅರಿವಿನ ನೆಗೆತ ಸಾಧಿಸಲು ರಂಗ ಸಜ್ಜಾಯಿತು.

ಮುಂದಿನ ಸಂಚಿಕೆಯಲ್ಲಿ :  ಮೊತ್ತ ಮೊದಲ ಬಾರಿಗೆ ಅಜ್ಜಿಯರನ್ನು ಕಂಡ ಮಾನವರು

ಮತ್ತು ಅದರಿಂದಾದ ಜ್ಞಾನದ ಸ್ಫೋಟ.

‍ಲೇಖಕರು Admin

9 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading