ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

3

ಅರಿವಿನ ತಾಣ ಮೆದುಳಿನ ಬೆಳವಣಿಗೆ

ಸುಮಾರು 400 ಕೋಟಿ ವರ್ಷಗಳ ಹಿಂದೆ ಜೀವಿಗಳು ಉಗಮವಾದಂದಿನಿಂದ ಆರಂಭವಾಗ ಜೀವ ವಿಕಾಸದ ಉನ್ನತ ಫಲ ಮಾನವಜೀವಿಗಳು. ಈ 400 ಕೋಟಿ ವರ್ಷ ಕಾಲದ ಜೀವಿಗಳು ಸಾಧಿಸಿದ ಬೆಳವಣಿಗೆಯ ಗುರುತುಗಳು ಮನುಷ್ಯರಲ್ಲಿ ಇಂದಿಗೂ ಇವೆ. ಜೀವ ವಿಕಾಸದ ಈ ಸಾಧನೆಗಳಲ್ಲಿ ಮನುಷ್ಯರು ಮನುಷ್ಯರಾಗಿ ರೂಪುಗೊಂಡಿದ್ದಕ್ಕೆ ಆಧಾರವಾದ ಪ್ರಮುಖ ಅಂಶಗಳನ್ನು ಚುಟುಕಾಗಿ ಹೀಗೆ ಪಟ್ಟಿ ಮಾಡಬಹುದು : ಮೊತ್ತ ಮೊದಲನೆಯದಾಗಿ ನೇರ ನಿಲುವು ; ಅದರಿಂದಾಗಿ ಮುಂಗಾಲುಗಳು ಭಾರ ಹೊರುವ ಹೊಣೆಯಿಂದ ಬಿಡುಗಡೆಗೊಂಡು ಕ್ರಿಯಾಶೀಲವಾದ್ದು ಮತ್ತು ವಿವಿಧ ಹಂತಗಳಲ್ಲಿ ವಿಕಾಸವಾದದ್ದು ; ಮುಂದೃಷ್ಟಿ-ಕಣ್ಣುಗಳೆರಡೂ ಮುಂದೆ ಬಂದು ಮೂರು ಆಯಾಮಗಳ ದೃಷ್ಟಿ, ದೂರ ಹಾಗೂ ಸೂಕ್ಷ್ಮ ನೋಟದ ವಿಕಾಸ ;  ಸಮುದಾಯ ಜೀವನ , ಸಾಮಾಜಿಕ ಒಡನಾಟ ; ಭಾಷೆಯೆಂಬ ಅರಿವಿನ ನೆಗೆತದ ಬೆಳವಣಿಗೆ ; ಕಿವಿಗಳು ಭಾಷೆಯನ್ನು ಆಲಿಸಲು ಅರ್ಥೈಸಲು ಪಡೆದ ಸೂಕ್ಷ್ಮತೆ; ವ್ಯಾಪಕ ಮತ್ತು ಸಂಕೀರ್ಣ ನರವ್ಯೂಹ ;  ಇವೆಲ್ಲವುಗಳ ಜೊತೆ ಜೊತೆಗೆ ಮೆದುಳಿನ ಗಾತ್ರ, ವಿವಿಧ ಭಾಗಗಳ ಬೆಳವಣಿಗೆ ; ಮಾನವ ಸಮಾಜದ ಬೆಳವಣಿಗೆಯೊಂದಿಗೆ ಬೆಳೆದ  ಬುದ್ಧಿ ಶಕ್ತಿ,ಚಿಂತನೆ,ಮನಸ್ಸು, ಪ್ರಜ್ಞೆಯ ಬೆಳವಣಿಗೆ.

ಸಾಮಾನ್ಯವಾಗಿ ಮನುಷ್ಯರು ರೂಪುಗೊಂಡಿದ್ದಕ್ಕೆ ಕೇವಲ ಮೆದುಳು,ಬುದ್ಧಿಶಕ್ತಿಯ ಬೆಳವಣಿಗೆ ಮಾತ್ರ ಕಾರಣ ಎಂಬಂತೆ ಬಿಂಬಿಸುವುದು ಸಾಮಾನ್ಯ. ಆದರೆ ಮಾನವ ಶಿಶುವಿನ ಗರ್ಭದೊಳಗಿನ ಮತ್ತು ಹುಟ್ಟಿದ ನಂತರದ ಶಿಶುವಿನ ಮೆದುಳಿನ ಬೆಳವಣಿಗೆಯನ್ನು ಗಮನಿಸಿದರೆ ಮೇಲಿನ ಅಂಶಗಳ ಮೆದುಳಿನ ಬೆಳವಣಿಗೆಗೂ ಎಷ್ಟು ಮುಖ್ಯ ಎಂಬುದು ತಿಳಿಯುತ್ತದೆ.

ಶಿಶುವಿನ ಮೆದುಳಿನ ಬೆಳವಣಿಗೆ :
ಆಗ ತಾನೇ ಹುಟ್ಟಿದ ಶಿಶುವಿನ ಮೆದುಳಿನ ಗಾತ್ರ ವಯಸ್ಕರ ಮೆದುಳಿನ ಗಾತ್ರದ ಕಾಲು ಭಾಗಕ್ಕಿಂತ  ಕಡಿಮೆ. ಆದರೆ ಒಂದು ವರ್ಷವಾಗುವುದರೊಳಗೆ ಮಗುವಿನ ಮೆದುಳಿನ ತೂಕ ಎರಡು ಪಟ್ಟು ಬೆಳೆಯುತ್ತದೆ. ಅಂದರೆ ವಯಸ್ಕರ ಮೆದುಳಿನ ಶೇ.50 ರಷ್ಟಾಗುತ್ತದೆ.
ಮೂರನೇ ವರ್ಷದ ವೇಳೆಗೆ ಅದು ಶೇ.80 ರಷ್ಟು ಹಾಗೂ ಐದನೆಯ ವಯಸ್ಸಿನ ವೇಳೆಗೆ ಶೇ 90 ರಷ್ಟು ಬೆಳೆಯುತ್ತದೆ. ಗರ್ಭದೊಳಗಿನ ಸೀಮಿತ ಅವಕಾಶದಲ್ಲಿ ಅದರ ಇಂದ್ರಿಯಗಳಿಗೆ ಹಾಗು ದೇಹಕ್ಕೆ ಸಿಗುವ ಸೀಮಿತ ಪ್ರಚೋದನೆಗಳ ಕಾರಣದಿಂದ ಬಹು ಸೀಮಿತವಾಗಿಯಷ್ಟೇ ಮೆದುಳಿನ ಬೆಳವಣಿಗೆ ಸಾಧ್ಯ. ಹುಟ್ಟಿದ ಮೇಲೆ ಹೊರ ಜಗತ್ತಿನ ವೈವಿಧ್ಯಮಯ ಗಾಳಿ,ಬೆಳಕು, ಶಾಖ, ಚಳಿ, ಸ್ಪರ್ಶ, ಶಬ್ದ, ವಾಸನೆ, ದೃಶ್ಯ, ಮುಖಗಳು ಅವುಗಳ ಭಾವನೆಗಳು, ಚಲನೆ, ಗುರುತ್ವಾಕರ್ಷಣ, ಮುಂತಾದ ಅನುಭವಗಳಿಗೆ ಒಮ್ಮೆಗೆ ಒಡ್ಡಿಕೊಳ್ಳುವ ಸನ್ನಿವೇಶದಲ್ಲಿ ಮೆದುಳಿನಲ್ಲಿ ಆಯಾ ಇಂದ್ರಿಯಗಳಿಗೆ ಸಂಬಂಧಿಸಿದ ಸಂವೇದನೆಗಳ ಹಾಗೂ ದೇಹದ ವಿವಿಧ ಭಾಗಗಳ ಚಲನೆಯ ಭಾಗ ದಿಢೀರನೆ ಬೆಳವಣಿಗೆಯನ್ನು ಕಾಣುತ್ತದೆ. ಆದ್ದರಿಂದ ಅದರ ಬೆಳವಣಿಗೆಯ ವೇಗ ಜೀವನದ ಮೊದಲ ವರ್ಷದಲ್ಲಿಯೇ ಅತ್ಯಂತ ಹೆಚ್ಚು.

ಐದು ವರ್ಷವಾಗುವುದರೊಳಗೆ ಮೆದುಳು ಅರಿವಿನ ತಾಣವಾಗಿ ಬೆಳವಣಿಗೆ ಸಾಧಿಸಿರುತ್ತದೆ. ಮುಂದೆ ಇಪ್ಪತ್ತು ವರ್ಷದವರೆಗೂ ಬೆಳವಣಿಗೆ ಸಾಧಿಸುತ್ತದೆ. ಮುಂದೆ ಮೂವತ್ತು – ನಲವತ್ತು ವರ್ಷದಿಂದ ನಿಧಾನವಾಗಿ ಕುಗ್ಗಲಾರಂಭಿಸುತ್ತದೆ. ಅರವತ್ತು ವರ್ಷದ ನಂತರ ಮತ್ತಷ್ಟು ಹೆಚ್ಚು ಕುಗ್ಗುತ್ತದೆ.

ಮೆದುಳಿನ‌ ಬೆಳವಣಿಗೆ ಎಂದರೆ :
ಮೆದುಳಿನ ಕಾರ್ಯಗಳಿಗೆ ಹಲ ಹಲವು ಆಯಾಮಗಳು, ಮುಖಗಳಿರುವಂತೆ ಅದರ ಬೆಳವಣಿಗೆಗೂ ಹಲ ಹಲವು ಆಯಾಮಗಳಿವೆ. ಆದರೆ ಅರಿವ ಬೆಡಗನ್ನು ಅರಿವ ದಿಸೆಯಲ್ಲಿ ಮುಖ್ಯವಾದುದು. ಪಂಚೇದ್ರಿಯಗಳ ಗ್ರಹಣ ಶಕ್ತಿ, ನೆನಪು, ಬುದ್ಧಿ ಶಕ್ತಿ, ಚಿಂತನೆ, ವಿಶ್ಲೇಷಣೆಗಳ ಬೆಳವಣಿಗೆಯ ಸಾಧನವಾದ ಮೆದುಳಿನ ನರಕೋಶಗಳ ಸಂಧಿ/ ಸಂಗಮ ಸ್ಥಾನಗಳ ( synapses ) ಅತಿ ವೇಗವಾದ ವೃದ್ಧಿ.

ಸಂಗಮ ಸ್ಥಾನಗಳು ನರ ವ್ಯೂಹದ,ಮೆದುಳಿನ ಕಾರ್ಯಭಾರದ ಬಹು ಮುಖ್ಯ ವಿಧಾನ. ನರಕೋಶದಿಂದ ಮತ್ತೊಂದು ನರಕೋಶಕ್ಕೆ ಸಂದೇಶಗಳನ್ನು ರವಾನಿಸುವ ಮೂಲಕ ನಮ್ಮ ಸಂವೇದನೆ, ಚಿಂತನೆಯನ್ನು ರೂಪಿಸುತ್ತವೆ. ನಮ್ಮ ನೆನಪಿನ, ಪದ ಸಂಪತ್ತಿನ ಶೇಖರಣಾ ಸ್ಥಾನಗಳಾಗಿ,ಹಿಂದಿನ ಘಟನೆಗಳನ್ನು, ಮಾಹಿತಿಗಳನ್ನು ಶೇಖರಣಾ ಸ್ಥಾನದಿಂದ ಎತ್ತಿಕೊಂಡು ಇಂದಿನ ಘಟನೆ, ಮಾಹಿತಿಗಳೊಂದಿಗೆ ತುಲನೆ ಮಾಡಿ ನಮ್ಮ ವಿಶ್ಲೇಷಣೆ, ಕ್ರಿಯಾಶೀಲತೆಯನ್ನು ಸಾಧ್ಯವಾಗಿಸುವುದು ಈ ಸಂಗಮ ಸ್ಥಾನಗಳ ವಿಪುಲತೆಯೇ. 

ಮಗುವಿನ ಬಾಲ್ಯಾವಧಿಯಲ್ಲಿ ಪ್ರತಿ ಸೆಕೆಂಡಿಗೆ ಹತ್ತು ಲಕ್ಷದ ಸಂಗಮ ಸ್ಥಾನಗಳು ಸೃಷ್ಟಿಯಾಗುತ್ತವೆ. ಈ ಬೃಹತ್ ಪ್ರಮಾಣವೇ ಇವುಗಳ ಪ್ರಾಮುಖ್ಯತೆಯ ಅರಿವನ್ನು ಉಂಟುಮಾಡುತ್ತದೆ. ಇಡೀ ಐದಾರು ವರ್ಷಗಳ ಕಾಲ ಒಂದು ಸೆಕೆಂಡಿಗೆ ಹತ್ತು ಲಕ್ಷ ಎಂದರೆ ಯಾವ ಬೃಹತ್ ಪ್ರಮಾಣದಲ್ಲಿ ಸಂಗಮ ಸ್ಥಾನಗಳ ನಿರ್ಮಾಣವಾಗುತ್ತದೆ ಎಂಬುದು ಊಹೆಗೂ ನಿಲುಕದು.‌ಎಲ್ಲ ಇಂದ್ರಿಯಗಳ ಗ್ರಹಣ ಶಕ್ತಿಯ ಸೂಕ್ಷ್ಮತೆ,ವಿಸ್ತಾರಗಳ ಬೆಳವಣಿಗೆ, ಅವುಗಳನ್ನು ಆಧರಿಸಿ ಮಾಡುವ ವಿಶ್ಲೇಷಣೆಗಳು ಒಂದೊಂದೂ ಹಲ ಹಲವು ಸಾವಿರ ನರಕೋಶಗಳಲ್ಲಿ ಪ್ರವಹಿಸಿ ಒಂದಕ್ಕೊಂದು ದಾಟಿಸಿ ಲಕ್ಷ, ದಶಲಕ್ಷಗಟ್ಟಲೆ ಸಂಗಮ ಸ್ಥಾನಗಳನ್ನು ಸೃಷ್ಟಿಸುತ್ತವೆ. ಜಗತ್ತಿನ ವಿವಿಧ ವಸ್ತುಗಳ ಬಗ್ಗೆ, ಕ್ರಿಯೆಗಳ ಬಗ್ಗೆ ಮಗುವಿನ ಅರಿವನ್ನು ಬೆಳೆಸುತ್ತವೆ.

ಸೆರೆಬೆಲ್ಲಮ್ ಅಥವಾ ಕಿರಿ‌ ಮೆದುಳು ಎಂಬ ಮೆದುಳಿನ‌ ಅಂಗ ಮಗುವಿನ ಕೈ ಕಾಲುಗಳ ಮಾಂಸಖಂಡಗಳ ವರ್ಧನೆ, ಅವುಗಳ ಮೇಲೆ ನಿಯಂತ್ರಣ, ಅದರ ಫಲವಾಗಿ ಮಗುಚಿಕೊಳ್ಳುವುದು,ತೆವಳುವುದು, ಕುಳಿತುಕೊಳ್ಳುವುದು, ಕೊನೆಗೆ ತಿಪ್ಪ ತಿಪ್ಪ ಹೆಜ್ಜೆಯಿಟ್ಟು ನಡೆಯಲಾರಂಭಿಸುವುದು ಮೊದಲಾದ ಚಲನಾ ಸಾಮರ್ಥ್ಯದ ಬೆಳವಣಿಗೆಯಿಂದಾಗಿ ಮೊದಲ ವರ್ಷದಲ್ಲಿ ಮೂರು ಪಟ್ಟು ಬೆಳೆಯುತ್ತದೆ. ಹಿಂದಿನ ಸಂಚಿಕೆಯಲ್ಲಿ ವಿವರಿಸಿದ ದೃಷ್ಟಿ, ಕೇಳುವ ಶಕ್ತಿಯ ಬೆಳವಣಿಗೆ ಮೆದುಳಿನಲ್ಲಿ ಇವುಗಳ ಗ್ರಹಣಕ್ಕಾಗಿ ಮೀಸಲಿರಿಸಿದ ನಿರ್ದಿಷ್ಟ ಪ್ರದೇಶಗಳಲ್ಲಿ ಸಂಗಮ ಸ್ಥಾನಗಳ ಬೆಳವಣಿಗೆಯನ್ನು ಉಂಟುಮಾಡುತ್ತವೆ.

ಮುಖಗಳನ್ನು, ಅವುಗಳ ಮೇಲೆ, ದನಿಯ ಏರಿಳಿತಗಳಲ್ಲಿ ವ್ಯಕ್ತವಾಗುವ ಭಾವನೆಗಳನ್ನು ಗುರುತಿಸುವ ಶಕ್ತಿ ಮಗುವಿಗೆ ಮೂರು ತಿಂಗಳಾಗುವಷ್ಟರಲ್ಲಿ ಬೆಳೆಯುತ್ತದೆ. ಅದಕ್ಕೆ ಸಂಬಂಧಿಸಿದ ಹಿಪ್ಪೋಕ್ಯಾಂಪಸ್ ಎಂಬ ಮೆದುಳಿನ‌ ಅಂಗದ ಬೆಳವಿಗೆಗೆ ಇದು ಕಾರಣವಾಗುತ್ತದೆ. ಈ ಗುರುತು ಹಿಡಿಯುವ ಕ್ರಿಯೆ ಮಗು ಅಮ್ಮ ಅಥವಾ ತನ್ನ ಪೋಷಣೆಗೆ ನೆರವಾಗುವವರನ್ನು ಕಂಡ ಕೂಡಲೆ ಕೈ ಕಾಲು ಅಲ್ಲಾಡಿಸಿ ಸಂತಸ ವ್ಯಕ್ತಪಡಿಸುವ ,ಅವರನ್ನು ತನ್ನತ್ತ ಸೆಳೆಯುವ ದೈಹಿಕ ಕ್ರಿಯೆಗೆ ಇಂಬಾಗುತ್ತದೆ. ಮಗು ಹುಟ್ಟುವುದೇ ಒಂದು ಸಾಮಾಜಿಕ ಸಂಬಂಧದಲ್ಲಿ. ಹುಟ್ಟಿದಂದಿನಿಂದ ಬೆಳೆಯುವುದೂ ಒಂದು ಸಾಮಾಜಿಕ ಸಂಬಂಧಗಳ ನೇಯ್ಗೆಯಲ್ಲಿ. ಇದು ಮಗುವಿನ ಎಲ್ಲ ಕಲಿಕೆಗೆ ಆಧಾರ. ತಾಯಿ ಮೊದಲಾದ ಆಪ್ತ ಸಂಬಂಧಿಗಳು ಮಗುವಿನೊಡನೆ ನಡೆಸುವ ಎಲ್ಲ ಕ್ರಿಯೆಗಳೂ ಒಂದು ಜಂಟಿ ಕ್ರಿಯೆ.

ಈ ಸಂವಹನದ ಭಾಗವಾಗಿ ಮಗುವಿನ ಭಾಷೆ ಬೆಳೆಯುತ್ತದೆ. ಭಾಷೆಯ ವಿವಿಧ ಪದಗಳು, ಅವುಗಳ ಅರ್ಥ, ಉಚ್ಚಾರಣೆಗಳಿಗೆ ಗಮನ ನೀಡಲಾರಂಭಿಸುತ್ತದೆ. ಮಾತಿನ ಮೂಲಕ ನೀಡಿದ ಸೂಚನೆಯನ್ನು ಅರ್ಥ ಮಾಡಿಕೊಳ್ಳುವ, ಅದನ್ನು ಅನುಸರಿಸುವ ಸಾಮರ್ಥ್ಯ ಬೆಳೆಯುತ್ತದೆ.  ಎರಡನೇ ವರ್ಷದ ವೇಳೆಗೆ ಮಗುವಿನ ಪದ ಸಂಪತ್ತು ನಾಲ್ಕು ಪಟ್ಟು ಹೆಚ್ಚುತ್ತದೆ. ಮಗು ವಿಪರೀತವಾಗಿ ಮಾತಾಡತೊಡಗುತ್ತದೆ. ಇದನ್ನು ಪದ ಸ್ಫೋಟ ಎಂದು ಕರೆಯಲಾಗಿದೆ. ಮನುಷ್ಯನ ಅರಿವಿನ ಒಂದು ಪ್ರಮುಖ ಸಾಧನವಾದ ಭಾಷೆಯ ಬೆಳವಣಿಗೆಯಾಗುತ್ತದೆ. ಈ ಸಮಯದಲ್ಲಿ ಮೆದುಳಿನ ಭಾಷಾ ಸಂಬಂಧ ಪ್ರದೇಶದಲ್ಲಿನ ನರಕೋಶಗಳ ಸಂಬಂಧಗಳು ಮಾತ್ರವಲ್ಲದೆ ಇತರ ಪ್ರದೇಶಗಳ ನರಕೋಶಗಳೊಡನೆ ಸಂಪರ್ಕ ಸಾಧಿಸಲಾಗುತ್ತದೆ. ಈ ಎಲ್ಲವುಗಳ ಕಾರಣದಿಂದ ಈ ಪ್ರದೇಶದಲ್ಲಿ ಸಂಗಮ ಸ್ಥಾನಗಳು ವಿಪುಲವಾಗಿ ಬೆಳೆಯುತ್ತದೆ.

ಹೀಗೆ ನರಕೋಶಗಳ ಸಂಗಮ ಸ್ಥಾನಗಳು ಮೊದಲ ಮತ್ತು ಎರಡನೇ ವರ್ಷದ ನಡುವೆ ಗರಿಷ್ಟ ಮಟ್ಟದ ಬೆಳವಣಿಗೆ ಸಾಧಿಸುತ್ತವೆ. ಈ ಗರಿಷ್ಟ ಮಟ್ಟದ ಬೆಳವಣಿಗೆ ಮೆದುಳಿನ ಒಂದೊಂದು ಪ್ರದೇಶಕ್ಕೂ ಬೇರೆ ಬೇರೆ ಇರುತ್ತದೆ. ಉದಾಹರಣೆಗೆ ದೃಷ್ಟಿ ಪ್ರದೇಶದಲ್ಲಿ ಸಂಗಮ ಸ್ಥಾನಗಳ ಗರಿಷ್ಟ ಮಟ್ಟದ ಬೆಳವಣಿಗೆ 4-8 ತಿಂಗಳ ಮಗುವಿನಲ್ಲಾದರೆ, ಚಿಂತನೆ, ವಿಶ್ಲೇಷಣೆಯನ್ನು ಬೆಳೆಸುವ ಮೆದುಳಿನ ಭಾಗ- ಮುಮ್ಮೆದುಳಿನ ಮುಂತುದಿಯಲ್ಲಿ ಸಂಗಮ ಸ್ಥಾನಗಳ ಗರಿಷ್ಠ ಬೆಳವಣಿಗೆ ಸುಮಾರು 15 ನೇ ತಿಂಗಳಿನಿಂದ ಮೂರು ವರ್ಷದವರೆಗೆ. ಆಗ ಮಗುವಿಗೆ ವಿವಿಧ ಸಂಗತಿ,ಮಾಹಿತಿಗಳನ್ನು ಪೋಣಿಸಿ ಅಥವಾ ತುಲನೆ ಮಾಡಿ ಇವೆಲ್ಲಾ ಮರಗಳು, ಇವೆಲ್ಲ ಹೂಗಳು, ಇವು ಕುರ್ಚಿಗಳು ಎಂಬಂತಹ ಸಾಮಾನ್ಯೀಕರಣ ಮಾಡಿಕೊಳ್ಳಲು ಶಕ್ತವಾಗುತ್ತದೆ.

ಮಗುವಿನ ವಿಶೇಷ ಕಲಿಕಾ ಸಾಮರ್ಥ್ಯ ಮತ್ತು ಪರಿಸರಕ್ಕೆ ಒಗ್ಗಿಕೊಳ್ಳುವ ಸಾಮರ್ಥ್ಯ( Plasticity of the brain ) : 
ಸಂಗಮ ಸ್ಥಾನಗಳ ವಿಪುಲ ಬೆಳವಣಿಗೆಯ ಬಗ್ಗೆ ಮೇಲೆಲ್ಲಾ ಮತ್ತೆ ಮತ್ತೆ ವಿವರಿಸಲಾಗಿದೆ.  ಆದರೆ ಈ ವಿಪುಲತೆ ಎಷ್ಟೆಂದರೆ ಅನಗತ್ಯವೆನಿಸುವಷ್ಟು.

ಇದೊಂದು ಎಲ್ಲ ತಾಯಿ, ತಂದೆಯರೂ ಮತ್ತು ಅರಿವಿನ ಬಗೆಯ ಬಗ್ಗೆ ಆಸಕ್ತರೆಲ್ಲ ಆಸಕ್ತಿಯಿಂದ ಗಮನಿಸಬೇಕಾದ ಅಂಶ. ಮಗುವಿನ ಮೆದುಳಿನ‌ ಬೆಳವಣಿಗೆಯ ಸಮಯದಲ್ಲಿ ನರಕೋಶಗಳ ಸಂಗಮ ಸ್ಥಾನಗಳು ,ವಯಸ್ಕರಲ್ಲಿ ಅವು ಎಷ್ಟಿರುತ್ತವೆಯೋ ಅದರ ಎರಡು ಪಟ್ಟು ಬೆಳೆಯುತ್ತವೆ.  ನಂತರದ ವರ್ಷಗಳಲ್ಲಿ ಇವುಗಳನ್ನು ಅರ್ಧಕ್ಕರ್ಧ ಕತ್ತರಿ ಪ್ರಯೋಗಕ್ಕೆ ಒಳಪಡಿಸಲಾಗುತ್ತದೆ. ಈ ಕ್ರಿಯೆಗೆ blooming and pruning ಎಂದು ಕರೆಯುತ್ತಾರೆ. ಈ ರೀತಿಯ ವಿಪುಲತೆ ಮತ್ತು ಅವುಗಳನ್ನು ಕತ್ತರಿಸಿ ತೆಗೆದುಹಾಕುವುದು ಜೀವಿಗಳಲ್ಲಿರುವ ಅಮೂಲ್ಯ ಪೋಷಕಾಂಶಗಳನ್ನು  ವ್ಯರ್ಥಗೊಳಿಸಲಾಗುತ್ತಿದೆ ಎಂಬ ಭಾವನೆ ಮೂಡಿಸುತ್ತದೆ. ಆದರೆ ಇದು ಕೋಟಿಗಟ್ಟಲೆ ವರ್ಷಗಳ ಕಾಲದಲ್ಲಿ ಮೇಲು ಹಂತದ ಜೀವಿಗಳ ವಿಕಾಸದಲ್ಲಿ ರೂಪುಗೊಂಡ  ಒಂದು ಬಹು ಮುಖ್ಯ ಮತ್ತು ಅವಶ್ಯಕ ಕತಾಣ-ಯೆ.

ಮಕ್ಕಳು ಕಂಡದ್ದನ್ನೆಲ್ಲಾ ಮುಟ್ಟಿ, ಅತ್ತಿತ್ತ ತಿರುಗಿಸಿ ನೋಡುವ,  ಎಲ್ಲವನ್ನೂ ತಿಳಿದುಕೊಳ್ಳುವ ಕುತೂಹಲ ಮತ್ತು  ಕಲಿಯುವ ಸಾಮರ್ಥ್ಯವನ್ನು ಎಲ್ಲರೂ ಗಮನಿಸಿದ್ದೇವೆ. ಈ ಸಾಮರ್ಥ್ಯದ ಜೈವಿಕ ಅಡಿಪಾಯ ಸಂಗಮ ಸ್ಥಾನಗಳ ದುಪ್ಪಟ್ಟು ಬೆಳವಣಿಗೆ. ಮಗುವೊಂದು ತನ್ನ ಬೆಳವಣಿಗೆಗೆ ಇರುವ ಎಲ್ಲ ಸಾಧ್ಯತೆಗಳನ್ನೂ ಅನ್ವೇಷಿಸಲು, ಉಪಯೋಗಿಸಿಕೊಳ್ಳಲು ಜೀವವಿಕಾಸ ಕ್ರಮದಲ್ಲಿ ರೂಪುಗೊಂಡಿರುವ ವಿಧಾನ‌. ಬದಲಾಗುತ್ತಿರುವ ಭೌತಿಕ, ಜೈವಿಕ ಹಾಗೂ ಸಾಮಾಜಿಕ ಪರಿಸರಕ್ಕೆ ಹೊಂದಿಕೊಳ್ಳುವ, ಒಗ್ಗಿಕೊಳ್ಳುವ ಸಾಮರ್ಥ್ಯದ ಒಂದು ಮುಖ್ಯ ಸಾಧನ.
ಈ ಸಂಗಮ‌ ಸ್ಥಾನಗಳು ಮಗು ಬೆಳೆಯುವ ಮೂರೂ ಆಯಾಮದ ಪರಿಸರದಲ್ಲಿ ಅದರ ಅನುಭವಗಳಿಗೆ ಅನುಸಾರವಾಗಿ, ಪರಿಸರದ ಪ್ರಚೋದನೆಗಳಿಗೆ ತಕ್ಕಂತೆ ಬೆಳೆಯುತ್ತವೆ.

ಮಕ್ಕಳು ಬೆಳೆಯುವ ಹಳ್ಳಿ,ನಗರಗಳ ಪರಿಸರ, ಮನೆಯ ವೃತ್ತಿ ಪರಿಸರ, ಕಲೆಗಳ,ಸಂಗೀತ,ಸಾಹಿತ್ಯದ ಪರಿಸರ ಅಥವಾ ವಿವಿಧ ರೀತಿಯ ಕೃಷಿ ಪರಿಸರದ ಅನುಭವಗಳನ್ನು ಆಯಾ ಪರಿಸರದಲ್ಲಿ ಬೆಳೆದ ಮಕ್ಕಳು ಬಹು ಚಿಕ್ಕ ವಯಸ್ಸಿನಲ್ಲೇ ಸ್ಥಾನಗಳ ಮೂಲಕ ಅವರ ಮೆದುಳಿನಲ್ಲಿ ಅಚ್ಚೊತ್ತಿದಂತಾಗುತ್ತವೆ. ಈ ಪ್ರಕ್ರಿಯೆಯ ಫಲವಾಗಿಯೇ ಎಳೆ ವಯಸ್ಸಿನ ಮಕ್ಕಳು ಸಂಗೀತ, ಭಾಷೆ, ಸಾಮಾನ್ಯ ಜ್ಞಾನ ಅಷ್ಟೇ ಏಕೆ ವಾಹನ ಚಾಲನೆ, ಯಂತ್ರಗಳ ರಿಪೇರಿ, ಅಡಿಗೆ ಮಾಡುವ ವಿಶೇಷ ಸಾಮರ್ಥ್ಯ ಅಭಿವ್ಯಕ್ತಗೊಳಿಸುವುದನ್ನು ಕಾಣುತ್ತೇವೆ.  ಈ ಅವಧಿಯಲ್ಲಿ ಸರಿಯಾದ ಬೆಳವಣಿಗೆಯ ಅನುಕೂಲದ ಕೊರತೆ ಅಥವಾ ಕೆಟ್ಟ ಅನುಭವಗಳೂ ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಉಳಿದು ಮುಂದೆ ಮಕ್ಕಳ ಬುದ್ಧಿ ಶಕ್ತಿ, ಯೋಚನಾ ಶಕ್ತಿ, ವರ್ತನೆಗಳ ಮೇಲೆ ಖಾಯಂ ಆದ ಹಾನಿಕರ ಪರಿಣಾಮಗಳನ್ನೂ ಬೀರಬಹುದು.

ಮುಂದೆ ಮಗು ಬೆಳೆಯುತ್ತಾ ಕೆಲ ಅನುಭವ,ತಿಳುವಳಿಕೆ,ಕಲಿಕೆಗಳು ಅದರ ಸನ್ನಿವೇಶಕ್ಕೆ ತಕ್ಕಂತೆ ಅವಶ್ಯವಾಗುತ್ತವೆ. ಮತ್ತೆ ಅನೇಕ ಅನುಭವಗಳು ಅಷ್ಟೇನೂ ಉಪಯುಕ್ತವಾಗುವುದಿಲ್ಲ. ಅಂತಹ ಅನುಭವ,ಕಲಿಕೆಗಳಿಂದ ಮೂಡಿದ ನರಕೋಶ ಸಂಗಮ ಸ್ಥಾನಗಳನ್ನು ಮೆದುಳು ಅಳಿಸಿಹಾಕುತ್ತದೆ. ಅದರ ಫಲವಾಗಿ ದುಪ್ಪಟ್ಟು ಸಂಖ್ಯೆಯ ಸಂಗಮ ಸ್ಥಾನಗಳು ಅರ್ಧಕ್ಕರ್ಧ ಕತ್ತರಿ ಪ್ರಯೋಗಕ್ಕೆ ಒಳಗಾಗುತ್ತವೆ.
ಮೆದುಳಿನ ವಿವಿಧ ಪ್ರದೇಶಗಳಿಗೆ ಸಂಬಂಧಿಸಿ ಸಂಗಮ ಸ್ಥಾನಗಳ ಗರಿಷ್ಠ ಬೆಳವಣಿಗೆ ಬೇರೆ ಬೇರೆ ಇರುವಂತೆ ಅವುಗಳ ಕತ್ತರಿ ಪ್ರಯೋಗದ ಅವಧಿಯೂ ಬೇರೆ ಬೇರೆ. ಉದಾಹರಣೆಗೆ ದೃಷ್ಟಿ ಮತ್ತು ಶ್ರವಣದ ಅನುಭವಗಳ ಸಂಗಮ ಸ್ಥಾನಗಳ ಕತ್ತರಿ ಅವಧಿ 4 ರಿಂ 6 ವರ್ಷ ವಯಸ್ಸಿನವರೆಗೆ. ಆದರೆ ಚಿಂತನೆ, ಭಾವನೆಗಳ ನಿಯಂತ್ರಣ ಹದಿ ಹರೆಯದವರೆಗೂ ನಡೆಯುತ್ತಿರುತ್ತದೆ. ಈ ವಿಪುಲ ಬೆಳವಣಿಗೆ ಮತ್ತು ಕತ್ತರಿ ಪ್ರಕ್ರಿಯೆ ತಾಯಿ ತಂದೆಗಳಿಗೆ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳ ಶಿಕ್ಷಕರು ಮತ್ತು ಶಿಕ್ಷಣ ತಜ್ಞರಿಗೆ ಮಕ್ಕಳಿಗೆ ಪರಿಣಾಮಕಾರಿಯಾಗಿ ಕಲಿಸಲು ಒಂದು ಮುಖ್ಯ ಸಾಧನವಾಗಿದೆ.

ಈ ರೀತಿಯ ವಿಪುಲ ಬೆಳವಣಿಗೆ ಮತ್ತು ಕತ್ತರಿ ಪ್ರಯೋಗವನ್ನು ಸ್ಪಷ್ಟಪಡಿಸಿಕೊಳ್ಳಲು ಒಂದೆರಡು ಉದಾಹರಣೆಗಳನ್ನು ನೋಡೋಣ.
ಮಾನವ ವಿಕಾಸದ ಹಾದಿಯಲ್ಲಿ ಪ್ರತಿ ಮಗುವಿಗೂ ಭಾಷಾ ಕಲಿಕೆಯ ಸಾಮರ್ಥ್ಯ  ಅದರ ಮಾನವರೆಂಬ ಜೀವ ಪ್ರಬೇಧದ ವಂಶವಾಹಿಗಳಲ್ಲಿ ಸೇರಿಹೋದ ಲಕ್ಷಣವಾಗಿದೆ. ಅದರ ಫಲವಾಗಿ ಒಂದು ಮಗು ಆರು ತಿಂಗಳ ವೇಳೆಗೆ ಭಾಷೆಯನ್ನು ಆಲಿಸುವ, ಅದರ ಕಡೆಗೆ ಗಮನ ನೀಡಿ ಮನಸ್ಸಿನಲ್ಲಿ ಅಚ್ಚೊತ್ತಿಕೊಳ್ಳುವ ಸಾಮರ್ಥ್ಯ ಪಡೆಯುತ್ತದೆ. ಆದರೆ ಅದು ಕೇವಲ ಮನೆಯಲ್ಲಾಡುವ ಒಂದೇ ಭಾಷೆಗಷ್ಟೇ ಸೀಮಿತವಲ್ಲ.

ಯಾವುದೇ ಭಾಷೆಯನ್ನಾದರೂ ಅದರ ಶಬ್ದಗಳನ್ನು, ಉಚ್ಛಾರಗಳನ್ನು ಗಮನಿಸುಹ ಶಕ್ತಿ ಇರುತ್ತದೆ.‌ ಆದರೆ ಆ ನಂತರದ ಅವಧಿಯಲ್ಲಿ ಈ ಸಾಮರ್ಥ್ಯ ಕಡಿತಗೊಂಡು ಕೇವಲ ಮನೆಯಲ್ಲಿ ಬಳಸುವ ಭಾಷೆಯನ್ನಷ್ಟೇ ಮಗು ಗಮನಿಸುತ್ತದೆ. ಹೀಗೆ ಮಗುವಿಗೆ ಯಾವ ಭಾಷೆಯನ್ನಾದರೂ ಕಲಿಯುವ ಶಕ್ತಿಯೂ ಇದೆ. ಅದೇ ಸಮಯದಲ್ಲಿ ಒಂದು ಭಾಷೆಯ ಮೇಲೆ ಎಲ್ಲ ಗಮನ ಕೇಂದ್ರೀಕರಿಸಿ ಅದನ್ನು ಪರಿಣಾಮಕಾರಿಯಾಗಿ ಕಲಿಯುವ ಸಾಮರ್ಥ್ಯವೂ ಇದೆ. ಮಗುವಿಗೆ ತಾಯ್ನುಡಿಯ ಜೊತೆಗೆ ಮತ್ತೊಂದು ಭಾಷೆ ಕಲಿಸಬೇಕೆಂದಿದ್ದರೆ ಆರು ತಿಂಗಳ ಹಂತದಲ್ಲಿ ಮಗುವಿನ ಕಿವಿಗೆ ಆ ಭಾಷೆಯನ್ನು ಮತ್ತೆ ಮತ್ತೆ ಕೇಳಿಸುತ್ತಾ ಇರುವುದು ಉಪಯುಕ್ತವೆಂದು ಕಂಡುಕೊಂಡಿದ್ದಾರೆ.

ಅದೇ ರೀತಿ ನಮಗೆಲ್ಲ ಮನುಷ್ಯರ ಚಹರೆಗಳು,ಮುಖಭಾವಗಳು ಅವುಗಳ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸಿ ಗುರುತು ಹಿಡಿಯುವ ಶಕ್ತಿ ಇದೆ. ಆದರೆ ಆರು ತಿಂಗಳ ಮಗುವಿಗೆ ಮಾತ್ರ ಎರಡು ಕೋತಿಗಳು ಅಥವಾ ಇತರ ಗುರುತಿಸಲಾಗದ ಪ್ರಾಣಿಗಳ ನಡುವಣ ವ್ಯತ್ಯಾಸವನ್ನೂ ಗಮನಿಸಿ ಗುರುತು ಹಿಡಿಯುವ ಶಕ್ತಿ ಇದೆ. ಆದರೆ ಒಂಬತ್ತು ತಿಂಗಳಾಗುವ ವೇಳೆಗೆ ಈ ಸಾಮರ್ಥ್ಯ ಕಳೆದುಹೋಗುತ್ತದೆ.

‍ಲೇಖಕರು Admin

2 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading