
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.
ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.
ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.
ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.
ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.
‘ಅಕ್ಕಯ್’ನ ಕರುಳು ಹಿಂಡುವ ಸಂಕಟಗಳ ಕನ್ನಡಿಯಲ್ಲಿ ನಮ್ಮ ಮುಖಗಳು
ಅಕ್ಕಯ್ನ ಆತ್ಮ ಕಥನವನ್ನು ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ಎಂದ ಕುವೆಂಪು ಓದಿದ್ದರೆ ಅವರ ಪ್ರತಿಕ್ರಿಯೆ ಹೇಗಿರುತ್ತಿತ್ತು ? ಬಹುರೂಪಿ ಪ್ರಕಾಶನದ ‘ಅಕ್ಕಯ್’ ಓದುತ್ತಾ ಒಮ್ಮೆಲೆ ಹೀಗೆನ್ನಿಸಿತು. ಅಕ್ಕಯ್ನಂತಹವರಿಗೆ ಸಮಬಾಳು, ಸಮಪಾಲು, ಸರ್ವೋದಯ ಮನುಜಮತ, ವಿಶ್ವಪಥ, ವಿಶ್ವ ಮಾನವ ಮೊದಲಾದ ಅದ್ಭುತ ತತ್ವಗಳ ಅನ್ವಯ ಹೇಗೆ? ಹೀಗೆ ಮನಸ್ಸು ಚಿಂತನೆಗೆ ತೊಡಗಿತು.
‘ಯಾರೂ ಮುಖ್ಯರಲ್ಲ..’ ಎನ್ನುತ್ತಲೇ ಗುತ್ತಿ, ಪೀಂಚಲುರುಗಳನ್ನು ಮುಖ್ಯ ಭೂಮಿಕೆಗೆ ತಂದ ಕುವೆಂಪುರವರ ಆಶಯವನ್ನು ಮನಸ್ಸಿನಲ್ಲಿ ಕಾಪಿಟ್ಟು ಬೆಳೆಸಿಕೊಂಡವರೊಬ್ಬರು, ಅವನು ಅವಳಾದ ಕಾರಣಕ್ಕೆ ತಂದೆಯಿಂದಲೇ ಮನೆಯಿಂದ ಉಟ್ಟ ಬಟ್ಟೆಯಲ್ಲಿ ಹೊರ ಹಾಕಲ್ಪಟ್ಟು ಸಿಟಿ ಮಾರ್ಕೆಟ್, ಕಬ್ಬನ್ ಪಾರ್ಕ್ಗಳಲ್ಲಿ ವೇಶ್ಯಾವೃತ್ತಿಗೆ ದೂಡಲ್ಪಟ್ಟ ಅಕ್ಕಯ್ನಂತಹವರನ್ನು ಕೇಂದ್ರವಾಗಿಟ್ಟುಕೊಂಡು ಮಹಾ ಕಾದಂಬರಿಯೊಂದನ್ನು ರಚಿಸಿದರೆ ಹೇಗಿರಬಹುದು ? ಹೀಗೆ ನನ್ನ ಮನಸ್ಸಿನಲ್ಲಿ ಕಲ್ಪನೆಯ ಅಲೆಗಳು ಮೂಡಿ ಅಪ್ಪಳಿಸತೊಡಗಿದವು.
‘ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ ಕುದುರೆ ನೀನ್ ಓಡೆಂದ ಕಡೆಗೋಡು’ ಎಂದ ಡಿವಿಜಿ ತಮ್ಮ ನೆರೆ ಹೊರೆಯಲ್ಲಿಯೇ ಜೀವಿಸಿದ್ದರಬಹುದಾದ ಕುಟುಂಬಸ್ಥರು ತಮ್ಮ ಮಗನಾಗಿ ಮಗಳಾದ ಅಕ್ಕಯ್ನೊಂದಿಗೆ ನಡೆದುಕೊಂಡ ರೀತಿಯನ್ನು, ತಮ್ಮ ಪರಿಚಯದ ಸಭ್ಯ ವಕೀಲ, ಮ್ಯಾಜಿಸ್ಟ್ರೇಟರುಗಳು, ಅವರ ಮಕ್ಕಳುಗಳು ಅಕ್ಕಯ್ನೊಂದಿಗೆ ಪಶುಗಳಂತೆ ವರ್ತಿಸಿದ ಬಗ್ಗೆ ಗೊತ್ತಾದಾಗ ಬರೆವ ಕಗ್ಗ ಹೇಗಿರುತ್ತಿತ್ತು?

ಡಿವಿಜಿಯವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಭಗವದ್ಗೀತೆ ಅಥವಾ ಜೀವನ ಧರ್ಮ ಯೋಗದ ವಿಚಾರಗಳಿವು:
ಈಶ್ವರಃ ಸರ್ವ ಭೂತಾನಿ ಹೃದ್ದೇಶೇರ್ಜುನ ತಿಷ್ಠತಿ/ಭ್ರಾಮಯನ್ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ// 18( 61 )
ಎಲೈ ಅರ್ಜುನ, ಅಂತರ್ಯಾಮೀಯಾದ ಈಶ್ವರನು ತನ್ನ ಮಾಯೆಯಿಂದ ಶರೀರರೂಪಿ ಯಂತ್ರದ ಮೇಲೆ ಆರೂಢನಾಗಿ ಸರ್ವ ಪ್ರಾಣಿಗಳನ್ನು ತನ್ನಚ್ಛೆಯಂತೆ ಅಲೆಸುತ್ತಾ ಎಲ್ಲ ಪ್ರಾಣಿಗಳ ಹೃದಯದಲ್ಲಿ ನೆಲೆಸಿರುವನು.
ಈ ಮಹೇಶ್ವರನು ಅಕ್ಕಯ್ರವರ ಶರೀರ ಯಂತ್ರದ ಮೇಲೆ ಆರೂಢನಾಗಿ ಆತನಾಗಿದ್ದವನ ಮನಸ್ಸಿನಲ್ಲಿ ಆಕೆಯನ್ನು ಮೂಡಿಸಿದ ಮಾಯೆಯ ಹೊಣೆಯನ್ನು ಆ ಈಶ್ವರನೇ ಪೂರ್ತಿಯಾಗಿ ಹೊರಬೇಕಲ್ಲವೇ?
ಇನ್ನು ಮಹಾ ಪ್ರಸಿದ್ಧವಾದ ಭಗವದ್ಗೀತೆಯ ಉಕ್ತಿ:
ಕರ್ಮಣ್ಯೇವಾಧಿಕಾರಸ್ಥೇ ಮಾಫಲೇಶು ಕದಾಚನ /
ನಿನಗೆ ಕರ್ಮಮಾಡಲು ಮಾತ್ರ ಅಧಿಕಾರವಿದೆ,ಅದರ ಫಲದಲ್ಲಿ ಅಧಿಕಾರವಿಲ್ಲ. ಇದನ್ನು ಹೇಗೆ ಅಕ್ಕಯ್ನ ಕರ್ಮಗಳಿಗೆ ಅನ್ವಯಿಸಬಹುದು ?
ಅಥವಾ ಅಕ್ಕಯ್ನ ಹಲವು ಬಾರಿ ಗ್ಯಾಂಗ್ ರೇಪ್ ಮಾಡಿದವರಿಗೆ ?
ಭಗವದ್ಗೀತೆಯ ಪ್ರಸ್ತಾಪ ಬಂದಾಗ ಈ ಉಪದೇಶಗಳನ್ನು ಕೇಳುತ್ತಿದ್ದ ಅರ್ಜುನ ಆ ವೇಳೆಗೆ ಕೇವಲ ಕೆಲವೇ ವಾರಗಳ ಹಿಂದೆ ಬೃಹನ್ನಳೆಯಾಗಿ ಒಂದು ವರ್ಷ ಅಜ್ಞಾತ ವಾಸ ಅನುಭವಿಸಿದ್ದ. ಉಪದೇಶ ಮಾಡುತ್ತಿದ್ದ ಕೃಷ್ಣ ಆ ವೇಳೆಗೆ ಮೋಹಿನಿಯಾಗಿ ಅಮೃತವನ್ನು ಅಪಹರಿಸಿದ್ದ. ಅಯ್ಯಪ್ಪನಿಗೆ ಜನ್ಮ ನೀಡಿಯೂ ಆಗಿತ್ತೆಂದು ಕಾಣುತ್ತದೆ. ಆದರೆ ಭಗವದ್ಗೀತೆಯಲ್ಲೆಲ್ಲೂ ಇವರೀರ್ವರ ಮಹತ್ವದ ಜೀವನಾನುಭವ ಗೀತೆಯ ಮೂಲಕ ತತ್ವಬೋಧೆಯ ಜೀವ ಪಡೆದಿಲ್ಲ. ಅಕ್ಕಯ್ ತನ್ನ ಕಥನದಲ್ಲಿ ಈ ಇಬ್ಬರ ಪ್ರಸಂಗಗಳೂ ಹಿಜ್ರಾ ಜೀವನದ ಪುರಾಣಗಳ ಭಾಗವಾಗಿರುವುದನ್ನು ಉಲ್ಲೇಖಿಸಿದ್ದಾರೆ.
ಒಂದು ಕಡೆ ಕುವೆಂಪು ಸಮಬಾಳಿನ ದೃಷ್ಟಿ ಮತ್ತೊಂದೆಡೆ ಡಿವಿಜಿಯವರ ಭಗವದ್ಗೀತೆಯ ವ್ಯಾಖ್ಯಾನದ ದೃಷ್ಟಿ ಅಕ್ಕಯ್ನ ಬದುಕಿನ ಬವಣೆಗಳನ್ನು ಅರ್ಥೈಸಲು ಪರಸ್ಪರ ವಿರುದ್ಧ ದೃಷ್ಟಿ ‘ಕೋನ’ಗಳ ಪ್ರಭಾವ, ಪರಿಣಾಮಗಳೇನು? ಮಾಸ್ತಿಯವರು ನವೋದಯದ ಪ್ರಮುಖ ಕವಿಗಳಾದ ಕುವೆಂಪು, ಬೇಂದ್ರೆ ಇಬ್ಬರ ಮೊದಲ ಕವನ ಸಂಕಲನಗಳನ್ನೂ ಹೊರತಂದು ಪ್ರೋತ್ಸಾಹಿಸಿದವರು ಮತ್ತು ಎ.ಆರ್.ಕೃಷ್ಣಶಾಸ್ತ್ರಿಗಳು ಹಲವು ನವೋದಯದ ಬರಹಗಾರರ ಮೊದಲ ಬರಹಗಳನ್ನು ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಿಸಿ ಅವರುಗಳನ್ನು ಬೆಳೆಸಿದವರು. ಇವರುಗಳ ಕೈಗೆ ಅಕ್ಕಯ್ ಕಥನ ಕರಡು ರೂಪದಲ್ಲಿ ಸಿಕ್ಕಿದ್ದರೆ! ಅವರ ಸುಸಂಸ್ಕೃತ ಮನಸ್ಸಿನ ಪ್ರತಿಕ್ರಿಯೆ ಹೇಗಿರುತ್ತಿತ್ತು? ಈ ಬರಹವನ್ನು ಪ್ರಕಟಿಸಲು ಮುಂದಾಗುತ್ತಿದ್ದರೆ!

1974ರಲ್ಲಿ ಹೊಲೆ ಮಾದಿಗರ ಹಾಡನ್ನು, ಸಾಕವ್ವ, ಕುಸುಮಬಾಲೆಯರನ್ನು ತೆರೆದ ತೋಳುಗಳಿಂದ ಸ್ವಾಗತಿಸಿದ ಜಿಎಸ್ಸೆಸ್ ಮತ್ತು ನಂತರದ ಸಾಹಿತಿಗಳ ಉತ್ಸಾಹದ ಪ್ರತಿಕ್ರಿಯೆಯ ನೆನಪಾಗುತ್ತಿದೆ. ಅಂಶಿಕವಾಗಿ ಪ್ರಜಾಪ್ರಭುತ್ವೀಯವಾಗಿದ್ದರೂ ತಮ್ಮ ವ್ಯಕ್ತಿತ್ವ ಮತ್ತು ಚಿಂತನೆಗಳ ಹಂದರದಲ್ಲಿ ವೇದಾಂತನಿಷ್ಠರಾದ ಮಾಸ್ತಿ, ಎಅರ್ಕೃಗಳು ಕುವೆಂಪು ವೈಚಾರಿಕತೆಯ ಮೂಸೆಯಲ್ಲಿ ಬೆಳೆದ ಜಿಎಸ್ಸೆಸ್ ಮತ್ತು ನಂತರದ ಸಾಹಿತಿಗಳು ಈ ಎರಡು ವಿರುದ್ಧ ದಿಕ್ಕಿನ ಚಿಂತನೆಗಳ ಪ್ರಭಾವಗಳಿಗೆ ಉದಾಹರಣೆಯಾಗಿದ್ದಾರೆ.
ಈಗ ಇಪ್ಪತ್ತೊಂದನೆಯ ಶತಮಾನದ ಎರಡನೇ ದಶಕದಲ್ಲಿ ರೇವತಿ, ಅಕ್ಕಯ್ಗಳಂತಹವರ ಬದುಕಿನ ಬವಣೆಯನ್ನು ಕನ್ನಡಿಗರಿಗೆ ತೆರೆದು ತೋರಿಸಬಯಸಿದ, ಅವರನ್ನು ಒತ್ತಾಯಿಸಿ ಬರೆಯಿಸಿದ ಪ್ರಕಟಿಸಿದವರು ಕುವೆಂಪು ವೈಚಾರಿಕತೆಯ ಮತ್ತಷ್ಟು ಮುಂದುವರೆದ ತಲೆಮಾರು ಎಂಬುದು ಸಾಹಿತ್ಯಿಕ ಮಾತ್ರವಲ್ಲ ಸಾಮಾಜಿಕ ಚಲನೆಯ ದೃಷ್ಟಿಯಿಂದ ಗಮನಾರ್ಹ.
ಅಕ್ಕಯ್ ಇಂತಹ ವೈಚಾರಿಕ ಸಾಹಿತ್ಯದ ಓದಿನ ಅವಕಾಶ ವಂಚಿತಳಾಗಿದ್ದರೂ ತನ್ನ ಬದುಕಿನ ಕ್ರೂರ ಅನುಭವಗಳಿಂದ ಹಾಗೂ ಅದರ ವಿರುದ್ಧದ ಸೆಣಸಾಟದ ಅನುಭವಗಳಿಂದ ಈ ಬಗೆಯ ಅರಿವನ್ನು ದಕ್ಕಿಸಿಕೊಂಡಿದ್ದಾರೆ. ಈ ಕಥನದಲ್ಲಿ ಆಕೆ ಹೇಳುತ್ತಾರೆ : ಆತ್ಮವನ್ನು ಕುರಿತಂತೆ ನನಗೆ ನಂಬಿಕೆ ಇಲ್ಲ. ಸಾವೆಂದರೆ ಸತ್ತಿದ್ದೇನೆ ಅಷ್ಟೆ. ಅದುವೇ ಅದರ ಅಂತ್ಯ. ಅದರ ನಂತರವೂ ಆತ್ಮವನ್ನು ನಂಬುವುದು ಧಾರ್ಮಿಕವಾಗುತ್ತದೆ. ಸತ್ತ ಮೇಲೆ ಆತ್ಮ ಮತ್ತೊಂದೆಡೆ ನಡೆದು ಹೋಗುತ್ತದೆ ಎಂಬುದನ್ನು ನಂಬುವುದಿಲ್ಲ. ನೊಣದ ಬಗ್ಗೆ ಒಂದು ಕ್ಷಣ ಯೋಚಿಸಿ. ನೊಣ ಸತ್ತಾಗ ಅದರ ಆತ್ಮ ಹುಡುಕುತ್ತೀರೇನು ?
ಎಷ್ಟು ಸರಳವಾಗಿ ಮತ್ತು ಸ್ಪಷ್ಟವಾಗಿ ವೈಚಾರಿಕತೆ ಈ ಮಾತುಗಳಲ್ಲಿ ಮೂಡಿ ಬಂದಿದೆ!
************
ಒಮ್ಮೆ ಹಾವೇರಿ ಜಿಲ್ಲೆಯಲ್ಲಿ ಕೂಲಿಕಾರರ ಬದುಕಿಗಾಗಿ ನಡೆಸಿದ ದೊಡ್ಡ ಹೋರಾಟವೊಂದರ ನಡುವಿನಲ್ಲಿ ಬಳಲಿಕೆಯನ್ನು ನೀಗಿಸಿಕೊಳ್ಳಲು ಧಾರವಾಡದಲ್ಲಿ ಸಾಹಿತ್ಯಾಸಕ್ತ ವೈದ್ಯರೊಬ್ಬರ ಮನೆಯಲ್ಲಿ ತಂಗಿದ್ದೆ. ಅವರ ಮನೆಯಲ್ಲಿದ್ದ ಕನ್ನಡಿಗರಿಗೆ ಪರಿಚಿತವಾದ ಎ.ಎನ್.ಮೂರ್ತಿರಾಯರ ಆತ್ಮ ಚರಿತ್ರೆ ‘ಸಂಜೆಗಣ್ಣಿನ ಹಿನ್ನೋಟ’ವನ್ನು ಓದಿ ಮುಗಿಸಿದೆ. ನಂತರ ಪರಿಚಿತವಲ್ಲದ ಮರಾಠಿಯಿಂದ ಅನುವಾದಿತವಾದ ಶರಣಕುಮಾರ ಲಿಂಬಾಳೆಯವರ ಸ್ವ-ಚರಿತ್ರೆ ‘ಅಕ್ರಮ ಸಂತಾನ’ವೆಂಬ ಅನುವಾದವನ್ನು ಓದ ತೊಡಗಿದೆ. ಲಿಂಬಾಳೆಯವರ ಅನುಭವಗಳು ನನ್ನನ್ನು ಬೆಚ್ಚಿ ಬೀಳಿಸಿದ್ದವು.
ನಾನು ಓದಿದ ಮೊದಲ ದಲಿತ ಬದುಕಿನ ಪುಟಗಳಾಗಿದ್ದವು ಅವು. ಈ ಎರಡು ಆತ್ಮ ಚರಿತ್ರೆಗಳನ್ನು ಒಂದೇ ದಿನ ಓದಿದ್ದಂತೂ ಮತ್ತಷ್ಟು ಗಾಢವಾಗಿ ಸಮಾಜದ ಎರಡು ತುದಿಯಲ್ಲಿರುವ ಎರಡು ಸಮುದಾಯಗಳಿಗೆ ಸೇರಿದ ವ್ಯಕ್ತಿಗಳ ಬೆಳವಿಗೆ ಮತ್ತು ಬಾಳಿನ ನಡುವಣ ಅಗಾಧ ಕಂದರ ನನ್ನ ಪ್ರಜ್ಞೆಯಲ್ಲಿ ಅಚ್ಚೊತ್ತಿದಂತಾಯಿತು. . ಈಗ ‘ಅಕ್ಕಯ್’ನ ಕಥನದ ಓದು ಅದನ್ನು ಮೀರಿ ನನ್ನ ವ್ಯಕ್ತಿತ್ವವನ್ನು ಅಲ್ಲಾಡಿಸಿಬಿಟ್ಡಿತು. ದುಃಖ, ಸಿಟ್ಟು, ಕರುಣೆ, ವಿಷಾದ ಒಟ್ಟಿಗೇ ಉಕ್ಕಿದವು. ಅಲ್ಲಲ್ಲಿ ಪುಸ್ತಕವನ್ನು ಮಗುಚಿಟ್ಟು ಗಾಢ ಯೋಚನೆಗೆ ದೂಡಿತು.
ಹೀಗೆ ಹೇಳುವಾಗ ನಿಮಗೆ ಗೊತ್ತಿರಲಿ, ನಾನು ನೂರಾರು ಆತ್ಮ ಚರಿತ್ರೆ, ಜೀವನ ಚರಿತ್ರೆಗಳನ್ನು ಓದಿದವನು. ಅವುಗಳ ಮೂಲಕವೇ , ಯಾವ ಇತಿಹಾಸದ ಪುಸ್ತಕಗಳೂ ಕಟ್ಟಿಕೊಡಲಾಗದ ಭಾರತದ ಆಧುನಿಕ ಇತಿಹಾಸವನ್ನು ಕಟ್ಟಿಕೊಂಡವನು. ಲಿಂಬಾಳೆಯವರ ನಂತರ ಹುಡುಕಿ ಹುಡುಕಿ ಮರಾಠಿಯಿಂದ ಕನ್ನಡಕ್ಕೆ ಬಂದ ಹಾಗೂ ಕನ್ನಡಿಗರೇ ಬರೆದ ಹಲವಾರು ದಲಿತ ಆತ್ಮ ಚರಿತ್ರೆಗಳನ್ನು ಓದಿದೆ. ಈ ಎಲ್ಲ ಓದು ನನ್ನನ್ನು ಬೆಳೆಸಿವೆ. ನಮ್ಮ ನಿಜವಾದ ಚರಿತ್ರೆ, ನಿಜವಾದ ಸಮಾಜದ ಅರಿವು ಮೂಡಿಸಿದೆ. ನೂರಾರು ಜನರಿಗೆ ಅವುಗಳನ್ನು ಓದ ಹಚ್ಚಿದ್ದೇನೆ. ಆದರೆ
‘ಅಕ್ಕಯ್’ನ ಓದು ನೂರಾರು ಆತ್ಮ ಚರಿತ್ರೆಗಳಿಗಿಂತ ಗಾಢ ಪರಿಣಾಮ ಉಂಟುಮಾಡಿದೆ. ಪ್ರಜಾಪ್ರಭುತ್ವವನ್ನು ಬಯಸುವ ಎಲ್ಲರೂ ಓದಿ. ನಿಮ್ಮ ಅರಿವನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಸಾರಿ ಹೇಳಬೇಕೆನಿಸಿದೆ.
************

ಅಕ್ಕಯ್ ಒಂದು ಕಡೆ ಹೇಳುತ್ತಾರೆ : ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಆಗಸ್ಟ್ 15, ‘1947 ನಮಗೆ ನಿಜವಾದ ಸ್ವಾತಂತ್ರ್ಯ ದಿನಾಚರಣೆಯಲ್ಲ. ಬದಲಾಗಿ ಜುಲೈ 2, 2009 ನಮಗೆ ನಿಜವಾದ ಸ್ವಾತಂತ್ರ್ಯ ದಿನವಾಗಿತ್ತು.’ ಅಂದು ದೆಹಲಿ ಹೈಕೋರ್ಟ್ IPC ಸೆಕ್ಷನ್ 377 ಕಲಂ ಅನ್ನು ರದ್ದುಪಡಿಸಿದ ದಿನ. ಲಿಂಗಾಂತರಗೊಂಡವರೂ ಸೇರಿ ಲೈಂಗಿಕ ಅಲ್ಪ ಸಂಖ್ಯಾತರ ಲೈಂಗಿಕ ಸಂಬಂಧಗಳು ಅಪರಾಧವಲ್ಲ ಎಂದು ಘೋಷಿಸಿದ ತೀರ್ಪು ಅದು. ಅಕ್ಕಯ್ರವರ ಈ ಮಾತು ಭಾರತದ ಪ್ರಜಾಪ್ರಭುತ್ವದ ಬಗ್ಗೆ ಬರೆದ ವ್ಯಾಖ್ಯಾನವಾಗಿದೆ. ‘ಯಾರಿಗೆ ಬಂತು, ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ’ ಎಂಬ ಸಿದ್ಧಲಿಂಗಯ್ಯನವರ ಕಾವ್ಯದ ಸಾಲುಗಳ ಅನುರಣನವಾಗಿದೆ.
ಸ್ವಾತಂತ್ರ್ಯ ಗಳಿಸಿ ಎಪ್ಪತ್ತೈದು ವರ್ಷಗಳು ಹತ್ತಿರವಾಗುತ್ತಿದ್ದರೂ ಹಲವಾರು ಕೋಟಿ ಜನರಿಗೆ ಸ್ವಾತಂತ್ರ್ಯ ಸಿಗದೆ ಸಂಕಟ ಪಡುವ ಭಾರತದ ದುಸ್ಥಿತಿಯ ಸೂಚಕ ಅದು. ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ನಾಲ್ಕು ಆಧಾರ ಸ್ತಂಭಗಳು . ಅದರಲ್ಲಿ ಮೊದಲನೆಯದೇ ನ್ಯಾಯ- ಸಾಮಾಜಿಕ, ಆರ್ಥಿಕ, ರಾಜಕೀಯ. ನಂತರ ಸ್ವಾತಂತ್ರ್ಯ, ಸಮಾನತೆ, ಸೋದರತ್ವ. ಅಕ್ಕಯ್ ಬದುಕಿನ ಕಥನ ಈ ನಾಲ್ಕರ ಅಸ್ತಿತ್ವವನ್ನೂ ವ್ಯಕ್ತವಾಗಿ ಹೇಳದೆಯೇ ತೀವ್ರವಾಗಿ ಪ್ರಶ್ನಿಸುತ್ತದೆ. ಆ ಮೂಲಕ ಈ ಪ್ರಮುಖ ಪರಿಕಲ್ಪನೆಗಳ ಬಗೆಗಿನ ನಮ್ಮ ಅರಿವನ್ನು ವಿಸ್ತರಿಸುತ್ತದೆ.
ನಮ್ಮ ಕುಟುಂಬ ವ್ಯವಸ್ಥೆ, ಸಮಾಜದ ಜನಮನದಲ್ಲಿ ಆಳವಾಗಿ ಬೇರು ಬಿಟ್ಟ ಅವೈಜ್ಞಾನಿಕತೆ, ಅದರಿಂದ ಉಂಟಾಗುವ ಸಾಮಾಜಿಕ ಒತ್ತಡ. ಅವಮಾನದ ಕಲ್ಪನೆ. ಇವು ಅಕ್ಕಯ್ನಂತಹ ಲಿಂಗ ಪರಿವರ್ತನೆಗೊಳ್ಳುತ್ತಿರುವ ಬಾಲಕ, ಬಾಲಕಿಯರ ಬಗೆಗೆ ತಂದೆ ತಾಯಿಗಳ ಮಮತೆ, ಪ್ರೀತಿಗಳಿಗೆ ಎರವಾಗಿ ಕಠೋರವಾಗಿ ನಡೆದುಕೊಳ್ಳುವ ಮೂಲಕ ಅವರಗೆ ಮಾನವ ಬದುಕಿನ ಮೂಲಭೂತ ಅವಕಾಶಗಳನ್ನು ನಿರಾಕರಿಸುವುದು. ಹಸಿವು ಅದರಿಂದಾಗಿ ಲೈಂಗಿಕ ದೌರ್ಜನ್ಯ, ಕ್ರೌರ್ಯ, ಲೈಂಗಿಕ ಮಾರುಕಟ್ಟೆಯ ದಾಳವಾಗುವುದು, ಸಮಾಜದ ಗೌರವಾನ್ವಿತ ವ್ಯಕ್ತಿಗಳ ಅನೈತಿಕತೆ, ಕಾನೂನುಗಳ ಬಲದ ಮೇಲೆ ಪೋಲೀಸರ ಅಮಾನುಷತೆ, ಕ್ರೌರ್ಯಗಳು ಇವರ ಬದುಕನ್ನು ನರಕ ಸದೃಶವಾಗಿಸುವ ಪರಿ ಇವುಗಳನ್ನು ಈ ಕೃತಿ ನಿರ್ಲಿಪ್ತ ಭಾಷೆಯಲ್ಲಿ ಚಿತ್ರಿಸುತ್ತದೆ.
ಹಲವು ಮುಖದ ಈ ಕ್ರೌರ್ಯಗಳನ್ನು ಎದುರಿಸಲು ದಮನಿತರು ಒಟ್ಟಾಗಿ ರೂಪಿಸಿಕೊಂಡಿರುವ ಏಳು ಘರಾಣಗಳ ಹಿಜ್ರಾ ಸಂಸ್ಕೃತಿಯ ವ್ಯವಸ್ಥೆ. ಎ. ರೇವತಿಯವರ ‘ಬದುಕು ಬಯಲು’ ಕೂಡಾ ಹಿಜ್ರಾ ಸಂಸ್ಕೃತಿಯನ್ನು – ದೆಹಲಿ, ಮುಂಬೈ ಹಾಗೂ ಬೆಂಗಳೂರಿನ ಘಟನೆಗಳೊಂದಿಗೆ ವಿವರವಾಗಿ ಚಿತ್ರಿಸುತ್ತದೆ. ಆದರೆ ಬುಡಕಟ್ಟು ಸಮಾಜದ ರಚನೆಗಳ ಅನುಕರಣೆಯಾಗಿರುವ ಈ ಸಂಸ್ಥೆಯ ಮಾನವೀಯ ಮಿಡಿತ, ರಕ್ಷಣೆ, ಆಪ್ತತೆಯ ಭಾವಗಳ ಜೊತೆಗೇ ಒಳಗೆ ತೂರಿಕೊಂಡಿರುವ ಪುರುಷಾಧಿಪತ್ಯದ ದಬ್ಬಾಳಿಕೆಯ ಪ್ರವೃತ್ತಿ ಇವುಗಳ ಚಿತ್ರಣ ಸಂಕ್ಷಿಪ್ತವಾದರೂ ಅದರ ಬಗ್ಗೆ ಅಕ್ಕಯ್ರವರ ಒಳನೋಟಗಳು ಅವರ ಚಿಂತನೆಯ ಪ್ರಬುದ್ಧತೆಯನ್ನು ಸೂಚಿಸುತ್ತವೆ.
ಮಾನವ ಲೈಂಗಿಕ ವೈವಿಧ್ಯತೆಯ ಬಗ್ಗೆ ಈಗೀಗ ಕೆಲ ಪ್ರಜ್ಞಾವಂತ ವಲಯಗಳಲ್ಲಿ ಮೂಡುತ್ತಿರುವ ವೈಜ್ಞಾನಿಕ ತಿಳುವಳಿಕೆ, ಅದರ ಆಧಾರದಲ್ಲಿ ಮಾನವ ಹಕ್ಕುಗಳ ಹೋರಾಟಗಳ ವಿವರಣೆ ‘ಕೊನೆಗಾಣದ ಬಾಳಿನ ಗೋಳಿಗೆ ಹೋರಾಟವೆ ದಾರಿ’ ಎಂಬ ಆಧುನಿಕ ಸಾಮತಿಯನ್ನು ಸಾಬೀತು ಪಡಿಸುತ್ತವೆ.
ಹೋರಾಟದ ಅಂಗಗಳಾಗಿರುವ ಎನ್ಜಿಒಗಳೆಂಬ ಸಂಸ್ಥೆಗಳು, ಅವುಗಳು ಮೂಡಿಸಿದ ಎಚ್ಚರ, ನೀಡಿದ ಅರಿವನ್ನು ಗುರುತಿಸುತ್ತಲೇ ಅವುಗಳ ಬಗೆಗಿನ ವಿಮರ್ಶೆಯನ್ನು ಮುಲಾಜಿಗೊಳಗಾಗದೆ ಮಾಡುತ್ತಾರೆ. ಈ ಸಂಸ್ಥೆಗಳ ಸ್ಥಾಪನೆ, ಅವುಗಳ ಕೆಲಸದ ವಿಧಾನಗಳ ಜೊತೆಗೆ ಅವುಗಳಲ್ಲಿ ಮಧ್ಯಮ ವರ್ಗೀಯ ಶಿಕ್ಷಿತ ವ್ಯಕ್ತಿಗಳ ಹಿಡಿತಗಳು, ಅವರ ವ್ಯಕ್ತಿ ಪ್ರತಿಷ್ಟೆಗಳು, ಸ್ವಾರ್ಥ, ಪ್ರಚಾರಾಕಾಂಕ್ಷೆ ಇವುಗಳ ಜೊತೆಗೆ ದೇಶೀ, ವಿದೇಶಿ ದಾನಿಗಳ ಹಣದ ಹರಿವಿನ ಪ್ರಮಾಣ ಅವುಗಳ ವಿಘಟನೆ, ದುರ್ಬಲತೆಗೆ ಕಾರಣವಾಗುವುದು ನಿಚ್ಚಳವಾಗಿ ಚಿತ್ರಿತವಾಗಿದೆ. ಇಂತಹ ಹಲವು ಸಂಸ್ಥೆಗಳಲ್ಲಿ ಲೇಖಕಿ ಕೆಲಸ ಮಾಡಿದ ಅನುಭವದ ಲಾಭವನ್ನು ಓದುಗರು ಪಡೆಯುತ್ತಾರೆ.
ಜಾಗತಿಕ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಲೈಂಗಿಕ ಅಲ್ಪ ಸಂಖ್ಯಾತರ ಮೂಡಿದ ಎಚ್ಚರ ಈ ರಂಗದಲ್ಲಿ ಕೆಲಸ ಮಾಡುತ್ತಾ ಬಂದ ಅಕ್ಕಯ್ರವರನ್ನು ಮುನ್ನೆಲೆಗೆ ತರುತ್ತದೆ. ಹೋರಾಟಗಳಲ್ಲಿ ಅಕ್ಕಯ್ರವರ ವೈಯಕ್ತಿಕ ಪಾತ್ರ, ಮುನ್ನುಗ್ಗುವಿಕೆ ಮತ್ತು ಶ್ರಮ ಹಲವು ಬದಲಾವಣೆಗಳಿಗೆ ಕಾರಣವಾಗುತ್ತವೆ. ಅನೇಕ ವಿದೇಶ ಪ್ರವಾಸಗಳು, ಪ್ರಶಸ್ತಿಗಳು ಅಕ್ಕಯ್ರವರರನ್ನು ಅರಸಿ ಬರುತ್ತವೆ. ಅವು ಸಮಾಜದ ಮೇಲೆ ಬೀರಿದ ಪರಿಣಾಮ, ಅವರಿಗೆ ದೊರಕಿಸಿದ ಮಾನ್ಯತೆಯ ಬಗ್ಗೆ ಅವರ ಹೆಮ್ಮೆ ಬರಹದಲ್ಲಿ ಕಾಣುತ್ತದೆ.
ಆದರೆ ಈ ಎಲ್ಲ ಪ್ರಶಸ್ತಿಗಳು ಯಾವುದೇ ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತದೆಯೇ? ನನ್ನ ಸಮುದಾಯದ ಜನರ ಜೀವನದಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂಬುದು ಅವರಿಗೆ ಸಮುದಾಯದ ಬಗೆಗಿನ ಕಾಳಜಿಯ ಸೂಚಕವಾಗಿದೆ. ಎ.ರೇವತಿಯವರ ಪುಸ್ತಕ ಹೆಚ್ಚಾಗಿ ಅವರ ಕುಟುಂಬದಲ್ಲಿನ ದೌರ್ಜನ್ಯ ಮತ್ತಿತರ ಘಟನೆಗಳ ವಿವರಗಳು ಮತ್ತು ಹಿಜ್ರಾ ಸಂಸ್ಥೆಯ ವಿವರಣೆಗಳಿಗೆ ಒತ್ತುನೀಡಿದೆ. ‘ಸಂಗಮ’ದಂತಹ ಒಂದು ಸಂಸ್ಥೆಯಲ್ಲಿ ಅತ್ಯಂತ ಕೆಳ ಹಂತದಿಂದ ನಿರ್ದೇಶಕ ಹುದ್ದೆಯವರೆಗೂ ಮೇಲೆರಿದ ಅನುಭವವಿದ್ದರೂ ಅದನ್ನು ಬರಹದಲ್ಲಿ ತರಲು ಹಿಂಜರಿದಿದ್ದಾರೆ ಎಂದು ಭಾವಿಸುವಂತೆ ಅವರ ಕೃತಿ ಸೀಮಿತ ಚಿತ್ರಣ ನೀಡುತ್ತದೆ.
ಈ ಕೃತಿ ಅಕ್ಕಯ್ರವರ ಪ್ರೇಮ, ಕಾಮ, ವಿವಾಹವಾಗುವ ಕಾತರದಿಂದಾಗಿ ಹೋಗುವ ಮೋಸ, ಗಂಡಂದಿರ ಸ್ವಾರ್ಥ, ದಬ್ಬಾಳಿಕೆ, ಮದುವೆಗಳು ಮುರಿದು ಬಿದ್ದ ಬಗೆಯನ್ನೂ ಅಕ್ಕಯ್ ನಿರ್ಭಿಡೆಯಿಂದ ಚಿತ್ರಿಸಿದ್ದಾರೆ. ಅವುಗಳಲ್ಲೆಲ್ಲಾ ಅವರ ಲೈಂಗಿಕ ಜೀವನದ ಆರಂಭದಿಂದ ಇಲ್ಲಿಯವರೆಗೆ ಆಪ್ತ ಸಂಬಂಧ ಇಟ್ಟುಕೊಂಡ ವೇಣು ಮತ್ತು ಅವರ ವಿವಾಹಿತ ಪತ್ನಿಯ ಜೊತೆಗೆ ವಿಶೇಷ ಸಂಬಂಧ ಒಂದು ಆರೋಗ್ಯಕರ ಮಾದರಿಯಾಗಿ ಕಾಣುತ್ತದೆ.

ಈ ಕೃತಿಯಲ್ಲಿ ಕೊರೆಗಳೇ ಇಲ್ಲವೆಂದಲ್ಲ ಹಲವಾರು ಕೊರತೆಗಳಿವೆ. ಆದರೆ ಇಲ್ಲಿ ಎರಡನ್ನು ಮಾತ್ರ ಸೂಚಿಸ ಬಯಸುತ್ತೇನೆ. ತಾವು ಭಾಗವಾಗಿದ್ದ ವಿವಿಧ ಹೋರಾಟಗಳ ಹೆಚ್ಚು ವಿವರಗಳನ್ನು ನೀಡಲಾಗಿಲ್ಲ. ಅದರಲ್ಲಿ ಭಾಗಿಯಾಗಿದ್ದ ಸಹಚರರ ಕ್ರಿಯಾಶೀಲ ಪಾತ್ರಗಳನ್ನು ಗೌಣವಾಗಿಸಲಾಗಿದೆ. ಭಾಷೆ ಸರಳವಾಗಿದ್ದರೂ ಹಲವೆಡೆ ಕೃತಕವಾಗಿದೆ. ಅರ್ಥ ಸಂದಿಗ್ಧವಾಗುತ್ತದೆ. ಇಡೀ ಪುಸ್ತಕ ಲೇಖಕಿಯೇ ಸ್ವತಃ ಹೇಳಿರುವಂತೆ ರೂಪಿತವಾಗಿದೆ. ಲೇಖಕಿ ಮಾತನಾಡುವ ಭಾಷೆ, ಶೈಲಿಯನ್ನು ನೋಡಿದಾಗ ಕೃತಿ ಕೂಡಾ ಅವರದೇ ಭಾಷೆ, ಶೈಲಿಯನ್ನೇ ಪಡೆದಿದ್ದರೆ ಇನ್ನೂ ಹೆಚ್ಚು ಅಥೆಂಟಿಕ್ ಆಗಿರುತ್ತಿತ್ತು ಎಂದು ನನ್ನ ಅಭಿಪ್ರಾಯ.
ಲಿಂಗಾಂತರಗೊಂಡವರ ಅಥವಾ ಹಿಜ್ರಾ ಸಮುದಾಯದವರ ನಾಲ್ಕಾರು ಕೃತಿಗಳು ಬೇರೆ ಭಾಷೆಗಳಿಂದ ಕನ್ನಡಕ್ಕೆ ಬಂದಿವೆ . ಅವುಗಳಲ್ಲಿ ಅಕ್ಕಯ್ರವರದ್ದು ಮತ್ತು ಜೋಗತಿ ಮಂಜಮ್ಮನವರದ್ದು ಮಾತ್ರ ಕನ್ನಡದ ಕೃತಿ. ಉಳಿದವು ತಮಿಳು, ಬಂಗಾಲಿ ಕೃತಿಗಳ ಭಾಷಾಂತರಗಳು. ಇವುಗಳಲ್ಲಿ ನಾನು ಓದಿದ ಎ. ರೇವತಿಯವರ ಬದುಕು ಬಯಲು ಬೆಂಗಳೂರಿನ ಹಿಜ್ರಾಗಳ ಬದುಕಿನ ಭಾಗಶಃ ಚಿತ್ರಣವನ್ನು ಒಳಗೊಂಡಿದೆ. ಅದು ಕೂಡಾ ಇಂಗ್ಲಿಷ್ ಕೃತಿಯ ಅನುವಾದವಾಗಿ ಕನ್ನಡಕ್ಕೆ ಬಂದಿದೆ.
ಅಕ್ಕಯ್ರವರ ಕೃತಿ ಅವಶ್ಯವಾಗಿ ಓದಲೇಬೇಕಾದ ಪುಸ್ತಕ ಎನ್ನುವಾಗಲೇ ಉಳಿದ ಕೃತಿಗಳನ್ನೂ ಓದಿ. ದಲಿತ ಆತ್ಮಕತೆಗಳಿಗೆ ಸಿಕ್ಕ ಓದುಗರು ಈ ಆತ್ಮಕಥನಗಳಿಗೂ ಸಿಗಲಿ. ಅವುಗಳೆಲ್ಲವುಗಳಿಂದ ನಮ್ಮೆಲ್ಲರ ಮಾನವೀಯತೆ, ಪ್ರಜಾಪ್ರಭುತ್ವೀಯ ಪ್ರಜ್ಞೆ ಮತ್ತಷ್ಟು ವಿಸ್ತಾರವಾಗಲಿ ಎಂದು ಆಶಿಸುತ್ತೇನೆ.






ಅಗತ್ಯವಾದ ಲೇಖನವಿದು.
ನಾವೇಕೆ ಅಕ್ಕಯ್ಯ , ರೇವತಿಯಂತಹವರನ್ನು ಓದಬೇಕು ಎಂಬ ಪ್ರಶ್ನೆಯನ್ನು ಓದಿನಲ್ಲಿ ರುಚಿಯಿರುವ ಎಲ್ಲರೂ ಹಾಕಿಕೊಳ್ಳಬೇಕು. ಅದಕ್ಕಿರುವ ಉತ್ತರ ಒಂದೇ . ನಮ್ಮಂತೆ ಅವರೂ ಮನುಷ್ಯರು. ಅವರ ಆ ಹಕ್ಕನ್ನು ಕಿತ್ತುಕೊಂಡಿದ್ದುದು ನಾವೇ. ನಾವು ಕಿತ್ತುಕೊಂಡದ್ದರಿಂದ ಅವರು ಅನುಭವಿಸಿದ ನರಕವನ್ನು ನಾವೂ ನೋಡಿ ಬಂದರೆ ಮತ್ತಂಥಹ ನೀಚ ಕಾರ್ಯ ಮಾಡಲಾ
ರೆವು. ಅದಕ್ಕಾಗಿ ಕಡ್ಡಾಯವಾಗಿ ಈ ಕೃತಿ ಓದಬೇಕು.ಪಾಪ ಪರಿಹಾರಾರ್ಥವಾಗಿ ಕೆಲವು ವ್ರತಕತೆಗಳನ್ನೋದಿದ ಹಾಗೆ ಇದೂ ಕೂಡ.