ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ಉಪಾಧ್ಯ ಓದಿದ ‘ಜೀವಸ್ವರ’

ಜಯಂತ ಕಾಯ್ಕಿಣಿ ಪ್ರಬಂಧಗಳಲ್ಲಿ ಜೀವಸ್ವರದ ಆಲಾಪ

ಜಿ ಎನ್ ಉಪಾಧ್ಯ

‘ಜೀವಸ್ವರ’ ಇದು ಕಲಾ ಭಾಗ್ವತ್ ಅವರ ಇತ್ತೀಚಿನ ಕೃತಿ. ಈ ಕೃತಿಯನ್ನು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಪ್ರಕಟಿಸಿದೆ. ಸಾಂಪ್ರತ ಕನ್ನಡದ ಉತ್ಕೃಷ್ಟ ಲೇಖಕ, ಸಾಹಿತಿಗಳಲ್ಲಿ ಜಯಂತ ಕಾಯ್ಕಿಣಿ ಅವರದು ಎದ್ದು ಕಾಣುವ ಹೆಸರು. ಅವರದು ವರ್ಣರಂಜಿತ ವ್ಯಕ್ತಿತ್ವ. ಸಾಹಿತ್ಯ, ಸಿನಿಮಾ, ರಂಗಭೂಮಿ, ಚಿತ್ರಕಲೆ, ಪತ್ರಿಕೋದ್ಯಮ, ಸಂಗೀತ, ಭಾಷಾಂತರ ಹೀಗೆ ಅವರ ಸೃಜನಶೀಲತೆ ನಾನಾ ತೆರದಲ್ಲಿ ಪ್ರಕಟವಾಗಿದೆ. ಜಯಂತರ ಪ್ರತಿಭೆಯ ಕಾರ್ಯ ಬೆರಗು ಹುಟ್ಟಿಸುತ್ತದೆ. ಆಧುನಿಕ ಕನ್ನಡ ವಾಙ್ಮಯಕ್ಕೆ ತಮ್ಮ ಸ್ವೋಪಜ್ಞತೆಯಿಂದ ನೂತನ ಆಯಾಮ ನೀಡಿದ ಕೀರ್ತಿಗೂ ಅವರು ಭಾಜನರಾಗಿದ್ದಾರೆ. ಅವರು ಸ್ಫೂರ್ತಿಯ ಚಿಲುಮೆ. ಅವರಿದ್ದಲ್ಲಿ ಉಮೇದು, ಉತ್ಸಾಹ, ನಗೆಯಲೆ ಖಂಡಿತ.

ಕನ್ನಡದ ಕೀರ್ತಿಯನ್ನು ಬಾನೆತ್ತರಕ್ಕೇರಿಸಿದ ಜಯಂತರ ಬರವಣಿಗೆ ಸಹೃದಯರಿಗೆ ಬಲು ಆಪ್ಯಾಯಮಾನ. ಕನ್ನಡ ಗದ್ಯ ಸಾಹಿತ್ಯಕ್ಕೆ ಜಯಂತ ಕಾಯ್ಕಿಣಿ ಅವರಿಂದ ನೂತನ ಆಯಾಮ ಸಿಕ್ಕಿದೆ ಎಂಬುದು ಅಭಿಮಾನದ ಸಂಗತಿ. ಜಯಂತರ ಗದ್ಯ ಬರವಣಿಗೆ ಸದ್ದಿಲ್ಲದೆ ಸದಭಿರುಚಿಯ ನಿರ್ಮಾಣದ ಕೆಲಸವನ್ನು ಮಾಡುತ್ತಾ ಸಾಗುತ್ತದೆ. ಅವರದು ಮೂಲಭೂತವಾಗಿ ಮಾನವೀಯ ಕಾಳಜಿ, ಅವರ ಪ್ರಬಂಧಗಳಲ್ಲಿ ಪುಟಿಯುವ ಜೀವನ ಪ್ರೀತಿ, ಅದಮ್ಯ ಆಶಾವಾದ, ಶಬ್ದ ಚಿತ್ರಗಳ ಬೆರಗು, ಕಾವ್ಯಾತ್ಮಕ ತೀವ್ರತೆ, ಬದುಕಿನ ಕುರಿತ ಆರೋಗ್ಯಕರ ಉತ್ಸಾಹಿ ದೃಷ್ಟಿಕೋನ ಹೀಗೆ ಜಯಂತರ ಪ್ರಬಂಧ ಪ್ರಪಂಚದ ಅತಿಶಯತೆ, ಅನನ್ಯತೆಗಳನ್ನು ಬೆಳಕಿಗೆ ಹಿಡಿಯುವಲ್ಲಿ ಕಲಾ ಭಾಗ್ವತ್ ಅವರು ಇಲ್ಲಿ ಯಶಸ್ವಿಯಾಗಿದ್ದಾರೆ.

ಇದು ಗದ್ಯ, ಇದು ಪದ್ಯ ಎಂದು ಬೇರ್ಪಡಿಸಲಾಗದ ಜಯಂತರ ಪ್ರಬಂಧಲೋಕದ ಹಿರಿಮೆ ಹೆಚ್ಚುಗಾರಿಕೆಯನ್ನು ವಿಭಿನ್ನ ನೆಲೆಗಳಲ್ಲಿ ವಿಂಗಡಿಸಿ ವಿಶ್ಲೇಷಿಸಿರುವ ಪರಿ ಇಲ್ಲಿ ಮನಂಬುಗುವಂತಿದೆ. ಕನ್ನಡ ಪ್ರಬಂಧಕಾರರಲ್ಲಿ ಜಯಂತ ಕಾಯ್ಕಿಣಿ ಅವರದು ಭಿನ್ನ ಧ್ವನಿ ಎಂಬುದನ್ನು ಕಲಾ ಭಾಗ್ವತ್ ಅವರು ಈ ಕೃತಿಯಲ್ಲಿ ಸಾಧಾರವಾಗಿ ತೋರಿಸಿಕೊಟ್ಟಿದ್ದಾರೆ. ಜಯಂತರ ಗದ್ಯದ ಗಟ್ಟಿತನ, ಸುಲಲಿತ ಲಯಗಾರಿಕೆ, ಸಂವಾದಗುಣ, ಆತ್ಮೀಯ ಮಾತಿನ ದಾಟಿಯಲ್ಲಿ ಸಾಗುವ ಲಲಿತ ಮನೋಹರ ಶೈಲಿಯ ಮೇಲೂ ಇಲ್ಲಿ ಬೆಳಕು ಹಾಯಿಸಲಾಗಿದೆ. ನಾವು ಬದುಕಿನ ಜಂಜಡದಲ್ಲಿ ಕಳೆದುಕೊಳ್ಳುತ್ತಿರುವ ಮುಗ್ಧತೆ, ರಸಿಕತೆ, ಸೋರಿ ಹೋಗುತ್ತಿರುವ ಸಾಂಸ್ಕೃತಿಕ ಮೌಲ್ಯಗಳನ್ನು ಸಲೀಸಾಗಿ ನಮ್ಮ ಕಣ್ಣೆದುರು ತಂದು ನಿಲ್ಲಿಸುವ ಜಾಣ್ಮೆ.. ಹೀಗೆ ಜಯಂತರ ಗದ್ಯ ಸಾಹಿತ್ಯದ ಆಳ ಅಗಲ, ವೈಭವ ಇಲ್ಲಿ ಅನಾವರಣಗೊಂಡಿದೆ.

ಜಯಂತರ ಪ್ರಬಂಧ ಸಾಹಿತ್ಯದ ಹಿರಿಮೆ ಗರಿಮೆಯನ್ನು ತೂಗಿನೋಡಿ ಬೆಲೆಕಟ್ಟುವ ಕಾರ್ಯ ಈ ಕೃತಿಯಲ್ಲಿ ಕಲಾ ಭಾಗ್ವತ್ ಅವರು ಯಶಸ್ವಿಯಾಗಿ ಮಾಡಿದ್ದಾರೆ. ಜಯಂತ ಕಾಯ್ಕಿಣಿ ಅವರ ಪ್ರಬಂಧ ಪ್ರಪಂಚದ ಮೇಲೆ ಹೊಸ ಬೆಳಕು ಹಾಯಿಸಿರುವುದು ಈ ಕೃತಿಯ ಅತಿಶಯತೆ. ಇಂಗ್ಲಿಷ್ ವಿಮರ್ಶಕ ಕ್ರೋಚೆ ಭಾಷೆಯೆಲ್ಲ ಕವಿತೆ’ ಎಂದಿದ್ದಾನೆ. ಭಾಷೆ ಕವಿತೆಯೋ, ಕತೆಯೋ, ಪ್ರಬಂಧವೋ ಆಗುವುದು ಸಾಮಾನ್ಯದ ಮಾತಲ್ಲ.

ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಪ್ರಬಂಧಕಾರರಲ್ಲಿ ಒಬ್ಬರು. ಪ್ರಬಂಧಗಳ ಜೀವ ಜೀವಾಳವಾದ ಮನೋವಿಲಾಸ, ಸ್ವಚ್ಛಂದ ಭಾವ ಲಹರಿ ವಿಷಯದ ಆಯ್ಕೆ, ನಿರೂಪಣೆಯಲ್ಲಿ ಮುಕ್ತ ಮನೋಧರ್ಮ ಅವರ ಬರವಣಿಗೆಯಲ್ಲಿ ಒಡೆದು ಕಾಣುತ್ತದೆ. ಅವರ ಪ್ರಬಂಧಗಳು ವಾಸ್ತವದ ನೆಲೆಯಿಂದ ಕಾವ್ಯದ ಲಯಕ್ಕೆ ನಾಟಕೀಯವಾಗಿ ಧಾವಿಸಿ ಹೋಗುತ್ತವೆ. ತಮ್ಮ ಲಲಿತ ಮನೋಹರ ಶೈಲಿ, ನವಿರಾದ ಹಾಸ್ಯ, ಮಾತಿನ ಚಪ್ಪರ, ವಿಚಾರದಲ್ಲಿ ನಾವೀನ್ಯ ಪ್ರಬಂಧ ಧ್ವನಿ ಮೊದಲಾದ ಗುಣಗಳಿಂದ ಕನ್ನಡ ಪ್ರಬಂಧ ಸಾಹಿತ್ಯದ ಬಿಗುವಿನ ಬಂಧವನ್ನು ತಿಳಿಗೊಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂಬುದನ್ನು ವಿಭಿನ್ನ ನೆಲೆಗಳಲ್ಲಿ ಚರ್ಚಿಸಿರುವುದು ಗಮನೀಯ ಅಂಶ.

ಪರಂಪರೆಯ ಅರಿವಿನೊಂದಿಗೆ ಪ್ರಬಂಧದ ಗಡಿರೇಖೆಯನ್ನು ಮುರಿದು ವಿಶಿಷ್ಟವಾದ ರೀತಿಯಲ್ಲಿ ಕಾಯ್ಕಿಣಿ ಅವರ ಗದ್ಯ ಬರಹಗಳು ಮೂಡಿಬಂದಿವೆ. ಜಯಂತರು ಸಣ್ಣಕತೆ, ಕಾವ್ಯ, ನಾಟಕ, ಸಿನಿಮಾ ಗೀತೆ ಮುಂತಾದ ಪ್ರಕಾರಗಳಲ್ಲಿ ಸಮೃದ್ಧವಾಗಿ ಕೃಷಿ ಮಾಡಿದವರು. ಜಯಂತರು ಕನ್ನಡದ ಇತರ ಪ್ರಬಂಧಕಾರರ ದಾರಿಯಲ್ಲಿ ನಡೆದವರಲ್ಲ ಎಂಬುದನ್ನು ಎಳೆ ಎಳೆಯಾಗಿ ವಿಶ್ಲೇಷಿಸಿರುವುದು ಈ ಕೃತಿಯ ಹೆಚ್ಚುಗಾರಿಕೆ. ಜಯಂತ ಅವರ ಗದ್ಯ ಸರಳ ಸುಂದರ ಚಿತ್ತಾಪಹಾರಿ. ಅವರು ಸಿನಿಮಾ ಸಂಗೀತ ಕಲಾವಿದರ ಕುರಿತು ಬರೆದ ಪ್ರಬಂಧಗಳು ಸಾಂಸ್ಕೃತಿಕ ದಾಖಲೆಗಳೇ ಆಗಿವೆ.

ಜಯಂತರ ಬರವಣಿಗೆಯಲ್ಲಿ ಒಂದು ಬಗೆಯ ವಿಶಿಷ್ಟವಾದ ಲಯವಿದೆ. ‘ಮಾತು ಮಾತು ಮಥಿಸಿ ಬಂದ ನಾದದ ನವನೀತ’ ಎಂಬ ಬೇಂದ್ರೆಯವರ ಮಾತು ಇಲ್ಲಿ ನಿಜವಾಗಿ ಎದ್ದು ಕಾಣುತ್ತದೆ. ಅವರ ಗದ್ಯ ಕಾವ್ಯದ ಸಾಮರ್ಥ್ಯವನ್ನು ಪಡೆದಿದೆ. ಅವರ ಭಾಷೆಯೇ ಕವಿತೆ. ಜಯಂತರ ಗದ್ಯ ಸಾಹಿತ್ಯದಲ್ಲಿ ವಿಶಿಷ್ಟ ಸೃಜನಶೀಲತೆ ಇದೆ. ಸಾಮಾನ್ಯ ವಿಷಯವನ್ನು ಅಸಾಮಾನ್ಯ ಮಾಡುವ ಕಲೆಯಿದೆ. ಸೂಕ್ಷ್ಮ ಕಣ್ಣುಗಳಿಂದ ಜಗತ್ತನ್ನು ಕಾಣಿಸಿ ನಮ್ಮ ಮನಸ್ಸಿಗೆ ನಾಟುವಂತೆ, ಹೃದಯಕ್ಕೆ ತಟ್ಟುವಂತೆ ಮಾಡಿ ಅನುಭವಕ್ಕೆ ತರುತ್ತಾರೆ. ವಿಜ್ಞಾನದ ಚಕ್ಷುಗಳಿಂದ ಜಗತ್ತನ್ನು ಮುಕ್ತಮನಸ್ಸಿನಿಂದ ನೋಡಿ ಕಂಡಿರುವುದನ್ನು ಅಷ್ಟೇ ಸೂಕ್ಷ್ಮವಾಗಿ ಕಟ್ಟಿಕೊಡುತ್ತಾರೆ.

ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಕೊಂಕಣಿ ಹೀಗೆ ಬಹುಭಾಷಿಕ ಸಂವೇದನೆಗಳನ್ನು ಹೊಂದಿರುವ ಜಯಂತರು ಎಲ್ಲ ಭಾಷಿಕರನ್ನು ಕನ್ನಡಕ್ಕೆ ಬರಹಗಳ ಮೂಲಕ ಕರೆತರುತ್ತಾರೆ. ಲೀಲಾಜಾಲವಾಗಿ ಮುರಿದು ಕಟ್ಟುವ ನೈಪುಣ್ಯ ಕಲೆಗಾರಿಕೆ ಜಯಂತರಿಗೆ ಸಿದ್ಧಿಸಿದೆ. ಅವರ ಸಾಹಿತ್ಯ ನಿಜದ ಬದುಕಿನ ಒಳಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಅಂಚಿನಲ್ಲಿರುವ ವಿಷಯಗಳ ಕಡೆ ಅವರ ಅಕ್ಷರಗಳು ನಮ್ಮ ಲಕ್ಷ್ಯವನ್ನು ಸೆಳೆದು ತೋರ್ಪಡಿಸಿ ತಿಳಿ ಹೇಳುತ್ತವೆ.

ಮುಕ್ತ ಹಾಗೂ ವಿಶಾಲವಾದ ಚಿಂತನೆ, ಯೋಚನೆ, ವಿಚಾರಲಹರಿಯೊಂದಿಗೆ ತಟ್ಟುವ ತಂಗಾಳಿ ಜಯಂತರ ಗದ್ಯ ಸಾಹಿತ್ಯ. ತಮ್ಮ ಗದ್ಯ ಬರಹಗಳ ಮೂಲಕ ಭವಿಷ್ಯತ್ತಿನ ಬದುಕಿನ ಹಾದಿಯನ್ನು ತೋರಿಸುತ್ತ ಕೃತ್ರಿಮತೆಗೆ ತೆರೆ ಎಳೆಯುವ ಅವರ ಬರಹಗಳ ಸಾಲುಗಳು ನಮ್ಮನ್ನು ಗುರುತಿಲ್ಲದ ಪ್ರಪಂಚಕ್ಕೆ ತೆರವುಗೊಳಿಸುತ್ತದೆ. ‘ಪನ್ನೀರಿನಲ್ಲಿ ಅದ್ದಿದ ಬಟ್ಟೆಯನ್ನು ಬಿಸಿಲಿನಲ್ಲಿ ಹರವಿ ಒಣಗಿಸಿದ ಮೇಲೂ ತುಸು ಸುವಾಸನೆ ಅಂಟಿಕೊಂಡಿರುತ್ತದೆ.’ ಎಂಬ ಟಿ.ಎಸ್. ವೆಂಕಣ್ಣಯ್ಯನವರು ಹೇಳುವ ಮಾತು ಜಯಂತರ ಬರಹದ ಶೈಲಿಗೆ ಅಕ್ಷರಶಃ ಅನ್ವಯಿಸುವುದು.

ಹತ್ತು ಅಧ್ಯಾಯ ಹಾಗೂ ಅನೇಕ ಉಪ ಅಧ್ಯಾಯಗಳಲ್ಲಿ ಕನ್ನಡ ಗದ್ಯ ಇಟ್ಟ ಹೆಜ್ಜೆ ಅದು ತೊಟ್ಟ ರೂಪವನ್ನು ಗುರುತಿಸುವುದರ ಜತೆ ಜತೆಗೆ ಕನ್ನಡ ಪ್ರಬಂಧ ಸಾಹಿತ್ಯದ ಹೆಜ್ಜೆ ಹಾದಿ, ಅಲ್ಲಿ ಜಯಂತ ಕಾಯ್ಕಿಣಿ ಅವರು ಸಾಧಿಸಿದ ಮೇಲುಗೈಯನ್ನು ಮುನ್ನೆಲೆಗೆ ತಂದು ಚರ್ಚಿಸಿರುವುದು ಈ ಕೃತಿಯ ಧನಾತ್ಮಕ ಅಂಶ. ಬದುಕಿನೊಂದಿಗೆ ಮೂಡಿಬಂದ ಬರಹ ಎಂಬ ಅಧ್ಯಾಯದಲ್ಲಿ ಜಯಂತರ ಜೀವನಯಾನ, ಯಶೋಗಾಥೆ ಪರಿಣಾಮಕಾರಿಯಾಗಿ ದಾಖಲಾಗಿದೆ.

“ಜಯಂತ ಕಾಯ್ಕಿಣಿ ಅವರ ಗದ್ಯ ಶೈಲಿ ಮನಸ್ಸನ್ನು ಸೆಳೆಯುವಂತದ್ದು. ವಿಶಿಷ್ಟ ರೀತಿಯಲ್ಲಿ ತಳಪಾಯ ಹಾಕಿ ಸರಳ ಸಂಗತಿಗಳನ್ನು ಮನಮುಟ್ಟುವಂತೆ ಬರೆಯುವ ನಿಪುಣತೆ ಇವರ ಹಲವು ಲೇಖನಗಳಲ್ಲಿ ಬಹುಮುಖ್ಯ ಅಂಶ. ಜೊತೆಗೆ ರೂಪಕ, ಅಲಂಕಾರ, ಉಪಮೆ ಪ್ರತಿ ಪುಟದಲ್ಲೂ ಹೇರಳವಾಗಿವೆ. ಜಯಂತ್ ಕಾಯ್ಕಿಣಿಯವರು ಸಾಹಿತ್ಯ ವಲಯದಲ್ಲಿ ಹೆಚ್ಚು ಆಪ್ತರೆನಿಸುವುದು ಬರಹಗಳ ಸಂಖ್ಯಾಬಾಹುಳ್ಯದಿಂದಲ್ಲ. ಬದಲಾಗಿ ಅವುಗಳ ಗುಣ ಬಾಹುಳ್ಯದಿಂದ.

ಯಾವ ಪೂರ್ವಾಗ್ರಹ ತತ್ವ ಆದರ್ಶಗಳಿಗೆ ಕಟ್ಟು ಬೀಳದೆ ತನ್ನದೇ ಆದ ಸ್ವೋಪಜ್ಞತೆಯಿಂದ ಅವರ ಲೇಖನಿ ಕಾರ್ಯನಿರ್ವಹಿಸುತ್ತದೆ. `ಶಬ್ದತೀರ’ ಎನ್ನುವುದು ಅವರ ಬದುಕಿನ ಅದ್ಭುತ ರಮ್ಯ ಕ್ಷಣಗಳ, ಒಳಗನ್ನು ಅರುಹುವ ಮಜಲುಗಳ, ಮನುಷ್ಯನ ಸಹಜ ಪ್ರವೃತ್ತಿಗಳ ಕಪ್ಪು ಬಿಳುಪಿನ ಚಿತ್ರ. ಅನುಭವದ ಅನುಭೂತಿಯಾದಾಗಿನ ಸ್ವಗತ. ಮಗುವಿನ ಮುಗ್ಧತೆ, ಸಹಜ ಕೌತುಕತೆಯ ಹಿನ್ನೆಲೆಯಲ್ಲಿ ಬೆಳಗಿದ ಒಳನೋಟಗಳು. ಅವರೇ ಹೇಳುವಂತೆ ಅವರಿಗೆ ಅವರ ಕಣ್ಣುಗಳೇ ತೋರಿದ ಮಾನವ ಲೋಕದ ವಿಸ್ಮಯಗಳು” ಎಂಬುದನ್ನು ಈ ಕೃತಿಯಲ್ಲಿ ಕಲಾ ಭಾಗ್ವತ್ ಅವರು ಸಶಕ್ತವಾಗಿ ತೋರಿಸಿಕೊಟ್ಟಿದ್ದಾರೆ. ಕಲಾ ಭಾಗ್ವತ್ ಅವರ ಪ್ರತಿಭೆ, ಸೂಕ್ಷö್ಮ ಚಿಂತನಕ್ರಮ, ನಿರೂಪಣಾ ಶೈಲಿಯಿಂದ ಈ ಕೃತಿ ಬಹು ಹೃದ್ಯವಾಗಿ ಪಡಿಮೂಡಿದೆ.

“ಪ್ರಸ್ತುತ ಕೃತಿ ಇತ್ತೀಚಿನ ಮುಂಬೈನ ಒಂದು ಮಹತ್ತರ ಕೊಡುಗೆ. ಈ ಮೂಲಕ ಕಲಾ ಭಾಗ್ವತ್ ಅವರು ಪ್ರಬಂಧ ಪ್ರಕಾರದ ಅಧ್ಯಯನಕ್ಕೆ ಬಹಳ ಒಳ್ಳೆಯ ಪರಾಮರ್ಶನ ಗ್ರಂಥವೊಂದನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಈ ಕೃತಿಯಲ್ಲಿ ಜಯಂತ ಕಾಯ್ಕಿಣಿಯವರ ಲಲಿತ ಪ್ರಬಂಧಗಳು ಹಾಗೂ ಅಂಕಣ ಬರಹಗಳ ಕುರಿತು ಮಾತ್ರವಲ್ಲ ಪ್ರಬಂಧ ಎಂಬ ಸಾಹಿತ್ಯ ಪ್ರಕಾರದ ಇತಿಹಾಸ ಮತ್ತು ಕನ್ನಡದಲ್ಲಿ ಅದು ಬೆಳೆದ ಬಗೆಯ ಐತಿಹಾಸಿಕ ವಿವೇಚನೆಯಿದೆ. ಕನ್ನಡದಲ್ಲಿ ಪ್ರಬಂಧ ಸಾಹಿತ್ಯದ ಅಧ್ಯಯನ ಮಾಡುವವರು ಅಗತ್ಯವಾಗಿ ಗಮನಿಸಬೇಕಾದ ಪರಾಮರ್ಶನ ಕೃತಿಯಾಗಿದೆ’’ ಎಂಬುದಾಗಿ ಈ ಕೃತಿಯ ಮುನ್ನುಡಿಯಲ್ಲಿ ಡಾ. ಜನಾರ್ದನ ಭಟ್ ಅವರು ಹೇಳಿರುವ ಮಾತಿನಲ್ಲಿ ಉತ್ಪ್ರೇಕ್ಷೆಯಿಲ್ಲ ಕನ್ನಡ ವಾಙ್ಮಯಕ್ಕೆ ಇದೊಂದು ಒಳ್ಳೆಯ ಸೇರ್ಪಡೆ. ಈ ಕೃತಿಗಾಗಿ ಕಲಾ ಭಾಗ್ವತ್ ಅವರಿಗೆ ಹಾರ್ದಿಕ ಅಭಿನಂದನೆಗಳು.

‍ಲೇಖಕರು Admin

7 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading