ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..
ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.
‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯಲ್ಲಿ ಅಂಕಣವಾಗಿ ಬಂದ ‘ಮೀಡಿಯಾ ಡೈರಿ’ ಬಹುರೂಪಿಯಲ್ಲಿ ‘ಆ ಪತ್ರಿಕೋದ್ಯಮ’ ಎಂಬ ಶೀರ್ಷಿಕೆಯ ಪುಸ್ತಕವಾಗಿ ರೂಪುಗೊಂಡಿತು.
‘ಆ ಪತ್ರಿಕೋದ್ಯಮ‘ ಪ್ರತಿಗಾಗಿ ಸಂಪರ್ಕಿಸಿ : 70191 82729 ಅಥವಾ ಇಲ್ಲಿ ಕ್ಲಿಕ್ ಮಾಡಿ https://bit.ly/3nWUsuJ
ಜಿ ಎನ್ ರಂಗನಾಥ ರಾವ್ ಅವರು ಹೊಸ ನಾಟಕ ಸರಣಿ ಬರೆಯಲಿದ್ದಾರೆ.
8
ಅಂಕ -೩
ದೃಶ್ಯ ೨
(ಮುಖ್ಯಮಂತ್ರಿಗಳ ಮನೆ. ಮುಖ್ಯಮಂತ್ರಿಗಳ ಆಪ್ತಕಾರ್ಯದರ್ಶಿ ಸ್ವಾಹ ಕುಮಾರ್ ಮುಖ್ಯಮಂತ್ರಿಗಳ ಜೊತೆ ಫೋನಿನಲ್ಲಿ ಮಾತನಾಡುತ್ತಿರುವನು)
ಸ್ವಾಹ ಕುಮಾರ್: ಸಾಹೇಬರ ಘಾತ ಆಯ್ತಿ …
(ಆ ತುದಿಯಿಂದ ಮುಖ್ಯಮಂತ್ರಿ): ಏನು? ಏನಾಯ್ತು…?
ಸ್ವಾಹ ಕುಮಾರ್: ಎರಡು ಘಾತದ ಸುದ್ದೀರಿ..
(ಆಕಡೆಯಿಂದ ಮುಖ್ಯಮಂತ್ರಿ) ಏನದು ಬೇಗ ಹೇಳೂ…
ಸ್ವಾಹ ಕುಮಾರ್: ವಿಧಾನಸೌಧದಾಗ ಸ್ಫೋಟ…
(ಆಕಡೆಯಿಂದ ಮುಖ್ಯಮಂತ್ರಿ) ಏನು ಬಾಂಬ್ ಸ್ಫೋಟವೆ? ಭಯೋತ್ಪಾದಕರ ಕೃತ್ಯಾನಾ….
ಸ್ವಾಹ ಕುಮಾರ: ತಿಳಿದ್ರೀ ಪೊಲೀಸರು ಮಹಜರ್ ಮಾಡ್ತಿದಾರಂತ… ಆದರೆ ಪ್ರಾಣ ಹಾನಿ ಏನೂ ಆಗಿಲ್ಲರಿ… ಇನ್ನೊಂದು ತಮ್ಮ
ಸುಪುತ್ರಿ ವರ್ಷಿಣಿ ಅಮ್ಮಾರ್ ನ ಆಸ್ಪತ್ರೆಗೆ ಸೇರಿಸಿದಾರಂತೆ..
(ಆ ಕಡೆಯಿಂದ ಮುಖ್ಯ ಮಂತ್ರ): ಯಾಕೆ? ಏನಾಯ್ತು?
ಸ್ವಾಹ ಕುಮಾರ್: ಆತ್ಮಹತ್ಯೆ ಮಾಡಿಕೊಳ್ಳಲು ನೇಣು ಬಿಗಿದುಕೊಂಡಿದ್ದರ೦ತ…. ಅಪಾಯಕ್ಕೆ ಮುಂಚೇನೆ ಅಭಿನವ ಕುಮಾರರು
ಗಮನಿಸಿ ಆಸ್ಪತ್ರೆಗ ಸೇರಿಸಿದ್ದಾರಂತೆ….
(ಆ ಕಡೆಯಿಂದ ಮುಖ್ಯಮಂತ್ರಿ): ಅಯ್ಯಯ್ಯೋ ಏನಾಯ್ತಪ್ಪ…. ನೋಡು ಪೊಲೀಸ್ ಗೆ ರಿಪೋರ್ಟ ಆಗೋದು ಬ್ಯಾಡ…. ಎಫ್.ಐ.ಆರ್
ಆಗೋದು ಬ್ಯಾಡ… ಎಸ್.ಐ ಗೆ ಹೇಳೂ..
ಸ್ವಾಹ ಕುಮಾರ್: ಇಲ್ಲರೀ ಸಾಹೇಬರ ಆಸ್ಪತ್ರೆ ರೆಸಿಡೆಂಟ್ ಡಾಕ್ಟ್ರು ಈಗಾಗಲೇ ರಿಪೋರ್ಟ್ ಮಾಡಿ ಎಫ್.ಐ.ಆರ್ ಆಗಿದಂತ್ರೀ….
(ಮುಖ್ಯಮಂತ್ರಿ ಆ ಕಡೆಯಿಂದ) ಅಯ್ಯಯ್ಯೋ ಎಂಥಾ ಕೆಲಸ ಆಯ್ತು…. ಯಾವ ಕೋರ್ಟಿಗೆ ಬರ್ತದೆ…. ಜಡ್ಜ್ ಯಾರು
ವಿಚಾರಿಸಿ ಹೇಳು….
ಸ್ವಾಹ ಕುಮಾರ್: ಈಗಲೇ ಮಾಡ್ತೀನ್ರೀ ಸಾಹೇಬರ…
(ಫೋನ್ ಇಡುವನು)
ಸ್ವಾಹ ಕುಮಾರನ ಸಹಾಯಕ: ಅಷ್ಟ್ ಛಂದ ಇದ್ಲಲಪ್ಪ ಹುಡುಗಿ.. ಅಕೀಗ್ಯಾಕ ಆತ್ಮಹತ್ಯಾ ಆಲೋಚನೆ ಬಂತು….
ಸ್ವಾಹ ಕುಮಾರ್ : ತಿಳೀದಪ್ಪ… ಆ ಹೌದಣ್ಣ ಅದೇನೋ ಶಾಸ್ತ್ರೋಕ್ತ ಮದುವೆ ಆಗದಿದ್ದರೆ ಉಚ್ಚಿಷ್ಟ ತಿನ್ನೂ ಪರಿಸ್ಥಿತಿ ಬರುತ್ತೆ ಅಂತ
ಇಬ್ಬರೂ ವಾದ ಮಾಡ್ತಿದ್ದರಂತೆ….
ಸಹಾಯಕ: ಉಚ್ಚಿಷ್ಟ ಅಂದರೇನ?
ಸ್ವಾಹ ಕುಮಾರ್ರ: ಪರರ ಎಂಜಲನ್ನ…
ಸಹಾಯಕ: ನಾವು ದಿನಾ ತಿಂತಿರೋದ ಅದೇ ಅಲ್ಲೇನು. ಗುತ್ತಿಗೆದಾರರ, ಸರಬರಾಜುದಾರರು ಕೊಡೋದು ಎಂಜಲು ಕಾಸು ಅಲ್ವೇನು?
ಅದರಲ್ಲೇನು ತಪ್ಪು?
ಸ್ವಾಹ ಕುಮಾರ್: ಏಯ್ ಘನ ಸರ್ಕಾರ ನಿಂಗೆ ಸಂಬಳ ಕೊಡ್ತಿಲ್ಲವೇನು…?
ಸಹಾಯಕ: ಅದು ಹೊಟ್ಟೀಗೂ ಸಾಲದು… ಪುಟಗೋಸಿಗೂ ಸಾಲದು..
ಸ್ವಾಹ ಕುಮಾರ್: ನೀನು ತೆಪ್ಪಗೆ ಕೂತು ಕೆಲಸ ನೋಡು… ತಲೆಹರಟೆ ಮಾಡಬೇಡ…
(ಎಂದು ಟೆಲಿಫೊನ್ ಎತ್ತಿಕೊಂಡು ಯಾರಿಗೋ ಫೋನ್ ಮಾಡುವನು. ರಂಗದಲ್ಲಿ ಕತ್ತಲಾಗುವುದು)
ಅಂಕ- ೪
ನ್ಯಾಯಾಲಯ ದೃಶ್ಯ
ಸೂತ್ರಧಾರ/ಸಾಕ್ಷಿ ಪ್ರಜ್ಞೆ: ಬನ್ನಿರಣ್ಣ ನ್ಯಾಯ ದರ್ಶನಕೆ
ಸರ್ವರಿಗೂ ಸಮಬಾಳ್ವೆ, ಸಮಪಾಲು
ನ್ಯಾಯ ಶಾಸ್ತ್ರದ ನೀತಿ ಸೂತ್ರವು
ನ್ಯಾಯ ಸಿಗಬೇಕು, ನೀತಿ ಪಾಲಿಸಬೇಕು
ಬನ್ನಿರಣ್ಣ ನ್ಯಾಯ ದರ್ಶನಕೆ
(ಈಗ ಬೆಳಕು ನ್ಯಾಯಾಲಯದ ಮೇಲೆ ಕೇಂದ್ರಿತ. ಎತ್ತರದ ವೇದಿಕೆಯ ಮೇಲೆ ನ್ಯಾಯಾಧೀಶರ ಪೀಠವಿದೆ. ವೇದಿಕೆಯಲ್ಲಿ ಸ್ವಲ್ಪ ಕೆಳಸ್ತರದಲ್ಲಿ ಬೆಂಚ್ ಕ್ಲರ್ಕ್ ಕುಳಿತಿದ್ದಾನೆ. ಕೆಳಗೆ ವಕೀಲರು ಕಕ್ಷಿಗಾರರರು ಎಲ್ಲ ಆಸೀನರಾಗಿದ್ದಾರೆ. ನ್ಯಾಯಾಧೀಶರ ಪೀಠದ ಕೆಳಗೆ ‘ಸ್ವೀಕರಿಸಲಾಗುವುದು’ ಎನ್ನುವ ಪೋಸ್ಟರ್ ಅಂಟಿಸಲಾಗಿದೆ. ಒಳಗಿನ ಪ್ರವೇಶ ದ್ವಾರದಿಂದ ಡವಾಲಿ ಓಡೋಡುತ್ತಾ ಬಂದು ಸಾಹೇಬ್ರು… ಸಾಹೇಬ್ರು… ಎಂದು ವದರುವನು. ಬೆಂಚ್ ಕ್ಲರ್ಕ್ ಎದ್ದು ನಿಂತು, ಸದ್ದು, ಸಾವಧಾನ… ನ್ಯಾಯವನ್ನು ಸ್ವಾಗತಿಸೋಣ… ಸ್ವಾಗತಿಸೋಣ… ನ್ಯಾಯಾಧೀಶರ ಆಗಮನವಾಗುತ್ತಿದೆ.)
ನ್ಯಾಯಾಧೀಶರು: (ಪೀಠದಲ್ಲಿ ಆಸೀನರಾಗಿ) ಇವತ್ತಿನ ಮೊಕದ್ದಮೆಗಳೂ…
ಬೆಂಚ್ ಕ್ಲರ್ಕ್: ಸಿದ್ಧವಿದೆ ಕರೀಲಾ ಮಹಾಸ್ವಾಮಿ …..
ನ್ಯಾಯಾಧೀಶ: ಅದಕ್ಕೂ ಮುನ್ನ ಯಾರಾದರೂ ಸೂಟ್ ಕೇಸ್ ತಂದಿದ್ದರೆ ಅದನ್ನ ನಮ್ಮ ಪ್ರೈವೇಟ್ ರೂಮಿನಲ್ಲಿಡಲಿಕ್ಕೆ ಹೇಳು….
ಬೆಂಚ್ ಕ್ಲರ್ಕ್: ಒಂದು ನಾಲ್ಕು ಸೂಟ್ಕೇಸ ಅದಾವ್ರೀ ಸಾಹೇಬ್ರ… ಸೆಕ್ಯುರಿಟಿ ಅವರು ತಪಾಸಣಾ ಮಾಡಿದಾಗ ಎರಡರಲ್ಲಿ
ಭಗವದ್ಗೀತ ಪುಸ್ತಕ ಇತ್ತರೀ….
ನ್ಯಾಯಾಧೀಶರು: ನಮಗ ಅದರೆಲ್ಲಿ ನಮಗೆ ಆಸಕಿ ಇಲ್ಲ… ಬಾಂಬ್ ಸೂಟ್ಕೇಸುಗಳನ್ನ ಪೊಲೀಸರಿಗೆ ಒಯ್ಯಲಿಕ್ಕ ಹೇಳಿ, ಭಗವದ್ಗೀತ
ಹಿತ್ತಲಿಗೆ ಒಯ್ಯಿರಿ…ಹ್ಞಾ ಕೇಸ್ ಕರೀರಿ…..
ಬೆಂಚ್ ಕ್ಲರ್ಕ್: ಭಗವಂತಪ್ಪ ಶರಣಪ್ಪ ಕೆಳಗಿನ ಮನಿ
(ಆರೋಪಿ ಕಟಕಟೆಯಲಿ ಬಂದು ನಿಲ್ಲುವನು)
ವಕೀಲ-೧: ನಾನು ಆರೋಪಿ ಪರ ವಕಾಲತ್ತು ವಹಿಸಿಕೊಂಡಿದೀನ್ರೀ…
ನ್ಯಾಯಾಧೀಶರು: ಏನು ಕೇಸು….
ಪಬ್ಲಿಕ್ ಪ್ರಾಸಿಕ್ಯೂಟರ್ರ: ಅರೋಪಿ ಮೇಲೆ ಎಫ್.ಐ. ಆರ್ ನಲ್ಲಿ ಎರಡು ಆರೋಪಗಳಿವೆ ಮಹಾಸ್ವಾಮಿ…
ನ್ಯಾಯಾಧೀಶರು: ಆರೋಪ ಪಟ್ಟಿ ಸಲ್ಲಿಸ್ತೀರೇನು…
ಪಬ್ಲಿಕ್ ಪ್ರಾಸಿಕ್ಯೂಟರ್ರ: ಹೌದು ಮಹಾಸ್ವಾಮಿ….
ಪೊಲೀಸ್ ಅಧಿಕಾರಿ: ಒಂದು ಶೀಲ ಭಂಗದ ಆರೋಪ… ಎರಡು ಕೊಲೆ ಆರೋಪ….
ನ್ಯಾಯಾಧೀಶ: ಎರಡು ಆರೋಪಗಳನ್ನೂ ಒಪ್ಪಿಕೊಳ್ತೀಯ (ಎಂದು ಅಪಾದಿತನವನ್ನುದ್ದೇಶಿಸಿ ಕೇಳುವರು)
ಆರೋಪಿ: ಶೀಲ ಭಂಗ ಮಾಡಿಲ್ಲ ಸ್ವಾಮಿ…. ಕೊಲೆ ಮಾಡಿದೀನಿ….
ಪಬ್ಲಿಕ್ ಪ್ರಾಸಿಕ್ಯೂಟರ್: ನಾನು ಆರೋಪಿಯನ್ನ ಕ್ರಾಸ್ ಎಕ್ಸಾಮ್ ಮಾಡೋದಿದೆ ಸ್ವಾಮಿ…
ನ್ಯಾಯಾಧೀಶ: ಎಸ್ ಯೂ ಕೆನ್ ಪ್ರೊಸೀಡ್…
ಪಬ್ಲಿಕ್ ಪ್ರಾಸಿಕ್ಯೂಟರ್: ಆಕೀನ್ನ ನೀ ಯಾಕ ಕೊಲೆ ಮಾಡ್ದಿ…
ಆರೋಪಿ: ಆಕೆ ಸಮ್ಮತಿಸಿಯೇ ಸಹಕರಿಸಿಲು ಒಪ್ಪಿದಳು ಮಹಾಸ್ವಮಿ… ಆದ್ರ ಮದುವೆಯಾಗಿ ಅಂತ ಶರತ್ತು ಹಾಕಿದಳು
ಮಹಾ ಸ್ವಾಮಿ.. ವಾದ ಶುರುವಾಯಿತು…. ನಾನು ಮದುವೆ ಇಲ್ಲ ಒಪ್ಪಿ ಬಂದಿದೀಯ ಮಲಗಿ ಎದ್ದು ಹೋಗು ಅಂತ
ಹೇಳಿದೆ…. ಇಬ್ಬರಿಗೂ ನಶಾ ಏರಿತ್ತು… ಮದುವಿ ಆಗಲೊಲ್ಲದ ನೀನು ಎಂಥ ಗಂಡಸೋ ಅಂತ…. ಕದ್ದು ಮುಚ್ಚಿ
ಮಾಡೋ ಹೇಡಿ… ನೀನು ಗಂಡಸಾದರೆ ಮದುವಿ ಆಗಿ ನಿನ್ನ ಪುರುಷತ್ವ ತೋರಿಸೋ ಅಂದಳು… ನನಗೆ ಭಯಂಕರ
ಕೋಪ ಬಂತು. ಸಿಟ್ಟಿನ ಕೈಯ್ಯಾಗ ಬುದ್ಧಿ ಕೊಟ್ಟೆ… ಚೂರಿ ತಗೊಂಡು ಇರಿದೆ…
ಪಬ್ಲಿಕ್ ಪ್ರಾಸಿಕ್ಯೂಟರ್ : ದಟೀಸ್ ಆಲ್ ಯುವರ್ ಆನರ್
ಆರೋಪಿ ಪರ ವಕೀಲ: ಅಬ್ಜೆಕ್ಷನ್ ಯುವರ್ ಆನರ್… ಆರೋಪಿಯಿಂದ ಒತ್ತಡ ಹಾಕಿ ಹೇಳಿಸ್ತಾ ಇದಾರೆ… ಆರೋಪೀನ ನಾನೂ
ಕ್ರಾಸ್ ಕ್ವೆಶ್ಚನ್ ಮಾಡಬೇಕು….

ನ್ಯಾಯಾಧೀಶರು: ಯೆಸ್ ಗ್ರಾಂಟೆಡ್… ಫರ್ಧರ್ ಹಿಯರಿಂಗ್ ವಿಲ್ ಬಿ ಆನ್ ೨೦೨೪ ಜನವರಿ ಸೆಕೆಂಡ್….
ಬೆ೦ಚ್ ಕ್ಲರ್ಕ್: ಗೂಳಪ್ಪ ಹೊಲಗದ್ದಿ….
(ಅಂಬಾ ಎಂದು ಅರಚುತ್ತಾ ಗೂಳಿಯೊಂದು ಬಲ ಪಾಶರ್ವದಿಂದ ಪ್ರವೇಶಿಸುವುದು)
ನ್ಯಾಯಾಧೀಶರು (ಆಘಾತಗೊಂಡ೦ತೆ ಬೆಂಚ್ ಕ್ಲರ್ಕನನ್ನುದ್ದೇಶಿಸಿ) ಏನ್ರೀ ಇದು ನ್ಯಾಯಾಲಯನೋ ಗೋಶಾಲೆಯೋ…
ವಕೀಲನೊಬ್ಬ ಮುಂದೆ ಬಂದು: ಮಹಾಸ್ವಾಮಿ…. ಅದೊ೦ದು ಫಿರ್ಯಾದುದಾರ ಇದೆ….
ನ್ಯಾಯಾಧೀಶ: ಅದರ ಭಾಷೆ ನಮಗರ್ಥವಾಗಬೇಕಲ್ಲ….
ವಕೀಲ: ಪ್ರತಿಯೊಂದೂ ಪ್ರಾಣಿ ಪಕ್ಷಿಗೂ ಅದರದೇ ಭಾಷೆ ಇರುತ್ತೆ ಅನ್ನೋದು ಮಹಾಸ್ವಾಮಿಗಳಿಗೆ ತಿಳಿಯದ ಸಂಗತಿ ಏನಲ್ಲ,
ನಾನು ಅದಕ್ಕ ದುಭಾಷಿ ಆಗ್ತೀನಿ…
ನ್ಯಾಯಾಧೀಶ: ಆಯ್ತು ಪ್ರೊಸೀಡ್….
ಗೂಳಪ್ಪ: ಅಂಬಾ….
ವಕೀಲ: ಮಹಾಸ್ವಾಮಿ ಅದರ ಹೆಸರು ಗೂಳಪ್ಪ ಹೊಲಗದ್ದಿ…
ನ್ಯಾಯಾಧೀಶ: ಫಿರ್ಯಾದು ಏನು…?
ಗೂಳಿ: ಅಂಬಾ…ಅ೦ಬಾ….
ವಕೀಲ: ನಾನು ಈ ರೈತನ ಮನಿಯಾಗ ಕೊಡ ಪೂರ ಹಾಲು ಕೊಡೋ ಜೆರ್ಸಿ ತಾಯ ಹೊಟ್ಟೆಯಲ್ಲಿ ಗೂಳಿಯಾಗಿ ಹುಟ್ಟಿದೆ…
ಗೂಳಿ: ಹುಟ್ಟಿದ ಒಂದೆರಡು ದಿನ ಅಮ್ಮನ ಹಾಲು ಸಿಕ್ಕಿದಷ್ಟೆ… ಮುಂದೆ ಅವರೆ ಎಲ್ಲ ಹಿಂಡ್ಕೊ೦ಡರು.. ನನಗೊ೦ದು ಹಿಡಿ
ಇಲ್ಲ, ಹಿಡಿ ಹುಲ್ಲಿಲ್ಲ, ಬೀದ್ಯಾಗ ಬಿಟ್ಟರು…. ಕೆಲಸಕ್ಕ ಬರೋಲ್ಲ೦ತ…
ಗೂಳಿ: ಅಂಬಾ
ವಕೀಲ: ನನ್ನಿ೦ದ ಕೆಲಸ ಮಾಡಲಿಕ್ಕೆ ಆಗೋಲ್ಲ… ಈ ಒಡೆಯಾ ಹುಲ್ಲು ಹಿಂಡಿ ಹಾಕ್ತಿಲ್ಲ… ಬೇರೆಯವರ ಹೊಲ-ಗದ್ದೆಗಳಿಗೆ ಮೇಯಲಿಕ್ಕೆ ಹೋದರೆ ಬಡಿಗೆ ತಗೊಂಡು ಓಡಿಸ್ತಾರೆ…. ನಾನು ಹೊಟ್ಟೆಗೆ ಹುಲ್ಲು ಹಿಂಡಿ ಇಲ್ಲದೆ ಸಾಯೋ ಸ್ಥಿತಿಗೆ ಬಂದೀನಿ….
ನ್ಯಾಯಾಧೀಶ: ಓಹ್ ವಾಟೆ ಪಿಟಿಯಬಲ್ ಕೇಸ್
ಈ ಗೂಳಣ್ಣ ನನ್ನ ಸರ್ಕಾರದ ಗೋ ಶಾಲೆಗೆ ಸೇರಿಸಿ… ಜೆರ್ಸಿ ಹಸುವನ್ನ ಕೊಂಡು ಅದರ ಕ್ಷೀರಭಾಗ್ಯ ಪಡೆದು, ಅದರ ಕೂಸಿಗೆ ಹುಲ್ಲು ಹಿಂಡಿ ಏನೂ ಕೊಡದ, ಅದನ್ನು ಕಸಾಯಿ ಖಾನೆಗೂ ಮಾರದೆ ರೈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ…
ರೈತ: ಸ್ವಾಮಿ ಸಷ್ವಾಮಿ ಸರ್ಕಾರಿ ಶಾಸನದ ಪ್ರಕಾರ ನಾನು ಅದನ್ನ ಕಸಾಯಿ ಖಾನೆಗೆ ಮಾರುವಂತಿಲ್ಲ…. ಅದನ್ನ ಸಾಕುವ
ಶಕ್ತಿ ನನಗಿಲ್ಲ… ನಾನು ಬಡ ರೈತ… ತಿಂಗಳಿಗೆ ಐದು ಸಾವಿರದವರೆಗೂ ಖರ್ಚು ಬರ್ತದೆ….
ನ್ಯಾಯಾಧೀಶ: ತೀರ್ಪನ್ನು ತಡೆ ಹಿಡಿಯಲಾಗಿದೆ… ೨೦೨೪ ಜೂನ್ ತಿಂಗಳಿಗೆ ಮುಂದೂಡಲಾಗಿದೆ….
(ಎಲ್ಲಾ ಪೆಚ್ಚು ಮೋರೆ ಹಾಕಿಕೊಂಡು ಹೋಗುವರು)
ನ್ಯಾಯಾಧೀಶ: ನೆಕ್ಸ್ಟ್
ಡವಾಲಿ: ಅಭಿನವ ಕುಮಾರ್….ವರ್ಷಾ
ಪಬ್ಲಿಕ್ ಪ್ರಾಸಿಕ್ಯೂಟರ್: ಮಹಾಸ್ವಾಮಿ…. ವರ್ಷಾ ಅವರ ಮೇಲೆ ಆತ್ಮಹತ್ಯೆ ಯತ್ನದ ಎಫ್ ಐ ಆರ್ ದಾಖಲಿಸಿ ಆಗಿದೆ…..
ಅಭಿನವ ಕುಮಾರ್ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಎಫ್ ಐ ಆರ್ ದಾಖಲಾಗಿದೆ…..
ನ್ಯಾಯಾಧೀಶರು: ಯೆಸ್ ಯು ಕೆನ್ ಪ್ರೊಸೀಡ್…
ಪಬ್ಲಿಕ್ ಪ್ರಾಸಿಕ್ಯೂಟರ್: ಸ್ವಾಮಿ, ಯುವತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ… ಯುವಕ ಅದಕ್ಕೆ ಕಾರಣನಾಗಿದ್ದಾನೆ. ಆದ್ದರಿಂದ
ಇಬ್ಬರೂ ಶಿಕ್ಷಾರ್ಹರು…
ವರ್ಷಾ ಪರ ವಕೀಲ: ಮಹಾಸ್ವಾಮಿ ನಾನು ಇಬ್ಬರು ಆಪಾದಿತರ ಪಾಟೀ ಸವಾಲು ಮಾಡಲು ಅನುಮತಿ ಬಯಸುತ್ತೇನೆ…
ನ್ಯಾಯಾಧೀಶ: ಪರ್ಮಿಷನ್ ಗ್ರಾಂಟೆಡ್.
ವರ್ಷಾ ಪರ ವಕೀಲ: (ವರ್ಷೆಯನ್ನುದ್ದೇಶಿಸಿ) ನೀವು ನಮ್ಮ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳ ಮಗಳು…. ನಿಮಗೂ ಅಭಿನವ ಕುಮಾರರಿಗೂ ಹೇಗೆ ಪರಿಚಯವಾಯಿತು?
ವರ್ಷಾ: ಅವರು ತಮ್ಮ ತಂದೆಯ ಜೊತೆ ಅಪ್ಪನನ್ನು ಭೇಟಿಯಾಗಲು ಬರುತ್ತಿದ್ದರು…. ಅಪ್ಪ ಮತ್ತು ಅವರ ತಂದೆ ಸಮಾಲೋಚನೆಯಲ್ಲಿ ತೊಡಗಿದ್ದಾಗ ಏಕಾಂಗಿಯಾಗಿ ಕುಳಿತಿರುತ್ತಿದ್ದರು… ಆಗ ನಾನು ಅವರಿಗೆ ಆತಿಥ್ಯ ನೀಡಲು
ಹೇಳುತ್ತಿದ್ದೆ. ಹೀಗೆ ನನಗೆ ಅವರ ಪರಿಚಯವಾಯಿತು…
ವಕೀಲ: ಹೀಗೆ ಪರಿಚಯವಾಗಿದ್ದು ಪ್ರೀತಿಗೆ ತಿರುಗಿದ್ದು ಹೇಗೆ?
ವರ್ಷಾ: ನನ್ನ ಅವರ ರುಚಿ ಅಭಿರುಚಿಗಳು ಸಮಾನವಾಗಿದೆಯೆಂದು ಕೆಲವೇ ದಿನಗಳಲ್ಲಿ ಗೊತ್ತಾಯಿತು…
ವಕೀಲ: ಅಂದರೆ ಸಂಗೀತದಲ್ಲಿ, ವಿಶೇಷವಾಗಿ ಉತ್ತರಾದಿ ಸಂಗೀತದಲ್ಲಿ ನನಗೆ ಹೆಚ್ಚು ಒಲವು… ಅವರೂ ಬಿಸ್ಮಿಲ್ಲಾ ಖಾನ್, ಉಸ್ತಾದ್
ಅಲೀ ಖಾನ್ ಅವರುಗಳ ಸಂಗೀತವನ್ನು ಇಷ್ಟಪಡುತ್ತಾರೆಂದು ಗೊತ್ತಾಯಿತು… ಹಾಗೆಯೇ ಸಾಹಿತ್ಯದಲ್ಲೂ ಬರ್ಟೆಂಡ್ ರಸೆಲ್, ಸಾರ್ತರ್, ಕಮೂ, ಕಾಫ್ಕ್ ಅವರಿಗೆ ಪ್ರಿಯವೆಂದು ಗೊತ್ತಾಯಿತು. ಸಾಹಿತ್ಯದ ವಿದ್ಯಾರ್ಥಿಯಾದ ನನಗೂ ಅವರು ಇಷ್ಟವಾದರು… ಹೀಗಾಗಿ ನಾವು ಸಮಾನ ಅಭಿರುಚಿಯಿಂದ ಆಪ್ತರಾದೆವು….
ವಕೀಲ: ಆಪ್ತರಾದೆವು ಅಂದ್ರೆ ಪರಸ್ಪರ ಪ್ರೀತಿಸುತ್ತಿದ್ದಿರ?
ವರ್ಷಾ: ಹೌದು
ವಕೀಲ: ಹಾಗಿದ್ದಲ್ಲಿ ಏಕೆ ಮದುವೆಯಾಗಲಿಲ್ಲ?
ವರ್ಷಾ: ಮದುವೆ ಒಂದು ಸಾಮಾಜಿಕ ವ್ಯವಸ್ಥೆಯಾಗಿ ಒಂದು ಬಂಧನ. ಬದ್ಧತೆಗಳಿ೦ದ ಕೂಡಿದ ಬಂಧನ ನಮಗೆ ಬೇಕಾಗಿರಲಿಲ್ಲ…
| ಉಳಿದದ್ದು ನಾಳೆಗೆ |






0 Comments