
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..
ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.
‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯಲ್ಲಿ ಅಂಕಣವಾಗಿ ಬಂದ ‘ಮೀಡಿಯಾ ಡೈರಿ’ ಬಹುರೂಪಿಯಲ್ಲಿ ‘ಆ ಪತ್ರಿಕೋದ್ಯಮ’ ಎಂಬ ಶೀರ್ಷಿಕೆಯ ಪುಸ್ತಕವಾಗಿ ರೂಪುಗೊಂಡಿತು.
‘ಆ ಪತ್ರಿಕೋದ್ಯಮ‘ ಪ್ರತಿಗಾಗಿ ಸಂಪರ್ಕಿಸಿ : 70191 82729 ಅಥವಾ ಇಲ್ಲಿ ಕ್ಲಿಕ್ ಮಾಡಿ https://bit.ly/3nWUsuJ
ಜಿ ಎನ್ ರಂಗನಾಥ ರಾವ್ ಅವರು ಹೊಸ ನಾಟಕ ಸರಣಿ ಬರೆಯಲಿದ್ದಾರೆ.
7
ಅಂಕ ೩
ದೃಶ್ಯ – ೩
(ವಿಧಾನಸೌಧದ ಮೆಟ್ಟಿಲುಗಳ ಮೇಲೆ…. ವಿಧಾನಸೌಧದ ಮುನ್ನೋಟ…. ಸರ್ಕಾರದ ಕೆಲಸ ದೇವರ ಕೆಲಸ ಅನ್ನೊ ಬರಹ ಢಾಳವಾಗಿ ಕಾಣಿಸಬೇಕು… ಇಬ್ಬರು ಪೊಲೀಸರು ಮೆಟ್ಟಿಲುಗಳ ಮೇಲೆ ಠಳಾಯಿಸುತ್ತಾ ಕಾವಲು ಕಾಯುತ್ತಿದ್ದಾರೆ. ಆ ವೇಳೆಗೆ ಪ್ರಜೆಗಳು ಮತ್ತು ಸೂತ್ರಧಾರ ಪ್ರವೇಶಿಸುವರು)
ಪ್ರಜೆಗಳಲ್ಲಿ ಒಬ್ಬ : ಅಪ್ಪ ಸೂತ್ರಧಾರ ನಮ್ಮನ್ನ ಇಲ್ಲಿಗೇಕೆ ಕರಕೊಂಡ್ ಬಂದಿ… ನಾವು ಕೇಳಿದ್ದು ಆ ನಲವತ್ತು ಪರ್ಸೆಂಟ್ ನ
ವಿಚಾರ ಏನಾಯ್ತು ಅಂತ…. ಸಾಕ್ಷಿ ಪ್ರಜ್ಞಾ ಅಂತ ಬೇರೆ ಹೇಳ್ತಿ… ಅದಕ್ಕ ಉತ್ತರ ಹೇಳು ಮಗನ ಇಲ್ಲದೇ ಇದ್ದರೆ ನಿನ್ನ ತಲೆ ಸಿಡಿದು ಸಾವಿರ ಚೂರಾಗುತ್ತೆ
ಸೂತ್ರಧಾರ: ಸಾವಧಾನ… ಸಾವಧಾನ… ಅದನ್ನ ಹೇಳಲಿಕ್ಕೆ ನಿಮ್ಮನ್ನ ಇಲ್ಲಿಗೆ ತಂದದ್ದು… ನೀವು ಮೆಟ್ಟಿಲಿನ ಕಥೆ ಕೇಳಿರಬೇಕಲ್ಲ….
ಪ್ರಜೆಗಳಲ್ಲಿ ಒಬ್ಬ: ನಮಗೆ ಸೂತ್ರಧಾರ ರಾಮಯ್ಯನ ಮೆಟ್ಟಿಲು ಮಹಿಮೆ ಅಷ್ಟ ಗೊತ್ತು…. ಬೇರೆ ಯಾವ ಕಥೆಯೂ ಗೊತ್ತಿಲ್ಲ.
ನಿನ್ನ ಕಥೆ ಪುರಾಣ ಯಾವುದೂ ಬೇಕಿಲ್ಲ…. ಮೊದಲು…
ಸೂತ್ರಧಾರ: ಸ್ವಲ್ಪ ಸಮಾಧಾನ ಮಾಡಿಕೊಳ್ರೀ…. ಸಾವಧಾನದಿಂದಿರಿ…. ಹೇಳ್ತೀನಿ.. ಈ ವಿಧಾನಸೌಧದ ಮೆಟ್ಟಿಲು ಮಹಿಮಾನ….
(ಎನ್ನುತ್ತಿದಂತೆ ಬೆಳಕು ಮೆಟ್ಟಿಲುಗಳ ಮೇಲೆ ಕೇಂದ್ರೀಕೃತವಾಗುವುದು….. ಇಬ್ಬರು ಪೊಲೀಸರ ಮೆಟ್ಟಿಲುಗಳ ಮೇಲೆ ಅತ್ತಿಂದಿತ್ತ ಠಳಾಯಿಸುತ್ತಾ ಗಸ್ತು ತಿರುಗ್ತಿದಾರೆ. ಸಂಜೆ ಸುಮಾರು ನಾಲ್ಕರ ಸಮಯ ಎಂದಿಟ್ಟುಕೊಳ್ಳಬಹುದು.… ಮುವತ್ತರ ಪ್ರಾಯದ ಯವತಿಯೊಬ್ಬಳು ಸೂಟ್ ಕೇಸೊಂದನ್ನು ಹಿಡಿದುಕೊಂಡು ರಂಗ ಪ್ರವೇಶಿಸುವಳು. ಅವಳ ಹಿಂದೆಯೇ ಗುತ್ತಿಗೆಪ್ಪನೂ ಸೂಟಕೇಸೊ೦ದನ್ನು ಹಿಡಿದುಕೊಂಡು ಪ್ರವೇಶಿಸುವನು. ಪೊಲೀಸ್ ಕಾನ್‌ಸ್ಟೇಬಲ್ ಯುವತಿಯನ್ನು ತಡೆದು….)
ಪೊಲೀಸ್ ಕಾನ್ ಸ್ಟೇಬಲ್: ಅಮ್ಮಾವ್ರೆ, ನೀವು… ಎಲ್ಲಿ ಹೋಗಲಿಕ್ಕತ್ತೀರಿ… ಪಾಸ್ ಇದೆಯಾ…
ಯುವತಿ: ಅಪ್ಪಾ ನನಗ ಮೆಟ್ಟಿಲು ಹತ್ತಾಕ ಹೈರಾಣ ಅಗೈತಿ….. ನಾನು ಯುವಜನ ಕಲ್ಯಾಣ ಖಾತೆಯ ಮಂತ್ರೀನ ನೋಡೋದೈತಿ…
ಆಪಾಯಿಂಟ್ ಮೆ೦ಟ್ ಕೊಟ್ಟಾರ…
ಪೊಲೀಸ್: ನಿಮ್ಮ ಹೆಸರು
ಯವತಿ: ಪಾಸನಾಗ ಬರದೈತಿ ನೋಡು.. ಓದಲಿಕ್ಕ ಬರೋಲ್ಲೇನು… ನಿಮ್ಮ ಡಿಪಾರ್ಟ್ ಮೆಂಟಿನಾಗ ಅನಕ್ಷರಸ್ಥರನ್ನು ನೇಮಕ
ಮಾಡ್ತಾರೇನೂ?
ಪೊಲೀಸ್ : ಅವ್ವ, ತಾಯಿ ಸ್ವಲ್ಪ ಸಮಾಧಾನಮಾಡಿಕೊ…
(ಎನ್ನುತ್ತಿರುವಷ್ಟರಲ್ಲಿ ಇನ್ನೊಬ್ಭ ಪೊಲೀಸ್ ಬರುವನು)

ಪೊಲೀಸ್-೨: ಏಯ್ ಬದ್ಮಾಶ್ …. ಯುವಜನ ಸಚಿವ ಕಾಮೇಶ್ ಅವರು ಅಪಾಯಿಂಟ್ ಮೆಂಟ್ ಕೊಟ್ಟಾರಂತ ಆಕೀನ ಕಳಿಸೋ…
ಪೊಲೀಸ್-೧: ಆಕೀ ಸೂಟಕೇಸ್ ಒಯ್ತಿದಾಳೋ… ವಿಧಾನ ಸೌಧದೊಳಗ ಸೂಟಕೇಸ್ ಬಿಡಬಾರದು ಅಂತ ದೊಡ್ಡ
ಸಾಹೇಬರಿಂದಲೇ ಫರ್ಮಾನ್ ಬಂದಿದಯಲ್ಲೋ…
ಪೊಲೀಸ್-೧: ಅವ್ವ.. ತಾಯಿ ಸೂಟಕೇಸ್ ಒಯ್ಯೋ ಹಂಗಿಲ್ಲ… ಇಲ್ಲೇ ಬಿಟ್ಟು ಹೋಗು…
ಯವತಿ: ಅಯ್ಯಯ್ಯ ಅದರಾಗ ನನ್ನ ಕಾಸ್ಮೆಟಿಕ್ಸ್ ಆದ ಅಷ್ಟ. ಅದನ್ನ ನಾ ಇಲ್ಲೇ ಬಿಟ್ಟು ಹೋಗೋದ ಹ್ಯಾಂಗ… ಯುವ
ಸಚಿವರನ್ನ ಭೇಟಿ ಮಾಡೋಕ ಮೊದಲ ನಾನು ಸ್ವಲ್ಪ ಮಾರಿ ಟಚಪ್ ಮಾಡ್ಕೋಬೇಡೇನು…
(ಪೊಲೀಸರು ತಲೆ ಚಚ್ಚಿಕೊಂಡು ಆಕೆಯನ್ನು ಬಿಡುವರು. ನಂತರ ಗುತ್ತಿಗೆಪ್ಪನವರು ಸೂಟ್ ಕೇಸ್ ಹಿಡಿದು ಪ್ರವೇಶಿಸುವರು.
ಪೊಲೀಸರು ಅವರನ್ನು ತಡೆದು ನಿಲ್ಲಿಸುವರು)
ಗುತ್ತಿಗೆಪ್ಪ: ಸಿ.ಎಂ ಹತ್ತಿರ ಅಪಾಯಿಂಟ್ ಮೆ೦ಟ್ ಇದೆಯಪ್ಪ…
ಪೊಲೀಸ್ ಕಾನಸ್ಟೇಬಲ್: ಪಾಸ್ ತಗೊಂಡಿದೀರ…
ಗುತ್ತಿಗೆಪ್ಫ: ಇಗೋ ಇಲ್ಲಿದೆ….. (ಎಂದು ಪಾಸ್ ತೋರಿಸುವನು)
ಪೊಲೀಸ್ ಕಾನ್‌ಸ್ಟೇಬಲ್-೨: ಆದರೆ ಸೂಟ್ ಕೇಸ್ ಒಯ್ಯೋ ಹಂಗಿಲ್ಲ….
ಗುತ್ತಿಗೆಪ್ಪ: ಯಾವತ್ತಿನಿಂದ ಈ ಹೊಸ ರೂಲ್ಸ್….
ಪೊಲೀಸ್ ಕಾನಸ್ಟೇಬಲ್-೧: ಇವತ್ತಿನಿಂದಾನೆ…. ಸಚಿವರನ್ನ ಭೇಟಿಯಾಗೋರು ಸೂಟ್ ಕೇಸ್ ಓಯ್ಯೋ ಹಂಗಿಲ್ಲ೦ತ ಮುಖ್ಯ
ಮಂತ್ರಿಯವರೇ ಖುದ್ದು ಆಜ್ಞೆ ಮಾಡಿದಾರೆ… ಬೇಕಾದರ ಮನೀಗ ಓಯ್ದು ಕೊಡಬಹುದು….
ಗುತ್ತಿಗೆಪ್ಪ: ನೋಡಪ್ಪ ನಾನು ಗುತ್ತಿಗೆದಾರರರ ಸಂಘದವನು…. ಸಿ.ಎ೦ ಲ೦ಚ ಕೊಟ್ಟದ್ದಕ್ಕೆ ಸಾಕ್ಷಿಪುರಾವೆ ಕೇಳಿದ್ದರು… ಸಾಕ್ಷಿಪುರಾವೆ
ದಾಖಲೆಗಳು ಸೂಟ್ಕೇಸಿನಲ್ಲಿದೆ… ಅದನ್ನ ಅವರಿಗೆ ತೋರಿಸಲಿಕ್ಕ ಒಯ್ತಿದೀನಿ…
ಪೊಲೀಸ್ ಕಾನ್ ಸ್ಟೇಬಲ್-೨: ಅದನ್ನ ನೀವು ಅವರ ಹತ್ತಿರಾನೆ ಹೇಳೀ… ಸುಟ್ಕೇಸ್ ಇಲ್ಲಿ ಇಟ್ಟು ಹೋಗಿ (ಎಂದು ಬಲವಂತ
ದಿಂದ ಸೂಟ್ ಕೇಸ್ ಕಿತ್ತುಕೊಳ್ಳುವನು. ಗುತ್ತಿಗೆಪ್ಪ ಹಣೆ ಚಚ್ಚಿಕೊಳ್ಳುತ್ತಾ ಲಿಫ್ಟನತ್ತ ಹೋಗುವನು)
ಪೊಲೀಸ್ ಕಾನ್ ಸ್ಟೇಬಲ್-೧: ಅದನ್ನ ತಾ ಇಲ್ಲಿ ಏನೈತೋ ನೋಡೋಣ
(ಎಂದು ಸೂಟ್ ಕೇಸ್ ನ್ನು ಕಿತ್ತುಕೊಂಡು ತೆಗೆಯವನು)
ಢಂ… ಢ೦…. ಢಮಾರ್
(ಎಂದು ಬಾಂಬ್ ಸ್ಫೋಟಿಸಿದಂತೆ ಭಾರಿ ಸದ್ದಾಗುವುದು… ಸೂಟ್‌ಕೇಸಿನೊಳಗಿಂದ ನೂರರ, ಐನೂರರ ನೋಟುಗಳು ಹೊರಕ್ಕೆ ಬಿದ್ದು ಗಾಳಿಯಲ್ಲಿ ತರಗೆಲೆಗಳಂತೆ ಹಾರಾಡುವುದು. ಸ್ಫೋಟದ ಸದ್ದಿಗೆ ಜನ ಸೇರುವರು)
ಪಜೆಗಳೂ: ಏನಾಯ್ತು… ಏನದು ಶಬ್ದ…?
ಇನ್ನೊಬ್ಬ: ಅಯ್ಯೋ ನೋಟುಗಳ ಸುರಿಮಳೇ…. ನೋಟುಗಳ ನೋಡಪ್ಪ ಹ್ಯಾಗ ಹಾರಾಡ್ತಿವೆ….
(ಎಂದ ನೋಟುಗಳನ್ನು ಹಿಡಿದುಕೊಳ್ಳುವ ಪ್ರಯತ್ನ ಮಾಡುವನು… ಪೊಲೀಸ್ ಕಾನಸ್ಟೇಬಲ್ ಅವನನ್ನು ತಡೆದು ತನ್ನ ಸಹದ್ಯೋಗಿಗೆ ಹೇಳುವನು…)
ನಾನು ಇದನ್ನ ಜೋಪಾನ ಮಾಡ್ತೀನಿ… ನೀನು ಈಗಲೆ ಟೇಶನ್ ಗೆ ಹೋಗಿ ಸಾಯೇಬರಿಗೆ ತಿಳಿಸಿ ಅವರನ್ನ
ಕರ‍್ಕೊಂಡ್ ಬಾ… ಮಹಜರ ಆಗಬೇಕು…
(ಜನರನ್ನು ಚದುರಿಸುವನು. ರಂಗದ ಮೇಲೆ ಕತ್ತಲಾಗುವುದು)..
| ಉಳಿದದ್ದು ನಾಳೆಗೆ |






0 Comments