
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..
ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.
‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯಲ್ಲಿ ಅಂಕಣವಾಗಿ ಬಂದ ‘ಮೀಡಿಯಾ ಡೈರಿ’ ಬಹುರೂಪಿಯಲ್ಲಿ ‘ಆ ಪತ್ರಿಕೋದ್ಯಮ’ ಎಂಬ ಶೀರ್ಷಿಕೆಯ ಪುಸ್ತಕವಾಗಿ ರೂಪುಗೊಂಡಿತು.
‘ಆ ಪತ್ರಿಕೋದ್ಯಮ‘ ಪ್ರತಿಗಾಗಿ ಸಂಪರ್ಕಿಸಿ : 70191 82729 ಅಥವಾ ಇಲ್ಲಿ ಕ್ಲಿಕ್ ಮಾಡಿ https://bit.ly/3nWUsuJ
ಜಿ ಎನ್ ರಂಗನಾಥ ರಾವ್ ಅವರು ಹೊಸ ನಾಟಕ ಸರಣಿ ಬರೆಯಲಿದ್ದಾರೆ.
6
ದೃಶ್ಯ -೪
ಅದೇ ಮನೆ. ಅದೇ ದಿನ ಸಂಜೆ. ಅಭಿನವ ಬಿಯರ್ ಗುಟುಕರಿಸುತ್ತ ಸೋಫಾದಲ್ಲಿ ಆಸೀನನಾಗಿದ್ದಾನೆ. ವರ್ಷಿಣಿ ಪ್ರವೇಶಿಸುತ್ತಾಳೆ ಅವಳ ರೂಮಿನಿಂದ…
ಅಭಿನವ: ಹಲೋ ಗುಡ್ ಇವಿನಿಂಗ್ ಮೇಡಮ್… ಆಯ್ತ ಆಫ್ಟರ್‌ನೂನ್ ನ್ಯಾಪ್….
ವರ್ಷಿಣೀ: ಇಲ್ವೋ ನಿದ್ದೆ ಹತ್ತಲೇ ಇಲ್ಲ… ಮನಸ್ಸಿನ ತುಂಬ ದುಗುಡ… ಆದರೆ ನೀನು ಬೆಳಿಗ್ಗೆ ಅಮ್ಮನ ಶ್ರಾದ್ಧ ಮಾಡಿ ಸಂಜಿ
ಮುಂದ ಹೀಗೆ ಹೆಂಡ ಕುಡಿಯೋದು ನನಗೇನೋ ಸರಿಬರಲ್ಲ, ಕೆಟ್ಟದನಿಸುತ್ತದೆ…
ಅಭಿನವ: ವರ್ಷೀ ಮತ್ತ ಮತ್ತ ಅದೇ ಮಾತು… ನನ್ನದು ಅದೇ ಅದೇ ಉತ್ತರ.. ನಾನು ಹೇಳಲಿಲ್ಲವಾ ಶ್ರಾದ್ಧ ಕರ್ಮ ಮಾಡೋ
ವೇಳೇ ಶುದ್ಧವಾಗಿದ್ದರೆ ಸಾಕು ಅಂತ… ಶ್ರಾದ್ಧ ಅಂತ ಎಲ್ಲ ಐಹಿಕ ಚಟುವಟಿಕೇನೂ ನಿಲ್ಲಿಸಲಿಕ್ಕ ಆಗುತ್ತೇನು?
ಹಾಗಾದಲ್ಲಿ ನಮ್ಮ ಶ್ರಾದ್ಧ ಮಾಡಬೇಕಾಗುತ್ತೆ… ಅದಿರಲೀ ನಿಂಗ ಮಧ್ಯಾಹ್ನದ ಸವಿ ನಿದ್ದಿ ಯಾಕ ಬರಲಿಲ್ಲ?
ವರ್ಷಿಣಿ: ಮನಸ್ಸು ಕಾರ್ಕೋಟಕದಲ್ಲಿ ಅದ್ದಿ ತೆಗೆದ ಹಾಗಿದೆ. ಅದೇ ದುಗುಡ, ಅದೇ ಚಿಂತೆ, ಅದೇ, ಅದೇ ಕಳವಳ, ಅದೇ ಕಾವಳ..
ಅಭಿನವ: ಹೀಗೆ ಒಗಟಿನ ಥರಾ ಮಾತಾಡಬೇಡ… ಏನದು ದುಗುಡ… ಏನದು ಚಿಂತೆ….?
ವರ್ಷಿಣೀ: ಬೆಳಿಗ್ಗೆ ಆಚಾರ‍್ರು ಹೇಳಿದರಲ್ಲ ಸತ್ತ ಮೇಲೆ ನಾವು ಇನ್ನೊಬ್ಬರ ಉಚ್ಚಿಷ್ಟಕ್ಕೆ ಕೈ ಒಡ್ಡ ಬೇಕು ಅಂತ… ಜೀವ೦ತ
ಇರುವಾಗಲೇ ಯಾರ ಹಂಗಿಗೂ ಬೀಳದ ಸ್ವತಂತ್ರರಾಗಿ ಬದುಕುತ್ತಿರುವ ನಮಗೆ ಸತ್ತ ಮೇಲೆ ಸದ್ಗತಿ ಇಲ್ಲ
ಅಂದರೆ, ಇನ್ನೊಬ್ಬರ ಎಂಜಲು ಅನ್ನಕ್ಕೆ ಕೈ ಒಡ್ಡ ಬೇಕು ಅಂದರೆ… ನನಗೆ ಭಾಳ ಕೆಟ್ಟದನಿಸುತ್ತದೆ….
ಅಭಿನವ: ಅದೆಲ್ಲ ದೊಡ್ಡ ಜೋಕು… ಸತ್ತ ಮೇಲೆ ನಾ ಎಲ್ಲೋ ನೀ ಎಲ್ಲೋ… ಸತ್ತಮೇಲೂ ಊಟ ತಿಂಡಿ ನಿದ್ದಿ ಅಂತೆಲ್ಲ
ಇರುತ್ತಾ? ಸತ್ತ ಮೇಲೆ ಆತ್ಮ ಇನ್ನೋದು ಜನ್ಮ ಎತ್ತುತ್ತೆ ಅಂತಾರೆ…ತಮಾಷೆ ಅಂದರೆ ಈಗಲೂ ಸಹ ನಾವು
ಇನ್ನೊಬ್ಬರ ಉಚ್ಚಿಷ್ಟದ ಮೇಲೆ ಅಲ್ವಾ ಬದುಕಿರೋದು?
ವರ್ಷಿಣೀ: ಇದು ತಮಾಷೆ ಮಾತಲ್ಲ… ಇಲ್ಲ ಅಭಿ…ಸತ್ತಮೇಲೂ ನಾವು ಪುನರ್ಜನ್ಮ ಅಥವಾ ಮುಕ್ತಿಗೆ ಕಾಯಬೇಕಾಗ್ತದಂತ….
ನಾನು ಕ್ರಾಸ್ ಚೆಕ್ ಮಾಡಿದೀನಿ… ವೇದ ಉಪನಿಷತ್ತು ಮನುಸ್ಮೃತಿ ಎಲ್ಲಾ ಇದನೇ ಹೇಳುತ್ತವಂತೆ… ಇಹದಲ್ಲಿ ಹೀಗೆ
ಕೈ ಚಾಚಿದವರಿಗೆ ಅನ್ನ ಕೊಡೋ ನಾವು ಪರದಲ್ಲಿ ಇನ್ನೊಬ್ಬರ ಎಂಜಲನ್ನಕ್ಕೆ ಕೈ ಚಾಚಬೇಕು ಅಂದರೆ. ನಾವಿಬ್ಬರೂ
ಮದುವೆಯಾಗಿ ಬಿಡೋಣ…
ಅಭಿನವ: ವರ್ಷಿ ಮತ್ತೆ ಮದುವೆ ರಾಗ ಎಳೀಬೇಡ…ನಾನು ಮೊದಲೇ ನಿಂಗ ಹೇಳಿದೀನಿ… ಐ ಹೇಟ್ ಮ್ಯಾರೇಜ್ ಆಸ ಅನ್
ಇನಸ್ಟಿಟ್ಯೂಷನ್…. ಅದೊಂದು ಅನಗತ್ಯ ಬಾಂಡೇಜ್…ಅದೊ೦ದು ವಿವಾಹಿತ ದಾಂಪತ್ಯ ಅಂದರೆ ಅದೊಂದು
ಜೀತ ಸಂಬ೦ಧ ಇದ್ದಂತೆ ನಾನು ನೀನೂ ಇಬ್ಬರೂ ಸ್ವತಂತ್ರರಾಗಿರಲು ಸಾಧ್ಯವಾಗಲಿಲ್ಲ, ಸಮಾನರಾಗಿರಲು ಸಾಧ್ಯವಿಲ್ಲ….
ವರ್ಷಿಣಿ: ಅದೆಲ್ಲ ತುಂಬ ಮೆಟೀರಿಯಲಿಸ್ಟಿಕ್ ಆಲೋಚನೆ ಆಯ್ತು ಅಭಿ… ಎಲ್ಲವನ್ನೂ ‘ಎಡ’ದಿಂದಲೇ ನೋಡಲಿಕ್ಕ ಆಗೋಲ್ಲ…
ಆತ್ಮ, ಪರಮಾತ್ಮ, ಅಧ್ಯಾತ್ಮ, ಧರ್ಮ ಇವೂ ಸೃಷ್ಟಿಯಲ್ಲಿ ಬದುಕಿನ ಮುಖ್ಯ ಪ್ರಕೃತಿಗಳಾಗಿವೆ… ಆದ್ದರಿಂದ ನಾವು
ಇಹದಷ್ಟೇ ಮುಖ್ಯವಾಗಿ, ಗಂಭೀರವಾಗಿ ಪರದ ಬಗ್ಗೆಯೂ ಯೋಚಿಸಬೇಕಾಗುತ್ತೆ…. ಏಕೆಂದರೆ ಜಾತಸ್ಯ ಮರಣಂ
ಧೃವಂ… ನನಗೆ ಸತ್ತ ಮೇಲೂ ಚೆನ್ನಾಗಿರಬೇಕು ಅಂತ ಆಸೆ ಇದೆ… ನಾವು ಮದುವೆಯಾಗಿ ಬಿಡೋಣ.., ಈಗಿನಂತೆ
ಪರದಲ್ಲೂ ಇನ್ನೊಬ್ಬರ ಹಂಗಿನಲ್ಲಿರಬೇಕಾಗಿಲ್ಲ… ಇನ್ನೊಬ್ಬರ ಎಂಜಲನ್ನಕ್ಕೆ ಕೈ ಒಡ್ಡ ಬೇಕಾಗಿಲ… ನಾವಿಬ್ಬರೂ
ಮದುವೆಯಾಗಿ ಬಿಡೋಣ… ಪ್ಲೀಸ್….
ಅಭಿನವ: ನೋ … ದಟೀಸ್ ಇಂಪಾಸಿಬಲ್…. ನಾನು ಮೊದಲೇ ನಿಂಗ ನೂರಕ್ಕ ನೂರು ಖಚಿತವಾಗಿ ಹೇಳಿದೀನಿ ನಂಗೆ ಮದುವೆಯ
ಬಂಧನ ಇಷ್ಟ ಇಲ್ಲ ಅಂತ… ನಮ್ಮದೇನಿದ್ದರೂ ಲಿವ್ ಇನ್ ರಿಲೇಷನ್‌ಶಿಪ್ ಅಂತ… ಅದಕ್ಕ ಒಪ್ಪಿಕೊಂಡೇ ನೀನು
ಬಂದಿದೀಯ… ಈಗ ಪರದ ಹೆಸರಲ್ಲಿ ಬ್ಲಾಕ್ಮೇಲ್ ಮಾಡಬೇಡ…
ವರ್ಷಿಣೀ: ಬ್ಲಾಕ್ ಮೇಲ್ ಅಲ್ಲ ಅಭಿ… ಇಬ್ಬರ ಹಿತದಿಂದಲೂ ನಾನು ಹೇಳ್ತಿದೀನಿ… ಮದುವೆ ಆಗೋಣ….
ಶಾಸ್ತ್ರೋಕ್ತ ಬೇಡ ಅಂದರೆ ಸಬ್ರಿಜಿಸ್ಟಾರ್ ಆಫೀಸಲ್ಲಿ ಮದುವೆ ಯಾಗೋಣ ಅಥವಾ ಒಂದು
ದೇವಸ್ಥಾನದಲ್ಲಿ ಒಂದು ತಾಳಿಕಟ್ಟು.. ಇಬ್ಬರಿಗೂ ಸದ್ಗತಿ ಸಿಗುತ್ತೆ….
ಅಭಿನವ: ವರ್ಷಿ…ದಿಸೀಸ್ ಟೂ ಮಚ್… ಮದುವೆಗೆ ನಾನು ಖಂಡಿತಾ ಸಿದ್ಧನಿಲ್ಲ… ನಮ್ಮದೇನಿದ್ದರೂ ಲಿವ್ ಇನ್ ರಿಲೇಶನ್‌ಶಿಪ್
ಅಂತ ಮೊದಲೇ ಹೇಳಿದ್ದೀನಿ ಅದಕ್ಕೆ ಒಪ್ಪಿಕೊಂಡೇ ನೀನು ಬಂದಿದೀಯ…. ನೆನಪಿರಲಿ… ನೋ… ಮ್ಯಾರೇಜ್ ಈಸ್
ಇಂಪಾಸಿಬಲ್… ನೀನು ಮದುವೆಗೆ ಒತ್ತಾಯಮಾಡೋ ಹಾಗಿದ್ದರೆ ಯು ಕೆನ್ ಗೆಟ್ ಲಾಸ್ಟ್…
(ಎಂದು ದುರ್ದಾನ ತೆಗೆದುಕೊಂಡವನ೦ತೆ ಅಲ್ಲಿಂದ ನಿರ್ಗಮಿಸುವನು-ರಂಗದಲ್ಲಿ ಕತ್ತಲಾಗುವುದು)
(ಅದೇ ದಿನ ರಾತ್ರ ಹತ್ತುಗಂಟೆ ಸಮಯ. ಅಭಿನವ ಒಬ್ಬನೇ ಹಜಾರದಲ್ಲಿ ಕುಳಿತಿದ್ದಾನೆ. ಕೈಯ್ಯಲ್ಲಿ ವಿಸ್ಕಿ ಗ್ಲಾಸ್ ಇದೆ. ಹೌದಣ್ಣ ಪಕ್ಕದ ಕೊಠಡಿಯಿಂದ ಪ್ರವೇಶಿಸುವನು)
ಹೌದಣ್ಣ: ರಾತ್ರ ಹತ್ತು ಗಂಟ ಆಯ್ತು ಆಭಿನವ್… ಇನ್ನು ಸಾಕು…. ಊಟ ಮಾಡಿ ಮಲಕ್ಕೋ….
ಅಭಿನವ: ಇವತ್ತು ಏಕೋ ಮೂಡ್ ಚೆನ್ನಾಗಿಲ್ಲ ಕಣೋ….. ಇನ್ನೊಂದು ಲಾರ್ಜ್ ಕೊಡೋ….
ಹೌದಣ್ಣ: ಹೌದಣ್ಣ…. ಬೇಡಣ್ಣ… ಊಟಕ್ಕೇಳಣ್ಣ…. ಅಕ್ಕಾನೂ ಇನ್ನೂ ಊಟ ಮಾಡಿಲ್ಲ…
ಅಭಿನವ: ಹೌದಣ್ಣ ಏಕೋ…. ನಂಗೆ ಊಟಕ್ಕೆ ಕಾಯ ಬೇಡಾಂತ ಹೇಳಿದ್ದಳು… ಚಾರೂನ ಕರೀ…
ಹೌದಣ್ಣ: ಚಾರೂ ಅವರ ಮನೆಗೆ ಹೋದಳು….
ಅಭಿನವ: ಹೌದಣ್ಣ…ನಂಗೆ ಮೊದಲೇ ಹೇಳಬೇಡವೇನೋ? ಯಾಕೆ ಹೋದ್ಲೋ…ಇಲ್ಲೇ ಇರು ನಿಂಗೊ೦ದು ಕೆಲಸಕ್ಕೆ ವ್ಯವಸ್ಥ
ಮಾಡ್ತೀನಿ ಅಂತ ಹೇಳೀದ್ದೆ…
ಹೌದಣ್ಣ “ಹೌದಣ್ಣ… ಆದರೆ ಸಯಾಂಕಲಾನೆ ಅಕ್ಕ ನೀನು ಮನೇಗೆ ಹೋಗು ಅಂತ ಅವಳನ್ನ ಕಳಿಸಿದರು ಅಣ್ಣ…. ಹೌದಣ್ಣ….
ಅಭಿನವ: ಆಯ್ತು ನಾನು ಇದನ್ನು ಮುಗಿಸಿ ಬರ್ತೀನಿ… ವರ್ಷೀನ ಊಟಕ್ಕೆ ಎಬ್ಬಿಸು. ಅವಳಿಗೋಸ್ಕರ ಕಾಯ್ತಾ ಇದೀನಿ ಅಂತ ಹೇಳು
ಹೌದಣ್ಣ: ಹೌದಣ್ಣ… ಹಾಗೆ ಒಬ್ಬರಿಗೊಬ್ಬರು ಕಾಯೋದರಲ್ಲೇ ಒಂದು ಥರಾ ಮಜಾ ಇರುತ್ತೆ
(ಎನ್ನುತ್ತಾ ವರ್ಷಿಣಿಯ ಕೊಠಡಿಯತ್ತ ತೆರೆಳುವನು…. ಒಂದೆರಡು ನಿಮಿಷಗಳ್ಲೆಲ್ಲೇ ‘ಅಯ್ಯಯ್ಯೋ…ಅಯ್ಯಯ್ಯೋ’ ಎಂದು ಚೀರುತ್ತ ಧಾವಿಸಿ ಬರುವನು…)
ಅಭಿನವ: ಯಾಕೋ…ಏನಾಯ್ತೋ…
ಹೌಧಣ್ಣ: ಅಯ್ಯೋ.. ಅಯ್ಯಯೋ… ಅನ್ಯಾಯ ಆಗೋಯ್ತು….
ಅಭಿನವ: ಏನಾಯ್ತೋ…
ಹೌದಣ್ಣ: ಹೌದಣ್ಣ…ಏನಂತ ಹೇಳಲಿ…
ಅಭಿನವ: ಏನಾಯ್ತು… ಬೇಗ ಬೊಗಳೋ…
ಹೌದಣ್ಣ: ಹೌದಣ್ಣ ಏನಂತ ಹೇಳಲಿ…. ಅಕ್ಕ ಸೀಲಿಂಗ್ ಫ್ಯಾನಿಗೆ ನೇಣು ಹಾಕ್ಕೊಂಡಿದಾರೆ..
ಅಭಿನವ: ಹ್ಞಾ೦! ಏನಂದಿ….
(ಎನ್ನುತ್ತಾ ವರ್ಷಿಣಿಯ ಕೊಠಡಿಗೆ ಧಾವಿಸುವನು)
(ವರ್ಷಿಣೀಯ ಕೊಠಡಿ…. ಸಿಲೊಇಂಗ್ ಫ್ಯಾನಿಗೆ ನೇಣು ಹಾಕಿಕೊಂಡಿರುವ ವರ್ಷಿಣೀಯ ಮೇಲೆ ಬೆಳಕು ಕೇಂದ್ರಿತವಾಗುವುದು. ವರ್ಷಿಣಿಯ ಕಣ್ಣು ಗುಡ್ಡೆಗಳು, ನಾಲಿಗ ಹೊರಕ್ಕ ಬಂದಿವೆ.ಅಭಿನವ ಅವಳ ಮೂಗಿನ ಹೊಳ್ಳೆಗಳ ಮೇಲೆ ಕೈಗಳನ್ನಿರಿಸಿ ನೋಡುವನು…)
ಅಭಿನವ: ಏಯ್ ಹೌದಣ್ಣ… ಇನ್ನೂ ಶ್ವಾಸ ಇದೆ… ಬೇಗ ಹೋಗಿ ಚರಣ್ ಸಿಂಗ್‌ಗೆ ದೊಡ್ಡ ಕಾರು ರೆಡಿ ಮಾಡಲಿಕ್ಕೆ ಹೇಳು ಈಗಲೇ ಆಸ್ಪತ್ರೆಗೆ ಕರ‍್ಕೊಂಡ್ಹೋಗೋಣ…
(ಎನ್ನುತ್ತಾ ವರ್ಷಿಣಿಯ ತಲೆಯನ್ನು ನೇಣಿನ ಕುಣಿಕೆಯಿಂದ ಬಿಡಿಸಿ ಎರಡು ತೋಳಗಳ ಮೇಲೆ ಅವಳನ್ನು ಮಲಗಿಸಿಕೊಂಡು ಕಾರಿಗೆ ಒಯ್ಯುವನು…)
| ಉಳಿದದ್ದು ನಾಳೆಗೆ |






0 Comments