ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..
ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.
‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯಲ್ಲಿ ಅಂಕಣವಾಗಿ ಬಂದ ‘ಮೀಡಿಯಾ ಡೈರಿ’ ಬಹುರೂಪಿಯಲ್ಲಿ ‘ಆ ಪತ್ರಿಕೋದ್ಯಮ’ ಎಂಬ ಶೀರ್ಷಿಕೆಯ ಪುಸ್ತಕವಾಗಿ ರೂಪುಗೊಂಡಿತು.
‘ಆ ಪತ್ರಿಕೋದ್ಯಮ‘ ಪ್ರತಿಗಾಗಿ ಸಂಪರ್ಕಿಸಿ : 70191 82729 ಅಥವಾ ಇಲ್ಲಿ ಕ್ಲಿಕ್ ಮಾಡಿ https://bit.ly/3nWUsuJ
ಜಿ ಎನ್ ರಂಗನಾಥ ರಾವ್ ಅವರು ಹೊಸ ನಾಟಕ ಸರಣಿ ಬರೆಯಲಿದ್ದಾರೆ.
4
-ಅಂಕ ೨-
ದೃಶ್ಯ ಎರಡು
(ಮಾರನೆಯ ದಿನ ಬೆಳಿಗ್ಗೆ. ಮಂತ್ರಿಗಳ ಮನೆ. ಅಭಿನವ ಕುಮಾರ, ವರ್ಷಿಣಿ ಸೋಫಾ ಮೇಲೆ ಕುಳಿತು ಸರಸ ಸಂಭಾಷಣೆಯಲ್ಲಿ ತೊಡಗಿದ್ದಾರೆ)
ವರ್ಷಿಣಿ: ನಿನ್ನೆ ಪಾರ್ಟಿ ಭರ್ಜರಿ ಮೋಜಿನದಾಗಿತ್ತು ಅಭಿನವ. ಆದರೆ ನಿನ್ನ ಫ್ರೆಂಡ್ಸ್ ಗೆ ಹೆಣ್ಣು ಮಕ್ಕಳ ಜೊತೆ ಹೇಗೆ ನಡಕೋ ಬೇಕು ಅನ್ನೋ ಮ್ಯಾನರ್ಸೇ ತಿಳೀದು..
ಅಭಿನವ: ಛೆ.. ಛೇಛೇ ಅವರೆಲ್ಲ ಸಜ್ಜನರೇ…. ಆದರೆ ಗುಂಡಿನ ಪ್ರಭಾವದಲ್ಲಿ ಸ್ವಲ್ಪ ಜೋಲಿ ಹೊಡೆದಿದಾರೆ…
ವರ್ಷಿಣಿ: ಅಂದ ಹಾಗೆ ಇವತ್ತು ನಿಮ್ಮಮ್ಮನ ಶ್ರಾದ್ಧ ಅಂದಿ…
ಅಭಿನವ: ಹೌದು..
(ಎಂದು ಗೆಳೆಯನನ್ನು ಕರೆಯುವನು)
ಏಯ್ ಗೆಳೆಯಾ ಹೌದಣ್ಣ, ಎಲ್ಲಿದ್ದೀಯ..
ವರ್ಷಿಣೀ: ಅಂತೂ ಮಜಾ ಇದೆಯಪ್ಪ ನೀನ್ನ ಹುಟ್ಟಿದ ಹಬ್ಬದ ಮರುದಿನಾನೆ ನಿಮ್ಮಮ್ಮನ ತಿಥಿ… ನಿನ್ನ ಕಥಿ ನೋಡಲಾರದೆ
ಪುಣ್ಯಾತ್ಗಿತ್ತಿ ತೀರಿಕೊಂಡಳೇನೋ
ಅಭಿನವ: ಏಯ್ ಹಾಗೆಲ್ಲ ತಮಾಷೆ ಮಾಡಬೇಡ….
ಗೆಳೆಯ ಹೌದಣ್ಣ: ಹೌದಣ್ಣ ಇಲ್ಲೇ ಇದೀನಿ…
(ಎನ್ನುತ್ತಾ ಆತುರದಲ್ಲಿ ಆಗಮಿಸುವನು)
ವರ್ಷಿಣಿ: ಶ್ರಾದ್ಧದ ಹಿಂದಿನ ದಿನ ಊಟ ಮಾಡಬಾರದು ಅಂತಾರೆ… ನೀನಾದರೋ ನಿನ್ನೆ ಗುಂಡೂ ಹಾಕಿ ಚಿಕನ್ ಕಬಾಬ್ ಕತ್ತರಿಸಿದಿ…
ಅಭಿನವ: ಅದರಲ್ಲೆಲ್ಲ ನನಗೆ ನಂಬಿಕೆ ಇಲ್ಲ… ಶ್ರಾದ್ಧ ಮಾಡೋ ಅಷ್ಟು ಕಾಲ ಶುದ್ಧವಾಗಿದ್ದು ಶ್ರದ್ಧೆಯಿಂದ ಮಾಡಿದರೆ ಸಾಕು….
ಅಲ್ವೇನೋ ಹೌದಣ್ಣ… ಆಚಾರ್ರಿಗೆ ಹೇಳಿದಿಯೇನೋ…
ಹೌದಣ್ಣ: ಹೌದಣ್ಣ… ಹೇಳಿದೀನಿ ದ್ವೈಪಾಯನಾಚಾರ್ರು ಒಂದು ನಾಮಕರಣ ಇದೆ ಅದನ್ನ ಮುಗಿಸಿ ೧೨ಕ್ಕೆ ಬರ್ತೀನಿ ಅಂದರು … ಹೌದಣ್ಣ….
ವರ್ಷಿಣಿ: ಶ್ರಾದ್ಧದ ಅಡಗೀ ನಾ ಮಾಡಲೇನು…ಒಂದು ವಡೆ ಪಾಯಸದ ಅಡಗಿ ತಾನೆ…
ಅಭಿನವ: ಛೆ..ಛೇಛೇ ನೀನು ಯಾಕ ಕೈ ಮಸಿ ಮಾಡ್ಕೋ ಬೇಕು…
ಹೌದಣ್ಣ: ಹೌದಣ್ಣ.. ಹೌದು…. ಆಚಾರ್ರು ಹೇಳ್ತಾ ಇದ್ದರು ಅವಿವಾಹಿತ ಸ್ತ್ರೀಯರು ಮಾಡಿದ ಅಡುಗೆ ಶ್ರಾದ್ಧಕ್ಕೆ ಬರೋದಿಲ್ಲಂತೆ…
ವರ್ಷಿಣೀ: ಮದುವೆ ಆಗದ ಹೆಂಗಸರು ಮೈಲಿಗೆ ಏನು…. ಸುಡಲಿ ನಿನ್ನ ಆಚಾರ್ರ ಬ್ರಾಹ್ಮಣಕಿ… ಎಲ್ಲ ಬೋಗಸ್… ಮದುವೆ ಆಗದ
ಹುಡುಗೀರು ಸಿಕ್ಕರೆ ಒಂದು ಕೈ ನೋಡೋದಿಲ್ಲೇ ಅಂತಾನೇನು ನಿನ್ನ ಆಚಾರ್ರು…
ಅಭಿನವ: ಅಷ್ಟೆಲ್ಲ ಸಿಟ್ಟು ಮಾಡ್ಕೊ ಬೇಡ ಸಂಗಾತಿ…
ವರ್ಷಿಣಿ: ನಾನು ಇವತ್ತು ಅಡುಗೆ ಮಾಡೇ ಮಾಡ್ತೀನಿ…
ಅಭಿನವ: ಬೇಡ ಈಗಾಗಲೇ ಆನ್ಲೈನ್ನಲ್ಲಿ ತಿಥಿ ಅಡುಗೆ ಬುಕ್ ಮಾಡಿಯಾಗಿದೆ… ೧೨ಕ್ಕೆ ಅದೂ ಬರುತ್ತೆ… ನೀನು ಏನಿದ್ದರೂ ತಿಥಿ
ಊಟ ಮಾಡು.
ಹೌದಣ್ಣ: ಹೌದಣ್ಣ ಹೌದು… ೧೨ಕ್ಕೆ ಬರುತ್ತೆ… ಮಡೀಲೆ ಕಳಿಸಲಿಕ್ಕ ವ್ಯವಸ್ಥಾ ಮಾಡ್ತೀನಿ ಅಂಥ ಹೇಳಾರ
ಕೇಟರಿಂಗ್ನವರು.
ವರ್ಷಿಣಿ: ನಿಮ್ಮ ಮಾತು ಕೇಳಿ ನನಗೆ ತಲೆ ನೋವು ಶುರುವಾಗಿದೆ. ನಾ ಸ್ವಲ್ಪ ರೆಸ್ಟ್ ಮಾಡ್ತೀನಿ
(ಎಂದು ಅಲ್ಲಿಂದ ನಿರ್ಗಮಿಸುವಳು)
ಅಭಿನವ: ನಾನು ಕೂಡ ಸ್ವಲ್ಪ ರೆಸ್ಟ್ ಮಾಡ್ತೀನಿ.. ನಿನ್ನಿನ ಹ್ಯಾಂಗೋವರ್ ಇನ್ನೂ ಹೋಗಿಲ್ಲ..
ಹೌದಣ್ಣ: ಹೌದಣ್ಣ… ಹವದು ಹಾಗೆ ಮಾಡಣ್ಣ…. ಆಚಾರ್ರು ಬಂದ ಕೂಡಲೇ ನಾನು ಎಬ್ಬಿಸ್ತೀನಿ… ಹೌದಣ್ಣ…

(ಇಬ್ಬರೂ ನಿರ್ಗಮಿಸುವರು. ಒಂದೆರಡು ನಿಮಿಷಗಳ ಕಾಲ ರಂಗದಲ್ಲಿ ಕತ್ತಲು… ನಂತರ ಬೆಳಕು ಬೀಳುವುದು.. ಮಧ್ಯಾಹ್ನ ಹನ್ನೆರಡರ ಸಮಯ. ಬೆಳಕು ಮಧ್ಯಾಹ್ನದ ಬಿಸಿಲಿನಂತಿರಬೇಕು. ಮ೦ಡಿಯವರೆಗೆ ಮಡಿಪಂಚೆ ಉಟ್ಟು ದ್ವಾದಶ ಮುದ್ರೆಗಳನ್ನು ಧರಿಸಿರುವ ಆಚಾರ್ರು ಪ್ರವೇಶಿಸುವರು. ಅವರ ಹಿಂದೆಯೇ ಕೇಟರಿಂಗ್ನವರು ವಡೆ, ಪಾಯಸ, ಅನ್ನ, ಹುಳೀ ಇತ್ಯಾದಿಗಳನ್ನೊಳಗೊಂಡ ದೊಡ್ಡ ಟಿಫನ್ ಕ್ಯಾರಿಯರನ್ನ ತಂದು ಹಾಲಿನ ಮಧ್ಯದಲ್ಲಿರುವ ಡೈನಿಂಗ್ ಟೇಬಲ್ ಮೇಲೆ ಇಡುವರು)
ಆಚಾರ್ರು: ಹೌದಣ್ಣ ಎಲ್ಲಣ್ಣ ಅಭಿನವ ಕುಮರ್ರು…
ಹೌದಣ್ಣ: ಹೌದಣ್ಣ ಹೌದು ರೆಸ್ಟ ಮಾಡ್ತಿದಾರೆ…ಎಬ್ಬಿಸ್ಲೇನು…
ಆಚಾರ್ರೂ: ವ್ಯಾಳ ಆಯ್ತು ಸ್ನಾನ ಮಾಡಿ ಮಡಿ ಉಟ್ಕೊಂಡು ಬರಲಿಕ್ಕ ಹೇಳಣ್ಣ
ಹೌದಣ್ಣ: ಹೌದಣ್ಣ…ಹೌದು…
(ವರ್ಷಿಣಿ ಪ್ರವೇಶಿಸುವಳು)
ವರ್ಷಿಣಿ: ಹೌದೇನ್ರೀ ಆಚಾರ್ರ ನಾನು ಮಾಡಿದ ಅಡುಗೆ ಪಿಂಡಕ್ಕ ಬರೋದಿಲ್ಲೇನು…
ಆಚಾರ್ರು: ಹೌದಮ್ಮ … ಮದುವೆಯಾಗದ ಹೆಣ್ಣು ಮಕ್ಕಳು ಮಾಡಿದ ಅಡುಗಿ ಮೈಲಗಿ… ಅದು ಬ್ರಾಹ್ಮ ಣರಿಗೂ ಬಡಸಲಿಕ್ಕೆ ಬರಲ್ಲ…
ಪಿಂಡಕ್ಕೂ ಬರಲ್ಲ… ಅದಕ ನಾನು ಹೇಳಿದ್ದು ಒಂದು ತಾಳಿ ಕಟ್ಟಿಸ್ಕೊಂಡು ಬಿಡೂಂತ…ನೀವೇನೋ ಲಿವಿಂಗ್ ಟುಗೆದರ್
ಅಂತ ಫರಂಗಿಯವರ ಥರಾ ಇದ್ದೀರಿ…
ವರ್ಷಿಣಿ: ಲಿವಿಂಗ್ ಟು ಗೆದರ್ ಆದರೂ ಗಂಡ ಹೆ೦ಡ್ತಿ ಥರಾನೆ ಇದೀವಲ್ಲ ಆಚಾರ್ರ…
ಆಚಾರ್ರ: ಆದರೂ ಶಾಸ್ತ್ರೋಕ್ತ ಮದುವೆ ಆಗಿ ತಾಳೀ ಕಟ್ಟಿಸ್ಕೊಳ್ಳದ ಹೆಣ್ಣು ಯಾವುದಕ್ಕೂ ಬರೋದಿಲ್ಲ. ಆಕೀಗೆ ಸದ್ಗತೀನೂ
ಸಿಗೋದಿಲ್ಲ…ಉಚ್ಚಿಷ್ಟ ಪಿಂಡ ತಿಂದ್ಕೊ೦ಡು ಪಿಶಾಚಿ ಥರಾ ಇರಬೇಕು…
ವರ್ಷಿಣಿ: ಹ್ಞಾಂ ಏನಂದರೀ..
(ಅಷ್ಟರಲ್ಲಿ ಅಭಿನವ ರೇಶಿಮೆ ಪಂಚೆಯನ್ನು ದಟ್ಟಿಯಾಗಿ ಉಟ್ಟು, ಮೇಲೊಂದು ವಲ್ಲಿ ಹೊದ್ದು ಬರುವನು)
ಅಭಿನವ: ಆಚಾರ್ರ ನಾನು ರೆಡಿ ಇದೀನಿ
ಆಚಾರ್ರ : ಮುದ್ರಿ ಹಾಕ್ಕೋಂಡು ಆಚಮನ ಮಾಡು…
(ಅಭಿನವ್ ಮುದ್ರೆ ಹಾಕಿಕೊಳ್ಳುತ್ತಿರುವಾಗ)
ಆಚಾರ್ರು: ಏನಪ್ಪ ಮಂತ್ರಿಗಳು ಮನೇಲಿಲ್ಲವಾ…
ಅಭಿನವ: ಇಲ್ಲ…ಅವರೀಗ ಮನೇಗೆ ಬರೋದು ಅಪರೂಪ…ಅವರೀಗ ರೆಸಾರ್ಟ್ ಸಚಿವರಲ್ವಾ…ರೆಸಾರ್ಟ್ನಲ್ಲೇ ಇರ್ತಾರೆ..
ಆಚಾರ್ರು: ಇದೀಗ ಛಲೋ ಆಯ್ತು…ರೆಸಾರ್ಟ ಸಚಿವರು ರೆಸರ್ಟನಾಗ ಅಂದರ, ಅರಣ್ಯ ಸಚಿವರು ಕಾಡಿನಾಗೇ ಇರಬೇಕೇನು…
ಹ್ಹ..ಹ್ಹ…ಹ್ಹ ತಮ್ಮ ಜೋಕಿಗೆ ತಾವೇ ನಗುವರು.ನಂತರ)
ಧರ್ಮಪತ್ನಿ ಶ್ರಾದ್ಧಕ್ಕೂ ಬರೋಲ್ಲ ಅಂದರೆ ಹ್ಯಾಗದು….
ವರ್ಷಿಣೀ: ಧರ್ಮ ಪತ್ನಿ ಅಂದರೇನ? ಅಧರ್ಮ ಪತ್ನೀನೂ ಇರ್ತಾರೇನು… ಇರ್ತಾರ… ಇರ್ತಾರ… ನಿನ್ನ ಹಾಂಗ…
(ಹ್ಞಾಂ ಎಂದು ರಾಗ ಎಳೆದು ವರ್ಷಿಣಿ ಬೆಚ್ಚಿ ಬೀಳುವಳು)
ಆಚಾರ್ರು: ಆಭಿನವ ಆಚಮನ ಮಾಡಿದ್ದು ಆಯ್ತ…. ಮಾಸೇ ಉತ್ತರಾಯಣೆ ಕೃಷ್ಣ ಪಕ್ಷೇ ಚತುರ್ದಶಿ ತಿಥೌ…
ಆಬ್ರಹ್ಮಸ್ತಂಭ ಪರ್ಯಂತ ದೇವಋಷಿ ಮಾತಾಮಹಿ
ತೃಪ್ತ್ಯ೦ತು ಮಾತೃ ಮಾತಾಮಹಿ ಮಹಾದಾಯಂ
ಅತೀತ ಕುಲಕೋಟಿನಾಂ ಸಪ್ತದ್ವೀಪ ನಿವಾಸಿನಾಂ
ಆಬ್ರಹ್ಮ ಭುವನಾಲೋಕಂ ಇದುಮಸ್ತಿ ಶ್ರಾದ್ಧ ಕರ್ಮ ಕರೀಷ್ಯೆ
(ಮಂತ್ರ ನಿಲ್ಲಿಸಿ)
ಮಾತೃ….ಮಾತಾಮಹಿ…
ಅಮ್ಮನ ಹೆಸರು ಹೇಳಪ್ಪ
ಅಭಿನವ: ಅಂಬಾ ಬಾಯಿ
ಆಚಾರ್ರೂ: ಅಂಬಾ ಬಾಯಿ ದಾಂ….ಮಾತಾಮಹಿ ಹೆಸರು
ಅಭಿನವ: ಗೊತ್ತಿಲ್ಲ
ಆಚಾರ್ರು: ಯಜ್ಞಮ್ಮ ದಾಂ …(ಮಂತ್ರ ಮಣಮಣಿಸಿ) ಎಳ್ಳು ನೀರು ಬಿಡು …
(ಅಭಿನವ ತರ್ಪಣ ಒಡುವನು)
ಆಚಾರ್ರು: ನಾನಿನ್ನು ಪಿಂಡ ಕಟ್ತೀನಿ….
(ಎಂದು ಡೈನಿಂಗ್ ಟೇಬಲ್ ಮೇಲಿದ್ದ ಅನ್ನ ತೆಗೆದು ತಟ್ಟೆಗೆ ತೋಡಿಕೊಂಡು ಎಳ್ಳು, ಮೊಸರು, ಹಾಲು, ಜೇನು ತುಪ್ಪ ಬೆರಸಿ ಮೂರು ದೊಡ್ಡ ಪಿಂಡ ಮತ್ತು ಒಂದು ಚಿಕ್ಕ ಪಿಂಡ ಕಟ್ಟುವರು)
ವರ್ಷಿಣೀ: ಮೂರು ಯಾತಕ್ಕೆ ಇವತ್ತು ಒಬ್ಬರದೇ ತಿಥಿ ಅಲ್ಲವೇ?
ಆಚಾರ್ರೂ: ತಾಯಿಯದು ಒಬ್ಬರದೇ ಆದರೂ ಅವರ ಜೊತೆ ಅಜ್ಜಿ, ಮುತ್ತಜ್ಜಿಯರೂ ಬರ್ತಾರೆ. ಅವರನ್ನೂ ಆವಾಹಿ
ಸಬೇಕಾಗುತೆ.. ಅವರಿಗೂ ಭೋಜನಕ್ಕೆ ಹಾಕಬೇಕು..
ವರ್ಷಿಣೀ: ಆ ಚಿಕ್ಕದು
ಆಚಾರ್ರು: ಅದೇ ಉಚ್ಚಿಷ್ಟ ಪಿಂಡ
ವರ್ಷಿಣಿ: ಉಚ್ಚಿಷ್ಟ ಅಂದರೆ
ಆಚಾರ್ರು: ಪಿತ್ರೂ ಪಿತಾಮಹರೂ ಮಾತೃ ಮಾತಾಮಹಿಯೂ ತಿಂದು ಮಿಕ್ಕದ್ದು ಎಂಜಲು.. ತಮ್ಮ ವಂಶದಲ್ಲಿ ಎಳೇ ವಯಸ್ಸಿನಲ್ಲೇ ಮರಣ
ಹೊಂದಿದವರು, ಮದುವೆಯಾಗದೇ ಸತ್ತವರು ಶ್ರಾದ್ಧಕ್ಕೆ ಅರ್ಹರಲ್ಲ… ಅಂಥವರಿಗೆ ಶ್ರಾದ್ಧ ಮಾಡೋದಿಲ್ಲ.. ಅವರು ಹಸಿದಿರಬಾರದಲ್ಲ… ಅಂಥವರಿಗಾಗಿ ಪಿಂಡದೂಟ ಮಾಡಿದ ಹಿರಿಯರು ಉಚ್ಚಿಷ್ಟವನ್ನು ಬಿಟ್ಟುಹೋಗುತ್ತಾರೆ…. ಅಂಥವರು ವಾಯಸ
ರೂಪದಲ್ಲಿ ಬಂದು ಉಚ್ಚಿಷ್ಟ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ…
ವರ್ಷಿಣಿ: ಅ೦ದರೆ ಮದುವೆ ಆಗದೋರು ಸತ್ತ ನಂತರ ಎಂಜಲು ತಿಂದ್ಕೊ೦ಡೇ ಇರಬೇಕಾ…
ಆಚಾರ್ರು: ಹೌದು
ವರ್ಷಿಣೀ: ಆಯ್ಯೋ ದೇವರೇ…ಎಂಥಾ ಗತೀನಪ್ಪ ಇದು..
(ಎಂದುಕೊ೦ಡು ಘಾಸಿಗೊಂಡವಳ೦ತೆ ಅಲ್ಲಿಂದ ನಿರ್ಗಮಿಸುವಳು. ಆಚಾರ್ರು ಮಂತ್ರ ಮಣಮಮಣಿಸಿ ಪಿಂಡ ಪ್ರದಾನ
ಮಾಡಿಸುವರು)-
ಆಚಾರ್ರು: ಪಿಂಡವನ್ನು ತಟ್ಟೆಯಲ್ಲಿಟ್ಟುಕೊಂಡು ಹಿತ್ತಲಲ್ಲಿ ತೋಡಿರೋ ಗುಂಡಿಯಲ್ಲಿಟ್ಟು ಮಣ್ಣು ಮುಚ್ಚಬೇಕು
ಅಭಿನವ: ಅದನ್ನ ನಮ್ಮ ಗೆಳೆಯ ಹೌದಣ್ಣ ಮಾಡ್ತಾನೆ….. ಹೌದಣ್ಣ ಆಚಾರ್ರು ಹೇಳಿದ್ದು ಕೇಳಿಸಿಕೊಂಡ್ಯಾ…
ಹೌದಣ್ಣ: ಹೌದಣ್ಣ .. ಹೌದು… ಹಾಗೇ ಮಾಡ್ತೀನಣ್ಣ…
(ಆಭಿನವ ಆಚಾರ್ರಿಗೆ ಫಲತಾಂಬೂಲ, ದಕ್ಷಿಣೆ ಕೊಡುವನು. ಆಚಾರ್ರು ನಿರ್ಗಮಿಸುವರು. ಆಚಾರ್ರು ಹೇಳಿದಹಾಗೆ ಮಾಡೋ
ಹೌದಣ್ಣ ಎಂದು ಅಭಿನವನೂ ಅಲ್ಲಿಂದ ನಿರ್ಗಮಿಸುವನು. ಹೌದಣ್ಣ ಪಿಂಡದ ತಟ್ಟೆಯನ್ನು ಹಿತ್ತಲಿಗೆ ಒಯ್ಯುವನು. ನಂತರ
ತೆರೆ ಬೀಳುವುದು)
। ಉಳಿದದ್ದು ನಾಳೆಗೆ ।






0 Comments