ನನಗೆ ಎಚ್ಚರವಾಗಿದ್ದು ತುಂಬಾ ತಡವಾಗಿ.
ವೀರಣ್ಣ ಮಂಠಾಳಕರ್
ಮಟ ಮಟ್ ಮಧ್ಹಾನದ ಬಿಸಿಲಲ್ಲಿ ಮೈಯೆಲ್ಲ ಬೆವರಿಕ್ಕುವ ಕಾಲವದು. ನೆಲ, ಮಹಡಿಯೆಲ್ಲ ಕಾದ ಹಂಚಿನಂತೆ ಸುಡುವ ಶಕೆಯಲ್ಲಿ ಹತ್ತನೇ ಪರೀಕ್ಷೆ ಬರೆದು ಮುಗಿಸಿದ ಉತ್ಸಾಹವಿತ್ತು. ಆದರೆ ಮುಂದಿನ ವಿದ್ಯಾಭ್ಯಾಸದ ಕನಸಿಗೆ ಕಲ್ಲೇಟು ಬಿದ್ದಿತ್ತು. ಅಪ್ಪನ ಸಲಹೆಯಂತೆ ಓದಿಗೆ ಮುಕ್ತಾಯ ಹೇಳು ಎಂಬ ಮಾತಿಗೆ ಬೇಸರಿಸಿಕೊಂಡಿದ್ದೆ. ಹೀಗೆ ಏನು ಮಾಡಬೇಕೆಂಬ ಚಿಂತೆಯಲ್ಲಿ ಕನ್ನಡದ ಮಾಸ ಪತ್ರಿಕೆಯೊಂದು ಕೈಯಲ್ಲಿ ಹಿಡಿದುಕೊಂಡು ಪುಟಗಳನ್ನು ತಿರುವುತ್ತ ಮಂಚದ ಮೇಲೆ ಒರಗಿಕೊಂಡಿದ್ದವನಿಗೆ ಹೊರಗಿನಿಂದ ಯಾರದೋ ಕೂಗು ಕರೆದಂತಾಗಿ ಹೋಗಿ ನೋಡಿದೆ.ಉರಿಯುವ ಬಿಸಿಲಲ್ಲೂ, ಕುದಿಯುವ ಮನಸ್ಸಿನ ತಲ್ಲಣಗಳಿಗೆ ತಂಪೆರೆಯುವ ಸಂದೇಶ ಹೊತ್ತು ತಂದ ಅಂಚೆಯಣ್ಣನನ್ನು ನೋಡಿ ಸಂಕಟವನ್ನು ಮರೆತು ಸಂತಸ ಮೂಡಿಸಿತು. ಯಾರೋ ಬರೆದ ಪತ್ರ ನನ್ನ ಹೆಸರಿನ ವಿಳಾಸಕ್ಕೆ ಕಳುಹಿಸಿದ ಕವರೊಂದನ್ನು ಕೈಗಿಟ್ಟನು. ಕೆಲವರ ದೃಷ್ಠಿಯಲ್ಲಿ ಗರಿ ಗರಿ ನೋಟುಗಳನ್ನು ಹಿಡಿದುಕೊಂಡು ನಿಂತಿರುವಂತೆ ಅಂಚೆಯಣ್ಣ, ಅವನತ್ತ ಆಸೆಯ ಓರೆನೋಟ ಬೀರುವಂಥ ಸನ್ನಿವೇಶ, ಯಾರೇ ಆಗಲಿ ಅಂತಹ ಒಂದು ಸೆಳೆತಕ್ಕೆ ಒಳಗಾಗುವುದು ಸಹಜ. ಈಗೆಲ್ಲ ಮೊಬೈಲ್, ಇಂಟರ್ನೆಟ್ ಕಾಲದವರಿಗೆ ಪತ್ರ ವ್ಯವಹಾರ, ಆತ್ಮ ಸಂಗಾತಿಗಳಿಗೆ ಬರೆಯುವ ಪತ್ರ. ಅದರೊಳಗಿರುವ ಸಂಭ್ರಮ, ಅದಕ್ಕಾಗಿ ಕಾದು ಕುಳಿತುಕೊಳ್ಳುವಂಥ ತಾಳ್ಮೆ ಇದೀಗ ನೀರಸವೆನಿಸಬಹುದು. ಆದರೆ ಆ ದಿನಗಳು ನಮಗೆ ಪತ್ರ ವ್ಯವಹಾಗಳೆಂದರೆ ಎಂದೂ ಕಾಣದ ನಿಧಿಯೊಂದನ್ನು ಪಡೆದಷ್ಟೇ ಖುಷಿ, ಸಂಭ್ರಮ! ಪತ್ರ ಬರೆಯುವಾಗ ಮತ್ತು ನಮಗಾಗಿ ಆತ್ಮೀಯರು ಬರೆದ ಪತ್ರಗಳನ್ನು ಓದುವಾಗ ಭಾರಿ ಸಂತೋಷವಾಗುತಿತ್ತು.
ಹತ್ತನೇ ತರಗತಿಯಲ್ಲಿ ಇರುವಾಗಲೇ ಕಥೆಗಾರನಾಗಬೇಕೆಂಬ ಬಯಕೆ, ಸಿನಿಮಾ ನಟನೆವರೆಗೂ ಹೋದ ಕಲ್ಪನೆಯಿಂದ ಕವಿಯಾಗಿ, ಒಬ್ಬ ಬರಹಗಾರನಾಗಬೇಕೆಂಬ ಅಪೇಕ್ಷೆ ಮನೆ ಮಾಡಿತ್ತು. ಅದಕ್ಕೆಲ್ಲ ಅಪ್ಪನ ವರಮಾನಕ್ಕೆ ನನ್ನ ಕನಸುಗಳು ಸಾಕಾರಗೊಳ್ಳುವ ಹಾಗಿರಲಿಲ್ಲ. ಆದರೂ ಛಲವೊಂದು ನನ್ನನ್ನು ಆ ಹಾದಿಗೆ ಕೊಂಡೊಯ್ಯಿತು. ಅದೇ ಆಸೆ, ಕನಸು, ಕಲ್ಪನೆಯ ಬೆನ್ನೇರಿ ಕುಳಿತಿದ್ದವನಿಗೆ ಪಟ್ಟಣದ ಮುಖ ನೋಡುವ ಭಾಗ್ಯ ಸಿಕ್ಕಿತು. ಅಂಚೆಯಣ್ಣ ಕೊಟ್ಟು ಹೋದ ಕವರಿನಲ್ಲಿ ಅಡಗಿ ಕುಳಿತ ಕಾಗದದ ಒಕ್ಕಣೆ ನನ್ನನ್ನು ಬರಮಾಡಿಕೊಂಡವು.ಕೊರಗುತಿದ್ದ ಜೀವದ ಭಾವನೆಗಳಿಗೆ ನೀರೆರೆಯಲು ಬಂದ ಅಕ್ಕನ ಪತ್ರ ಅದಾಗಿತ್ತು. ಮರುದಿನವೇ ಕೆಂಪು ಬಸ್ಸನ್ನೇರಿ ಮಹಮ್ಮದ ಗವಾನ ಪಟ್ಟಣದಲ್ಲಿ ಕಾಲಿಟ್ಟೆ. ಹಾರುವ ಹಕ್ಕಿಯ ಆಸೆಗೆ ಆಕಾಶ ಮೂರೇ ಗೇಣು ಎನಿಸಿದಷ್ಟು ಸಂತಸ. ಅಂತೂ ಕಾಲೇಜು ಮೆಟ್ಟಿಲೇರಿದ ಕ್ಷಣದಲ್ಲಿ ಎಲ್ಲಾ ಹೊಸ ವಾತಾವರಣ. ತರಾವರಿ ಬಣ್ಣದ ಉಡುಪನ್ನು ತೊಟ್ಟು ಬಂದಿರುವ ಹುಡುಗಿಯರು. ನೂರಾರು ಕನಸುಗಳನ್ನು ಹೊತ್ತು ತಂದ ಹುಡುಗರ ಏಕಾಂತ ಧ್ಯಾನ. ಅಚ್ಚುಕಟ್ಟಾದ ವಾತಾವರಣ. ವಿಶಾಲವಾದ ಮೈದಾನದಲ್ಲಿ ಸುಂದರವಾದ ಕಟ್ಟಡ. ಅದರಡಿ ನಾವು.
ಕನಸಿನರಮನೆಯ ಗೋಪುರ ಸುತ್ತಾಡಿದಂತ ನೆನಪು. ಅಲ್ಲಿ ವಿದ್ಯಾರ್ಥಿಗಳ ತರಲೆ, ತಕರಾರುಗಳಿಗೆ ಗದರುವ ಪ್ರಾಧ್ಯಾಪಕರು. ಮಸ್ತಕಕ್ಕೆ ಸೇರಿಕೊಳ್ಳುವ ಪಠ್ಯದ ಚಟುವಟಿಕೆಗಳು. ಹೊಸ ವಿಚಾರ, ಚಿಂತನೆಗಳಿಗೆ ಉತ್ತೇಜಿಸುವ ಸ್ನೇಹಿತರ ಪರಿಚಯ. ಎಲ್ಲದಕ್ಕೂ ಪ್ರಾಯದ ವಯಸ್ಸಿಗೆ ಕಾಲೇಜು ಒಂದು ವೇದಿಕೆಯಾಗಿತ್ತು.ಆ ದಿನಗಳಲ್ಲಿ ಒಂದಿನ ಆಕಸ್ಮಿಕವಾಗಿಯೇ ನನಗೆ ಗೊತ್ತೇ ಇಲ್ಲದಂತೆ ಆದ ಅವಳ ಪರಿಚಯ. ಸ್ನೇಹಕ್ಕೆ ತಿರುಗಿ ಪ್ರೀತಿಯೆಂಬ ನೆನಪಿನ ದೋಣಿ ನೀರಿಲ್ಲದ ಅಲೆಯಲ್ಲಿ ಸಾಗಿತ್ತು. ಅವಳ ಧ್ಯಾನ ಮನಸ್ಸಲ್ಲಿ ಹುತ್ತವಾಗಿ ಬೆಳೆದು ಬಿಟ್ಟಿತ್ತು. ಪ್ರೀತಿಸುವ, ಆರಾಧಿಸುವ ದೇವತೆಯಂತೆ ಅವಳನ್ನು ಕಂಡ ಕ್ಷಣದಿಂದ ಮರೆಯಲು ಆಗಲೇ ಇಲ್ಲ. ಆ ನೆಪದಲ್ಲಿ ಮನಸ್ಸಿನ ಬೇಗುದಿ, ತಲ್ಲಣದ ಕವಿತೆಗಳು ಕಾಗದದಲ್ಲಿ ಅಕ್ಷರ ರೂಪಕ್ಕಿಳಿದವು. ಮೌನದಲ್ಲಿಯೇ ಎರಡು ಮನಗಳಲ್ಲಿ ಪ್ರೀತಿಯೆಂಬುದು ಕಮಲದಂತೆ ಅರಳತೊಡಗಿತ್ತು. ಪಠ್ಯದಲ್ಲಿರುವ ಆಸಕ್ತಿ ಬರುಬರುತ್ತ ಪಠ್ಯೇತರ ವಿಷಯದಲ್ಲಿ ಹೆಚ್ಚಿತು. ಬಾಡಿಗೆ ಮನೆಯೊಂದರ ಗೋಡೆಯ ಮಧ್ಯದಲ್ಲಿ ಪ್ರತ್ಯೇಕ ಕೋಣೆಯಲ್ಲಿ ವಾಸವಾಗಿದ್ದೆವು. ಪದ್ಮಳ ಪ್ರೀತಿಯೆಂಬ ಪರಿಮಳಕ್ಕೆ ಸಿಲುಕಿದ್ದ ನನಗೆ ಎಚ್ಚರವಾಗಿದ್ದು ತುಂಬಾ ತಡವಾಗಿ. ನನ್ನ ಮನಸ್ಸಿನ ವಿಚಾರಗಳನ್ನು ಅವಳೆದುರಿಗೆ ಹೇಳದೇ ಬರೀ ಕವಿತೆಗಳ ಸಾಲು ಬರೆದು ಅವಳಿಗೆ ಕೊಡುತಿದ್ದೆ. ಅವುಗಳನ್ನು ಓದಿ ಬರಿದೆ ನಕ್ಕು ಅದಕ್ಕೆ ಪ್ರತ್ಯುತ್ತರವಾಗಿ ಏನೊಂದು ಹೇಳಿರಲಿಲ್ಲ.
ಮೌನದಲ್ಲಿಯೇ ಪ್ರೀತಿಗಾಗಿ ಸಮ್ಮತಿಸಿದಳೋ ಇಲ್ಲವೋ ಗೊತ್ತಿಲ್ಲ. ಅಂತೂ ಆ ವೇಳೆಗೆ ನಾನು ಬಣ್ಣದ ಬೆರಗಿನ ಸಿನಿಮಾ ಲೋಕದ ಪ್ರಪಂಚಕ್ಕೆ, ಅಂದರೆ ಮಾಯಾನಗರಿ ಬೆಂಗಳೂರಲ್ಲಿ ತೊದಲು ಕವಿತೆಗಳೊಂದಿಗೆ ಕಾಣೆಯಾಗಿದ್ದೆ. ಕನಸಿನ ಬೆನ್ನತ್ತಿ ಹೋದವನಿಗೆ ಸಿಕ್ಕಿದ್ದು? ‘ದೂರದ ಗುಡ್ಡ ನುಣ್ಣಗೆಂಬಂತೆ’ ಮಾತೊಂದು. ಖ್ಯಾತ ಸಿನಿಮಾ ಸಂಗೀತ ನಿರ್ದೇಶಕರೊಬ್ಬರು ಹೇಳಿದ ಈ ಉಪನಿಷತ್ತು ನನ್ನ ಬದುಕನ್ನೇ ಬದಲಿಸಿತ್ತು. ಹಂಬಲಿಸಿ ಹೋದ ಭಾವೆನೆಗಳೆಂಬ ಬಾಯಾರಿಕೆ ನೀಗದೇ ಇರುವಾಗ ಸ್ವಾಭಿಮಾನ ಕಾಡಿತ್ತು. ಸದಾ ಮನಸ್ಸಿಗೆ ತಿವಿಯುತಿದ್ದ ಮಾತಿನಿಂದ ಹಠವೋ, ಛಲವೋ ಒಟ್ನಲ್ಲಿ ಭಾವನಾಜೀವಿಯಾಗಿ ವಾಸ್ತವದಲ್ಲಿ ಬದುಕುತಿದ್ದೆ.ಏನಾದರೂ ಸರಿ. ಮಾಯಾನಗರಿ ಬಿಟ್ಟು ಮರಳಿ ಬರಿಗೈಯಲ್ಲಿ ಊರಿಗೆ ಹೋಗುವ ಮನಸ್ಸಾಗಲಿಲ್ಲ. ಆಗ ಇನ್ನೂ ಮಾಸದ ಪದ್ಮಳ ನೆನಪು ಗೆದ್ದಲು ಹುಳವಾಗಿ ಮನಸ್ಸನ್ನು ಕೊರೆಯುತಿತ್ತು. ಅದೇ ವೇಳೆಗೆ ಊರನ್ನು ಬಿಟ್ಟು ವರ್ಷಗಳೇ ಕಳೆದಿದ್ದವು. ಅಷ್ಟೊತ್ತಿಗೆ ಬೆಂಗಳೂರಿನ ಖಾಸಗೀ ಕಂಪನಿಯಲ್ಲಿ ಕೆಲಸಕ್ಕಿದ್ದ ನನ್ನನ್ನು ಅಪ್ಪ ತುಂಬಾ ಸೀರಿಯಸ್ಸು ಎಂಬ ಸಂದೇಶ ತಲುಪಿತು. ತಕ್ಷಣಕ್ಕೆ ಎಲ್ಲವನ್ನು ಮರೆತು. ವಯಕ್ತಿಕ ಭಾವನೆಗಳನ್ನೆಲ್ಲ ಬದಿಗೊತ್ತಿ, ಕನಸು, ಕಲ್ಪನೆಗಳೆಂಬ ಪುಟಗಳು ಮುಚ್ಚಿ ಊರಿಗೆ ಹೋಗಿ ತಲುಪಿದೆ.ಆರಾಮಾಗಿ ಕುರ್ಚಿಯ ಮೇಲೆ ಕಾಲಿಟ್ಟು, ಮತ್ತೊಂದು ಕುರ್ಚಿಯಲ್ಲಿ ಕುಳಿತು ಅಪ್ಪ ಪತ್ರಿಕೆ ಓದುತಿದ್ದಾನೆ. ಅವ್ವ ಚಹಾ ತಂದು ಕೊಡುತಿದ್ದಾಳೆ. ಅಣ್ಣ ಆಗಷ್ಟೇ ಲಾರಿಯಿಂದಿಳಿದು ಬಂದವನಂತೆ ಕಮಟು, ಕಮಟಾದ ಮೈ, ಕಪ್ಪು ಮಸಿಯಲ್ಲಿ ಅದ್ದಿ ತೆಗೆದಂತಿರುವ ಮಾಸಿದ ಬಟ್ಟೆ ಕಳಚುತ್ತ ಸ್ನಾನಕ್ಕೆ ರೆಡಿಯಾಗುತಿದ್ದಾನೆ. ತಂಗಿ ಅಪ್ಪನ ಪಕ್ಕದಲ್ಲೇ ಕುಳಿತಿದ್ದಾಳೆ. ಮನೆಯ ಅಂಗಳದಲ್ಲಿ ಕಾಲಿಟ್ಟ ನನಗೆ ಕನಸಿನ ಗೋಪುರ ಕಳಚಿ ಬಿದ್ದಂತೆ, ಕಲ್ಪನೆ ನೆಲ ಕಚ್ಚಿದಂತೆ ಅನ್ನಿಸಿತು.







0 Comments