ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಸರವಳ್ಳಿ ಅನುವಾದಿಸಿದ ಮಾರ್ ಕೆಸ್ ಕಥೆ

ಜಯಶ್ರೀ ಕಾಸರವಳ್ಳಿ

‘ ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಕಾದಂಬರಿಯ ಮೂಲಕ ಜಗದ್ವಿಖ್ಯಾತನಾದ ಗಾಬ್ರಿಯೇಲ್  ಗಾರ್ಸಿಯಾ  ಮಾರ್ ಕೆಸ್, ಪ್ರಪಂಚ ಕಂಡ ಅತ್ಯದ್ಭುತ ಕತೆಗಾರ. ಸ್ವಾಭಾವಿಕ ಮಿತಿಗಳಾಚೆಗೂ ತನ್ನ ಪ್ರತಿಭೆಯನ್ನು ಹಾರಿ ಬಿಡುವ ಮಾರ್ ಕೆಸ್ ಪ್ಯಾರಿಸ್, ರೋಮ್, ಕಾರಕಾಸ್, ಹವಾನಾ, ನೂಯಾರ್ಕ್ ಮುಂತಾದ ನಗರಗಳಲ್ಲಿ ಹಲವಾರು ವರುಷಗಳು ಸ್ಪಾನಿಷ್ ಪತ್ರಿಕೆಗಳಿಗೆ ವರದಿಗಾರನಾಗಿದ್ದವನು. ಅವನು ಸೃಷ್ಟಿಸಿದ ‘ಮಕಾಂಡೊ’ ಲ್ಯಾಟಿನ್ ಅಮೆರಿಕದ ಯಾವುದೇ ಊರಾಗಿರಬಹುದು. ಮಾರ್ ಕೆಸ್ ಒಂದೆಡೆ ‘ ವೈಚಾರಿಕ ಪ್ರಾಣಿಗಳು ತಪ್ಪು ತಿಳಿದ ಅಸಂಗತ ಜಗತ್ತು’ ಎಂಬಂತಹ ಮಾತನಾಡಿದ್ದಾನೆ. ಅವನ ಭಾವ ಲೋಕಕ್ಕಂತೂ ಅಕ್ಷರಶಃ ಒಪ್ಪುವಂತಹ ಮಾತು. ಅವನು ಸೃಷ್ಟಿಸಿರುವ ದೇವದೂತರ ಅವನತಿ, ಸುಂದರ ಶವಗಳು, ವಿಲಕ್ಷಣ ನಗರಗಳು, ಜೀವಂತ ಮನುಷ್ಯರಾಗಿ ನಡೆದಾಡುವ ಹೆಣಗಳು, ಇವೆಲ್ಲಾ ಕೇವಲ ಮೈ ಮರೆಸುವ ಫ್ಯಾಂಟಸಿಯಲ್ಲ. ಬದಲಾಗಿ ನಮ್ಮ ತಪ್ಪುಗಳನ್ನು, ವಿವೇಕದ ಹೆಸರಿನಲ್ಲಿ ನಾವು ಎಸಗುವ ಅಸಂಬದ್ಧಗಳನ್ನು ನಮಗೆ ನೆನಪು ಮಾಡಿಕೊಡುವಂತಹ ರೂಪಕಗಳು.
ಅವನ ಮೊಟ್ಟಮೊದಲ ಕೃತಿ ‘ ಲೀಫ್ ಸ್ಟಾರ್ಮ್’, ಆನಂತರ ಬಂದ ‘ನೋ ಒನ್ ರೈಟ್ಸ್ ಟು ಕರ್ನಲ್’, ‘ಆಟಮ್ ಆಫ್ ದಿ ಪೇರ್ಟಿಯಾರ್ಕ್’, ‘ಲವ್ ಇನ್ ದ ಟೈಂ ಆಫ್ ಕಾಲರಾ’ ಅವನ ಇತರ ಪ್ರಖ್ಯಾತ ಕೃತಿಗಳು. ಇಲ್ಲಿ ಅನುವಾದಿಸಿದ ಕತೆ ‘ಮಾನೋಲಾಗ್ ಆಫ್ ಇಸಬೆಲ್ ವಾಚಿಂಗ್ ಇಟ್ ರೈನ್ ಇನ್ ಮಕಾಂಡೊ’, ವಿವರಣೆಗೆ ದಕ್ಕದ ಒಂದು ಅತ್ಯುತ್ತಮ ಕವಿತೆಯೆಂದರೂ ಆದೀತು. ಕತೆ ಸೃಷ್ಟಿಸುವುದು ಮನುಷ್ಯ ಪ್ರಜ್ಞೆಗೂ ಮೀರಿದ ನೈಸರ್ಗಿಕ ವ್ಯಾಪಾರವನ್ನು; ಹೊರ ಜಗತ್ತು, ಒಳ ಜಗತ್ತು ಎರಡೂ ಒಂದರೊಳಗೊಂದು ಹಾಸುಹೊಕ್ಕಾಗುವ ಸುಪ್ತಪ್ರಜ್ಞೆಯ ವಿಶೇಷವನ್ನು.

ಮಕಾಂಡೋದಲ್ಲಿ ಮಳೆ ಸುರಿಯುವುದನ್ನೇ ನೋಡುತ್ತಿರುವ ಇಸಾಬೆಲ್ಲಾಳ ಸ್ವಗತ


ಮೂಲ: ಗಾಬ್ರಿಯೇಲ್  ಗಾರ್ಸಿಯಾ  ಮಾರ್ ಕೆಸ್
ಅನುವಾದ: ಜಯಶ್ರೀ ಕಾಸರವಳ್ಳಿ
ಮಳೆಗಾಲ ಹಿಡಿದಿದ್ದು ಜನರು ಚರ್ಚ್ ನಿಂದ ಹೊರ ಬರುತ್ತಿದ್ದ ಒಂದು ಭಾನುವಾರ. ಶನಿವಾರದ ರಾತ್ರಿಯಿಡೀ ಉಸಿರು ಕಟ್ಟಿಸುವಂತಿತ್ತು. ಭಾನುವಾರದ ಬೆಳಿಗ್ಗೆ ಕೂಡ ಮಳೆ ಬರಬಹುದೆಂದು ಯಾರಿಗೂ ಅನ್ನಿಸಿರಲಿಲ್ಲ. ಚರ್ಚ್ ನ ಪೂಜೆಯ ನಂತರ ನಾವು ಹೆಂಗಸರು ನಮ್ಮ ಛತ್ರಿಗಳನ್ನು ಬಿಚ್ಚಿ ತೆರೆಯುವುದರೊಳಗೇ ಕಪ್ಪಗಿನ ದಟ್ಟ ಗಾಳಿಯೊಂದು ಬೀಸಿ ಒಂದೇ ಏಟಿಗೆ ಮೇ ತಿಂಗಳ ಧೂಳನ್ನು, ಒಣಗಿದ ಕಸಕಡ್ಡಿ ತರಗಲೆಗಳನ್ನು ಮೇಲೆತ್ತಿ ಗರಗರ ತಿರುಗಿಸಿತ್ತು. ನನ್ನ ಪಕ್ಕ ಇದ್ದ ಯಾರೋ ‘ ಇದು ಮಳೆಗಾಳಿ !’ ಅಂದರು. ಅದಕ್ಕೂ ಮಂಚೆಯೇ ನನಗೂ ಅದು ಹೊಳೆದಿತ್ತು. ಚರ್ಚ್ನಿಂದ ಹೊರಬಂದು ಮೆಟ್ಟಲಿಗಿಳಿಯುತ್ತಿದ್ದ ಕ್ಷಣದಲ್ಲೇ ಹೊಟ್ಟೆ ತೊಳೆಸಿದಂತಾಗಿ ನಾನು ಕಂಗಾಲಾಗಿದ್ದೆ. ಗಂಡಸರು ಒಂದು ಕೈಯಲ್ಲಿ ತಲೆಯ ಮೇಲಿನ ತಮ್ಮ ಟೋಪಿಯನ್ನೂ, ಮತ್ತೊಂದರಲ್ಲಿ ಕರವಸ್ತ್ರವನ್ನೂ ಹಿಡಿದು, ಬೀಸುವ ಗಾಳಿಯಿಂದ, ಧೂಳಿನ ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಾ ಹತ್ತಿರದ ಮನೆಗಳಿಗೆ ಓಡಿದರು. ಅದಾಗ ಮಳೆ ಸುರಿಯಿತು. ನಮ್ಮ ತಲೆಯ ಮೇಲೆ ಕೈಗೆಟುಕುವಷ್ಟು ಅಂತರದಲ್ಲಿ ಲೋಳೆಯಾಗಿ ಜಾರುತ್ತಾ ರೆಕ್ಕೆ ಬಿಚ್ಚಿ ಹಾರುತ್ತಿದ್ದ ಬೂದುಬಣ್ಣದ ಆಕಾಶ.
ದಿನದ ಉಳಿದ ಹೊತ್ತು, ನಾನು ನನ್ನ ಚಿಕ್ಕಮ್ಮ ಏಳು ತಿಂಗಳು ಪೂರ್ತಿ ಉರಿಬಿಸಿಲಿನ ತೀಕ್ಷ್ಣಕ್ಕೆ ಕಾದು ಕರಟಾದ ಬಿಸಿನೆಲದ ಶಾಖಕ್ಕೆ ಒಣಗಿ ಬಾಯಾರಿದ ಕುಂಡದೊಳಗಿನ ರೋಸಮರಿ, ತಪಸ್ವಿನಿ ಗಿಡಗಳಿಗೆ ಮಳೆ ನೀರುಣಿಸುವುದನ್ನೇ ಖುಷಿಯಿಂದ ನೋಡುತ್ತಾ ಕಟಕಟೆಯ ಹತ್ತಿರ ಕುಳಿತಿದ್ದೆವು. ಮಧ್ಯಾಹ್ನದ ವೇಳೆಗೆ ಭೂಮಿಯ ಸದ್ದಡಗಿ, ಮಣ್ಣಿನ ಹಸಿ ವಾಸನೆ, ಅರಳಿ ಚಿಗುರಿದ ಸಸ್ಯಗಳ ತಾಜಾತನ, ಮಳೆಗೆ ನೆನೆದು ಕಂಕೊಳಿಸುತ್ತಿದ್ದ ರೋಸಮರಿ ಗಿಡಗಳ ತಂಪಾದ ಕಂಪಿನೊಂದಿಗೆ ಬೆರೆತುಕೊಳ್ಳುತ್ತಿತ್ತು. ‘ ಮೇ ತಿಂಗಳಲ್ಲಿ ಮಳೆಯೆಂದರೆ ಶುಭ ಸೂಚನೆ,’ ಊಟದ ಸಮಯದಲ್ಲಿ ಅಪ್ಪ ಅಂದಾಗ, ಹೊಸ ಋತುವಿನ ಪ್ರಭಾವಕ್ಕೆ ತೆಕ್ಕೆ ಹಾಕಿಕೊಂಡಿದ್ದ ಚಿಕ್ಕಮ್ಮ, ಮುಗುಳು ನಗುತ್ತಾ, ‘ ಧರ್ಮೋಪದೇಶದಲ್ಲೂ ಇದನ್ನೇ ನಾನು ಕೇಳಿದ್ದು,’ ಎಂದು ನನ್ನಲ್ಲಿ ಹೇಳಿದರು. ಅಪ್ಪ ಮುಗುಳುನಕ್ಕರಷ್ಟೇ. ನಂತರ ಸಾಕಷ್ಟು ಹಸಿದವರಂತೆ ಸಡಗರದಿಂದ ಊಟ ಮಾಡಿ ಮುಗಿಸಿ, ತಿಂದಿದ್ದನ್ನು ಆರಾಮವಾಗಿ ಜೀರ್ಣಿಸಿಕೊಳ್ಳುವವರಂತೆ ಕಟಕಟೆಗೆ ಒರಗಿ, ನಿದ್ದೆ ಮಾಡದಿದ್ದರೂ ಎಚ್ಚರದಲ್ಲೇ ಕನಸು ಕಾಣುತ್ತಿರುವರೇನೋ ಎನ್ನಿಸುವ ಹಾಗೆ ಕಣ್ಣು ಮುಚ್ಚಿ ಮೌನವಾಗಿ ಕುಳಿತರು.
ಮಧ್ಯಾಹ್ನವೆಲ್ಲಾ ಒಂದೇ ಧಾರೆಯಾಗಿ ಸುರಿಯುತ್ತಲೇ ಇತ್ತು, ಮಳೆ. ಏಕತಾನದಿಂದ, ಶಾಂತವಾಗಿ ಧೋಗುಟ್ಟುತ್ತಾ, ಇಡೀ ಮಧ್ಯಾಹ್ನ ರೈಲಿನಲ್ಲಿ ಪ್ರಯಾಣಿಸುತ್ತಿರುವ ಹಾಗೆ ಕೇಳಿಸುತ್ತಿದ್ದ ಕೆಳಗೆ ಬೀಳುವ ಅದರ ಸದ್ದು, ನಮಗೇ ಗೊತ್ತಿಲ್ಲದ ಹಾಗೆ ಒಳಗೆಲ್ಲೋ ವ್ಯಾಪಿಸಿ, ಕ್ರಮೇಣ ನಮ್ಮನ್ನು ಆಕ್ರಮಿಸಿಕೊಳ್ಳುತಿತ್ತು. ಅಂಗಳದಿಂದ ಬೀಸುವ ಅದರ ತಣ್ಣಗಿನ ಇರಿಚಲ ಸಿಡಿತದಿಂದ ತಪ್ಪಿಸಿಕೊಳ್ಳಲು ಸೋಮವಾರ ನಸುಕಿನಲ್ಲೇ ಬಾಗಿಲು ಮುಚ್ಚುವ ಹೊತ್ತಿಗೆ, ನಮ್ಮನ್ನು ಸಂಪೂರ್ಣ ಆವರಿಸಿಕೊಂಡಿದ್ದು ಈ ಮಳೆ ಮಾತ್ರ. ನಸುಕು ಸರಿದು ಬೆಳಗಾಗುವ ಹೊತ್ತಿಗೆ, ಬರೀ ಮಳೆಯೇ ತುಂಬಿ ಹರಿಯುತ್ತಿತ್ತು. ನಾನೂ ನನ್ನ ಚಿಕ್ಕಮ್ಮ ಮನೆಯ ಹಿಂದಿನ ಹಿತ್ತಲು ಕಾಣಲು ಹೋದೆವು. ಮೇ ತಿಂಗಳ ಸುಡುಬಿಸಿಲಿನ ಬೂದು ಬಣ್ಣದ ಉರಿ ನೆಲ ರಾತ್ರಿ ಬೆಳಗಾಗುವುದರೊಳಗೇ ಯಾವುದೋ ಅಗ್ಗದ ಸೋಪಿನ ಹಾಗೆ ಕಪ್ಪು ಲೋಳೆಯಾಗಿ ಬದಲುಗೊಂಡು ನಿಂತಿತ್ತು. ಹೂವಿನ ಕುಂಡಗಳಿಂದ ಝರಿಯಂತೆ ಕೆಳಗುರುಳುತ್ತಿದ್ದ ನೀರು. ‘ ಗಿಡಗಳಿಗೆ ಬೇಕಾದ್ದಕ್ಕಿಂತಾ ಹೆಚ್ಚು ನೀರು ರಾತ್ರಿಯೇ ಬಿದ್ದಂತಿದೆ.’
ಚಿಕ್ಕಮ್ಮ ಮುಗುಳುನಗುವುದನ್ನು ನಿಲ್ಲಿಸಿ ನುಡಿದಾಗ, ಹಿಂದಿನ ದಿನದ ಅವರ ಸಂತೋಷ ರಾತ್ರಿ ಕಳೆಯುವುದರೊಳಗೇ ಯಾವುದೋ ಚಿಂತೆ, ಅನಿರ್ಧಿಷ್ಟ ಕಳವಳಕ್ಕೆ ತಿರುಗಿದ್ದು ನನ್ನ ಗಮನಕ್ಕೂ ಬಂದಿತು. ‘ ನನಗೂ ಹಾಗೇ ಅನ್ನಿಸುತ್ತಿದೆ. ಯಾರಾದರೂ ಕೆಲಸದವರನ್ನು ಕರೆದು ಮಳೆ ನಿಲ್ಲುವವರೆಗೂ ವೆರಾಂಡದಲ್ಲಿಟ್ಟಿದ್ದರೆ ಆಗುತ್ತಿತ್ತು.’ ಮರಗಳ ಮೇಲೆ ಬೀಳುತ್ತಿದ್ದ ಮಳೆ ಬೃಹದಾಕಾರದ ಮಳೆಯಾಗಿ ಬೆಳೆಯುತ್ತಿರುವಾಗ ಕಡೆಗೆ ಅವರು ಮಾಡಿದ್ದೂ ಅಷ್ಟೇ. ಭಾನುವಾರ ಬೆಳಿಗ್ಗೆ ಕುಳಿತಿದ್ದ ಜಾಗದಲ್ಲೇ ಅಪ್ಪ ಕೂತಿದ್ದರೂ ಮಳೆಯ ಬಗ್ಗೆ ಅವರೇನೂ ಹೇಳಲಿಲ್ಲ. ‘ ಬಹುಷಃ ನಿನ್ನೆ ರಾತ್ರಿ ನಿದ್ದೆ ಸರಿಯಾಗಿ ಮಾಡಿರಲಿಕ್ಕಿಲ್ಲ, ಎದ್ದಾಗ ಬೆನ್ನು ಸೆಟೆದುಕೊಂಡಿತ್ತು.’ ಅಂದದಷ್ಟೇ. ನಂತರ ಕಟಕಟೆಗೆ ಒರಗಿ, ಕುರ್ಚಿಗೆ ಕಾಲು ನೀಡಿ, ಖಾಲಿ ತೋಟದ ಕಡೆ ತಲೆ ಹೊರಳಿಸಿ, ಕುಳಿತೇ ಇದ್ದರು. ಮುಸ್ಸಂಜೆಯ ಹೊತ್ತಿಗೆ ಊಟವೂ ಮಾಡದೇ, ‘ ಇದು ನೋಡಿದರೆ ಮುಗಿಯುವ ಹಾಗೇ ಕಾಣಿಸುವುದಿಲ್ಲ’. ಎಂದು ಸೇರಿಸಿದಷ್ಟೇ. ಫಕ್ಕನೆ ನನಗೆ ಬೇಸಿಗೆಯ ಉರಿ ದಿನಗಳು ನೆನಪಾದವು. ಹೊರಗೆಲ್ಲೋ ಚಲಿಸದ ಘಂಟೆಯ ನಿರಂತರ , ನಿಸ್ತೇಜ ಗುಂಯೀ ಸದ್ದಿಗೇ ಕಿವಿಹಚ್ಚಿ, ಮೈಗೆ ಮುದ್ದೆಯಾಗಿ ಅಂಟಿಕೊಳ್ಳುವ ನಮ್ಮ ಬಟ್ಟೆಯಡಿ – ಜಗ್ಗುತ್ತಿರುವ ಘಂಟೆಯ ಭಾರಕ್ಕೆ ಕುಸಿಯುತ್ತಾ, ಮಲಗುವ ಹವಣಿಕೆಯಲ್ಲಿ ಸೆಣಸಾಡುವ ಆಗಸ್ಟ್ ತಿಂಗಳ ಆ ಸುದೀರ್ಘ, ನೀರಸ ಮಧ್ಯಾಹ್ನಗಳು ನೆನಪಿಗೆ ಬಂದವು.

ಮಳೆಗೆ ತೊಯ್ದ ಗೋಡೆಗಳನ್ನೇ, ನೀರಿಗೆ ಉಬ್ಬಿದಂತೆ ಕಾಣುತ್ತಿದ್ದ ಅದರ ನೆನೆದ ತೊಲೆಗಳನ್ನೇ ನೋಡುತ್ತಿದ್ದೆ. ಎದುರಿನ ಕೈತೋಟ ಮೊದಲ ಬಾರಿಗೆ ಬೋಳಾಗಿ, ಗೋಡೆಯ ಪಕ್ಕದ ಮಲ್ಲಿಗೆ ಬಳ್ಳಿ ಸತ್ತ ನನ್ನಮ್ಮನ ನೆನಪಿಗೆ ನಿಷ್ಠೆಯಾಗಿ ನಿಂತಿತ್ತು. ನನ್ನ ತಂದೆ ತೂಗು ಕುರ್ಚಿಯಲ್ಲಿ ಕುಳಿತು, ತಮ್ಮ ನೋವಿನ ಬೆನ್ನ ಹುರಿಯನ್ನು ದಿಂಬಿನ ಮೇಲೆ ಆನಿಸಿಟ್ಟು, ಅವರ ಅದೇ ವಿಷಾದ ಕಣ್ಣುಗಳು ಮಳೆಯ ನಿಗೂಢದೊಳಗೆಲ್ಲೊ ಮುಳುಗಿ ಹೋದದ್ದೂ – ನನ್ನ ಕಣ್ಣಿಗೆ ಕಾಣಿಸುತ್ತಿತ್ತು. ಆಗ ಆಗಸ್ಟ್ ತಿಂಗಳ ಕತ್ತಲ ನೀರವದಲ್ಲಿ ಯಾವ ಸದ್ದೂ ಮೂಡದ ನಿಶ್ಚಲ ಮೌನದಲ್ಲಿ – ಓಬೀರಾಯನ ಕಾಲದಿಂದಲೂ ತನ್ನ ಕಿಲುಬುಗಟ್ಟಿದ ಅಕ್ಷದ ಸುತ್ತಾ ಸುತ್ತಿ ಬರುತ್ತಿರುವ ಭೂಮಿ ಸಹಸ್ರ ಸದ್ದಾಗಿ ಮೊಳಗಿ ತಟ್ಟುತ್ತಿದ್ದದ್ದು ನೆನಪಾಯಿತು. ಸಟ್ಟನೇ ಯಾವುದೋ ದುಃಖ ನನ್ನನ್ನು ಆವರಿಸಿಕೊಂಡಿತು.
ಭಾನುವಾರದಂತೆ ಸೋಮವಾರವೂ ಇಡೀ ದಿನ ಮಳೆ ಸುರಿಯಿತು. ಆದರೆ ಹೃದಯದೊಳಗೆ ಏನೋ ಬದಲಾಗುತ್ತಾ ಹಿಂಡಿದಂತೆ ಅನ್ನಿಸಿ – ಮಳೆಯೀಗ ಮತ್ತೊಂದೇ ಗತಿಯಲ್ಲಿ ಸುರಿಯುತ್ತಿದ್ದಂತೆ ತೋರುತ್ತಿತ್ತು. ಮುಸ್ಸಂಜೆ ಹೊತ್ತಿಗೆ ನನ್ನ ಕುರ್ಚಿಯ ಪಕ್ಕದ ಒಂದು ಧ್ವನಿ ನುಡಿಯಿತು. ‘ ಥತ್, ಈ ಮಳೆಯೊಂದು ಬರೀ ಬೇಜಾರು!’ ಕುಳಿತಲ್ಲಿಂದ ತಿರುಗದೇ ಮಾರ್ಟಿನ್ ಆ ಧ್ವನಿಯನ್ನು ಗುರುತಿಸಿದೆ. ಒಂದು ಡಿಸೆಂಬರ್ ತಿಂಗಳ ಮ್ಲಾನ ಬೆಳಿಗ್ಗೆ ನನ್ನ ಗಂಡನಾಗಿ ಬಂದ ನಂತರವೂ ಬದಲಾಗಿರದ ಎಂದಿನ ಅದೇ ನೀರಸ, ನಿರುತ್ಸಾಹದ ನಿರ್ಲಿಪ್ತ ಭಾವ ಹೊರಗೆಡವಿ, ನನ್ನ ಪಕ್ಕದ ಕುರ್ಚಿಯಲ್ಲೇ ಕುಳಿತು ಮಾತನಾಡುತ್ತಿದ್ದರೆಂದೂ ಗೊತ್ತಿತ್ತು. ಆಗಲೇ ಮದುವೆಯಾಗಿ ಐದು ತಿಂಗಳೂ ಕಳೆದು, ಹೊಟ್ಟೆಯಲ್ಲೀಗ ಮಗುವಿಟ್ಟುಕೊಂಡವಳು, ನಾನು. ಇವರೋ ನನ್ನ ಪಕ್ಕ ಕುಳಿತು ಮಳೆ – ಬೇಜಾರು ಅನ್ನುತ್ತಿದ್ದಾರೆ. ‘ ಬೇಜಾರೇ’ ಕೇಳಿದೆ, ನಾನು. ‘ ಈ ಬೋಳು ತೋಟ, ಮುಂದೆ ಬರಲಾರದೇ ನೆನೆಯುತ್ತಿರುವ ಆ ಪಾಪದ ಮರಗಳು, ಎಲ್ಲಾ ಯಾವುದೋ ಗೋಳಿನಂತೆ ಅನ್ನಿಸುತ್ತಿದೆ, ನನಗೆ..’ ನಂತರ ತಿರುಗಿ ಇವರನ್ನು ಅರಸಿದಾಗ ಅಲ್ಲಿ ಯಾರೂ ಇರಲಿಲ್ಲ. ಒಂದು ಧ್ವನಿ ಮಾತ್ರ ‘ ಇದು ಎಂದಿಗೂ ನಿಲ್ಲುವ ಹಾಗೇ ಕಾಣಿಸುವುದಿಲ್ಲ.’ ಎಂದು ನಂಗೆ ಹೇಳುತ್ತಿದ್ದಂತೆ ಅನ್ನಿಸಿತು. ಮತ್ತೆ ಧ್ವನಿ ಬಂದತ್ತ ತಿರುಗಿದಾಗ ಕಂಡದ್ದು ಖಾಲಿ ಕುರ್ಚಿ.
ಮಂಗಳವಾರ ಬೆಳಿಗ್ಗೆ ಹಿತ್ತಲಲ್ಲಿ ಒಂದು ದನವಿರುವುದು ಕಾಣಿಸಿತು. ಅದರ ಗೊರಸು ಮಣ್ಣಿನಲ್ಲಿ ಹೂತು, ತಲೆ ತಗ್ಗಿಸಿ ತನ್ನ ಪ್ರಕೃತಿಗೆ ವಿರುದ್ಧವಾಗಿ ಅಲುಗಾಡದೇ ಅಚಲವಾಗಿ ನಿಂತಿದ್ದ ಅದು ಮಣ್ಣಿನಿಂದ ನಿರ್ಮಿಸಿದ ಗೊಂಬೆಯಂತೆ ಎದ್ದು ಕಾಣುತ್ತಿತ್ತು. ಬೆಳಿಗ್ಗೆಯೆಲ್ಲಾ ಕೆಲಸದವರು, ಕೋಲಿನಿಂದ, ಕಲ್ಲಿನಿಂದ ಅದನ್ನು ಹೊರಗಟ್ಟಲು ಪ್ರಯತ್ನಿಸುತ್ತಿದ್ದರು. ಆದರೂ ಅದು ಕದಲದೇ, ಯಾವ ಸೊಡ್ಡಿಗೂ ಬಗ್ಗದೇ ಪಟ್ಟು ಹಿಡಿದು ಗೊರಸನ್ನು ಹಾಗೇ ಕೆಸರಿನಲ್ಲಿ ಇಳಿಬಿಟ್ಟು, ತನ್ನ ಭಾರೀ ತಲೆಯನ್ನು ಮಳೆಗೆ ನೆನೆಸಿಕೊಳ್ಳುತ್ತಾ ತೋಟದಲ್ಲಿ ನಿಂತೇಯಿತ್ತು. ಕಡೆಗೆ ನನ್ನ ತಂದೆಯ ಸಹನೆಯೂ ಮೀರಿ ಅದರ ರಕ್ಷಣೆಗೆ ಬರುವಷ್ಟು ಕೆಲಸದವರ ಕಿರುಕುಳ ಸಾಗಿತು. ‘ ಅದನ್ನು ಬಿಟ್ಟುಬಿಡಿ,’ ಅವರು ಕೇಳಿಕೊಂಡರು, ‘ ಬಂದಂತೇ ಅದು ಹೊರಟುಹೋಗುತ್ತದೆ.’
ಅಂದು – ಹೊತ್ತು ಕಂತುವ ಹೊತ್ತಿಗೆ, ನೀರು ಹೃದಯದ ಒಳಗೆಲ್ಲೋ ಎಳೆದ ಬರೆಯಂತೆ ಒತ್ತಿ, ಸೀಳುತ್ತಾ ಒಳಗಿಳಿಯುತ್ತಿತ್ತು. ಮೊದಲ ದಿನದ ತಂಪು ಯಾವುದೋ ಬಿಸಿಗೆ ಕರಗಿ ಅಂಟಿಕೊಳ್ಳುತ್ತಾ ಆರ್ದಗೊಳ್ಳುತ್ತಿದ್ದಂತೆ, ಹವಾಮಾನ ಬಿಸಿಯೂ ಅಲ್ಲದ, ತಂಪೂ ಆಗಿರದ ಎಲ್ಲೋ ಚಳಿ ಜ್ವರಕ್ಕೆ ಬಿದ್ದ ಹಾಗೆ. ಬೂಟಿನ ಒಳಗೆ ಕಾಲುಗಳು ಒದ್ದೆಯಾಗುತ್ತಿದ್ದವು. ಕಿರಿಕಿರಿಗೆ ಕಾರಣವಾಗುತ್ತಿದ್ದದ್ದು ಬರೀ ಕಾಲೋ ಅಥವಾ ಮೈ ಮೇಲಿನ ಬಟ್ಟೆ ಸಂಪರ್ಕವೋ – ಹೇಳುವುದು ಕಷ್ಟವಾಗುತ್ತಿತ್ತು. ಮನೆಯ ಎಲ್ಲಾ ಕೆಲಸಗಳೂ ಸ್ತಬ್ದಗೊಂಡಿದ್ದವು. ನಾವು ವೆರಾಂಡದಲ್ಲಿ ಕುಳಿತ್ತಿದ್ದರೂ ಮೊದಲ ದಿನದಂತೆ ಮಳೆಗೇ ಕಣ್ಣು ನೆಟ್ಟಿರಲಿಲ್ಲ. ಮಳೆ ಸುರಿಯುತ್ತಿದ್ದಂತೆಯೂ ಅನ್ನಿಸುತ್ತಿರಲಿಲ್ಲ. ಮುಸ್ಸಂಜೆಯ ಮಂಕು ಕವಿದ ವಿಷಣ್ಣ ಹೊತ್ತಿನಲ್ಲಿ, ನಮ್ಮ ಕಣ್ಣಿಗೆ ಬೇರೆ ಏನೂ ಗೋಚರಿಸದೇ ಯಾವನೋ ಅಪರಿಚಿತ ಆಗುಂತುಕನೊಬ್ಬ ಕನಸಿನಲ್ಲಿ ಮೂಡಿ, ಬೆಚ್ಚಿ ಬೀಳಿಸಿ, ಎಬ್ಬಿಸಿದ ನಂತರ ತುಟಿಯಲ್ಲಿ ಉಳಿಸಿ ಹೋಗುವ ಯಾವುದೋ ಹುಳಿ ವಾಸನೆಯಂತೆ ಅರೆಕೊರೆಯಾಗಿ, ಅಸ್ಪಷ್ಟವಾಗುತ್ತಾ ಕಾಣಿಸುತ್ತಿದ್ದದ್ದು ಮುಸುಕಿನ ಮರೆಯಲೆಲ್ಲೋ ಉಳಿದ ಮರಗಳ ರೂಪುರೇಷೆಗಳಷ್ಟೇ. ಅಂದು ಮಂಗಳವಾರ ಎಂದು ಸ್ಪಷ್ಟವಾಗಿ ಹೊಳೆಯುತ್ತಿದ್ದಂತೇ ಪ್ರತಿವಾರವೂ ಮನೆಗೆ ಬಂದು, ತಮ್ಮ ನೋವಿನ ಭಾರ ಧ್ವನಿಯಲ್ಲಿ ಸಾಧಾರಣ ಹಾಡುಗಳನ್ನು ಹಾಡುವಾಗಲೂ ತಪ್ಪಿಸಿಕೊಳ್ಳಲು ಅಸಾಧ್ಯವಾದ ತಮ್ಮ ಅಸಾಧಾರಣ ಪ್ರತಿಭೆಯನ್ನು ಸ್ವರದಲ್ಲಿ ಮೂಡಿಸುತ್ತಿದ್ದ ಸ್ವೇಂಟ್ ಜೆರೋಮ್ ಅವಳಿ – ಜವಳಿ ಕುರುಡಿಯರ ನೆನಪಾಯಿತು. ಮಳೆಯ ಆಚೆಯೂ ಆ ಕುರುಡಿಯರ ಚುಟುಕು ಹಾಡುಗಳು ಕಿವಿಗೆ ತಟ್ಟಿದಂತೆ ಅನ್ನಿಸಿ, ಇದೀಗ ಮನೆಯಲ್ಲಿ ಮುದುರಿ ಕುಳಿತ ಅವರು ನಿಲ್ಲುವ ಮಳೆಗಾಗಿಯೇ ಎದುರು ನೋಡುತ್ತಾ ಕಡೆಗಾದರೂ ಹೊರಬಂದು ಹಾಡಲಿಕ್ಕಾಗಿಯೇ ಕಾಯುತ್ತಿರುವಂತೆ ಭಾಸವಾಯಿತು. ಇಂದು ಸ್ವೇಂಟ್ ಜೆರೋಮ್ ಅವಳಿಗಳು ಬರುವುದಿಲ್ಲವೆಂದು ಕ್ಷಣ ಅನ್ನಿಸುತ್ತಿದ್ದಂತೇ ಅನ್ನಿಸಿದ್ದು ಪ್ರಾಯಶಃ ಮಧ್ಯಾಹ್ನದ ನಿದ್ದೆಯ ನಂತರ, ಪ್ರತಿ ಮಂಗಳವಾರ ಜೌಷದಿಗಾಗಿ ನಿಂಬೆಕುಡಿಯ ಒಂದಿಡೀ ರೆಂಬೆಯನ್ನು ಕೇಳಿಕೊಂಡು ವೆರಾಂಡಕ್ಕೆ ಬರುತ್ತಿದ್ದ ಆ ಬಿಕ್ಷುಕಿ ಕೂಡ.
ಅಂದು ನಾವು ನಮ್ಮ ಊಟದ ಪರಿವೆಯನ್ನು ಕಳೆದುಕೊಂಡೆವು. ಮಧ್ಯಾಹ್ನದ ನಿದ್ದೆಯ ಹೊತ್ತಿಗೆ, ನನ್ನ ಚಿಕ್ಕಮ್ಮ ರುಚಿಯಿಲ್ಲದ ಸೂಪ್, ತಣ್ಣಗಿನ ಬ್ರೆಡ್ ಬಡಿಸಿದಳು. ವಾಸ್ತವವಾಗಿ ಸೋಮವಾರದ ಸಂಜೆಯಿಂದಲೂ ನಾವೇನೂ ತಿಂದಿರಲಿಲ್ಲ. ಅಲ್ಲದೇ ಪ್ರಾಯಶಃ ನಮ್ಮ ಯೋಚನಾ ಶಕ್ತಿ ಕುಂದುತ್ತಾ ಬಂದಿದ್ದೂ ಆಗಿನಿಂದಲೇ. ಮಳೆಯ ಮೋಡಿಗೆ ಸಿಲುಕಿ, ಕಳೆದು ಹೋದ ನಮ್ಮ ಸಂವೇದನಾ ಶಕ್ತಿಯಡಿ ಅಸ್ವಸ್ತರಾಗುತ್ತಾ ನಾಲಿಗೆ ಚಾಚಿ ಕಬಳಿಸುತ್ತಿರುವ ಪ್ರಕೃತಿ ಎದುರ ನಿರ್ಲಿಪ್ತರಾಗಿ ನಮ್ಮನ್ನು ನಾವೇ ಅರ್ಪಿಸಿಕೊಳ್ಳುತ್ತಿದ್ದವು. ಮಧ್ಯಾಹ್ನದ ವೇಳೆ ಸ್ವಲ್ಪ ಅಲುಗಾಡಿದ್ದು ದನ ಮಾತ್ರ. ಅಷ್ಟರಲ್ಲೇ ಯಾವುದೋ ಸದ್ದು ಅದರ ಇಡೀ ಮೈಯನ್ನು ಅಲುಗಿಸಿ, ತನ್ನ ಗೊರಸನ್ನು ಕೆಸರಿನಲ್ಲಿ ಬಲವಾಗಿ ಊರುವಂತೆ ಮಾಡಿತು. ನಂತರ ಅರ್ಧ ಘಂಟೆಯವರೆಗೂ ಅದು ಅಲುಗಾಡದೆ ಹಾಗೇ ನಿಂತಿತ್ತು – ನಿಂತಿದ್ದು ನಿಂತ ಹಾಗೇ ಸತ್ತಂತೆ; ಆದರೆ ಇಷ್ಟು ವರುಷ ಬದುಕಿದ್ದರ ಸಾಕ್ಷಿಯಾಗಿ ಇನ್ನೂ ಬೀಳದೇ ಉಳಿದಂತೆ; ಮಿಸುಕಾಡದೇ ಮಳೆಯಲ್ಲಿ ನೆನೆಯುತ್ತಾ ವರುಷದಿಂದಲೂ ಝೂಡಿ ಮಾಡಿಕೊಂಡಿದ್ದಂತೆ; ದೇಹದ ಶಕ್ತಿಯ ಎದುರು ತನ್ನೀ ಝುಡಿಸಿಕೊಂಡಿದ್ದು ಕುಂದುವವರೆಗೂ ನಿಂತೇ ತೀರುವಂತೆ….ಅನಂತರ ಮುಂದಿನ ಎರಡೂ ಕಾಲುಗಳನ್ನು ಬಗ್ಗಿಸಿ, ತನ್ನ ಮಂಚಾಚಿದ ಮೂತಿಯನ್ನು ಕೆಸರಿನೊಳಗೆ ಇಳಿಸುತ್ತಾ, ಕೊನೆಗೆ ತನ್ನಿಂದಲೇ ಕದಡಿಹೋದ ಸುತ್ತಲ ಮೌನದ ಭಾರಕ್ಕೆ ಕ್ರಮೇಣ ತಾನೂ ಮುಳುಗುತ್ತಾ ಸುರಿಯುತ್ತಿದ್ದ ನಿರಂತರ ಮಳೆಯ ಕಾರ್ಯವನ್ನು ಸರಾಗವಾಗುವಂತೆ ಮಾಡಿತು. ‘ ಇದು ಇಲ್ಲಿಗೆ ಬಂತಾ ?’ ನನ್ನ ಹಿಂದೆ ಯಾರೋ ಅಂದರು. ಯಾರು ಎಂದು ತಿರುಗಿದಾಗ, ಹೊಸ್ತಿಲಲ್ಲಿ ಮಂಗಳವಾರದ ಬಿಕ್ಷುಕಿ. ಜೌಷದಿಗಾಗಿ ನಿಂಬೆಕುಡಿಯನ್ನು ತೆಗೆದುಕೊಂಡು ಹೋಗಲು ಕೇಳಿಕೊಂಡು ಮಳೆಯಲ್ಲೇ ಬಂದಿದ್ದು ಕಾಣಿಸಿತು.
ಬುಧುವಾರ ನಡುಮನೆಗೆ ಹೋಗುತ್ತಿದ್ದಾಗ ಗೋಡೆಗೆ ದೂಡಿಟ್ಟ ಮೇಜು, ಅದರ ಮೇಲೆ ಪೇರಿಸಿಟ್ಟ ಸಾಮಾನು, ಮತ್ತೊಂದು ಬದಿಯಲ್ಲಿ ರಾತ್ರಿ ಕಳೆಯುವುದರೊಳಗೇ ಎದ್ದು ನಿಂತ ಕೈಸಾಲೆಯ ಮೇಲಿನ ಮನೆಯ ಪಾತ್ರೆ ಪರಡಿ ತುಂಬಿದ್ದ ಡಬ್ಬಗಳು, ಟ್ರಂಕ್ ಗಳು ಕಣ್ಣಿಗೆ ಬೀಳದೇ ಇದ್ದಿದ್ದರೆ, ಅತಿಕ್ರಮಿಸುತ್ತಾ ಬಂದಿದ್ದ ಸದ್ಯದ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಪ್ರಾಯಶಃ ನನಗೂ ಸಾಧ್ಯವಾಗುತ್ತಿತ್ತೋ ಏನೋ ! ಎದುರಿನ ದೃಶ್ಯ ಎಂತದೋ ಖಾಲಿ ಖಾಲಿಯಾದಂತಹ ಅನುಭವವೊಂದನ್ನು ಮನಸ್ಸಿನಲ್ಲಿ ಮೂಡಿಸುತ್ತಿತ್ತು. ರಾತ್ರಿಯೇ ಏನೋ ನಡೆದು ಹೋಗಿರಬೇಕು. ಅಸ್ತವ್ಯಸ್ತಗೊಂಡ ಮನೆ. ಕೆಲಸದವರು ಅಂಗಿ ಕಳಚಿ, ಹಾಕಿಕೊಂಡ ಪ್ಯಾಂಟ್ಯನ್ನು ಮೊಳಕಾಲಿನವರೆಗೆ ಮಡಿಚಿ, ಬರಿಗಾಲಿನಲ್ಲಿ ಸಾಮಾನುಗಳನ್ನು ಊಟದ ಕೋಣೆಗೆ ಸಾಗಿಸುತ್ತಿದ್ದರು. ಅವರ ಮುಖಭಾವದಲ್ಲಿ ವಿಧೇಯರಾಗಿ ಮಾಡುತ್ತಿದ್ದ ಅವರ ಕೆಲಸಗಳಲ್ಲಿ, ನುಂಗಿಕೊಂಡ ತಮ್ಮ ಅಪಮಾನದ ನಿಷ್ಠುರವನ್ನು, ಹೀನಸ್ಥಿತಿ ಅವರಲ್ಲಿ ಮೂಡಿಸಿದ್ದ ಅನಿವಾರ್ಯ ದೈನತೆಯನ್ನು ಮಳೆಯಲ್ಲಿ ಯಾರು ಬೇಕಾದರೂ ಕಾಣಲು ಸಾಧ್ಯವಿತ್ತು. ಮನಸ್ಸಿಗೆ ಒಂದೂ ಹೊಳೆಯದೇ ದಿಕ್ಕೇ ತೋಚದಂತಾಗಿತ್ತು. ಅದಾಗ ಫಕ್ಕನೇ ಮನಸ್ಸಿನೊಳಗೆ ಆಕಾರ ಪಡೆದಿದ್ದು – ಎಲ್ಲೋ ಹಾಳು ಬಿದ್ದ ತಣ್ಣಗಿನ ಜೌಗು ನೆಲವೊಂದು ಎಂದೂ ಚಿಗುರಲು ಅಸಾಧ್ಯವಾದ ಕೊಳೆತ, ನಿಸ್ತೇಜ ಗಿಡಗಳಿಂದ ಫಲವತ್ತುಗೊಳ್ಳುತ್ತಾ ಸ್ವಲ್ಪ ಕಾಲ ಮಾತ್ರ ಬದುಕಿರಬಹುದಾದ ಕೈಗೆ ಹಸಿಹಸಿಯಾಗಿ ಅಂಟಿಕೊಳ್ಳುವ ಲೋಳೆಯಂತಹ ಪಾಚಿಯನ್ನೋ, ನಾಯಿಕೊಡೆಯನ್ನೋ ಹುಟ್ಟಿಸಿ, ಬದಲುಗೊಳ್ಳುತ್ತಿರುವಂತೆ….ಸಾಮಾನು ಸರಂಜಾಮಿನಿಂದ ತುಂಬಿಹೋದ ಎದುರಿನ ವಿಲಕ್ಷಣ ದೃಶ್ಯಕ್ಕೆ ಹೊಂದಿಕೊಳ್ಳಲಾಗದೇ ನಾನಿನ್ನೂ ನಡುಮನೆಯಲ್ಲಿ ನಿಂತೇಯಿದ್ದಾಗ, ನಂಗೆ ನ್ಯುಮೋನಿಯಾ ಬರಬಹುದೆಂದು ಚಿಕ್ಕಮ್ಮ ತಮ್ಮ ಕೋಣೆಯಿಂದಲೇ ಎಚ್ಚರಿಸುತ್ತಿದ್ದ ಧ್ವನಿ ಕೇಳಿಸಿತು. ಆಗಲೇ ನನ್ನ ಮನಸ್ಸಿಗೆ ಹೊಕ್ಕಿದ್ದು – ನೀರಾಗಲೇ ನನ್ನ ಹಿಮ್ಮಡಿಯವರೆಗೂ ಬಂದಿದ್ದು, ನೀರಿನಿಂದಲೇ ಆವೃತಗೊಂಡ ಮನೆಯೊಳಗೆ ನೆಲವೆಲ್ಲಾ ಹಾಸಿಟ್ಟ ಕೊಚ್ಚೆಯಾಗಿ, ನೀರೂ ಜಡಗಟ್ಟಿ ಹೋಗಿತ್ತು ಎಂದು.
ಬುಧುವಾರ ನಡು ಹಗಲಿನವರೆಗೂ ಬೆಳಗಿನ ಮಬ್ಬು ಸರಿದಿರಲಿಲ್ಲ. ಮಧ್ಯಾಹ್ನ ಮೂರು ಘಂಟೆಯ ಒಳಗೇ, ಹೊತ್ತಿಗೆ ಮುಂಚಿತವಾಗಿ ಬೆಳಕು ಕ್ಷೀಣಿಸಿ, ಎಂದಿನ ಅದೇ ಮಂದ ಗೋಳಿನ ಏಕತಾನದ ಭೋರ್ಗೆರತದೊಂದಿಗೆ ಮಳೆ ಅಂಗಳಕ್ಕೆ ಇಳಿಯುತ್ತಿರುವಾಗಲೇ ಸಂಪೂರ್ಣ ಕವಚಿಗೊಂಡ ಕತ್ತಲು ಅನಿರೀಕ್ಷಿತವಾಗಿ ಎರಗಿ ಬಂದು ಕವಿದ ಮಂಕಿನಲ್ಲಿ ಪಿಸುಗುಟ್ಟುತ್ತಾ, ಕ್ಷೊಭೆಗೊಂಡ ಪ್ರಕೃತಿಯ ಎದುರು ಎದುರಿಸುವ ಶಕ್ತಿಯೇ ಕುಂದಿ, ನಿಷ್ಪಲರಾಗಿ ಗೋಡೆಯ ಪಕ್ಕದ ಕುರ್ಚಿಯಲ್ಲಿ ಮುದುರುತ್ತಾ ಕುಳಿತಿದ್ದ ಕೆಲಸದವರ ಮೌನದ ನಡುವೆ ಬೆಳೆಯುತ್ತಾ ಹೋಗುತ್ತಿತ್ತು. ಅದಾಗಲೇ ಹೊರಗಿನಿಂದ ಸುದ್ದಿಗಳು ಬರಲು ಶುರುವಾದ್ದು: ಯಾರೂ ಅದನ್ನು ಮನೆಗೆ ತರುತ್ತಿರಲಿಲ್ಲ, ಅದು ತನ್ನಷ್ಟಕ್ಕೆ ತಾನೇ ಯಾವುದೋ ಅತ್ಯಮೂಲ್ಯ ಅತೀ ವಿಶಿಷ್ಟವೆನ್ನುವ ಹಾಗೆ, ಬೀದಿಯ ಕದಡಿಹೋದ ಮಣ್ಣು ನೀರಿನ ಮೂಲಕ ಆಚೆ ಬಂದ ಮನೆಯ ಅದೆಷ್ಟೋ ವಸ್ತುಗಳ ಜೊತೆಗೇ – ಬೇಕಾದ್ದು, ಬೇಡಾದ್ದು, ಸತ್ತವರು, ಪ್ರಕೃತಿಯ ವಿಕೋಪದಲ್ಲಿ ಹಳಸಿ ಉಳಿದಿದ್ದನ್ನೆಲ್ಲಾ ಹೊರ ಎಳೆದು ತರುತ್ತಿತ್ತು. ಭಾನುವಾರ ಮಳೆಯಿನ್ನೂ ಮುಂದೆ ಸಂಭವಿಸಲಿರುವ ಋತುವಿನ ಸಾರುವಿಕೆಯಲ್ಲಿದ್ದಾಗಲೇ ಘಟಿಸಿದಂತಹ ಘಟನೆಗಳೂ ಕೂಡ ನಮ್ಮ ಮನೆಗೆ ಗೊತ್ತಾಗಲಿಕ್ಕೆ ಎರಡು ದಿನವಾದರೂ ಹಿಡಿಯುತ್ತಿತ್ತು. ಆದ್ದರಿಂದ ಬುಧುವಾರದ ದಿನ ಸುರಿಯುತ್ತಿರುವ ಬಿರುಮಳೆಯ ತೀವ್ರ ಅಂತರಂಗದ ಪ್ರೇರಣ ಶಕ್ತಿಯೊಂದು ಬಲವಂತದಿಂದ ದಬ್ಬಿದ ಹಾಗೆ ಸುದ್ದಿಗಳು ಬರತೊಡಗಿದವು. ಅದಾಗ ಗೊತ್ತಾಗಿದ್ದು – ಚರ್ಚ್ ಪ್ರವಾಸದೊಳಗೆ ಮುಳುಗಿ, ಬೀಳುವ ನಿರೀಕ್ಷೆಯಲ್ಲಿದೆಯೆಂದು, ಮತ್ಯಾರೋ ಯಾವ ಉದ್ದೇಶವೂ ಇರದೇ ಆ ರಾತ್ರಿ ತಿಳಿಸಿದರು: ‘ ಸೋಮವಾರದಿಂದಲೂ ರೈಲು ಸೇತುವೆಯನ್ನು ದಾಟಲೇ ಆಗುತ್ತಿಲ್ಲ. ಅದರ ಕಂಬಿಗಳನ್ನು ಹೊಳೆ ನೀರು ಕೊಚ್ಚಿಕೊಂಡು ಹೋದ ಹಾಗೆ ಕಾಣಿಸುತ್ತಿದೆ.’ ಮತ್ತೊಂದು ಸುದ್ದಿಯ ಪ್ರಕಾರ ಹಾಸಿಗೆಯಲ್ಲಿ ಮಲಗಿದ್ದ ರೋಗಿಯೊಬ್ಬಳು ಕಾಣೆಯಾಗಿ, ಅದೇ ಮಧ್ಯಾಹ್ನ ಅಂಗಳದಲ್ಲಿ ತೇಲುತ್ತಿದ್ದದ್ದು ಕಾಣಿಸಿತ್ತು….
ದಿಗಿಲು ಬಿದ್ದು ಅತೀವ ಹೆದರಿಕೆಯಿಂದ ವಿಪ್ಲವಗೊಂಡ ಮನಃಸ್ಥಿತಿಯಲ್ಲಿ ತೂಗುಕುರ್ಚಿಯಲ್ಲಿ ನನ್ನ ಕಾಲುಗಳನ್ನು ಮಡಿಚಿ, ಬಹುದೂರದವರೆಗೂ ಅಸ್ಪಷ್ಟವಾಗಿ ಕಾಣುತ್ತಿದ್ದ ಎದುರಿನ ಮ್ಲಾನ ಕತ್ತಲಿಗೇ ಕಣ್ಣು ನೆಟ್ಟು ಕುಳಿತ್ತಿದ್ದೆ ನಾನು. ತಲೆಮೇಲೆತ್ತಿ ಕಂದೀಲನ್ನು ಎತ್ತಿ ಹಿಡಿದಿದ್ದ ನನ್ನ ಚಿಕ್ಕಮ್ಮ ಬಾಗಿಲಲ್ಲಿ ಕಾಣಿಸಿಕೊಂಡರು. ನಮ್ಮ ಮನೆತನದ ಪ್ರೇತದಂತೆ ಕಾಣಿಸುತ್ತಿದ್ದ ಅವರನ್ನು ಕಂಡು, ನಂಗೆ ಯಾವ ರೀತಿಯ ಹೆದರಿಕೆಯೂ ಆಗಲಿಲ್ಲ; ಏಕೆಂದರೆ ಅವರಂತೆ ಎಲ್ಲಾ ಅಲೌಕಿಕ ಸ್ಥಿತಿಯನ್ನೂ ಕಂಡವಳು, ನಾನು. ನಾನು ಇದ್ದಲ್ಲಿಗೇ ಅವರೂ ಬಂದರು – ತಲೆಯಿನ್ನೂ ಮೇಲೇ ಎತ್ತಿಕೊಂಡು ಕಂದೀಲನ್ನು ಗಾಳಿಗೆ ಹಿಡಿದು, ವೆರಾಂಡದ ನೀರನ್ನು ಸಪ್ಪಳ ಮಾಡುತ್ತಾ, ‘ ನಾವಿನ್ನು ದೇವರ ಪ್ರಾರ್ಥನೆ ಮಾಡಬೇಕು !’ ಅನ್ನುತ್ತಾ…. ಅವರ ಒಣಗಿದ ಸುಕ್ಕುಗಟ್ಟದ ಮುಖ ಗಮನಿಸುತ್ತಲೇ, ಇದೀಗಷ್ಟೇ ಗೋರಿಯಿಂದ ಎದ್ದು ಬಂದವರಂತೆ ಅಥವಾ ಮನುಷ್ಯರಿಗೆ ಅಸಂಬದ್ಧವಾದ ಯಾವುದೋ ವಸ್ತುವಿನಿಂದ ಅವರನ್ನು ತಯಾರಿಸಲ್ಪಟ್ಟವರಂತೆ ಕಾಣಿಸುತ್ತಿದ್ದರು. ಕೈಯಲ್ಲಿ ಜಪಸರ ಹಿಡಿದು, ನನ್ನನ್ನು ದಾಟಿ ಹೋದ ಅವರು ಹೇಳುತ್ತಿದ್ದರು – ‘ ನಾವೀಗ ಪ್ರಾರ್ಥಿಸಲೇಬೇಕು. ನೀರು ಗೋರಿಯೊಳಗೆ ಇಳಿದು ಸತ್ತ ನಿರ್ಗತಿಕರೆಲ್ಲಾ ಸ್ಮಶಾನದೊಳಗೆ ತೇಲುತ್ತಿದ್ದಾರೆ….!’
ಆ ರಾತ್ರಿ ಎಲ್ಲೋ ಸ್ವಲ್ಪ ನಿದ್ದೆ ಮಾಡಿರಬೇಕು, ನಾನು. ಅಷ್ಟು ಹೊತ್ತಿಗೆ ಮೂಗೊಳಗೆ ಇರಿಯುವಂತಹ ಕೊಳೆತ ದೇಹದ ಹುಳಿ ವಾಸನೆಯೊಂದು ಸಟ್ಟನೆ ತಟ್ಟಿ ನನ್ನನ್ನು ಎಬ್ಬಿಸಿಬಿಟ್ಟಿತು. ನನ್ನ ಪಕ್ಕ ಮಲಗಿ ಗೊರಕೆ ಹೊಡೆಯುತ್ತಿದ್ದ ಮಾರ್ಟಿ ರ್ನ್ ನ್ನು ಬಲವಾಗಿ ಅಲುಗಾಡಿಸಿ, ‘ ನಿಮಗೂ ಬರುತ್ತಿದೆಯೇ?’ ಎಂದು ನಾನು ಕೇಳಿದೆ. ‘ ಏನು?’ ಅವರು ಕೇಳಿದರು. ‘ವಾಸನೆ! ಬಹುಷಃ ಸತ್ತ ಜನರು ಬೀದಿಗಳಲ್ಲಿ ತೇಲುತ್ತಿರುವುದಿರಬೇಕು !’ ಆ ಯೋಚನೆಯೇ ನನ್ನನ್ನು ಕಂಗೆಡಿಸಿತ್ತು. ಆದರೆ ಮಾರ್ಟಿನ್ ನ್ರು ಗೋಡೆ ಕಡೆ ಹೊರಳುತ್ತಾ, ನಿದ್ದೆಯಿಂದ ಭಾರವಾದ ಗೊಗ್ಗರುಧ್ವನಿಯಲ್ಲಿ ಅಂದರು: ‘ ಅದು ನಿನ್ನ ಭ್ರಮೆಯಷ್ಟೇ. ಈ ಗರ್ಭಿಣಿ ಹೆಂಗಸರು ಯಾವಾಗಲೂ ಏನಾದರೂ ಕಲ್ಪಿಸಿಕೊಳ್ಳುತ್ತಲೇ ಇರುತ್ತಾರೆ..’
ಗುರುವಾರ ಬೆಳಿಗ್ಗೆ ವಾಸನೆ ನಿಂತಿತು; ಹಾಗೇ ವಿವೇಚನಾಶಕ್ತಿಯೂ. ಕಾಲದ ಪರಿಜ್ಞಾನ ಹಿಂದಿನ ದಿನದಿಂದ ತೊಡಕಾಗುತ್ತಿದ್ದದ್ದು ಸಂಪೂರ್ಣ ಮರೆ ಮಾಚಿ ನಿಂತಿತು. ಅಲ್ಲಿ ಗುರುವಾರವೇ ಇರಲಿಲ್ಲ. ಯಾವುದನ್ನು ಗುರುವಾರವೆನ್ನುತ್ತೇವೆಯೋ ಅದೊಂದು ಕಣ್ಣಿಗೆ ಗೋಚರಿಸುವ ಜಾರುವ ವಸ್ತುವಾಗಿ ಕೈಯಲ್ಲಿ ಹಿಡಿದು ಎರಡು ಹೋಳು ಮಾಡಿದರೆ – ಶುಕ್ರವಾರವನ್ನು ಹಣಕಿ ಕಾಣಲು ಸಾಧ್ಯವೆನ್ನಿಸುತ್ತಿತ್ತು. ಅಲ್ಲಿ ಗಂಡಸರಾಗಲೀ ಹೆಂಗಸರಾಗಲೀ ಯಾರೂ ಇರಲಿಲ್ಲ. ನನ್ನ ಚಿಕ್ಕಮ್ಮ, ನನ್ನ ತಂದೆ, ಮನೆಯ ಕೆಲಸದವರು – ಎಲ್ಲರೂ ಬೃಹದಾಕಾರದಲ್ಲಿ ಬೆಳೆಯುತ್ತಿದ್ದು, ತಮ್ಮದಲ್ಲದ ಮೈಹೊತ್ತು, ನೀರಿನಿಂದ ಆವೃತಗೊಂಡ ಜೌಗಿನ ಶೀತಲದಲ್ಲಿ ನಡೆದಾಡುತ್ತಿರುವಂತೆ….ನನ್ನ ತಂದೆ ಹೇಳಿದರು ಆಗ – ‘ಇಲ್ಲಿಂದ ಕದಲಬೇಡ ! ಏನು ಮಾಡಬೇಕೆಂದು ನಿನಗೆ ಹೇಳುವವರೆಗೂ…’ ಎಲ್ಲೋ ದೂರದಿಂದ ಬಳಕುತ್ತಾ ಬಂದ ಅವರ ಧ್ವನಿ ಕಿವಿ ಗ್ರಹಿಸಿದಂತೆ ಅನ್ನಿಸದೇ ಇದ್ದರೂ ತಟ್ಟಿದಂತಾಗಲು ಪ್ರಾಯಶಃ ಇನ್ನೂ ಚುರುಕಾಗಿ ಉಳಿದಿದ್ದು ಅದೊಂದೇ ಸಂವೇದನಾಶಕ್ತಿಯಿರಬೇಕು.
ಆದರೆ ನನ್ನ ತಂದೆ ನಾನಿದ್ದಲ್ಲಿಗೆ ಬರಲೇಯಿಲ್ಲ; ಮಳೆಯೊಳಗೆಲ್ಲೋ ಮುಳುಗಿಹೋಗಿದ್ದರು. ರಾತ್ರಿಯಾಗುತ್ತಿದ್ದಂತೇ ಮಲಗುವ ಕೋಣೆಗೆ ನನ್ನನ್ನು ಕರೆದುಕೊಂಡು ಹೋಗಲು ಚಿಕ್ಕಮ್ಮನಿಗೆ ಹೇಳಿದೆ. ಆ ರಾತ್ರಿಯೆಲ್ಲಾ ಪ್ರಶಾಂತವಾದ ಒಂದು ಸುಖ ನಿದ್ದೆಯಲ್ಲಿ ಕಳೆಯಿತು. ಅದರ ಮಾರನೇದಿನವೂ ಮತ್ತೆ ಅದೇ ಪೇಲವಗೊಂಡ ಹೇಳಿಕೊಳ್ಳುವಂತಹ ಬದಲಾವಣೆಯೊಂದೂ ಇರದ ಅಂತಹದೇ ನಿಸ್ಸಾರ ವಾತಾವರಣ. ಕಣ್ಣು ಬಿಡುತ್ತಿದ್ದಂತೇ ಸಟ್ಟನೆ ಕುರ್ಚಿಗೆ ಹಾರಿ ಅಲ್ಲಾಡದೇ ಹಾಗೇ ಕುಳಿತುಬಿಟ್ಟೆ – ಏಕೆಂದರೆ ನನ್ನ ಪ್ರಜ್ಞೆಯ ಆಳದಲೆಲ್ಲೋ ಒಂದು ಭಾಗ ಇನ್ನೂ ಸಂಪೂರ್ಣ ಎಚ್ಚರಗೊಂಡೇ ಇರಲಿಲ್ಲವೆಂದು ನನ್ನೊಳಗಿನ ಏನೋ ಒಂದು ನುಡಿಯುತ್ತಿತ್ತು. ಅದಾಗ ಕೇಳಿಸಿದ್ದು ರೈಲಿನ ಸಿಳ್ಳು; ಸುದೀಘವಾಗುತ್ತಾ ಕ್ರಮೇಣ ಕ್ಷೀಣುಸುತ್ತಿದ್ದ ರೈಲಿನ ಆ ಸಿಳ್ಳು, ಸುರಿಯುತ್ತಿದ್ದ ನಿರಂತರ ಮಳೆಯೊಳಗೆಲ್ಲೋ ಸರಿದುಹೋಗುತ್ತಿತ್ತು. ‘ ಪ್ರಾಯಶಃ ಎಲ್ಲೋ ಹಳುವಾಗಿರಬೇಕು.’ ನಾನು ಅಂದುಕೊಳ್ಳುತ್ತಿದ್ದ ಹಾಗೇ ನನ್ನ ಹಿಂದೆಯಿದ್ದ ಒಂದು ಧ್ವನಿ ನನ್ನ ಅನುಮಾನಕ್ಕೆ ಉತ್ತರಿಸುವಂತೆ ಕೇಳಿತು – ‘ಎಲ್ಲಿ?’ ‘ ಯಾರಿದ್ದೀರಿ ಅಲ್ಲಿ?’ ಹುಡುಕುತ್ತಾ ಕೇಳಿದೆ. ಆಗ ತನ್ನ ಮಾರುದ್ದದ ಸಣಕಲು ಕೈಯನ್ನು ಗೋಡೆಯತ್ತ ಚಾಚಿದ ನನ್ನ ಚಿಕ್ಕಮ್ಮ ಕಾಣಿಸಿ, ‘ ನಾನು’ ಅಂದಿದ್ದು ಕೇಳಿಸಿತು. ‘ಕೇಳಿಸಿತೇ?’ ಅವರನ್ನೂ ಕೇಳಿದೆ, ನಾನು. ಹೂಂಗುಟ್ಟಿದ ಅವರು ಪ್ರಾಯಶಃ ಊರಾಚೆ ಎಲ್ಲೋ ತಿಳಿಯಾಗಿ ಆಗಲೇ ರೈಲು ಹಳಿಗಳನ್ನು ಜೋಡಿಸಿಯಾಗಿರಬೇಕು ಅಂದರು. ನಂತರ ಹಬೆಯಾಡುತ್ತಿದ್ದ ಬೆಳಗಿನ ಉಪಹಾರವನ್ನು ನನ್ನ ಮುಂದಿಟ್ಟರು. ಬೆಳ್ಳುಳ್ಳಿಯ ಸಾಸ್, ಬಿಸಿ ಬೆಣ್ಣೆಯ ವಾಸನೆಯಿದ್ದ ಸೂಪ್ ಅದು. ಕ್ಷಣ ಏನು ಕೇಳಬೇಕೆಂದು ತಿಳಿಯದೇ ಘಂಟೆ ಎಷ್ಟಾಯಿತು ಎಂದು ವಿಚಾರಿಸಿದೆ. ಯಾವುದೋ ಅನಿವಾರ್ಯಕ್ಕೆ ಹೊಂದಿಕೊಂಡಂತಹ ಸೋತ, ನಿರುದ್ವಿಗ್ನ ಸ್ವರ ಹೊರಡಿಸಿ, ಅವರು ಅಂದರು: ‘ಬಹುಷಃ ಹತ್ತಿರ, ಹತ್ತಿರ ಎರಡೂವರೆ ಇರಬೇಕು. ಏನಾದರೂ ರೈಲು ತಡವಾಗಿ ಹೋಗಲಿಕ್ಕಿಲ್ಲವಲ್ಲಾ…!’ ‘ಎರಡೂವರೆ ! ಅಷ್ಟು ಹೊತ್ತು ಮಲಗಿಬಿಟ್ಟೆನೇ ?’ ದಂಗಾಗಿ ಕೇಳಿದೆ. ‘ತುಂಬಾ ಹೊತ್ತೇನೂ ಮಲಗಲಿಲ್ಲವಲ್ಲಾ ! ಏನು ಮೂರು ಘಂಟೆಯಾಗಿರಬಹುದು !’ ಫಕ್ಕನೆ ಸಣ್ಣಗೆ ಹುಟ್ಟಿಕೊಂಡ ನಡುಕದಲ್ಲಿ, ಕೈಯಲ್ಲಿದ್ದ ತಟ್ಟೆ ಜಾರುತ್ತಿದ್ದಂತೆ ಅನ್ನಿಸಿ, ‘ ಎರಡೂವರೆ ! ಎರಡೂವರೆ ಘಂಟೆ ಶುಕ್ರವಾರ ಅಲ್ಲವಾ?’ ಕೇಳಿದೆ. ‘ ಗುರುವಾರ ಮಗಳೇ ! ಗುರುವಾರ ಎರಡೂವರೆ ! ಇದಿನ್ನೂ ಗುರುವಾರ ಮಧ್ಯಾಹ್ನ ಎರಡೂವರೆ ಘಂಟೆ !’ ಇನ್ನಿಲ್ಲದಷ್ಟು ಶಾಂತವಾಗಿ ಅವರು ಹೇಳಿದರು.
ಅದೆಷ್ಟು ಹೊತ್ತು ಹಾಗೆ ಅರೆನಿದ್ರಾವಸ್ಥೆಯಲ್ಲಿ ಮುಳುಗಿ ನನ್ನ ಮನಸ್ಸು ತನ್ನ ಸ್ಥೀಮಿತ ಕಳೆದುಕೊಂಡಿತ್ತೋ ನಾನರಿಯೆ. ನನಗೆ ಗೊತ್ತಾಗಿದ್ದು ಇಷ್ಟೇ – ಎಣಿಸಲು ಸಾಧ್ಯವಾಗದ ಅದೆಷ್ಟೋ ಅಸಂಖ್ಯ ಘಂಟೆಗಳ ನಂತರ ಒಂದು ಧ್ವನಿ ಪಕ್ಕದ ಕೋಣೆಯಲ್ಲಿ ಮೂಡಿ ಕೇಳಿಸಿತ್ತು ಅಷ್ಟೇ: ಆ ಧ್ವನಿ ಹೇಳುತ್ತಿತ್ತು: ‘ ಈಗ ಹಾಸಿಗೆಯನ್ನು ಈ ಕಡೆ ಬಿಚ್ಚೀ’ ಅದೇ ಕಳೆಗುಂದಿದ ಸ್ವರ. ಹಾಗಂತ ಹುಷಾರಿರದೇ ಕಾಯಿಲೆ ಬಿದ್ದವರದಂತೆಯೂ ಕೇಳುತ್ತಿರಲಿಲ್ಲ; ಇದೀಗ ಚೇತರಿಸಿಕೊಳ್ಳುತ್ತಿರುವ ಧ್ವನಿ. ಆನಂತರ ಕೇಳಿಸಿದ್ದು ನೀರಿನಲ್ಲಿ ಇಟ್ಟಿಗೆಯ ಸದ್ದು. ಯಾವುದನ್ನೂ ಗುರುತಿಸುವ ಸ್ಥಿತಿಯಲ್ಲಿ ನಾನಿಲ್ಲವೆಂದು ಅರಿವು ಮೂಡುವವರೆಗೂ ಹಾಗೇ ಸ್ಥಿರವಾಗಿ ಮಲಗಿದ್ದಲ್ಲೇ ಅಂಟಿಕೊಂಡಿದ್ದೆ, ನಾನು. ಆನಂತರ ಮನಸ್ಸನ್ನು ಸಂಪೂರ್ಣ ಆವರಿಸಿಕೊಂಡಿದ್ದು ಏನೋ ಖಾಲಿಯಾದಂತಹ ಶೂನ್ಯದ ಅರಿವು. ಮನೆಯಲ್ಲಿ ಅದರಾಡುತ್ತಿದ್ದ ಬಲವಂತದ ಮೌನವೊಂದು ಕ್ರಮೇಣ ಬೆಳೆದು ಹೆಮ್ಮರವಾಗುತ್ತಾ ಅಲ್ಲಾಡಿಸಲು ಅಸಾಧ್ಯವಾಗಿ ಮನೆಯ ಪ್ರತಿಯೊಂದನ್ನೂ ಘಾಸಿಗೊಳಿಸುತ್ತಾ ಹೋಗುತ್ತಿದ್ದಂತೆ; ಆಗ – ಅವಾಗಷ್ಟೇ ಅನ್ನಿಸಿಬಿಟ್ಟಿದ್ದು ನನ್ನ ಹೃದಯ ಇದ್ದಕ್ಕಿದ್ದಂತೆ ತಣ್ಣಗಾಗುತ್ತಾ ಗಟ್ಟಿಯಾಗುತ್ತಿದೆ ಎಂದು. ‘ ನಾನು ಸಾಯುತ್ತಿದ್ದೇನೆ !’ ಫಕ್ಕನೇ ಅನ್ನಿಸಿಬಿಟ್ಟಿತು. ‘ ದೇವರೇ ! ನಾನು ಸಾಯುತ್ತಿದೀನಿ !’ ಹಾಸಿಗೆಯಲ್ಲಿ ಸಟ್ಟನೇ ಎದ್ದು ಕುಳಿತೇಬಿಟ್ಟಿದ್ದೆ. ನಂತರ ಕಿರಿಚಿಕೊಂಡಿದ್ದೆ. ‘ ಆಡಾ ! ಆಡಾ !’ ಮಾರ್ಟಿನ್ ಅಸಮಾಧಾನದ ಧ್ವನಿ ಮತ್ತೊಂದು ಮಗ್ಗುಲಿಂದ ಉತ್ತರಿಸಿತ್ತು. ‘ ಅವರ್ಯಾರಿಗೂ ಕೇಳುವುದಿಲ್ಲ. ಈಗಾಗಲೇ ಎಲ್ಲರೂ ಹೊರಗೆ ಹೋಗಿಯಾಗಿದೆ.’ ಅದಾಗ ನನ್ನ ಅರಿವಿಗೆ ಬಂದಿದ್ದು ಮಳೆಯಾಗಲೇ ಸಂಪೂರ್ಣ ನಿಂತು ಸುತ್ತಲೂ ಕವಿದ ಮೌನ ಹಬ್ಬಿಕೊಳ್ಳುತ್ತಾ ಯಾವುದೋ ಪ್ರಶಾಂತ, ನಿಗೂಢ, ಅಲೌಕಿಕ ರೂಪ ತಾಳಿ ಸಾವಿಗೆ ಸಮೀಪದ ಪರಿಪೂರ್ಣ ಸ್ಥಿತಿ ಅಲ್ಲಿ ನೆಲೆಸಿತ್ತು ಎಂದು.
ನಂತರ ವೆರಾಂಡದಲ್ಲಿ ಓಡಿಯಾಡುತ್ತಿದ್ದವರ ಕಾಲಿನ ಸಪ್ಪಳ ಕೇಳಿಸಿತ್ತು. ಉತ್ಸಾಹ ತುಂಬಿದ ಗೆಲುವಿನ ತುಂಬು ಲವಲವಿಕೆಯ ಧ್ವನಿಯದು. ತದನಂತರ ಕೊರೆಯುವ ಶುಭ್ರ ಗಾಳಿಯೊಂದು ಬಾಗಿಲ ಪಟ್ಟಿಯನ್ನು ಬಲವಾಗಿ ಅಲುಗಿಸಿ, ಅಗುಳಿ ಕಿರುಗುಟ್ಟುತ್ತಾ ತೆರೆದುಕೊಂಡಾಗ ಬೃಹದಾಕಾರದ ಆ ಭಾರೀ ಆಕೃತಿ ಕಳಿತ ಹಣ್ಣಿನಂತೆ ಅಂಗಳದಲ್ಲಿ ನಿಂತ ನೀರಿನ ಮೇಲೆ ದೊಪ್ಪನೆ ಬಿದ್ದು ಬಿಟ್ಟಿತು. ಕತ್ತಲಿನಲ್ಲಿ ಅಡಗಿ ಕುಳಿತು ಮುಗುಳು ನಗುತ್ತಿರುವ ಯಾರೋ ಅಗೋಚರ ಮನುಷ್ಯನೊಬ್ಬನನ್ನು ಗಾಳಿಯೊಳಗಿನ ಯಾವುದೋ ಒಂದು ಬಿಚ್ಚಿ ತೋರಿಸುತ್ತಿತ್ತು. ‘ ಓಹ್ ದೇವರೇ !’ ಹೊತ್ತಿನ ಅರಿವು ತಪ್ಪಿ ಎಲ್ಲವೂ ಗೋಜಲಾಗಿತ್ತಿದ್ದಂತೇ ಅದಾಗ ಅಂದುಕೊಂಡೆ. ‘ಇದೀಗ ಕಳೆದ ಭಾನುವಾರದ ಚರ್ಚಿನ ಪೂಜೆಗೆ ಕರೆಯಲು ಅವರು ಬಂದರೂ ನಂಗೆ ಆಶ್ಚರ್ಯವಾಗುವುದಿಲ್ಲ !’
ಕೃಪೆ: ಮಯೂರ – 1993.
 

‍ಲೇಖಕರು avadhi

22 April, 2014

2 Comments

  1. Uma Rao

    A great story and v good translation.

  2. Anil Talikoti

    ತನ್ನ ನಾಡಿನ ನೋವಿಗೆ, ಹುಟ್ಟೂರಿನ ಅವನತಿಗೆ ಮಾರ್ಕ್ವೆಜ ಕಟ್ಟಿ ಕೊಡುವ ಪ್ರಕೃತಿ ವಿಕೋಪವಾಗಿ ಮಳೆಯನ್ನು ಮೂಡಿಸುವ ಕಲೆಗಾರಿಕೆ ಅನನ್ಯಮಯವಾಗಿದೆ.ಒಳ್ಳೆಯ ಅನುವಾದ.
    -ಅನಿಲ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading