ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಲಕ್ಷ್ಮಿ ಪಾಟೀಲ್ ಅಂಕಣ – ಪೂರ್ತಿ ಸ್ವರ್ಗವೇ ನನ್ನ ಮಡಿಲಿಗಿಳಿದಿತ್ತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

43

16 ಫೆಬ್ರವರಿ1993 ರಂದು ಮಾವನವರು ಶಿವಕ್ಯರಾದ ದಿನ. ಅಂದು ಶಿವರಾತ್ರಿಯ ಅಮಾವಾಸ್ಯೆ. ಇವರ ತಳವಾದ ಕದರಾಪುರದಲ್ಲಿ ತೋಟದಲ್ಲಿ ಅಂತಿಮ ಸಂಸ್ಕಾರ ಮಾಡುವುದು ಎಂದಾಗಿ ಅಲ್ಲಿಗೆ ಮಾವನವರನ್ನು ಅಲ್ಲಿಗೆ ಸಾಗಿಸಲಾಯಿತು. ನನಗೆ, ಬಸುರಿ ಹೆಣ್ಣುಮಗಳು ನೀನು ಅಲ್ಲಿಗೆ ಬರುವುದು ಬೇಡ ಎಂದರು ಹಿರಿಯರೆಲ್ಲ. ಆದರೆ ಜೀವ ತಡೆಯಲಿಲ್ಲ.

ಹಠ ಮಾಡಿ ಹೋದೆ. ಮೊದಲ ಸಲ ನಾನು ಆ ಊರಿಗೆ ಕಾಲಿಟ್ಟಿದ್ದು. ಅದೂ ಇಂಥಾ ಸ್ಥಿತಿಯಲ್ಲಿ ಅನ್ನುವ ನೋವೂ ಸೇರಿಕೊಂಡಿತು ಜೊತೆಗೆ. ಇವರ ಅಂದರೆ ನನ್ನ ಪತಿಯ ಪೂರ್ವಿಕರು ಮೊದಲು ಉಕ್ಕಲಿಯಲ್ಲಿದ್ದರಂತೆ. ಇವರದು ಮೊದಲು ದೇಸಗತ್ತಿ ಮನೆತನ. ಹೀಗಾಗಿ ಇವರ ಮೊದಲ ಅಡ್ಡಹೆಸರು ದೇಸಾಯಿ ಅಂತಿತ್ತಂತೆ. 500 ಎಕರೆ ಜಮೀನಿನ ಒಡೆತನ! ಆದರೆ ಅಲ್ಲೇನೋ ಸಮಸ್ಯೆಯಾಗಿ ಅಲ್ಲಿಂದ ಬ್ರಿಟಿಷ್ ಸರಕಾರ ಕದರಾಪುರಕ್ಕೆ ಎತ್ತಂಗಡಿ ಮಾಡಿ, ಅಲ್ಲಿನ ಗೌಡಕಿ (ಪಾಟೀಲಕಿ) ಕೊಟ್ಟಿತಂತೆ. ಲಂಬಾಣಿ ಸಮುದಾಯವೇ ಹೆಚ್ಚಿನ ಸಂಖ್ಯೆಲ್ಲಿರುವ ಊರು ಕದರಾಪುರ.

ರಾತ್ರಿಯಿಡಿ ಭಜನೆ ಇಟ್ಟು ದೂರದಿಂದ ಅಂತಿಮ ದರ್ಶನಕ್ಕೆ ಬರುವವರಿಗಾಗಿ ಅನುವು ಮಾಡಿಕೊಡುವುದು ಉತ್ತರ ಕರ್ನಾಟಕದಲ್ಲಿ ಸಾಮಾನ್ಯ. ಅಂದೂ ರಾತ್ರಿಯೆಲ್ಲಾ ಭಜನೆ. ಎಲ್ಲೆಲ್ಲಿಂದಲೋ ಜನ ಸಾಗರದಂತೆ ಹರಿದು ಬಂದಿದ್ದರು. ಮಧ್ಯಾಹ್ನದ ಹೊತ್ತಿಗೆ ಮಣ್ಣಾಯಿತು. ಯಾವುದೇ ಸರಕಾರಿ ವಾಹನಗಳ ಅನುಕೂಲವಿಲ್ಲದ ಅಂಥಾ ಸಣ್ಣ ಊರಲ್ಲಿ ಅಂತಿಮ ದರ್ಶನಕ್ಕೆಂದು ಸೇರಿದ ಜನರನ್ನು ಕಂಡು ಬಂದವರೇ ಬೆರಗಾಗಿದ್ದರು. ನಮ್ಮಾವನವರು ಅಷ್ಟೊಂದು ಜನರಿಗೆ ಬೇಕಾದವರಾಗಿದ್ದರು ಅನ್ನೋದು ನನಗೆ ತಿಳಿದಿದ್ದು ಅಂದಿನ ದಿನವೇ. ‘ಶರಣರ ಮಹಿಮೆ ಅವರ ಮರಣದಲ್ಲಿ ಕಾಣು’ ಅನ್ನುವುದಿಲ್ಲಿ ಸಾಬೀತಾಗಿತ್ತು. 

ಅಲ್ಲಿನ ಕಾರ್ಯಗಳನ್ನು ಮುಗಿಸಿ ಎಲ್ಲರೂ ಕಲಕೇರಿಗೆ ಬಂದೆವು. ದೈವದಲ್ಲಿ ಹಾಕಿಕೊಳ್ಳುವವರೆಗೆ ಅಂದರೆ ಶಿವಗಣಾರಾಧನೆ ಮುಗಿಯುವವರೆಗೆ ನಾನು ಅಲ್ಲಿಂದ ಹೊರಟುಬರುವ ಹಾಗಿರಲಿಲ್ಲ. ಅತ್ತೆ ಮನೆಯ ಸೊಸೆ. ದಿನಪೂರ್ತಿ ವೈದ್ಯರು ಹೇಳಿದಂತೆ ರೆಸ್ಟ್ ಮಾಡುವ ಹಾಗಿರಲಿಲ್ಲ. ಸಾವಿನ ಮನೆ. ಸತತವಾಗಿ ಜನ ಮಾತಾಡಿಸಲು ಬರುತ್ತಿದ್ದರು. ದಿನವಿಡೀ ಬಂದವರಿಗೆಲ್ಲ ಚಹಾ, ಚೋಡ, ಊಟ ಎಂದು ಚೂರೂ ಪುರುಸೊತ್ತಿಲ್ಲದ ದಿನಚರಿ. ವೈದ್ಯರ ಮಾತು ನೆನಪಾಗಿ ಆತಂಕವಾಗುತ್ತಿತ್ತು. ಸಿಕ್ಕ ಒಂದರೆಘಳಿಗೆ ಸಮಯ ಅಡ್ಡಾಗಿ ರೆಸ್ಟ್ ಮಾಡಲು ಯತ್ನಿಸುತ್ತಿದ್ದೆ. ಆಗೆಲ್ಲ ಬೆಡ್ರೆಸ್ಟ್ ಅನ್ನೋದು ಯಾರೂ ಕೇಳರಿಯದ ವಿಷಯ. ಗರ್ಭಿಣಿಯರು ಕೆಲಸ ಮಾಡಿದಷ್ಟೂ ಸುಸೂತ್ರ ಹೆರಿಗೆ ಆಗುತ್ತೆ ಅನ್ನುವ ನಂಬಿಕೆ.

ಹೀಗಾಗಿ ನನ್ನ ಈ ಅರೆಘಳಿಗೆಯ ವಿಶ್ರಾಂತಿ ಎಲ್ಲರ ಮಜಾಕಿನ ವಿಷಯವಾಗಿ ಅದು ನನ್ನ ಕಣ್ಣು ಕಿವಿಗೂ ತಲುಪಿ ಅಸಹಾಯಕತೆಯಿಂದ ನೋಯುತ್ತಿದ್ದೆ. ಅನ್ನುವ ಹಾಗಿಲ್ಲ ಅನುಭವಿಸುವ ಹಾಗಿಲ್ಲ! ಸಣ್ಣಗೆ ಹೊಟ್ಟೆ ನೋಯುತ್ತಿತ್ತು. ಹೆಜ್ಜೆ ಹೆಜ್ಜೆಗೂ ಹೆದರಿಕೆ ಎಲ್ಲಿ ಏನಾಗಿಬಿಡುತ್ತದೋ ಎಂದು… ಎಲ್ಲಾ ಕಾರ್ಯಗಳೂ ಮುಗಿದು ಮರಳಿ ಬಿಜಾಪುರಕ್ಕೆ ಬಂದ ತಕ್ಷಣ ಅವ್ವ ನನ್ನನ್ನು ಸೀದಾ ಡಾಕ್ಟರ್ ದಾಕ್ಷಾಯಣಿ ಜಿಗಜಿನ್ನಿ ಮೇಡಂ ಬಳಿ ಕರೆದುಕೊಂಡು ಹೋದರು. ನನ್ನನ್ನು ಪರೀಕ್ಷಿಸಿದ ಅವರು ಸರೀ ಬೈದರು ಮಾತ್ರವಲ್ಲ, “ಇನ್ಮುಂದ ನನ್ನ ಹತ್ರ ಚೆಕಪ್ ಗೆ ಬರಾಕ ಹೋಗಬೇಡ ನೀನು. ನಾಳೆ ಏನಾದ್ರೂ ಹೆಚ್ಚುಕಮ್ಮಿ ಆದ್ರೆ ನನ್ನ ತಲಿಗೆ ಬರತೈತಿ.” ಎಂದುಬಿಟ್ಟರು.

ಕಡ್ಡಾಯ ಬೆಡ್ರೆಸ್ಟ್ ಎಂದ ಮೇಲೂ ನಾನು ಮಾವನವರ ಜೊತೆ ಆಸ್ಪತ್ರೆಗೆ ಹೋಗ್ತಿದ್ದುದು, ನಂತರ ಕಾರ್ಯ ಮುಗಿಯುವವರೆಗೆ ಊರಲ್ಲಿ ರೆಸ್ಟ್ ಮಾಡದೇ ಕೆಲಸ ಮಾಡಿದ್ದು ನನ್ನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಬೀರಿತ್ತು. ಅವರಲ್ಲಿ ಕ್ಷಮೆ ಕೇಳಿ ಇನ್ಮುಂದೆ ಜಾಗ್ರತೆಯಿಂದ ಇರುವುದಾಗಿ ಮಾತುಕೊಟ್ಟು ಅವ್ವ ನನ್ನನ್ನು ಮನೆಗೆ ಕರೆದುಕೊಂಡು ಬಂದವಳು, ಸ್ನಾನ, ಊಟ, ಟಾಯ್ಲೆಟ್ ಗೆ ಹೋಗಲು ಬಿಟ್ಟರೆ ದಿನವಿಡೀ ಮಲಗಿಯೇ ಇರುವಂತೆ ನೋಡಿಕೊಂಡಳು. ಊಟ ತಿಂಡಿ ಸಹ ಅಲ್ಲೇ ಮಂಚದ ಪಕ್ಕದ ಚೇರ್ ಮೇಲೆ. ಹೀಗಾಗಿ ಮನೆಮನೆಗೆ ಹೋಗಿ ಕುಬುಸ (ಸೀಮಂತ) ಮಾಡಿಸಿಕೊಂಡು ಮೃಷ್ಟಾನ್ನ ಭೋಜನ ಮಾಡುವ ಯೋಗದಿಂದ ವಂಚಿತಳಾದೆ. ಆದರೂ ಕೆಲ ಆಪ್ತರು, ನನ್ನನ್ನು ತುಂಬಾ ಜತನದಿಂದ ಕರೆದುಕೊಂಡು ಹೋಗಿ ತಂದುಬಿಡುವ ಭರವಸೆಯನ್ನು ಅವ್ವನಿಗೆ ಕೊಟ್ಟು ಕರೆದುಕೊಂಡು ಹೋಗಿ ಉಣಿಸಿ, ಹೂ ಮೂಡಿಸಿ, ಸೀರೆ ಉಡಿಸಿ, ಆರತಿ ಮಾಡಿ, ಕುಡಿದ ನೀರೂ ಕಲಕದಂತೆ ಜೋಪಾನವಾಗಿ ಮನೆ ತಲುಪಿಸುತ್ತಿದ್ದರು.

ಬೆಡ್ರೆಸ್ಟ್ ಕಾರಣಕ್ಕೆ ಗಂಡನಮನೆಯಲ್ಲಿ ನನ್ನ ಸೀಮಂತ ಮಾಡುವ ಹಾಗಿರಲಿಲ್ಲವಾಗಿ, ಅವ್ವ ಅಪ್ಪ ಬಿಜಾಪುರದಲ್ಲಿ ತಾವೇ ಮಾಡುವುದಾಗಿ ಹೇಳಿದರು. ಇದೇ ಹೊತ್ತಲ್ಲಿ ನನ್ನ ಮೂರನೇ ಸೋದರಮಾವ ಈರಣ್ಣನ ಹೆಂಡತಿ ಸುಮಂಗಲಾ ಸಹ ಗರ್ಭಿಣಿ. ಅವರದು ಪ್ರೀತಿಸಿ ಆದ ಮದುವೆ ಆದ್ದರಿಂದ ಆಕೆಯ ತವರಿನವರು ದೂರ ಉಳಿದಿದ್ದರು. ಹೀಗಾಗಿ ಅವ್ವ ಅಪ್ಪ ನನ್ನ ಸೀಮಂತದಲ್ಲೇ ಆಕೆಯದೂ ಮಾಡುವುದು ಎಂದು ನಿರ್ಧಾರಿಸಿದರು. ಅವ್ವ ಇಬ್ಬರಿಗೂ ಒಂದೇ ಥರದ ಸೀರೆ, ಇವರಿಗೆ ಮತ್ತು ಈರಣ್ಣ ಮಾಮಾಗೆ ಒಂದೇ ಥರದ ಬಟ್ಟೆ ತಂದು, ತುಂಬಾ ಚೆಂದವಾಗಿ ಸೀಮಂತ ಮಾಡಿದರು.

ಪಾಪ ಜೊತೆಗೆ ತವರಿನವರಿಲ್ಲ ಅನ್ನುವ ಕಾರಣಕ್ಕೆ ಅಂದು ಎಲ್ಲರೂ ನನಗಿಂತ ಸುಮಾಗೇ ಹೆಚ್ಚು ಮಹತ್ವವನ್ನ ಕೊಡುತ್ತಾ ಇದ್ದುದ್ದನ್ನು ಕಂಡು ಮತ್ತೊಮ್ಮೆ ಅನಾಥಪ್ರಜ್ಞೆ ಮಿಸುಗಾಡುತ್ತಿತ್ತು ಮನದಲ್ಲಿ. ಅದಕ್ಕೂ ಮೊದಲು ತಾಯಿಯಿಲ್ಲದ ಮಕ್ಕಳು ಅನ್ನುವ ಕಾರಣಕ್ಕಾಗಿ, ನಮ್ಮೊಂದಿಗೆ ಬೆಳೆದ ನನ್ನ ಮೂರೂ ಜನ ಕಸಿನ್ಸ್ ನ ನನ್ನ ಅಪ್ಪ ಅವ್ವ ನಮಗಿಂತ ಅವರನ್ನು ಹೆಚ್ಚು ಕೇರ್ ಮಾಡುತ್ತಿದ್ದಾಗಲೂ ಹೀಗೇ ಆಗುತ್ತಿತ್ತು ನನಗೆ. ಈಗ ಮತ್ತೊಮ್ಮೆ ಅದೇ ಭಾವ ಕಾಡಿ ನನ್ನೊಳಗಿನ ಸಂಭ್ರಮದ ಪ್ರಮಾಣವನ್ನು ಕಡಿಮೆ ಮಾಡಿತ್ತು..

ನನಗಿಂತ ಇಪ್ಪತ್ತು ದಿನ ಮೊದಲು ಸುಮಾ ಗಂಡುಮಗುವಿಗೆ ಜನ್ಮವಿತ್ತಳು. ತುಂಬಾ ಚೆಂದದ ಕೂಸು. ಕಥೆ ಕಾದಂಬರಿಗಳಲ್ಲಿ ಬರುವ ಹಾಗೆ ಚಂದಿರನ ತುಂಡೇ ಭುವಿಗೆ ಬಂದಂಥಾ ಬಂಗಾರದಂಥ ಕೂಸದು. 

ನನಗೆ ಒಂಬತ್ತು ತಿಂಗಳು ತುಂಬಲು ಇನ್ನೂ ನಾಲ್ಕಾರು ದಿನಗಳಿವೆ ಎಂದಾಗ ಗರ್ಭಾಶಯದ ಬಾಯಿಗೆ ಹಾಕಿದ್ದ ಹೊಲಿಗೆ ಬಿಚ್ಚಿ, ಇನ್ನು ಯಾವ ದಿನ ಬೇಕಾದರೂ ಹೆರಿಗೆಯಾಗಬಹುದು ಎಂದು ಹೇಳಿ ಕಳಿಸಿದರು ಜಿಗಜಿನ್ನಿ ಮೇಡಂ. ಇವರಿಗೆ ಫೋನ್ ಮಾಡಿ ಪುಣೆಯಿಂದ ಬರಲು ಕೇಳಿಕೊಂಡೆ. ನನ್ನ ಹೆರಿಗೆಯ ಸಮಯದಲ್ಲಿ ಇವರು ನನ್ನ ಜೊತೆಗೆ ಇರಬೇಕು ಅನ್ನುವುದು ನನ್ನಾಸೆಯಾಗಿತ್ತು. ರಜೆ ಹಾಕಿ ಬಂದವರು ಎರಡು ದಿನ ನನ್ನೊಂದಿಗೆ ಇದ್ದು ಕಲಕೇರಿಗೆ ಹೋದರು. ಮರುದಿನ ಸರಿಯಾಗಿ ಒಂಬತ್ತು ತಿಂಗಳು ತುಂಬಿತ್ತು ನನಗೆ. ಆ ರಾತ್ರಿ 12ಕ್ಕೆ ತಳಬಟ್ಟಲು ಒಡೆದು ನೀರು ಹೋಗಲಾರಾಂಭಿಸಿತು. ತಕ್ಷಣ ಒಂದಿಷ್ಟು ಮೆತ್ತನೇ ಸೀರೆಗಳನ್ನು, ನೀರು, ಚಹಾದ ಫ್ಲಾಸ್ಕ್ ಜೊತೆಗಿಟ್ಟುಕೊಂಡು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಳು ಅವ್ವ. ಅವ್ವನ ಜೊತೆಗೆ ನನ್ನ ತಮ್ಮಂದಿರಾದ ಜಗು, ಬಾಪು, ವಿನಾಯಕ, ಈರಣ್ಣ ಮಾಮಾ ಬಂದರು. ಬೆಳಿಗ್ಗೆ ಇವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ನನ್ನ ಪತಿ ಅಲ್ಲಿಂದ ಎದ್ದೆನೋ ಬಿದ್ದೆನೋ ಎಂದು ಹೊರಟು ಬಂದರೆ, ಇಲ್ಲಿ ಬಿಜಾಪುರದ ನಮ್ಮ ಅಷ್ಟೂ ಮನೆಗಳಲ್ಲಿದ್ದ  ಚಿಳ್ಳೆಪಿಳ್ಳೆ ಮೊದಲುಗೊಂಡು ಎಲ್ಲರೂ ಆಸ್ಪತ್ರೆಯಲ್ಲಿದ್ದರು! ಪಾಪ ಅವರೆಲ್ಲ ಹೊರಗೆ ಮಕ್ಕಳ ಬರುವಿಗಾಗಿ ಕಾತರದಿಂದ ಕಾಯುತ್ತಿದ್ದರೆ, ಒಳಗೆ ನಾನು ನೋವು ಕೊಡುವುದು (ಮುಕ್ಕುವುದು) ಹೇಗೆ ಅಂತ ತಿಳಿಯದೆ ಪರದಾಡುತ್ತಿದ್ದೆ. ಅವ್ವ, ನಾನು ನೋವು ಅನುಭವಿಸುತ್ತಿರೋದನ್ನ ನೋಡಲಾಗದೆ, ‘ದೇವ್ರ ಮಗಳ ನೋವು ನನಗ ಕೊಡು, ಅಕಿಗೆ ತ್ರಾಸ ಕೊಡಬ್ಯಾಡ. ನೋಡಾಕಗವಲ್ತು’ ಎಂದು ಅಳುತ್ತಿದ್ದಳು.

ಮದ್ಯಾಹ್ನ ಮೂರೂವರೆ ಆದರೂ ಹೆರಿಗೆ ಆಗ್ತಿಲ್ಲ. ಜಿಗಜಿನ್ನಿ ಮೇಡಂ ಆಗಾಗ ಬಂದು ನೋಡಿಕೊಂಡು ಹೋಗುತ್ತಿದ್ದರು. ಹೆರಿಗೆ ಸಮಯ ಹತ್ತಿರವಿದೆ ಎಂದಾಗ, “ನೋಡು ನೀ ಸರ್ಯಾಗಿ ನೋವ್ ಕೊಡ್ಲಿಲ್ಲಾ ಅಂದ್ರ ನಿನ್ನ ಕೂಸಿನ ತಲಿ ದೊಡ್ಡದಾಕ್ಕೋತ ಹೋಗಿ ಮೆದಳು ಹಾಳಾಕ್ಕತಿ. ಉಸ್ರು ಬಿಗಿ ಹಿಡ್ಯೂದ್ನ ಕಲಿ” ಎಂದವರೇ ನೋವು ಕೊಡುವುದು ಹೇಗೆ ಎಂದು ತಿಳಿಸಿ ಕೊಟ್ಟರು. ನನಗೋ ಉಸಿರು ಬಿಗಿ ಹಿಡಿದರೆ ಸತ್ತೇಹೋಗ್ತೀನಿ ಅನ್ನುವಷ್ಟು ಕಷ್ಟವಾಗುತ್ತೆ. ಆದ್ರೆ ಆ ಹೊತ್ತು ನನಗಿಂತ ನನ್ನ ಕಂದಮ್ಮಗಳು ಮುಖ್ಯವಾಗಿಬಿಟ್ಟರು. ‘ಅಬ್ಬಬ್ಬಾ ಅಂದ್ರ ನಾ ಸಾಯ್ತಿನಿ ಅಷ್ಟ ಅಲ್ಲಾ. ಆದ್ರ ಅದರಿಂದ ಮಕ್ಕಳು ಹೆಲ್ದಿ ಆಗಿ ಹುಟ್ಟತಾವು. ಅವ್ರಿಗೇನೂ ಆಗಬಾರ್ದು, ನನಗೇನಾದ್ರೂ ಅಡ್ಡಿಯಿಲ್ಲ’ ಎಂದು ನಿರ್ಧರಿಸಿದವಳೇ ಉಸಿರು ಬಿಗಿಹಿಡಿದು ನೋವು ಕೊಟ್ಟೆ. ಬೇಹೋಶ್ ಆಗ್ತಿದ್ದೀನಿ ಅನಿಸುತ್ತಿತ್ತು ಆದರೆ ಉಸಿರನ್ನು ಬಿಡದೆ ಬಿಗಿಯಾಗಿ ಹಿಡಿದಿದ್ದೆ. ಸ್ವಲ್ಪ ಹೊತ್ತಿಗೆ ಮೊದಲ ಮಗು ಆಚೆ ಬರುತ್ತಿರುವಾಗಲೇ ಅಳುತ್ತಲೇ ಬಂತು. ಹೊರಗಿದ್ದವರೆಲ್ಲ ಹೋ ಎಂದು ಕೂಗುತ್ತಾ ಗಂಡುಮಗು ಎನ್ನುತ್ತಾ ಕುಣಿಯತೊಡಗಿದರು. ಮಗುವಿನ ದನಿಯಿಂದಲೇ ಗಂಡು ಎಂದು ಸರಿಯಾಗಿ ಗುರುತಿಸಿದ್ದರು. ಮುಂದೆ ಐದು ನಿಮಿಷಕ್ಕೆಲ್ಲಾ ಮಗಳು ಬಂದಳು ಭೂಮಿಗೆ. ಎರಡನೆಯದ್ದು ಹೆಣ್ಣುಮಗು ಎಂದಾಗ ಹೊರಗಿದ್ದ ನಮ್ಮವರ ಸಂಭ್ರಮ, ಆಸ್ಪತ್ರೆಯವರು ಅವರನ್ನೆಲ್ಲಾ ಬೈದು ಸುಮ್ಮನಿರಿಸುವ ಮಟ್ಟಕ್ಕೆ ಏರಿತ್ತು. ಹೀಗೆ ಪೂರ್ತಿ ಸ್ವರ್ಗವೇ ನನ್ನ ಮಡಿಲಿಗಿಳಿದಿತ್ತು. ಅಷ್ಟೊತ್ತೂ ನೋವುಂಡವರ್ಯಾರೋ ಏನೋ!

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

29 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading