ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಂತ ಕಾಯ್ಕಿಣಿ ಕಂಡಂತೆ ‘ಮಥಿಸಿದಷ್ಟೂ ಮಾತು’

ಸಾರ್ಥಕ ಸಲ್ಲಾಪ

-ಜಯಂತ ಕಾಯ್ಕಿಣಿ

ಅಮೆರಿಕೆಯಲ್ಲಿ ಬಿಡಾರ ಹೂಡಿರುವ ಕನ್ನಡ ಪರಿಸರದ ಸ್ಥಾಯೀ ಮತ್ತು ಸಂಚಾರೀ ಭಾವಗಳ, ವೈವಿಧ್ಯಪೂರ್ಣ ಆಧುನಿಕ ಅಭಿವ್ಯಕ್ತಿಯ ವಿಶಿಷ್ಟ ಸೊಲ್ಲುಗಳ ಸಂಕಲನ ಇದು. ಕಾವ್ಯದ ಧ್ವನಿಶಕ್ತಿಯ ಜೊತೆಗೆ ಕಥನದ ಕುತೂಹಲವನ್ನೂ ಹೊಂದಿರುವ ಈ ಲಲಿತ ನಿಬಂಧಗಳು, ತಮ್ಮ ಅನುಭವಜನ್ಯ ವಿವರಗಳಲ್ಲಿ ಮೈದಾಳುತ್ತಲೇ, ಅದರಾಚೆಗೂ ಚಿಂತನಶೀಲವಾಗಿ ರೆಕ್ಕೆ ಬಿಚ್ಚುವ ರೀತಿ ಭಾವೋದ್ದೀಪಕವಾಗಿದೆ. ಹೊಸ ಆವರಣ, ಜೀವನ ಶೈಲಿಯ ವಿವರ, ಮಾಹಿತಿಗಳಷ್ಟೆ ಪ್ರಬಂಧವಾಗಲಾರವು. ವಿವರಗಳು ಅರಿವಿನೆಡೆಯ ಕಿಟಕಿಗಳೂ, ಬಾಗಿಲುಗಳೂ, ಕಾಲ್ದಾರಿಗಳೂ ಆದಾಗ ಮಾತ್ರ ಅದು ಸಾರ್ಥಕ ಸಲ್ಲಾಪ.

‘ಕೆಂಪು ಗಾಜಿನ ಹಣ್ಣುಗಳಂತೆ ಕಾಣುವ ಗಾರ್ನೆಟ್ ಗಳು’, ‘ಸ್ಕೂಟರನ್ನು ಬೆದರಿಸುವ ಲಾರಿಯಂತೆ ಲೇಖಕಿಯನ್ನು ಕಂಗೆಡಿಸುವ ಖಾಲಿ ಹಾಳೆ’, ‘ಬಡಿಸಿದ್ದು ಆರಿ ಹೋಗ್ತಾ ಇದೆ, ಊಟಕ್ಕೆ ಬಾರೋ’ ಎಂದು ಕರೆಯುತ್ತಲೇ ಇರುವ ಅಮ್ಮನ ದನಿ, ‘ಮತಿಘಟ್ಟದ ಅಪರೂಪದ ಹತ್ತಿಯಷ್ಟೇ ಮೃದುವಾದ ನೆಹರೂರ ಕೈಕುಲುಕನ್ನು ನೆನೆಯುವ ಅಜ್ಜಯ್ಯ’, ‘ಐಸಿಯು’ನ ವೆಂಟಲೇಟರಿನಲ್ಲಿ ಹೋಗದ ಗಂಗೋದಕ’, ಊರಿನ ಆಯಿಗೆಂದೇ ಕಾದಿರಿಸಿದ ಮಾಲ್ ನ ಇಪ್ಪತ್ತು ಪೌಂಡ್ ಅಕ್ಕಿಯ ಸೋನಾ ಮಸೂರಿಯ ಖಾಲಿ ಚೀಲ’, ‘ಬಡವನ ಪಾಲಿನ ಕೇವಲ ಕಪ್ಪುಬಿಳಿ ಬಣ್ಣದ ಕಾಮನಬಿಲ್ಲು’, ಎಂದೂ ಹಾದಿ ತಪ್ಪಿಸದ ಎದೆಯ ಜೆ.ಪಿ.ಎಸ್’, ‘ಎಚ್ ಒನ್ ಎನ್ ಒನ್’ ಗಿಂತ ಭಯಾನಕವಾದ ‘ಎಚ್ ಒನ್’ (ವೀಸಾ) ಆತಂಕ, ‘ಕ್ಷಣವನ್ನೂ ಹಿಡಿಯುವುದನ್ನು ಹೇಳಿಕೊಡುವ ಟೀವಿ ಗುರು’, ‘ಕಳೆದುಕೊಂಡದ್ದರ ಕುರಿತ ದಿಢೀರ್ ವೈರಾಗ್ಯ’, ‘ಸೊನ್ನೆಯಿಂದ ಅನಂತದ ನಡುವಿನ ಶೂನ್ಯ ಸಂಪಾದನೆ’, ‘ನೆನಪಿನ ಚಿಲಿಪಿಲಿಗಳಿಂದ ನೇಯ್ದ ಖಾಲಿ ಗೂಡು’, ‘ಬರೆದು ಒರೆಸಿದಷ್ಟೂ ನುಣುಪಾಗುವ, ಅಂಚು ಮೊಂಡಾದ ಕಲ್ಲಿನ ಪಾಟಿ (ಸ್ಲೇಟ್)’- ಇಂಥ ಎಷ್ಟೊಂದು ಸಜೀವ ಸಂಗತಿಗಳು, ಒಟ್ಟಾಗಿ ಒಂದು ದರ್ಶನದೆಡೆಗೆ ಪ್ರಾಮಾಣಿಕವಾಗಿ ಚಲಿಸುವ ರೀತಿಯೇ ಈ ನಿಬಂಧಗಳ ನಿರಾಡಂಬರ ಸ್ಥೈರ್ಯವಾಗಿದೆ.

ಇಂಥ ವಿವರಗಳು ಕೇವಲ ಕಲೆಹಾಕುವ ‘ಮಾಹಿತಿ’ಗಳಾಗದೆ, ಒಂದು ಮನೋಧರ್ಮವನ್ನು ರೂಪಿಸುವ ಸ್ವಂದನವಾಗಿ ಬೆಳೆಯುವುದರಿಂದಲೇ, ಇಲ್ಲಿನ ಹೆಚ್ಚಿನ ಬರಹಗಳು ಕನ್ನಡ ಸಂವೇದನೆಯನ್ನು ಹಿಗ್ಗಿಸುವಷ್ಟು ಸತ್ವಶಾಲಿಯಾಗಿವೆ.


 

‍ಲೇಖಕರು G

3 May, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading