ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಬೀವುಲ್ಲಾ ಎಮ್ ಅಸದ್ ಓದಿದ- ‘ಮಣ್ಣಿನ ಕಣ್ಣುಗಳು’

‘ಖಸೀದಾ ಎಂಬ ಕಾವ್ಯದ  ಮಣ್ಣಿನ ಕಣ್ಣಿನಲ್ಲಿ ಇಣುಕಿದಾಗ…’

ಜಬೀವುಲ್ಲಾ ಎಮ್ ಅಸದ್

ಸಾಹಿತ್ಯವೆಂಬುದು ಅನಾದಿ ಕಾಲದಿಂದಲೂ ದೇಶ, ಭಾಷೆಗಳ ಎಲ್ಲೆಗಳನ್ನು ಮೀರಿ ಎಲ್ಲೆಡೆ ಪಸರಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಅಂದಿನಿಂದ ಇಂದಿಗೂ ಸಹ ಇದೊಂದು ವಿಶ್ವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆ ಎನ್ನುವಷ್ಟರ ಮಟ್ಟಿಗೆ ಆಚರಣೆಯಾಗಿ ಬೆಳೆದು ಬಂದಿದೆ. ಈ ತೆರನಾಗಿ ಒಂದು ಭಾಗದ, ಒಂದು ಭಾಷೆಯ, ಒಂದು ಸಂಸ್ಕೃತಿಯ, ಒಂದು ದೇಶದ ಒಂದು ಅವಿಭಾಜ್ಯ ಅಂಗವಾಗಿ ರೂಪುಗೊಂಡ ಸಾಹಿತ್ಯ ವರ್ತಕರ, ಧರ್ಮ ಪ್ರಚಾರಕರ, ಸೂಫಿ- ಸಂತರು-  ಪ್ರವಾಸಿಗಳ ಮತ್ತು ಸಾಹಿತ್ಯಾಸಕ್ತರ ಆಸಕ್ತಿ, ಕುತೂಹಲ ಹಾಗೂ ಪ್ರಯತ್ನದ ಫಲವಾಗಿ ಅನುವಾದಗಳ ಮೂಲಕ ಭಾಷಾಂತರಗೊಂಡು, ಎಲ್ಲೋ ಜನ್ಮ ತಳೆದು, ಇನ್ನೆಲ್ಲೋ ಬೆಳೆದು, ಯಾವುದೋ ನೆಲದಿ ಬೇರು ಬಿಟ್ಟು, ಮತ್ತೆಲ್ಲೋ ಹೂ ಬಿಟ್ಟು ಮಘಮಘಮಿಸಿದ ಉದಾಹರಣೆಗಳು ನಮ್ಮ ಮುಂದೆ ಹೇರಳವಾಗಿವೆ. ಅವುಗಳಲ್ಲಿ ಮುಖ್ಯವಾಗಿ ಕೆಲವನ್ನು ಗುರಿತಿಸುವುದಾದರೆ…. ಝೆನ್, ತಂಕಾ, ಹೈಕು,ರುಬಾಯಿ, ಗಜಲ್, ಶಾಯರಿಇತ್ಯಾದಿ….

ಈಗಾಗಲೇ ಈ ಮೇಲಿನ ಎಲ್ಲಾ ಜಾಗತಿಕ ಸಾಹಿತ್ಯ ಪ್ರಕಾರಗಳು ಕನ್ನಡ ನೆಲದಲ್ಲಿ, ಕನ್ನಡಿಗರ ಮನದಲ್ಲಿ ಸ್ಥಾನ ಗಳಿಸಿ, ಹೂ ಅರಳಿಸುತ್ತಾ, ಸುಗಂಧ ಬೀರುತ್ತಿವೆ. ಈ ನಿಟ್ಟಿನಲ್ಲಿ ಅರೇಬಿಕ್ ಭಾಷೆಯ ಪ್ರಾಚೀನ ಕಾವ್ಯ ಪ್ರಕಾರವಾದ ‘ಖಸೀದಾ’ ಎಂಬ ಕಾವ್ಯ ಕಾವ್ಯ ಪ್ರಕಾರವನ್ನು ಪ್ರಪ್ರಥಮ ಬಾರಿಗೆ ಕನ್ನಡ ಭಾಷೆಯಲ್ಲಿ ರಚಿಸುವುದರ ಮೂಲಕ ‘ನಂರುಶಿ’ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ಕೃಷಿಯಲ್ಲಿ ನಿರತರಾಗಿರುವ ಕಡೂರಿನ  ಗೆಳೆಯ ‘ಶಿವಪ್ರಕಾಶ ರು ಕುಂಬಾರ’ರವರು ಪರಿಚಯಿಸಿದ್ದಾರೆ. ಈವೊಂದು ಅಭೂತಪೂರ್ಣ ಕೊಡುಗೆಯ ಮೂಲಕ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸದ್ದಾರೆ ಎಂದರೆ ಬಹುಶಃ ಅತಿಶಯೋಕ್ತಿ ಆಗಲಾರದು. 

‘ಲಯವಾದ ಈ ಹಾಡು ಕಿವಿಗೆ ಹೊಸದಾಗಿದೆ’
‘ನಂರುಶಿ ಕನಸು ಖಸೀದಾದಿ ನನಸಾಗಿದೆ’

ನಾವು ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಇತರೆ ದೇಶ – ಭಾಷೆಯ ಸಾಹಿತ್ಯ ಹೆಚ್ಚಾಗಿ  ಅನುವಾದಗಳ ಮುಖಾಂತರವೇ ಪರಿಚಯಿಸಲ್ಪಟ್ಟಿರುವುದನ್ನು ಕಾಣುತ್ತೇವೆ. ಆದರೆ ಇಲ್ಲಿ ನಂರುಶಿರವರು ಯಾವೊಂದು ಖಸೀದದ ಅನುವಾದದ ಪ್ರಯಾಸಕ್ಕೆ ಕೈ ಹಾಕದೆ, ಸ್ವರಚನೆಯ ಮೂಲಕ ಪರಿಚಯಿಸಿರುವುದು ಶ್ಲಾಘನೀಯ ಕಾರ್ಯ. 

ಅರೇಬಿಕ್ ಭಾಷೆಯ ಪ್ರಾಚೀನ ಕಾವ್ಯ ಪ್ರಕಾರಗಳಾದ ಮಸ್ನವಿ, ಮರ್ಸಿಯಾ, ರುಬಾಯತ್ ನಂತೆಯೇ ಖಸೀದಾ ಸಹ ಪ್ರಮುಖವಾಗಿ ಗುರುತಿಸಲ್ಪಡುತ್ತದೆ. ‘ಖಸೀದಾ’ ಎಂಬುದು ಅರೇಬಿಕ್ ಭಾಷೆಯ ಪದವಾಗಿದ್ದು, ‘ಉದ್ದೇಶಿಸುವುದು’ ಅಥವಾ ‘ಉದ್ದೇಶಪೂರ್ವಕವಾಗಿ’ ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಖಸಿದಾ ಕಾವ್ಯದ ಮುಖ್ಯ ಲಕ್ಷಣಗಳೆಂದರೆ ಒಂದೇ ನಿರ್ದಿಷ್ಟ ವಿಷಯವನ್ನು ಹೊಂದಿರುವಂಥದ್ದು ಹಾಗೂ ಹೋಗಳಿಕೆ/ಮುಖಸ್ತುತಿಯನ್ನು ಒಳಗೊಂಡಿರುವಂಥದ್ದಾಗಿದ್ದು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಕಟ್ಟುವಂತಹ ಖಸೀದಾವನ್ನು ‘ಮಿಥ್ಯಕಾವ್ಯ’ ಎಂತಲೂ ಕರೆಯಲಾಗುತ್ತದೆ.

ಖಸೀದಾ ಕಾವ್ಯ ಆಂಗ್ಲ ಭಾಷೆಯ ಸಂಪರ್ಕದೊಂದಿಗೆ ‘ಓಡ್'(Odd) ಎಂಬ ‘ಪ್ರಗಾಥ’ ಕಾವ್ಯವಾಗಿ ರೂಪಾಂತರಗೊಂಡು ಪ್ರಸಿದ್ಧಿ ಪಡೆಯಿತು. ಮುಖ್ಯವಾಗಿ, ‘ಜಾನ್ ಕೀಟ್ಸ್’ (John Keates) ನ ಪ್ರಗಾಥಗಳ ಮೂಲಕ ಎಂದು ಹೇಳಬಹುದು. ಈ ನಿಟ್ಟಿನಲ್ಲಿ ‘ಓಡ್ ಆನ್ ಎ ಗ್ರೇಶಿಯಸ್ ಅರ್ನ್’ (Odd on a Gracious urn) ಮತ್ತು ‘ಓಡ್ ಆನ್ ಎ ನೈoಟಿಗೇಲ್’ (Odd on a Nightingale) ಮುಖ್ಯವಾದವು. 

ಅರಬ್ಬರಲ್ಲಿ ಸುಮಾರು ಐವತ್ತು ದ್ವೀಪದಿಗಳ ಒಳಗೆ ರಚಿಸಲ್ಪಡುತ್ತಿದ್ದ ಖಸಿದಾ ಪರ್ಷಿಯನ್ ಕವಿಗಳಿಂದಾಗಿ ನೂರು ದ್ವೀಪದಿಗಳ ಗಡಿಯನ್ನು ದಾಟಿತ್ತು ಎಂಬುದು ಅಚ್ಚರಿ ಮೂಡಿಸುವ ಸಂಗತಿಯಾಗಿದೆ. 

‘ಮಣ್ಣಿನ ಕಣ್ಣುಗಳು’ ಎಂಬ ಪ್ರಸ್ತುತ ಖಸೀದಾ ಸಂಕಲನದಲ್ಲಿ ಆರು ಖಸೀದಾಗಳಿದ್ದು, ಪ್ರತಿಯೊಂದು ಖಸೀದವೂ ಇಪ್ಪತ್ತೇಳು ಶೇರ್ಗಳಿಂದ ಐವತ್ನಾಲ್ಕು ಶೇರ್(ದ್ವೀಪದಿ)ಗಳೊಂದಿಗೆ ಅಧ್ಯಾತ್ಮ, ವೈರಾಗ್ಯ, ಪ್ರೇಮ, ವಿರಹದ ವಿಷಯಗಳನ್ನು ಒಳಗೊಂಡಿವೆ.

‘ವ್ಯಕ್ತಿ ಕಲ್ಯಾಣದೊಂದಿಗೆ ಲೋಕ ಕಲ್ಯಾಣ ಮಾಡಿದಿರಿ’
‘ಸಪ್ತಧಾತು ಪಂಚೇಂದ್ರಿಯಗಳನು ದೋಚಯ್ಯ ಪ್ರಭು ನೀ’

ಮೊದಲ ಖಸೀದಾ ಅಲ್ಲಮ ಪ್ರಭುವಿನ ಸ್ತುತಿಯಿಂದ ಕೂಡಿದ್ದು ಅಧ್ಯಾತಿಕ ಒಲವಿನ ನವಿರಾದ ಸ್ಪರ್ಶದ ದಿವ್ಯ ಅನುಭೂತಿಯನ್ನು ಪ್ರಸಾದಿಸಿದರೆ, ಎರಡನೆಯ ಖಸೀದಾ… ‘ಇನಿಯಳಿಲ್ಲದೆ ಒಂಟಿಯಾಗಿ ಇರದಾಗಿದೆ’, ‘ಈ ಬರವಣಿಗೆ ಮುಗಿಯದಲೇ ಇರುಳಾಗಿದೆ’… ಎಂದು ವಿರಹಿ ಭಾವದ ತನ್ಮಯತೆಯಲ್ಲಿ ಮಿಂದೇಳಿಸಿದರೆ, ಮೂರನೆಯ ಖಸೀದಾದಲ್ಲಿ… ‘ಇಷ್ಟು ರಾತ್ರಿಗಳ ಕನಸುಗಳಲಿ ಕಳೆದಿಹೆನು’, ‘ಬಂದರೆ ಮನದ ಬಾಗಿಲನೇ ತೆರೆಸಿ ಬಿಡುವೆ’ ಎಂಬ ಧ್ಯಾನಸ್ಥ ನಿವೇದನೆ ಇದ್ದರೆ, ನಾಲ್ಕನೇಯ ಖಸೀದಾದಲ್ಲಿ… ‘ಇವಳ ನೋಡಿದ ಅವನಿಗೂ ಪ್ರೇಮವಾಯಿತು’, ‘ಪ್ರೀತಿ ನಿವೇದನೆ ಅವಳೇ ತಡೆದಳು ಸಾಕಿ’ ‘ಸಾಕಿ ಪ್ರೇಮದ ಅನುಮೋದನೆಯನ್ನು ಆಸ್ವಾದಿಸಬಹುದು.

ಹೀಗೆ, ಐದನೆಯ ಖಸೀದಾದಲ್ಲಿ’ ‘ಎದೆಯಲಿ ಉಸಿರಾಡುವ ಗಾಳಿ ಪ್ರೀತಿಯೇ ಆಗಿದೆ’ ‘ವಿರಹವನು ತಂಗಾಳಿ ಕೂಡ ತಣಿಸಲು ಸಾಧ್ಯವಿಲ್ಲ’… ಎಂಬ ಆದಮ್ಯ ತುಡುತ, ಮಿಡಿತಗಳ ಪ್ರೇಮ ಸಾಂಗತ್ಯದೊಂದಿಗೆ, ‘ಕೋಪದ ಮಾತುಗಳಾದರೂ ಸರಿ ನೋವಾಗದಂತೆ ತಿಳಿಸುವನು’ ‘ಪ್ರೀತಿಯ ಮಾತುಗಳ ಯಾರಾಡಿದರೂ ಸಹ ಅವರಿಗೆ ಒಲಿಯುವನು’ ಎಂಬ, ಪ್ರೇಮಕ್ಕೆ ಒಲಿಯುವ ಪರಿಯನ್ನು ಆರನೆಯ ಖಸೀದಾದಲ್ಲಿ ಕಾಣಬಹುದಾಗಿದೆ.

ಕನ್ನಡ  ಗಜಲ್ ಕಾವ್ಯ ಕೃಷಿಯಲ್ಲಿ ಪ್ರಭಾವಿ ಗಜಲ್ಕಾರರಾಗಿ ಗುರುತಿಸಿಕೊಂಡಿರುವ ‘ನೂರ್ ಅಹಮದ್ ನಾಗನೂರ್’ರವರು ನೀಡಿರುವಂತಹ ಸಂಗ್ರಹ ಯೋಗ್ಯ, ಮಹತ್ವಪೂರ್ಣ ಮಾಹಿತಿ ಖಸೀದಾ ಕಾವ್ಯದ ಕುರಿತಾದ ಜ್ಞಾನವನ್ನು ಪಡೆಯುವಲ್ಲಿ ಸಹಕಾರಿಯಾಗಿದೆ. ನಂರುಶಿ ರವರು ಪರಿಚಯಿಸಿದ ಖಸೀದಾ ಎಂಬ ಕಾವ್ಯ ಪ್ರಕಾರವನ್ನು ಕನ್ನಡದಲ್ಲಿ ರಚಿಸುವುದರ ಮುಖಾಂತರ ಅದನ್ನು ಬೆಳೆಸುವ, ಕನ್ನಡ ಸಾಹಿತ್ಯಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸುವ  ಜವಾಬ್ದಾರಿ ನಮ್ಮೆಲ್ಲರದಾಗಿದೆ.

ಇಂತಹದ್ದೊಂದು ಮಹತ್ವಪೂರ್ಣ ಪ್ರಯತ್ನಕ್ಕೆ ನಾಂದಿ ಹಾಡಿದ, ಮಿತ್ರ ‘ನಂರುಶಿ’ರವರು ಮತ್ತಷ್ಟು ವಿಭಿನ್ನ ಪ್ರಯೋಗಗಳಿಗೆ ತೆರೆದುಕೊಳ್ಳಲಿ, ಶುಭವಾಗಲಿ ಎಂಬ ಹಾರೈಕೆಗಳೊಂದಿಗೆ…

‍ಲೇಖಕರು Admin

8 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading