ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಮಾತಾಡಿ …

ಎನ್.ಶಂಕರ ಕೆಂಚನೂರ್

ಒಬ್ಬ ಬರಹಗಾರ ಅದರಲ್ಲೂ ವೈಚಾರಿಕ ಬರಹಗಾರ ದಿನವೂ ಬುದ್ಧಿಯ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಾ ಹೋದಂತೆ ತನ್ನ ಭಾಷೆಯನ್ನು ಸರಳಗೊಳಿಸಿಕೊಳ್ಳುತ್ತಾ ಹೋಗಬೇಕು. ಇಲ್ಲದೇ ಹೋದಲ್ಲಿ ಅವನ ಮಾತುಗಳು ಕೇವಲ ಬೌದ್ಧಿಕ ಸರ್ಕಸ್ ಆಗಿ ಉಳಿದುಬಿಡುತ್ತದೆ.

ಕುವೆಂಪು ಲೇಖನವೊಂದರಲ್ಲಿ ನವ್ಯದ ಕುರಿತು ಮಾತನಾಡುತ್ತಾ ಎಲಿಯಟ್ ಬರೆದ ವೇಸ್ಟ್‌ ಲ್ಯಾಂಡ್‌‌ ಕವಿತೆಯನ್ನು ಕುರಿತು ಒಬ್ಬ ಇಂಗ್ಲಿಷ್ ವಿಮರ್ಶಕ ಅದನ್ನು ‘ಬೌದ್ಧಿಕ ವಂಚನೆ’ ಎಂದು ಕರೆದಿದ್ದಾನೆ ಎಂದು ಹೇಳುತ್ತಾ ತಾನು ಅದನ್ನು ಹಲವು ಭಾರಿ ಓದಿ ಅರ್ಥವಾಗದೆ ಕೆಲವು ರೆಫರೆನ್ಸ್‌ಗಳ ಸಹಾಯದಿಂದ ಓದಿದಾಗ ಒಂದು ಒಗಟು ಬಿಡಿಸಿದಷ್ಟು ಸಂತೋವಾಯಿತಷ್ಟೇ ಎನ್ನುತ್ತಾರೆ.

ಇದನ್ನು ನಮ್ಮ ನವ್ಯ ಸಾಹಿತ್ಯ, ಕಲೆಗಳಿಗೂ ಅನ್ವಯಿಸಬಹುದು. ಇವರ ಬರಹಗಳು ಇವರ ತರಹ ಯೋಚಿಸುವ ಬರಹಗಾರರ ಆಚೆಗೆ ತಲುಪುವುದಿಲ್ಲ. ಕಾರಣ ಮತ್ತೆ ಅದೇ ಬೌದ್ದಿಕ ವಂಚನೆ. ಸರಳವಾಗಿ ಹೇಳಬಹುದಾದ್ದನ್ನು ಸುತ್ತಿಬಳಸಿಯೋ ಗೊಂದಲವಾಗಿಸಿಯೋ ಹೇಳುವುದು ಮತ್ತು ಜನ ಸಾಮಾನ್ಯನ ಬುದ್ಧಿಮತ್ತೆಗೆ ಸವಾಲು ಹಾಕುವುದು. ಭಾರತದಂತಹ ಈಗೀಗ ಅಕ್ಷರಗಳಿಗೆ ತೆರೆದುಕೊಳ್ಳುತ್ತಿರುವ ದೇಶದಲ್ಲಿ ಇದು ನಿಜಕ್ಕೂ ಇದು ಬೌದ್ಧಿಕ ವಂಚನೆ ಈ ವಂಚನೆಗೆ ಜನರ ತೆರಿಗೆ ಹಣದಿಂದ ಪ್ರಶಸ್ತಿಗಳನ್ನು ಬೇರೆ ಕೊಡಲಾಗುತ್ತದೆ.

ಇದು ತಥಾಕಥಿತ ಆರ್ಟ್ ಸಿನೆಮಾಗಳಿಗೂ ಅನ್ವಯಿಸುತ್ತದೆ. ಸಿನೆಮಾ ಎನ್ನುವುದೇ ಕಲೆ ಹೀಗಿರುವಾಗ ಜನರು ನೋಡದ ಆದರೆ ಹಿಂದೆ ಇಂತಹದ್ದೇ ಬೌದ್ಧಿಕ ಸರ್ಕಸ್ಸುಗಳನ್ನು ಮಾಡಿ ಸಾಕಷ್ಟು ಪ್ರಶಸ್ತಿ, ಹೆಸರು ಇತ್ಯಾದಿ ಪಡೆದು ನಿವೃತ್ತಿಯಾಗಿರುವ ಒಂದಿಷ್ಟು ಜನ ನೋಡಿ ತಮ್ಮ ಹಾಗೇಯೆ ರೀಲು ಸುತ್ತಿದವರಿಗೆ ಪ್ರಶಸ್ತಿ ಘೋಷಿಸಿದರೆ ಅದು ಕಲಾತ್ಮಕ ಸಿನೆಮಾ.

ದೇಶ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳುತ್ತಿಲ್ಲ ಎಂದು ದೂರುವ ಇವರುಗಳು ಎಂದೂ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಮಾತಾಡುವುದೇ ಇಲ್ಲ. ಇವರ ಹಾಗೆಯೇ ಬೌದ್ಧಿಕ ಸರ್ಕಸ್ ಮಾಡುವವರನ್ನು ಯಾವ್ಯಾವುದೋ ಅನುದಾನವನ್ನು ಬಳಸಿಕೊಂಡು ಸೆಮಿನಾರು, ಚರ್ಚೆ ಇತ್ಯಾದಿ ಹೆಸರಲ್ಲಿ ಪರಸ್ಪರ ಬೌದ್ಧಿಕ ಮೈಥುನದಲ್ಲಿ ತೊಡಗಿ ಕೊನೆಗೆ ಸುಸ್ತಾಗಿ ಜನರಲ್ಲಿ ವೈಚಾರಿಕ ಪ್ರಜ್ಞೆಯಿಲ್ಲ ಎಂಬ ತೀರ್ಮಾನಕ್ಕೆ ಬರುತ್ತಾರೆ. ಆದರೆ ನಾವೆಲ್ಲಿ ಸೋಲುತ್ತಿದ್ದೇವೆ ಎಂದು ಯೋಚಿಸುವುದಿಲ್ಲ.

ಸರಳವಾದ ಭಾಷೆಯಿರುವ ಎಲ್ಲವೂ ಜನರನ್ನು ತಲುಪುತ್ತಿವೆ ಅದು ದೈನಂದಿನ ಧಾರಾವಾಹಿಗಳಿರಬಹುದು, ಜನಪ್ರಿಯ ಸಿನೆಮಾ ಇರಬಹುದು ಅವು ಜನರನ್ನು ತಲುಪಲು ಮೂಲ ಕಾರಣ ಅದು ಜನರ ಭಾಷೆಯಲ್ಲಿ ಮಾತನಾಡುವುದು. ಈ ಸತ್ಯ ಅರಿತವರು ಈಗಾಗಲೆ ಜನಪ್ರಿಯ ಮಾದರಿಗಳನ್ನು ಬಳಸಿ ತಮ್ಮ ಚಿಂತನೆಗಳನ್ನು ದೇಶಾದ್ಯಂತ ಹರಡಿದ್ದಾರೆ.

ಅದಕ್ಕೆ ಯಕ್ಷಗಾನ ಸಣ್ಣ ಉದಾಹರಣೆ. ಕರಾವಳಿಯಲ್ಲಿ ಇಂದು ಯಕ್ಷಗಾನ ಪಡೆದಿರುವ ರಾಜಕೀಯ ಆಯಾಮವನ್ನು ನಮ್ಮ ಬುದ್ಧಿಜೀವಿಗಳ ವರ್ಗ ಕಲ್ಪಿಸಿಕೊಳ್ಳಲು ಕೂಡಾ ಸಾಧ್ಯವಿಲ್ಲ. ಸದಾ ಪ್ರಶ್ನಿಸುವುದನ್ನೇ ಉದ್ಯೋಗ ಮಾಡಿಕೊಂಡು ಪ್ರಶ್ನಿಸಿಕೊಳ್ಳಲು ಮರೆತಿದ್ದರ ಪರಿಣಾವಿದು.

‍ಲೇಖಕರು Avadhi GK

16 March, 2018

5 Comments

  1. Lalitha siddabasavayya

    ವಾಹ್ , ಸರಿಯಾಗಿ ಹೇಳಿದ್ದೀರಿ.

  2. Nasrin

    ಅಕ್ಷರಶಃ ಸರಿಯಾದ ಅಭಿಪ್ರಾಯ. …..

  3. Ravikumar

    ಟಾಲ್ ಸ್ಟಾಯ್ ಅವರು ‘ಕಲೆ ಎಂದರೇನು’ ಎಂಬ ಪುಸ್ತಕದಲ್ಲಿ ಇದೇ ಅಭಿಪ್ರಾಯ ವನ್ನು ವ್ಯಕ್ತಪಡಿಸಿದ್ದಾರೆ.

    ಅದು ಲೇಖಕನ ಕಷ್ಟ.

    ಬರಹ ತೆಳುವಾದರೆ ಸಂಪಾದಕರಿಂದ ತಿರಸ್ಕೃತವಾಗುತ್ತದೆ.

    ಗಟ್ಟಿಯಾದರೆ ಮಾಮೂಲು ಓದುಗನ ಅರಿವಿಗೆ ನಿಲುಕುವುದಿಲ್ಲ.

    ಬೆಳಗೆರೆ ಕೃಷ್ಣಶಾಸ್ತ್ರಿಗಳು ಒಮ್ಮೆ ಹೇಳಿದರು, ‘ನಿಮಗೆ ಅರ್ಥ ಆಗಲಿ ಎಂಬ ಕಾರಣಕ್ಕೆ ನಾನು ನನ್ನ ಮಾತುಗಳನ್ನು ಸರಳೀಕರಿಸುವುದಿಲ್ಲ. ಆಗ ನಿಮಗೆ ಬರೀ ನೀರು ಹಾಕಿದ ಮಜ್ಜಿಗೆ ಕುಡಿಸಿದಂತೆ ಆಗುತ್ತದೆ. ನನ್ನ ಮಾತುಗಳ ಅರ್ಥವನ್ನು ನೀವು ಕಂಡುಕೊಳ್ಳಲು ಪ್ರಯತ್ನಿಸಿದಾಗಲೇ ನಿಮ್ಮ ಬುದ್ಧಿಮತ್ತೆ ಬೆಳೆಯುವುದು.’

    • ravi sanikop

      ಬಹಳ ಚನ್ನಾಗಿ ವಿಷದ ಪಡಿಸಿದ್ದೀರಿ
      ಧನ್ಯವಾದಗಳು

  4. HAJART ALI DEGINAL

    ಇಂದಿನ ಕಾವ್ಯ ಮತ್ತು ಚಿತ್ರಕಲೆಗಳಲ್ಲಿ ಈ ಭೌದ್ಧಿಕ ವಂಚನೆ ಢಾಳಾಗಿ ಕಾಣುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading