ಶ್ರೀದೇವಿ ಕೆರೆಮನೆ
ಒಳ್ಳೆಯ ಕವನ ಹೇಗಿರಬೇಕು? ಶಬ್ಧಗಳ ಲಾಲಿತ್ಯದಲ್ಲಿ ತೇಲಾಡುತ್ತಿರಬೇಕೇ? ಚಮತ್ಕಾರಿಕ ಶಬ್ಧಗಳ ವೈಭವದಲ್ಲಿ ಕಂಗೊಳಿಸಬೇಕೆ? ಪಡೆದ ರಾಜಾಶ್ರಯದಲ್ಲಿ ಆಶ್ರಯದಾತನನ್ನು ಹಾಡಿ ಹೊಗಳಬೇಕೆ? ನಮ್ಮ ಧರ್ಮವನ್ನು ಪ್ರಚಾರ ಮಾಡಲು ಬಳಸಬೇಕೆ? ಸಮಾಜದ ಒಳ್ಳೆಯ ಅಂಶಗಳನ್ನು ಮಾತ್ರ ಹೊಗಳಬೇಕೇ? ಅಥವಾ ಸಮಾಜದ ಕುಂದು ಕೊರತೆಗಳನ್ನು ಬಿಂಬಿಸಬೇಕೇ? ಬಡವರ ನೋವಿಗೆ ಸ್ಪಂದಿಸಬೇಕೆ? ಸಮಾಜಮುಖಿಯಾಗಿರಬೇಕೇ? ಹೌದು ಒಳ್ಳೆಯ ಕಾವ್ಯ ಹೇಗಿರಬೇಕು ಎನ್ನುವುದಕ್ಕೊಂದು ಮಾದರಿ ಇಲ್ಲಿದೆ.ಕ.ಸಾಪ.ದ ಸಮೀರವಾಡಿ ದತ್ತಿನಿಧಿ ಪ್ರಶಸ್ತಿ ಪಡೆದ ತತ್ರಾಣಿ’ಯ ಬಸವರಾಜ ಹೂಗಾರರ ‘ಹಾದಿ ಜಂಗಮ’ಉತ್ತಮ ಕಾವ್ಯ ಹೇಗಿರಬೇಕು ಎನ್ನುವುದಕ್ಕೊಂದು ನಿದರ್ಶನವಾಗಿ ನಮ್ಮೆದುರಿಗೆ ನಿಂತಿದೆ.
ಕವನ ಸಂಕಲನವು ಕಾಮಾಟಿಪುರದ ಜಗುಲಿಯ ಮೂಲಕ ತೆರೆದು ಕೊಳ್ಳುತ್ತ ಸಾಮಾಜಿಕವಾಗಿ ಹೊರಗಿಟ್ಟ ಜಗತ್ತೊಂದರ ನೋವನ್ನು ನಮ್ಮೆದುರು ಪದರ ಪದರವಾಗಿ ತೆರೆದಿಡುತ್ತದೆ.
ನಮ್ಮ ಎದೆ ಹೊತ್ತ ಹೃದಯ
ಮಿಡಿವ ಕರಳು
ಉರಿವ ಉಡಿ
ಚಡಪಡಿಸುವ ಜೀವ
ನಿಮ್ಮ ತಾಯಂದಿರದ್ದೆ
ಹೌದು, ಕಾಮಾಟಿಪುರದಲ್ಲಿ ದೇಹ ನೀಡಿ, ನಿಮ್ಮನ್ನು ಸುಖದ ಸ್ವರ್ಗಕ್ಕೆ ಏರಿಸುವವಳಿಗಿರುವ ಹೃದಯವಷ್ಟೇ ಏಕೆ, ದೇಹ ಕೂಡ ನಮ್ಮ ತಾಯಿಗಿರುವಂತಹುದ್ದೇ. ಆದರೂ ಆಕೆಯ ದೇಹದ ಮೇಲಾಗುವ ದಾಳಿ, ಉಗುರ ಗುರುತು, ಗಾಯಗಳು ನಮ್ಮನ್ನು ತಟ್ಟುವುದಿಲ್ಲ. ಯಾಕೆಂದರೆ ಅದರ ಉತ್ತರವನ್ನೂ ಆಕೆಯೇ ಹೇಳುತ್ತಾಳೆ…
ನೀವು ಕೇಳುವ ಪುರಾವೆಗಳನ್ನು
ನೀಡೋಣವೆಂದರೆ
ನಮ್ಮ ಗರ್ಭಕ್ಕೆ ಮಾತ್ರ ಕನಸಿಲ್ಲ
ಮನದ ಮೈಲಿಗೆ ತೊಳೆದು
ಕೂಡಿ ಬದುಕುವ ಬಾಳು
ನಮ್ಮೆದೆಯ ಕಡಲಿಗೆ ವ್ಯಾಪ್ತಿಯಿಲ್ಲ
ನೀವು ಅಳೆಯುವ ಸೇರಿಗೆ ನೀವೆ ಪ್ರಮಾಣು.
ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಬೇಕು ಎಂಬ ಕೂಗು ಎಲ್ಲೆಡೆ ಎದ್ದಿರುವ ಈ ಸಂದರ್ಭದಲ್ಲಿ ಈ ಮಾತು ನಿಜಕ್ಕೂ ಅರ್ಥಪೂರ್ಣವೆನಿಸುತ್ತದೆ. ಇದರ ಜೊತೆ ಜೊತೆಗೇ ಮಂಗಳಮುಖಿಯರ ಬಗೆಗೂ ಹೇಳುತ್ತಾರೆ.
ಸರಕಾರದ ಅರ್ಜಿಯಲಿ
ನಮ್ಮ ಹೆಸರಿಲ್ಲ
ಲಿಂಗ ಯಾವ ಕಾಲಮ್ಮು
ಬಸ್ಸಿನಲಿ ಯಾವ ಸಾಲು?
ರೇಷನ್ನು, ಶಾಲೆ, ಶೌಚಾಲಯ
ದಿಕ್ಕು ದಿಕ್ಕಿಗೂ ಗೊಂದಲ
ಎಲ್ಲಿಯೂ ಸಲ್ಲದ ಮೂರನೆಯ ಲಿಂಗದವರ ಗೊಂದಲವನ್ನು ಈ ಕವನ ಸರಿಯಾಗಿ ಹಿಡಿದುಕೊಟ್ಟಿದೆ.
ಒಳಗೆ ಸುಳಿವಾತ್ಮನ ಬೆನ್ನು ಹತ್ತಿದ ಬಾಲೆಯರು
ಸೀರೆ ಸೆರಗಲ್ಲೆ ಸುಖ ಕಾಣುವ ಸಂತೃಪ್ತೆಯರು
ಎಂದು ಕೊನೆಗೊಳ್ಳುವ ಕವನವು ಇಡೀ ಕವನದ ಆಶಯವನ್ನು ಎರಡೇ ಸಾಲಿನಲ್ಲಿ ಹೇಳುತ್ತಿದೆ.
ಇಡೀ ಸಂಕಲದ ಕವಿತೆಗಳು ಒಂದಲ್ಲಾ ಒಂದು ರೀತಿಯಲ್ಲಿ ಸಮಾಜಮುಖಿಯಾಗಿರುವುದೇ ಈ ಸಂಕಲನದ ಯಶಸ್ಸಿಗೆ ಕಾರಣ. ಕವಿ ಎಲ್ಲಿಯೂ ಕೂಡ ಸಂಯಮವನ್ನು ಕಳೆದು ಕೊಳ್ಳುವುದಿಲ್ಲ. ಎಲ್ಲಿಯೂ ಸಲ್ಲದ ಆಕ್ರೋಶವಿಲ್ಲ. ಆಕ್ರೋಶವನ್ನೂ ನುಂಗಿ ವಿಷಕಂಠನಾಗುವ ಪರಿಯನ್ನು ಇಲ್ಲಿಯೇ ಕಲಿಯಬೇಕು. ಆಕ್ರೋಶವನ್ನೂ ಹಿಡಿದಿಡುವ ಈ ಸಾಲುಗಳನ್ನು ನೋಡಿ. ನಕ್ಸಲೈಟ್ ಸಮಸ್ಯೆಯ ಇಂಚಿಂಚೂ ಕಣ್ಣೆದುರು ಸಿನೆಮಾ ಸುಳಿದಂತೆ ಸುಳಿದು ಹೋಗುವಂತೆ ಮಾಡಲು ಕವಿ ಯಶಸ್ವಿಯಾಗಿದ್ದಾರೆ.
ಇಲ್ಲಿ ಎರಡೂ ನಿಷಿದ್ಧ
ಕಾನೂನು ಬಾಹಿರ
ಪಾರ್ವತಿಗಾಗಿ ದುಃಖಿಸುವುದು
ಹಾಜಿಮಾಳಿಗಾಗಿ ಅಳುವುದು
ಹೌದು, ಯಾವುದೋ ಕಾರಣಗಳಿಗಾಗಿ ನಕ್ಸಲೈಟ್ ಆದ ಹಳ್ಳಿಯ ಬಡ ಯುವಕ ಯುವತಿಯರ ಹೆಸರನ್ನು ಅಪ್ಪಿ ತಪ್ಪಿ ಉಚ್ಛರಿಸುವುದೂ ಈಗ ಪಾಪ. ಆದರೆ ಕವಿ ಅವರನ್ನೇ ಕೇಳುತ್ತಾರೆ,
ಬಂದೂಕು ಕನಸುಗಳಿಗೆ
ಬಣ್ಣ ಮೂಡಿಸಿತೆ ಹುಡುಗಿಯರೇ?
ಎಲ್ಲಿ ಹೋದಿರಿ ಸತ್ತು
ನಿಂತು ನಮ್ಮೊಳಗೆ ಹೋರಾಡಬಹುದಿತ್ತು?
ಎನ್ನುತ್ತ ತಮ್ಮೆಲ್ಲ ಸಮಸ್ಯೆಗಳಿಗೆ ಬಂದೂಕೊಂದೇ ದಾರಿ ಎಂದು ನಂಬಿದ ಆ ಯುವತಿಯರಿಗಾಗಿ ಮರುಗುತ್ತಾರೆ.
ತೆಲಂಗಾಣದ ಸಮಸ್ಯೆ ಹಾಗೂ ಅಲ್ಲಿನ ನಿರಾಶ್ರಿತರೂ ಕವಿಯ ಕಣ್ಣಿಂದ ತಪ್ಪಿಸಿಕೊಳ್ಳುವುದಿಲ್ಲ.
ಅಲ್ಲಿ ಕೆಟ್ಟ ಕಲ್ಯಾಣದ ಕೋಟೆಯಲಿ
ಗಟಾರದ ನೀರು
ಬೀದಿ ಬೀದಿಯಲಿ
ಬೋದಿವೃಕ್ಷದ ನೆರಳು
ಎನ್ನುವ ಕವಿ ಆ ಜನರ ಅತಂತ್ರ ಬಾಳಿಗಾಗಿ ಕೊರಗುತ್ತಾರೆ.
ಹರಿವ ನದಿಗಳೇ
ನೀವು ಹೇಳಿ
ನಿಮಗೇಕೆ ಬಯಲುಗಳ ಮೇಲೆ
ಅಷ್ಟೊಂದು ಮುನಿಸು
ಎನ್ನುವ ಸಾಲು ತೆಲಂಗಾಣದ ಜನರನ್ನಷ್ಟೇ ಉದ್ದೇಶಿಸಿರದೇ ಆಲಮಟ್ಟಿ ಡ್ಯಾಂಗೋಸ್ಕರ ತನ್ನೂರು, ಮನೆ, ಮಠ ಎಲ್ಲವನ್ನೂ ಕಳೆದುಕೊಂಡ ತನ್ನೂರಿನ ಜನರ ಬದುಕನ್ನು ಕಸಿದ ತುಂಗಭದ್ರೆಯನ್ನೂ ಉದ್ದೇಶಿದಂತೆ ಕಾಣುತ್ತದೆ. ಹೀಗಾಗಿಯೇ ಎಲ್ಲವನ್ನೂ ಕಳೆದುಕೊಂಡು ಪುನರ್ವಸತಿ ಕ್ಯಾಂಪ್ನಲ್ಲಿ ಬದುಕುತ್ತಿರುವ ಊರ ನಿರ್ಗತಿಕರಿಗೆ ಸಂಕಲನವನ್ನು ಅಪರ್ಿಸಿದ್ದರಲ್ಲಿ ಯಾವುದೇ ಕೃತಕತೆ ಕಾಣುವುದಿಲ್ಲ.
‘ಜೋಗಿ’ ಕೇವಲ ಊರು ಸುತ್ತುವ ಅಲೆಮಾರಿಯಲ್ಲ. ಆತ ಕವಿಯ ಅಂತರಂಗದ ಪ್ರಜ್ಷೆ. ಬಯಲನ್ನೇ ಆಲಯವನ್ನಾಗಿಸಿದ, ಮನೆಯನ್ನೂ ಬಯಲಾಗಿಸಿದ ಜೋಗಿ ಕವಿಯನ್ನು ತೀವೃವಾಗಿ ಕಾಡಿದ್ದಕ್ಕೆ ಕವನ ಸಂಕಲದಲ್ಲಿ ಆತ ಅಲ್ಲಲ್ಲಿ ಸುಳಿಸುಳಿದು ಹೋಗುವುದೇ ಸಾಕ್ಷಿ. ಊರೂರು ತಿರುಗುವ ಜೋಗಿ ಇಡೀ ವಿಶ್ವವನ್ನೇ ತನ್ನೊಳಗೆ ತುಂಬಿಕೊಂಡವನು.
ಕೊರಳ ಕಾವಿಯ ಬಣ್ಣ
ಹಸಿರು ಪೇಟದ ಕಣ್ಣ
ನಮಾಜೊ ವಚನವೋ
ಲಿಂಗವೋ ಅಲ್ಲಮನೋ
ಮುಂದೆ ನಡೆಯಪಾ ತಂದೆ
ಮನುಷ್ಯರಿದ್ದಾರೆ ಅಲ್ಲಿ
ಬಾಕಿ ಇದೆ ಭೂಮಿ (ಜೋಗಿ ಜಂಗಮನ ಹಾದಿ)
ಎಂದು ಮನುಷ್ಯರ ಹುಡುಕುವ ಮನುಷ್ಯನಿಗೆ ಕವಿ ಆಧರ್ೃತೆಯಿಂದ ಹೇಳುತ್ತಾರೆ.
ಹಾಡು ಊರಗಲ ಸುತ್ತಿ
ಭೂಮಿ ಆಕಾಶಗಳ
ಕೈ ಹಿಡಿದು
ಹಂಗೂ ಹಿಂಗೂ
ಬಯಲನರಸುತ್ತ ಹೊರಟ
ಹಾದಿ ಹೆಜ್ಜೆಗೆ
ಗುರುತಿನ ಹಂಗು (ಕಲ್ಯಾಣದ ಜೋಗಿ)
ಎಂದು ಕಲ್ಯಾಣದ ಜೋಗಯ್ಯ ಬಸವಣ್ಣನ ಕುರಿತು ಹೇಳುವ ಹೂಗಾರರು ಬಳಸುವ ಭಾಷೆ ನಿಜಕ್ಕೂ ಪ್ರೌಢತೆಯಿಂದ ಕೂಡಿದ್ದು. ಭಾಷೆಯನ್ನು ಬೇಕಾ ಬಿಟ್ಟಿ ಬಳಸದೇ ಅದಕ್ಕೊಂದು ತೂಕ ತಂದುಕೊಡುವ ಬಸವರಾಜ ಹೂಗಾರರಿಗೆ ಭಾಷೆ ಮನಸಸ್ಸನ್ನೂ ಪ್ರತಿನಿಧಿಸುವ ಕನ್ನಡಿಯಾಗಿ ಕಂಡಿದೆ. ಹಾಗೆಂದೇ ‘ಹರಿದ ಜಂಗಮನ ಜೋಳಿಗೆಯ ತುಂಬ ಬಯಲ ಬೀಜಗಳು’ ಎನ್ನುತ್ತಾರೆ. ಊರೂರು ಅಲೆವ ಜೋಗಯ್ಯ ಬಯಲ ತುಂಬ ಬದುಕಿನ ಬೀಜಗಳನ್ನು ಚೆಲ್ಲುತ್ತ ಸಾಗುವ ಚಿತ್ರಣ ಅದೆಷ್ಟು ಸೊಗಸು.
ಹಂಗು ತೊರೆದ ಜೋಗಿ ಹಾಡಿಗೆ
ದಿಕ್ಕು ದಿಕ್ಕಿಗೂ ಮಾರ್ಗ
ಬೆಳಕಿಗೇಕೆ ಬೆಳಕಿನ ಹಂಗು? (ಕಲ್ಯಾಣದ ಜೋಗಿ)
ಎನ್ನುತ್ತಾರೆ. ಹೀಗಾಗಿ ಜೋಗಿ ಕೇವಲ ಒಂದು ವ್ಯಕ್ತಿಯಾಗಿ ಮಾತ್ರವಿರದೇ ನಮ್ಮೊಳಗಿನ ಮನಸ್ಸಾಗುತ್ತಾನೆ.
‘ತುಂಬಾ ಕಷ್ಟ ಕಣೊ ಮನುಷ್ಯನಾಗುವುದು’ ಎನ್ನುವ ಕವಿಗೆ ಮನಷ್ಯನಾಗುವತ್ತ ಸಾಗುವ ಹಾದಿಯ ಕಷ್ಟದ ಅನುಭವವಿದೆ. ಹೀಗೆಂದೇ ‘ತುಳಿದ ಮುಳ್ಳುಗಳ ಲೆಕ್ಕ ಇಟ್ಟಿಲ್ಲ ನಾನು’ ಎನ್ನುತ್ತಾರೆ. ಅದಕ್ಕಾಗೇ
ಕತ್ತು ಹಿಚುಕಿ ಹಿಡಿದರೂ
ಮಾತುಗಳು ಉಳಿದುಕೊಂಡಿವೆ
ನನ್ನ ಪಾದಗಳು ಹತ್ತು ಹದಿನೆಂಟು
ಬಿಂದಿಗಳಿಗೆ ಹಣೆ ಹಚ್ಚಿವೆ
…………………….
ಎಷ್ಟೊಂದು ಸಾರಿ ತಿಕ್ಕಿ ತಿಕ್ಕಿ
ತೊಳೆದರೂ ಉಳಿದೇ ಉಳಿವ
ಎದೆಯ ನಂಜು
ಬಿಟ್ಟಿಲ್ಲ ನಾನು ಬೇತಾಳನ ಹಾಗೆ
ಬೆನ್ನಟ್ಟಿ ಹೊರಟ ನನಗೆ
ಮನುಷ್ಯನಾಗುವ ಹಠ
ಆದರೆ ತುಂಬಾ ಕಷ್ಟ ಕಣೋ
ಮನುಷ್ಯನಾಗುವುದು
ತುಂಬಾ ಕಷ್ಟ.. (ಉರಿವ ಎದೆಯಲ್ಲಿ ಉಳಿದ ಪ್ರಶ್ನೆ)
ಎಂದು ಹೇಳುತ್ತಾರೆ. ಹೀಗಾಗಿಯೇ ಹೂಗಾರರಿಗೆ ಎಲ್ಲರ ಮೇಲೂ ಪ್ರೀತಿ ವಿಶ್ವಾಸವಿದೆ. ನಂಬಿಕೆಯಿದೆ. ಕಾಯಕದಲ್ಲಿ ತೊಡಗಿರುವ ಪ್ರತಿಯೊಬ್ಬನಲ್ಲಿಯೂ ದೇವರನ್ನು ಕಾಣುವ ಒಳ್ಳೆಯ ಮನಸ್ಸಿದೆ.
ಮೆಲ್ಲಗೆ ಕಾಲು ಎತ್ತಿ
‘ತಿಣುಕಿ ತಿಣುಕಿ’ ಎನ್ನುತ್ತಲೇ
ಪಾತ್ರೆಯಲಿ ಹಾಕಿಸಿಕೊಂಡು
ಮೃದುವಾಗಿ ಅರಳೆಯಿಂದ ಒರೆಸಿ
ಮೆಲ್ಲಗೆ ಹೋದನವ
ದೇವರುಗಳ ದೇವ
ನನ್ನ ಸಂಬಂಧಿಕ (ದವಾಖಾನೆಯ ದೇವರು)
ಎಂದು ದವಾಖಾನೆಯಲ್ಲಿ ಆಯಾ ಕೆಲಸ ಮಾಡುವಾತನಲ್ಲಿಯೂ ದೈವತ್ವವನ್ನು ಕಾಣುತ್ತಾರೆ. ಅದಕ್ಕಿಂತ ಹೆಚ್ಚಾಗಿ ಇಲ್ಲಿ ಗಮನಿಸ ಬೇಕಾದ ಮತ್ತೊಂದು ಮುಖ್ಯ ಅಂಶವಿದೆ. ಇದ್ದ ಬಿದ್ದದ್ದನ್ನೆಲ್ಲ ಹಸಿ ಹಸಿಯಾಗಿ ಹೇಳಿ ದಿಕ್ಕೆಡಿಸಿ, ವಾಕರಿಕೆ ಹಚ್ಚುವ, ಮತ್ತು ಎಲ್ಲವನ್ನೂ ಕವನ ಎನ್ನುವ ಹೆಸರಿನಲ್ಲಿ ತೆರೆದಿಟ್ಟು ಬಿಡಬೇಕು ಎನ್ನುವ ಇಂದಿನ ಅಬ್ಬರದ ಕಾವ್ಯಲೋಕದಲ್ಲಿ ಯಾವ ಶಬ್ಧವನ್ನೂ ಬಳಸದೇ ಹೇಳಬೇಕಾಗಿದ್ದನ್ನು ಅತ್ಯಂತ ನಿಖರವಾಗಿ ಹೇಳುವ ಕಲೆಯನ್ನು ರೂಢಿಸಿಕೊಂಡ ಬಸವರಾಜ ಹೂಗಾರರ ಕವಿತ್ವಕ್ಕೆ ತಲೆ ಬಾಗದೇ ಇರಲು ಸಾಧ್ಯವೇ ಇಲ್ಲ. ಬಹುಶಃ ಅವರನ್ನು ಹತ್ತಿರದಿಂದ ಬಲ್ಲ ಯಾರಿಗೂ ಇದು ಅಚ್ಚರಿ ಎನ್ನಿಸುವುದಿಲ್ಲ. ಆಡಳಿತಾತ್ಮಕವಾಗಿ ತುಂಬಾ ನಿಷ್ಟುರಿಯಾಗಿರುವ ಈ ಅಧಿಕಾರಿಯ ಮಾತು ಎಷ್ಟು ಮೃದುವಾಗಿರುತ್ತದೆಯೋ ಅಷ್ಟೇ ಖಡಾಖಂಡಿತವಾಗಿರುತ್ತದೆ ಅವರ ಕವನಗಳಂತೆ.
ಕ್ರಿಸ್ತನ ನೆಪದಲ್ಲಿ
ಭಾನುವಾರಕ್ಕೊಮ್ಮೆ
ಚಚರ್ಿನ ಅಂಗಳದಲ್ಲಿ
ಕುಲುಕುಲು ನಗೆ ಅರಳುತ್ತಿದ್ದರೆ
ಚಚರ್ುಗಳು ಏಳಲಿ ಬಿಡಿ.
ಅಲ್ಲಾನ ನೆನಪಲ್ಲಿ
ಶುಕ್ರವಾರಕ್ಕೊಮ್ಮೆ ಮಸೀದಿಯಂಗಳದಲ್ಲಿ
ಧ್ಯಾನ ಎದೆ ತುಂಬುತ್ತಿದ್ದರೆ
ನಮಾಜು ಮಾಡಲಿ ಬಿಡಿ
ಗುಡಿಯಲ್ಲಿ ಹಚ್ಚಿಟ್ಟ ಊದನ ಕಡ್ಡಿ
ಮನಸ್ಸೆಲ್ಲ ಸ್ವಚ್ಛವಾಗುತ್ತಿದ್ದರೆ
ಗುಡಿಗಳನ್ನು ಕಟ್ಟಲಿ ಬಿಡಿ
ಚಚರ್ು ಮಸೀದಿ ಮಂದಿರ
ಏಳಲು ಬಿಟ್ಟು
ಅವು ಬೆಂಕಿ ಹಚ್ಚುವ ತಾಣಗಳಾದರೆ ಮಾತ್ರ
ಅವೆಲ್ಲವುಗಳನ್ನು ಬೀಳಿಸಿ ಬಿಡಿ (ಬಿನ್ನಹ)
ಎಂದು ನಿಷ್ಟುರವಾಗಿ ಹೇಳುವುದೇ ಇದಕ್ಕೆ ಸಾಕ್ಷಿ.
ಆದರೂ ಅವರ ಆಂತರ್ಯ ಮಾತ್ರ ತುಂಬಾ ಮೃದು. ಬಡವರ ಕುರಿತಾದ ಅವರ ಕಾಳಜಿ ನಿಜಕ್ಕೂ ಇಡೀ ಸಂಕಲನದಲ್ಲಿ ಅಲ್ಲಲ್ಲಿ ಕಾಣಿಸಿಕೊಂಡು ಕಣ್ಣಂಚನ್ನು ತೇವಗೊಳಿಸುತ್ತದೆ.
ಪರತ್ಪಡೆಯಲಾರದ ಹಾಗೆ
ಎಂದೋ ನಾವು ನಿದ್ದೆಗಳನು
ಮಾರಿ ಬಿಟ್ಟಿದ್ದೇವೆ
………………..
ಉಸಿರಾಡುವ ಗಾಳಿಗೆ
ಅಡ್ಡಾಡುವ ನೆಲಕ್ಕೆ
ಕುಡಿಯುವ ನೀರಿಗೆ
ದಿನ ದಿನ
ಇಲ್ಲಿ ಗೆರೆ ಕೊರೆಯಲಾಗುತ್ತದೆ
ನಮ್ಮ ನಡಿಗೆಯೂ ಕುಗ್ಗಿ ಹೋಗಿದೆ ಈಗ
……………………………………….
ನಾಳೆ ಹಸ್ತಲ ದಾಟಿ ಹೋಗುವ
ನಮ್ಮ ಹೆಣಕ್ಕೆ
ಅಂಗೈಯಗಲದ ಗೋರಿಯಾದರೂ
ಇದೆ, ಸಮಾಧಾನವಿದೆ ನಮಗೆ
ದಯವಿಟ್ಟು ನಮ್ಮದೊಂದು ವಿನಂತಿ
ಆ ನೆದ ಮೇಲೆಯೂ
ನಿಮ್ಮ ಧ್ವಜ ನೆಡಬೇಡಿ (ಕೋರಿಕೆ)
ಎನ್ನುವ ಕವಿತೆ ಏಕಕಾಲದಲ್ಲಿ ಬಡವರ ಧ್ವನಿಯಾಗಿಯೂ ಜೊತೆ ಜೊತೆಗೆ ನಕ್ಸಲೈಟ್, ಭಯೋತ್ಪಾದನೆಯಿಂದ ನೊಂದ ಅಮಾಯಕರ ಒಡಲಾಳದ ಧ್ವನಿಯಾಗಿಯೂ ಕೇಳಿಸುತ್ತದೆ.
ಎದೆಯ ತಿದಿಯನು ಒತ್ತಿ
ಮಣ್ಣಿಗೂ ಜೀವ ಕೊಟ್ಟವರು
ಬಸಿದ ಬೆವರ ಪಾತ್ರೆಯಲಿ
ಈ ಲೋಕ ಸಲುಹಿದವರು (ನದಿ ಹರಿಯದ ಊರು)
ನೋವೇ ನೆಮ್ಮದಿ
ಕಿಚ್ಚಿಟ್ಟ ಬೆಂಕಿಯಲಿ
ಬೆಂದ ಬದುಕಿಗೆ
ಮಿಡಿವ ಮನದ
ಮೂರೆಳೆಯ ತಂತಿ
ಬದುಕು ಯಾರೋ ಬರೆದ ಪದ್ಯ
ನಾನು ಇನ್ನಾರದೋ ಸಾಲು…. (ಅರ್ಧ ಪದ್ಯ)
ಯಾರೋ ಕಟ್ಟಿದ ಉಸುಕು
ನದಿಗೆ ಗೊತ್ತಿಲ್ಲದಂತೆ ಹರಿವ ನೀರು
ಯಾವಾಗ ಬಂತೋ ಈ ಊರಿಗೆ (ಬೇಲಿಗೆ ಕಟ್ಟಿದ ಚಿತ್ರಪಟ)
ಹರಿದ ಹಂಗಿನ ಉಡಿಯ ತುಂಬ
ಋಣದ ಬೀಜಗಳು
ಅದೇ ಉಸಿರಿನ ಹೂಗಳು
ಕಾಯ ಕುಂಚ ನೆತ್ತರು
ಅದೇ ಮೌನ (ಅಂಗ ತೊರೆದಿದೆ ಸೊಲ್ಲು)
ಇಲ್ಲೆಲ್ಲ ನೋವು ಕವಿತೆಯ ಒಳೊಗೊಳಗೇ ಹರಳುಗಟ್ಟಿದ್ದರೂ ಅದರ ಮುಂದಿನ ಸಾಲುಗಳು ಮತ್ತೆ ಜೀವನ್ಮುಖಿಯಾಗುವ ಮೂಲಕ ಇಡೀ ಕವನ ಸಂಕಲನ ಎಲ್ಲಿಯೂ ವಿಮುಖತೆಯ ತುತ್ತ ತುದಿ ತಲುಪದಂತೆ ಎಚ್ಚರವಹಿಸಿದೆ. ಸಂಕಲನಕ್ಕೊಂದು ಜೀವ ತಂದಿವೆ. ಅದಕ್ಕೆಂದೇ ಕವಿ,
ಜನಜಂಗುಳಿ ತುಂಬಿದ
ರಸ್ತೆ ನನ್ನದೇ ರಸ್ತೆಯಲ್ಲಿ ಬಸ್ಸಿಗಾಗಿ ಕಾದು
ಸೋತು ಕುಳಿತಾಕೆ ನನ್ನ ತಾಯಿ ( ನಂಬಿಕೆ)
ಎನ್ನುತ್ತಲೇ ನನಗೆ ಬೀದಿಗಳ ಬಗ್ಗೆ ನಂಬಿಕೆಯಿದೆ. ಎಂದು ಆಶಾಭಾವ ವ್ಯಕ್ತಪಡಿಸುತ್ತಾರೆ. ಕೊನೆಯದಾಗಿ ಮುಗಿಸುವ ಮೊದಲು ನನ್ನನ್ನು ತುಂಬಾ ಕಾಡಿದ ಈ ಕವಿತೆಯ ಬಗ್ಗೆ ಹೇಳದೇ ಇರಲಾರೆ.
ಈ ನದಿಗಳಿಗೆ ಒಂದಿಷ್ಟು
ಕನಸುಗಳಿವೆ
ಹರಿಯುವುದರಲ್ಲಿಯೇ
ಅವಕ್ಕೆ ಸುಖ
ಸುಖದಲ್ಲಿ ಅವುಗಳ ಕನಸುಗಳ
ಸಾಕಾರ
ಆದರೆ ನಾವು ಆಣೆಕಟ್ಟು ಕಟ್ಟಿ
ಅವುಗಳನ್ನು ಗಭರ್ೀಕರಿಸಿದೆವು
ಈಗ ನೋಡಿ
ಎಲ್ಲಿ ನೋಡಿದರಲ್ಲಿ
ನಸರ್ಿಂಗ್ ಹೋಮ್ಗಳು
ಅಬಾರ್ಶನ್ ಸೆಂಟರ್ಗಳು (ಅರ್ಥವಿಲ್ಲದ ಕವಿತೆ)
ಪ್ರತಿಸಲ ಓದಿದಾಗಲೂ ಹೊಸ ಹೊಸ ಅರ್ಥ ಕೊಡುವ ಪ್ರತಿ ಓದುಗನಿಗೂ ಬೇರೆಯದ್ದೇ ಅರ್ಥ ನೀಡುವ ಕವನಕ್ಕೆ ನಾನು ವಿವರಣೆ ನೀಡಲಾರೆ. ಸಂಕಲನದ ತುಂಬಾ ಅಲ್ಲಲ್ಲಿ ಹರಡಿರುವ ಇಂತಹ ನುಡಿ ಚಿತ್ರಗಳನ್ನು ಓದಿಯೇ ಆಸ್ವಾದಿಸಬೇಕು. ಆದರೂ ಕೆಲವು ಅರ್ಥವೇ ಆಗದ ಸಾಲುಗಳು, ತಟ್ಟನೆ ದೋಸೆ ಮಗುಚಿದಂತೆ ಹೊರಳಿ ಬೇರೆಯದ್ದೆ ಅರ್ಥ ನೀಡುವ ಸಾಲುಗಳು ಒಮ್ಮೊಮ್ಮೆ ಓದಿಗೆ, ಆಸ್ವಾದನೆಗೆ ತಡೆಯಾಗುತ್ತದೆ.(ಇದು ನನ್ನದೇ ಓದಿನ ಮಿತಿಯೂ ಆಗಿರಬಹುದು.) ಆದರೂ ಕೂಡ ಅಪ್ಪಟ ಜವಾರಿ ಭಾಷೆಯಲ್ಲಿ ಇರುವ ಆ ಕವನಗಳು ಆಪ್ತವಾಗುತ್ತದೆ. ಇಂತಹ ಸಮಾಜ ಮುಖಿ, ಜೀವನ್ಮುಖಿ ಕವಿ, ಸರಳ ವ್ಯಕ್ತತ್ವದ, ಮೃದು ಮಾತಿನ ಆದರೂ ಅಷ್ಟೇ ನ್ಯಾಯಪರತೆಯ ಅಧಿಕಾರಿ ನಮ್ಮ ನಡುವೆ ನಮ್ಮೊಂದಿಗೇ ಇದ್ದಾರೆ ಎನ್ನುವುದೇ ಈ ಜಿಲ್ಲೆಗೊಂದು ಹೆಮ್ಮೆ.







ಚೆಂದದ ಕವಿತೆಗೆ ತಕ್ಕ ವಿಮರ್ಶೆ. .