ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಛೇ, ಇದೆಂಥ ಕೆಟ್ಟ ಸುದ್ದಿ..

ಆರ್ ಜಿ ಹಳ್ಳಿ ನಾಗರಾಜ್ 
ಛೇ, ಇದೆಂಥ ಕೆಟ್ಟ ಸುದ್ದಿ…
ಬಾಳಿ ಬದುಕಬೇಕಾದ ಕ್ರಿಯಾಶೀಲ ಜೀವದ ಹೃದಯವೊಂದು ಸ್ತಬ್ಧವಾಗಿದೆ.
ದೂರದ ಮುಂಬಯಿಯಲ್ಲಿ ನೆಲೆಕಂಡುಕೊಂಡಿದ್ದ “ರವಿ ರಾ ಅಂಚನ್” ಅವರು ಹೃದಯಾಘಾತದಿಂದ ನಿಧನರಾದರೆಂದು ತಿಳಿದು ದುಃಖ ಉಂಟಾಗಿದೆ.
ಅವರೊಬ್ಬ ಸಹೃದಯಿ ಮಿತ್ರರು. ಕವಿ, ಲೇಖಕ, ಉತ್ತಮ ಸಂಘಟಕ. ಮುಂಬಯಿಯ ಹಲವು ಕನ್ನಡ ಸಂಘಗಳ ಜೊತೆ ನಿಕಟವಾದ ಸಂಬಂಧವನ್ನು ಹೊಂದಿದ್ದ ಸ್ನೇಹ ಜೀವಿ. ಪ್ರತಿವರ್ಷ “ಗೋರೆಗಾಂವ್ ಕರ್ನಾಟಕ ಸಂಘ” ದಿಂದ ಸಾಹಿತ್ಯದ ಹಬ್ಬ ಮಾಡುತ್ತಿದ್ದರು. ಗಂಭೀರ ಚಿಂತಕರನ್ನು ಕರ್ನಾಟಕದಿಂದ ಕರೆಯಿಸಿ ಸಾಹಿತ್ಯಕ ರಸದೌತಣ ನೀಡುತ್ತಿದ್ದರು.
ಒಮ್ಮೆ ಕನ್ನಡ ಸಂಘದ ಸಾಹಿತ್ಯ ಸಮಾವೇಶಕ್ಕೆ ನಾನು, ಸಂಗಾತಿ ಡಾ. ಎಚ್.ಎಲ್. ಪುಷ್ಪಾ, ಪ್ರೊ. ಕೆ.ಜಿ. ನಾಗರಾಜಪ್ಪ, ಎನ್. ಗಾಯತ್ರಿ, ಬಿ.ಎನ್. ಸುಮಿತ್ರಾ ಬಾಯಿ ಮೊದಲಾದವರು ಹೋಗಿ ಬಂದಿದ್ದೆವು. “ಜಾಗತೀಕರಣದ ಹಿನ್ನೆಲೆಯಲ್ಲಿ ದಲಿತ ಬಂಡಾಯ ಸಾಹಿತ್ಯದ ಸೃಜನಶೀಲ ಪ್ರಕ್ರಿಯೆ” ಎಂಬ ಪ್ರಬಂಧ ಮಂಡಿಸಿದ್ದೆ.
ಅವರು ನಾನು ಆಗಾಗ್ಗೆ ಫೋನ್ ಮೂಲಕ ಸಂಪರ್ಕದಲ್ಲಿದ್ದೆವು. ಬೆಂಗಳೂರಿಗೆ ಬಂದಾಗ ಭೇಟಿ ಆಗುತ್ತಿದ್ದೆವು. ಈಚೆಗೆ ತಮ್ಮ ಮೂರ್ನಾಲ್ಕು ಪುಸ್ತಕ ಬಿಡುಗಡೆ ಮಾಡಿದ್ದರು. ಅವರದ್ದೊಂದು ಬಹುಹಿಂದಿನ ಪುಸ್ತಕದ ಹೆಸರು “ಕಡೆಗೋಲು”. ನನ್ನ ಕವನ ಸಂಕಲನ ಹೆಸರು : “ಕಡಗೋಲು!”
ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿ ತೊಡಗಿದ್ದ ಸಹೃದಯಿ ರವಿ ಅಂಚನ್, ಈಚೆಗೆ ಹನಿಗವಿತೆಗಳ ಪ್ರಯೋಗ ಮಾಡಿ, ಬೇರೆಯವರನ್ನೂ ಉತ್ತೇಜಿಸಿ ಬರೆಯುವಂತೆ ಪ್ರೇರೇಪಿಸುತ್ತಿದ್ದರು. ಸುಸಂಸ್ಕೃತ, ಪ್ರಾಮಾಣಿಕ ಮಿತ್ರನ ಅಗಲಿಕೆಯಿಂದ ನನಗೆ ನನ್ನ ಕುಟುಂಬಕ್ಕೆ ನೋವು ಹಾಗೂ ದುಃಖ ಉಂಟಾಗಿದೆ.
***
ಮುಂಬಯಿಂದ ಪತ್ರಕರ್ತ ಹಾಗೂ ಲೇಖಕ ಮಿತ್ರ ಶ್ರೀನಿವಾಸ ಜೋಕಟ್ಟೆ ಕೊಟ್ಟ ಮಾಹಿತಿ:
“ನಮ್ಮ ಕರ್ನಾಟಕ ಮಲ್ಲ” ದಿನಪತ್ರಿಕೆಗೆ ಪ್ರತಿ ಭಾನುವಾರ ಅಂಕಣ ಬರೆಯುತ್ತಿದ್ದರು. ಇವತ್ತು (ಶನಿವಾರ) ತಮ್ಮ ಅಂಕಣ ಬರೆದು mail ಮಾಡಿ ಮನೆಯಲ್ಲಿದ್ದರು. ಮಗಳು ಕೆಲಸಕ್ಕೆ ಹೋಗಿದ್ದಳು. ಮಧ್ಯಾಹ್ನ ಕರೆಮಾಡಿದಾಗ ಸ್ವೀಕರಿಸದೇ ಇದ್ದುದರಿಂದ ಅನುಮಾನ ಬಂದು ಮನೆಗೆ ಬಂದು ನೋಡಿದರೆ ಅವರು ಹೃದಯಾಘಾತದಿಂದ ಮರಣ ಹೊಂದಿದ್ದರು. ನಮ್ಮ ಪತ್ರಿಕೆಗೆ ಬರೆದ ಅಂಕಣವೇ ಅವರ ಕೊನೆಯ ಬರಹ”.
ಜೊತೆಗೆ Face Bookನ ತಮ್ಮ ಗೋಡೆ ಮೇಲೆ ಬೆಳಗ್ಗೆಯಷ್ಟೆ “ಬಹುಭಾಷೆ ಅಂದ!
ಬಹುಸಂಸ್ಕೃತಿ ಜೀವಾನಂದ!!!” ಎಂದು ಹನಿಗವನ ಬರೆದು ಅದನ್ನು upload ಮಾಡಿದ ರವಿ ಅಂಚನ್ ಆಲೋಚಿಸುತ್ತಲೇ, ಬರೆಯುತ್ತಲೇ ಕೊನೆ ಉಸಿರೆಳೆದದ್ದು ಎಂಥಾ ವಿಪರ್ಯಾಸ?

‍ಲೇಖಕರು avadhi

29 October, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading