ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಛಂದ' ತಂದ ದತ್ತಾತ್ರಿ ಕಾದಂಬರಿ

  ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಉಂಟಾಗಿರುವ ಹೊಸ ಕಾಲಮಾನದ ಪ್ರಭಾವಗಳು, ಐಟಿ ಬೀಟಿ ಕ್ಷೇತ್ರಗಳಲ್ಲಿ ಉಂಟಾಗಿರುವ ಅಸ್ಥಿರತೆ, ವಲಸೆಗೆ ಒತ್ತಾಯಿಸುವ ಬೀಸುಗಾಳಿಯ ಶಕ್ತಿ- ಸೂಕ್ಷ್ಮ ಸಂವೇದಿಗಳಾದ ನಮ್ಮ ತರುಣ ಜನಾಂಗದ ಮೇಲೆ ಯಾವ ಬಗೆಯ ಒತ್ತಡ ತರಬಲ್ಲವೆಂಬುದರ ಹೃದಯವೇಧಕ ಚಿತ್ರ ಎಂ.ಆರ್.ದತ್ತಾತ್ರಿಯವರ ದ್ವೀಪವ ಬಯಸಿ ಕಾದಂಬರಿಯಲ್ಲಿ ಇದೆ. ಇಲ್ಲಿನದು ಒಂದು ವಿಸ್ತೃತವಾದ ಪರಿಪ್ರೇಕ್ಷ್ಯ. ಭಾರತದಿಂದ ಅಮೆರಿಕೆಗೆ, ಅಮೆರಿಕೆಯಿಂದ ಭಾರತಕ್ಕೆ ತುಯ್ಯುವ ಕಥಾನಕವು ಈ ವಿರುದ್ಧ ಚಲನೆಗಳಿಂದಲೇ ತನ್ನ ಕರ್ಷಣ ದ್ರವ್ಯವನ್ನು ಪಡೆಯುತ್ತದೆ. ಶ್ರೀಕಾಂತ, ವಾಣಿ ಈ ಕರ್ಷಣೆಯ ಪ್ರಜ್ಞಾಕೇಂದ್ರಗಳಾಗಿದ್ದಾರೆ. ಅವರ ಅನುಭವವನ್ನು ಶೋಧಿಸುವಲ್ಲಿ ಬಳಸಲಾಗುವ ಪಾತ್ರ ಮತ್ತು ಘಟನೆಗಳ ಪ್ರತಿಮಾ ಸಮೂಹವು ಬೆರಗುಪಡಿಸುವಷ್ಟು ಧ್ವನಿಪೂರ್ಣವಾಗಿದೆ. ಇಟಲಿಯ ಜಾನಪದ ಕಥೆ, ಡ್ಯಾನಜಾಕ್ಸನ್ ಅವರ ಹಕ್ಕಿಗಳ ಚಿತ್ರಿಕೆಗಳ ಪ್ರದರ್ಶನ, ಸಮಿಂದ ಮದುರಸಿಂಘೆಯವರ ಶ್ರೀಲಂಕಾದ ಆಂತರಿಕ ಯುದ್ಧಕ್ಕೆ ಸಂಬಂಧಿಸಿದಂತೆ ರಣರಂಗದಲ್ಲಿ ಬುದ್ಧನನ್ನು ಹುಡುಕುವ ಯೋಧನ ಫೋಟೋಗ್ರಾಫ್, ಮಹಿಂದನ ಡೈರಿ, ಯೊಸಿಮಿಟಿ ಎನ್ನುವ ಪ್ರಕೃತಿಸ್ವರ್ಗದಲ್ಲಿ ನಾಯಕ ನಾಯಕಿ ಪಡೆಯುವ ಅಭೌತಿಕ ದಿವ್ಯಾನುಭವ, ಲೈಫ್ ಆಫ್ ಪೈ ಕಥೆ, ಲಾಸೇಂಜಲೀಸಿನ ಕಾಡುಬೆಂಕಿ-ಹೀಗೆ ಇಡೀ ಕಾದಂಬರಿ ಧ್ವನಿಪೂರ್ಣಚಿತ್ರಿಕೆಗಳ ಮೂಲಕ ಮಾತಾಡುತ್ತದೆ. ಈ ಎಲ್ಲ ಚಿತ್ರಗಳು ಒಗ್ಗೂಡಿ ಕಟ್ಟುವ ಕಥಾನಕ ಮನಸ್ಸನ್ನು ತಲ್ಲಣಗೊಳಿಸುವಷ್ಟು ಪ್ರಭಾವಶಾಲಿಯಾಗಿ ಬಂದಿದೆ. ಇದೀಗಿನ ತುರ್ತು ವರ್ತಮಾನಕ್ಕೆ ಆಕಾರಕೊಡಲು ಬಯಸುವ ಅಧುನಾಪ್ರಜ್ಞೆಯ ಈ ಕಥಾಕೃತಿಯು ಈಚಿನ ದಿನಗಳಲ್ಲಿ ಕನ್ನಡಲ್ಲಿ ಕಾಣಿಸಿಕೊಂಡ ಮಹತ್ವದ ಸಂಕಥನಗಳಲ್ಲಿ ಒಂದಾಗಿದೆ. –ಎಚ್.ಎಸ್.ವೆಂಕಟೇಶ ಮೂರ್ತಿ ಬೆನ್ನುಡಿಯಿಂದ  ]]>

‍ಲೇಖಕರು G

21 January, 2011

1 Comment

  1. ವಸುಧೇಂದ್ರ

    ಪ್ರಿಯ ಅವಧಿ,
    ಈ ಮುಖಪುಟವನ್ನು ಗೆಳೆಯ ನಾಗರಾಜ ವಸ್ತಾರೆ ಮಾಡಿದ್ದಾನೆ. ದಯವಿಟ್ಟು ಅದನ್ನೂ ತಿಳಿಸಿ.
    ವಸುಧೇಂದ್ರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading