ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೊಕ್ಕಾಡಿಯವರ ಈ ಗೊಂದಲ ಬಹಳ ಪ್ರಜ್ಞಾಪೂರ್ವಕವಾದದ್ದು..

ಚೊಕ್ಕಾಡಿಯವರ ಈ ಗೊಂದಲ ಬಹಳ ಪ್ರಜ್ಞಾಪೂರ್ವಕವಾದದ್ದು.
ಇದನ್ನು ವೈದಿಕ ವಿಚಾರ ಮಂಡನ ಕ್ರಮವೆಂತಲೇ ಕರೆಯಬಹುದು.ಅದಕ್ಕೆ ಸಾಕಷ್ಟು ಉದಾಹರಣೆಯನ್ನು ಅವರ ಲೇಖನದಿಂದಲೇ ಕೊಡಬಹುದು.

ಅರವಿಂದ ಚೊಕ್ಕಾಡಿ ಅವರು ಪ್ರಜಾವಾಣಿಯಲ್ಲಿ ‘ಸಾಮಾಜಿಕ ಜಾಲತಾಣದಲ್ಲಿ ವೈಚಾರಿಕತೆ‘ ಎಂಬ ಲೇಖನವನ್ನು ಬರೆದಿದ್ದಾರೆ. ಅದು ಇಲ್ಲಿದೆ.

ಇದನ್ನು ವಿಮರ್ಶಕರಾದ ಎಚ್ ಎಸ್ ರೇಣುಕಾರಾಧ್ಯ ಅವರು ಹಲವು ದಿಕ್ಕಿನಿಂದ ವಿಮರ್ಶೆಯ ಒರೆಗೆ ಹಚ್ಚಿದ್ದಾರೆ. ಚೊಕ್ಕಾಡಿ ಅವರ ಲೇಖನ ‘ಎಲ್ಲಿಗೋ ಗಾಯವಾದರೆ ಮತ್ತೆಲ್ಲಿಗೊ ಮದ್ದು ಹಚ್ಚುವ ಕ್ರಮ’ ಎಂದಿದ್ದಾರೆ.

ಜುಗಾರಿ ಕ್ರಾಸ್ ವಿಚಾರ ಮಂಥನಕ್ಕೆ ಇರುವ ತಾಣ. ಹಾಗಾಗಿ ನೀವು ನಿಮ್ಮ ಅಭಿಪ್ರಾಯವನ್ನೂ avadhimag@gmail.com ಕಳಿಸಿ.

ಎಚ್ ಎಸ್ ರೇಣುಕಾರಾಧ್ಯ

ನಿನ್ನೆ ಎಪ್ರಿಲ್ 20 ರಂದು ಪ್ರಜಾವಾಣಿಯ ‘ವಿಶ್ಲೇಷಣೆ’ ಎಂಬ ಅಂಕಣದಡಿ ಅರವಿಂದ ಚೊಕ್ಕಾಡಿಯವರು ‘ಸಾಮಾಜಿಕ ಜಾಲತಾಣದಲ್ಲಿ ವೈಚಾರಿಕತೆ’ ಎನ್ನುವ ವಿಷಯ ಕುರಿತು ಪೂರ್ವಾಗ್ರಹ ಪೀಡಿತವಾದ, ವೈದಿಕತೆಯನ್ನು ಎತ್ತಿಹಿಡಿಯುವ ಮತ್ತು ಏಕಮುಖ ವಾದವನ್ನು ಲೇಖನದ ಉದ್ದಕ್ಕೂ ಮಾಡಿದ್ದಾರೆ.

ಲೇಖನದ ಆರಂಭದಲ್ಲೇ ಸಾಮಾಜಿಕ ಜಾಲತಾಣಗಳು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಉತ್ತಮೀಕರಿಸುವ ಅತ್ಯತ್ತಮ ವೇದಿಕೆಗಳು ಎಂದು ಸಾಮಾಜಿಕ ಜಾಲತಾಣಗಳ ಕೊಡುಗೆಯ ಬಗ್ಗೆ ಹೆಮ್ಮೆಯ ಮಾತನಾಡುತ್ತಾ, ಲೇಖನದ ಉದ್ದಕ್ಕೂ ಈ ಜಾಲತಾಣಗಳ ವಿಚಾರಮಂಡನೆಯ ಕ್ರಮಗಳೇ ಸರಿಯಿಲ್ಲ ಎನ್ನುತ್ತಾ ಉದ್ದುದ್ದ ಉದಾಹರಣೆಗಳನ್ನು ನೀಡುತ್ತಾ ಲೇಖನದ ಕೊನೆಯಲ್ಲಿ ಈ ಸಾಮಾಜಿಕ ಜಾಲತಾಣಗಳು ಈಗಿನ್ನೂ ಶೈಶವಾವಸ್ಥೆಯಲ್ಲಿವೆ ಎನ್ನುವ ಮಾತನ್ನೂ ಹೇಳಿ ಓದುಗರನ್ನು ಗೊಂದಲಕ್ಕೆ ದೂಡುತ್ತಾರೆ.

ಚೊಕ್ಕಾಡಿಯವರ ಈ ಗೊಂದಲ ಬಹಳ ಪ್ರಜ್ಞಾಪೂರ್ವಕವಾದದ್ದು.
ಇದನ್ನು ವೈದಿಕ ವಿಚಾರ ಮಂಡನ ಕ್ರಮವೆಂತಲೇ ಕರೆಯಬಹುದು.ಅದಕ್ಕೆ ಸಾಕಷ್ಟು ಉದಾಹರಣೆಯನ್ನು ಅವರ ಲೇಖನದಿಂದಲೇ ಕೊಡಬಹುದು.

“ಭಾರತದ ವೈಚಾರಿಕ ಪರಂಪರೆಯ ಬಹುದೀರ್ಘ ಹಿನ್ನಲೆ ಇರುವುದು ಬ್ರಾಹ್ಮಣ, ಜೈನ, ಬೌದ್ಧ, ಶರಣ ಮುಂತಾದ ನೆಲೆಗಳ ವೈಚಾರಿಕರಲ್ಲಿ” ಎಂದು ಹೇಳುತ್ತಾ, ಭಾರತದಲ್ಲಿ ವೈಚಾರಿಕತೆಯ ಪರಂಪರೆಗೆ ನಾಂದಿ ಆಡಿದ  ‘ಲೋಕಾಯುತ’ರನ್ನೇ ಈ ಪಟ್ಟಿಯಿಂದ ಬೇಕಂತಲೇ ಹೊರಗಿಟ್ಟಿದ್ದಾರೆ.

ಯಾಕೆಂದರೆ ಈ ಬ್ರಾಹ್ಮಣರ (ವೈದಿಕರ) ಜಾತಿ ಅಸಮಾನತೆಗಳ, ವರ್ಣಾಶ್ರಮ ಧರ್ಮ, ಪುನರ್ಜನ್ಮದ ಪರಿಕಲ್ಪನೆ, ಕರ್ಮಸಿದ್ದಾಂತ, ಹಿಂಸಾವಾದ, ಬರ್ಬರವಾದ ಯಜ್ಞಾಚರಣೆಗಳ ಅವೈಚಾರಿಕತೆಯನ್ನು ತಮ್ಮ ವಿಚಾರವಾದದ ಮೂಲಕ ಅಂದು ಪ್ರಶ್ನಿಸಿದ, ಪ್ರತಿಭಟಿಸಿದ ಲೋಕಾಯುತರನ್ನು (ಚಾರ್ವಾಕರನ್ನು) ವೈದಿಕ ಲೇಖಕ/ ಚಿಂತಕ ಅಪ್ಪಿತಪ್ಪಿ ನೆನಪಿಸಿಕೊಳ್ಳುವುದುಂಟೇ!

ಈ ಮಣ್ಣಿನ ವೈಚಾರಿಕತೆಯನ್ನು ಹಳ್ಳಹಿಡಿಸಿದ್ದು ಮತ್ತು ಅದನ್ನು ತನಗೆ ಬೇಕಾದಂತೆ ತಿರುಚಿ ಇದೇ ವೈಚಾರಿಕತೆ ಎಂಬ ಹುಸಿ ವೈಚಾರಿಕತೆಯನ್ನು ಬಿತ್ತಿದ್ದು ಬ್ರಾಹ್ಮಣ ವೈಚಾರಿಕತೆ. ಈ ವೈದಿಕ ವೈಚಾರಿಕತೆಯು ಕ್ರಿಸ್ತ ಪೂರ್ವ5, 6 ನೇ ಶತಮಾನದಲ್ಲಿಯೇ ಇಲ್ಲಿನ ಮೂಲನಿವಾಸಿಗಳಲ್ಲಿ ಪ್ರಚಲಿತವಿದ್ದ ಮಹಾಕಾವ್ಯಗಳು, ಪುರಾಣ ಪರಿಕಲ್ಪನೆಗಳೊಂದಿಗೆ ಸ್ಥಳೀಯ ದೈವತಗಳ ಪರಿಕಲ್ಪನೆಗಳನ್ನು ತಿರುಚಿ ತಮ್ಮ ತೆಕ್ಕೆಗೆ ಒಗ್ಗಿಸಿಕೊಂಡು ಮುಂದೆ ಬೃಹದಾಕಾರವಾಗಿ ಬೆಳೆಯಿತು. (ತಮ್ಮ ದೇವರ ಹತ್ತನೇ ಅವತಾರ ಎಂದು ಬೌದ್ಧರ ಬುದ್ಧನನ್ನು ತಮ್ಮ ಜೊತೆಗೆ ಸೇರಿಸಿಕೊಂಡಿರುವುದು ವೈದಿಕರ ವೈಚಾರಿಕತೆ).

ಇನ್ನು ಎರಡನೆಯದಾಗಿ ಈಗ ಬಂದಿರುವ ಸಾಮಾಜಿಕ ಜಾಲತಾಣದ ವೈಚಾರಿಕತೆಯು ಮತೀಯವಾದಿ ಸ್ವರೂಪದ್ದು, ಇದು ಯಾವುದೇ ಕಾರಣಕ್ಕೂ ಜೈನ, ಬೌದ್ಧ, ಶರಣ ಮತ್ತು ಬ್ರಾಹ್ಮಣ ಸ್ವರೂಪದ್ದಾಗಿ ನೋಡಬಾರದು ಎಂದು ಹೇಳುತ್ತಾರೆ.

ಇವತ್ತು ಕೇವಲ ಸಾಮಾಜಿಕ ಜಾಲತಾಣದಲ್ಲಿ ಅಲ್ಲ, ಇಡೀ ಭಾರತದಲ್ಲಿ ವೈಚಾರಿಕತೆಯು ಮತೀಯವಾದಿ ಸ್ವರೂಪದಲ್ಲಿ ಹರಡುತ್ತಿದೆ. ಅದಕ್ಕೆ ಕಾರಣಗಳೇನು ಎಂದು ಹುಡುಕುವುದರ ಬದಲು ಸಾಮಾಜಿಕ ಜಾಲತಾಣದ ಮೇಲೆ ಆರೋಪ ಮಾಡುತ್ತಾರೆ.

ಇದೇ ವೈದಿಕ ವೈಚಾರಿಕತೆಯೇ ಇವತ್ತಿನ ಮತೀಯವಾದಿ ವೈಚಾರಿಕತೆಗೆ ಮೂಲಕಾರಣ ಎಂಬ ಸತ್ಯವನ್ನು ಮುಚ್ಚಿಡುತ್ತಾರೆ. ಜೈನ, ಬ್ರಾಹ್ಮಣ, ಶರಣ ಧರ್ಮದ ವೈಚಾರಿಕತೆಯ ಜೊತೆಗೆ ಬ್ರಾಹ್ಮಣರ ವೈಚಾರಿಕತೆಯನ್ನು ಬೆರೆಸುವ ಹುನ್ನಾರವೇ ಹೇಳುತ್ತದೆ ಇವರದು ಎಂತಹ ವೈಚಾರಿಕತೆ ಎಂದು.

ಮೂರನೆಯದಾಗಿ ಇವರು ಹೇಳುವ “ಬ್ರಾಹ್ಮಣೀಯ ವೈಚಾರಿಕತೆಯ ಸಂಯಮವನ್ನು ಅಲ್ಪ ಮಟ್ಟಿಗೆ ಅಳವಡಿಸಿಕೊಂಡದ್ದು ವಿಶ್ವವಿದ್ಯಾಲಯ ಕೇಂದ್ರಿತ ವೈಚಾರಿಕ ಪ್ರತಿಪಾದನೆಯೇ ಹೊರತು ಸಾಮಾಜಿಕ ಜಾಲತಾಣದ ವೈಚಾರಿಕ ಪ್ರತಿಪಾದನೆಗಳಲ್ಲ” ಎನ್ನುವ ಮಾತಗಳಲ್ಲಿನ ‘ಬ್ರಾಹ್ಮಣೀಯ ವೈಚಾರಿಕತೆ ಸಂಯಮ’ ಎಂಬ ಮಾತಂತೂ ಅಪ್ಪಟ ಸುಳ್ಳು .

ಈ ಬ್ರಾಹ್ಮಣೀಯ ವೈಚಾರಿಕತೆಗೆ (ವೈದಿಕ ವೈಚಾರಿಕತೆಗೆ) ನಿಜಕ್ಕೂ ಸಂಯಮ ಎಂಬುದು ಇದ್ದಿದ್ದರೆ ಈ ಮಣ್ಣಿಗೆ ವೈಚಾರಿಕತೆಯನ್ನು ಬಿತ್ತಿದ ಲೋಕಾಯುತರ ಪ್ರಶ್ನೆಗಳನ್ನು ತಾಳ್ಮೆಯಿಂದ ಕೇಳುತ್ತಿತ್ತೆ ಹೊರತು,ಅವರನ್ನು ಹಿಂಸಿಸಿ ಕೊಲ್ಲುತ್ತಿರಲಿಲ್ಲ. ಹಾಗೇಯೇ ಇತ್ತೀಚಿನ ದಿನಗಳಲ್ಲಿ ಇದೇ ವೈದಿಕ ವೈಚಾರಿಕತೆಯನ್ನು ಪ್ರಶ್ನಿಸಿದ ದಾಬೋಲ್ಕರ್, ಕಲ್ಬುರ್ಗಿ, ಗೌರಿ ಲಂಕೇಶರನ್ನು ಕೊಲ್ಲುತ್ತಿರಲಿಲ್ಲ.

ಈ ಮಣ್ಣಿನಲ್ಲಿ ಲೋಕಾಯುತ, ಬೌದ್ಧ, ಜೈನ, ಶರಣ ಮೊದಲಾದ ಅವೈದಿಕ ವೈಚಾರಿಕತೆ ಇದೆಯೇ ಹೊರತು, ಬ್ರಾಹ್ಮಣ ವೈಚಾರಿಕತೆ ಎಂಬುದಿಲ್ಲ. ವೈದಿಕ ವೈಚಾರಿಕತೆ ಅವೈದಿಕ ವೈಚಾರಿಕತೆಯನ್ನು ತಿರುಚಿ ಮಾಡಿಕೊಂಡ ವೈಚಾರಿಕತೆಯೇ ಹೊರತು ಸ್ವಂತದ್ದು ಇಲ್ಲ.

ಇನ್ನು ಇಡೀ ಲೇಖನದಲ್ಲಿ ಅವರು ಸಾಮಾಜಿಕ ಜಾಲತಾಣ ವೈಚಾರಿಕತೆಯ ಸಂವಾದಕ್ಕೆ ಕೊಡುವ ಉದಾಹರಣೆಗಳು ದೇವರು, ಧರ್ಮಕ್ಕೆ ಸಂಬಂಧಿಸಿದ, (ಹಿಂದೂ- ಮುಸ್ಲಿಂ) ಹೆಣ್ಣಿಗೆ ಸಂಬಂಧಿಸಿದ ಉದಾಹರಣೆಗಳೇ ಹೊರತು ಬೇರೆ ಯಾವುವೂ ಇಲ್ಲ. ಯಾಕೆಂದರೆ ವೈದಿಕ ಧರ್ಮದ ರಹಸ್ಯ ಅಡಗಿರುವುದು ಇವಿಷ್ಟರಲ್ಲಿಯೇ…

ಸಾಮಾಜಿಕ ಜಾಲತಾಣಗಳು ಭಾರತದಲ್ಲಿ ಈಗ ತಾನೆ ಕಾಲಿಟ್ಟಿವೆ, ಹಾಗಾಗಿ ಇಲ್ಲಿ ನಡೆಯುವ ಸಂವಾದಗಳ ಕ್ರಮ, ರೀತಿ ನೀತಿ ಅದರ ಬಳಕೆದಾರರಿಗೆ ನಿಧಾನವಾಗಿ ಅರ್ಥವಾಗುತ್ತದೆ, ಅಲ್ಲಿಯವರೆಗೂ ತಾಳ್ಮೆಯಿಂದ ಕಾಯುವ ಸಂಯಮದ ವೈಚಾರಿಕತೆ ಇಂದಿನ ತುರ್ತು, ಅದನ್ನು ಬಿಟ್ಟು ಸಾಮಾಜಿಕ ಜಾಲತಾಣದಲ್ಲಿನ ಸಂವಾದಗಳೆಲ್ಲವೂ “ಮತೀಯವಾದಿ ವೈಚಾರಿಕತೆ” ಎಂಬ ಹಣೆಪಟ್ಟಿ ಕೊಟ್ಟು, ಅಲ್ಲಿನ ಸಂವಾದವನ್ನೂ ಏಕಮುಖವಾಗಿ, ಸಾರಾಸಗಟಾಗಿ ತಿರಸ್ಕರಿಸುವ ಕ್ರಮ ಪ್ರಜಾಪ್ರಭುತ್ವವಾದಿಯಾದುದಲ್ಲ.

ಸಾಮಾಜಿಕ ಜಾಲತಾಣಗಳು ಕೂಡ ಸಮಾಜದ ಪ್ರತಿಬಿಂಬಗಳೇ. ಹಾಗಾಗಿ ಇಲ್ಲಿರುವ ಮತೀಯವಾದಿ ವೈಚಾರಿಕತೆಯ ಸಂವಾದವೇ ಅಲ್ಲೂ ಪ್ರತಿಫಲಿತವಾಗುತ್ತದೆ. ಮೊದಲು ಸಮಾಜದ ಮತೀಯವಾದಿ ವೈಚಾರಿಕತೆಗೆ ಮದ್ದು ಹುಡುಕುವುದು ಸರಿಯಾದುದೇ ಹೊರತು, ಎಲ್ಲಿಗೋ ಗಾಯವಾದರೆ ಮತ್ತೆಲ್ಲಿಗೊ ಮದ್ದು ಹಚ್ಚುವುದು ಸರಿಯಲ್ಲ…

‍ಲೇಖಕರು avadhi

21 April, 2019

1 Comment

  1. Kotresh T A M

    ಪ್ರಜ್ಞಾಪೂರ್ವಕ ಅಂತ ಹೇಳಿರುವುದು ಅಸಹನೆಯ ಮಾತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading